Saturday, December 17, 2011

'ಅನ್ನರತ್ನಾಕರ'ಗೆ ಶ್ರದ್ಧಾಂಜಲಿ

'ನೇಗಿಲಯೋಗಿ' ಕವಿತೆ ಸೃಷ್ಟಿಯಾದ ಸಂದರ್ಭದ ಬಗ್ಗೆ ಬರೆಯುತ್ತಿದ್ದಾಗ, ಇನ್ನೆರಡು ರೈತಪರ ಗೀತೆಗಳನ್ನು ಗಮನಿಸಿದ್ದೆ, 'ನೇಗಿಲಯೋ'ಗಿ ಲೇಖನವೇ ದೀರ್ಘವಾದ್ದರಿಂದ, ಆ ಎರಡೂ ಕವಿತೆಗಳ ಬಗ್ಗೆ ಬರವಣಿಗೆಯನ್ನು ಮುಂದೂಡಿದ್ದೆ. ಅದರಲ್ಲಿ ಒಂದು ಅನ್ನರತ್ನಾಕರಗೆ' ಎಂಬುದು. ಆಗ, ನನಗೆ ಮುಂದೊಂದು ದಿನ ಈ ಕವಿತೆಯ ಕೇಂದ್ರಬಿಂದುವಾಗಿದ್ದ ರತ್ನಾಕರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವಾಗ ಈ ಕವಿತೆಯ ಬಗ್ಗೆ ಬರೆಯಬೇಕಾಗುತ್ತದೆ ಎಂಬ ಕಲ್ಪನೆ ಇರಲಿಲ್ಲ.

ಹೌದು. ಶ್ರೀ ದೇವಂಗಿ ರಾಮಣ್ಣಗೌಡ ರತ್ನಾಕರ ಅವರು ೧೬.೧೨.೨೦೧೧ ಶುಕ್ರವಾರ ಬೆಳಿಗ್ಗೆ ನಿಧನರಾದರೆಂಬ ಸುದ್ದಿ ಬಂದಿದೆ. ರತ್ನಾಕರ ಅವರು ಕುವೆಂಪು ಅವರ 'ಪೂರ್ಣಾಂಗಿ' ಶ್ರೀಮತಿ ಹೇಮಾವತಿಯವರ ಕಿರಿಯ ಸಹೋದರ. ಶಿವಮೊಗ್ಗೆಯಲ್ಲಿ ದೇವಂಗಿ ರಾಮಣ್ಣಗೌಡರು ವಾಸವಾಗಿದ್ದ ಮನೆಯಲ್ಲಿಯೇ ವಾಸಿಸುತ್ತಿದ್ದರು. ಹಾಕಿ, ಪುಟ್ಬಾಲ್, ಕ್ರಿಕೆಟ್ ಕ್ರೀಡೆಗಳಲ್ಲಿ ಉತ್ತಮ ಆಟಗಾರರಾಗಿದ್ದ ರತ್ನಾಕರ ಅವರು ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಶಿವಮೊಗ್ಗವನ್ನು ಪ್ರತಿನಿಧಿಸಿದ್ದರು.

ವಿದ್ಯಾರ್ಥಿಯಾಗಿದ್ದಾಗಲೇ ಸ್ವತಂತ್ರ ಹೋರಾಟದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು. ಸ್ವತಂತ್ರದ ರಜತಮಹೋತ್ವ ವರ್ಷದಲ್ಲಿ ಸರ್ಕಾರ ಇವರನ್ನು ಗೌರವಿಸಿತ್ತು. ಶಿವಮೊಗ್ಗೆಯಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದರ ಸ್ಥಾಪಕ ಸದಸ್ಯರಾಗಿದ್ದರು. ಹಾಲಿ ಅಧ್ಯಕ್ಷರಾಗಿದ್ದರು. ತಂದೆಯವರಿಂದ ಬಂದಿದ್ದ ಅಡಿಕೆ ಮಂಡಿಯನ್ನು ನಡೆಸುತ್ತಿದ್ದರು. ಮಂಡಿ ಮರ್ಚೆಂಟ್ ಅಸೋಸಿಯೇಷನ್ನಿನ ಅಧ್ಯಕ್ಷರಾಗಿದ್ದರು. ಮಂಡಿ ಮರ್ಚೆಂಟ್ ಬ್ಯಾಂಕಿನ ಸ್ಥಾಪಕ ಅಧ್ಯಕ್ಷರಾಗಿ ಒಂಬತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕರ್ನಾಟಕ ಸಂಘದ ಖಜಾಂಚಿಯಾಗಿಯೂ ಸೇವೆ ಸಲ್ಲಿಸಿದ್ದರು. ಶಿವಮೊಗ್ಗ ಹತ್ತು ಹಲವಾರು ಸಂಘಸಂಸ್ಥೆಗಳೊಂದಿಗೆ ಒಡನಾಟವಿಟ್ಟುಕೊಂಡು ಶಿವಮೊಗ್ಗದ ಸಾಮಾಜಿಕ ಹಾಗೂ ಶೈಕ್ಷಣಿಕ ಹಾಗೂ ಔದ್ಯಮಿಕ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆಗಳನ್ನು ನೀಡಿದ್ದಾರೆ.

ಚಿಕ್ಕಂದಿನಿಂದಲೂ ಕುವೆಂಪು ಅವರೊಂದಿಗೆ ಒಡನಾಟವಿತ್ತು. ನವಿಲುಕಲ್ಲು ಗುಡ್ಡಕ್ಕೆ ಸೂರ್ಯೋದಯವನ್ನು ವೀಕ್ಷಿಸಲು ಹೋಗುತ್ತಿದ್ದ ಕವಿಯ ಹಿಂದೆ ಕೋವಿ ಹೊತ್ತು, ಅವರಿಗಿಂತ ಸುಮಾರು ಇಪ್ಪತ್ತು ವರ್ಷ ಚಿಕ್ಕವರಾಗಿದ್ದ ರತ್ನಾಕರ ಹೋಗುತ್ತಿದ್ದರು. ಶಿವಮೊಗ್ಗಕ್ಕೆ ಬಂದಾಗಲೆಲ್ಲಾ ಕುವೆಂಪು ಅವರು ಉಳಿಯುತ್ತಿದ್ದುದ್ದು ರತ್ನಾಕರ ಅವರ ಮನೆಯಲ್ಲಿಯೇ. ಆಗೆಲ್ಲಾ ಕುವೆಂಪು ಅವರ ಜೊತೆ, ಕಾಡು ಸುತ್ತುವುದಕ್ಕೆ, ಕುವೆಂಪು ಅವರನ್ನು ವಾಕಿಂಗಿಗೆ ಕರೆದುಕೊಂಡು ಹೋಗುತ್ತಿದ್ದರು. ಹೀಗೆ ಒಮ್ಮೆ ವಾಕಿಂಗ್ ಹೋಗಿದ್ದಾಗಲೇ ಬಲವಾದ ಹಂದಿಯೊಂದನ್ನು ಬೇಟೆಯಾಡಿದ್ದನ್ನು ತಾರಿಣಿಯವರು ಉಲ್ಲೇಖಿಸಿದ್ದಾರೆ. ಕುವೆಂಪು ಅವರನ್ನು 'ಪುಟ್ಟಬಾವ' ಎಂದು ಕರೆಯುತ್ತಿದ್ದ ರತ್ನಾಕರ ಅವರು, ಕುವೆಂಪು ಅವರೊಂದಿಗೆ ಹಲವಾರು ಬಾರಿ ನವಿಲುಕಲ್ಲು ಗುಡ್ಡಕ್ಕೆ ಸೂರ್ಯೋದಯವನ್ನು ವೀಕ್ಷಿಸಲು ಹೋಗಿದ್ದರು.

ರತ್ನಾಕರ ಅವರು ಒಳ್ಳೆಯ ಬೇಟೆಗಾರರಾಗಿದ್ದರು. ನರಭಕ್ಷಕಗಳಾಗಿದ್ದ ಹುಲಿಗಳನ್ನು ಕೊಂದು ಶಿವಮೊಗ್ಗೆ ಜಲ್ಲೆಯಲ್ಲಿ ಮನೆಮಾತಾಗಿದ್ದರು. ಶಿಕಾರಿಪುರ ಪ್ರದೇಶದಲ್ಲಿ ನರಭಕ್ಷಕ ಹುಲಿಯೊಂದನ್ನು ಹೊಡೆದಾಗ ಅವರಿನ್ನೂ ಅಪ್ರಾಪ್ತ ವಯಸ್ಸಿನ ಬಾಲಕರಾಗಿದ್ದರು. ಹುಲಿಬೇಟೆಗೆ ಒಪ್ಪಿಗೆ ಪಡೆಯಲು ಡಿ.ಸಿ. ಮುನಿನಂಜಪ್ಪ ಎಂಬುವವರು ಮೊದಲಿಗೆ ಒಪ್ಪದಿದ್ದರೂ ಜನರ ಒತ್ತಾಯದ ಮೇರೆಗೆ ಒಪ್ಪಿಗೆ ಕೊಟ್ಟಿದ್ದರಂತೆ. ಕೆದಂಬಾಡಿ ಜತ್ತಪ್ಪರೈ ಅವರ ಶಿಕಾರಿ ಅನುಭವಗಳು ಪುಸ್ತಕ ಪ್ರಕಟವಾದ ಮೇಲೆ ಅದನ್ನು ಓದಿದ ಕುವೆಂಪು ಅವರು, ಶ್ರೀ ಸುಬ್ಬರಾಯಾಚಾರ್ಯ ಎಂಬುವವರನ್ನು ಬೇಟೆಯ ಅನುಭವಗಳನ್ನು ಕೇಳಿ ಬರೆದುಕೊಂಡಬರಲು ರತ್ನಾಕರ ಅವರಲ್ಲಿಗೆ ಕಳುಹಿದ್ದರಂತೆ. ಸರಿಯಾಗಿ ಎಲ್ಲಾ ಅನುಭವಗಳನ್ನು ಹೇಳಲು ರತ್ನಾಕರ ಅವರಿಗಿದ್ದ ಸಮಯಾಭಾವದಿಂದ ಪುಸ್ತಕ ಬರುವುದು ನಿಂತು ಹೋಯಿತಂತೆ. ಕುವೆಂಪು ಶಿವಮೊಗ್ಗೆಗೆ ಪೋನು ಮಾಡಿದಾಗಲೆಲ್ಲಾ, ರತ್ನಾಕರ ಇತ್ತೀಚಿಗೆ ಏನು ಶಿಕಾರಿ ಮಾಡಿದ್ದಾನೆ ಎಂದು ವಿಚಾರಿಸುತ್ತಿದ್ದರಂತೆ. ರತ್ನಾಕರ ಅವರಿಗೆ ಅರವತ್ತು ವಯಸ್ಸಾದಾಗ, ಇನ್ನು ಶಿಕಾರಿ ಸಾಕು ಎಂದು ಹೇಳಿದ್ದರಂತೆ.

ರತ್ನಾಕರ ಅವರು ಪ್ರಗತಿಪರ ರೈತರಾಗಿದ್ದರು. ತೋಟಗಾರಿಕೆಯಲ್ಲಿ ವಿಶೇಷ ಆಸಕ್ತಿಯಿತ್ತು. ಕೃಷಿಯನ್ನು ಒಂದು ತಪಸ್ಸಿನಂತೆ ಅವರು ಧ್ಯಾನಿಸುತ್ತಿದ್ದರು. ೧೯೫೭ರಲ್ಲಿಯೆ, ಅವರ ಕೃಷಿ ಸಾಧನೆಯನ್ನು ಗಮನಿಸಿ, ಅಂದಿನ ಮೈಸೂರು ಸರ್ಕಾರ ಸನ್ಮಾನಪತ್ರ ನೀಡಿ ಗೌರವಿಸಿತ್ತು. ೧೯೬೭ರಲ್ಲಿ ಬತ್ತದ ಬೆಳೆಯಲ್ಲಿ ದಾಖಲೆ ನಿರ್ಮಿಸಿದ್ದರು. ಆ ಸಂದರ್ಭದಲ್ಲಿ, ೨೩.೧೦.೧೯೬೭ ಸೋಮವಾರ ಶಿವಮೊಗ್ಗಕ್ಕೆ ಬಂದ ಕುವೆಂಪು ಅವರು, ರತ್ನಾಕರ ಅವರ ಬತ್ತದ ಗದ್ದೆಗೆ ಬೇಟಿ ಕಡೊತ್ತಾರೆ. ಆಗ ರಚಿತವಾದುದ್ದೇ 'ಅನ್ನರತ್ನಾಕರಗೆ' ಎಂಬ ಕವಿತೆ.
ನೀ ಬರಿಯ ಹೆಸರಿಂದೆ ರತ್ನಾಕರನೆ? ಅಲ್ತು:
ತಾಯಿ ಭಾರತಿಗುದರ ನೈವೇದ್ಯಮಂ ನೀಡಿ
ಹೊರೆಯುತಿಹ ಅನ್ನರತ್ನಾಕರನೆ ದಲ್! ದರ್ಶಿಸುತೆ
ನಿನ್ನ ಈ ಶಾಲಿ ಸಂಪನ್ ಮಹೀಲಕ್ಷ್ಮಿಯಂ
ಕೈಮುಗಿದೆ, ಮಣಿದೆ, ಬೆರಗಾದೆ! ನಿನ್ನಂತೆವೋಲ್
ಬೆಳೆವರಿದ್ದರೆ ಅಮ್ಮ ಭಾರತಿಗೆ ಇಂದಿರುತಿತ್ತೆ
ಅನ್ನಭಿಕ್ಷಾಟನೆಯ ಗೋಳ್?-
(ಅರವತ್ತರ ದಶಕದಲ್ಲಿ ಭಾರತದಲ್ಲಿ ದುರ್ಬಿಕ್ಷವಿತ್ತು. ಆಹಾರ ದಾನ್ಯಗಳಿಗಾಗಿ ಮುಂದುವರೆದ ದೇಶಗಳ ಮೇಲೆ ಭರತದ ಅವಲಂಬನೆ ಮುಂದುವರೆದಿತ್ತು. ಅದನ್ನು ಅನ್ನಬಿಕ್ಷಾಟನೆ ಎಂದು ಕರೆದಿದಿದ್ದಾರೆ.)
ಓಡುವನ್ನೆಗ ಚಕ್ಷು
ದಟ್ಟಯ್ಸಿ ಹಚ್ಚನೆಯ ಕಂಗೊಳಿಸುವೀ ಇಕ್ಷು
ನಾಡೆದೆಗೆ ಕೆಚ್ಚೀವ ಸಕ್ಕರೆಯ ಸಾಕ್ಷಿ!-
ಸಮರ ಸನ್ನದ್ಧ ಐನಿಕ ವೀರ ಭಂಗಿಯಿಂ
ಗೊನೆ ಹೊತ್ತು ನಿಂತಿರುವ ಈ ಕೌಂಗು ತರುಪಂಕ್ತಿಗಳ್
ಅರ್ಥ ರಕ್ಷೆಗೆ ದೀಕ್ಷೆವೆತ್ತಿವೆ, ಕವಾತಿನೊಲ್,
ಕೋವಿಹೆಗಲಾದಂತೆ ವಾಣಿಜ್ಯ ಸಾಮ್ರಾಜ್ಯದೊಂದು ದಂಡು:
ಒಂದೊಂದು ಅಡಕೆಯೂ ದಾರಿದ್ರ್ಯದೆದೆಗೆ ಗುರಿಯಿಟ್ಟ ಗುಂಡು!
ಚೀಣ ಪಾಕಿಸ್ತಾನಗಳಿಗೆ ಮಾರಾಂತ ಕಲಿ ಕೃಷಿಕ ಗಂಡು!
ಪತ್ರಿಕೆಗೆ ಹೆಸರೀಯೆ, ಹೆರರ ದುಡಿಮೆಯನುಂಡು,
ಬರಿದೆ ಭಾಷಣ ಬಿಗಿವ ರಾಜಕಾರಣಿ ಹಿಂಡು
ಯಾತ್ರೆ ಬಂದೀ ಕ್ಷೇತ್ರದರ್ಶನಕೆ ಕಲಿಯಲಿ ನಿನ್ನ ಕಂಡು!
* * *
'ಅನ್ನರತ್ನಾಕರಗೆ' ಶುಭವಿದಾಯ.

2 comments:

ಮನಸು said...

tumba chennagi vivarisiddeeri sir. thanks..

Pejathaya said...

ಕೃಷಿಕ ಗಂಡು!ಪತ್ರಿಕೆಗೆ ಹೆಸರೀಯೆ,
ಹೆರರ ದುಡಿಮೆಯನುಂಡು,
ಬರಿದೆ ಭಾಷಣ ಬಿಗಿವ ರಾಜಕಾರಣಿ ಹಿಂಡು
ಯಾತ್ರೆ ಬಂದೀ ಕ್ಷೇತ್ರದರ್ಶನಕೆ
ಕಲಿಯಲಿ ನಿನ್ನ ಕಂಡು!

ಅಡಿಕೆ ಮಂಡಿಯಲ್ಲಿ ಪರಿಚಯವಾದ
ಶುಭ್ರವಸನಧಾರಿ, ಶುಭ್ರಮನಸ್ಸಿನ ರೈತ
ಇನ್ನಿಲ್ಲವೇ?

ಕಾಲನಕರೆಗೆ ಓಗೊಡದವರಾರು?

ದೇವಂಗಿ ರತ್ನಾಕರಿಗೆ ನಮನ.

- ಪೆಜತ್ತಾಯ ಎಸ್. ಎಮ್.