ಹಂಪೆಯಲ್ಲಿಯೇ ರಚಿತವಾದ ಎರಡು ಕವಿತೆಗಳ ಬಗ್ಗೆ ನೆನಪಿನ ದೋಣಿಯಲ್ಲಿ ಬರೆಯುವಾಗ ಕವಿ ಆ ಪ್ರವಾಸದ ಪ್ರಯಾಸವನ್ನು ಹೀಗೆ ಬಿಚ್ಚಿಟ್ಟಿದ್ದಾರೆ: ಇಂದೇನೊ (೧೯೭೪) ಅದನ್ನು ಒಂದು ರಕ್ಷಿತಪ್ರದೇಶವೆಂದು ಘೋಷಿಸಿ ಪ್ರಾಚೀನ ಅವಶೇಷಗಳನ್ನೆಲ್ಲ ಅಚ್ಚುಕಟ್ಟಾಗಿ ಇಟ್ಟಿದ್ದಾರಂತೆ. ಆದರೆ ಅಂದು (೧೯೨೯) ನಾವು ಕಂಡದ್ದು ದಿಕ್ಕಿಲ್ಲದ ಅನಾಥ ಪ್ರದೇಶವೆಂಬಂತಿತ್ತು. ಹೊಲಗಳ ನಡನಡುವೆ ಪೊದೆಗಳು ಕಿಕ್ಕಿರಿದು ಸುತ್ತುವರಿದ ಜಾಗಗಳಲ್ಲಿ ಅಲ್ಲೊಂದು ಇಲ್ಲೊಂದು ಮುರಿದ ವಿಗ್ರಹ, ಹಾಳುಬಿದ್ದ ಕಟ್ಟಡ ಪ್ರೇತವತ್ ನಿಂತಿದ್ದುವು. ಜೊತೆಗೆ ಆ ಉರಿಬಿಸಿಲ ಬೇಸಗೆಯಲ್ಲಿ ಏನನ್ನೂ ಶಾಂತವಾಗಿ ಸಮಾಧಾನದಿಂದ ನೋಡಲೂ ಸಾಧ್ಯವಿರಲಿಲ್ಲ. ಒಮ್ಮೆಯಂತೂ ಬಾಯಾರಿಕೆ ಹೆಚ್ಚಿ ಏನಾದರೂ ಸರಿಯೆ ಎಂಥ ನೀರಾದರೂ ಸರಿಯೆ ಸಿಕ್ಕಿದರೆ ಸಾಕು ಕುಡಿಯುತ್ತೇವೆ ಎಂದು ದೂರದಲ್ಲಿ ಹಸುರೆದ್ದು ಕಾಣುತ್ತಿದ್ದ ಒಂದು ಕಬ್ಬಿನ ಹೊಲದತ್ತ ಓಡಿದೆವು. ನೀರೇನೊ ಇತ್ತು. ಆದರೆ ಹುಳು ಮಿಜಿಮಿಜಿ ಎನ್ನುತ್ತಿತ್ತು. ಆಚಾರ್ಲು ಅವರು ನಮ್ಮನ್ನು ತಡೆದು, 'ಸ್ವಲ್ಪ ತಡೆಯಿರಿ ಕುಡಿಯಬೇಡಿ. ನಾನು ನನ್ನ ವಸ್ತ್ರದಿಂದ ಸೋಸಿ ಕೊಡುತ್ತೇನೆ. ಹುಳುಗಳಾದರೂ ಹೊಟ್ಟೆಗೆ ಹೋಗದಿರಲಿ, ನೀರು ಕೆಟ್ಟದ್ದಾದರೂ!' ಎಂದು ಅವರ ಉತ್ತರೀಯವನ್ನೆ ಸೋಸಣಿಗೆ ಮಾಡಿ ನೀರು ಹಿಂಡಿದರು, ನಮ್ಮ ಬೊಗಸೆಗಳಿಗೆ. ಆ ಕೊಳಕು ಬಗ್ಗಡದ ನೀರನ್ನೆ ಹೊಡೆತುಂಬೆ ಕುಡಿದೆವು! ಬಟ್ಟೆಗಳನ್ನು ಒದ್ದೆ ಮಾಡಿ ತಲೆಮೇಲೆ ಹಾಕಿಕೊಂಡೆವು. ಹಾಳು ಹಂಪೆ ಎಂದು ಬೈದೆವು ಅದರ ಹೆಸರನ್ನೆ ಹಿಡಿದು!
ಹೀಗೆ ಪರಿಪಾಟಲಿನಿಂದ ಕೂಡಿದ ಪ್ರವಾಸದ ನಡುವೆಯೂ ಕವಿ ಕುವೆಂಪು ಎಚ್ಚರವಾಗಿದ್ದರು! ಒಂದೇ ದಿನ, ೯.೪.೧೯೨೯ರಂದು ಎರಡು ಕವಿತೆಗಳು ಹಂಪೆಯ ಕುರಿತಂತೆ ರಚಿತವಾಗಿವೆ. 'ಹಂಪೆಯ ಭೀಮ' ಎಂಬ ಕವಿತೆ ಮಹಾರಾಜಾ ಕಾಲೇಜಿನ ಕರ್ಣಾಟಕ ಸಂಘವು 'ಕಿರಿಯ ಕಾಣಿಕೆ'ಯ ತರುವಾಯ ಮರುವರ್ಷ ಪ್ರಕಟಿಸಿದ 'ತಳಿರು' ಎಂಬ ಕವನಸಂಗ್ರಹದಲ್ಲಿ ಅಚ್ಚಾಗಿ, ನಂತರ ಕವಿಯ 'ಕೋಗಿಲೆ ಮತ್ತು ಸೋವಿಯೆಟ್ ರಷ್ಯಾ' ಕವನ ಸಂಕಲನದಲ್ಲಿ ಸೇರಿದೆ.
ಆಗ ಹಂಪೆಯ ಪ್ರದೇಶವನ್ನು ಪ್ರವೇಶಿಸುವ ಜಾಗದಲ್ಲಿ ಕೋಟೆಯ ಹೆಬ್ಬಾಗಿಲೊಂದು ಅವಶೇಷರೂಪವಾಗಿ ಉಳಿದಿರುತ್ತದೆ. ಆ ಹೆಬ್ಬಾಗಿಲಲ್ಲಿ ಕಾವಲು ನಿಂತಿರುವ ಪ್ರತಿಮೆಯನ್ನು ಭೀಮನದು ಎಂದು ಆಗ್ಗೆ ನಂಬಲಾಗಿತ್ತು. ಆಗಿನ ಆ ಪ್ರತಿಮೆಯಿದ್ದ ಸ್ಥಿತಿಯನ್ನು ಕಂಡು, 'ಅವನ ಮುಖವೆಲ್ಲ ಮುಸಲ್ಮಾನರ ದಸ್ಯುತನಕ್ಕೆ ಸಿಕ್ಕಿ ಸಿಡುಬಿನ ಕಲೆಗಳಿಂದ ಕನಿಕರ ಹುಟ್ಟಿಸುವಷ್ಟು ವಿಕಾರವಾಗಿತ್ತು, ಸುತ್ತ ಹಳು ಹಬ್ಬಿ' ಎನ್ನುತ್ತಾರೆ ಕವಿ. ಅಂದು ಅವರು ಉಳಿದುಕೊಂಡಿದ್ದ ಜಾಗದಲ್ಲಿದ್ದ ಒಂದು ಕೃತಕ ಕೊಳದ ಮೆಟ್ಟಿಲುಗಳ ಮೇಲೆ ಕುಳಿತು 'ಹಂಪೆಯ ಭೀಮ' ಕವಿತೆಯನ್ನು ಬರೆಯುತ್ತಾರೆ. ಕೋಟೆಯ ಹೆಬ್ಬಾಗಿಲನಲ್ಲಿ ನಿಟ್ಟುಸಿರು ಬಿಡುತ್ತಿರುವಂತೆ ಕಾಣುತ್ತಿರುವ ಪ್ರತಿಮೆಯನ್ನು ಕುರಿತು ಹೀಗೆ ಹೇಳುತ್ತಾರೆ.
ಕೋಟೆ ಹೆಬ್ಬಾಗಿಲಲಿ ಬಿಸುಸುಯ್ವನಿವನಾರು?ಕಲ್ಲಾಗಿ, ಆದರೆ ನಿಟ್ಟುಸಿರಿಡುತ್ತಾ ಕಂಬನಿಗರೆಯುತ್ತಾ ಇರುವಂತೆ ಕಾಣುವ ಬಲ್ಗದೆಯ ಮೈಗಲಿಯ ಭೀಮನ ಪ್ರತಿಮೆ ಕವಿಗೆ ಹಲವು ಸಂದೇಹಗಳನ್ನು ಹುಟ್ಟುಹಾಕುತ್ತದೆ. ಭೀಮ ಅಳುವುದೆಂದರೇನು? ಆದರೆ ಆ ವಿಗ್ರಹದ ಮುಖದ ಮೇಲೆ ಬಿದ್ದಿದ್ದ ಏಟುಗಳು ಕಣ್ಣಿಗೂ ಬಿದ್ದು ಕಣ್ಣಿನ ಕೆಳಗೂ ಕಲ್ಲು ಚೆಕ್ಕೆಯೆದ್ದು ಕಂಬನಿ ಉದುರುವಂತೆ ತೋರುತ್ತಿತ್ತು. ಆ ಪ್ರತಿಮೆಯ ದೃಷ್ಟಿ ಶೂನ್ಯತೆಯನ್ನು ದೃಷ್ಟಿಸುತ್ತಿರುವಂತೆ ಕವಿಗೆ ಕಂಡಿದೆ. ಅಷ್ಟಕ್ಕೂ ವೀರರ ವೀರನಾದ ಭೀಮ ಹಾಳೂರನ್ನು ಪಾಳ್ನೆಲವನ್ನು ಕಾಯುವುದೆಂದರೇನು?
ಬಲ್ಗದೆಯ ಮೈಗಲಿಯು! ಭೀಮನೇನು?
ಕಂಬನಿಯ ಕರೆಯುತ್ತ ಮೂಕನಾಗೇಕಿಂತು
ನಿಂತಿರುವೆ, ಮಾರುತಿಯೆ? ಮಾತನಾಡು.
ಬೀರ, ಬೀರರ ಬೀರ, ಕಲ್ಲಾಗಿ ನೀನಿಂತುಭೀಮ ಕಾವಲು ಕಾಯುವುದೇ ಹೆಚ್ಚಿನ ಸೋಜಿಗಕ್ಕೆ ಕಾರಣವಾಗಿರುವಾಗ, ಭೀಮ ಕಾವಲಿಗಿದ್ದರೂ ಹಂಪೆ ಹಸಿಮಸಣವಾಗಬೇಕಾಯಿತೆ ಎಂಬುದು ಇನ್ನಷ್ಟು ಸೋಜಿಗವನ್ನುಂಟುಮಾಡುತ್ತದೆ. ಅದಕ್ಕೂ ಹೆಚ್ಚಾಗಿ ಹಂಪಿಯ ಭೂ ಪ್ರದೇಶವನ್ನು ರಾಮಾಯಣದ ಕಿಷ್ಕಿಂಧೆಯ ಜೊತೆಗೆ ಸಮೀಕರಿಸಲಾಗುತ್ತದೆ. ಕಿಷ್ಕಿಂಧೆ ಹನುಮನಿದ್ದ ಜಾಗ. ಹನುಮ ಭೀಮನ ಅಣ್ಣ! ಆ ಅಣ್ಣನೂ ಈ ತಮ್ಮನ ಸಹಾಯಕ್ಕೆ ಬರಲಿಲ್ಲವೇ? ಎಂಬುದು ಕವಿಯ ಪ್ರಶ್ನೆ. ಕವಿಯ ಮನೋಭಿತ್ತಿಯಲ್ಲಿ, ಪಂಪ-ರನ್ನರ ಮಹಾಕಾವ್ಯಗಳಲ್ಲಿ, ಮಹಾಭಾರತದ ಯುದ್ಧರಂಗದಲ್ಲಿ ರುದ್ರಭಯಂಕರನಾಗಿ, ವೀರಾವೇಶದಿಂದ ಕಾದಾಡಿದ, ಕಾದಾಡಿ ಗೆಲ್ದು, ದುಶ್ಯಾಸನನ ರಕ್ತವನ್ನು ಕುಡಿದ ದೈತ್ಯಭಯಂಕರನಾಗಿ ಚಿತ್ರಿತವಾಗಿದ್ದ ಭೀಮ, ಇಲ್ಲಿ ಈ ಹಾಳು ಹಂಪೆಯಲ್ಲಿ ಕಣ್ಣಿರು ಸುರಿಸುತ್ತ ನಿಲ್ಲಬೇಕಾಯಿತೆ ಎಂದು ವಿಸ್ಮಿತರಾಗುತ್ತಾರೆ.
ಹಾಳೂರ ಬಾಗಿಲನು ಕಾಯುತಿಹೆಯೇನು?
ಧರಣಿಪರು, ಮಂತ್ರಿಗಳು, ಸೈನಿಕರು, ಕಬ್ಬಿಗರು
ಬಿಟ್ಟಳಿದ ಪಾಳ್ನೆಲವ ಕಾಯುತಿಹೆಯೇನು?
ಸೊನ್ನೆ ದಿಟ್ಟಿಯನಟ್ಟಿ ಶೂನ್ಯತರ ಶೂನ್ಯವನು
ಮನದಿ ಮರುಕವನಾಂತು ನೆನೆವೆಯೇನು?
ನೀನು ಬಾಗಿಲ ಕಾಯುತಿರ್ದೊಡಂ ಹಂಪೆಯಿದು
ಮುಸಲರಿಂ ಹಸಿಮಸಣವಾದುದೇನು?
ನಿನ್ನಣ್ಣ ಹನುಮಂತನಿಲ್ಲಿರ್ದೊಡಂ ಬಂದು
ನಿನಗೆ ನೆರವಾಗಿದನು ಪೊರೆಯಲಿಲ್ಲೇನು?
ರನ್ನಪಂಪರ ಮಹಾಕಾವ್ಯರಸರಂಗದಲಿಪ್ರತಿಮೆಯ ಕೈಯಲ್ಲಿರುವ ಬಲ್ಗದೆ ಈಗ ಕಲ್ಲಿನ ಗದೆ ಮಾತ್ರ; ನಿಷ್ಪಂದವಾಗಿದೆ. ಆ ಗದೆ ಚಲಿಸಬೇಕು. ಅದರ ಚಲನೆಯಿಂದ ಹೆಂಬೇಡಿಗಳಾದ ನಮ್ಮ ಜಡತೆ ತೊಲಗಬೇಕು. ಇಲ್ಲಿ ಬರುವ ಪ್ರತಿಯೊಬ್ಬ ಯಾತ್ರಿಕನ ಎದೆಯಲ್ಲಿ ಕೆಚ್ಚನ್ನೂ ನೆಚ್ಚನ್ನೂ ಈ ಪ್ರತಿಮೆ ದಯಪಾಲಿಸುತ್ತದೆ ಎಂದು ಕವಿ ನಂಬುತ್ತಾರೆ.
ಭಾರತದ ಕೊಳುಗುಳದಿ ನಿನ್ನ ನೋಡಿಹೆನು.
ಕಂಬನಿಯ ಕರೆವ ಭೀಮನನಲ್ಲಿ ಕಂಡಿಲ್ಲ;
ಜಯಮತ್ತ ರುದ್ರ ಮಾರುತಿಯ ಕಂಡೆ!
ನಮಿಸುವ ಹಿಮಾಲಯವ ಕಂಡು ವಿಸ್ಮಿತನಾದೆ,
ಹಂಪೆಯಲಿ, ಭೀಮ, ನೀನಳುವುದನು ಕಂಡು!
ತಿರುಗವೀ ಗದೆಯೇಕೆ ನಿಸ್ಪಂದವಾಗಿಹುದು?
ಮೈಮರೆತು ಗೋಳಿಡುತ ನೀನಾರ ನೆನೆವೆ?
ಇಲ್ಲಿಗೈತಹ ಯಾತ್ರಿಕರ ಎದೆಯ ಮೂಷೆಯಲಿ
ಹಾಳಾದ ಐಸಿರಿಯ ಕಿಚ್ಚ ಮರುಕೊಳಿಸು!
ಅಣಕಿಸೆಮ್ಮನು, ವೀರ; ಹೆಂಬೇಡಿಗಳು ನಾವು!
ನಿನ್ನ ಗದೆಯಾಘಾತದಿಂದೆಚ್ಚರುವೆವು!
ಹೇ ವೀರಮೂರ್ತಿಯೇ, ಹಂಪೆಯೀ ಮಸಣದಲಿ
ಭೈರವಾಶ್ರುವ ಚೆಲ್ಲಿ ಮೌನದಲಿ ನಿಲ್ಲು!
ಯಾತ್ರಿಕರ ಹೃದಯದಲಿ ಕೆಚ್ಚೂರಿ, ನೆಚ್ಚೂರಿ,
ಹೆಂಬೇಡಿಗಳನೆಲ್ಲ ನಿನ್ನೆಡೆಗೆ ಗೆಲ್ಲು!
ಎರಡನೆಯ ಕವಿತೆ 'ಹಂಪೆಯಲ್ಲಿ' ಎಂಬುದು ಮೊದಲು 'ಕದರಡಕೆ' ಸಂಕಲನದಲ್ಲಿದ್ದು, ನಂತರ 'ಪ್ರೇತ ಕ್ಯೂ' ಸಂಕಲನಕ್ಕೆ ಮೊದಲ ಕವಿತೆಯಾಗಿ ವರ್ಗಾಯಿಸಲ್ಪಟ್ಟಿದೆ. ಕವಿತೆ, ಹಂಪೆಯನ್ನು ನೋಡಲು ಬರುವ ಯಾತ್ರಿಕನನ್ನು ಉದ್ದೇಶಿಸಿ, ಹಂಪೆಯ ಮಹತ್ವವನ್ನು ಕುರಿತು ಮಾತನಾಡುತ್ತದೆ. ಹಂಪೆಯ ಮಹಿಮೆ ಗೊತ್ತಿಲ್ಲದಿದ್ದರೂ ಹುಳು ಹಿಡಿದ ಅದರ ಹೆಣವನ್ನಾದರೂ ಯಾತ್ರಿಕರು ಬಂದು ನೋಡಬೇಕು ಎಂದು ಆಶಿಸುತ್ತಾರೆ.
ಬಾ ಇಲ್ಲಿ, ಬಾ ಇಲ್ಲಿ; ಕನ್ನಡಿಗ, ಬಾ ಇಲ್ಲಿ:ಸ್ಮಶಾಣದಲ್ಲಿ ಸಾಧನೆ ಮಾಡುವ ಸಾಧಕರಿಗೆ ಹಂಪೆ ಕಲಿಯುಗದ ಹಸಿಯ ಹಿರಿಮಸಣ ಎನ್ನುತ್ತಾರೆ. ಮಸಣದಲ್ಲಿ ಶವಗಳನ್ನು ದಹಿಸುವಾಗ ಶವದ ತಲೆಬುರುಡೆ ಸಿಡಿಯುತ್ತದೆ. ಆದರೆ ಕನ್ನಡಾಂಬೆಯ ಮುಡಿಯು ಸಿಡಿದು ಒಡೆದುದು ಈ ಹಂಪೆಯಲ್ಲೇ ಎನ್ನುತ್ತಾರೆ! ಕಂಬನಿಯಿರುವ ಕಬ್ಬಿಗ ಕಣ್ಣೀರು ಸುರಿಸಬೇಕಾಗಿರುವುದು ಇಲ್ಲಿಯೇ ಎಂದು ಭಾವಿಸುತ್ತಾರೆ
ಮೈಮೆಯನು ಕಂಡರಿಯದಿಹ ನೀನು, ನೋಡದರ
ಹುಳು ಹಿಡಿದ ಹೆಣವನಾದರು, ನೋಡು ಬಾ ಇಲ್ಲಿ!
ಮಸಣದಲಿ ಜಾನಿಪೊಡೆ, ಸಾಧಕನೆ, ಬಾ ಇಲ್ಲಿ:ತೀರ್ಥಯಾತ್ರೆಗೆಂದು ಕಾಶಿಗೆ ಹೋಗುವ ಯಾತ್ರಿಕರು ಅಲ್ಲಿಗೆ ಹೋಗಬೇಕಾಗಿಲ್ಲ; ಅವರು ಬರಬೇಕಾದ್ದು ಇಲ್ಲಿಗೆ. ಏಕೆಂದರೆ ಇದು ದಕ್ಷಿಣದ ಕಾಶಿ. ಇಲ್ಲಿಯ ಮಣ್ಣು ಮರಣದಿಂದ ಪವಿತ್ರವಾಗಿದೆ. ಸಾವೂ ಪವಿತ್ರವಾಗಿರುವುದು ಇಲ್ಲಿ ಮಾತ್ರ. ಇಲ್ಲಿ ವಿರೂಪಾಕ್ಷನಿದ್ದಾನೆ; ದುರಂತವೆಂದರೆ, ಆತನೇ ಭಕ್ತನೆದುರು ಕಣ್ಣೀರು ಸುರಿಸುತ್ತಿದ್ದಾನೆ!
ಹಂಪೆಯಿದು ಕಲಿಯುಗದ ಹಸಿಯ ಹಿರಿಮಸಣ!
ಕನ್ನಡಾಂಬೆಯ ಮುಡಿಯು ಸಿಡಿದು ಒಡೆದುದು ಇಲ್ಲೆ:
ನಿನಗೆ ಕಂಬನಿ ಇದೆಯೆ? ಕಬ್ಬಿಗನೆ ಸುರಿಸು ಬಾ.
ಕಾಶಿಗೇತಕೆ ಹೋಗುತಿಹೆ ಯಾತ್ರಿಕನೆ ನೀನು?ಈ ಕವಿತೆಗಳೊಂದಿಗೆ ಹಂಪಿಯ ಪ್ರವಾಸವನ್ನು ಕವಿ ಕೈವಾರಿಸುವುದು ಹೀಗೆ: ಒಟ್ಟಿನಲ್ಲಿ ನಾವು ಕಂಡದ್ದು ಹುಳುಹಿಡಿದ ಹೆಣದಂತಿದ್ದರೂ ವಿರೂಪಾಕ್ಷ ದೇವಸ್ಥಾನ, ಮತ್ತು ಮತಂಗ ಪರ್ವತದ ಪಾದವನ್ನು ತೊಳೆಯುತ್ತಾ ಹರಿಯುತ್ತಿರುವ ತುಂಗಭದ್ರೆಯ ಮಳಲದಿಣ್ಣೆಯ ಮೇಲೆ ಕುಳಿತು ಕಂಡ ದೃಶ್ಯದಂತಹುಗಳು ನಮ್ಮ ಪ್ರವಾಸದ ಹರ್ಷಬಿಂದುಗಳಾಗಿದ್ದುವು. ಸಹ್ಯಾದ್ರಿಯ ರುದ್ರ ರಮಣೀಯ ಪ್ರಕೃತಿ ಸೌಂದರ್ಯದ ಮಧ್ಯೆ ಹುಟ್ಟಿ ಬೆಳೆದು ಅದನ್ನು ಹೀರಿಕೊಂಡ ಕವಿಯ ಚೇತನಕ್ಕೆ ಅಲ್ಲಿಯ ನಿಸರ್ಗ ಅಷ್ಟೇನೂ ಆಕರ್ಷಣೀಯವಾಗಿರಲಿಲ್ಲ. ಹಿಂದೆ ಇದ್ದುದರ ನೆನಪಿನಿಂದಲೆ ಅದು ನಮ್ಮ ಹೃದಯಕ್ಕೂ ಮನಕ್ಕೂ ತುಷ್ಟಿಯೊದಗಿಸಬೇಕಾಗಿತ್ತು.
ಹಂಪೆ ತೆಂಕಣ ಕಾಶಿ: ಬೀರದಿಂ ಪುಡಿಪುಡಿಯೂ
ಮರಣದಿ ಪವಿತ್ರತರವಾದ ಕಾಶಿಯಿದು ಕೇಳ್.
ಯೋಗಿ ವಿದ್ಯಾರಣ್ಯನಡಿಯ ಪುಡಿ ಇಹುದಿಲ್ಲಿ;
ಮೃತ್ಯು ಪಾವನಗೈದ ಶುಭತರಕ್ಷೇತ್ರವಿದು!
ಪಾಳಾದ ಕನ್ನಡಾರಾಮವಿದು! ಕನ್ನಡಿಗ
ಯಾತ್ರಿಕನೆ, ಬಾ ಇಲ್ಲಿ! ಬೇಡುವೆನು, ಬಾ ಇಲ್ಲಿ!
ಹಂಪೆಯ ವಿರೂಪಾಕ್ಷ ಭಕ್ತರನೆದುರು ನೋಡಿ
ಕಂಬನಿಯ ಸೂಸುತಿಹನಿಲ್ಲಿ; ಬಾ ಇಲ್ಲಿ!
ಏಕಾಂಗಿಯಾಗಿಹನು! ಅಯ್ಯೊ ಬೇಸತ್ತಿಹನು
ಭಗವಂತ! ಓಡಿ ಬಂದಪ್ಪುವನು ಭಕ್ತನನು!
ಬಾ, ಇಲ್ಲಿ ಬಾ! ಬಾ, ಇಲ್ಲಿ ಬಾ!
ಹಾಗಾದರೆ, ಯಾತ್ರೆಯ ದೃಷ್ಟಿಯಿಂದ ಹಂಪೆಯ ಪ್ರವಾಸ ಕವಿಗೆ ನಿರುಪಯೋಗವೇ? ಕಾಣುವ ಕಣ್ಣಿರುವ ಕವಿಗೆ ಯಾವುದೂ ವ್ಯರ್ಥವಲ್ಲ; ನೀರೆಲ್ಲವೂ ತೀರ್ಥ! ಸುಗ್ರೀವ-ಆಂಜನೇಯರ ಆತಿಥ್ಯದಲ್ಲಿ ಕಿಷ್ಕಿಂದೆ(ಹಂಪೆ)ಯಲ್ಲಿ ಸೀತಾನ್ವೇಷಣೆಗೆ ಸಿದ್ಧರಾಗುತ್ತಿದ್ದ ಸಂದರ್ಭದಲ್ಲಿ ಒಂದು ಸಂಜೆಯ ಚಿತ್ರಣ ಹೀಗೆ ಬಂದಿದೆ.
ಹಂಪೆಯ ಸರೋವರಂ ಪೆಂಪಿನೋಕುಳಿಯಾಗೆ'ಶ್ರೀ ರಾಮಾಯಣದರ್ಶನಂ' ಮಹಾಕಾವ್ಯದಲ್ಲಿ ಹಾಳುಹಂಪೆಯ ಉಪಮೆಯನ್ನು ಸಾಂದರ್ಭಿಕವಾಗಿ ಪ್ರಯೋಗಿಸುವುದನ್ನು ನೋಡಿದಾಗ, ಹಾಳುಹಂಪೆಯ ಚಿತ್ರ ಕವಿಯ ಮನೋಭಿತ್ತಿಯಿಂದ ಎಂದೂ ದೂರವಾಗಲೇ ಇಲ್ಲವೇನೋ ಅನ್ನಿಸುತ್ತದೆ. ರಾಮ ಕಾಡಿಗೆ ಹೋದ ಮೇಲೆ, ದಶರಥನ ಮರಣವಾದ ಮೇಲೆ, ಕೇಕಯಪುರದಲ್ಲಿ ಅಜ್ಜನ ಮನೆಯಲ್ಲಿದ್ದ ಭರತ-ಶತ್ರುಘ್ನರು ಅಯೋಧ್ಯೆಗೆ ಬರುತ್ತಾರೆ. ಪುರಪ್ರವೇಶಕ್ಕೂ ಮುನ್ನ ಪ್ರತಿಮಾಗೃಹಕ್ಕೆ ಹೋಗಿ ಪಿತೃದೇವತೆಗಳಿಗೆ ನಮಸ್ಕರಿಸುವಾಗ ಸಾಲಿನ ಕಡೆಯಲ್ಲಿದ್ದ ದಶರಥನ ಪ್ರತಿಮೆ, ಅವರಿಗೆ ದಶರಥನ ಮರಣವನ್ನು ಖಚಿತಪಡಿಸುತ್ತದೆ. ಅಲ್ಲಿಂದ ಅಯೋಧ್ಯಾನಗರಿಯನ್ನು ಪ್ರವೇಶ ಮಾಡಿದ ಭರತ-ಶತ್ರುಘ್ನರ ಸ್ಥಿತಿಯನ್ನು ಹಾಳುಹಂಪೆಯನ್ನು ಹೊಕ್ಕ ಕನ್ನಡಿಗರ ಸ್ಥಿತಿಗೆ ಕವಿ ಹೋಲಿಸುತ್ತಾರೆ. ಆ ಸಾಲುಗಳು ಹೀಗಿವೆ:
ಕೆಂಪೆರಚಿದುದು ಸಂಜೆ. ನಿಂದುದಪ್ರತಿಹತಂ
ತೀರರುಹ ದೈತ್ಯಗಾತ್ರದ ತಾಳತರುಪಂಕ್ತಿ.
ಬೈಗುವಿಸಿಲಾನ್ತದರ ನೆತ್ತಿಯ ನೆಳಲ ನೀಳ್ಪು
ಜಂಗಮತೆವೆತ್ತಿರ್ದುದುದಯಗಿರಿ ಯಾತ್ರಿ: ಹಾ,
ಭಂಗವಾದುದೆ ಯಾತ್ರೆ?
................ ಗುಡಿಸದಿವೆ ಬೀದಿಗಳು.ಯಾರೋ ಯಾವಾಗಲೋ ರಚಿಸಿದ ಯಾವುದೋ ಕಲಾಕೃತಿ ಕಾಲ-ದೇಶಗಳನ್ನು ಮೀರಿ ಸಹೃದಯನ ಸ್ವತ್ತಾಗುವುದೇ ಹೀಗೆ!
ಮುಚ್ಚದಿವೆ ಮನೆಮನೆಯ ಬಾಗಿಲ್ಗಳುಂ, ಪೆಣಂ
ಬಾಯ್ವಿಟ್ಟವೋಲಂತೆ, ಬದುಕಿರ್ಪ ಚಿಹ್ನೆಯನೆ
ನೀಗಿ. ರಂಗೋಲಿಗಳ ಕುರುಹಿಲ್ಲ; ಪೊಸತಳಿರ್
ತೋರಣದ ಸುಳಿವಿಲ್ಲ. ಕೇಳಿಸದು ಗುಡಿಗಳಲಿ
ಗಂಟೆದನಿ. ಪರಿಮಳದ್ರವ್ಯಗಳ ಕಂಪಿಲ್ಲ. ಮೇಣ್
ಮಂದಿಯ ಚಲನೆಯಿಲ್ಲ: ಹಾಳು ಹಂಪೆಯ ಹೊಕ್ಕ
ಕನ್ನಡಿಗರಂತಾದರೈ ಕುದಿವೆದೆಯ ಭರತನುಂ
ಶತ್ರುಘ್ನನುಂ!...........
6 comments:
ಇಲ್ಲಿ ವಿರೂಪಾಕ್ಷನಿದ್ದಾನೆ; ದುರಂತವೆಂದರೆ, ಆತನೇ ಭಕ್ತನೆದುರು ಕಣ್ಣೀರು ಸುರಿಸುತ್ತಿದ್ದಾನೆ! ............ - ಹಾಳು ಹಂಪೆಯ ದುಃಸ್ಥಿತಿಗೆ ಇದಕ್ಕಿಂತ ಹೆಚ್ಚಿನ ವರ್ಣನೆಯುಂಟೇ? ಶಬ್ದ ಗಾರುಡಿಗ ಕುವೆಂಪು ಅವರ ಕವನಗಳನ್ನೋದುವುದೇ ಕನ್ನಡಿಗರ ಸೌಭಾಗ್ಯ. ಅಲ್ಲವೇ?
right
right
right
right
ಮನಸ್ಸು ಆರ್ದ್ರವಾಯಿತು.ರಸೃಷಿಗೆನ್ನ ನಮನ
Post a Comment