Wednesday, September 30, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 25

ರಾಜಕೀಯ ಪಕ್ಷದ ರ್ಯಾಲಿಗೆ ಲಾರಿಪ್ರವಾಸ

ಕುಂದೂರುಮಠ ಮತ್ತು ಅದರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಾಗೂ ಒಟ್ಟಾರೆಯಾಗಿ ಹಾಸನ ಜಿಲ್ಲೆಯಲ್ಲಿ ದೇವೇಗೌಡರ ಪ್ರಭಾವ ಎಂಬತ್ತರ ದಶಕದಲ್ಲಿ ತುಂಬಾ ಇತ್ತು. ನಮಗೆ ಯಾರೂ ಹೇಳದಿದ್ದರೂ ನಾವೆಲ್ಲಾ ನೇಗಿಲು ಹೊತ್ತ ರೈತನ ಗುರುತಿನ ಜನತಾಪಕ್ಷದ ಪರವಾಗಿ ಮಾತನಾಡುತ್ತಿದ್ದೆವು. ‘ನೇಗಿಲು ಇಲ್ಲದೆ ಈ ಜಗತ್ತಿನಲ್ಲಿ ಬದುಕಲು ಸಾಧ್ಯವೇ ಇಲ್ಲ; ಬೇಕಾದರೆ ಕೈ (ಹಸ್ತ) ಇಲ್ಲದೇ ಬದುಕಬಹುದು. ನೇಗಿಲನ್ನು ಹೇಗೋ ಹಿಡಿದು ಹುಕ್ಕೆ (ಆರು) ಹೊಡೆಯಬಹುದು’ ಎಂಬುದು ನಮ್ಮ ವಾದವಾಗಿತ್ತು. ಖಂಡಿತಾ! ನಮಗೆ ಯಾರೂ ‘ಜನತಾಪಕ್ಷವನ್ನು ಬೆಂಬಲಿಸಿ’ ಎಂದು ಹೇಳಿರಲಿಲ್ಲ. ಓಟು ಮಾಡುವ ಅಧಿಕಾರವಿಲ್ಲದ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಯಾರು ತಾನೆ ತಮ್ಮ ಪಕ್ಷವನ್ನು ಬೆಂಬಲಿಸಲು ಹೇಳುತ್ತಾರೆ? ಆದರೆ ಒಟ್ಟಾರೆ ಪರಿಸರದ ಪ್ರಭಾವದಿಂದಲೋ ಏನೋ ಆಗ ಬಹುತೇಕ ಎಲ್ಲ ಹಾಸ್ಟೆಲ್ಲಿನ ವಿದ್ಯಾರ್ಥಿಗಳು ಜನತಾಪಕ್ಷವನ್ನು ಬೆಂಬಲಿಸುತ್ತಿದ್ದೆವು. ದೇವೇಗೌಡರು ನೇರವಾಗಿ ಹಾಸ್ಟೆಲ್ಲಿಗೆ ಬಂದು ‘ನನ್ನನ್ನು ಬೆಂಬಲಿಸಿ, ನನ್ನ ಪಕ್ಷದ ರ‍್ಯಾಲಿಗಳಿಗೆ ಬನ್ನಿ’ ಎಂದು ಕರೆದಿರಲಿಲ್ಲವಾದರೂ ಸ್ಥಳೀಯ ಮುಖಂಡರು ಹಾಸ್ಟೆಲ್ ವಿದ್ಯಾರ್ಥಿಗಳನ್ನು ‍ರ್ಯಾಲಿಗಳಿಗೆ ಕರೆದುಕೊಂಡು ಹೋಗುವುದು ನಡದೇ ಇತ್ತು.


ಒಮ್ಮೆ ಜನತಾಪಕ್ಷದ ರ‍್ಯಾಲಿಯೊಂದು ಹೊಳೇನರಸೀಪುರದಲ್ಲಿ ಏರ್ಪಾಡಾಗಿತ್ತು. ದೇವೇಗೌಡರ ಜೊತೆಯಲ್ಲಿ ರಾಮಕೃಷ್ಣ ಹೆಗಡೆ, ಜೆ.ಹೆಚ್. ಪಟೇಲ್ ಮೊದಲಾದವರು ಭಾಗವಹಿಸಲಿದ್ದರು. ಯಥಾಪ್ರಕಾರ ಸ್ಥಳೀಯ ಮುಖಂಡರು ಲಾರಿ ಬಸ್ಸುಗಳಲ್ಲಿ ತಮ್ಮ ತಮ್ಮ ಹಿಂಬಾಲಕರನ್ನು, ಊರಿನವರುಗಳನ್ನು ತುಂಬಿಕೊಂಡು ಹೊಳೇನರಸೀಪುರಕ್ಕೆ ಬರಬೇಕಾಗಿತ್ತು. ಕುಂದೂರುಮಠದಿಂದ ಹೋಗುವವರಿಗೆ ಒಂದು ಲಾರಿಯನ್ನು ಗೊತ್ತು ಮಾಡಲಾಗಿತ್ತು. ಎಷ್ಟು ಹೊತ್ತಾದರೂ ಲಾರಿ ತುಂಬುವ ಹಾಗೆ ಕಾಣಲಿಲ್ಲ. ಆಗ ಅಲ್ಲಿದ್ದ ಮುಖಂಡರೊಬ್ಬರು ಹಾಸ್ಟೆಲ್ಲಿನ ಹುಡಗುರನ್ನೆಲ್ಲಾ ಲಾರಿಗೆ ಹತ್ತುವಂತೆ ಹೇಳಿದರು. ಭಾನುವಾರವಾದ್ದರಿಂದ, ಕೇವಲ ಇಪ್ಪತ್ತು ಇಪ್ಪತ್ತೈದು ಮಂದಿಯಷ್ಟೇ ಇದ್ದವರು, ಎಲ್ಲರೂ ಲಾರಿ ಹತ್ತಿ ನಡದೇಬಿಟ್ಟೆವು.

ಚನ್ನರಾಯಪಟ್ಟಣದ ಮಾರ್ಗವಾಗಿ ಲಾರಿ ಹೊಳೇನರಸೀಪುರಕ್ಕೆ ಹೊರಟಿತು. ಯಾರಾದರು ಕೈ ತೋರಿದರೆ ಅವರನ್ನೂ ಹತ್ತಿಸಿಕೊಳ್ಳುತ್ತಾ, ಊರುಗಳು ಇದ್ದಲ್ಲಿ ಅಲ್ಲೆಲ್ಲಾ ‘ಜನತಾಪಕ್ಷಕ್ಕೆ ಜಯವಾಗಲಿ’, ‘ದೇವೇಗೌಡರಿಗೆ ಜಯವಾಗಲಿ’ ಎಂದು ಕೂಗುತ್ತಾ ಘನ್ನಿಕಡ ಎಂಬ ಊರಿನ ಬಳಿ ಬಂದೆವು. ಆ ಊರು ಹೇಮಾವತಿ ನದಿಯ ದಂಡೆಯಲ್ಲಿದೆ. ಅಲ್ಲಿ ಲಾರಿ ನಿಲ್ಲಿಸಿ ಬಂದವರೆಲ್ಲರಿಗೂ ಊಟವನ್ನು ಕೊಡಿಸಲಾಯಿತು. ಹುಡುಗರೆಲ್ಲರಿಗೂ ಲಾರಿಯ ನಂಬರ್ ಬರೆದಿಟ್ಟುಕೊಳ್ಳುವಂತೆ ಹೇಳಿದ್ದರು. ಇಲ್ಲದಿದ್ದರೆ ನೂರಾರು ಲಾರಿಗಳ ನಡುವೆ ನಮ್ಮ ಲಾರಿಯನ್ನು ಗುರುತಿಸದೆ ನಾವು ಕಳೆದುಹೋಗುವ ಅಪಾಯವಿತ್ತು. ಸ್ಥಳೀಯ ಮುಖಂಡರೇ ಮುಂದೆ ನಿಂತು ನಮಗೂ ಊಟ ಹಾಕಿಸಿದರು. ಊಟ ಮುಗಿಸಿ ಲಾರಿಯ ಕಡೆಗೆ ಹೊರಟ ನಮಗೆ ಅಲ್ಲಿ, ಹೊಳೆದಂಡೆಯ ನರ್ಸರಿಯೊಳಗೆ ಬೀರು, ಬ್ರಾಂಡಿಯನ್ನು ಹಂಚುತ್ತಿರುವುದು ಕಂಡಿತು. ಆಗಲೇ ಬಹುತೇಕ ಎಲ್ಲರೂ ಕುಡಿದು ತೂರಾಡುತ್ತಿದ್ದರು. ಅದರಲ್ಲಿ, ಕುಂದೂರಿನ ಮಿಡ್ಲಿಸ್ಕೂಲಿನ ಹುಡಗನೊಬ್ಬ ಚನ್ನಾಗಿ ಕುಡಿದು ವಾಂತಿ ಮಾಡಿಕೊಂಡು ರಸ್ತೆಯಲ್ಲಿ ಬಿದ್ದಿದ್ದ. ಆ ಊರಿನ ಕೆಲವರು ಅವನಿಗೆ ಮಜ್ಜಿಗೆ ಅದು ಇದು ಕುಡಿಸಿ ವಾಂತಿ ಮಾಡಿಸಲು ಪ್ರಯತ್ನ ಮಾಡುತ್ತಿದ್ದರು. ನಾವೊಂದಿಷ್ಟು ಜನ ಅದನ್ನು ಅಸಹ್ಯಿಸುತ್ತಾ, ಹೊಳೆಯ ಕಡೆಗೆ ಇಳಿದು ಹೋದೆವು. ಹೊಳೆಯಲ್ಲಿ ನೀರಾಟಕ್ಕೆ ಇಳಿದ ನಮಗೆ ನಮ್ಮ ಲಾರಿ ಹೊರಟು ಹೋಗಿದ್ದೇ ತಿಳಿಯಲಿಲ್ಲ. ವಾಪಸ್ ಹೋಗಲು ಜೇಬಿನಲ್ಲಿ ಒಂದು ಪೈಸೆಯೂ ಇರಲಿಲ್ಲ. ಕೊನೆಗೆ ಬೇರೊಂದು ಲಾರಿ ಹತ್ತಿ ಹೇಗೋ ಹೊಳೇನರಸೀಪುರ ಸೇರಿದೆವು. ಅಲ್ಲಿ ದೇವೇಗೌಡರ ಭಾಷಣ ಕೇಳುವ ಮೊದಲು ನಮ್ಮ ಲಾರಿಯಿದ್ದ ಜಾಗವನ್ನು ಹುಡುಕಿ ಪತ್ತೆಮಾಡಿಕೊಂಡೆವು. ನಂತರ ಭಾಷಣ ನಡೆಯುತ್ತಿದ್ದ ಜಾಗಕ್ಕೆ ಬಂದೆವು. ಅಷ್ಟರಲ್ಲಿ ಹೆಗಡೆ ಮಾತನಾಡುತ್ತಿದ್ದರು.

ಮತ್ತೆ ಲಾರಿಯಲ್ಲಿ ಹೊರಟಾಗ ಜನ ಸಭೆಗೆ ಸೇರಿದ್ದ ಅಗಾಧ ಜನರ ಬಗ್ಗೆ ಕೆಲವರು ಮಾತನಾಡಿಕೊಳ್ಳುತ್ತಿದ್ದರು. ವಾಪಸ್ ಬರುವಾಗ ದಾರಿಯಲ್ಲಿ ಹಳ್ಳಿಗಳು ಸಿಕ್ಕರೆ, ಹೋಗುವಾಗ ಕೂಗಿದಂತೆ ಜಯಕಾರ ಕೂಗುತ್ತಿರಲಿಲ್ಲ! ಕೆಲವರು, ಕುಡಿದ ಮತ್ತಿನಲ್ಲೇ ಇದ್ದವರು ಗೊರಕೆ ಹೊಡೆಯುತ್ತಿದ್ದರು. ಕೊನೆಗೆ ಸಂಜೆಯ ವೇಳೆಗೆ ನಮ್ಮನ್ನು ಹಾಸ್ಟೆಲ್ಲಿನ ಬಳಿ ಇಳಸಿ ಲಾರಿ ಹೊರಟು ಹೋಯಿತು. ಹೀಗೆ ಹಾಸ್ಟೆಲ್ಲಿನ ವಿದ್ಯಾರ್ಥಿಗಳು ರಾಜಕೀಯ ಸಭೆ ಸಮಾರಂಭಗಳಿಗೂ ಬಳಕೆಯಾಗುತ್ತಿದ್ದರು. ಸ್ಕೂಲ್ ಮಕ್ಕಳನ್ನು ಹೀಗೆ ತಮ್ಮ ಸ್ವಾರ್ಥಕ್ಕಾಗಿ ಸ್ಥಳೀಯ ಮುಖಂಡರು ಬಳಸಿಕೊಳ್ಳುತ್ತಿದ್ದುದ್ದು ದೇವೇಗೌಡರಿಗೆ ಗೊತ್ತಿತ್ತೋ ಇಲ್ಲವೋ ನಮಗೆ ತಿಳಿದಿಲ್ಲ. ಆಗ, ಈಗಿನಂತೆ ಎಲೆಕ್ಟ್ರಾನಿಕ್ ಮೀಡಿಯಾಗಳಿದ್ದಿದ್ದರೆ, ಸ್ಕೂಲ್ ಮಕ್ಕಳನ್ನು ಬಳಸಿಕೊಂಡಿದ್ದಕ್ಕೆ ಹೆಚ್ಚು ಪ್ರಚಾರ ಸಿಗುತ್ತಿತ್ತು, ಅಷ್ಟೆ!

ಛೇರ್ಮನ್ನರ ಚಿಲ್ಲರೆ ಅಂಗಡಿ

ಕುಂದೂರುಮಠದಲ್ಲಿದ್ದ ಇನ್ನೊಂದು ದಾಖಲಿಸಬಹುದಾದ ಸ್ಥಳವೆಂದರೆ, ಮಾಜಿ ಛೇರ್ಮನ್ನರ ಅಂಗಡಿ. ಈ ಮಾಜಿ ಛೇರ್ಮನ್ನರಿಗೆ ಕುಂದೂರುಮಠದಲ್ಲಿ ಅಂಗಡಿಯನ್ನು ಇಡುವ ಐಡಿಯಾವನ್ನು ಯಾರು ಕೊಟ್ಟರೋ ಗೊತ್ತಿಲ್ಲ. ಯಾವ ಕೆಲಸವೂ ಇಲ್ಲದೆ ಹಗಲೆಲ್ಲಾ ಕುಂದೂರುಮಠದಲ್ಲೇ ಕಾಲ ಕಳೆಯುತ್ತಿದ್ದ ಅವರು ತಮ್ಮ ಮನೆಗೆ ಹೋಗುತ್ತಿದ್ದುದ್ದೇ ಸಂಜೆ. ಆಗ ಅಂಗಡಿ ಇಟ್ಟ ಮೇಲೂ ದಿನಚರಿ ಹಾಗೇ ಮುಂದುವರೆಯಿತು ಅಷ್ಟೆ. ಅವರು ತಾವು ಅನಾವಶ್ಯಕವಾಗಿ ಕಳೆಯುತ್ತಿದ್ದ ಕಾಲವನ್ನು ಚೆನ್ನಾಗಿಯೇ ಕ್ಯಾಷ್ ಮಾಡಿಕೊಂಡಿದ್ದರು. ಸ್ವತಃ ಸ್ವಾಮೀಜಿಗಳೇ ಮಠದ ಆವರಣದಲ್ಲೇ ಅವರಿಗೆ ಅಂಗಡಿ ತೆರೆಯಲು ಜಾಗ ಮಾಡಿಕೊಟ್ಟಿದ್ದರು. ಕುರಿಗಳನ್ನು ಕೂಡಿ ಹಾಕುವ ಮನೆಗೆ ಹೊಂದಿಕೊಂಡಂತೆ ಇದ್ದ ಒಂದು ರೂಮಿಗೆ ದೊಡ್ಡದಾಗಿ ಬಾಗಿಲು ಇಡಿಸಿ ಅಂಗಡಿಯ ರೂಪಕೊಟ್ಟಿದ್ದರು. ಸಾಕಷ್ಟು ದೊಡ್ಡದಾಗಿಯೇ, ಎಲ್ಲಾ ಸಾಮಾನುಗಳು ಸಿಗುವಂತೆ ಅಂಗಡಿಯನ್ನು ಛೇರ್ಮನ್ನರು ತೆರೆದೇ ಬಿಟ್ಟರು.


ಸ್ವಾಮೀಜಿಗಳೊಂದಿಗೆ ಮಠದ ಒಳಗೆ ನಡೆಯುತ್ತಿದ್ದ ಅವರ ಕಾಡು ಹರಟೆ ಈಗ ಅಂಗಡಿ ಮುಂಗಟ್ಟಿಗೆ ಬದಲಾಗಿತ್ತು. ಆದರೆ ಆಗಲೇ ವಯಸ್ಸಾಗಿದ್ದ ಛೇರ್ಮನ್ನರಿಗೆ ಸಕ್ಕರೆ ಖಾಯಿಲೆ ಕಾಡುತ್ತಿತ್ತು. ಜೊತೆಗೆ ಸ್ವಾಮೀಜಿಗಳೊಂದಿಗೆ ಯಾವಾಗಲೂ ಎಲ್ಲಾ ವಿಷಯವನ್ನು ಬಹಿರಂಗವಾಗಿ ಕುಳಿತು ಮಾತನಾಡುವಂತಿರಲಿಲ್ಲವೇನೂ? ಆಗಾಗ ಮಠದೊಳಗೂ ಹೋಗಿಬರಬೇಕಾಗಿತ್ತು. ಅಂತಹ ಸಮಯದಲ್ಲಿ ಅಂಗಡಿ ನೋಡಿಕೊಳ್ಳಲು ಯಾರಾದರೂ ಒಬ್ಬರು ಬೇಕಾಗಿದ್ದರು. ಅವರಿಗೆ ನಾಲ್ಕೋ ಐದೋ ಮಂದಿ ಗಂಡು ಮಕ್ಕಳಿದ್ದರು. ಆದರೆ ಅವರಲ್ಲಿ ದೊಡ್ಡವರು ಯಾರೂ ಅಂಗಡಿ ನೋಡಿಕೊಳ್ಳಲು ಒಪ್ಪದಿದ್ದಾಗ, ಹಿಂದಿನ ವರ್ಷವಷ್ಟೇ ನಮ್ಮ ಹೈಸ್ಕೂಲಿನಲ್ಲೇ ಹತ್ತನೇ ತರಗತಿಯಲ್ಲಿ ಡುಮ್ಕಿ ಹೊಡೆದಿದ್ದ ಕಿರಿಯ ಮಗನನ್ನು ಅಂಗಡಿ ನೋಡಿಕೊಳ್ಳಲು ಕರೆದು ತರುತ್ತಿದ್ದರು.

ಅಲ್ಲಿಂದ ಅಂಗಡಿಯ ಚಿತ್ರಣವೇ ಬದಲಾಯಿತು. ಹಾಸ್ಟೆಲ್ ಹುಡುಗರಿಗೆ ಅದೂ ಕಾಲಕಳೆಯುವ ತಾಣವಾಗಿ ಪರಿವರ್ತಿತವಾಯಿತು. ಅಲ್ಲಿ ಅಂಗಡಿಗೆ ಒಳ್ಳೆಯ ವ್ಯಾಪಾರ ಆಗುತ್ತಿದ್ದರೂ ಗಿರಾಕಿಗಳು ಯಾವಾಗಲೂ ಇರುತ್ತಿರಲಿಲ್ಲ. ಆದ್ದರಿಂದ ಅವರ ಮಗನಿಗೂ ಜೊತೆಗೆ ಹುಡುಗರು ಇರವುದು ಇಷ್ಟವೇ ಆಗುತ್ತಿತ್ತು. ಅಲ್ಲಿ ಕಾಲ ಕಳೆಯಲು ಬರುತ್ತಿದ್ದ ಹುಡುಗರಿಗೆ ಕಡ್ಲೆಬೀಜ, ಪೆಪ್ಪರ್‌ಮೆಂಟು ಮೊದಲಾದವನ್ನೂ ಆತ ಕೊಡಲು ಆರಂಭಿಸಿದ ಮೇಲೆ ಅಲ್ಲಿ ಜಮಾಯಿಸುವವರ ಸಂಖ್ಯೆ ಹೆಚ್ಚೇ ಆಯಿತು. ಚನ್ನರಾಯಪಟ್ಟಣಕ್ಕೆ ಸಾಮಾನು ತರಲು ಹೋಗುವಾಗ ಜೊತೆಗೆ ಹುಡುಗರನ್ನು ಕರೆದುಕೊಂಡು ಹೋಗುವುದು, ಸಿನಿಮಾ ನೋಡುವುದು ಅಭ್ಯಾಸವಾಯಿತು. ಪ್ರಾರಂಭದಲ್ಲಿ ಇದ್ಯಾವುದೂ ಅಷ್ಟೇನು ದೊಡ್ಡ ವಿಷಯವಾಗಿರಲಿಲ್ಲ. ಆದರೇ ಮೂರೇ ವರ್ಷದಲ್ಲಿ ಲಾಸ್ ಆಗಿ ಅಂಗಡಿ ಮುಚ್ಚುವಂತಾದಾಗ ಕಾಲ ಮಿಂಚಿ ಹೋಗಿತ್ತು.

ಅವರ ಅಂಗಡಿ ಮುಚ್ಚಿ ಹೋಗಿದ್ದಾಗಲೀ, ಅದಕ್ಕೆ ಅವರ ಮಗನೇ ಕಾರಣ ಎಂಬುದಾಗಲೀ ಇಲ್ಲಿ ಮುಖ್ಯವಲ್ಲ. ಆದರೆ ಒಂದು ವಿಷಯದಲ್ಲಿ ಛೇರ್ಮನ್ನರಿಗೂ, ಹಾಸ್ಟೆಲ್ ವಾರ್ಡನ್ನರಿಗೂ ನಡೆದ ಜಟಾಪಟಿಯಷ್ಟೇ ನನಗೆ ಮುಖ್ಯ. ಆ ಜಟಾಪಟಿಯಿಂದಾಗಿ, ಛೇರ್ಮನ್ನರ ದುರಾಸೆ, ಜಿಪುಣತನ ಹಾಗೂ ವಾರ್ಡನ್ ಜಟಗೊಂಡ ಅವರ ಬುದ್ಧಿವಂತಿಕೆ ನಮಗರಿವಾಗಿತ್ತು!

ಹಬ್ಬ ಹರಿದಿನಗಳಲ್ಲಿ ಹಾಸ್ಟೆಲ್ ಹುಡುಗರು ಊರಿಗೆ ಹೋಗುತ್ತಿದ್ದುದ್ದು ಸಾಮಾನ್ಯವಾದ ವಿಚಾರ. ಆದರೆ ಹತ್ತಿಪ್ಪತ್ತು ಮಂದಿಯಾದರೂ ಊರಿಗೆ ಹೋಗದೆ ಹಾಸ್ಟೆಲ್ಲಿನಲ್ಲಿಯೇ ಉಳಿದುಬಿಡುತ್ತಿದ್ದರು. ಅವರಿಗೆ ಮಾಮೂಲಿನಂತೆ ಊಟ ತಿಂಡಿ ಎಲ್ಲಾ ಇರುತ್ತಿತ್ತು. ಯಾವುದೋ ಒಂದು ಹಬ್ಬದಲ್ಲಿ ವಾರ್ಡನ್ ಕೂಡಾ ಊರಿಗೆ ಹೋಗಿದ್ದರು. ನಾನು ಊರಿಗೆ ಹೋಗಿದ್ದೆ. ಊರಿಗೆ ಹೋಗದೆ ಅಲ್ಲಿಯೇ ಓಡಾಡಿಕೊಂಡಿದ್ದ ಹುಡುಗರನ್ನು ನೋಡಿದ, ಛೇರ್ಮನ್ನರೊಂದಿಗೆ ಮಾತನಾಡುತ್ತಾ ಕುಳಿತಿದ್ದ ಸ್ವಾಮೀಜಿ ‘ಏಕೋ ಊರಿಗೆ ಹೋಗಲಿಲ್ವಾ?’ ಎಂದು ಪ್ರಶ್ನಿಸಿದ್ದಾರೆ. ಅವರೆಲ್ಲಾ ‘ಇಲ್ಲಾ ಸ್ವಾಮೀಜಿ’ ಎಂದಿದ್ದಕ್ಕೆ, ಛೇರ್ಮನ್ನರು, ‘ಏನೋ ಹಬ್ಬಕ್ಕೆ ಹಾಸ್ಟೆಲ್ಲಿನಲ್ಲಿ ಏನು ವಿಶೇಷ ಮಾಡಿದ್ದಾರೆ’ ಎಂದಿದ್ದಾರೆ. ಹುಡುಗರು ‘ಏನೂ ಇಲ್ಲ’ ಎಂದಿದ್ದಕ್ಕೆ ತಮ್ಮ ದೊಡ್ಡಸ್ತಿಕೆ ತೋರಿಸಿಕೊಳ್ಳಲು, ‘ಏನೋ ವರ್ಷಕ್ಕೆ ಒಂದು ಹಬ್ಬ. ಒಂದು ಒಳ್ಳೆಯ ಊಟ ಹುಡುಗರಿಗೆ ಹಾಕಿಸಬೇಡವೆ? ನಿಮ್ಮ ಭಟ್ಟರನ್ನು ಕರೆದುಕೊಂಡು ಬನ್ನಿ. ನಾನು ಸಾಮಾನು ಕೊಡುತ್ತೇನೆ. ಹೋಳಿಗೆ ಮಾಡಿಸಿಕೊಂಡು ತಿನ್ನಿ’ ಎಂದಿದ್ದಾರೆ. ಹೊಸದಾಗಿ ಬಂದಿದ್ದ ಭಟ್ಟ ಗೋಪಿನಾಥ ಅವರು ಕೊಟ್ಟ ಸಾಮಾನನ್ನು ಪಡೆದು, ತನಗೆ ಮಾಡಲು ಬರದೇ ಇದ್ದರೂ ಹೇಗೋ ಹೋಳಿಗೆ ಅಂತ ಮಾಡಿ ಹುಡುಗರಿಗೆ ಬಡಿಸಿಬಿಟ್ಟಿದ್ದಾನೆ.

ಇದು ಇಷ್ಟಕ್ಕೆ ಮುಗಿದಿದ್ದರೆ ಏನೂ ಆಗುತ್ತಿರಲಿಲ್ಲ. ಹುಡುಗರೆಲ್ಲಾ ಮಾಜಿ ಛೇರ್ಮನ್ನರ ಮಕ್ಕಳ ಬಗೆಗಿನ ಪ್ರೀತಿಯನ್ನು ಕಂಡು, ಅವರು ಸಿಕ್ಕಲ್ಲಿ ನಮಸ್ಕಾರ ಹೊಡೆಯುತ್ತಿದ್ದರು. ಆದರೆ ಆ ಛೇರ್ಮನ್ ಮಹಾಶಯ, ವಾರ್ಡನ್ ಊರಿನಿಂದ ಬಂದಾಗ, ತಾನು ಕೊಟ್ಟ ಸಾಮಾನಿಗೆ ಒಂದಕ್ಕೆರಡು ಬರೆದು ಬಿಲ್ ಕಳಿಸಿಬಿಟ್ಟಿದ್ದ. ವಾರ್ಡನ್ ಗೋಪಿನಾಥನನ್ನು ಕರೆದು ಬಯ್ದರು.

‘ನಾನಿಲ್ಲದಾಗ ಬೇರೆಡೆಯಿಂದ ಸಾಮಾನನ್ನು ಹೆಂಗೆ ತಂದಿ. ಹದಿನೈದು ಇಪ್ಪತ್ತು ಹುಡುಗರಿಗೆ ಹೋಳಿಗಿ ಮಾಡಲು ನೂರೈವತ್ತು ರೂಪಾಯಿ ಸಾಮಾನು ಏಕೆ ಬೇಕು?’ ಎಂದೆಲ್ಲಾ ವಿಚಾರಿಸಿದರು.

ಆತ ಆಣೆ ಪ್ರಮಾಣ ಮಾಡಿ, ‘ಸಾರ್ ನಾನು ನಮ್ಮ ವಾರ್ಡನ್ ಇಲ್ಲ ಎಂದರೂ ಕೇಳದೆ, ಸ್ವಾಮೀಜಿಯವರೇ ಹೇಳಿದ್ದಾರೆ ಎಂದು ಸಾಮಾನು ಕಳಿಸಿದರು. ಅವರು ಅಷ್ಟೊಂದು ಸಾಮಾನು ಕೊಟ್ಟೇ ಇಲ್ಲ. ಸುಳ್ಳು ಸುಳ್ಳೇ ಲೆಕ್ಕ ಕೊಟ್ಟಿದ್ದಾರೆ. ಬೇಕಾದರೆ ಸಾಮಾನು ತಂದ ಹುಡುಗರನ್ನೇ ನೀವು ಕೇಳಿ’ ಎಂದ. ವಾರ್ಡನ್ ಅವತ್ತು ಇದ್ದ ಹುಡುಗರನ್ನೆಲ್ಲಾ ಕರೆದು ಎಷ್ಟಷ್ಟು ಸಾಮಾನನ್ನು ಕೊಟ್ಟಿದ್ದರು ಎಂದು ಕೇಳಿ ತಿಳಿದುಕೊಂಡು ಸುಮ್ಮನಾದರು. ನಾವು ‘ನೋಡೋಣ ಏನು ಮಾಡುತ್ತಾರೆ’ ಎಂದು ಕಾಯುತ್ತಾ ಕುಳಿತೆವು.

ಒಂದೆರಡು ದಿನ ಕಳೆಯಿತು. ಛೇರ್ಮನ್ನರು ಮಠದ ಒಬ್ಬ ಆಳನ್ನು ‘ದುಡ್ಡು ಕೊಡುತ್ತಾರೆ ತೆಗೆದುಕೊಂಡು ಬಾ’ ಎಂದು ಕಳಿಸಿದ್ದರು. ವಾರ್ಡನ್ ಅವನನ್ನು ಕುಳ್ಳಿರಿಸಿ ‘ನೋಡಪ್ಪ ಅಮಾಸಿ, ಇದು ಹಾಸ್ಟೆಲ್. ಇಲಾಖೆಯಿಂದ ನನ್ನ ಕೈಗೆ ರೊಕ್ಕ ಬರಾಂಗಿಲ್ಲ. ಅವರು ಏನಾದರೂ, ಎಷ್ಟು ಬೇಕೋ ಅಷ್ಟೇ ರೇಷನ್ನು ನನಗೆ ಕೊಡುವುದು. ಈಗ ನಾನು ಹಾಸ್ಟೆಲ್ಲಿನಿಂದ ಸಾಮಾನನ್ನಾಗಲೀ, ನನ್ನ ಕೈಯಿಂದ ರೊಕ್ಕನಾಗಲೀ ಕೊಡೋಕೆ ಬರಾಂಗಿಲ್ಲ. ಹಾಂಗೆಂದು ನಾನು ಹೇಳಿದೆ ಎಂದು ನಿಮ್ಮ ಛೇರ್ಮನ್ನರಿಗೆ ಹೇಳು’ ಎಂದು ಆತನನ್ನು ಕಳುಹಿಸಿಕೊಟ್ಟರು.

ಮತ್ತೆ ಒಂದೆರಡು ದಿನ ಯಾವುದೇ ಸುದ್ದಿ ಇರಲಿಲ್ಲ. ಮಠದ ಆಳೊಬ್ಬ ಬಂದು ವಾರ್ಡನ್ನರನ್ನು ‘ಸ್ವಾಮೀಜಿ ಕರೆಯುತ್ತಿದ್ದಾರೆ ಬರಬೇಕಂತೆ’ ಎಂದು ಕರೆದು ಹೋದ. ವಾರ್ಡನ್ ಐದಾರು ಜನ ಹುಡುಗರನ್ನು ಕರೆದುಕೊಂಡು ಹೊರಟರು.

ಅಂಗಡಿಯ ಮುಂದೆ ಸ್ವಾಮೀಜಿ ಮತ್ತು ಛೇರ್ಮನ್ನರು ಮತ್ತೆ ಒಂದಿಬ್ಬರು ಕುಳಿತಿದ್ದರು. ಸ್ವಾಮೀಜಿ ‘ಛೇರ್ಮನ್ನರಿಗೆ ಯಾವುದೋ ಬಾಕಿ ಕೊಡಬೇಕಂತೆ. ಕೊಟ್ಟುಬಿಡಬಾರದೆ’ ಎಂದರು. ಆಗ ವಾರ್ಡನ್ ಅತ್ಯಂತ ಸ್ಪಷ್ಟವಾಗಿ, ನಿಧಾನವಾಗಿ ‘ಸ್ವಾಮೀಜಿ, ನಾನು ಈ ಹಾಸ್ಟೆಲ್ಲಿನಾಗ ವಾರ್ಡನ್ ಮಾತ್ರ ಇದ್ದೀನಿ. ಇಲಾಖೆಯವರು ಕೊಟ್ಟ ರೇಷನ್ನಷ್ಟನ್ನೇ ತಂದು ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿಕೊಡೋದು ಅಷ್ಟೆ ನನ್ನ ಕರ್ತವ್ಯ. ಇಲಾಖೆಯವರು ಯಾವುದೇ ಕಾರಣಕ್ಕು ನನಗೆ ರೊಕ್ಕ ಕೊಡೋದಿಲ್ಲ. ನನಗೆ ಬರುವ ಪಗಾರದಲ್ಲಿ ನಾನೇ ಸಂಸಾರ ನಡೆಸುವುದು ಕಷ್ಟವಾಗಿದೆ. ಏನು ಮಾಡಲಿ ಹೇಳಿ’ ಎಂದರು. ಸ್ವಾಮೀಜಿ ಮಾತನಾಡಲಿಲ್ಲ.

ಆಗ ಛೇರ್ಮನ್ನರು, ‘ನೋಡಿ, ಹೇಗೂ ನೀವು ಸಕ್ಕರೆ, ಬೇಳೆ, ಎಣ್ಣೆ ತಂದೇ ತರುತ್ತೀರಿ. ಅದರಲ್ಲಿ ನಾವು ಕೊಟ್ಟಿರುವಷ್ಟನ್ನು ವಾಪಸ್ ಕೊಟ್ಟುಬಿಡಿ’ ಎಂದರು.

ಛೇರ್ಮನ್ನರ ಕಡೆಗೆ ತಿರುಗಿದ ವಾರ್ಡನ್ನರು ಸಂಯಮದಿಂದಲೇ ‘ಸಾರ್ ನೋಡಿ. ಹಾಸ್ಟೆಲಿನಿಂದ ಹೊರಕ್ಕೆ ಏನೇ ಸಾಮಾನು ಕೊಡೋದು ಅಪರಾಧ ಎಂದು ಹಾಸ್ಟೆಲ್ಲಿನ ರೂಲ್ಸ್ ಹೇಳುತ್ತದೆ. ಹಾಗೆ ನಿಮಗೆ ಸಾಮಾನು ಕೊಟ್ಟರೆ ನನ್ನ ನೌಕರಿ ಹೋಗ್ತದೆ. ನಾನು ಬಡವ ಇದ್ದೀನಿ. ನೀವು ಛೇರ್ಮನ್ನರು, ನೀವೆ ಹಣವನ್ನು ಮಕ್ಕಳಿಗೆ ಎಂದು ಮಾಫಿ ಮಾಡಬಾರದೆ’ ಎಂದರು.

ತಕ್ಷಣ ಸ್ವಾಮೀಜಿ, ‘ಹಾಗೇ ಮಾಡಿ ಛೇರ್ಮನ್ನರೆ’ ಎಂದು ಎದ್ದು ಬಿಟ್ಟರು. ಛೇರ್ಮನ್ನರು ಏನೂ ಮಾತನಾಡದಂತಾಯಿತು. ಮೂಕಪ್ರೇಕ್ಷಕರಾಗಿದ್ದ ನಾವು ನಮ್ಮ ವಾರ್ಡನ್ನರ ಬುದ್ಧಿವಂತಿಕೆಗೆ ಅವರನ್ನು ಹೊಗಳುತ್ತಲೇ ಹಾಸ್ಟೆಲ್ಲಿಗೆ ಬಂದೆವು. ಆಗ ವಾರ್ಡನ್ ‘ಅಲ್ಲವ್ರೋ, ಹಾಸ್ಟೆಲ್ ಹುಡುಗ್ರು ಇನ್ನು ಚಿಕ್ಕವ್ರಿರ್ತಾರೆ. ಅವಕ್ಕೆ ಬುದ್ದಿ ಇರಂಗಿಲ್ಲ. ಏನೋ ಪೆಪ್ಪರ್‌ಮೆಂಟ್ ತಿನ್ನೋ ಆಸೆಗೆ ಇವರು ಹೇಳಿದ ಕೆಲಸ ಮಾಡ್ತಾರೆ ಅಂತ, ಷಾಣ್ಯರಾದ ಇವ್ರು ಮಾಡಿಸಿಕೊಂಡಿದ್ದೇ ಮಾಡಿಸಿಕೊಂಡಿದ್ದು. ಕೊಡ್ಲಿ ಬಿಡ್ರಿ ನೂರೈವತ್ತು ರೂಪಾಯಿ. ಹಂಗ ನೋಡಿದ್ರೆ ಅವ ಕೊಟ್ಟಿರೋದು ಕೇವಲ ಅರವತ್ತುರೂಪಾಯಿ ಸಾಮಾನೂನು ಇಲ್ಲ’ ಎಂದರು. ಹುಡುಗರು ನಿರುತ್ತರರಾದೆವು!
(ಮುಂದಿನ ವಾರ ಈ ಪುಸ್ತಕದ ಕೊನೆಯ ಕಂತು. ನಂತರ ಒಬ್ಬರು ರಂಗನಿರ್ದೇಶಕರು ಮತ್ತು ಇಬ್ಬರು ಲೇಖಕರು  ಈಪುಸ್ತಕವನ್ನು ಕುರಿರತು ಬರೆದಿರುವ ಲೇಖನಗಳು ಪ್ರಕಟವಾಗಲಿವೆ.)
ಚಿತ್ರಕೃಪೆ:ಅಂತರಜಾಲ

12 comments:

PARAANJAPE K.N. said...

ಕಥೆ ರೋಚಕವಾಗಿದೆ, ಓದಿಸಿಕೊ೦ಡು ಹೋಗುವ ಗುಣ ಹೊಂದಿದೆ, ಒ೦ದೇ ಗುಕ್ಕಿನಲ್ಲಿ ಓದಿ ಮುಗಿಸಿದೆ.

Mahanthesh said...

ರಾಜಕೀಯ ದುರೀಣರು ಹೇಗೆ ಶಾಲಾ ಮತ್ತು ಕಾಲೇಜ್ ವಿಧ್ಯಾರ್ಥಿಗಳನ್ನು ತಮ್ಮ ಚುನಾವಣ ಮೇಳಗಳಲ್ಲಿ ಬಳಸಿಕೊಳ್ಳುತಿದ್ದರು ಎಂಬುದನ್ನು ಬಹು ಸೊಗಸಾಗಿ ಚಿತ್ರಿಸಿದ್ದೀರಿ. ವಿಸ್ತೃತವಾಗಿ ಬರೆದು ತಮ್ಮ ಅನುಭವಗಳನ್ನು ಹಂಚಿಕೊಂಡಿರುತ್ತೀರಿ. ನಿಮ್ಮ ಅನುಭವಗಳು ನಮ್ಮ ಅನುಭವಗಳೆನೋ ಎನ್ನುವಷ್ಟು ಖುಷಿ ನೀಡುತ್ತದೆ.

sweet hammu said...

ನಿರೂಪಣೆ ತುಂಬ ಚೆನ್ನಾಗಿದೆ ಸರ್

ರವಿಕಾಂತ ಗೋರೆ said...

ಸಕತ್ತಾಗಿದೆ... ಒಂದೇ ಉಸಿರಿಗೆ ಓಡಿಸಿಕೊಂಡು ಹೋಯಿತು... ಮುಂದಿನ ಬರಹ ಆದಷ್ಟು ಬೇಗನೆ ಹಾಕಿ...

Shweta said...

ಸತ್ಯನಾರಾಯಣ ಅವರೇ,
ನಿಮ್ಮ ಅನುಭವಗಳನ್ನು ಓದುವಾಗ ನನ್ನ ಶಾಲಾ ದಿನಗಳು ನೆನಪಿಗೆ ಬರುತ್ತಿವೆ...
ನಿಮ್ಮ ಬ್ಲಾಗ್ ನಿಂದ ತೇಜಸ್ವಿಯವರ ಕುರಿತಾದ ವೆಬ್ಸೈಟ್ ಮಾಹಿತಿ ಸಿಕ್ಕಿತು ,,,ತುಂಬಾ ಧನ್ಯವಾದಗಳು...
ತೇಜಸ್ವಿಯವರ ಬಗೆಗಿನ ನಿಮ್ಮ ಕೃತಿ ಎಲ್ಲಿ ದೊರಕುತ್ತದೆ??

shivu said...

ಸತ್ಯನಾರಾಯಣ ಸರ್,

ದೇವೇಗೌಡರ ರ್ಯಾಲಿ ಕತೆ ತುಂಬಾ ಸೊಗಸು. ಅದು ಎಲ್ಲಾ ಕಡೆ ನಡೆಯುವುದೇ ಅಲ್ಲವೇ...ಆಗ ನಿಮ್ಮ ಅನುಭವವೂ ಚೆನ್ನಾಗಿದೆ. ಅದಕ್ಕಿಂತ ಚೆನ್ನಾಗಿ ನಿಮ್ಮ ಹೋಳಿಗೆ ಪುರಾಣ ಇನ್ನೂ ಚೆನ್ನಾಗಿದೆ.

ಧನ್ಯವಾದಗಳು.

ಸಾಗರದಾಚೆಯ ಇಂಚರ said...

ತುಂಬಾ ಸುಂದರ ಕಥೆ, ಶೈಲಿ ಅದ್ಭುತ, ಕಥೆ ಬರೆಯುವ ಶೈಲಿ ನಿಮಗೆ ಕರಗತವಾಗಿದೆ, ಬರಹ ಬಹಳ ಇಷ್ಟವಾಯಿತು

ರೂpaश्री said...

ಎಂದಿನಂತೆ ಸರಸರ ಓದಿಸಿಕೊಂಡು ಹೋಯಿತು!!

ಲೋದ್ಯಾಶಿ said...

ಸಾರ್,
ನಾನು ಪಿ.ಯು.ಸಿ.ಲಿ ಹಾಸ್ತೆಲ್ನಲ್ಲಿದ್ದಾಗ ಹೀಗೆ ಆಯನೂರು ಮಂಜುನಾಥ್ ಮಂದು ಭಾಷಣ ಮಾಡಿ ಹೋಗಿದ್ರು..ಆದ್ರೆ ಲಾರಿ-ಬಸ್ಸು ಇದಾವ್ದೂ ಹತ್ಲಿಲ್ಲಾ.
ಎರಡನೇ ಸನ್ನಿವೇಶ, "ಅತೀ ಆಸೆ ಗತಿ ಗೇಡು" ಅನ್ನೋ ಗಾದೆಗೆ ಉದಾಹರಣೆ ಸಮೇತ ವಿವರಿಸಿದಂತೆ ಇದೆ.

ಧನ್ಯವಾಧಗಳು

ಸಿಮೆಂಟು ಮರಳಿನ ಮಧ್ಯೆ said...

ಸತ್ಯನಾರಾಯಣ ಸರ್...

ನೇಗಿಲು ಹೊತ್ತ ರೈತ ನ ಚಿತ್ರ ನೋಡಿ ಖುಷಿಯಾಯಿತು...
ನಿಮ್ಮ ಬಾಲ್ಯದ ರಜಕೀಯ ಪಕ್ಷಗಳ ದೊಂಬರಾಟವನ್ನು ವಸ್ತುನಿಷ್ಟವಾಗಿ ಬಿಡಿಸಿಟ್ಟಿದ್ದೀರಿ...

ಹೋಳಿಗೆ ಕಥೆ ಸೂಪರ್...

ನಿಮ್ಮ ಪುಸ್ತಕ ಎಲ್ಲಿ ಸಿಗುತ್ತದೆ..?

ಚಂದದ ಬರಹಕ್ಕೆ ಅಭಿನಂದನೆಗಳು...

kannamuchaale said...

ಜನತ ಪಕ್ಸದ ಚಿನ್ಹೆ ಎಲ್ಲಿ ಹುಡುಕಿದ್ದೀರಿ!ಬಹಳ ಚನ್ನಾಗಿದೆ. ನಿಮ್ಮ ಮುಂದುವರಿದ ಹ್ಯೆ ಸ್ಕೂಲ್ ದಿನಗಳು

Chamaraj Savadi said...

ರಸವತ್ತಾದ ನಿರೂಪಣೆ ಸತ್ಯನಾರಾಯಣ ಅವರೇ. ನನ್ನ ಬಾಲ್ಯದ ಎಷ್ಟೋ ಸಂಗತಿಗಳು ನೆನಪಾದವು. ಅಷ್ಟೇ ಅಲ್ಲ, ನಾನೂ ಅವುಗಳ ಬಗ್ಗೆ ಬರೆಯಬೇಕು ಎಂಬ ಉಮೇದು ಮೂಡಿಸಿದವು.

ಪುಸ್ತಕದ ಕುರಿತು ವಿವರಗಳನ್ನು ಕೊಡಿ. ಇಂಥ ಬರಹಗಳೇ ಅಪರೂಪ ಎನ್ನುವಂತಾಗಿವೆ.