Monday, January 20, 2014

ಕಾಂತಾರ ರಸ! ಅಂದರೇನು?

ರಸ ಎಂದರೇನು? ಕಾವ್ಯದಲ್ಲಿ ಅದರ ಪಾತ್ರವೇನು? ಈ ಪ್ರಶ್ನೆಗಳಿಗೆ ಉತ್ತರಿಸುವುದು ಸ್ವಲ್ಪ ಕಷ್ಟದ ಕೆಲಸ. ಸಾಮಾನ್ಯನೊಬ್ಬನಿಗೆ ರಸದ ಬಗ್ಗೆ ಪ್ರಶ್ನೆ ಕೇಳಿದರೆ, ಆತ ನವರಸಗಳ ಬಗ್ಗೆ ಹೇಳುತ್ತಾನೆ. ಸ್ವಲ್ಪ ಶಾಸ್ತ್ರ ಪಂಡಿತನೂ ಭೋಜನಪ್ರಿಯನೂ ಆಗಿದ್ದರೆ ಷಡ್ರಸಗಳ ಬಗ್ಗೆ ಹೇಳುತ್ತಾನೆ. ಕಾವ್ಯಗಳಲ್ಲಿ ಆಸಕ್ತಿಯಿರುವವನಾದರೆ ಭರತ ಪ್ರತಿಪಾದಿತ ಅಷ್ಟರಸಗಳ ಬಗ್ಗೆಯೂ ನಂತರ ಅಲಂಕಾರಿಕರು ಪ್ರಸ್ತಾಪಿಸಿದ ನವರಸಗಳ ಬಗ್ಗೆಯೂ ಮಾತನಾಡುತ್ತಾನೆ.
ರಸ ಎಂಬುದಕ್ಕೆ ದ್ರವವಸ್ತು, ನೀರು, ಗಿಡ ಮರ ಮೊದಲಾದವುಗಳ ಸಾರ ಎಂಬ ಸಾಮಾನ್ಯ ಅರ್ಥಗಳಿವೆ. ಆದರೆ ರಸ ಎಂಬುದು ಒಂದು ವಿಶೇಷ ಅರ್ಥವುಳ್ಳದ್ದು ಹಾಗೂ ಅತ್ಯಂತ ವಿಶಾಲವಾದದ್ದು. ವಿಭಾವಾನುಭಾವವ್ಯಭಿಚಾರಿಸಂಯೋಗಾದ್ರಸನಿಷ್ಪತ್ತಿಃ ಎಂಬುದು ಆದಿಮೀಮಾಂಸಕ ಭರತನ ಪ್ರತಿಪಾದನೆ. ವಿಭಾವಗಳು, ಅನುಭಾವಗಳು, ಸಂಚಾರಿಭಾವಗಳು ಇವುಗಳ ಸಂಯೋಗದಿಂದ ರಸನಿಷ್ಪತ್ತಿಯಾಗುತ್ತದೆ ಎಂದರ್ಥ. ರುಚಿಕಟ್ಟಾದ ಊಟವನ್ನು ಮಾಡುತ್ತಾ ಜನರು ಹೇಗೆ ಪ್ರಸನ್ನರಾಗುತ್ತಾರೊ ಹಾಗೆಯೇ ನಾಟಕ-ಕಾವ್ಯಗಳನ್ನು ದರ್ಶಿಸಿದ ಸಹೃದಯ ಪ್ರಸನ್ನನಾಗುತ್ತಾನೆ. ಆತನಲ್ಲಿ ಈ ಪ್ರಸನ್ನತೆಗೆ ಕಾರಣವಾಗುವುದೇ ರಸ! ಇವುಗಳನ್ನು (ಸಂಖ್ಯೆ ಒತ್ತಟ್ಟಿಗಿರಲಿ) ’ನಾಟ್ಯರಸ’ ಎಂದು ಕರೆಯಲಾಗಿದೆ.
ಷಡ್ರಸಗಳೆಂದರೆ ಆರು ರಸಗಳೆಂದು ಅರ್ಥ. ಸಿಹಿ, ಹುಳಿ, ಉಪ್ಪು, ಕಾರ, ಕಹಿ ಮತ್ತು ಒಗರು ಈ ರುಚಿಗಳಿಗೆ ರಸಗಳೆಂದು ಕರೆಯುತ್ತಾರೆ. ಇವು ಅನ್ನಕ್ಕೆ ಸಂಬಂಧಿಸಿದವುಗಳಾದ್ದರಿಂದ ’ಅನ್ನರಸ’ಗಳೆಂದು ಬೇಕಾದರೆ ಕರೆಯಬಹುದು. ನಾನೀಗ ಹೇಳಲು ಹೊರಟಿರುವ ರಸದ ವ್ಯಾಪ್ತಿಗೆ ಹೊರತಾದದ್ದು ಈ ಮೇಲಿನ ಆರು ರಸಗಳು. ಇನ್ನು ಭಾರತೀಯ ಕಾವ್ಯಮೀಮಾಂಸೆಯಲ್ಲಿ ಭರತಮುನಿ ಪ್ರತಿಪಾದಿಸಿದ ರಸತತ್ವದಲ್ಲಿ ಎಂಟು ಬಗೆಯ ರಸಗಳನ್ನು ಹೇಳಿದ್ದಾನೆ. ಶೃಂಗಾರ, ಹಾಸ್ಯ, ಕರುಣ, ಅದ್ಭುತ, ವೀರ, ಭಯಾನಕ, ಬೀಭತ್ಸ ಮತ್ತು ರೌದ್ರಗಳೇ ಆ ಎಂಟು ರಸಗಳು. ಮೊದಲೆಲ್ಲ ಇದ್ದುದ್ದು ಅಷ್ಟರಸಾಶ್ರಯಗಳಾದ ನಾಟಕ-ಕಾವ್ಯಗಳು ಮಾತ್ರ. ಆದರೆ ನವರಸಾತ್ಮಕವಾದ ಕಾವ್ಯ-ನಾಟಕಗಳು ಎಂದು ಹೇಳುವ ಪರಿಪಾಠ ಬಂದದ್ದು, ನಂತರದ ಮೀಮಾಂಸಕರು ಶಾಂತರಸವನ್ನು ಸೇರಿಸಿದ ಮೇಲೆ. ನಂತರ ಅವು ’ನವರಸ’ಗಳೆಂದೇ ಪ್ರಖ್ಯಾತವಾವದುವು. ಈ ಶಾಂತರಸವನ್ನು ಪ್ರತಿಪಾದಿಸಿದವನು ರುದ್ರಟ ಎಂಬ ಮೀಮಾಂಸಕ. ಆಶ್ಚರ್ಯವೆಂದರೆ, ರುದ್ರಟ ಶಾಂತರಸದ ಜೊತೆಯಲ್ಲೇ ಹೇಳಿದ ’ಪ್ರೇಯಾನ್’ ಎಂಬ ರಸ ಹೇಳ ಹೆಸರಿಲ್ಲದಂತೆ ಕಾಲಗರ್ಭದಲ್ಲಿ ಹೂತು ಹೋಯಿತು. ’ಸಕಾಮ’ವಾದ ರತಿ ಮತ್ತು ’ಅಕಾಮ’ವಾದ ಸ್ನೇಹ ಅಥವಾ ಪ್ರೀತಿ ಈ ಎರಡನ್ನು ಪ್ರತ್ಯೇಕಿಸಿ, ಅಕಾಮವಾದ ಸ್ನೇಹಕ್ಕೆ ರುದ್ರಟ ಪ್ರೇಯಾನ್ ಎಂಬ ರಸವನ್ನು ಪ್ರತಿಪಾದಿಸಿದ್ದ. ಸರಳವಾಗಿ ಅದನ್ನು ನಿಷ್ಕಾಮ ’ಪ್ರೀತಿ’ ರಸ ಎಂದಿಟ್ಟುಕೊಳ್ಳಬಹುದು. ಈ ಜಗತ್ತಿನಲ್ಲಿ ಅಕಾಮವಾದದ್ದು ಯಾವುದೂ ಇಲ್ಲ; ಶುದ್ಧದೈವಭಕ್ತಿಯಿಂದ ಹಿಡಿದು ಎಲ್ಲವೂ ಸಕಾಮವೇ ಎಂಬುದರಿಂದಲೋ ಏನೋ ’ಪ್ರೇಯಾನ್’ ಮರೆಯಾಗಿಬಿಟ್ಟಿತು. ಇನ್ನೂ ಕೆಲವರು ’ಭಕ್ತಿ’ ರಸವನ್ನು ಪ್ರತಿಪಾದಿಸಿ ರಸಗಳ ಪಟ್ಟಿಗೆ ಸೇರಿಸುವ ಪ್ರಯತ್ನ ನಡೆಸಿದರಾದರೂ ಅದು ನಿಲ್ಲಲಿಲ್ಲ.

ಹಾಗಾದರೆ ಈ ’ಕಾಂತಾರ ರಸ’ ಯಾವುದು? ಏನಿದು? ಕಾಂತಾರ ಎಂದರೆ ಕಾಡು ಎಂದರ್ಥ. ಕಾಂತಾರ ರಸ ಎಂದರೆ ಕಾಡಿನ ರಸ ಎಂಬುದು ಅದರ ವಾಚ್ಯಾರ್ಥ. ಆಶ್ಚರ್ಯವೆಂದರೆ ಈ ರಸ ಕಾವ್ಯಮೀಮಾಂಸೆಯ ಪ್ರತಿಪಾದನೆಯಲ್ಲಿ ವ್ಯಕ್ತವಾಗಿಲ್ಲ. ಕಾಂತರ ರಸವನ್ನು ಯಾವುದೇ ಉದ್ದೇಶವಿಲ್ಲದೆ, ಸಕಾರಣವಾಗಿ, ಸಕಾಲದಲ್ಲಿ, ಸತ್ಪಾತ್ರವೊಂದರ ಮೂಲಕ ಸತ್ಕವಿಯೊಬ್ಬರು ಪ್ರತಿಪಾದಿಸಿದ್ದಾರೆ. ಪ್ರತಿಪಾದಿಸಿದ್ದಾರೆ ಎಂಬುದಕ್ಕಿಂತ ಉಲ್ಲೇಖಿಸಿದ್ದಾರೆ ಎಂಬುದೇ ಹೆಚ್ಚು ಸೂಕ್ತ. ಕಾರಣ ಅದು ಉಲ್ಲೇಖ ಮಾತ್ರವಾಗಿದೆ. ಅದೊಂದು ಪದವನ್ನುಳಿದು ಕವಿ ಇನ್ನೇನನ್ನೂ ಹೇಳುವುದೇ ಇಲ್ಲ. ಸಹೃದಯರು, ಮೀಮಾಂಸಕರು ಅದರ ಬಗ್ಗೆ ಯೋಚಿಸಬೇಕಷ್ಟೆ.
ಸಂದರ್ಭ ಯಾವುದು? ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಈ ಕಾಂತಾರ ರಸದ ಉಲ್ಲೇಖವಿದೆ. ಪಿತೃವಾಕ್ಯಪರಿಪಾಲನೆಗಾಗಿ ರಾಮ ಕಾಡಿಗೆ ಹೊರಟು ನಿಂತಿರುವ ಕಥಾಪ್ರಸಂಗ. ತಾಯಿಯ ಅಪ್ಪಣೆಯನ್ನು ಪಡೆದು, ಮಡದಿ ಸೀತೆಯಲ್ಲಿಗೆ ಬಂದು ಅವಳಿಗೆ ವಿಷಯ ತಿಳಿಸುತ್ತಾನೆ. ’ತಾನೂ ಕಾಡಿಗೆ ಬರುತ್ತೇನೆ’ ಎನ್ನುತ್ತಾಳೆ ಸೀತೆ. ರಾಮ ’ವನವಾಸ ನನಗೊಬ್ಬನಿಗೇ’ ಎನ್ನುತ್ತಾನೆ. ’ಗಂಡನೆಲ್ಲಿರುತ್ತಾನೊ ಹೆಂಡತಿ ಅಲ್ಲಿಯೇ ಇರಬೇಕು, ಅದೇ ಧರ್ಮ’ ಎಂದು ವಾದ ಹೂಡಿ ರಾಮನ ಬಾಯಿ ಮುಚ್ಚಿಸುತ್ತಾಳೆ ಸೀತೆ. ಆದರೆ, ಸುಕೋಮಲೆಯಾದ ಸೀತೆಯನ್ನು ಕಾಂತಾರದ ಕಷ್ಟಕ್ಕೆ ಎಳೆಸುವಷ್ಟು ಕಠಿನಲ್ಲವಲ್ಲ ರಾಮ. ಆತ ಕಾಡಿನ ಕಷ್ಟವನ್ನು ಅವಳೆದುರಿಗೆ ಬಿಡಿಸಿ ಹೇಳುತ್ತಾನೆ. ’ದೂರದ ಬೆಟ್ಟ ಕಣ್ಣಿಗೆ ನುಣ್ಣು ಎನ್ನುವಂತೆ ಕಾಡು ಸುಲಭವಲ್ಲ. ಅದು ಕವಿಯ ವರ್ಣನೆಯಂತೆ ಸುಂದರವೂ ಅಲ್ಲ. ಹುಲಿ, ಸಿಂಹ, ಚಿರತೆ, ಆನೆ, ಕರಡಿ ಮುಂತಾದವುಗಳಿಂದ ಭಯಂಕರವಾಗಿರುವಂತದ್ದು. ಕಣಿವೆ ಗುಡ್ಡಗಳಿಂದ, ಗಗನಚುಂಬಿ ಮರಗಳಿಂದ, ಭಯಂಕರವಾದ ಜಲಪಾತಗಳಿಂದ, ನದಿಗಳಿಂದ ಭೀಕರವಾಗಿ ಇರುವಂತದ್ದು. ಅಲ್ಲಿಯ ರಾತ್ರಿಯಂತೂ ಘೋರವಾದದ್ದು. ನಮ್ಮನ್ನೇ ಮೂರ್ಚೆಗೆ ಬೀಳಿಸುವಷ್ಟು ಕಠಿಣ, ಭಯಾನಕ, ಮಹಾಕ್ರೂರ. ಅಲ್ಲಿನ ಏಕಾಂತಕ್ಕೆ ನಮ್ಮ ಹೃದಯವೇ ನಮಗೆ ಭಾರವಾಗಿಬಿಡುತ್ತದೆ! ಬೇಸಗೆ ಬಿಸಿಲಿನಷ್ಟಿದ್ದರೆ, ಮಳೆಗಾಲ ಬಿಡದೆ ಹಿಡಿದು ಜಡಿಯುತ್ತದೆ. ಮಲಗಲು ಒದ್ದೆ ಬಂಡೆಯೇ ಹಾಸಿಗೆ. ಹೋಗಲಿ ಊಟವಾದರೇನು ಷಡ್ರಸದುಣಿಸೆ!? ಗೆಡ್ಡೆ ಗೆಣಸುಗಳೇ ಆಹಾರ. ಚಳಿಗೆ ಹೊದೆಯಲು ಏನೂ ಇರುವುದಿಲ್ಲ. ಸುಖದಲೇಶಮುಂ ಸುಳಿಯದತಿಕಠಿನಕ್ಕೆ ರಾಜಪುತ್ರಿ, ಲತಾಂಗಿ ನಿನ್ನನೆಂತೊಯ್ದಪೆನ್ ಪೇಳ್’ ಎಂದು ರಾಮ ಸೀತೆಯ ಮನಸ್ಸುನ್ನು ಬದಲಾಯಿಸಿ ಅವಳನ್ನು ಅಯೋಧ್ಯೆಯಲ್ಲಿಯೇ ಉಳಿಸಬೇಕೆಂದು ವಾದ ಮಾಡುತ್ತಾನೆ.

ಮಾತನಾಡುತ್ತಿರುವವನು ತನ್ನಿನಿಯನಾದ ರಾಮ. ಆತ ಹೇಳುತ್ತಿರುವುದು ಕಾಡಿನ ವಿಚಾರ. ಸ್ವತಃ ಗಿರಿವನಪ್ರಿಯನಾದ ರಾಮನಿಗೆ ಕಾಡು ಭಯಂಕರವಾಗಿ ಕಂಡಿದ್ದರಲ್ಲವೆ ಆತನ ವರ್ಣನೆಯಲ್ಲಿ ಭಯಂಕರತೆ ಇಣುಕುವುದು!? ಆತ ಹೇಳಿದ ಭಯಂಕರತೆಗಳೆಲ್ಲವೂ ಸೀತೆಗೆ ಸುಂದರ ವರ್ಣನೆಗಳಂತೆ ಕೇಳಿಸುತ್ತವೆ. ಸೀತೆ ನಗುತ್ತಾ ಉತ್ತರಿಸುತ್ತಾಳೆ; ವಾದವೇ ನಿರಾಯುಧವಾಗಿ ಸೋಲುವಂತೆ!
ನೆತ್ತರೀಂಟುವ ಜಿಗಣೆ, ಮೇಣ್
ಕರ್ಕಶಂ ಕೂಗಿಡುವ ಜೀರುಂಡೆಗಳನೇತಕೆ ಉಳಿದೆ ಪೇಳ್?
ಕರುಣಾಳಲಾ! ಕೊರ್ವಿದಾ ಪೆರ್ವಾತುಗಳ್ಗೆ ಆಂ
ಬೆದರ್ವಂತುಟ ಅಣುಗಿಯೇಂ?
ಕೇಳ್, ಹೃತ್ಕಮಲ ಕರುಣರವಿ,
ನಿನ್ನ ಬಣ್ಣನೆಗೇಳ್ದು ಕಾತರಿಸುತಿದೆ ಮನಂ
ಕಾಂತಾರ ರಸಕ್ಕೆಳಸಿ!
ಎಂದು ಕೇಳಿ ಮುಂದಕ್ಕೆ ಸಾಗಿ ಬಿಡುತ್ತಾರೆ. ಕಾಂತಾರ ರಸ ಎಂಬುದಕ್ಕೆ ಯಾವುದೇ ವಿಶೇಷವನ್ನೂ, ವಿಶೇಷ ಚಿಹ್ನೆಗಳನ್ನೂ ಕವಿ ಅಲ್ಲಿ ಕಲ್ಪಿಸಿಲ್ಲ; ಆಶ್ಚರ್ಯಸೂಚಕ ಚಿಹ್ನೆಯೊಂದನ್ನುಳಿದು! ರಾಮನ ಭಯಂಕರ ವರ್ಣನೆ, ಸೀತೆಗೆ ಸುಂದರ ಬಣ್ಣನೆ! ಆತನ ವರ್ಣನೆ ಅವಳಲ್ಲಿ ಮೂಡಿಸಿದ ರಸಗಳಾವುವು? ಕಾವ್ಯದಲ್ಲಿ ಬರುವ ಯಾವುದೊ ವರ್ಣನೆಯನ್ನು ಓದಿ ಉದಿಸಿದ ರಸದಿಂದ ಸಹೃದಯ ಆನಂದವನ್ನಪ್ಪುತ್ತಾನೆ. ಇಲ್ಲಿ ಸೀತೆ, ರಾಮನು ಮಾಡುವ ಕಾಡಿನ ವರ್ಣನೆಯನ್ನು ಕೇಳಿ ರಸಾನಂದವನ್ನು ಅನುಭವಿಸಿದ್ದಾಳೆ. ಯಾವಾವ ರಸಗಳು? ಮೇಲೆ ಹೇಳಿದ ನವ, ದಶ, ಏಕಾದಶ ರಸಗಳನ್ನೂ ಮೀರಿದ ಅನುಭವ ಅವಳದು! ಗಿರಿವನಪ್ರಿಯನಾದ ರಾಮನಿಂದ ಬಣ್ಣನೆಗೊಳಾಗದ ಕಾಡನ್ನು ತಾನೂ ನೋಡಬೇಕು ಅನ್ನಿಸಿಬಿಡುತ್ತದೆ. ಸೀತೆಯಲ್ಲಿ ಅಂತಹ ಒಂದು ಅಪೇಕ್ಷೆಯನ್ನು ಹುಟ್ಟು ಹಾಕಿದ ರಸವೇ ’ಕಾಂತಾರ ರಸ’ ಅರ್ಥಾತ್ ಕಾಡಿನ ರಸ.
ಕಾಡಿನ ದರ್ಶನಕ್ಕೆ ಹೋದರೆ, ದರ್ಶನಾರ್ಥಿಯ ಮನಸ್ಸಿನಲ್ಲಿ ಮೂಡುವ ಭಾವನೆಗಳೇನು? ಅದರಿಂದ ಉತ್ಪನ್ನವಾಗುವ ರಸಗಳಾವುವು? ಹೇಳುವುದು ಕಷ್ಟ. ಕಾಡಿನ ಸರ್ವಾನುಭವವಾಗಬೇಕಾದರೆ, ಅಲ್ಲಿ ದರ್ಶಕ ಮಾತಿಲ್ಲದವನಾಗಬೇಕು; ತನ್ನನ್ನು ತಾನು ಕಳೆದುಕೊಳ್ಳಬೇಕು; ಕಾಡಿನಲ್ಲಿ ತಾನೂ ಒಂದಾಗಿ ಹೋಗಬೇಕು. ಇದನ್ನೇ ತೇಜಸ್ವಿ ’ಕಾಡಿನೊಳಗೆ ನೀವು ಹೋದ ತಕ್ಷಣ ಅಲ್ಲಿನ ಶಬ್ದಗಳೆಲ್ಲಾ ಸ್ತಬ್ಧವಾಗಿಬಿಡುತ್ತವೆ. ನೀವೂ ನಿಶ್ಯಬ್ಧವಾಗಿ ಸುಮ್ಮನೆ ಒಂದರ್ಧ ಗಂಟೆ ಕುಳಿತು ನೋಡಿ, ಕಾಡಿಗೇ ಕಾಡೇ ಜೀವಪಡೆದುಕೊಳ್ಳುತ್ತದೆ. ಎಲ್ಲ ಶಬ್ದಗಳೂ ಮೊದಲಿನಂತೆಯೇ ಕೇಳಿಸತೊಡಗುತ್ತವೆ’ ಎಂಬರ್ಥದಲ್ಲಿ ಸಂದರ್ಶನವೊಂದರಲ್ಲಿ ಹೇಳಿದ್ದು ನೆನಪಿದೆ.
ಕಾಡಿನ ಅನುಭವದಿಂದ, ಕತೆಯಿಂದ, ಬಣ್ಣನೆಯಿಂದ, ಚಿತ್ರಣದಿಂದ ಒಟ್ಟಾರೆ ಕಾಡಿನಿಂದ ಮನಸ್ಸು ಪಡೆಯಬಹುದಾದ ರಸಾನಂದವೇ ಕಾಂತಾರ ರಸ.
ರಸ ಎಂಬುದು ಸಂಚಾರಿ ಭಾವ. ಆದರೆ ಕುವೆಂಪು ಸಾಹಿತ್ಯದ ಮಟ್ಟಿಗೆ ಕಾಂತಾರ ರಸ ಎಂಬುದು ಸ್ಥಾಯಿ ಭಾವ! ಅಷ್ಟರ ಮಟ್ಟಿಗೆ ಕಾಡು ಅವರ ಸಾಹಿತ್ಯವನ್ನು ಆವರಿಸಿ ಬಿಟ್ಟಿದೆ. ತಮ್ಮ ಮೊದಲ ಕವನಸಂಕಲನದ ಮೊದಲ ಕವಿತೆಯ ಮೊದಲ ಸಾಲೇ ಕಾಡಿನ ಕೊಳಲಿದು, ಕಾಡ ಕವಿಯು ನಾ ಎಂದಾಗಿರುವುದು ಕಾಕತಾಳಿಯವೋ ಏನೊ? ಕಾನೂರು (ಕಾನು+ಊರು) ಎಂಬ ಹೆಸರಲ್ಲಿಯೇ ಕಾಡಿದೆ. ರಾಮನಿಗೆ ಅವರು ಟಂಕಿಸಿರುವ ಬಿರುದುಗಳಲ್ಲಿ ’ಗಿರಿವನಪ್ರಿಯ’ ಮುಖ್ಯವಾದುದು ಎಂಬುದು ಗಮನಾರ್ಹ! ದಾರಿದ್ರ್ಯಮಲ್ತೆ ಆ ನಾಗರಿಕ ಜೀವನಂ ಈ ವನ್ಯ ಸಂಸ್ಕೃತಿಯ ಮುಂದೆ? ಎಂದು ವಿಶ್ವಾಮಿತ್ರನಲ್ಲಿ ಕೇಳುವ ರಾಮ ಗಿರಿವನಪ್ರಿಯನಲ್ತೆ? ’ಗಿರಿವನಪ್ರೀತಿ ತಾಂ ದೈವಕೃಪೆ ದಲ್’ ಎನ್ನುವ ವಿಶ್ವಾಮಿತ್ರ ಕಾಡಿನ ಹಿನ್ನೆಲೆಯಲ್ಲಿಯೇ ರಸತತ್ವವನ್ನು ಕೆಳಗಿನಂತೆ ಪ್ರತಿಪಾದಿಸುತ್ತಾನೆ.
ರಸಜೀವನಕೆ ಮಿಗಿಲ್ ತಪಮಿಹುದೆ?
ರಸಸಿದ್ಧಿಗಿಂ ಮಿಗಿಲೆ ಸಿದ್ಧಿ?
ಪೊಣ್ಮಿದೆ ಸೃಷ್ಟಿ ರಸದಿಂದೆ;
ಬಾಳುತಿದೆ ರಸದಲ್ಲಿ;
ರಸದೆಡೆಗೆ ತಾಂ ಪರಿಯುತಿದೆ;
ಪೊಂದುವುದು ರಸದೊಳ್ ಐಕ್ಯತೆವೆತ್ತು ತುದಿಗೆ.
ರಸಸಾಧನಂಗೆಯ್ಯದಿರುವುದೆ ಮೃತ್ಯು.
ಆನಂದರೂಪಂ ಅಮೃತಂ ರಸಂ!
ವಿಶ್ವಾಮಿತ್ರನ ಈ ರಸತತ್ವಮೀಮಾಂಸೆಯಲ್ಲಿ ಕುವೆಂಪು ಉಲ್ಲೇಖಿಸಿದ ಕಾಂತಾರರಸವೂ ಸೇರಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಮಲೆ, ಕಾಡು ಇವು ಕುವೆಂಪು ಅವರನ್ನು ಎಷ್ಟು ಕಾಡಿವೆ ಎಂದರೆ ಶ್ರೀರಾಮಾಯಣದರ್ಶನಂ ಕಾವ್ಯದಲ್ಲಿ ಕೊನೆಗೆ ಪಟ್ಟಾಭಿಷೇಕವಾಗುವುದು ರಾಮನೆಂಬ ಮೃಣ್ ಮೂರ್ತಿಗಲ್ಲ! ನಿತ್ಯರಾಮನೆಂಬ ಕಾಂತಾರದ ನೀಲಪರ್ವತಕ್ಕೆ. ಆ ಸಾಲಿನಲ್ಲಿ ಕಾಣಿಸಿಕೊಳ್ಳುವುದು ಸೀತೆ ಲಕ್ಷ್ಮಣ ಭರತ ಶತ್ರುಘ್ನ ಆಂಜನೇಯರಲ್ಲ; ಸಸ್ಯಸುಂದರ ಬೃಹತ್ ಭೂಧರಗಳು ಅಂದರೆ ಕಾಡಿನಿಂದಾವೃತವಾಗಿರುವ ಪರ್ವತಗಳು. ಅವುಗಳೆಲ್ಲವೂ ಒಂದಾಗುವಂತೆ ಸುರಿವ ಮಳೆಯೇ ಅಭಿಷೇಕ ಜಲ! ಅದಕ್ಕೇ ಅದು ನಿತ್ಯಪಟ್ಟಾಭಿಷೇಕ! ಈ ನಿತ್ಯಪಟ್ಟಾಭಿಷೇಕ ವಿರಾಡ್ ದರ್ಶನದ ಚಿತ್ರಣವನ್ನು ಶ್ರೀ ಜೆ.ಎಸ್. ಖಂಡೇರಾವ್ ಅವರು ವರ್ಣಚಿತ್ರವೊಂದರಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ‘ಆ ಮಾನುಷ ಸ್ಥೂಲ ನಶ್ವರ ಕೃತಿಗೆ ತಾನಿದುವೆ ನಿತ್ಯ ಶಾಶ್ವತ ದಿವ್ಯ ಮಾತೃಕೆ ಕಣಾ’ ಎಂಬ ಮಾತುಗಳೇ ಸಾಕ್ಷಿ ಅವರ ಗಿರಿವನ ಪ್ರೀತಿಯ ಅಸೀಮತೆಗೆ. ಕಾಡು ಎಂಬುದು ಕುವೆಂಪು ಅವರ ಸಾಹಿತ್ಯದುದ್ದಕ್ಕೂ ಸ್ಥಾಯಿ ಭಾವಾದರೆ, ಅವರೇ ಉಲ್ಲೇಖಿಸಿರುವ ’ಕಾಂತಾರ ರಸ’ ಎಂಬ ಸಂಚಾರಿ ಭಾವ ’ಸ್ಥಾಯಿ’ ಎನ್ನುವಷ್ಟು ಚಿರಸ್ಥಾಯಿಯಾಗಿಬಿಟ್ಟಿದೆ.

No comments: