Monday, April 20, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 11

ಅಂತೂ ಸಿ.ಆರ್. ತೆಗೆದುಕೊಂಡೆ
ಆಗಿನ್ನು ಜೂನಿಯರ್ ಕಾಲೇಜು ಇತ್ತು. ಅದಕ್ಕೊಬ್ಬ ಪ್ರಾಂಶುಪಾಲರೂ ಇದ್ದುದರಿಂದ ಅವರ ಕೈಕೆಳಗೇ ಹೈಸ್ಕೂಲ್ ನಡೆಯುತ್ತಿತ್ತು. ನಮಗೆ ಪರೀಕ್ಷೆಯ ಹಾಲ್‌ಟಿಕೆಟ್‌ಗಳನ್ನು ಪರೀಕ್ಷೆಯ ಹಿಂದಿನ ದಿನವೇ ವಿತರಿಸುವುದೆಂದು ತೀರ್ಮಾನವಾಗಿತ್ತು. ಅಂದು ಸರಸ್ವತೀ ಪೂಜೆಗೂ ಏರ್ಪಾಡಾಗಿತ್ತು. ಮಠದ ಚಿಕ್ಕಯ್ಯನೋರ ಅಮೃತಹಸ್ತದಿಂದ ನಾವು ಟಿಕೆಟ್‌ಗಳನ್ನು ತೆಗೆದುಕೊಳ್ಳವುಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ನನಗೆ ಆಗಿದ್ದ ಧೈರ್ಯಕ್ಕೆ ಅದೂ ಕಾರಣವಾಗಿತ್ತು. ಒಬ್ಬೊಬ್ಬರ ಹೆಸರನ್ನೇ ಕರೆದು, ಸ್ವಾಮೀಜಿಯ ಕೈಯಿಂದ ಟಿಕೆಟ್ ಕೊಡಿಸುವಾಗ ನನ್ನ ಹೆಸರನ್ನು ಕರೆಯದೇ ಇರುತ್ತಾರೆಯೇ? ಈ ಅನುಮಾನವನ್ನು ವ್ಯಕ್ತಪಡಿಸಿದಾಗ ಹಾಸ್ಟೆಲಿನ ವಾರ್ಡನ್ ‘ನಾನೂ ಬರುತ್ತೇನೆ ನೋಡೋಣ ಏನಾಗುತ್ತದೆ’ ಎಂದು ಜೊತೆಯಲ್ಲೇ ಬಂದಿದ್ದರು. ನಾನು ಆದಷ್ಟು ನಿಂಗೇಗೌಡರ ಕಣ್ಣು ತಪ್ಪಿಸಿ ತಿರುಗುತ್ತಿದ್ದೆ.
ಪಟ್ಟಿಯಲ್ಲಿ ನನ್ನ ಹೆಸರು ಇತ್ತು. ಹೆಸರು ಕೂಗಿದಾಗ ಒಬ್ಬೊಬ್ಬ ಹುಡುಗನೂ ಎದ್ದು ಹೋಗಿ, ಚಿಕ್ಕಯ್ಯನೋರ ಕಾಲಿಗೆ ಬಿದ್ದು, ಹಾಲ್‌ಟಿಕೆಟ್ ತೆಗೆದುಕೊಂಡು ಬರುತ್ತಿದ್ದರು. ನನ್ನ ಹೆಸರು ಕೂಗಿದಾಗ, ಇನ್ನೇನು ಡಿ.ಎಸ್.ಎನ್. ನನಗೆ ಅಡ್ಮಿಷನ್ ಟಿಕೆಟ್ ಕೊಡಬಾರದೆಂದು ಹೇಳುತ್ತಾರೆ, ಎಂಬ ಭಯದಲ್ಲೇ ಹೋಗಿ, ಚಿಕ್ಕಯ್ಯನೋರ ಕಾಲಿಗೂ ಬೀಳದೇ, ಅಡ್ಮಿಷನ್ ಟಿಕೆಟ್ ತೆಗೆದುಕೊಂಡು ಬಂದಿದ್ದೆ! ಫಂಕ್ಷನ್ನಿನ ನಂತರ ಕೆಲವು ಹುಡುಗರ ಮುಂದೆ ಡಿ.ಎಸ್.ಎನ್. ‘ಸ್ವಾಮೀಜಿಗಳ ಕಾಲಿಗೆ ನಮಸ್ಕಾರ ಮಾಡದೆ ಧಿಮಾಕು ತೋರುಸ್ತಾನೆ. ನೋಡೋಣ ಅದೆಂಗೆ ಪಾಸಾಗುತ್ತಾನೆ. ಕೈ ಬಿಟ್ಟುಕೊಂಡು ಸೈಕಲ್ ಹೊಡೆದಂಗಲ್ಲ, ಎಸ್ಸೆಸ್ಸೆಲ್ಸಿ ಪಾಸು ಮಾಡೋದು’ ಎಂದು ತಮ್ಮ ನಂಜನ್ನು ಹೊರ ಹಾಕಿದ್ದರಂತೆ! ಆಗ ನಾನು ಕೈ ಬಿಟ್ಟುಕೊಂಡು ಸೈಕಲ್ ಹೊಡೆಯುವುದರಲ್ಲಿ ಛಾಂಪಿಯನ್ ಆಗಿದ್ದೆ!
ಅಂತೂ ಫಲಿತಾಂಶ ಬಂದು ನಾನೊಬ್ಬನೇ ಸೆಕೆಂಡ್ ಕ್ಲಾಸಿನಲ್ಲಿ ಪಾಸಾಗಿದ್ದೆ. ಅದೇ ವರ್ಷ ಜೂನಿಯರ್ ಕಾಲೇಜನ್ನು ಅಲ್ಲಿಂದ ಎತ್ತಂಗಡಿ ಮಾಡಲಾಯಿತು. ನಾನು ನನ್ನ ಅಂಕಪಟ್ಟಿ, ಸ್ಟಡಿ ಸರ್ಟಿಫಿಕೇಟ್ ಎಲ್ಲವನ್ನೂ ತೆಗೆದುಕೊಳ್ಳುವುದರಲ್ಲಿ ಅಲ್ಲಿದ್ದ ಪ್ರಾಂಶುಪಾಲರನ್ನೂ ಎತ್ತಂಗಡಿ ಮಾಡಿದ್ದರು. ಆಗ ಇದೇ ನಿಂಗೇಗೌಡರನ್ನು ಇಂಚಾರ್ಜ್ ಹೆಡ್ಮಾಸ್ಟರನ್ನಾಗಿ ನೇಮಿಸಲಾಗಿತ್ತು. ನಾನು ಚನ್ನರಾಯಪಟ್ಟಣದ ಜೂನಿಯರ್ ಕಾಲೇಜು ಸೇರಿದ್ದೆ.
ಹೀಗೇ ಒಂದು ದಿನ, ಯಾರೋ ಹೇಳಿದರೆಂದು ಹಾಗೂ ನನ್ನ ಸಿ.ಆರ್. ಅಂದರೆ ಕ್ಯುಮುಲೇಟಿವ್ ರೆಕಾರ್ಡ್ ಅಗತ್ಯ ಬೇಕಾಗುತ್ತದೆಂದು ಭಾವಿಸಿ ಅದನ್ನು ತರಲು ಸ್ಕೂಲಿಗೆ ಹೋಗಿದ್ದೆ. ಹೆಡ್ಮಾಸ್ಟರ ರೂಮಿನಲ್ಲಿ ನಿಂಗೇಗೌಡರು ವಿರಾಜಮಾನರಾಗಿದ್ದರು. ನಾನು ನೇರವಾಗಿ ಒಳಗೆ ಹೋಗಿ ‘ನನಗೆ ಸಿ.ಆರ್. ಬುಕ್ ಬೇಕು ಸಾರ್’ ಎಂದು ಕೇಳಿದ್ದೆ. ನನ್ನನ್ನು ನಿರೀಕ್ಷಿಸಿರದ ಅವರು ಮೊದಲು ಗಲಿಬಿಲಿಗೊಂಡರೂ ‘ಅರ್ಜಿ ಬರೆದುಕೊಡು’ ಎಂದರು. ನಾನು ಅರ್ಜಿ ಬರೆದುಕೊಂಡು ಹೋಗುವಷ್ಟರ್‍ಲಲ್ಲಿ ಅವರಿಗೆ ಜ್ಞಾನೋದಯವಾಗಿ, ನಾನು ಅವರಿಗೆ ಕೊಡಬೇಕಾದ ಎಪ್ಪತ್ತಮೂರೂವರೆ ರೂಪಾಯಿಯ ನೆನಪಾಗಿದೆ. ನಾನು ಕೊಟ್ಟ ಅರ್ಜಿಯನ್ನು ಕಣ್ಣೆತ್ತಿಯೂ ನೋಡದೆ, ‘ನೀನು ನನಗೆ ಕೊಡಬೇಕಾದ ದುಡ್ಡು ಕೊಟ್ಟರೆ ಮಾತ್ರ ನಿನ್ನ ಸಿ.ಆರ್.ಕೊಡಿಸುತ್ತೇನೆ. ಇಲ್ಲದಿದ್ದರೆ ಇಲ್ಲ’ ಎಂದು ಕಡಾಖಂಡಿತವಾಗಿ ಹೇಳಿಬಿಟ್ಟರು. ನಾನು ‘ಸಾರ್ ನನ್ನಲ್ಲಿ ಈಗ ದುಡ್ಡಿಲ್ಲ. ಬೇಕಾದರೆ, ಹಾಸ್ಟೆಲ್ಲಿನಿಂದ ನನಗೆ ‘ಕಾಷನ್ ಡಿಪಾಸಿಟ್’ ವಾಪಸ್ ಬರುವುದಿದೆ. ಅದನ್ನು ಬೇಕಾದರೆ ನಿಮಗೆ ಕೊಡುತ್ತೇನೆ. ನನಗೆ ಸಿ.ಆರ್. ಕೊಟ್ಟುಬಿಡಿ ಸಾರ್’ ಎಂದು ಬೇಡಿಕೊಂಡೆ. ಅವರು ‘ಅದನ್ನು ಹಾಳೆಯಲ್ಲಿ ಬರೆದುಕೊಡು’ ಎಂದರು. ನಾನು ಬರೆದೆ. ಅಷ್ಟಕ್ಕೆ ತೃಪ್ತರಾಗದ ಅವರು, ‘ನಿಮ್ಮ ಹಾಸ್ಟೆಲ್ಲಿನ ವಾರ್ಡನ್ನರೇ ಬಂದು ಆ ಹಣವನ್ನು ನನಗೆ ಕೊಡುತ್ತೇನೆಂದು ಹೇಳಿದರೆ ಮಾತ್ರ ಸಹಿ ಹಾಕುತ್ತೇನೆ’ ಎಂದರು.
ನಾನು ಜಟಗೊಂಡ ಅವರ ಬಳಿ ಓಡಿದೆ. ಅವರಿಗೆ ಇದನ್ನು ವಿವರಿಸಿ ಹೇಳಿದಾಗ, ‘ನಡೆ, ನಾನು ಬಂದು ಹೇಳುತ್ತೇನೆ’ ಎಂದು ಬಂದರು. ‘ಕಾಷನ್ ಡಿಪಾಸಿಟ್ ವಾಪಸ್ಸು ಬಂದಾಗ ಹಣವನ್ನು ನಿಮಗೆ ಕೊಡುತ್ತೇನೆ ಸಾರ್. ಅವನಿಗೆ ಸಿ.ಆರ್. ಕೊಟ್ಟು ಬಿಡಿ’ ಎಂದು ಜಟಗೊಂಡ ಹೇಳಿದಾಗ, ನಿಂಗೇಗೌಡರು ಒಂದು ಹೊಸ ವರಸೆ ತೆಗೆದರು. ‘ನೀವು ಹೇಳುವುದನ್ನು ರೈಟಿಂಗ್‌ನಲ್ಲಿ ಬರೆದುಕೊಡಬೇಕು’ ಎಂದು ಪಟ್ಟು ಹಿಡಿದರು.
ಆಗ ಜಟಗೊಂಡ ಅವರು, ‘ಸಾರ್, ನಾನು ಒಬ್ಬ ಗೌರ್‍ನಮೆಂಟ್ ಸರ್ವೆಂಟ್. ಹಾಗೆ ವಾಪಸ್ ಬಂದ ಡಿಪಾಸಿಟ್ ಹಣವನ್ನು ನೇರವಾಗಿ ನಿಮಗೆ ಕೊಡಲಾಗುವುದಿಲ್ಲ. ಈತ ಬಂದು ಸಹಿ ಮಾಡಿದ ಮೇಲೆಯೇ ನಾನು ಅದನ್ನು ನಿಮಗೆ ಕೊಡಿಸಬಹುದು. ಈತ ನನ್ನ ಮಾತನ್ನು ಮೀರುವುದಿಲ್ಲ ಎಂಬ ನಂಬಿಕೆ ನನಗಿದೆ. ಆ ರೀತಿಯಲ್ಲಿ ಲೆಟರ್ ಬರೆದುಕೊಡಲಾಗುವುದಿಲ್ಲ. ದಯವಿಟ್ಟು ಹುಡುಗನಿಗೆ ತೊಂದರೆ ಮಾಡಬೇಡಿ’ ಎಂದರು. ಜಟಗೊಂಡ ಅವರ ಬೇಡಿಕೆಗೂ ನಿಂಗೇಗೌಡರು ಅಡ್ಡತಲೆಯಾಡಿಸಿದಾಗ ನನ್ನ ತಾಳ್ಮೆ ತಡೆಯಲಿಲ್ಲ. ಅವರ ಮುಂದಿದ್ದ ನನ್ನ ಅರ್ಜಿ ಹಾಳೆಯನ್ನು ತೆಗೆದುಕೊಂಡು ಪರಪರ ಹರಿದು ಅವರ ಮುಖದ ಮೇಲೆ ಬಿಸಾಕಿ, ‘ನೀವು ಸಾಚಾ ಎಂದು ತಿಳಿಯಬೇಡಿ. ಹುಡುಗರಿಂದ ಏನೇನು ಕೆಲಸ ಮಾಡಿಸಿಕೊಂಡಿದ್ದೀರಾ, ಎಷ್ಟೆಷ್ಟು ಕೋಳಿ, ಮೊಲಗಳನ್ನು ತರಿಸಿಕೊಂಡು ತಿಂದಿದ್ದೀರಾ, ಮಂಕರಿ, ಬುಟ್ಟಿ ಹೆಣೆಸಿಕೊಂಡಿದ್ದೀರಾ ಎಲ್ಲಾ ನನಗೆ ಗೊತ್ತಿದೆ. ನಾನು ದುಡ್ಡು ಕೊಡುವುದಿಲ್ಲ. ಆದರೆ ನನ್ನ ಸಿ.ಆರ್.ಅನ್ನು ನಾನು ತೆಗೆದುಕೊಂಡೇ ತೀರುತ್ತೇನೆ ನೋಡಿ’ ಎನ್ನುತ್ತಾ, ನನ್ನನ್ನು ಸಮಾಧಾನದಿಂದಿರುವಂತೆ ಹೇಳುತ್ತಿದ್ದ ಜಟಗೊಂಡ ಅವರನ್ನು ಎಬ್ಬಿಸಿಕೊಂಡು ಹೊರಬಂದುಬಿಟ್ಟೆ!
ಅದಾದ ಆರು ತಿಂಗಳಲ್ಲಿ ಹೈಸ್ಕೂಲಿಗೆ ಹೊಸ ಹೆಡ್ಮಾಸ್ಟರ್ ಬಂದಿದ್ದಾರೆ ಎಂಬ ವಿಷಯವನ್ನು ಜಟಗೊಂಡ ಅವರೇ ಹೇಳಿಕಳುಹಿಸಿದ್ದರು. ನಾನು ಅರ್ಜಿ ಬರೆದುಕೊಂಡೇ ಹೋಗಿದ್ದೆ. ನಿಂಗೇಗೌಡರು ಅದೇ ಕಿತ್ತು ಹೋದ ನೋಟ್ಸನ್ನು ಹಿಡಿದುಕೊಂಡು ಮಕ್ಕಳಿಗೆ ಉತ್ತರ ಬರೆಸುತ್ತಿದ್ದರು. ನನ್ನ ಅರ್ಜಿಗೆ ಹೆಡ್ಮಾಸ್ಟರೇನೋ ಮಾತನಾಡದೆ ಸಹಿ ಹಾಕಿದರು. ಆದರೆ ನಾನು ಆ ಲೆಟರನ್ನು ಕ್ಲರ್ಕ್ ಬಳಿ ತಂದಾಗ, ಕ್ಲರ್ಕ್ ಮೇಲೆ ಕೆಳಗೆ ನೋಡಿ ‘ಏನಪ್ಪಾ, ನೀನು ನಿಂಗೇಗೌಡರಿಗೆ ದುಡ್ಡು ಕೊಡಬೇಕಂತೆ. ಅದನ್ನು ಕೊಡೋವರೆಗೆ ನಿನ್ನ ಸಿ.ಆರ್. ಕೊಡಲಾಗುವುದಿಲ್ಲ’ ಎಂದುಬಿಟ್ಟ.
ನಾನು ‘ನೋಡಿ ಹೆಡ್ಮಾಸ್ಟರು ಸಹಿ ಹಾಕಿದ್ದಾರೆ. ಆದ್ದರಿಂದ ನೀವು ಕೊಡಲೇ ಬೇಕು. ನಾನು ಸ್ಕೂಲಿಗೇನು ದುಡ್ಡು ಉಳಿಸಿಕೊಂಡಿಲ್ಲ’ ಎಂದು ಜೋರು ದನಿಯಲ್ಲೇ ವಾದಿಸಿದೆ.
ನನ್ನ ದನಿಯನ್ನು ಕೇಳಿ ಎದ್ದು ಬಂದ ಹೆಡ್ಮಾಸ್ಟರಿಗೆ ಕ್ಲರ್ಕ್ ತಲೆ ಕೆರೆದುಕೊಳ್ಳುತ್ತಾ ‘ಸಾರ್, ಇವರು ನಿಂಗೇಗೌಡರಿಗೆ ಏನೋ ದುಡ್ಡು ಕೊಡಬೇಕಂತೆ. ಆದ್ದರಿಂದ ಸಿ.ಆರ್.ಕೊಡಬೇಡ ಅಂದಿದ್ದಾರೆ ನಿಂಗೇಗೌಡ್ರು’ ಎಂದ.
ಹೆಡ್ಮಾಸ್ಟ್ರು ನನ್ನ ಕಡೆಗೆ ತಿರುಗಿ, ‘ಏನ್ರಿ. ಎಷ್ಟು ಕೊಡಬೇಕ್ರಿ? ಯಾವ ಹಣಾನ್ರಿ ಅದು. ಫೀಸು ಗೀಸು ಕಟ್ಟಿಲ್ವ?’ ಎಂದರು.
ನಾನು ‘ಸಾರ್, ಅದು ಪರ್ಸನಲ್ ವಿಷಯ ಸಾರ್. ನಾನು ಸ್ಕೂಲಿಗೆ ಯಾವುದಾದರು ಬಾಕಿ ಉಳಿಸಿಕೊಂಡಿದ್ರೆ ಹೇಳಿ. ಇಲ್ಲೇ ಇವಾಗಲೇ ಕೊಟ್ಟು ಬಿಡುತ್ತೇನೆ’ ಎಂದು ನಿರ್ಧಾರಯುತವಾಗಿ ಹೇಳಿದೆ.
ಹೆಡ್ಮಾಸ್ಟರು ಕ್ಲರ್ಕ್ ಕಡೆ ತಿರುಗಿ ‘ಏನ್ರಿ ಅದು ಸ್ಕೂಲಿನ ಬಾಕಿಯೇನ್ರಿ’ ಎಂದರು.
ಆತ ‘ಇಲ್ಲ’ ಎಂದ.
ತಕ್ಷಣ ಹೆಡ್ಮಾಸ್ಟರು ‘ಮತ್ತೆ ನಿಮಗ್ಯಾಕ್ರಿ ಇಲ್ಲದ ಉಸಾಬರಿ. ಸುಮ್ಮನೆ ಸಿ.ಆರ್. ಬರೆದುಕೊಡ್ರಿ. ನಾನು ಸಹಿ ಹಾಕಿಕೊಡುತ್ತೇನೆ’ ಎಂದುಬಿಟ್ಟರು.
ಕೇವಲ ಹತ್ತೇ ನಿಮಿಷದಲ್ಲಿ ನನ್ನ ಸಿ.ಆರ್. ನನ್ನ ಕೈಯಲ್ಲಿತ್ತು! ಅಷ್ಟು ಹೊತ್ತಿಗೆ ಪೀರಿಯಡ್ ಮುಗಿದು ಬೆಲ್ ಹೊಡೆಯಿತು. ನಿಂಗೇಗೌಡರು ಕ್ಲಾಸಿನಿಂದ ಹೊರಬರುತ್ತಿದ್ದರು. ನಾನು ವಿಜಯದ ನಗೆ ನಕ್ಕೆ!

7 comments:

PARAANJAPE K.N. said...

ಚೆನ್ನಾಗಿದೆ ನಿಮ್ಮ ಹೋರಾಟದ ಬದುಕು. ಸ್ವಾನುಭವದ ಲೇಖನಗಳು ಹೀಗೆ ಕುತೂಹಲಕಾರಿಯಾಗಿರ್ತಾವೆ. ಮು೦ದೇನಾಯ್ತು,ನಿ೦ಗೇಗೌಡರಿಗೆ ಬಾಕಿ ಕೊಟ್ರಾ ?? ಬರೆಯಿರಿ.

ಸಾಗರದಾಚೆಯ ಇಂಚರ said...

ನಿಮ್ಮ ಕಥೆಗಳನ್ನು ಓದುತ್ತಾ ಇದ್ರೆ ಸಮಯ ಹೋಗೋದೇ ಗೊತ್ತಾಗೊಲ್ಲ, ತುಂಬಾ ಸೊಗಸಾಗಿದೆ ಕಥೆ ಹಾಗೂ ಹೋರಾಟದ ಬದುಕು,

shivu said...

ಸರ್,

ನಿಮ್ಮ ಹೈಸ್ಕೂಲ್ ಕಥೆಗಳನ್ನು ಓದುತ್ತಿದ್ದರೇ...ಮನಸ್ಸಿಗೆ ಏನೋ ಒಂದು ರೀತಿಯ ಖುಷಿ ಉಲ್ಲಾಸ ಉಂಟಾಗುತ್ತದೆ...

ಆ ವಯಸ್ಸಿನಲ್ಲೂ ನಿಮ್ಮ ಹಠ ಚಲ...ಆತ್ಮವಿಶ್ವಾಸ ಜೊತೆಗೆ ಮೊಂಡುತನ ಎಲ್ಲವನ್ನೂ ಸುಂದರವಾಗಿ ಅನಾವರಣಗೊಳಿಸಿದ್ದೀರಿ....

ಧನ್ಯವಾದಗಳು..

Anonymous said...

ಮಿತ್ರರಾದ ಸತ್ಯನಾರಾಯಣ ಹಾಗೂ ಕಲಿಗಣನಾಥ ಅವರೆ, ಸಿದ್ದಮುಖಿಯವರ ಚಿಂತನೆಯನ್ನು ಪ್ರಶ್ನೆಪತ್ರಿಕೆ ಎಂದು ಮೂದಲಿಸುವುದು ಬೇಡ. ದೀನದಲಿತರ ಬಗ್ಗೆ ಸಿದ್ದಮುಖಿಯವರಿಗೆ ನೈಜ ಕಾಳಜಿಯಿದೆ. ದಲಿತ ಅಭ್ಯುದಯಕ್ಕೆ ಹೋರಾಡಲು ಅವರು ಕಂಕಣಬದ್ಧರು. ದಲಿತರ ನಿಜ ಸಮಸ್ಯೆಗಳನ್ನು ಸಿದ್ದಮುಖಿಯವರು ತಮ್ಮ ಪ್ರಶ್ನೆಗಳಲ್ಲಿ ಗುರುತಿಸಿದ್ದಾರೆ. ಅಮೂರ್ತವಾಗಿ ದಲಿತ ಸಮಸ್ಯೆಗಳ ಬಗ್ಗೆ ಮಾತನಾಡಿ ಮಂಕುಬೂದಿ ಎರಚುವವರೇ ಹೆಚ್ಚಾಗಿರುವ ಈ ಕಾಲದಲ್ಲಿ ಸಿದ್ದಮುಖಿಯವರ ಯತ್ನ ಶ್ಲಾಘನೀಯ. ಅವರು ಹಾಕಿರುವ ಎಲ್ಲಾ ಪ್ರಶ್ನೆಗಳೂ ಇಂದಿನ ಸಂದರ್ಭದಲ್ಲಿ ಸಮಂಜಸವಾಗಿವೆ. ದಲಿತರ ನಿಜವಾದ ತವಕ ತಲ್ಲಣಗಳನ್ನು ಸಿದ್ದಮುಖಿಯವರು ತಮ್ಮ ಹನ್ನೆರಡು ಪ್ರಶ್ನೆಗಳಲ್ಲಿ ಗುರುತಿಸಿದ್ದಾರೆ. ಆದುದರಿಂದ ಅವರ ಪ್ರಶ್ನೆಗಳ ಬಗ್ಗೆ ಚಿಂತನೆ ನಡೆಸಿ ಪರಿಹಾರ ಕಂಡುಕೊಳ್ಳುವುದು ದಲಿತರ ಬಗ್ಗೆ ಕಾಳಜಿವುಳ್ಳ ಎಲ್ಲರ ಕರ್ತವ್ಯವೇ ಆಗಿದೆ. -- ಆಸಕ್ತ ಓದುಗ

Dr. B.R. Satynarayana said...

ಮಾನ್ಯ ಅನಾಮಿಕರೇ, ನನಗೆ ಇನ್ನೂ ಅರ್ಥವಾಗದಿರುವುದೆಂದರೆ, ನೀವೇಕೆ ನಿಮ್ಮ ಪರಿಚಯವನ್ನು ಮುಚ್ಚಿಟ್ಟುಕೊಂಡಿದ್ದೀರಾ ಎಂಬುದು. ಸಿದ್ಧಮುಖಿಯವರ ಕಾಳಜಿಯನ್ನು ನಾನಿಲ್ಲಿ ಸಂಶಯಿಸುತ್ತಿಲ್ಲ. ನಿಮ್ಮ ಕಾಳಜಿಯನ್ನು ನೀವು ಪರಿಚಯ ಮಾಡಿಕೊಂಡೇ ವ್ಯಕ್ತಪಡಿಸಬಹುದಲ್ಲ! ಸಂವಹನ ಸಾಧ್ಯವಾಗುವುದು ಪರಸ್ಪರರ ಅರಿವಿನ ಮೇಲೆ. ಇಲ್ಲದಿದ್ದರೆ ಅದು ಏಕಮುಖವಾಗುತ್ತದೆ ಎಂಬುದನ್ನು ನೀವೂ ಒಪ್ಪುತ್ತೀರಿ ಎಂದು ನಂಬುತ್ತೇನೆ. ಇನ್ನು ಮುಂದಾದರೂ ನಿಮ್ಮ ಹೆಸರು ಪರಿಚಯ ನೀಡಿ. ಬ್ಲಾಗಿನಲ್ಲಿ ಅದನ್ನು ವ್ಯಕ್ತಪಡಿಸಲು ಹಿಂಜರಿಕೆಯಿದ್ದಲ್ಲಿ ನನ್ನ ಈ ಮೇಲ್ ವಿಳಾಸಕ್ಕೆ satya_nbr@yahoo.com ಕಳುಹಿಸಿ. ಅದನ್ನು ನಾನು ಬಹಿರಂಗ ಪಡಿಸುವುದಿಲ್ಲ ಎಂದು ಖಚಿತ ಭರವಸೆ ನಾನು ನೀಡಬಲ್ಲೆ. ಇದುನಿಮಗಿಷ್ಟವಾಗದಿದ್ದರೆ, ಇಲ್ಲಿಗೇ ಈ ಅನಾಮಿಕ ಪತ್ರವ್ಯವಹಾರವನ್ನು ನಿಲ್ಲಿಸಿಬಿಡಿ.

Anonymous said...

ಮಿತ್ರ ಸತ್ಯನಾರಾಯಣ, ನಿಮ್ಮ ಪ್ರತಿಕ್ರಿಯೆಗೆ ಮತ್ತು ಅದರ ಹಿಂದಿನ್ ಋಜು ಭಾವನೆಗೆ ಕೃತಜ್ಞ. ನೀವು ಹೇಳಿರುವುದರಲ್ಲಿ ಸತ್ಯವಿದೆ. ಪರಿಚಯವಿದ್ದರೆ ಸಂವಹನಕ್ಕೆ ಒಂದು ದಿಶೆ ಮತ್ತು sense of purpose ಸಿಗುತ್ತದೆ. ನಿಮ್ಮ ಮಾತನ್ನು ೧೦೦% ಒಪ್ಪುತ್ತೇನೆ. ಆದರೆ ಕೆಲವು ಬಗೆಯ ಸಂವಹನದಲ್ಲಿ ವ್ಯಕ್ತಿಗಿಂತಲೂ ವಿಷಯ ಮುಖ್ಯ. ಅಂತಹ ಸಂದರ್ಭಗಳಲ್ಲಿ ವ್ಯಕ್ತಿಯ ಹೆಸರು ಮತ್ತು ಹಿನ್ನೆಲೆಯ ಅರಿವು ಸಂವಹನವನ್ನು ಸೂಕ್ಷ್ಮವಾಗಿ ಪ್ರಭಾವಿಸಿ ನಿಯಂತ್ರಿಸತೊಡಗುತ್ತದೆ. ಆಗ ವಿಷಯದ ಕುರಿತು ವಸ್ತುನಿಷ್ಠವಾಗಿ ಮಾತನಾಡುವುದು ಕಷ್ಟವಾಗುತ್ತದೆ. ಆದುದರಿಂದ ನಾನು ಅನಾಮಧೇಯನಾಗಿಯೇ ಉಳಿಯಬಯಸುತ್ತೇನೆ. ಅನಾಮಧೇಯ ವ್ಯಕ್ತಿಯೊಡನೆ ಸಂವಹನ ದುಸ್ಸಾಧ್ಯ ಎಂದೆನಿಸಿದರೆ ನಾನೊಬ್ಬ ನಿಮ್ಮ ಕನಸಿನಲ್ಲಿ ಬಂದ ವ್ಯಕ್ತಿ ಎಂದು ಭಾವಿಸಿ. ನನಗೊಂದು ಹೆಸರು ಮತ್ತು ಮೂರ್ತ ರೂಪವನ್ನು ನೀವೇ ಕೊಡಿ. --ಆಸಕ್ತ ಓದುಗ

Anonymous said...

ಸತ್ಯನಾರಾಯಣ, ತಾವಿನ್ನೂ ಮೌನದ ಮುಸಕನ್ನು ಹೊದ್ದು ಕುಳಿತಿದ್ದೀರಿ. ಸಿದ್ದಮುಖಿಯವರ ಪ್ರಶ್ನೆಗಳು ಅರ್ಥಹೀನವೆ? ಬಾಲಿಶವೆ? ತಮ್ಮಂತಹ ಸಹೃದಯ ಪ್ರಜ್ಞೆವುಳ್ಳ ದಲಿತ ಹಿತಾಕಾಂಕ್ಷಿಗಳೇ ದಿವ್ಯ ಮೌನ ವಹಿಸಿದರೆ ಇನ್ನು ದಲಿತರ ನಿಜ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವವರು ಯಾರು? -- ಆಸಕ್ತ ಓದುಗ