Saturday, September 12, 2009

ಸ್ವಾಮಿಯೇ ಶರಣಂ ಅಯ್ಯಪ್ಪ ‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - ೨೪

ಎಂಬತ್ತರ ದಶಕದಲ್ಲಿ ಅಯ್ಯಪ್ಪ ಸ್ವಾಮಿಯ ಯಾತ್ರೆಗೆ ಹೋಗುವವರ ಸಂಖ್ಯೆ ಬಯಲುಸೀಮೆಯಲ್ಲಿ ಅಗಾಧವಾಗಿ ಹೆಚ್ಚುತ್ತಿತ್ತು. ಈಗಲೂ ಆ ಸಂಖ್ಯೆಯೇನು ಕಡಿಮೆಯಾಗಿಲ್ಲ. ಆದರೆ ಮೊದಲಿನಂತೆ ನಲವತ್ತೆಂಟು ದಿನಗಳ ಕಾಲ ವ್ರತ ಹಿಡಿದು ಹೋಗುವವರ ಸಂಖ್ಯೆ ಕಡಿಮೆಯಾಗಿದೆ ಅಷ್ಟೆ! ಈಗ, ಹಿಂದಿನ ದಿನ ಮಾಲೆ ಧರಿಸಿ ಹೊರಡುವುದು, ಶಬರಿಮಲೆಗೆ ಹೋಗಿ ಅಲ್ಲಿಯೇ ಮಾಲೆ ಧರಿಸುವುದು ಫ್ಯಾಷನ್ ಆಗಿದೆ. ಅದಕ್ಕಿಂತ ಹೆಚ್ಚಾಗಿ, ಅಲ್ಲಿಯೇ ಸ್ಥಳೀಯವಾಗಿ ಸ್ಥಾಪಿತವಾಗಿರುವ ಅಯ್ಯಪ್ಪನ ಗುಡಿಗಳಿಗಷ್ಟೇ ಹೋಗಿಬರುವುದೂ ಇದೆ! ಇದೊಂದು ರೀತಿಯಲ್ಲಿ, ಜನರು ಮೂಡನಂಬಿಕೆಗಳನ್ನು ತಕ್ಕಮಟ್ಟಿಗಾದರೂ ನಿರಾಕರಿಸಿ, ವಿಚಾರವಂತರಾಗುತ್ತಿರುವುದನ್ನು ಸೂಚಿಸುತ್ತದೆ, ಅಲ್ಲವೆ?

ಕುಂದೂರುಮಠದ ಸುತ್ತಮುತ್ತಲಿನ ಹಳ್ಳಿಗಳಲ್ಲೂ ಅಯ್ಯಪ್ಪಸ್ವಾಮಿಯ ಖಾಯಿಲೆ ಚೆನ್ನಾಗಿಯೇ ಹಬ್ಬಿಬಿಟ್ಟಿತ್ತು. ಅಲ್ಲಿಂದ ಒಂದು ಕಿಲೋಮೀಟರ್ ದೂರದಲ್ಲಿದ್ದ ಅಗ್ರಹಾರ ಎಂಬ ಊರಿನ ಕೆಲವರು ಮಠದಲ್ಲಿ ಕಾಲಕಳೆಯುತ್ತಿದ್ದ ಸೋಮಾರಿಗಳ ಗುಂಪಿನ ಖಾಯಂ ಸದಸ್ಯರಾಗಿದ್ದರು. ಅವರೆಲ್ಲರು, ಇನ್ನೂ ಕೆಲವರನ್ನು ಸೇರಿಸಿ ಅಯ್ಯಪ್ಪಸ್ವಾಮಿ ಯಾತ್ರೆ ಮಾಡುವುದಕ್ಕೆ ಸಿದ್ಧತೆ ನಡೆಸಿದರು. ಮಠದ ಹೊರ ಬಯಲಿನಲ್ಲಿ ತಾತ್ಕಾಲಿಕವಾಗಿ ಒಂದು ಚಪ್ಪರವನ್ನು ನಿಲ್ಲಿಸಿ, ಎಲ್ಲರೂ ಮಾಲೆ ಧರಿಸಿ ಕಪ್ಪುವಸ್ತ್ರಧಾರಿಗಳಾದರು. ಕೇವಲ ರಾತ್ರಿ ಮಾತ್ರ ಮನೆಗೆ ಹೋಗುವ ಅಭ್ಯಾಸವಿದ್ದವರಿಗೆ ಈಗ ರಾತ್ರಿಯೂ ಇಲ್ಲಿಯೇ ಉಳಿಯುವ ಸುಯೋಗ!

ಆಗ ಅವರು ಆಚರಿಸುತ್ತಿದ್ದ ಕೆಲವೊಂದು ನಿಯಮಗಳು ಹೀಗಿವೆ. ಹೆಂಗಸರು ಮಾಡಿದ ಅಡುಗೆ ತಿನ್ನುವಂತಿಲ್ಲ. ದೊಡ್ಡವಳಾಗದ ಹುಡುಗಿ ಅಥವಾ ಮುಟ್ಟು ನಿಂತಿರುವ ಹೆಂಗಸು ಮಾಡಿದರೆ ಪರವಾಗಿಲ್ಲ. ಸೂರ್ಯೋದಯಕ್ಕೆ ಮುಂಚೆಯೇ ಎದ್ದು ತಣ್ಣೀರು ಸ್ನಾನ ಮಾಡಿ, ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಹಾಡಿ, ಅಡುಗೆ ಮಾಡಿಕೊಂಡು ಊಟ ಮಾಡಬೇಕು. (ಮಧ್ಯಾಹ್ನ ಊಟ ಮಾಡುವವರಿಗಾಗಿ ಮಂಜಣ್ಣ ತನ್ನ ಹೋಟೆಲ್ಲಿನಲ್ಲಿ ಬಾಳೆ ಎಲೆಗೆ ಚಿತ್ರಾನ್ನ ಹಾಕಿ ಕೊಡುತ್ತಿದ್ದ!) ಮಧ್ಯ, ಮಾಂಸ, ಬೀಡಿ, ಸಿಗರೇಟು, ಹೊಗೆಸೊಪ್ಪು ಮುಂತಾದವನ್ನು ಮುಟ್ಟುವಂತೆಯೂ ಇಲ್ಲ. ಕಾಲಿಗೆ ಚಪ್ಪಲಿಯನ್ನು ಧರಿಸುವಂತೆ ಇರಲಿಲ್ಲ. ಇವೇ ಮೊದಲಾದ ಅನೇಕ ನಿಯಮಗಳನ್ನು ಅವರು ಪಾಲಿಸುತ್ತಿದ್ದರು. ನಲವತ್ತೆಂಟು ದಿಗಳ ಮಟ್ಟಿಗಾದರೂ ಕೆಟ್ಟ ಅಭ್ಯಾಸಗಳಿಂದ ದೂರ ಇರುವುದಕ್ಕೆ ಇದೊಂದು ಅವಕಾಶ!

ಇನ್ನೊಂದು ತಮಾಷೆಯ ನಿಯಮವೆಂದರೆ, ‘ಅವರನ್ನು ಎಲ್ಲರೂ ‘ಸ್ವಾಮಿ’ ಎಂದು ಕರೆಯಬೇಕು; ಹಾಗೆ ಅವರೂ ಬೇರೆಯವರನ್ನು ‘ಸ್ವಾಮಿ’ ಎಂದೇ ಕರೆಯಬೇಕು’ ಎಂಬುದು. ಆಗ ನಮಗೆಲ್ಲಾ ಒಂದು ತರಾ ಮೋಜೆನಿಸಿ ಅವರೆಲ್ಲರನ್ನೂ ‘ಸ್ವಾಮಿ’ ಎಂದೇ ಸಂಬೋಧಿಸುತ್ತಿದ್ದೆವು. ಅವರೂ ನಮ್ಮನ್ನು ನಮ್ಮ ಹೆಸರಿನ ಮುಂದೆ ‘ಸ್ವಾಮಿ’ ಎಂದು ಸೇರಿಸಿ ಕರೆಯುತ್ತಿದ್ದರು. ಸುರೇಶಸ್ವಾಮಿ, ಹೊನ್ನೆಗೌಡಸ್ವಾಮಿ, ಪುಷ್ಪಾಚಾರಿಸ್ವಾಮಿ ಹೀಗೆ ಎಲ್ಲರೂ ‘ಸ್ವಾಮಿ’ಗಳಾಗುತ್ತಿದ್ದರು. ಮೇಷ್ಟ್ರುಗಳನ್ನು ‘ಮೇಷ್ಟ್ರುಸ್ವಾಮಿಗಳೇ’ ಎಂದು, ಕಂಡಕ್ಟರ್ಗಳನ್ನು ‘ಕಂಡಕ್ಟರ್ಸ್ವಾಮಿಗಳೇ’ ಎಂದು, ಡ್ರೈವರ್ಗಳನ್ನು ‘ಡ್ರೈವರ್ಸ್ವಾಮಿಗಳೇ’ ಎಂದು, ವಾರ್ಡನ್ನರನ್ನು ‘ವಾರ್ಡನ್ಸ್ವಾಮಿಗಳೇ’ ಎಂದು ಕರೆದು ಅವರವರ ಉದ್ಯೋಗಕ್ಕೂ ‘ಸ್ವಾಮಿ’ಯನ್ನು ಗಂಟುಹಾಕುತ್ತಿದ್ದರು. ಅದಕ್ಕಿಂತ ಹೆಚ್ಚಾಗಿ ಮಠದ ಸ್ವಾಮೀಜಿಗಳನ್ನು ‘ಸ್ವಾಮೀಜಿಸ್ವಾಮಿಗಳು’ ಎಂದು ಕರೆಯುವುದು ತಮಾಷೆಯಾಗಿರುತ್ತಿತ್ತು. ಹೆಸರು ಗೊತ್ತಿರದ ಹುಡುಗನನ್ನು ‘ಏ ಹುಡುಗ ಸ್ವಾಮಿ’ ಎಂದು ಕೂಗುತ್ತಿದ್ದರು. ಆಗ ನಾವೆಲ್ಲಾ, ‘ಹುಡುಗಿಯರನ್ನು ಕರೆಯುವುದಕ್ಕೆ ಏನನ್ನುತ್ತಾರೆ ಎಂದು ಕಲ್ಪನೆ ಮಾಡಿಕೊಂಡು ಸಂತೋಷಪಡುತ್ತಿದ್ದೆವು! ಅವರ ‘ಸ್ವಾಮೀ’ ಪದದ ಹುಚ್ಚು ಎಲ್ಲಿಗೆ ಮುಟ್ಟಿತು ಎಂದರೆ, ಅಡುಗೆ ಮಾಡುವ ಸಾಮಾನುಗಳಿಗೂ ಸ್ವಾಮೀ ಎಂದೇ ಸಂಬೋಧಿಸುವಷ್ಟು! ಪಾತ್ರೆಸ್ವಾಮಿ, ಸೌಟುಸ್ವಾಮಿ, ತರಕಾರಿಸ್ವಾಮಿ, ಅಕ್ಕಿಸ್ವಾಮಿ, ಸಾರುಸ್ವಾಮಿ, ಪಾಯಸಸ್ವಾಮಿ..... ಹೀಗೆ! ಒಂದು ದಿನ ನಮ್ಮೆದುರಿಗೇ ಒಬ್ಬ, ಅಲ್ಲಿಗೆ ಬಂದಿದ್ದ ತನ್ನ ತಾಯಿಯ ಜೊತೆ ಹೀಗೆ ಮಾತನಾಡುತ್ತಿದ್ದ. ‘ಏನು ಅವ್ವಸ್ವಾಮಿ. ಬರೇ ಇಪ್ಪತ್ತು ರೂಪಾಯಿ ತಂದಿದ್ದೀರಲ್ಲ. ನನ್ನ ಹೆಂಡತಿಸ್ವಾಮಿಗೆ ಹೇಳಿ, ಒಂದೈವತ್ತು ರೂಪಾಯಿ ತರಬಾರದಾಗಿತ್ತ. ಅಂದಂಗೆ ಮಕ್ಕಳುಸ್ವಾಮಿ ಹೇಗಿದ್ದಾವೆ. ಕುರಿದನ ಸ್ವಾಮಿಗಳನ್ನ ಚೆನ್ನಾಗಿ ನೋಡ್ಕಳ್ಳಾಕೆ ಹೇಳಿ ಅವ್ವಸ್ವಾಮಿ......’ ಹೀಗೆ ಸಾಗಿತ್ತು.

ವ್ರತದಿಂದಾಗಿ ಕೆಲವು ಸೋಮಾರಿಗಳಿಗೆ ಮೂರುಹೊತ್ತು ಉಂಡಾಡಿಗುಂಡಪ್ಪಗಳಾಗಿ ಕಾಲ ಕಳೆಯುವುದು ಇಷ್ಟವಾಗಿರಬೇಕು. ಅಯ್ಯಪ್ಪಸ್ವಾಮಿಯ ಯಾತ್ರೆಯ ಸಂಭ್ರಮ ಮುಂದಿನ ವರ್ಷಕ್ಕೂ ಮುಂದುವರೆಯಿತು. ಆದರೆ ಹಿಂದಿನ ವರ್ಷವಿದ್ದಷ್ಟು ನಿಷ್ಠೆ ಮಾತ್ರ ಇರಲಿಲ್ಲ. ಎರಡನೇ ವರ್ಷ ಒಂದೆರಡು ವಾರಗಳಲ್ಲಿಯೇ, ಕೆಲವು ಚಪಲಚನ್ನಿಗರಾಯರಿಗೆ ಬೇಸರವಾಗತೊಡಗಿತು. ಬೆಳಿಗ್ಗೆ, ಸಂಜೆ ಭಜನೆ ಮಾಡಿದರೆ ಮುಗಿದುಹೋಯಿತು. ಹೊತ್ತು ಕಳೆಯಲು ಎಷ್ಟು ಎಂದು ಮಾತನಾಡಲಾಗುತ್ತದೆ. ಇಸ್ಪೀಟು ಶುರು ಮಾಡಿಯೇಬಿಟ್ಟರು. ಮೊದಲಿಗೆ ದುಡ್ಡು ಕಟ್ಟಿಕೊಂಡು ಆಡುವುದು ಬೇಡವೆಂದರು. ಕೊನೆಗೆ ದುಡ್ಡೂ ಬಂತು. ಕೆಲವರು ಬೀಡಿ ಹಚ್ಚಿದರು. ಇನ್ನು ಕೆಲವರು ಸಂಜೆಯಾಗುತ್ತಿದ್ದಂತೆ ಸೆರಾಪನ್ನೂ ಕುಡಿಯುತ್ತಿದ್ದರು.

ಒಂದು ದಿನ ಸಂಜೆ ಸುಮಾರು ಏಳು ಗಂಟೆಯ ಹೊತ್ತಿಗೆ, ಇಸ್ಪೀಟು ಆಟ ಕಳೆ ಕಟಿತ್ತೋ ಏನೂ? ಜಗಳ ಶುರುವಾಗಿದೆ. ಅಷ್ಟೂ ದಿನದಿಂದ ತಡೆಹಿಡಿದುಕೊಂಡಿದ್ದ ಬಯ್ಗುಳಗಳೆಲ್ಲ ಒಮ್ಮೆಲೆ ಹೊರಗೆ ನುಗ್ಗುತ್ತಿದ್ದುದ್ದರಿಂದ ಅವರ ಕೂಗಾಟ ಹಾಸ್ಟೆಲ್ಲಿನವರೆಗೂ ಕೇಳಿಸುತ್ತಿತ್ತು. ನಾವೆಲ್ಲಾ ಎದ್ದು, ಓಡಿ ಚಪ್ಪರ ಹಾಕಿದ್ದಲ್ಲಿಗೆ ಬರುವಷ್ಟರಲ್ಲಿ ಜಗಳ ತಾರಕಕ್ಕೇರಿತ್ತು. ಮಾಲೆ ಧರಿಸಿದ್ದವನೊಬ್ಬ, ಮಾಲೆ ಧರಿಸದೇ ಕೇವಲ ಇಸ್ಪೀಟು ಆಟಕ್ಕೆ ಬಂದಿದ್ದವನೊಬ್ಬನಿಗೆ ಚಪ್ಪಲಿಯಲ್ಲಿ ಚೆನ್ನಾಗಿ ಬಾರಿಸಿಬಿಟ್ಟ! ಹೊಡೆಸಿಕೊಂಡವನು ಸುಮ್ಮನಿರುತ್ತಾನೆಯೇ? ಆತನೂ ಕೈಗೆ ಸಿಕ್ಕ ಚಪ್ಪಲಿಯಿಂದ ಮಾಲೆಧರಿಸಿದವನಿಗೂ ಬಾರಿಸಿದ! ಏನೋ ಮಹಾಪರಾಧವಾಯಿತೆಂದು ಜನರೆಲ್ಲಾ ಒಂದು ಕ್ಷಣ ಅವಕ್ಕಾದರು. ಬೇರಾವ ದುಶ್ಚಟಗಳೂ ಅವರಿಗೆ ತಪ್ಪೆನಿಸದಿದ್ದರೂ, ಮಾಲೆ ಧರಿಸಿದವನಿಗೆ ಚಪ್ಪಲಿಯಲ್ಲಿ ಹೊಡೆದಿದ್ದು ಮಹಾಪರಾಧವಾಗಿ ಕಂಡಿತ್ತು. ಜಗಳ ಒಂದು ಹಂತಕ್ಕೆ ಬರುವುದಕ್ಕೆ ಒಂದೆರಡು ಗಂಟೆಗಳೇ ಬೇಕಾಯಿತು. ರಾತ್ರಿ ಊಟದ ಹೊತ್ತಾಗಿದ್ದರಿಂದ ನಮ್ಮನ್ನೆಲ್ಲಾ ‘ವಾರ್ಡನ್ಸ್ವಾಮಿ’ ಹಾಸ್ಟೆಲ್ಲಿಗೆ ವಾಪಸ್ ಕರೆದುಕೊಂಡು ಬಂದರು. ನಂತರ ಏನಾಯಿತೋ ಗೊತ್ತಿಲ್ಲ. ಮಾರನೆಯ ದಿನ ‘ಚಪ್ಪಲಿಯಲ್ಲಿ ಹೊಡೆಸಿಕೊಂಡ ಅಯ್ಯಪ್ಪನ ಭಕ್ತ, ಮಾಲೆಯನ್ನು ತೆಗೆದು ಹಾಕಿ, ಮುಂದಿನ ವರ್ಷ ಹೊಸದಾಗಿ ಮಾಲೆಧರಿಸಿ ಬರುವುದಾಗಿ ತಪ್ಪೊಪ್ಪಿಗೆ ಹರಕೆ ಕಟ್ಟಿಕೊಂಡು ಹೊರಟುಹೋದ!’ ಎಂದು ಸುದ್ದಿಯಾಯಿತು, ಅಷ್ಟೆ.

ಕುಂದೂರುಮಠಕ್ಕೆ ಹೊರತಾದರೂ, ನಾನು ಹೈಸ್ಕೂಲಿನಲ್ಲಿದ್ದಾಗಲೇ ನಡೆದ, ಅಯ್ಯಪ್ಪಸ್ವಾಮಿ ಯಾತ್ರೆಗೆ ಸಂಬಂಧಿಸಿದ ವಿಷಯವೊಂದನ್ನು ನಾನಿಲ್ಲಿ ಹೇಳಲೇಬೆಕು. ಕುಂದೂರುಮಠದಿಂದ ಪೂರ್ವಕ್ಕೆ ಐದಾರು ಕಿಲೋಮೀಟರ್ ದೂರದಲ್ಲಿ ಒಂದು ಹಳ್ಳಿಯಿದೆ. ಅದು ನಮ್ಮ ತೋಟದಿಂದ ಕೇವಲ ಒಂದೂವರೆ ಕಿಲೋಮೀಟರ್ ಆಗಬಹುದು ಅಷ್ಟೆ. ಅಲ್ಲಿಯೂ ಈ ಅಯ್ಯಪ್ಪಸ್ವಾಮಿ ಯಾತ್ರೆಗೆ ಹೊರಟ ಗೊಂಪೊಂದಿತ್ತು. ಅಲ್ಲಿಯ ಕ್ರಾಂತಿಕಾರಕತನವೆಂದರೆ ದಲಿತರೂ ಅಯ್ಯಪ್ಪಸ್ವಾಮಿಗೆ ಹೊರಟಿದ್ದು. ಮೇಲ್ಜಾತಿಯವರೂ, ಕೆಳಜಾತಿಯವರೂ ಒಟ್ಟಿಗೆ ಒಂದೇ ಚಪ್ಪರದಲ್ಲಿ ಭಜನೆ ಮಾಡುತ್ತಾ, ಸಹಪಂಕ್ತಿ ಭೋಜನ ಮಾಡುವುದನ್ನು ಆಗ ನೋಡಬಹುದಿತ್ತು. ನಮ್ಮ ಸುತ್ತೆಲ್ಲಾ ಆಗ ಅದೊಂದು ಚರ್ಚೆಯ ವಿಚಾರವಾಗಿತ್ತು. ಬಹುಶಃ ಆಗ ಶಬರಿಮಲೆಯೊಂದೇ ದಲಿತರಿಗೆ ಮುಕ್ತ ಅವಕಾಶ ನೀಡಿದ್ದ ಸ್ಥಳವಾಗಿತ್ತೇನೋ ಅನ್ನಿಸುತ್ತದೆ.

ಹಳ್ಳಿಗಳಲ್ಲಿ ಅಸ್ಪೃಷ್ಯತೆ ಜಾರಿಯಿದ್ದ ಕಾಲವದು. ನಮ್ಮ ಮನೆಗೆ, ನಮ್ಮ ಜೊತೆ ಓದುತ್ತಿದ್ದ ಕೆಳಜಾತಿಯ ಹುಡುಗರು ಬರುತ್ತಿದ್ದುದ್ದನ್ನು ಮೊದಲೇ ಹೇಳಿದ್ದೇನೆ. ತಹಸೀಲ್ದಾರರಾಗಿದ್ದ ನಮ್ಮ ಚಿಕ್ಕಪ್ಪನ ಜೊತೆಯಲ್ಲಿ ಬರುತ್ತಿದ್ದ ಅನೇಕ ಜನ ಕೆಳಜಾತಿಯವರೂ ನಮ್ಮ ಮನೆಯ ಒಳಗೆ ಬಂದು ಹೋಗುತ್ತಿದ್ದರು. ಹೀಗಾಗಿ ಅಷ್ಟೊಂದು ಕಟ್ಟುನಿಟ್ಟಿನ ಅಸ್ಪೃಷ್ಯತೆ ನಮ್ಮ ಮನೆಯಲ್ಲಿಲ್ಲ. ಆದರೆ ನಮ್ಮ ತೋಟದಲ್ಲಿ ಕೆಲಸಕ್ಕೆ ಬರುತ್ತಿದ್ದವರು ಮಾತ್ರ, ನಾವಾಗೇ ಕರೆದರೂ ಒಳಗೆ ಬರಲು ನಿರಾಕರಿಸುತ್ತಿದ್ದರು. ಆಗ ಅವರು ಕೊಡುತ್ತಿದ್ದುದ್ದು ಎರಡು ಕಾರಣಗಳನ್ನು. ಒಂದು, ‘ನಾವೇಕೆ ನಿಮ್ಮ ಜಾತಿಯನ್ನು ಕೆಡಿಸಬೇಕು?!’ ಎಂಬುದು. ಎರಡನೆಯದು, ‘ನಾವು ಒಳಗೆ ಬಂದರೆ, ನಮಗೇ ಒಳ್ಳೆಯದಾಗುವುದಿಲ್ಲ!’ ಎಂಬುದು.

ಯಾತ್ರೆಗೆ ಹೊರಡುವ ಹಿಂದಿನ ದಿನ ಕರೆದವರ ಮನೆಗಳಿಗೆ ಹೋಗಿ, ಕಾಣಿಕೆ ಪಡೆದುಕೊಂಡು ಬರುವುದು ಈ ಗುಂಪಿನವರ ವಿಶೇಷ. ಶಬರಿಮಲೆಗೆ ಹೋಗದವರು ತೆಂಗಿನಕಾಯಿ, ಕಾಣಿಕೆ ಎಂದು ತಮ್ಮ ತಮ್ಮ ಕೈಲಾದಷ್ಟನ್ನು ಹೋಗುವವರ ಕೈಯಲ್ಲಿ ಕಳುಹಿಸುತ್ತಿದ್ದರು. ಗುಂಪಿನಲ್ಲಿ ಬರುವ ‘ಸ್ವಾಮಿ’ಗಳನ್ನು, ಜಾತಿಯ ಕಾರಣದಿಂದ ಒಳಗೆ ಬರಬೇಡಿರೆಂದು ಹೇಳುವಂತಿಲ್ಲ. ಆ ಹಳ್ಳಿಯ ಜನತೆಯೂ ಆಗ ಅದನ್ನು ಮಹಾಪರಾಧವೆಂದು ಪರಿಗಣಿಸದೆ, ಎಲ್ಲಾ ಜಾತಿಯವರನ್ನೂ ಒಳಗೆ ಸೇರಿಸಿ, ಸತ್ಕರಿಸುತ್ತಿದ್ದರು. ಯಾತ್ರೆ ಮುಗಿಸಿ ಬಂದ ಮೇಲೆ ಯಥಾಪ್ರಕಾರ ಅಸ್ಪೃಷ್ಯತೆ ಮತ್ತೆ ಜಾರಿಗೆ ಬಂದಿದ್ದು ಮಾತ್ರ ದುರಾದೃಷ್ಟಕರ. ಇನ್ನೊಂದು ಆಘಾತಕಾರಿ ವಿಷಯವೆಂದರೆ, ‘ಮಾಲೆ ಧರಿಸಿಯಾದರೂ ಮೇಲ್ಜಾತಿಯವರ ಮನೆಯೊಳಗೆಲ್ಲಾ ಓಡಾಡಿ ಬಂದೆ’ ಎಂದು ಕೆಳಜಾತಿಯ ಹುಡುಗನೊಬ್ಬ ಹೇಳಿದ್ದು, ಮೇಲ್ಜಾತಿಯವರನ್ನು ಕೆರಳಿಸಿಬಿಟ್ಟಿತ್ತು. ಆದರೆ ಈ ಕಾರಣದಿಂದಾಗಿ ಯಾವುದೇ ಅಹಿತಕರ ಘಟನೆ ನಡೆಯದಿದ್ದುದ್ದು ಮಾತ್ರ ಒಳ್ಳೆಯ ಬೆಳವಣಿಗೆಯಾಗಿತ್ತು. ಹಾಗೆ ಜಂಭ ಕೊಚ್ಚಿಕೊಂಡವನು, ಆಗಾಗ ನಮ್ಮ ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದವನೂ, ನಾವು ಒಳಗೆ ಬರಬಹುದೆಂದು ಹೇಳಿದರೂ ಬರದೆ, ಮೊದಲು ಹೇಳಿದ ಎರಡು ಕಾರಣಗಳನ್ನು ಕೊಟ್ಟವರಲ್ಲಿ ಒಬ್ಬನಾಗಿದ್ದ!

10 comments:

PARAANJAPE K.N. said...

ಸತ್ಯನಾರಾಯಣಸ್ವಾಮಿಗಳೇ, ನಿಮ್ಮ "ಸ್ವಾಮಿಯೇ ಶರಣ೦ ಅಯ್ಯಪ್ಪ" ಕಥಾನಕ ಓದಿ ನಗುಬ೦ತು. ನಮ್ಮುರಲ್ಲೊಬ್ಬ ಸ್ವಾಮಿ ಅ೦ತ ಹೆಸರಿನವನಿದ್ದ, ಅವ ಶಬರಿಮಲೆಗೆ ಹೋಗಲು ಮಾಲೆ ಹಾಕಿದ್ದ, ಅವನ ಹೆಸರು "ಸ್ವಾಮಿಸ್ವಾಮಿ" ಆಗಿತ್ತು. ಇನ್ನು ಅವರಲ್ಲೇ ಹದಿನೆ೦ಟು ಸಲ ಹೋಗಿ ಬ೦ದವನು ಗುರುಸ್ವಾಮಿ ಆಗಿರುತಾನೆ. ಅವನ ಮೂಲ ಹೆಸರು ಗುರುಸ್ವಾಮಿ ಆಗಿದ್ರೆ ಮತ್ತದೇ ಪುನರಾವರ್ತನೆ. ಹೊಟೇಲುಗಳಲ್ಲಿ ಪ್ಲೇಟಿನ ಮೇಲೆ ಬಾಳೆಲೆ ತು೦ಡು ಹಾಸಿ ಇಡ್ಲಿ ವಡೆ ತಿನ್ನುವ, ಮರೆಯಲ್ಲಿ ನಿ೦ತು ಗುಟ್ಕಾ ಸಿಗರೇಟು ಸೇದುವ, ತೋರಿಕೆಗಾಗಿ "ಸ್ವಾಮಿಯೇ ಶರಣಮಯ್ಯಪ್ಪೋ" ಎ೦ದು ಬೊಬ್ಬಿಡುವ ಖೊಟ್ಟಿ ಭಕ್ತರನ್ನು ಕ೦ಡರೆ ನನಗೇಕೋ ರೇಜಿಗೆ. ಲೇಖನ ಚೆನ್ನಾಗಿದೆ.

ಸವಿಗನಸು said...

ಸತ್ಯ ಸ್ವಾಮಿ,
ಆಸಾಮಿಗಳ ಬಗೆ ಚೆನ್ನಾಗಿ ಬರಿದಿದ್ದೀರಾ...
ಸ್ವಾಮಿಯೇ ಶರಣ೦ ಅಯ್ಯಪ್ಪ....

sunaath said...

ಅಯಪ್ಪನ ಭಕ್ತರ ಸ್ವರೂಪದರ್ಶನವನ್ನು ಚೆನ್ನಾಗಿ ಮಾಡಿಸಿದ್ದೀರಿ. ಓದಿ ನನಗೆ ಆಶ್ಚರ್ಯವಾಯಿತು. ಜೊತೆಗೇ ನಗುವೂ ಬಂದಿತು.

ಸಿಮೆಂಟು ಮರಳಿನ ಮಧ್ಯೆ said...

ಸತ್ಯನಾರಾಯಣರೆ...

ಹೆಂಡತಿ ಸ್ವಾಮಿ, ಮಕ್ಕಳು ಸ್ವಾಮಿ... ಹುಡುಗ ಸ್ವಾಮಿ...
ಇವೆಲ್ಲ ಸಿಕ್ಕಾಪಟ್ಟೆ ನಗು ತರಿಸಿತು...
ಮಾಲೆ ಧರಿಸಿ ಒಳ್ಳೆಯವರಾದ ಉದಾಹರಣೆಯೂ ಇದೆ...

ನಿಮ್ಮ ಶೈಲಿ ಚೆನ್ನಾಗಿದೆ...
ಕಣ್ಣ ಮುಂದೆ ಘಟನೆಯನ್ನು ನಿಲ್ಲಿಸಿಬಿಡುತ್ತೀರಿ...

ಸುಂದರ ಬರಹಕ್ಕಾಗಿ ವಂದನೆಗಳು...

aak said...

ಲಘು ದಾಟಿಯ ಬರಹ ಖುಷಿ ಕೊಟ್ಟಿತು.
ಪಾತ್ರೆಸ್ವಾಮಿ, ಸೌಟುಸ್ವಾಮಿ, ತರಕಾರಿಸ್ವಾಮಿ, ಅಕ್ಕಿಸ್ವಾಮಿ, ಸಾರುಸ್ವಾಮಿ, ಪಾಯಸಸ್ವಾಮಿ..... ಹೀಗೆ!
ಇದನ್ನು ಓದಿ ನಗೆ ತಡೆಯವುದೇ ಕಷ್ಟವಾಯಿತು.

ಕ್ಷಣ... ಚಿಂತನೆ... bhchandru said...

ಸತ್ಯನಾರಾಯಣ ಸರ್‍, ಲೇಖನ ಓದಿದಾಗ ನಾವೂ ಸಹ ಶಾಲೆಯಲ್ಲಿದ್ದಾಗ `ಸ್ವಾಮಿಯೇ ಶರಣಂ ಅಯ್ಯಪ್ಪ' ಎನ್ನುತ್ತಿದ್ದೆವು. ಅವರು ಅದಕ್ಕೆ ಶರಣಂ ಅಯ್ಯಪ್ಪ ಎಂದು ಉತ್ತರಿಸುತ್ತಿದ್ದರು. ಕೆಲವರು ಕಟ್ಟನಿಟ್ಟಿನ ನಿಷ್ಠೆ ಮತ್ತು ವ್ರತದಂತೆ ನಡೆದುಕೊಳ್ಳುತ್ತಿದ್ದರು. ಕೆಲವರು ಕದ್ದು ಮುಚ್ಚಿ ಬೀಡಿ, ಸಿಗರೇಟು, ತಂಬಾಕು ಇವೆಲ್ಲಕ್ಕೆ ಶರಣಾಗುತ್ತಿದ್ದರು.

ಈಗೊಂದು ಹತ್ತು ವರ್ಷಗಳ ಹಿಂದೆ `ಅಯ್ಯಪ್ಪ ಸ್ವಾಮಿ ಭಕ್ತರ ವೇಷ' ಹಾಕಿಕೊಂಡು ಸಹೋದ್ಯೋಗಿಯೊಬ್ಬರನ್ನು ಚಾಕು ತೋರಿಸಿ ಹಣ, ಸರವನ್ನೆಲ್ಲ ದೋಚಿದ್ದರು.

೧೯೮೦ ರಲ್ಲಿದ್ದ ಇಂತಹ (ನೀವು ವಿವರಿಸಿದಂತಹ) ಸಂಗತಿಗಳಿದ್ದರೂ ನಂತರದ ದಿನಗಳಲ್ಲಿ ಅವೆಲ್ಲ ಆಷಾಢಭೂತಿತನವಾಗುತ್ತಾ ಅಯ್ಯಪ್ಪ ಭಕ್ತರನ್ನು ಕಂಡರೇ ಏನೇನೋ ಆಲೋಚನೆಗಳು ಬರುವಂತಾಗುತ್ತದೆ. ಅವರವರ ನಿಷ್ಠೆ, ಭಕ್ತಿ ಅವರವರಿಗೆ ಸೇರಿದ್ದು ಎನಬಹುದು.

ಹಳೆಯ ನೆನಪುಗಳೊಡನೆ ಮಿಳಿತವಾದ ಈ ಲೇಖನ ಚೆನ್ನಾಗಿದೆ.

Prashanth Arasikere said...

sir,

Nimma ayyappa swami kathe odi..sakat nagu bartha ide..mattu..achara..na yav reethi kedustha idare..annodikke..idu ondu sakshi..ella ayappana mahime!!!!

ಬಾಲು said...

ಸತ್ಯ ಸ್ವಾಮಿಗಳೆ,

ನಿಮ್ಮ ಲೆಖನ ಸ್ವಾಮಿ ಇಷ್ಟ ಅಯಿತು ಸ್ವಾಮಿ.

ಸ್ವಾಮಿಯೆ ಶರಣ್೦ ಅಯ್ಯಪ್ಪ...

Srushti said...

ಸತ್ಯಣ್ಣ ಸ್ವಾಮಿ.
ನಿಮ್ಮ ಲೇಖನ ಒದಿದ ಮೇಲೆ ನಮಗೂ ನಮ್ಮ ಊರಿನ ಸ್ವಾಮಿಗಳ ನೆನಪು ನಮ್ಮ ಮುಂದೆ ಬಂತು.ನನಗೆ ನಗು ತಡೆಯಲಾಗುತ್ತಿಲ್ಲ.ಕುರಿ ಸ್ವಾಮಿ.ಅವ್ವ ಸ್ವಾಮಿ. ಮಕ್ಕಳು ಸ್ವಮಿ ನಿಜಕ್ಕು ಅದ್ಬುತ.
ಸ್ವಾಮಿಗಳ ಬಗ್ಗೆ ಚನ್ನಾಗಿ ಬರೆದಿದ್ದೀರಿ ಸ್ವಾಮಿ.........

shivu said...

ಸರ್,

ಅಯ್ಯಪ್ಪ ಮಾಲೆ ಕತೆ ಓದಿ ತುಂಬಾ ನಗು ಬಂತು. ಎಲ್ಲರನ್ನೂ ಸ್ವಾಮಿ ಅಂತ ಕೂಗುವುದು ಮತ್ತೆ ಮಾಲೆ ತೆಗೆದ ಮೇಲೆ ಎಂದಿನಂತೆ ಕರೆಯುವವರನ್ನು ನೋಡಿದಾಗ ನನಗೆ ತಮಾಷೆಯೆನಿಸುತ್ತದೆ. ತಪ್ಪೊಪ್ಪಿಗೆ ಹರಕೆ ಕಟ್ಟಿದವನ ಕತೆ ನಗು ಬಂತು.
ನಿಮ್ಮ ಹೈಸ್ಕೂಲ್ ದಿನಗಳಲ್ಲಿ ಇನ್ನು ಎಂಥೆಂಥ ಪ್ರಸಂಗಗಳಿವೆಯೋ...ಒಟ್ಟಾರೆ ಓದಲಂತೂ ಬಲು ಖುಷಿ ಕೊಡುತ್ತದೆ.