Thursday, September 24, 2009

ನೇತಾಜಿ ಹೆಸರಿಗೂ ಕೈಯಿಕ್ಕಿದ ಸಂಸದ ಮತ್ತು ಪತ್ರಿಕೆಗಳ ಅಜ್ಞಾನ!

ನೆನ್ನೆ ಬೆಳಿಗ್ಗೆ ಪ್ರಜಾವಾಣಿ ಮತ್ತು ವಿಜಯಕರ್ನಾಟಕ ಪತ್ರಿಕೆ ಓದಿದ ನನಗೆ ಶಾಕ್ ಆಗಿತ್ತು. “ಆಸ್ಟ್ರೀಯಾದಲ್ಲಿ ನೇತಾಜಿ ಕುಟುಂಬ!” ಓದಿ, ಸಂಸದ ಅನಂತಕುಮಾರ ಹೆಗಡೆಯವರು ಅದನ್ನೊಂದು ಹೊಸ ವಿಷಯ, ತಮ್ಮದೇ ಶೋಧನೆ ಎಂಬಂತೆ ಪತ್ರಕಾಗೋಷ್ಠಿಯಲ್ಲಿ ಹೇಳಿರುವುದನ್ನು ನೋಡಿ ಆಶ್ಚರ್ಯವಾಯಿತು.

ಹಲವಾರು ಪುಸ್ತಕ, ಅಂತರಜಾಲಗಳನ್ನು ಹುಡುಕಾಡಿ ಸಿಕ್ಕಿದಷ್ಟು ಮಾಹಿತಯನ್ನು ಕ್ರೋಢೀಕರಿಸಿ ಎರಡೂ ಪತ್ರಿಕೆಗಳ ಕಛೇರಿಗೆ ಕೆಳಕಂಡತೆ ಮಾಹಿತಿ ರವಾನಿಸಿದೆ. ಇದೆಲ್ಲ ಬೆಳಿಗ್ಗೆ ಹತ್ತು ಗಂಟೆಯ ಹೊತ್ತಿಗೆ ನಡೆದುಹೋಯಿತು.

ಈ ವಿಷಯಗಳಾವುವೂ ಹೊಸ ಶೋಧನೆಗಳಲ್ಲ! ನೇತಾಜಿ ಜರ್ಮನಿಯಲ್ಲಿ ನೆಲೆಸಿದ್ದ ಆಸ್ಟ್ರೀಯಾದ ಪ್ರಜೆ ಎಮಿಲಿ ಶೆಂಕ್ಲ್ (Emilie Schenkl) ಎಂಬುವವರನ್ನು ಮದುವೆಯಾಗಿದ್ದು, ಅವರಿಗೆ ಅನಿತಾ ಬೋಸ್ ಎಂಬ ಮಗಳು ಇರುವುದು, ಅನಿತಾ ಬೋಸ್ ಅವರು ಅರ್ಥಶಾಸ್ತ್ರ ಪ್ರೊಫೆಸರ್ ಆಗಿ Augsburg Universityಯಲ್ಲಿ ಕೆಲಸ ಮಾಡುತ್ತಿದ್ದ ವಿಚಾರ ಎಲ್ಲರಿಗೂ ತಿಳಿದಿದ್ದೇ ಆಗಿದೆ.


ನ್ಯಾಷನಲ್ ಬುಕ್ ಟ್ರಸ್ಟ್ ಪ್ರಕಟಿಸಿರುವ ಸಿಸಿರ್ ಕುಮಾರ್ ಬೋಸ್ ಅವರ ‘ನೇತಾಜಿ ಸುಭಾಸ್ ಚಂದ್ರ ಬೋಸ್’ ಎಂಬ ಪುಸ್ತಕದಲ್ಲಿ, ನೇತಾಜಿ ಅವರ ಹೆಂಡತಿ ಮಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅಲ್ಲದೆ Oxford University Press ಪ್ರಕಟಿಸಿರುವ Letters to Emilie Schenkl ೧೯೩೪-೧೯೪೨ ಎಂಬ ಪುಸ್ತಕದಲ್ಲಿ ಅನಿತಾ ಬೋಸ್ ಅವರ ಮಗಳು ಮಾಯಾ ಫಾಪ್ (Pfaff) ಅವರು ಪತ್ರಗಳ ಪ್ರಕಟಣೆಗೆ ಒಪ್ಪಿದ್ದನ್ನೂ ತಿಳಿಸಲಾಗಿದೆ.


ಶ್ರೀಮತಿ ಎಮಿಲಿ ಮತ್ತು ನೇತಾಜಿ ಅವರು ಒಟ್ಟಿಗೆ ಇರುವ ಫೋಟೋಗಳು ಪ್ರಕಟವಾಗಿವೆ. ಶ್ರೀಮತಿ ಅನಿತಾ ಬೋಸ್ ಮತ್ತು ಮಾಯಾ ಫಾಫ್ ಅವರ ಹಲವಾರು ಛಾಯಾಚಿತ್ರಗಳೂ ನೋಡ ಸಿಗುತ್ತವೆ. ಶ್ರೀಮತಿ ಅನಿತಾ ಫಾಫ್ (ಬೋಸ್) ಅವರು ಮೂರು ವರ್ಷದ ಕೆಳಗೆ ಭಾರತಕ್ಕೆ ಭೇಟಿ ನೀಡಿದ್ದರು. DUÀ The Tribune ಪತ್ರಿಕೆಯು ಅವರ ಸಂದರ್ಶವನ್ನು (ಜನವರಿ ೨೯, ೨೦೦೬) ಪ್ರಕಟಿಸಿತ್ತು. ಮೇ ೩೧ ೨೦೦೩ರ The Tribune ಪತ್ರಿಕೆಯಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರನ್ನು ಮ್ಯೂನಿಚ್ ನಲ್ಲಿ ಅನಿತಾ ಬೋಸ್ ಭೇಟಿಯಾಗಿದ್ದ ವಿಚಾರ ಪ್ರಕಟವಾಗಿದೆ.


ಇವೆಲ್ಲದರ ನಡುವೆ ಸಂಸದ ಅನಂತಕುಮಾರ ಹೆಗಡೆಯವರು ಅದನ್ನೊಂದು ಹೊಸ ವಿಷಯವೆಂದು, ಅದಕ್ಕಿಂತ ಹೆಚ್ಚಾಗಿ ತನ್ನದೇ ಸಂಶೋಧನೆಯೆಂದು ಪತ್ರಿಕಾಗೋಷ್ಠಿ ನೆಡೆಸಿರುವುದು ಅವರ ಅಗ್ಗದ ಜನಪ್ರಿಯತೆಯ ಹುಚ್ಚು ಮಾತ್ರ ಎನ್ನಬಹುದು.

ನಂತರವೂ ನನಗೆ ಸುಮ್ಮನೆ ಕೂರಲಾಗಲಿಲ್ಲ. ದಿನವಿಡೀ ಅಂತರಜಾಲದಲ್ಲಿ ಹುಡುಕಾಡುತ್ತಾ ಕಳೆದೆ. ಹಲವಾರು ನಗ್ನಸತ್ಯಗಳು ಅಲ್ಲಿ ಕಾಣಸಿಕ್ಕವು. ಅವುಗಳನ್ನೆಲ್ಲ ಸಂಗ್ರಹಿಸಿ ಕೊಡಬೇಕೆನ್ನುವಷ್ಟರಲ್ಲಿ ಈದಿನದ ಪತ್ರಿಕೆಗಳು ಕಣ್ಣ ಮುಂದಿವೆ. ಸದ್ಯ ಬೆಳಿಗ್ಗೆ ಆ ಎರಡೂ ಪತ್ರಿಕೆಗಳು ಮರುಲೇಖನಗಳನ್ನು ಪ್ರಕಟಿಸಿವೆ. ‘ನೇತಾಜಿ ಸುಭಾಷ್‌ಚಂದ್ರ ಬೋಸ್ ರಿಸರ್ಚ್ ಅಂಡ್ ಮಲ್ಟಿ ಡೆವಲಪ್‌ಮೆಂಟ್ ಟ್ರಸ್ಟ್’ನವರು ಪತ್ರಿಕಾ ಗೋಷ್ಠಿ ನಡೆಸಿ ಸಂಸದರ ಅಜ್ಞಾನವನ್ನು ಹುಂಬತನವನ್ನು ಜಾಲಾಡಿಬಿಟ್ಟಿದ್ದಾರೆ. ಆ ಮಾಹಿತಿಗಳನ್ನು ಆಧರಿಸಿ, ನಂತರ ಅಂತರಜಾಲವನ್ನು ಹುಡುಕಿ ಪತ್ರಿಕೆಗಳು ಇನ್ನಷ್ಟು ಮಾಹಿತಿಗಳನ್ನು ಹೆಕ್ಕಿ ಇಂದು ಪ್ರಕಟಿಸಿವೆ. ಆದರೆ ಎಲ್ಲಾ ತಪ್ಪು ಸಂಸದರು ಎನ್ನುವ ಪತ್ರಿಕೆಗಳ ಧೋರಣೆ ಮಾತ್ರ ಪ್ರಶ್ನಾರ್ಹ!

ಸಂಸದರೇನೋ ತಮ್ಮ ದಡ್ಡತನದಿಂದ, ಪ್ರಚಾರದ ಹುಚ್ಚಿನಿಂದ ಈ ರೀತಿ ವರ‍್ತಿಸಿದ್ದಾರೆ ಎಂಬುದೇನೋ ಸರಿ. ಆದರೆ ಪತ್ರಿಕೆಗಳ ಸಾಮಾಣ್ಯ ಜ್ಞಾನ ಎಲ್ಲಿ ಹೋಗಿತ್ತು. ಶಿರಸಿಯ ವರದಿಗಾರರು ದಡ್ಡರಿರಬಹುದು. ಆದರೆ ಸಂಪಾದಕರೇನು ದಡ್ಡರೇ!? ವರದಿಗಾರರು ಕಳುಹಿಸಿದ ಮಾಹಿತಿಯನ್ನು, ಅದರ ಇತ್ಯೋಪರಿಗಳನ್ನು ಪರಿಶೀಲಿಸುವ ಸಂಯಮ, ಚಾಕಚಕ್ಯತೆ ಸಂಪಾದಕರ ಕರ‍್ತವ್ಯವಲ್ಲವೇ? ನೆನ್ನೆ ಸಂಸದರ ಸುಳ್ಳುಗಳನ್ನು ಮುಖಪುಟದಲ್ಲಿ ಪ್ರಕಟಿಸಿದ್ದ ಪತ್ರಿಕೆ, ಇಂದು ಟ್ರಸ್ಟ್ ನೀಡಿರುವ ‘ನಿಜ’ ವರದಿಗಳನ್ನು ನಾಲ್ಕನೇ ಪುಟಕ್ಕೆ ತಳ್ಳಿಬಿಟ್ಟಿದೆ! ಅಣ್ಣನ ನೆನಪು ಪುಸ್ತಕದಲ್ಲಿ ತೇಜಸ್ವಿ, ಬಸವಲಿಂಗಪ್ಪನವರ ಬೂಸಾ ಪ್ರಕರಣದ ಬಗ್ಗೆ ಬರೆಯುವಾಗ ಪತ್ರಿಕೆಗಳ ಈ ಬಗೆಯ ರಾಜಕಾರಣವನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಪತ್ರಿಕಾಲೋಕಕ್ಕೂ ಜಡ್ಡು ಹಿಡಿದುಬಿಟ್ಟಿದೆ. ಅವರೂ ಬದಲಾಗುವುದಿಲ್ಲ! ಕನ್ನಡ ಪತ್ರಿಕೋದ್ಯಮಕ್ಕೆ ಇದೆಂಥಾ ದುರ್ಗತಿ ಅಲ್ಲವೆ?

11 comments:

PARAANJAPE K.N. said...

ನೇತಾಜಿ ಮತ್ತವರ ಕುಟು೦ಬದ ಬಗ್ಗೆ ಅನಂತಕುಮಾರ ಹೆಗಡೆ ತಮ್ಮ ಅಜ್ಞಾನ ಪ್ರಕಟಿಸುವ ಜೊತೆಗೆ ಪ್ರಚಾರ ಪಡೆಯುವ ಹೊಸ ತ೦ತ್ರವನ್ನು ಹೂಡಿರುವುದು ನನಗೂ ಮೊದಲ ಓದಿನಲ್ಲಿ ವ್ಯಕ್ತವಾಯಿತು. ಮಾಡಲು ಬೇಕಾದಷ್ಟು ಕೆಲಸ ಗಳಿರುವಾಗ ಅದನ್ನೆಲ್ಲಾ ಬಿಟ್ಟು ಯಾವ್ಯಾವುದೋ ವಿಷಯಗಳ ಬಗ್ಗೆ ಸ೦ಸದರು ತಲೆ ಕೆಡಿಸಿಕೊಳ್ಳುತ್ತಿರುವುದು ಖೇದಕರ. ನೀವು ಅದನ್ನು ಸವಿವರವಾಗಿ ನಿರೂಪಿಸುವ ಜೊತೆಗೆ ಪತ್ರಿಕೆಗಳ ಸ೦ಪಾದಕರ ಅಸಡ್ಡೆ ಅಥವಾ ಅಜ್ಞಾನ ದ ಬಗ್ಗೆಯೂ ಬೆಳಕು ಚೆಲ್ಲಿದ್ದೀರಿ.

ಸೀತಾರಾಮ. ಕೆ. said...

ಒ೦ದೊ೦ದು ಪತ್ರಿಕೆಯು ಒ೦ದೊ೦ದು ರಾಜಕೀಯ ಪಕ್ಷಗಳ ಮುಖವಾಣಿಯಾಗಿವೆ. ಅವರಿಗೆ ತೋಚಿದ್ದನ್ನು ಬರೆದು ತಮ್ಮ ಬೆ೦ಬಲ ಪಕ್ಷಗಳ ವರ್ಚಸ್ಸು ಹೆಚ್ಚಿಸುವ ಹುನ್ನಾರ ಅವುಗಳದು. ಸಮಾಜದ ನಾಲ್ಕನೆಯ ಕಣ್ಣು ಆಗಬೇಕಾದ ಪತ್ರಿಕೋದ್ಯಮ ಚಿಲ್ಲರೆ ಪ್ರಚಾರಕ್ಕಾಗಿ, ದುಡ್ಡಿಗಾಗಿ ತಮ್ಮ ಧರ್ಮ ಮರೆತಿವೆ. ಈ ನಡುವೆ ಟೀವಿ ಚಾನ್ನೆಲ್-ಗಳು ಅದೇ ಕೆಲಸದಲ್ಲಿವೆ. ಇನ್ನು ರಾಜಕಾರಣಿಗಳ ಬಗ್ಗೆ ಮಾತಾಡದೇ ಇರುವದೇ ಒಳ್ಳೇಯದು.ತಮ್ಮ ಬ್ಲೊಗ್ ನಲ್ಲಿರುವ ಮಾಹಿತಿಯಿ೦ದಾದರೂ ಈ ಜನ ಬುದ್ಧಿ ಕಲಿಯಲಿ. ಅವರು ಬುದ್ಧಿ ಕಲಿಯುವರೋ? ಇಲ್ಲವೋ? ಆದರೆ ಓದುಗರಿಗೆ ನಮ್ಮ ರಾಜಕಾರಣಿಗಳ ಮತ್ತು ಪತ್ರಿಕೆಗಳ ಯೋಗ್ಯತೆ ಮಾತ್ರ ಗೊತ್ತಾಯಿತು. ಧನ್ಯವಾದಗಳು ಸತ್ಯನಾರಾಯಣರವರೇ.

Harish Athreya said...

ಆತ್ಮೀಯ
ಪತ್ರಿಕೆಯವರು ಹೆಗ್ಡೆಯವರ ಹೇಳಿಕೆಯನ್ನ ಹಾಕಕ್ಕಿ೦ತ ಮು೦ಚೆ ಒ೦ಚೂರು ಹೇಳಿಕೆಯ ಸತ್ಯಾಸತ್ಯತೆಯನ್ನ ಪರೀಕ್ಷೆಮಾಡಿದ್ದರೆ ಈ ರೀತಿಯ ಅಭಾಸವಾಗ್ತಾ ಇರ್ಲಿಲ್ಲ
ಹೆಗ್ಡೆ ತಿಳಿಯದೆ ಹೇಳಿಕೆ ಕೊಟ್ಟಿರಬಹುದು ಅದನ್ನ ಮುಖ್ಯಸುದ್ದಿಯಾಗಿ ಹಾಕದೆ ಆವ್ರಿಗೆ (ಯಾರಿಗೇ ಆಗಲಿ) ನಿಜವನ್ನ ತಿಳಿಸುವುದು ಅಗತ್ಯ ಅಲ್ವಾ?
ಪತ್ರಿಕೆಯವರಿಗೆ ಸ್ಕೂಪ್ ಬೇಕಾಗಿತ್ತು ಅದಕ್ಕೆ ಈ ರೀತಿಯ ಸುದ್ದಿಯನ್ನ ಸ್ಕೂಪ್ ಮಾಡ್ತಾರೇನೋ
ಇದಕ್ಕೆ ಪ್ರತಿಪಕ್ಷಗಳು ಒ೦ದಷ್ಟು ಕುಹಕದ ಮಾತಾಡ್ತವೆ.ಇನ್ನೊ೦ದಿಷ್ಟು ಜನ ಬೋಸ್ ಕುಟು೦ಬಕ್ಕೆ ಅವಮಾನ ಮಾಡ್ತಿದಾರೆ ಅ೦ತ ಹುಯಿಲೆಬ್ಬಿಸ್ತವೆ.
ಏನಾಗಿದೆ ನಮ್ಮ ಪತ್ರಿಕೆಯವರಿಗೆ?
ಹರೀಶ ಆತ್ರೇಯ

ಸಾಗರದಾಚೆಯ ಇಂಚರ said...

ನಿಜ, ನಮ್ಮ ಪತ್ರಿಕೆಯವರಿಗೆ ಯಾವುದನ್ನು ಹೆಚ್ಚು ವೈಭವೀಕರಿಸಬೇಕು ಎನ್ನುವುದು ಮರೆತು ಹೋಗಿದೆ. ದಿನ ಬೆಳಗಿನ ಪತ್ರಿಕೆ ನೋಡಿದರೆ ಕೊಲೆ, ದರೋಡೆ, ಕಳ್ಳತನ ಇಂಥವೇ ಮುಖಪುಟ ದಲ್ಲಿ ಇರುತ್ತವೆ. ಅದೇ ಸಮಾಜ ಸೇವೆಯಂತ ಕಾರ್ಯಕ್ರಮಗಳು ಕೊನೆಗೆ ತಳ್ಳಲ್ಪಡುತ್ತವೆ. ರಾಜ್ಕಾರನೀಗಳ ಹೇಳಿಕೆಗೆ ಅಷ್ಟೊಂದು ಮಹತ್ವ ಕೊಡುವ ಕೆಲಸ ಬೇಕಿರಲಿಲ್ಲ. ಅದು ಎಲ್ಲರಿಗು ಗೊತ್ತಿರುವ ಸತ್ಯ ಸಂಗತಿ ಅದೇಗೆ ಪತ್ರಿಕೆಗೆ ಗೋಚರಿಸಲಿಲ್ಲವೋ ಗೊತ್ತಿಲ್ಲ.

ಬಿಸಿಲ ಹನಿ said...

ಈ ತರದ ಸುದ್ದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗುವದು ಇದೇ ಮೊದಲೇನಲ್ಲ ಬಿಡಿ! ಈಗ್ಗೆ ಸ್ವಲ್ಪ ದಿನಗಳ ಹಿಂದೆ ಕನ್ನಡ ಪ್ರಭ ಪತ್ರಿಕೆಯು "ಇನ್ನು ಮುಂದೆ ಅಮೆರಿಕಾದಲ್ಲಿ ಕೆಲಸ ಮಾಡಲು ಕನ್ನಡದ ಜ್ಞಾನವೂ ಇರಬೇಕು" ಎನ್ನುವಂಥ ಸುದ್ದಿಯನ್ನು ಮುಖಪುಟದ ಸುದ್ಧಿಯನ್ನಾಗಿ ಮಾಡಿತ್ತು. ಇದು ನಮ್ಮ ಕನ್ನಡ ದಿನ ಪತ್ರಿಕೆಗಳ ಜಾಯಮಾನ! ಜೈ ಕನ್ನಡಾಂಬೆ!

guruve said...

ಪತ್ರಿಕೆಗಳ ದುರ್ಗತಿಯನ್ನು ಚೆನ್ನಾಗಿ ಬಿಡಿಸಿದ್ದೀರ.. ತಪ್ಪನ್ನು ಸರಿಪಡಿಸಿಕೊಳ್ಳಲಾದರೂ, ಇಂದಿನ ನಿಜ ಸುದ್ದಿಯನ್ನು ಆ ಪತ್ರಿಕೆ ಮೊದಲ ಪುಟದಲ್ಲಿ ಮುದ್ರಿಸಬೇಕಾಗಿತ್ತು!

ರವಿಕಾಂತ ಗೋರೆ said...

ಎಲ್ಲಾ ಬಿಟ್ಟ ಭಂಗಿ ನೆಟ್ಟ ಅನ್ನೋ ಹಾಗೆ ಈ ಪುಣ್ಯಾತ್ಮ ನೇತಾಜಿ ಬಗ್ಗೆ ಮಾತು ತೆಗೆದ.. ಪತ್ರಿಕೆಗಳು ಅದನ್ನೇ ದೊಡ್ಡ ಸುದ್ದಿಯಾಗಿಸಿ ತಮ್ಮ ನಿಷ್ಟತೆ ಯನ್ನು ಮೆರೆದವು.. ಧಿಕ್ಕಾರವಿರಲಿ ಇಂಥವರಿಗೆ.. ನೀವು ಈ ಪತ್ರಿಕಾ ಸಂಪಾದಕರ ನಿಜ ಬಣ್ಣವನ್ನು ಬಯಲು ಮಾಡಿದ್ದೀರಿ.. Keep writing..

sunaath said...

ಹೀಗಾ ವಿಷಯ!
ಸಾರ್ವಜನಿಕರ ಅರಿವಿಗೆ ತಂದು ಕೊಟ್ಟದ್ದಕ್ಕಾಗಿ ಧನ್ಯವಾದಗಳು.

ಲೋದ್ಯಾಶಿ said...

ಸಾರ್,
ನನಗೆ ನೇತಾಜಿ ಯವರ ಸಂಸಾರದ ಬಗ್ಗೆ ಖಂಡಿತ ತಿಳಿದಿರಲಿಲ್ಲ. ಆದ್ರೆ ಈಗ ತಿಳೀತು.
ಇದಕ್ಕಾದರೂ ನಾನು ಈ ಹೆಗ್ಡೆಯವರಿಗೆ ಮತ್ತೆ ಈ ಪತ್ರಿಕೆಗಳಿಗೆ ವಂದಿಸ್ತೀನಿ...

ಎಲ್ಲರೂ ತಪ್ಪು ಮಾಡ್ತಾರೆ, ಅದನ್ನೇ ದೊಡ್ದು ಮಾಡ್ಬಾರ್ದು...
ನೀವೆಲ್ಲ ಒಂದ್ಸಾರಿ ಕ್ಷಮಿಸಿ ಬಿಡಿ.
ಆದ್ರೆ, ನಮಿಗು ನಿಮಿಗೂ ಎಲ್ಲರಿಗೂ ಮಾಡೋಕ್ಕೆ ಇನ್ನೂ ಒಳ್ಳೊಳ್ಳೆ ಕೆಲಸಗಳಿವೆ...ಇದನ್ನ ಇಲ್ಲಿಯೇ ಮರೆತು ಬಿಡಿ.

ಮಲ್ಲಿಕಾರ್ಜುನ.ಡಿ.ಜಿ. said...

ಸರ್,
ಪರಿಕೆಯ ಓದುಗರು ಏನು ಬಯಸುತ್ತಾರೆ ಎಂಬುದು ಮರೆತಂತೆ ಕೆಲವು ಬಾರಿ ಪತ್ರಿಕೆ ಹೊರಬಂದಿರುತ್ತದೆ!
ನೀವು ಸರಿಯಾಗಿ ಜಾಡಿಸಿದ್ದೀರಿ.

ಅರವಿಂದ್ said...

ಹೌದು

ಮೊನ್ನೆ ವಿಜಯ ಕರ್ನಾಟಕದಲ್ಲಿ ನಾನು ಓದಿದೆ, ಆಗ ನನಗೂ ಅನುಮಾನ ಬಂತು, ಆದರೆ ಒಬ್ಬ ಮತಾಂಧನಿಗೆ(ಚುನಾವಣಾ ಸಮಯದಲ್ಲಿ ಅನಂತ ಕುಮಾರ ಹೆಗಡೆ ಹೇಳಿದ್ದು) ಇಂತಹ ಆಲೋಚನೆ ಹೇಗೆ ಬಂತೆಂಬ ಆಶ್ಚರ್ಯ. ನೆನ್ನೆ ಪೇಪರ್ ನೋಡಿದ ಮೇಲೆ ನಿಜಕ್ಕೂ ಹೇಸಿಗೆಯಾಯಿತು.

ನಿಮ್ಮ ಕಳಕಳಿಗೆ ಧನ್ಯವಾದಗಳು.