Monday, April 13, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 10

ಹಾಸ್ಟೆಲ್ಲಿನ ಕಳ್ಳತನವೂ ಕುಂದೂರಿನಲ್ಲಾದ ಕೊಲೆಯೂ!
ಕುಂದೂರಿನಲ್ಲಿ ಒಂದು ಕೊಲೆಯಾಗಿತ್ತು. ಆಗ ನಾನು ಹತ್ತನೇ ತರಗತಿಯಲ್ಲಿದ್ದೆ. ಆ ಕೊಲೆಯಾದ ರಾತ್ರಿಯೇ ಹಾಸ್ಟೆಲ್ಲಿನಲ್ಲಿ ಕಳ್ಳತನವೂ ಆಗಿತ್ತು. ಅದಕ್ಕೇ ಈ ತಲೆಬರಹ!
ಆ ಕಳ್ಳತನದಿಂದಾಗಿ ನಾನು ಮತ್ತೆ ಸಿ.ಒ.ಆರ್.ಪಿ.ರೇಷನ್ ಮೇಷ್ಟ್ರನ್ನು ಎದುರು ಹಾಕಿಕೊಳ್ಳುವಂತಾಗಿದ್ದು ಮಾತ್ರ ಸತ್ಯ. ಎಕ್ಸಾಮಿನೇಷನ್ ಫೀಸೋ ಏನೋ, ಆಗ ವಿದ್ಯಾರ್ಥಿಗಳು ತಲಾ ಮೂವತ್ತು ರೂಪಾಯಿ ಐವತ್ತು ಪೈಸೆಯನ್ನು ಸ್ಕೂಲಿಗೆ ಕಟ್ಟಬೇಕಾಗಿತ್ತು. ಆದಾಯ ಸರ್ಟಿಫಿಕೇಟ್ ಮಾಡಿಸಿಕೊಂಡು ಬಂದವರು ಕೇವಲ ಹತ್ತೂವರೆ ರೂಪಾಯಿಯನ್ನು ಕಟ್ಟಿದರೆ ಸಾಕಾಗಿತ್ತು. ಸ್ಕೂಲಿನಲ್ಲಿದ್ದ ಬಹುತೇಕ ಎಲ್ಲರೂ ಆದಾಯ ಸರ್ಟಿಫಿಕೇಟ್ ಮಾಡಿಸಿಕೊಂಡು ಬರುವವರೇ ಆಗಿದ್ದರು. ನಾನು ಮಾನೀಟರ್ ಆಗಿದ್ದರಿಂದ ಆ ಹತ್ತೂವರೆ ರೂಪಾಯಿಯನ್ನು ಸಂಗ್ರಹಿಸಲು ಡಿ.ಎಸ್.ಎನ್. ನನಗೇ ವಹಿಸಿದ್ದರು. ಪ್ರತಿ ದಿನ ಸಂಜೆ ಸಂಗ್ರಹವಾಗಿದ್ದಷ್ಟನ್ನು ಅವರಿಗೆ ಕೊಡಬೇಕಾಗಿತ್ತು. ಅಂದು ಶನಿವಾರ. ಏಳುಜನ ತಲಾ ಹತ್ತೂವರೆ ರೂಪಾಯಿಗಳನ್ನು ಕೊಟ್ಟಿದ್ದರು. ನಾನು ಅದನ್ನು ಕೊಡಲು ಹೋದಾಗ, ಊರಿಗೆ ಹೊರಡಲು ಸಿದ್ಧರಾಗಿದ್ದ ಅವರು ‘ನೀನೆ ಇಟ್ಟುಕೊಂಡಿರು. ಸೋಮವಾರ ಕೊಡು’ ಎಂದುಬಿಟ್ಟರು. ನಾನು ಸುಮ್ಮನಾದೆ. ಹಾಸ್ಟೆಲ್ಲಿಗೆ ಬಂದ ನಂತರ ಪೆಟ್ಟಿಗೆ ಒಳಗೆ ಆ ದುಡ್ಡನ್ನು ಹಾಕಿ ಭದ್ರಪಡಿಸಿದೆ.
ಸೋಮವಾರ ಬೆಳಗಿನ ಜಾವ ನಾಲ್ಕೂವರೆ ಗಂಟೆಗೆ ನಾವು ಎದ್ದು ಓದಿಕೊಳ್ಳಲು, ವಾರ್ಡನ್ ಭಾನುವಾರ ರಾತ್ರಿ ಇಟ್ಟು ಹೋಗಿದ್ದ ಅಲರಾಮ್, ಬೆಳಗಿನ ಜಾವ ಹೊಡೆದುಕೊಂಡಾಗ ಹತ್ತನೇ ತರಗತಿಯ ಹದಿಮೂರು ಜನರಲ್ಲಿ ಕೆಲವರು ದಡಬಡ ಎದ್ದೆವು. ಎದ್ದು ನೋಡುವುದೇನು? ನನ್ನದೂ ಸೇರಿದಂತೆ ಮೂವರ ಪೆಟ್ಟಿಗೆಗಳೇ ಮಾಯ! ಅದರಲ್ಲಿಟ್ಟಿದ್ದ ಎಪತ್ತಮೂರೂವರೆ ರೂಪಾಯಿಯನ್ನು ನೆನೆದು ನನಗಂತೂ ಗಾಬರಿಯಾಗಿತ್ತು. ಬೇರೆ ಇಬ್ಬರು, -ಒಬ್ಬ ಸೋಮಶೇಕರ, ಇನ್ನೊಬ್ಬ ರಮೇಶ ಎಂದು ನೆನಪು- ಇಬ್ಬರೂ ಆ ನೀರವ ರಾತ್ರಿಯಲ್ಲಿ ಬಿಕ್ಕಳಿಸಿಕೊಂಡು ಅಳುತ್ತಿದ್ದರು. ಹಾಸ್ಟೆಲ್ಲಿನಲ್ಲಿದ್ದ ಎಲ್ಲಾ ದೀಪಗಳನ್ನು ಹಚ್ಚಿ ಹುಡುಕಾಟ ಶುರುವಾಯಿತು. ಹೊರಗೆ ಹೋಗಲು ಇದ್ದ ಏಕೈಕ ಬಾಗಿಲು ಹಾಕಿದಂತೆಯೇ ಇತ್ತು. ಅದನ್ನು ಭದ್ರಪಡಿಸಲು ಇದ್ದ ಏಕೈಕ ಹಾಗೂ ಸುಲಭ ಮಾರ್ಗವೆಂದರೆ, ಒಂದು ಬಿದಿರು ಗಳವನ್ನು ಬಾಗಿಲಿನ ಮೇಲ್ಭಾಗಕ್ಕೂ ನೆಲಕ್ಕೂ ಓರೆಯಾಗಿ ಇಡುವುದು! ಹೊರಗೆ ನೋಡುವ ಧೈರ್ಯ ಯಾರಲ್ಲೂ ಇರಲಿಲ್ಲ. ಐದೂವರೆಗೆಲ್ಲಾ ವಾರ್ಡನ್ ನಾವು ಓದುತ್ತಿದ್ದೇವೋ ಇಲ್ಲವೋ ಎಂದು ನೋಡಲು ಬರುತ್ತಿದುದರಿಂದ, ಅವರು ಬರುವವರೆಗೂ ಕಾಯಲು ನಿರ್ಧರಿಸಿದ್ದೆವು.
ವಾರ್ಡನ್ ಬಂದು ಬಾಗಿಲು ಬಡಿದಾಗಲೇ ನಮಗೆ ನೆಮ್ಮದಿ. ಒಳಗೆ ಬಂದವರಿಗೆ ಎಲ್ಲಾ ವಿಷಯವನ್ನು ತಿಳಿಸಿದೆವು. ಅವರು ಹೊರಗಡೆ ದೀಪ ಹಿಡಿದುಕೊಂಡು ಐದಾರು ಮಂದಿಯನ್ನು ಕರೆದುಕೊಂಡು ಪೆಟ್ಟಿಗೆ ಏನಾದರೂ ಸಿಗಬಹುದೆ ಎಂದು ಹುಡುಕಲು ಹೊರಟರು. ಹಾಸ್ಟೆಲ್ ಕಟ್ಟಡದ ಎಡಬದಿಯಲ್ಲೇ ಮೂರೂ ಪೆಟ್ಟಿಗೆಗಳು ಅನಾಥವಾಗಿ ಬಿದ್ದಿದ್ದವು! ಅದರಲ್ಲಿದ್ದ ಬಟ್ಟೆ ಬರೆ, ಪುಸ್ತಕಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಎಲ್ಲವನ್ನೂ ಎತ್ತಿ ತಂದು ಜೋಡಿಸಿ ನೋಡಿದಾಗ ನನ್ನ ಪೆಟ್ಟಿಗೆಯಲ್ಲಿದ್ದ ಹಣ ಮಾತ್ರ ಮಾಯವಾಗಿತ್ತು. ನನ್ನ ಪೆಟ್ಟಿಗೆಯಲ್ಲಿ ಹಣ ಇದೆ ಎಂದು ಗೊತ್ತಿರುವವರೇ, ಈ ಕೆಲಸ ಮಾಡಿದ್ದಾರೆ ಹಾಗೂ ಅನುಮಾನ ಬರದಿರಲಿ ಎಂದು ಬೇರೆ ಎರಡು ಪೆಟ್ಟಿಗೆಗಳನ್ನು ಎತ್ತಿ ಹೊರಗೆ ಹಾಕಿದ್ದಾರೆ, ಎಂದು ವಾರ್ಡನ್ ತೀರ್ಮಾನಿಸಿದರು. ಹಾಕಿದ ಬಾಗಿಲು ಹಾಕಿದಂತೆಯೇ ಇದ್ದುದರಿಂದ ಕಳ್ಳ ಹೊರಗಿನಿಂದ ಬಂದಿರಲೂ ಸಾಧ್ಯವಿರಲಿಲ್ಲ. ಆದರೂ ಕಳ್ಳ ಯಾರು ಎಂಬುದು ಮಾತ್ರ ಬುದ್ದಿವಂತರಾದ ವಾರ್ಡನ್ನಿಗೂ ಪತ್ತೆ ಹಚ್ಚಲು ಆಗಲಿಲ್ಲ! ಇಂದಿಗೂ ಅದೊಂದು, ನನ್ನ ಬದುಕಿನ ಬಗೆಹರಿಯದ ವಿಸ್ಮಯ!
ರಾತ್ರಿ ನಡೆದ ಘಟನೆಯನ್ನು ಸದ್ಯಕ್ಕೆ ಯಾರಿಗೂ ಹೇಳಬಾರದೆಂದು, ಬೇಕಾದರೆ ಕಳೆದು ಹೋಗಿರುವ ದುಡ್ಡಿನ ಬಗ್ಗೆ ನಿಂಗೇಗೌಡರಿಗೆ ನಾನೇ ಹೇಳುತ್ತೇನೆಂದು ವಾರ್ಡನ್ ಹೇಳಿದ್ದರಿಂದ ನಾವ್ಯಾರು ಆ ವಿಷಯವನ್ನು ಬಾಯಿ ಬಿಟ್ಟಿರಲಿಲ್ಲ. ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೇ ಕುಂದೂರಿನ ಒಬ್ಬ ವ್ಯಕ್ತಿ ಕೊಲೆಯಾಗಿರುವ ಬಿಸಿಬಿಸಿ ಸುದ್ದಿ ಬಂದಾಗ, ಯಕಶ್ಚಿತ್ ಎಪ್ಪತ್ತಮೂರೂವರೆ ರೂಪಾಯಿಯ ಕಳ್ಳತನ, ಅದೂ ಮನೆಯಲ್ಲೇ ಇರುವ ಕಳ್ಳನ ವಿಚಾರ ಯಾರಿಗೆ ತಾನೇ ಮುಖ್ಯವಾಗುತ್ತದೆ ಹೇಳಿ!
ಅಂದು ಬೆಳಿಗ್ಗೆ ಕುಂದೂರುಮಠದಲ್ಲಿ ಕಾಡ್ಗಿಚ್ಚಿನಂತೆ ಒಂದು ಸುದ್ದಿ ಹರಡಿತ್ತು. ಕುಂದೂರಿನ ವ್ಯಕ್ತಿಯೊಬ್ಬ ಕೊಲೆಯಾಗಿದ್ದ. ಕುಂದೂರುಮಠದಿಂದ ಕುಂದೂರಿಗೆ ಹೋಗುವ ಮಾರ್ಗದ ರಸ್ತೆ ಬದಿಯಲ್ಲೇ ಆ ಕೊಲೆಯಾಗಿತ್ತು. ಸುತ್ತಮುತ್ತಲಿನ ಊರವರು ಸಾವಿರಾರು ಜನ ಸೇರಿಬಿಟ್ಟಿದ್ದರು. ಸತ್ತವನು ಜನತಾಪಕ್ಷದವನೆಂದು, ಕೊಲೆ ಮಾಡಿದವರು ಕಾಂಗ್ರೆಸ್‌ನವರೆಂದು ಜನ ಮಾತನಾಡಿಕೊಳ್ಳುತ್ತಿದ್ದರು. ಇನ್ನು ಕೆಲವರು ಸತ್ತವನು ಇತ್ತೀಚಿಗೆ ಕಾಂಗ್ರೆಸ್ ಸೇರಿದ್ದನೆಂದು, ಅದರಿಂದ ಜನತಾಪಕ್ಷದವರೇ ಕೊಲೆ ಮಾಡಿಸಿದ್ದಾರೆಂದು ಮಾತನಾಡಿಕೊಳ್ಳುತ್ತಿದ್ದರು. ಅಂದು ಶಾಲೆ, ಕಾಲೇಜಿಗೆ ರಜೆ ಘೊಷಿಸಿಲಾಯಿತು.
ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಹಾಸನದಿಂದ ಬಂದ ಪೊಲೀಸ್ ವ್ಯಾನಿನಲ್ಲಿ ತೋಳದಂತಿದ್ದ ಎರಡು ನಾಯಿಗಳು ಬಂದಾಗ, ಕಳ್ಳ ಇನ್ನೇನು ಸಿಕ್ಕಿಯೇ ಬಿಟ್ಟ ಎಂದು ನಾವು ಮಾತನಾಡಿಕೊಳ್ಳುತ್ತಿದ್ದೆವು. ಆ ನಾಯಿಗಳನ್ನು ಶವದ ಸುತ್ತ ಮುತ್ತಲಿನ ಜಾಗದಲ್ಲಿ ಮೂಸಿ ನೋಡಲು ಬಿಟ್ಟರು. ಸ್ವಲ್ಪ ಹೊತ್ತಿನ ನಂತರ ಎರಡೂ ನಾಯಿಗಳು, ತಮ್ಮನ್ನು ಹಿಡಿದಿದ್ದ ಪೊಲೀಸಿನವರನ್ನೂ ಎಳೆದುಕೊಂಡು ಒಂದೇ ದಿಕ್ಕಿಗೆ ಓಡತೊಡಗಿದವು. ಆ ಭಾಗದಲ್ಲಿ ನಿಂತಿದ್ದ ಜನರೆಲ್ಲಾ ಹೋ ಎಂದು ಇಬ್ಭಾಗವಾಗಿ ಓಡಿದರು. ನಾವಂತೂ ಅದು ಯಾರನ್ನಾದರು ಕಚ್ಚಿಯೇ ಬಿಡುತ್ತದೆ ಆತನೇ ಕೊಲೆಗಾರ ಎಂದು ಉಸಿರು ಬಿಗಿ ಹಿಡಿದು ನಿಂತಿದ್ದೆವು. ಆ ನಾಯಿಗಳು ಅಲ್ಲಲ್ಲಿ ಮೂಸುತ್ತಾ, ಓಡುತ್ತಾ, ನಡೆಯುತ್ತಾ ಮಠದ ದಾರಿ ಹಿಡಿದಾಗ, ಕೊಲೆಗಾರರು ಮಠದಲ್ಲೇ ಅವಿತಿರಬಹುದು ಎಂದು ಜನ ಮಾತನಾಡಿಕೊಂಡರು. ಆದರೆ ನಾಯಿಗಳು ಓಡುತ್ತಾ, ಮಠದ ಎಡಬದಿಗೆ ಕೂಗಳತೆಯ ದೂರದಲ್ಲಿದ್ದ ನಮ್ಮ ಹಾಸ್ಟೆಲಿನ ಕಡೆಗೆ ತಿರುಗಿದಾಗ ನಮಗೆಲ್ಲಾ ಆಶ್ಚರ್ಯ. ಇನ್ನೇನು ಹಾಸ್ಟೆಲಿನ ಒಳಗೆ ನಾಯಿ ನುಗ್ಗಿಯೇ ಬಿಟ್ಟಿತು ಎನ್ನುವಷ್ಟರ ಮಟ್ಟಿಗೆ ಹತ್ತಿರವಾಗಿ, ಮೂಸುತ್ತಾ ಮೂಸುತ್ತಾ ಬೆಳಗಿನ ಜಾವ ನಮ್ಮ ಪೆಟ್ಟಿಗೆಗಳು ಬಿದ್ದಿದ್ದ ಜಾಗದಲ್ಲೂ ಮೂಸುತ್ತಾ ಉತ್ತರಕ್ಕೆ ಇದ್ದ ಹಳ್ಳದ ಕಡೆಗೆ ಓಡಿದವು! ಬಾಯಿಗೆ ಬಂದಿದ್ದ ನಮ್ಮ ಹೃದಯಗಳು ಸ್ವಸ್ಥಾನ ಸೇರಿದ್ದು ಆಗಲೇ. ಆ ನಾಯಿಗಳು ಮುಂದೆ ಹಳ್ಳದ ನೀರಿರುವ ಜಾಗದವರೆಗೂ ಹೋಗಿ ವಾಪಸ್ ಬಂದಾಗ, ಆ ನೀರಿನಲ್ಲಿ ಸ್ನಾನ ಮಾಡಿಕೊಂಡು ಕೊಲೆಗಾರರು ಮುಂದಕ್ಕೆ ಹೋಗಿದ್ದಾರೆ ಎಂಬ ತೀರ್ಮಾನಕ್ಕೆ ಜನ ಬಂದರು.
ಕೊಲೆಗಾರ ಸಿಕ್ಕನೋ ಬಿಟ್ಟನೋ ಗೊತ್ತಿಲ್ಲ. ಆದರೆ ಮಂಗಳವಾರ ಬೆಳಿಗ್ಗೆಯೇ ನಿಂಗೇಗೌಡರು ಹಣ ಕೇಳಿದಾಗ ಮಾತ್ರ, ಆ ಯಕಶ್ಚಿತ್ ಎಪ್ಪತ್ತಮೂರೂವರೆ ರೂಪಾಯಿಯ ಕಳ್ಳತನವೇ ಅತ್ಯಂತ ಪ್ರಮುಖವಾದ ವಿಷಯವಾಗಿತ್ತು. ನಾನು ನಡೆದ ವಿಷಯವನ್ನು ಹೇಳಿ ‘ಸದ್ಯಕ್ಕೆ ತನ್ನಲ್ಲಿ ಹಣವಿಲ್ಲ’ವೆಂದು ಹೇಳಿದೆ. ಬೇರೆ ಹುಡುಗರೂ ಕಳ್ಳತನವಾದ ವಿಚಾರವನ್ನು ಹೇಳಿದ್ದರಿಂದ, ನಿಂಗೇಗೌಡರು ‘ಬೇಗ ಹಣಕ್ಕೆ ವ್ಯವಸ್ಥೆ ಮಾಡಬೇಕು’ ಎಂದು ಹೇಳಿದರು. ‘ಕಳ್ಳ ಸಿಕ್ಕ ಕೂಡಲೇ ತಮ್ಮ ಹಣವನ್ನು ಕೊಡುತ್ತೇನೆ’ ಎಂದು ನಾನು ಹೇಳಿದೆ. ಆದರೆ ಆ ಕಳ್ಳ ಸಿಗಲೂ ಇಲ್ಲ; ನಾನು ಅವರಿಗೆ ಆ ಹಣವನ್ನು ಕೊಡಲೂ ಇಲ್ಲ!
ಹಾಗೆಂದ ಮಾತ್ರಕ್ಕೆ ನಿಂಗೇಗೌಡರು ಆ ವಿಷಯವನ್ನು ಸುಮ್ಮನೆ ಬಿಟ್ಟರೆಂದು ನೀವು ಭಾವಿಸಬೇಕಾಗಿಲ್ಲ. ಆಗಾಗ ಅವರು ಹಣವನ್ನು ಕೊಡು ಎನ್ನುತ್ತಿದ್ದುದ್ದು, ನಾನು ಕಳ್ಳ ಸಿಕ್ಕ ಮೇಲೆ ಕೊಡುತ್ತೇನೆ ಎನ್ನುವುದು ಮುಂದುವರೆದೇ ಇತ್ತು. ‘ಪರೀಕ್ಷೆಗೆ ಹೋಗುವಾಗ ಅಡ್ಮಿಷನ್ ಟಿಕೆಟ್ ಕೊಡುವುದಿಲ್ಲ’ ಎಂಬ ಬೆದರಿಕೆಯನ್ನು ನಾನು ಅಷ್ಟೊಂದು ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. ಈ ಹೆದರಿಕೆಯನ್ನು ಮುಂದಿಟ್ಟಿದ್ದ ಬಿ.ಬಿ.ಮಂಜುನಾಥ ಎಂಬ ಸ್ನೇಹಿತನ ಎದುರಿಗೆ, ‘ಕೊಡದೆ ಏನು ಮಾಡುತ್ತಾರೆ? ನನಗೆ ಅಡ್ಮಿಷನ್ ಟಿಕೆಟ್ ಕೊಡದಿದ್ದರೆ, ಈ ಬಾರಿ ಎಸ್ಸೆಸ್ಸೆಲ್ಸಿ ರಿಸಲ್ಟ್ ಸೊನ್ನೆ ತಿಳುಕೊ’ ಎಂದಿದ್ದೆ! ಯಾವ ಧೈರ್ಯದ ಮೇಲೆ ಹಾಗೆಂದಿದ್ದೆನೋ ಏನೋ, ನನಗಂತೂ ಇಂದೂ ಅರ್ಥವಾಗಿಲ್ಲ. ಆ ವರ್ಷ ನಾನೊಬ್ಬನೇ ಪಾಸಾದಾಗ ಮಂಜುನಾಥ ಆ ಮಾತನ್ನು ನೆನೆಪಿಸಿಕೊಂಡಿದ್ದ. ಈಗ ಡ್ರೈವರ್ ಆಗಿರುವ ಆತ ಸಿಕ್ಕಿದಾಗ ‘ನೀನು ಬಿಡಪ್ಪ. ಹೇಳಿದಂತೆ ನಡೆದುಕೊಂಡವನು!’ ಎಂದು ಬೈಟು ಕಾಫಿ ಕೊಡಿಸುತ್ತಾನೆ!
[ಮೊನ್ನೆ ಯುಗಾದಿ ಹಬ್ಬದ ಹಿಂದಿನ ದಿನ, ನಾನೂ ನನ್ನ ಹೆಂಡತಿ ಮಗಳೂ ಎಲ್ಲರೂ ಊರಿಗೆ ಹೋಗಿದ್ದೆವು. ಆಗ ಚೆನ್ನರಾಯಪಟ್ಟಣದ ಹಳೇ ಬಸ್ ಸ್ಟ್ಯಾಂಡಿನ ಬಳಿಯಿರುವ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಇತ್ಯಾದಿಗಳನ್ನು ಕೊಂಡುಕೊಂಡು, ಊರಿಗೆ ಹೋಗಲು ನಿಂತಿದ್ದಾಗ ಬಿ.ಬಿ. ಸಿಕ್ಕಿದ್ದ. ಆತನಿಗೆ ನನ್ನ ಹೆಂಡತಿ ಮಗಳನ್ನು ಪರಿಚಯಿಸಿದೆ. ಆತ ಅದೇ ಪ್ಲೇಟನ್ನು ಮತ್ತೆ ತಿರುವಿ ಹಾಕಿದ. 'ಮೇಡಂ. ನಮ್ಮ ಬ್ಯಾಚಿನಲ್ಲಿ ಇವನೊಬ್ಬನೇ ನೋಡಿ. ನುಡಿದಂತೆ ನಡೆದವನು' ಎಂದು. ಟೀಗೂ ಆಹ್ವಾನಿಸಿದ! ಪುಸ್ತಕದ ವಿಚಾರವನ್ನು ತಿಳಿಸಿದೆ. ಖುಷಿಯಿಂದ 'ನನಗೊಂದು ಪುಸ್ತಕ ಕೊಡಪ್ಪ, ದುಡ್ಡು ಕೊಡುತ್ತೇನೆ' ಎಂದ. ಇನ್ನೂ ಕೊಡಲಾಗಿಲ್ಲ, ಕೊಡಬೇಕು]

3 comments:

ಸಿಮೆಂಟು ಮರಳಿನ ಮಧ್ಯೆ said...

ಸತ್ಯನಾರಾಯಣರೆ...

ಬಹಳ ರೋಚಕವಾಗಿ ಬರೆದಿದ್ದೀರಿ...

ಒಂದುವೇಳೆ ಪೋಲಿಸ್ ನಾಯಿ ನಿಮ್ಮ ರೂಮಿಗೆ ಬಂದು ಬಿಟ್ಟಿದ್ದರೆ...?

ಹಾಗಾಗಲಿಲ್ಲವಲ್ಲ..!

ನಿಂಗೇ ಗೌಡರು ನಿಮ್ಮ ಬಳಿ ಹಣ ಕೇಳಿದ್ದು ತಪ್ಪೆಂದು ನನ್ನ ಭಾವನೆ..
ನೀವು ಕೊಡಲು ಹೋದಾಗ ನಾಳೆ ಕೊಡು ಅಂತ ಹೇಳಿದ್ದು ಅವರ ತಪ್ಪು...
ನೀವು ವಿದ್ಯಾರ್ಥಿ, ಕಳ್ಳತನ ಆದ ವಿಷಯ ತಿಳಿದೂ..
ನಿಮ್ಮ ಬಳಿ ಹಣ ಕೇಳ ಬಾರದಿತ್ತು...

ನಿಮ್ಮ ಅನುಭವಗಳು
ಇನ್ನಷ್ಟು ಬರಲಿ...

shivu said...

ಸರ್,

ನಿಮ್ಮ ನೆನಪಿನ ಶಕ್ತಿಗೆ ಹ್ಯಾಟ್ಸಪ್.!

ಎಲ್ಲವನ್ನು ತುಂಬಾ ಚೆನ್ನಾಗಿ ಅಚ್ಚುಕಟ್ಟಾಗಿ ಬರೆದಿದ್ದೀರಿ...ಪೋಲಿಸ್ ನಾಯಿಯ ಪ್ರಸಂಗ ನಿಜಕ್ಕೂ ಕಣ್ಣಿಗೆ ಕಟ್ಟಿದಂತೆ ಬರೆದಿದ್ದೀರಿ...
ಧನ್ಯವಾದಗಳು...

ಸಾಗರದಾಚೆಯ ಇಂಚರ said...

ತುಂಬಾ ಚೆನ್ನಾಗಿ ಬರೆದಿದ್ದೀರ, ಹೀಗೆ ಮುಂದುವರಿಯಲಿ ನಿಮ್ಮ ಪ್ರಯಾಣ