Saturday, July 11, 2009

ಎಲ್ಲೋರಾ!!! ಎಷ್ಟು ಗೊತ್ತು?


ಈ ಸೃಷ್ಟಿಯ ಮಹಾ ಮಹಾ ಅದ್ಭುತಗಳನ್ನು ನೋಡಿ ಆಶ್ಚರ್ಯ ಪಡುವುದು ಮಾನವನ ಸಹಜಗುಣವೇ ಆಗಿದೆ. ಹಾಗೆಯೇ ಮಾನವ ನಿರ್ಮಿತ ಅದ್ಭುತಗಳೂ ನಮ್ಮನ್ನು ಮೂಕವಿಸ್ಮಿತರಾಗುವಂತೆ ಮಾಡುತ್ತವೆ.


ಶ್ರವಣಬೆಳಗೊಳದ ಗೊಮ್ಮಟನ ಎದುರಿಗೆ ನಿಂತಾಗ ಮಾತು ಇಲ್ಲವಾಗಿ ಭವ್ಯತೆಯೇ ಎದ್ದು ಬಂದಂತಾಗುವುದಿಲ್ಲವೇ!? ಅಂತಹ ಮತ್ತೊಂದು ಮಹಾದ್ಭುತವೇ ಎಲ್ಲೋರ ಕೈಲಾಸನಾಥ ದೇವಾಲಯ!


ಇತ್ತೀಚಿಗೆ ಒಂದು ದಿನ ಮಿತ್ರರ ಜೊತೆಯಲ್ಲಿ ಎಲ್ಲೋರಕ್ಕೆ ಭೇಟಿಯಿತ್ತು, ಸುಮಾರು ಒಂಬತ್ತು ಗಂಟೆಗಳ ಕಾಲ ಕೈಲಾಸನಾಥ ದೇವಾಲಯ ಒಂದನ್ನೇ ವೀಕ್ಷಿಸಿದ್ದೆ!.


ಭವ್ಯತೆ, ಭೂಮತೆ, ಮಹೋನ್ನತಿ ಮೊದಲಾದ ಪದಗಳು ಕಲ್ಪನೆಗೆ ನಿಲುಕುವ ಏಕೈಕ ಸ್ಥಳ ಕೈಲಾಸನಾಥ ದೇವಾಲಯ! ಮುನ್ನೂರಕ್ಕೂ ಹೆಚ್ಚು ಫೋಟೋಗಳನ್ನು ಕ್ಲಿಕ್ಕಿಸಿದ ನಾವು, ದೇವಾಲಯದಲ್ಲಿ ಇದ್ದಷ್ಟು ಹೊತ್ತು ಮಾತನಾಡಿದ್ದು ತುಂಬಾ ಕಡಿಮೆ.


ಮಾತನಾಡಬಾರದೆಂದು ನಾವೇನು ಮೊದಲೇ ನಿರ್ಧರಿಸಿರಲಿಲ್ಲ. ಆ ಭವ್ಯ ಕಲಾದೇಗುಲವನ್ನು ಹಾಗೂ ಅದರ ನಿರ್ಮಿತಿಯ ಹಿಂದಿರುವ ಕಲಾವಂತ ಮನಸ್ಸುಗಳನ್ನು ಹಾಗೂ ಶತಮಾನಗಳ ಕಾಲ ದುಡಿದವರ ಶ್ರಮವನ್ನು ಕಂಡು ಮಾತೇ ಮರೆತು ಹೋಗಿತ್ತು!


ಬೆಟ್ಟದ ಮೇಲೆ ಒಂದೇ ಜಾಗದಲ್ಲಿ, ಬಿಸಿಲನ್ನೂ ಲೆಕ್ಕಿಸದೆ ಸುಮಾರು ಹೊತ್ತು ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತು ದೇವಾಲಯವನ್ನು ನೋಡಿ ಆನಂದಿಸುತ್ತಿದ್ದ ವಿದೇಶಿ ಪ್ರವಾಸಿಗನೊಬ್ಬನನ್ನು ‘ದೇವಾಲಯ ನೋಡಿ ಏನನ್ನಿಸಿತು?’ ಎಂದು ಕೇಳಿದಾಗ ಆತ ಹೇಳಿದ್ದು ಒಂದೇ ವಾಕ್ಯ! ‘ನಾನು ನನ್ನ ಮಾತುಗಳನ್ನು ಕಳೆದುಕೊಂಡಿದ್ದೇನೆ!’ ಎಂದು.


ಈಗಿನ ಮಹಾರಾಷ್ಟ್ರ ರಾಜ್ಯದ ಔರಂಗಬಾದ್ ಜಿಲ್ಲೆಯ ಎಲ್ಲೋರಾದಲ್ಲಿ ೩೪ ಮಾನವ ನಿರ್ಮಿತ ಗುಹೆಗಳ ಸಮುಚ್ಚಯವಿದೆ. ಚರಣಾದ್ರಿ ಪರ್ವತಸಾಲಿನಲ್ಲಿರುವ ಈ ಗುಹೆಗಳಲ್ಲಿ ಅತ್ಯಂತ ಬೃಹತ್ತಾದುದ್ದು ಮತ್ತು ಮಹತ್ತಾದುದ್ದು ೧೬ನೆಯದಾದ ಕೈಲಾಸನಾಥ ದೇವಾಲಯ.


ಕರ್ನಾಟಕವನ್ನು ಆಳಿದ ರಾಷ್ಟ್ರಕೂಟ ದೊರೆಗಳ ಮಹೋನ್ನತ ಕೊಡುಗೆಯಿದು. ಇದರ ನಿರ್ಮಾಣ ಕಾಲ ಏಳರಿಂದ ಹತ್ತನೇ ಶತಮಾನದ ಸುಮಾರು ಮುನ್ನೂರಕ್ಕೂ ಅಧಿಕ ವರ್ಷಗಳು! ರಾಷ್ಟ್ರಕೂಟ ದೊರೆ, ಕನ್ನಡಿಗ ಮೂರನೇ ಕೃಷ್ಣನ ಕಾಲದಲ್ಲಿ ಅದರ ನಿರ್ಮಾಣ ಪೂರ್ಣವಾಯಿತೆಂದು ಊಹಿಸಲಾಗಿದೆ.


ಈಗ ಈ ದೇವಾಲಯ ಯುನೆಸ್ಕೊ ಗುರುತಿಸಿರುವ ವಿಶ್ವಪರಂಪರೆಯ ತಾಣವಾಗಿದೆ.


ಇದು ಜಗತ್ತಿನಲ್ಲಿಯೇ ಅತಿ ದೊಡ್ಡದಾದ ಏಕಶಿಲಾ ದೇವಾಲಯ. ಕಳಶದಿಂದ ಹಿಡಿದು ಇಡೀ ದೇವಾಲಯ, ಗರ್ಭಗುಡಿ, ಸಭಾಮಂಟಪ, ಕೈಲಾಸನಾಥ ಲಿಂಗ, ಬೃಹತ್‌ಗಾತ್ರದ ಆನೆಗಳು, ವಿಜಯಸ್ಥಂಭಗಳು, ಮುಖ್ಯದೇವಾಲಯದ ಎಡ ಬಲ ಹಾಗೂ ಹಿಂಬದಿಯಲ್ಲಿರುವ ಸಾವಿರಾರು ಅಡಿ ವಿಸ್ತೀರ್ಣದ ವಿಶಾಲ ಸಭಾಮಂಟಪಗಳು, ನೂರಾರು ಕಂಬಗಳು ಎಲ್ಲವೂ ಒಂದೇ ಕಲ್ಲಿನಲ್ಲಿ ರಚಿತವಾಗಿವೆ.


ಒಟ್ಟು ಶಿಲಾಪರ್ವತದ ಸುಮಾರು ೮೧ ಮೀಟರ್ ಉದ್ದ, ೪೭ ಮೀಟರ್ ಅಗಲ ಹಾಗೂ ೩೩ ಮೀಟರ್ ಎತ್ತರದ ಜಾಗದಲ್ಲಿ ದೇವಾಲಯವನ್ನು ಮೇಲಿನಿಂದ ಕೆಳಗೆ ಕೆತ್ತುತ್ತಾ ನಿರ್ಮಿಸಿಲಾಗಿದೆ.


ಮೇಲ್ಭಾಗದಲ್ಲಿ ಬಿಡಿಸಿರುವ ಒಂದು ಕಮಲದ ಹೂವಿನ ಮೇಲೆ ನಾಲ್ಕು ಸಿಂಹಗಳನ್ನು ಕೆತ್ತರಲಾಗಿದೆ.


ಈ ನಾಲ್ಕು ಸಿಂಹಗಳನ್ನು ಸ್ಥಳಾಂತರಿಸಿದರೆ, ಆ ಕಮಲದ ಹೂವಿನ ನಡುವೆ ಒಂದು ದೊಡ್ಡ ಹೆಲಿಕಾಪ್ಟರನ್ನು ಸರಾಗವಾಗಿ ಇಳಿಸಬಹುದಾದಷ್ಟು ದೊಡ್ಡದಾದ ಕಮಲದ ಹೂವನ್ನು ವರ್ಣನೆಯಿಂದಾಗಲೀ, ವಿವರಣೆಯಿಂದಾಗಲೀ ನಮ್ಮ ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಲಾಗಿವುದಿಲ್ಲ!


ಬೃಹತ್ ಗಾತ್ರದ ನೂರಾರು ಆನೆಗಳು ಇಡೀ ದೇವಾಲಯವನ್ನು ಹೊತ್ತು ನಿಂತಿರುವಂತೆ ನಿರ್ಮಾಣ ಮಾಡಲಾಗಿದೆ.


ಒಂದು ಅಂದಾಜಿನ ಪ್ರಕಾರ ಈ ದೇವಾಲಯವನ್ನು ಕಂಡರಿಸುವುದಕ್ಕೆ ಬೆಟ್ಟದಿಂದ ಹೊರ ತೆಗೆದಿರುವ ಕಲ್ಲು ಎರಡು ಲಕ್ಷ ಟನ್‌ಗಳಿಗಿಂತಲೂ ಹೆಚ್ಚು!


ಗಂಗಾ, ಯಮುನ, ಸರಸ್ವತಿ, ಗಣಪತಿ, ಶಿವನ ವಿವಿಧ ಸ್ವರೂಪಗಳು, ವಿಷ್ಣುವಿನ ದಶಾವತಾರ ಸ್ವರೂಪಗಳು, ದುರ್ಗಾ, ಸಪ್ತಮಾತೃಕೆಯರು ಮೊದಲಾದ ಬೃಹತ್‌ಗಾತ್ರದ ದೇವತಾ ಮೂರ್ತಿಗಳು ಭಿತ್ತಿಯಲ್ಲಿವೆ.


ಗಜಾಸುರಮರ್ಧನ ಶಿವನ ಮೂರ್ತಿ ಹಾಗೂ ರಾವಣ ಕೈಲಾಸ ಪರ್ವತವನ್ನು ಎತ್ತುತ್ತಿರುವ ಶಿಲ್ಪಗಳಂತೂ ಗೊಮ್ಮಟ ಸದೃಶ್ಯವಾಗಿವೆ. ದೇವಾಲಯದ ಭವ್ಯತೆಯನ್ನು ಪುಟಗಟ್ಟಲೆ ವಿವರಣೆಯಿಂದಲೂ ಕಟ್ಟಿಕೊಡಲಾಗುವುದಿಲ್ಲ.


ಜೀವನದಲ್ಲಿ ಒಮ್ಮೆಯಾದರೂ ನೋಡಿ ಆನಂದಿಸಬೇಕಾದ ಕಲಾಕೃತಿ ಎಂದಷ್ಟೇ ಹೇಳಬಹುದು. ಪ್ರತಿಯೊಬ್ಬ ಕನ್ನಡಿಗನೂ ಒಮ್ಮೆಯಾದರೂ ಹೋಗಿ, ಕನ್ನಡಿಗ ದೊರೆಗಳ ಆ ಮಹೋನ್ನತ ಕೊಡುಗೆಯನ್ನು ಕಂಡು ಧನ್ಯರಾಗಬೇಕು ಎಂಬುದಷ್ಟೇ ನನ್ನ ಅಭೀಪ್ಸೆ! ಏಕೆಂದರೆ, ಅದೊಂದು ಕಲ್ಲಿನಲ್ಲಿ ಕಡೆದಿಟ್ಟ ಮಹಾಕಾವ್ಯ.


ರಾಮಾಯಣ ಮಹಾಭಾರತಗಳು ಈ ಶಿಲ್ಪಕಾವ್ಯದ ಮುಂದೆ ಕುಬ್ಜವಾಗಿ ಕಂಡರೆ ಖಂಡಿತ ಅದು ನಿಮ್ಮ ದೃಷ್ಟಿ ದೋಷವಲ್ಲ.


ಹಲವಾರು ಕೋನಗಳಿಂದ ದೇವಾಲಯವನ್ನು ಕ್ಲಿಕ್ಕಿಸುವುದು ಹಾಗೂ ದೇವಾಲಯದ ಒಳಗೆ ಮತ್ತು ಹೊರಗೆ ನಿರ್ಮಿಸಿರುವ ಅದ್ಭುತವಾದ ಶಿಲ್ಪಗಳನ್ನು ಕೆಮಾರದಲ್ಲಿ ಸೆರೆಹಿಡಿಯುವುದು ನಮ್ಮ ಉದ್ದೇಶವಾಗಿತ್ತು.


ಹೀಗೆ ವಿಶೇಷವಾಗಿ ಸೆರೆಹಿಡಿದ ಕೈಲಾಸನಾಥ ದೇವಾಲಯದ ವಾಸ್ತು-ಶಿಲ್ಪ ಸೌಂದರ್ಯವನ್ನು ಆಯ್ದ ಚಿತ್ರಗಳ ಮೂಲಕ ಪರಿಚಯಿಸುವ ಇರಾದೆ ನನ್ನದಾಗಿತ್ತು.

Monday, July 06, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 19

ಚೌತಿ ಚಂದ್ರ ಮತ್ತು ಕಳ್ಳತನದ ಆರೋಪ
ಗಣೇಶ ಚೌತಿಯ ದಿನ ಚಂದ್ರನನ್ನು ನೋಡಿದರೆ, ನೋಡಿದವರ ಮೇಲೆ ವೃಥಾ ಕಳ್ಳತನದ ಆರೋಪಗಳು ಬರುತ್ತವೆ, ಅವರಿಗೆ ಕಷ್ಟಗಳು ಎದುರಾಗುತ್ತವೆ ಎಂಬೆಲ್ಲಾ ನಂಬಿಕೆಗಳು ಇಂದಿಗೂ ಜನಮಾನಸದಲ್ಲಿ ಇವೆ. ಸ್ವತಃ ಕೃಷ್ಣನೇ ಚೌತಿ ಚಂದ್ರನನ್ನು ನೋಡಿ ಶಮಂತಕ ಮಣಿ ಕದ್ದನೆಂದು ಆರೋಪಕ್ಕೆ ಗುರಿಯಾದ ಕಥೆಗಳನ್ನು ನಾವು ಬಾಲ್ಯದಲ್ಲಿ ಕೇಳಿದ್ದೆವು. ಆದರೆ, ಯಾರ ಭಯವೂ ಇಲ್ಲದೆ, ಅತಿಯಾದ ಹುಡುಗಾಟದಲ್ಲಿ ತೊಡಗಿದ್ದ ನಮಗೆ ಕಳ್ಳತನದ ಆರೋಪ ಹೊರುವ ಭಯವೇ ಇರಲಿಲ್ಲ! ಹೀಗಾಗಿ ಉದ್ದೇಶಪೂರ್ವಕವಾಗಿಯೇ ಪ್ರತಿವರ್ಷವೂ ಚೌತಿಚಂದ್ರನನ್ನು ನೋಡಿ, ನಾವೇನೋ ಕ್ರಾಂತಿ ಮಾಡುತ್ತಿದ್ದೇವೆ ಎಂದು ಖುಷಿಪಡುವ ಸ್ವಭಾವೂ ನಮ್ಮಲ್ಲಿ ಕೆಲವರಿಗಿತ್ತು.
ನಾವು ಎಂಟನೇ ತರಗತಿಯಲ್ಲಿದ್ದಾಗ ಗೌರಿ-ಗಣೇಶ ಹಬ್ಬದ ದಿನದಂದೇ ನಮ್ಮ ಪ್ರೀತಿಯ ಅಜ್ಜ ನಿಧನರಾಗಿದ್ದುದರಿಂದ, ನಮ್ಮ ಮನೆಯಲ್ಲಿ ಗೌರಿ-ಗಣೇಶ ಹಬ್ಬ ಮಾಡುವುದನ್ನು ಬಿಟ್ಟು ಬಿಟ್ಟಿದ್ದೆವು. ಮತ್ತೆ ಯಾವಾಗಲಾದರೂ ಆ ಹಬ್ಬದ ದಿನದಂದೇ ಮನೆಯಲ್ಲಿ ಏನಾದರು ಜನಿಸಿದರೆ, ಅಂದರೆ, ಯಾರಿಗಾದರು ಮಗು ಹುಟ್ಟುವುದು, ಹಸು ಅಥವಾ ಎಮ್ಮೆ ಕರು ಹಾಕುವುದು ಮಾಡಿದರೆ ಹಬ್ಬ ಮಾಡುವುದನ್ನು ಮತ್ತೆ ಪುನರಾರಂಭಿಸಬಹುದೆಂದು ಒಂದು ನಂಬಿಕೆಯಿದೆ. ಈ ನಂಬಿಕೆಯಿಂದಾಗಿ ಸುಮಾರು ಹತ್ತು ವರ್ಷಗಳ ಕಾಲ ನಮ್ಮ ಮತ್ತು ನಮ್ಮಜ್ಜನ ಅಣ್ಣತಮ್ಮಂದಿರ ಮನೆಗಳಲ್ಲೂ ಗೌರಿ-ಗಣೇಶ ಹಬ್ಬವನ್ನು ಮಾಡುತ್ತಿರಲಿಲ್ಲ. ಕೊನೆಗೆ ಒಂದು ವರ್ಷ ಗಣೇಶ ಹಬ್ಬದಂದೇ, ನಮ್ಮ ಚಿಕ್ಕಜ್ಜನ ಮನೆಯಲ್ಲಿ ಹಸುವೊಂದು ಕರು ಹಾಕಿದ್ದರಿಂದ ಹಬ್ಬದ ಆಚರಣೆ ಮತ್ತೆ ಪ್ರಾರಂಭವಾಯಿತು. ಈ ಕಾರಣದಿಂದಾಗಿ, ನಾನು ಹಾಸ್ಟೆಲ್ಲಿನಲ್ಲಿದ್ದಾಗ, ಗೌರಿ-ಗಣೇಶ ಹಬ್ಬಗಳಿಗೆ ರಜವಿದ್ದರೂ ಊರಿಗೆ ಹೋಗುತ್ತಿರಲಿಲ್ಲ.
ಆದರೆ ಬಹುತೇಕ ಹುಡುಗರು ಊರಿಗೆ ಹೋಗಿ ಬರುತ್ತಿದ್ದರಲ್ಲ, ಅವರೆಲ್ಲಾ ಅವರವರ ಮನೆಯಲ್ಲಿ ಮಾಡಿದ ತಿಂಡಿಗಳನ್ನು ತಂದಿರುತ್ತಿದ್ದರು. ಕೆಲವರು ನಮಗೆ ತಾವಾಗಿಯೆ ಕೊಡುತ್ತಿದ್ದರು. ಆದರೂ ‘ಕದ್ದು ತಿನ್ನುವ ಬೆಲ್ಲಕ್ಕೆ ರುಚಿ ಜಾಸ್ತಿ’ ಎನ್ನುವ ಹಾಗೆ, ನಾವೆಲ್ಲಾ ಊರಿಗೆ ಹೋಗಿ ಬಂದವರ ಪೆಟ್ಟಿಗೆಳನ್ನು ಯಾರಿಗೂ ತಿಳಿಯದಂತೆ ತೆಗೆದು ತಿಂಡಿ ಮಾತ್ರ ತಿನ್ನುವ ಅಭ್ಯಾಸ ಇಟ್ಟುಕೊಂಡಿದ್ದೆವು. ಈ ರೀತಿಯ ಕಳ್ಳತನವನ್ನು ಸಾಮಾನ್ಯವಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮಾತ್ರ ಮಾಡುತ್ತಿದ್ದರು. ಪರಂಪರೆಯಂತೆ ಆ ವರ್ಷವೂ ನಾವು ಮುಂದುವರೆಸಿದ್ದೆವು. ಐದಾರು ಹುಡುಗರ ಪೆಟ್ಟಿಗೆಗಳ ಬೀಗಗಳನ್ನು ಹೇಗೋ ತೆಗೆದು ತಿಂಡಿಯನ್ನು ಕದ್ದು ಮಜಾ ಉಡಾಯಿಸಿದ್ದೆವು. ಆದರೆ ಒಂದೆರಡು ದಿನಗಳಲ್ಲಿ ಒಂಬತ್ತನೇ ತರಗತಿಯ ‘ಹೇಮಂತ ಎನ್ನುವ ಹುಡುಗನ ಪೆಟ್ಟಿಗೆಯಲ್ಲಿ ಐವತ್ತು ರೂಪಾಯಿ ಕಳ್ಳತನವಾಗಿದೆ’ ಎಂಬ ಸುದ್ದಿ ಹರಡಿಬಿಟ್ಟಿತ್ತು. ನಾವು ತಿಂಡಿಯನ್ನು ಸೂರೆ ಹೊಡೆದ ಪೆಟ್ಟಿಗೆಯಲ್ಲಿ ಅವನದೂ ಒಂದಾಗಿತ್ತು. ಅದರಲ್ಲಿ ತುಂಬಾ ಬೇಯಿಸಿದ ಕಡಲೆಕಾಯಿಗಳಿದ್ದು, ಅವನ್ನು ಒಂದೂ ಬಿಡದಂತೆ ನಾವು ತಿಂದು ಹಾಕಿದ್ದೆವು. ನಾವು ಹಾಗೆ ತಿಂದದ್ದಕ್ಕೆ ನಮ್ಮನ್ನು ಹೆದರಿಸಲು ಹಾಗೆ ಸುದ್ದಿ ಹಬ್ಬಿಸಿರಬಹುದೆಂದು ನಾವು ಅಂದುಕೊಂಡಿದ್ದೆವು.
ನಮ್ಮ ಈ ಕಳ್ಳಕೂಟದಲ್ಲಿ ಒಂಬತ್ತನೇ ತರಗತಿಯಲ್ಲಿದ್ದ ಶಿವೇಗೌಡ ಎಂಬ ಮಹಾನ್ ಕುಳ್ಳನೂ ಇದ್ದ! ಈತ ಈಗ ಹಲವಾರು ಚಿತ್ರಗಳಲ್ಲಿ ನಟಿಸಿರುವ ಕಲಾವಿದ. ಕೇವಲ ಮೂರು ಅಡಿ ಎತ್ತರವಿದ್ದ ಆತನನ್ನು ಯಾರು ಬೇಕಾದರೂ ಎತ್ತಿ ಕೊಂಡೊಯ್ಯಬಹುದಾಗಿತ್ತು. ನಾವು ಆತನನ್ನು ಚಿಕ್ಕ ಹುಡುಗನೆಂದೋ, ಅಥವಾ ಕಡ್ಲೆಕಾಯಿಯ ಮೇಲೆ ನಮಗಿದ್ದ ದುರಾಸೆಯಿಂದಲೋ ಅವನಿಗೆ ತುಂಬಾ ಕಡಿಮೆ ಕಡ್ಲೆಕಾಯಿಗಳನ್ನು ಕೊಟ್ಟಿದ್ದೆವು. ಆ ಹೊಟ್ಟೆಉರಿಯಿಂದ ಆತ, ನಾವು ಪೆಟ್ಟಿಗೆ ಬೀಗ ತೆಗೆದಿದ್ದನ್ನು ಹೇಮಂತನಿಗೆ ತಿಳಿಸಿಬಿಟ್ಟಿದ್ದ. ನಾವೇ ತೆಗೆದಿದ್ದೆಂದು ತಿಳಿದ ತಕ್ಷಣ ಆ ಹುಡುಗ ನೇರವಾಗಿ ವಾರ್ಡನ್‌ಗೇ ದೂರು ಕೊಟ್ಟುಬಿಟ್ಟ. ಶುರುವಾಯಿತು ನೋಡಿ, ವಿಚಾರಣೆ!
ಜಟಗೊಂಡ ಅವರು ಕೈಯಲ್ಲಿ ದೊಣ್ಣೆ ಹಿಡಿದು ನಮ್ಮನ್ನು ಪ್ರಶ್ನಿಸುತ್ತಿದ್ದರು. ನಾವೇನು ಸುಳ್ಳು ಹೇಳಲಿಲ್ಲ. ‘ಕೇವಲ ತಿಂಡಿ ಆಸೆಗಾಗಿ ಪೆಟ್ಟಿಗೆಗಳನ್ನು ತೆಗೆದಿದ್ದು, ಕೇವಲ ತಿಂಡಿಯನ್ನು ಮಾತ್ರವೇ ತಿಂದಿದ್ದೇವೆ ದುಡ್ಡನ್ನು ನಾವು ಕದ್ದಿಲ್ಲ’ ಎಂದು ನಿಜವನ್ನೇ ಹೇಳಿದ್ದೆವು. ‘ಮೊನ್ನೆ ನಾವು ಚೌತಿ ಚಂದ್ರನನ್ನು ನೋಡಿದ್ದರಿಂದ, ಇಂದು ನಮ್ಮ ಮೇಲೆ ವೃಥಾ ಆರೋಪ ಬಂದಿದೆ. ನಾವು ಕದ್ದಿಲ್ಲ’ ಎಂಬುದು ನಮ್ಮ ವಾದವಾಗಿತ್ತು. ನಾವು ಕಳ್ಳರಲ್ಲ ಎಂಬುದು ವಾರ್ಡನ್‌ಗೂ, ಹೇಮಂತನಿಗೂ ಗೊತ್ತಿತ್ತು. ಆದರೆ ಕಾಗೆ ಕೂರುವುದಕ್ಕೂ ಕೊಂಬೆ ಮುರಿಯುವುದಕ್ಕೂ ಸರಿ ಹೋಯಿತು ಅನ್ನುತ್ತಾರಲ್ಲ ಹಾಗಾಯಿತು. ಯಾವುದೂ ಇತ್ಯರ್ಥವಾಗದೆ, ವಾರ್ಡನ್ ವಿಚಾರಣೆಯನ್ನು ಒಂದು ದಿನಕ್ಕೆ ಮುಂದೂಡಿದರು. ಹಾಗೆ ಒಂದು ದಿನ ಮುಂದೂಡಲು ನಮಗೆ ಒಂದು ಬಲವಾದ ಕಾರಣ ಸಿಕ್ಕಿತ್ತು. ಹೇಮಂತ ತನ್ನ ಐವತ್ತು ರೂಪಾಯಿ ನೋಟಿನ ಮೇಲೆ ಗಣಪತಿಯ ಚಿತ್ರ ಬರೆದಿದ್ದಾಗಿ ಹೇಳಿದ್ದ. ಅದನ್ನೇ ಮುಂದು ಮಾಡಿಕೊಂಡು, ಹುಡುಗರೆಲ್ಲರ ಪೆಟ್ಟಿಗೆಯನ್ನು ಶೋಧಿಸುವುದು ಹಾಗೂ ಛೇರ್ಮನ್ನರ ಅಂಗಡಿ ಮತ್ತು ಮಂಜಣ್ಣನ ಹೋಟೆಲ್ಲಿನಲ್ಲಿ ಅಂಥ ನೋಟೇನಾದರು ಬಂದಿತ್ತೆ ಎಂದು ಕೇಳುವುದು ಎಂಬ ತೀರ್ಮಾನವನ್ನು ವಾರ್ಡನ್ ಪ್ರಕಟಿಸಿದ್ದರು.
ಮರುದಿನ ಇನ್ನೂ ಹುಡುಗರ ಪೆಟ್ಟಿಗೆಗಳನ್ನು ಶೋಧಿಸುವ ಮುನ್ನವೇ, ಹೇಮಂತನ ಪೆಟ್ಟಿಗೆಯ ಕೆಳಗೇ ಆ ನೋಟು ಸಿಕ್ಕಬೇಕೆ! ಪೆಟ್ಟಿಗೆ ಚೆಕ್ ಮಾಡುತ್ತಾರೆಂಬ ಭಯಕ್ಕೆ ಕಳ್ಳ ಅಲ್ಲಿ ಹಾಕಿದ್ದಿರಬಹುದು ಎಂಬ ಅನುಮಾನ ಆಗ ಎಲ್ಲರಿಗೂ ಬಂದಿತ್ತು. ಆದರೆ ಹೇಮಂತ ‘ಸಾರ್ ನಾನು ಊರಿನಿಂದ ಬಂದ ಮೇಲೆ ಪೆಟ್ಟಿಗೆ ಎಲ್ಲವನ್ನೂ ಕ್ಲೀನ್ ಮಾಡಿ ಜೋಡಿಸುವ ಭರದಲ್ಲಿ ಅದು ಕೆಳಗೆ ಬಿದ್ದಿರಬಹುದು’ ಎಂದು ಅನುಮಾನ ವ್ಯಕ್ತಪಡಿಸಿದ್ದರಿಂದ ಆ ವಿಷಯ ಅಲ್ಲಿಗೆ ಮುಕ್ತಾಯವಾಗಿತ್ತು. ಆದರೆ, ನಾವು ಚೌತಿ ಚಂದ್ರನನ್ನು ನೋಡಿದ್ದರಿಂದಲೇ ನಮ್ಮ ಮೇಲೆ ಕಳ್ಳತನದ ಆರೋಪ ಬಂದಿತ್ತು ಎಂಬುದು ಮಾತ್ರ ಅವತ್ತಿಗೆ ಹಾಸ್ಟೆಲ್ಲಿನ ಹಾಗೂ ಸ್ಕೂಲಿನ ಹುಡುಗರ ನಡುವೆ ಯಾವುದೇ ಅನುಮಾನಕ್ಕೆ ಎಡೆಗೊಡದ ಸತ್ಯವಾಗಿತ್ತು!
ಆ ವಿಷಯ ಅಲ್ಲಿಗೆ ಮುಗಿಯಿತು ಎಂದರೆ ತಪ್ಪಾಗುತ್ತದೆ. ಏಕೆಂದರೆ ತಿಂಡಿಕಳ್ಳರಾಗಿದ್ದ ನಮ್ಮ ಗುಂಪಿನ ಐದು ಜನರನ್ನು ವಾರ್ಡನ್ ಕರೆದು, ಬುದ್ಧಿವಾದವನ್ನು ಹೇಳಿದರು. ಆದರೆ ನಮ್ಮ ಜೊತೆಯೇ ಇದ್ದು ಕದ್ದ ತಿಂಡಿ ತಿಂದದ್ದೂ ಅಲ್ಲದೆ, ನಮ್ಮ ಮೇಲೆಯೇ ಚಾಡಿ ಹೇಳಿದ ಕುಳ್ಳ ಶಿವನನ್ನು ಅವರು ಏನೂ ಅನ್ನಲಿಲ್ಲ. ಮೊದಲಿಗೇ ಆತನ ಮೇಲೆ ನಮಗೆ ಸಿಟ್ಟಿತ್ತು. ಈಗ ನಾವು ಕಳ್ಳರಲ್ಲ ಎಂದು ತೀರ್ಮಾನವಾದೊಡನೆ ನಾನು ಮತ್ತು ಇನ್ನೊಬ್ಬ ಸೋಮಶೇಖರ ಎಂಬುವವನು ಸೇರಿಕೊಂಡು, ಕುಳ್ಳ ಶಿವನನ್ನು ಕುಯ್ಯೋ ಮರ್ರೋ ಎನ್ನುವಂತೆ ಹೊಡೆದುಬಿಟ್ಟೆವು. ‘ವಿಶ್ವಾಸ ದ್ರೋಹಿ’, ‘ಮಿತ್ರದ್ರೋಹಿ’ ಎಂದೆಲ್ಲಾ ಆತನನ್ನು ಹೀಯಾಳಿಸಿ, ‘ನಾವು ಹೊಡೆದಿದ್ದನ್ನು ವಾರ್ಡನ್‌ಗೆ ಏನಾದರು ಹೇಳಿದರೆ, ರಾತ್ರಿ ವೇಳೆ ಹಾಸಿಗೆ ಸಮೇತ ಹೊತ್ತುಕೊಂಡು ಹೋಗಿ ಭೂತಯ್ಯನ ಗುಡಿಯ ಬಳಿ ಮಲಗಿಸಿ ಬರುತ್ತೇವೆ’ ಎಂದು ಹೆದರಿಸಿದೆವು.
ಕುಂದೂರುಮಠದ ರಕ್ಷಕ ದೇವರೆಂದು ಭೂತಯ್ಯನನ್ನು ಒಂದು ಕಲ್ಲು ಗುಂಡಿನ ರೂಪದಲ್ಲಿ ಪೂಜಿಸಲಾಗುತ್ತಿತ್ತು. ಅದಕ್ಕೊಂದು ಪುಟ್ಟ ಗುಡಿಯೂ ಇತ್ತು. ಅಲ್ಲಿಗೆ ಹೋಗಲು ಹುಡುಗರು ತುಂಬಾ ಹೆದರುತ್ತಿದ್ದರು. ಅಲ್ಲದೆ ಆಗಾಗ ನಾವು ತಮಾಷೆಗಾಗಿ, ಎಲ್ಲರಿಗಿಂತ ಮೊದಲು ಮಲಗಿ ನಿದ್ದೆ ಮಾಡುತ್ತಿದ್ದ ಕೆಲವರನ್ನು ಹಾಸಿಗೆ ಸಮೇತ ಎತ್ತಿಕೊಂಡು ಹೋಗಿ ಹೊರಗೆ ಮಲಗಿಸಿ, ಆಗಲೂ ಅವರೂ ಎಚ್ಚರಗೊಳ್ಳದಿದ್ದಲ್ಲಿ ಮತ್ತೆ ಎತ್ತಿ ತಂದು ಒಳಗೆ ಮಲಗಿಸಿದ ಉದಾಹರಣೆಗಳಿದ್ದವು. ಭೂತಯ್ಯನ ಗುಡಿಯ ಬಳಿಗೆ ಯಾರನ್ನೂ ಹೊತ್ತುಕೊಂಡು ಹೋಗುವ ಧೈರ್ಯ ನಮಗೂ ಇರಲಿಲ್ಲ. ಆದರೂ ಪುಕ್ಕಲನಾಗಿದ್ದ ಶಿವೇಗೌಡ ನಾವು ಆತನಿಗೆ ಹೊಡೆದಿದ್ದನ್ನು ವಾರ್ಡನ್ ಬಳಿ ಹೇಳುವ ಸಾಹಸಕ್ಕೆ ಕೈಹಾಕಲಿಲ್ಲ.

Friday, July 03, 2009

ಅಂತರಂಗದ ಅರಿವು


1
ದಟ್ಟವಾದ ಕಾಡಿನಲ್ಲಿ
ಪ್ರಾಣಿ ಪಕ್ಷಿ ಗೆಳೆಯರೆಲ್ಲ
ಸಭೆಯ ಸೇರಿಕೊಂಡು ಮಾತನಾಡುತ್ತಿದ್ದವು
ಕರಡಿ ಜಿಂಕೆ ಕೋಗಿಲೆ ಮೊಲ
ಕೋತಿ ಸಿಂಹ ಆನೆ ಹುಲಿಯು
ರೂಪವೆಂದರೇನು ಎಂದು ಹರಟುತ್ತಿದ್ದವು
2
ಯಾರು ಚೆಂದ ಯಾರು ಅಂದ
ಎಂಬ ಮಾತು ಬಂದು ನಾನು
ತಾನು ಎಂದು ಕೋಗಿ ಜಗಳವಾಡಿಕೊಂಡವು
ಆನೆ ಮರವನೆತ್ತಿ ಹುಲಿಯು
ಮರವನೇರಿ ಸಿಂಹ ನೆಗೆದು
ಕರಡಿ ಕುಣಿದು ಜಿಂಕೆ ಓಡಿ ಬರಿದೆ ಮೆರೆದವು
3
ಓಡಿ ಬಂದ ಚಿರತೆ ಗುಡುಗಿ
ನೋಡಿರೊಮ್ಮೆ ನನ್ನ ಓಟ
ನನ್ನ ಮುಂದೆ ನೀವು ಬರಿದೆ ಸೊನ್ನೆ ಎಂದಿತು
ಪಟ್ಟೆ ಹುಲಿ ನೆಗೆದು ನೆಗೆದು
ನೋಡಿರೊಮ್ಮೆ ನನ್ನ ಮೈಯ
ಮಾಟ ಆಗ ಹೇಳಿ ಯಾರು ಚೆಂದ ಎಂದಿತು
4
ಆನೆ ಬಂದು ಮರವನೆತ್ತಿ
ನೋಡಿರಿಲ್ಲಿ ನನ್ನ ಶಕ್ತಿ
ನನ್ನ ಮುಂದೆ ಯಾರು ಇಲ್ಲ ಎಂದು ಬೀಗಿತು
ಆನೆ ನಿನ್ನ ನಾನು ಎಷ್ಟು
ಬಾರಿ ಸೋಲಿಸಿಲ್ಲ ಎಂದು
ಸಿಂಹ ಗುಡುಗಿ ಪಂಜವೆತ್ತಿ ಹಲ್ಲು ಕಡಿಯಿತು
5
ಕೂಹು ಕೂಹು ಎಂದು ಕೋಕಿ-
ಲೊಂದು ಹಾಡಿ ನಾನೆ ಚೆಂದ
ನನ್ನ ದನಿಯು ಚೆಂದ ಎಂದು ಜಂಭವಾಡಿತು
ಮೋಟುಬಾಲ ಕುಣಿಸಿ ಮೊಲವು
ಕರಿಯ ಬಣ್ಣ ನಿಂದು ನೋಡು
ನನ್ನ ನಡಿಗೆ ಎಂದು ಕ್ಯಾಟು ವಾಕು ಮಾಡಿತು
6
ಕಾಡಿನಲ್ಲಿ ಹೀಗೆ ಯುದ್ಧ
ನಡೆಯೆ ನಿದ್ದೆಗೆಟ್ಟ ದೇವ
ಜಾಣ ಶಾರದೆಯನು ಕರೆದು ಆಜ್ಞೆಯಿತ್ತನು
ದೇವಿ ನೀನು ಏನೆ ಮಾಡು
ನಿನ್ನ ನವಿಲು ಅದನೆ ಕಳಿಸು
ಜಗಳವೊಮ್ಮೆ ನಿಂತರಷ್ಟೆ ಸಾಕು ಎಂದನು
7
ಕಾಡಿನಲ್ಲಿ ಇಳಿದ ನವಿಲು
ಜಗಳವೇಕೆ ನಿಮ್ಮಲೆಂದು
ಗರಿಯ ಬಿಚ್ಚಿ ಬಿಂಕದಿಂದ ನಾಟ್ಯವಾಡಿತು
ನಿಮ್ಮ ಮನಸು ಶುದ್ಧವಿರಲು
ಜಗದಿ ನೀವೆ ರೂಪವಂತ-
ರೆಂದು ಹೇಳಿ ನವಿಲು ಜಂಭ ಬೇಡವೆಂದಿತು
8
ಕಣ್ಣು ಬರಿದೆ ರೂಪವನ್ನು
ಕಂಡರಷ್ಟೆ ಸಾಲದಣ್ಣ
ಅರಿಯಬೇಕು ಅಂತರಂಗ ಮರೆಯಬೇಡಿರಿ
ಎಲ್ಲರಲ್ಲು ದೇವನಿಹನು
ಎಲ್ಲರಲ್ಲು ರೂಪವಿಹುದು
ಕಾಣುವಂತ ಕಣ್ಣು ಬೇಕು ತಿಳಿದುಕೊಳ್ಳಿರಿ