Friday, September 25, 2009

ಸರಸ್ವತಿಯ ಬಗ್ಗೆ ಒಂದಿಷ್ಟು ಮಾತು... ಭಾಗ-2

‘ಸಂವಹನ’ ಎಂಬುದು ಆಧುನಿಕ ಜಗತ್ತಿನ ಅತ್ಯಗತ್ಯ ಚಟುವಟಿಕೆಯಾಗಿದೆ. ಸಂಕೇತಗಳು, ನಿರ್ದಿಷ್ಟ ಶಬ್ದಗಳು ಸಂವಹನಕ್ರಿಯೆಗೆ ಆಧಾರವಾಗಿದ್ದ ಕಾಲದಿಂದಲೂ ನಿರಂತರ ಬದಲಾವಣೆಯೊಂದಿಗೆ, ಈ ಯುಗವನ್ನು ‘ಸಂವಹನಯುಗ’ವೆಂದು ಪ್ರಭಾವಿಸುವಷ್ಟರ ಮಟ್ಟಿಗೆ ಅದಕ್ಕೆ ವ್ಯಾಪ್ತಿ ಮತ್ತು ಪ್ರಾಮುಖ್ಯ ಉಂಟಾಗಿದೆ. ಸಂವಹನ ಕ್ರಿಯೆಗೆ ಅತ್ಯಗತ್ಯವಾಗಿದ್ದ ಶಬ್ದಗಳೇ ಒಂದು ನಿಶ್ಚಿತ ಧ್ವನಿರೂಪವನ್ನು ತಳೆಯುವುದರೊಂದಿಗೆ ಭಾಷೆಯ ಉಗಮಕ್ಕೆ ನಾಂದಿಯಾಯಿತು. ಮಾನವನ ಮೂಲಭೂತ ಅಗತ್ಯಗಳಲ್ಲಿ ಒಂದಾದ ಭಾಷೆಯ ಉಗಮಕ್ಕೆ ಕಾರಣೀಭೂತವಾದ ಹಾಗೂ ಸಂವಹನ ಕ್ರಿಯೆಗೆ ಅತ್ಯಗತ್ಯವಾದ ವಾಕ್ ಅಥವಾ ಮಾತು, ಭಾರತೀಯ ಸಂಸ್ಕೃತಿಯಲ್ಲಿ ದೈವತ್ವಕ್ಕೇರಿತು. ವಾಕ್‌ನ ಉಪಯೋಗ, ಪ್ರಭಾವ, ಆಯತಪ್ಪಿದರೆ ಅದರಿಂದಾಗುವ ಅನಾಹುತ....... ಇವುಗಳಿಂದಾಗಿ ಮಾತಿಗೆ ಮಹತ್ವದ ಸ್ಥಾನ ಲಭ್ಯವಾಗಿದೆ.
ಇಂತಹ ಮಾತು ದೈವತ್ವಕ್ಕೇರಿದಾಗ, ವಾಕ್ಕಿಗೇ ಒಂದು ದೇವತೆಯೂ ಸೃಷ್ಟಿಯಾಗಬೇಕಾಗುತ್ತದೆ. ಅಂತಹ ವಾಗ್ದೇವಿಯ ಸೃಷ್ಟಿ ಭಾರತೀಯ ಸಂಸ್ಕೃತಿಯಲ್ಲಿ ವಿಭಿನ್ನವಾಗಿಯೇ ಇದೆ. ಜನೋಪಯೋಗಿಯಾದ ಸರಸ್ವತೀ ನದಿಯು ದೈವತ್ವಕ್ಕೇರಿದ ಪರಿಣಾಮವಾಗಿ ನದಿದೇವತೆಯಾಗಿ ಆರಾಧನೆಗೊಳಗಾಗುತ್ತಾಳೆ. ತನ್ನ ಹರಿಯುವ ಪಾತ್ರವನ್ನು ಬದಲಿಸುವ ನದಿಯಂತೆ, ನದಿಯಾಗಿದ್ದ ಸರಸ್ವತಿಯು ತನ್ನ ಪಾತ್ರವನ್ನು ಬದಲಿಸಿ ವಾಗ್ದೇವಿಯಾಗಿದ್ದು, ನಂತರದ ದಿನಗಳಲ್ಲಿ ವಿದ್ಯಾದೇವತೆ, ಸಾಹಿತ್ಯದೇವತೆ, ಸಕಲಕಲಾದೇವತೆಯಾಗಿ ಭಾರತೀಯರ ಜನಮಾನಸದಲ್ಲಿ ನೆಲೆನಿಂತದ್ದು ಒಂದು ಮಹಾಕಥನ. ಹಾಗೊಂದು ವೇಳೆ ಸರಸ್ವತಿಯು ತನ್ನ ಪಾತ್ರವನ್ನು ಬದಲಿಸದಿದ್ದರೆ, (ಬೇರೊಂದು ದೇವತೆ ವಾಗ್ದೇವಿಪಟ್ಟವನ್ನು ಅಲಂಕರಿಸುತ್ತಿದ್ದುದು ನಿಜವಾದರೂ,) ಮರಳುಗಾಡಿನಲ್ಲಿ ಕಣ್ಮರೆಯಾದ ಸರಸ್ವತೀ ನದಿಯಂತೆ, ಭಾರತೀಯರ ಮನಸ್ಸಿನಿಂದ ಈಗಾಗಲೇ ಕಾಣೆಯಾಗಿರುವ ವೇದೋಕ್ತವಾದ ಹಲವಾರು ದೇವತೆಗಳಂತೆ ಸರಸ್ವತಿಯೂ ಕಣ್ಮರೆಯಾಗಬೇಕಾಗುತ್ತಿತ್ತು. ಸರಸ್ವತೀ ನದಿಯು ಮಾತ್ರ ತನ್ನ ಪಾತ್ರವನ್ನು ಬದಲಿಸದೆ ಮರಳುಗಾಡಿನಲ್ಲಿ ಇಂಗಿಹೆಗಿದ್ದು ಮಹಾನಾಗರಿಕತೆಯೊಂದರ ದುರಂತವೇ ಸರಿ.
‘ಸರಸ್ವತಿ’ ಎಂದರೆ ಈಗ ಕಣ್ಣಮುಂದೆ ನಿಲ್ಲುವುದು, ನಾವು ನೋಡಿರುವ ಯಾವುದೋ ಶಿಲ್ಪದ ಇಲ್ಲವೇ ಚಿತ್ರಪಟದ ಇಲ್ಲವೇ ಸಾಹಿತ್ಯವರ್ಣನೆಯಿಂದ ನಮ್ಮ ಮನಸ್ಸಿನಲ್ಲಿ ರೂಪಗೊಂಡ ಸುಂದರ ‘ಸ್ತ್ರೀ’ ದೇವತೆಯೊಬ್ಬಳ ಚಿತ್ರ. ಅರಳಿದ ಬೆಳ್ದಾವರೆಯ ಮೇಲೆ ವೀಣೆ-ಪುಸ್ತಕ-ಅಕ್ಷಮಾಲೆಗಳನ್ನು ಹಿಡಿದು ಶುಭ್ರವರ್ಣದ, ಪ್ರಸನ್ನವದನಳಾದ ಚತುರ್ಭುಜ ದೇವತೆಯ ಚಿತ್ರ. ಹತ್ತಿರದಲ್ಲಿ ಹಂಸ, ಕೆಲವೊಮ್ಮೆ ನವಿಲು ಇರುತ್ತದೆ. ಆದರೆ ಇಂದು ನಾವು ಕಾಣುತ್ತಿರುವ ಈ ಚಿತ್ರ ರೂಪುಗೊಂಡಿದ್ದಕ್ಕೆ ಸುಮಾರು ನಾಲ್ಕುಸಾವಿರ ವರ್ಷಗಳ ಇತಿಹಾಸವಿದೆ ಎಂದು ಅರಿತಾಗ ಆಶ್ಚರ್ಯ, ಸಂತೋಷ, ಹೆಮ್ಮೆ ಒಟ್ಟಿಗೇ ಉಂಟಾಗುತ್ತದೆ. ಸರಸ್ವತಿಯು ನಡೆದು ಬಂದ ನಾಲ್ಕುಸಾವಿರ ವರ್ಷಗಳ ಹಾದಿಯ ಅವಲೋಕನವೇ ಒಂದು ಚೇತೋಹಾರಿ ಅನುಭವ.

ಆಸೀನ ಚತುರ್ಭುಜ ಸರಸ್ವತಿ - ಬಗ್ಗವಳ್ಳಿ
ಸಂಸ್ಕೃತ ಕವಿಗಳು ತಮ್ಮ ಕಾವ್ಯಗಳಲ್ಲಿ ಸರಸ್ವತಿಯನ್ನು ನದಿಯಾಗಿ ಸ್ತುತಿಸಿದ್ದರೂ ವಾಗ್ದೇವತೆಯಾಗಿ ಹೆಚ್ಚು ಪ್ರಚಲಿತದಲ್ಲಿದ್ದಾಳೆ. ಶಬ್ದ ಮತ್ತು ಅರ್ಥಗಳಿಗೆ ಅಧಿದೇವತೆ. ‘ಶಬ್ದಾರ್ಥೌಸಹಿತೌಕಾವ್ಯಂ’ ಎಂಬಂತೆ ಕಾವ್ಯದ ಅಧಿದೇವತೆಯೂ ಹೌದು. ಅಕ್ಷರ, ಭಾಷೆ, ವಿದ್ಯೆ, ವಿಜ್ಞಾನ, ಕಲೆ, ಸಾಹಿತ್ಯ, ಸಂಗೀತ ಮೊದಲಾದವಕ್ಕೂ ಸರಸ್ವತೀ ಅಧಿದೇವತೆ. ಸರಸ್ವತಿಯ ಕಟಾಕ್ಷವಿಲ್ಲದವನು ಪಶುವಿಗೆ ಸಮಾನ. ಸರಸ್ವತಿಯು ಬ್ರಹ್ಮನಿಗೆ ಮಗಳು. ಆದರೆ ತಪಸ್ಸು ಮಾಡಿ ಅವನಿಂದ ಕಾವ್ಯಪುರುಷ ಎಂಬ ಮಗನನ್ನು ಪಡೆಯುತ್ತಾಳೆ. ಅವನನ್ನು ಗೌರಿಯ ಮಾನಸಪುತ್ರಿ ಕಾವ್ಯವಿದ್ಯಾವಧೂ ವರಿಸುತ್ತಾಳೆ. ಪುರಾಣಗಳ ಕಲ್ಪನೆಯಂತೆ ಆಕೆ ದೇವಲೋಕದಿಂದ ಶಾಪವಿಮೋಚನೆಗಾಗಿ ಭೂಲೋಕಕ್ಕೆ ಬರುತ್ತಾಳೆ. ಇಲ್ಲಿಯ ಋಷಿ ದಧೀಚನಿಂದ ಸಾರಸ್ವತ ಎಂಬ ಮಗನನ್ನು ಪಡೆದು ಆತನನ್ನು ವೇದಪಂಡಿತನನ್ನಾಗಿ ಮಾಡುತ್ತಾಳೆ. ಅವಳು ವೀಣಾವಾದಕಿ, ಸಂಗೀತ ಶಿಕ್ಷಕಿ, ಮಹಾ ಕವಯಿತ್ರಿ ಮತ್ತು ನ್ಯಾಯಧೀಶೆ. ಅಭಿನವಬ್ರಹ್ಮರಾದ ಕವಿಗಳ ಮುಖದಲ್ಲಿ ಸದಾ ನೆಲೆಸಿರುತ್ತಾಳೆ. ‘ಸರ್ವಭಾಷಾಸರಸ್ವತೀ’ ಎಂಬುದು ಮೀಮಾಂಸಕರ ಮತ್ತು ಕವಿಗಳ ಅಭಿಮತ. ಕಾಶ್ಮೀರದ ಅಧಿದೇವತೆಯಾಗಿರುವ ಶಾರದೆ, ಕಾಶ್ಮೀರದಲ್ಲಿ ಹಂಸರೂಪಿಯಾಗಿ ನೆಲೆನಿಂತಿದ್ದಾಳೆ ಎಂಬುದು ಕಾಶ್ಮೀರಿಮೂಲದ ಕವಿಗಳ ನಂಬಿಕೆ. ಹಂಸ ಅವಳ ವಾಹನ. ಸರ್ವಶುಕ್ಲೆಯಾದ ಆಕೆಯ ವಸ್ತ್ರಾಭರಣಗಳೂ ಶ್ವೇತವರ್ಣದವುಗಳು. ಆದಿಜಿನರ ಮುಖದಿಂದುಯಿಸಿದ ಸರಸ್ವತಿಯು ಸರ್ವಲೋಕವನ್ನೂ ವ್ಯಾಪಿಸಿದಳು ಎಂಬುದು ಜೈನಕವಿಗಳ ಅಭಿಪ್ರಾಯ.

ಸ್ಥಾನಕ ಚತುರಭುಜ ಸರಸ್ವತಿ ಹಳೇಬೀಡು
ಕನ್ನಡದಲ್ಲಿ ಜೈನ ವೈದಿಕ ವೀರಶೈವ ಪರಂಪರೆಯ ಕವಿಗಳು ತಮ್ಮ ತಮ್ಮ ದರ್ಶನಗಳಿಗನುಗುಣವಾಗಿ ಸರಸ್ವತಿಯನ್ನು ಸ್ತುತಿಸಿದ್ದಾರೆ. ಎಲ್ಲಾ ಧರ್ಮಗಳನ್ನು ಮೀರಿದ ಮಾನವಧರ್ಮವೊಂದಿದೆ. ಆ ಹಿನ್ನೆಲೆಯಲ್ಲೂ ಸರಸ್ವತಿಯನ್ನು ಪ್ರತಿಭಾವಂತರಾದ ಕವಿಗಳು ಕಂಡಿದ್ದಾರೆ. ಸರಸ್ವತಿಯು ವಾಗ್ದೇವತೆ, ಕಾವ್ಯದೇವತೆ, ಜ್ಞಾನದೇವತೆ ಎಂಬ ಪ್ರಾರಂಭದ ಸೀಮಿತ ಚೌಕಟ್ಟನ್ನು ಮೀರಿ, ಸಂಸಾರಸಂಭಾವಿತಾತ್ಮೆ, ಕಾಮಸಂಜನನಿ, ಪ್ರೇಮಭೈರವಿ, ಶೃಂಗಾರಮೂರ್ತಿ, ರಸರಾಣಿ, ರಸಸರಸ್ವತಿ, ಕಲಾಸುಂದರಿ, ವಾಕ್ಸುಂದರಿ, ನುಡಿರಾಣಿ, ವಿಜ್ಞಾನನೇತ್ರಿ, ಸರ್ವಪಾರದರ್ಶಿಕೆ ಎಂದು ಮೊದಲಾದ ವಿಶೇಷಣಗಳನ್ನು ಧರಿಸಿ ಸರಸ್ವತಿಯು ಬೆಳೆದಿದ್ದಾಳೆ. ಕಾವ್ಯವಾಸಿಯಾಗಿದ್ದ ಸರಸ್ವತಿಯು ವಿದ್ಯಾಲಯವಾಸಿಯೂ, ವಿದ್ಯಾಲಯೆಯೂ, ಕವಿದೇಹವಾಸಿಯೂ ಆಗಿದ್ದಾಳೆ. ಕಾವ್ಯರಂಗಸ್ಥಳದಲ್ಲಿ, ಕವಿಗಳ ನಾಲಗೆಯಲ್ಲಿ ಮಾತ್ರ ನಟಿಸುತ್ತಿದ್ದ ಸರಸ್ವತಿಯು ಕವಿಮನೋಮಂದಿರದಲ್ಲಿ, ಕವಿಯಾತ್ಮಜಿಹ್ವೆಯಲ್ಲಿ ನರ್ತಿಸಿದ್ದಾಳೆ. ಹಂಸವಾಹನೆ ಮಾತ್ರವಲ್ಲದೆ, ನವಿಲುವಾಹನೆಯಾಗಿಯೂ ದರ್ಶನವಿತ್ತಿದ್ದಾಳೆ. ಸರ್ವಭಾಷಾಮಯಿಯೂ, ವಿಶ್ವಮಾತೆಯೂ ಆಗಿ ಸರಸ್ವತಿಯ ದರ್ಶನ ಬೆಳೆದಿದೆ. ಬಹುಶಃ, ಬೇರಾವ ಭಾಷೆಗಳಲ್ಲೂ ಸಿಗದಿದ್ದ ‘ಅನಾದಿಕವಿ’ಯ ‘ಪಟ್ಟಗೌರವ’ ಕನ್ನಡ ಸಾಹಿತ್ಯದಲ್ಲಿ ಸರಸ್ವತಿಗೆ ಸಿಕ್ಕಿದೆ.

ತ್ರಿಭಂಗಿ ಚತುರ್ಭುಜ ಸರಸ್ವತಿ ಬೇಲೂರು
ಜನಪದ ಸಾಹಿತ್ಯದಲ್ಲಿ ವಾಗ್ದೇವತೆಯ ಪರಿಕಲ್ಪನೆ ಇಲ್ಲದಿದ್ದರೂ ವಾಕ್ ಅಂದರೆ ಮಾತಿನ ಮಹತ್ವ ಅಭಿವ್ಯಕ್ತಗೊಂಡಿದೆ. ಶಾರದೆ ಮತ್ತು ಸರಸ್ವತಿ ಎಂಬವುಗಳು, ಒಂದೇ ದೇವತೆಯ ಎರಡು ಹೆಸರುಗಳಷ್ಟೆ; ಸರಸ್ವತಿ ಎಂಬುದಕ್ಕೆ ಸರಸೋತಿ, ಸರಸಾತಿ, ಸರಸತಿ ಮೊದಲಾದ ಪ್ರಯೋಗಗಳಿವೆ. ರಾಗಿಕಲ್ಲನ್ನೇ ಸರಸ್ವತಿಯೆಂದು ಪೂಜಿಸುವ ಪರಿಕಲ್ಪನೆ ನವೀನವಾಗಿದೆ. ಅಲ್ಲದೆ ಬೀಸುವ ಕ್ರಿಯೆಯಲ್ಲಿ ಸರಸ್ವತಿಯು (ಹಾಡಿನ ರೂಪದಲ್ಲಿ) ಜತೆಯಾಗಿ ಇರುತ್ತಾಳೆ, ಬೀಸುವುದರಿಂದ ಆಗುವ ಆಯಾಸವನ್ನು ಸರಸ್ವತಿಯು (ಹಾಡು) ಕಳೆಯುತ್ತಾಳೆ ಎಂಬ ಭಾವನೆ ವ್ಯಕ್ತವಾಗಿದೆ. ಸರಸ್ವತಿಯು ಬ್ರಹ್ಮನ ಮಗಳೇ? ಹೆಂಡತಿಯೇ? ಎಂಬ ಯಾವುದೇ ದ್ವಂದ್ವಗಳಿಲ್ಲ. ಜನಪದರ ದೃಷ್ಟಿಯಲ್ಲಿ ಸರಸ್ವತಿಯು ಬ್ರಹ್ಮನ ಹೆಂಡತಿ ಮಾತ್ರ. ಸರಸ್ವತಿಯು ಮಾತು, ಅಕ್ಷರ, ವಿದ್ಯೆ ಮತ್ತು ಹಾಡುಗಳನ್ನು ಕಲಿಸುವ ಅಧ್ಯಾಪಿಕೆ; ದೇವತೆ. ಸರಸ್ವತಿಯು ದೇವತೆಯಾಗಿದ್ದರೂ, ಶಿಷ್ಟ ಸಂಪ್ರದಾಯದಂತೆ ಬೇರೊಂದು ಲೋಕದವಳಲ್ಲ. ತಮ್ಮೊಂದಿಗೇ ಬದುಕುತ್ತಿರುವ, ತಮ್ಮಂತೆಯೇ ಕೆಲಸ ಮಾಡುತ್ತಿರುವ ಆದರೆ ತಮಗೆ ಹಾಡು ಕಲಿಸುವ ಸಹವಾಸಿ ಎಂದೇ ಪರಿಭಾವಿಸಲಾಗಿದೆ. ಮಾತು, ವಿದ್ಯೆ, ಹಾಡು ಇವಿಷ್ಟೇ ಅಲ್ಲದೆ ಒಟ್ಟಾರೆಯಾಗಿ ಕಲಿಯುವ ಇಡೀ ಕ್ರಿಯೆಯನ್ನೇ ಸರಸ್ವತಿ ಎಂದು ಪರಿಭಾವಿಸಿರುವುದನ್ನು ಕಾಣಬಹುದು.

ನೃತ್ಯ ದಶಭುಜ ಸರಸ್ವತಿ ಹಳೇಬೀಡು
ಚಿತ್ರಕಲೆಯಲ್ಲಿ ಸರಸ್ವತಿಯನ್ನು ವಿದ್ಯಾದೇವತೆಯ ಸ್ವರೂಪದಲ್ಲಿ ಮಾತ್ರ ಅಭಿವ್ಯಕ್ತಿಸಲಾಗಿದೆ. ವಸ್ತ್ರಾಭರಣಗಳಲ್ಲಿ ವೈವಿಧ್ಯಯಿರುವುದಿಲ್ಲ. ಭಾರತೀಯ ಸ್ತ್ರೀಯರು ಪಾರಂಪರಿಕ ತೊಡುಗೆಯಾದ ಸೀರೆ, ರವಿಕೆ ಸರಸ್ವತಿಯ ಚಿತ್ರಗಳಲ್ಲಿಯೂ ಕಂಡು ಬರುತ್ತದೆ. ಬಹುತೇಕ ಆಧುನಿಕ ಸರಸ್ವತಿಯ ಚಿತ್ರಗಳಿಗೆ ರವಿವರ್ಮನ ಸರಸ್ವತಿಯ ಚಿತ್ರವೇ ಮೂಲ ಆಕರವಾಗಿದೆ. ಮೈಸೂರು ಮತ್ತು ತಂಜಾವೂರು ಶೈಲಿಯ ಸರಸ್ವತಿಯ ಚಿತ್ರಗಳು ಮಂಟಪಗಳಲ್ಲಿರುವಂತೆ ಸಂಯೋಜಿತವಾಗಿದ್ದರೆ, ಆಧುನಿಕ ಚಿತ್ರಗಳೆಲ್ಲವೂ ಪ್ರಕೃತಿಯ ನಡುವಿನಲ್ಲಿರುವಂತೆ ಚಿತ್ರಿತವಾಗಿವೆ. ಕೆಲವು ನವ್ಯವೆನ್ನಬಹುದಾದ ರಚನೆಗಳಲ್ಲಿ ರೇಖೆಗಳೇ ಪ್ರಧಾನವಾಗಿರುತ್ತವೆ. ಚಿತ್ರಕಲೆಯಲ್ಲಿ ವಿದ್ಯಾದೇವತೆಯಾಗಿ ಮಾತ್ರ ಚಿತ್ರಿತಳಾಗಿದ್ದಾಳೆ. ಕೆಲವೇ ಕೆಲವು ರೇಖೆಗಳನ್ನು ಬಳಸಿ, ಸರಸ್ವತಿಯನ್ನು ವಿದ್ಯಾದೇವತೆಯನ್ನಾಗಿಯೂ, ನದಿದೇವತೆಯನ್ನಾಗಿಯೂ ಬಿಂಬಿಸುವಲ್ಲಿ ಹುಸೇನರ ಚಿತ್ರ ಯಶಸ್ವಿಯಾಗಿದೆ. ಇನ್ನೊಬ್ಬ ಕಲಾವಿದ ರುದ್ರಕುಮಾರ್ ಝಾ ಅವರ ಚಿತ್ರದಲ್ಲೂ ಸರಸ್ವತಿ ನಗ್ನವಾಗಿಯೇ ಇದ್ದಾಳೆ. ಪ್ರಾಚೀನ ಶಿಲ್ಪಗಳಲ್ಲು ನಗ್ನತೆಯಿದೆ; ಆದರೆ ಅಶ್ಲೀಲತೆಯಿಲ್ಲ ! ಆದರೆ ಹುಸೇನರ ಚಿತ್ರವೊಂದಕ್ಕೆ ವಿರೋಧ ವ್ಯಕ್ತವಾಗಿದ್ದು ಮಾತ್ರ ದುರದೃಷ್ಟಕರ. ಹಾಗೆ ನೋಡಿದರೆ ಪುರಾಣಗಳಲ್ಲಿಯೇ ಸರಸ್ವತಿಯನ್ನು ಅತ್ಯಂತ ಕೆಟ್ಟದ್ದಾಗಿ ಚಿತ್ರಿಸಿರುವುದನ್ನು ಕಾಣಬಹುದಾಗಿದೆ!

ಬ್ರಹ್ಮನ ಜೊತೆಯಲ್ಲಿ ಸರಸ್ವತಿ ಹಳೇಬೀಡು
ಕರ್ನಾಟಕದಲ್ಲಿ ಪೂರ್ಣರೂಪದ ಬೌದ್ಧ ದೇವಾಲಯಗಳಾಗಲೀ ಸರಸ್ವತೀ ಶಿಲ್ಪಗಳಾಗಲೀ ದೊರೆತಿಲ್ಲ. ಬೌದ್ಧಾಲಯಗಳ ಅವಶೇಷಗಳು ಗುಲ್ಬರ್ಗಾ ಜಿಲ್ಲೆಯ ಸನ್ನತಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರಾಜಘಟ್ಟ ಮುಂತಾದ ಕಡೆ ಕಂಡುಬಂದರೂ ಸರಸ್ವತೀ ಶಿಲ್ಪಗಳು ವರದಿಯಾಗಿಲ್ಲ. ಜೈನಬಸದಿಗಳಲ್ಲಿ ಸಿಗುವ ಸರಸ್ವತಿಶಿಲ್ಪಗಳ ಲಕ್ಷಣಗಳೇ ಶಿವ ಅಥವಾ ಕೇಶವ ದೇವಾಲಯಗಳಲ್ಲಿನ ಸರಸ್ವತಿಶಿಲ್ಪಗಳಲ್ಲೂ ಕಾಣುತ್ತವೆ. ತಾಂತ್ರಿಕಸರಸ್ವತಿಯ ಶಿಲ್ಪಗಳು ದೊರೆಯುವುದಿಲ್ಲವಾದರೂ, ದುರ್ಗಿಯೇ ಪುಸ್ತಕವನ್ನು ಹಿಡಿದು ಸರಸ್ವತಿಯಾಗಿ ನಿಂತಿರುವುದನ್ನು ಕಾಣಬಹುದು. ಶಿಲ್ಪಿಗಳು ಸರಸ್ವತಿಯನ್ನು ಬ್ರಹ್ಮನ ರಾಣಿಯೆಂದೇ ಚಿತ್ರಿಸಿದ್ದಾರೆ. ಆಕೆ ಬ್ರಹ್ಮನ ಮಗಳೆಂಬ ಕಲ್ಪನೆ ಶಿಲ್ಪಗಳಲ್ಲಿ ಎಲ್ಲಿಯೂ ಬಿಂಬಿತವಾಗಿಲ್ಲ. ‘ಪರಮಜಿನೇಂದ್ರವಾಣಿಯೇ ಸರಸ್ವತೀ’ ಆಗಿದ್ದರೂ, ಜೈನಧರ್ಮೀಯರೂ ಸಹ ಸರಸ್ವತೀ ಶಿಲ್ಪಗಳನ್ನು ನಿರ್ಮಿಸಿದ್ದಾರೆ; ಪೂಜಿಸಿದ್ದಾರೆ. ಸರಸ್ವತೀ ಶಿಲ್ಪಗಳಿಗೆ ನಿರ್ದಿಷ್ಟವಾದ ಶಿಲ್ಪಲಕ್ಷ್ಷಣಗಳಿದ್ದರೂ ಸಾಹಿತ್ಯಕ ಆಧಾರಗಳಿದ್ದಾಗ್ಯೂ, ಕರ್ನಾಟಕದ ಶಿಲ್ಪಾಚಾರ್ಯರು ಸ್ವತಂತ್ರವಹಿಸಿ ಹತ್ತು ಹಲವಾರು ಸ್ವರೂಪಗಳಲ್ಲಿ ಸರಸ್ವತೀ ಶಿಲ್ಪಗಳನ್ನು ನಿರ್ಮಿಸಿದ್ದಾರೆ. ಸರಸ್ವತಿಗೆ ಬೇರೆ ಬೇರೆ ಸ್ವರೂಪಗಳು, ಬ್ರಹ್ಮನ ಪತ್ನಿ ಮತ್ತು ಮಗಳು ಎಂಬ ಪರಿಕಲ್ಪನೆಗಳು ಇದ್ದಾಗ್ಯೂ, ಆಕೆ ವಿದ್ಯಾದೇವತೆಯೆಂಬ ಭಾವನೆ ಮಾತ್ರ ಸಾರ್ವತ್ರಿಕವಾದದ್ದು, ಸಾರ್ವಕಾಲಿಕವಾದದ್ದು.
ಕೊನೆಯ ಮಾತು....
ಮೊದಲ ಕಂತಿಗೆ ಹಲವಾರು ಜನ ಪ್ರತಿಕ್ರಿಯೆ ನೀಡಿದ್ದಾರೆ. ಅವರೆಲ್ಲರಿಗೂ ನನ್ನ ಧನ್ಯವಾದಗಳು.
ಅಂತರಂಗದ ಮಾತುಗಳು ಬ್ಲಾಗಿನ ಶಾಮಲಾ ಜನಾರ್ಧನ್ ಅವರು 'ಈ ಬಾರಿ ದುರ್ಗಾಷ್ಟಮಿಯಂದೇ ಸರಸ್ವತಿ ಪೂಜೆ ಬಂದಿದೆ' ಎಂದಿದ್ದಾರೆ. ಹಾಸನ ಜಿಲ್ಲೆ ಮೊಸಳೆಯ ದೇವಾಲಯದ ಭಿತ್ತಿಯಲ್ಲಿ ಪುಸ್ತಕವನ್ನು ಹಿಡಿದಿರುವ ದುರ್ಗೆಯ ಶಿಲ್ವಿದೆ. ಅದನ್ನು ವಿದ್ವಾಂಸರು Durga Standing as Saraswati ಎಂದು ಕರೆದಿದ್ದಾರೆ. ಅದರ ಚಿತ್ರ ಈ ಬಾರಿಯ ದುರ್ಗಾಷ್ಟಮಿ-ಸರಸ್ವತೀ ಪೂಜೆಗೆ ವಿಶೇಷವೆನ್ನಿಸಬಹುದು, ನೋಡಿ.

28 comments:

sweet hammu said...

ಸರಸ್ವತಿಯ ಬಗ್ಗೆ ನಿಮ್ಮ ಬರಹ ತುಂಬ ಅರ್ಥಪೂರ್ಣವಾಗಿದೆ.

Anonymous said...

ಆತ್ಮೀಯ
ಆಶ್ಚರ್ಯಕರವಾದ ಮಾಹಿತಿಗಳನ್ನು ಒದಗಿಸಿದ್ದೀರ ನಾವುಗಳು ಅದಕ್ಕೆಋಣಿಯಾಗಿದ್ದೇವೆ
ಹರೀಶ ಆತ್ರೇಯ

Unknown said...

ಒಳ್ಳೆಯ ಬರಹ

Thimmappa’s said...

Erudite and comprehensive. Her hands also represent what education consists of:knowledge from the books(She holds book in one hand),Art, culture/performing arts(she holds Veena in two hands across Her chest) and spirituality(Japamala/garland of beads in the fourth hand)- Education must hone Head, Heart Hand and the Soul. Universities concentrate only on one hand of book and made Saraswati, and education, physically handicapped!

Unknown said...

Only one word can describes this article — Erudite !!!!

Unknown said...

ಉತ್ತಮ ಬರಹಕ್ಕೆ ಋಣಿ...

ಕ್ಷಣ... ಚಿಂತನೆ... said...

ಸರ್‍, ಸರಸ್ವತಿ ದೇವಿಯ ಬಗ್ಗೆ ಇಷ್ಟೆಲ್ಲಾ ಮಾಹಿತಿ ನೀಡಿದ್ದೀರಿ. ಇದು ನಿಜಕ್ಕೂ ಮಾಹಿತಿದಾಯಕ ಬರಹ ಮತ್ತು ಈ ಬರಹದಿಂದ ತುಂಬ ವಿಚಾರಗಳು ತಿಳಿಯಿತು.

ಧನ್ಯವಾದಗಳೊಂದಿಗೆ,
ಚಂದ್ರಶೇಖರ ಬಿ.ಎಚ್.

shivu.k said...

ಸರ್,

ಸರಸ್ವತಿಯ ಬಗ್ಗೆ ಎಷ್ಟೆಲ್ಲಾ ಮಾಹಿತಿ. ಓದುತ್ತಾ ನನಗೆ ತುಂಬಾ ಖುಷಿಯಾಯಿತು..

ಮಾಹಿತಿಯುಕ್ತವಾದ ಈ ಬರಹವನ್ನು ಓದಿ ಅನೇಕ ವಿಚಾರಗಳನ್ನು ತಿಳಿದುಕೊಂಡಂತೆ ಆಯಿತು...

ಸೊಗಸಾದ ಬರಹ.

ಎಚ್. ಆನಂದರಾಮ ಶಾಸ್ತ್ರೀ said...

ಚಿಂತನಶೀಲವೂ ವಿಚಾರಾರ್ಹವೂ ಪಾಂಡಿತ್ಯಪೂರ್ಣವೂ ಆಗಿರುವ ಲೇಖನೋಪಹಾರ ನೀಡಿರುವ ಸರಸ್ವತೀಪುತ್ರ ಸತ್ಯನಾರಾಯಣರಿಗೆ ನಮೋನ್ನಮಃ.

sunaath said...

ಸರಸ್ವತಿಯ ಬಗೆಗೆ ತುಂಬ ಮನೋಜ್ಞವಾದ ಲೇಖನ.

chandra said...

nimma erdu artical thumba chennagide sir

PARAANJAPE K.N. said...

ಸರಸ್ವತಿಯ ಬಗ್ಗೆ ಎರಡು ಕಂತುಗಳಲ್ಲಿ ಮೂಡಿಬಂದ ನಿಮ್ಮ ಲೇಖನಮಾಲೆ ಪಾ೦ಡಿತ್ಯಪೂರ್ಣವಾಗಿದೆ ಮತ್ತು ವಿಚಾರಾರ್ಹವಾಗಿದೆ. ಚೆನ್ನಾದ ಬರಹಕ್ಕೆ ಅಭಿನಂದನೆಗಳು

Me, Myself & I said...

ಸಾರ್,

ಸರಸ್ವತಿ ದೇವಿಯ ಬಗ್ಗೆ ಇಷ್ಟೊಂದು ತಿಳಿಸಿ ಕೊಟ್ಟದ್ದಕ್ಕೆ ಧನ್ಯವಾದಗಳು. ಓದಿದಷ್ಟು ಇನ್ನೂ ಓದ ಬೇಕನ್ನಿಸ್ತು.

ಸಾರ್, ನಿಮ್ಮ ಸರಸ್ವತಿ ದೇವಿಯ ಬಗೆಗಿನ ಬರಹ ಪೂರ್ಣ ಹಾಗಿದ್ರೆ ನನ್ನದೊಂದು ಕೋರಿಕೆ.
ವಿಷ್ಣು (ಹರಿ), ಮಹೇಶ್ವರ(ಮಂಜುನಾಥ) ಹೀಗೇ ತ್ರಿಮೂರ್ತಿಗಳಲ್ಲಿ ಇಬ್ಬರನ್ನ ನಾವು ಪೂಜಿಸ್ತೀವಿ.
ಆದ್ರೆ ಬ್ರಹ್ಮನ ಪೂಜೆ ಮಾತ್ರ ತೀರಾ ವಿರಳ. ಒಂದು ಸರ್ತಿ ಕೇಳಿದ್ದೆ, ಬ್ರಹ್ಮನ ದೇವಸ್ಥಾನಗಳು ಇಡೀ ಭೂಮಿಲೇ ಹುಡ್ಕಿದ್ರೆ ಸಿಗೋದು ಮೂರೇ ಮೂರು ಅಂತೆ... ನಿಜ್ವಾ?

ಇದರ ಬಗ್ಗೆನೂ ನಿಮಗೆ (ಯಾರಾದ್ರು)ತಿಳಿದದ್ದನ್ನ ಹಂಚಿ ಕೊಳ್ಳಿ.

AntharangadaMaathugalu said...

ಸಾರ್....
ಲೇಖನ ತುಂಬಾ ವಿವರವಾಗಿ ಅರ್ಥಪೂರ್ಣವಾಗಿತ್ತು. ನನ್ನ ಪ್ರತಿಕ್ರಿಯೆಗೆ ಪೂರಕವಾಗಿ ನೀವು ಹಾಕಿರುವ ಸರಸ್ವತಿ-ದುರ್ಗೆಯ ಚಿತ್ರ ನಿಜಕ್ಕೂ ಸುಂದರವಾಗಿದೆ. ನಿಮ್ಮ ಲೇಖನಗಳು ಜ್ಞಾನ ಹೆಚ್ಚಿಸುತ್ತವೆ. ಧನ್ಯವಾದಗಳು.....
ಶ್ಯಾಮಲ

Mahanthesh said...

Your write ups on Saraswathi is really excellent. I expect more such write ups from U, which would certainly elighten the reader/bloggers. Thank U. Keep it up.

ದೀಪಸ್ಮಿತಾ said...

ಸರ್, ತುಂಬ ಉಪಯುಕ್ತವಾದ ಮಾಹಿತಿ. ಮೊದಲಿನ ಲೇಖನ ಓದಲಾಗಿರಲಿಲ್ಲ. ಈಗ ಎರಡನ್ನೂ ಓದಿದೆ. ಸರಸ್ವತಿಯ ಹುಟ್ಟು, ಬೇರೆ ಬೇರೆ ಸಂಸ್ಕೃತಿಗಳಲ್ಲಿ ಅವಳ ಹೆಸರು ವರ್ಣನೆ, ಎಲ್ಲಾ ಸವಿವರವಾಗಿ ಕೊಟ್ಟಿದ್ದೀರಿ. ಸರಸ್ವತಿ ಈಗ ಬರೀ ಪುಸ್ತಕ, ಸಂಗೀತ ವಾದ್ಯಗಳಲ್ಲಿ ಮಾತ್ರ ಅಡಗಿಲ್ಲ. ಇಂಟರ್ನೆಟ್ ಎಂಬ ಮಾಯಾಜಾಲದಲ್ಲೂ ಕುಳಿತು ಎಲ್ಲರ ಮನೆ ಮನೆಗೂ ಸಂಚರಿಸಬಲ್ಲವಳಾಗಿದ್ದಾಳೆ. ವಿದ್ವತ್ಪೂರ್ಣ ಲೇಖನ ಕೊಟ್ಟಿದ್ದಕ್ಕೆ ವಂದನೆಗಳು

turanga said...

ಈ ಸಂದರ್ಭದಲ್ಲಿ ದಂಡಿಯ ಕಾವ್ಯಾದರ್ಶದ ಮೊದಲ ಪ್ರಾರ್ಥನಾಶ್ಲೋಕವನ್ನು ಗಮನಿಸಬಹುದು -

ಚತುರ್ಮುಖಮುಖಾಂಭೋಜವನಹಂಸವಧೂರ್ಮಮ|
ಮಾನಸೇ ರಮತಾಂ ನಿತ್ಯಂ ಸರ್ವಶುಕ್ಲಾ ಸರಸ್ವತೀ||
(ಚತುರ್ಮುಖ ಬ್ರಹ್ಮನ ಮುಖಗಳೆಂಬ ಕಮಲಗಳ ವನದಲ್ಲಿನ ಹಂಸಿ, ಪೂರ್ತಿಯಾಗಿ ಬಿಳಿಯಾಗಿರುವ ಸರಸ್ವತಿ, ನನ್ನ ಮನಸ್ಸಿನಲ್ಲಿ ನಲಿಯಲಿ). ಈ ಶ್ಲೋಕದ ಧ್ವನಿಯನ್ನು, ಶ್ಲೇಷೆ ಮೊದಲಾದ ಅಲಂಕಾರಗಳನ್ನು ನಿದಾನವಾಗಿ ಓದಿ ತಿಳಿಯಬಹುದು.

ಇದಕ್ಕೆ ಸಂಬಂಧಪಟ್ಟ ಸ್ವಾರಸ್ಯದ ವಿಷಯ - ಕನ್ನಡದೇಶದ ವಿಜ್ಜಿಕೆ ಎಂಬ ಕವಯಿತ್ರಿ ಇದಕ್ಕೆ ಉತ್ತರವಾಗಿ

ನೀಲೋತ್ಪಲದಲಶ್ಯಾಮಾಂ ವಿಜ್ಜಿಕಾಂ ಮಾಮಜಾನತಾ|
ವೃಥೈವ ದಂಡಿನಾ ಪ್ರೋಕ್ತಂ ಸರ್ವಶುಕ್ಲಾ ಸರಸ್ವತೀ ||
(ಕನ್ನೈದಿಲೆಯ ನೀಲಿ ದಳದ ಮೈಬಣ್ಣದ ವಿಜ್ಜಿಕೆಯೆಂಬ ಹೆಸರಿನ ನನ್ನನ್ನು ತಿಳಿಯದೆ ದಂಡಿ ತಪ್ಪಾಗಿ "ಸರ್ವಶುಕ್ಲಾ ಸರಸ್ವತೀ" ಎಂದು ಹೇಳಿದ)

ಎಂದಳಂತೆ!

Ittigecement said...

ಸತ್ಯನಾರಾಯಣರವರೆ...

ನಿಮ್ಮ ಅಧ್ಯಯನಶೀಲತೆಗೆ ಮೊದಲಿಗೆ ಅಭಿನಂದನೆಗಳು...

ಬಹಳಷ್ಟು ಉಪಯುಕ್ತ ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದೀರಿ..
ಕೆಲವೊಂದು ನನಗೆ ಗೊತ್ತೇ ಇರಲಿಲ್ಲ..

ನಿಮ್ಮಿಂದ ಇನ್ನಷ್ಟು ಸಂಶೋಧನಾ(ಅಧ್ಯಯನ) ಲೇಖನಗಳ ನಿರೀಕ್ಷೆಯಲ್ಲಿ.....

Unknown said...

ಪ್ರತಿಕ್ರಿಯಿಸಿದ ಎಲ್ಲರಿಗೂ, ಪೂರಕ ಮಾಹಿತಿ ನೀಡಿದ ಹಿರಿಯರಾದ ಶ್ರೀ ಎಂ.ಎಸ್.ತಿಮ್ಮಪ್ಪನವರಿಗೂ ಧನ್ಯವಾದಗಳು.
ತುರಂಗ ಅವರೆ ನೀವು ನೀಡಿರುವ ಎರಡೂ ಶ್ಲೋಕಗಳನ್ನು ನನ್ನ ಅಧ್ಯಯನದಲ್ಲಿ ಬಳಸಿಕೊಂಡಿದ್ದೇನೆ. ದಂಡಿಯ ಶ್ಲೋಕದಿಂದಾಗಿ 'ಸರಸ್ವತೀ ರಹಸ್ಯೋಪನಿಷತ್' ಆತನ ಕಾಲಕ್ಕಿಂತ ಈಚಿನದು ಎಂಬ ತೀರಮಾನಕ್ಕೂ ಬಂದಿದ್ದೇನೆ. ವಿಜ್ಜಿಕೆಯ ಆತ್ಮವಿಶ್ವಾಸದ ನುಡಿಗಳನ್ನು ಕೇಳಿ ಹೆಮ್ಮೆ ಪಟ್ಟಿದ್ದೇನೆ. ಅವಳು ಕನ್ನಡದ ಹೆಣ್ಣುಮಗಳು ಎಂಬುದು ಗಮನಾರ್ಹ. ದಂಡಿಯ ಶ್ಲೋಕದ ಅನುವಾದವನ್ನು, ಮೂಲದಷ್ಟೇ ಸುಂದರವಾಗಿ, ಹಾಗೂ ಅದಕ್ಕಿಂತ ಭಿನ್ನವಾಗಿ ನಮ್ಮ ಕವಿರಾಜಮಾರ್ಗಕಾರ ಶ್ರೀವಿಜಯ ಮಾಡಿದ್ದಾನೆ. ಈ ಎಲ್ಲವನ್ನೂ ನಾನು ನನ್ನ ಅಧ್ಯಯನದಲ್ಲಿ ಬಳಸಿಕೊಂಡಿದ್ದೇನೆ.

Unknown said...

ಲೋದ್ಯಾಶಿ ಅವರೇ ನಿಮ್ಮ ಪ್ರತಿಕ್ರಿಯೆಗೆ ಆಸಕ್ತಿಗೆ ನಾನು ಆಭಾರಿಯಾಗಿದ್ದೇನೆ. ವಿಷ್ಣು-ಮಹೇಶ್ವರರಿಗೆ ಪೂಜೆ ಇದೆ, ಆದರೆ ಬ್ರಹ್ಮನಿಗೆ ಪೂಜೆ ಇಲ್ಲ ಎಂಬುದು ಒಂದು ನಂಬಿಕೆ ಅಷ್ಟೆ. ಆದರೆ ಬೇಕಾದಷ್ಟು ಬ್ರಹ್ಮನ ಗುಡಿಗಳು ಇವೆ. ಪೂಜೆಯೂ ಇದೆ. ಆದರೆ ಬ್ರಹ್ಮನಿಗೆ ಪೂಜೆ ನಿರಾಕರಿಸಿ ಶಿವ ಮತ್ತು ವಿಷ್ಣುವಿನ ಜೊತೆ ಬ್ರಹ್ಮನ ಬದಲು ಸರಸ್ವತಿಗೆ ಪೂಜೆ ಸಲ್ಲಿಸುವ ಪರಿಪಾಟವೂ ಕರ್ನಾಟಕದಲ್ಲಿ ಆಗಿ ಹೋಗಿದೆ. ಹಾಗೇ ಬ್ರಹ್ಮನನ್ನು ಲಿಂಗರೂಪಿಯಾಗಿ ಬ್ರಹ್ಮಲಿಂಗೇಶ್ವರ ಎಂದು ಪೂಜಿಸುವ ಸಂಪ್ರದಾಯವೂ ಇದೆ. ಈ ನಂಬಿಕೆಗಳೇ ಹಾಗೆ, ಮುಂದೆ ಅವೇ ಸತ್ಯಗಳಂತೆ ಕಾಣಿಸಿ ಗೊಂದಲಕ್ಕೆ ಎಡೆಮಾಡಿಕೊಡುತ್ತವೆ. ಈಗ ನೋಡಿ, ನೀವು ಮಹೇಶ್ವರನನ್ನು ಮಂಜುನಾಥನ ರೂಪದಲ್ಲಿ ಕಾನುತ್ತಿದ್ದೀರಿ. ಆದರೆ ಇದೇ ಮಂಜುನಾಥ ಹಿಂದೂಮೂಲದ ದೇವರೇ ಅಲ್ಲ; ಧರ್ಮಸ್ಥಳ ಮೂಲತಃ ಬೌದ್ಧಕೇಂದ್ರವಾಗಿತ್ತು, ನಂತರ ಜೈನ ಕೇಂದ್ರವಾಗಿ ಈಗ ಸರ್ವಧರ್ಮಕೇಂದ್ರವಾಗಿದ್ದರೂ ಪ್ರಧಾನವಾಗಿ ಹಿಂದೂ ಕ್ಷೇತ್ರವಾಗಿದೆ!

ಅಂದ ಹಾಗೆ, ನಿಮ್ಮ ಪೂರ್ಣ ಹೆಸರು ತಿಳಿದುಕೊಳ್ಳುವ ಸಲುವಾಗಿ ಬ್ಲಾಗಿಗೆ ಭೇಟಿ ಕೊಟ್ಟಿದ್ದೆ. ನಿಮ್ಮ ಪೂರ್ಣ ಹೆಸರು ಸಿಗದಿದ್ದರೂ ಒಂದಷ್ಟು ಸ್ವಾರಸ್ಯವಾದ ಬರವಣಿಗೆಗಳು,. ಹಲವಾರು ಜಾತಿಯ ನಾಯಿಗಳ ಫೋಟೋಗಳು ಕಣ್ಣಿಗೆ ಬಿದ್ದವು. ನನ್ನ ಬ್ಲಾಗ್ ಪಟ್ಟಿಗೆ ನಿಮ್ಮ ಬ್ಲಾಗ್ ಸೇರಿಸಿಕೊಳ್ಳುತ್ತೇನೆ. ಮುಂದೆ ಆಗಾಗ ಭೇಟಿ ನೀಡುತ್ತಿರುತ್ತೇನೆ.

shridhar said...

ಸಂಶೋಧನ ಲೇಖನ ಬಹಳ ಉಪಯುಕ್ತ ಮಾಹಿತಿಯನ್ನು ನೀಡಲು ಸಹಕರಿಸಿದೆ.
ನನಗೆ ಹೀಗೆ ಒಂದು ಥಿಸಿಸ್ ಒದಬೇಕೆಂಬ ಹಂಬಲವಿತ್ತು . ಬಹು ಮಟ್ಟ್ಗಿಗಾದರು ಅದು ನೆರವೇರಿದೆ.

ಆದಲ್ಲಿ ನಮ್ಮ ಬ್ಲೊಗ್ ಕಡೆನು ಒಮ್ಮೆ ಬನ್ನಿ ,

ಶ್ರೀಧರ್ ಭಟ್ಟ.

Me, Myself & I said...

ಸಾರ್,
ನಿಮ್ಮ ಉತ್ತರಕ್ಕೆ ಧನ್ಯವಾದಗಳು. ಬ್ರಹ್ಮ ದೇವರ ಬಗ್ಗೆ ಸುಮಾರು ದಿನಗಳ ಹಿಂದೆ ಜಾಲದಲ್ಲಿ ಹುಡುಕಿದ್ದೇ..ಆದರೂ ಇಷ್ಟು ನಿಖರವಾದ ಉತ್ತರ ಸಿಕ್ಕಿರಲಿಲ್ಲ. ಹೀಗೆಯೇ ಬರೆಯುತ್ತಿರಿ.

ನನ್ನ ಬ್ಲಾಗ್ಗೆ ಸ್ವಾಗತ. ಖಂಡಿತ ಬರುತ್ತಿರಿ. ಸಮಯ ಸಿಕ್ಕಾಗಲಾದರೂ ನಿಮಗನ್ನಿಸ್ಸಿದ್ದನ್ನ ತಿಳಿಸುತ್ತಿರಿ.

Srushti said...

ಬಹಳ ಅಪರೂಪದ ಮಾಹಿತಿಗಳನ್ನು ತಿಳಿಸಿಕೊಟ್ಟಿದ್ದೀರಿ, ದನ್ಯವಾದಗಳು. ಲೇಖನಗಳ ಮದ್ಯೆ ಪೊಟೋಗಳನ್ನು ಹಾಕಿರುವುದು ಅರ್ಥಪೂರ್ಣವಾಗಿದೆ

ganesh said...

Very good & useful information.
DHANYAVAADAGALU! for giving a nice detailed info abt Godess SARASWATHI,

turanga said...

ಶ್ರೀವಿಜಯನ ಅನುವಾದ ನನಗೆ ಸಿಕ್ಕುವಂತಿಲ್ಲ. ದಯವಿಟ್ಟು ಅದನ್ನು ಉದ್ಧರಿಸಿ ಇಲ್ಲಿ ಹಾಕಿದರೆ ಉಪಕಾರವಾಗುತ್ತದೆ!

Unknown said...

ತುರಂಗ ಅವರೇ ನಿಮ್ಮ ಆಸಕ್ತಿಗೆ ಅಭಿನಂದನೆಗಳು ಹಾಗೂ ನಿಮ್ಮ ಕೋರಿಕೆಗೆ ಪರಿಹಾರ ಇಲ್ಲಿದೆ.

ಕನ್ನಡ ಸಾಹಿತ್ಯದಲ್ಲಿ ಸರಸ್ವತಿಯ ವಿಚಾರದ ಅಧ್ಯಯನ ಅಲಂಕಾರಶಾಸ್ತ್ರಗ್ರಂಥವಾದ ‘ಕವಿರಾಜಮಾರ್ಗ’ದಿಂದ ಪ್ರಾರಂಭವಾಗುತ್ತದೆ. ದಂಡಿಯ ‘ಕಾವ್ಯಾದರ್ಶ’ ಸಂಸ್ಕೃತ ಭಾಷೆಯಲ್ಲಿರುವ ಅಲಂಕಾರ ಶಾಸ್ತ್ರಗ್ರಂಥ. ಕವಿರಾಜಮಾರ್ಗಕಾರನು ‘ಕಾವ್ಯಾದರ್ಶ’ವನ್ನು ಕನ್ನಡ ಕಾವ್ಯ ಸಂದರ್ಭಗಳಿಗೆ ಅನುಗುಣವಾಗಿ ಅನುವಾದ ಮಾಡಿದ್ದಾನೆ. ಇದು ಅನುವಾದ ಗ್ರಂಥವಾದರೂ ಒಂದು ಸ್ವತಂತ್ರ ಕೃತಿಯೆಂಬಂತೆ ರಚನೆಯಾಗಿರುವುದಕ್ಕೆ ಸಾಕಷ್ಟು ಆಧಾರಗಳಿವೆ. ಇಂತಹ ಒಂದು ಆಧಾರ ಸರಸ್ವತಿಯ ಪ್ರಾರ್ಥನೆಯ ರೂಪದಲ್ಲಿಯೇ ದೊರೆಯುತ್ತದೆ.
ಚತುರ್ಮುಖ ಮುಖಾಂಭೋಜ ವನಹಂಸವಧೂರ್ಮಮ
ಮಾನಸೇ ರಮತಾಂ ನಿತ್ಯಂ ಸರ್ವಶುಕ್ಲಾ ಸರಸ್ವತೀ
ಇದು ‘ಕಾವ್ಯಾದರ್ಶ’ದಲ್ಲಿರುವ ಸರಸ್ವತಿಯ ಪರವಾದ ಶ್ಲೋಕ. ಅದನ್ನು ಶ್ರೀವಿಜಯನು,
ಶ್ರೀ ವಿಶದವರ್ಣೆ ಮಧುರಾ
ರಾವೋಚಿತೆ ಚತುರರುಚಿರಪದರಚನೆ ಚಿರಂ
ದೇವಿ ಸರಸ್ವತಿ ಹಂಸೀ
ಭಾವದೆ ನೆಲೆಗೊಳ್ಗೆ ಕೂರ್ತ್ತು ಮನ್ಮಾನಸದೊಳ್
ದು ಅನುವಾದಿಸಿದ್ದಾನೆ. ಇದನ್ನು ಅನುವಾದ ಎನ್ನುವುದಕ್ಕಿಂತ ರೂಪಾಂತರ ಎನ್ನುವುದೇ ಹೆಚ್ಚು ಸಮಂಜಸ. ‘ಚತುರ್ಮುಖ ಮುಖಾಂಭೋಜ ವನಹಂಸವಧೂರ್ಮಮ ಮಾನಸೇ ರಮತಾಂ’ ಎಂಬುದು ‘ಹಂಸೀಭಾವದೆ ನೆಲೆಗೊಳ್ಗೆ ಕೂರ್ತ್ತು ಮನ್ಮಾನಸದೊಳ್’ ಎಂದು ಅನುವಾದವಾಗಿದೆ. ಸರಸ್ವತಿಯು ಬ್ರಹ್ಮನ ಮುಖವಾಸಿನಿ ಎಂಬ ವೈದಿಕ ಕಲ್ಪನೆ ಜೈನಮತಕ್ಕೆ ಅನುಗುಣವಾಗಿಲ್ಲದಿರುವುದು ಇದಕ್ಕೆ ಕಾರಣ. ಶ್ರೀವಿಜಯನು ತನ್ನ ಸಂಪ್ರದಾಯಕ್ಕೆ ಅನುಗುಣವಾಗಿ ‘ಸರ್ವಶುಕ್ಲಾ’ ಎಂಬುದನ್ನು ಉಳಿಸಿಕೊಂಡು ಸರಸ್ವತಿಯನ್ನು ‘ವಿಶದವರ್ಣೆ’ಯಾಗಿಸಿದ್ದಾನೆ. ಜೈನಪರಂಪರೆಯಲ್ಲಿ ಸರಸ್ವತಿಯು ‘ಪರಮಜಿನೇಂದ್ರನ ವಾಣಿ’ಯೇ ಹೊರತು, ಜಿನಮುಖದಲ್ಲಿ ಮಾತ್ರ ನೆಲೆಸಿರುವವಳಲ್ಲ. ಆದರೆ ಆಕೆ ವೈದಿಕ ಸಂಪ್ರದಾಯದಂತೆಯೇ ಶುಭ್ರವರ್ಣೆ. ಸರಸ್ವತಿಯು ವಾಗ್ದೇವತೆ, ಆಕೆಯ ವಾಕ್ ಮಧುರವಾಗಿಯೂ ಔಚಿತ್ಯಪೂರ್ಣವಾಗಿಯೂ ಇರುತ್ತದೆ ಎಂಬುದನ್ನು ಶ್ರೀವಿಜಯ ‘ಮಧುರಾರಾವೋಚಿತೆ’ ಮತ್ತು ‘ಚತುರರುಚಿರಪದರಚನೆ’ ಎಂಬ ಎರಡi ವಿಶೇಷಣಗಳನ್ನು ಬಳಸಿ ಸಾಧಿಸಿದ್ದಾನೆ. ಕಾವ್ಯದಲ್ಲಿ ಮಧುರವಾದ ಧ್ವನಿ, ಚತುರತೆಯಿಂದ ಕೂಡಿದ ಸುಂದರ ಪದಗಳ ಮಹತ್ವವನ್ನು ಮನಗಂಡಿರುವ ಕವಿಯು, ಅಂತಹ ಸಂಪತ್ತಿಯನ್ನು ದಯಪಾಲಿಸುವ ಸರಸ್ವತಿಯನ್ನು ಸ್ತುತಿಸುತ್ತಾನೆ. ವಿಶದವರ್ಣೆಯೂ, ವಾಗ್ದೇವತೆಯೂ ಆದ ಸರಸ್ವತಿಯು ಹಂಸೀಭಾವದಿಂದ ತನ್ನ ಮಾನಸದಲ್ಲಿ ನೆಲಸಲಿ ಎಂಬುದು ಕವಿಯ ಆಶಯ. ‘ಹಂಸೀಭಾವ’ ಎಂಬ ಪರಿಕಲ್ಪನೆ ಸರಸ್ವತಿಯ ವಾಹನ ಹಂಸವನ್ನೂ ಪ್ರತಿನಿಧಿಸುತ್ತದೆ. ಹಂಸವು ಸರೋವರದಲ್ಲಿ ನೆಲೆಸಿರುತ್ತದೆ. ಇಲ್ಲಿ ಕವಿಯ ಮಾನಸಸರೋವರದಲ್ಲಿ ನೆಲೆಸಲಿ ಎಂಬುದು ಕವಿಯ ಕೋರಿಕೆ.

turanga said...

ತಕ್ಷಣ ಉತ್ತರಿಸಿದ್ದಕ್ಕೆ ಧನ್ಯವಾದಗಳು!

ಶ್ರೀವಿಜಯ (ಅಥವಾ ಕವಿರಾಜಮಾರ್ಗಕಾರ ಯಾರೋ ಅವನು - ಈ ಬಗ್ಗೆ ಸ್ವಲ್ಪ ಚರ್ಚೆ ಇರುವಂತಿದೆ) ರೂಪಾಂತರ ಮಾಡಿ ಮಾಡಿರುವ ಬದಲಾವಣೆಗಳು, ಅವಕ್ಕೆ ಕಾರಣ ಸ್ವಾರಸ್ಯವಾಗಿವೆ. ಅಂತೆಯೇ ಅವನು ಬದಲಾವಣೆ ಮಾಡದೆ ಇಟ್ಟುಕೊಂಡಿರುವುದೂ. ಇಲ್ಲಿ ಬಳಸಿಕೊಂಡಿರುವ ಕವಿಸಮಯ, ಹಂಸಗಳಿಗೆ ಹಿಮಾಲಯದ ಮಾನಸಸರೋವರ ಪ್ರಿಯವಾದದ್ದು ಎನ್ನುವುದು - ಅಸ್ತಿ ಯದ್ಯಪಿ ಸರ್ವತ್ರ ನೀರಂ ನೀರಜಮಂಡಿತಂ| ರಮತೇ ನ ಮರಾಲಸ್ಯ ಮಾನಸಂ ಮಾನಸಂ ವಿನಾ||. ಇದನ್ನು ಬಳಸಿಕೊಂಡಿರುವ ಶ್ಲೇಷೆ ದಂಡಿಯ ಶ್ಲೋಕದಲ್ಲಿರುವಂತೆಯೇ, ರೂಪಾಂತರದಲ್ಲೂ "ಮಾನಸ"ದ ಬಳಕೆಯಿಂದ ಉಳಿದುಕೊಂಡಿದೆ!

ರೂpaश्री said...

ಸತ್ಯ ಸರ್,

ಸರಸ್ವತಿ ದೇವಿಯ ಬಗ್ಗೆ ಇಷ್ಟೆಲ್ಲಾ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ಬಹಳಷ್ಟು ವಿಚಾರ ತಿಳಿಕೊಂಡಹಾಗಾಯ್ತು.
ಜೊತೆಗೆ ಬ್ರಹ್ಮದೇವನ ಕುರಿತು ಇಲ್ಲಿ ಚರ್ಚಿಸಿದನ್ನೂ ಓದಿದೆ, ತಿಳಿದುಕೊಂಡೆ!
ವಂದನೆಗಳು...