Tuesday, March 22, 2011

ಥಣಾರಿಯ ಪ್ರಣಯ ಪ್ರಸಂಗ

ನಮ್ಮ ಹಳ್ಳಿಯ ಸುತ್ತಮುತ್ತಲಿನ ಏಳೆಂಟು ಹಳ್ಳಿಗಳಲ್ಲಿ ಥಣಾರಿಯ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಈ ಥಣಾರಿ ಎಂಬುದರಲ್ಲಿ ಪ್ರಾರಂಭದ ಅಕ್ಷರ ಅಲ್ಪಪ್ರಾಣವೋ? ಮಹಾಪ್ರಾಣವೋ? ನನಗೆ ಗೊತ್ತಿಲ್ಲ. ಅಷ್ಟೇ ಏಕೆ? ಈ ಹೆಸರು ಅವನ ಅಪ್ಪ ಅಮ್ಮ ಇಟ್ಟಿದ್ದೋ? ಅಥವಾ ಮಧ್ಯದಲ್ಲಿ ಸೇರಿಕೊಂಡಿದ್ದೋ? ಹಾಗಿದ್ದರೆ ಅವನ ಒರಿಜಿನಲ್ಲಾದ ಹೆಸರೇನು? ಎಂಬುದೂ ನನಗೆ ಗೊತ್ತಿಲ್ಲ. ಆತನದು ಬಡತನದ ಬದುಕಾದರೂ ಅಲ್ಪತನದ್ದಲ್ಲ. ಆದ್ದರಿಂದ ನನ್ನ ಪ್ರಕಾರ ಆತನದು ಅಲ್ಪಪ್ರಾಣವಲ್ಲ; ಮಹಾಪ್ರಾಣ. ಅದಕ್ಕಾಗಿಯಾದರೂ ನಾನು ಆತನ ಹೆಸರಿನಲ್ಲಿ ಮಹಾಪ್ರಾಣ ’ಥ’ಕಾರವನ್ನೇ ಬಳಸುತ್ತೇನೆ.
ಮರ ಹತ್ತಿ ಕಾಯಿ ಕೀಳುವುದು, ಗಣೆ ಬಳಸಿ ಕಾಯಿ ಕೆಡವುದು, ಕಾಯಿ-ಕೊಬ್ಬರಿ ಸುಲಿಯುವುದು ಆತನ ಖಾಯಂ ಕೆಲಸ. ಅವನು ಮಾಡಲು ಮನಸ್ಸು ಮಾಡಿದರೆ, ವರ್ಷದ ೩೬೫ ದಿನಗಳೂ ಆತ ಬ್ಯುಸಿಯಾಗಿರಬಹುದು. ತೆಂಗಿನ ತೋಟದ ರೈತರು, ಬೆಳಿಗ್ಗೆಯೇ ಅವನ ಮನೆಯ ಮುಂದೆ ಬಂದು ಗೋಗರೆದು, ಬೈಕ್ ಹತ್ತಿಸಿಕೊಂಡು, ಕ್ರಾಸಿನಲ್ಲಿರುವ ತಡಿಕೆ ಹೋಟೆಲ್ಲಿನಲ್ಲಿ ಇಡ್ಲಿ, ಕಾಫಿ ಕೊಡಿಸಿಕೊಂಡು ಕೆಲಸಕ್ಕೆ ಕರೆದೊಯ್ಯುತ್ತಾರೆ. ಮನೆಗಳಲ್ಲಿ ಹೆಂಗಸರು, ಅವನಿಗಿಷ್ಟವಾದ ರೊಟ್ಟಿ, ಮೆಣಸಿನಕಾಯಿ ಖಾರದ ಜೊತೆಗೆ ತುಪ್ಪ ಸುರಿದು ಅವನನ್ನು ಸಂತುಷ್ಟಗೊಳಿಸುತ್ತಾರೆ.
ಇಂತಹ ಫುಲ್‌ಟೈಮ್ ಕೆಲಸ ಅವನಿಗಿದ್ದರೂ ವಾರದಲ್ಲಿ ಮೂರು ದಿನ ಕೆಲಸ ಮಾಡಿದರೆ ಹೆಚ್ಚು. ಆತ ಸೋಮಾರಿಯೆಂದಲ್ಲ. ಬದುಕಲು ಎಷ್ಟು ಬೇಕು? ಎಂಬ ಅಕಾಲ ವೈರಾಗ್ಯ. ಅಕಾಲ ವೈರಾಗ್ಯವೇಕೆಂದರೆ ಅವನಿಗಿನ್ನೂ ನಲವತ್ತು ವರ್ಷ ಮೀರಿಲ್ಲ. ಪಾದರಸದಂತೆ ಚುರುಕಾಗಿ ಓಡಾಡಿಕೊಂಡು ಚಟಪಟ ಅಂತ ಮಾತನಾಡಿಕೊಂಡು ಕೆಲಸ ಮಾಡುವ ಆತನಿಗೆ ತನ್ನದು ಎನ್ನುವ ಯಾವ ಜಮೀನು ಇಲ್ಲ. ದನ ಇಲ್ಲ. ಮನೆ ಇಲ್ಲ. ಅಷ್ಟಕ್ಕೂ ಅವನು ಯಾವ ಊರಿನವನು, ಎಲ್ಲಿಂದ ಬಂದ ಎಂಬು ಯಾವ ವಿವರಗಳೂ ಗೊತ್ತಿಲ್ಲ. ಕೆಲಸವಿದ್ದ ದಿನಗಳಲ್ಲಿ, ಕೆಲಸಕ್ಕೆ ಕರೆದವರ ಮನೆಯಲ್ಲಿ ಊಟ, ತಿಂಡಿ, ದೇವಸ್ಥಾನದ ಜಗಲಿಯಲ್ಲಿ ನಿದ್ದೆ. ಕೆಲಸವಿಲ್ಲದ ದಿನ ತಡಿಕೆ ಹೋಟೆಲ್ಲಿನ ಪೂರಿ, ಇಡ್ಲಿ, ಚಿತ್ರಾನ್ನ, ಕಾಫಿ. ಮತ್ತೆ ಯಥಾ ಪ್ರಕಾರ ದೇವಸ್ಥಾನದ ಜಗಲಿಯಲ್ಲಿ ನಿದ್ದೆ. ಮಳೆಗಾಲವಿರಲಿ ಚಳಿಗಾಲವಿರಲಿ ಜಾಗ ಮಾತ್ರ ಬದಲಾಗುವುದಿಲ್ಲ. ಹೊದಿಕೆಯೂ ಬೇಕಾಗಿಲ್ಲ. ದಿನಾ ಕೆರೆಯಲ್ಲಿ ಈಜು ಹೊಡೆಯುವುದು, ಇದ್ದ ಒಂದೇ ಬಟ್ಟೆಯನ್ನು ತೊಳೆದು ಹಾಕಿಕೊಳ್ಳುವುದು. ಅದು ಹರಿದು ಹೋದ ಮೇಲೆ ಯಾರದರು ಮನೆಯಲ್ಲಿ ಇದ್ದ ಹಳೆಯ ಚಡ್ಡಿ-ಅಂಗಿ ಪಡೆದು ಹಾಕಿಕೊಳ್ಳುವುದು.
ಹೀಗೆ ಯಾರ ಮತ್ತು ಯಾವುದರ ಹಂಗೂ ಇಲ್ಲದೆ ರಾಜನಂತಿದ್ದ ಥಣಾರಿಗೂ ಒಂದು ಪ್ರವೃತ್ತಿಯಿತ್ತು. ಅದೆಂದರೆ ರಾಗಿ ಹಾಗೂ ಭತ್ತದ ಮೆದೆಗಳನ್ನು ಅಲಂಕಾರಿಕವಾಗಿ ಒಟ್ಟುವುದು. ರಾಗಿ ಭತ್ತ ಕಟಾವು ಸಮಯದಲ್ಲಿ, ತೆಂಗಿನ ಕಾಯಿಗೆ ಸಂಬಂಧಪಟ್ಟ ಎಲ್ಲಾ ಕೆಲಸಗಳನ್ನು ಬಂದ್ ಮಾಡಿಬಿಡುತ್ತಾನೆ. ಯಾರು ಕರೆದರೂ ಹೋಗಿ, ಅವತ್ತು ಅವನಿಗೆ ಸರಿಯೆನಿಸಿದ ಆಕಾರದಲ್ಲಿ ಮೆದೆ ಒಟ್ಟುತ್ತಾನೆ. ರೈತರು ಆಗಲ್ಲ ಹೀಗೆ ಎಂದರೆ, ’ನಿಮಗೇನು? ಮಳೆ ಬಂದರೆ ಪೈರು ನೆನೆಯಬಾರದು. ಬೀಳಬಾರದು. ಅಷ್ಟೇ ತಾನೆ? ನಾನು ಹೇಗೆ ಒಟ್ಟಿದರೆ ನಿಮಗೇನು? ಬೇಕಾದರೆ ಒಟ್ಟಿಸಿಕೊಳ್ಳಿ. ಬೇಡವಾದರೆ ಬಿಡಿ’ ಎಂದು ತನ್ನಿಚ್ಛೆಯಂತೆ ಮೆದೆ ಒಟ್ಟುತ್ತಿದ್ದ. ಅದರಿಂದ ತಮಗೇನೂ ತೊಂದರೆಯಿಲ್ಲ ಎಂದರಿತ ರೈತರು ತೆಪ್ಪಗಾಗುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಈ ಕೆಲಸಗಳನ್ನು ಮಾಡಲು ಜನಗಳೇ ಸಿಗುತ್ತಿರಲಿಲ್ಲವಾದ್ದರಿಂದ ಆತನೇ ಆಗ್ಗೆ ಇವರ ಪಾಲಿಗೆ ಚಂದ್ರ ಇಂದ್ರ ಎಲ್ಲ!
ಹೀಗೆ ಸುಮಾರು ಏಳೆಂಟು ವರ್ಷಗಳನ್ನು ನಮ್ಮೂರಿನಲ್ಲಿ ಕಳೆದ ಥಣಾರಿಯ ಬದುಕಿಗೂ ಒಂದು ಭಯಂಕರ ತಿರುವು ಸಿಕ್ಕಿಬಿಟ್ಟಿತು. ಒಂದು ಕಾಲಕ್ಕೆ ಊರಿನಲ್ಲಿ ಪೊಲೀಸ್ ಪಟೇಲನಾಗಿದ್ದ ವ್ಯಕ್ತಿಯ ಏಳುಜನ ಗಂಡುಮಕ್ಕಳು, ಅಪ್ಪ ಆಸ್ತಿ ಮಾಡಿಟ್ಟಿರುವುದೇ ಮಜಾ ಮಾಡಲು ಎಂಬಂತೆ ನಿರ್ದಯವಾಗಿ ಕರಗಿಸುವುದರಲ್ಲಿ ಪೈಪೋಟಿಗೆ ಇಳಿದಿದ್ದರು. ಇಬ್ಬರು ಊರು ಬಿಟ್ಟು ಬೆಂಗಳೂರು ಸೇರಿದ್ದರು. ಒಂದಿಬ್ಬರು ಹೇಗೂ ಇನ್ನೂ ರೈತರಾಗೇ ಉಳಿದಿದ್ದರು. ಇನ್ನಿಬ್ಬರು ತಮ್ಮ ತಮ್ಮ ಅತ್ತೆಮನೆಗಳನ್ನು ಸೇರಿ ಮನೆ ತೊಳೆಯುವ ಅಳಿಯಂದಿರಾಗಿದ್ದರು. ಇನ್ನು ಉಳಿದ ಮಧ್ಯದ ಮಗ ರಾಮ ಉರುಫ್ ಪಾಟೇಲರ ರಾಮಗೌಡ, ಪಿತಾರ್ಜಿತವಾಗಿ ಬಂದಿದ್ದ ಆಸ್ತಿಯಲ್ಲವನ್ನೂ ಕರಗಿಸಿ, ಅದು ಹೇಗೂ, ಆತನ ಹೆಂಡತಿಯ ಬಾಯಿಗೆ ಹೆದರಿಯೋ ಏನೋ ಉಳಿಸಿಕೊಂಡಿದ್ದ ಎರಡೂವರೆ ಎಕರೆಯ ಹೊಲದಲ್ಲಿ ಹೆಂಡತಿ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸಂಸಾರ ಹೂಡಿದ್ದ. ಹೆಂಡತಿ ಮಕ್ಕಳು ಕಷ್ಟಪಟ್ಟು ಹೊಟ್ಟೆ ಬಟ್ಟೆಗೆ ನೇರ ಮಾಡಿಕೊಂಡಿದ್ದರು. ಆದರೆ ಈ ರಾಮ ತಾನು ಕಲಿತದ್ದನ್ನು ಬಿಡಲಾರದೆ, ಜಮೀನು ಮಾರಲು ಸಮ್ಮತಿಸದ ಹೆಂಡತಿ ಮಕ್ಕಳ ಮೇಲೆ ಸೇಡು ತೀರಿಸಿಕೊಳ್ಳುವವನ ರೀತಿಯಲ್ಲಿ ಚನ್ನರಾಯಪಟ್ಟಣದಲ್ಲಿ ತರಕಾರಿ ವ್ಯಾಪಾರಕ್ಕೆ ನಿಂತುಬಿಟ್ಟ. ಅಲ್ಲಿಯೇ ವ್ಯಾಪಾರಕ್ಕೆ ಬರುತ್ತಿದ್ದ ಗಂಡ ಸತ್ತ ರಂಗಮ್ಮಳ ಬಲೆಗೆ ಬಿದ್ದ. ಇಬ್ಬರಿಗೂ ಪರಸ್ಪರರ ಅಗತ್ಯವಿತ್ತೇನೋ!? ಒಂದು ದಿನ ಚನ್ನರಾಯಪಟ್ಟಣದಲ್ಲಿ ಒಟ್ಟಿಗೆ ಸಂಸಾರ ಹೂಡಿಯೇಬಿಟ್ಟರು.
ಇತ್ತ ರಾಮನ ಹೆಂಡತಿ ಮಕ್ಕಳು ’ಪೀಡೆ ತೊಲಗಿತು’ ಎಂದುಕೊಂಡರು. ತಮ್ಮ ಹೊಲದಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದುದಲ್ಲದೆ ಕೂಲಿನಾಲಿ ಮಾಡಿ, ಬೋರ್ ಹಾಕಿಸಿಕೊಂಡು, ಹೊಲವನ್ನು ತೋಟ ಮಾಡುವ ಪ್ರಯತ್ನಕ್ಕಿಳಿದುಬಿಟ್ಟರು. ಆಗ ಅವರ ಅಗತ್ಯಕ್ಕೆ ಹೆಚ್ಚು ಒದಗಿ ಬಂದವನೆಂದರೆ ನಮ್ಮ ಕಥಾನಾಯಕ ಥಣಾರಿ! ರಾಮನ ಹೆಂಡತಿಗೆ ಥಣಾರಿಯ ಮೇಲೆ ಮನಸ್ಸಿತ್ತೋ? ಇಲ್ಲವೋ? ಹೇಳುವುದು ಕಷ್ಟ. ಅಥವಾ ತನಗೆ ತನ್ನ ಮಕ್ಕಳಿಗೆ ಮೋಸ ಮಾಡಿ ಯಾವುದೋ ಗಂಡ ಸತ್ತವಳ ಜೊತೆಯಲ್ಲಿ ಸಂಸಾರ ಹೂಡಿರುವ ಗಂಡನ ಮೇಲಿನ ಕೋಪವೋ? ಗೊತ್ತಿಲ್ಲ. ದಿನದ ಮೂರೂ ಹೊತ್ತು, ತೋಟವಾಗುತ್ತಿದ್ದ ಹೊಲದಲ್ಲಿ ಕತ್ತೆಯಂತೆ ದುಡಿಯಲು ಬೇಕಾಗಿದ್ದ ಗಂಡಾಳಿನ ಅವಶ್ಯಕತೆಯೋ? ಗೊತ್ತಿಲ್ಲ. ಅಂತೂ ಥಣಾರಿಯ ವಾಸ ರಾಮನ ಮನೆಗೆ ಬದಲಾಯಿತು. ರಾಮನ ಹೆಂಡತಿಯೂ ಮಕ್ಕಳೂ ಅವನನ್ನು ಸ್ವಾಗತಿಸಿದರು. ಊರವರು, ಹಿಂದೆ ರಾಮನ ಹೆಂಡತಿಯನ್ನು ಥಣಾರಿಯನ್ನು ಅಶ್ಲೀಲವಾಗಿ ಕಲ್ಪಿಸಿಕೊಂಡು ಮಾತನಾಡುತ್ತಿದ್ದರೆ ಹೊರತು, ರಾಮನ ಹೆಂಡತಿಯ ಎದುರಿಗೆ ಬಾಯಿ ಬಿಡುತ್ತಿರಲಿಲ್ಲ. ಏಕೆಂದರೆ ಆಕೆಯ ಬಾಯಿಗೆ ಸಿಕ್ಕವನೂ ಎಂತಹಾ ಗಟ್ಟಿಗ ಗಂಡಸಾದರೂ, ನಾಚಿಕೆಯಿಂದ, ಮುಜುಗರದಿಂದ, ’ಸಾಕಪ್ಪಾ ಸಾಕು’ ಎಂದು ಜಾಗ ಖಾಲಿಮಾಡುವಂತೆ ಮಾಡುವ ಶಕ್ತಿ ಅವಳ ತೀಕ್ಷ್ಣವಾದ ಬಯ್ಗುಳಗಳಿಗಿತ್ತು. ಅವಳನ್ನು ಕೆಣಕಿದವನ ಗಂಡಸುತನದಿಂದ ಹಿಡಿದು, ಆತನ ಮನೆಯ ಹೆಂಗಸರ ಮರ್ಮಾಂಗಕ್ಕೇ ತಗುಲುವಂತಹ ಬಯ್ಗಳುಗಳನ್ನು ಆಕ್ಷಣದಲ್ಲಿ ಸೃಷ್ಟಿಸಿ ಒಗೆದುಬಿಡುತ್ತಿದ್ದಳು.
ಅವಳ ಎದುರಿಗೆ ಆಡದಿದ್ದರೆ ಏನಾಯಿತು? ಥಣಾರಿಯ ಎದುರಿಗೆ ಅನ್ನುತ್ತಿದ್ದರು. ’ರಾಮನ ಹೆಂಡತಿಯ ಕೈ ಅಡುಗೆ ಥಣಾರಿಯ ಮೈಗೆ ಚೆನ್ನಾಗಿ ಹತ್ತಿಬಿಟ್ಟಿದೆ, ಮಧುಮಗನಾಗಿಬಿಟ್ಟಿದ್ದಾನೆ’, ’ಗಂಡನೋ? ಅಳಿಯನೋ?’ ಎಂದು ಛೇಡಿಸುತ್ತಿದ್ದರು. ರಾಮನ ಹೆಂಡತಿಯ ಸ್ವಭಾವಕ್ಕೆ ತದ್ವಿರುದ್ದನಾಗಿದ್ದ ಥಣಾರಿ ಮಾತ್ರ ಒಂದೂ ಮಾತನಾಡುತ್ತಿರಲಿಲ್ಲ. ಆತನನ್ನು ಛೇಡಿಸಿದವರೇ ’ಯಾಕಾದರೂ ಈ ಮಾತು ತೆಗೆದವೆಪ್ಪ’ ಎಂದು ಸುಮ್ಮನಾಗಬೇಕಾಗುತ್ತಿತ್ತು!
ಹೀಗೆ ಥಣಾರಿ, ರಾಮನ ಹೆಂಡತಿಯ ಮನೆಯ ವಾಸಕ್ಕೆ ಐದಾರು ವರ್ಷ ವಯಸ್ಸಾಗುವಷ್ಟರಲ್ಲಿ ಗುಡಿಸಲು ಹೋಗಿ ಮುಂದೆ ಆರ‍್ಸಿಸಿಯಿದ್ದ, ಹೆಂಚಿನ ಮನೆ ಬಂದಿತ್ತು. ಅವರ ಕಷ್ಟಕ್ಕೆ ಪ್ರತಿಫಲವಾಗಿ ತೆಂಗಿನ ಮರಗಳು ಒಂದೆರಡು ಗೊನೆ ಮೂಡಿಸಿಕೊಂಡು ನಳನಳಿಸುತ್ತಿದ್ದವು. ಥಣಾರಿ ಬೇರೆಯವರ ಮನೆಗೆ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿರಲಿಲ್ಲವಾದರೂ ಮೊದಲಿಗಿಂತ ಕಡಿಮೆ ಮಾಡಿಬಿಟ್ಟಿದ್ದ. ಮೈಮೇಲೆ ಒಳ್ಳೊಳ್ಳೆಯ ಬಟ್ಟೆಗಳು ಬಂದಿದ್ದವು. ರಾಮನ ಹೆಂಡತಿಯೊಂದಿಗೆ ಥಣಾರಿ ಚನ್ನರಾಯಪಟ್ಟಣಕ್ಕೆ ಸಂತೆಗೆ ಹೋಗಿ ಬರುವಷ್ಟು ಮುಂದುವರೆದಿದ್ದ. ಚನ್ನರಾಯಪಟ್ಟಣಕ್ಕೆ ಹೋದರೂ, ರಾಮ ತರಕಾರಿ ಮಾರುವ ಕಡೆಗೆ ಹೋಗುವುದನ್ನು ಪ್ರಯತ್ನಪೂರ್ವಕವಾಗಿ ತಡೆಗಟ್ಟುತ್ತಿದ್ದರು. ರಾಮನೇನೂ ತನ್ನ ಹೆಂಡತಿಯ ಹೊಸ ಸಾಹಸದ ಬಗ್ಗೆ ನಿರ‍್ಲಿಪ್ತನಾಗಿರದಿದ್ದರೂ, ಅಸಹಾಯಕನಾಗಿದ್ದ. ತನ್ನ ತಪ್ಪುಗಳನ್ಣೇ ಬೆಟ್ಟದಷ್ಟು ಇಟ್ಟುಕೊಂಡಿದ್ದ ರಾಮ, ಇತ್ತ ಇಟ್ಟುಕೊಂಡವಳ ಭಯ, ಅತ್ತ ಕಟ್ಟಿಕೊಂಡವಳ ಬಾಯಿ ಇವುಗಳಿಂದ ತೆಪ್ಪಗಾಗಿದ್ದ. ಆದರೆ ಊರವರು ಯಾರಾದರೂ ಬಂದು ವಿಷಯ ತೆಗೆದಾಗ ತನ್ನ ಗಂಡಸುತನವನ್ನು ಮಾತಿನಲ್ಲೇ ತೋರಿಸುತ್ತಿದ್ದ. ’ನಾಳೆಯೇ ಊರಿಗೆ ಬಂದು ಆ ಥಣಾರಿಗೆ ಒಂದು ಗತಿ ಕಾಣಿಸುತ್ತೇನೆ’ ಎಂದು ಎಷ್ಟು ಬಾರಿ, ಎಷ್ಟು ಜನರ ಬಳಿ ಹೇಳಿದ್ದನೋ? ಆದರೆ ಊರ ಕಡೆ ಮಾತ್ರ ಬರಲಿಲ್ಲ!
ಹೀಗಿರವಲ್ಲಿ ರಾಮನ ಮಗಳು ಮದುವೆಗೆ ಬಂದಳು. ಅವಳ ಬಗ್ಗೆಯೂ ಹಲವು ಪುಕಾರುಗಳು ಗೊತ್ತು ಗುರಿಯಿಲ್ಲದೆ ಊರಿನ ಪಡ್ಡೆಗಳ ಬಾಯಲ್ಲಿ ಹರಿದಾಡುತ್ತಿದ್ದರೂ, ರಾಮನ ಹೆಂಡತಿಯ ಎದುರಿಗೆ ನಿಂತು ಮಾತನಾಡುವ ಧೈರ್ಯ ಯಾರಿಗೂ ಇರಲಿಲ್ಲ. ಆದರೆ ಇಂತಹ ಪುಕಾರುಗಳೇ ಸಾಕಿತ್ತು, ಮಗಳನ್ನು ನೋಡಲು ಬಂದ ನಾಲ್ಕಾರು ಗಂಡುಗಳು ಗೋಣು ಅಲ್ಲಾಡಿಸಲು. ರಾಮನ ಹೆಂಡತಿಗೆ ಆ ಕ್ಷಣಕ್ಕೆ ಹಲವಾರು ಸತ್ಯಗಳು ಗೋಚರವಾಗತಡಗಿದವು ಅನ್ನಿಸುತ್ತದೆ. ಗಂಡ ಮನೆಯಲ್ಲಿಲ್ಲದಿರುವುದು, ಥಣಾರಿ ಮನೆಯಲ್ಲಿ ವಾಸ್ತವ್ಯ ಹೂಡಿರುವುದು ಇವುಗಳನ್ನು ಗೊತ್ತಿದ್ದೂ ಮಗಳನ್ನು ಮದುವೆಯಾಗಬಹುದಾದ ಗಂಡು ಬಂದರೆ ಸರಿ ಎಂದುಕೊಂಡಳು. ಮೀಸೆ ಮೂಡಿದ್ದ ಊರಿನ ಹಲವಾರು ಪಡ್ಡೆಗಳು ಅವಳ ಕಣ್ಣಮುಂದೆ ಸುಳಿದುಹೋದರು. ಅವಳ ಆಸೆಯಂತೆ, ಅವಳ ಗಂಡನ ತಪ್ಪನ್ನು, ಥಣಾರಿಯ ಕೂಡಿಕೆಯನ್ನು ಒಪ್ಪಿಕೊಂಡು ಕಷ್ಟಜೀವಿಗಳಾಗಿದ್ದ ಆ ಹೆಣ್ಣುಮಗಳನ್ನು ಮದುವೆಯಾಗಲೂ ಒಂದಿಬ್ಬರು ಆಸೆಪಟ್ಟಿದ್ದರು. ಆದರೆ ಅವೆರಡಕ್ಕಿಂತ ಅವರಿಗಿದ್ದ ಭಯವೆಂದರೆ, ರಾಮನ ಹೆಂಡತಿಯ ಬಾಯಿ!
ಇವ್ಯಾವುದರ ಅರಿವೂ ಇಲ್ಲದ ರಾಮನ ಹೆಂಡತಿಗೆ, ಮಕ್ಕಳ ಮದುವೆಯಾಗಬೇಕೆಂದರೆ ಗಂಡ ಮನೆಗೆ ಬರಬೇಕು ಎಂಬ ಸತ್ಯದ ಅರಿವು ಮೂಡತೊಡಗಿತು. ಆದರೆ ಥಣಾರಿ ಇರುವವರೆಗೂ ಆತ ಬರುವುದಿಲ್ಲ ಎಂದೆನಿಸಿದಾಗ, ಥಣಾರಿಯ ಮೇಲೆ ಮುನಿಸು ಬರುತ್ತಿತ್ತು. ಆತನನ್ನು ಹೊರಕ್ಕೆ ಕಳುಹಿಸುವ ಹುನ್ನಾರವನ್ನು ಮನಸ್ಸಿನಲ್ಲಿ ಯೋಚಿಸಿದ್ದರೂ ಕಾರ್ಯರೂಪಕ್ಕೆ ಇಳಿಸಲು ಹಿಂದೇಟು ಹಾಕುತ್ತಿದ್ದಳು. ಥಣಾರಿ ಹೊರಹೋದರೂ ಗಂಡ ಬರದೇ ಇದ್ದರೆ ಎಂಬ ಯೋಚನೆಯೂ ಆಕೆ ಬರುತ್ತಿತ್ತು. ಆದರೆ ಅವಳ ಮನಸ್ಸನಲ್ಲಿರುವುದು ಅವಳಿಗರಿವಿಲ್ಲದೇ ಕೃತಿಯಲ್ಲಿ ಪ್ರಕಟವಾಗುತ್ತಿತ್ತೇನೋ? ಥಣಾರಿಯ ಗಮನಕ್ಕೂ ಇದು ಬಂತು. ತನ್ನ ಬದುಕಿನ ಬಗ್ಗೆ ಮೊದಲ ಬಾರಿಗೆ ಆತನಿಗೆ ಬೇಸರ ಮೂಡಿ ’ಮುಂದೇನು?’ ಎಂದು ಯೋಚಿಸುವಂತೆ ಮಾಡಿತು.
ರಾಮನ ಹೆಂಡತಿಯ ಹುನ್ನಾರ, ಥಣಾರಿಯ ಯೋಚನೆ ಇವೆಲ್ಲವಕ್ಕೂ ಅಂತ್ಯಕಾಣಿಸುವ ಕಾಲ ಬಂದೇಬಿಟ್ಟಿತು. ಅಲ್ಲಿ ನಾಯಿ ಹಸಿದಿತ್ತು, ಹಿಟ್ಟು ಅಳಸಿತ್ತು ಎಂಬಂತೆ ಕೂಡಿಕೆಯಾಗಿದ್ದ ರಾಮ ಮತ್ತು ರಂಗಮ್ಮರ ಬದುಕೂ ನೆಟ್ಟಗಿರಲಿಲ್ಲ. ಕುಡಿಯುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ರಾಮನಿಗೂ, ರಂಗಮ್ಮನ ಅಡಿಯಾಳಾಗಿ ಅವಳು ಹೇಳಿದಂತೆ ಕೇಳಿಕೊಂಡು ಇರುವುದು ಗಂಡಸಾದ ತನಗೆ ಅವಮಾನವೆಂದು ಏಳೆಂಟು ವರ್ಷಗಳ ನಂತರ ಜ್ಞಾನೋದಯವಾದಂತೆ ಅನ್ನಿಸತೊಡಗಿತು. ರಂಗಮ್ಮಳಿಗೂ ಇದೊಂದು ಪೀಡೆ ತೊಲಗಿದರೆ ಸಾಕು ಎನ್ನಿಸಿರಬೇಕು. ಇವೆಲ್ಲವಕ್ಕೂ ಪರಿಹಾರವೆನ್ನುವಂತೆ ರಾಮನ ಎರಡನೆಯ ಮಗಳು ಒಂದು ದಿನ ಅಪ್ಪನಿಗೆ ಸಿಕ್ಕಿಬಿಟ್ಟಳು. ಮಗಳನ್ನು ಕಂಡು ರಾಮನಿಗೆ ಅದೇನನ್ನಿಸಿತೋ, ಆಕೆಯ ಕೈಹಿಡಿದುಕೋಂಡು ಗೊಳೋ ಎಂದು ಅತ್ತುಬಿಟ್ಟ. ಎಷ್ಟಾದರೂ ಹೆಣ್ಣು ಮಗು. ಮನಸ್ಸು ಕರಗಿ ತಾನೂ ಅತ್ತಿತು. ಆಕ್ಷಣದಲ್ಲಿ ಅಪ್ಪನ ತಪ್ಪುಗಳು ಅತ್ಯಂತ ಸಣ್ಣದಾಗಿ ಕಂಡವು. ಮನೆಗೆ ಬರುವಂತೆ ಕರೆದೇಬಿಟ್ಟಳು. ರಾಮನೂ ನಾಳೆಯೇ ಬರುತ್ತೇನೆ ಎಂದು ಮಗಳಿಗೆ ಸಮಾಧಾನ ಮಾಡಿ, ಹೂವು ಹಣ್ಣು ತರಕಾರಿ ಮೊದಲಾದವನ್ನು ಖರೀದಿಸ್ಷಿವಳ ಕೈಗಿತ್ತು ಕಳುಹಿಸಿಬಿಟ್ಟ.
ಈ ಮೊದಲೇನಾದರೂ ಮಗಳು ಈ ರೀತಿ ಮಾಡಿದ್ದರೆ ರಾಮನ ಹೆಂಡತಿ ಅವಳನ್ನು ಬಯ್ಗುಳಗಳಲ್ಲಿ ಅದ್ದಿ ತೆಗೆದುಬಿಡುತ್ತಿದ್ದಳು. ಆದರೆ ಈಗ ಪರಿಸ್ಥಿತಿ ಹಾಗಿರಲಿಲ್ಲ. ತಾಯಿ ಇಬ್ಬರು ಹೆಣ್ಣು ಮಕ್ಕಳು ಕುಳಿತು, ಯೋಚಿಸಿದರು. ಆ ಕ್ಷಣಕ್ಕೆ ರಾಮ ಮನೆಗೆ ಬರುವುದೇ ಮೂವರಿಗೂ ಮುಖ್ಯವಾಗಿ ಕಂಡಿತು. ಅದನ್ನು ಅಪ್ರತ್ಯಕ್ಷವಾಗಿ, ಥಣಾರಿಯ ಕಿವಿಗೆ ಬೀಳುವಂತೆ ವರ್ತಿಸಿದರು. ಊಟಕ್ಕೇ ಮೊದಲೇ ಈ ಎಲ್ಲಾ ಘಟನೆಗಳು ನಡೆದಿದ್ದರಿಂದಲೋ ಏನೋ, ಅಂದು ತಟ್ಟೆಯ ಎದುರಿಗೆ ಕುಳಿತಿದ್ದ ಥಣಾರಿಗೆ ಮುದ್ದೆಯಾಗಲೀ ಅನ್ನವಾಗಲೀ ರುಚಿಸಲಿಲ್ಲ. ದಂಡಿಯಾಗಿ ತರಕಾರಿ ಹಾಕಿ ಮಾಡಿದ್ದ ಸಾರಿನಲ್ಲಿ ರಾಮನ ಚಿತ್ರ ಮಸುಕುಮಸುಕಾಗಿ ಮೂಡಿ ಊಟ ಸೇರದಾಯಿತು. ಈ ಕ್ಷಣ ಮನೆಯಿಂದ ಹೊರಗೆ ಹೋಗಬೆಕೆನ್ನಿಸಿದರೂ, ಅದು ಹೇಗೆ? ಎನ್ನುವುದು ಆತನಿಗೆ ಹೊಳೆಯದೆ ಚಡಪಡಿಸತೊಡಗಿದ. ಒಳಗೆ ಕೋಣೆಯಲ್ಲಿ ಮೂವರು ಹೆಂಗಸರ ನಡುವೆ ಮಾತು ನಡದೇ ಇತ್ತು. ಅವರಿಗೆ ತಿಳಿಯದಂತೆ, ಸದ್ದಾಗದಂತೆ ಬಾಗಿಲು ತೆಗೆದು ಹೊರಹೋಗಲು ಸಾಧ್ಯವೇ ಎಂದು ಥಣಾರಿ ಯೋಚಿಸುತ್ತಿದ್ದ.
ಅಷ್ಟರಲ್ಲಿ ಯಾವುದೋ ಬೊಬ್ಬೆ, ನಾಯಿ ಬೊಗಳುವಿಕೆ ಊರಕಡೆಯಿಂದ ಕೇಳತೊಡಗಿತು. ಆ ಮನೆಯೊಳಗಿದ್ದ ನಾಲ್ವರೂ ಆಗತಾನೆ ನಿದ್ದೆಯಿಂದ ಎದ್ದವರಂತೆ, ’ಅದು ಏನು? ಅದು ಏನು?’ ಎಂದು ಗಾಬರಿಗೊಂಡರು. ಹೊರಹೋಗಲು ಚಡಪಡಿಸುತ್ತಿದ್ದ ಥಣಾರಿ, ಹಾಕಿದ್ದ ನಿಕ್ಕರು, ಬನಿಯನ್ ಮೇಲೆ ಒಂದು ಪಂಚೆ ಎಸೆದುಕೊಂಡು, ’ಅದೇನೆಂದು ನೋಡಿ ಬರತ್ತೇನೆ’ ಎಂದು ಹೊರಬಿದ್ದ. ಆತನ ಪಂಚೆಯನ್ನು ತೆಗೆದುಕೊಂಡು ಹೊರಬಿದ್ದುದು ಮೂವರಿಗೂ ಅನುಮಾನ ಮೂಡಿಸಿತು. ಆದರೆ ಮಾತಿಗಿಳಿಯಲಿಲ್ಲ. ಬೊಬ್ಬೆ ಸ್ವಲ್ಪ ಹೊತ್ತಿನ ನಂತರ ಮನೆಯ ಹತ್ತಿರವೇ ಬಂತು. ಪರಿಚಿತ ಧ್ವನಿಗಳೂ ಕೇಳಿಸಿದವು. ಮೂವರೂ ಬಾಗಿಲು ತೆಗೆಯದೇ ಚಡಪಡಿಸುತ್ತಿದ್ದರು. ಆದರೆ ಬಾಗಿಲಿಗೇ ಬಂದು ಬಡಿಯತೊಡಗಿತು. ’ಯಾರು’ ಎಂಬ ಪ್ರಶ್ನೆಗೆ ಹೊರಗಿನಿಂದ ಉತ್ತರ ಬಂತು. ’ರಾಮನಿಗೆ ಆಕ್ಸಿಡೆಂಟಾಗಿ ಬಿದ್ದಿದ್ದ, ಕರ‍್ಕೊಂಡ್ಬಂದಿದ್ದೀವಿ. ಒಳಿಕೆ ಕರ‍್ಕೊ’ ಎಂದ ಪರಿಚಿತ ಧ್ವನಿ ಅವಳ ಗಂಡನ ಅಣ್ಣನದಾಗಿತ್ತು. ತೆಗೆದ ಬಾಗಿಲಿನಿಂದ ಮೂವರೂ ಒಟ್ಟಿಗೆ ಹೊರಬಂದು, ಮಂಡಿಯಿಂದ ಕೆಳಕ್ಕೆ ಜಜ್ಜಿಹೋಗಿ, ರೋಧಿಸಲೂ ಶಕ್ತಿಯಿಲ್ಲದವನಂತೆ ಸೋತುಹೋಗಿದ್ದ ರಾಮನನ್ನು ಕಂಡು ರೋಧಿಸತೊಡಗಿದರು. ಬಂದವರು ರಾಮನನ್ನು ಅವರ ಕೈಗೆ ಒಪ್ಪಿಸಿ, ಥಣಾರಿ ಅಲ್ಲಿ ಕಾಣಬಹುದೇನೋ ಎಂದು ಕದ್ದು ಮುಚ್ಚಿ ಒಳಗೆ ಕಣ್ಣಾಡಿಸಿ ಜಾಗ ಖಾಲಿ ಮಾಡಿದರು.
ಅಂದು ರಾಮ ತನಗೆ ಸಿಕ್ಕ ಕಿರಿಯಮಗಳಿಗೆ ಹಣ್ಣು ಹೂವು ತರಕಾರಿ ಕಳುಹಿಸಿದ್ದು ರಂಗಮ್ಮಳಿಗೆ ಹೇಗೋ ತಿಳಿದುಹೋಗಿತ್ತು. ಅಷ್ಟಾದರೆ ಅವಳು ಯೋಚನೆ ಮಾಡುತ್ತಿರಲಿಲ್ಲವೇನೋ? ಅಪ್ಪ ಮಗಳಿಬ್ಬರು ಪರಸ್ಪರ ಕೈಹಿಡಿದು ಅಳುತ್ತಿದ್ದು, ಮಗಳು ಮನೆಗೆ ಕರೆದಿದ್ದು, ಅಪ್ಪ ನಾಳೆಯೇ ಬರುತ್ತೇನೆ ಎಂದಿದ್ದು ಅವಳನ್ನು ವಿಪರೀತವಾಗಿ ಕೆರಳಿಸಿಬಿಟ್ಟಿತ್ತು. ಸಂಜೆ ಸ್ವಲ್ಪ ತೂರಾಡುತ್ತಲೇ ಮನೆಯ ಹತ್ತಿರ ಬಂದ ರಾಮನನ್ನು ಕುತ್ತಿಗೆ ಹಿಡಿದು ಹೊರಗೆ ದಬ್ಬಿ ಬಾಗಿಲು ಹಾಕಿಕೊಂಡುಬಿಟ್ಟಿದ್ದಳು. ರಾಮನಿಗೆ ಮಾತನಾಡಲೂ ಅವಕಾಶ ಕೊಟ್ಟಿರಲಿಲ್ಲ. ಆಗ ರಾಮನಿಗೆ ತನ್ನ ಹೆಂಡತಿ ಮಕ್ಕಳು ಅತ್ಯಂತ ಪ್ರೀತಿಯುಳ್ಳವರಾಗಿ ಸುಂದರವಾಗಿ ಕಂಡರು. ತಕ್ಷಣ ಊರ ಕಡೆಗೆ ಹೋಗುತ್ತಿದ್ದ ಒಂದು ಆಟೋ ಹಿಡಿದು ಊರಿಗೆ ಹೋಗಲು ನಿರ್ಧರಿಸಿದ್ದ. ಅಂದು ಥಣಾರಿ ಮನೆಯಲ್ಲಿದ್ದರೂ ಪರವಾಗಿಲ್ಲ. ನಾನು ಹೋಗಬೇಕು ಎಂದು ತೀರ್ಮಾನಿಸಿದ. ಆದರೆ ಕುಡಿಯದೇ ಹೋಗಲು, ಹಾಗೆ ಹೋಗಿ ಬಾಯಿಬಡುಕಿ ಹೆಂಡತಿಯನ್ನು, ಥಣಾರಿಯನ್ನು ಎದುರಿಸಲು ಆತನ ಮನಸ್ಸು ಒಪ್ಪಲಿಲ್ಲ. ಅಂಗಡಿಗೆ ಹೋಗಿ ಚೆನ್ನಾಗಿ ಎರಡು ಕ್ವಾರ‍್ಟರ್ ರಮ್‌ನಲ್ಲಿ ಒಂದನ್ನು ಹೊಟ್ಟೆಗೆ, ಇನ್ನೊಂದನ್ನು ಜೇಬಿಗೆ ಇಳಿಸಿ ಆಟೋ ಹತ್ತಿಯೇಬಿಟ್ಟ. ಕ್ರಾಸಿನಲ್ಲಿ ಆಟೋ ಇಳಿದು ತನ್ನ ಮನೆಯೆ ಕಡೆ ಹೋಗಲು ರಸ್ತೆ ದಾಟುತ್ತಿರಬೇಕಾದರೆ, ಆತನ ಮುಂದೆ ಹೆಂಡತಿ, ಥಣಾರಿ, ಮಕ್ಕಳು ಇವರೇ ಇದ್ದುದರಿಂದಲೋ ಏನೋ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರು ಕಾಣಲೇ ಇಲ್ಲ. ಬಂದ ಕಾರಿನಿಂದ ತಪ್ಪಿಸಿಕೊಳ್ಳಲೋ ಅಥವಾ ಕುಡಿತದ ಪರಿಣಾಮದಿಂದ ಆಗಲೇ ಶುರುವಾಗಿದ್ದ ತೂರಾಟದಿಂದಲೋ ಮುಗ್ಗರಿಸಿ ಬಿದ್ದುಬಿಟ್ಟಿದ್ದ. ಕಾರು ಆತನ ಎರಡೂ ಕಾಲುಗಳ ಮೇಲೆ ಹಾದು ಬಂದ ವೇಗದಲ್ಲೇ ಮುಂದೇ ಹೋಗಿಬಿಟ್ಟಿತ್ತು. ಅಲ್ಲಿ ಸೇರಿದ್ದ ನಾಲ್ಕಾರು ಮಂದಿ ಕೂಗಿದರೂ ಕಾರು ನಿಲ್ಲಲಿಲ್ಲ. ಅವರೆಲ್ಲಾ ರಾಮನನ್ನು ಹಿಡಿದು ಕೂರಿಸಿ ನೀರು ಕುಡಿಸಿ, ಅವನ ಅಣ್ಣನನ್ನು ಕರೆತಂದರು. ಅವನ ಅಣ್ಣನಾದರೋ, ನಿರ್ಲಪ್ತತೆಯಿಂದ, ’ಅವನ ಮನೆಯ ಹತ್ತಿರ ಹೊತ್ತುಕೊಂಡು ಹೋಗಿ ಬಿಟ್ಟುಬಿಡೋಣ. ಆಮೇಲೆ ಅವನ ಹೆಂಡತಿ ಮಕ್ಕಳುಂಟು, ಅವನುಂಟು’ ಎಂದುಬಿಟ್ಟ.. ಜಜ್ಜಿಹೋಗಿದ್ದ ಕಾಲುಗಳಿಂದ ರಕ್ತ ಹರಿಯುತ್ತಿತ್ತು. ಅದನ್ನು ನಿಲ್ಲಿಸಲು ಒಂದಿಬ್ಬರು ಪ್ರಥಮಚಿಕಿತ್ಸೆ ಯೋಚಿಸುತ್ತಿದ್ದರು. ಅದು ಹೇಗೋ ಒಬ್ಬನಿಗೆ ರಾಮನ ಜೇಬಿನಲ್ಲಿದ್ದ ರಮ್ಮಿನ ಬಾಟಲ್ಲು ಸಿಕ್ಕಿತು. ಅದನ್ನು ತೆಗೆದು ಮುಚ್ಚಳ ಬಿಚ್ಚಿ, ರಕ್ತಸಿಕ್ತವಾಗಿದ್ದ ಕಾಲುಗಳ ಮೇಲೆ ಸುರಿದುಬಿಟ್ಟ. ರಾಮ ನೋವಿನಿಂದ ಕಿರುಚುತ್ತಿದ್ದದನ್ನೂ ಲೆಕ್ಕಿಸದೆ ನಾಲ್ಝಯದು ಜನ ಸೇರಿ ಅವನನ್ನು ಹೊತ್ತು ತಂದು ಅವನ ಹೆಂಡತಿಗೆ ಒಪ್ಪಿಸಿ ಕತ್ತಲಲ್ಲಿಯೇ ಮರೆಯಾಗಿಬಿಟ್ಟಿದ್ದರು.
ರಾಮನ ಹೆಂಡತಿಯ ಕಣ್ಣ ಮುಂದೆ, ಎರಡೂ ಕಾಲುಗಳು ಜಜ್ಜಿಹೋಗಿರುವ ಗಂಡ ರಾಮ ಮತ್ತು ಮೂರೂ ಹೊತ್ತು ತೋಟದಲ್ಲಿ ಕತ್ತೆಯಂತೆ ಕೆಲಸ ಮಾಡುತ್ತಿದ್ದ ಥಣಾರಿ ಮೂಡಿ ಮರೆಯಾಗುತ್ತಿದ್ದರು. ಆದರೆ ಎಷ್ಟು ದಿನ ಕಳೆದರೂ ಥಣಾರಿ ಎಲ್ಲಿ ಹೋದ ಎಂಬುದು ಮಾತ್ರ ನಿಗೂಢವಾಗಿಯೇ ಉಳಿದುಹೋಯಿತು. ಈಗಲೂ ನನ್ನೂರಿನ ರೈತಾಪಿ ಜನ ಆತನನ್ನು ನೆನಪಿಸಿಕೊಳ್ಳುವುದು ಎರಡು ಸಂದರ್ಭದಲ್ಲಿ. ಒಂದು ತೆಂಗಿನ ಕಾಯಿ ಕೀಳುವಾಗ ಮತ್ತು ಸುಲಿಯುವಾಗ. ಎರಡು ರಾಗಿ ಮೆದೆ ಒಟ್ಟುವಾಗ. ’ಈಗ ನಮ್ಮ ಥಣಾರಿ ಇರಬೇಕಿತ್ತು’ ಎಂದು ಯಾರಾದರೂ ಒಬ್ಬರು ವಿಷಯ ತೆಗೆದರೆ, ಉಳಿದವರು ಸೇರಿಕೊಂಡು ಆ ಕೆಲಸ ಮುಗಿಯುವವರೆಗೂ ಅದನ್ನೇ ಎಲೆ ಅಡಿಕೆ ಮಾಡಿಕೊಂಡು ಜಿಗಿಯುತ್ತಿರುತ್ತಾರೆ.

3 comments:

Pejathaya said...

ಗ್ರಾಮೀಣಪರಿಸರದ ನಿಜಜೀವನದ ಕಟು ಸತ್ಯಗಳನ್ನು ಬಿಂಬಿಸುವ ಅಪರೂಪದ ಬರಹ. ಲೇಖನದಲ್ಲಿ ಬರುವ ಎಲ್ಲ ಪಾತ್ರಗಳಲ್ಲೂ ರಕ್ತ ಮಾಂಸ ಮತ್ತು ಕಣ್ಣೀರು ತುಂಬಿವೆ. ರಾಮನ ಹೆಂಡತಿಯೂ ಗುಟ್ಟಿನಲ್ಲಿ ಅಳುತ್ತಾ ಇದ್ದಳು! - ಅಂತ ನನ್ನ ಸ್ವಂತ ಅನಿಸಿಕೆ. ಲೇಖನದಲ್ಲೆಲ್ಲೂ ಅಶ್ಲೀಲದ ಛಾಯೆ ಇಲ್ಲ. ಸುಂದರವಾದ ನಿರೂಪಣೆ.
ಥಣಾರಿ ಎಂಬ ಕಥಾನಾಯಕ ನಿಜವಾದ ಕಥಾನಾಯಕನೂ ಆಗಬಹುದು ಅಥವಾ ಅದಕ್ಕೆ ವ್ಯತಿರಿಕ್ತ ಸ್ವಭಾವದವನೂ ಆಗಿರಬಹುದು. ಆದರೆ ಆತ ಪರೋಪಕಾರಿ ಹಾಗೂ ಒಬ್ಬ ನಿರ್ಲಿಪ್ತ ಮನುಷ್ಯ ಎಂಬ ಭಾವನೆಗಳನ್ನೂ ಓದುಗರಲ್ಲಿ ಮೂಡಿಸುತ್ತಾನೆ.
ಪ್ರತೀ ಹಳ್ಳಿಯಲ್ಲೂ ನಡೆಯುವ ಇಂಥಹಾ ಕಥೆಯನ್ನು ಹೇಳುವ ಕಲೆ ನಿಜವಾಗಿಯೂ ಡಾ. ಸತ್ಯನಾರಾಯಣರಿಗೆ ಸಿದ್ದಿಸಿದೆ.
ಥಣಾರಿಯ ಪಾತ್ರ ಮಾತ್ರ ಎಲ್ಲಾ ಹಳ್ಳಿಗಳಲ್ಲೂ ಕಂಡುಬರದ ವಿಶಿಷ್ಟವಾದ ಪಾತ್ರ.
ಅವನ ಚಿತ್ರಣ ಮಾತ್ರ ಬಹುಕಾಲ ನೆನಪಿನಲ್ಲಿ ಉಳಿಯುವಂತಹುದು! - ಪೆಜತ್ತಾಯ ಎಸ್. ಎಮ್.

shivu.k said...

ಸರ್,

ಗ್ರಾಮೀಣ ಬದುಕಿನ ಬಗ್ಗೆ ಅದರಲ್ಲಿ ವಿಭಿನ್ನ ವ್ಯಕ್ತಿಗಳ ಬಗ್ಗೆ ಬರೆಯತೊಡಗಿದ್ದೀರಿ..ಮನಮುಟ್ಟುವಂತೆ ಭಾವನಾತ್ಮಕವಾಗಿರುವ ಪಾತ್ರಗಳು ಮನದಲ್ಲಿ ಮೂಡುತ್ತವೆ..ಸರಳ ಮತ್ತು ನೇರವಾದ ನಿರೂಪಣೆಯಿಂದ ಲೇಖನ ಗಮನ ಸೆಳೆಯುತ್ತದೆ. ಥಣಾರಿ ಒಂಥರ ವಿಭಿನ್ನವೆನಿಸುತ್ತಾನೆ...

Sathya said...

Sir,

This is really touching story. I born and brought up in Bengaluru, this type of village stories will create a craze a lot.

Its too good Sir.

Satya