Sunday, January 15, 2012

ದಿಗ್ವಧೂ ಭ್ರೂಮಧ್ಯೆ, ಕಾಣ್, ರಂಗುಮಾಣಿಕ ಬಿಂದು!

ಎಲ್ಲರಿಗೂ ಮಕರಸಂಕ್ರಾಂತಿಯ ಶುಭಾಶಯಗಳು.

ಕವಿಶೈಲದ ಬಗೆಗಿನ ಕವಿಯ ಪ್ರೇಮ ಬೆರಗು, ಅಲ್ಲಿ ಧ್ಯಾನಸ್ಥರಾಗಿ ಕಾಲ ದೇಶಗಳನ್ನು ಮೀರಿ ವಿಹರಿಸುವ ಮನಸ್ಸು ಎಲ್ಲವನ್ನೂ ಕವಿಶೈಲದ ಸಾನೆಟ್ಟುಗಳಲ್ಲಿ ನೋಡಿದೆವು. ಆದರೆ ಈ ಸಾನೆಟ್ಟುಗಳ ರಚನೆಯಾಗುವ ಸರಿಸುಮಾರು ಒಂದು ವರ್ಷಕ್ಕೆ ಮೊದಲೇ (೧೭-೫-೧೯೩೩) ರಚಿತವಾಗಿರುವ ’ಕವಿಶೈಲದಲ್ಲಿ ಸಂಧ್ಯೆ’ ಎಂಬ ಕವಿತೆಯನ್ನು ಓದದೆ, ಕವಿಶೈಲದ ಬಗೆಗಿನ ಕುತೂಹಲ ತಣಿಯುವುದಿಲ್ಲ.
ದೃಷ್ಟಿದಿಗಂತದ ಮೇರೆಯ ದಾಟಿ
ಗಗನದ ಮೇಘವಿತಾನವ ಮೀಟಿ
ದೂರಕೆ ದೂರಕೆ ಸುದೂರ ದೂರಕೆ
ಹಬ್ಬಿದೆ ಪರ್ವತ ದಿಗಂತ ಶೈಲಿ,
ಮೈಲಿ ಮೈಲಿ!
ಎಂದು ಕವಿತೆ ಆರಂಭವಾಗುತ್ತದೆ. ಕವಿಶೈಲದ ಶಿಖರವೇದಿಕೆಯಲ್ಲಿ ಕುಳಿತಾಗ ಕಣ್ಣೆದುರಿಗೆ ಬಿಚ್ಚಿಕೊಳ್ಳುವ ಗಗನಚುಂಬಿ ಸಹ್ಯಾದ್ರಿ ಶಿಖರತರಂಗಗಳ ವಿಸ್ತಾರದ ಅನಂತತೆಯ ಅಕ್ಷರೂಪ! ಮುಂದುವರೆದು ಕವಿಶೈಲದಿಂದ ಕಾಣುವ ಸಂಜೆಯ ರವಿ, ರವಿಯ ರಶ್ಮಿಯಿಂದ ದಿಗಂತದಲ್ಲಿ ಮೂಡುವ ವಿವಿಧ ವಿನ್ಯಾಸಗಳು, ಕವಿಶೈಲದಲ್ಲಿ ಒಬ್ಬನೇ ಇರುವ ಕವಿಗೆ ದೊರೆತ ಅನುಭವವನ್ನು ಕವನ ಕಟ್ಟಿಕೊಡುತ್ತದೆ.
ಪಶ್ಚಿಮ ಗಿರಿಶಿರದಲಿ ಸಂದ್ಯೆಯ ರವಿ;
ನಿರ್ಜನ ಕವಿಶೈಲದೊಳೊಬ್ಬನೆ ಕವಿ;
ಮಲೆನಾಡಿನ ಬುವಿ ಮೇಲರುಣಚ್ಛವಿ;
ವಸಂತ ಸಂಧ್ಯಾ ಸುವರ್ಣ ಶ್ರಾಂತಿ,
ಅನಂತ ಶಾಂತಿ!
ಕವನ ರಚಿತವಾದ ಸುಮಾರು ಎರಡು ವರ್ಷಗಳ ನಂತರ, ಮಲೆನಾಡು ಯುವಕರ ಸಂಘದ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಬಂದು ಒಂದು ವಾರಗಳ ಕಾಲ ಕವಿ ಕುವೆಂಪುವನ್ನು ರೂಪಿಸಿದ ಮಲೆಯನಾಡನ್ನು ಪ್ರೀತಿಯಿಂದ ಸುತ್ತಿದ ಬಿ.ಎಂ.ಶ್ರೀ.ಯವರಿಗೆ ಕವಿಶೈಲದಲ್ಲಿ, ಕವಿ ಕೊಟ್ಟಿರುವ ಸಂಜೆಯ ವರ್ಣವಿಹಾರದ ಪ್ರತ್ಯಕ್ಷದರ್ಶನವಾಗುತ್ತದೆ. ಕಣ್ಣಮುಂದೆ ಕಾಣುತ್ತಿರುವುದನ್ನು ಅರಿಯಲು ಕವಿವರ್ಣನೆಯ ಅಗತ್ಯವೇ ಇರಲಿಲ್ಲ ಅನ್ನಿಸುವಷ್ಟು ಸಾದೃಶವಾಗಿತ್ತಂತೆ!
ಸೊಂಡಿಲ ಮೇಗಡೆ ಸೊಂಡಿಲ ಚಾಚಿ
ವಿಶಾಲ ವ್ಯೋಮದ ಕರೆಯನೆ ಬಾಚಿ
ಸ್ಪರ್ಧಿಸುತಿರುವುವೊ ಎನೆ ದಿಗ್ದಂತಿ
ಹಬ್ಬಿದೆ ಸುತ್ತಲು ದಿಗಂತ ಪಂಕ್ತಿ,
ಗಂತಿ ಗಂತಿ!
’ಕುಪ್ಪಳಿ ಮನೆಯ ಇದಿರಿಗೇ ಗೋಡೆಯಂತೆ ಎದ್ದಂತಿದ್ದ ಗುಡ್ಡವನ್ನು ಮುತ್ತಿದ್ದ, ಮುದ್ದೆ ಮುದ್ದೆ ಹಸುರನ್ನೆ ಮೆತ್ತಿದಂತಿದ್ದ, ಸಾರ್ವಕಾಲಿಕ ಶ್ಯಾಮಲ ಅರಣ್ಯಶ್ರೇಣಿ’ ಅಂದೂ ಕಾಣುತ್ತದೆ.
ತೆರೆತೆರೆ ತೆರೆಯೆದ್ದರಣ್ಯ ಶ್ರೇಣಿ
ಬಿದ್ದಿದೆ ನಿದ್ದೆಯೊಳೋ ಎನೆ ಪ್ರಾಣಿ
ಅಸಂಖ್ಯ ವರ್ಣದಿ ಅಪಾರ ಪರ್ಣದಿ
ತಬ್ಬಿದೆ ಭೂಮಿಯನೆರಂಕೆ ಚಾಚಿ
ವೀಚಿ ವೀಚಿ!
ಸೃಷ್ಟಿಯ ಅನಂತತೆಯಲ್ಲಿ ಮನುಷ್ಯ ಒಂದು ಅಣು ಮಾತ್ರ. ಇನ್ನು ಆ ಮಹತ್ತಿನಡಿಯಲ್ಲಿ ಸರ್ವವೂ ಮಹತ್ತಾಗಿರಬೇಕಾದ್ದೇ!
ಎಲ್ಲಿಯು ಎಲ್ಲವು ಮಹತ್ತೆ ಇಲ್ಲಿ
ಈ ಸಹ್ಯ ಮಹಾ ಬೃಹತ್ತಿನಲ್ಲಿ!
ಕ್ಷುದ್ರಸ್ಪಷ್ಟತೆಗೆಡೆಯಿಲ್ಲೆಲ್ಲಿ?
ಭವ್ಯಾಸ್ಫುಟವಿದು - ಶರೀರ ಸೀಮಾ
ವಿಹೀನಧಾಮ!
ಮಿತ್ರರಿಗೆ ಇಲ್ಲಿ ಮಾತೇ ಬೇಡ ಎಂದು ಹೇಳಿದ, ಇಡೀ ಸಹ್ಯಾದ್ರಿ ಗಿರಿಶ್ರೇಣಿಯನ್ನು ಧ್ಯಾನಸ್ಥಯೋಗಿಯಂತೆ ಪರಿಭಾವಿಸಿದ ಕವಿಪ್ರತಿಭೆ, ಅನಂತತೆಯ ಮೌನದ ನಡುವಿನ ಝೇಂಕಾರವನ್ನು ಆಲಿಸುತ್ತದೆ. ಅದಕ್ಕಾಗಿ ತನ್ನನ್ನು ತಾನು ಇಲ್ಲವಾಗಿಸಿಕೊಳ್ಳುವುದು ಹೀಗೆ.
ಆಲಿಸು! ಕೇಳುತಲಿದೆ ಓಂಕಾರ:
ನಿತ್ಯನಿರಂತರ ಅಳಿ ಝೇಂಕಾರ!
ಮನವೇ, ಧ್ಯಾನದಿ ಮುಳುಗು ನಿಧಾನದಿ:
ನುಂಗಲಿ ನಿನ್ನಂ ತಪಃ ಸುಷುಪ್ತಿ,
ಅನಂತ ತೃಪ್ತಿ!
ಕವಿಶೈಲಕ್ಕೆ ಅಂಟಿಕೊಂಡಂತೆಯೇ, ಅದರ ಪೂರ್ವಕ್ಕೆ ಆಕಾಶಗಾಮಿಯಾಗಿ ನಿಂತಿರುವ ಶಿಖರವೇ ಸಂಜೆಗಿರಿ. ಅಲ್ಲಿಂದಲೂ ಸಹ್ಯಾದ್ರಿಯ ಶಿಖರತರಂಗಗಳಲ್ಲಿ ಕಳೆದು ಹೋಗುವ ಸೂರ್ಯಾಸ್ತವನ್ನು ಸವಿಯಬಹುದಾಗಿದೆ. ಅದರಿಂದ ಉದ್ಬೋಧಗೊಂಡ ಕವಿಯ ಮನಸ್ಸಿನಿಂದ ಹುಟ್ಟಿದ ಒಂದು ಸಾನೆಟ್ಟು ’ಸಂಜೆಗಿರಯಲಿ ಸಂಜೆ’ ಎಂಬುದು ೧೨-೫-೧೯೩೫ರಂದು ರಚಿತವಾಗಿದೆ.
ಸಂಜೆಗಿರಿಯಲಿ ಸಂಜೆ: ಯಾವ ದೊರೆ ನನಗೆ ಸರಿ?
ಸ್ವರ್ಗದಲಿ ಕರುಬುತಿಹನಿಂದ್ರನೆನ್ನಂ ನೋಡಿ,
ಧೇನು ಸುರತರು ಸುರಾಂಗನೆಯರಂ ರೋಡಾಡಿ!
ಈ ನಿಸರ್ಗಶ್ರೀಗೆ ಮೇಣಾವ ಸಗ್ಗಸಿರಿ
ವೆಗ್ಗಳಂ? ಪಂಕ್ತಿ ಪಂಕ್ತಿಗಳಾಗಿ ಕಣ್ದಿಟ್ಟಿ
ಸೋಲ್ವಂತೆ ಪರ್ಣಾರ್ಣವ ಮಹಾ ತರಂಗತತಿ
ಪ್ರಸರಿಸಿವೆ. ಗಿರಿಶಿವನೆದೆಯ ಮೇಲೆ ಶ್ಯಾಮಸತಿ
ಕಾನನ ಮಹಾಕಾಳಿ ತಾನಿಲ್ಲಿ ನಿತ್ಯನಟಿ!
ಸುಯ್ದಪಂ ಶಿಶಿರ ಶೀತಲ ಸುಖ ಸಮೀರಣಂ
ಮರ‍್ಮರ ಧ್ವನಿಗೈದು. ಸಾಂದ್ರ ಕಾಂತಾರದಲಿ
ಲಕ್ಷಮಧುಕರ ಪಕ್ಷಿರವದಿ ನಾದದ ಸಿಂಧು
ಮಸಗುತಿದೆ. ಸಂಜೆರವಿ, ಅದೊ, ವರುಣ ದಿಗ್ವಾರಣಂ
ತಾನೆನಲೆಸೆವ ಶೈಲ ಮಸ್ತಕ ಸುದೂರದಲಿ
ದಿಗ್ವಧೂ ಭ್ರೂಮಧ್ಯೆ, ಕಾಣ್, ರಂಗುಮಾಣಿಕ ಬಿಂದು!
ಇಲ್ಲಿಂದ ಕಾಣುವ ಸಹ್ಯಾದ್ರಿಗಿರಿಯೇ ಶಿವ; ಆತನ ಎದೆಯ ಮೇಲೆ ನರ್ತಿಸುವ ನೆರಳುಬೆಳಕೆಂಬ ಮಹಾಕಾಳಿ ಇಲ್ಲಿ ’ನಿತ್ಯನಟಿ’ಯಾಗಿದ್ದಾಳೆ. ತಾನು ದರ್ಶಿಸುತ್ತಿರುವ ಇಂತಹ ಮಹೋನ್ನತ ಸನ್ನಿವೇಶಗಳಿಂದ ಪ್ರಕೃತಿಯನ್ನು ಪೀರ‍್ವ ಕವಿಯ ಮನಸ್ಸು ತೃಪ್ತಗೊಳ್ಳುತ್ತದೆ. ಅದು ಅಂತಿಂತ ತೃಪ್ತಿಯಲ್ಲ. ಅಮರಾವತಿಯ ಇಂದ್ರನೇ ಈ ಕವಿಯ ಸೌಭಾಗ್ಯವನ್ನು ಕಂಡು ಕರುಬಬೇಕು. ಇಂತಹ ಮನೋಭಾವ ಕವಿಗೆ ಆಗ ಬಂದು ಈಗ ಹೋಗುವಂತಹುದಲ್ಲ; ಕವಿಯ ಸ್ಥಾಯೀ ಭಾವ. ಹಲವಾರು ಕವಿತೆಗಳಲ್ಲಿ ಅದನ್ನು ಕಾಣಬಹುದು. ಮುಖ್ಯವಾಗಿ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ದಶರಥನ ಪಾತ್ರ ಸನ್ನಿವೇಶವೊಂದರಲ್ಲಿ ಅನುಭವಿಸುವ ಮನಸ್ಥಿತಿಯನ್ನು ಗಮನಿಸಬಹುದು.

ಮೂವರು ಹೆಂಡತಿಯರಿದ್ದರೂ ದಶರಥನಿಗೆ ಮಕ್ಕಳಾಗಿಲ್ಲ. ’ಸಿರಿಯನಿತುಮಿರ್ದೊಡಂ’ ಅವರ ತಲೆಗಳಲ್ಲಿ ಬೆಳ್ಳಿಕೂದಲು ಮೂಡಿದ್ದರೂ ದಶರಥನಿಗೆ ಸಂತಾನದ ಪ್ರತೀಕ್ಷೆ ಕಾಡುತ್ತಿರುತ್ತದೆ. ಆದರೆ ಅದು ಕ್ರಿಯಾಶೀಲವಾಗಿ ಮುಂದಡಿಯಿಡಲು ಪ್ರಕೃತಿಯ ಲೀಲಾನಾಟಕವೊಂದು ಕಾರಣವಾಗಬೇಕಿರುತ್ತದೆ. ಆ ಸಂದರ್ಭ ಹೀಗಿದೆ.
ತಿರುಗುತಿರಲರಮನೆಯ ಸಿರಿದೋಂಟದೋಳ್:
ಮರಿಯ ತೆರೆವಾಯ್ಗಿಡುತೆ ತನ್ನ ಕೊಕ್ಕಂ, ಕುಟುಕು
ಕೊಡುತಿರ್ದ ತಾಯ್ವಕ್ಕಿಯಂ ಕಂಡು, ಕಣ್ ನಟ್ಟು,
ಕಾಲ್‌ನಟ್ಟು ನಿಂದನು ಮರಂಬಟ್ಟು.
ಈ ದೃಶ್ಯ ಸೃಷ್ಟಿಯ ಮಹದ್‌ವ್ಯೂಹದಲ್ಲಿ ನಿತ್ಯ ನಡೆಯುವ ಸಾಮಾನ್ಯ ಸಂಗತಿ. ಆದರೆ ಅಂದು ಅದನ್ನು ನೋಡಿದ ದಶರಥನಿಗೆ ಅದೊಂದು ಋತದಿಚ್ಛೆ!
ಮಕ್ಕಳಂ ಪಡೆದ ಪಕ್ಕಿಯ ಸಿರಿತನಂ ಚಕ್ರವರ್ತಿಗೆ ತನ್ನ
ಬಡತನವನಾಡಿ ಮೂದಲಿಸಿತೆನೆ, ಕರುಬಿ ಕುದಿದನ್
ಕೋಸಲೇಶ್ವರನಾ ವಿಹಂಗಮ ಸುಖಕೆ ಕಾತರಿಸಿ.
ದೇವತೆಗಳಾಶಿತಮೊ? ಋತದಿಚ್ಛೆಯೊ? ವಿಧಿಯೊ?
ಪಕ್ಕಿ ಗುಬ್ಬಚ್ಚಿಯಾದೊಡಮೇಂ? ವಿಭೂತಿಯಂ
ತಿರೆಗೆ ಕರೆವಾಸೆಯಂ ಕೆರಳಿಸಿದುದಾ ದೊರೆಯ
ಹೃದಯದಲಿ!
ಹಕ್ಕಿಗಳ ಸಿರಿತನ ಚಕ್ರವರ್ತಿಯ ಸಿರಿತನವನ್ನು ಮೂದಲಿಸಿದ್ದರಿಂದಲೇ ದೇವ ಶಕ್ತಿಗಳು ಸಂಚು ಹೂಡಿದ್ದರೋ ಎಂಬಂತೆ ಆ ಮುದುಕನ ಎದೆಯಲ್ಲಿ ಮಕ್ಕಳ ಆಸೆ ಮಿಂಚುತ್ತದೆ. ದಶರಥ ಪುತ್ರಕಾಮೇಷ್ಠಿಯನ್ನು ಮಾಡಲು ಉದ್ದೇಶಿಸುತ್ತಾನೆ. ಆಗ ಬರುವ ಜಾಬಾಲಿ ಋಷಿ ಆಡುವ ಮಾತುಗಳು, ಕವಿ ಎಷ್ಟೇ ಆದ್ಯಾತ್ಮಿಯಾದರೂ ಜನಮುಖಿಯೂ ಸಮಾಜಮುಖಿಯೂ ಆಗಿರಲು ಸಾಧ್ಯ ಎಂಬುದನ್ನು ತೋರಿಸುತ್ತದೆ.

ಸಂಪ್ರದಾಯ ಎಂದು ದಿಗ್ವಿಜಯ ಹಯಮೇಧ ಮೊದಲಾದುವಗಳಿಂದ ಒದಗುವ ಹಿಂಸೆ ಕ್ರೌರ್ಯವನ್ನು ತಪ್ಪಿಸಿ, ಅವುಗಳಿಲ್ಲದ ಪ್ರೇಮವನ್ನೇ ವ್ರತವಾಗಿ ಸ್ವೀಕರಿಸಿ ಪೂಜಿಸಿದರೆ ಮಾತ್ರ ಜಗತ್ತನ್ನಾಳುತ್ತಿರುವ ಋತ (ಸತ್ಯ) ಮೆಚ್ಚುತ್ತದೆ.
ನೆಲದಲ್ಲಿ, ಭಾನಲ್ಲಿ,
ಕಡಲು ಕಾಡುಗಳಲ್ಲಿ ಪಕ್ಕಿ ಮಿಗ ಪುಲ್ಗಳಲಿ
ಆರ್ಯರಲಿ ಮೇಣ್ ಅನಾರ್ಯರಲಿ, ಕೇಳ್, ವಿಶ್ವಮಂ
ಸರ್ವತ್ರ ತುಂಬಿದಂತರ್ಯಾಮಿ ಚೇತನಂ ತಾಂ
ಪ್ರಾಮಾತ್ಮವಾಗಿರ್ಪುದದರಿಂದೆ ಹಿಂಸೆಯಿಂ
ಪ್ರೇಮಮೂರ್ತಿಗಳಾದ ಸಂತಾನಮುದಿಸದಯ್.
ಶ್ರೀರಾಮಚಂದ್ರನಂತಹ ಪ್ರೇಮಮೂರ್ತಿಯುದಯಿಸಬೇಕಾದರೆ ಸೃಷ್ಟಿಗಿರಬೇಕಾದ ಉದಾತ್ತೆಯೂ ಅನನ್ಯವಾಗಿರಬೇಕಾಗುತ್ತದೆ. ಮಾನವಕೇಂದ್ರಿತ ಆಲೋಚನಾಕ್ರಮದಿಂದ ಹೊರಬಿದ್ದು ಎಲ್ಲರೊಳಗೊಂದಾಗಿ, ಎಲ್ಲವುದರೊಳಗೊಂದಾಗಿ ಯೋಚಿಸಿದಾಗ ಮೇಲಿನ ಮಾತುಗಳಲ್ಲಿ ಅಡಗಿರುವ ಸತ್ಯದ ದರ್ಶನವಾಗುತ್ತದೆ. ಆ ದರ್ಶನ ಸ್ವಯಂವೇದ್ಯವೇ ಹೊರತು ಬಾಹ್ಯಪ್ರದರ್ಶನಕ್ಕಲ್ಲ ಎಂಬುದೂ ಮನುಷ್ಯನ ಅಲೋಚನಾ ಮತ್ತು ಅಭಿವ್ಯಕ್ತಿ ಕ್ರಮದ ಇತಿ ಮಿತಿಗಳನ್ನು ತೆರೆದಿಡುತ್ತದೆ.

ಈ ಸೃಷ್ಟಿಯ ಜಡಚೇತನಗಳಲ್ಲಿ ತುಂಬಿರುವ ಚೇತನವೇ ಪ್ರೇಮ. ಆದ್ದರಿಂದ ಹಿಂಸೆಯಿಂದ ಪ್ರೇಮಮೂರ್ತಿಗಾಳದ ಸಂತಾನ ಉದಯಿಸುವುದಿಲ್ಲ ಎಂದು ಹೇಳುತ್ತಾ-
ವಿಶ್ವಶಕ್ತಿಸ್ವರೂಪಿಯನಗ್ನಿಯಂ ಭಜಿಸು ನೀಂ
ಸಾತ್ವಿಕ ವಿಧಾನದಿಂ. ಪ್ರಜೆಗಳಂ ಬಡವರಂ
ಸತ್ಕರಿಸವರ್ಗೆ ಬಗೆ ತಣಿವವೋಲ್. ತೃಪ್ತಿಯಿಂ
’ದೊರೆಗೊಳ್ಳಿತಕ್ಕೆ!’ ಎಂದಾ ಮಂದಿ ಪರಸಲ್ಕೆ,
ಪರಕೆಯದೆ ದೇವರಾಶೀರ್ವಾದಕೆಣೆಯಾಗಿ
ಕೃಪಣ ವೀಧಿಯಂ ಪಿಂಡಿ ತಂದೀವುದೈ ನಿನಗೆ
ನೆಲದರಿಕೆಯೊಳ್ಮಕ್ಕಳಂ.
ಎನ್ನುತ್ತಾರೆ. ಪ್ರಕೃತಿಯೊಳಗೊಂದಾಗಿ ಸಾಗಿದ ಸಾಧಕನ ಸಾಧನೆಗೆ ಕೊನೆಯೆಂಬುದೇ ಇಲ್ಲ. ಅದು ನಿತ್ಯಚಲನಶೀಲವಾದುದು ಮತ್ತು 'ನಿತ್ಯಋತ'ಮುಖಿಯಾದುದು.

Monday, January 09, 2012

ಧ್ಯಾನಸ್ಥಯೋಗಿಯಾಗಿದೆ ಮಹಾ ಸಹ್ಯಗಿರಿ!

"ನಾವು ನಿಂತ ಸ್ಥಳ ಎತ್ತರವಾಗಿತ್ತು. ಸುಮಾರು ಮೂವತ್ತು ಮೈಲಿಗಳ ದೃಶ್ಯ ನಮ್ಮೆದುರಿಗಿತ್ತು. ದಿಗಂತವಿಶ್ರಾಂತವಾದ ಸಹ್ಯಾದ್ರಿ ಪರ್ವತಶ್ರೇಣಿಗಳು ತರಂಗತರಂಗಗಳಾಗಿ ಸ್ಪರ್ಧೆಯಿಂದ ಹಬ್ಬಿದ್ದುವು. ದೂರ ಸರಿದಂತೆಲ್ಲ ಅಸ್ಫುಟವಾಗಿ ತೋರುತ್ತಿದ್ದುವು. ಕಣಿವೆಗಳಲ್ಲಿ ಇಬ್ಬನಿಯ ಬಲ್ಗಡಲು ತುಂಬಿತ್ತು. ವೀಚಿವಿಕ್ಷೋಭಿತ ಶ್ವೇತಫೇನಾವೃತ ಮಹಾವಾರಿಧಿಯಂತೆ ಪಸರಿಸಿದ್ದ ತುಷಾರ ಸಮುದ್ರದಲ್ಲಿ ಶ್ಯಾಮಲಗಿರಿಶೃಂಗಳು ದ್ವೀಪಗಳಂತೆ ತಲೆಯೆತ್ತಿಕೊಂಡಿದ್ದುವು. ಕಂದರ ಪ್ರಾಂತಗಳಲ್ಲಿದ್ದ ಗದ್ದೆ ತೋಟ ಹಳ್ಳಿ ಕಾಡು ಎಲ್ಲವೂ ಹೆಸರಿಲ್ಲದಂತೆ ಅಳಿಸಿಹೋಗಿದ್ದುವು. ದೃಷ್ಟಿಸೀಮೆಯನ್ನೆಲ್ಲ ಆವರಿಸಿದ್ದ ತುಷಾರಜಲನಿಧಿಯಲ್ಲಿ ಹಡಗುಗಳಲ್ಲಿ ಕುಳಿತು ಸಂಚರಿಸಬಹುದೆಂಬಂತಿತ್ತು! ನಾವು ಮೂವರೂ ಅವಾಕ್ಕಾಗಿ ನಿಂತು ನೋಡಿದೆವು. ಇಬ್ಬನಿಯ ಕಡಲಿನಿಂದ ತಲೆಯೆತ್ತಿ ನಿಂತಿದ್ದ ಗಿರಿಶೃಂಗಗಳು ಮುಂಬೆಳಕಿನ ಹೊಂಬಣ್ಣವನ್ನು ಹೊದೆದಿದ್ದುವು. ಬಾಲಸೂರ್ಯನ ಸ್ನಿಗ್ಧಕೋಮಲ ಸುವರ್ಣಜ್ಯೋತಿಯಿಂದ ವೃಕ್ಷಾರಜಿಗಳ ಶ್ಯಾಮಲಪರ್ಣವಿತಾನಗಳಲ್ಲಿ ಖಚಿತವಾಗಿದ್ದ ಸಹಸ್ರ ಸಹಸ್ರ ಹಿಮಮಣಿಗಳು ಅನರ್ಘ್ಯರತ್ನಸಮೂಹಗಳಂತೆ ವಿರಾಜಿಸುತ್ತಿದ್ದುವು. ಬೆಳ್ನೊರೆಯಂತೆ ಹಬ್ಬಿದ ಇಬ್ಬನಿಯ ಕಡಲಿನಲ್ಲಿ ಮುಳುಗಿಹೋಗಿದ್ದ ಕಣಿವೆಯ ಕಾಡುಗಳಿಂದ ಕೇಳಿಬರುತ್ತಿದ್ದ ವಿವಿಧವಿಹಂಗಮಗಳ ಮಧುರವಾಣಿ ಅದೃಶ್ಯರಾಗಿ ಉಲಿಯುವ ಗಂಧರ್ವಕಿನ್ನರರ ಗಾಯನದಂತೆ ಸುಮನೋಹರವಾಗಿತ್ತು. ನಾವು ಮೂವರೂ ಅವಾಕ್ಕಾಗಿ ನಿಂತು ನೋಡಿದೆವು! ನೋಡಿದೆವು, ನೋಡಿದೆವು, ಸುಮ್ಮನೆ ಭಾವಾವಿಷ್ಟರಾಗಿ!"

ಸ್ನೇಹಿತರೊಂದಿಗೆ ಇರುಳು ಬೇಟೆಗೆ ಹೋಗಿದ್ದ ಯುವಕವಿ ಪುಟ್ಟಪ್ಪ, ತಾನು ಕುಳಿತಿದ್ದ ಜಾಗ, ಸಮಯ ಎಲ್ಲವನ್ನೂ ಮರೆತು ಪ್ರಕೃತಿ ಉಪಾಸಕನಾಗಿಬಿಡುತ್ತಾನೆ. ’ಜೊನ್ನದ ಬಣ್ಣದಿ ತುಂಬಿದ ಬಿಂಬದ ಹೊನ್ನಿನ ಸೊನ್ನೆಯು ಮೂಡಿದುದು’ ಎಂಬಂತೆ ಕವಿಗೆ ಕಂಡ ಚಂದ್ರೋದಯ ’ಬೇಟೆಗಾರನಿಗೆ ಬೇಟೆಯಾಗದಿದ್ದರೂ ಕಬ್ಬಿಗನಿಗೆ ಬೇಟೆಯಾಯಿತು’ ಅನ್ನಿಸಿಬಿಡುತ್ತದೆ. ಇಡೀ ರಾತ್ರಿಯನ್ನು ಹೀಗೇ ಕಳೆದು, ನಸುಕಿನಲ್ಲಿಯೇ ಬರಿಗೈಯಲ್ಲಿ ಸ್ನೇಹಿತರೊಂದಿಗೆ ಮನೆಗೆ ಹಿಂತಿರುಗುವಾಗ ’ಅರುಣೋದಯದ ಹೇಮಜ್ಯೋತಿ ಪೂರ್ವದಿಗ್ಭಾಗದಲ್ಲಿ ಪ್ರಬಲಿಸುತ್ತಿತ್ತು.’ ಬರುವ ದಾರಿಯಲ್ಲಿ ಬಂಡೆಗಳಿಂದ ಬಯಲಾದ ಪ್ರದೇಶದಲ್ಲಿ ನಿಂತು ನೋಡಿದಾಗ ಕಂಡ ದೃಶ್ಯವೇ ಮೇಲೆ ಕವಿಯ ಮಾತುಗಳಲ್ಲಿ ಮೂಡಿದೆ. ಅಂದು ಆ ದೃಶ್ಯವನ್ನು ಕವಿಗೆ ತೋರಿಸಿದ ಆ ಜಾಗವೇ ’ಕವಿಶೈಲ’. ಕುವೆಂಪು ಸಾಹಿತ್ಯದ ಪರಿಚಯವಿದ್ದವರೆಲ್ಲರಿಗೂ ’ಕವಿಶೈಲ’ ಗೊತ್ತಿರುತ್ತದೆ.

ಕುಪ್ಪಳಿ ಕವಿಮನೆಯ ಹಿಂಬದಿಗೆ ದಿಗಂತಮುಖಿಯಾಗಿರುವ ಪರ್ವತವೇ ಕವಿಶೈಲ. ಕಲೆಯ ಕಣ್ಣಿಲ್ಲದವರಿಗೆ ಒಂದು ಕಲ್ಲುಕಾಡು; ಕಲಾವಂತನಿಗೆ ಸಗ್ಗವೀಡು ಆಗಿರುವ ಕವಿಶೈಲದ ನಿಜಮನಾಮ ಆಗ್ಗೆ ’ದಿಬ್ಬಣಕಲ್ಲು’. ನಂತರ, ಅದರ ಕಾರಣದಿಂದಲೇ ಪುಟ್ಟಪ್ಪ ಕುವೆಂಪು ಆದ ಮೇಲೆ ಕವಿಶೈಲವೆಂದು ಹೆಸರು ಪಡೆದ ಗಿರಿ. ಅಲ್ಲಿಯ ಒಂದೊಂದು ವಸ್ತುಗಳು, ದೃಶ್ಯಗಳು, ಭೂತದಸಿಲೇಟು, ಬೂರುಗದ ಮರ, ನಿಲುವುಗಲ್ಲು, ಸೂರ್ಯೋದಯ, ಸೂರ್ಯಾಸ್ತ ಎಲ್ಲವೂ ಕುವೆಂಪು ಸಾಹಿತ್ಯದಲ್ಲಿ ಸ್ಥಾಯಿಯಾಗಿ, ಓದುಗರಲ್ಲಿ ಸಂಚಾರಿಯಾಗಿಬಿಟ್ಟಿವೆ.

ಬೇಟೆಗಾರರಾಗಿ ಬನಕೆ ಹೋದವರು ಮರಳಿ ಮನೆಗೆ ಬಂದುದು ಕಬ್ಬಿಗರಾಗಿ! ಕವಿಶೈಲದ ಬಗ್ಗೆ ಕವಿ ಕೇವಲ ಹನ್ನೆರಡು ದಿನಗಳಲ್ಲಿ ಆರು ಸಾನೆಟ್ಟುಗಳನ್ನು ಬರೆದಿದ್ದಾರೆ! ಮೊದಲ ಒಂದನ್ನು ಬಿಟ್ಟರೆ ಉಳಿದ ಐದು ಸಾನೆಟ್ಟುಗಳು ಐದೇ ದಿನದಲ್ಲಿ ದಿನಕ್ಕೊಂದರಂತೆ ರಚನೆಯಾಗಿವೆ! ಮಲೆನಾಡಿನ ಚಿತ್ರಗಳು ಪುಸ್ತಕದಲ್ಲಿ ಮೇಲೆ ವರ್ಣಿಸಿರುವ ಕವಿಶೈಲದ ವರ್ಣನೆಗೆ ಸಂವಾದಿಯಾಗಿ ೧೬.೪.೧೯೩೪ರಲ್ಲಿ ಮೊದಲನೆಯ ಸಾನೆಟ್ ರಚಿತವಾಗಿದೆ. ಈ ಸಾನೆಟ್ ರಚನೆಯಾಗುವುದಕ್ಕೆ ಎರಡು ದಿನಗಳ ಮುಂಚಿನ ದಿನಚರಿಯಲ್ಲಿ ಹೀಗೆ ಬರೆದಿದ್ದಾರೆ: ನಾನು ಚಂದ್ರು (ದೇವಂಗಿ ಚಂದ್ರಶೇಖರ) ಕವಿಶೈಲಕ್ಕೆ ಏರಿದೆವು. ಹಿಂದಿನ ದಿನದ ಮಳೆಯಿಂದ ಕಾಡು ಮಲೆ ನೆಲಗಳು ಮಿಂದು ಮಡಿಯಾಗಿದ್ದುವು. ಇಂದು ಬೆಳಿಗ್ಗೆ ದೊರಕಿದ ದೃಶ್ಯವು ನಮ್ಮ ಪುಣ್ಯಕ್ಕೆ ಎಣೆಯಿಲ್ಲದಂಥದ್ದು. ಕಣಿವೆಗಳನ್ನು ತುಂಬಿದ್ದ ಮಂಜಿನ ಪರದೆಯ ಮೇಲೇಳತೊಡಗಿ, ಸಲಸಲಕ್ಕೂ ಎದೆ ಹಾರಿಸುವಂತಹ ದೃಶ್ಯಗಳು ಗೋಚರಿಸಿದುವು. ಅದನ್ನು ಎಂದಾದರೂ ಕಲಾಸುಂದರಿಯ ಕೃಪೆಯಿಂದ ಸಾಹಿತ್ಯರೀತ್ಯಾ ಹೊರಹೊಮ್ಮಿಸುತ್ತೇನೆ. - ಆ ದಿನ ಕವಿಗೆ ದೊರಕಿದ ದರ್ಶನ ಎರಡು ದಿನಗಳ ನಂತರ ಸಾನೆಟ್ ರೂಪತಾಳಿದ್ದು ಕೆಳಕಂಡಂತೆ.

ನೋಡಯ್ಯ, ಪ್ರಿಯಬಂಧು, ಚೈತ್ರರವಿಯುದಯದಲಿ
ಸಹ್ಯಾದ್ರಿ ಕಾನನಗಳುತ್ತಮಾಂಗದಿ ಸೃಷ್ಟಿ
ದೃಶ್ಯ ವೈಕುಂಠವನೆ ನೆಯ್ದಿದೆ! ಕಲಾದೃಷ್ಟಿ
ದರ್ಶನವನುದ್ದೀಪನಂಗೈಯೆ ಹೃದಯದಲಿ,
ಪ್ರಾಣಪಕ್ಷಿ ಸುವರ್ಣಪರ್ಣಂಗಳನು ಬಿಚ್ಚಿ
ಹಾರಿಹುದಸೀಮತೆಗೆ!..............
ಕವಿ ತನಗಾದ ಅನುಭವವನ್ನು ಸಹೃದಯನಿಗೆ ಹೇಳುತ್ತಿರುವಂತೆ ಆರಂಭವಾಗುವ ಸಾನೆಟ್ಟು ಮುಂದುವರೆದು ತಾನು ಕಂಡಿದ್ದೇನು ಎಂಬುದನ್ನು ಕಣ್ಣಿಗೆ ಕಟ್ಟಿಸಿಬಿಡುತ್ತದೆ.
.................. ಕಣಿವೆ ಕಣಿವೆಗಳಲ್ಲಿ
ಮಂಜಿನ ಮಹಾಮಾಯೆ ನೊರೆಯ ರಾಸಿಯ ಚೆಲ್ಲಿ
ವಾರಿಧಿಯ ವಿರಚಿಸಿದೆ, ಕಟುನಿಮ್ನತೆಯ ಮುಚ್ಚಿ.
ನೋಡು, ಆ ಶೀಖರವೆದ್ದಿದೆ ದ್ವೀಪವೆಂಬಂತೆ
ಕ್ಷೀರಫೇನಧಿ ಮಧ್ಯೆ ಶ್ಯಾಮಲ ಶಿರವನೆತ್ತಿ;
ಸ್ವರ್ಗಪ್ರದೇಶದೊಂದಂಶವೆಂಬಂದದಿಂ!
ವಾರಿಧಿಯ ವಿರಚಿಸಿರುವ ಮಂಜಿನ ಮಾಯೆ ನೊರೆ ಹಾಲಿನ ನೊರೆಯಂತೆ ಶೋಭಿಸಿದೆ. ಹಾಲ್ನೊರೆಯ ನಡುವೆ ತಲೆಯೆತ್ತಿರುವ ಹಸಿರು ಗಿರಿ ಕಡಲಿನ ನಡುವಿನ ದ್ವೀಪದಂತಾಗಿಬಿಟ್ಟಿದೆ. ಗದ್ಯದಲ್ಲಿ ಬಂದಿದ್ದ ಬಲ್ಗಡಲು, ಶ್ವೇತಫೇನಾವೃತ ಎಂಬ ಕಲ್ಪನೆಗಳು ಇಲ್ಲಿ ಬೇರೊಂದು ರೂಪದಲ್ಲಿ - ಕಟುನಿಮ್ನತೆ, ಕ್ಷೀರಫೇನ - ಬಂದಿವೆ.
ಪ್ರಿಯಬಂಧು, ಇದು ನಮ್ಮ ದೈನಂದಿನಿಳೆಯಂತೆ
ಕಾಣದೈ: ಸೌಂದರ್ಯ ದೇವತೆಗಳಿದೊ ಸುತ್ತಿ
ಬಿಗಿವರೆಮ್ಮನು ಬಾಹುಬಂಧನಾನಂದದಿಂ!
ಮೇಲಿನ ಸಾನೆಟ್ಟು ರಚನೆಯಾದ ಒಂದು ವಾರಕ್ಕೆ ಸರಿಯಾಗಿ (೨೩.೪.೧೯೩೪) ಕವಿಗೆ ಮತ್ತೆ ಕವಿಶೈಲ ಕಾಡತೊಡುಗುತ್ತದೆ. ಕವಿಗೆ ಆನಂದವನ್ನುಂಟುಮಾಡುವ ಕವಿತಾ ಮನೋಹರಿಯ ಪ್ರಥಮ ಪ್ರಣಯಿಯಾಗಿ ಕವಿಶೈಲ ಕವಿಗೆ ಕಾಣುತ್ತದೆ.

ಓ ನನ್ನ ಪ್ರಿಯತಮ ಶಿಖರ ಸುಂದರನೆ, ನನ್ನ
ಜೀವನಾನಂದ ನಿಧಿ ಕವಿತಾ ಮನೋಹರಿಯ
ಪ್ರಥಮೋತ್ತಮಪ್ರಣಯಿ, ವನದೇವಿಯೈಸಿರಿಯ
ಪೀಠ ಚೂಡಾಮಣಿಯೆ, ಓ ಕವಿಶೈಲ, ನಿನ್ನ
ಸಂಪದವನೆನಿತು ಬಣ್ಣಿಸಲಳವು ಕವನದಲಿ?
ಕವಿಗೆ ದಿವ್ಯಾನಂದವನ್ನುಂಟು ಮಾಡಿದ ಕವಿಶೈಲವನ್ನು ಎಷ್ಟು ವರ್ಣಿಸಿದರೂ ತೃಪ್ತಿಯಿಲ್ಲ. ಇಡೀ ನಾಡನ್ನು, ನಾಡಿನ ಸುಂದರ ತಾಣಗಳನ್ನು ಕಂಡು ದಿವ್ಯತೆಯನ್ನನುಭವಿಸಿದ್ದರೂ ಈ ಶಿಖರಸುಂದರ ಕವಿಗೆ ಮಾಡಿರುವ ಮೋಡಿ ವರ್ಣಿಸಲಸದಳ. ಅದು ಕವಿಯನ್ನು ಚಳಿ ಮಳೆ ಬಿಸಿಲು ರಾತ್ರಿ ಹಗಲು ಎನ್ನದೆ ಕಾಡುವುದು ಹೀಗೆ.

ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ
ಮಳೆಯಲ್ಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ
ದೃಶ್ಯವೈವಿಧ್ಯಮಂ ರಚಿಸಿ ನೀಂ ಭುವನದಲಿ
ಸ್ವರ್ಗವಾಗಿಹೆ ನನಗೆ! ನೀಲಗಿರಿ, ಬ್ರಹ್ಮಗಿರಿ,
ಗೇರುಸೊಪ್ಪೆಯ ಭೀಷ್ಮ ಜಲಪಾತ, ಆಗುಂಬೆ,
ಶೃಂಗೇರಿ, ಚಂದ್ರಾದ್ರಿಗಳನೆಲ್ಲಮಂ ಕಂಡೆ;
ವನರಾಜಿ ಜಲರಾಶಿ ಸೂರ್ಯಾಸ್ತಗಳನುಂಡೆ!
ಆದರೇಂ? ಮೀರಿರುವುದವುಗಳಂ ನಿನ್ನ ಸಿರಿ:
ಹೆತ್ತಮ್ಮಗಿಂ ಮತ್ತೊಳರೆ? ತಾಯಹಳೆ ರಂಭೆ?
ಒಂದೇ ದಿನದ ನಂತರ (೨೫.೪.೧೯೩೪) ಮೂಡಿರುವ ಸಾನೆಟ್ಟು, ಕವಿಶೈಲದಿಂದ ಕವಿ ಕಂಡ ಸೂರ್ಯಾಸ್ತವನ್ನು, ಅದರಿಂದ ಭಾವಮುಖನಾದ ಕವಿಯನ್ನು ಕಂಡರಿಸುತ್ತದೆ. ಸೂರ್ಯಾಸ್ತ ಕಾರಣದಿಂದ ಉಂಟಾಗುವ ವರ್ಣವೈವಿಧ್ಯವನ್ನೂ ಕವಿತೆ ಕಟ್ಟಿಕೊಡುತ್ತದೆ. ಹೆಚ್ಚಿನ ಮಾತೇ ಬೇಕಾಗಿಲ್ಲ; ಅಷ್ಟು ಸರಳವಾಗಿದೆ ಕವಿತೆ!
ತೆರೆ ಮೇಲೆ ತೆರೆಯೆದ್ದು ಹರಿಯುತಿದೆ ಗಿರಿಪಂಕ್ತಿ
ಕಣ್ದಿಟ್ಟಿ ಹೋಹನ್ನೆಗಂ. ಚಿತ್ರ ಬರೆದಂತೆ
ಕಡುಹಸುರು ತಿಳಿಹಸುರುಬಣ್ಣದ ಸಂತೆ
ಶೋಭಿಸಿಹುದಾತ್ಮವರಳುವ ತೆರದಿ. ದಿಗ್ದಂತಿ
ಕೊಂಕಿಸಿದ ದೀರ್ಘಬಾಹುವ ಭಂಗಿಯನು ಹೋಲಿ
ಮೆರೆದಿದೆ ದಿಗಂತರೇಖೆ. ಮುಳುಗುತಿದೆ ಸಂಜೆರವಿ
ಕುಂಕುಮದ ಚೆಂಡಿನೊಲು ದೂರದೂರದಲಿ. ಕವಿ
’ಭಾವಮುಖ’ನಾಗುತಿಹನಾವೇಶದಲಿ ತೇಲಿ!
ಬಳಿ ಕುಳಿತು ಭವ್ಯ ದೃಶ್ಯವ ನೋಡುತಿರುವೆನ್ನ
ಸೋದರನೆ, ಹೃದಯದಲಿ ಯಾವ ಭಾವಜ್ವಾಲೆ
ಪ್ರಜ್ವಲಿಸುತಿದೆ? ಮನದೊಳಾವ ಚಿಂತಾಗಾನ
ರೆಕ್ಕೆಗರಿಗೆದುರುತಿದೆ? ಅಥವ ನೋಟವೆ ನಿನ್ನ
ಸರ್ವಸ್ವವಾಗಿದೆಯೆ? ಇರಲಿ : ನಿನ್ನೆದೆ ಸೋಲೆ
ಸೃಷ್ಟಿಸೌಂದರ್ಯಕದೆ ಅಮೃತಗಂಗಾಸ್ನಾನ!
ಸೃಷ್ಟಿಯ ಚೆಲುವನ್ನು ನೋಡಿ ಒಂದರೆಕ್ಷಣ ನಾವು ಮನಸೋತರೂ ಸರಿಯೆ; ಅದು ಅಮೃತಗಂಗಾಸ್ನಾನಕ್ಕೆ ಸಮ. ಆ ’ಒಂದರೆಕ್ಷಣ’ ಎಲ್ಲರಿಗೂ ಲಭಿಸುವುದು ಮಾತ್ರ ದುರ್ಲಭ! ಸೂರ್ಯೋದಯ, ಸೂರ್ಯಾಸ್ತವನ್ನು ಕವಿಶೈಲದಲ್ಲಿ ಕಂಡ ಕವಿಗೆ ಮಳೆಗಾಲದ ದಿನದ ಸಂಜೆಯಲ್ಲಿ ಕವಿಶೈಲವನ್ನು ಕಾಣುವ ಭಾಗ್ಯವೂ ಬರುತ್ತದೆ. ಮಳೆಗಾಲದ ಸಂಜೆಯ ಕವಿಶೈಲದ ಬಗ್ಗೆ
ಮೇಘಗವಾಕ್ಷದೆಡೆಯ ಸಂಧ್ಯಾಗಗನವೇದಿಕೆಯಲ್ಲಿ ಲೋಕಮೋಹಕವಾದ ಅಸಂಖ್ಯ ವರ್ಣೋಪವರ್ಣಗಳ ಮೆರವಣಿಗೆ ಪ್ರಾರಂಭವಾಯಿತು. ಹಾಗೆಯೇ ನಮ್ಮ ಹೃದಯ ಮಂದಿರಗಳಲ್ಲಿ ಅಸಂಖ್ಯ ಭಾವೋಪಭಾವಗಳ ಮಹೋತ್ಸವವೂ ಪ್ರಾರಂಭವಾಯಿತು. ಆ ಸೌಂದರ್ಯ ಸಮುದ್ರದಲ್ಲಿ ನಾವೆಲ್ಲರೂ ತೆರೆತೆರೆಗಳಾಗಿ ಅಶರೀರಗಳಾಗಿ ವಿಶ್ವವಿಲೀನವಾದೆವು. ನನ್ನ ಕಣ್ಣಿವೆಗಳು ಅನೈಚ್ಛಿಕವಾಗಿಯೆ ಮುಗುಳಿದುವು.........ಕಣ್ದೆರೆದಾಗ ಕತ್ತಲೆಯಾಗಿತ್ತು ಎಂದು ಮಲೆನಾಡಿನ ಚಿತ್ರಗಳು ಕೃತಿಯ ಮುನ್ನುಡಿಯಲ್ಲಿ ಬರೆದಿದ್ದರೆ, ಮಳೆ ಹೊಯ್ದ ಮಾರನೆಯ ಬೆಳಗಿನ ಚಿತ್ರಣವನ್ನು ೨೬.೪.೧೯೩೪ರ ಸಾನೆಟ್ಟಿನಲ್ಲಿ ಕಡೆದಿಟ್ಟಿದ್ದಾರೆ.

ಮಳೆಬಂದು ನಿಂತಿಹುದು; ಮಿಂದಿಹುದು ಹಸುರೆಲ್ಲ;
ಬಿಸಿಲ ಬೇಗೆಯು ಮಾದು, ಬಂದಿಹುದು ಹೊಸತಂಪು;
ಹೊಸತು ಮಳೆ ತೋಯಿಸಿರುವ ನೆಲದ ಕಮ್ಮನೆ ಕಂಪು
ತೀಡುತಿರೆ, ಮಣ್ಣುತಿನ್ನುವುದೇನು ಮರುಳಲ್ಲ!
ವಾಯು ಮಂಡಲ ಶುಭ್ರ; ಗಗನದಲಿ ಮುಗಿಲಿಲ್ಲ;
ಮೈಲತುತ್ತಿನ ಬಣ್ಣದಗಲ ಗಾಜನು ಹೋಲಿ
ಕಮನೀಯವಾಗಿರಲು ಧೌತಾಂಬರದ ನೀಲಿ,
ಕವಿಗೆ ಮನೆ ಬೇಡೆಂಬುದೊಂದು ಸೋಜಿಗವಲ್ಲ!
ಕರಿದಾಗಿ ಹಸರಿಸಿಹ ಕವಿಶೈಲದರೆಯಲ್ಲಿ
ಬಿಸಿಲಿನಲಿ ಮಿರುಗುತಿವೆ ಕನ್ನಡಿಗಳೆಂಬವೋಲ್
ನಿಂತ ನೀರುಗಳು; ಆವಿಗಳೆದ್ದು, ಅಲ್ಲಲ್ಲಿ,
ನಭಕೇರುತಿವೆ. ಹಕ್ಕಿ ಹಾಡತೊಡಗಿವೆ, ಕೇಳು;
ಹೇ ಬಂಧು, ಸೊಬಗಿನಲಿ ನಿನ್ನಾತ್ಮವನು ತೇಲು;
ಪ್ರಜ್ವಲಿಸಲೈ ಕಲ್ಪನೆ, ಕೆರಳ್ದ ಬೆಂಕಿಯೋಲ್!
ಮನೆಯೇ ಬೇಡ; ಕವಿಶೈಲ ಸಾಕು ಎಂಬುದು ಸೋಜಿಗವಲ್ಲ ಎನ್ನುವ ಕವಿ, ಮತ್ತೆ ಮಾರನೆಯ ದಿನ (೨೭-೪-೧೯೩೪) ರಚಿತವಾದ ಸಾನೆಟ್ಟಿನಲ್ಲಿ ಹಿಂದಿನ ರಾತ್ರಿ ಕತ್ತಲಲ್ಲಿ, ನಕ್ಷತ್ರದ ಬೆಳಕಲ್ಲಿ ಕವಿಶೈಲದ ಮೇಲೆ ನಿಂತು ಅನುಭವಿಸಿದ್ದನ್ನು ಅಕ್ಷರಕ್ಕಿಳಿಸಿದ್ದಾರೆ. ಕತ್ತಲೂ ಕೂಡ ಕವಿಗೆ ಕಾವ್ಯವನ್ನು ತೋರಿಸಬಲ್ಲುದು ಎಂಬುದು ಈ ಸಾನೆಟ್ಟಿನ ಮಹಿಮೆ. ಕಾಣುವ ಕಣ್ಣು ಇದ್ದವನಿಗೆ ಕತ್ತಲೆಯೂ ಕಾಣಿಸುತ್ತದೆ; ಕಿವಿಯಿದ್ದವನಿಗೆ ಕತ್ತಲೆಯೂ ಕೇಳಿಸುತ್ತದೆ!
ನಿರ್ಜನತೆ; ನೀರವತೆ; ಕಗ್ಗತ್ತಲಲಿ ಧಾತ್ರಿ
ತಲ್ಲೀನ. ಕೋಟಿಯುಡುಮಂಜರಿಗಳುಪಕಾಂತಿ
ಬೆಳಕಲ್ಲ: ಕಗ್ಗತ್ತಲೆಯ ಛಾಯೆ, ಬೆಳಕಿನ ಭ್ರಾಂತಿ!-
ಏಂ ಶಾಂತಿ, ವಿಶ್ರಾಂತಿ!- ಕವಿಶೈಲದಲಿ ರಾತ್ರಿ:
ತಿಮಿರಪಾನದಿ ಮೂರ್ಛೆಗೊಂಡಂತಿಹ ಜಗತ್ತು
ಮರಳಿ ಕಣ್ದೆರೆದು ಎಚ್ಚರುಹ ಚಿಹ್ನೆಯೆ ಇಲ್ಲ;
ಭೀಷಣ ಗಭೀರತೆಯೊಳದ್ದಿದೆ ಭುವನವೆಲ್ಲ;
ರಂಜಿಸಿದೆ ಲಯ ವಿಪ್ಲವದ ಭವ್ಯಸಂಪತ್ತು!
ದೇಹಭಾವವೆ ಹೋಗಿ ನನ್ನಹಂಕಾರಕ್ಕೆ
ಕತ್ತಲೆಯೆ ಕವಚವಾಗಿದೆ; ಇಂದ್ರಿಯಂಗಳಿಗೆ
ಕತ್ತಲೆಯೆ ವಿಷಯವಾಗಿದೆ; ನೋಡೆ ಕಂಗಳಿಗೆ
ಕತ್ತಲೆಯ ಕಾಣ್ಕೆ; ಕೇಳಲು ಕಿವಿಗಳೆರಡಕ್ಕೆ
ಕತ್ತಲೆಯೆ ಸದ್ದು!- ನನ್ನೆದೆಯೊಳನುಭವವಿದೇನು?
ಭಯವೋ? ಆವೇಶವೋ? ಅಹಂಕಾರಲಯವೋ ಏನು?
ಪ್ರಕೃತಿಯ ಅದಮ್ಯತೆ, ನಿಗೂಢತೆ, ಭವ್ಯತೆ, ರುದ್ರರಮಣೀಯತೆಯ ಎದುರಿಗೆ ಮಾತಿಲ್ಲವಾಗುವುದೆಂದರೆ ಇದೆ ಇರಬೇಕು. ದೇಹಭಾವವೇ ಹೋಗುವುದೆಂದರೆ ಸಮಾಧಿ ಸ್ಥಿತಿಯನ್ನು ತಲುಪಿದಂತೆಯೇ ಸರಿ. ರಾತ್ರಿಯ ನಿಗೂಢತೆ ಮನುಷ್ಯನಲ್ಲಿ ಹುಟ್ಟಿಸುವ ಕಲ್ಪನೆಗಳಿಗೆ ಎಂದಿಗೂ ಯಾವತ್ತಿಗೂ ಕೊನೆಯಿಲ್ಲ!

ಮೇಲಿನ ಐದು ಸಾನೆಟ್ಟುಗಳಿಗೆ ಕಲಶವಿಟ್ಟಂತೆ ಮಾರನೆಯ ದಿನವೇ (೨೮-೪-೧೯೩೪) ಆರನೆಯ ಸಾನೆಟ್ಟು ರಚನೆಯಾಗಿದೆ. ಕವಿಯಲ್ಲಿ ತಾನು ಕಂಡ ದರ್ಶನವೆಲ್ಲವನ್ನೂ ಸರ್ವರೂ ಕಾಣಬೇಕು ಎಂಬ ಭಾವ ಯಾವಾಗಲೂ ಸ್ಥಾಯಿ. ಸಹೃದಯನನ್ನೂ ತನ್ನೊಂದಿಗೆ ಕರೆದೊಯ್ಯಬೇಕೆಂಬ ಅಚಲ ತುಡಿತ. ಸಹೃದಯನಿಗೆ ಹೇಳುತ್ತಿರುವಂತೆ ಕವನ ಆರಂಭವಾಗುತ್ತದೆ.
ಮಿತ್ರರಿರ, ಮಾತಿಲ್ಲಿ ಮೈಲಿಗೆ! ಸುಮ್ಮನಿರಿ:
ಮೌನವೆ ಮಹತ್ತಿಲ್ಲಿ, ಈ ಬೈಗುಹೊತ್ತಿನಲಿ
ಕವಿಶೈಲದಲಿ. ಮುತ್ತಿಬಹ ಸಂಜೆಗತ್ತಲಲಿ
ಧ್ಯಾನಸ್ಥಯೋಗಿಯಾಗಿದೆ ಮಹಾ ಸಹ್ಯಗಿರಿ!
ಮುಗಿಲ್ದೆರೆಗಳಾಗಸದಿ ಮುಗುಳ್ನಗುವ ತದಿಗೆಪೆರೆ,
ಕೊಂಕು ಬಿಂಕವ ಬೀರಿ, ಬಾನ್ದೇವಿ ಚಂದದಲಿ
ನೋಂತ ಸೊಡರಿನ ಹಣತೆಹೊಂದೋಣಿಯಂದದಲಿ
ಮೆರೆಯುತ್ತೆ ಮತ್ತೆ ಮರೆಯಾಗುತ್ತೆ ತೇಲುತಿರೆ,
ಬೆಳಕು ನೆಳಲೂ ಸೇರಿ ಶಿವಶಿವಾಣಿಯರಂತೆ
ಸರಸವಾಡುತಿವೆ ಅದೊ ತರುಲತ ಧರಾತಲದಿ!-
ಪಟ್ಟಣದಿ, ಬೀದಿಯಲಿ, ಮನೆಯಲ್ಲಿ, ಸರ್ವತ್ರ
ಇದ್ದೆಯಿದೆ ನಿಮ್ಮ ಹರಟೆಯ ಗುಲ್ಲು! ಆ ಸಂತೆ
ಇಲ್ಲೇಕೆ? - ಪ್ರಕೃತಿ ದೇವಿಯ ಸೊಬಗು ದೇಗುಲದಿ
ಆನಂದವೇ ಪೂಜೆ; ಮೌನವೆ ಮಹಾಸ್ತೋತ್ರ!
ಸಹ್ಯಾದ್ರಿಯ ಗಿರಿಶ್ರೇಣಿ ಧ್ಯಾನಸ್ಥ ಯೋಗಿಯಂತೆ ಕವಿಗೆ ಕಂಡಿದೆ. ಪರಿಭಾವಿಸಿದಷ್ಟೂ ಅರ್ಥಗಳು ಈ ಹೋಲಿಕೆಗಿದೆ. ಪುಟ್ಟದಾದರೂ ಮಹತ್ತಾಗಿರುವ ಮತ್ತೊಂದು ಹೋಲಿಕೆ ’ಬೆಳಕು ನೆಳಲೂ ಸೇರಿ ಶಿವಶಿವಾಣಿಯರಂತೆ ಸರಸವಾಡುತಿವೆ ಅದೊ ತರುಲತ ಧರಾತಲದಿ!’ ಎಂಬುದು. ಓಡುವ ಮೋಡಗಳ ನೆರಳು ದಟ್ಟಕಾಡು, ಗಿರಿಗಳನ್ನು ಹಾಯ್ದು ಹೋಗುವ ದೃಶ್ಯ ಶಿವ-ಪಾರ್ವತಿಯರ ಸರಸದಂತೆ! ಅಂತಹ ಭವ್ಯತೆಯನ್ನು ದರ್ಶಿಸಿ ದಿವ್ಯತೆಯನ್ನು ಅನುಭವಿಸಬೇಕಾದರೆ ಅಲ್ಲಿ ಮೌನವೇ ಮಹಾಮಂತ್ರವಾಗಬೇಕು. ಅದೇ ಕವಿಯ ಬಯಕೆ ಕೂಡ. ಪ್ರಕೃತಿ ದೇವಿಯ ದೇವಾಲಯದಲ್ಲಿ ಆನಂದವೇ ಪೂಜೆ. ಅಲ್ಲಿ ಗಂಟೆ, ಮಂಗಳಾರತಿ, ಜಾಗಟೆ, ಮಂತ್ರ ಬೇಕಾಗಿಲ್ಲ! ಮೌನವೊಂದಿದ್ದರೆ ಸಾಕು. ಕವಿಶೈಲವೊಂದೇ ಅಲ್ಲ; ಯಾವುದೇ ಪ್ರಕೃತಿತಾಣಗಳಿಗೆ ಹೋಗುವ ಆಸಕ್ತರಿಗೆ ಈ ಸರಳ ಸತ್ಯ ಅರಿವಾದರೆ ನಿಸರ್ಗ ಮತ್ತಷ್ಟು ಸುಂದರತರವಾಗಿರುತ್ತದೆ.
ಕರನಿರಾಕರಣೆಯ ಚಳುವಳಿ ನಡೆಯುತ್ತಿದ್ದ ಸಂದರ್ಭದಲ್ಲಿ, ಭೂಗತರಾಗಿ ಚಳುವಳಿಯನ್ನು ನಿರ್ದೇಶಿಸುತ್ತಿದ್ದ ಡಾ. ಹರ್ಡೀಕರ ಕಾನಕಾನಹಳ್ಳಿ ಸರ್ದಾರ್ ವೆಂಕಟರಾಮಯ್ಯ ಅವರಿಗೆ ಕುಪ್ಪಳಿ ಮನೆಯ ಉಪ್ಪರಿಗೆ ಅಡಗುತಾಣವಾಗಿತ್ತು. ದೇಶಭಕ್ತರಿಂದ ಅವರು ಸರ್ದಾರ್ ಎಂದು ಕರೆಸಿಕೊಂಡಿದ್ದರು. ಅವರು ಆಗಾಗ ಕವಿಶೈಲಕ್ಕೆ ಹೋಗಿ ಕಾಲ ಕಳೆಯುತ್ತಿದ್ದರಂತೆ. ಆ ಸಂದರ್ಭದಲ್ಲಿ ದೇವನಾಗರಿ ಲಿಪಿಯಲ್ಲಿ ಕವಿತೆಯೊಂದನ್ನು ಕೆತ್ತಿದ್ದಾರೆ. ಅದರ ಸಾಲುಗಳೆರಡು ಹೀಗಿದೆ.
ನಾಮೀ ಒತ್ಥರ್ ಪರ್
ನಾಮ್ ಕವಿಯೋಂಕೆ ಅಮರ್
ಹೆಸರಯ ಪಡೆದ ಅರೆಯ ಮೇಲೆ
ಕವಿಯ ಹೆಸರು ಅಮರವಾಯ್ತು!

Monday, January 02, 2012

ಹುತಾತ್ಮ ಜತೀಂದ್ರನಾಥರಿಂದಾಗಿ ಮೊಳಗಿದ 'ಪಾಂಚಜನ್ಯ'

ನಡೆ ಮುಂದೆ, ನಡೆ ಮುಂದೆ,
ನುಗ್ಗಿ ನಡೆ ಮುಂದೆ!
ಜಗ್ಗದೆಯೆ, ಕುಗ್ಗದೆಯೆ,
ಹಿಗ್ಗಿ ನಡೆ ಮುಂದೆ!

’ಪಾಂಚಜನ್ಯ’ ಹೆಸರಿನ ಈ ಕವಿತೆ ಅದೇ ಹೆಸರಿನ ಸಂಕಲನದ ಆದ್ಯ ಕವಿತೆಯಾಗಿದೆ. ಕುವೆಂಪು ಅವರ ಬಹುತೇಕ ಕ್ರಾಂತಿಗೀತೆಗಳನ್ನು ’ಪಾಂಚಜನ್ಯ’ ಸಂಕಲನ ಒಳಗೊಂಡಿದೆ. ಕವಿವಾಣಿ ಯುಗವಾಣಿಯೂ ಹೌದು; ಜನವಾಣಿಯೂ ಹೌದು. ಒಂದು ಯುಗದ ಆಗುಹೋಗುಗಳ, ಜನಜೀವನದ ವಕ್ತಾರನಂತೆ ಒಬ್ಬ ಕಲಾಕಾರನಿರುತ್ತಾನೆ. ೨೦.೯.೧೯೨೯ರಂದು ರಚನೆಯಾಗಿರುವ ’ಪಾಂಚಜನ್ಯ’ದ ಹಿಂದೆ, ಅಂದಿನ ಸ್ವತಂತ್ರ ಹೋರಾಟದ ಹುತಾತ್ಮರೊಬ್ಬರ ಕಥೆಯಿದೆ. ಇಡೀ ಭಾರತ ’ನಾನೊಂದೆ’ ಎಂಬಂತೆ ಪ್ರವರ್ತಿಸುತ್ತಿದ್ದ ಕಾಲವದು. ’ಸ್ವಾತಂತ್ರಕ್ಕಾಗಿ ನಡೆಯುತ್ತಿದ್ದ ಸತ್ಯಾಗ್ರಹದ ಸಮರದಲ್ಲಿ ನಿರ್ಭೀತರಾಗಿ ನುಗ್ಗಿ ಜಯವನ್ನು ಸಾಧಿಸಬೇಕೆಂದು ಕುವೆಂಪು ’ಪಾಂಚಜನ್ಯ’ ಎಂಬ ಹೆಸರಿನ ಕವನದಲ್ಲಿ ನಾಡಿನ ಯುವಶಕ್ತಿಗೆ ಕರೆ ಕೊಟ್ಟಿದ್ದಾರೆ’ ಎಂದು ಮೇಲ್ನೋಟಕ್ಕೆ ಸುಲಭವಾಗಿ ಹೇಳಬಹುದು. ಆದರೆ, ಸ್ವತಃ ಕವಿಗಿಂತ ಎರಡು ತಿಂಗಳಷ್ಟೇ ಹಿರಿಯರಾಗಿದ್ದ ಕ್ರಾಂತಿಕಾರಿಯೊಬ್ಬರು ಕೇವಲ ೨೫ನೇ ವಯಸ್ಸಿನಲ್ಲಿ ಹುತಾತ್ಮರಾಗಿ ಹೋದ ಇತಿಹಾಸವನ್ನೊಮ್ಮೆ ನೋಡಲೇಬೇಕು. ಆಗ ’ಪಾಂಚಜನ್ಯ’ ಕವಿತೆಯ ಹಿರಿಮೆ ಗರಿಮೆಗಳು ಮನದಟ್ಟಾಗುತ್ತವೆ.

ಕಲ್ಕತ್ತಾದಲ್ಲಿ ೨೭.೧೦.೧೯೦೪ರಂದು ಮದ್ಯಮವರ್ಗದ ಕುಟುಂಬವೊಂದರಲ್ಲಿ ಜನಿಸಿದ ಜತೀಂದ್ರನಾಥ ದಾಸ್ ಅವರ ತಂದೆ ಭಂಕಿಮ್ ಬೆಹಾರಿ ಮತ್ತು ತಾಯಿ ಸುಹಾಸಿನಿ. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಜತೀಂದ್ರನಾಥ ಮೆಟ್ರಿಕ್ಯುಲೇಷನ್ ಮತ್ತು ಇಂಟರ್‌ಮಿಡಿಯೇಟ್ ಪರೀಕ್ಷೆಗಳಲ್ಲಿ ಮೊದಲ ದರ್ಜೆಯಲ್ಲಿ ಪಾಸಾಗಿದ್ದರು. ಅಂದು ದೇಶದಾದ್ಯಂತ ನಡೆಯುತ್ತಿದ್ದ ಸ್ವತಂತ್ರ ಹೋರಾಟದ ಬಿಸಿಗೆ ವಿದ್ಯಾರ್ಥಿಯಾಗಿದ್ದಾಗಲೇ ಆಕರ್ಷಿತರಾಗಿದ್ದರು. ಗಾಂಧೀಜಿಯವರಿಂದ ಪ್ರಭಾವಿತರಾದರು. ೧೯೨೧ರಲ್ಲಿ ಗಾಂಧೀಜಿಯವರ ಅಸಹಕಾರ ಚಳುವಳಿಯಲ್ಲಿ ಸಕ್ರೀಯವಾಗಿ ಭಾಗವಹಿಸಿದರು. ಪಿಕೆಟಿಂಗ್ ನಡೆಸಿದ್ದಕ್ಕಾಗಿ ಬಂಧನಕ್ಕೊಳಗಾಗಿ ಆರು ತಿಂಗಳು ಕಠಿಣ ಕಾರಾಗೃಹ ಶಿಕ್ಷೆಯನ್ನು ಅನುಭವಿಸಿದಾಗ ಅವರ ವಯಸ್ಸು ಕೇವಲ ೧೭.

ಜೈಲಿನಲ್ಲೇ ಇದ್ದುಕೊಂಡು, ಭಗತ್ ಸಿಂಗ್ ಮತ್ತು ಸಹಚರರೂ ಸೇರಿದಂತೆ ಭಾರತದಾದ್ಯಂತ ಕಾರ್ಯಾಚರಣೆ ನಡೆಸುತ್ತಿದ್ದ ಹಲವಾರು ಕ್ರಾಂತಿಕಾರಿಗಳೊಂದಿಗೆ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯೂ ಆದರು. ಬಂಗಾಳದ ಕ್ರಾಂತಿಕಾರಿ ಸಂಘಟನೆಯಾದ ’ಅನುಶೀಲನ ಸಮಿತಿ’ಯನ್ನು ಸೇರಿ ತಮ್ಮ ಹೋರಾಟಕ್ಕೆ ಒಂದು ವೇದಿಕೆಯನ್ನು ಸೃಷ್ಟಿಸಿಕೊಂಡರು. ೧೯೨೫ರಲ್ಲಿ ವಿದ್ಯಾಸಾಗರ ಕಾಲೇಜಿನಲ್ಲಿ ಬಿ.ಎ. ವಿದ್ಯಾರ್ಥಿಯಾಗಿದ್ದರು. ಆಗ ಬ್ರಿಟಿಷ್ ಸರ್ಕಾರ, ತೀವ್ರತರವಾದ ರಾಜಕೀಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆಂಬ ಆಪಾದನೆಯ ಮೇಲೆ ಬಂಧಿಸಿ, ಮೈಮೆನ್ ಸಿಂಗ್ ಕೇಂದ್ರ ಕಾರಾಗೃಹಕ್ಕೆ ತಳ್ಳಿಬಿಟ್ಟಿತು. ಜೈಲಿನಲ್ಲಿ ರಾಜಕೀಯ ಖೈದಿಗಳನ್ನು ಅನಾಗರಿಕವಾಗಿ ನಡೆಸಿಕೊಳ್ಳಲಾಗುತ್ತಿದ್ದುದನ್ನು ಕಂಡ ಜತೀಂದ್ರನಾಥ್ ಉಪವಾಸ ಸತ್ಯಾಗ್ರಹಕ್ಕೆ ಕುಳಿತುಬಿಟ್ಟರು. ೨೦ ದಿನಗಳವರೆಗೂ ನಡೆದ ಉಪವಾಸ ಸತ್ಯಾಗ್ರಹ, ಜೈಲ್ ಸೂಪರಿಂಟೆಂಡೆಂಟ್ ಕ್ಷಮಾಪಣೆ ಕೇಳುವುದರೊಂದಿಗೆ ಕೊನೆಗೊಂಡಿತು. ಕೇವಲ ೨೧ ವರ್ಷದ ಸತ್ಯಾಗ್ರಹಿ ಜತೀಂದ್ರನಾಥ ಎಂಬ ಯುವಕ ಕಲ್ಕತ್ತಾದಲ್ಲಿ ಮನೆಮಾತಾಗಿಬಿಟ್ಟ. ಆ ಹೋರಾಟದ ಯಶಸ್ಸಿನ ನಂತರ ಜತೀಂಧ್ರನಾಥರನ್ನು ಬ್ರಿಟಿಷ್ ಸರ್ಕಾರ ಸಣ್ಣಪುಟ್ಟ ಕಾರಣಗಳಿಗೂ ಜೈಲಿಗೆ ಕಳುಹಿಸುವ ಮನೋಧರ್ಮ ಪ್ರದರ್ಶಿಸುತ್ತಿತ್ತು.

೧೪.೬.೧೯೨೯ರಂದು ಜತೀಂದ್ರನಾಥರ ಕ್ರಾಂತಿಕಾರಿ ಚಟುವಟಿಕೆಗಳ ಕಾರಣವನ್ನೊಡ್ಡಿ ಬಂಧಿಸಿ, Supplementary Lahore Conspiracy Caseನಲ್ಲಿ ಅಪಾದಿತನೆಂದು ತೀರ್ಮಾನಿಸಿ, ಲಾಹೋರ್ ಬೋರ‍್ಸ್ಟಲ್ ಜೈಲಿಗೆ ಕಳುಹಿಸಲಾಯಿತು. ಲಾಹೋರ್ ಜೈಲಿನಲ್ಲಿ ಸ್ವತಂತ್ರ ಹೋರಾಟಗಾರರಿಗೆ, ವಿಚಾರಣಾಧೀನ ಖೈದಿಗಳಿಗೆ ಅತಿಯಾಗಿ ಕಿರುಕುಳ ನೀಡಲಾಗುತ್ತಿತ್ತು. ಖೈದಿಗಳಿಗೆ ನೀಡಲಾಗುತ್ತಿದ್ದ ಸಮವಷ್ತ್ರಗಳು ಕೊಳೆಯಾಗಿರುತ್ತಿದ್ದುವು. ಅಡುಗೆಮನೆ ಜಿರಲೆ ಇಲಿಗಳ ವಾಸಸ್ಥಾನವಾಗಿಬಿಟ್ಟಿತ್ತು. ಕುಡಿಯಲು ಕೊಡುತ್ತಿದ್ದ ನೀರಿನಲ್ಲಿ ಹುಳುಗಳು ತೇಲುತ್ತಿದ್ದುವು. ಓದಲು ಪುಸ್ತಕ ಪತ್ರಿಕೆಗಳನ್ನು ಕೊಡುತ್ತಿರಲಿಲ್ಲ. ಆದರೆ, ಅದೇ ಜೈಲಿನಲ್ಲಿದ್ದ ಇಂಗ್ಲಿಷ್ ಖೈದಿಗಳನ್ನು ಉತ್ತಮತರವಾಗಿ ನಡೆಸಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಜತೀಂದ್ರನಾಥ ದಂಗೆಯೆದ್ದುಬಿಟ್ಟರು. ತಾರತಮ್ಯವನ್ನು ವಿರೋಧಿಸಿ ೧೩.೭.೧೯೨೯ರಿಂದ ಉಪವಾಸ ಸತ್ಯಾಗ್ರಹಕ್ಕೆ ಕುಳಿತುಬಿಟ್ಟರು. ಜೈಲಿನ ಆಡಳಿತ ಜತೀಂದ್ರನಾಥ ಮತ್ತು ಇತರ ಸತ್ಯಾಗ್ರಹಿಗಳಿಗೆ ಹೊಡೆದು ಬಡಿದು ಹಿಂಸಿಸಿದ್ದಲ್ಲದೆ, ಕುಡಿಯಲು ನೀರನ್ನು ಸಹ ಕೊಡಲಿಲ್ಲ. ಬಲವಂತವಾಗಿ ಆಹಾರ ತಿನ್ನಿಸುವ ಯತ್ನವೂ ನಡೆಯಿತು. ಆದರೂ ಜತೀಂದ್ರನಾಥ ಉಪವಾಸವನ್ನು ನಿಲ್ಲಿಸಲಿಲ್ಲ. ಗಾಂಧೀಜಿ ಮೊದಲಾದ ನಾಯಕರುಗಳು ಜತೀಂದ್ರನಾಥ ಮತ್ತು ಇತರ ಸತ್ಯಾಗ್ರಹಿಗಳ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿ ಸರ್ಕಾರದ ಮೇಲೆ ಒತ್ತಡ ಹೇರತೊಡಗಿದರು. ದಿನೇ ದಿನೇ ತೀವ್ರತರವಾಗುತ್ತಿದ್ದ ಹೋರಾಟವನ್ನು ಗಮನಿಸಿದ ಜೈಲು ಆಡಳಿತ ಯಾವುದೇ ನಿರ್ಬಂಧಗಳಿಲ್ಲದೆ ಜತೀಂದ್ರನಾಥರನ್ನು ಬಿಡುಗಡೆ ಮಾಡಬೇಕೆಂದು ಸರ್ಕಾರಕ್ಕೆ ವರದಿ ನೀಡಿತು. ಆದರೆ ಸರ್ಕಾರ ಅದಕ್ಕೆ ಒಪ್ಪದೆ ಬೇಲ್ ಮೇಲೆ ಬಿಡುಗಡೆ ಮಾಡುವುದಾಗಿ ಹೇಳಿತು. ಜತೀಂದ್ರನಾಥರು ಅದನ್ನು ಒಪ್ಪಲಿಲ್ಲ. ೧೩.೯.೧೯೨೯ ಉಪವಾಸ ಸತ್ಯಾಗ್ರಹದ ೬೩ನೆಯ ದಿನ, ಮಧ್ಯರಾತ್ರಿ ೧ ಗಂಟೆಗೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಜತೀಂದ್ರನಾಥರ ಪ್ರಾಣಪಕ್ಷಿ ಹಾರಿಹೋಯಿತು. ಸಾವಿನ ಸುದ್ದಿ ತಿಳಿದ ತಕ್ಷಣ ವೈಸರಾಯ್ Jatin Das of the Conspiracy Case, who was on hunger strike, died this afternoon at 1 p.m. Last night, five of the huunger strikers gave up their hunger strike. So there are only Bhagat Singh and Dutt who are on strike ...ಎಂದು ಲಂಡನ್ನಿಗೆ ತಂತಿ ಕಳುಹಿಸಿದ.

ಹುತಾತ್ಮ ಜತೀಂದ್ರನಾಥರ ಪಾರ್ಥಿವ ಶರೀರವನ್ನು ಲಾಹೋರಿನಿಂದ ಕಲ್ಕತ್ತಾಕ್ಕೆ ರೈಲಿನಲ್ಲಿ ತರಲಾಯಿತು. ದಾರಿಯುದ್ದಕ್ಕೂ ಪ್ರತೀ ನಿಲ್ದಾಣದಲ್ಲೂ ಸಾವಿರಾರು ಜನರು ಅಂತಿಮ ನಮನ ಸಲ್ಲಿಸುತ್ತಿದ್ದರು. ಕಲ್ಕತ್ತಾದಲ್ಲಿ ಸುಮಾರು ೬ ಲಕ್ಷ ಜನರ ಎರಡು ಮೈಲಿ ಉದ್ದ ಮೆರವಣಿಗೆಯಲ್ಲಿ ಇಡೀ ದೇಶದ ಪರವಾಗಿ ಅಂತಿಮ ನಮನ ಸಲ್ಲಿಸಲಾಯಿತು.

ಇಷ್ಟೆಲ್ಲಾ ಘಟನೆಗಳಿಂದಾಗಿ ಭಾರತದದಾದ್ಯಂತ ಸ್ವಂತಂತ್ರ ಹೋರಾಟದ ಕಿಚ್ಚು ಹೆಚ್ಚಾಯಿತು. ಬೀದಿ ಬೀದಿಗಳಲ್ಲಿ ಹರತಾಳ, ಪ್ರತಿಭಟನೆ, ಪಿಕೆಟಿಂಗ್ ನಡೆದವು. ಮೋತಿಲಾಲ್ ನೆಹರೂ ಅವರು, ಲಾಹೋರ್ ಜೈಲಿನ ಅಮಾನವೀಯ ನಡವಳಿಕೆಯನ್ನು ವಿರೋಧಿಸಿ, ನಡೆಯಬೇಕಿದ್ದ ಕೇಂದ್ರೀಯ ಅಸೆಂಬ್ಲಿಯ ಸಭೆಯನ್ನು ಮುಂದೂಡುವಂತೆ ಒತ್ತಾಯಿಸಿದ್ದಲ್ಲದೆ, ಅಸೆಂಬ್ಲಿಯಲ್ಲಿ ಗೊತ್ತುವಳಿಯನ್ನು ಮಂಡಿಸಿ ೫೫-೪೭ರ ಅಂತರದಲ್ಲಿ ಗೆಲುವಾಗುವಂತೆ ನೋಡಿಕೊಂಡರು. ಮೊಹಮದ್ ಅಲಂ, ಗೋಪಿನಾಥ ಚಂದ್ ಭಾರ್ಗವ ಮೊದಲಾದ ನಾಯಕರು ಪಂಜಾಬ್ ಲೆಜಿಸ್ಲೇಟೀವ್ ಕೌನ್ಸಿಲ್ಲಿಗೆ ರಾಜಿನಾಮೆ ನೀಡಿ ಪ್ರತಿಭಟಿಸಿದರು. Another name has been added to the long and splendid roll of Indian martyrs. Let us bow our heads and pray for strength to act to carry on the struggle, however long it may be and whatever consequences, till the victory is ours ". ಎಂದು ಜವಹರಲಾಲ್ ನೆಹರೂರವರೂ ಹೋರಾಟಕ್ಕಿಳಿದರು. ಜತೀಂದ್ರನಾಥರ ಸತ್ಯಾಗ್ರಹ ಮತ್ತು ಸಾವು, ಬ್ರಿಟೀಷ್ ಸರ್ಕಾರದ ತಾರತಾಮ್ಯ ನೀತಿಯನ್ನು, ತಣ್ಣನೆಯ ಕ್ರೌರ್ಯವನ್ನು ಜಗತ್ತಿನೆದರಿಗೆ ತೆರೆದಿಟ್ಟಿತ್ತು.

ಜತೀಂದ್ರನಾಥರ ಸಾವು ಇಡೀ ಭಾರತವನ್ನು ಅದರಲ್ಲೂ ಯುವಕರನ್ನು ಬಡಿದೆಬ್ಬಿಸಿಬಿಟ್ಟಿತ್ತು. ದಕ್ಷಿಣ ಭಾರತದ ದಕ್ಷಿಣ ಮೂಲೆಯ ಮೈಸೂರು ಸಂಸ್ಥಾನದಲ್ಲೂ ಬ್ರಿಟೀಷ್ ಸರ್ಕಾರದ ವಿರುದ್ಧ ಪ್ರತಿಭಟನೆಗಳಾಗುತ್ತಿದ್ದುವು. ಯುವಕರೇ ಹೆಚ್ಚಾಗಿ ಹೋರಾಟಕ್ಕೆ ಇಳಿದರು. ಆಗಲೇ ಈ ’ಪಾಂಚಜನ್ಯ’ ಮೊಳಗಿಬಿಟ್ಟಿತು. ’ನಡೆ ಮುಂದೆ, ನಡೆ ಮುಂದೆ, ನುಗ್ಗಿ ನಡೆ ಮುಂದೆ! ಜಗ್ಗದೆಯೆ, ಕುಗ್ಗದೆಯೆ, ಹಿಗ್ಗಿ ನಡೆ ಮುಂದೆ!’ ಎಂದು ಕರೆಯನ್ನಿತ್ತು ಕವಿತೆ ಮುಂದುವರೆಯುತ್ತದೆ.
ಬೆಚ್ಚ ಬಿಡು, ನೆಚ್ಚ ನೆಡು

ಕೆಚ್ಚದೆಯ ಗುಡಿಯಲ್ಲಿ;
ಸೆರೆಯ ಹರಿ, ಅರಿಯನಿರಿ,
ಹುಟ್ಟಳಿಸು ಹುಡಿಯಲ್ಲಿ!
ನಾನಳಿವೆ, ನೀನಳಿವೆ,
ನಮ್ಮೆಲುಬುಗಳ ಮೇಲೆ
ಮೂಡುವುದು, ಮೂಡುವುದು
ನವಭಾರತದ ಲೀಲೆ!
ನೊಂದ ದನಿ, ಕಣ್ಣಪನಿ,
ಬರಿದೆ ಎಂದೊರೆಯದಿರು!
ತೆತ್ತ ಹಣ, ಸತ್ತ ಹೆಣ
ಹೋಯ್ತೆಂದು ಮೊರೆಯದಿರು!
ಪೊಡವಿಯೊಳಡಗಿರುವ
ತಳಹದಿಯ ತೆಗಳುವರೆ?
ಮೆರೆಯುತಿರುವರಮನೆಯ
ಸಿರಿಯೊಂದ ಹೊಗಳುವರೆ?
ಎಲ್ಲ ಇದೆ, ಎಲ್ಲ ಇದೆ
ನಿತ್ಯತೆಯ ಗಬ್ಬದಲಿ;
ಮುಂದೆಯದು ತೋರುವುದು
ಬಿಡುಗಡೆಯ ಹಬ್ಬದಲಿ!
ನೆಚ್ಚುಗೆಡಬೇಡ ನಡೆ,
ಕೆಚ್ಚದೆಯ ಕಲಿಯೆ!
ಬೆಚ್ಚಿದರೆ, ಬೆದರಿದರೆ,
ಕಾಳಿಗದು ಬಲಿಯೆ?
ಭರತಖಂಡದ ಹಿತವೆ
ನನ್ನ ಹಿತ ಎಂದು,
ಭರತಮಾತೆಯ ಮತವೆ
ನನ್ನ ಮತ ಎಂದು.
ಭಾರತಾಂಬೆಯ ಸುತರೆ
ಸೋದರರು ಎಂದು
ಭಾರತಾಂಬೆಯ ಮುಕ್ತಿ
ಮುಕ್ತಿ ನನಗದೆಂದು,
ನುಗ್ಗು ಮುಂದಕೆ, ಧೀರ,
ಕಾಳೆಗದ ಕೊಲೆಗೆ!
ನುಗ್ಗು ಮರಣಕೆ, ವೀರ,
ಸಗ್ಗದಾ ನೆಲೆಗೆ!
ನೋಡದೋ ನೋಡಲ್ಲಿ: ದರ್ಪರಥದಡಿಯಲ್ಲಿ
ಹೊರಳುತಿರುವಳು ತಾಯಿ ನೆತ್ತರಿನ ಪುಡಿಯಲ್ಲಿ!
ಬಾಳನೊರೆಯಿಂದ ಹಿರಿ! ನುಗ್ಗು, ನಡೆ, ಕಟ್ಟ ಹರಿ!
ತಡೆಯ ಬಂದವರ ಇರಿ! ಒಲಿಯುವಳು ಜಯದ ಸಿರಿ!
ಜನ್ಮವೊಂದಳಿದರೇಂ? ನೂರಿಹವು ಬಲಿಗೆ!
ಕಾಳೆಗದೊಳಳಿಯಲೇಂ? ಸಾವೆ ಸಿರಿ ಕಲಿಗೆ!
ನಿಂತೇನು ನೋಡುತಿಹೆ? ಹದುಗುವರೆ ಇಲ್ಲಿ?
ಮಸಣವಾಗಲಿ ಎದೆಯು ರಣರಂಗದಲ್ಲಿ!
ನೆತ್ತರನು ನೋಡುವೆಯ? ಸತ್ತವರ ನೋಡುವೆಯ?
ಕಂಕಾಲಗಳ ಗೂಡೆ? ಮರಳುಗಳ ನೆಲೆಬೀಡೆ?
ಕಾಳಿಯಳಕುವಳೇನು ರಕ್ಕಸರ ಬಲಿಗೆ?
ಸಮರ ರಂಗದ ನಡುವೆ ಬೆದರಿಕೆಯೆ ಕಲಿಗೆ?
ಹಾ ನೋವು! ಹಾ ನೋವು!
ಎಂದೆಲ್ಲ ಕೂಗುವರೆ?
ಹಾ ನೀರು! ಹಾ ನೀರು!
ಎಂದಸುವ ನೀಗುವರೆ?
ಕೂಗಿಗೆದೆಗರಗದಿರು!
ಬೇನೆಯಿರೆ ಮರುಗದಿರು!
ಕಂಬನಿಯ ಕರೆಯದಿರು,
ಗುರಿಯ ಮರೆಯದಿರು,
ಕಲಿಯೆ, ಹಿಂಜರಿಯದಿರು,
ತಾಯ ತೊರೆಯದಿರು!
ಎಲುಬುಗಳ ತೊಲೆಗಳಲಿ
ಮಾಂಸದಾ ಮಣ್ಣಿನಲಿ
ನೆತ್ತರಿನ ನೀರಿನಲಿ
ಬೇನೆ ಬಿಸುಸುಯ್ಲಿನಲಿ
ಬಿಡುಗಡೆಯ ಸಿರಿಗುಡಿಯ
ಮಸಣದಲಿ ಕಟ್ಟು!
ಪಾವನದ ತಾಯಡಿಯ
ಬಲ್ಮೆಯಲಿ ಮುಟ್ಟು!
ಅತ್ಮವಚ್ಯುತವೆಂದು
ಜನ್ಮಗಳು ಬಹವೆಂದು
ಮೃತ್ಯ ನಶ್ವರವೆಂದು
ಭಾರತಿಗೆ ಜಯ ಎಂದು
ನಡೆ ಮುಂದೆ, ನಡೆ ಮುಂದೆ,
ನುಗ್ಗಿ ನಡೆ ಮುಂದೆ!
ಜಗ್ಗದೆಯೆ ಕುಗ್ಗದೆಯೆ,
ಹಿಗ್ಗಿ ನಡೆ ಮುಂದೆ!
ಭರತಖಂಡದ ಹಿತವೇ ನನ್ನ ಹಿತ ಎಂದು ಭರತಮಾತೆಯ ಮತವೆ ನನ್ನ ಮತ ಎಂದು... ಭಾರತಾಂಬೆಯ ಮುಕ್ತಿ ನನಗೆಂದು ನುಗ್ಗು ಮುಂದಕ್ಕೆ ಧೀರ ಕಾಳೆಗದ ಕೊಲೆಗೆ ನುಗ್ಗು ಮರಣಕೆ ವೀರಸಗ್ಗದ ನೆಲೆಗೆ ಎಂದು ಕವಿತೆ ಕರೆಕೊಡುತ್ತದೆ.

ಕವಿತೆಯ ಛಂದೋಬಂಧವೇ ಓದುಗ ಮತ್ತು ಕೇಳುಗ ಇಬ್ಬರನ್ನೂ ಬಡಿದೆಬ್ಬಿಸುವಂತಿದೆ. ೫ ೫ ಮಾತ್ರೆಯ ಪುಟ್ಟ ಪುಟ್ಟ ಪಂಕ್ತಿಗಳು ಈ ದೀರ್ಘ ಕವಿತೆಯಲ್ಲಿವೆ. ಒಂದೇ ರೀತಿಯ ಛಂದೋಬಂಧವಿದ್ದರೆ ದೀರ್ಘ ಕವಿತೆಗಳಿಗೆ ತಟ್ಟಬಹುದಾದ ಏಕತಾನತೆಯಿಂದ ಈ ಕವಿತೆ ಮುಕ್ತವಾಗಿದೆ ಎನ್ನಬಹುದು. ಕೆಲವೊಮ್ಮೆ, ಮುಕ್ತಾಯದ ಸಾಲುಗಳಲ್ಲಿ ಭಾವಕ್ಕನುಗುಣವಾಗಿ ೫ ೩ ಮಾತ್ರೆಯ ಪಂಕ್ತಿಗಳನ್ನು ತಂದಿರುವುದರಿಂದ ಕವನದ ವಾಚನ ಏರಿಳಿತದೊಂದೊಗೆ ಸಾಗುತ್ತದೆ. ಮೊದಲ ಸಾಲುಗಳಿಂದಲೇ ಈ ತಂತ್ರ ಪ್ರಯೋಗಗೊಂಡಿದ್ದು, ಫಲಪ್ರದವಾಗಿದೆ. ಎರಡೆರಡು ಸಾಲುಗಳನ್ನು ಒಟ್ಟಿಗೆ ಸೇರಿಸಿ ೫ ೫ ೫ ೫ ಮಾತ್ರೆಗಳ ಮತ್ತು ೫ ೫ ೫ ೩ ಮಾತ್ರೆಗಳ ಪಂಕ್ತಿಗಳಾಗಿಯೂ ಬದಲಾಯಿಸಿಕೊಳ್ಳಬಹುದು. ಇದರಿಂದ ಕವಿತೆ ಓಟಕ್ಕಾಗಲಿ ಅರ್ಥಕ್ಕಾಗಲಿ ತೊಂದೆರೆಯಾಗುವುದಿಲ್ಲ ಎನ್ನುವುದು ವಿಶೇಷ. (ಪ್ರಯೋಗಾರ್ಥವಾಗಿ ಒಂದು ಭಾಗವನ್ನು ಹಾಗೇ ಸಂಯೋಜಿಸಲಾಗಿದೆ.)

’ಪಾಂಚಜನ್ಯ’ ಮತ್ತು ಆ ರೀತಿಯ ಕ್ರಾಂತಿಗೀತೆಗಳನ್ನು ಹಾಡುವುದರ ಬಗ್ಗೆ, ಕುವೆಂಪು ಅವರು ಪಾಂಚಜನ್ಯದಂತಹ ಕವಿತೆಗಳನ್ನು ಸಾಭಿನಯ ವಾಚನಕ್ಕಾಗಿಯೆ ಬರೆದ್ದದ್ದು. ಸಾಧಾರಣವಾಗಿ ’ಪಾಂಚಜನ್ಯ’ ಮತ್ತು ’ಕೋಗಿಲೆ ಮತ್ತು ಸೋವಿಯೆಟ್ ರಷ್ಯಾ’ ಕವನಸಂಗ್ರಹಗಳಲ್ಲಿರುವ ಕವನಗಳೆಲ್ಲ ವಾಚನ ಜಾತಿಗೆ ಸೇರಿವೆ, ಗಾಯನ ಜಾತಿಗಲ್ಲ. ಆದರೂ ಕೆಲವರು, ಅದರಲ್ಲಿಯೂ ಇತ್ತೀಚಿಗೆ ರೇಡಿಯೋ ಪ್ರಚಾರಕ್ಕೆ ಬಂದ ಮೇಲೆ, ಅವುಗಳನ್ನು ಗಾಯನ ಮಾಡುತ್ತಿರುವುದನ್ನು ಆಲಿಸಿ ತುಂಬ ನೊಂದುಕೊಂಡಿದ್ದೇನೆ. ಎನ್ನುತ್ತಾರೆ

ಆಗ ಕುವೆಂಪು ತಾವು ಬರೆಯುತ್ತಿದ್ದ ದಿನಚರಿ, ಪತ್ರಗಳು, ಕವಿತೆಗಳು ಮೊದಲಾದುವುಗಳ ತುದಿಯಲ್ಲಿ ’ಓಂ ಕ್ರಾಂತಿಃ ಕ್ರಾಂತಿಃ ಕ್ರಾಂತಿಃ’ ಎಂದು ಬರೆಯುತ್ತಿದ್ದರು. ಪಾಂಚಜನ್ಯವನ್ನು ಮೊದಲು ಪ್ರಕಟಿಸಿದ ’ವಿಶ್ವಕರ್ಣಾಟಕ’ ಪತ್ರಿಕೆಯ ಸಂಪಾದಕರಿಗೆ ಬರೆದಿದ್ದ ಪೋಸ್ಟ್ ಕಾರ್ಡಿನಲ್ಲೂ ಈ ಕ್ರಾಂತಿ ಬೀಜಾಕ್ಷರಗಳನ್ನು ಕಂಡು, ತಿ.ತಾ.ಶರ್ಮರು ’ಅಷ್ಟು ಬಟ್ಟಬಯಲಾಗಿ ಬರೆಯಬಾರದು’ ಎಂದು ಕವಿಯ ಹಿತಕ್ಕಾಗಿ ಹೇಳಿದ್ದರಂತೆ. ಕುವೆಂಪು ಈ ಕ್ರಾಂತಿಗೀತೆಯನ್ನು ಬರೆದು ಸಭೆಗಳಲ್ಲಿ ವೀರಾವೇಶದಿಂದ ಅಭಿನಯಪೂರ್ವಕವಾಗಿ ವಾಚಿಸುತ್ತಿದ್ದರು. ಸಭೆಗಳಲ್ಲಿ ಮಾತ್ರವಲ್ಲದೆ ಜೈಲಿನ ಒಳಗೂ ’ಪಾಂಚಜನ್ಯ’ ಕವಿತೆ ಕ್ರಾಂತಿಗೀತೆಯಾಗಿ ಕೇಳತೊಡಗಿತು.

ಸ್ವತಂತ್ರಹೋರಾಟದ ಸಭೆ ಸಮಾರಂಭಗಳಲ್ಲಿ, ಸೆರೆಮನೆಗಳಲ್ಲಿ, ಪ್ರತಿಭಟನಾ ಮೆರವಣಿಗೆಯಲ್ಲಿ ಮೊಳಗುತ್ತಿದ್ದ ಈ ಕ್ರಾಂತಿಗೀತೆ ಬ್ರಿಟಿಷ್ ಆಡಳಿತದ ಕಿವಿಗೂ ಬಿದ್ದಿತ್ತು. ಬ್ರಿಟಿಷರ ಪರವಾಗಿ ದೇಶೀಯ ಸಂಸ್ಥಾನಗಳಲ್ಲಿ ಬೇಹುಗಾರಿಕೆ ನಡೆಸುತ್ತಿದ್ದ ರೆಸಿಡೆಂಟ್ ’ರಾಜದ್ರೋಹದ ವಸ್ತುವನ್ನು ಪ್ರಕಟಿಸಿದ್ದಕ್ಕಾಗಿ’ ಎಂದು ವಿಶ್ವಕರ್ಣಾಟಕ ಪತ್ರಿಕೆಯ ಸಂಪಾದಕರಿಗೆ ನೋಟೀಸು ಕೊಟ್ಟೇಬಿಟ್ಟ! ಪಾಂಚಜನ್ಯವನ್ನು ಇಂಗ್ಲಿಷಿಗೆ ಭಾಷಾಂತರ ಮಾಡಲು ಹಾಗೂ ಅದರಲ್ಲಿರುವ ರಾಜದ್ರೋಹದ ವಿಷಯವನ್ನು ತೋರಿಸಲು ಮೈಸೂರು ಸರ್ಕಾರದ ಅಧಿಕೃತ ಭಾಷಾಂತರ ಇಲಾಖೆಗೆ ಕಳುಹಿಸಲಾಯಿತು. ಆದರೆ, ಅಲ್ಲಿ ಭಾಷಾಂತರಕಾರರಾಗಿದ್ದವರು ಸಿ.ಕೆ.ವೆಂಕಟರಾಮಯ್ಯ ಎಂಬ ದೇಶ ಭಕ್ತರು! ಅವರು ಪಾಂಚಜನ್ಯವನ್ನು ಭಾಷಾಂತರಿಸಿ ಅದರಲ್ಲಿ ಸಾಮಾನ್ಯವಾದ ದೇಶಭಕ್ತಿಯ ವಿಚಾರವಿದೆಯೆಂದೂ ಯಾವ ದೇಶವನ್ನಾಗಲಿ ಸರ್ಕಾರವನ್ನಾಗಲಿ ಜನಾಂಗವನ್ನಾಗಲಿ ಹೆಸರಿಸಿಲ್ಲವೆಂದೂ, ಆದ್ದರಿಂದ ಕಾನೂನು ಪ್ರಕಾರಕ್ಕೆ ಅದು ಒಳಗಾಗುವಂತಿಲ್ಲವೆಂದೂ ಉತ್ತರ ನೀಡಿದ್ದರು.