Tuesday, January 25, 2011

ರೈತನಾಗುವ ಹಾದಿಯಲ್ಲಿ ಸಂಪಾದನೆ : ಆಹ್ಲಾದಕರ ಅನುಭವ
ಪುಸ್ತಕ ಸಂಪಾದನೆಯ ಬಗ್ಗೆ ಹೇಳುವುದಕ್ಕೆ ಮೊದಲು, ಅವಾರ್ಯವಾಗಿ ನನ್ನ ಮತ್ತು ಶ್ರೀ ಎಸ್. ಮಧುಸೂದನ ಪೆಜತ್ತಾಯ ಅವರ ಪರಿಚಯದ ಬಗ್ಗೆ ಹೇಳಲೇಬೇಕೆನ್ನಿಸುತ್ತಿದೆ. ೨೦೦೮ರಲ್ಲಿ ಇರಬಹುದು. ತೇಜಸ್ವಿಯವರ ವೈಚಾರಿಕತೆ ಎನ್ನುವ ನನ್ನ ಲೇಖನ ಕನ್ನಡಧ್ವನಿ.ಕಾಂ ಆನ್ ಲೈನ್ ಪತ್ರಿಕೆಯಲ್ಲಿ ಎಂಟು ಕಂತುಗಳಲ್ಲಿ ಪ್ರಕಟವಾಗಿತ್ತು. ಅದಕ್ಕೆ ಬಂದು ಪ್ರತಿಕ್ರಿಯೆಗಳನ್ನು ಒಟ್ಟಾಗಿಸಿ ಶ್ರೀ ಗೋಪಿನಾಥ್‌ರಾವ್ ದೂರದ ದುಬೈನಿಂದ ನನಗೆ ಈ-ಮೇಲ್ ಕಳುಹಿಸಿದ್ದರು. ಅದರಲ್ಲಿ ಒಂದು ಪ್ರತಿಕ್ರಿಯೆ ಶ್ರೀ ಮಧುಸೂದನ ಪೆಜತ್ತಾಯ ಅವರದ್ದಾಗಿತ್ತು. ಕೇವಲ ನಾಲ್ಕೇ ಸಾಲಿದ್ದ ಅದು ನನಗೆ ವಿಶೇಷವಾಗಿ ಕಂಡಿದ್ದರಿಂದ, ಅವರಿಗೊಂದು ಈ-ಮೇಲ್ ತಕ್ಷಣ ಕಳುಹಿಸಿಬಿಟ್ಟೆ. ಆಶ್ಚರ್ಯ! ಕೇವಲ ಐದೇ ನಿಮಿಷದಲ್ಲಿ ಅದಕ್ಕೆ ಪ್ರತ್ಯುತ್ತರ ಬಂದಿತ್ತು. ಸ್ವತಃ ಪೆಜತ್ತಾಯ ಅವರೇ ತಮ್ಮ ಕಿರು ಪರಿಚಯ ಮಾಡಿಕೊಂಡು ಸ್ನೇಹಪೂರ್ವಕ ಈ-ಮೇಲ್ ಕಳುಹಿಸಿದ್ದರು.

ಹೀಗೆ ಅಂದು ಪ್ರಾರಂಭವಾದ ನಮ್ಮ ಈ-ಮೇಲ್ ಸ್ನೇಹ, ದಿನಕ್ಕೊಂದು ಒಮ್ಮೊಮ್ಮೆ ಎರಡು ಮೂರು ನಾಲ್ಕು ಈ-ಮೇಲ್‌ಗಳವರೆಗೂ ಬಂತು. ಅವರು ಬರೆದ ಇಂಗ್ಲಿಷ್ ಪುಸ್ತಕದ ನೂರಾರು ಪುಟಗಳನ್ನು ನನಗೆ ಈ-ಮೇಲ್ ಮುಖಾಂತರವೇ ಕಳುಹಿಸಿದ್ದರು. ನನ್ನ ಪುಸ್ತಕಗಳನ್ನು ಕೇಳಿ ಪಡೆದು ಓದಿ ಅದಕ್ಕೆ ತಮ್ಮ ಅನಿಸಿಕೆಯನ್ನೂ ಬರೆದರು. ಅತ್ಯಂತ ಸರಳ ನೇರ ಮಾತುಗಾರಿಕೆಯ ಮೂಲಕ ನನ್ನ ಆತ್ಮೀಯರಾದರು. ಕೃಷಿ ವ್ಯವಸಾಯ ಸಾಹಿತ್ಯ ಫೋಟೋಗ್ರಫಿ ಎಲ್ಲವುದರ ಬಗ್ಗೆಯೂ ತಮಗೆ ತಿಳಿದಿರುವುದನ್ನು ಅತ್ಯಂತ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಪ್ರಸ್ತುತ ಪಡಿಸುವ ಅವರ ಶೈಲಿ ನನಗೆ ಅಚ್ಚುಮೆಚ್ಚಾಗಿತ್ತು. ನಂತರ ಅವರನ್ನು ಬೇಟಿ ಮಾಡದೇ, ಅವರ ತೋಟಕ್ಕೂ ಹೋಗಿ ಸುತ್ತಾಡಿಕೊಂಡು ಬರುವ ಯೋಗವೂ ಲಭಿಸಿತು. ಅಲ್ಲಿಂದ ಬಂದ ಮೇಲೆಯೇ ಅವರನ್ನು ಮುಖತಃ ಬೇಟಿಯಾಗಿದ್ದು. ನಮ್ಮಿಬ್ಬರ ನಡುವೆ ಇಪ್ಪತ್ತೈದು ವರ್ಷಗಳ ಅಂತರವಿದೆ. ಒಂದು ತಲೆಮಾರು ಆಗಿಹೋಗಿದೆ. ಆದರೆ ನಮಗೆಂದೂ ಆ ವಯಸ್ಸಿನ ಅಂತರ ಒಂದು ಸಮಸ್ಯೆಯೇ ಆಗಿಲ್ಲ.ಅವರು ಸುಮ್ಮನೆ ಸಮಯ ಕಳೆಯಲು ಈ-ಮೇಲ್ ಕಳುಹಿಸುವುದಿಲ್ಲ. ಮಾಹಿತಿಯನ್ನು ಕೊಡಲು ಪಡೆಯಲು ಅದನ್ನು ಅವರು ಯಶಸ್ವಿಯಾಗಿ ಬಳಸುತ್ತಾರೆ. ಅವರಿಂದ ಬರುತ್ತಿದ್ದ ಕೆಲವೊಂದು ಈ-ಮೇಲ್ ಬರಹಗಳು ಒಳ್ಳೆಯ ಲೇಖನಗಳ ಕಚ್ಚಾರೂಪದಂತೆಯೇ ನನಗೆ ಕಾಣುತ್ತಿದ್ದವು. ಅದೊಂದು ದಿನ, ಹಾಗೆ ಬಂದ ಈ-ಮೇಲ್ ಬರಹವೊಂದನ್ನು ಲೇಖನದ ರೂಪಕ್ಕೆ ತಂದು ಅವರಿಗೆ ಕಳುಹಿಸಿ ಅಭಿಪ್ರಾಯ ಕೇಳಿದೆ. ತಕ್ಷಣ, ತುಂಬಾ ಚೆನ್ನಾಗಿದೆ. ನನ್ನ ಅಭಿಪ್ರಾಯ, ಭಾಷೆ ಯಾವುದಕ್ಕೂ ಧಕ್ಕೆ ಬಾರದ ಹಾಗೆ ಇಡೀ ಬರಹವನ್ನು ಲಲಿತಪ್ರಬಂದದಂತೆ ಬದಲಾಯಿಸಿರುವುದು ಖುಷಿಯಾಗಿದೆ ಎಂದರು. ನಾನು ಅದನ್ನು (ಕೊನೆಗೂ ಆ ಹುಲಿ ನನ್ನನ್ನು ಕಾಯಲೇ ಇಲ್ಲ!) ನನ್ನ ಬ್ಲಾಗಿನಲ್ಲಿ ಪ್ರಕಟಿಸಲು ಅನುಮತಿ ಕೇಳಿದೆ. ಸಂತೋಷದಿಂದಲೇ ಒಪ್ಪಿಗೆಯಿತ್ತರು. ಅದಕ್ಕೆ ಬಂದ ಪ್ರತಿಕ್ರಿಯೆಗಳಿಂದ ಉತ್ತೇಜನಗೊಂಡು, ಇನ್ನೂ ಒಂದೆರಡು ಈ ಮೇಲ್‌ಗಳನ್ನು ಲೇಖನಗಳನ್ನಾಗಿ ಪರಿವರ್ತಿಸಿ ಅವರ ಒಪ್ಪಿಗೆ ಪಡೆದು ಬ್ಲಾಗಿನಲ್ಲಿ ಹಾಕಿದ್ದೆ.

ಅದೊಂದು ದಿನ ಹೀಗೆ ಪ್ರಕಟವಾಗಿದ್ದ ಬರಹವೊಂದನ್ನು ನೋಡಿ, ಈ-ಮೇಲ್‌ನಲ್ಲಿ ತಮ್ಮ ಎಡಿಟಿಂಗ್ ಶಾಘನೀಯ. ನನ್ನ ಕನ್ನಡ ಬರಹಗಳೆನ್ನೆಲ್ಲಾ ತಮಗೆ ಒಪ್ಪಿಸುವ ಆಸೆ. ಜತೆಗೆ ಅವುಗಳ ಮೇಲಿನ ಸರ್ವ ಅಧಿಕಾರವನ್ನೂ! ಎಂದು ಬರೆದಿದ್ದರು. ನನಗೆ ಏನು ಹೇಳಬೇಕೆಂದು ತೋಚದೆ, ಅವರು ನನ್ನ ಮೇಲಿಟ್ಟ ನಂಬಿಕೆಗೆ ಮೂಕವಿಸ್ಮಿತನಾಗಿ ಸುಮ್ಮನಾಗಿಬಿಟ್ಟದ್ದೆ. ತಕ್ಷಣ ಬಂದ ಇನ್ನೊಂದು ಈ-ಮೇಲಿನಲ್ಲಿ ನನ್ನ ಎಲ್ಲಾ ಕನ್ನಡ ಬರಹಗಳ ಉತ್ತರಾಧಿಕಾರಿ ನೀವೆ! ನಿಮಗೆ ಹೇಗೆ ಬೇಕೋ ಹಾಗೇ ಅವನ್ನು ಬಳಸಿಕೊಳ್ಳಿ. ಅವುಗಳಲ್ಲಿ ನಾನು ಸತ್ಯವನ್ನು ಬಿಟ್ಟು ಬೇರೆ ಏನನ್ನೂ ಬರೆದಿಲ್ಲ. ಎಂದು ಬರೆದು ಅವರ ಕಂಪ್ಯೂಟರಿನಲ್ಲಿದ್ದ ಎಲ್ಲಾ ಕನ್ನಡ ಫೈಲುಗಳನ್ನು ಅಟ್ಯಾಚ್ ಮಾಡಿ ನನಗೆ ಕಳುಹಿಸಿದ್ದರು!

ನನಗೆ ಏನು ಮಾಡಬೇಕೆಂದು ತಕ್ಷಣಕ್ಕೆ ತೋಚಲಿಲ್ಲ. ಅವರ ಬರಹಗಳಟ್ಟುಕೊಂಡು ಏನು ಮಾಡುವುದು? ಇದೊಂದು ಯಕ್ಷಪ್ರಶ್ನೆಯಾಗಿಬಿಟ್ಟಿತ್ತು. ಅವರ ಎಲ್ಲಾ ಬರಹಗಳನ್ನು ಪುಸ್ತಕಕ್ಕೆ ಅಳವಡಿಸಲು ಸಾಧ್ಯವಿರಲಿಲ್ಲ. ಆಗಾಗಲೇ ಅವರ ಕಾಗದದ ದೋಣಿಯಲ್ಲಿ ಸಾಕಷ್ಟು ಪ್ರಕಟವಾಗಿದ್ದವೂ ಕೂಡಾ. ಒಂದೇ ವಿಷಯಕ್ಕೆ ಸಂಬಂಧಪಟ್ಟ ಕೆಲವನ್ನಾದರೂ ಆಯ್ದು ಪುಸ್ತಕ ರೂಪದಲ್ಲಿ ಪ್ರಕಟಿಸಬಹುದಲ್ಲವೇ? ಎಂಬ ಯೋಚನೆ ನನಗೆ ಯಾವಾಗ ಬಂತೋ, ಆಗಲೇ ಕಾರ್ಯಪ್ರವೃತ್ತನಾಗಿಬಿಟ್ಟೆ. ನಾನು ಅಷ್ಟೊತ್ತಿಗಾಗಲೇ ಈ-ಮೇಲ್‌ನಲ್ಲಿ ಬಂದ ಐದಾರು ಬರಹಗಳನ್ನು ಲೇಖನ ರೂಪದಲ್ಲಿ ಸಂಪಾದಿಸಿದ್ದೆ. ಅವುಗಳಿಗೆ ಪೂರಕವಾಗಿಯೇ ವಿಷಯವನ್ನು ಅರಸುತ್ತಾ ಕಾಗದದ ದೋಣಿ ಪುಸ್ತಕದಲ್ಲಿ ಪ್ರಕಟವಾಗದಿರುವ ಬರಹಗಳನ್ನು ಒಂದು ಕಡೆ ಕಲೆ ಹಾಕಿದೆ. ಅದು, ಅವರು ತಮ್ಮ ಪ್ರಾರಂಭದ ದಿನಗಳಲ್ಲಿ, ತಮ್ಮ ಅಕ್ಕ ಮತ್ತು ಭಾವಗೋಸ್ಕರ, ತೋಟ ಮಾಡಲು ಶಿರೂರಿನಲ್ಲಿ ಕಳೆದ ಒಂದು ವರ್ಷದ ಜೀವನದ ಕಥೆಯಾಗಿತ್ತು! ಶಿರೂರಿನ ಒಂದು ವರ್ಷದ ಅವಧಿಯ ಅವರ ಬದುಕನ್ನು ತಮಗರಿವಿಲ್ಲದೇ ಅವರು ಅಕ್ಷರ ರೂಪಕ್ಕೆ ಇಳಿಸಿಬಿಟ್ಟಿದ್ದರು!ಈ ಪುಸ್ತಕದಲ್ಲಿ ಇಪ್ಪತ್ತಮೂರು ಲೇಖನಗಳನ್ನು ಸಂಪಾದಿಸಿ, ಸಂಕಲಿಸಿದ್ದೇನೆ. ಮೊದಲ ಮತ್ತು ಕೊನೆಯ ಲೇಖನಗಳು ನೇರವಾಗಿ ಶಿರೂರಿನ ಬದುಕಿಗೆ ಸಂಬಂಧಿಸಿದವುಗಳಲ್ಲದಿದ್ದರೂ, ಪೂರಕ ಬರಹಗಳೇ ಆಗಿವೆ. ಪೆಜತ್ತಾಯರ ಜೀವನಪ್ರೀತಿಯನ್ನು ಪ್ರತಿ ಲೇಖನದಲ್ಲೂ ಓದುಗ ಸವಿಯಬಹುದು. ಸಾಹಿತ್ಯಲೋಕದ ಯಾವುದೇ ಕಟ್ಟುಪಾಡುಗಳು, ಮುಲಾಜುಗಳೂ ಈ ಲೇಖಕರಿಗಿಲ್ಲ. ಅವರೆಂದೂ ತಮ್ಮನ್ನು ತಾವು ಲೇಖಕ ಎಂದು ಕರೆದುಕೊಳ್ಳುವುದಿರಲಿ, ಹಾಗೆಂದು ಭಾವಿಸಿಯೂ ಇಲ್ಲ. ನಾನೊಬ್ಬ ರೈತ, ಮಡ್ಡ, ದಡ್ಡ ಎಂದು ಹೇಳಿ ಎದುರಿಗೆ ಕುಳಿತಿರುವವರಲ್ಲಿ ನಗೆಯ ಬುಗ್ಗೆ ಉಕ್ಕಿಸುವ ಅವರೊಳಗೆ ಪ್ರಧಾನವಾಗಿ ಕಾಣುವುದು ರೈತನನ್ನೇ. ಆದರೆ ಮಿಶ್ರಬೆಳೆ ಪದ್ಧತಿಯಲ್ಲಿ ಉಪಉತ್ಪನ್ನಗಳಿರುವಂತೆ, ಪೆಜತ್ತಾಯರೊಳಗೆ ಒಬ್ಬ ಸಂಶೋಧಕ, ಒಬ್ಬ ಬರಹಗಾರ, ಒಬ್ಬ ಛಾಯಾಚಿತ್ರಕಾರ ಒಟ್ಟಾರೆಯಾಗಿ ಬಹುಮುಖೀ ಕಲಾವಿದನೊಬ್ಬನಿದ್ದಾನೆ. ಕೃಷಿ ಅವರ ಜೀವನದ ಸ್ಥಾಯಿಭಾವವಾದರೆ ಉಳಿದೆಲ್ಲವೂ ಸಂಚಾರೀ ಭಾವಗಳು!

ಸಾಹಿತ್ಯಲೋಕದ ಪರಿಭಾಷೆಯ ಬಗ್ಗೆ ಪೆಜತ್ತಾಯರ ಬರಹಗಳನ್ನು ಇಟ್ಟು ನೋಡಲು ಆಗುವುದೇ ಇಲ್ಲ. ಜೀವನದ ಅನುಭವಗಳನ್ನು ಯಾವುದೇ ಸಾಹಿತ್ಯಕ ಮಾನದಂಡಗಳಿಲ್ಲದೇ ನೇರವಾಗಿ, ಸರಳವಾಗಿ, ಆದರೆ ಕುತೂಹಲಕಾರಿಯಾಗಿ ಪ್ರಸ್ತುಪಡಿಸುವುದರಲ್ಲೇ ಅವರ ಬರಹದ ಸೊಗಸಿದೆ. ಪ್ರತೀ ಬರಹದ ಹಿಂದೆ ಅವರ ಹುಡುಕಾಟದ ಗುಣವನ್ನು ನಾವು ಕಾಣಬಹುದಾಗಿದೆ.

ಕೇವಲ ಒಂದು ವರ್ಷದ ಅವಧಿಯಲ್ಲಿ ಅವರು ಪಟ್ಟ ಕಷ್ಟಗಳು, ಎದುರಿಸಿದ ಸವಾಲುಗಳು, ಒಡನಾಡಿದ ಜನಸಮೂಹ ಎಲ್ಲವೂ ಈ ಬರಹದಲ್ಲಿ ಬಂದು ಹೋಗುತ್ತವೆ. ಯಾವುದೇ ರಸವತ್ತಾದ ಕಾದಂಬರಿಗಳ ಪಾತ್ರವನ್ನೂ ಮೀರಿಸಬಲ್ಲಂತಹ ಪಾತ್ರಗಳು ಅವರ ನಿಜಜೀವನದಲ್ಲಿ ಬಂದು ಹೋಗಿರುವುದನ್ನು ಕಾಣಬಹುದಾಗಿದೆ. ಗ್ರಾಮೀಣ ಬದುಕಿನ ಸೊಗಡು ಸಹಜವಾಗಿಯೇ ನಮಗೆ ದಕ್ಕುವುದು ಅವರು ನೆನಪಿನಲ್ಲಿಟ್ಟುಕೊಂಡು ಚಿತ್ರಿಸಿರುವ ಆ ಮುಗ್ಧ ಹಳ್ಳಿಗರ ಪಾತ್ರಗಳಿಂದ! ಕುವೆಂಪು, ಕಾರಂತ, ಗೊರೂರು, ತೇಜಸ್ವಿ, ದೇವನೂರು ಮೊದಲಾದವರ ಕಥೆ ಕಾದಂಬರಿಗಳಲ್ಲಿ ಬಂದು ಹೋಗುವ ನೂರಾರು ಪಾತ್ರಗಳ ಒಂದು ಪುಟ್ಟ ಮೆರವಣಿಗೆ ಈ ಕೃತಿಯ ಓದುಗನ ಮನಸ್ಸಿನಲ್ಲಿ ನಡೆದು ಹೋದರೆ ಆಶ್ಚರ್ಯವೇಲ್ಲ.

ಪ್ರತಿಯೊಂದು ಬರಹಗಳ ಬಗ್ಗೆ ಪ್ರತ್ಯೇಖವಾಗಿ ಇಲ್ಲಿ ಹೇಳುವ ಅಗತ್ಯವಿಲ್ಲ. ಪೆಜತ್ತಾಯರ ಬರಹಗಳಿಗೆ ಅಂತಹ ದಿಕ್ಸೂಚಿಯ ಅಗತ್ಯವೂ ಇಲ್ಲ. ಅಷ್ಟು ಚೆನ್ನಾಗಿ ಓದಿಸಿಕೊಂಡು ಹೋಗುವ ಅವರ ಲೇಖನಗಳ ಬಗ್ಗೆ ಬರೆದು ಪರಿಚಯ ಮಾಡಿಕೊಡುವುದೆಂದರೆ ಅದು ಅವರ ಬರಹಗಳಿಗೆ ಅಪಚಾರ ಮಾಡಿದಂತೆ ಎಂಬ ಎಚ್ಚರ ನನಗಿದೆ.ಸರ್ ನೀವು ರಿಟಾಯರ್ಡ್ ರೈತರಾದರೆ, ನಾನು ವೀಕೆಂಡ್ ರೈತ ಎಂದು ನಾನೊಮ್ಮೆ ಬರೆದಿದ್ದೆ. ಅದನ್ನು ಓದಿ ಹೌದು ನಾನು ದೈಹಿಕವಾಗಿ ರಿಟಾಯರ್ಡ್; ಆದರೆ ಮಾನಸಿಕವಾಗಿ ಎಂದೆಂದಿಗೂ ರೈತನೇ! ಈಗ ನೋಡಿ ಇಲ್ಲೇ ಕುಳಿತುಕೊಂಡು, ಕೃತಕವಾಗಿ ಕಾಫಿಯನ್ನು ಒಣಗಿಸುವ ಯಂತ್ರೋಪಕರಣವನ್ನು ನನ್ನ ತೋಟದಲ್ಲಿ ಹಾಕಿಸುತ್ತಿದ್ದೇನೆ ಎಂದು ಜೋರಾಗಿ ನಕ್ಕಿದ್ದರು. ವಯೋಸಹಜವಾದ ದೈಹಿಕ ನಿಶ್ಯಕ್ತಿಯಿಂದ ಬಳಲುತ್ತಿದ್ದರೂ, ಬೆಂಗಳೂರಿನಲ್ಲೇ ನೆಲೆಸಿದ್ದರೂ, ಅವರ ತೋಟದ ಒಂದಿಂಚೂ ಅವರ ಕಣ್ಣೆದುರಿನಿಂದ ಮರೆಯಾಗಿಲ್ಲ. ಅಷ್ಟೊಂದು ದೊಡ್ಡ ತೋಟದ ಪ್ರತಿಯೊಂದನ್ನೂ ಅವರು ನಿಭಾಯಿಸುವ ರೀತಿ ನನ್ನಂತಹ ಕಿರಿಯರಿಗೆ ಆದರ್ಶನೀಯ. ಅವುಗಳೆಲ್ಲದರ ನಡುವೆ ಈಗಲೂ, ಜ್ಞಾನದ ಹುಡುಕಾಟವನ್ನೂ ಬಿಟ್ಟಿಲ್ಲ. ಚೀನಾದ ಸಿಲ್ಕ್ ರೂಟ್ ಬಗ್ಗೆ ಬರೆಯುತ್ತಾರೆ. ಕಾಫಿಗಿಡದ ಖಾಯಿಲೆಯ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಹುಡುಕಿ ತೆಗೆದು ಲೇಖನ ಬರೆಯುತ್ತಾರೆ. ನೇಪಾಳ ಪ್ರವಾಸದ ನೆನಪನ್ನೂ ಬಿಚ್ಚಿಡುತ್ತಾರೆ. ಹೀಗೆ ಪೆಜತ್ತಾಯ ಅವರದು ದಣಿವರಿಯದ ದೊಡ್ಡ ಜೀವ. ತಾವು ರೈತರಾಗಿ, ತಮ್ಮ ರೈತ ಬದುಕಿನ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಲೇ ನನ್ನಂತಹ ಕಿರಿಯರ ಮೇಲೆ ಪ್ರಭಾವ ಬೀರುವ ವ್ಯಕ್ತಿತ್ವ ಪೆಜತ್ತಾಯ ಅವರದು. ಅವರ ಪ್ರಭಾವದಿಂದಲೇ ನಾನು ಇಂದು ವಾರಾಂತ್ಯದ ರೈತನಾಗಿ, ತೋಟದಲ್ಲಿ ಬೆವರು ಸುರಿಸಿದಾಗ ಆಗುವ ಸಂತೋಷವನ್ನು ಅನುಭವಿಸುತ್ತಿದ್ದೇನೆ.ನನ್ನ ಮೇಲಿನ ಅಭಿಮಾನದಿಂದ ತಮ್ಮೆಲ್ಲಾ ಕನ್ನಡ ಬರಹಗಳನ್ನು ನನ್ನ ಸುಪರ್ದಿಗೆ ಒಪ್ಪಿಸಿದ್ದಲ್ಲದೆ, ಅವುಗಳನ್ನು ಸಂಪಾದಿಸಲು, ಬ್ಲಾಗಿನಲ್ಲಿ ಪ್ರಕಟಿಸಲು, ಕೊನೆಗೆ ಪುಸ್ತಕ ರೂಪದಲ್ಲಿ ಪ್ರಕಟಸಲು ಅನುಮತಿಯಿತ್ತ ಶ್ರೀ ಎಸ್. ಮಧುಸೂದನ ಪೆಜತ್ತಾಯ ಅವರ ದೊಡ್ಡತನಕ್ಕೆ ನಾನು ತಲೆಬಾಗಿ ನಮಸ್ಕರಿಸುತ್ತೇನೆ.

ಪುಸ್ತಕ ರೂಪದಲ್ಲಿ ಪೆಜತ್ತಾಯರ ಬರಹಗಳನ್ನು ಸಂಪಾದಿಸಿ, ಪ್ರಕಟಿಸಿ ತನ್ಮೂಲಕ ಹಿರಿಯ ರೈತರೊಬ್ಬರಿಗೆ ಗೌರವಿಸಬೇಕೆಂಬ ನನ್ನ ಆಸೆಗೆ ನೀರೆರೆದವರು ನನ್ನ ಗೆಳೆಯ ನಾಗೇಶ್. ಪೆಜತ್ತಾಯರ ವಿಷಯ ಕೇಳುತ್ತಲೇ, ಪುಸ್ತಕ ಪ್ರಕಟಣೆಗೆ ಒಪ್ಪಿ, ಅದನ್ನು ಸಾಕಾರಗೊಳಿಸಿದ ನಾಗೇಶ್ ಸಾಹಸ ನಿಜಕ್ಕೂ ಶ್ಲಾಘಯ.

ಇಂಗ್ಲೀಷ್ ಪುಸ್ತಕಕ್ಕೆ ಯತೀಶ್ ಸಿದ್ಧಿಕಟ್ಟೆ ಅವರಿಂದ ಬರೆಯಿಸಿದ್ದ ಚಿತ್ರಗಳಲ್ಲಿ, ಈ ಪುಸ್ತಕಕ್ಕೆ ಬೇಕಾದ ಕೆಲವು ಚಿತ್ರಗಳನ್ನು ಬಳಸಿಕೊಳ್ಳಲು ಅನುಮತಿಯನ್ನಿತ್ತುದಲ್ಲದೆ, ಕೆಲವೊಂದು ಹೊಸ ಚಿತ್ರಗಳನ್ನು ಬರೆಯಿಸಿಕೊಟ್ಟು ಪೆಜತ್ತಾಯ ಅವರು ಆಶಿರ್ವದಿಸಿದ್ದಾರೆ. ಅತ್ಯಂತ ಸೊಗಸಾದ ಚಿತ್ರಗಳನ್ನು ಬರೆದುಕೊಟ್ಟ ಶ್ರೀ ಯತೀಶ್ ಸಿದ್ಧಿಕಟ್ಟೆಯವರಿಗೂ ನನ್ನ ನಮನಗಳು ಸಲ್ಲುತ್ತವೆ.

ಪೆಜತ್ತಾಯರ ಪುಸ್ತಕಕ್ಕೆ ಮುನ್ನುಡಿಯ ಹಂಗೇಕೆ? ಎನ್ನುತ್ತಲೇ, ಒಂದೇ ಬಾರಿ ಕುಳಿತು ಓದಿ, ಚಿಕ್ಕದಾದರೂ ಚೊಕ್ಕವಾದ, ಅರ್ಥಪೂರ್ಣವಾದ ಮುನ್ನುಡಿಯನ್ನು ಬರೆದುಕೊಟ್ಟ ಲೇಖಕ ಶ್ರೀ ಅಬ್ದುಲ್ ರಷೀದ್ ಅವರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಪುಸ್ತಕದ ಕರಡನ್ನು ತಿದ್ದಿಕೊಟ್ಟಿದ್ದಲ್ಲದೆ, ಅದಕ್ಕೊಂದು ಚೆಂದದ ಬೆನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ ಶ್ರೀ ಜಿ.ಎಸ್.ಎಸ್.ರಾವ್ ಅವರನ್ನೂ ಇಲ್ಲಿ ನೆನೆಯುತ್ತೇನೆ. ಮುಖಪುಟ ಕಲಾವಿದ ಸಾಗರ್, ಮುದ್ರಕರಾದ ಸತ್ಯಶ್ರೀ ಪ್ರಿಂಟರ‍್ಸ್ ಅವರ ನೆರವಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.

ಕೊನೆಯದಾಗಿ, ನನ್ನ ಮತ್ತು ಪೆಜತ್ತಾಯ ಅವರ ಸ್ನೇಹಕ್ಕೆ ಕೌಟಂಬಿಕ ಚೌಕಟ್ಟನ್ನು ಕಲ್ಪಿಸಿದ, ಪೆಜತ್ತಾಯ ಅವರ ಶ್ರೀಮತಿ ಸರೋಜಮ್ಮ, ಅವರ ಮಕ್ಕಳಾದ ರಚನಾ ಮತ್ತು ರಾಧಿಕಾ ಹಾಗೂ ನನ್ನ ಶ್ರೀಮತಿ ಶ್ವೇತಾ ಮತ್ತು ಮಗಳು ಈಕ್ಷಿತಾ, ಹಿರಿಯ ಮಿತ್ರರಾದ ಶ್ರೀ ಜಿ.ಎಸ್.ಎಸ್.ರಾವ್ ಹಾಗೂ ಸಂಧ್ಯಾ ರಾಮಚಂದ್ರ ಅವರ ಸಹಕಾರವನ್ನು ಸ್ಮರಿಸುತ್ತಾ, ರೈತನಾಗುವ ಹಾದಿಯಲ್ಲಿ ಕೃತಿಯನ್ನು ನಿಮ್ಮ ಮುಂದಿರಿಸುತ್ತಿದ್ದೇನೆ.

ಪ್ರೀತಿಯಿಂದ

ಡಾ. ಬಿ.ಆರ್. ಸತ್ಯನಾರಾಯಣ

ಸುರಾನ ಕಾಲೇಜು, ಬೆಂಗಳೂರು

(ಇಂದು 25-0102011 ಮಂಗಳವಾರ ಸಂಜೆ ಆರು ಗಂಟೆಗೆ ಪುಸ್ತಕ ಲೋಕಾರ್ಪಣೆಯಾಗಲಿದೆ)

No comments: