Tuesday, January 18, 2011

ರೈತನಾಗುವ ಹಾದಿಯಲ್ಲಿ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬನ್ನಿ

ಶ್ರೀ ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ತೋಟವಿದೆ. ಹೊಳೆಯ ಈ ಕಡೆ ಬಾಳೆಹೊಳೆ ಎಂಬ ಊರಿದ್ದರೆ ಆ ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭವ ದೊಡ್ಡದು. ಎದುರಿಗೆ ಕುಳಿತಿರುವವರಿಗೆ ಒಂದರೆಕ್ಷಣವೂ ಬೋರು ಹೊಡೆಸದಂತೆ, ವಾತಾವರಣದಲ್ಲಿ ನಗುವಿನ ಸದ್ದು ಸೃಷ್ಟಿಸಬಲ್ಲ ವಾಕ್ಚಾತುರ್ಯ ಇವರಿಗಿದೆ. ತಮ್ಮ ಬಲ್ಲವರಿಂದ ಕೇಸರಿ ಎಂದೇ ಕರೆಸಿಕೊಳ್ಳುತ್ತಿರುವ ಶ್ರೀಯುತರು ಈಗ ರೈತಬದುಕಿನಿಂದ ಆಂಶಿಕ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಕ್ಕಳು ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ವೃತ್ತಿಯಿಂದ ರೈತರಾದರೂ, ಪ್ರವೃತ್ತಿಯಿಂದ ಒಬ್ಬ ಒಳ್ಳೆಯ ವಾಗ್ಮಿ, ಫೋಟೋಗ್ರಾಫರ್, ಕೃಷಿಸಂಶೋಧಕ ಹಾಗೂ ಬರಹಗಾರರು ಕೂಡಾ. ಶ್ರೀಯುತರು ಕಾಗದದ ದೋಣಿ ಎಂಬ ಆತ್ಮವೃತ್ತಾಂತವೆಸಬಹುದಾದ ಲೇಖನಸಂಕಲನವನ್ನು ಬರೆದಿದ್ದಾರೆ. ಆ ಲೇಖನಗಳನ್ನು ಓದುವುದೆಂದರೆ ಭೂತಕಾಲದೊಂದಿಗಿನ ಪಿಸುಮಾತು ಕೇಳಿಸಿಕೊಂಡಂತೆ. ಈ ಪುಸ್ತಕದ ಲೇಖನಗಳು ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿವೆ. ಇದಲ್ಲದೆ ಅವರು ಸಾಕಿದ್ದ ರಕ್ಷಾ ಎಂಬ ನಾಯಿಯನ್ನು ಕುರಿತು ನಮ್ಮ ರಕ್ಷಕ ರಕ್ಷಾ ಎಂದು ರಕ್ಷಾನ ಜೀವನಚರಿತ್ರೆಯನ್ನೂ ಬರೆದಿದ್ದಾರೆ. ಶ್ರೀಯುತರ ಇಂಗ್ಲಿಷ್ ಪ್ರೌಢಿಮೆ ಉನ್ನತಸ್ತರದ್ದಾಗಿದ್ದು ಸದ್ಯದಲ್ಲೇ ಅವರ ಇಂಗ್ಲಿಷ್ ಕೃತಿ Voyage of a Paper Boat ಪ್ರಕಟವಾಗಲಿದೆ. ಪ್ರಸ್ತುತ ಅವರ ಕನ್ನಡ ಪುಸ್ತಕ ರೈತನಾಗುವ ಹಾದಿಯಲ್ಲಿ ಲೋಕಾರ್ಪಣೆಯಾಗುತ್ತಿದೆ. ಹಿರಿಯರಾದ ಶ್ರೀ ಜಿ.ಎಸ್.ಎಸ್.ರಾವ್ ಅವರ ಬೆನ್ನುಡಿಯಿದ್ದರೆ ಮತ್ತು ಕಥೆಗಾರ ಅಬ್ದುಲ್ ರಷೀದ್ ಅವರ ಮುನ್ನುಡಿ ಪುಸ್ತಕಕ್ಕಿದೆ. ಯುವ ಹಾಗೂ ಉದಯೋನ್ಮುಖ ಕಲಾವಿದ ಶ್ರೀ ಯತೀಶ್ ಸಿದ್ದಕಟ್ಟೆ ಅವರ ಆಕರ್ಷಕ ರೇಖಾಚಿತ್ರಗಳನ್ನು ಪುಸ್ತಕ ಒಳಗೊಂಡಿದೆ. ಹಿರಿಯ ಪ್ರಗತಿ ಪರ ರೈತಯರಾದ ನೋಡೋಜ ಶ್ರೀ ನಾರಾಯಣರೆಡ್ಡಿ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ನಾರಾಯಣ ಗೌಡ, ಬರಹಗಾರ, ಪತ್ರಕರ್ತ ಹಾಗೂ ರಾಜಕೀಯ ಚಿಂತಕ ಶ್ರೀ ರವಿಕೃಷ್ಣಾ ರೆಡ್ಡಿ, ಹಾಗೂ ಯುವಬರಹಗಾರರಾದ ಶ್ರೀಮತಿ ಸಿಂಧು ಅವರು ಪುಸ್ತಕಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಮಾರಂಭದ ಆಹ್ವಾನ ಪತ್ರಿಕೆಯನ್ನು ಸ್ವೀಕರಿಸಿ, ಕಾರ್ಯಕ್ರಮಕ್ಕೆ ಬನ್ನಿ, ಜೊತೆಯವರನ್ನೂ ಕರೆತನ್ನಿ. 25.1.2011 ಮಂಗಳವಾರ ಸಂಜೆ ನಯದಲ್ಲಿ ಭೇಟಿಯಾಗೋಣ.

No comments: