Thursday, April 09, 2009

ಐದುವರ್ಷದ ಮಗಳು

ಈಕ್ಷಿತಾ ನನ್ನ ಐದುವರ್ಷದ ಮಗಳು
ನಾನು ಐದು ವರ್ಷದ ತಂದೆ
ಆದ್ದರಿಂದ ನಾವಿಬ್ಬರೂ ಒಂದೆ.
ಕಂದ ನೀನು ನಕ್ಕಾಗ...
ನನ್ನ ಮಗಳಿಗೆ ಇದೇ ಏಪ್ರಿಲ್ ಹತ್ತನೇ ತಾರೀಖು (ಮೊದಲು ರಿಸಲ್ಟ್ ಡೇ ಎನ್ನುತ್ತಿದ್ದೆ. ಈಗ ರಿಸಲ್ಟನ್ನು ಬೇರೇ ತಾರೀಖುಗಳಲ್ಲಿಯೂ ಕೊಡುತ್ತಾರೆ) ಐದು ವರ್ಷ ತುಂಬಲಿದೆ. ಅವಳು ಹುಟ್ಟಿದಂದಿನಿಂದ ನಾವು ಅವಳ ಆಟ ಪಾಠಗಳಲ್ಲಿ ಸಾಕಷ್ಟು ಸಂತೋಷವನ್ನು ಕಂಡಿದ್ದೇವೆ. ಅವಳೊಂದಿಗೆ ನಾವು ಕಳೆದ ಎಲ್ಲಾ ರಸಮಯ ಸಮಯವನ್ನು ದಾಖಲಿಸುವುದು ಕಷ್ಟ. ಅದರಲ್ಲಿ ಈಗ ನೆನಪಿರುವ ಕೆಲವೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುತ್ತೇನೆ.
ಕಲ್ಲರಳಿ ಹೂವಾಗಿ
ಮೂರೂವರೆ ನಾಲ್ಕು ವರ್ಷಗಳ ಹಿಂದಿನ ಮಾತು. ನನ್ನ ಮಗಳು ಎರಡೆರಡು ಅಕ್ಷರದ ಪದಗಳನ್ನು ತೊದಲು ನುಡಿಯುತ್ತಿದ್ದ ಕಾಲ. ಒಮ್ಮೆ ನಮ್ಮ ಸ್ನೇಹಿತರ ಮನೆಯಲ್ಲಿ ಐದಾರು ಜನ ಕುಳಿತು ಹರಟೆ ಹೊಡೆಯುತ್ತಿದ್ದೆವು. ನಡುವೆ ತೂರಿಕೊಂಡು ಬರುತ್ತಾ ‘ಗಾಜ, ಗಾಜ’ ಎಂದು ಅಳತೊಡಗಿದಳು. ನಮಗೆ ಏನೆಂದು ಅರ್ಥವಾಗಲಿಲ್ಲ. ನಾವು ಏನೆಂದು ಕೇಳಿದರೂ ಅವಳು ಮತ್ತೆ ಮತ್ತೆ ‘ಗಾಜ ಗಾಜ’ ಎಂದಷ್ಟೇ ಹೇಳುತ್ತಿದ್ದಳು. ಕೊನೆಗೂ ನಮಗೆ ಅದೇನೆಂದು ತಿಳಿಯಲಿಲ್ಲ.

ಕಲ್ಲದೇವರಿಗಿಂತ ನಾನೇ ವಾಸಿ...

ಮಾರನೆಯ ದಿನ ನನ್ನ ಬೈಕ್ ಕೀ ಕಾಣುತ್ತಿರಲಿಲ್ಲ. ಅದನ್ನು ಈಕ್ಷಿತಾ ಕೈಯಲ್ಲಿ ಹಿಡಿದುಕೊಂಡಿದ್ದಳು ಎಂಬುದು ನನ್ನ ಹೆಂಡತಿಯ ಆರೋಪ. ಆಗ ಮಗಳಿಗೆ ಪೂಸಿ ಹೊಡೆಯುತ್ತಾ ‘ಕೀ ಎಲ್ಲಿ?’ ಎಂದು ಕೇಳಿದ್ದಾಯಿತು. ನನ್ನ ಮಗಳ ಉತ್ತರ ‘ಮೂರು, ಮೂರು’ ಎಂಬುದಾಗಿತ್ತು. ನನಗೇನು ಅರ್ಥವಾಗಲಿಲ್ಲ. ಆಗ ನನ್ನ ಹೆಂಡತಿ ‘ನಿಮಗೇನೂ ಅರ್ಥವಾಗುವುದಿಲ್ಲ. ಅದರಲ್ಲಿ ಮೂರು ಕೀಗಳು ಇರುವುದನ್ನು ಹೇಳುತ್ತಿದ್ದಾಳೆ!’ ಎನ್ನಬೇಕೆ? ನನಗೆ ನಗುತಡೆಯಲಾಗಲಿಲ್ಲ. ಸಾಕಾಗುವಷ್ಟು ನಕ್ಕು, ನಂತರ ಮಗಳಿಗೆ ‘ಕೀ ತೋರಿಸುವಂತೆ’ ಕೇಳತೊಡಗಿದೆ. ಅದೇನು ಅರ್ಥವಾಯಿತೋ, ರೂಮಿನಕಡೆಗೆ ಕೈ ತೋರಿಸಿದಳು. ಹೋಗಿ ನೋಡಿದರೆ ಕೀ ರೂಮಿನಲ್ಲಿ ಬಿದ್ದಿತ್ತು. ಆಗ ನಮ್ಮ ದಡ್ಡ ತಲೆಗೆ ಹೊಳೆಯಿತು! ಅವಳು ‘ರೂಮು’ ಎನ್ನುವುದಕ್ಕೆ ‘ಮೂರು’ ಎನ್ನುತ್ತಿದ್ದಾಳೆ ಎಂದು. ತಕ್ಷಣ ನೆನ್ನೆ ಅವಳು ‘ಗಾಜ’ ಎಂದಿದ್ದು ‘ಜಾಗ’ ಎಂಬುದಕ್ಕೆ ಎಂದು ಅರ್ಥವಾಯಿತು.

ನಾನೂ ಓದ್ತಿನಿ ಗೊತ್ತಾ...!

ಹೀಗೆ ಈಕ್ಷಿತಾ ಉಲ್ಟಾಪಲ್ಟಾ ಹೇಳುತ್ತಿದ್ದ ಇನ್ನೊಂದು ಪದ ಪಾಚೆ (ಚಾಪೆ). ಕೆಲವು ದಿನ ಚಪಾತಿ ಎನ್ನುವುದಕ್ಕೆ ‘ಪಚಾತಿ’ ಎಂದು ಹೇಳುತ್ತಿದ್ದಳು.


ತನ್ನ ತಾನು ನೋಡಿಕೊಂಡು ನಕ್ಕಳು
ಇವಳ ಹುಟ್ಟಿದ ಹಬ್ಬಕ್ಕೆ ಸ್ವೀಟ್ ಏನು ಮಾಡುವುದು?’ ಎಂದು ಅವರಮ್ಮ ತಲೆಕೆಡಿಸಿಕೊಂಡಿದ್ದರೆ, ಇವಳು ‘ಬಾಲಾಜಿ’ ಎಂದಳು. ‘ಏನ್ ಬಾಲಾಜಿ, ಸರಿಯಾಗಿ ಹೇಳು’ ಎಂದಿದ್ದಕ್ಕೆ, ‘ಅದೇ ಅಮ್ಮ, ರೌಂಡು ರೌಂಡಾಗಿ ಇರುತ್ತಲ್ಲ ಆ ಸ್ವೀಟು’ ಎನ್ನಬೇಕೆ? ಆಗಲೇ ನಮಗೆ ಅರ್ಥವಾಗಿದ್ದು, ಇವಳ ಬಾಲಾಜಿ ‘ಜಿಲೇಬಿ’ ಎಂದು!


ನಾನೇ ಬೌಲರ್, ನಾನೇ ಬ್ಯಾಟ್ಸ್ ಮನ್
ನಾವು ಎಲ್ಲಿಗಾದರೂ ಬಸ್ ಪ್ರಯಾಣ ಮಾಡುವಾಗ, ನನ್ನ ಮಗಳು ಹಾಕಿರುವ ಚಪ್ಪಲಿ ಅಥವಾ ಶೂ ಬಿಚ್ಚಿಬಿಡುತ್ತಿದ್ದೆವು. ಇಲ್ಲದಿದ್ದರೆ ಅವುಗಳ ಸಮೇತ ನನ್ನ ತೊಡೆಯ ಮೇಲೆ ನಿಂತು ಆಟಕ್ಕೆ ಇಳಿದುಬಿಡುತ್ತಿದ್ದಳು. ಹಾಗೆ ತೆಗೆದಿಟ್ಟ ಚಪ್ಪಲಿ ಬಸ್ಸಿನ ಕುಲುಕಾಟಕ್ಕೆ ಬಸ್ಸಿನೊಳಗೇ ಒಂದು ಪುಟ್ಟ ಪ್ರಯಾಣ ಮಾಡಿ ಯರ‍್ಯಾರದೋ ಸೀಟಿನ ಕೆಳಗೆ ಹೋಗಿ ಕುಳಿತುಬಿಡುತ್ತಿದ್ದವು. ಇಳಿಯುವಾಗ ಹುಡುಕಬೇಕಾಗಿತ್ತು. ಅದಕ್ಕೆ ನಾನು ಸ್ಟ್ರಾಪ್ ಚಪ್ಪಲಿಗಳಾಗಿದ್ದರೆ, ಒಂದರ ಸ್ಟ್ರಾಪನ್ನು ಇನ್ನೊಂದರದರೊಳಗೆ ಹಾಕಿ ಸೀಟಿನ ಕಂಬಿಗೆ ನೇತುಬಿಡುತ್ತಿದ್ದೆ. ಸುಮಾರು ದಿನದಿಂದಲೂ ಇದನ್ನೇ ಮಾಡುತ್ತಿದ್ದೇನೆ.
ನನ್ನ ಶೂ ನಾನೇ ಪಾಲೀಷ್ ಮಾಡಿಕೊಳ್ಳಬೇಕಾ! ಅದಕ್ಕೂ ರೆಡಿ!
ಮೊನ್ನೆ ಹಾಗೆ ಮಾಡಿದಾಗ, ಅದನ್ನು ನೋಡಿದ ನನ್ನ ಮಗಳು ‘ಬ್ಯೂಟಿಫುಲ್ ನೇತ್’ ಎಂದಳು. ನಮಗೆ ಅರ‍್ಥವಾಗಲಿಲ್ಲ. ಏನಂದು ಕೇಳಿದ್ದಕ್ಕೆ ನೇತು ಹಾಕಿದ್ದ ಚಪ್ಪಲಿ ತೋರಿಸಿ ‘ಬ್ಯೂಟಿಫುಲ್ ನೇತ್’ ಎಂದಳು. ತಕ್ಷಣ ನನಗೆ ಇದು ಇವಳು ಎರಡು ಭಾಷೆಗಳನ್ನು ಒಟ್ಟೊಟ್ಟಿಗೆ ಕಲಿಯಬೇಕಾಗಿರುವುದರಿಂದ ಆಗುತ್ತಿರುವ ತೊಂದರೆ ಎಂದು ಅರ್ಥವಾಯಿತು.


ಹಲೋ, ಈಕ್ಷಿತಾ ಸ್ಪೀಕಿಂಗ್...!
ನನ್ನ ಮಗಳು ಸ್ವಲ್ಪ ‘ಅಪ್ಪನ ಮಗಳು’. ಏಟು ಕೊಡುವುದು ನಾನೆ, ಮುದ್ದು ಮಾಡುವುದು ನಾನೆ. ಅವರಮ್ಮನ ಹತ್ತಿರ ಸ್ವಲ್ಪ ಹಠ ಜಾಸ್ತಿ. ಕೇಡುಗ ಬುದ್ಧಿಯಲ್ಲದಿದ್ದರೂ, ಅವರಮ್ಮನಿಗೆ ಅದನ್ನು ಸಹಿಸಲಾಗುವುದಿಲ್ಲ. ಅದನ್ನು ಮಾಡಬೇಡ, ಇದನ್ನು ಮಾಡಬೇಡ ಎಂದು ದಿನಕ್ಕೆ ಇಪ್ಪತ್ತು ಸಾರಿಯಾದರೂ ಮಗಳಿಗೆ ಬುದ್ಧಿ ಹೇಳುತ್ತಿರುತ್ತಾಳೆ. (ನೀನು ಹಾಗೆ ಮಗುವಿಗೆ ಯಾವಾಗಲೂ ಎಲ್ಲದಕ್ಕೂ ರಿಸ್ಟ್ರಿಕ್ಟ್ ಮಾಡಬೇಡ ಎಂದು ನಾನು ಅವಳಿಗೆ ಬುದ್ದಿ ಹೇಳುತ್ತಿರುತ್ತೇನೆ)
ನನ್ನಪ್ಪನಿಗೆ ಇಷ್ಟವಾದ ರಾಗಿ ಮುದ್ದೆ ನಾನೂ ಮಾಡ್ತೀನಿ ಗೊತ್ತಾ...?
ಮೊನ್ನೆ ಒಂದು ದಿನ ಹೀಗೇ ಯಾವುದಕ್ಕೋ ಮಗಳಿಗೆ ಬುದ್ದಿ ಹೇಳುವುದು ಶುರುವಾಯಿತು. ನನ್ನ ಮಗಳಿಗೆ ಅದೇನು ಅನ್ನಿಸಿತೋ, ಕಾಣೆ. ಹಣೆ ಹಣೆ ಚಚ್ಚಿಕೊಳ್ಳುತ್ತಾ ‘ನಾನು ಈ ಮನೇಲಿ ಹುಟ್ಟಬಾರದಿತ್ತಮ್ಮಾ’ ಎಂದು ಬಿಟ್ಟಳು. ನಮಗಿಬ್ಬರಿಗೂ ಶಾಕ್. ‘ಏಕೆ’ ಎಂದು ಇಬ್ಬರೂ ಒಟ್ಟಿಗೆ ಕೇಳಿದೆವು. ಅದಕ್ಕೆ, ಅವಳು ‘ನಾನು ಹಠ ಮಾಡುತ್ತೇನೆ, ನೀನು ನನ್ನನ್ನು ಬಯ್ಯುತ್ತೀಯಾ. ಅಪ್ಪ ನಿನ್ನನ್ನು ಬಯ್ಯುತ್ತದೆ, ಅದಕ್ಕೆ’ ಎನ್ನುವುದೇ!

ನಾನೂ ಬರಿತೀನ್ರಿ. ನೀವು ಓದ್ತಿರಾ ತಾನೆ?
ಮೊನ್ನೆ ಒಬ್ಬರ ಮನೆಗೆ ಹೋಗುವುದಿತ್ತು. ಇವಳು ಚಿಕ್ಕವಳಾಗಿದ್ದಾಗ, ನಾವು ಹೋಗುತ್ತಿದ್ದ ಮನೆಯವರು ನಮ್ಮ ಪಕ್ಕದ ಮನೆಯವರಾಗಿದ್ದರು. ಹೊರಟು ನಿಂತಿದ್ದಾಗ ನನ್ನ ಮಗಳು ‘ಅಮ್ಮ ಅವರ ಮನೆಯಲ್ಲಿ ಯರ‍್ಯಾರು ಇರುತ್ತಾರೆ? ಎಂದು ಪ್ರಶ್ನಿಸಿದಳು. ಅವಳು ‘ಆಂಟಿ ಇರುತ್ತಾರೆ’ ಎಂದಳು. ‘ಇನ್ನು ಯಾರು ಇರುವುದಿಲ್ಲವೆ?’ ಮತ್ತೆ ಮಗಳ ಪ್ರಶ್ನೆ. ಅದಕ್ಕೆ ನನ್ನ ಹೆಂಡತಿ ‘ಇನ್ನು ಯಾರು ಇರಬೇಕಿತ್ತು?’ ಎಂದು ಮರುಪ್ರಶ್ನೆ ಹಾಕಿದಳು. ತಕ್ಷಣ ನನ್ನ ಮಗಳು ‘ಗಂಡ, ಇರಬೇಕಿತ್ತು’ ಎಂದಳು. ನನ್ನ ಹೆಂಡತಿ ನಗುತ್ತಾ ‘ಗಂಡನಾ, ಗಂಡ ಅಂದರೆ ಏನು? ಎಂದಳು. ನನ್ನ ಮಗಳು ನನ್ನೆಡೆಗೆ ಕೈತೋರುತ್ತಾ ‘ನಮ್ಮ ಮನೆಯಲ್ಲಿ ಇಲ್ಲವಾ, ಹಾಗೆ’ ಎಂದುಬಿಟ್ಟಳು. (ಸಧ್ಯ, ದಂಡ, ಪಿಂಡ ಎಂಬ ಪ್ರಸಾಕ್ಷರಗಳು ಇನ್ನೂ ಅವಳಿಗೆ ಗೊತ್ತಿಲ್ಲ)
ನನ್ಗೂ ಗೊತ್ರಿ, ಕಂಪ್ಯೂಟರ್...!
ಈಕ್ಷಿತಾ ಚಿಕ್ಕವಳಿದ್ದಾಗಲಿಂದಲೂ ದೊಡ್ಡವರನ್ನು ಅನುಕರಿಸುವುದು ಜಾಸ್ತಿ. ಬೇರೆಯಾಗಿಯೇ ಊಟಕ್ಕೆ ಕೂರುವುದು, ನಾವು ಬಡಿಸಿಕೊಂಡು ಎಲ್ಲವನ್ನೂ ತಾನೂ ಬಡಿಸಿಕೊಳ್ಳುವುದು (ತಿನ್ನುವುದು ಮಾತ್ರ ತನಗೆ ಬೇಕಾದ್ದನ್ನು! ಊಟ ಬೇಡವಾದಾಗ ಮೊಸರನ್ನವನ್ನೂ ಕಾರ ಎಂದು ತಳ್ಳಿರುವದುಂಟು!) ಇತ್ಯಾದಿ.

ಪೇಪರ್ ಓದೋದು ಹೀಗೇನಾ...?
ನಾವು ಕಾಫಿ ಕುಡಿದಾಗ ಅವಳಿಗೆ ಹಾಲು ಕೊಟ್ಟು, ನಮ್ಮದು ಕಷಾಯ ಎಂದು ಹೇಳಿದರೂ, ನನಗೂ ಕಷಾಯವನ್ನೇ ಕೊಡು ಎನ್ನುತ್ತಿದ್ದಳು. ಆಗ ನಾವು ಬೂಸ್ಟನ್ನು ಕಾಫಿ ಎಂದು ಸುಳ್ಳು ಹೇಳಿ ಕೊಡುತ್ತಿದ್ದೆವು. ಆದರೆ ನಾವೂ ಹೆಚ್ಚಾಗಿ ಹೋಗುವ, ಅವಳು 'ಮಾಯಿ' ಎಂದು ಕರೆಯುವ ಒಬ್ಬರ ಮನೆಯಲ್ಲಿ ಕಾಫಿ ಸಮಾರಾಧನೆ ಹೆಚ್ಚು. ರಾತ್ರಿ ಹತ್ತು ಗಂಟೆಗೆ ಹೋದರೂ ಒಂದೆರಡು ಸಿಪ್ ಕಾಫಿ ಕುಡಿದೇ ನಾವು ಹೊರಡುವುದು. ಅವರಿಗೆ ಈಕ್ಷಿತಾಳಿಗೆ ಕಾಫಿ ಕೊಡುವುದಕ್ಕೆ ಭಯ. ಆದರೆ ಕೊಡದಿರುವುದಕ್ಕೆ ಇಷ್ಟವಿಲ್ಲ. ಅದಕ್ಕಾಗಿ ಲೈಟಾಗಿ ಸ್ವಲ್ಪ ಕೊಡುವುದನ್ನು ಅಭ್ಯಾಸ ಮಾಡಿಸಿದರು.
ಮನೆ ಗುಡಿಸೋದಿಕ್ಕೂ......
‘ನಮ್ಮ ಮನೆಗೆ ಬಂದಾಗ ಸ್ವಲ್ಪವನ್ನೇ ಕುಡಿಯಬೇಕು’ ಎಂದು ಅವಳನ್ನು ಕನ್ವಿನ್ಸ್ ಮಾಡಿದರೂ ಕೂಡಾ. ಮುಂದೆ ನಾವು ಯಾವಾಗ ಅವರ ಮನೆಗೆ ಹೋದರೂ ಅವರು ಕಾಫಿ ಮಾಡಲು ಎದ್ದರೆ ಸಾಕು, ‘ಮಾಮಿ, ನನಗೆ ಸೀಲ್ ಲೋಟದಲ್ಲಿ ಸೂರ್ ಕಾಫಿ ಕೊಡಿ’ ಎನ್ನುತ್ತಿದ್ದಳು. ಅವಳು ಮೂರುವರ್ಷದವಳಿದ್ದಾಗಲಿಂದ ಸುಮಾರು ಒಂದು ಒಂದೂವರೆ ವರ್ಷಗಳ ಕಾಲ ಅವಳ ಈ ವಾಕ್ಯ ನಮಗೆ ಬಹಳ ತಮಾಷೆಯ ವಸ್ತುವಾಗಿತ್ತು. ಮಾಯಿಯ ಸ್ನೇಹಿತರೆಲ್ಲಾ ಈಕ್ಷಿತಾಳ ಬಗ್ಗೆ ವಿಚಾರಿಸುವಾಗ 'ಸೂರ್ ಕಾಫಿ ಹೇಗಿದೆ?' ಎಂದೇ ಕೇಳುತ್ತಿದ್ದರಂತೆ!

ಮನೆ ತೊಳೆಯೋದಿಕ್ಕೂ ನಾನ್ ರೆಡಿ!
ನನ್ನ ತಾಯಿಗೆ ಈಗ ಸುಮಾರು ಎಪ್ಪತ್ತೈದು ವರ್ಷ ಆಗಿದೆ. ಅವರ ಚರ್ಮ ಸುಕ್ಕುಗಟ್ಟಿ ನೆರಿಗೆ ನೆರಿಗೆಯಾಗಿ ಕಾಣುತ್ತದೆ. ಅವರ ಕೈನ ಚರ್ಮವನ್ನು ಸವರುತ್ತಾ ನನ್ನ ಮಗಳು 'ಅಜ್ಜಿಯ ಚರ್ಮ ಹಾಲಿನೆ ಕೆನೆಯಿದ್ದ ಹಾಗಿದೆ' ಎನ್ನುತ್ತಿದ್ದಳು. ಬಿಸಿಯಾಗಿದ್ದ ಹಾಲು ತಣ್ಣಗಾಗಿ ಕೆನೆಕಟ್ಟಿದಾಗ ಕಾಣುವ ರೀತಿಯನ್ನು ಅವಳು ಗಮನಿಸಿದ್ದಳು!
ಅಜ್ಜಿ ಊರಲ್ಲೂ ನಾನೇ ಕೆಲ್ಸ ಮಾಡೋದು, ಗೊತ್ತಾ!
ಅಜ್ಜಿ ಊರಲ್ಲಿರೋ ನನ್ನ ಫ್ರೆಂಡ್ಸ್, ಇವ್ರು!

ಇನ್ನೊಬ್ಬ ಫ್ರೆಂಡ್ಸ್ ಗೂ ನಾನೇ ಕಾಳು ತಿನ್ನಿಸ್ತಿನಿ

ಅಪ್ಪಾ, ನಾನು ಕೇಕ್ ಕಟ್ ಮಾಡ್ಲಾ...?
ಇವ್ರೆಲ್ಲಾ ನನ್ನ ಮೊದಲ ಸ್ಕೂಲಿನ ಜೊತೆಗಾರ್ರು
ಮುಂಜಾನೆ ವಾಕಿಂಗ್, ಬ್ಯಾಲೆನ್ಸಿಂಗ್ ಎಲ್ಲಾ ನಡೆಯುತ್ತೆ ಪಾರ್ಕಿನಲ್ಲಿ
ನಮ್ಮ ಸಂಸಾರ


ನನ್ನ ಡ್ಯಾನ್ಸ್ ಸ್ವಲ್ಪ ನೋಡಿ

12 comments:

ಸಾಗರದಾಚೆಯ ಇಂಚರ said...

ತುಂಬಾನೇ ಮುದ್ದಾಗಿದಾಳೆ ಮಗಳು, ಅವಳ ಆಟ ಪಾಠ ನೋಡಿ ತುಂಬಾ ಖುಷಿ ಆಯಿತು. ನಂಜೊತೆ ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್. ಈಕ್ಷಿತ ಜೀವನದಲ್ಲಿ ಹೆಚ್ಚಿನ ಯಶಸ್ಸು ಗಳಿಸಲಿ ಅನ್ನೋದು ನನ್ನ ತುಂಬು ಹ್ರದಯದ ಹಾರೈಕೆ,

Dr. B.R. Satynarayana said...

Dr Gurumurthy Sir
Thanks for your wishes.

ಬಿಸಿಲ ಹನಿ said...

ಸತ್ಯನಾರಾಯಣವರೆ,
ನಿಮ್ಮ ಮಗಳ ಆಟ ಪಾಠಗಳನ್ನು ಓದಿ ನನಗೆ ದೂರದಲ್ಲಿರುವ ನನ್ನ ಎರಡು ವರ್ಷದ ಮಗಳು ಜ್ಞಾಪಕಕ್ಕೆ ಬಂದಳು. ಮನಮುಟ್ಟುವಂತೆ ಅವಳ ಆಟ ಪಾಠಗಳನ್ನು ವಿವರಿಸಿದ್ದೀರಿ. ಈಕ್ಷಿತಾಳ ಬದುಕು ಹುಲುಸಾಗಿ ಬೆಳೆಯಲಿ ಎಂದು ಹಾರೈಸುತ್ತೇನೆ.

PaLa said...

ಸುಂದರ ಚಿತ್ರಗಳು, ನಡು ನಡುವೆ ಸೊಗಸಾಗಿ ಪೋಣಿಸಿದ ನೆನಪುಗಳು. ಈಕ್ಷಿತಾಳಿಗೆ ಪ್ರೀತಿಯ ಹಾರೈಕೆ

shivu said...

ಸರ್,

ಈಕ್ಷಿತಾಳಿಗೆ ಒಳ್ಳೆಯದಾಗಲಿ.....ಅವಳ ಎಲ್ಲಾ ಆಟ ಪಾಟ ಚಟುವಟಿಕೆಗಳ ಫೋಟೋ ಚೆನ್ನಾಗಿದೆ....ಆವಳ ಚುರುಕು ಚಟುವಟಿಕೆ ನನಗೆ ಇಷ್ಟವಾಯಿತು...

ಮಗಳ ಜೊತೆಗಿನ ಮದುರ ನೆನಪುಗಳನ್ನು ನೀವು ಕೂಡ ಮಗುವಾಗಿ ಹಂಚಿಕೊಂಡಿದ್ದೀರಿ....ಮಕ್ಕಳ ಉಲ್ಟಾಪಲ್ಟಾ ಮಾತುಗಳು ಪ್ರಾರಂಭದಲ್ಲಿ ತಲೆತಿರುಗಿಸಿದರೂ...ನಂತರ ಭಲೇ ಮಜ ಕೊಡುತ್ತವೆ...
ಮಕ್ಕಳೊಂದಿಗೆ ಮಗುವಾಗುವುದು ಒಂದು ಕಲೆ....ಮತ್ತಷ್ಟು ಅವಳ ಅಧಿಕಪ್ರಸಂಗಗಳಿದ್ದರೆ[ಇದ್ದರೆ ಏನು ಇದ್ದೇ ಇರುತ್ತವೆ]ಹಂಚಿಕೊಳ್ಳಿ..ನಾವು ಓದಿ ನೋಡಿ ಖುಷಿಪಡುತ್ತೇವೆ...
ಧನ್ಯವಾದಗಳು..

PARAANJAPE K.N. said...

ಸತ್ಯನಾರಾಯಣರೇ,

ಚಿತ್ರ-ಲೇಖನ ಚೆನ್ನಾಗಿದೆ. ಮಕ್ಕಳು ಮನಸು ಮುಗ್ಧ ಮತ್ತು ನಿಷ್ಕಲ್ಮಶ. ಮಕ್ಕಳು ಉಲ್ಟಾ ಮಾತನಾಡುವುದು ಸಣ್ಣ ಪ್ರಾಯದಲ್ಲಿ ಸಾಮಾನ್ಯ ಮತ್ತು ಮಜಾ ಕೊಡುವ ವಿಚಾರ.

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಈಕ್ಷಿತಾಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿ.
ನನಗೆ ತುಂಬಾ ಇಷ್ಟವಾದದ್ದು ನೀವು ನಿಮ್ಮ ಮುದ್ದು ಕಂದನ ಎಲ್ಲಾ ಫೋಟೋಗಳನ್ನೂ ಚಟುವಟಿಕೆ ಸಮೇತ ಸೆರೆಹಿಡಿದಿರುವುದು. ನಿಮ್ಮ ಮಗಳ ಫೋಟೋ ತೆಗೆಯುವ ಅದೃಷ್ಟ ನನಗೂ ಮೊನ್ನೆ ಸಿಕ್ಕಿತ್ತು. ಎಳೆ ಮಗುವಿನಿಂದ ಹಿಡಿದು ಈಗಿನವರೆಗೂ ಫೋಟೋಗಳು, ತೊದಲು ನುಡಿಯಿಂದ ಮುದ್ದು ಮಾತುಗಳೆಲ್ಲಾ ತುಂಬ ತುಂಬ ಚೆನ್ನಾಗಿದೆ. ನಾನೂ ನನ್ನ ಮಗನ ಚಿತ್ರಗಳನ್ನು ಹೀಗೇ ತೆಗೆದಿರುವೆ. ಆದರೆ ಪ್ರಕಟಿಸುವ ಹಾಗಿಲ್ಲ!Copyright ನನ್ನ ಹೆಂಡತಿ ಬಳಿ ಇದೆ!

Dr. B.R. Satynarayana said...

ನನ್ನ ಬ್ಲಾಗಿಗೆ ಬಂದು, ನನ್ನ ಮತ್ತು ನನ್ನ ಮಗಳ ಪುರಾಣವನ್ನು ಓದಿದ, ಪ್ರತಿಕ್ರಿಯಿಸಿದ ಸ್ನೇಹಿತರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ.

guruve said...

ನಿಮ್ಮ ಮಗಳ ಜೊತೆ ನಡೆದ ಪ್ರಸಂಗಗಳನ್ನು ಚೆನ್ನಾಗಿ ಬರವಣಿಗೆಯಲ್ಲಿ ಹಿಡೀದಿಟ್ಟಿದ್ದೀರ. ಚಿತ್ರ ಪಟಗಳೂ ಮುದ್ದಾಗಿವೆ. ಉಲ್ಟಾ ಪಳ್ಟಾ ಹೇಳುವುದಂತೂ ಸಕತ್ತಾಗಿದೆ. :)

ಸಿಮೆಂಟು ಮರಳಿನ ಮಧ್ಯೆ said...

ಸತ್ಯನಾರಾಯಣ್....

ಕ್ಷಮಿಸಿ... ಬಹಳ ತಡವಾಗಿ ಬರುತ್ತಿರುವೆ...
ಇಂಟರ್ ನೆಟ್ ಸಮಸ್ಯೆ ಇತ್ತು..

ಪುಟಾಣಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿ...

ನಿಮ್ಮ ಫೋಟೊ ಸಂಗ್ರಹ ಚೆನ್ನಾಗಿದೆ....

ಖುಷಿಯಾಗುತ್ತದೆ...

ಮಕ್ಕಳ ಬೆಳವಣಿಗೆಯನ್ನು ನೋಡುವದು...
ಅದರ ಖುಷಿಯೇ ಬೇರೆ...

ಅಭಿನಂದನೆಗಳು..

ರೂpaश्री said...

ನಿಮ್ಮ್ ಮಗಳು ತುಂಬಾನೆ ಮುದ್ದಾಗಿದ್ದಾಳೆ, ಅಷ್ಟೆ ಚೂಟಿ ಕೂಡ:) ಎಲ್ಲಾ ಫೋಟೋಗಳು ಚೆನ್ನಾಗಿವೆ.
"ನಾನು ಐದು ವರ್ಷದ ತಂದೆ" ಅನ್ನೊ ನಿಮ್ಮ ಮಾತು ತುಂಬಾ ಇಷ್ಟವಾಯಿತು. ಈಕ್ಷಿತಾಳಿಗೆ ಶುಭ ಹಾರೈಕೆಗಳು

ರೂpaश्री
www.puttiprapancha.blogspot.com

Anonymous said...

ಮಿತ್ರ ಸತ್ಯನಾರಾಯಣ,
ನಿಮ್ಮ ಮಗಳ ಚಿತ್ರಗಳು ಹೃದಯಸ್ಪರ್ಶಿಯಾಗಿವೆ. ಇತ್ತೀಚೆಗೆ ಕೆಂಡಸಂಪಿಗೆಯ ವೇದಿಕೆಯಲ್ಲಿ ಸಿದ್ದಮುಖಿ ಎಂಬುವರು ದಲಿತರ ಇಂದಿನ ಸಮಸ್ಯೆಗಳ ಬಗ್ಗೆ ಕೆಲವು ಮೌಲಿಕ ಪ್ರಶ್ನೆಗಳನ್ನು ಕೇಳಿದರು. ಅವುಗಳ ಬಗ್ಗೆ ತಾವು ಏನು ಹೇಳುತ್ತೀರಿ ಎಂದು ಕೇಳಬಯಸುತ್ತೇನೆ.
-- ಆಸಕ್ತ ಓದುಗ
೧) ಜಾಗತೀಕರಣದ ಲಾಭವನ್ನು ದಲಿತರಿಗೂ ಸಿಗಲು ಏನು ಮಾಡಬೇಕು?
೨) ಮೀಸಲಾತಿಯಿಂದ ಆರ್ಥಿಕ ಭದ್ರತೆಯನ್ನು ಪಡೆದಿರುವ ದಲಿತರು ಸಮುದಾಯವನ್ನು ಮರೆತು ಸ್ವಾರ್ಥಿಗಳಾಗಿದ್ದಾರೆ. ಸಬಲರಾಗಿರುವ ದಲಿತರು ಅಬಲ ದಲಿತರಿಗೆ ಮುಂದೆ ಬರಲು ನೆರವಾಗುವಂತೆ ಮಾಡಲು ಏನು ಮಾಡಬೇಕು?
೩) ಕೇವಲ ಮೀಸಲಾತಿಯಿಂದ ಸಿಗುವ ಸರ್ಕಾರಿ ಉದ್ಯೋಗಗಳಿಗಷ್ಟೇ ತಮ್ಮ ಕ್ಷೇತ್ರವನ್ನು ಸೀಮಿತಗೊಳಿಸದೆ ನಗರ ಪ್ರದೇಶಗಳಲ್ಲಿ ಸ್ವಯಂ ಉದ್ಯೋಗ ಮತ್ತು ಸ್ವಾವಲಂಬನೆಯತ್ತ ದಲಿತ ಸಮುದಾಯ ಸಾಗಲು ಏನು ಮಾಡಬೇಕು?
೪) ದಲಿತ ಸಮುದಾಯದಲ್ಲಿ entrepreneurship ಅನ್ನು ಪ್ರೋತ್ಸಾಹಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು?
೫) ದಲಿತ ಸಮುದಾಯದಲ್ಲಿ ವ್ಯಾಪಕವಾಗಿರುವ ಕುಡಿತದ ಸಮಸ್ಯೆಯನ್ನು ಬಗೆಹರಿಸಲು ಏನನ್ನು ಮಾಡಬೇಕು?
೬) ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಬಲರಾದ ಮೇಲೆ ಬಹುತೇಕ ದಲಿತರು ಬ್ರಾಹ್ಮಣರ ಮೆಚ್ಚುಗೆಗೆ ಹಾತೊರೆಯುತ್ತಾರೆ. ಇದನ್ನು ತಡೆಯಲು ಏನನ್ನು ಮಾಡಬೇಕು?
೭) ದಲಿತರಲ್ಲಿರುವ ಒಳಪಂಗಡಗಳನ್ನು ಒಟ್ಟುಗೂಡಿಸಿ ದಲಿತರೆಲ್ಲರೂ ಒಂದೇ ಎಂಬ ಪ್ರಜ್ಞೆಯನ್ನು ಬೆಳೆಸಲು ಏನನ್ನು ಮಾಡಬೇಕು?
೮) ಗ್ರಾಮ್ಯಪ್ರದೇಶಗಳಲ್ಲಿ ದಲಿತರ ಮೇಲೆ ನಡೆಯುವ ಹಲ್ಲೆಯನ್ನು ತಡೆಗಟ್ಟಲು ದಲಿತರಿಗೆ ಯಾವ ರೀತಿಯ ತರಬೇತಿಯನ್ನು ಕೊಡಬೇಕು?
೯) ಆಧುನಿಕತೆಯ ಲಾಭ ಕೇವಲ ನಗರ ಪ್ರದೇಶದ ದಲಿತರಿಗೆ ಮೀಸಲಾಗಿರದೆ ಗ್ರಾಮ್ಯ ಪ್ರದೇಶದ ದಲಿತರಿಗೂ ಸಿಗುವಂತೆ ಮಾಡಲು ಏನನ್ನು ಮಾಡಬೇಕು?
೧೦) ದಲಿತರಲ್ಲೂ ವ್ಯಾಪಕವಾಗಿರುವ ಕಂದಾಚಾರ ಮತ್ತು ಮೌಢ್ಯವನ್ನು ತೊಲಗಿಸಲು ಏನನ್ನು ಮಾಡಬೇಕು?
೧೧) ಮೀಸಲಾತಿಯ ಕಾರಣದಿಂದ ಹೆಚ್ಚುತ್ತಿರುವ ಮೇಲ್ಜಾತಿಗಳ ದಲಿತ ವಿರೋಧಿ ಮನೋಭಾವವನ್ನು ಎದುರಿಸುವುದು ಹೇಗೆ?
೧೨) ಪ್ರಗತಿಪರ ದಲಿತರನ್ನು ಗುರುತಿಸಿ ಪ್ರೋತ್ಸಾಹ ನೀಡಿ ತಮ್ಮ ತಮ್ಮ ಹಳ್ಳಿಗಳಲ್ಲಿ ಕ್ರಾಂತಿ ಪ್ರಜ್ಞೆಯನ್ನು ಮೂಡಿಸುವಂತೆ ಮಾಡಲು ಏನನ್ನು ಮಾಡಬೇಕು?

Saturday, April 18, 2009

ಮಿತ್ರ ಗುಡದೂರು, ನಿಮ್ಮ ಸಂದರ್ಶನ ಹೃದಯಸ್ಪರ್ಶಿಯಾಗಿದೆ. ದೀನದಲಿತರ ಅಸಹಾಯಕತೆಯ ಬಗ್ಗೆ ನಿಮಗಿರುವ ಕಳಕಳಿ ಮಾನವೀಯವಾದುದು. ಇತ್ತಿಚೆಗೆ ಕೆಂಡಸಂಪಿಗೆಯ ವೇದಿಕೆಯಲ್ಲಿ ಸಿದ್ದಮುಖಿ ಎಂಬುವರು ದಲಿತರ ಇಂದಿನ ಸಮಸ್ಯೆಗಳ ಬಗ್ಗೆ ಕೆಲವು ಮೌಲಿಕ ಪ್ರಶ್ನೆಗಳನ್ನು ಕೇಳಿದರು. ಅವುಗಳ ಬಗ್ಗೆ ತಾವು ಏನು ಹೇಳುತ್ತೀರಿ ಎಂದು ಕೇಳಬಯಸುತ್ತೇನೆ. -- ಆಸಕ್ತ ಓದುಗ ೧) ಜಾಗತೀಕರಣದ ಲಾಭವನ್ನು ದಲಿತರಿಗೂ ಸಿಗಲು ಏನು ಮಾಡಬೇಕು? ೨) ಮೀಸಲಾತಿಯಿಂದ ಆರ್ಥಿಕ ಭದ್ರತೆಯನ್ನು ಪಡೆದಿರುವ ದಲಿತರು ಸಮುದಾಯವನ್ನು ಮರೆತು ಸ್ವಾರ್ಥಿಗಳಾಗಿದ್ದಾರೆ. ಸಬಲರಾಗಿರುವ ದಲಿತರು ಅಬಲ ದಲಿತರಿಗೆ ಮುಂದೆ ಬರಲು ನೆರವಾಗುವಂತೆ ಮಾಡಲು ಏನು ಮಾಡಬೇಕು? ೩) ಕೇವಲ ಮೀಸಲಾತಿಯಿಂದ ಸಿಗುವ ಸರ್ಕಾರಿ ಉದ್ಯೋಗಗಳಿಗಷ್ಟೇ ತಮ್ಮ ಕ್ಷೇತ್ರವನ್ನು ಸೀಮಿತಗೊಳಿಸದೆ ನಗರ ಪ್ರದೇಶಗಳಲ್ಲಿ ಸ್ವಯಂ ಉದ್ಯೋಗ ಮತ್ತು ಸ್ವಾವಲಂಬನೆಯತ್ತ ದಲಿತ ಸಮುದಾಯ ಸಾಗಲು ಏನು ಮಾಡಬೇಕು? ೪) ದಲಿತ ಸಮುದಾಯದಲ್ಲಿ entrepreneurship ಅನ್ನು ಪ್ರೋತ್ಸಾಹಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು? ೫) ದಲಿತ ಸಮುದಾಯದಲ್ಲಿ ವ್ಯಾಪಕವಾಗಿರುವ ಕುಡಿತದ ಸಮಸ್ಯೆಯನ್ನು ಬಗೆಹರಿಸಲು ಏನನ್ನು ಮಾಡಬೇಕು? ೬) ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸಬಲರಾದ ಮೇಲೆ ಬಹುತೇಕ ದಲಿತರು ಬ್ರಾಹ್ಮಣರ ಮೆಚ್ಚುಗೆಗೆ ಹಾತೊರೆಯುತ್ತಾರೆ. ಇದನ್ನು ತಡೆಯಲು ಏನನ್ನು ಮಾಡಬೇಕು? ೭) ದಲಿತರಲ್ಲಿರುವ ಒಳಪಂಗಡಗಳನ್ನು ಒಟ್ಟುಗೂಡಿಸಿ ದಲಿತರೆಲ್ಲರೂ ಒಂದೇ ಎಂಬ ಪ್ರಜ್ಞೆಯನ್ನು ಬೆಳೆಸಲು ಏನನ್ನು ಮಾಡಬೇಕು? ೮) ಗ್ರಾಮ್ಯಪ್ರದೇಶಗಳಲ್ಲಿ ದಲಿತರ ಮೇಲೆ ನಡೆಯುವ ಹಲ್ಲೆಯನ್ನು ತಡೆಗಟ್ಟಲು ದಲಿತರಿಗೆ ಯಾವ ರೀತಿಯ ತರಬೇತಿಯನ್ನು ಕೊಡಬೇಕು? ೯) ಆಧುನಿಕತೆಯ ಲಾಭ ಕೇವಲ ನಗರ ಪ್ರದೇಶದ ದಲಿತರಿಗೆ ಮೀಸಲಾಗಿರದೆ ಗ್ರಾಮ್ಯ ಪ್ರದೇಶದ ದಲಿತರಿಗೂ ಸಿಗುವಂತೆ ಮಾಡಲು ಏನನ್ನು ಮಾಡಬೇಕು? ೧೦) ದಲಿತರಲ್ಲೂ ವ್ಯಾಪಕವಾಗಿರುವ ಕಂದಾಚಾರ ಮತ್ತು ಮೌಢ್ಯವನ್ನು ತೊಲಗಿಸಲು ಏನನ್ನು ಮಾಡಬೇಕು? ೧೧) ಮೀಸಲಾತಿಯ ಕಾರಣದಿಂದ ಹೆಚ್ಚುತ್ತಿರುವ ಮೇಲ್ಜಾತಿಗಳ ದಲಿತ ವಿರೋಧಿ ಮನೋಭಾವವನ್ನು ಎದುರಿಸುವುದು ಹೇಗೆ? ೧೨) ಪ್ರಗತಿಪರ ದಲಿತರನ್ನು ಗುರುತಿಸಿ ಪ್ರೋತ್ಸಾಹ ನೀಡಿ ತಮ್ಮ ತಮ್ಮ ಹಳ್ಳಿಗಳಲ್ಲಿ ಕ್ರಾಂತಿ ಪ್ರಜ್ಞೆಯನ್ನು ಮೂಡಿಸುವಂತೆ ಮಾಡಲು ಏನನ್ನು ಮಾಡಬೇಕು?