ಇಂದು (31 ಜನವರಿ) ಬೇಮದ್ರೆಯವರ ಹುಟ್ಟು ಹಬ್ಬ. ಅವರ ನೆನಪಲ್ಲಿ ಅವರ ಕವನಗಳಲ್ಲಿ ಕಂಡು ಬರುವ ಸರಸ್ವತಿಯ ದರ್ಶನವನ್ನು ಇಲ್ಲಿ ಕಂಡುಕೊಳ್ಳಲು ಪ್ರಯತ್ನಿಸಿದ್ದೇನೆ.
ಬೇಂದ್ರೆಯವರ ’ನಾಲ್ವರು ತಾಯಂದಿರು’ ಕವನದ ಪಲ್ಲವಿಯಲ್ಲಿ ಪೌರಾಣಿಕ ಕಲ್ಪನೆಯ ಮಹಾಸರಸ್ವತಿಯನ್ನು ಕಾಣಲು ಸಾಧ್ಯವಿದೆ.
ಬಾರೆ ಬಾ ಮಹೇಶ್ವರೀ
ಬಾ, ಬಾ, ಬಾ, ಬಾ.
ಬಾರೆ ಬಾ ಮಹೇಶ್ವರೀ
ಮಹಾಕಾಳಿ, ಮಹಾಲಕ್ಷ್ಮಿ
ಬಾ ಮಹಾಸರಸ್ವತೀ
ಇಹುದು ನಿಮಗೆ ಶಾಶ್ವತಿ
’ಗಾಯತ್ರೀ ಸೂಕ್ತ’ ಕವನದಲ್ಲಿ ’ತಾಳಗತಿಯಲ್ಲಿ ವಿಶ್ವಗಳ ಗೀತ ಹಾಡಿದಾಕೆ’ ಎಂಬ ಸಾಲು ಇಡೀ ವಿಶ್ವಸಾಹಿತ್ಯಕ್ಕೇ ಸರಸ್ವತಿಯನ್ನು ಅಧಿದೇವತೆಯೆಂಬುದನ್ನು ಸೂಚಿಸುತ್ತದೆ. ’ಹಾಡಿದವನ ಕಾಪಾಡಲೆಂದು ಕೈ ಹತ್ತು ಎತ್ತಿದಾಕೆ’ ಎಂಬ ಸಾಲು ’ಕವಿಕುಲದೇವತೆ’ ಸರಸ್ವತಿಯನ್ನು ಮತ್ತು ದಶಭುಜ ಸರಸ್ವತಿಯ ಶಿಲ್ಪವನ್ನು ನೆನಪಿಸುತ್ತದೆ.
’ಸರಸ್ವತಿ’ ಎಂಬ ಕವನದಲ್ಲಿ, ವಿಷ್ಣುವಿನ ನಾಭಿಯಿಂದ ಹ್ಮಟ್ಟಿದ, ಕಮಲಾಸನದಲ್ಲಿ ಕುಳಿತ, ನಾಲ್ಕು ಮುಖದ ಬ್ರಹ್ಮ ನಾಲ್ಕು ವೇದಗಳನ್ನು ಸೃಷ್ಟಿಸಿ ಹಾಡತೊಡಗಿದಾಗ ’ಓಂ’ಕಾರ ಸ್ವರೂಪದ ಸರಸ್ವತಿಯು ಶಂಖವನೂದಿದಂತೆ ಹೊರಟಿತು ಎನ್ನುತ್ತಾರೆ. ಹಾಗೆ ಹೊರಟ ಸರಸ್ವತಿಯು ಸರ್ವವನ್ನೂ ವ್ಯಾಪಿಸುತ್ತಾ ಬಂದಾಗ ಕವಿ ಬೇಂದ್ರೆಯವರು,
ನಾಚು ಮಾಡುತ ಬಂದು ವರದ ಹಸ್ತವನಿಟ್ಟ ಬಾಗಿಸಿದ ತಲೆಯ ಮೇಲೆಎಂದು ಸ್ವಾಗತಿಸುತ್ತಾರೆ.
...............ಹಚ್ಚೆ ಸತ್ಯ ತತ್ವದ ದೀಪವಾನಂದವನ್ನು ಬೀರೆ
’ಸರಸ್ವತೀ ಸೂಕ್ತ’ ಕವನದ
ಅಂಚೆ ಏರಿ ನೀರಿನಾಕೆಎಂಬ ಸಾಲು ಸರಸ್ವತಿಯ ಸಾರ್ವತ್ರಿಕತೆಯನ್ನು ಮನಗಾಣಿಸುತ್ತದೆ. ನೀರಿನಾಕೆ ಎಂಬ ಪದ ಸರಸ್ವತೀ ನದಿಯನ್ನು, ಗಾಳಿಯಲ್ಲಿ ಸುಳಿದಳೋ ಎಂಬುದು ಉಸಿರಿನ ಸಹಾಯದಿಂದ ಉತ್ಪತ್ತಿಯಾದ ಮಾತನ್ನು, ಬೆಳಕಿನಲ್ಲಿ ಬೆಳೆದಳೋ ಎಂಬುದು ಭಾಷೆಯ ಚಾಕ್ಷುಷರೂಪವಾದ ಬರವಣಿಗೆಯನ್ನು ಸೂಚಿಸುತ್ತವೆ. ಸರಸ್ವತಿಗಿರುವ ನದಿದೇವತೆ, ವಾಗ್ದೇವತೆ ಮತ್ತು ಭಾಷಾ ಎಂಬ ವಿಶೇಷಣಗಳನ್ನು ಅನುಸರಿಸಿ ಮೇಲಿನ ಪರಿಕಲ್ಪನೆ ಮೂಡಿದೆ. ಸರಸ್ವತಿಯ ಪರಿಕಲ್ಪನೆ ವಿಕಾಸವಾದ ಮೂರು ಮುಖ್ಯ ಹಂತಗಳನ್ನು ಈ ಸಾಲುಗಳು ಧ್ವನಿಸುತ್ತವೆ.
ಗಾಳಿಯಲ್ಲಿ ಸುಳಿದಳೋ
ಬೆಳಕಿನಲ್ಲಿ ಬೆಳೆದಳೋ
’ನೀನಾದಿನೀ-ದೇವತಾ ಸರಸ್ವತಿ’ ಕವನದ
....... ಆ ಸ್ವಾದಿನೀಎಂಬ ಸಾಲುಗಳು, ವೇದದಲ್ಲಿ ಕಂಡುಬರುವ ಸರಸ್ವತಿಯನ್ನು ಚಿತ್ರಿಸುತ್ತವೆ. ಋಗ್ವೇದದ ಏಳನೇ ಮಂಡಲದ ೯೫ ಮತ್ತು ೯೬ನೇ ಸೂಕ್ತಗಳು ಈ ಪದ್ಯಕ್ಕೆ ಪ್ರೇರಣೆಯಾಗಿರುವಂತೆ ತೋರುತ್ತದೆ. ವಾಜಿನೀವತೀ ಎಂದರೆ ಒಳ್ಳೆ ಅನ್ನವನ್ನು ಕೊಡುವವಳು ಎಂದರ್ಥ; ಅವಳೇ ನದಿದೇವತೆ ಸರಸ್ವತಿ.
ವಾಜಿನಿ
ಜೀವಾಜಿನೀ
ವಾಜಿನೀವತೀ
ಸರಸ್ವತೀ
ರಸಸಾರಸ
ಹಂಸೀ
ತಮಧ್ವಂಸೀ
ಉತ್ತಮಾ
ಆದಿಮಾ
ಮಾ
ಆದತೀ
ವೇದದಿಂದ ಪ್ರೇರಿತವಾಗಿರುವ ಮತ್ತೊಂದು ಕವಿತೆ ’ಶಾರದೆಯೇ!’ ಎಂಬುದು.
ವೇದದ ಮಂತ್ರವ ವಾದವ ಮಾಡುವ ತಲೆಯಲ್ಲಿಇಲ್ಲಿ ’ನೀರೋ ನೀರೆಯೋ’ ಎಂಬುದು ನದಿಯೋ ನದೀದೇವತೆಯೋ ಎಂಬುದನ್ನು ಸೂಚಿಸುತ್ತದೆ. ಮುಂದುವರೆದು, ಬೇಂದ್ರೆಯವರು ತಮ್ಮನ್ನು ತಾವು ’ನಿನ್ನ ಉಪಾಸನೆ ಮಾಡುವ ಸಾರಸ್ವತ ಸುತನು’ ಎಂದು ಕರೆದುಕೊಂಡಿದ್ದಾರೆ. ಸಾರಸ್ವತನು ಕೆಲವೊಮ್ಮೆ ಸರಸ್ವತಿಯ ಪತಿಯಾಗಿಯೂ ಕೆಲವೊಮ್ಮೆ ಸುತನಾಗಿಯೂ ವೇದಪುರಾಣಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಆದರೆ ಇಲ್ಲಿ ಕವಿಗಳು ಸರಸ್ವತೀಸುತರು ಎಂಬ ಕಲ್ಪನೆಯ ಹಿನ್ನೆಲೆಯಲ್ಲಿ ನೋಡಿದರೆ, ಸಾರಸ್ವತನು ಸರಸ್ವತಿಗೆ ಪತಿ ಎಂದಾಗುತ್ತದೆ. ಇಲ್ಲದಿದ್ದರೆ, ’ಕವಿ ಬೇಂದ್ರೆ’ ಸರಸ್ವತಿಯ ಮೊಮ್ಮಗನಾಗಬೇಕಾಗುತ್ತದೆ!
ನೀರೋ ನೀರೆಯೋ ಎನುವೊಲು ಇಹೆ ರಸ ಶಿಲೆಯಲ್ಲಿ
’ರಾಣಿವಾಸದ ವಾಣಿಗೆ’ ಕವಿತೆ ಒಂದು ರೀತಿಯಲ್ಲಿ ಸರಸ್ವತಿಯ ನಿಂದನಾ ಸ್ತುತಿ.ಎಂದು ವಾಣಿಯ ಕೃಪೆಗಾಗಿ ಪ್ರೀತಿಪೂರ್ವಕ ಒತ್ತಾಯ ಮಾಡುತ್ತಲೇ,
ಸರಸೋತಿ ಅಂತ ನಿನ್ನ
ಅರಸೊತ್ತಿಗೆ ಒಪ್ಪಿಕೊಂಡೆ
ಬರಸೋ ಹೊತ್ತಿಗೆ, ಬರಸು ಇನ್ನ
ಪುರುಸೊತ್ತಿಲ್ಲಾ.
ಆ ಗಾನ ಈ ಗಾನ ಸಾಕು ಮಾಡುಎಂದು ಕೈಚೆಲ್ಲುತ್ತಾರೆ. ನಿಜವಾಗಿಯೂ ಇದು ಪ್ರತಿಭಾಶಾಲಿಯಾದ ಕವಿಯ ಆತ್ಮವಿಶ್ವಾಸವನ್ನು ಸೂಚಿಸುತ್ತದೆ. ಮಹಾಕವಿಗಳದ್ದು ಯಾವಾಗಲೂ ಬೇಡುವ ಪ್ರತಿಭೆಯಾಗಿರದೆ, ಪಡೆಯುವ ಪ್ರತಿಭೆಯಾಗಿರುತ್ತದೆ. ಅಂತೆಯೇ ಬೇಂದ್ರೆಯವರದೂ ಸಹ.
ವೇದಾನ ಹಾಳತ ಮಾಡಿ, ಅದನ್ನ ಹಾಡು
ಎಂದು ಆಜ್ಞಾಪಿಸುತ್ತಾರೆ. ಆದರೆ ಅದಕ್ಕೆ
ಸಂಬಳ ಕೊಡಲಾರೆ
ಸಂಭಾಳಿಸಿಕೋ ನೀನು
ಸರಸ್ವತಿಯನ್ನು ಕಾವ್ಯದೇವತೆಯಾಗಿ ಚಿತ್ರಿಸಿರುವ ಕವಿತೆ ’ಓ ಹಾಡೇ!’.ಕನ್ನಡ ಸಾಹಿತ್ಯ ವಾಙ್ಮಯ ಬೆಳೆದು ಬಂದ ದಾರಿಯನ್ನು ಸರಸ್ವತಿಯ ಸ್ತುತಿಯಲ್ಲಿಯೇ ತೋರಿಸುವ ಶಬ್ದಗಾರುಡಿಗತನ ಬೇಂದ್ರೆಯವರದ್ದು. ಮುದ್ದುವಿಠಲಗೆ ಮಾರಿಕೊಂಡ ದಾಸಿ ಎಂಬುದು, ದಾಸಸಾಹಿತ್ಯದ ಬೃಹತ್ತು-ಮಹತ್ತುಗಳನ್ನು ಸೂಚಿಸಿದರೆ, ಮುದ್ದಣನ ಲಲ್ಲೆವಾತಿನ ಪ್ರೇಮರಾಶಿ ಎಂಬುದು, ಮುದ್ದಣನ ಕಾವ್ಯಗಳ ಸರಸ-ಪ್ರೇಮವನ್ನು ಮನಗಾಣಿಸುತ್ತದೆ. ಪದ್ಯದ ನಾಲ್ಕನೇ ಚರಣದ ’ಮುಂಗೈಯ ಮೇಲೆ ಅಂಗಜನ ಅರಗಿಳಿಯಿರಿಸಿ’ ಎಂಬುದು ಶೃಂಗೇರಿ ಶಾರದೆಯನ್ನು ಚಿತ್ರಿಸಿದರೆ, ’ಚಾರುತಮ ಸರಸ ಅರಸಂಚೆಯನು ಹೂಡಿ, ಬಂದು ನನ್ನಿದಿರಲ್ಲಿ ನಾಟ್ಯವಾಡೆ’ ಸಾಲು ಸರಸ್ವತಿಯ ವಾಹನ ಹಂಸವನ್ನು ಸೂಚಿಸುತ್ತದೆ; ಜತೆಗೆ ನಾಟ್ಯಸರಸ್ವತಿಯನ್ನೂ ಚಿತ್ರಿಸುತ್ತದೆ. ಕೊನೆಯ ಚರಣದ ’ನನ್ನ ನಾಲಗೆ ನಿನ್ನ ಬರಿ ಸೂಲಗಿತ್ತಿ’ ಎಂಬುದು ’ವಾಕ್’ ಜನನಸ್ಥಾನ ನಾಲಗೆ; ನಾಲಗೆ ಬರಿ ಸೂಲಗಿತ್ತಿ ಮಾತ್ರ, ತಾಯಿಯಾಗಲಾರದು. ಆ (ವಾಕ್)ತಾಯಿ ನೀನೇ ಎಂಬ ನವೀನ ಕಲ್ಪನೆಯನ್ನು ಕಟ್ಟಿಕೊಡುತ್ತದೆ.
ಭೋಗಯೋಗದ ಪದವೆ ಜೈನವಾಙ್ಮಯ ಮಧುವೆ
ಯೋಗ ಭೋಗದ ಹದವೆ ವಚನಬ್ರಹ್ಮನ ವಧುವೆ
ಮುದ್ದುವಿಠಲಗೆ ಮಾರಿಕೊಂಡ ದಾಸಿ!
ಮುದ್ದಣ್ಣನ ಲಲ್ಲೆವಾತಿನ ಪ್ರೇಮರಾಶೀ
ಜೀವ ಜೀವಾಳದಲಿ ಬೆರೆತು ಕೂಡೇ
’ಹಿಂದುಸ್ಥಾನ, ಪಾಕಿಸ್ಥಾನ ಒಂದಾಗಬೇಕು, ಭಾರತ ಹಮಾರ ಮುಂದಾಗಬೇಕು’ ಎನ್ನುವ ಆಶಯದ ’ಕವಿಗಳ ಕಾಣಿಕಿ’ ಕವನದ ಪ್ರಥಮ ಸಾಲಿನಲ್ಲಿಯೇ ’ಸಲಾಮ್ ಮಾಡ್ತೇವಿ ಶಾಹೀರಿ ವಾಣೀಗೆ’ ಎಂದು ಸರ್ವಭಾಷಾಮಯೀ ಸರಸ್ವತಿಗೆ ನಮಸ್ಕರಿಸುತ್ತಾರೆ. ’ಸಪ್ತಕಲಾ’ ಕವಿತೆ ಸಂಗೀತ, ಶಿಲ್ಪ, ನೃತ್ಯ, ನಾಟಕ, ಜೀವನ, ವಾಸ್ತು ಮತ್ತು ಸಾಹಿತ್ಯ ಎಂಬ ಏಳು ಕಲೆಗಳ ಬಗ್ಗೆ ಪ್ರಸ್ತಾಪಿಸುತ್ತದೆ. ಅದರಲ್ಲಿ ಏಳನೆಯದು ಸರ್ವಾತ್ಮಕವಾದ ಸಾಹಿತ್ಯ. ಅದರಲ್ಲಿ, ’ಸಕಲಾs ಸಿದ್ಧಾs ಸರಸ್ವತಿ ವೀಣಾ ಪಾಣಿ ಪಶ್ಯಂತಿಯ ವಾಣಿ........’ ಹೀಗೆ ಸಾಹಿತ್ಯವನ್ನು ಸರಸ್ವತಿ ಎಂದೇ ಸ್ತುತಿಸಲಾಗಿದೆ. ಹಾಗೆ ನೋಡಿದರೆ ಬೇಂದ್ರೆಯವರು ಹೇಳಿರುವ ಸಪ್ತಕಲೆಗಳಲ್ಲಿ ಸಾಹಿತ್ಯದ ಜೊತೆಗೆ ಸಂಗೀತ, ಶಿಲ್ಪ, ನೃತ್ಯ, ನಾಟಕ ಇವೆಲ್ಲವೂ ಸರಸ್ವತಿಗೆ ಸಂಬಂಧಿಸಿದವುಗಳೇ ಆಗಿವೆ. ಮಂಗರಸನ ಮತ್ತು ಕವಿಕಾಮನ ’ಸಂಸಾರವಾರಿಧಿಗೆ ದ್ರೋಣಿ’ ಮತ್ತು ಕವಿಕಾಮನ ’ಸಂಸಾರ ಸಂಭಾವಿತಾತ್ಮೆ’ ಎಂಬ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಸರಸ್ವತಿಯನ್ನು ಗ್ರಹಿಸಿದರೆ, ಜೀವನಕಲೆ ಕೂಡಾ ಸರಸ್ವತಿಗೆ ಸಂಬಂಧಿಸಿದ್ದಾಗಿದೆ. ಆದರೆ, ವಾಸ್ತು ಸಪ್ತಕಲೆಗಳಲ್ಲಿ ಸೇರಿದ್ದು ಹೇಗೆ ಎಂಬುದು ಅರ್ಥವಾಗುವುದಿಲ್ಲ. ಸರಸ್ವತಿಯು ’ಸಕಲಕಲಾಧಾರಿಣಿ’ ಎಂದರೂ, ವಾಸ್ತುವಿಗೇಕೆ ಈ ಪ್ರಾಮುಖ್ಯ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಬಹುಶಃ ಬೇಂದ್ರೆಯವರಿಗಿದ್ದ ಸಂಖ್ಯಾಶಾಸ್ತ್ರದ ಒಲವು ವಾಸ್ತುವನ್ನು ಸಪ್ತಕಲೆಗಳಲ್ಲಿ ಸೇರಿಸಲು ಕಾರಣವಿದ್ದಿರಬೇಕು.
[ ಪ್ರಕಟವಾಗಲಿರುವ ನನ್ನ 'ಸರಸ್ವತಿ : ವಿಸ್ಮಯ ಸಂಸ್ಕೃತಿ' ಕೃತಿಯ ಕೆಲವು ಪುಟಗಳು ಇವು]
No comments:
Post a Comment