Wednesday, May 07, 2014

ಅನಲೆ : ನಿನ್ನ ಮಗಳಲ್ತು, ಇವಳ್ ಎನ್ನ ಮಗಳ್! ಭಾಗ - 2

ಹಿಂದಿನ ಸಂಚಿಕೆ :  ಗಾನಮಲ್ತು; ಅನುರೋಧನಂ! .....
ನಮಗೆ ಅನಲೆಯೆ ದಿಟಂ! 
ಲಂಕೆಯಿಂದ ತೆರಳಿದ ವಿಭೀಷಣನಿಗೆ ಲಂಕೆಯ ಸಮಾಚಾರವನ್ನು ದೊಡ್ಡಯ್ಯನ ಮನಸ್ಥಿತಿಯನ್ನು ಆಗಾಗ ಪತ್ರಮುಖೇನ ತಿಳಿಸುವ ಕೆಲಸವನ್ನೂ ಅನಲೆ ಮಾಡುತ್ತಾಳೆ. ಮುಂದೆ ಮತ್ತೆ ನಮಗೆ ಅನಲೆಯ ದರ್ಶನವಾಗುವುದು, ಯುದ್ಧ ಆರಂಭವಾದ ಮೇಲೆ ರಾವಣ, ಸೀತೆಯನ್ನು ಭೇಟಿಯಾದಾಗ. ಆದರೆ ಅದು ನಮಗೆ ತಿಳಿಯುವುದು ಮಂಡೋದರಿ-ರಾವಣರ ನಡುವೆ ನಡೆಯುವ ಸಂಭಾಷಣೆಯ ಮೂಲಕ. ಅವರಿಬ್ಬರ ಸಂಭಾಷಣೆಯ ನಡುವೆಯೂ ’ಅನಲೆ’ ಎಂಬ ಹೆಸರು ಮಿಂಚಿನ ಸಂಚಾರವನ್ನುಂಟು ಮಾಡುತ್ತದೆ. ರಾವಣನ ಮನಸ್ಸನ್ನು ಆರ್ದ್ರವಗೊಳಿಸುತ್ತದೆ. ’ಸೀತೆಯನ್ನು ಒಬ್ಬನೇ ಹೋಗಿ ಕಂಡಿದ್ದೇಕೆ?’ ಎಂದು ಮಂಡೋದರಿ ಕಳವಳಗೊಳ್ಳುತ್ತಾಳೆ. ಸೀತೆಯ ರಕ್ಷಣೆಗೆ ಆಕೆಯೂ ತಪೋರಕ್ಷೆಯನ್ನು ಕಟ್ಟಿದ್ದಾಳೆ. ಆಕೆಯ ಕಳವಳವನ್ನು ನಿವಾರಿಸುತ್ತ ರಾವಣ, ’ಇಂದ್ರಜಿತುವಿನ ಮಾಯೆಗೆ ಸಿಲುಕಿ ರಾಮಲಕ್ಷ್ಮಣ ಸಹಿತ ಕಪಿಸೇನೆಗೆ ಆದ, ಹಿಂದಿನ ದಿನದ ಸೋಲನ್ನು ಹೇಳಲು ಹೋಗಿದ್ದೆ. ಅಲ್ಲಿ ತ್ರಿಜಟೆಯಿದ್ದಳು, ಅನಲೆಯಿದ್ದಳು’ ಎನ್ನುತ್ತಾನೆ. "ಪೇಳ್ದಳ್ ಎನಗೆ ಅನಲೆ ಬೇರೊಂದು ಕಥೆಯಂ" ಎಂದು ಮಂಡೋದರಿ ಅನಲೆಯ ಮಾತೆತ್ತಿದಾಗ, ರಾವಣ ಸಿಡಿಮಿಡಿಗೊಳ್ಳುವುದಿಲ್ಲ; ಬದಲಾಗಿ ತನ್ನ ಹೃದಯವನ್ನೇ, ಮನದಕುದಿತವನ್ನೇ ಮಂಡೋದರಿಯ ಮುಂದೆ ತೆರೆದಿಡುತ್ತಾನೆ. ಹಿಂದಿನ ರಾತ್ರಿ ತನಗೆ ಬಿದ್ದಿದ್ದ ಕನಸು, ಅದರಲ್ಲಿ ’ವೇದವತಿ’ ಚಿತೆಗೆ ಬಿದ್ದದ್ದು, ನೋಡುತ್ತಾ ನೋಡುತ್ತಾ ಆ ವೇದವತಿಯೇ ಸೀತೆಯಂತೆ ಕಂಡಿದ್ದು ಅದರಿಂದ ತನಗಾದ ನಡುಕ ಎಲ್ಲವನ್ನೂ ಹೇಳುತ್ತಾನೆ. ಆ (ಸೀತೆಯೂ ಸತ್ತುಹೋದಳೆ ಎಂಬ) ಭಯದಿಂದಲೇ ಬೆಳಿಗ್ಗೆ ಆತ ಅಶೊಕವನಕ್ಕೆ ಹೋಗಿ ಮನಸ್ಸಿನ ಕಳವಳವನ್ನು ದೂರಮಾಡಿಕೊಂಡಿರುತ್ತಾನೆ, ರಾವಣ. ಆಗ, ಮಂಡೋದರಿ ’ಅದು ನಿನ್ನಂತರಾತ್ಮದ ಶುದ್ಧ ಸಂದೇಶ, ಅದನ್ನು ದಿಕ್ಕರಿಸದಿರು’ ಎಂದು ಹೇಳುತ್ತ, ಅನಲೆ ತನಗೆ ಹೇಳಿದ್ದ ಘಟನೆಯನ್ನು ’ಅದು ನಿಮ್ಮ ಕನಸಿಗಿಂತ ಮಿಗಿಲು’ ಎಂದು ಕೆಳಗಿನಂತೆ ಹೇಳುತ್ತಾಳೆ.
ತ್ರಿಜಟೆ ತನ್ನ ಕೈಂಕರ್ಯಮಂ ಮುಗಿಸಿ ಮಲಗಿದಳಂತೆ.
ದೇವಿ ಕಣ್ಮುಚ್ಚದೆಯೆ ಭೀಷ್ಮ ಮೌನವನಾಂತು
ತನ್ನೊಳಗೆ ತಾಂ ಪೊಕ್ಕ ಯೋಗಿನಿವೋಲಿರಲ್
ಕಂಡುದು ಅನಲೆಯ ಕಣ್ಗೆ ಪರ್ಣಶಾಲೆಯ ತುಂಬಿದೊಂದನುಪಮಜ್ಯೋತಿ.
ರೋಮಾಂಚ ಕಂಚುಕಿತ ಗಾತ್ರೆ ನೋಡುತ್ತಿರಲ್,
ಬಾಹ್ಯಸಂಜ್ಞಾಶೂನ್ಯೆ ಆ ಸೀತೆ ತೊಡಗಿದಳ್
ಆರೊ ನುಡಿಸಿದವೊಲಾಗಿ ಸಂವಾದಮಂ.
ಆ ಪೂಜ್ಯೆ ಅಲ್ಲಿರ್ದುಂ ಎಲ್ಲೆಲ್ಲಿಯುಂ ಚರಿಸುತಿರ್ದಂತೆ,
ಅಲ್ಲಿರ್ದುಂ ಎಲ್ಲಮಂ ಕಾಣುತಿರ್ದಂತೆ,
ಮೇಣ್ ಅಲ್ಲಿ ತಾಟಸ್ಥ್ಯಮಂ ತಾಳ್ದಳೋಲಿರ್ದೊಡಂ ದೂರಮಿರ್ದು
ಇತರರ ಜಗತ್ ಕ್ರಿಯಾಚಕ್ರಮಂ ನಡೆಪವೋಲ್ ಆಚರಿಸುತಿರ್ದಳಂ
ಕಂಡು ಅನಲೆ ಮೆಯ್ಮರೆತಳಂತೆ ಭಯರಸವಶೆ!
ಅನಂತರಂ ಹದಿಬದೆಯ ಕಯ್ಯ ಸೋಂಕಿಗೆ ಅನಲೆ ಕಣ್ದೆರೆಯೆ,
ರಾಮಸತಿ ’ಅಭೀತಯಾಗಲೆ ವತ್ಸೆ, ನೀಂ ಕಂಡ ದೈವಿಕಕೆ.
ನಿನ್ನಯ್ಯನುಪಕೃತಿಗೆ ಬರ್ದುಕಿತೌ ನನ್ನಯ್ದೆದಾಳಿ.
ಕಂಟಕಮೊಂದು ಕಳೆದುದೌ ಪ್ರಭು ರಾಮಚಂದ್ರಂಗೆ!’
ಎನುತೆ ಸಂತೈಕೆಯಂ ಪೇಳ್ದ
ಪಾವನೆಯ ಪದತಲಕೆ ನಮಿಸಿದಳಂತೆ ನಮ್ಮ ಅನಲೆ!
ಪತಿಯ, ಮೈದುನನ, ಮತ್ತವರ ಸೈನ್ಯಕ್ಕೆ ತಪೋರಕ್ಷೆ ಕಟ್ಟುವುದನ್ನು ಬಿಟ್ಟು ಸೀತೆ ಬೇರೆನನ್ನೂ ಮಾಡಲಾರಳು. ಅವಳೇ ಹೇಳಿದಂತೆ, ಅವಳು ಅಸ್ವತಂತ್ರಳು. ಆದರೆ ತಪಕೆ ಬಂಧನದ ಭೀತಿಯಿಲ್ಲ! (ತಪಸ್ಸು ಎಂಬುದನ್ನು ’ಸತ್ಯ-ಅಹಿಂಸೆ’ಗೆ ಅನ್ವಯಿಸಿಕೊಂಡರೆ, ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿಜಿಯ ಮಾರ್ಗವೂ ಇದೇ ಆಗಿತ್ತು ಅನ್ನಿಸುತ್ತದೆ). ಆ ಕ್ಷಣ, ಸೀತೆ ಅಲೌಕಿಕ ಸ್ಥಿತಿಯಲ್ಲಿದ್ದ ಹೊತ್ತು, ಅತ್ತ ರಾಮಸೈನ್ಯಕ್ಕೆ ಎದುರಾಗಿದ್ದ ಕಂಟಕ ದೂರವಾಗಿತ್ತು. ರಾಮನ ಜೀವಕ್ಕೆ ಬಂದ ಆಪತ್ತು ದೂರವಾಗಿತ್ತು. ಅದಕ್ಕೆ ಅನಲೆಯ ತಂದೆ ವಿಭೀಷಣನ ಸಹಾಯ ಹಸ್ತವಿತ್ತು. ಅದನ್ನೇ ಸೀತೆ ಅನಲೆಗೆ ಹೇಳಿದ್ದಾಳೆ. ಅನಲೆ ತಾನು ಕಂಡದ್ದನ್ನು ಮಂಡೋದರಿಗೆ ಹೇಳುವಲ್ಲಿಯೂ, ಮಂಡೋದರಿ ರಾವಣನಿಗೆ ಹೇಳುವಲ್ಲಿಯೂ, ಅನಲೆ-ಮಂಡೋದರಿಯರ ರಾವಣೋದ್ಧಾರದ ತುಡಿತವನ್ನು ಅರ್ಥ ಮಾಡಿಕೊಳ್ಳಬಹುದು. ಅದನ್ನೆ ತಿರುಚಿ, ರಾವಣನನ್ನು ಕೆರಳಿಸುವಂತೆ ಹೇಳಿ ಆತನ ಮೆಚ್ಚುಗೆ ಪಡೆಯುವವರಾಗಿದ್ದರೆ ಹಾಗೆ ಮಾಡಬಹುದಿತ್ತೇನೊ? ಆದರೆ ಅವರಿಬ್ಬರೂ ರಾವಣನ ಆತ್ಮೋದ್ಧಾರವೇ ತಮ್ಮ ಉದ್ಧಾರವೆಂದು ಭಾವಿಸಿದವರಾಗಿದ್ದಾರೆ. ಈ ವಿಷಯವನ್ನು ಅನಲೆಯಲ್ಲದೆ ಬೇರೆಯವರು ಹೇಳಿದ್ದು ಎಂದಿದ್ದರೆ ರಾವಣನ ಪ್ರತಿಕ್ರಿಯೆ ಹೇಗಿರುತ್ತಿತ್ತೊ? ಏನೊ? ಆದರೆ ಅನಲೆಯ ಹೆಸರೇ ಆತನನ್ನು, ಆತನ ಚಿಂತನಾಶಕ್ತಿಯನ್ನು ಮತ್ತೆ ಮತ್ತೆ ಊರ್ಧ್ವಮುಖಿಯನ್ನಾಗಿಸುತ್ತದೆ. ತಾನು ಮುಂದಿಟ್ಟ ಹೆಜ್ಜೆಯನ್ನು ಹಿಂದೆ ಸರಿಸದೆಯೂ, ಅನಲೆಯ ಮೇಲಿನ ತನ್ನ ಪ್ರೇಮವನ್ನು ಕಡಿಮೆ ಮಾಡಿಕೊಳ್ಳದೆಯೂ, ಆಕೆಯ ವರದಿಗೆ ರಾವಣ ಕೆಳಗಿನಂತೆ ಪ್ರತಿಕ್ರಿಯಿಸುತ್ತಾನೆ.
ಅನಲೆ!
ನಮಗೆ ಅನಲೆಯೆ ದಿಟಂ!
ರಾಮಪಕ್ಷಕಾ ತಂದೆ; ಸೀತೆಯ ಪಕ್ಷಕೀ ಮಗಳ್!
ಇರ್ವರುಂ ದ್ರೋಹಿಗಳ್! ಅಕ್ಕರೆಯೆ ನನಗಿಕ್ಕಿದುರಿಯಾಯ್ತು!
ಬೇಡವೆಂದೆನ್. ಬಿಡದೆ ಬೇಡಿದಳ್; ಕಾಡಿದಳ್
ನೋಡಿಬರುವಾಸೆಗೆ ಆಣತಿಯಿತ್ತೆನ್ ಒಪ್ಪಿದೆನ್;
ಮಾಡಿದಳ್ ಮನೆಯನ್ ಅಶೋಕವನದೊಳ್!
ಕಟ್ಟು ಕತೆಗಳನ್ ಕಟ್ಟಿ, ಕಣ್ಣಾರೆ ಕಂಡುದೆನುತ್ತೆ, ಮತಿಗೆಟ್ಟು ನಂಬುವಳ್;
ನಂಬಿಸುವಳ್ ಇತರರಂ; ಪೆಣ್ಗಳೊಳ್ ಪ್ರಕಟಿಸುವಳ್ ಅಪಧೈರ್ಯಮಂ!
ಆ ಅಣುಗಿ ಬೆಪ್ಪಾಡಿದುದನೆಲ್ಲಮಂ ನೀನುಂ ಒಪ್ಪಿದೆಯಲಾ, ಅದೆ ಸೋಜಿಗಂ!
ನಿನ್ನೆ ಬದುಕಿದನಲಾ ಶತ್ರು; ಇಂದಿನ ರಣದಿ ಕಾಣ್ಬೆ
ನಿನ್ನ ತಲೆಗೆಟ್ಟ ಅನಲೆಯಾ ಕಟ್ಟಿರ್ಪ ಕತೆಯ ಪೊಳ್ಳಂ.
ರಾವಣನ ಈ ಮಾತುಗಳಲ್ಲಿ ಅನಲೆಯ ಬಗ್ಗೆ ಆತನಿಗಿದ್ದ ಪ್ರೀತಿ ಅತ್ಯಂತ ಸ್ಫುಟವಾಗಿ ವ್ಯಕ್ತವಾಗಿದೆ. ಅಂತಹ ಸುದ್ದಿಯನ್ನು ತಂದು ಮಂಡೋದರಿಗೆ ಹೇಳಿದ್ದಕ್ಕೆ ಅನಲೆಯ ಮೇಲೆ ಆತನಿಗೆ ಕೋಪ ಬರುವುದಿಲ್ಲ. ಅದೊಂದು ಹುಡುಗಾಟಿಕೆ ಅನ್ನಿಸಿದೆ ಎನ್ನುವಂತೆ ಆಕೆಯ ಬಗ್ಗೆ ಮಾತನಾಡುತ್ತಾನೆ. ’ದ್ರೋಹಿಗಳ್’ ಎನ್ನುವಲ್ಲಿಯೂ ಕಾಠಿಣ್ಯದೊರತೆಯಿಲ್ಲ! ಅನಲೆ ಹೇಳಿದ್ದಕ್ಕಿಂತ, ಅದನ್ನು ನಂಬಿರುವ ಮಂಡೋದರಿಯ ಬಗ್ಗೆಯೇ ಆತನಿಗೆ ಹೆಚ್ಚು ಆಕ್ಷೇಪಣೆ ಇದ್ದಂತೆ ಕಾಣುತ್ತದೆ! ಆಕೆಯನ್ನು ’ಅಣುಗಿ’ ಎಂದು ಕರೆದಿರುವುದರಲ್ಲೂ ರಾವಣನ ಮನಸ್ಸನ್ನು ಓದಿಕೊಳ್ಳಬಹುದು. ಆದರೆ, ರಾವಣ ರಾಜನೂ ಹೌದು; ಚತುರನೂ ಹೌದು. ಅದಕ್ಕೆ ಆತನ ಅಂತರಂಗ, ಕೇವಲ ಆಕೆಯ ಮಾತುಗಳನ್ನು ಕಟ್ಟುಕತೆಯೆಂದು ನಿರಾಕರಿಸುವುದಿಲ್ಲ, ಅದರ ಪರಿಣಾಮಗಳನ್ನು ಚಿಂತಿಸುತ್ತಾನೆ. ’ನಮಗೆ ಅನಲೆಯೆ ದಿಟಂ’ ಎಂಬ ಮಾತಿನಲ್ಲಿ ಅದು ವ್ಯಕ್ತವಾಗಿದೆ. ಅನಲ ಎಂದರೆ ಅಗ್ನಿ, ಬೆಂಕಿ ಎಂದರ್ಥ. ಅಗ್ನಿ ಸೃಷ್ಟಿ-ನಾಶ ಎರಡಕ್ಕೂ ಸಂಬಂಧಿಸಿದ್ದಲ್ಲವೆ? ಇಲ್ಲಿ ರಾವಣನ ಮಾತನ್ನು ಎರಡೂ ಅರ್ಥದಲ್ಲಿಯೂ ಗಮನಿಸಬಹುದು. ತಮ್ಮೊಳಗಿನ ದುಷ್ಟತೆಯನ್ನು, ಅಳುಕನ್ನು, ಕೊಳಕನ್ನು ನಾಶಪಡಿಸುವುದರಿಂದಲೂ ಆಕೆ ಅಗ್ನಿ; ನಮ್ಮ ಆತ್ಮೋದ್ಧಾರಕ್ಕಾಗಿಯೇ ಆಕೆಯ ಪ್ರಯತ್ನವಿರುವುದರಿಂದಲೂ ಆಕೆ ಅಗ್ನಿ! ’ಎನ್ನ ಮಗಳ್ ಇವಳ್’ ಎಂದು ಅಭಿಮಾನದಿಂದ ರಾವಣ ಹೇಳಿದ ಮಾತಿಗೆ ಸಾಕ್ಷಿಯೊದಗಿಸುವಂತೆ ಬಂದಿವೆ ಮೇಲಿನ ಮಾತುಗಳು. ಮುಂದೆ ಚಾರನೊಬ್ಬ ಬಂದು, ಅಂದಿನ ಯುದ್ಧದ ವಾರ್ತೆಯನ್ನು, ತಮಗೊದಗಿರುವ ಯಶಸ್ಸನ್ನು ತಿಳಿಸುತ್ತಾನೆ. ರಾವಣ, ಮಂಡೋದರಿಯನ್ನು ನೋಡಿ ವಿಜಯದ ನಗೆ ಬೀರುತ್ತಾನೆ. ತಾನು ಅಲ್ಲಿಂದ ಹೊರಡುವ ಮುಂಚೆ ಮಂಡೋದರಿಗೆ ಆತ ಹೇಳುವ ಮಾತುಗಳಿವು.
ಸೀತೆಯಂ ಸಾಯದವೊಲ್
ಎಂತಾದಡಂ ಪೊರೆಯವೇಳ್ಕುಂ
ಆ ಅನಲೆಗೆ ಎನ್ನಾಜ್ಞೆಯಂ ಪೇಳ್, ದೇವಿ.
ಇನ್ನೆನಗೆ ರಣದ ಮೋಹವೆ ಮೋಹಂ
ಆ ಜಾನಕಿಯ ಮೇಲೆ ಮುನ್ನಿರ್ದ ಮೋಹಮೆಲ್ಲಂ
ತಿರುಗಿಹುದು ರಣದ ಮಧುರತರ ಸಾಹಸಕೆ!
ರಾಮನ ಪಡೆಗೆ, ತನ್ಮೂಲಕ ರಾಮನಿಗೆ ಸೋಲಾದರೆ ಸೀತೆ ಬದುಕುವುದಿಲ್ಲ ಎಂಬ ಭಯ ಆತನಿಗಿದೆ. ಸೀತೆ ಸಾಯುವುದು ಆತನಿಗೆ ಬೇಕಿಲ್ಲ. ಏಕೆಂದರೆ, ಆತನ ಮುಂದಿನ ಬಟ್ಟೆ ಈಗಾಗಲೇ ನಿರ್ಧಾರವಾಗಿಬಿಟ್ಟಿದೆ. ರಾವಣ ಬದಲಾಗಿದ್ದಾನೆ ಎಂಬುದಕ್ಕೆ, ಹಾಗೂ ತನ್ನ ಕಾರ್ಯಸಿದ್ಧಿಗೆ ಅನಲೆಯನ್ನೇ ಆಶ್ರಯಿಸಿದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿವೆ, ಈ ಮಾತುಗಳು.

[ನಾಳೆ : ದೂರಮಿರದಿನ್ ದಿಟಂ ಮಹಾತ್ಮಂಗೆ ಸುಗತಿ!]

Tuesday, May 06, 2014

ಅನಲೆ : ನಿನ್ನ ಮಗಳಲ್ತು, ಇವಳ್ ಎನ್ನ ಮಗಳ್! ಭಾಗ - 1

ಹಿಂದಿನ ಸಂಚಿಕೆ : ಯಾರೀ 'ಅನಲಾ'!?

ಗಾನಮಲ್ತು; ಅನುರೋಧನಂ! .....
ಸುಗ್ರೀವನ ಆಜ್ಞೆಯನ್ನು ಹೊತ್ತು, ರಾಮನಿತ್ತ ಮುದ್ರಿಕೆಯನ್ನು ಆಂತು, ಸಾಗರವನ್ನು ಉಲ್ಲಂಘಿಸಿ, ಸೀತಾನ್ವೇಷಣೆಗಾಗಿ ಲಂಕೆಗೆ ಬಂದಿಳಿದ ಆಂಜನೇಯನಿಗೆ, ‘ಸಂಸ್ಕೃತಿ ಲಂಕಾ’ ಅಚ್ಚರಿಯ ಕಡಲಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಸೀತೆಯನ್ನು ಹುಡುಕುತ್ತಾ ಲಂಕೆಯ ಪ್ರಮುಖ ಮನೆಗಳೆಲ್ಲವನ್ನೂ ಶೋಧಿಸುತ್ತಾ ಬರುತ್ತಾನೆ. ಅರಮನೆಯಲ್ಲಿ ರಾವಣನೊಂದಿಗೆ ಇದ್ದ ಮಂಡೋದರಿಯನ್ನೇ ಸೀತೆಯೆಂದು ಭಾವಿಸುತ್ತಾನೆ, ಕೊನೆಗೆ ನಿಜವನ್ನರಿಯುತ್ತಾನೆ. ಅಲ್ಲಿಂದ ಮುಂದೆ ಬಂದವನಿಗೆ ಕಂಡದ್ದು ರಾವಣನ ಮಗ ಇಂದ್ರಜಿತು ಮತ್ತವನ ಸಂಸಾರ. ಧೂಮರೂಪವನ್ನು ತಳೆದು ಸಂಚರಿಸುತ್ತಿದ್ದ ಆಂಜನೇಯನ ಕಾರಣದಿಂದ ದಟ್ಟಯಿಸಿದ ಹೊಗೆಗೆ ತೂಗುತೊಟ್ಟಿಲಿನಲ್ಲಿ ಅಳಲಾರಂಭಿಸಿದ ವಜ್ರಾರಿಯನ್ನು ಆತನ ತಾಯಿ ತಾರಾಕ್ಷಿ ಸಂತಯಿಸುತ್ತಿದ್ದಾಳೆ. ಅವಳಿಗೆ ಅದೊಂದು ಅಪಶಕುನದಂತೆ ಭಾಸವಾಗಿದೆ. ಇಂದ್ರಜಿತು ಅವಳಿಗೆ ನೆರವಾಗುತ್ತಾ, ತನ್ನ ಕಂದನ ಅಳು ಹಾಗೂ ಹೆಂಡತಿಯ ಭಯಕ್ಕೆ ಸ್ಪಂದಿಸುತ್ತಿದ್ದಾನೆ. ಆವರಿಸಿರವ ದಟ್ಟ ಹೊಗೆಯನ್ನು ಗಮನಿಸಿದ ಆತ, "ಏನಿದು? ಧೂಫಧೂಮಮೇಂ? ಇಂತು ಪೊಗೆ ಅಡಸಿದೊಡೆ ನಿದ್ದೆ ಅಚ್ಚರಿಯಲ್ತೆ ಕಂದಂಗೆ?" ಎಂದು ಚಾರರಿಗೆ ಗವಾಕ್ಷಗಳನ್ನು ತೆರೆಯಲು ಆದೇಶಿಸುತ್ತಾನೆ. ಅದು ಅಪಶಕುನದಂತೆ ಕಂಡುದೇಕೆಂದು ತಾರಾಕ್ಷಿ ಹೇಳುತ್ತಾಳೆ.
ಪೋದ ಬೈಗಿನೊಳು,
ಪತ್ತನದ ಉತ್ತರದ ಗಿರಿಯ ಲಂಬವೆಂಬಾ ಶಿಖರದತ್ತಣ್ಗೆ
ಬಿದ್ದುದು ಒಂದು ಮಹೋಲ್ಕೆ.
ಎಮ್ಮ ಉದ್ಯಾನ ಕೃತಕ ಶೈಲಾಗ್ರದಿಂ ಕಂಡೆನ್
ಆಂ ಅನಲಾಕುಮಾರಿಯೊಡನಿರ್ದು
ಕನಕಲಂಕಾನ್ವೇಷಣೆಯಲ್ಲಿ ಆಂಜನೇಯನೊಂದಿಗಿದ್ದು ಸಂಚರಿಸುತ್ತಿದ್ದ ಸಹೃದಯರಿಗೆ ಮೊದಲ ಬಾರಿಗೆ ಅನಲಾ ಎಂಬ ಹೆಸರು ಎದುರಾಗುತ್ತದೆ. (’ರಾಮಾಯಣದರ್ಶನಂ’ನಲ್ಲಿ ರಾವಣನ ಹೆಸರು ಮೊದಲು ಕೇಳುವುದು ವಿಶ್ವಾಮಿತ್ರನ ಬಾಯಲ್ಲಿ, ಅದೂ ದಶರಥನ ಸಭೆಯಲ್ಲಿ!) ಯಾರು ಈ ಅನಲೆ? ರಾವಣನ ಸೊಸೆ ತಾರಾಕ್ಷಿಯ ಜೊತೆಗಿದ್ದಾಳೆ. ತಾರಾಕ್ಷಿ ಅವಳನ್ನು 'ಅನಲಾಕುಮಾರಿ’ ಎಂದು ಗೌರಪೂರ್ವಕವಾಗಿ ಸಂಬೋಧಿಸುತ್ತಿದ್ದಾಳೆ? ಎಂಬ ಅನುಮಾನಗಳು ಏಳಲು ಶುರುವಾಗುತ್ತವೆ. ಅದಕ್ಕೆ ಮತ್ತೆ ಮುಂದೆ ಇಂದ್ರಜಿತುವಿನ ಮಾತಲ್ಲಿ ಉತ್ತರ ಸಿಗುತ್ತದೆ. ಮಹಾಉಲ್ಕೆ ಬಿದ್ದದ್ದು ಅಪಶಕುನ ಎಂದು ಬಗೆದ ಮಡದಿಯ ಭೀತಿಯನ್ನು ನಿವಾರಿಸಿ, ’ಧನುರ್ವಿದ್ಯೆಯಂ ಪೇಳ್ವ ವೇದಮಂ’ ಓದಲು ಮುಂದಾಗಿದ್ದ ಇಂದ್ರಜಿತುವನ್ನು ತಾರಾಕ್ಷಿ ತಡೆದು,
....ರಾಮಸತಿಯಂ ಮಾವನ್ ಅಪಹರಿಸಿ ತಂದಾ ಮೊದಲ್ಗೊಂಡು
ತೋರುತಿವೆ ದುಶ್ಯಕುನಗಳ್. ನನಗೊ ದುಃಸ್ವಪ್ನಮಯಂ ಇರುಳ್.
ಆ ಮಹಾ ತಾಯಿಯನ್ ಹದಿಬದೆಯರಧಿದೇವಿಯಂ
ಮಾವನೆಂತಕ್ಕೆ ತಂದಾಯ್ತು.
ವಶವಾಗದವಳನ್ ಇನ್ನಾದಡೊಂ ಹಿಂದಕೊಪ್ಪಿಸುವಂತೆ
ತಿದ್ದಬಾರದೆ ನಿಮ್ಮಾ ತಂದೆಯಂ
ಎಂದು ಪ್ರಶ್ನಿಸುತ್ತಾಳೆ. ಸೀತೆಯ ಸಂಕಷ್ಟವನ್ನು ತಾರಾಕ್ಷಿ ಅರ್ಥಮಾಡಿಕೊಳ್ಳಬಲ್ಲಳು. ಆಕೆ ರಾವಣನ ನಿರ್ಧಾರವನ್ನು ತನ್ನ ಗಂಡನ ಮುಂದಾದರೂ ಪ್ರಶ್ನಿಸಬಲ್ಲಳು. ಆದರೆ, ಇಂದ್ರಜಿತು ರಾವಣನ ಮಗ. ಆತನಿಗೆ ತನ್ನ ತಂದೆ ಮಾಡಿದುದೇ ಸರಿ. ಅದಕ್ಕೆ ಆತ ತನ್ನ ಪತ್ನಿಯ ವಿರುದ್ಧ ಸಿಡಿಮಿಡಿಗೊಳ್ಳುತ್ತಾನೆ. ಆ ಸಿಡಿಮಿಡಿಯಲ್ಲೂ ಮುದ್ದಿರುತ್ತದೆ! ತನ್ನ ಪ್ರೀತಿಯ ಮಡದಿ ಇಷ್ಟೊಂದು ಮುಂದುವರೆದು ಯೋಚಿಸಬಲ್ಲಳು ಎಂಬುದೇ ಅವನಿಗೊಂದು ಸೋಜಿಗ. ಆ ಸೋಜಿಗಕ್ಕೆ ಆತ ಕಂಡಕೊಂಡ ಉತ್ತರವೇ 'ಅನಲೆ’! ಅವಳ ಸಹವಾಸದಿಂಲೇ ತಾರಾಕ್ಷಿ ಹೀಗೆಲ್ಲಾ ಯೋಚಿಸಬಲ್ಲವಳಾಗಿದ್ದಾಳೆ ಎಂದು ಭಾವಿಸುತ್ತಾನೆ. "ಆ ತಂಗಿ, ಕಕ್ಕನ ಮಗಳ್, ನಿನಗೆ ಸಖಿಯಲ್ತೆ ಅನಲೆ! ಅವಳ ಉಪದೇಶಮಂ ಕೇಳ್ದು ನೀನುಂ ವಿಭೀಷಣಾರ್ಯನ ತೆರದೊಳು ಒರೆಯುತಿಹೆ ನನಗೆ." ಎನ್ನುತ್ತಾನೆ. ಇಂದ್ರಜಿತುವಿನ ಮಾತಿನಿಂದ ನಮಗೆ ಅನಲೆಯ ಪರಿಚಯ ಸ್ವಲ್ಪಮಟ್ಟಿಗೆ ಲಭ್ಯವಾಗುತ್ತದೆ. ಆಕೆ, ಆತನ ತಂಗಿ. ಚಿಕ್ಕಪ್ಪನ ಮಗಳು. ತಾರಾಕ್ಷಿಯ ಜೊತೆ ಅವಳದು ಉತ್ತಮ ಗೆಳೆತನ. ವಿಭೀಷಣನಂತೆಯೇ ಅವಳು ಧರ್ಮಭೀರು. ಇಂದ್ರಜಿತುವಿನ ಮಡದಿ ತಾರಾಕ್ಷಿಯನ್ನು ಪ್ರಭಾವಿಸಿದ್ದಾಳೆ ಎಂದ ಮೇಲೆ ಅನಲೆಯದು ಅತ್ಯಂತ ಪ್ರಭಾವಿ ವ್ಯಕ್ತಿತ್ವ. 'ನಿನಗೆ ಸಖಿಯಲ್ತೆ ಅನಲೆ!’ ಎನ್ನುವ ಇಂದ್ರಜಿತುವಿನ ಮಾತಿನಲ್ಲಿ, ಅನಲೆಯ ಬಗ್ಗೆ ಅವನಿಗಿರುವ ಪ್ರೀತಿಯನ್ನು ಅಂತೆಯೇ ಅವಳ ಸ್ವಭಾವದ ಬಗ್ಗೆ ಇರುವ ವ್ಯಂಗ್ಯವನ್ನೂ ಕಾಣಬಹುದು.
ಹೀಗೆ, ಮೂಲರಾಮಾಯಣದಲ್ಲಿಯಾಗಲೀ ಅಥವಾ ಶ್ರೀರಾಮಾಯಣದರ್ಶನಂ ಕಾವ್ಯಕ್ಕೆ ಮೊದಲ ಕನ್ನಡ ರಾಮಾಯಣಗಳಲ್ಲಾಗಲೀ ಇಲ್ಲದ ಪಾತ್ರವೊಂದು ಸಹೃದಯನ ಎದುರಿಗೆ ತೆರೆದುಕೊಳ್ಳುತ್ತಾ ಸಾಗುತ್ತದೆ. ನೇರವಾಗಿ ಆಕೆಯನ್ನು ಸಹೃದಯ ಎದುರುಗೊಳ್ಳುವುದಕ್ಕೆ ಮೊದಲೇ ಆಕೆಯ ಗುಣಸ್ವಭಾವಗಳನ್ನು, ಒಲವು ನಿಲುವುಗಳನ್ನು ಸಹೃದಯರಿಗೆ ಮನಗಾಣಿಸಿ, ಆಕೆಯನ್ನು ಸ್ವಾಗತಿಸಲು ಸಹೃದಯಮನೋವೇದಿಕೆಯನ್ನು ಕವಿ ಸಿದ್ಧಪಡಿಸುತ್ತಿದ್ದಾರೆ! ಮುಂದಿನ ಅವಳ ಪ್ರವೇಶ, ತಂದೆ ತಾಯಿಯೊಂದಿಗೆ ಆಗಲಿದೆ.
ಮುಂದೆ ಆಂಜನೇಯ ಪ್ರಹಸ್ತ, ಕುಂಭಕರ್ಣ ಮೊದಲಾದವರ ಮನೆಗಳನ್ನು ಸುತ್ತಿ, ವಿಭೀಷಣನಿದ್ದಲ್ಲಿಗೆ ನಾದರೂಪಿಯಾಗಿ (ವಿಪಂಚೀಕ್ವಣನ ಸಂಗಿ ತಾನಾಗಿ) ಬರುತ್ತಾನೆ. ಬರುವಾಗಲೇ ಆತನ ಮನಸ್ಸು ಪ್ರಫುಲ್ಲವಾಗಿದೆ. ಏನೋ ಶುಭವನ್ನು ದರ್ಶಿಸುವ ಆಸೆಯಿಂದಲೇ ಶುಭರೂಪವನ್ನು ಧರಿಸಿಬಿಟ್ಟಿದ್ದಾನೆ ಆಂಜನೇಯ (ಮೇಘನಾದನ ಮನೆಯ ಬಳಿ ಧೂಮರೂಪಿಯಾಗಿದ್ದ!). ಅಲ್ಲಿ ಆತನು ಕಂಡ ಸುಂದರ ದೃಶ್ಯದಲ್ಲಿ ವಿಭೀಷಣನಿದ್ದಾನೆ; ಆತನ ಹೆಂಡತಿ ಸರಮೆಯಿದ್ದಾಳೆ; ಮಗಳು ಅನಲೆಯಿದ್ದಾಳೆ. ಅವಳ ಕಲೆಯಿದೆ. ಆ ದೃಶ್ಯ ಹೀಗಿದೆ:
ಚೆಲುವೆ ಅನಲಾ ಕನ್ಯೆ, ಮಗಳ್ ಆ ವಿಭೀಷಣಗೆ,
ರತ್ನ ಕಂಬಳ ಚಿತ್ರ ವೇದಿಕೆಯ ಮೇಲಿರ್ದು
ಮೀಂಟಿದಳ್ ತಂತಿಯಿಂಚರವೊನಲ್ ಬೀಣೆಯಂ,
ಮಂದಿರದ ಮರದ ಮಣ್ಣಿನ ಜಡಪದಾರ್ಥಗಳ್ ಪ್ರತಿರಣಿಸುವೋಲ್.
ನಾದರೂಪಿ ಮರುತಾತ್ಮಜಂ ಮೋದಮೂರ್ಛೆಗೆ ಸಂದನ್
ಅವ್ಯಕ್ತ ಶೋಕಮಯ ಸ್ವರಸುಖವನೀಂಟಿ.
ಬಳಿಯೊಳೆ ವಿಭೀಷಣನ ಸತಿ ಸರಮೆ ಕುಳ್ತಿರಲ್
ಅನತಿದೂರದೊಳವಂ ತನ್ನ ಮಗಳ ಕಲೆಯಂ ಮೆಚ್ಚಿ, ಕಣ್ ಮುಚ್ಚಿ,
ಕಿವಿದೆರೆದು ಸವಿಯುತಿರ್ದನು ನಿಶ್ಚಲಂ.
ಆ ದೃಶ್ಯವನ್ನು ನೋಡಿದ ಆಂಜನೇಯನಿಗೆ 'ಲಂಕೆಗತಿಥಿಗಳೊ?' ಎಂಬ ಶಂಕೆ ಬಂದುಬಿಡುತ್ತದೆ. ಅವನ ಕಲ್ಪನೆಯ ಲಂಕೆಯಲ್ಲಿ ದುಷ್ಟ ರಾವಣನಿದ್ದಾನೆ. ಅಲ್ಲಿರುವವರೆಲ್ಲರೂ ಅವನಂತೆಯೆ ಎಂದು ಭಾವಿಸಿದ್ದಾನೆ, ಅಷ್ಟರಲ್ಲಿ, ವೀಣೆ ತೆಕ್ಕನೆ ನಿಂತುಬಿಡುತ್ತದೆ. ಆಗ ಬೆಚ್ಚಿದ ಅನಲೆ, 'ಆರ ಬರವನೊ ನಿರೀಕ್ಷಿಸುವ ತೆರದಿ’ ಸುತ್ತ ನೋಡುತ್ತಾಳೆ. ವೀಣೆ ನಿಂತುದುಕ್ಕೆ ವಿಭೀಷಣನೂ ಕಣ್ತೆರೆದು ಪ್ರಶ್ನಾರ್ಥಕವಾಗಿ ಮಗಳನ್ನು ನೋಡುತ್ತಾನೆ. ಆಗ ಅನಲೆ "ಆರೊ ಬಂದಂತಾದುದು" ಎನ್ನುತ್ತಾಳೆ. ಮಗಳನ್ನು ಸಮರ್ಥಿಸುವಂತೆ ಸರಮೆ ಕೂಡಾ "ದಿಟಂ; ಪುಳಕಿಸುತಿದೆ ನನ್ನ ತನು" ಎನ್ನುತ್ತಾಳೆ.
ಒಳ್ಳೆಯ ಸುದ್ದಿ ಬರುವ ಮೊದಲು ನಮಗರಿವಿಲ್ಲದೆ ಮನಸ್ಸು ಸಂತೋಷದಿಂದಿರುತ್ತದೆ. ಹಾಗೆಯೇ ಅಶುಭ ಸುದ್ದಿಯನ್ನು ಕೇಳುವ ಮೊದಲು ಮನಸ್ಸು ಕಳವಳಿಸುತ್ತಿರುತ್ತದೆ. ಇದರ ಮನೋವೈಜ್ಞಾನಿಕ ವಿಶ್ಳೇಷಣೆ ಏನೇ ಇರಲಿ, ಆದರೆ ಜನಸಾಮಾನ್ಯರು ಅಂತಹ ಅನುಭವಗಳನ್ನು ತಮ್ಮ ಮಾತುಗಳ ನಡುವೆ ಪ್ರಸ್ತಾಪಿಸುವುದುಂಟು. ಆಂಜನೇಯ ವಿಭೀಷಣನ ಕುಟುಂಬವನ್ನು ದರ್ಶಿಸುವ ಮೊದಲೇ, 'ಮನದಿ ಸಂತೋಷಿಸಿದನ್, ಅಲ್ಲಿ ಕಲ್ಪಿಸಿ ಶುಭಸ್ನೇಹಮಂ' ಎನ್ನುತ್ತಾರೆ ಕವಿ. ಆಂಜನೇಯನ ಬರವು ಲಂಕೆಗೆ ಶುಭಸೂಚಕವಲ್ಲ; ಅದರೆ ವಿಭೀಷಣನಿಗೆ ಆತನ ಕುಟುಂಬಕ್ಕೆ ಅದೊಂದು ರೀತಿಯಲ್ಲಿ ಶುಭಸೂಚಕವೆ! ಆರಂಭದಲ್ಲಿ ಆದ ಅಲೌಕಿಕ ಅನುಭವಕ್ಕೆ ಅನಲೆ ಬೆಚ್ಚುತ್ತಾಳೆ; ಆದರೆ ಕಳವಳಗೊಳ್ಳುವುದಿಲ್ಲ. ತನ್ನ ಪ್ರೀತಿಪಾತ್ರನಾದ ದೊಡ್ಡಪ್ಪನಿಗಾಗಿ ಹಂಬಲಿಸುವ ಮುಗ್ಧೆಯಾಗಿ ಅವಳಿಗೆ ಆಂಜನೇಯನ ಬರವು ಒಂದು ರೀತಿಯಲ್ಲಿ ಅಶುಭವೂ ಹೌದು. (ಅನಲೆಯ ವೀಣಾಧ್ವನಿ 'ಶೋಕಮಯ ಸ್ವರ’ವಾಗಿದ್ದೇಕೆ? ಎಂಬುದಕ್ಕೆ ಮುಂದೆ ಅವಳ ಮಾತಿನಲ್ಲೇ ಉತ್ತರ ಸಿಗಲಿದೆ) 'ಪುಳಕಿಸುತಿದೆ ನನ್ನ ತನು’ ಎಂಬ ಸರಮೆಯ ಮಾತುಗಳಲ್ಲಿ ಶುಭದ ಸೂಚನೆಯಿದೆ. ಮುಂದೆ ವಿಭೀಷಣನಾಡುವ ಮಾತುಗಳಲ್ಲೂ ಅದು ವ್ಯಕ್ತವಾಗಿದೆ.
ಸೋಜಿಗಮೇಕೆ?
ದಿವ್ಯಕಲೆ ಎಲ್ಲಿರ್ದೊಡಲ್ಲಿಗೆ ಐತಹರಲ್ತೆ ದಲ್
ಪಗಲಿರುಳ್ ವಿಶ್ವಮಂ ಸಂಚರಿಸಿ ರಕ್ಷಿಸುವ
ಸತ್ ಶಕ್ತಿಗಳ್, ದೇವಾತ್ಮಗಳ್?
ನಮ್ಮವೋಲ್ ಅವರುಂ ರಸಪ್ರಿಯರ್.
ನಮಗಿಂ ಮಿಗಿಲ್! ರಸಮೆ ಅವರುಣ್ಬ ಅಮೃತಮಲ್ತೆ?
ಈ ಮಾತುಗಳು ಆಂಜನೇಯನಿಗೆ, ವಿಭೀಷಣನ ಮತ್ತು ಆತನ ಕುಟುಂಬದ ಬಗ್ಗೆ ಗೌರವವನ್ನು ಹೆಚ್ಚಿಸುತ್ತವೆ. ಮುಂದೆ ತಂದೆ, ತಾಯಿ, ಮಗಳ ನಡುವೆ ಸಂಭಾಷಣೆ ನಡೆಯುತ್ತದೆ. ಆಂಜನೇಯನಿಗೆ ಅದು ವಿಭೀಷಣನ ಸಂಸಾರವೆಂದು ತಿಳಿಯುತ್ತದೆ. ಅದಕ್ಕಿಂತ ಹೆಚ್ಚಾಗಿ, ಅನಲೆಯ ವ್ಯಕ್ತಿತ್ವ ಸಹೃದಯರ ಮುಂದೆ ಸಕಾರಣವಾಗಿ ಅನಾವರಣಗೊಳ್ಳುತ್ತದೆ. ಆ ಕಾವ್ಯಭಾಗವನ್ನು ಕೆಳಗಿನಂತೆ ನಾಟಕರೂಪದಲ್ಲಿ ಪುನರ್ರೂಪಿಸಬಹುದಾಗಿದೆ.
ಅನಲೆ:
ಮನಂ ಏಕೊ ಬೆಚ್ಚುತಿದೆ!
ಸುಖವೊ ದುಃಖವೊ ತಿಳಿಯೆನ್, ಎದೆಯೆನಳ್ಳಾಡುತಿದೆ!
ವಿಭೀಷಣ:
ನಿನ್ನ ಸಂಗೀತಮುಂ
ಲೋಕ ಶೋಕವನೆಲ್ಲಂ ಆಲಿಪರ ಹೃದಯದೊಳ್ ಕದಡುವೋಲಿರ್ದತ್ತು.
ವತ್ಸೆ, ಹರಯದ ಮಹಿಮೆ ಅಂತುಟೆ ವಲಂ!
ಸರಮೆ:
ಅಶೋಕವನಿಕಾ ಮಧ್ಯೆ
ರಾಮನ ತಪಸ್ವಿನಿಯ ಕಂಡಾ ಮೊದಲ್ಗೊಂಡು,
ಮೇಣಾ ಮಹೀಯಸಿಯ ವಾಗಮೃತಧಾರೆಯಂ ಸವಿದಾ ಮೊದಲ್ಗೊಂಡು,
ಅನ್ಯಳಂತಿಹಳ್ ಎಮ್ಮ ಕನ್ಯೆ!
ಈ ಮಾತು, ಕಿವಿಯ ಮೇಲೆ ಬಿದ್ದಾಕ್ಷಣ ಆಂಜನೇಯನ ಮನದೊಳಗೆ ಆಸೆಯ ಬಿಸಿಲು ಉಜ್ವಲಿಸುತ್ತದೆ. ಏಕೆಂದರೆ, ಹುಡಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತಾಗಿದೆ ಆತನಿಗೆ. ಇತ್ತ ಆ ಮಾತು ಕೇಳಿದ ವಿಭೀಷಣನ ಮನಸ್ಸಿಗೆ ದುಗುಡವಾಗುತ್ತದೆ. ಸಂಕಟದ ಛಾಯೆಯನ್ನು ಆತನ ಕಣ್ಣುಗಳಲ್ಲಿ ಅನಲೆ ಗುರುತಿಸುತ್ತಾಳೆ.
ಅನಲೆ:
ಬೊಪ್ಪಯ್ಯ,
ಮುಚ್ಚುವಿರೆ ನನಗೆ ನಿಮ್ಮಾತ್ಮಮಂ ಸುಡುತ್ತಿರ್ಪ ಅಳಲ ಬೇಗೆಯಂ?
ನನಗಿನ್ ಮಿಗಿಲ್ ದುಃಖಿಗಳ್ ನೀಮ್, ಧರಾತ್ಮಜೆಯ ದೆಸೆಗೆ!
ಮರುಗಿಹಿರಿ ನೀಂ ಪಿರಿಯಯ್ಯಗಾಗಿಯುಂ;
ಮತ್ತೊಮ್ಮೆ ಕುಲಕೆ ಕೀರ್ತಿಗೆ ದೇಶದ ಅವನತಿಗೆ ಧರ್ಮಾಭ್ಯುದಯಕಾಗಿಯುಂ.
ಅರಸನೋಲಗದಿ ನಿಮಗೆ ನಿಮ್ಮಣ್ಣಂಗೆ ಮೇಣ್ ಇತರ ಮುಖ್ಯರಿಗೆ
ನಿಚ್ಚಮುಂ ನಡೆವ ಚರ್ಚೆಯ ತೋಟಿಯೇಂ ನಮಗೆ ತಿಳಿಯದೆಂಬಿರೆ?....
ನಿನ್ನೆ ಸಂಜೆ, ಲಂಕೆಗೆ ಲಂಕೆ ಕಂಡುದಾ ನೋಟಮಂ.
ಬಿಳ್ದುದೊಂದು ಉರಿವ ಅರಿಲ್ ನಗರದ ಉತ್ತರ ಗಿರಿಯ ನೆತ್ತಿಯಲಿ! ...
ದೇವಿಯನ್, ಆ ನನ್ನ ಗುರುದೇವಿಯನ್,
(ಒಯ್ಯನಿಟ್ಟಳ್ ಕಯ್ಯ ವೀಣೆಯನ್, ಗದ್ಗದವನೆಂತಾದೊಡಂ ಸಂಯಮಿಸಿ; ಕಣ್ಬನಿಯನೊರೆಸಿದಳ್ ಸೆರಗುದುದಿಯಿಂ. ಮತ್ತೆ)
ನಿರ್ಭಾಗ್ಯೆಯನ್ ಮರಳಿ ಪತಿಯೆಡೆಗೆ ಕಳುಹದಿರೆ,
ಲಂಕೆಗಿನ್ ಸುಖಂ ಎಲ್ಲಿ? ಲಂಕೆಗಿನ್ ಶುಭಂ ಎಲ್ಲಿ?
ಲಂಕಿಗರ್ ನಮಗೆ ನೆಮ್ಮದಿ ಎಲ್ಲಿ?....
ಬೊಪ್ಪಯ್ಯ ಮಿಡಿಯಲ್ ಒಳ್ಪನೆ ನುಡಿಯುವ ಈ ನನ್ನ ಇನಿಯ ಬೀಣೆ
ಮೀಂಟಲ್ ಈಗಳ್ ಮುನಿದು ಪರಿತಪಿಸುತಿದೆ; ಸುಯ್ದು ಶಪಿಸುತಿದೆ!
ನೀಂ ಇಂದು ಕೇಳ್ದುದು ಎಂಬುದುಂ ಅದರ ಗಾನಮಲ್ತು; ಅನುರೋಧನಂ! .....
ಕೇಳಿಂ ಇನ್ನುಮಾ ಓಂಕಾರದ ಆಲಾಪನೆಯ ತೀಕ್ಷ್ಣಸಂಕಟಂ ತುಂಬಿದೋಲಿದೆ ಮನೆಯ ತುಂಬಿಯಂ!
ಮೂವರೂ ಆ ಆಲಾಪನೆಯನ್ನು ಕೇಳುತ್ತಿರುವಂತೆಯೇ ಅದು ದೂರವಾಗುತ್ತಾ ಸಾಗತ್ತದೆ. ಇತ್ತ ಆಂಜನೇಯನಿಗೆ ಮೈಮನಗಳು ಪುಳಕಗೊಳ್ಳುತ್ತವೆ. "ಇನ್ನನ್ನರಿಂ ಕ್ಷೇಮಿಯೀ ಲಂಕಾ ಕನಕಲಕ್ಷ್ಮಿ!" ಎಂದು ಆತ ಮುಂದೆ ನಡೆಯುತ್ತಾನೆ. ರಾವಣ ಸೀತೆಯನ್ನು ಹೊತ್ತು ತಂದ ಮೇಲೆ, ಆಂಜನೇಯ ಬರುವವರೆಗೂ ಲಂಕೆಯಲ್ಲಿ ಏನೇನು ನಡೆಯಿತು ಎಂಬುದನ್ನು ಕವಿ ಎಲ್ಲಿಯೂ ನೇರವಾಗಿ ನಿರೂಪಿಸಿಲ್ಲ. ಹೀಗೆ ಪಾತ್ರಗಳ ಮುಖಾಂತರವೇ ನಮಗೆ ಅದು ದರ್ಶನವಾಗುತ್ತಾ ಸಾಗುತ್ತದೆ. ಇಲ್ಲಿ ಅನಲೆಯ ಮಾತುಗಳಿಂದ, ರಾವಣನ ಕೃತ್ಯ ಲಂಕೆಯ ಇಲ್ಲರಿಗೂ ಅದು ಇಷ್ಟವಾಗಿಲ್ಲ, ರಾವಣನ ಅಂತರಂಗದವರಿಗೂ ಅದು ಸರಿಯೆನ್ನಿಸಿಲ್ಲ, ಆದರೆ ಬಾಯಿಬಿಟ್ಟು ಆಡುವಂತಿಲ್ಲ; ಅನುಭವಿಸುವಂತಿಲ್ಲ ಅವರ ಸ್ಥಿತಿ ಎಂಬುದರ ಅರಿವಾಗುತ್ತದೆ. ಸರಮೆಯ ಮಾತುಗಳಿಂದ, ಅನಲೆ ಆಗಾಗ ಸೀತೆಯನ್ನು ಅಶೋಕವನದಲ್ಲಿ ಭೇಟಿಯಾಗುತ್ತಿದ್ದಳೆಂಬುದು ತಿಳಿಯುತ್ತದೆ. ಅಷ್ಟಲ್ಲದೆ, ಆಕೆ ಸೀತೆಯ ಮಾತುಗಳಿಂದ ಪ್ರಭಾವಿತಳಾಗಿದ್ದಾಳೆ; ಪ್ರೌಢೆಯಾಗಿದ್ದಾಳೆ ಎಂಬುದೂ ಮನದಟ್ಟಾಗುತ್ತದೆ. ರಾಜಸಭೆಯಲ್ಲಿಯೂ ಸೀತಾಪಹರಣದ ಪರಿಣಾಮ ಚರ್ಚೆಯಾಗಿದೆ. ವಿಭೀಷಣ ತನ್ನ ಕೈಲಾದುದನ್ನು ಮಾಡಿ, ಸೀತೆಯನ್ನು ರಾಮನಿಗೆ ಒಪ್ಪಿಸುವಂತೆ ರಾವಣನ ಮನವೊಲಿಸಲು ವಿಫಲ ಯತ್ನ ನಡೆಸಿದ್ದಾನೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಅನಲೆಯ ವಾಕ್ಚಾತುರ್ಯ. ಆಕೆಯ ತರ್ಕಬದ್ಧ ಅಭಿಪ್ರಾಯ ನಿರೂಪಣೆ, ದೃಢ ನಿಲುವು ಸಹೃದಯರ ಮನ ಸೆಳೆಯುತ್ತವೆ. ಆಕೆಯ ಮಾತುಗಳೇ ಮುಂದೆ ಆಂಜನೇಯನ ಕಾರ್ಯವನ್ನು ಸುಗಮಗೊಳಿಸಿವೆ. ಕಾವ್ಯದ ನೆಡೆಗೆ ಪೂರಕವಾಗಿ ಆಕೆಯ ಪಾತ್ರಕ್ಕೊಂದು ಉಚಿತವಾದ ಸ್ಥಾನವನ್ನು ಕಲ್ಪಿಸುವಲ್ಲಿ ಕವಿ ಯಶಸ್ವಿಯಾಗಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೋಗಿರುವುದನ್ನೂ ಮುಂದೆ ಮನಗಾಣಬಹುದು.

[ನಾಳೆ : ಇವಳೆನ್ನ ಕಾಪಿಡುವ ದೇವಿ!]

Monday, May 05, 2014

ಯಾರೀ 'ಅನಲಾ'!?

ಮಹಾಕವಿಗಳ ಬಗ್ಗೆ ಎಲ್ಲ ಮೀಮಾಂಸಕರ ಅದರಲ್ಲೂ ಆಧುನಿಕ ವಿಮರ್ಶಕರ ಒಂದು ತಕರಾರು ಎಂದರೆ, 'ಕಾವ್ಯದೊಳಗೆ ಆಗಾಗ ಕವಿಗಳು ಸ್ವತಃ ತಾವೇ ಪ್ರವೇಶ ಮಾಡಿಬಿಡುತ್ತಾರೆ' ಎಂಬುದು. ಮಹಾಕಾವ್ಯಗಳಲ್ಲಿ ಎರಡು ವಿಧ. ಮೊದಲನೆಯದು 'ವಸ್ತುಕ'. ಎರಡನೆಯದು 'ವರ್ಣಕ' ಮೊದಲನೆಯದಕ್ಕೆ ರಾಮಾಯಣ, ಮಹಾಭಾರತ, ಗಿಲ್ಗಮೆಷ್, ಈಲಿಯಡ್, ಒಡಿಸ್ಸಿ ಮೊದಲಾದವುಗಳನ್ನು ಹೆಸರಿಸಬಹುದು. ಎರಡನೆಯದಕ್ಕೆ, ಕುಮಾರಸಂಭವಂ, ಪಂಪಭಾರತ, ಕುಮಾರವ್ಯಾಸ ಭಾರತ, ಜೈಮಿನಿಭಾರತ, ತುಳಸಿರಾಮಾಯಣ, ಕಂಭರಾಮಾಯಣ, ಶ್ರೀರಾಮಾಯಣದರ್ಶನಂ, ಡಿವೈನ್ ಕಾಮಿಡಿ, ಪ್ಯಾರಡೈಸ್ ಲಾಸ್ಟ್ ಮೊದಲಾದ ಕೃತಿಗಳನ್ನು ಹೆಸರಿಸಬಹುದು. ಮಹಾಕಾವ್ಯವೊಂದರ ಪ್ರಸ್ತುತಿಯೆಂದರೆ ಅದು ಒಂದು ಸಣ್ಣ ಕವಿತೆ ಅಥವಾ ಕಥೆಯಂತೆ ಆ ಕ್ಷಣದ ಅಭಿವ್ಯಕ್ತಿಯಾಗಿರುವುದಿಲ್ಲ. ಭೂತ ಭವಿಷ್ಯತ್ ವರ್ತಮಾನಗಳಲ್ಲೆವನ್ನೂ ಒಳಗೊಂಡು ದೇಶ ಭಾಷೆ ಕಾಲಾತೀತವಾದ ಅಭಿವ್ಯಕ್ತಿ ಮಹಾಕಾವ್ಯದ ಲಕ್ಷಣ. ಮಹಾಕಾವ್ಯ ವರ್ತಮಾನದಲ್ಲಿರುತ್ತದೆ; ಭೂತದತ್ತ ಕೈಚಾಚಿರುತ್ತದೆ; ಭವಿಷ್ಯದತ್ತ ದೃಷ್ಟಿಯಿಟ್ಟಿರುತ್ತದೆ! ವಸ್ತುಕಗಳಾದ ರಾಮಾಯಣ ಮಹಾಭಾರತಗಳಲ್ಲೇ ವಾಲ್ಮಿಕಿ ವ್ಯಾಸರು ಕಾವ್ಯದೊಳಗೆ ಪಾತ್ರಗಳಾಗಿಯೇ ಇದ್ದಾರೆ ಎಂಬುದು ಗಮನಾರ್ಹ. ಇನ್ನು ವರ್ಣಕಗಳಾದ ಮಹಾಕಾವ್ಯಗಳು ಯುಗಧರ್ಮದ ಒತ್ತಡದಿಂದ ಮಹಾಕವಿಯೊಬ್ಬನಿಂದ ಸೃಜಿಸಲ್ಪಡುತ್ತವೆ. ಅವುಗಳಿಗೆ ಆ ಯುಗಧರ್ಮದ ಒಂದು ಸ್ಪಷ್ಟ ಉದ್ದೇಶವೂ ಇರುತ್ತದೆ. ಇನ್ನುಳಿದಂತೆ ವಸ್ತು, ವಿಷಯ, ಪ್ರಸ್ತುತಿಯಲ್ಲಿ ವಸ್ತುಕಗಳಿಗೂ ವರ್ಣಕಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ವರ್ಣಕ ಮಹಾಕಾವ್ಯಗಳಲ್ಲಿ ಕವಿ ತನ್ನ ಆಶಯವನ್ನು ಹೆಚ್ಚಾಗಿ ತಾನು ಕಂಡುಕೊಂಡ ದರ್ಶನವನ್ನು ಪ್ರತಿಪಾದಿಸಬೇಕಾಗುತ್ತದೆ. ವರ್ಣಕ ಮಹಾಕಾವ್ಯಗಳಿಗೆ ಮೂಲಕಥೆ ಸಿದ್ಧವಾಗಿರುತ್ತದೆ. ಕಥೆಯಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳಬಹುದಾದರೂ ಅಮೂಲಾಗ್ರ ಬದಲಾವಣೆ ಸಾಧ್ಯವಿಲ್ಲ. ಉದಾಹರಣೆಗೆ ಕೌರವ ಮತ್ತು ಪಾಂಡವರ ನಡುವಿನ ಯುದ್ಧವನ್ನೇ ಇಲ್ಲದಂತೆ ಮಹಾಭಾರತದ ರಚನೆ ಸಾಧ್ಯವಿದೆಯೇ? ಇಂತಹ ಸಂದರ್ಭದಲ್ಲಿ ಮಹಾಕವಿಗಳು ಕಾವ್ಯದ ನಡುವೆ ಆಗಾಗ ಅವಶ್ಯಬಿದ್ದಲ್ಲಿ ಮದ್ಯಪ್ರವೇಶ ಮಾಡುತ್ತಾರೆ. ಆದರೆ ಔಚಿತ್ಯವನ್ನು ಮೀರುವುದಿಲ್ಲ. ಇರುವ ಪಾತ್ರಗಳ ಮುಖಾಂತರವೇ ತಮ್ಮ ದರ್ಶನವನ್ನು ಪ್ರತಿಪಾದಿಸುತ್ತಾರೆ. ಅಗತ್ಯ ಬಿದ್ದಲ್ಲಿ ಹೊಸ ಪಾತ್ರಗಳನ್ನು ಸೃಷ್ಟಿಸುತ್ತಾರೆ. ಗಮನಿಸಬೇಕು, ಇದೆಲ್ಲವೂ ಕಥೆಯ ಅಂದಗೆಡದಂತೆ ಕಥಾಚೌಕಟ್ಟಿನಲ್ಲೇ ನೆಡೆಯುತ್ತವೆ.
ವಾಲ್ಮೀಕಿ ವಿರಚಿತ ರಾಮಾಯಣದ ಕಥೆ ಭಾರತೀಯರಿಗೆಲ್ಲಾ ಚಿರಪರಿಚಿತ. ಆದರೆ ಸಾವಿರಾರು ಬಾರಿ ಮರು ಸೃಷ್ಟಿಗೊಂಡಿದೆ. ಇಪ್ಪತ್ತನೆಯ ಶತಮಾನದಲ್ಲಿ ಅದು ಕುವೆಂಪು ಅವರಿಂದ ಶ್ರೀರಾಮಾಯಣ ದರ್ಶನಂ ಆಗಿ ಸೃಜಿಸಲ್ಪಟ್ಟಿದೆ. "ಕಲೆಯನಲ್ಲದೆ ಶಿಲ್ಪಿ ಶಿಲೆಯನೇಂ ಸೃಷ್ಟಿಪನೆ? ತನು ನಿನ್ನದಾದೊಡಂ ಚೈತನ್ಯಮೆನ್ನದೆನೆ, ಕಥೆ ನಿನ್ನದಾದೊಡಂ, ನೀನೆ ಮೇಣಾಶೀರ್ವದಿಸಿ ಮತಿಗೆ ಬೋಧವನಿತ್ತಡಂ, ಕೃತಿ ನನ್ನ ದರ್ಶನಂ ಮೂರ್ತಿವೆತ್ತೊಂದಮರ ಕಾವ್ಯದಾಕೃತಿಯಲ್ತೆ?" ಎಂದು ಕುವೆಂಪು ಕಾವ್ಯಾರಂಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಕಥೆ ವಾಲ್ಮೀಕಿಯದೆ. ವಾಲ್ಮೀಕಿಯ ಆಶೀರ್ವಾದದಿಂದಲೇ ಈ ಕವಿ ತನ್ನ ದರ್ಶನ ಪ್ರತಿಪಾದನೆಗೆ ಅದನ್ನು ಬಳಸುತ್ತಿದ್ದಾರೆ. ಅದಕ್ಕಾಗಿ ಹಲವಾರು ಸಂದರ್ಭಗಳನ್ನು ಹಲವಾರು ಪಾತ್ರಗಳನ್ನು ಬಳಸಿದ್ದಾರೆ. ಜೊತೆಗೆ ಅವಕ್ಕೆಲ್ಲಾ ತಿಲಕವಿಟ್ಟಂತೆ "ಅನಲೆ" ಎಂಬ ಪಾತ್ರವನ್ನು ಹೊಸದಾಗಿ ಸೃಷ್ಟಿಸಿದ್ದಾರೆ. ಇಲ್ಲಿ ಅನಲೆಯ ಪಾತ್ರದ ನಡೆ, ನುಡಿ, ಅವಳ ವೈಚಾರಿಕ ಚಿಂತನೆ, ಕೌಟುಂಬಿಕ ವಾತ್ಸಲ್ಯ, ಸಮಷ್ಟಿಯ ಬಗೆಗಿನ ಕಾಳಜಿ ಎಲ್ಲವೂ ಕುವೆಂಪು ತಮ್ಮ ಜೀವಿತದ ಉದ್ದಕ್ಕೂ ಪ್ರತಿಪಾದಿಸಿಕೊಂಡು ಬಂದ ಮೌಲ್ಯಗಳೇ ಆಗಿವೆ. ಅವುಗಳನ್ನು ಕವಿಯೇ ಕಾವ್ಯದ ನಡುವೆ ಮಧ್ಯಪ್ರವೇಶಿಸಿ ಪ್ರತಿಪಾದಿಸುತ್ತಾ ಬಂದಿದ್ದರೆ ಔಚಿತ್ಯ ಮೀರಿ ಹೋಗುವ ಅಪಾಯವಿದ್ದೇ ಇತ್ತು. ಅನಲೆಯ ಪಾತ್ರದ ಮುಖಾಂತಯರವೇ ಕವಿ ಪ್ರತಿಪಾದಿಸಿದ 'ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್‍ವ್ಯೂಹರಚನೆಯಳ್' ಎಂಬ ಮೌಲ್ಯಕ್ಕೆ ಅನುಗುಣವಾಗಿ ರಾಮಾಯಣದ ರಾವಣ, ವಿಭೀಷಣ, ಕುಂಭಕರ್ಣ ಅಷ್ಟೇ ಏಕೆ? ಸ್ವತಃ ರಾಮನೂ ಹೊಸದೊಂದು ರೂಪದಲ್ಲಿ ಸಹೃದಯರಿಗೆ ದರ್ಶನವನ್ನೀಯುತ್ತಾನೆ. ಇಪ್ಪತ್ತನೆಯ ಶತಮಾನ ಗಾಂಧೀಜಿಯವರ ಯುಗ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಅವರು ಪ್ರತಿಪಾದಿಸಿದ ಅಹಿಂಸೆ, ಕ್ಷಮಾಗುಣ ಇಂತಹ ಮೌಲ್ಯಗಳ ಕಾವ್ಯಾತ್ಮಕ ಪ್ರತಿಪಾದನೆ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಆಗಿದೆ ಎಂಬುದಕ್ಕೆ ನೂರಾರು ಉದಾಹರಣೆಗಳಿವೆ. ದಶರಥನು ನಡೆಸಬೇಕೆಂದು ಉದ್ದೇಶಿಸಿದ ಪುತ್ರಕಾಮೇಷ್ಠಿ ಯಾಗದ ಸಿದ್ಧತೆಯ ಸಂದರ್ಭದಲ್ಲಿ ಪ್ರವೇಶ ಮಾಡುವ ಜಾಬಾಲಿ "ಪೂರ್ವಪದ್ಧತಿವಿಡಿದು ಮಾಳ್ಪ ದಿಗ್ವಿಜಯ ಹಯಮೇಧ ಮೊದಲಾದುವಂ ತೊರೆದು, ಹಿಂಸಾ ಕ್ರೌರ್ಯಮಿಲ್ಲದಿಹ ಪ್ರೇಮಕ್ಕೆ ನೋಂತು, ದೇವರ್ಕಳಂ ಪೂಜಿಸಲ್ ಮೆಚ್ಚುವುದು ಜಗವನಾಳುವ ಋತಂ........ ವಿಶ್ವಮಂ ಸರ್ವತ್ರ ತುಂಬಿದಂತರ್ಯಾಮಿ ಚೇತನಂ ತಾಂ ಪ್ರೇಮಾತ್ಮವಾಗಿಇರ್ಪುದದರಿಂದೆ ಹಿಂಸೆಯಿಂ ಪ್ರೇಮಮೂರ್ತಿಗಳಾದ ಸಂತಾನಮುದಿಸದಯ್............. ದೊರೆಗೊಳ್ಳಿತಕ್ಕೆ! ಎಂದು ಆ ಮಂದಿ ಪರಸಲ್ಕೆ, ಪರಕೆಯದೆ ದೇವರಾಶೀರ್ವಾದಕೆಣೆ..." ಎಂದು ಮುಂತಾಗಿ ಹೇಳಿ ಅಹಿಂಸೆಯನ್ನು ಪ್ರತಿಪಾದಿಸುತ್ತಾನೆ. ಇಲ್ಲಿ ಕವಿ ತಾನು ಹೇಳಬೇಕಾದ ಮೌಲ್ಯಗಳನ್ನು ಜಾಬಾಲಿಯ ಮುಖಾಂತರ ಹೇಳಿಸುತ್ತಾರೆ.
ಶತಶತಮಾನಗಳಿಂದಲೂ ರಾಮಾಯಣದ ಸಹೃದಯ ಓದುಗ (ವಿಮರ್ಶಕರ ವಿಷಯ ಬಿಟ್ಟುಬಿಡೋಣ) ಕೊನೆಗೆ ಸೀತೆ ಅಗ್ನಿಪ್ರವೇಶ ಮಾಡುವ ಸಂದರ್ಭಕ್ಕೆ ಬಂದಾಗ ಕಳವಳಗೊಳ್ಳುತ್ತಾನೆ. ರಾಮಭಕ್ತನಾದವನೂ ಒಂದುಕ್ಷಣ ರಾಮನನ್ನು ಅನುಮಾನಿಸುತ್ತಾನೆ. ರಾಮನ ನಡೆಯನ್ನು ಆ ಕ್ಷಣಕ್ಕಾದರೂ ಪ್ರಶ್ನಿಸುತ್ತಾನೆ. ರಾಮಾಯಣವನ್ನು ಶ್ರೀರಾಮಾಯಣ ದರ್ಶನವನ್ನಾಗಿಸ ಹೊರಟ ಕುವೆಂಪು ಅವರಿಗೆ ಈ ಪ್ರಶ್ನೆ ಸಹಜವಾಗಿ ಕಾಡುತ್ತದೆಯಲ್ಲವೆ? ಆದರೆ ಕಾವ್ಯದ ನಡುವೆ ಕವಿಯೇ ಈ ಪ್ರಶ್ನೆಯನ್ನು ಎತ್ತುವುದು ಔಚಿತ್ಯದ ಎಲ್ಲೆ ಮೀರಿದಂತೆ. ಅದಕ್ಕೆ ಪ್ರಶ್ನೆ ಎತ್ತಲು ಸಶಕ್ತ ಪಾತ್ರತವೊಂದರ ಅಗತ್ಯವಿರುತ್ತದೆ. ಏಕೆಂದರೆ ಇದ್ದಕ್ಕಿದ್ದಂತೆ ಯಾವುದೋ ಒಂದು ಪಾತ್ರ ಬಂದು ಅಂತಹ ಒಂದು ಪ್ರಶ್ನೆಯನ್ನು ಎತ್ತುವುದು ಅಸಂಗತ. ಅಂತಹ ಸಶಕ್ತ ಪಾತ್ರವನ್ನೇ ಕವಿ ಸೃಷ್ಟಿಸುತ್ತಾರೆ. ಆ ಪಾತ್ರವೇ ಅನಲೆ. ರಾವಣನ ಮಹಾಕುಟುಂಬದ ಮುದ್ದಿನ ಕೂಸು. ವಿಭೀಷಣನ ಶುದ್ಧಾಂತಕರಣದ ಪುತ್ಥಳಿ. ಕುಂಭಕರ್ಣನ ಹೂವಿನ ಚೆಂಡು! ಅನಲೆ ಎಂದು ಆ ಪಾತ್ರಕ್ಕೆ ಹೆಸರನ್ನಿಡುವುದರಲ್ಲೇ ಕವಿಯ ಮಹೋದ್ದೇಶ ಅರ್ಥವಾಗುತ್ತದೆ. ಅನಲ ಎಂದರೆ ಬೆಂಕಿ, ಅಗ್ನಿ ಎಂದರ್ಥ. ಭಾರತೀಯ ದರ್ಶನದ ಪ್ರಕಾರ ಅಗ್ನಿ ಪರಿಶುದ್ಧಕಾರಕ. (ಬದುಕಿನಲ್ಲಿ ಬೆಂದವನು ಬೇಂದ್ರೆಯಾಗುತ್ತಾನೆ!) ಇಲ್ಲಿ ಅನಲೆ ಪರಿಶುದ್ಧಕಾರಕಳಾಗಿದ್ದಾಳೆ. ಅವಳಿಂದ ರಾವಣತ್ವವನ್ನು ಆವಾಹಿಸಿಕೊಂಡಿದ್ದ ಪಾತ್ರಗಳು ರಾಮತ್ವವನ್ನು ಆವಾಹಿಸಿಕೊಳ್ಳುತ್ತವೆ. ಅನಲೆ ತನ್ನ ಸುತ್ತಲಿನವರನ್ನೆಲ್ಲಾ ಉದ್ಧಾರಪಥದತ್ತ ಕೊಂಡೊಯ್ಯುತ್ತಾಳೆ. ಇಲ್ಲಿನ ರಾವಣ, ಶೂರ್ಪನಖಿ, ಇಂದ್ರಜಿತು ಅವರಲ್ಲದೆ ರಾಮನ ಪಾತ್ರವೂ ಕೂಡಾ ಅನಲೆ ಎಂಬ ಒರೆಗಲ್ಲಿಗೆ ಉಜ್ಜಲ್ಪಡುತ್ತದೆ! ಹಾಗೆ ಸೃಷ್ಟಿಸಿದ ಪಾತ್ರವನ್ನು ಸಶಕ್ತವಾಗಿ ಬೆಳೆಸುತ್ತಾ ಹೋಗುವ ಕವಿ ಆಕೆಯ ಮುಖಾಂತರವೇ ರಾಮನ 'ಅಕಾರ್ಯ'ವನ್ನು ಪ್ರಶ್ನಿಸುತ್ತಾರೆ. ಆದ್ದರಿಂದ ಇಲ್ಲಿ ಅನಲೆ ಕವಿಯ ಪ್ರತಿನಿಧಿಯೂ ಹೌದು, ಸಹೃದಯ ಓದುಗರ ಪ್ರತಿನಿಧಿಯೂ ಹೌದು!  ಅನಲೆಯ ಮನಸ್ಸಿನ ಮಾತು ಹೊರಬೀಳುವ ಮೊದಲೆ, ರಾಮನೂ ಅಗ್ನಿಪ್ರವೇಶ ಮಾಡಿಬಿಡುತ್ತಾನೆ, ಸೀತೆಯೊಂದಿಗೆ! (ಕುವೆಂಪು ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರರಾಗಿರುವ ಶ್ರೀ ಕೆ. ಸಚ್ಚಿದಾನಂದನ್ ಹೇಳುವಂತೆ, "ಇಲ್ಲಿ ಬರುವ ರಾಮ, ಸೀತೆಯೊಂದಿಗೆ ಅಗ್ನಿಪ್ರವೇಶ ಮಾಡುತ್ತಾನೆ. ಎಲ್ಲೆಡೆ ಮಹಿಳೆಯ ಮೇಲೆ ದೌರ್ಜನ್ಯ, ಹಿಂಸೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಕುವೆಂಪು ಕಟ್ಟಿಕೊಟ್ಟ ಈ ಚಿತ್ರಣ ಪ್ರಸ್ತುತ ಮತ್ತು ಆದರ್ಶ.)
ಅನಲೆಯ ಪಾತ್ರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಸೃಷ್ಟಿಯಾಗಿ, ಬೆಳೆಯುತ್ತಾ ಹೋಗುವ ಪರಿಯೇ ಒಂದು ಸುಂದರ ಕಥನ. ಕವಿ ಅನಲೆಯ ಬಗ್ಗೆ ತುಂಬು ಪ್ರೀತಿಯನ್ನೇ ಹರಸಿದ್ದಾರೆ. ಆ ಪ್ರೀತಿಯ ಧಾರೆಯನ್ನು ನಾವೂ ಅರಿಯಬೇಕಾದರೆ ಕಾವ್ಯದ ಹಿನ್ನೆಲೆಯಲ್ಲಿಯೇ ಆ ಪಾತ್ರದ ಉಗಮ-ವಿಕಾಸಗಳನ್ನು ಅರಿಯಬೇಕು.  ಕಾವ್ಯಭಾಗದ ಹಿನ್ನೆಲೆಯಲ್ಲಿಯೇ ಅನಲೆಯನ್ನು ನಾವು ಆವಾಹಿಸಿಕೊಳ್ಳಬೇಕು. ಆ ಪ್ರಯತ್ನವೇ ಒಂದು ಚೇತೋಹಾರಿ ಕಾವ್ಯಪಯಣ.

ಮುಂದಿನ ಐದು ಕಂತುಗಳಲ್ಲಿ 'ಅನಲೆ' ನಂದೊಂದ್ಮಾತಿನಲ್ಲಿ ವಿಹರಿಸಲಿದ್ದಾಳೆ!
ಈಗಾಗಲೇ ಅನಲೆಯ ಬಗ್ಗೆ ಗೊತ್ತಿರುವವರು, ಇದುವರೆಗೂ ಗೊತ್ತಿಲ್ಲದೇ ಇರುವವರು ಈ ಕಾವ್ಯಪಯಣದಲ್ಲಿ ನಮ್ಮೊಂದಿಗಿರಲಿ ಎಂದು ಆಶಿಸುತ್ತೇನೆ.