ರಾವಣನನ್ನು ಸಂತೈಸುವ, ಸೀತೆಯನ್ನು ಸಂತೈಸುವ, ಕಾರ್ಯಸಿದ್ಧಿಗಾಗಿ ಅಪ್ಪನ ಬಳಿಗೆ ಚಾರರನ್ನಟ್ಟುವ ಚತುರೆಯಾಗಿ ಅನಲೆ ಕಾರ್ಯಶೀಲಳಾಗಿದ್ದಾಳೆ. ಇಂದ್ರಜಿತುವಿನ ಮರಣದಿಂದ ರಾವಣನಿಗೆ ಯುದ್ಧದಲ್ಲಿ ಹಿನ್ನೆಡೆಯಾಗಿದೆ. ಮಂಡೋದರಿಯ ಮಾತಿಗೆ, ಬೇಡಿಕೆಗೆ ಮಣಿದು ಕೊಲ್ಲೆನವಳಂ (ಸೀತೆಯನ್ನು) ಎಂದು ಮಾತು ಕೊಟ್ಟಿದ್ದಾನೆ. ಇತ್ತ ಮಗ ಅತಿಕಾಯನ ಮರಣದ ವಾರ್ತೆಯನ್ನು ಕೇಳಿದ ಧ್ಯಾನಮಾಲಿನಿ ಮರಣಶಯ್ಯೆಯಲ್ಲಿದ್ದಾಳೆ. ಸುದ್ದಿ ತಿಳಿದು ಅಲ್ಲಿಗೆ ಬಂದ ರಾವಣ ತುಂಬಾ ಸೋತುಹೋಗಿದ್ದಾನೆ; ವೇದಾಂತಿಯೂ ಆಗುತ್ತಾನೆ!
ಬಾಳ್!ರಾವಣ ಈ ಮನಸ್ಥಿತಿಯಲ್ಲಿರುವಾಗಲೇ, "ಮೆಯ್ಯನಲ್ಲದೆ ಏಂ ಮನವನಿತ್ತೆನೆ?" ಎಂದು ರಾವಣನ ಶಕ್ತಿಯೇ ಉಡುಗುವಂತೆ ನುಡಿದ ಧಾನ್ಯಮಾಲಿನಿ
ಕಳ್ಳನೊರೆದೊಂದು ಸುಳ್ಳಿನ ಸಂತೆ!
ಬರಿ ಬೊಂತೆ!
ಕಡೆಗೆ, ಬೆಂಕಿಯ ಹೊರೆದು,
ಬೂದಿರಾಸಿಯನುಳಿವ ಅರ್ಥವಿಲ್ಲದ ಬಣಗು ಕಂಥೆ!
ಇದಕೇಕಿನಿತು ಚಿಂತೆ?
ಸ್ವಾಮಿ, ನನ್ನ ಮುಡಿಯಂ ನೋಡು,ಎಂದು ಹೇಳಿ ಕಣ್ಣುಮುಚ್ಚಿಬಿಡುತ್ತಾಳೆ. ರಾವಣ ಕುಸಿಯಲಾರಂಬಿಸುತ್ತಾನೆ. ಅತ್ತ, ಇಂದ್ರಜಿತುವಿನ ಹೆಂಡತಿ ತಾರಾಕ್ಷಿ, ತನ್ನ ಪತಿಯ ಚಿತೆಯನ್ನು ಏರಲು ಸಿದ್ಧಳಾಗಿ ನಿಂತುಬಿಟ್ಟಿದ್ದಾಳೆ. ಅವಳನ್ನು ರಾವಣ-ಅನಲೆಯಲ್ಲದೆ ಬೇರೆ ಯಾರು ತಡೆದಾರು? ಅನಲೆ ತಡೆದು ನಿಲ್ಲಿಸಿದ್ದಾಳೆ. ದೊಡ್ಡಪ್ಪನನ್ನು ಕರೆತರಲು ಆಳನಟ್ಟಿದ್ದಾಳೆ. ವಿಷಯ ತಿಳಿದು ಧಾವಿಸಿ ಬಂದ ರಾವಣನಿಗೆ ಕಂಡದ್ದು, ಅನಲೆಯ ಅಪ್ಪುಗೆಯಲ್ಲಿ ಕುಸಿದ ಸೊಸೆ, ಮಗ ಮೇಘನಾದನ ವಲ್ಲಭೆ, ಮೊಮ್ಮಗ ವಜ್ರಾರಿಯ ತಾಯಿ, ತಾರಾಕ್ಷಿ. ರಾವಣ ಮರಗಟ್ಟಿ ನಿಲ್ಲುತ್ತಾನೆ. ಕವಿ ಉದ್ಘರಿಸುತ್ತಾರೆ: "ರಾಮಾಸ್ತ್ರತತಿಯಿಂ ಮುಂದೆ ಜಜ್ಜರಿತನಾದನ್ ಎಂಬುದು ಬರಿಯ ಕಥೆಯಲ್ತೆ?"
ನಿಚ್ಚಮುಂ ತ್ರಿಜಟೆಯಿಂ ನಾಂ ಪಡೆದು ಮುಡಿದ
ರಘುರಾಮನ ಮಡದಿಯಡಿಯ ಪಾಪನಾಶಕ ಧೂಳಿ!.........
ಅದಕಾಗಿ ಆ ದೇವಿ ರಾಮಸತಿಗಿದೊ ಶತ ನಮಸ್ಕಾರಗಳ್!
ದೊಡ್ಡಪ್ಪ ಬಂದುದನ್ನು ಕಂಡ ಅನಲೆ "ಸಖೀ, ಮಾವನದೊ! ಸುತನ ಸಾವಿನ ಸಿಡಿಲ್ ಬಡಿದು ಉಸಿರ್ ಕಟ್ಟಿದೋಲುಸಿಕನಿರ್ಪನ್, ನಿನ್ನ ನೋವ್ ಗರಂ ತನಗೆರಗಿದಂತೆ" ಎನ್ನುತ್ತಾಳೆ. ಇಲ್ಲಿ ಅನಲೆಯ ಸಮಯಪ್ರಜ್ಞೆಯನ್ನೂ, ಅವಳ ಒಂದೊಂದು ಮಾತನ್ನೂ ಗಮನಿಸಬೇಕು. ’ಸಖೀ’ ಎಂದು ಸಂಬೋಧಿಸುವಲ್ಲೇ ಅವಳ ಮಾತೃಹೃದಯದ ಪರಿಚಯ ಮಾಡಿಸುತ್ತಾಳೆ. ಜೊತೆಗೆ, ’ನಿನ್ನ ನೋವ್ ಗರಂ ತನಗೆರಗಿದಂತೆ’ ಎಂದು ಹೇಳಿ ಆಕೆಯ ದುಃಖದ ತೀವ್ರತೆಯನ್ನು ಕಡಿಮೆ ಮಾಡಲು ಯತ್ನಿಸುತ್ತಾಳೆ. ರಾವಣ ಸೊಸೆಯನ್ನು ಸಮಾಧಾನ ಮಾಡಿ, ’ತಾನೇ ಸೇನಾಧಿಪನ ಪಟ್ಟವನ್ನು ಕಟ್ಟಿಕೊಂಡು ಯುದ್ಧವನ್ನು ಕೊನೆಗಾಣಿಸುತ್ತೇನೆ’ ಎಂದು ನಿಶ್ಚಯಿಸುತ್ತಾನೆ. ಸೊಸೆಗೆ ಮಗನನ್ನು ತೋರಿಸುವ ಇಚ್ಛೆಯಿಂದ, ವಜ್ರಾರಿಯನ್ನು ಹುಡುಕುತ್ತಾನೆ. ಅನಲೆ, ತಾಯಿ ಸರಮೆಯ ಬಳಿಯಿದ್ದ ವಜ್ರಾರಿಯನ್ನು ತಂದು ರಾವಣನ ಕೈಗೆ ಕೊಡುತ್ತಾಳೆ. ರಾವಣ "ಮಗಳೆ, ನೋಡಿಲ್ಲಿ ಇಹುದು ಬದುಕಿಗರ್ಥಂ, ಮತ್ತೆ ಬಾಳ್ಗೆ ಗುರಿ ನಿನಗೆ" ಎಂದು ವಜ್ರಾರಿಯನ್ನು ಆಕೆಯ ಮಡಿಲಿಗಿಡುತ್ತಾನೆ. ಅನಲೆ ಸಾಕ್ಷಿಯಾಗುತ್ತಾಳೆ ಜೊತೆಗೆ ತನ್ನ ಅತ್ತಿಗೆಯನ್ನು, ಗೆಳತಿಯನ್ನು ಉಳಿಸಿಕೊಳ್ಳುತ್ತಾಳೆ. ಹಿಂದೆ ಅನಲೆ ಸೀತೆಗೆ ಹೇಳಿದಂತೆ ಚಂದ್ರನಖಿಯೂ ರಾವಣನ ಆತ್ಮೋದ್ಧಾರಸಿದ್ಧಿಗೆ ಕೈಜೋಡಿಸುತ್ತಾಳೆ. "ಜನಕಕನ್ಯೆಯಂ ದಾಶರಥಿಗೊಪ್ಪಿಸು" ಎನ್ನುತ್ತಾಳೆ. ಅದಕ್ಕೆ ಇನ್ನೊಂದು ರೀತಿಯಲ್ಲಿ ಒಪ್ಪಿದ ರಾವಣ, 'ರಾಮನನ್ನು ಯುದ್ಧದಿ ಸೋಲಿಸಿ, ಸೆರೆಯಾಳಾಗಿಸಿ ತಂದು, ತನ್ನನ್ನು, ತನ್ನ ಸರ್ವ ಗರ್ವವನ್ನು ಸೋಲಿಸಿದ ಮೈಥಿಲಿಗೆ ಕಪ್ಪ ಕೊಡುತ್ತೇನೆ’ ಎನ್ನುತ್ತಾನೆ. ಆಗ ಚಂದ್ರನಖಿ "ಮಹಚ್ಛಿಲ್ಪಿ ನೀಂ ದಿಟಂ" ಎಂದು ಹೇಳಿ ಆನಂದಿಸುತ್ತಾಳೆ.
ಮುಂದೆ, ತನ್ನ ಎದೆಗೆ ಚುಚ್ಚಿದ ರಾಮನ ಬಾಣವನ್ನೇ, ರಾಮನೆಂದು ಭ್ರಮಿಸಿ, "ಸೆರೆ ಸಿಲ್ಕಿದನೊ ವೈರಿ" ಎಂದು ಉನ್ಮಾದಗೊಂಡು ಬಂದ ರಾವಣನನ್ನು ಸಂತೈಸಿ, ಮಂಡೋದರಿ ಬಾಣವನ್ನು ಕಿತ್ತಾಗ ರಾವಣ ಮರಣಮುಖಿಯಾಗುತ್ತಾನೆ. ತನ್ನ ಕಣ್ಣೆದುರಿಗೇ ತನ್ನ ದೊಡ್ಡಪ್ಪನು ಕಡೆಯುಸಿರೆಳೆವುದಕ್ಕೆ, ಅವನ ಹಿಂದೆಯೇ ದೊಡ್ಡಮ್ಮ ಮಂಡೋದರಿ ಮರಣವನ್ನಪ್ಪುವ ವೈಚಿತ್ರಕ್ಕೆ ಅನಲೆ ಸಾಕ್ಷಿಯಾಗುತ್ತಾಳೆ. ಮುಂದೆ, ರಾಮನೊಲಿದು ವಿಭೀಷಣನಿಗೆ ಲಂಕಾನಗರಿಯ ಪಟ್ಟಾಭಿಷೇಕವನ್ನು ನಿಶ್ಚಯಿಸುತ್ತಾನೆ. ಆದರೆ ವಿಭೀಷಣ ಅದನ್ನು ತನ್ನ ಕಯ್ಯಾರೆ, ತಾನೆ, ತಾರಾಕ್ಷಿ-ಇಂದ್ರಜಿತುವಿನ ಹಸುಳೆ ಶಿಶು ವಜ್ರಾರಿಯ ತಲೆಯ ಮೇಲೆ ಇಡುತ್ತಾನೆ. ಇವೆಲ್ಲವಕ್ಕೂ ಸಾಕ್ಷಿಯಾದ ಅನಲೆ, ಮುಖ್ಯವಾಗಿ ಸಾಕ್ಷಿಯಾಗಬಹುದಾದ ಮಹತ್ ಘಟನೆಯೊಂದಿದೆ; ಅದೇ ಸೀತಾರಾಮರ ಪುನರ್ಮಿಲನ!
ರಾಮನಾಜ್ಞೆಯನ್ನು ಹೊತ್ತು, ಸೀತೆಯನ್ನು ಕರೆದು ತರಲು ಹೊರಟ ಆಂಜನೇಯ, ವಿಭೀಷಣರ ಜೊತೆ ಅನಲೆಯೂ ಸೇರುತ್ತಾಳೆ. ಸೀತೆಯಿದ್ದ ಪರ್ಣಕುಟಿಯಿಂದ ಸ್ವಲ್ಪ ದೂರದಲ್ಲೇ ನಿಂತ ವಿಭೀಷಣ-ಆಂಜನೇಯರು, ಅನಲೆಯೊಬ್ಬಳನ್ನೇ ಸೀತೆಯ ಬಳಿಗೆ ಕಳುಹಿಸುತ್ತಾರೆ. ಆ ಕ್ಷಣ ಅನಲೆಯ ಸಂತೋಷಕ್ಕೆ ಎಣೆಯೇ ಇಲ್ಲ!
ದುಃಖವನೆಲ್ಲ ಮರೆತ ಅಣುಗಿ, ಸುಖವುಕ್ಕಿ,ಎನ್ನುತ್ತಾಳೆ. ಆಗ ಸೀತೆ
ಭಾಷ್ಪಲೋಚನೆ, ಓಡಿ ಬಿಗಿದಪ್ಪಿ ಸೀತೆಯಂ,
ತೊದಲಿದಳ್, ತ್ರಿಜಟೆ ಪುಲಕಿಸಿ ಮೆಯ್ಮರೆಯುವಂತೆ:
ಶ್ರೀರಾಮ ಸಂದೇಶಮಂ ಪೊತ್ತ ಆಂಜನೇಯನಂ
ಕರೆತಂದು ನನ್ನಯ್ಯನ್ ಅದೊ ಅಲ್ಲೆ ನಿಂತಿಹನಮ್ಮ.
ನಿನ್ನ ಸಮಯವನರಿತು ಬಾ ಎಂದು ಎನಗೆ ಬೆಸಸಿದನ್
ಮಗಳೆ,ಎಂದು ಅನಲೆಯನ್ನು ಆಶಿರ್ವದಿಸುತ್ತಾಳೆ. "ಪತಿಯ ವಚನಮಂ ಕೇಳ್ವಾತುರೆಗೆ ಸತಿಗೆ ನನಗೆ ಆವುದು ಅಸಮಯಂ? ಬೇಗದಿಂ ಕರೆದು ತಾರಮ್ಮಯ್ಯ ವಂದನೀಯರನಿರ್ವರುಂ!" ಎಂದು ಅನಲೆಗೆ ಹೇಳುತ್ತಾಳೆ. ಅವರಿಬ್ಬರು ಬಂದು ರಾಮನ ಸಂದೇಶವನ್ನು ಸೀತೆಗೆ ಒಪ್ಪಿಸುತ್ತಾರೆ. ಆಂಜನೇಯ-ಸೀತೆಯರ ನಡುವೆ ಸ್ವಾರಸ್ಯವಾದ ಮಾತುಕತೆ ನಡೆಯುತ್ತದೆ. ಕೊನೆಯಲ್ಲಿ, 'ಸೀತಾಂಜನೇಯರ ಜಗನ್ಮೋಹಕರ ಸಂವಾದ ಕಾವ್ಯರಸತೀರ್ಥದೊಳ್ ಮುಳುಗಿರ್ದ ರಾಕ್ಷಸೋತ್ತಮ ವಿಭೀಷಣನಿಗೆ’ ಆಂಜನೇಯನು
ಮಂಗಳದ ವಾರ್ತೆಯಂ ತಂದೆ.
ಚಿರಸುಖಿಯಾಗು.
ನೀನೊಲಿದ ವರನೆ ದೊರೆಯಲಿ ನಿನಗೆ!
ನಿನ್ನ ಕೈವಿಡಿದವಂ ಕೈಬಿಡದೆ ನಡೆಯಲೆಂದುಂ!
ಲೋಕಮಾನ್ಯೆಗೆ ಶಿರಸ್ನಾನಮಂ ಗೆಯ್ಸಿ,ಎಂದು ಹೇಳುತ್ತಾನೆ. ಅವರ ಬಳಿಯೇ ನಿಂತು ಎಲ್ಲವನ್ನೂ ಕಣ್ತುಂಬಿಕೊಳ್ಳುತ್ತಿದ್ದ ಅನಲೆಗೆ ವಿಭೀಷಣ ಹೀಗೆ ಹೇಳುತ್ತಾನೆ.
ಶೀಘ್ರದಿಂ ಕರೆದು ತಾ,
ದಿವ್ಯಾಂಗರಾಗದಿಂದ ಅವತಂಸಯೋಗದಿಂ
ಭೋಗೀಂದ್ರಶಾಯಿಯರ್ಧಾಂಗಿಗೆ ಒಪ್ಪುವ ತೆರದಿ
ಸಿಂಗರಿಸಿ ಸುಮಗಂಧದಿಂ
ಅನಲೆ,ತಂದೆಯ ಮಾತು ಕೇಳಿ ಸಿದ್ಧಳಾಗುತ್ತಿದ್ದ ಅನಲೆಗೆ, ಸೀತೆ ಸನ್ನೆಯಿಂದಲೇ ಅದನ್ನು ನಿರಾಕರಿಸುತ್ತಾಳೆ. ಇಂಗಿತಜ್ಞೆಯಾದ ಅನಲೆ, "ಅಸ್ನಾತೆಯಾಗಿಯೆ ಪೂಜ್ಯೆ ತೆರಳಲ್ಕೆ ಬಯಸುವಳ್, ತಂದೆ, ಪತಿಪಾದದರ್ಶನಕೆ" ಎಂದು ವಿಭೀಷಣನಿಗೆ ಹೇಳುತ್ತಾಳೆ. "ಆ ಪ್ರಭುವಿನಾಜ್ಞೆ, ದೇವಿ; ನನ್ನಿಚ್ಛೆಯೆಂದು ಅರಿಯದಿರ್" ಎನ್ನುತ್ತಾನೆ ವಿಭೀಷಣ. ಆಗ ಸೀತೆ, "ಮನ್ನಿಸು, ಮಹಾಪ್ರಾಜ್ಞ, ಭರ್ತೃವಾಜ್ಞೆಯೆ ಸತಿಗೆ ಪಥ್ಯಮಯ್. ನಿನ್ನಾಡಿತಕ್ಕೆ ಇದಿರ್ ನುಡಿಯೆನಿನ್. ತಂದೆ ನೀನು ಎನಗಿಲ್ಲಿ. ನೀನೆಂದವೋಲಕ್ಕೆ, ತಂದೆ!" ಎಂದು ನುಡಿದು ಅನಲೆಯನ್ನು ಆಶ್ರಯಿಸಿ ದಂಡಿಗೆಗೆ ಹೋಗಿ ಕುಳಿತುಕೊಳ್ಳುತ್ತಾಳೆ.
ಬೆರಗು ಬಡಿದಂತೆ ಇಂತೇಕೆ ನಿಂತಿರುವೆ?
ತಡೆಯದೆಯೆ ಯಾನವೇರಿಸು ನಮ್ಮ ಭಾಗ್ಯದೀ ದೇವಿಯಂ.
ತ್ರಿಜಟೆಯ ಸಹಾಯದಿಂ, ನಿನ್ನ ತಾಯೊಡಗೂಡಿ,
ಪರಿಮಳ ದ್ರವ್ಯಮಯ ನವ್ಯ ತೈಲಂಗಳಂ ಪೂಸಿ,
ಮೀಯಿಸು ಸಖೋದಕ ಧಾರೆಯಿಂ,
ಪೊಂಗಿಂಡಿಗಳೊಳೆರೆದು ಪೊಯ್ ನೀರ್ಗಳಂ.
ಮತ್ತೆ, ಜನಕರಾಜನ ಮಗಳಿಗೆ, ಈ ದಶರಥನ ಸೊಸೆಗೆ, ರಾಮಪತ್ನಿಗೆ,
ಪಳಿಲಜ್ಜೆಯಂ ತೊರೆದು ಬಿಂಕದಿಂ ಕನಕ ಲಂಕಾ ಲಕ್ಷ್ಮಿ ತಲೆಯೆತ್ತಿ ನಿಲ್ವಂತೆವೋಲ್,
ತೊಡಿಸು, ಉಡಿಸು, ಮುಡಿಸು ದಿವ್ಯಾಂಬರ ಆಭರಣಮಂ ಪುಣ್ಯಪ್ರಸೂನಂಗಳಂ.
ಮಿಥಿಲೆಯಿಂದ ಅಂದು ಕೋಸಲಕೆ ದಿಬ್ಬಣಂಬೋದವೋಲ್,
ಇಂದೆಮ್ಮ ಲಂಕೆಯಿಂದ ಈಕೆ, ನವವಧುವೆನಲ್,
ಪ್ರಭುವೆಡೆಗೆ ಬೇಗದಿಂ ಪೋಗವೇಳ್ಕುಂ!
ಮುಂದೆ ಸೀತೆ ಸರ್ವಾಲಂಕಾರ ಭೂಷಿತೆಯಾಗಿ ರಾಮನಿದ್ದೆಡೆಗೆ, ಮೆರವಣಿಗೆಯಲ್ಲಿ ಬರುತ್ತಾಳೆ, ಅನಲೆಯ ಜೊತೆಗೆ. ಮೆರವಣಿಗೆಯ ನೇತೃತ್ವವನ್ನು ವಿಭೀಷಣನೇ ವಹಿಸಿರುತ್ತಾನೆ. ಕಪಿಸೈನ್ಯದ ಸಂಭ್ರಮವೂ ಮುಗಿಲು ಮುಟ್ಟುತ್ತದೆ. ಸದ್ದು ಅಡಗಿದ ಮೇಲೆ, "ಧರಾತ್ಮಜೆಯನ್ ಒರ್ವಳನೆ ಬಿಜಯಗೆಯ್ಸು ಎನ್ನೆಡೆಗೆ" ಎಂದು ರಾಮ ವಿಭೀಷಣನಿಗೆ ಆದೇಶಿಸುತ್ತಾನೆ. ವಿಭೀಷಣನಿಂದ ವಿಷಯ ತಿಳಿದ ಅನಲೆ "ನಾನುಂ ಆರ್ಯೆಯುಂ ಕೆಳೆಗೂಡಿ ಬಂದೊಡೆ ಏನ್ ಆರ್ಯಂಗೆ ತೊಂದರೆಯೆ?" ಎಂದು ವಿನೋದವಾಡುತ್ತಾಳೆ. ಆದರೆ ಸಂದರ್ಭ ಅವಳಂದುಕೊಂಡಂತೆ ಇರುವುದಿಲ್ಲ. ಅದನ್ನು ಅರಿತಿರುವ ವಿಭೀಷಣ ಮಗಳನ್ನು ಸುಮ್ಮನಿರುವಂತೆ ಸನ್ನೆ ಮಾಡುತ್ತಾನೆ. ಸಂತೋಷದಿಂದ ಪುಟಿಯುತ್ತಿದ್ದ ಅವಳ ಮುಖ ಕುಂದುತ್ತದೆ. ಸಂಕಟದಿಂದಲೇ, ಸಿಬಿಕೆಯ ಬಳಿಗೆ ಹೋಗಿ ತೆರೆಯೆಳೆದು ಸೀತೆಗೆ ವಿಷಯ ತಿಳಿಸುತ್ತಾಳೆ. ಸೀತೆ ರಾಮನ ಬಳಿ ಬಂದಾಗ, ರಾಮನಾಡುವ ಮಾತುಗಳು ವಿಭೀಷಣನಿಗೆ ಅಧಿಕಪ್ರಸಂಗದಂತೆ ಕಾಣುತ್ತವೆ. ಆದರೂ ಆತ ಅದನ್ನು ಸಹಿಸಿಕೊಳ್ಳುತ್ತಾನೆ. ಅದೆಲ್ಲವನ್ನೂ, ರಾಮನ ಮಾತುಗಳನ್ನೂ ದೂರದಲ್ಲಿಯೇ ನಿಂತು ಅನಲೆ ಕೇಳಿಸಿಕೋಳ್ಳುತ್ತಿದ್ದಾಳೆ. ತನ್ನದೇ ಕಾರಣಗಳನ್ನು ನೀಡಿ, "ರಾಕ್ಷಸಶ್ರೀಯುತೆ" ಎಂದು ಸೀತೆಯನ್ನು ನಿಂದಿಸಿ, 'ತನ್ನ ಕರ್ತವ್ಯವನ್ನು ತಾನು ಮಾಡಿದೆ' ಎಂದು ಹೇಳಿ, "ತೊಲಗುನಡೆ ಮೂರ್ಖೆ, ನೀನೆಲ್ಲಿಗಾದೊಡಂ ಎನ್ನ ಕಣ್ಮುಂದೆ ನಿಲ್ಲದಿರ್" ಎಂದು ರಾಮ ಕಠಿಣವಾಗಿ ವರ್ತಿಸುತ್ತಾನೆ.
ರಾಕ್ಷಸಂ ಮುಟ್ಟಿದನೆ?ಎಂದು ಅಬ್ಬರಿಸುತ್ತಾಳೆ. ಸೀತೆ ರಾಮನಿಗೆ ಪ್ರತ್ಯುತ್ತರವನ್ನೇನೊ ನೀಡುತ್ತಾಳೆ. ಆದರೆ ಕೊನೆಗೆ, "ಚಿತೆಯಂ ರಚಿಸು ಸೌಮಿತ್ರಿ! ಮಿಥ್ಯಾಪವಾದ ಘಾತಕೆ ಸಿಲ್ಕಿದೆನೆಗೆ ಬಾಳ್ ಮರಗೂಳನೊಂದು ಕೆಂಗೂಳ್" ಎಂದು ಲಕ್ಷ್ಮಣನಿಗೆ ಹೇಳುತ್ತಾಳೆ. ಲಕ್ಷ್ಮಣ "ಏನುಗ್ರನಗ್ರಜನೊ?" ಎಂದು ಅತ್ತಿಗೆಯ ಆಜ್ಞೆಯನ್ನು ಪಾಲಿಸುತ್ತಾನೆ. ಪತಿಗೆ ನಮಸ್ಕರಿಸಿ, ಮನದಲ್ಲಿ ಶಾಂತಿಯನ್ನಾಂತು, ನೋಡಿದವರೆಲ್ಲ ಬೆರಗಾಗುವಂತೆ ನಸುನಗುತ ಚಿತೆಯ ಬಳಿಗೆ ಬರುತ್ತಾಳೆ. ಅನಲೆ ಎಲ್ಲವನ್ನೂ ನಿಂತಲ್ಲಿಂದಲೇ ನೋಡುತ್ತಿದ್ದಾಳೆ. ಅಗ್ನಿಗೆ ನಮಸ್ಕರಿಸಿದ ಸೀತೆ,
ನಾನಲ್ತು, ದೈವಂ ಅಪರಾಧಿ.
ಮೆಯ್ಯನಲ್ಲದೆ ಮನವನೇಂ ಮುಟ್ಟಿದನೆ?
ಮುಟ್ಟಲಾರದೆ ಸುಟ್ಟು ಸೀದನಯ್
ಮುಗಿದ ಕೈ ಮುಗಿದಂತೆ,ಅಲ್ಲಿ ನೆರೆದಿದ್ದವರೆಲ್ಲಾ, ತಮ್ಮ ಕಣ್ಣೆದುರಿಗೇ ಸೀತೆ ಚಿತೆಗೆ ಬಿದ್ದಿದ್ದನ್ನು ಕಂಡು ದಿಗಿಲುಗೊಂಡು ರೋಧಿಸುತ್ತಿದ್ದಾರೆ. ಅಷ್ಟರಲ್ಲಿ, ಯಾರೂ ಊಹಿಸದಿದ್ದ, ಸ್ವತಃ ಲಕ್ಷ್ಮಣ, ಆಂಜನೇಯ, ಸುಗ್ರೀವ, ವಿಭೀಷಣ, ಅನಲೆಯರೂ ಊಹಿಸದಿದ್ದ ಘಟನೆಯೊಂದು ಕ್ಷಣಮಾತ್ರದಲ್ಲಿ ಘಟಿಸಿಬಿಡುತ್ತದೆ!
ತಪ್ತ ನವ ಹೇಮಾಭೆ ಪೊಕ್ಕಳ್ ಧಗದ್ಧಗಿಸುವುಜ್ಜ್ವಲ ಚಿತಾಗ್ನಿಯಂ,
ಮಂಗಳಾಜ್ಯಾಹುತಿಯವೋಲ್, ಪೂಜ್ಯೆ!
ಓಒಓ ಹೋಯೆಂದು ಹರಿದು ಹಬ್ಬಿದುದು
ಅಹಾ ರೋದನಂ ರೋದೋಂತಮಂ!
ನಿಷ್ಠುರಂ ಶಿಲಾಮೂರ್ತಿಯೆನೆ ನಿಷ್ಪಂದನಾಗಿ ನಿಂದುಅಲ್ಲಿ ನೆರೆದಿದ್ದವರೆಲ್ಲರಿಗೂ, ಒಂದು ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಇನ್ನೊಂದು ಆಘಾತ! ’ದೇವರಪೂಜೆಗೆಂದು ಬಂದವರ ಮೇಲೆ ದೇವಸ್ಥಾನವೇ ಬಿದ್ದಂತಾಯ್ತು’. ಸೀತಾರಾಮರ ಪುನರ್ಮಿಲನಕ್ಕೆ ಸಾಕ್ಷಿಯಾಗಬೇಕಾದವರು, ಅವರಿಬ್ಬರ ಅಗ್ನಿಪ್ರವೇಶಕ್ಕೆ ಸಾಕ್ಷಿಯಾಗಬೇಕಾಯಿತು. ರಾಮ ಸೀತೆಗೆ ’ಅಗ್ನಿಪ್ರವೇಶ ಮಾಡು’ ಎಂದು ಹೇಳಲೇ ಇಲ್ಲ. ಆಯ್ಕೆಯನ್ನು ಅವಳಿಗೆ ಬಿಟ್ಟು, ’ನೀನು ಸ್ವತಂತ್ರಳು’ ಎಂದ. ಆದರೆ ಆಕೆ ಹಿಡಿದ ಹಾದಿಯನ್ನೇ ತಾನೂ ಆರಿಸಿಕೊಂಡ! ಆದರೆ, ನೋಡುವವರಿಗೆ, ಅದು, ’ಸೀತೆಯನ್ನು ರಕ್ಷಿಸುವುದಕ್ಕೆ ರಾಮನೂ ಅಗ್ನಿಪ್ರವೇಶ ಮಾಡಿದ್ದಾನೆ’ ಎಂಬಂತೆ ಸಹಜವಾಗಿಯೇ ನಡೆದುಹೋಗಿದೆ. ಪ್ರತಿಯೊಂದು ಚೇತನವೂ ರಾಮನ ಸ್ಮರಣೆಯಲ್ಲಿ ಮುಳುಗಿಬಿಡುತ್ತದೆ. ಆಗ ಅನಲೆಯ ಮನದಲ್ಲಿ ಬಹುದೊಡ್ಡ ಕೋಲಾಹಲವೇ ನಡೆಯುತ್ತಿರುತ್ತದೆ. ಎಲ್ಲರೂ ನೋಡು ನೋಡುತ್ತಲೇ,
ಅನಿತುಮಂ ಸಾಕ್ಷಿಯೊಲ್ ನಿಟ್ಟಿಸುತ್ತಿರ್ದ
ರಾಮಾನನಂ ತಾನಾಯ್ತು ದೀಪ್ಯಮಾನಂ.
ಚಲಿಸಿದನು ಚಿತೆಗೆ,
ನೋಳ್ಪರ್ ಆ ವಿಸ್ಮಯಂ ಚಿಂತೆಗೆ ತಿರುಗುವಂತೆ.
ಓವೊವೋ ಎಂಬನಿತರೊಳೆ ತಾಂ ಪ್ರವೇಶಿಸುತ್ತ
ಉಜ್ಜ್ವಲಿಪ ಗೋಪುರೋಪಮದ ಅಗ್ನಿ ಮಧ್ಯೆ
ಮರೆಯಾದನೈ ಜಮದಗ್ನಿಜಾತನಂ ಜಯಿಸಿದಾತಂ!
ಹವ್ಯವಾಹನ ಪವಿತ್ರತನುವಿಂರಾಮನು ಸೀತೆಯೊಂದಿಗೆ ಚಿತೆಯಿಂದ ಮೇಲೆದ್ದು ಬರುತ್ತಾನೆ. ದಿವ್ಯದೇಹದಿಂದ, ದಿವ್ಯ ಮಾಲ್ಯಾಂಬರಗಳಿಂದ, ದಿವ್ಯತೇಜಸ್ಸಿನಿಂದ ಶೋಭಿಸುತ್ತಿದ್ದ ಸೀತಾರಾಮರನ್ನು ಕಂಡು ಕಪಿವೃಂದವೂ, ಲಂಕೆಯ ಜನರೂ ಹರ್ಷೋದ್ಗಾರದಿಂದ ಸ್ವಾಗತಿಸುತ್ತಾರೆ. ಆಗ,
ಪೊಣ್ಮಿದನು ದಶರಥಾತ್ಮಜಂ
ಜಾನಕೀ ಪಾಣೀಗ್ರಹಣ ಕೃಪಾಲು!
ಸೀತೆಯಂ ಪಾವನಾಗ್ನಿಸ್ನಾತೆಯಂ,
ಕಿರ್ಚ್ಚಿನುರಿಯಿಂದೆ ಕಾಯ್ವ ತೆರದಿಂದೆ,
ಕರೆತಂದನೊಯ್ಯನೆ ಪೊರಗೆ
ದುರಿತವಿರಹಿತ ಶಾನ್ತ ಹರಿತಶಾದ್ವಲ ಚಾರು ಆ ಗಿರಿಯ ವೇದಿಕೆಗೆ.
.........ಓಡಿ ಬಂದ ಅನಲೆಶತಶತಮಾನಗಳಿಂದ, ವಾಲ್ಮೀಕಿ ರಾಮಾಯಣದ ಈ ಸನ್ನಿವೇಶವನ್ನು ಓದಿ, ಕೇಳಿ ವ್ಯಾಕುಲಗೊಂಡಿದ್ದ, ಕ್ರೋಧಗೊಂಡಿದ್ದ, ಚಿಂತಿತವಾಗಿದ್ದ ಮನಸ್ಸುಗಳ ಪ್ರತಿನಿಧಿಯಂತೆ ಅನಲೆ ಮಾತನಾಡಿದ್ದಾಳೆ. ರಾವಣ ಮಹಾಶಿಲ್ಪಿ ಎಂದು ಚಂದ್ರನಖಿ ಹೇಳಿದ್ದಳು. ಇಲ್ಲಿ ಅನಲೆ ’ಲೋಕಗುರು’ ಎಂದು ರಾಮನಿಗೆ ಹೇಳುತ್ತಿದ್ದಾಳೆ! ರಾವಣತ್ವವು ಕಳೆದ ಮೇಲೆ ರಾವಣನೂ ರಾಮನೆ! ಯಾರೂ ಬೇಕಾದರೂ ರಾಮನಾಗಬಹುದು; ರಾವಣತ್ವವನ್ನು ತ್ಯಜಿಸುವುದರ ಮೂಲಕ. ಅಲ್ಲಿಯವರೆಗು ಕಣ್ಣ ಮುಂದೆ ನಡೆದ ಘಟನಾವಳಿಗಳನ್ನು, ಸಹೃದಯ ವಿಮರ್ಶಕಿಯಾಗಿ ಅನಲೆ ಅವಲೋಕಿಸಿತ್ತಾಳೆ. ಆಕೆಯ ಮಾತು ಅಲ್ಲಿ ನೆರೆದಿದ್ದವರಿಗೆಲ್ಲಾ ಹೃದಯದಂತರ್ ಬೋಧೆಯಾಗಲು, ಪ್ರತಿಯೊಬ್ಬರೂ ಬಂದು ಸೀತಾರಮರಿಗೆ ನಮಸ್ಕರಿಸುತ್ತಾರೆ.
ದಿಂಡುಗೆಡೆದಳು ರಾಮಪದತಲದಿ ಸಂತೋಷಮೂರ್ಛಿತೆಯವೋಲ್:
ಮನ್ನಿಸೈ, ಸ್ವಾಮಿ;
ದೇವಿಯಂ ನಿಂದಿಸಿದ ನಿನ್ನನ್ ಎನಿತೆನಿತೊ ನಾಂ ಬಯ್ದೆನಯ್.
’ಹದಿಬದೆಯನ್ ಅಗ್ನಿವುಗಿಸುವುದಿರಲಿ, ತನ್ನಂ ಪರೀಕ್ಷಿಸುವರಾರೊ?
ತಾನೇಂ ಪೊರತೊ ದುರಿತ ದೋಷಕೆ?’
ಎನುತೆ ಶಂಕಿಸಿದೆನ್, ಆ ನಿಂದೆ ಭಸ್ಮವಾಯಿತು, ತಂದೆ,
ನೀನೊಡ್ಡಿದ ಈ ಚಿತೆಯ ಲೋಕಪಾವಕ ಪವನಸಖನಿಂದೆ:
ಪೂಜ್ಯೆಯಂ ಪಾಲಿಸುವ ನೆವದಿ ನೀನುಂ ಪರೀಕ್ಷಿತನಲಾ!
ಲೋಕತೃಪ್ತಿಗೆ ಲೋಕಮರ್ಯಾದೆಗೆ ಒಳಗಾದೆ;
ಸರ್ವಲೋಕಪ್ರಭುವೆ, ಲೋಕಗುರು ನೀಂ ದಿಟಂ!
ರಾಮಾಯಣದ ಪ್ರಮುಖ ಘಟ್ಟ ಸೀತೆಯ ಅಗ್ನಿಪ್ರವೇಶ. ಸೀತೆಯನ್ನು ರಕ್ಷಿಸುವ ನೆಪದಲ್ಲಿ ತಾನೂ ಪರೀಕ್ಷೆಗೆ ಒಳಪಡುವ ಉದಾತ್ತನನ್ನಾಗಿಸಿ ಶ್ರೀರಾಮನನ್ನು ಚಿತ್ರಿಸಿ, ಶ್ರೀರಾಮಾಯಣದರ್ಶನವನ್ನಾಗಿಸಿದ ಕವಿಪ್ರತಿಭೆ, ಆ ಘಟನೆಯ ನಂತರ ಅನಲೆಯೊಬ್ಬಳ ಮಾತುಗಳ ಮೂಲಕವೇ, ಅದರ ಅಂತರಾರ್ಥವನ್ನು ಜಗತ್ತಿಗೆ ಸಾರುವ ಮೂಲಕ ತಾನು ಸೃಜಿಸಿದ ಪಾತ್ರಕ್ಕೆ ಒಂದು ವಿಶೇಷ ವ್ಯಕ್ತಿತ್ವವನ್ನು ಆರೋಪಿಸಿ ಅನಲೆಯನ್ನು ಅಜರಾಮರಗೊಳಿಸಿದೆ.
ಅನಲೆಯನ್ನುಳಿದ ಶ್ರೀರಾಮಾಯಣದರ್ಶನಂ ಮಹಾಕಾವ್ಯವನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಅಷ್ಟರಮಟ್ಟಿಗೆ, ಅನಲೆ ಇಡೀ ಕಾವ್ಯವನ್ನು ಆವರಿಸಿದ್ದಾಳೆ. ಆಕೆ ಕೇವಲ ಒಂದು ಪಾತ್ರವಾಗಿ ಉಳಿಯದೆ ಬೆಳೆಯುತ್ತಾ ಹೋಗುವ ಪರಿಯೇ ಒಂದು ಅಚ್ಚರಿ! ತನ್ನ ದರ್ಶನದ ಪ್ರತಿಪಾದನೆಗಾಗಿ, ತನ್ನ ಆದರ್ಶಕ್ಕೆ ಅನುಗುಣವಾದ ಒಂದು ಹೊಸ ಪಾತ್ರವನ್ನೇ ಸೃಷ್ಟಿಸಿ, ಆ ಪಾತ್ರ ರಾಮಾಯಣಕ್ಕೆ ಅನಿವಾರ್ಯ ಎನ್ನಿಸುವಂತೆ ಅದನ್ನು ಪೋಷಿಸಿದ್ದಾರೆ ಕವಿ. ಸರಮೆ, ವಿಭೀಷಣರನ್ನು ಹೆಸರಿಸುವಾಗ ಅನಲೆಯ ಬೊಪ್ಪ, ಅನಲೆಯ ತಾಯಿ ಎಂದು ಕಾವ್ಯದುದ್ದಕ್ಕೂ ಅನಲೆಯನ್ನು ನೆನಪಿಸುತ್ತಿರುತ್ತಾರೆ. ರಾವಣನ ಶ್ರೀದೇಹಕ್ಕೆ ಕಿಚ್ಚನ್ನಿಕ್ಕುವುದು ವಿಭೀಷಣ ಎನ್ನುವದಕ್ಕೆ ಬದಲಾಗಿ ’ಅನಲೆಯ ತಂದೆ ಕಿರ್ಚಿಡಲ್’ ಎನ್ನುತ್ತಾರೆ. ಈ ಎಲ್ಲಾ ಕಾರಣಗಳಿಂದಲೇ ನಾನು ಅನಲೆಯನ್ನು ’ಕವಿಮಾನಸಪತ್ರಿ’ ಎಂದು ಕರೆದದ್ದು. ಅನಲೆಯ ಪಾತ್ರವೊಂದೇ ಸಾಕು, ಕುವೆಂಪು ಅವರ ಕಲಾಸೃಷ್ಟಿಯ ವಿಶ್ವವಿರಾಡ್-ಸ್ವರೂಪವನ್ನರಿಯಲು. ಅನಲೆ ಕೂಡುಕುಟುಂಬವೊಂದರ ಮುದ್ದಿನ ಮಗಳು. ತಂದೆ ವಿಭೀಷಣ, ತಾಯಿ ಸರಮೆ. ದೊಡ್ಡಪ್ಪಂದಿರು ರಾವಣ-ಕುಂಭಕರ್ಣ. ದೊಡ್ಡಮ್ಮ ಮಂಡೋದರಿ, ಅಣ್ಣ ಇಂದ್ರಜಿತು, ಅತ್ತಿಗೆ-ಗೆಳತಿ ತಾರಾಕ್ಷಿ. ಪುಟ್ಟ ಹುಡುಗಿಗೆ ಆಡಲು ಇರುವ ಒಂದು ಜೀವಂತ ಗೊಂಬೆಯಂತೆ ವಜ್ರಾರಿ! ಬದುಕಿನ ಪ್ರಮುಖ ಘಟ್ಟದಲ್ಲಿ ಗುರುವಿನೋಪಾದಿಯಲ್ಲಿ ದೊರೆತ ಸೀತೆ, ಜೀವಿತಕ್ಕೊಂದು ದರ್ಶನವನ್ನೊದಗಿಸಿದ ರಾಮ. ಶ್ರೀಕುವೆಂಪುವ ಸೃಜಿಸಿದ ರಾಮಾಯಣದಲ್ಲಿ ಅನಲೆ ಮಕುಟಮಣಿಯಾಗಿದ್ದಾಳೆ, ನಿತ್ಯನೂತನಳಾಗಿದ್ದಾಳೆ, ಸಹೃದಯಶ್ರೀಯ ಪ್ರತಿನಿಧಿಯಾಗಿದ್ದಾಳೆ.
ಅನಲೆಯಂತಹ ಮಗಳು ಮನೆಗೊಬ್ಬಳಿರಲಿ ಎನ್ನಿಸಿದರೆ ಅದು ದುರಾಸೆಯಲ್ಲ! ಆದ್ದರಿಂದಲೇ, "ನಿನ್ನ ಮಗಳಲ್ತು, ಇವಳ್ ಎನ್ನ ಮಗಳ್!" ಎಂಬುದು ಕೇವಲ ರಾವಣನ ಮಾತಾಗಿ ಉಳಿಯದೆ, ಕವಿಯ ಮಾತೂ ಆಗುತ್ತದೆ; ಸಹೃದಯರ ಮಾತೂ ಆಗುತ್ತದೆ!
[ಮುಗಿಯಿತು]
1 comment:
ಅನಲೆ ಸೀತೆ ವಿಭೀಷಣ ತ್ರಿಜಟೆ ಊರ್ಮಿಳೆ ಭಾರತ ಲಕ್ಷ್ಮಣ ಹನುಮಂತ ಸುಮಂತ ರಾಮ ಈ ಮಹಾ ಪಾತ್ರಗಳು ರಾಮಾಯಣ ಮಹಾಕಾವ್ಯದ ವಿಶಿಷ್ಟ ಪತ್ರಗಳು
Post a Comment