{ಕಳೆದ ವಾರದಿಂದ ಮುಂದುವರೆದಿದೆ......}
ಸೂರ್ಯನ ಮಗನಾದ ಕರ್ಣನ ಸಾವಿನ ದಿನದ ಸೂರ್ಯಾಸ್ತ ಹೇಗಿತ್ತು? ‘ಮಹಾಭಾರತದಲ್ಲಿ ಯಾರನ್ನಾದರು ನೆನಯುವುದಾದರೆ ಕರ್ಣನನ್ನು ನೆನೆ’ ಎಂದು ಹಾಡಿದ ಪಂಪ ಆ ಸನ್ನಿವೇಶವನ್ನು ಚೆನ್ನಾಗಿ ನಿಭಾಯಿಸಿದ್ದಾನೆ. ಕರ್ಣ ಸತ್ತಾಗ,
ಪೞುಗೆಯನ್ ಉಡುಗಿ
ರಥಮಂ ಪೆೞವನನ್ ಎಸಗಲ್ಕೆವೇೞ್ದು
ಸುತಶೋಕದ ಪೊಂಪುೞಯೊಳ್ ಮೆಯ್ಯಱಯದೆ
ನೀರಿೞವಂತೆವೊಲ್ ಇೞದನ್ ಅಪರಜಳಧಿಗೆ ದಿನಪಂ
[ಬಾವುಟವನ್ನು ಇಳಿಸಿ ಹೆಳವನಾದ ಅರುಣನನ್ನು ತೇರನ್ನು ನಡೆಸುವಂತೆ ಹೇಳಿ ಪುತ್ರಶೋಕದ ಆಧಿಕ್ಯದಲ್ಲಿ ಸೂರ್ಯನು ಜ್ಞಾನಶೂನ್ಯನಾಗಿ (ಸತ್ತವರಿಗೆ) ಸ್ನಾನಮಾಡುವ ಹಾಗೆ ಪಶ್ಚಿಮಸಮುದ್ರಕ್ಕೆ ಇಳಿದನು.]
ಪುತ್ರಶೋಕ ನಿರಂತರಂ ಎಂಬ ಮಾತಿದೆ. ಅದು ಸ್ವತಃ ಸೂರ್ಯನಿಗೂ ತಪ್ಪಿದ್ದಲ್ಲ! ಏಕೆಂದರೆ ಕಾವ್ಯ ಪ್ರಪಂಚದಲ್ಲಿ ಸೂರ್ಯ ಒಂದು ಮಾನವ ನಿರ್ಮಿತ ಪಾತ್ರ ಮಾತ್ರ. ಮಾನವನ ಅಳತೆಯನ್ನು ಆತನೂ ಮೀರಲಾರ!
ದುರ್ಯೋಧನ ಭೀಷ್ಮನ ಆಣತಿಯಂತೆ ವೈಶಂಪಾಯನ ಸರೋವರದಲ್ಲಿ ಮುಳುಗಿದ್ದನ್ನು ಪಂಪ ಸೂರ್ಯಾಸ್ತದೊಂದಿಗೆ ಸಮೀಕರಿಸಿದ್ದಾನೆ.
ಸಮಸ್ತಭೂವಳಯಮಂ ನಿಜ ತೇಜದಿನ್ ಬೆಳಗಿ
ಆಂತ ದೈತ್ಯರಂ ತಳವೆಳಗಾಗೆ ಕಾದಿ
ಚಳಿತೆಯ್ದಿ ಬೞಲ್ದು
ಅಪರಾಂಬುರಾಶಿಯೊಳ್ ಮುೞುಗುವ ತೀವ್ರದೀಧಿತಿವೊಲ್
ಆ ಕೊಳದೊಳ್ ಫಣಿರಾಜಕೇತನಂ ಮುೞುಗಿದನ್
ಆರ್ಗಂ ಏಂ? ಬಿದಿಯ ಕಟ್ಟಿದುದಂ ಕಳೆಯಲ್ಕೆ ತೀರ್ಗುಮೇ!?
[ಸಮಸ್ತ ಭೂಮಂಡಲವನ್ನೂ ತನ್ನ ತೇಜಸ್ಸಿನಿಂದ ಪ್ರಕಾಶಗೊಳಿಸಿ ಬಳಲಿ ಪಶ್ಚಿಮಸಮುದ್ರದಲ್ಲಿ ಮುಳುಗುವ ಸೂರ್ಯನ ಹಾಗೆ ತನಗೆ ಪ್ರತಿಭಟಿಸಿದ ಶತ್ರುಗಳನ್ನು ತಲೆಕೀಳಾಗುವಂತೆ ಮಾಡಿ (ಕೊನೆಗೆ ತಾನು) ಕಾಂತಿಹೀನನಾಗಿ ಪೂರ್ಣವಾಗಿ ದುರ್ಯೋಧನನು ಆ ಸರೋವರದಲ್ಲಿ ಮುಳುಗಿದನು, ಎಂದ ಮೇಲೆ ಯಾರಿಗಾದರೇನು? ವಿಧಿಯು ಕಟ್ಟಿಟ್ಟಿರುವುದನ್ನು ಕಳೆಯುವುದಕ್ಕೆ ತೀರುತ್ತದೆಯೇ!?]
ಜಗತ್ತಿಗೇ ಬೆಳಕ್ಕನು ಕೊಡುವ ಸೂರ್ಯ ಪಶ್ಚಿಮಾಂಬುದಿಯಲ್ಲಿ ಇಳಿದರೆ, ಶತ್ರುರಾಜರಿಗೆ ಸಿಂಹಸ್ವಪ್ನವಾಗಿದ್ದ ದುರ್ಯೋಧನ ವೈಶಂಪಾಯನ ಸರೋವರದಲ್ಲಿ ಇಳಿಯುತ್ತಾನೆ! ವಿಧಿ ನೆಯ್ದಿರುವ ಬಲೆಯಿಂದ ಯಾರಿಗೂ ಬಿಡುಗಡೆಯೇ ಇಲ್ಲ. ಸಮಸ್ತ ಜಗತ್ತನ್ನು ತನ್ನ ಬೆಳಕಿನಿಂದ ಬೆಳಗುವ, ಶಾಖದಿಂದ ಸಲಹುವ ಸ್ವತಃ ಸೂರ್ಯನೇ ವಿಧಿಯ ವಶನಾಗಿರುವಾಗ ಉಳಿದಿರುವ ಪಾಡೇನು? ಎಂಬುದು ಕವಿಯ ಆಶಯ.
ತೊಡೆ ಮುರಿದುಕೊಂಡು ಬಿದ್ದಿದ್ದ ದುರ್ಯೋಧನನ ಬಳಿ ಬಂದ ಅಶ್ವತ್ಥಾಮ ಕೋಪೋದ್ರಿಕ್ತನಾಗಿ ಪಾಂಡವರ ತಲೆಗಳನ್ನು ಕಡಿದು ತುರುತ್ತೇನೆ ಎಂದು ಹೊರಡುತ್ತಾನೆ. ಆಗ ಸೂರ್ಯಾಸ್ತವಾಗುತ್ತದೆ. ಅದನ್ನು ಕವಿ
ಮಗನ ಅೞಲೊಳ್ ಕರಂ ಮಱುಗುತಿರ್ಪಿನಂ
ಎನ್ನ ತನೂಜನ ಆಳ್ವ ಸಾಮಿಗಂ
ಅೞವಾಗೆ ಶೋಕರಸಂ ಇರ್ಮಡಿಸಿತ್ತು ಜಳಪ್ರವೇಶಂ
ಇಲ್ಲಿಗೆ ಪದನೆಂದು ನಿಶ್ಚಯಿಸಿ ವಾರಿಜನಾಥನ್
ಅನಾಥನಾಗಿ ತೊಟ್ಟಗೆ ಮುೞುಪಂತೆವೋಲ್
ಮುೞುಗಿದಂ ಕಡುಕೆಯ್ದಪರಾಂಬುರಾಶಿಯೊಳ್
[‘ನಾನು ನನ್ನ ಮಗನ ಮರಣದುಃಖದಿಂದಲೇ ವಿಶೇಷ ದುಃಖಪಡುತ್ತಿರಲು, ನನ್ನ ಮಗನನ್ನು ಆಳುವ ಸ್ವಾಮಿಯೂ ನಾಶವಾಗಲು ಶೋಕರಸ ಇಮ್ಮಡಿಯಾಗಿದೆ. ನೀರಿನಲ್ಲಿ ಮುಳುಗಿಕೊಳ್ಳುವುದೇ ಇಲ್ಲಿಗೆ ಯೋಗ್ಯವಾದುದು’ ಎಂದು ನಿಶ್ಚಯಿಸಿ ಸೂರ್ಯನು ಅನಾಥನಾಗಿ ತೊಟ್ಟನೆ ಮುಳುಗುವ ಹಾಗೆ ಪಶ್ಚಿಮ ಸಮುದ್ರದಲ್ಲಿ ಶೀಘ್ರವಾಗಿ ಮುಳುಗಿದನು].
ಕರ್ಣನ ಸ್ವಾಮಿ ದುರ್ಯೋಧನ. ಮಗನಾದ ಕರ್ಣನ ಸಾವಿನ ದುಃಖವೇ ಇನ್ನೂ ಸೂರ್ಯನಿಗೆ ಆರದಿರುವಾಗ, ಆತನ ಮಗನ ಸ್ವಾಮಿಯಾದ ದುರ್ಯೋಧನನಿಗಾದ ಪಾಡನ್ನು ನೋಡಿ ಸೂರ್ಯನೇ ಪರಿತಪಿಸುತ್ತಾನೆ. ಬಹುಶಃ ಕರ್ಣನೇನಾದರು ದುರ್ಯೋಧನನ ಈ ರೀತಿಯ ಅಂತ್ಯವನ್ನು ನೋಡಿದ್ದರೆ! ಅದನ್ನು ಊಹಿಸಿಕೊಳ್ಳುವುದು ಕಷ್ಟ. ಆದರೆ ಆತನ ತಂದೆಯಾಗಿ ಸೂರ್ಯ ಪರಿತಪಿಸುವುದು ಕರ್ಣನ ಸ್ವಾಮಿಭಕ್ತಿಯ ಔನ್ಯತ್ಯಕ್ಕೆ ಪೂರಕವಾಗಿದೆ.
ಇಡೀ ಮಹಾಭಾರತವನ್ನು ಸಂಗ್ರಹಿಸಿ ಕಾವ್ಯರಚನೆ ಮಾಡಿದ ರನ್ನಕವಿಯು ದುರ್ಯೋಧನನ ಅವಸಾನವನ್ನು ಸೂರ್ಯಾಸ್ತದ ಹೋಲಿಕೆಯೊಂದಿಗೆ ಮುಕ್ತಾಯ ಮಾಡಿದ್ದಾನೆ.
ಪಂಕಜಮುಮ್
ಸುಹೃದ್ ವದನ ಪಂಕಜಮುಮ್ ಮುಗಿವನ್ನಮ್
ಉಗ್ರ ತೇಜಂ ಕಿಡುತಿರ್ಪಿನಂ
ನಿಜ ಕರಂಗಳನ್ ಅಂದು ಉಡುಗುತ್ತುಮಿರ್ಪ
ಚಕ್ರಾಂಕಮ್ ಅಗಲ್ವಿನಂ
ಕ್ರಮದಿನ್ ಅಂಬರಮಂ ಬಿಸುಟು
ಉರ್ವಿಗೆ ಅಂಧಕಾರಂ ಕವಿತರ್ಪಿನಂ
ಕುರುಕುಲಾರ್ಕನುಮ್
ಅರ್ಕನುಮ್ ಅಸ್ತಮೆಯ್ದಿದರ್!
[ತಾವರೆಯೂ,
ಮಿತ್ರವರ್ಗದವರ ಮುಖತಾವರೆಯೂ,
ಸೂರ್ಯನ ಉಗ್ರ ತೇಜಸ್ಸೂ,
ದುರ್ಯೋಧನನ ಭೂಜಬಲವೂ - ಕುಗ್ಗುತ್ತಿರಲು,
ಚಕ್ರವಾಕ ಪಕ್ಷಿಗಳೂ
ತನಗೆ ಚಕ್ರವರ್ತಿ ಎಂಬ ಹೆಸರೂ - ಅಗಲುತ್ತಿರಲು,
ಕ್ರಮವಾಗಿ
ಸೂರ್ಯನು ಆಕಾಶವನ್ನೂ
ದುಯೋಧನನು ದೇಹವೆಂಬ ಬಟ್ಟೆಯನ್ನೂ
ಬಿಟ್ಟು,
ಭೂಲೋಕಕ್ಕೆಲ್ಲಾ ಕತ್ತಲು ಕವಿಯುತ್ತಿದ್ದಂತೆಯೇ
ಸೂರ್ಯನೂ ಅಸ್ತಮಿಸಿದನು!
ಕುರುಕುಲದ ಸೂರ್ಯ(ದುರ್ಯೋಧನ)ನೂ ಅಸ್ತಮಿಸಿದನು!]
ಕುಮಾರವ್ಯಾಸಭಾರತದಲ್ಲಿ ಭೀಷ್ಮ ಶರಶಯ್ಯೆಯಲ್ಲಿ ಮಲಗಿರುವಾಗ ಪಾಂಡವ ಮತ್ತು ಕೌರವರು ಬಂದು ನೋಡಿಕೊಂಡು ಹೋಗುತ್ತಾರೆ. ಆ ದಿನದ ಸೂರ್ಯಾಸ್ತ ಹೇಗಿತ್ತು ಎಂಬುದನ್ನು ಕುಮಾರವ್ಯಾಸ ಒಂದೇ ಸಾಲಿನಲ್ಲಿ
"ಪಡುವಣಶೈಲ ವಿಪುಳಸ್ತಂಭದೀಪಿಕೆಯಂತೆ ರವಿ ಮೆಱೆದ"
ಎಂದು ಕೈವಾರಿಸಿಬಿಡುತ್ತಾನೆ. ಶರಶಯ್ಯೆಯಲ್ಲಿದ್ದ ಭೀಷ್ಮರನ್ನು ದಾಯಾದಿಗಳೇನೋ ಬಂದು ವಿಚಾರಿಸಿಕೊಂಡರು. ಹೋದರು. ಆದರೆ ಭೀಷ್ಮರ ಜೊತೆಗೆ ಯಾರು? ಕವಿಯ ಮನಸ್ಸು ಕಳವಳಗೊಳ್ಳುತ್ತದೆ. ಆಗ ಪಶ್ಚಿಮಾದ್ರಿಯ ತುದಿಯಲ್ಲಿ ದೀಪದಂತೆ ಕಾಣುತ್ತಿದ್ದ ಸೂರ್ಯ ಕವಿಗೆ ಕಾಣುತ್ತಾನೆ. ಭೀಷ್ಮನ ಬಳಿ ಒಂದು ದೀಪವಾದರೂ ಬೇಡವೆ? ಅದಕ್ಕೆ ಕವಿ ಆ ಸೂರ್ಯನನ್ನೇ ದೀಪವನ್ನಾಗಿಸಿ, ಪಶ್ಚಿಮಾದ್ರಿಯನ್ನೇ ದೀಪಸ್ತಂಭವಾಗಿಸಿ ಆ ವೀರನ ಜೊತೆಗಿರಿಸಿ ಸಮಾಧಾನ ಪಡುತ್ತಾನೆ!
ಕರ್ಣಾವಸಾನದ ಸಮಯದಲ್ಲಿ ಪಂಪನಂತೆ ಕುಮಾರವ್ಯಾಸನೂ ಸೂರ್ಯಾಸ್ತವನ್ನು ರೂಪಕವಾಗಿ ಬಳಸಿಕೊಳ್ಳುತ್ತಾನೆ. ಕೌರವನ ಕಡೆಯವರು ಕರ್ಣನ ಕಳೇಬರವನ್ನು ದಂಡಿಗೆಯಲ್ಲಿ ಎತ್ತಿಕೊಂಡು ಹೋಗುವುದನ್ನು ನೋಡಿದ ಸೂರ್ಯ- "ಮಗನು ಪ್ರಾನವನು ತೆತ್ತನೇ! ಅಕಟಾ!" ಎನ್ನುತ್ತಾ ಚಿಂತಾರಂಗದಲ್ಲಿ ಅಂಬುಜಮಿತ್ರನು ಪರವಶವಾಗಿ ಕಡಲತ್ತ ಹಾಯ್ದನು; ಅಂಬರವನ್ನು ತೊರೆದುಬಿಟ್ಟನು" ಎನ್ನುತ್ತಾನೆ ಕುಮಾರವ್ಯಾಸ. ಮುಂದುವರೆದು,
ದ್ಯುಮಣಿ ಕರ್ಣದ್ಯುಮಣಿಯೊಡನೆ ಅಸ್ತಮಿಸೆ
ಕಮಲಿನಿ ಕೌರವನ ಮುಖಕಮಲ ಬಾಡಿತು
ತಿಮಿರ ಹೆಚ್ಚಿತು ಶೋಕತಮದೊಡನೆ
ಅಮಳ ಚಕ್ರಾಂಗಕ್ಕೆ ಭೂಪೋತ್ತಮನ ವಿಜಯಾಂಗನೆಗೆ
ಅಗಲಿಕೆ ಸಮನಿಸಿತು
[ಸೂರ್ಯನು ಕರ್ಣಸೂರ್ಯನೂಂದಿಗೆ ಅಸ್ತಮಿಸಿದ್ದರಿಂದ, ಕಮಲವು ಕೌರವನ ಮುಖಕಮಲದೊಂದಿಗೆ ಬಾಡಿತು! ಕತ್ತಲಿನ ಜೊತೆಗೆ ಶೋಕವೆಂಬ ಕತ್ತಲೂ ಹೆಚ್ಚಾಯಿತು! ಅಮಳಚಕ್ರಾಂಗಕ್ಕೂ ವಿಜಯಾಂಗನೆಗೂ ಅಗಲಿಕೆಯಾಯಿತು]
ಸೂರ್ಯನು ಅಸ್ತಮಿಸುವುದರೊಂದಿಗೆ ಕಮಲದ ಹೂವೂ ಬಾಡುತ್ತದೆ. ಕರ್ಣನೆಂಬ ಸೂರ್ಯ ಅಸ್ತಮಿಸಿದ್ದರಿಂದ ದುರ್ಯೋಧನನ ಮುಖಕಮಲ ಬಾಡಿತು; ಸೂರ್ಯ ಮುಳುಗುವುದರೊಂದಿಗೆ ಕತ್ತಲು ಆವರಿಸುತ್ತದೆ; ಕರ್ಣನೆಂಬ ಸೂರ್ಯ ಮುಳುಗಿದ್ದರಿಂದ ಶೋಕವೆಂಬ ಕತ್ತಲು ಆವರಿಸುತ್ತದೆ ಎಂಬ ರೂಪಕ ಗಮನಸೆಳೆಯುತ್ತದೆ.

7 comments:
ಸತ್ಯನಾರಾಯಣರೆ....
ಮಹಾಭಾರತ ಕಾವ್ಯದಲ್ಲಿ ಏನುಂಟು.. ಏನಿಲ್ಲ.....
ಜೀವನದ ಎಲ್ಲ ಮುಖಗಳನ್ನು ಇದು ಪರಿಚಯಿಸುತ್ತದೆ...
ಹಾಗೂ ಇಂದಿಗೂ ಅದು ಪ್ರಸ್ತುತ....
ಸೂರ್ಯಾಸ್ತದ ಚಿತ್ರಣ ನೋಡಿ ನಾನಂತೂ ಮನಸೋತಿದ್ದೇನೆ...
ಕಣ್ಣಮುಂದೆ ಸೂರ್ಯಾಸ್ತ ಆದಂತಿದೆ...
ಇತ್ತೀಚೆಗೆ ಕಾರವಾರದ ಬೀಚಿನಲ್ಲಿ ತೆಗೆದ ಫೋಟೊಗಳು ಕಣ್ಣ ಮುಂದೆ ಬಂದವು....
ದುರ್ಯೋಧನನ ಅವಸಾನವನ್ನು ಸೂರ್ಯಾಸ್ತಕ್ಕೆ ಹೋಲಿಸಿ...
ದುರ್ಯೋಧನ ವೈಶಾಂಪಯನ ಸರೋವರದಲ್ಲಿ ಮುಳುಗುವದರೊಂದಿಗೆ...
ಕವಿ ಕೊಡುವ ಉಪಮೆಗಳು ತುಂಬಾ ಚೆನ್ನಾಗಿದೆ...
ಮತ್ತೊಮ್ಮೆ ಈ ಸ್ವಾದಿಷ್ಟ ಉಣ ಬಡಿಸಿದ್ದಕ್ಕೆ
ಅನಂತ.. ಅನಂತ..
ಧನ್ಯವಾದಗಳು....
ಸತ್ಯನಾರಾಯಣ ಸರ್,
ಕರ್ಣನ ಅವಸಾನ, ದುರ್ಯೋಧನನ ಅವಸಾನ, ಅದಕ್ಕೆ ತಕ್ಕಂತೆ ಸೂರ್ಯನು ಶೋಕತಪ್ತನಾಗಿ ಮುಳುಗುವ ಪರಿಯನ್ನು ಪಂಪ, ರನ್ನ, ಕುಮಾರವ್ಯಾಸರು ವರ್ಣಿಸಿರುವುದನ್ನು ನೀವು ನಮಗಾಗಿ ತಂದಿದ್ದೀರಿ....ಸೂರ್ಯನಲ್ಲಿ ಆಗುವ ಭಾವನೆಗಳನ್ನು ಸೊಗಸಾದ ಉಪಮೆಗಳು, ಹಳಗನ್ನಡದಲ್ಲಿರುವ ಸಾಲುಗಳನ್ನು ನೀವು ನಮಗೆ ಅರ್ಥವಾಗುವಂತೆ ಚೆನ್ನಾಗಿ ವಿವರಿಸಿದ್ದೀರಿ...ನಮಗೂ ಇದನ್ನೆಲ್ಲಾ ಓದುವುದಕ್ಕೆ ಮತ್ತು ತಿಳಿದುಕೊಳ್ಳುವುದಕ್ಕೆ ತುಂಬಾ ಖುಷಿಯೆನಿಸುತ್ತದೆ...
ಧನ್ಯವಾದಗಳು.
ಪಂಪ, ರನ್ನ ಹಾಗು ಕುಮಾರವ್ಯಾಸರ ವರ್ಣನೆಯ ರುಚಿಯನ್ನು
ಮತ್ತೊಮ್ಮೆ ನೀಡಿ, ನಮಗೆಲ್ಲರಿಗೆ ಖುಶಿ ನೀಡಿದ್ದೀರಿ. ಧನ್ಯವಾದಗಳು.
ಸತ್ಯ ಸರ್,
ಕರ್ಣ,ದುರ್ಯೋಧನರ ಸಾವನ್ನು ಸೂರ್ಯಾಸ್ತಕ್ಕೆ ಅದ್ಭುತವಾಗಿ ಹೋಲಿಸಿ ಬರೆದಿರುವ ಕವಿಗಳಿಗೂ... ಅವರ ವರ್ಣನೆಯನ್ನು ನಮಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿದ ನಿಮಗೂ ತುಂಬಾ ತುಂಬಾ ಥ್ಯಾಂಕ್ಸ್!!
"ಸಮಸ್ತ ಜಗತ್ತನ್ನು ತನ್ನ ಬೆಳಕಿನಿಂದ ಬೆಳಗುವ, ಶಾಖದಿಂದ ಸಲಹುವ ಸ್ವತಃ ಸೂರ್ಯನೇ ವಿಧಿಯ ವಶನಾಗಿರುವಾಗ ಉಳಿದವರ ಪಾಡೇನು?"
ವಾಹ್ ಎಂಥಾ ಸಾಲುಗಳು!!!
ಮಹಾಭಾರತದ ಪಾತ್ರವೈಭವಗಳ ವೈಶಿಷ್ಟ್ಯತೆಯನ್ನು ಸೂರ್ಯಾಸ್ತದ ರೂಪಕದೊ೦ದಿಗೆ ಹೋಲಿಸಿ ಪ೦ಪ ರಚಿಸಿದ ಮಹಾಕಾವ್ಯದ ಭಾಗಗಳ ಪರಿಚಯವನ್ನು ಅತ್ಯುತ್ತಮ ರೀತಿಯಲ್ಲಿ ಮಾಡಿದ್ದೀರಿ. ಚೆನ್ನಾಗಿದೆ.
ಸತ್ಯನಾರಾಯಣ ಅವರೇ,
ಫೋಟೋಗಳು ಅದ್ಭುತ.
ಆ ಮಹಾಕಾವ್ಯದ ಬಗ್ಗೆ ಎಷ್ಟು ಸಲ ಓದಿದರೂ ಸಾಲದು, ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು
ಸತ್ಯನಾರಾಯಣ ಅವರೆ, ನಮ್ಮ ಕಾವ್ಯಗಳಲ್ಲಿ ಇಂತಹ ಪ್ರಾಕೃತಿಕ ವರ್ಣನೆಗಳು ಸುಂದರ ಭಾಷೆಯಲ್ಲಿವೆ. ಉಪಮೆ, ಹೋಲಿಕೆಗಳು ಕವಿಯ ಪ್ರತಿಭೆಗೆ ಸಾಕ್ಷಿ. ಇವನ್ನು ನಮಗೆ ಪರಿಚಯಿಸಿ, ಅರ್ಥವನ್ನು ತಿಳಿಸಿದ್ದಕ್ಕೆ ವಂದನೆಗಳು
Post a Comment