Thursday, April 30, 2009

ಎಮ್ಮೆಪಾಪು ಕಕ್ಕ ಮಾಡ್ತಿದೆ...!

ಕಳೆದ ಒಂದು ವಾರ ಊರಿನಲ್ಲಿ ತಳವೂರಿದ್ದೆ. ಎಲೆಕ್ಷನ್, ಭಾನುವಾರ, ಬಸವಜಯಂತಿಯ ಕೃಪೆ! ತೋಟದಲ್ಲಿ ವಿಪರೀತ ಕೆಲಸ.

ನನ್ನ ಮಗಳು ಈಕ್ಷಿತಾ ಕಟ್ಟು ಬಿಚ್ಚಿದ ಚಿಗರೆಯಂತಾಗಿದ್ದಳು. ತಿಂಗಳಿಗೊಮ್ಮೆಯಾದರೂ ತೋಟಕ್ಕೆ ಬರುತ್ತಾಳಾದರೂ, ಅವೆಲ್ಲವೂ ಒಂದೆರಡು ದಿನಗಳ ಬೇಟಿ. ಆದರೆ ಈಗಿನದು ಹತ್ತು ಹದಿನೈದು ದಿನಗಳದ್ದು. ಹೀಗಾಗಿ ಅವಳಿಗೆ ಸ್ಕೂಲು, ಮಿಸ್ಸು, ಹೋಮ್‌ವರ್ಕ್, ವ್ಯಾನು, ಫ್ರೆಂಡ್ಸ್ ಎಲ್ಲಾ ಮರೆತುಹೋದರು. ಬೆಳಿಗ್ಗೆಯಿಂದ ರಾತ್ರಿಯವರೆಗೆ ಅವಳು ಮಾಡುತ್ತಿದ್ದ ಕೆಲಸ ಇಷ್ಟೆ. ತೋಟದಲ್ಲಿ ಎಮ್ಮೆಕರುವನ್ನು ಹಿಡಿದುಕೊಂಡು ಸುತ್ತುವುದು. ನಾವೆಂದೂ ಕಟ್ಟಿರದಿದ್ದ ನಾಯಿಮರಿಗೆ ಸರಪಳಿ ಹಾಕಿಸಿಕೊಂಡು ವಾಕಿಂಗ್ ಮಾಡಿಸುವುದು. ಮನೆಯೊಳಗೆ ಬಂದರೆ ಚೌಕಾಬಾರ ಮತ್ತು ಅಳುಗುಳಿ ಮನೆಯಾಡುವುದು.

ಸ್ನಾನ, ಊಟ ತಿಂಡಿ ಎಲ್ಲವೂ ಬಲವಂತದ ಮಾಘಸ್ನಾನ!


ಮೊನ್ನೆ ನಾನು ತೋಟದಲ್ಲಿ ತೆಂಗಿನ ಗರಿ ಸವರುತ್ತಿದ್ದೆ. ಈಕ್ಷಿತಾ ಅಲ್ಲಿಯೇ ಆಟವಾಡುತ್ತಿದ್ದಳು. ಹುಟ್ಟಿ ಸುಮಾರು ಹದಿನೈದು ದಿನಗಳಷ್ಟೇ ಕಳೆದಿದ್ದ ಪುಟಾಣಿ ಎಮ್ಮೆಕರು ಅವಳ ಕಣ್ಣಳತೆಯಲ್ಲಿಯೇ ನಿಂತಿತ್ತು. ಇದ್ದಕ್ಕಿದ್ದಂತೆ ಈಕ್ಷಿತಾ ‘ಅಪ್ಪಾ, ಅಪ್ಪಾ, ಬೇಗ ಬಾ’ ಎಂದು ಕೂಗಿದಳು. ನಾನು ಅಲ್ಲಿಂದಲೇ ‘ಏಕೆ?’ ಎಂದೆ. ಅದಕ್ಕೆ ಅವಳು ‘ಎಮ್ಮೆ ಪಾಪು ಕಕ್ಕ ಮಾಡ್ತಿದೆ, ಬೇಗ ಬಾ’ ಎಂದಳು. ನಾನು ಹೋಗಿ ನೋಡಿದೆ. ಪಾಪ, ಎಮ್ಮೆಕರು ತನ್ನ ಇಡೀ ದೇಹವನ್ನು ಕಾಮನಬಿಲ್ಲಿನಂತೆ ಬಗ್ಗಿಸಿಕೊಂಡು ಸಗಣಿ ಹಾಕಲು ಪ್ರಯತ್ನಿಸುತ್ತಿತ್ತು. ‘ಅಪ್ಪಾ ಅಪ್ಪಾ, ಅದರ ಫೋಟೋ ತೆಗೆಯೋಣವೆ?’ ಮಗಳ ಪ್ರಶ್ನೆ. ‘ಸರಿ’ ಎಂದು ನಾನು ಮನೆಯೊಳಗೆ ಹೋಗಿ ಮೊಬೈಲ್ ತಂದಾಗಲೂ, ಕರು ಅದೇ ಕಾಮನಬಿಲ್ಲನ ಆಕಾರದಲ್ಲೇ ನಿಂತಿತ್ತು. ನಾನು ಫೋಟೋ ತೆಗೆಯುವಷ್ಟರಲ್ಲಿ ಮತ್ತೆ ಎರಗಿತ್ತು ಮಗಳ ಪ್ರಶ್ನೆ. ‘ಅಪ್ಪಾ, ಅದು ಏಕೆ ಆಗಲಿಂದ ಹಾಗೇ ನಿಂತಿದೆ?’. ನಾನು ಅವಳಿಗೆ, ಸಾಮಾನ್ಯವಾಗಿ ಸಣ್ಣ ಸಣ್ಣಕರುಗಳು ಸಗಣಿ ಹಾಕಲು ತುಂಬಾ ಕಷ್ಟಪಡುತ್ತವೆ. ಕಾರಣ ಅವು ಬರೀ ಹಾಲು ಕುಡಿಯುವುದರಿಂದ ಹಾಗಾಗುತ್ತದೆ. ಬೆಳೆಯುತ್ತಾ ಹುಲ್ಲು ತಿನ್ನಲು ಆರಂಭಿಸಿದರೆ ಸರಿಹೋಗುತ್ತವೆ ಎಂಬಿತ್ಯಾದಿ ವಿಷಯಗಳನ್ನು ವಿವರಿಸಿದೆ.
ಕರು ಅದೇ ಭಂಗಿಯಲ್ಲಿಯೇ ಒಂದು ಚೂರು ಸಗಣಿ ಹಾಕಿತಾದರೂ ಮತ್ತೂ ಪ್ರಯತ್ನ ಮುಂದುವರೆಸಿತ್ತು. ಒಂದು ಕ್ಷಣ ಮೌನವಾಗಿದ್ದ ಮಗಳು ‘ಅಪ್ಪಾ ಅದನ್ನು ಬಿಸಿನೀರಿನ ಟಬ್ಬಿನಲ್ಲಿ ಕೂರಿಸಿದರೆ ಸುಲಭವಾಗಿ ಕಕ್ಕ ಮಾಡಬೌದು, ಅಲ್ಲವಾ?’ ಎಂದಳು ನನಗೆ ಒಂದು ಕ್ಷಣ ಶಾಕ್!
ಸುಮಾರು ಎರಡು ವರ್ಷಗಳ ಹಿಂದೆ ಸ್ವತಃ ಅವಳೇ ಟಾಯ್ಲೆಟ್ಟಿಗೆ ಹೋಗಲು ಹಿಂದೇಟು ಹಾಕುತ್ತಿದ್ದಳು. ಬಲವಂತ ಮಾಡಿ ಕೂರಿಸಿದರೆ ತುಂಬಾ ಕಷ್ಟ ಪಡುತ್ತಿದ್ದಳು. ಅದನ್ನು ಡಾಕ್ಟರರ ಗಮನಕ್ಕೆ ತಂದಾಗ ಅವರು ‘ಒಂದು ಟಬ್ಬಿನಲ್ಲಿ ಬೆಚ್ಚಗಿನ ನೀರಿಗೆ ಚಿಟಿಕೆ ಉಪ್ಪು ಹಾಕಿ, ಅದರಲ್ಲಿ ಅವಳನ್ನು ಸ್ವಲ್ಪ ಹೊತ್ತು ಕೂರಿಸಿ. ಮೂರುವಾರಗಳ ಕಾಲ ಈ ರೀತಿ ಮಾಡಿ’ ಎಂಬ ಸಲಹೆ ಕೊಟ್ಟಿದ್ದರು. ನಾವೂ ಅದರಂತೆ ಮಾಡಿದ್ದೆವು. ಅವಳ ಸಮಸ್ಯೆಯೂ ದೂರವಾಗಿತ್ತು. ಅದನ್ನು ನೆನಪಿನಲ್ಲಿಟ್ಟುಕೊಂಡು, ಎಮ್ಮೆ ಕರುವಿಗೂ ‘ವಾಟರ್ ಥೆರಪಿ’ ನೀಡಬೇಕೆಂದು ಸಲಹೆ ಕೊಟ್ಟಿದ್ದಳು. ಸದ್ಯ ಪುಣ್ಯಕ್ಕೆ ದೊಡ್ಡ ಎಮ್ಮೆ ಸಗಣಿ ಹಾಕಲು ಕಷ್ಟಪಡುತ್ತಿರಲಿಲ್ಲ!
ಅವಳ ನೆನಪಿನ ಶಕ್ತಿಯನ್ನು ಹಿಂದೊಮ್ಮೆ ಹೀಗೆ ಪ್ರದರ್ಶಿಸಿದ್ದಳು. ಕಳೆದ ಸಾಲಿನಲ್ಲಿ ಎಲ್.ಕೆ.ಜಿ.ಯಲ್ಲಿದ್ದಾಗ ಪೇರೆಂಟ್ಸ್ ಮೀಟಿಂಗಿಗೆಂದು ನನ್ನ ಹೆಂಡತಿ ಹೋಗಿದ್ದಳು. ಅಲ್ಲಿ ಇವರು ಕುಳಿತಿದ್ದ ಕುರ್ಚಿಯ ಪಕ್ಕದಲ್ಲೇ ಬಂದು ಕುಳಿತ ಇನ್ನೊಬ್ಬಾಕೆ, ಸಹಜವಾಗಿಯೇ ‘ಏನು ನಿನ್ನ ಹೆಸರು?’ ಎಂದಿದ್ದಾರೆ. ‘ಈಕ್ಷಿತಾ’ ಎಂಬ ಉತ್ತರ ಕೇಳಿದಾಕ್ಷಣ ಆಕೆ ಎದ್ದುನಿಂತು ‘ನೀನೇನಾ ಈಕ್ಷಿತಾ!? ಪ್ರೀನರ್ಸರಿಯಲ್ಲಿದ್ದಾಗ ನನ್ನ ಮಗನ ಕೆನ್ನೆಯನ್ನು ಕಚ್ಚಿದ್ದವಳು!’ ಎಂದು ಕೇಳಿ, ನನ್ನ ಹೆಂಡತಿಯನ್ನು ಪರಿಚಯ ಮಾಡಿಕೊಂಡು ಪ್ರೀನರ್ಸರಿಯ ವರ್ಷಾರಂಭದಲ್ಲೇ ಅವರ ಮಗ ಪ್ರೀತಮ್ ಗೌಡ ಎಂಬುವವನ ಕೆನ್ನೆಯನ್ನು ಇವಳು ಕಚ್ಚಿದ್ದು, ಅವರ ಮಗ ಮನೆಗೆ ಹೋಗಿ ‘ಈಕ್ಷಿತಾ ಕಚ್ಚಿದ್ದು’ ಎಂದು ದೂರು ಹೇಳಿದ್ದು, ಕೆನ್ನೆ ಬಾತುಕೊಂಡಿದ್ದು, ಇಂಜೆಕ್ಷನ್ ಚುಚ್ಚಿಸಿದ್ದು ಹೀಗೆ ಹಿಂದಿನದೆಲ್ಲಾ ಹೇಳಿ, ‘ಅವನ ಕೈಯಲ್ಲೂ ನಿನ್ನ ಕೆನ್ನೆ ಕಚ್ಚಿಸುತ್ತೇನೆ, ನೋಡು’ ಎಂದು ಒಂದಷ್ಟು ರೇಗಿಸಿದರಂತೆ. ನನ್ನ ಹೆಂಡತಿ ಮಗಳನ್ನು ‘ಕೆನ್ನೆ ಕಚ್ಚಿದ್ದು ನಿಜವಾ? ಏಕೆ ಕಚ್ಚಿದೆ?’ ಎಂದು ಕೇಳಿದರೆ ಬಾಯಿಯೇ ಬಿಡಲಿಲ್ಲವಂತೆ.

ಸಂಜೆ ನನಗೆ ವರದಿ ಸಿಕ್ಕಿತು. ನಾನು ‘ಕೆನ್ನೆ ಏಕೆ ಕಚ್ಚಿದ್ದು?’ ಎಂದು ವಿಚಾರಿಸಿದೆ. ಆಗ ಅವಳು ‘ಅದೇ ಅಪ್ಪ, ನಾವು ಅಡಿಗೆ ಮನೆಗೆ (ಅಡಿಗೆ ಕಟ್ಟೆಯ ಕಲ್ಲನ್ನು ತೋರಿಸುತ್ತಾ) ಈ ಕಲ್ಲನ್ನು ತರಲು ಹೋಗಿದ್ದೆವಲ್ಲ, ಅವತ್ತು, ಅಲ್ಲಿ ನಿನ್ನ ಬೈಕ್ ಬಿದ್ದಿತ್ತಲ್ಲ, ಆಗ ಅದು (ಭುಜ ತೋರಿಸುತ್ತಾ) ನನ್ನ ಕೈಗೆ ತಗುಲಿ ನೋವಾಗಿತ್ತು. ಅವನು (ಪ್ರೀತಮ್ ಗೌಡ) ಅವತ್ತು ಸ್ಕೂಲಲ್ಲಿ ಹಿಂದಿನಿಂದ ಬಂದು ಹೀಗೆ ಹಿಡಿದು (ನನ್ನ ಭುಜ ಹಿಡಿದು ಅಲ್ಲಾಡಿಸುತ್ತ) ಅಲ್ಲಾಡಿಸಿದ. ನನಗೆ ಸಿಟ್ಟು ಬಂದು ಅವನ ಕೆನ್ನೆ ಹೀಗೆ ಹಿಡಿದು ಕಚ್ಚಿಬಿಟ್ಟೆ’ ಎಂದು ನನ್ನ ಕೆನ್ನೆಗೆ ಒಂದು ಮುತ್ತು ಕೊಟ್ಟು ಅಭಿನಯಿಸಿ ತೋರಿಸಿಬಿಟ್ಟಿದ್ದಳು. ಆ ಕ್ಷಣದಲ್ಲಿ ನಮಗೆ ನಗಬೇಕೋ ಅಳಬೇಕೋ ತಿಳಿಯದಾಗಿತ್ತು. ಆ ದಿನ ಗ್ರಾನೈಟ್ ಅಂಗಡಿಯ ಮುಂದೆ ಬೈಕ್ ನಿಲ್ಲಿಸಿ ತಿರುಗುವಷ್ಟರಲ್ಲಿ, ಸ್ಟ್ಯಾಂಡ್ ಸರಿಯಾಗಿ ಹಾಕದೇ ಇದ್ದುದರಿಂದ ಅದು ಬಿದ್ದಿತ್ತು. ಈಕ್ಷಿತಾ ಅದರ ಮುಂದೆಯೇ ನಿಂತಿದ್ದಳು. ಆದರೆ ನಮ್ಮಿಬ್ಬರಿಗೂ ಬೈಕು ಬೀಳುವಾಗ ಅವಳಿಗೆ ತಾಗಿದ್ದು ಗಮನಕ್ಕೆ ಬಂದಿರಲಿಲ್ಲ. ಅವಳೂ ಹೇಳಿರಲೂ ಇಲ್ಲ!

ಸಾಮಾನ್ಯವಾಗಿ ಎಲ್ಲಾ ಮಕ್ಕಳಲ್ಲೂ ನೆನಪಿನ ಶಕ್ತಿ ಅಗಾಧವಾಗಿ ಇರುತ್ತದೆಂದು, ಅದು ಮಕ್ಕಳು ಬೆಳೆದಂತೆ ಏರುಪೇರಾಗುತ್ತದೆಂದು ಕೇಳಿದ್ದೇನೆ. ಅಂತರಾಷ್ಟ್ರೀಯ ಮಟ್ಟದಲ್ಲಿ ವೈಜ್ಞಾನಿಕವಾಗಿ ನಡೆಸಿದ ಸರ್ವೆಯೊಂದರ ಪ್ರಕಾರ ಆರುವರ್ಷದ ಮಕ್ಕಳುಗಳ ಕಲಿಯುವ ಶಕ್ತಿಯಲ್ಲಿ ಭಾರತದ ಮಕ್ಕಳು ಮೊದಲನೆಯ ಸ್ಥಾನದಲ್ಲಿರುತ್ತವಂತೆ. ಆದರೆ ಅದೇ ಮಕ್ಕಳು ಹದಿನಾರನೇ ವರ್ಷಕ್ಕೆ ಬರುವಷ್ಟರಲ್ಲಿ ಇಪ್ಪತ್ತಾರನೆಯ ಸ್ಥಾನಕ್ಕೆ ಜಾರಿಬಿಟ್ಟಿರುತ್ತಾರಂತೆ! ಅದೇ ಏಳೋ ಎಂಟೋ ಸ್ಥಾನದಲ್ಲಿದ್ದ ಜಪಾನಿ ಮಕ್ಕಳು ಒಂದನೇ ಸ್ಥಾನಕ್ಕೇರಿರುತ್ತಾರಂತೆ. ಪೋರ್ಚುಗಲ್ ಮಕ್ಕಳು ಎರಡನೇ ಸ್ಥಾನಕ್ಕೆ ಬರುತ್ತಾರಂತೆ. ಇದನ್ನು ಈ ವರ್ಷಾರಂಭದ ಓರಿಯಂಟೇಷನ್ ಪ್ರೋಗ್ರಾಮಿನಲ್ಲಿ ಒಬ್ಬ ಭಾಷಣಕಾರರು ಹೇಳಿದ್ದರು. ಅದಕ್ಕೆ ಕಾರಣವೇನು? ಎಂಬ ಪ್ರಶ್ನೆಯನ್ನೂ ಕೇಳಿದ್ದರು. ಆಗ ನಾನು ನಮ್ಮಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ವ್ಯವಸ್ಥೆಯೇ ಅದಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದೆ. ಜೊತೆಗೆ ಕುವೆಂಪು ಅವರ ವಿಶ್ವಮಾನವ ಸಂದೇಶದ ‘ಪ್ರತಿಯೊಂದು ಮಗುವು ಹುಟ್ಟುತ್ತಲೆ-ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ‘ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೆ ವಿದ್ಯೆಯ ಕರ್ತವ್ಯವಾಗಬೇಕು’ ಎಂಬ ಮಾತುಗಳನ್ನು ಹೇಳಿ, ಕುವೆಂಪು ಅವರ ದಾರ್ಶನಿಕ ದೃಷ್ಟಿಕೋನವನ್ನು ವೈಜ್ಞಾನಿಕವಾಗಿ ನಡೆಸಿದ ಸರ್ವೆಯೊಂದು ದೃಢಪಡಿಸುತ್ತಿರುವುದನ್ನು ಸೂಚಿಸಿದ್ದೆ.

ಹುಟ್ಟಿನಂದಲೇ ಬರುವ ಶಕ್ತಿಯನ್ನು ಬೆಳೆಸಬೇಕೆ ಹೊರತು ಕುಂಠಿತಗೊಳಿಸಬಾರದು. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣಪದ್ಧತಿ ನವೀಕರಣಗೊಳ್ಳಲೇಬೇಕೆಂಬುದು ನನ್ನ ಆಶಯ.

8 comments:

PARAANJAPE K.N. said...

ಸತ್ಯನಾರಾಯಣರೇ,
ನಿಮ್ಮ ಹಳ್ಳಿವಾಸ, ಮಗಳ ವಯೋಸಹಜ ಕುತೂಹಲಕರ ಪ್ರಶ್ನೆಗಳು,ತಮಾಷೆಯ ಪ್ರಸ೦ಗಗಳು, ಅವಳ ನೆನಪಿನ ಶಕ್ತಿ, ಇವುಗಳ ಜೊತೆಜೊತೆಗೆ ವಿಶ್ವ ಮಾನವ ಸ೦ದೇಶವನ್ನೂ ಅಡಕಗೊಳಿಸಿ ಒ೦ದೊಳ್ಳೆ ಲೇಖನವನ್ನು ಓದಿಗೆ ಕೊಟ್ಟಿದ್ದೀರಿ, ಚೆನ್ನಾಗಿದೆ.

ಬಿಸಿಲ ಹನಿ said...

ಸತ್ಯನಾರಾಯಣವರೆ,
ನಿಮ್ಮ ಮಗಳೊಂದಿಗಿನ ನಿಮ್ಮ ಅನುಭವಗಳು ಚನ್ನಾಗಿವೆ. ಲೇಖನ ಓದುತ್ತಾ ನನಗೆ ನಮ್ಮ ಶಿಕ್ಷಣ ಪದ್ದತಿಯ ಕುರಿತು ರಬೀಂದ್ರನಾಥ್ ಟ್ಯಾಗೋರ‍್ವರು ಹೇಳಿದ ಮಾತು ನೆನಪಿಗೆ ಬಂತು."Moderna education is like a paper flower, it looks more beautiful than a natural flower but it has no fragrance" ಹೀಗೆ ಸಹ್ಯವಾಗಿಲ್ಲದ್ದನ್ನು ಸಹ್ಯವಾಗಿಸಿಕೊಂಡು ಬದುಕುತ್ತಿರುವದು ನಮ್ಮ ದುರಂತ.

sunaath said...

ನಿಮ್ಮ ಪುಟ್ಟ ಮಗಳ ಮುಗ್ಧ ಮಾತುಗಳು ನನ್ನನ್ನು ಮರಳುಗೊಳಿಸಿದವು.
ವಿವರಿಸಿದ ನಿಮ್ಮ ಶೈಲಿ ಸುಂದರವಾಗಿದೆ.

ಮಲ್ಲಿಕಾರ್ಜುನ.ಡಿ.ಜಿ. said...

ನೀವು ಹೇಳಿರುವುದು ಸತ್ಯ ಸರ್. ಮಕ್ಕಳಿಗೆ ಅದ್ಭುತ ನೆನಪಿನ ಶಕ್ತಿ, observation capacity ಇರುತ್ವೆ. ನೀವಂದಂತೆ ಶಿಕ್ಷಣ ಪದ್ಧತಿಯಲ್ಲೂ ಮಾರ್ಪಾಡಾಗಬೇಕು. ಅಂದ ಹಾಗೆ ಈಕ್ಷಿತಾ ಅನ್ನುವ ಹೆಸರಿರಿಸಿದ ಬಗ್ಗೆ ಬರೆಯಿರಿ. ಹೆಅರು ತುಮ್ಬಾ ಚೆನ್ನಾಗಿದೆ. ಮಕ್ಕಳಿಗೆ ಹೆಸರಿರಿಸಿದ ಸಂದರ್ಭದ ಬಗ್ಗೆ ವಿಜಯಕರ್ನಾಟಕದ ಸಾಪ್ತಾಹಿಕದಲ್ಲೂ ಬರಹಗಳನ್ನು ಕೇಳಿದ್ದಾರೆ. ಅದಕ್ಕೂ ಕಳಿಸಿ.

Deepasmitha said...

ನಿಮ್ಮ ಮಗಳ ಬಾಲ್ಯದ ದಿನಗಳ ವಿವರಣೆ ತುಂಬಾ ಚೆನ್ನಾಗಿದೆ. ಹೆಸರು 'ಈಕ್ಷಿತಾ' ವಿಶಿಷ್ಟವಾಗಿದೆ. ನನ್ನ ಬ್ಲಾಗಿನಲ್ಲಿ ನಿಮ್ಮ ಕಮೆಂಟ್ ಗಳಿಗೆ ಧನ್ಯವಾದಗಳು

shivu said...

ಸರ್,

ನಿಮ್ಮ ಮಗಳ ಕೆನ್ನೆ ಕಚ್ಚಿದ ಪ್ರಸಂಗ, ಎಮ್ಮೆ ಕರುವನ್ನು ಬಿಸಿನೀರಿನ ಟಬ್ಬಿಗೆ ಹಾಕಲು ಹೇಳಿದ ಪ್ರಸಂಗ ಚುರುಕುತನ ಮತ್ತು ಮುಗ್ಧತನವನ್ನು ತೋರುತ್ತದೆ...ಎಂದಿನಂತೆ ಲೇಖನ ತುಂಬಾ ಚೆನ್ನಾಗಿದ್ದು ಓದಿಸಿಕೊಂಡು ಹೋಗುತ್ತದೆ....

ಧನ್ಯವಾದಗಳು...

ರವಿಕಾಂತ ಗೋರೆ said...

ಮೊದಲನೆ ಬಾರಿ ನಿಮ್ಮ ಬ್ಲಾಗ್ ಗೆ ಭೇಟಿ ನೀಡಿದೆ... ಬರೆಯುವ ಶೈಲಿ ಚೆನ್ನಾಗಿದೆ... "ಎಮ್ಮೆಪಾಪು ಕಕ್ಕ ಮಾಡ್ತಿದೆ...!" ಬರಹ ಓದಿ ನಗು ಬಂತು...

Dr. B.R. Satynarayana said...

ಗೋರೆಯವರೆ ನಿಮಗೆ ಸ್ವಾಗತ. ಬಿಡುವಾದಗಲೆಲ್ಲಾ ಬರುತ್ತಿರಿ.