Monday, January 09, 2012

ಧ್ಯಾನಸ್ಥಯೋಗಿಯಾಗಿದೆ ಮಹಾ ಸಹ್ಯಗಿರಿ!

"ನಾವು ನಿಂತ ಸ್ಥಳ ಎತ್ತರವಾಗಿತ್ತು. ಸುಮಾರು ಮೂವತ್ತು ಮೈಲಿಗಳ ದೃಶ್ಯ ನಮ್ಮೆದುರಿಗಿತ್ತು. ದಿಗಂತವಿಶ್ರಾಂತವಾದ ಸಹ್ಯಾದ್ರಿ ಪರ್ವತಶ್ರೇಣಿಗಳು ತರಂಗತರಂಗಗಳಾಗಿ ಸ್ಪರ್ಧೆಯಿಂದ ಹಬ್ಬಿದ್ದುವು. ದೂರ ಸರಿದಂತೆಲ್ಲ ಅಸ್ಫುಟವಾಗಿ ತೋರುತ್ತಿದ್ದುವು. ಕಣಿವೆಗಳಲ್ಲಿ ಇಬ್ಬನಿಯ ಬಲ್ಗಡಲು ತುಂಬಿತ್ತು. ವೀಚಿವಿಕ್ಷೋಭಿತ ಶ್ವೇತಫೇನಾವೃತ ಮಹಾವಾರಿಧಿಯಂತೆ ಪಸರಿಸಿದ್ದ ತುಷಾರ ಸಮುದ್ರದಲ್ಲಿ ಶ್ಯಾಮಲಗಿರಿಶೃಂಗಳು ದ್ವೀಪಗಳಂತೆ ತಲೆಯೆತ್ತಿಕೊಂಡಿದ್ದುವು. ಕಂದರ ಪ್ರಾಂತಗಳಲ್ಲಿದ್ದ ಗದ್ದೆ ತೋಟ ಹಳ್ಳಿ ಕಾಡು ಎಲ್ಲವೂ ಹೆಸರಿಲ್ಲದಂತೆ ಅಳಿಸಿಹೋಗಿದ್ದುವು. ದೃಷ್ಟಿಸೀಮೆಯನ್ನೆಲ್ಲ ಆವರಿಸಿದ್ದ ತುಷಾರಜಲನಿಧಿಯಲ್ಲಿ ಹಡಗುಗಳಲ್ಲಿ ಕುಳಿತು ಸಂಚರಿಸಬಹುದೆಂಬಂತಿತ್ತು! ನಾವು ಮೂವರೂ ಅವಾಕ್ಕಾಗಿ ನಿಂತು ನೋಡಿದೆವು. ಇಬ್ಬನಿಯ ಕಡಲಿನಿಂದ ತಲೆಯೆತ್ತಿ ನಿಂತಿದ್ದ ಗಿರಿಶೃಂಗಗಳು ಮುಂಬೆಳಕಿನ ಹೊಂಬಣ್ಣವನ್ನು ಹೊದೆದಿದ್ದುವು. ಬಾಲಸೂರ್ಯನ ಸ್ನಿಗ್ಧಕೋಮಲ ಸುವರ್ಣಜ್ಯೋತಿಯಿಂದ ವೃಕ್ಷಾರಜಿಗಳ ಶ್ಯಾಮಲಪರ್ಣವಿತಾನಗಳಲ್ಲಿ ಖಚಿತವಾಗಿದ್ದ ಸಹಸ್ರ ಸಹಸ್ರ ಹಿಮಮಣಿಗಳು ಅನರ್ಘ್ಯರತ್ನಸಮೂಹಗಳಂತೆ ವಿರಾಜಿಸುತ್ತಿದ್ದುವು. ಬೆಳ್ನೊರೆಯಂತೆ ಹಬ್ಬಿದ ಇಬ್ಬನಿಯ ಕಡಲಿನಲ್ಲಿ ಮುಳುಗಿಹೋಗಿದ್ದ ಕಣಿವೆಯ ಕಾಡುಗಳಿಂದ ಕೇಳಿಬರುತ್ತಿದ್ದ ವಿವಿಧವಿಹಂಗಮಗಳ ಮಧುರವಾಣಿ ಅದೃಶ್ಯರಾಗಿ ಉಲಿಯುವ ಗಂಧರ್ವಕಿನ್ನರರ ಗಾಯನದಂತೆ ಸುಮನೋಹರವಾಗಿತ್ತು. ನಾವು ಮೂವರೂ ಅವಾಕ್ಕಾಗಿ ನಿಂತು ನೋಡಿದೆವು! ನೋಡಿದೆವು, ನೋಡಿದೆವು, ಸುಮ್ಮನೆ ಭಾವಾವಿಷ್ಟರಾಗಿ!"

ಸ್ನೇಹಿತರೊಂದಿಗೆ ಇರುಳು ಬೇಟೆಗೆ ಹೋಗಿದ್ದ ಯುವಕವಿ ಪುಟ್ಟಪ್ಪ, ತಾನು ಕುಳಿತಿದ್ದ ಜಾಗ, ಸಮಯ ಎಲ್ಲವನ್ನೂ ಮರೆತು ಪ್ರಕೃತಿ ಉಪಾಸಕನಾಗಿಬಿಡುತ್ತಾನೆ. ’ಜೊನ್ನದ ಬಣ್ಣದಿ ತುಂಬಿದ ಬಿಂಬದ ಹೊನ್ನಿನ ಸೊನ್ನೆಯು ಮೂಡಿದುದು’ ಎಂಬಂತೆ ಕವಿಗೆ ಕಂಡ ಚಂದ್ರೋದಯ ’ಬೇಟೆಗಾರನಿಗೆ ಬೇಟೆಯಾಗದಿದ್ದರೂ ಕಬ್ಬಿಗನಿಗೆ ಬೇಟೆಯಾಯಿತು’ ಅನ್ನಿಸಿಬಿಡುತ್ತದೆ. ಇಡೀ ರಾತ್ರಿಯನ್ನು ಹೀಗೇ ಕಳೆದು, ನಸುಕಿನಲ್ಲಿಯೇ ಬರಿಗೈಯಲ್ಲಿ ಸ್ನೇಹಿತರೊಂದಿಗೆ ಮನೆಗೆ ಹಿಂತಿರುಗುವಾಗ ’ಅರುಣೋದಯದ ಹೇಮಜ್ಯೋತಿ ಪೂರ್ವದಿಗ್ಭಾಗದಲ್ಲಿ ಪ್ರಬಲಿಸುತ್ತಿತ್ತು.’ ಬರುವ ದಾರಿಯಲ್ಲಿ ಬಂಡೆಗಳಿಂದ ಬಯಲಾದ ಪ್ರದೇಶದಲ್ಲಿ ನಿಂತು ನೋಡಿದಾಗ ಕಂಡ ದೃಶ್ಯವೇ ಮೇಲೆ ಕವಿಯ ಮಾತುಗಳಲ್ಲಿ ಮೂಡಿದೆ. ಅಂದು ಆ ದೃಶ್ಯವನ್ನು ಕವಿಗೆ ತೋರಿಸಿದ ಆ ಜಾಗವೇ ’ಕವಿಶೈಲ’. ಕುವೆಂಪು ಸಾಹಿತ್ಯದ ಪರಿಚಯವಿದ್ದವರೆಲ್ಲರಿಗೂ ’ಕವಿಶೈಲ’ ಗೊತ್ತಿರುತ್ತದೆ.

ಕುಪ್ಪಳಿ ಕವಿಮನೆಯ ಹಿಂಬದಿಗೆ ದಿಗಂತಮುಖಿಯಾಗಿರುವ ಪರ್ವತವೇ ಕವಿಶೈಲ. ಕಲೆಯ ಕಣ್ಣಿಲ್ಲದವರಿಗೆ ಒಂದು ಕಲ್ಲುಕಾಡು; ಕಲಾವಂತನಿಗೆ ಸಗ್ಗವೀಡು ಆಗಿರುವ ಕವಿಶೈಲದ ನಿಜಮನಾಮ ಆಗ್ಗೆ ’ದಿಬ್ಬಣಕಲ್ಲು’. ನಂತರ, ಅದರ ಕಾರಣದಿಂದಲೇ ಪುಟ್ಟಪ್ಪ ಕುವೆಂಪು ಆದ ಮೇಲೆ ಕವಿಶೈಲವೆಂದು ಹೆಸರು ಪಡೆದ ಗಿರಿ. ಅಲ್ಲಿಯ ಒಂದೊಂದು ವಸ್ತುಗಳು, ದೃಶ್ಯಗಳು, ಭೂತದಸಿಲೇಟು, ಬೂರುಗದ ಮರ, ನಿಲುವುಗಲ್ಲು, ಸೂರ್ಯೋದಯ, ಸೂರ್ಯಾಸ್ತ ಎಲ್ಲವೂ ಕುವೆಂಪು ಸಾಹಿತ್ಯದಲ್ಲಿ ಸ್ಥಾಯಿಯಾಗಿ, ಓದುಗರಲ್ಲಿ ಸಂಚಾರಿಯಾಗಿಬಿಟ್ಟಿವೆ.

ಬೇಟೆಗಾರರಾಗಿ ಬನಕೆ ಹೋದವರು ಮರಳಿ ಮನೆಗೆ ಬಂದುದು ಕಬ್ಬಿಗರಾಗಿ! ಕವಿಶೈಲದ ಬಗ್ಗೆ ಕವಿ ಕೇವಲ ಹನ್ನೆರಡು ದಿನಗಳಲ್ಲಿ ಆರು ಸಾನೆಟ್ಟುಗಳನ್ನು ಬರೆದಿದ್ದಾರೆ! ಮೊದಲ ಒಂದನ್ನು ಬಿಟ್ಟರೆ ಉಳಿದ ಐದು ಸಾನೆಟ್ಟುಗಳು ಐದೇ ದಿನದಲ್ಲಿ ದಿನಕ್ಕೊಂದರಂತೆ ರಚನೆಯಾಗಿವೆ! ಮಲೆನಾಡಿನ ಚಿತ್ರಗಳು ಪುಸ್ತಕದಲ್ಲಿ ಮೇಲೆ ವರ್ಣಿಸಿರುವ ಕವಿಶೈಲದ ವರ್ಣನೆಗೆ ಸಂವಾದಿಯಾಗಿ ೧೬.೪.೧೯೩೪ರಲ್ಲಿ ಮೊದಲನೆಯ ಸಾನೆಟ್ ರಚಿತವಾಗಿದೆ. ಈ ಸಾನೆಟ್ ರಚನೆಯಾಗುವುದಕ್ಕೆ ಎರಡು ದಿನಗಳ ಮುಂಚಿನ ದಿನಚರಿಯಲ್ಲಿ ಹೀಗೆ ಬರೆದಿದ್ದಾರೆ: ನಾನು ಚಂದ್ರು (ದೇವಂಗಿ ಚಂದ್ರಶೇಖರ) ಕವಿಶೈಲಕ್ಕೆ ಏರಿದೆವು. ಹಿಂದಿನ ದಿನದ ಮಳೆಯಿಂದ ಕಾಡು ಮಲೆ ನೆಲಗಳು ಮಿಂದು ಮಡಿಯಾಗಿದ್ದುವು. ಇಂದು ಬೆಳಿಗ್ಗೆ ದೊರಕಿದ ದೃಶ್ಯವು ನಮ್ಮ ಪುಣ್ಯಕ್ಕೆ ಎಣೆಯಿಲ್ಲದಂಥದ್ದು. ಕಣಿವೆಗಳನ್ನು ತುಂಬಿದ್ದ ಮಂಜಿನ ಪರದೆಯ ಮೇಲೇಳತೊಡಗಿ, ಸಲಸಲಕ್ಕೂ ಎದೆ ಹಾರಿಸುವಂತಹ ದೃಶ್ಯಗಳು ಗೋಚರಿಸಿದುವು. ಅದನ್ನು ಎಂದಾದರೂ ಕಲಾಸುಂದರಿಯ ಕೃಪೆಯಿಂದ ಸಾಹಿತ್ಯರೀತ್ಯಾ ಹೊರಹೊಮ್ಮಿಸುತ್ತೇನೆ. - ಆ ದಿನ ಕವಿಗೆ ದೊರಕಿದ ದರ್ಶನ ಎರಡು ದಿನಗಳ ನಂತರ ಸಾನೆಟ್ ರೂಪತಾಳಿದ್ದು ಕೆಳಕಂಡಂತೆ.

ನೋಡಯ್ಯ, ಪ್ರಿಯಬಂಧು, ಚೈತ್ರರವಿಯುದಯದಲಿ
ಸಹ್ಯಾದ್ರಿ ಕಾನನಗಳುತ್ತಮಾಂಗದಿ ಸೃಷ್ಟಿ
ದೃಶ್ಯ ವೈಕುಂಠವನೆ ನೆಯ್ದಿದೆ! ಕಲಾದೃಷ್ಟಿ
ದರ್ಶನವನುದ್ದೀಪನಂಗೈಯೆ ಹೃದಯದಲಿ,
ಪ್ರಾಣಪಕ್ಷಿ ಸುವರ್ಣಪರ್ಣಂಗಳನು ಬಿಚ್ಚಿ
ಹಾರಿಹುದಸೀಮತೆಗೆ!..............
ಕವಿ ತನಗಾದ ಅನುಭವವನ್ನು ಸಹೃದಯನಿಗೆ ಹೇಳುತ್ತಿರುವಂತೆ ಆರಂಭವಾಗುವ ಸಾನೆಟ್ಟು ಮುಂದುವರೆದು ತಾನು ಕಂಡಿದ್ದೇನು ಎಂಬುದನ್ನು ಕಣ್ಣಿಗೆ ಕಟ್ಟಿಸಿಬಿಡುತ್ತದೆ.
.................. ಕಣಿವೆ ಕಣಿವೆಗಳಲ್ಲಿ
ಮಂಜಿನ ಮಹಾಮಾಯೆ ನೊರೆಯ ರಾಸಿಯ ಚೆಲ್ಲಿ
ವಾರಿಧಿಯ ವಿರಚಿಸಿದೆ, ಕಟುನಿಮ್ನತೆಯ ಮುಚ್ಚಿ.
ನೋಡು, ಆ ಶೀಖರವೆದ್ದಿದೆ ದ್ವೀಪವೆಂಬಂತೆ
ಕ್ಷೀರಫೇನಧಿ ಮಧ್ಯೆ ಶ್ಯಾಮಲ ಶಿರವನೆತ್ತಿ;
ಸ್ವರ್ಗಪ್ರದೇಶದೊಂದಂಶವೆಂಬಂದದಿಂ!
ವಾರಿಧಿಯ ವಿರಚಿಸಿರುವ ಮಂಜಿನ ಮಾಯೆ ನೊರೆ ಹಾಲಿನ ನೊರೆಯಂತೆ ಶೋಭಿಸಿದೆ. ಹಾಲ್ನೊರೆಯ ನಡುವೆ ತಲೆಯೆತ್ತಿರುವ ಹಸಿರು ಗಿರಿ ಕಡಲಿನ ನಡುವಿನ ದ್ವೀಪದಂತಾಗಿಬಿಟ್ಟಿದೆ. ಗದ್ಯದಲ್ಲಿ ಬಂದಿದ್ದ ಬಲ್ಗಡಲು, ಶ್ವೇತಫೇನಾವೃತ ಎಂಬ ಕಲ್ಪನೆಗಳು ಇಲ್ಲಿ ಬೇರೊಂದು ರೂಪದಲ್ಲಿ - ಕಟುನಿಮ್ನತೆ, ಕ್ಷೀರಫೇನ - ಬಂದಿವೆ.
ಪ್ರಿಯಬಂಧು, ಇದು ನಮ್ಮ ದೈನಂದಿನಿಳೆಯಂತೆ
ಕಾಣದೈ: ಸೌಂದರ್ಯ ದೇವತೆಗಳಿದೊ ಸುತ್ತಿ
ಬಿಗಿವರೆಮ್ಮನು ಬಾಹುಬಂಧನಾನಂದದಿಂ!
ಮೇಲಿನ ಸಾನೆಟ್ಟು ರಚನೆಯಾದ ಒಂದು ವಾರಕ್ಕೆ ಸರಿಯಾಗಿ (೨೩.೪.೧೯೩೪) ಕವಿಗೆ ಮತ್ತೆ ಕವಿಶೈಲ ಕಾಡತೊಡುಗುತ್ತದೆ. ಕವಿಗೆ ಆನಂದವನ್ನುಂಟುಮಾಡುವ ಕವಿತಾ ಮನೋಹರಿಯ ಪ್ರಥಮ ಪ್ರಣಯಿಯಾಗಿ ಕವಿಶೈಲ ಕವಿಗೆ ಕಾಣುತ್ತದೆ.

ಓ ನನ್ನ ಪ್ರಿಯತಮ ಶಿಖರ ಸುಂದರನೆ, ನನ್ನ
ಜೀವನಾನಂದ ನಿಧಿ ಕವಿತಾ ಮನೋಹರಿಯ
ಪ್ರಥಮೋತ್ತಮಪ್ರಣಯಿ, ವನದೇವಿಯೈಸಿರಿಯ
ಪೀಠ ಚೂಡಾಮಣಿಯೆ, ಓ ಕವಿಶೈಲ, ನಿನ್ನ
ಸಂಪದವನೆನಿತು ಬಣ್ಣಿಸಲಳವು ಕವನದಲಿ?
ಕವಿಗೆ ದಿವ್ಯಾನಂದವನ್ನುಂಟು ಮಾಡಿದ ಕವಿಶೈಲವನ್ನು ಎಷ್ಟು ವರ್ಣಿಸಿದರೂ ತೃಪ್ತಿಯಿಲ್ಲ. ಇಡೀ ನಾಡನ್ನು, ನಾಡಿನ ಸುಂದರ ತಾಣಗಳನ್ನು ಕಂಡು ದಿವ್ಯತೆಯನ್ನನುಭವಿಸಿದ್ದರೂ ಈ ಶಿಖರಸುಂದರ ಕವಿಗೆ ಮಾಡಿರುವ ಮೋಡಿ ವರ್ಣಿಸಲಸದಳ. ಅದು ಕವಿಯನ್ನು ಚಳಿ ಮಳೆ ಬಿಸಿಲು ರಾತ್ರಿ ಹಗಲು ಎನ್ನದೆ ಕಾಡುವುದು ಹೀಗೆ.

ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ
ಮಳೆಯಲ್ಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ
ದೃಶ್ಯವೈವಿಧ್ಯಮಂ ರಚಿಸಿ ನೀಂ ಭುವನದಲಿ
ಸ್ವರ್ಗವಾಗಿಹೆ ನನಗೆ! ನೀಲಗಿರಿ, ಬ್ರಹ್ಮಗಿರಿ,
ಗೇರುಸೊಪ್ಪೆಯ ಭೀಷ್ಮ ಜಲಪಾತ, ಆಗುಂಬೆ,
ಶೃಂಗೇರಿ, ಚಂದ್ರಾದ್ರಿಗಳನೆಲ್ಲಮಂ ಕಂಡೆ;
ವನರಾಜಿ ಜಲರಾಶಿ ಸೂರ್ಯಾಸ್ತಗಳನುಂಡೆ!
ಆದರೇಂ? ಮೀರಿರುವುದವುಗಳಂ ನಿನ್ನ ಸಿರಿ:
ಹೆತ್ತಮ್ಮಗಿಂ ಮತ್ತೊಳರೆ? ತಾಯಹಳೆ ರಂಭೆ?
ಒಂದೇ ದಿನದ ನಂತರ (೨೫.೪.೧೯೩೪) ಮೂಡಿರುವ ಸಾನೆಟ್ಟು, ಕವಿಶೈಲದಿಂದ ಕವಿ ಕಂಡ ಸೂರ್ಯಾಸ್ತವನ್ನು, ಅದರಿಂದ ಭಾವಮುಖನಾದ ಕವಿಯನ್ನು ಕಂಡರಿಸುತ್ತದೆ. ಸೂರ್ಯಾಸ್ತ ಕಾರಣದಿಂದ ಉಂಟಾಗುವ ವರ್ಣವೈವಿಧ್ಯವನ್ನೂ ಕವಿತೆ ಕಟ್ಟಿಕೊಡುತ್ತದೆ. ಹೆಚ್ಚಿನ ಮಾತೇ ಬೇಕಾಗಿಲ್ಲ; ಅಷ್ಟು ಸರಳವಾಗಿದೆ ಕವಿತೆ!
ತೆರೆ ಮೇಲೆ ತೆರೆಯೆದ್ದು ಹರಿಯುತಿದೆ ಗಿರಿಪಂಕ್ತಿ
ಕಣ್ದಿಟ್ಟಿ ಹೋಹನ್ನೆಗಂ. ಚಿತ್ರ ಬರೆದಂತೆ
ಕಡುಹಸುರು ತಿಳಿಹಸುರುಬಣ್ಣದ ಸಂತೆ
ಶೋಭಿಸಿಹುದಾತ್ಮವರಳುವ ತೆರದಿ. ದಿಗ್ದಂತಿ
ಕೊಂಕಿಸಿದ ದೀರ್ಘಬಾಹುವ ಭಂಗಿಯನು ಹೋಲಿ
ಮೆರೆದಿದೆ ದಿಗಂತರೇಖೆ. ಮುಳುಗುತಿದೆ ಸಂಜೆರವಿ
ಕುಂಕುಮದ ಚೆಂಡಿನೊಲು ದೂರದೂರದಲಿ. ಕವಿ
’ಭಾವಮುಖ’ನಾಗುತಿಹನಾವೇಶದಲಿ ತೇಲಿ!
ಬಳಿ ಕುಳಿತು ಭವ್ಯ ದೃಶ್ಯವ ನೋಡುತಿರುವೆನ್ನ
ಸೋದರನೆ, ಹೃದಯದಲಿ ಯಾವ ಭಾವಜ್ವಾಲೆ
ಪ್ರಜ್ವಲಿಸುತಿದೆ? ಮನದೊಳಾವ ಚಿಂತಾಗಾನ
ರೆಕ್ಕೆಗರಿಗೆದುರುತಿದೆ? ಅಥವ ನೋಟವೆ ನಿನ್ನ
ಸರ್ವಸ್ವವಾಗಿದೆಯೆ? ಇರಲಿ : ನಿನ್ನೆದೆ ಸೋಲೆ
ಸೃಷ್ಟಿಸೌಂದರ್ಯಕದೆ ಅಮೃತಗಂಗಾಸ್ನಾನ!
ಸೃಷ್ಟಿಯ ಚೆಲುವನ್ನು ನೋಡಿ ಒಂದರೆಕ್ಷಣ ನಾವು ಮನಸೋತರೂ ಸರಿಯೆ; ಅದು ಅಮೃತಗಂಗಾಸ್ನಾನಕ್ಕೆ ಸಮ. ಆ ’ಒಂದರೆಕ್ಷಣ’ ಎಲ್ಲರಿಗೂ ಲಭಿಸುವುದು ಮಾತ್ರ ದುರ್ಲಭ! ಸೂರ್ಯೋದಯ, ಸೂರ್ಯಾಸ್ತವನ್ನು ಕವಿಶೈಲದಲ್ಲಿ ಕಂಡ ಕವಿಗೆ ಮಳೆಗಾಲದ ದಿನದ ಸಂಜೆಯಲ್ಲಿ ಕವಿಶೈಲವನ್ನು ಕಾಣುವ ಭಾಗ್ಯವೂ ಬರುತ್ತದೆ. ಮಳೆಗಾಲದ ಸಂಜೆಯ ಕವಿಶೈಲದ ಬಗ್ಗೆ
ಮೇಘಗವಾಕ್ಷದೆಡೆಯ ಸಂಧ್ಯಾಗಗನವೇದಿಕೆಯಲ್ಲಿ ಲೋಕಮೋಹಕವಾದ ಅಸಂಖ್ಯ ವರ್ಣೋಪವರ್ಣಗಳ ಮೆರವಣಿಗೆ ಪ್ರಾರಂಭವಾಯಿತು. ಹಾಗೆಯೇ ನಮ್ಮ ಹೃದಯ ಮಂದಿರಗಳಲ್ಲಿ ಅಸಂಖ್ಯ ಭಾವೋಪಭಾವಗಳ ಮಹೋತ್ಸವವೂ ಪ್ರಾರಂಭವಾಯಿತು. ಆ ಸೌಂದರ್ಯ ಸಮುದ್ರದಲ್ಲಿ ನಾವೆಲ್ಲರೂ ತೆರೆತೆರೆಗಳಾಗಿ ಅಶರೀರಗಳಾಗಿ ವಿಶ್ವವಿಲೀನವಾದೆವು. ನನ್ನ ಕಣ್ಣಿವೆಗಳು ಅನೈಚ್ಛಿಕವಾಗಿಯೆ ಮುಗುಳಿದುವು.........ಕಣ್ದೆರೆದಾಗ ಕತ್ತಲೆಯಾಗಿತ್ತು ಎಂದು ಮಲೆನಾಡಿನ ಚಿತ್ರಗಳು ಕೃತಿಯ ಮುನ್ನುಡಿಯಲ್ಲಿ ಬರೆದಿದ್ದರೆ, ಮಳೆ ಹೊಯ್ದ ಮಾರನೆಯ ಬೆಳಗಿನ ಚಿತ್ರಣವನ್ನು ೨೬.೪.೧೯೩೪ರ ಸಾನೆಟ್ಟಿನಲ್ಲಿ ಕಡೆದಿಟ್ಟಿದ್ದಾರೆ.

ಮಳೆಬಂದು ನಿಂತಿಹುದು; ಮಿಂದಿಹುದು ಹಸುರೆಲ್ಲ;
ಬಿಸಿಲ ಬೇಗೆಯು ಮಾದು, ಬಂದಿಹುದು ಹೊಸತಂಪು;
ಹೊಸತು ಮಳೆ ತೋಯಿಸಿರುವ ನೆಲದ ಕಮ್ಮನೆ ಕಂಪು
ತೀಡುತಿರೆ, ಮಣ್ಣುತಿನ್ನುವುದೇನು ಮರುಳಲ್ಲ!
ವಾಯು ಮಂಡಲ ಶುಭ್ರ; ಗಗನದಲಿ ಮುಗಿಲಿಲ್ಲ;
ಮೈಲತುತ್ತಿನ ಬಣ್ಣದಗಲ ಗಾಜನು ಹೋಲಿ
ಕಮನೀಯವಾಗಿರಲು ಧೌತಾಂಬರದ ನೀಲಿ,
ಕವಿಗೆ ಮನೆ ಬೇಡೆಂಬುದೊಂದು ಸೋಜಿಗವಲ್ಲ!
ಕರಿದಾಗಿ ಹಸರಿಸಿಹ ಕವಿಶೈಲದರೆಯಲ್ಲಿ
ಬಿಸಿಲಿನಲಿ ಮಿರುಗುತಿವೆ ಕನ್ನಡಿಗಳೆಂಬವೋಲ್
ನಿಂತ ನೀರುಗಳು; ಆವಿಗಳೆದ್ದು, ಅಲ್ಲಲ್ಲಿ,
ನಭಕೇರುತಿವೆ. ಹಕ್ಕಿ ಹಾಡತೊಡಗಿವೆ, ಕೇಳು;
ಹೇ ಬಂಧು, ಸೊಬಗಿನಲಿ ನಿನ್ನಾತ್ಮವನು ತೇಲು;
ಪ್ರಜ್ವಲಿಸಲೈ ಕಲ್ಪನೆ, ಕೆರಳ್ದ ಬೆಂಕಿಯೋಲ್!
ಮನೆಯೇ ಬೇಡ; ಕವಿಶೈಲ ಸಾಕು ಎಂಬುದು ಸೋಜಿಗವಲ್ಲ ಎನ್ನುವ ಕವಿ, ಮತ್ತೆ ಮಾರನೆಯ ದಿನ (೨೭-೪-೧೯೩೪) ರಚಿತವಾದ ಸಾನೆಟ್ಟಿನಲ್ಲಿ ಹಿಂದಿನ ರಾತ್ರಿ ಕತ್ತಲಲ್ಲಿ, ನಕ್ಷತ್ರದ ಬೆಳಕಲ್ಲಿ ಕವಿಶೈಲದ ಮೇಲೆ ನಿಂತು ಅನುಭವಿಸಿದ್ದನ್ನು ಅಕ್ಷರಕ್ಕಿಳಿಸಿದ್ದಾರೆ. ಕತ್ತಲೂ ಕೂಡ ಕವಿಗೆ ಕಾವ್ಯವನ್ನು ತೋರಿಸಬಲ್ಲುದು ಎಂಬುದು ಈ ಸಾನೆಟ್ಟಿನ ಮಹಿಮೆ. ಕಾಣುವ ಕಣ್ಣು ಇದ್ದವನಿಗೆ ಕತ್ತಲೆಯೂ ಕಾಣಿಸುತ್ತದೆ; ಕಿವಿಯಿದ್ದವನಿಗೆ ಕತ್ತಲೆಯೂ ಕೇಳಿಸುತ್ತದೆ!
ನಿರ್ಜನತೆ; ನೀರವತೆ; ಕಗ್ಗತ್ತಲಲಿ ಧಾತ್ರಿ
ತಲ್ಲೀನ. ಕೋಟಿಯುಡುಮಂಜರಿಗಳುಪಕಾಂತಿ
ಬೆಳಕಲ್ಲ: ಕಗ್ಗತ್ತಲೆಯ ಛಾಯೆ, ಬೆಳಕಿನ ಭ್ರಾಂತಿ!-
ಏಂ ಶಾಂತಿ, ವಿಶ್ರಾಂತಿ!- ಕವಿಶೈಲದಲಿ ರಾತ್ರಿ:
ತಿಮಿರಪಾನದಿ ಮೂರ್ಛೆಗೊಂಡಂತಿಹ ಜಗತ್ತು
ಮರಳಿ ಕಣ್ದೆರೆದು ಎಚ್ಚರುಹ ಚಿಹ್ನೆಯೆ ಇಲ್ಲ;
ಭೀಷಣ ಗಭೀರತೆಯೊಳದ್ದಿದೆ ಭುವನವೆಲ್ಲ;
ರಂಜಿಸಿದೆ ಲಯ ವಿಪ್ಲವದ ಭವ್ಯಸಂಪತ್ತು!
ದೇಹಭಾವವೆ ಹೋಗಿ ನನ್ನಹಂಕಾರಕ್ಕೆ
ಕತ್ತಲೆಯೆ ಕವಚವಾಗಿದೆ; ಇಂದ್ರಿಯಂಗಳಿಗೆ
ಕತ್ತಲೆಯೆ ವಿಷಯವಾಗಿದೆ; ನೋಡೆ ಕಂಗಳಿಗೆ
ಕತ್ತಲೆಯ ಕಾಣ್ಕೆ; ಕೇಳಲು ಕಿವಿಗಳೆರಡಕ್ಕೆ
ಕತ್ತಲೆಯೆ ಸದ್ದು!- ನನ್ನೆದೆಯೊಳನುಭವವಿದೇನು?
ಭಯವೋ? ಆವೇಶವೋ? ಅಹಂಕಾರಲಯವೋ ಏನು?
ಪ್ರಕೃತಿಯ ಅದಮ್ಯತೆ, ನಿಗೂಢತೆ, ಭವ್ಯತೆ, ರುದ್ರರಮಣೀಯತೆಯ ಎದುರಿಗೆ ಮಾತಿಲ್ಲವಾಗುವುದೆಂದರೆ ಇದೆ ಇರಬೇಕು. ದೇಹಭಾವವೇ ಹೋಗುವುದೆಂದರೆ ಸಮಾಧಿ ಸ್ಥಿತಿಯನ್ನು ತಲುಪಿದಂತೆಯೇ ಸರಿ. ರಾತ್ರಿಯ ನಿಗೂಢತೆ ಮನುಷ್ಯನಲ್ಲಿ ಹುಟ್ಟಿಸುವ ಕಲ್ಪನೆಗಳಿಗೆ ಎಂದಿಗೂ ಯಾವತ್ತಿಗೂ ಕೊನೆಯಿಲ್ಲ!

ಮೇಲಿನ ಐದು ಸಾನೆಟ್ಟುಗಳಿಗೆ ಕಲಶವಿಟ್ಟಂತೆ ಮಾರನೆಯ ದಿನವೇ (೨೮-೪-೧೯೩೪) ಆರನೆಯ ಸಾನೆಟ್ಟು ರಚನೆಯಾಗಿದೆ. ಕವಿಯಲ್ಲಿ ತಾನು ಕಂಡ ದರ್ಶನವೆಲ್ಲವನ್ನೂ ಸರ್ವರೂ ಕಾಣಬೇಕು ಎಂಬ ಭಾವ ಯಾವಾಗಲೂ ಸ್ಥಾಯಿ. ಸಹೃದಯನನ್ನೂ ತನ್ನೊಂದಿಗೆ ಕರೆದೊಯ್ಯಬೇಕೆಂಬ ಅಚಲ ತುಡಿತ. ಸಹೃದಯನಿಗೆ ಹೇಳುತ್ತಿರುವಂತೆ ಕವನ ಆರಂಭವಾಗುತ್ತದೆ.
ಮಿತ್ರರಿರ, ಮಾತಿಲ್ಲಿ ಮೈಲಿಗೆ! ಸುಮ್ಮನಿರಿ:
ಮೌನವೆ ಮಹತ್ತಿಲ್ಲಿ, ಈ ಬೈಗುಹೊತ್ತಿನಲಿ
ಕವಿಶೈಲದಲಿ. ಮುತ್ತಿಬಹ ಸಂಜೆಗತ್ತಲಲಿ
ಧ್ಯಾನಸ್ಥಯೋಗಿಯಾಗಿದೆ ಮಹಾ ಸಹ್ಯಗಿರಿ!
ಮುಗಿಲ್ದೆರೆಗಳಾಗಸದಿ ಮುಗುಳ್ನಗುವ ತದಿಗೆಪೆರೆ,
ಕೊಂಕು ಬಿಂಕವ ಬೀರಿ, ಬಾನ್ದೇವಿ ಚಂದದಲಿ
ನೋಂತ ಸೊಡರಿನ ಹಣತೆಹೊಂದೋಣಿಯಂದದಲಿ
ಮೆರೆಯುತ್ತೆ ಮತ್ತೆ ಮರೆಯಾಗುತ್ತೆ ತೇಲುತಿರೆ,
ಬೆಳಕು ನೆಳಲೂ ಸೇರಿ ಶಿವಶಿವಾಣಿಯರಂತೆ
ಸರಸವಾಡುತಿವೆ ಅದೊ ತರುಲತ ಧರಾತಲದಿ!-
ಪಟ್ಟಣದಿ, ಬೀದಿಯಲಿ, ಮನೆಯಲ್ಲಿ, ಸರ್ವತ್ರ
ಇದ್ದೆಯಿದೆ ನಿಮ್ಮ ಹರಟೆಯ ಗುಲ್ಲು! ಆ ಸಂತೆ
ಇಲ್ಲೇಕೆ? - ಪ್ರಕೃತಿ ದೇವಿಯ ಸೊಬಗು ದೇಗುಲದಿ
ಆನಂದವೇ ಪೂಜೆ; ಮೌನವೆ ಮಹಾಸ್ತೋತ್ರ!
ಸಹ್ಯಾದ್ರಿಯ ಗಿರಿಶ್ರೇಣಿ ಧ್ಯಾನಸ್ಥ ಯೋಗಿಯಂತೆ ಕವಿಗೆ ಕಂಡಿದೆ. ಪರಿಭಾವಿಸಿದಷ್ಟೂ ಅರ್ಥಗಳು ಈ ಹೋಲಿಕೆಗಿದೆ. ಪುಟ್ಟದಾದರೂ ಮಹತ್ತಾಗಿರುವ ಮತ್ತೊಂದು ಹೋಲಿಕೆ ’ಬೆಳಕು ನೆಳಲೂ ಸೇರಿ ಶಿವಶಿವಾಣಿಯರಂತೆ ಸರಸವಾಡುತಿವೆ ಅದೊ ತರುಲತ ಧರಾತಲದಿ!’ ಎಂಬುದು. ಓಡುವ ಮೋಡಗಳ ನೆರಳು ದಟ್ಟಕಾಡು, ಗಿರಿಗಳನ್ನು ಹಾಯ್ದು ಹೋಗುವ ದೃಶ್ಯ ಶಿವ-ಪಾರ್ವತಿಯರ ಸರಸದಂತೆ! ಅಂತಹ ಭವ್ಯತೆಯನ್ನು ದರ್ಶಿಸಿ ದಿವ್ಯತೆಯನ್ನು ಅನುಭವಿಸಬೇಕಾದರೆ ಅಲ್ಲಿ ಮೌನವೇ ಮಹಾಮಂತ್ರವಾಗಬೇಕು. ಅದೇ ಕವಿಯ ಬಯಕೆ ಕೂಡ. ಪ್ರಕೃತಿ ದೇವಿಯ ದೇವಾಲಯದಲ್ಲಿ ಆನಂದವೇ ಪೂಜೆ. ಅಲ್ಲಿ ಗಂಟೆ, ಮಂಗಳಾರತಿ, ಜಾಗಟೆ, ಮಂತ್ರ ಬೇಕಾಗಿಲ್ಲ! ಮೌನವೊಂದಿದ್ದರೆ ಸಾಕು. ಕವಿಶೈಲವೊಂದೇ ಅಲ್ಲ; ಯಾವುದೇ ಪ್ರಕೃತಿತಾಣಗಳಿಗೆ ಹೋಗುವ ಆಸಕ್ತರಿಗೆ ಈ ಸರಳ ಸತ್ಯ ಅರಿವಾದರೆ ನಿಸರ್ಗ ಮತ್ತಷ್ಟು ಸುಂದರತರವಾಗಿರುತ್ತದೆ.
ಕರನಿರಾಕರಣೆಯ ಚಳುವಳಿ ನಡೆಯುತ್ತಿದ್ದ ಸಂದರ್ಭದಲ್ಲಿ, ಭೂಗತರಾಗಿ ಚಳುವಳಿಯನ್ನು ನಿರ್ದೇಶಿಸುತ್ತಿದ್ದ ಡಾ. ಹರ್ಡೀಕರ ಕಾನಕಾನಹಳ್ಳಿ ಸರ್ದಾರ್ ವೆಂಕಟರಾಮಯ್ಯ ಅವರಿಗೆ ಕುಪ್ಪಳಿ ಮನೆಯ ಉಪ್ಪರಿಗೆ ಅಡಗುತಾಣವಾಗಿತ್ತು. ದೇಶಭಕ್ತರಿಂದ ಅವರು ಸರ್ದಾರ್ ಎಂದು ಕರೆಸಿಕೊಂಡಿದ್ದರು. ಅವರು ಆಗಾಗ ಕವಿಶೈಲಕ್ಕೆ ಹೋಗಿ ಕಾಲ ಕಳೆಯುತ್ತಿದ್ದರಂತೆ. ಆ ಸಂದರ್ಭದಲ್ಲಿ ದೇವನಾಗರಿ ಲಿಪಿಯಲ್ಲಿ ಕವಿತೆಯೊಂದನ್ನು ಕೆತ್ತಿದ್ದಾರೆ. ಅದರ ಸಾಲುಗಳೆರಡು ಹೀಗಿದೆ.
ನಾಮೀ ಒತ್ಥರ್ ಪರ್
ನಾಮ್ ಕವಿಯೋಂಕೆ ಅಮರ್
ಹೆಸರಯ ಪಡೆದ ಅರೆಯ ಮೇಲೆ
ಕವಿಯ ಹೆಸರು ಅಮರವಾಯ್ತು!

4 comments:

Pejathaya said...

ಪ್ರಕೃತಿದೇವಿಯ ಮಡಿಲಲ್ಲೇ ಮೌನವೇ ಪೂಜೆ ಎಂಬ ಕಿವಿಮಾತನ್ನು ಕವಿ ಹೇಳಿದ್ದಾರೆ.
ಪ್ರಕೃತಿಯ ಆನಂದವನ್ನು ಅನುಭವಿಸಲು ಮೌನ ಎಂಬ ಮಂತ್ರ ಬೇಕೇ ಬೇಕು.
ಬೇಟೆ ಸಿಗದಿದ್ದರೇನಾಯಿತು?
ಪ್ರಕೃತಿಯ ಸಿರಿ ಅವರಿಗೆ ಒಲಿಯಿತಲ್ಲ?
ಬೇಟೆಗಾರರಾಗಿ ಬನಕೆ ಹೋದವರು ಮರಳಿ ಮನೆಗೆ ಬಂದುದು ಕಬ್ಬಿಗರಾಗಿ!

Ashok.V.Shetty, Kodlady said...

ಹೌದು, ಬೇಟೆ ಸಿಗದಿದ್ದರೆನಾಯಿತು, ನಮಗೊಬ್ಬ ಮಹಾನ್ ಕವಿ ಸಿಕ್ಕಿದರಲ್ಲವೇ ? ಕುವೆಂಪು ರವರ ಬಗ್ಗೆ ಇನ್ನಷ್ಟು ತಿಳಿದು ಕೊಳ್ಳುವ ಕುತೂಹಲ ......ಸುಂದರ ಲೇಖನ...ಧನ್ಯವಾದಗಳು...

ಸರ್ವೇಶ್ ಕುಮಾರ್ ಎಂ. ವಿ said...

ನಿಮ್ಮ ಎಲ್ಲ ಲೇಖನಗಳು ತುಂಬಾ ಸೊಗಸಾಗಿ ಮೂಡಿಬರುತ್ತಿವೆ, ವಿಶ್ವಮಾನವರ ಕಾವ್ಯ ರಸದೂಟ ಹೀಗೆ ಮುಂದುವರಿಯಲಿ..... ಧನ್ಯವಾದಗಳು.

ಜಲನಯನ said...

ಸತ್ಯ..ನಿಮ್ಮ ಲೇಖನಗಳಲ್ಲಿ ಹುದುಗಿರುವ ಕುವೆಂಪು ಪರಿಚಯ ಅವರ ಕೃತಿಗಳತ್ತ ವಿಶೇಷ ಬೆಳಕು ಬೀರಿ ನಮ್ಮಂಥವರಿಗೆ ಅವುಗಳನ್ನು ಸ್ವಲ್ಪಮಟ್ಟಿಗೆ ಅರ್ಥವಾಗುವಂತೆ ಮಾಡುತ್ತವೆ ಎನ್ನುವುದಂತೂ ನಿಜ....
ಹೆಚ್ಚು ಕನ್ನಡದ ಕ್ಲಿಷ್ಟ ಪದ ತಿಳಿಯದ ನಮಗೆ...
ಸಾನೆಟ್ಟು..
ಶ್ವೇತಫೇನಾವೃತ..
ಇಂತಹ ಪದಗಳ ಅರ್ಥವನ್ನೂ ತಿಳಿಸಿದರೆ ಚನ್ನಾಗಿರುತ್ತೆ. ಧನ್ಯವಾದ ನಿಮ್ಮ ಲೇಖನಕ್ಕೆ...