Saturday, June 13, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 18

ಬೋಂಡ, ಬಿಸ್ಕತ್ ತಯಾರಿ
ಶನಿವಾರ ಭಾನುವಾರ ಹಾಸ್ಟೆಲ್ಲಿನಲ್ಲೇ ಉಳಿದಿರುತ್ತಿದ್ದ ನಾವು ಮಾಡುತ್ತಿದ್ದ ಘನಕಾರ್ಯಗಳಲ್ಲಿ ಕೆಲವನ್ನು ಇಲ್ಲಿ ಹೇಳುತ್ತೇನೆ. ಹಾಸ್ಟೆಲ್ಲಿನವರೇನೋ ಚೆನ್ನಾಗಿಯೇ ಊಟ ತಿಂಡಿ ಕೊಡುತ್ತಿದ್ದರು. ಆದರೆ ಬಾಯಿ ರುಚಿಗೆ ಏನಾದರೂ ಮಾಡಿಕೊಂಡು ತಿನ್ನಬೇಕೆಂದು ನಮಗೆ ಆಸೆಯಾಗುತ್ತಿತ್ತು. ಧರ್ಮಣ್ಣ ಏನಾದರು ಆ ದಿನಗಳಲ್ಲಿ ಇದ್ದರೆ, ನಾವೆಲ್ಲಾ ಚಂದಾ ಹಾಕಿಕೊಂಡು ಏನಾದರು ಸಮಾನು ತಂದುಕೊಟ್ಟರೆ, ತಿಂಡಿ ಮಾಡಿಕೊಡುತ್ತಿದ್ದ. ಬೇರೆ ಭಟ್ಟರ ಬಳಿ ನಮ್ಮ ಆಟ ಏನೂ ನಡೆಯುತ್ತಿರಲಿಲ್ಲ. ಹೆಚ್ಚಾಗಿ ಮಾಡುತ್ತಿದ್ದ ತಿಂಡಿಗಳೆಂದರೆ, ಪುರಿ ಉಪ್ಪಿಟ್ಟು, ಕೇಸರಿಬಾತ್, ಬೋಂಡ ಇವುಗಳಲ್ಲಿ ಯಾವುದಾದರು ಒಂದನ್ನು ಮಾತ್ರ ಒಂದು ದಿನ ಮಾಡುತ್ತಿದ್ದೆವು. ಧರ್ಮಣ್ಣ ಇಲ್ಲದ ದಿನಗಳಲ್ಲಿ ನಾವೇ ತಯಾರು ಮಾಡಿಕೊಂಡು ತಿನ್ನಬೇಕಾಗಿತ್ತು. ಅದೂ ಹಾಸ್ಟೆಲ್ಲಿನಿಂದ ಹೊರಗೆ.
ಒಮ್ಮೆ ಬೋಂಡ ಮಾಡಬೇಕೆಂದು ಕಡ್ಲೆಹಿಟ್ಟು, ಈರುಳ್ಳಿ, ಮೆಣಸಿನಕಾಯಿ ಎಲ್ಲವನ್ನೂ ತಂದು ಹದ ಮಾಡಿ ಇಟ್ಟುಕೊಂಡಿದ್ದೆವು. ಒಂದಿಬ್ಬರನ್ನು ಕುಂದೂರಿಗೆ ಕಳುಹಿಸಿ ಎಣ್ಣೆ ಮಾರುವವನಿಂದ ಅರ್ಧಲೀಟರ್ ಎಣ್ಣೆಯನ್ನು ತರಿಸಿದ್ದೆವು. ಚೆನ್ನಾಗಿ ಕಾದ ಎಣ್ಣೆಗೆ ಕಲಸಿದ ಹಿಟ್ಟನ್ನು ಹಾಕಿದ್ದೇ ತಡ, ಬುಗ್ಗನೆ ನೊರೆಯೆದ್ದು ಎಣ್ಣೆಯೆಲ್ಲಾ ಒಲೆಯಲ್ಲಿ ಚೆಲ್ಲಿ ಹೊಗೆ ಸುತ್ತಿಕೊಂಡು ಎಣ್ಣೆ ಬಾಂಡಲಿಗೂ ಬೆಂಕಿ ಹಚ್ಚಿಕೊಂಡಿಬಿಟ್ಟಿತ್ತು. ಸಧ್ಯ! ಯಾರಿಗೂ ಏನೂ ಆಗಿರಲಿಲ್ಲ. ಯಾರೋ ಒಂದು ಬಕೆಟ್ ನೀರನ್ನು ಎಣ್ಣೆ ಬಾಂಡಲಿ ಸಮೇತ ಒಲೆಗೆ ಸುರಿದಿದ್ದರು.
ಮತ್ತೆ ಒಲೆ ಹತ್ತಿಸಿ, ಉಳಿದಿದ್ದ ಎಣ್ಣೆಯನ್ನು ಕಾಯಿಸಿ ಹಿಟ್ಟನ್ನು ಹಾಕಿದಾಗಲೂ ಎಣ್ಣೆ ಬುಗ್ಗನೆ ಉಕ್ಕುತ್ತಿತ್ತು. ಈ ಬಾರಿ ಉರಿ ಕಡಿಮೆ ಮಾಡಿದ್ದರೂ ಒಂದೊಂದು ಚೂರು ಹಿಟ್ಟನ್ನು ಹಾಕಿದಂತೆ ಎಣ್ಣೆ ಉಕ್ಕಿ ಉಕ್ಕಿ ಚೆಲ್ಲುವ ಹಂತಕ್ಕೆ ಬರುತ್ತಿತ್ತು. ಕೊನೆಗೆ ಅಂದು ಬೋಂಡ ಮಾಡುವ ಆಸೆಯನ್ನು ಕೈ ಬಿಟ್ಟೆವು. ದುಡ್ಡನ್ನೂ ಕಳೆದುಕೊಂಡೆವು. ಮುಂದೆ ಧರ್ಮಣ್ಣನಿಗೆ ಈ ವಿಷಯ ತಿಳಿಸಿದಾಗ, ‘ಎಣ್ಣೆಯವನು ಯಾವುದೋ ಕಲಬೆರೆಕೆ ಎಣ್ಣೆಯನ್ನೋ ಹುಚ್ಚೆಳ್ಳು ಎಣ್ಣೆಯನ್ನೋ ಕೊಟ್ಟಿದ್ದಾನೆ’ ಎಂದು ಹೇಳಿದ.
ಇನ್ನೊಮ್ಮೆ ಒಬ್ಬ ಹುಡುಗನ ಮಾತು ಕಟ್ಟಿಕೊಂಡು ಬೆಣ್ಣೆ ಬಿಸ್ಕತ್ ಮಾಡಲು ತೀರ್ಮಾನಿಸಿದ್ದೆವು. ಆ ಹುಡುಗ ಹೇಳಿದಂತೆ ರವೆ, ತುಪ್ಪ ಮತ್ತು ಸಕ್ಕರೆಯನ್ನು ತಲಾ ಕಾಲು ಕೇಜಿಯಂತೆ ತಂದು ಚೆನ್ನಾಗಿ ಕಲೆಸಿದೆವು. ಒಂದು ಬಾಣಲೆಯಲ್ಲಿ ಮರಳನ್ನು ತುಂಬಿ ಅದನ್ನು ಒಲೆಯ ಮೇಲೆ ಇಟ್ಟು ಬೆಂಕಿ ಕೊಟ್ಟೆವು. ಕಲೆಸಿ ಸಿದ್ಧಪಡಿಸಿದ ಹಿಟ್ಟನ್ನು ಬಿಸ್ಕತ್ ಆಕಾರಕ್ಕೆ ತಟ್ಟಿ, ತುಪ್ಪ ಸವರಿದ ತಟ್ಟೆಗಳಿಗೆ ಜೋಡಿಸಿ, ಕಾದ ಮರಳಿನ ಮೇಲೆ ಇಡುತ್ತಿದ್ದೆವು. ಮೇಲೊಂದು ತಟ್ಟೆಯನ್ನೂ ಮುಚ್ಚಿದ್ದೆವು. ಕಾಲು ಗಂಟೆಯ ಹೊತ್ತು ಚೆನ್ನಾಗಿ ಉರಿ ಹಾಕಿ ಬೇಯಿಸಿದೆವು. ಏನೋ ಸುಟ್ಟ ಸುಟ್ಟ ತುಪ್ಪದ ವಾಸನೆ ಬಂದಾಗ ಕೆಳಗಿಳಿಸಿ ನೋಡಿದೆವು. ಆಹಾ! ಏನು ಹೇಳುವುದು? ನಾವು ಬಿಸ್ಕೆಟ್‌ನ ಆಕಾರದಲ್ಲಿ ಇಟ್ಟಿದ್ದೆಲ್ಲಾ ಕಲೆಸಿ ಒಂದುಗೂಡಿಬಿಟ್ಟಿತ್ತು. ಎತ್ತಿಕೊಳ್ಳಲು ಹೋದರೆ ಹುಡಿಹುಡಿಯಾಗಿ ಉದುರುತ್ತಿತ್ತು. ಬಾಯಿಗೆ ಇಟ್ಟರೆ ಮಣ್ಣನ್ನು ತಿಂದಂತಾಗುತ್ತಿತ್ತು. ಸಕ್ಕರೆ ಹಾಕಿದ್ದರಿಂದ ಸಿಹಿಯಾಗೇನೋ ಇತ್ತು! ಆದರೆ ನಾವು ನಿರೀಕ್ಷಿಸಿದ ಬಿಳಿ ಅಥವಾ ಹಳದಿ ಬಣ್ಣದ ನಯವಾದ ಬೆಣ್ಣೆ ಬಿಸ್ಕತ್ ನಮಗೆ ಸಿಗಲಿಲ್ಲ.
ಇದನ್ನೂ ಧರ್ಮಣ್ಣನ ಬಳಿ ಹೇಳಿದಾಗ ‘ಹೇ ಬಡ್ಡೆತ್ತವಾ! ಬಿಸ್ಕತ್ತಿಗೆ ಯಾವನಾರ್ರು ರವೆ ಹಾಕ್ತಾನ? ಕಡ್ಲೆಹಿಟ್ಟನ್ನು ಗೋಧಿಹಿಟ್ಟನ್ನು ಹಾಕಬೇಕಾಗಿತ್ತು’ ಎಂದ. ಮೊದಲೇ ದುಡ್ಡು ಕಳೆದುಕೊಂಡು ಬೆಣ್ಣೆ ಬಿಸ್ಕತ್ ತಿನ್ನಲು ಆಗದೆ ಬೇಜಾರಿನಲಿದ್ದ ನಮಗೆ ಧರ್ಮಣ್ಣ ಬಯ್ದಿದ್ದು ಇನ್ನೂ ಬೇಜಾರಾಗಿತ್ತು. ನಾವೆಲ್ಲಾ ಇಂಗು, ಅಲ್ಲಲ್ಲ ರವೆ ತಿಂದ ಮಂಗನಂತಾಗಿದ್ದೆವು. ಆದರೆ ಮುಂದೊಂದು ದಿನ ಧರ್ಮಣ್ಣನ ಕೈಯಲ್ಲೇ ಗರಿಗರಿಯಾದ ಬೆಣ್ಣೆ ಬಿಸ್ಕತ್‌ಗಳನ್ನು ಮಾಡಿಸಿಕೊಂಡು ತಿಂದು ಅವನು ಬಯ್ದದ್ದನ್ನು ಮರೆತುಬಿಟ್ಟೆವು!
‘ಬಾಂಬ್’ ಮಾಡುವ ಸಾಹಸ!
ಹಾಸ್ಟೆಲ್ಲಿನಲ್ಲಿ ನಮಗೆ ರಾತ್ರಿಯ ಉಪಯೋಗಕ್ಕೆ ಕೊಡುತ್ತಿದ್ದ ಸೀಮೆಎಣ್ಣೆ ದೀಪ ಮತ್ತು ಕ್ಯಾಂಡಲ್‌ಗಳನ್ನು ಬಳಸಿಕೊಂಡು ಏನೇನೋ ಸಂಶೋಧನೆಗಳನ್ನು ನಾವು ಮಾಡುತ್ತಿದ್ದೆವು. ಕ್ಯಾಂಡೆಲ್‌ಗಳನ್ನು ಉಳಿತಾಯ ಮಾಡಬಹುದೆಂದು ಒಂದು ಲೋಟದೊಳಗೆ ಅದನ್ನು ನಿಲ್ಲಿಸಿ, ಅದರ ಕುತ್ತಿಗೆಯವರೆಗೂ ನೀರು ತುಂಬಿ ನಂತರ ಉರಿಸುತ್ತಿದ್ದೆವು. ಸೊಳ್ಳೆಗಳನ್ನು ದೂರ ಮಾಡಲು ಬಳಸುತ್ತಿದ್ದ ಗಂಧದಕಡ್ಡಿಗಳನ್ನು ನೀರಿನಲ್ಲಿ ನೆನೆಸಿ ಉರಿಸಿದರೆ ಹೆಚ್ಚು ಪರಿಣಾಮಕಾರಿಯಾಗಿ ಹೆಚ್ಚು ಹೊತ್ತು ಉರಿಯುತ್ತದೆ ಎಂದು ಸಂಶೋಧಿಸಿದ್ದೆವು.
ಒಂದು ಶೀಷದ ಮುಚ್ಚಳಕ್ಕೆ ಸ್ವಲ್ಪ ಸೀಮೆಎಣ್ಣೆ ಸುರಿದು, ಅದಕ್ಕೆ ಒಂದು ಚೂರು ಕಾಗದ ಹಾಕಿ ಬೆಂಕಿ ಹಚ್ಚುತ್ತಿದ್ದೆವು. ಬೆಂಕಿ ಧಗಧಗಿಸಿ ಉರಿಯುವಾಗ ಇಂಕ್ ಪೆನ್ನಿನಿಂದ ಇಂಕನ್ನು ಆ ಬೆಂಕಿಗೆ ಕೊಡವುತ್ತಿದ್ದೆವು. ಆಗ ಬೆಂಕಿ ದಿಗ್ಗನೆಂದು ಒಂದು ಮೀಟರ್ ಗೋಳಾಕಾರವಾಗಿ ವಿಚಿತ್ರ ಶಬ್ದ ಮಾಡುತ್ತಾ ಆವರಿಸುತ್ತಿತ್ತು. ಇಂಕನ್ನು ಹಾಸ್ಟೆಲ್ಲಿನಿಂದಲೇ ಕೊಡುತ್ತಿದ್ದರಿಂದ ಇಂತಹ ಕೆಲಸಗಳಿಗೆ ಅದನ್ನು ಧಾರಾಳವಾಗಿ ಉಪಯೋಗಿಸಲು ನಮಗೆ ಯಾವುದೇ ಜಿಪುಣತನವಿರಲಿಲ್ಲ. ಇಂಕನ್ನು ಜಾಸ್ತಿ ಹಾಕಿದಂತೆಲ್ಲಾ ಬೆಂಕಿಯ ಜ್ವಾಲೆಗಳ ಅರ್ಭಟ, ಆಗ ಹಿತವಾಗಿ ಕೇಳಿಸುತ್ತಿದ್ದ ಶಬ್ದ ನಮ್ಮನ್ನು ಪ್ರಚೋದಿಸುವಂತಿತ್ತು. ಒಮ್ಮೆ ಪೆನ್ನಿನ ನಿಬ್ಬನ್ನೇ ತೆಗೆದು ಪೆನ್ನಿನಲ್ಲಿದ್ದ ಇಡೀ ಇಂಕನ್ನು ಒಮ್ಮೆಯೇ ಸುರಿದಿದ್ದರಿಂದ ನಾವು ಊಹಿಸಿದ್ದಕ್ಕಿಂತ ಹೆಚ್ಚಾಗಿ ಹಾಗೂ ವೇಗವಾಗಿ ಜ್ವಾಲೆಗಳು ನಮ್ಮೆಡೆಗೆ ನುಗ್ಗಿ ನಮ್ಮ ತಲೆಕೂದಲೆಲ್ಲಾ ಸುಟ್ಟು ಕರಕಲಾಗಿದ್ದವು!
ನಮ್ಮ ಈ ರೀತಿಯ ಯಾವುದೇ ನಿರ್ಬಂಧವಿಲ್ಲದ ಸಾಹಸ ಪ್ರವೃತ್ತಿ ಒಮ್ಮೆ ಅತ್ಯಂತ ಅಪಾಯಕರ ಸನ್ನಿವೇಶವನ್ನು ಸೃಷ್ಟಿಸಿತ್ತು. ಯಾವುದೋ ಸಿನಿಮಾದಲ್ಲಿ ಬಾಟಲಿಗೆ ಬೆಂಕಿ ಹಚ್ಚಿಕೊಂಡು ಎಸೆಯುವುದು, ಅದು ‘ಢಮ್’ ಎಂದು ಶಬ್ದ ಮಾಡುತ್ತಾ ಬೆಂಕಿಯ ಗೋಳವನ್ನು ನಿರ್ಮಿಸಿದ್ದನ್ನು ನೋಡಿದ ನಾವು, ಬಾಟಲಿ ಬಾಂಬ್ ತಯಾರಿಸುವ ಹುಚ್ಚು ಸಾಹಸಕ್ಕೆ ಕೈಹಾಕಿದೆವು. ಸೀಮೆಎಣ್ಣೆಗೆ ಯೋಚನೆ ಮಾಡುವಂತಿರಲಿಲ್ಲ. ಸಿನಿಮಾಗಳಲ್ಲಿ ಪೆಟ್ರೋಲ್ ಬಳಸುತ್ತಾರೆಂದು ನಮಗೆ ಗೊತ್ತಿರಲಿಲ್ಲ. ಇನ್ನು ಖಾಲಿ ಬಾಟಲಿಗೇನೂ ನಾವು ಯೋಚನೆ ಮಾಡುವಂತಿರಲಿಲ್ಲ. ಮೆಳೆಯಮ್ಮನಿಗೆ ಬಲಿ ಕೊಟ್ಟು, ಬಾಡೆಸರು (ಮಾಂಸದ ಸಾರು) ಮಾಡಿಕೊಂಡು, ಉಂಡು ಹೋಗುವವರಲ್ಲಿ ಬಹುತೇಕರು ಚೆನ್ನಾಗಿ ಬೀರು, ಬ್ರ್ಯಾಂಡಿಗಳನ್ನು ಕುಡಿದು ಎಲ್ಲೆಂದರಲ್ಲಿ ಖಾಲಿ ಬಾಟಲಿಗಳನ್ನು ಬಿಸಾಕಿ ಹೋಗುತ್ತಿದ್ದರು. ಹಾಸ್ಟೆಲ್ಲಿನ ಕೆಲವು ಹುಡುಗರು, ಐಸ್ಕ್ಯಾಂಡಿಯನ್ನು ತಿನ್ನಲಿಕ್ಕಾಗಿ ಈ ಬಾಟಲಿಗಳನ್ನು ಸಂಗ್ರಹಿಸುತ್ತಿದ್ದರು. ಹುಡುಗರು ಸಂಗ್ರಹಿಸಿ ಬಚ್ಚಿಟ್ಟಿದ್ದ ಬಾಟಲಿಗಳನ್ನು ನಾವು ಕೆಲವರು ಕದ್ದು ಐಸ್ಕ್ಯಾಂಡಿಯನ್ನು ತಿನ್ನುತ್ತಿದ್ದೆವು! ಒಂದು ಬಾಟಲಿಗೆ ಎರಡೆರಡು ಐಸ್ಕ್ಯಾಂಡಿಗಳನ್ನು ಮಾರುವವನು ಕೊಡುತ್ತಿದ್ದ ಕೊಡುತ್ತಿದ್ದ!
ಒಂದು ಭಾನುವಾರ ಒಂದು ಲೀಟರ್‌ನಷ್ಟು ಸೀಮೆಣ್ಣೆಯನ್ನೂ ಒಂದೆರಡು ಬಾಟಲ್‌ಗಳನ್ನೂ ತೆಗೆದುಕೊಂಡು ಹತ್ತಿರದ ಕುರುಚಲು ಕಾಡನ್ನು ಸೇರಿದೆವು. ಬಾಟಲಿಗೆ ಕಾಲುಭಾಗದಷ್ಟು ಸೀಮೆ ಎಣ್ಣೆ ಹಾಕಿ ಬಟ್ಟೆಯ ತುಂಡನ್ನು ಅದರೊಳಗೆ ತುರುಕಿ ಬೆಂಕಿ ಕಡ್ಡಿ ಗೀರಿ ಅದರೊಳಕ್ಕೆ ಹಾಕಿ ಮುಚ್ಚಳ ಹಾಕುವುದೆಂದು ನಿರ್ಧರಿಸಿದ್ದೆವು. ಆದರೆ ನಾವು ಎಷ್ಟೇ ಬೆಂಕಿ ಕಡ್ಡಿ ಹಾಕಿದರೂ ಬಾಟಲಿಯೊಳಗೆ ಬೆಂಕಿ ಹಚ್ಚಿಕೊಳ್ಳಲೇ ಇಲ್ಲ! ಒಂದು ಹಂತದಲ್ಲಿ ನಮಗೆ ಸೀಮೆಣ್ಣೆಯ ಮೇಲೇ ಅನುಮಾನ ಬಂದು, ಬೇರೆಯಾಗಿ ಬಟ್ಟೆಯನ್ನು ಸೀಮೆಣ್ಣೆಯಲ್ಲಿ ನೆನೆಸಿ ಕಡ್ಡಿ ಗೀರಿದಾಗ ದಿಗ್ಗನೆ ಹಚ್ಚಿಕೊಂಡು ಉರಿದುಹೋಯಿತು. ಕೊನೆಗೆ ಸೀಮೆಣ್ಣೆಯನ್ನು ಅರ್ಧಕ್ಕಿಂತ ಜಾಸ್ತಿ ಹಾಕಿ, ಅದರೊಳಗೆ ಸ್ವಲ್ಪವೇ ಬಟ್ಟೆ ತುಂಡನ್ನು ಹಾಕಿ ಬೆಂಕಿ ಕಡ್ಡಿ ಗೀರಿ ಹಾಕಿದೆವು. ಬಾಟಲಿಯೊಳಗೆ ಹಾಕುವವರೆಗೂ ನಮ್ಮ ಕೈಯಲ್ಲಿ ಚೆನ್ನಾಗಿ ಉರಿಯುತ್ತಿದ್ದ ಬೆಂಕಿಕಡ್ಡಿ ಅದರೊಳಗೆ ಬೀಳುತ್ತಲೇ ತಣ್ಣಗಾಗಿಬಿಡುತ್ತಿತ್ತು. ಹೀಗೆ ಸುಮಾರು ಎರಡು ಮೂರು ಗಂಟೆಗಳ ನಮ್ಮ ನಿಷ್ಫಲ ಪ್ರಯತ್ನವನ್ನು ನಿಲ್ಲಿಸಿ ಉಳಿದಿದ್ದ ಸೀಮೆಣ್ಣೆ, ಬಾಟಲಿ, ಬಟ್ಟೆತುಂಡು ಎಲ್ಲವನ್ನೂ ಎಸೆದು ಹಿಂದಿರುಗಲು ನಿರ್ಧರಿಸಿದೆವು. ನಾನು ವಿಜ್ಞಾನ ಪಾಠದಲ್ಲಿ ಓದಿದ್ದ ಒಂದು ತತ್ವವನ್ನು ಅಲ್ಲಿ ವಿವರಿಸಿ ಆ ಕಾರಣದಿಂದ ಬೆಂಕಿ ಹಚ್ಚಿಕೊಳ್ಳುತ್ತಿಲ್ಲ ಎಂದು ತೀರ್ಮಾನ ಕೊಟ್ಟೆ! ಹೊರಗೆ ಬೆಂಕಿ ಹಚ್ಚಿದರೆ ಉರಿಯುತ್ತಿದ್ದ ಸೀಮೆಣ್ಣೆ ಬಾಟಲಿಯ ಒಳಗೆ ಉರಿಯದಿರಲು ಅಲ್ಲಿ ಉಂಟಾಗುತ್ತಿದ್ದ ಆಮ್ಲಜನಕದ ಕೊರತೆಯೇ ಕಾರಣವಾಗಿತ್ತು! ಸರಿ, ನನ್ನ ವೈಜ್ಞಾನಿಕ ವಿಶ್ಲೇಷಣೆಯನ್ನು ಒಪ್ಪಿ ಅಲ್ಲಿಂದ ಹಿಂತಿರುಗುವಾಗ, ಸೋಮಶೇಖರ ತನ್ನ ಕೈಯಲ್ಲಿದ್ದ ಬೆಂಕಿಕಡ್ಡಿಯನ್ನು ಗೀರಿ ನಾವು ಬಿಸಾಡಿದ್ದ ಬಾಟಲಿಯೆಡೆಗೆ ಎಸೆದ. ನಾವು ಸ್ವಲ್ಪ ದೂರ ಬರುವಷ್ಟರಲ್ಲಿ ‘ಢಮ್’ ಎಂದು ಕೋವಿಯಿಂದ ಈಡು ಹೊಡೆದಂತೆ ಶಬ್ದ ಹಾಗೂ ದೊಡ್ಡದಾದ ಬೆಂಕಿಯ ಗೋಳ ಎರಡೂ ಒಟ್ಟಿಗೆ ಉಂಟಾಗಿತ್ತು. ನಾವೆಲ್ಲಾ ಕಣ್ಣೆವೆ ಮುಚ್ಚುವಷ್ಟರಲ್ಲಿ ಪಾರಾಗಿಬಿಟ್ಟಿದ್ದೆವು. ಸೋಮಶೇಖರ ಒಂದೆರಡು ಘಳಿಗೆ ಮುಂಚೆ ಏನಾದರೂ ಬೆಂಕಿಕಡ್ಡಿ ಗೀರಿ ಎಸೆದಿದ್ದರೆ ಇನ್ನೂ ಹತ್ತಿರದಲ್ಲೇ ಇದ್ದ ಕೆಲವರಿಗಾದರೂ ಬೆಂಕಿಯ ಜ್ವಾಲೆಗಳು ಬಡಿಯುತ್ತಿದ್ದವು; ಇಲ್ಲಾ ಬಾಟಲಿಯ ಚೂರುಗಳು ಬಂದು ಅಪ್ಪಳಿಸುತ್ತಿದ್ದವು. ಆಗ ನನ್ನ ವೈಜ್ಞಾನಿಕ ವಿಶ್ಲೇಷಣೆಯೇ ತಪ್ಪೆಂದು ಕೆಲವರು ವಾದ ಮಾಡಿದ್ದರು. ನಾವು ಇನ್ನೊಮ್ಮೆ ಪ್ರಯತ್ನ ಪಟ್ಟಿದ್ದರೆ ಖಂಡಿತಾ ಬಾಂಬ್ ಸಿಡಿಯುತ್ತಿತ್ತು ಎಂಬುದು ಅವರ ವಾದವಾಗಿತ್ತು. ಆದರೆ ಆ ಸ್ಫೋಟಕ್ಕೆ ಕಾರಣ ನನಗೆ ಸ್ಪಷ್ಟವಾಗಿತ್ತು. ಅಳಿದುಳಿದ ಸೀಮೆಎಣ್ಣೆ ಬಟ್ಟೆಚೂರು ಎಲ್ಲವನ್ನೂ ಒಂದೆಡೆಗೆ ಚೆಲ್ಲಿ, ಮುಚ್ಚಳ ಹಾಕದೆ, ಆದರೆ ಸೀಮೆಎಣ್ಣೆ ಮತ್ತು ಬಟ್ಟೆ ಚೂರುಗಳಿದ್ದ ಬಾಟಲಿಯನ್ನು ಅದರ ಪಕ್ಕದಲ್ಲೇ ಎಸೆದು ಬಂದಿದ್ದರಿಂದ, ಬೆಂಕಿ ನಿಧಾನವಾಗಿ ದಹಿಸುತ್ತಾ ಬಾಟಲಿಯಲ್ಲಿದ್ದ ಬಟ್ಟೆಗೆ ಆವರಿಸಿ ಬಾಟಲಿ ಸ್ಫೋಟಗೊಂಡಿತ್ತು!

4 comments:

shivu said...

ಸತ್ಯನಾರಾಯಣ ಸರ್,

ಬೆಣ್ಣೆ ಬಿಸ್ಕತ್ತು, ಬೋಂಡಗಳ ಕತೆ ಓದಿ ನನಗಂತೂ ನನ್ನ ಬಾಲ್ಯದ ನೆನಪುಗಳು ಮರುಕಳಿಸಿತ್ತು. ಮತ್ತೆ ಬಾಂಬ್ ತಯಾರಿಕೆಯಂತೂ ಭಯ ತರುವಂತಿದೆ. ಸದ್ಯ ಯಾರಿಗೂ ಏನು ಆಗಲಿಲ್ಲವಲ್ಲ....ಬಾಲ್ಯದ ಹುಡುಗಾಟಗಳು ಕೆಲವೊಮ್ಮೆ ಎಂಥೆಂಥ ಆನಾವುತಗಳಿಗೆ ಕಾರಣವಾಗುತ್ತವೆ ಅಲ್ವಾ ಸರ್..

ನಿಮ್ಮ ಲೇಖನದಿಂದಾಗಿ ನನಗೆ ಕೆಲವು ಬಾಲ್ಯದ ಆಟ ಹುಡುಗಾಟಗಳ ನೆನಪಾಗುತ್ತಿದೆ. ಅದನ್ನು ಬರೆಯಬೇಕೆನಿಸಿದೆ...ಸ್ಫೂರ್ತಿ ನೀಡಿದ್ದಕ್ಕೆ
ಮತ್ತು ಇಂಥ ಸೊಗಸಾದ ನೆನಪುಗಳನ್ನು ಅಕ್ಷರಗಳ ಮೂಲಕ ಕಟ್ಟಿಕೊಡುತ್ತಿರುವುದಕ್ಕೆ ಧನ್ಯವಾದಗಳು..

sunaath said...

ನಿಮಗೆ ಸಾಹಸನಾರಾಯಣ ಎನ್ನುವ ಹೆಸರು ಕೊಡಬಹುದೇನೊ ಅಂತ ವಿಚಾರ ಮಾಡುತ್ತಿದ್ದೀನಿ!

ಸಿಮೆಂಟು ಮರಳಿನ ಮಧ್ಯೆ said...

ಸತ್ಯನಾರಾಯಣರೆ...

ಸಕತ್ ಆಗಿದೆ ನಿಮ್ಮ ಬಾಲ್ಯದ ಸಾಹಸಗಳು....
ಓದುತ್ತ... ಓದುತ್ತ...
ನಮ್ಮನ್ನೂ ನಮ್ಮ ಬಾಲ್ಯಕ್ಕೆ ಎಳೆದೊಯ್ಯುತ್ತದೆ....

ಸೀಮೇ ಎಣ್ಣೆ ಬಾಂಬಿನ ಕಥೆ ಮಾತ್ರ ತುಂಬಾ ಡೇಂಜರ್ ಅನಿಸಿತು....
ಆ ಹುಡುಗಾಟಿಕೆಯಲ್ಲಿ
ಹಿಂದು ಮುಂದಿನ ಯೋಚನೆ ಇರುವದಿಲ್ಲ ಅಲ್ಲವೆ...?

ನೀವು ಕಥೆ ಹೇಳುವ ರೀತಿ ಇಷ್ಟವಾಗುತ್ತದೆ...

ರವಿಕಾಂತ ಗೋರೆ said...

ಏನ್ ಸಾರ್ ನೀವು... ಹಿಂಗೆಲ್ಲ ಮಾಡಿದ್ರ??? ಅದೇನೋ ಹಾಸ್ಟೆಲ್ ನಲ್ಲಿ, ಸ್ಕೂಲ್ ನಲ್ಲಿ ತರ್ಲೆ ಮಾಡ್ತಾ ಇದ್ರೆ ಓಕೆ.. ಆದ್ರೆ ಹೀಗೆ ಬಾಂಬ್ ಮಾಡೋದ...? ಛೆ... ಪುಣ್ಯಕ್ಕೆ ಯಾರಿಗೂ ಏನೂ ಆಗಿಲ್ಲ ಅದೇ ಸಂತೋಷ... ನಿಮ್ಮ ಬರಹಗಳು ತುಂಬಾ ಖುಷಿ ಕೊಡುತ್ತವೆ... ಹೀಗೆ ನೂರು ವರ್ಷ ಬರೆಯುತ್ತಿರಿ...