[ಸುಮಾರು ಏಳು ವರ್ಷಗಳ ಹಿಂದೆ ಬರೆದಿದ್ದ ಕವಿತೆ 'ಭಾಮಿನಿ'. ಅದನ್ನು ಮೊನ್ನೆ 'ಭಾಮಿನಿ - ಹೊಸ ಕಟ್ಟು' ಎಂಬ ಶಿರ್ಷಿಕೆಯೊಂದಿಗೆ KANNADA BLOGGERSನಲ್ಲಿ ಹಾಕಿದ್ದೆ. ಅದಕ್ಕೆ ಒಳ್ಳೆಯ ಪ್ರತಿಕ್ರಿಯೆಗಳೂ ಬಂದವು. ಡಾ.ಎಂ.ಎಸ್.ತಿಮ್ಮಪ್ಪ ಅಂತಹ ಹಿರಿಯರೂ ಪ್ರೋತ್ಸಾಹಕ ಮಾತುಗಳನ್ನಾಡಿದರು. ಇವೆಲ್ಲದರ ನಡುವೆ ಗೆಳೆಯ ಮಲ್ಲಿಕಾರ್ಜುನ್ 'ಈ ಪದ್ಯವನ್ನು ನಿಮ್ಮ ಬ್ಗಾಗಿನಲ್ಲೂ ಹಾಕಿ' ಎಂದಿದ್ದರು. ಅವರ ಮಾತಿನಂತೆ 'ಭಾಮಿನಿ - ಹೊಸ ಕಟ್ಟು' ಈಗ ನಿಮ್ಮ ಮುಂದಿದೆ. ಅದಕ್ಕೆ ಪೂರಕವಾದ ಚಿತ್ರವೊಂದನ್ನು ಹಾಕಬೇಕೆನ್ನಿಸಿ, ಅಂತರ್ಜಾಲದಲ್ಲಿ ಜಾಲಾಡಿದೆ. ಭಾಮಿನಿ ಷಟ್ಪದಿ ಛಂದಸ್ಸಿನಲ್ಲಿ ಬರೆಯಬೇಕೆಂಬ ಯೋಚನೆ ಒಂದು ಮಿಂಚಿನಂತೆ ಬಂದು, ಬರೆದಾದ ಮೇಲೆ ಹೊರಟೇ ಹೋಯಿತು! ಮತ್ತೆ ಬರೆಯಬೇಕೆಂದರೆ ಅದು ಸಾಧ್ಯವೇ ಎನ್ನುವಂತಾಗಿದೆ. ಆದ್ದರಿಂದ ಮಿಂಚಿನದೇ ಒಂದು ಚಿತ್ರವನ್ನು ಸಾಂಕೇತಿಕವಾಗಿ ಇಲ್ಲಿ ಬಳಸಿಕೊಂಡಿದ್ದೇನೆ. ಚಿತ್ರಕೃಪೆ: NASA]
೧
ಇಳಿದು ಬಂದಳು ವರ್ಷೆಯಂದದಿ
ಒಲಿದು ಬಂದಳು ನಲ್ಲೆಯಂದದಿ
ತೊಳೆದು ಬಂದಳು ಮನದ ಕಲ್ಮಶ ಹರಿಯ ಮೆರೆಸಲು ತಾ-
ನಿಳೆಯ ರೂಪದಿ ಸಹನೆಯಿಂದಾ
ಕಳೆಯ ಬಂದಳು ಮೋಹ ಮತ್ಸರ
ಗಳನು ಭಾಮಿನಿ ನಾರಣಪ್ಪನಿಗೊಲಿದಳಿಂದುಮುಖೀ
೨
ವೀರಾನಾರಾಯಣ ಭಕ್ತಿಯ
ಸಾರ ಸಾಗರದ ಸವಿಯನುಣಿಸಿ
ಮೀರಿಸಿ ಭವದ ಆಸೆಯನು ತೊರೆಸಿದನು ಮನವನು ಆ
ವೀರನಾರಾಯಣನ ಪಾದದ-
ಲೂರಿಸಿದನು ಕುಸುಮದ ತೆರದಲಿ
ತೋರಿಸಿದನು ಗದುಗಿನ ನಾರಾಯಣನ ಒಲುಮೆಯನೂ
೩
ಧರ್ಮನಂದನನ ನಿಜಮಾರ್ಗ ಸು-
ಧರ್ಮವಾದುದು ಕೃಷ್ಣ ಕೃಪೆಯಲಿ
ಭೀಮ ಮುರಿದನು ಕೌರವನ ತೊಡೆಗಳನು ಕುರುಕುಲ ಕೀ-
ರ್ತಿರ್ಮಣಿಯ ಚೆದುರಿದನು ಪಾರ್ಥನು
ಆ ಮುರುಳಿಯನಭಯವನೊತ್ತವ-
ನೊಲ್‌ಮೆಯಲಿ ನಕುಲ ಸಹದೇವರರೆದರು ವೈರಿಗಳಾ
೪
ಕುರುಕುಲ ನೃಪನ ವೈಭವವಿರಲಿ
ತರುಲತೆ ಮೃಗಖಗಗಳ ವರ್ಣನೆ-
ಯಿರಲಿ ಪಾಂಡುತನಯರ ಸತ್ಯವಿರಲಿ ಶಕುನಿ ತಂತ್ರ-
ವಿರಲಿ ಭೀಮಾಕ್ರೋಶ ಮತ್ಸರ-
ವಿರಲಿ ಏನೇ ಇರಲಿ ಬಿಡದೆ ಉ-
ಸುರಿದನು ವ್ಯಾಸಕುವರನು ನಿನ್ನ ಬಳಸಿ ಬೆಳಸಿದಾ
೫
ಭಾಮಿನಿ ಸುಮಧುರ ಸುಭಾಷಿಣಿ
ನೀ ಮೃದುನುಡಿಯ ಪೋಷಕಿ ಇಳಿದು
ನೀ ಮೆರೆದು ಗದುಗಿನ ಕುಮಾರವ್ಯಾಸನಿಗೊಲಿದು ನೀ
ರಮ್ಯಗೊಳಿಸಿದೆ ಕೃಷ್ಣ ಕಥೆಯನು
ನಮ್ಮ ಕನ್ನಡ ನುಡಿಯಲಿ ಉಸುರಿ
ನಮ್ಮ ಜನಪದದೊಳಗೆ ನಿಲಿಸಿದೆ ಕೃಷ್ಣಭಕ್ತಿಯನೂ
8 comments:
ಮಿ೦ಚಿನ ಚಿತ್ರವೂ, ನಿಮ್ಮ ಭಾಮಿನಿಷಟ್ಪದಿಯ ಪದವಿಲಾಸವೂ ಮನೋಹರವಾಗಿದೆ.
ಭಾಮಿನಿಯ ಬಗೆಗೆ ಹಾಗೂ ನಾರಣಪ್ಪನ ಬಗೆಗೆ ಸುಂದರವಾಗಿ
ಕವನಿಸಿದ್ದೀರಿ.
ಭಾಮಿನಿ ಷಟ್ಪದಿಗೆ ನಾರಾಣಪ್ಪ ಮತ್ತೊಂದು ಹೆಸರು. ನಾನು ಹೈಸ್ಕೂಲಿನಲ್ಲಿ ಹಾಗೂ ಕಾಲೇಜಿನಲ್ಲಿ ಅವನ ಪದ್ಯಗಳನ್ನು ಓದಿ ಖುಶಿಪಟ್ಟಿದ್ದಿದೆ. ಭಾಮಿನಿ ಷಟ್ಪದಿಯ ಬಗ್ಗೆ ಹಾಗೂ ಆತನ ಬಗ್ಗೆ ಕವನ ಚನ್ನಾಗಿ ಮೂಡಿ ಬಂದಿದೆ.
ಭಾಮಿನಿ ಷಟ್ಪದಿ ಕಾಲೇಜಿನಿಂದಾಚೆಗೆ ಮರೆತುಹೋಗಿತ್ತು...ಮತ್ತೆ ನೆನಪಿಸಿದಿರಿ...
ಧನ್ಯವಾದಗಳು
ಸತ್ಯನಾರಾಯಣರೆ...
ಗದುಗಿನ ನಾರಾಯಣರ ನೆನಪು ಮಾಡಿಸಿದ್ದೀರಿ...
ಭಾಮಿನಿ ಷಟ್ಪದಿಯಲ್ಲಿ ಬರೆಯುವದು ಬಹಳ ಕಷ್ಟ...
ನಾವು ಹೈಸ್ಕೂಲಲ್ಲಿದ್ದಾಗ ಓದಿದ್ದೆ....
ಚಂದದ ಕವನ....
ಅಭಿನಂದನೆಗಳು...
ಭಾಮಿನಿ ಷಟ್ಪದಿ ಅನ್ನೋ ವಿಚಾರಾನೆ ಮರೆತುಹೋಗಿತ್ತು... ಮತ್ತೆ ನೆನಪಿಸಿದ್ದೀರಿ... ಧನ್ಯವಾದ..
ತುಂಬಾ ತುಂಬಾ ಚೆನ್ನಾಗಿದೆ, ಹೀಗೆ ಮುಂದುವರಿಯಲಿ ನಿಮ್ಮ ರಚನೆ,
ಚೆಂದದ ಕವನಗಳು.
ನಾನು ಒಮ್ಮೆ ಭಾವಿನಿಯಲ್ಲೇ ಒಂದು ಕವನ ಬರದಿದ್ದೆ.
ಇಲ್ಲಿದೆ:
http://anjshankar.blogspot.com/2009/02/blog-post.html
Post a Comment