Monday, April 06, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 9

ಮೊಲದ ಮಂಜ
ಈ ನಿಂಗೇಗೌಡರ ಪುರಾಣ ಇನ್ನೂ ಇರುವಾಗಲೇ ಇಲ್ಲಿಯೇ ಮೊಲದ ಮಂಜನ ಕಥೆಯನ್ನು ಸ್ವಲ್ಪ ಹೇಳಿಬಿಡುತ್ತೇನೆ. ಏಕೆಂದರೆ ಈ ಮೊಲದ ಮಂಜನಿಗೂ ನಿಂಗೆಗೌಡರಿಗೂ ಒಂದು ರೀತಿಯಲ್ಲಿ ಗೆಳೆತನವಿತ್ತು ಹಾಗೂ ಒಂದು ವಿಷಯದಲ್ಲಿ ಜಗಳವಾಗಿತ್ತು!
ಮೊಲದ ಮಂಜ ನಮ್ಮ ತರಗತಿಯಲ್ಲಿದ್ದ ಅತ್ಯಂತ ಹಿರಿಯ ವಿದ್ಯಾರ್ಥಿ! ಸುಮಾರು ಹದಿನೆಂಟು ಇಪ್ಪತ್ತು ವರ್ಷದವನಾದ ಆತ ಇನ್ನೂ ಹತ್ತನೇ ತರಗತಿಯಲ್ಲಿಯೇ ಇದ್ದುದಕ್ಕೆ, ಆತ ಕೊಡುತ್ತಿದ್ದ ಕಾರಣ ‘ಅವನ ತಾಯಿ ಸ್ಕೂಲಿಗೆ ಸೇರಿಸಿದ್ದು ಲೇಟು’ ಎಂಬುದು. ಆತನ ತಂದೆ ತೀರಿ ಹೋಗಿದ್ದರು. ತಾಯಿಯ ಅತಿಯಾದ ಮುದ್ದಿನಿಂದ ಆತ ಓದುವುದಕ್ಕಿಂತ ಹೆಚ್ಚಾಗಿ ಮೀನು, ಮೊಲ, ಹಕ್ಕಿ ಇವುಗಳ ಬೇಟೆಯಲ್ಲಿ ತೊಡಗಿಸಿಕೊಂಡಿದ್ದೇ ಹೆಚ್ಚು. ನಮ್ಮ ತೋಟದ ಹತ್ತಿರವೇ ಇವನ ಮನೆಯಿತ್ತು. ಇವನ ತಾಯಿ ನಮ್ಮ ಮನೆಗೆ ಆಗಾಗ ಬಂದು ಹೋಗುತ್ತಿದ್ದರು. ಒಳ್ಳೆಯ ಬೇಟೆಯಾದಾಗ, ಬೇಟೆಯಾದ ಮೊಲ ಅಥವಾ ಮೀನು ಒಳ್ಳೆಯ ರೇಟಿಗೆ ಮಾರಾಟವಾಗದಿದ್ದಾಗ, ಆತ ನಮ್ಮ ಮನೆಗೆ ಅವುಗಳನ್ನು ತಂದುಕೊಡುತ್ತಿದ್ದ. ನಮಗೆ ಬೇಕಾದಾಗಲೂ ಅಷ್ಟೆ. ಹೇಳಿದರೆ ಸಾಕು. ತಂದುಕೊಡುತ್ತಿದ್ದ. ಆತನಿಗೆ ದುಡ್ಡು ಕೊಡಬೇಕೆಂದರೆ ನಮ್ಮ ತಂದೆಗೆ ಸಾಕು ಬೇಕಾಗುತ್ತಿತ್ತು. ದುಡ್ಡು ತೆಗೆದುಕೊಳ್ಳದಿದ್ದರೆ ನಮ್ಮ ತಾಯಿ ಬಯ್ಯುತ್ತಿದ್ದರು. ಇನ್ಯಾವತ್ತೂ ನೀನು ನಮಗೆ ಮೊಲ ಮೀನು ಕೊಡಬೇಡ ಅನ್ನುತ್ತಿದ್ದರು. ಆದರೆ ದುಡ್ಡು ತೆಗೆದುಕೊಂಡರೆ ಅವನ ತಾಯಿ ಬಯ್ಯುತ್ತಿದ್ದರು!
ಆತನ ಬೇಟೆ ಹುಚ್ಚು ನನಗೂ ಹಿಡಿದಿತ್ತು. ರಾತ್ರಿ ಹೊತ್ತು ನಾನೂ ಬ್ಯಾಟರಿ ಹೊತ್ತುಕೊಂಡು ಅವನ ಹಿಂದೆ ತಿರುಗುತ್ತಿದ್ದೆ. ಈಗಲೂ ನಾನು ಊರಿಗೆ ಹೋದಾಗ ಅವನನ್ನು ಆಗಾಗ ಭೇಟಿಯಾಗುತ್ತೇನೆ. ಆ ಸಮಯಕ್ಕೆ ಏನಾದರು ಬೇಟೆಯಾಗಿದ್ದರೆ ತಂದು ಕೊಡುತ್ತಾನೆ. ಈಗ ಮೊದಲಿನಷ್ಟು ಬೇಟೆ ಸಾಧ್ಯವಿಲ್ಲ. ಪ್ರಾಣಿಗಳೂ ಇಲ್ಲ; ಅರಣ್ಯ ಇಲಾಖೆಯವರೂ ಸುಮ್ಮನಿರುವುದಿಲ್ಲ. ಇನ್ನೊಂದು ವಿಷಯವೆಂದರೆ ಆತ ಹತ್ತನೇ ತರಗತಿಗೆ ಬರುವಷ್ಟರಲ್ಲಿ ಒಂದು ಕೋವಿಯನ್ನು ಕೊಂಡುಕೊಂಡಿದ್ದ!
ಈತ ಬೇಟೆ ಆಡುತ್ತಿದ್ದ ಹಲವಾರು ಮಾರ್ಗಗಳು ವಿಚಿತ್ರವಾಗಿವೆ. ಹೆಚ್ಚಾಗಿ ರಾತ್ರಿ ವೇಳೆಯಲ್ಲೇ ಆತನ ಬೇಟೆ ಕಾರ್ಯಗಳು ನಡೆಯುತ್ತಿದ್ದವು. ಅವುಗಳಲ್ಲಿ ಆತ ಮೀನು ಹೊಡೆಯುವ ಬೇಟೆಯಂತೂ ಒಂದು ರೀತಿಯ ತಪಸ್ಸು. ಮಧ್ಯರಾತ್ರಿ ವೇಳೆ, ಹಣೆಗೆ ಬ್ಯಾಟರಿ ಕಟ್ಟಿಕೊಂಡು, ಸೊಂಟದುದ್ದದ ನೀರಿನಲ್ಲಿ ನಿಂತುಕೊಂಡು, ಮೀನಿನ ಚಲನವಲನವನ್ನು ಗಮನಿಸಿ, ಕೈಯಲ್ಲಿ ಹಿಡಿದಿರುತ್ತಿದ್ದ ಚೂಪಾದ ಭರ್ಜಿಯಿಂದ ಮೀನಿಗೆ ಚುಚ್ಚುತ್ತಿದ್ದ. ಬ್ಯಾಟರಿಯ ಬೆಳಕು ಬಿದ್ದ ಜಾಗಕ್ಕೆ ಮೀನುಗಳೂ ಹಿಂಡುಹಿಂಡಾಗಿ ಬರುತ್ತಿದ್ದವು. ಬೆಳಗಿನ ಹೊತ್ತಿಗೆ ಹತ್ತು ಹನ್ನೆರಡು ಮೀನುಗಳನ್ನು ಭರ್ಜಿಯಲ್ಲಿ ಚುಚ್ಚಿ ಹಿಡಿಯುತ್ತಿದ್ದ. ಬಲೆಯನ್ನು ಬೀಸಿ ಮೀನು ಹಿಡಿಯುವುದೂ ಆತನಿಗೆ ಗೊತ್ತಿತ್ತು.
ಮೊಲದ ಬೇಟೆಗೆ ಆತ ಹಣೆಬ್ಯಾಟರಿ ಮತ್ತು ಬಂದೂಕು ಬಳಸುತ್ತಿದ್ದ. ಚಿಗುರು ಹುಲ್ಲು ಬೆಳೆದಿರುತ್ತಿದ್ದ ಕಡೆ, ರಾತ್ರಿ ವೇಳೆಯಲ್ಲಿ ಮೇಯಲು ಬರುತ್ತಿದ್ದ ಮೊಲಗಳಿಗೆ ಬ್ಯಾಟರಿ ಬೆಳಕು ಬೀಳುತ್ತಿದ್ದಂತೆ, ಅವು ಗಾಬರಿಯಾಗಿ ಅತ್ತಿತ್ತ ಅಲುಗಾಡದೆ ನಿಂತು ಬಿಡುತ್ತಿದ್ದವು. ಆಗ ಈತ ತುಸುವೂ ಅಲುಗಾಡದೆ ಗುರಿಯಿಟ್ಟು ಕೋವಿಯಿಂದ ಉಡಾಯಿಸಿಬಿಡುತ್ತಿದ್ದ. ಇನ್ನೊಂದು ‘ಉಳ್ಳು’ ಎಂಬ ಸಾಧನವನ್ನೂ ಆತ ಬಳಸಿ ಮೊಲಗಳನ್ನು ಹಿಡಿಯುತ್ತಿದ್ದ. ಮೊಲಗಳ ಓಡಾಟದ ಜಾಡನ್ನು ಗಮನಿಸಿ, ಸಂಜೆಯ ವೇಳೆ ಹೋಗಿ ಉಳ್ಳನ್ನು ಕಟ್ಟಿ ಬರುತ್ತಿದ್ದ. ಬೆಳಿಗ್ಗೆ ಬೇಗ ಹೋಗಿ ನೋಡಿದರೆ ಒಂದೆರಡು ಮೊಲಗಳು ಉಳ್ಳಿಗೆ ಸಿಕ್ಕಿ ಬಿದ್ದಿರುತ್ತಿದ್ದವು. ನಾವು ಹಾಸ್ಟೆಲ್ಲಿನ ಹುಡುಗರೆಲ್ಲಾ ಅವನನ್ನು ಒಂದಷ್ಟು ದಿನ ಹಾಸ್ಟೆಲ್ಲಿನಲ್ಲಿಯೇ ಇರಿಸಿಕೊಂಡು, ಐದಾರು ಮೊಲಗಳನ್ನು ಹಿಡಿದು ಅವನ ಕೈಯಲ್ಲೇ ಅಡುಗೆ ಮಾಡಿಸಿಕೊಂಡು ಸ್ವಾಹ ಮಾಡಿದ್ದೆವು.
ಈ ಎಲ್ಲಾ ಕೃತ್ಯಗಳಿಂದ ಆತನಿಗೆ ‘ಮೊಲದ ಮಂಜ’ ಎಂಬ ಅಡ್ಡ ಹೆಸರು ಪರ್ಮನೆಂಟಾಗಿ ನಿಂತುಬಿಟ್ಟಿದೆ. ಈಗಲೂ ನಮ್ಮ ತಾಯಿ ನಾನು ಊರಿಗೆ ಹೋದಾಗ, ಆತನ ವಿಷಯವನ್ನು ಪ್ರಸ್ತಾಪಿಸಬೇಕಾದಾಗ ‘ಮೊಲದ ಮಂಜ’ ಎಂದೇ ಉಲ್ಲೇಖಿಸುತ್ತಾರೆ.
ಆತನಿಗೆ ಇದ್ದ ಇನ್ನೊಂದು ಅಡ್ಡ ಹೆಸರೆಂದರೆ ‘ಖಾಲಿ’ ಎಂಬುದು. ನಮ್ಮ ತರಗತಿಯಲ್ಲಿ ಇದ್ದ ಐದಾರು ಜನ ‘ಮಂಜುನಾಥ’ ಎಂಬ ಹೆಸರಿನ ವಿದ್ಯಾರ್ಥಿಗಳಿಂದಾಗಿ ಅವರನ್ನು ಗುರುತಿಸಲು ಅವರವರ ಇನಿಷಿಯಲ್‌ಗಳನ್ನು ಹೆಚ್ಚಾಗಿ ಬಳಸಬೇಕಾಗಿತ್ತು. ಮೇಷ್ಟ್ರುಗಳು ಅಟೆಂಡೆನ್ಸ್ ಕೂಗುವಾಗ, ಮೊದಲ ಮಂಜುನಾಥನನ್ನು ಮಾತ್ರ ಹೆಸರು ಮತ್ತು ಇನಿಷಿಯಲ್ ಸಮೇತ ಕೂಗಿ, ನಂತರ ಉಳಿದವರ ಇನಿಷಿಯಲ್ ಮಾತ್ರ ಕೂಗುತ್ತಿದ್ದರು. ಆದರೆ ಇನಿಷಿಯಲ್ಲೇ ಇಲ್ಲದ ಮಂಜುನಾಥನಾದ ಈ ಬೇಟೆಗಾರನನ್ನು ಮಾತ್ರ ‘ಖಾಲಿ’ ಎಂದಷ್ಟೇ ಕೂಗುತ್ತಿದ್ದರು. ಅದರಿಂದಾಗಿ ಆತನಿಗೆ ಮೊಲದ ಮಂಜ ಎಂಬುದರೊಂದಿಗೆ ಖಾಲಿ ಎಂಬ ಹೆಸರೂ ಇತ್ತು.
ಮೊಲ ಮೀನು ತರಿಸಿಕೊಂಡಿದ್ದು; ಬುಟ್ಟಿ ಹೆಣೆಸಿಕೊಂಡಿದ್ದು
ಈ ರೀತಿಯ ಸಕಲಕಲಾವಲ್ಲಭನೂ, ಓದಿನಲ್ಲಿ ದಡ್ಡನೂ ಆದ ಮಂಜ, ನಿಂಗೇಗೌಡರಿಗೆ ವರವಾಗಿ ಪರಿಣಮಿಸಿದ್ದ. ಎಂಟು ಮತ್ತು ಒಂಬತ್ತನೇ ತರಗತಿಯಲ್ಲಿ ಹತ್ತು ಹದಿನೈದು ಬಾರಿಯಾದರೂ ಆತನಿಂದ ಮೀನು ಮತ್ತು ಮೊಲವನ್ನು ತರಿಸಿಕೊಂಡು ಪುಕ್ಕಟ್ಟೆಯಾಗಿ ಮಜ ಉಡಾಯಿಸಿದ್ದರು. ಅವರು ಪಾಠ ಮಾಡುತ್ತಿದ್ದ ವಿಷಯಗಳಲ್ಲಿ ಆತನಿಗೆ ಒಳ್ಳೆಯ ಅಂಕಗಳನ್ನು ಕೊಟ್ಟು ಕೃತಾರ್ಥರೂ ಆಗಿದ್ದರು. ಮಂಜ ನಮಗೆ ತಮಾಷೆ ಮಾಡುತ್ತಿದ್ದ. ‘ನಿಮ್ಮ ಓದು ನಿಮಗೆ ಮಾರ್ಕ್ಸ್ ಕೊಡಿಸಿದರೆ ನನ್ನ ಬೇಟೆ ನನಗೆ ಮಾರ್ಕ್ಸ್ ಕೊಡಿಸುತ್ತದೆ. ಎರಡೂ ವಿದ್ಯೆಯೇ ಅಲ್ಲವೇ?’ ಎನ್ನುತ್ತಿದ್ದ. ಆತ ಹೇಳುವುದೂ ಒಂದರ್ಥದಲ್ಲಿ ನಿಜವೇ ಇರಬೇಕು! ಆದರೆ ಹತ್ತನೇ ತರಗತಿಗೆ ಬರುತ್ತಿದ್ದಂತೆ, ಆತನ ವರ್ತನೆ ಬದಲಾಯಿತು.
ಹತ್ತನೇ ತರಗತಿಯ ಫಲಿತಾಂಶ ಈ ನಿಂಗೇಗೌಡರ ಕೈಯಲ್ಲಿ ಇಲ್ಲ ಎಂಬುದು ಗೊತ್ತಾಗಿದ್ದೇ ತಡ, ಅವರಿಗೆ ಸಬೂಬು ಹೇಳತೊಡಗಿದ. ಪ್ರಾರಂಭದಲ್ಲೇ ಒಂದು ದಿನ ಅವರು ‘ಮನೆಗೆ ನೆಂಟರು ಬರುತ್ತಿದ್ದಾರೆ. ಒಂದು ಒಳ್ಳೆಯ ಮೊಲ ಹೊಡೆದುಕೊಡು’ ಎಂದು ಕೇಳಿದ್ದರು. ಆತನೂ ಒಪ್ಪಿಕೊಂಡು ಬೇಟೆಗೆ ಹೊರಟಿದ್ದ. ಅಂದು ನಾನೂ ಅವನ ಜೊತೆಯಲ್ಲಿ ಉಳ್ಳು ಹೊತ್ತುಕೊಂಡು ಹೋಗಿದ್ದೆ. ಬೆಳಿಗ್ಗೆ ನೋಡಿದಾಗ ಭರ್ಜರಿಯಾದ ಎರಡು ಮೊಲಗಳೂ ಸಿಕ್ಕಿದ್ದವು! ಅವುಗಳನ್ನು ತೆಗೆದುಕೊಂಡು ಹೊರಟಾಗ ಮಾತ್ರ ಆತ ಅನ್ಯಮನಸ್ಕನಾಗಿದ್ದ. ಏಕೆಂದು ನಾನು ಕೇಳಿದಾಗ, ‘ಇಷ್ಟೊಂದು ಕಷ್ಟಪಟ್ಟು ಹಿಡಿದ ಮೊಲಗಳನ್ನು ಅವನಿಗ್ಯಾಕೆ (ಡಿ.ಎಸ್.ಎನ್.ಗೇಕೆ) ಕೊಡಬೇಕು? ನೋಡು, ನಾನು ಹೊಸ ಉಳ್ಳು ಕೊಂಡುಕೊಂಡಿದ್ದ ದುಡ್ಡನ್ನು ಇನ್ನೂ ಆ ಹಕ್ಕಿಪಿಕ್ಕಿ ರಾಮನಿಗೆ ಕೊಟ್ಟಿಲ್ಲ. ಆದ್ದರಿಂದ ಒಂದು ಮೊಲವನ್ನು ಅವನಿಗೆ ಕೊಟ್ಟುಬಿಡುತ್ತೇನೆ. ಇನ್ನೊಂದನ್ನು ನಾವಿಬ್ಬರೂ ಪಾಲು ಮಾಡಿಕೊಳ್ಳೋಣ. ಅವರು ಕೇಳಿದರೆ ಮೊಲ ಉಳ್ಳಿಗೆ ಬಿದ್ದಿರಲೇ ಇಲ್ಲ ಎನ್ನುತ್ತೇನೆ’ ಎಂದು ಅವನೇ ಉಪಾಯವನ್ನು ಸೂಚಿಸಿದ್ದರಿಂದಲೂ, ಮೊಲದ ಮಾಂಸದ ಆಸೆಯಿಂದಲೂ ಅದಕ್ಕಿಂತ ಹೆಚ್ಚಾಗಿ ನಿಂಗೇಗೌಡರನ್ನು ಕಂಡರೆ ನನಗೆ ಮೊದಲಿಂದಲೂ ಆಗುತ್ತಿರಲಿಲ್ಲವಾದ್ದರಿಂದಲೂ ನಾನು ಆತನ ಸಲಹೆಗೆ ಮನಸ್ವೀ ಒಪ್ಪಿದ್ದೆ.
ಇತ್ತ ಮೊಲದ ಮಂಜನ ಲೆಕ್ಕಾಚಾರ ಈ ರೀತಿ ಬದಲಾದರೆ, ಮೊಲ ಸಿಗದೇ ಬೇಸರವಾದ ನಿಂಗೇಗೌಡರ ವರ್ತನೆಯೂ ನಿಧಾನವಾಗಿ ಬದಲಾಗತೊಡಗಿತು. ತರಗತಿಯಲ್ಲಿ ಮಂಜನಿಗೆ ಪ್ರಶ್ನೆಗಳನ್ನು ಕೇಳುವುದು, ಉತ್ತರ ಹೇಳದಿದ್ದಾಗ ಬಾಯಿಗೆ ಬಂದಂತೆ ಬಯ್ಯುವುದು ಶುರುವಾಯಿತು. ಸ್ವಲ್ಪ ದಿನದ ನಂತರ ಮತ್ತೆ ಮೀನಿಗೆ ಬೇಡಿಕೆ ಇಡುವುದು ನಡೆಯುತ್ತಿತ್ತು. ಆದರೆ ಓದನ್ನು ಬೇಕಾದರೆ ಬಿಡಲು ಸಿದ್ಧನಿದ್ದ ಮಂಜ ಮಾತ್ರ ಅವರಿಗೆ ಒಂದು ಮೀನನ್ನೂ ಕೊಡಲು ತಯಾರಿರಲಿಲ್ಲ. ಒಂದು ದಿನ ಇಂಗ್ಲೀಷ್ ಪಾಠ ಮಾಡುತ್ತಿದ್ದಾಗ, ಏನೋ ಪ್ರಶ್ನೆ ಕೇಳಿದರು. ಮಂಜ ಉತ್ತರ ಹೇಳಲಿಲ್ಲ. ಅವರ ಕೈಯಲ್ಲಿದ್ದ, ನಾನೇ ತಂದು ಕೊಟ್ಟಿದ್ದ ಕೋಲಿನಿಂದ ಮಂಜನಿಗೆ ಜೋರಾಗಿಯೇ ಹೊಡೆಯತೊಡಗಿದರು. ಮಂಜ ಸುಮ್ಮನಿದ್ದ. ಡಿ.ಎಸ್.ಎನ್. ‘ಯಾವನೋ ನಿನ್ನನ್ನು ಎಂಟು ಒಂಬತ್ತರಲ್ಲಿ ಪಾಸು ಮಾಡಿದವನು’ ಎಂದು ಕೂಗಿದರು. ಅದಕ್ಕೆ ಮಂಜ ನಿರುಮ್ಮಳನಾಗಿ, ‘ನೀವೆ, ಮೊಲ ಮೀನು ತರಿಸಿಕೊಂಡು ಪಾಸು ಮಾಡಿದ್ದು’ ಎಂದುಬಿಟ್ಟ! ಆಗ ನೋಡಬೇಕಿತ್ತು ಅವರ ಮುಖವನ್ನು. ಅಂದಿನಿಂದ ಮುಂದೆ ಯಾವತ್ತೂ ಮಂಜನನ್ನು ಮೀನಿಗೆ, ಮೊಲಕ್ಕೆ ಪೀಡಿಸಲಿಲ್ಲ; ಪ್ರಶ್ನೆಯನ್ನೂ ಕೇಳಲಿಲ್ಲ.
ನಾಗರಾಜ ಎಂಬ ವಿದ್ಯಾರ್ಥಿ ನಮ್ಮ ತರಗತಿಯಲ್ಲಿದ್ದು, ನಮ್ಮ ಜೊತೆಯಲ್ಲಿ ಹಾಸ್ಟೆಲ್ಲಿನಲ್ಲೂ ಇದ್ದ. ಬುಟ್ಟಿ, ಮಂಕರಿಗಳನ್ನು ಹೆಣೆಯುವುದು ಅವರ ಮನೆಯವರ ಕಸುಬಾಗಿತ್ತು. ಸ್ವಲ್ಪ ಮಟ್ಟಿನ ಅಲೆಮಾರಿಗಳಾಗಿದ್ದ ಅವನ ಮನೆಯವರು ತಿಪಟೂರಿನ ಕಡೆಯಿಂದ ಬಂದು ಅಲ್ಲೆಲ್ಲೋ ನೆಲೆಸಿದ್ದರು. ಎಂಟು-ಒಂಬತ್ತನೇ ತರಗತಿಗಳನ್ನು ತಿಪಟೂರಿನಲ್ಲಿ ಓದಿ, ಹತ್ತನೇ ತರಗತಿಗೆ ಮಠಕ್ಕೆ ಬಂದಿದ್ದ ಆತನನ್ನೂ ಡಿ.ಎಸ್.ಎನ್. ಬಿಡಲಿಲ್ಲ. ಆತನಿಂದ ಮಂಕರಿ ಕುಕ್ಕೆಗಳನ್ನು ತಮಗೆ ಬೇಕಾದ ರೀತಿಯಲ್ಲಿ ಹೇಳಿ ಮಾಡಿಸಿಕೊಂಡಿದ್ದರು. ಅವರ ಹೆದರಿಕೆಗೆ ತಂದು ಒಪ್ಪಿಸಿದನಾದರೂ ಹಿಂದೆ ಅವರನ್ನು ಬಾಯಿಗೆ ಬಂದಂತೆ ಬಯ್ಯುತ್ತಿದ್ದ. ಆದರೆ ಮಂಜ ಆ ರೀತಿ ತಿರುಗಿ ಉತ್ತರಿಸಿದ ನಂತರ, ನಾನೂ ಹಾಗೇ ಮಾಡಿದ್ದರೆ ಅವರು ನನ್ನನ್ನು ಕೇಳುತ್ತಿರಲಿಲ್ಲ ಎನ್ನುತ್ತಿದ್ದ. ಆಶ್ಚರ್ಯವೆಂದರೆ ಆ ಪುಣ್ಯಾತ್ಮನಿಗೆ, ಹತ್ತನೇ ತರಗತಿಯ ಫಲಿತಾಂಶ ಶಾಲಾ ಮಾಸ್ತರ ಕೈಯಲ್ಲಿ ಇರುವುದಿಲ್ಲ ಎಂಬುದೇ ಗೊತ್ತಿರಲಿಲ್ಲ!

[ಮೊಲದ ಮಂಜ ನನಗೆ ಈಗಲೂ ಸಿಗುತ್ತಿರುತ್ತಾನೆ. ಅವನ ತಾಯಿ ಈಗಲೂ ನಮ್ಮ ಮನೆಗೆ ವಾರಕ್ಕೆರಡುಬಾರಿಯಾದರೂ ಬಂದು ಹೋಗುತ್ತಾರೆ. ದುರದೃಷ್ಟವೆಂದರೆ, ಮಂಜ ತನ್ನ ತಾಯಿಯನ್ನು ಬೇರೆ ಇಟ್ಟಿದ್ದಾನೆ. ಇಬ್ಬರು ಹೆಂಡಿರ ಮುದ್ದಿನ ಗಂಡನಾದ ಮಂಜನ ಹಿರಿಯ ಹೆಂಡತಿ ತವರು ಸೇರಿದ್ದಾಳೆ. ಎರಡನೇ ಹೆಂಡತಿಯೊಂದಿಗೆ ಚೆನ್ನಾಗಿ ಸಂಸಾರ ಮಾಡುತ್ತಿದ್ದಾನೆ. ಆತನಿಗೆ ಈಗ ಕೋವಿಗೆ ಅಧಿಕೃತ ಲೈಸೆನ್ಸ್ ಸಿಕ್ಕಿದೆ. ಅದೇ ಆಧಾರದ ಮೇಲೆ, ಹಾಸನದಲ್ಲಿ ಕೆ.ಎಸ್.ಸಿ.ಎ. ಅವರು ಕಟ್ಟುತ್ತಿರು ಕ್ರಿಕೆಟ್ ಸ್ಟೇಡಿಯಂನಲ್ಲಿ ಗನ್-ಮ್ಯಾನ್ ಆಗಿ ಕೆಲಸ ಸೇರಿಕೊಂಡಿದ್ದಾನೆ. ಮಹಾರಾಜರು(ಶ್ರೀಕಂಠದತ್ತ ಒಡೆಯರ್) ಅದೇ ಕೆಲಸವನ್ನು ಪರ್ಮನೆಂಟ್ ಮಾಡಿಸುತ್ತೇನೆ ಎಂದು ಹೇಳಿದ್ದಾರಂತೆ!

ನನಗೂ ಪುಸ್ತಕದ ಪ್ರತಿ ಕೊಡು ಎಂದು ಕೇಳಿದ್ದ. ಮೊನ್ನೆ ಹೋಗಿದ್ದಾಗ ತೆಗೆದುಕೊಂಡು ಹೋಗಿ ಮನೆಯಲ್ಲಿಟ್ಟು ಬಂದಿದ್ದೇನೆ. ನಿನ್ನ ಬಗ್ಗೆ ಓದಿದವರು ವಿಚಾರಿಸುತ್ತಾರೆ ಎಂದಿದ್ದಕ್ಕೆ, ಅವರೆಲ್ಲರನ್ನೂ ಬೇಕಾದರೆ ಕರೆದುಕೊಂಡು ಬಾ. ಮೀನು ಮೊಲ ಹೊಡೆದು ಭರ್ಜರಿ ಔತಣ ಮಾಡೋಣ ಎನ್ನುತ್ತಾನೆ! ಈಗ ನಾನು ಮೊಲ ಮೀನು ತಿನ್ನುವವರು ಯಾರ್ಯಾರಿದ್ದಾರೆ? ಅವರನ್ನು ಪತ್ತೆ ಹಚ್ಚುವುದು ಹೇಗೆ ಎಂದು ತಲೆಕೆಡಿಸಿಕೊಳ್ಳಬೇಕಾಗಿದೆ, ನೋಡಿ!]

6 comments:

PARAANJAPE K.N. said...

ಅನುಭವ ಕಥನ, ನೈಜವಾಗಿ ಮೂಡಿದೆ

Anonymous said...

Nice writing

Kumar P said...

very interesting. kudos to your memory and styl of writing

ಸಾಗರದಾಚೆಯ ಇಂಚರ said...

Wonderful, touching, keep going

sunaath said...

ಲೇಖನ ಸ್ವಾರಸ್ಯಕರವಾಗಿದೆ. ನೀವೇ ತೆಗೆದ ಚಿತ್ರ ಸಹ ಬಹಳ ಚೆನ್ನಾಗಿದೆ.

shivu.k said...

ಸರ್,

ಮೊದಲ ಮಂಜನ ಕತೆ ಚೆನ್ನಾಗಿದೆ...ಅವನ ಅರ್ಧರಾತ್ರಿ ಮೀನು ಮೊಲದ ಬೇಟೆ ವಿವರಣೆ ಚೆನ್ನಾಗಿದೆ....ಅದ್ಸರಿ...ಈ ನಿಂಗೇ ಗೌಡ ಮೇಸ್ಟ್ರೀಗೆ ನೀವು ಬರೆಯುತ್ತಿರುವ ಕತೆಯೆಲ್ಲಾ ಗೊತ್ತಾ...ಅವರಿಗೆ ಇದೆಲ್ಲಾ ಹೇಳಿದ್ದೀರಾ...ಅವರ ಕೈಗೆ ನಿಮ್ಮ ಪುಸ್ತಕ ಸಿಕ್ಕಿದೆಯಾ...ಸಿಕ್ಕಿದ ಮೇಲೆ ಅವರ ಪ್ರತಿಕ್ರಿಯೆ ಏನು...
ಹೇಳಲು ಸಾಧ್ಯವೇ ಸಾರ್?