Wednesday, December 23, 2009

ಮೂಗಿಗೆ ಮೂಗು, ಕಿವಿಗೆ ಕಿವಿ : ಪಾಕಿಸ್ತಾನ ನ್ಯಾಯಾಲಯದ ತೀರ್ಪು

ಇಂದು (೨೩.೧೨.೨೦೦೯) ಬೆಳಿಗ್ಗೆ ಪ್ರಜಾವಾಣಿ ಪತ್ರಿಕೆಯನ್ನು ತಿರುಗಿಸಿದಾಗ ೧೦ನೇ ಪುಟದಲ್ಲಿ ಒಂದು ತಲೆ ಬರಹ ಹೀಗಿತ್ತು. ‘ಮೂಗು ಕತ್ತರಿಸಿದವರ ಮೂಗನ್ನೇ ಕತ್ತರಿಸಿ’ ಇದು ಪಾಕಿಸ್ತಾನದ ನ್ಯಾಯಲಯದ ಆದೇಶ! ಲಾಹೋರ್ ಹೈಕೋರ‍್ಟಿನ ಆದೇಶದ ಮೇರೆಗೆ ವಿಚಾರಣೆ ನಡೆಸಿದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಈ ತೀರ‍್ಮಾನ ನೀಡಿದೆ. ಶೇರ್ ಮೊಹಮದ್ ಮತ್ತು ಅಮಾನತ್ ಅಲಿ ಎಂಬಿಬ್ಬರು ಮದುವೆಯಾಗಲು ನಿರಾಕರಿಸಿದ ಯುವತಿಯೊಬ್ಬಳನ್ನು ಅಪಹರಿಸಿ ಆಕೆಯ ಮೂಗು ಕಿವಿಗಳನ್ನು ಕತ್ತರಿಸಿ ಹಾಕಿದ್ದರು. ಈಗ ನ್ಯಾಯಾಲಯ, ಮೂಗಿಗೆ ಮೂಗು ಕಿವಿಗೆ ಕಿವಿ ಎನ್ನುವ ಇಸ್ಲಾಂ ಧರ‍್ಮದ ಶಿಕ್ಷೆಯ ಭಾಗವಾಗಿ ಈ ಶಿಕ್ಷೆ ನೀಡಿದೆ. ಇದರ ಜೊತೆಗೆ ಇಬ್ಬರು ಅಪರಾಧಿಗಳಿಗೆ ತಲಾ ಮೂರು ಲಕ್ಷ ರೂಪಾಯಿಗಳ ದಂಡ ಮತ್ತು ಜೀವಾವಧಿ ಶಿಕ್ಷೆಯನ್ನೂ ನೀಡಿದೆ. ಯುವಿಗೆ ಒಟ್ಟು ಏಳು ಲಕ್ಷ ರೂ ಪರಿಹಾರ ಕೊಡಿಸಿದೆ.
ಈ ಘಟನೆ ನನಗೆ ಇತಿಹಾಸದ ಒಂದು ಘಟನೆಯನ್ನು ನೆನಪಿಗೆ ತಂದಿತು. ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ.ತಮಿಳು ಸೆಲ್ವಿ ಅವರ ‘ನೇಪಥ್ಯ’ ಪುಸ್ತಕದಲ್ಲಿ ಇದನ್ನು ಓದಿದ್ದೆ. ಅವರ ಪುಸ್ತಕದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಮೂಗು ಕತ್ತರಿಸುವ ಪ್ರಕ್ರಿಯೆ’ ಎನ್ನುವ ಲೇಖನವಿದೆ. ಅದರಲ್ಲಿ ಹರಿಹರ ಮಹಾಕವಿಯ ‘ಕಳಚೆಂಗಪೆರುಮಾಳೆಯರ ರಗಳೆ’ ಹಾಗೂ ‘ಕಳರ್‌ಸಿಂಗ ನಾಯನಾರ್ ಪುರಾಣ’ದ ಘಟನೆಯೊಂದನ್ನು ವಿವರಿಸಲಾಗಿದೆ.
ಘಟನೆ ಹೀಗಿದೆ.
‘ಕಳಚೆಂಗ ಪೆರುಮಾಳ್’ ಅಥವಾ ‘ಕಳರ್ ಸಿಂಗ ನಾಯನಾರ್’ ಹೆಸರಿನ ದೊರೆ ಇತಿಹಾಸದಲ್ಲಿ ದಾಖಲಾಗಿರುವ ‘ವೀರನರಸಿಂಹ’. ಈತನ ಹೆಂಡತಿ ‘ಚೊಲ್ಲಡಿಯನಾಚಿ’ ಅಥವಾ ‘ಚೊಲ್ಲಡಿಯದೇವಿ’. ಇವಳು ಒಂದು ದಿನ ತನ್ನ ಪರಿವಾರದೊಂದಿಗೆ ಶಿವಾಲಯಕ್ಕೆ ಬರುತ್ತಾಳೆ. ಆ ಶಿವಾಲಯದಲ್ಲಿ ಮಹಾನ್ ಶಿವಭಕ್ತನಾದ ‘ಚಿರುತೊಣೆಯಾಂಡ’ ಎಂಬುವವನು ಇರುತ್ತಾನೆ. ಅಲ್ಲಿ ಶಿವನಿಗೆ ಅಲಂಕರಿಸಲು ಹಲವಾರು ವಿಧದ ಹೂವುಗಳನ್ನು ಮಾಲೆಯಾಗಿ ಕಟ್ಟಲಾಗಿರುತ್ತದೆ. ಪ್ರದಕ್ಷಿಣೆಯಲ್ಲಿ ಬರುತ್ತಿದ್ದ ‘ಚೊಲ್ಲಡಿಯನಾಚಿ’ಯ ಕಣ್ಣಿಗೆ ಆ ಹೂವುಗಳ ಮಧ್ಯ ಕಣ್ಣಿಗೆ ಕುಕ್ಕುವಂತಿದ್ದ ‘ಚೆಂಗಣಿಗಿಲೆ’ ಹೂವು ಬೀಳುತ್ತದೆ. ಅವಳು ಅದನ್ನು ಆಸೆಯಿಂದ ಕೈಗೆತ್ತಿಕೊಂಡು ಮೂಗಿನ ಬಳಿ ಕೊಂಡೊಯ್ದು ಅದರ ಸುವಾಸನೆಯನ್ನು ಆಘ್ರಾಣಿಸುತ್ತಾಳೆ. ಅದನ್ನು ಗಮನಿಸಿದ ‘ಚಿರುತೊಣೆಯಾಂಡ’ನು ‘ಶಿವದ್ರೋಹಿ! ಶಿವನ ಮುಡಿಗೇರಿಸಲು ತಂದಿದ್ದ ಪುಷ್ಪವನ್ನು ವಾಸಿಸಿದೆ’ ಎಂದು ನಿಂದಿಸುತ್ತಾನೆ. ಅಷ್ಟಕ್ಕೆ ಸುಮ್ಮನಾಗದೆ, ‘ಇದೇ ಮೂಗಲ್ಲವೆ ಹೂವನ್ನು ಮೂಸಿದ್ದು’ ಎಂದು ಆಕೆಯ ಮೂಗನ್ನೇ ಕತ್ತರಿಸಿ ಹಾಕುತ್ತಾನೆ! “ಘರಿಲನರಿದಂ ಮೂಗನಂ ಅಮ್ಮಮ್ಮ ತೊಣೆಯಾಂಡನ್” ಎಂದು ಕವಿ ಉದ್ಘರಿಸುತ್ತಾನೆ!
ಇದು ಇಷ್ಟಕ್ಕೆ ನಿಲ್ಲುವುದಿಲ್ಲ. ರಾಜ ‘ವೀರನರಸಿಂಹ’ನಿಗೆ ವಿಷಯ ತಿಳಿಯುತ್ತದೆ. ರಕ್ತಸಿಕ್ತವಾದ ಮೂಗಿನೊಂದಿಗೆ ರಾಣಿ ರಾಜನ ಮುಂದೆ ನಿಲ್ಲುತ್ತಾಳೆ. ಆಕೆಯ ಪರಿವಾರದವರು ‘ರಾಣಿಯ ಮೂಗನ್ನು ಅರಿದವನಿಗೆ ಶಿಕ್ಷೆಯಾಗಲಿ’ ಎಂದು ಅಪೇಕ್ಷಿಸುತ್ತಾರೆ. ಆದರೆ ‘ವೀರನರಸಿಂಹ’ ಪಾಕಿಸ್ತಾನದ ನ್ಯಾಯಾಲಯದಂತೆ ಮೂಗಿಗೆ ಮೂಗು ಕಿವಿಗೆ ಕಿವಿ ಎನ್ನುವ ಸಿದ್ಧಾಂತದವನಲ್ಲ. ‘ಚಿರುತೊಣೆಯಾಂಡ’ನನ್ನು ಕರೆಸಿ ಹೀಗೆ ಹೇಳುತ್ತಾನೆ. ‘ಚಿರುತೊಣೆಯಾಂಡರೆ, ಹೂವನ್ನು ಮೊದಲು ತೆಗೆದುಕೊಟ್ಟಿದ್ದು ಹಸ್ತ. ಆಮೇಲೆ ತಾನೆ ಮೂಗು ಅದನ್ನು ಮೂಸಿದ್ದು. ಇದನ್ನು ಮರೆತು ಮೂಸಿದ ಮೂಗನ್ನು ಮಾತ್ರ ಕತ್ತರಿಸಿ ಬಿಟ್ಟಿರಿ’ ಎಂದು ಹೇಳುತ್ತಾನೆ. ಹಾಗೆ ಹೇಳಿ ಸ್ವತಃ ತಾನೇ ಮುಂದುವರೆದು ‘ಚೊಲ್ಲಡಿಯನಾಚಿ’ಯ ಬಲಗೈಯನ್ನು ಕತ್ತರಿಸಿ ಹಾಕುತ್ತಾನೆ. ಆತನೂ ಶಿವಭಕ್ತ! ತನ್ನ ಶಿವಭಕ್ತಿಯನ್ನು ಈ ರೀತಿಯಲ್ಲಿ ಪ್ರಕಟಿಸುತ್ತಾನೆ.
ಇನ್ನು ನಮ್ಮ ದೇವನಾದ ‘ಶಿವ’ ಸುಮ್ಮನಿರುತ್ತಾನೆಯೇ? ಸ್ವತಃ ಕೈಲಾಸದಿಂದ ಇಳಿದು ಬರುತ್ತಾನೆ. ತನ್ನ ಭಕ್ತರ ಸಾಹಸವನ್ನು ಮೆಚ್ಚಿಕೊಳ್ಳುತ್ತಾನೆ. ಇತ್ತ ರಾಣಿಯ ಮೂಗನ್ನು ಸರಿಪಡಿಸುತ್ತಾನೆ!
ಸ್ತ್ರೀಸಹಜವಾದ ಆಸೆಯಿಂದ ಹೂವನ್ನು ಇಷ್ಟಪಟ್ಟಿದ್ದೇ ರಾಣಿ ಮಾಡಿದ ತಪ್ಪು. ಅದಕ್ಕೆ ಈ ಮಹಾನ್ ಶಿವಭಕ್ತರು ನೀಡುವ ಶಿಕ್ಷೆ ಶಿವಭಕಿಯ ಪ್ರತೀಕ! ಪಾಪ ‘ಚೊಲ್ಲಡಿಯನಾಚಿ’. ಸ್ವತಃ ಶಿವಭಕ್ತೆಯಾದರೂ ಕೆಲ ಕಾಲವಾದರೂ ಮೂಗು ಹಾಗೂ ಬಲಗೈ ಕತ್ತರಿಸಿಕೊಂಡ ನೋವನ್ನು ಅನುಭವಿಸಬೇಕಾಯಿತು. ಇತಿಹಾಸದುದ್ದಕ್ಕೂ ಹೀಗೆ. ಮಹಿಳೆ ಪುರುಷರ ದೌರ್ಜನ್ಯಕ್ಕೆ ವಿನಾಕರಾಣ ಗುರಿಯಾಗುತ್ತಾಳೆ. ಏಕೆಂದರೆ ಆಕೆ ಸಹನಾ ಧರಿತ್ರಿ!
ಮೂಗು ಕೈ ಕತ್ತರಿಸಿದ ಘಟನೆಯಲ್ಲಿ ವಾಸ್ತವಾಂಶ ಇದೆಯೆನ್ನಬಹುದು. ಆದರೆ ಶಿವ ಬಂದು ಆಕೆಗೆ ಕತ್ತರಿಸಿದ್ದ ಮೂಗನ್ನು ಕೈಯನ್ನು ವಾಪಸ್ ಕೊಟ್ಟ ಎಂಬುದರಲ್ಲಿ ವಾಸ್ತಾವಾಂಶ ಇದೆ ಎನ್ನಲಾದೀತೆ? ಮೊದಲನೆಯದು ಮೂರ್ತವಾದರೆ ಎರಡನೆಯದು ಅಮೂರ್ತ! ಬಹುಶಃ ಆಕೆಯ ಸಹನೆಯೇ ಶಿವಸ್ವರೂಪದ್ದು! ಆಕೆ ಅವರು ಮಾಡಿದ್ದು ಸರಿ ಎಂದು ತನ್ನ ನವನ್ನು ತಾನೇ ಅನುಭವಿಸಿರುವುದೇ ಹೆಚ್ಚು ವಾಸ್ತವ ಎನ್ನಿಸುತ್ತದೆ. ಅತ್ತ ಪಾಕಿಸ್ತಾನದ ಯುವತಿಯದೂ ಅದೇ ಕಥೆಯಲ್ಲವೆ? ಧನಪರಿಹಾರವೇನೋ ಸಿಕ್ಕಿತು. ಆದರೆ ಕಳೆದುಕೊಂಡ ಮೂಗು ಕವಿಗಳನ್ನು ಸರಿಪಡಿಸಲಾದೀತೆ? ಈ ದೇವರು (ಇದ್ದರೆ) ಎಷ್ಟು ಕಟುಕನಪ್ಪ? ಜನರಲ್ಲಿ ಇಂತಹ ನೀಚ ಪ್ರವೃತ್ತಿಯನ್ನು ಆತ ಪ್ರೇರೇಪಿಸುವುದಾದರೂ ಏಕೆ?
ಈ ಎರಡೂ ಘಟನೆ ಪರಸ್ಪರ ಹೋಲಿಕೆ ಮಾಡಿ ಸರಿ ಯಾವುದು ತಪ್ಪು ಯಾವುದು ಎಂದು ನಿರ‍್ಧಾರ ಮಾಡುವುದಕ್ಕಲ್ಲ. ಇತಿಹಾಸದಲ್ಲಿ ಎಂತೆಂತಹ ಘಟನೆಗಳು ನಡೆದು ಹೋಗಿವೆ, ಅಥವಾ ನಮ್ಮ ಸಾಹಿತ್ಯ ಪರಂಪರೆ ಏನನ್ನು ಪೋಷಿಸಿಕೊಂಡು ಬಂದಿದೆ ಎಂಬುದನ್ನು ಪರಿಭಾವಿಸಲು, ಅಷ್ಟೆ.

5 comments:

ತೇಜಸ್ವಿನಿ ಹೆಗಡೆ said...

ದೌರ್ಜನ್ಯಕ್ಕೆ ಒಳಗಾದ ಆಕೆಗೆ ಪಾಕಿಸ್ತಾನದಂತಹ ರಾಷ್ಟ್ರದಲ್ಲೂ ಸರಿಯಾದ ನ್ಯಾಯ ದೊರಕಿದ್ದು ತುಂಬಾ ಆಶ್ಚರ್ಯಕರ ಸಂಗತಿಯೇ ಸರಿ!! ಒಂದೊಮ್ಮೆ ಇದೇ ದುರ್ಘಟನೆ ಇಲ್ಲಿ ನಡೆದಿದ್ದರೆ ಬೇರೆಯೇ ರೀತಿ (ಅ)ನ್ಯಾಯ ದೊರಕುತ್ತಿತ್ತೇನೋ!! ಮಹಿಳೆಯರ ಮೇಲೆ ಅನಾದಿಕಾಲದಿಂದಲೂ ದೌರ್ಜನ್ಯ ನಡೆಯುತ್ತಲೇ ಇದೆ. ಇದಕ್ಕೆ ನಮ್ಮ ತುಕ್ಕು ಹಿಡಿದ ಕಾನೂನು ಎಷ್ಟರಮಟ್ಟಿಗೆ ಸಹಕಾರಿಯಾಗಿದೆ ಎನ್ನುವುದನ್ನು ನನ್ನ ಒಂದು ಲೇಖನದಲ್ಲಿ ಕ್ಲುಪ್ತವಾಗಿ ಬರೆದಿರುವೆ. ಬಹು ಬೇಗ ಬ್ಲಾಗ್‌ನಲ್ಲೂ ಕಾಣಿಸುವೆ.

ಸಕಾಲಿಕ ಲೇಖನ. ನಿಮ್ಮ ಕಳಕಳಿ ಮೆಚ್ಚತಕ್ಕದ್ದು.

Ittigecement said...

ಸತ್ಯನಾರಾಯಣರವರೆ....

ನಾನು ಗಲ್ಫ್ ದೇಶದಲ್ಲಿದ್ದೆ...
ಅಲ್ಲಿ ಅತ್ಯಾಚಾರ ಮಾಡಿದವನಿಗೆ ಸಾರ್ವಜನಿಕರು ಕಲ್ಲು ಎಸೆದು ಸಾಯಿಸುತ್ತಾರೆ...
ಅದು ಟಿವಿಯಲ್ಲಿ ಭಿತ್ತರವಾಗುತ್ತದೆಯಂತೆ (ನಾನು ಅಲ್ಲಿದ್ದಾಗ ನಡೆದಿರಲಿಲ್ಲ)
ಅಲ್ಲಿ ಹೆಣ್ಣು ಮಕ್ಕಳನ್ನು ಛೇಡಿಸುವ.. ಚುಡಾಯಿಸುವದನ್ನು ನಾನು ಎಲ್ಲಿಯೂ ಕಾಣಲಿಲ್ಲ..

ಅಲ್ಲಿ ಕಳ್ಳತನ ಇಲ್ಲವೇ ಇಲ್ಲ...

ನಮ್ಮ ಕ್ಯಾಷ್ ಬ್ಯಾಗನ್ನು ನಡು ರಸ್ತೆಯ ಮೇಲಿಟ್ಟು ಹೋದರೂ ಕಳ್ಳತನವಾಗುವದಿಲ್ಲ...

ಶಿಕ್ಷೆಯಿಂದ ಜನ ಸುಧಾರಣೆ ಆಗುತ್ತದೆ ಎನ್ನೋಣವೆ?

ಅದು ತಪ್ಪು ಎನಿಸಿದರೂ...
ನನ್ನ ಅನುಭವದ ಬಗೆಗೆ ಏನನ್ನುತ್ತೀರಿ?

sunaath said...

ಭಾರತದಲ್ಲಿ ಹೆಣ್ಣುಮಕ್ಕಳ ಮೇಲೆ ಕೈಮಾಡುವದು, acid ಎರಚುವದು, ಹತ್ಯೆ ಮಾಡುವದು, ಬಲಾತ್ಕಾರ ಮಾಡುವದು ಇವೆಲ್ಲ ನಡದೇ ಇವೆ. ಪಾತಕಿಗಳಿಗೆ ಯೋಗ್ಯ ಶಿಕ್ಷೆ ಆದದ್ದನ್ನು ನಾನು ಓದಿಲ್ಲ.ಉದಾಹರಣೆಗೆ ಜೆಸ್ಸಿಕಾ ಲಾಲ್ ಹಾಗು ರುಚಿಕಾ ಪ್ರಸಂಗಗಳನ್ನು ನೋಡಿರಿ. ಭಾರತಕ್ಕಿಂತಲೂ ಈ ವಿಷಯದಲ್ಲಿ ಪಾಕಿಸ್ತಾನವೇ ಉತ್ತಮ ಎಂದೆನಿಸುತ್ತದೆ.

shivu.k said...

ಸರ್,

ನಾನು ದಿನಪತ್ರಿಕೆಯಲ್ಲಿ ಓದಿದೆ. ಮಹಿಳೆಗೆ ಅನ್ಯಾಯವಾಗುತ್ತಿರುವುದು ಈಗ ಮಾತ್ರವಲ್ಲ ಅಂದಿನ ಪುರಾಣದಲ್ಲಿ ಆಗಿರುವುದನ್ನು ಚೆನ್ನಾಗಿ ವಿವರಿಸಿ ಅದರ ಮಾಹಿತಿಯನ್ನು ನೀಡಿದ್ದೀರಿ..

ವಿದೇಶಗಳಲ್ಲಿ ಅದರಲ್ಲೂ ಈ ಇಸ್ಲಾಂ ಧರ್ಮದ ರಾಷ್ಟ್ರದ ಕಾನೂನೂ ಕಠಿಣವಾಗಿರುವುದು ನೋಡಿದರೆ ಭಯವಾಗುತ್ತದೆ. ಹಾಗೆ ಇವತ್ತಿನ ವಿಜಯಕರ್ನಾಟಕದಲ್ಲಿ ಸದ್ಯ ಯೂರೋಪಿನಾದ್ಯಂತ ಇವರೇ ಹೆಚ್ಚೆಚ್ಚು ವಾಸಿಸುತ್ತಿರುವುದರ ಬಗ್ಗೆ ಡಚ್ ಸಚಿವರ ಲೇಖವವನ್ನು ಓದಿದೆ. ನೀವು ಬಿಡುವು ಮಾಡಿಕೊಂಡು ಓದಿ..

ಬಿಸಿಲ ಹನಿ said...

ಇತಿಹಾಸದಲ್ಲಿ ಇಂಥ ಎಷ್ಟೋ ದುರಂತಗಳು ಅಡಗಿವೆ ಮಾತ್ರವಲ್ಲ ವರ್ತಮಾನದಲ್ಲೂ ಸ್ತ್ರೀಯರ ಮೇಲಿನ ದೌರ್ಜನ್ಯಗಳೂ ಆಗಾಗ ಕೇಳಿಬರುತ್ತಿರುವದು ವಿಪರ್ಯಾಸವಾದರೂ ಸತ್ಯ. ಹರಿಹರನ ಕಾವ್ಯದ ತುಣುಕೊಂದರ ಸ್ವಾರಸ್ಯವನ್ನು ಉಣಬಡಿಸಿದ್ದಕ್ಕೆ ಥ್ಯಾಂಕ್ಸ್. ಅಂದಹಾಗೆ ವರುಷ ತುಂಬಿದ ನಿಮ್ಮ ಬ್ಲಾಗಿಗೆ ಶುಭಾಶಯಗಳು. ನಿಮ್ಮ ಬರಹಗಳು ನಿಮ್ಮ ಲೇಖನಿಯಿಂದ ಹೀಗೆ ಹರಿದುಬರುತ್ತಿರಲಿ.