Monday, October 31, 2011

ಪುಟ್ಟಪ್ಪ ಆಶ್ರಮ ಸೇರಿ ಸಂನ್ಯಾಸಿಯಾಗಿ ಬಿಟ್ಟ!



ಸಿದ್ಧೇಶ್ವರಾನಂದ ಸ್ವಾಮೀಜಿ, ನಾ. ಕಸ್ತೂರಿ, ತಾತಗಾರು ಮೊದಲಾದವರ ಸ್ನೇಹ ಪ್ರೀತಿ ಕಾಳಜಿ ಹಾಗೂ ಕೆ.ಆರ್.ಆಸ್ಪತ್ರೆಯ ವೈದ್ಯರು ಮತ್ತು ದಾದಿಯರ ವಿಶೇಷೋಪಚಾರದಿಂದ ಕವಿ ’ಕ್ರಾನಿಕ್ ಮಲೇರಿಯಾ’ದಿಂದ ಗುಣಮುಖರಾಗುತ್ತಿದ್ದರಷ್ಟೆ. ಆದರೆ ಆಸ್ಪತ್ರೆಯಿಂದ ಆದಷ್ಟು ಬೇಗ ಹೊರಬೀಳಲು ಕವಿಯ ವರಾತ ದಿನವೂ ಹೆಚ್ಚುತ್ತಲೇ ಇತ್ತು. ಕೊನೆಗೊಂದು ದಿನ ಸ್ವಾಮೀಜಿ ನೀವು ಒಪ್ಪುವುದಾದರೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಲು ನಾನು ಒಂದು ವಿವೇಕದ ಮಾರ್ಗ ಸೂಚಿಸುತ್ತೇನೆ. ನಿಮ್ಮನ್ನು ನೇರವಾಗಿ ಆಶ್ರಮಕ್ಕೆ ಕರೆದೊಯ್ಯುತ್ತೇನೆ. ನೀವು ಚೆನ್ನಾಗಿ ಗುಣಹೊಂದಿದ ಮೇಲೆ ಮತ್ತೆ ನಿಮ್ಮ ಸಂತೆಪೇಟೆ ರೂಮಿಗೆ ಹೋಗುವಿರಂತೆ ಎನ್ನುತ್ತಾರೆ. ಸಧ್ಯ ಆಸ್ಪತ್ರೆ ಸಹವಾಸ ತಪ್ಪಿದರೆ ಸಾಕು ಎನ್ನುತ್ತಿದ್ದ ಕವಿ ಒಪ್ಪಿಬಿಡುತ್ತಾರೆ! ನೆನಪಿನ ದೋಣಿಯಲ್ಲಿ ಈ ಘಟನೆಯನ್ನು ಕುರಿತು ಬರೆಯುವಾಗ ಭಗವಂತನ ಉದ್ದೇಶ ಸಾಧನೆ ಅದೆಂತಹ ಸಹಜ ಸಾಧಾರಣವಾಗಿ ತೋರುವ ಮತ್ತು ಮೇಲು ನೋಟಕ್ಕೆ ಯಾವ ವಿಶೇಷತೆಯೂ ಪ್ರದರ್ಶಿತವಾಗದ ರೀತಿಯಲ್ಲಿ ನೆರವೇರುತ್ತದೆ! ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಸ್ವಾಮೀಜಿಯ ರೂಮಿಗೆ ಸಂವಾದಿಯಾಗಿದ್ದ ಒಂದು ಕೊಠಡಿಯಲ್ಲಿ ರೋಗಶಯ್ಯೆ ಸಿದ್ಧವಾಗುತ್ತದೆ. ಸ್ಕೌಟುಗಳು ಶುಶ್ರೂಷೆಗೆ ನಿಲ್ಲುತ್ತಾರೆ. ಒಮ್ಮೊಮ್ಮೆ ಯಾರೂ ಒದಗದಿದ್ದಾಗ ಸ್ವತಃ ಸ್ವಾಮೀಜಿಯೇ ಬಟ್ಟೆ ಒಗೆದು ಒಣಗಿಸಿಕೊಡುವ ಮೊದಲಾದ ಕೆಲಸಗಳನ್ನು ಮಾಡಿಕೊಡುತ್ತಾರೆ! (ಸ್ವಾಮಿ ಸಿದ್ಧೇಶ್ವರಾನಂದ ಅವರು ಕುವೆಂಪು ಅವರಿಗಿಂತ ವಯಸ್ಸಿನಲ್ಲಿ ಕೇವಲ ಏಳು ವರ್ಷ ದೊಡ್ಡವರಷ್ಟೆ! ರಾಜಮನೆತನದಲ್ಲಿ ಹುಟ್ಟಿ ಬೆಳೆದು, ರಾಮಕೃಷ್ಣಾಶ್ರಮ ಸೇರಿ ಸಂನ್ಯಾಸಿಯಾಗಿದ್ದ ಅವರು ರಾಜಯೋಗಿಯಾಗಿದ್ದರಿಂದಲೇ ಸಾಮಾನ್ಯ ವಿದ್ಯಾರ್ಥಿಯೊಬ್ಬನ ವಿಷಯದಲ್ಲಿ ಇಷ್ಟೊಂದು ನಿರಹಂಕಾರಿಯಾಗಿ ವರ್ತಿಸಲು ಸಾಧ್ಯವಾಗಿತ್ತೇನೊ? ಆಶ್ರಮದಲ್ಲಿ ಕಸಗುಡಿಸುವ ಕೆಲಸದಿಂದ ಅಡುಗೆ ಕೆಲಸದವರೆಗೆ ಎಲ್ಲವನ್ನೂ ಮಾಡುತ್ತಿದ್ದ, ಭಿಕ್ಷಾನ್ನದ ವಿದ್ಯಾರ್ಥಿಗಳು ತಂದೆ ಭಿಕ್ಷಾನ್ನವನ್ನೂ ಸಂತೋಷದಿಂದ ಸ್ವೀಕರಿಸುತ್ತಿದ್ದ ಸ್ವಾಮೀಜಿ ಉನ್ನತ ವ್ಯಕ್ತಿಯಾಗಿದ್ದರು. ಮುಂದೆ ಫ್ರಾನ್ಸಿನ ರಾಮಕೃಷ್ಣಾಶ್ರಮಕ್ಕೆ ಹೋದ ಅವರು ಆಗಲೂ ಕುವೆಂಪು ಅವರ ಕ್ಷೇಮಾತುರರಾಗಿದ್ದರು ಎಂಬುದು ಅವರ ಪತ್ರಗಳಿಂದ ವ್ಯಕ್ತವಾಗುತ್ತದೆ. ಫ್ರೆಂಚ್ ಭಾಷೆಯಲ್ಲಿ ಉನ್ನತವಾದ ಪಾಂಡಿತ್ಯ ಪಡೆದರು. Meditation According to Yoga - a Vedanta ಮತ್ತು Some aspects of Vedanta Philosophy  ಇವು ಫ್ರೆಂಚ್‌ನಿಂದ ಇಂಗ್ಲಿಷಿಗೆ ಅನುವಾದ ಆದ ಅವರ ಕೃತಿಗಳು. ಶಂಕರ ಎಂಬ ಕೇರಳದ ಹುಡುಗನೊಬ್ಬನಿಗೆ, ಕುವೆಂಪು ಅವರ ಧೀಕ್ಷಾಗುರು ಸ್ವಾಮಿ ಶಿವಾನಂದರಿಂದ ಧೀಕ್ಷೆ ಕೊಡಿಸಿ ಸ್ವಾಮಿ ರಂಗನಾಥಾನಂದರನ್ನಾಗಿಸಿದ್ದು ಇದೇ ಸಿದ್ಧೇಶ್ವರಾನಂದರು. ಕುವೆಂಪು ಮತ್ತು ರಂಗನಾಥಾನಂದರು ಸಿದ್ಧೇಶ್ವರಾನಂದರಿಂದ ಪ್ರೇರಿತರಾಗಿ ಶಿವಾನಂದರಿಂದ ಧಿಕ್ಷೆ ಪಡೆದು ಶ್ರೀರಾಮಕೃಷ್ಣ ಮಠದ ಕೀರ್ತಿ ದಿಗಂತಗಳನ್ನು ವಿಸ್ತರಿಸಿದ್ದುದು ಈಗ ಇತಿಹಾಸ!)
ಅದುವರೆಗೆ ಕವಿ ಉದ್ದುದ್ದವಾಗಿ ಕೂದುಲು ಬಿಟ್ಟು ಬೈತಲೆ ಬಾಚುತ್ತಿದ್ದರು. ಆಶ್ರಮಕ್ಕೆ ಬಂದಾಗ, ’ರೋಗಿಯಾಗಿರುವವನಿಗೆ ಇಷ್ಟುದ್ದ ಕೂದುಲು ತೊಂದರೆಯಾಗುತ್ತದೆ, ಸ್ನಾನ ಮಾಡಿ ಶುಚಿಯಾಗಿಟ್ಟುಕೊಳ್ಳುವುದು ಒಣಗಿಸುವುದು ಕಷ್ಟ. ಆದ್ದರಿಂದ ಅದನ್ನು ಈಗ ಬೋಳಿಸಿ, ಸಂಪೂರ್ಣ ಗುಣವಾದ ಮೇಲೆ ಮತ್ತೆ ನಿಮಗಿಷ್ಟವಾದ ರೀತಿಯಲ್ಲಿ ಉದ್ದುದ್ದ ಕ್ರಾಪು ಬಿಡಬಹುದು’ ಎಂಬ ಸ್ವಾಮೀಜಿಯ ಸಲಹೆಯನ್ನು ಒಪ್ಪಿ ತಲೆಗೂದಲನ್ನು ಪೂರ್ತಿಯಾಗಿ ತೆಗೆಸಿಬಿಡುತ್ತಾರೆ. ಒಡನೆಯೇ ಒಂದು ಸುದ್ದಿ ಹಬ್ಬಿಬಿಡುತ್ತದೆ. ’ಪುಟ್ಟಪ್ಪ ಆಶ್ರಮ ಸೇರಿ ಸಂನ್ಯಾಸಿಯಾಗಿ ಬಿಟ್ಟ’ ಎಂದು! ಆ ಸುದ್ದಿಯ ತೀವ್ರತೆ ಎಷ್ಟಿತ್ತೆಂದರೆ, ದೂರದ ಮಲೆನಾಡಿನವರೆಗೂ ಅದು ಹಬ್ಬಿ, ಕುಪ್ಪಳಿಯ ಮನೆಯವರೆಲ್ಲಾ ಚಿಂತಾಕ್ರಾಂತರಾಗಿ, ಅಲ್ಲಿಂದ ತಿಮ್ಮಯ್ಯ ಮತ್ತು ದೇವಂಗಿ ಮಾನಪ್ಪನವರನ್ನು ಮೈಸೂರಿಗೆ ಕಳುಹಿಸಿ ಪುಟ್ಟಪ್ಪನವರನ್ನು ಊರಿಗೆ ಕರೆಸಿಕೊಳ್ಳುಲು ಯೋಚಿಸುವಷ್ಟರ ಮಟ್ಟಿಗೆ! ತಮ್ಮಯ್ಯ ಮತ್ತು ಮಾನಪ್ಪ ಅವರೇನೋ ಮೈಸೂರಿಗೆ ಬಂದರು. ಆಶ್ರಮಕ್ಕೂ ಬಂದರು. ಅಲ್ಲಿ ನಿಜ ಸಂಗತಿ ತಿಳಿದು, ಸ್ವಾಮಿ ಸಿದ್ಧೇಶನಾದಂರ ಸರಳತೆಗೆ ಸ್ನೇಹಪೂರ್ವಕ ಅಕ್ಕರೆಗೆ ಸೋತುಹೋದರಂತೆ. ಮಾನಪ್ಪನವರರಂತೂ ಸ್ವಾಮೀಜಿಗೆ ಶಿಷ್ಯನಾಗಿಬಿಟ್ಟರಂತೆ! ಅವರಿಬ್ಬರು ಅಲ್ಲಿದ್ದಾಗಲೇ ಸ್ವಾಮೀಜಿ, ’ಇವರಿಬ್ಬರು ಮನೆಗೆ ಹೋಗಿ ನಿಜ ವಿಷಯ ತಿಳಿಸುತ್ತಾರೆ. ಸಂತೆಪೇಟೆ ರೂಮನ್ನು ಖಾಯಮ್ಮಾಗಿ ಬಿಟ್ಟು ಆಶ್ರಮದಲ್ಲಿಯೇ ನೆಲೆಸಿಬಿಡಿ’ ಎಂದು ಸಲಹೆ ಮಾಡಿದರಂತೆ. ಕೃಪೆಯ ವ್ಯೂಹ ಸಫಲವಾಗದೆ ಇರುತ್ತದೆಯೆ? ಯಾರು ಪುಟ್ಟಪ್ಪನವರನ್ನು ಆಶ್ರಮದಿಂದ ಬಿಡಿಸಿ ಊರಿಗೆ ಕರೆದೊಯ್ಯಲು ಬಂದಿದ್ದರೋ ಅವರೇ, ಸಂತೆಪೇಟೆಯ ರೂಮನ್ನು ಖಾಲಿ ಮಾಡಿ ಪುಟ್ಟಪ್ಪನವರನ್ನು ಅಧಿಕೃತವಾಗಿ ಆಶ್ರಮದಲ್ಲಿ ಸಂಸ್ಥಾಪಿಸಿ ಹೋಗುವಂತಾಯಿತು!
ಮಲೇರಿಯಾದ ಜ್ವರಗಡ್ಡೆ ಕರಗಲು ಸ್ವಾಮೀಜಿ ಕೊಲ್ಕತ್ತಾದಿಂದ ’ಗಲಂಚಾ’ ಎಂಬ ಔಷಧವನ್ನು ತರಿಸುತ್ತಾರೆ. ಕಜ್ಜಿ ಶಾಶ್ವತವಾಗಿ ತೊಲಗುವಂತೆ ತಾವೇ ಒಂದು ನಾಟಿ ಔಷಧಿಯನ್ನು ತಯಾರು ಮಾಡಿ ಲೇಪಿಸುತ್ತಾರೆ. ದೈಹಿಕವಾಗಿ ಸದೃಢರಾಗುತ್ತಾ ಸಾಗಿದ್ದ ಪುಟ್ಟಪ್ಪನವರೊಳಗಿನ ಕವಿ ಕುವೆಂಪು ಜಾಗೃತನಾಗುತ್ತಾನೆ. ಸ್ವಾಮೀಜಿ ರೋಗಿಗೆ ಮಾನಸಿಕ ಶ್ರಮವಾಗಬಾರದೆಂದು ಓದು ಬರಹವನ್ನು ನಿಲ್ಲಿಸಲು ಸೂಚಿಸಿರುತ್ತಾರೆ. ಆಗಿನ ಮನಸ್ಥಿತಿಯನ್ನು ಕವಿಯ ಮಾತುಗಳಲ್ಲೇ ಕೇಳಬೇಕು: ನನ್ನ ಮನಸ್ಸು ಮತ್ತು ಹೃದಯ ಎರಡೂ ಅಪೂರ್ವವೂ ಆಧ್ಯಾತ್ಮಿಕವೂ ಆದ ಚಿಂತನ ಮತ್ತು ಭಾವನಗಳ ಸುಳಿಗೆ ಸಿಕ್ಕು ಅಭಿವ್ಯಕ್ತಿಗಾಗಿ ಹಾತೊರೆಯುತ್ತಿದ್ದವು. ಭಕ್ತಿ, ಜ್ಞಾನ ಮತ್ತು ಆನಂದಗಳ ಬುಗ್ಗೆಯೆ ಚಿಮ್ಮುತ್ತಿತ್ತು ನನ್ನ ಚಿದ್‌ಭೂಮಿಕೆಯಲ್ಲಿ. ಕವನ ರಚನಾ ಪ್ರತಿಭೆ ಹೊರಹೊಮ್ಮಲೆಂದು ರಸಾನುಭವ ಮಂದಿರದ ಬಾಗಿಲನ್ನು ದಬ್ಬುತ್ತಿತ್ತು; ಗುದ್ದುತ್ತಿತ್ತು; ತೆರೆಯದಿದ್ದರೆ ಮುಂದೂಡಿಕೊಂಡೆ ಹೊರನುಗ್ಗುತ್ತೇನೆ ಎಂಬ ರಭಸಾವೇಶದಲ್ಲಿ!
ಇನ್ನು ತಡೆಯಲಾರೆ ಎನ್ನಿಸಿದಾಗ ನಾ.ಕಸ್ತೂರಿಯವರಲ್ಲಿ ತಮ್ಮ ಕಷ್ಟವನ್ನು ನಿವೇದಿಸಿಕೊಳ್ಳುತ್ತಾರೆ. ಆಗ ಕಸ್ತೂರಿಯವರು, ’ಸ್ವಾಮೀಜಿ, ಕವಿಗೆ ತಲೆಯಲ್ಲಿ ಬಂದದ್ದನ್ನು ಕಾಗದಕ್ಕೆ ಇಳಿಸಿಬಿಡಲು ಅನುಮತಿ ನೀಡಿದರೆ ವಾಸಿ; ಇಲ್ಲದಿದ್ದರೆ ಆ ಭಾರವನ್ನು ಹೊತ್ತುಕೊಂಡೇ ಇರಬೇಕಾಗಿ ಬಂದು ನಿದ್ದೆಗೇಡಾಗುತ್ತದೆ’ ಎಂದು ಹೇಳಿ ಒಪ್ಪಿಸುತ್ತಾರೆ. ರುಗ್ಣಶಯ್ಯೆಯಲ್ಲಿ ಬರೆದ ಅತ್ಯಂತ ಮುಖ್ಯವಾದ ನೀಳ್ಗವಿತೆ ’ಹಾಳೂರು’. ೫೩೮ ಸಾಲುಗಳಿವೆ. ಆ ಕವಿತೆಯ ವಿವರಗಳಿಗೆ ಹೋಗದೆ, ಅದರ ಬಗ್ಗೆ ಕವಿಯ ಅಭಿಪ್ರಾಯವನ್ನಷ್ಟೇ ದಾಖಲಿಸಿ, ಆ ಸಂದರ್ಭದ ಬೇರೆ ಕವಿತೆಗಳನ್ನು ಗಮನಿಸಬಹುದು. ರುಗ್ಣಶಯ್ಯೆಯ ಮೇಲೆ ಕುಳಿತೇ ರಚಿಸಿದ್ದ ದೀರ್ಘಕವನವೆಂದರೆ ’ಹಾಳೂರು’. ಅದು ಗೋಲ್ಡ್ ಸ್ಮಿತ್ ಕವಿಯ ’ಆeseಡಿಣeಜ ಗಿiಟಟಚಿge’ನ ಭಾಷಾಂತರವೂ ಅಲ್ಲ, ಸರಳಾನುವಾದವೂ ಅಲ್ಲ. ಆಗ ನನ್ನ ಬಳಿ ಆ ಪುಸ್ತಕವೂ ಇರಲಿಲ್ಲ. ಅದನ್ನು ಹಿಂದೆ ಓದಿದ್ದರ ಪ್ರಭಾವವೆಷ್ಟೊ ಅಷ್ಟೆ. ಸಂಪೂರ್ಣವಾಗಿ ನಮ್ಮ ಹಳ್ಳಿಯ ಜೀವನ ಮತ್ತು ಹಳ್ಳಿಗಳಿಂದ ಪೇಟೆಗೆ ಬಂದು ನೆಲಸುತ್ತಿದ್ದ ಹಳ್ಳಿಗರ ದಾರುಣವಾದ ಬದುಕು ಇವುಗಳನ್ನು ಕುರಿತದ್ದು. ಅದನ್ನು ಬರೆದಂತೆಲ್ಲ ನನ್ನ ಕೊಟಡಿಗೆ ಬಂದು ದೇಹಸ್ಥಿತಿ ವಿಚಾರಿಸುತ್ತಿದ್ದ ಮಿತ್ರರಿಗೆಲ್ಲ ಓದುತ್ತಿದ್ದೆ. ಸ್ವಾಮೀಜಿ ಮತ್ತು ಕಸ್ತೂರಿಯವರೂ ತುಂಬಾ ಮೆಚ್ಚಿ ಆಸ್ವಾದಿಸುತ್ತಿದ್ದರು!

ಕವಿತಾ ರಚನೆಗೆ ಸ್ವಾಮೀಜಿ ಸಮ್ಮತಿಸಿದ ನಂತರ ಸಾಲುಸಾಲಾಗಿ ಕವಿತೆಗಳು ರಚನೆಯಾಗಿವೆ. ೨೫.೧೦.೧೯೨೬ರಂದು ಒಂದು, ೨೬.೧೦.೧೯೨೬ರಂದು ನಾಲ್ಕು, ೨೭.೧೦.೧೯೨೬ರಂದು ಒಂದು, ೨೯.೧೦.೧೯೨೬ರಂದು ಎರಡು ಕವಿತೆಗಳು ರಚನೆಯಾಗಿವೆ. ಇವುಗಳಲ್ಲಿ ’ಆಟ ಮುಗಿಯುವ ಮುನ್ನ’ ಎಂಬ ಕವಿತೆಯೊಂದನ್ನು ಉಳಿದ ಕವಿತೆಗಳು ಅಪ್ರಕಟಿತವಾಗಿವೆ!
ರೋಗಿಯ ಮನಸ್ಸಿಗೆ ಆಹ್ಲಾದವೂ ಒಂದು ಮಾನಸಿಕ ಭೇಷಜವಾಗಿ ರೋಗ ಬೇಗ ಗುಣವಾಗುವುದಕ್ಕೆ ನೆರವಾಗುತ್ತದೆ ಎಂಬ ಉದ್ದೇಶದಿಂದ ಆಶ್ರಮದ ಆವರಣದಲ್ಲಿದ್ದ ಹೂವಿನ ಗಿಡಗಳಿಂದ ಹೂವುಗಳನ್ನು ಸ್ವಾಮೀಜಿ ಕುಯ್ದು ತಂದು ರೋಗಿಯ ಕೊಠಡಿಯಲ್ಲಿ ಮನೋಹರವಾಗಿ ಜೋಡಿಸಿಡುತ್ತಿದ್ದರಂತೆ! ’ರೋಗಶಯನದೊಳಿದ್ದಾಗ ಪೂಜೊಂಪ ನೋಡಿ ಬರೆದುದು’ ಎಂಬ ಟಿಪ್ಪಣಿಯಿರುವ, ಶಿರ್ಷಿಕೆಯಿಲ್ಲದ ಕವಿತೆ ಆ ಸಂದರ್ಭದ್ದು:
ಮುದ್ದು ಹೂಗಳೆ, ನಿಮ್ಮ ನೋಡೆನ್ನ ರೋಗ
ಜಾರಿಹೋದುದು ಬೇಗ; ಹರುಷವೊಂದೀಗ
ಬಂದಂತೆ ಭಾಸವಾಯಿತು; ನಿಮ್ಮ ಚೆಂದ
ರುಜೆಗೆಲ್ಲ ಬಂಧ, ಮೇಣಾತ್ಮಾನಂದ!
ವೈದ್ಯರೌಷಧಿ ಕೊಡುವರಾದರೂ ಒಮ್ಮೆ
ನಿಮ್ಮಗಳ ಮುಂದವರ ಪಾಂಡಿತ್ಯ ಹೆಮ್ಮೆ!
ಕವಿಯ ರುಜೆಗಾವಗಂ ಪಂಡಿತರು ನೀವು!
ಸೌಂದರ‍್ಯವೌಷಧವು! ವರ ವೈದ್ಯ-ಹೂವು!
ಕೊಠಡಿಯಲ್ಲಿ ಮಲಗಿದ್ದಾಗ ಹೊರಗೆ ಕಾಣುತ್ತಿದ್ದ ಹೋದೋಟವನ್ನು, ಅದರಿಂದ ತನಗಾಗುತ್ತಿದ್ದ ಆನಂದವನ್ನು ’ಹೂದೋಟ’ ಎಂಬ ಕವಿತೆಯಲ್ಲಿ ಬಿಡಿಸಿಟ್ಟಿದ್ದಾರೆ. ಜೀವ ಜಗತ್ತು ಈಶ್ವರ ಜನ್ಮಾಂತರ ಕರ್ಮ ಮೊದಲಾದ ವಿಚಾರಗಳ ಮಂಥನ ಮನಸ್ಸಿನಲ್ಲಿ ಯಾವಾಗಲೂ ನಡೆಯುತ್ತಿತ್ತು ಕವಿಗೆ. ಸ್ವಾಮೀಜಿಯ ಜೊತೆಯಲ್ಲೂ ವಿಚಾರ ವಿನಿಮಯ ನಡೆಯುತ್ತಿತ್ತು. ಆದರೆ ಅದು ಎಲ್ಲಿ ವಿಸ್ಮೃತವಾಗಿಬಿಡುವುದೊ ಸುಖದ ಸಮಯದಲ್ಲಿ ಎಂದು ಜೀವ ಎಚ್ಚರಿಕೆ ಹೇಳುತ್ತಿತ್ತು. ಹಾಗಾಗದಂತೆ ದುಃಖ ಸಮಯದಲ್ಲಿ ಎಂತೋ ಅಂತೆ ಸುಖದ ಸಮಯದಲ್ಲಿಯೂ ನಾನು ನಿನ್ನನ್ನು ಮರೆಯದಂತೆ ಕೃಪೆ ಮಾಡು ಎಂದು ಬೇಡುವ ಇನ್ನೊಂದು ಕವಿತೆ ಹೀಗಿದೆ:
ದುಃಖವೈತರೆ ನಿನ್ನ ನೆನೆಯುವೆವು ಬಿಡದೆ,
ಮರೆಯುವೆವು ಸುಖದೊಳಿರಲು;
ಸಂತಸದೊಳಿರುವಾಗ ನಿನ್ನ ನೆನೆವಂತೆ
ಮನವ ದಯಪಾಲಿಸೆನಗೆ!
ನಿತ್ಯತತ್ವವು ನೀನು ಚಿತ್ತದೊಳು, ತಾಯೆ,
ನಿತ್ಯವೂ ನಿನ್ನ ನೆನೆವೆ!
ಸುಖವಿರಲಿ ದುಃಖವೇ ಇರಲಿ ಮತಿಯೀಯು
ನಿನ್ನ ನಾ ಮರೆಯದಂತೆ!
ಆ ಸಂದರ್ಭದಲ್ಲಿ ಕವಿ ನಡೆಯುತ್ತಿರಲಿ, ನುಡಿಯುತ್ತಿರಲಿ ಆಡುತ್ತಿರಲಿ ಓದುತ್ತಿರಲಿ ಚಿಂತನೆ ಮಾಡುತ್ತಿರಲಿ- ತಾಯಿಯ ಅನಿರ್ವಚನೀಯ ರಹಸ್ಯಮಯ ಸಾನಿಧ್ಯ ಸರ್ವದಾ ಕವಿಯ ಬಳಿ ಸುತ್ತುತ್ತಿರುವ ಅನುಭವವಾಗುತ್ತಿತ್ತಂತೆ. ಅದನ್ನು ಪ್ರಸ್ತುತಪಡಿಸುವ ಕವಿತೆ ಹೀಗಿದೆ:
ಒಂದು ರಹಸ್ಯವು ಪೀಡಿಪುದೆನ್ನ
ಒಂದಾನಂದವು ಬಾಧಿಪುದೆನ್ನ!
ನಡೆಯುತಲಿರಲಿ ನುಡಿಯುತಲಿರಲಿ, ಸದಾ;
ಆಡುತಲಿರಲಿ ಓದುತಲಿರಲಿ
ಕವಿತೆಯ ರಚಿಸುತ ನಾನಿರಲಿ;
ಎಲ್ಲೇ ಇರಲಿ, ಎಂತೇ ಇರಲಿ,
ಏನನೆ ಮಾಡುತಲಿರಲಿ, ಸದಾ
ಒಂದು ರಹಸ್ಯವು ಪೀಡಿಪುದೆನ್ನ!
ಒಂದಾನಂದವು ಬಾಧಿಪುದೆನ್ನ!
ಬಳಿಯೊಳಗಾರೋ ಇರುವರು ಎಂಬ
ಒಂದು ರಹಸ್ಯವು ಪೀಡಿಪುದೆನ್ನ!
ಯಾರಾನಂದವೊ ಎನಗಾಗೆಂಬ
ಒಂದಾನಂದವು ಬಾಧಿಪುದೆನ್ನ!
ಈ ಲೋಕ, ಇದರ ಬದುಕು, ಈ ಸಂಸಾರ ಎಲ್ಲವನ್ನೂ ಹಳಿಯುವ ಮನೋಧರ್ಮವನ್ನು ಒಪ್ಪದೆ, ಸಾಕು ಮಾಡೋ ಜನ್ಮ ಎನ್ನುವ ದಾಸಯ್ಯನನ್ನು ಸಂಬೋಧಿಸಿ ಬರೆದಿರುವ ಶಿರ್ಷಿಕೆಯಿಲ್ಲದ ಕವಿತೆ ಗಮನಸೆಳೆಯುತ್ತದೆ; ಕವಿಯ ಜೀವನಪ್ರೀತಿಗೂ ಸಾಕ್ಷಿಯಾಗಿದೆ.
ಸುಖವಿಲ್ಲವೆನಬೇಡ
ದುಃಖವೆನಬೇಡ;
ತಾಯ ತೊಡೆಯಿದು, ದಾಸ
ಹರುಷದಾವಾಸ.
ಪಾಪಿ ತಾನೆನಬೇಡ,
ದಾಸನೆನಬೇಡ;
ತಾಯಿ ಸುತರಾವೆಲ್ಲ,
ಬರಿಯ ದಾಸರಲ್ಲ!
ಸಂಸಾರ ಬರಿ ಮೋಸ
ಎನಬೇಡ, ದಾಸ.
ತಾಯ ಲೀಲೆಯ ನೀನು
ಬಲು ಬಲ್ಲೆಯೇನು?
ಜೀವವಿದು ಬರಿ ವೇಷ
ಅಲ್ಲವೋ ದಾಸ!
ತಾಯ ತೊಡೆಯಿದು, ದಆಸ
ಹರುಷದಾವಾಸ!
’ಆಟ ಮುಗಿಯುವ ಮುನ್ನ’ ಎಂಬ ಪ್ರಕಟಿತ ಕವಿತೆ (ಮರಿವಿಜ್ಞಾನಿ), ಕಾಯಿಲೆಯಾಗಿ ಮಲಗಿದ್ದಾಗ ಎಲ್ಲ ಸತ್ತು ಹೋಗಿಬಿಡುವೆನೋ ಎಂಬ ಆಲೋಚನೆ ಬಂದಾಗ ತಾಯಿಗೆ ಹೇಳಿಕೊಳ್ಳುವಂತೆ ರಚನೆಯಾಗಿದೆ. ಅದು ಸಾವು ಆತ್ಮದ ವಿನಾಶ ಎಂಬ ಹೆದರಿಕೆಯಿಂದಲ್ಲ; ಸಾಧಿಸಬೇಕಾದುದು ಇನ್ನೂ ಬಹಳಷ್ಟು ಇರುವಾಗ ಅದನ್ನೆಲ್ಲ ಕೈಗೂಡಿಸದೆ ಹೋಗುವ ನಷ್ಟಕ್ಕೆ ನನ್ನ್ನು ಗುರಿಪಡಿಸದಿರು ಎಂಬ ಭಾವದಿಂದ ಮೂಡಿದುದು.
ಆಟ ಮುಗಿಯುವ ಮುನ್ನ
ಕರೆಯಬೇಡೆನ್ನ!
ಆಟ ಮುಗಿಯಲು ನಾನೆ
ಬರುವೆನಮ್ಮಾ!
ಇದ್ದರೂ ಸವಿಯೂಟ
ಬೇಡವೆನಗೀಗ;
ಪೂರೈಸಲೀ ಆಟ
ಬರುವೆನಾಗ!
ಆಟ ತೊಲಗುವುದಲ್ಲಾ
ಎಂಬುವಳಲಿಲ್ಲ;
ಆಟ ಮುಗಿಯಲು ನಾನೆ
ಬರುವೆನಮ್ಮಾ!
ಬರಲೆನಗೆ ಭಯವಿಲ್ಲ;
ತಾಯೆ, ನಿನ್ನಾನಂದ
ನಿನ್ನ ಕಂದ!
ಇನ್ನೊಮ್ಮೆ ರೋಗಿ ವಿಶ್ರಾಂತಿ ಪಡೆಯುತ್ತಿದ್ದಾಗ, ಆಶ್ರಮದ ಆವರಣದಲ್ಲಿದ್ದ ಗಿಡದ ಮೇಲೆ ಕುಳಿತು ಸಿಳ್ಳು ಹಾಕುತ್ತಿದ್ದ ಮಡಿವಾಳ ಹಕ್ಕಿ (ಹಂಡ ಹಕ್ಕಿ) ಕವಿಗೆ ವಿದ್ಯುತ್ ಸಂಚಾರವನ್ನೇ ಉಂಟುಮಾಡಿಬಿಡುತ್ತದೆ. ’ನನಗೆ ನಮ್ಮೂರಿನ ಒಂದು ಅರಣ್ಯಕ ಚೇತನವೆ ಹಕ್ಕಿಯಂತೆ ನನ್ನ ಕ್ಷೇಮಸಮಾಚಾರ ವಿಚಾರಿಸಲು ಬಂದಂತಾಗಿ, ಅದನ್ನು ಮಾತಾಡಿಸಿದೆ’ ಎಂದು ಬರೆದಿದ್ದಾರೆ.  ಕವಿತೆಯ ಶೀರ್ಷಿಕೆ ’ಮಡಿವಾಳ’:


ಬಂದಿರುವೆ ಎಲ್ಲಿಂದ?
ಸಂದೇಶವಾರಿಂದ
ತಂದಿರುವೆ, ಎಲೆ ಮುದ್ದು ಮಡಿವಾಳ ಹಕ್ಕಿ?
ಹಿಂದಿನಾ ದಿನಗಳಾ-
ನಂದವನು ತಂದಿಹೆಯಾ?
ಮುಂದಿನಾನಂದವನು ತಂದಿರುವೆ ಏನು?
ತಂದಿಹೆಯ ತಾಯ್ನುಡಿಯ?
ಬಂದಿಹೆಯ ಇನಿಯಳಾ
ಸಂದೇಶವನು ಕೊಂಡು ಭರದಿಂದ ನೀನು?
ಗುರುವಿನಾದೇಶವನು
ಭರದಿಂದ ತಂದಿಹೆಯ?
ವರಕವಿಗಳಾವೇಶವನು ತಂದೆಯೇನು?
ಯಾರಾದೊಡೇನು? ನೀ-
ನೂರಿಂದ ಬಂದವನು!
ಸಾರುತಿಹೆ ನಮ್ಮೂರ ಹಾಡುಗಳನಿಲ್ಲಿ!
ಸಾರಲೈ ಮಡಿವಾಳ;
ಸೇರಿ ನಾವಿರ್ವರೂ
ಸಾರೋಣ ನಮ್ಮೂರ ಹಾಡುಗಳನ್ನಿಲ್ಲಿ!
ಈ ಮೊದಲೇ ಹೇಳಿದ ಹಾಗೆ, ಆ ದಿನಗಳಲ್ಲಿ ಕವಿಗೆ ಬದುಕುತ್ತೇನೋ ಇಲ್ಲವೋ ಎಂಬ ಆಶಂಕೆ ಆಗಾಗ ಬರುತ್ತಲೇ ಇತ್ತೆಂದು ಕಾಣಿಸುತ್ತದೆ. ಆಟ ಮುಗಿಸುವ ಕವಿತೆಯಲ್ಲಿ ಬೇಡಿದಂತೆ ಒಮ್ಮೆ ಬೇಡಿದರೆ ಇನ್ನೊಮ್ಮೆ ಎಲ್ಲದಕ್ಕೂ ಸಿದ್ಧ ಎಂಬ ಕೆಚ್ಚು ಮೂಡುತ್ತದೆ. ಅಂತಹುದೇ ಕೆಚ್ಚಿನಲ್ಲಿ ಮೂಡಿದ ಒಂದು ಕವಿತೆಯಿದೆ; ಶೀರ್ಷಿಕೆಯಿಲ್ಲ. ಅದನ್ನು ಕುರಿತು ಕವಿ ಹೇಳುವುದು ಹೀಗೆ: ೨೯.೧೦.೧೯೨೬ನೆಯ ರಾತ್ರಿ. ಬಹಳ ಹೊತ್ತು ನಿದ್ದೆ ಬರಲಿಲ್ಲ. ಏನೇನೋ ಯೋಚನೆಗಳು; ಲೌಖಿಕ ಮತ್ತು ತಾತ್ವಿಕ. ಒಮ್ಮೊಮ್ಮೆ ನಾನು ಬದುಕುತ್ತೇನೆಯೋ ಇಲ್ಲವೊ ಎಂಬ ಅಶಂಕೆ. ತಾಯಿ ಏಕೆ ಹೀಗೆಲ್ಲ ಮಾಡುತ್ತಿದ್ದಾಳೆ ಎಂದು ಅವಳ ಮೇಲೆ ಮುನಿಸು. ’ನೀನು ಏನು ಬೇಕಾದರೂ ಮಾಡು ನಾನೇನು ಹೆದರುವನಲ್ಲ’ ಎಂಬ ಗರ್ವಭಂಗಿ ಅವಳೊಡನೆ. ನಾನು ಎಲ್ಲಕ್ಕೂ ಸಿದ್ಧ ಎಂಬ ಕೆಚ್ಚು. ಆ ಮಧ್ಯರಾತ್ರಿಯಲ್ಲಿ ಒಂದು ಕವನ ಮೂಡಿತು; ಆಗಲೆ ದೀಪಹೊತ್ತಿಸಿ ಅದನ್ನು ಬರೆದುಬಿಟ್ಟೆ: ಕವನದ ಕೆಳಗೆ ತಾರೀಖು ಹಾಕಿ ಬ್ರಾಕೆಟ್ಟಿನಲ್ಲಿ (ಓighಣ) ಎಂದೂ ಹಸ್ತಪ್ರತಿಯಲ್ಲಿ ಬರೆದಿದೆ.
ಸಿದ್ಧವಾಗಿಹೆ ನಾನು, ಕಾಳಿ!
ಎದೆಯೊಡ್ಡಿ ನಿಂತಿಹೆನು;
ಆದುದಾಗಲಿ, ದೇವಿ,
ನಿರ್ಭೀತ ನಾನು!
ಬರಸಿಡಿಲ ಬೀಸು,
ಕಾರ್ಮಿಂಚ ಸೂಸು;
ಶೋಣಿತವ ಚೆಲ್ಲು,
ಜೀವವನೆ ಮೆಲ್ಲು;
ಬರಲೆನಗೆ ಸಾವು,
ಬರಲೆನಗೆ ನೋವು;
ದುಃಖಗಳ ಭೀರು,
ಸುಖಗಳನು ಹೀರು;
ನಿನ್ನ ಖಡ್ಗದಿ ಎದೆಯ ಸೀಳು;
ಶೂನ್ಯವಾಗಲಿ ನನ್ನ ಬಾಳು;
ಸಿದ್ಧವಾಗಿಹೆ ನಾನು, ಕಾಳಿ!
ಎದೆಯೊಡ್ಡಿ ನಿಂತಿಹೆನು;
ಆದುದಾಗಲಿ, ದೇವಿ
ನಿರ್ಭೀತ ನಾನು!
ಖಡ್ಗದಿಂದ ಸೀಳು ಎಂದು ಎದೆಯೊಡ್ಡಿ ನಿಂತ ತನ್ನ ಧೀರಕಂದನನ್ನು ತಾಯಿ ತನ್ನ ಮಡಿಲಿಗೆಳೆದುಕೊಂಡಳು, ಕನ್ನಡ ತಾಯ ಬಯಕೆಯಂತೆ!

4 comments:

ಜಲನಯನ said...

ಡಾ. ಸತ್ಯ ನಿಜಕ್ಕೂ ರಾಷ್ಟ್ರಕವಿಯ ಜೀವನದ ವಿವಿಧ ಆಯಾಮಗಳನ್ನು ಘಟನಾವಳಿಗಳನ್ನು ನಮ್ಗೆಲ್ಲಾ ಪರಿಚಯಿಸುವುದರ ಜೊತೆಗೆ ಅವರ ಕವನಗಳ ಹುಟ್ಟು ಹೇಗಾಗುತ್ತಿತ್ತು ಅದರ ಸ್ಫೂರ್ತಿ ಅವರಿಗೆಲ್ಲಿಂದ ಸಿಗುತ್ತಿತ್ತು ಎನ್ನುವುದನ್ನೂ ತಿಳುಸುವುದಲ್ಲದೇ ಆ ಅಮೂಲ್ಯ ಸಾಲುಗಳನ್ನೂ ನಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದು ನಮಗೆ ಭಾಗ್ಯದ ವಿಷಯ, ಧನ್ಯವಾದಗಳು.

ಮನಸು said...

ಸರ್... ಎಂತಾ ವಿಶೇಷ ಪರಿಚಯ ಮಾಡಿದ್ದೀರಿ ತುಂಬಾ ಧನ್ಯವಾದಗಳು

Thyagaraj P said...

ಸೊಗಸಾದ ಓದು.

Pejathaya said...

ರಾಜಸನ್ಯಾಸಿಯೇ ರೋಗಿಯ ಸೇವೆಗೆ ನಿಂತ ಮೇಲೆ ಜವರಾಯ ಅಲ್ಲಿಗೆ ಸುಳಿಯಲುಂಟೇ? ಕುವೆಂಪು ಧನ್ಯರು.
- ಪೆಜತತ್ತಾಯ