ತುಂಬಾ ಹಿಂದೆ ಒಬ್ಬ ದರೋಡೆಕಾರನಿದ್ದ. ದಾರಿಯಲ್ಲಿ ಬಂದವರನ್ನು ಅಡ್ಡಗಟ್ಟಿ ಅವರನ್ನು
ಕೊಂದು ಅವರಲ್ಲಿದ್ದುದದ್ದನ್ನು ದೋಚಿ, ಅದರಲ್ಲಿಯೇ ತನ್ನ ಹೆಂಡತಿ ಮಕ್ಕಳನ್ನು
ಚೆನ್ನಾಗಿ ಸಾಕಿಕೊಂಡಿದ್ದನಂತೆ! ಒಂದು ದಿನ ನಾರದನೇ ಆ ದುಷ್ಟನ ಕೈಗೆ
ಸಿಕ್ಕಿಹಾಕಿಕೊಂಡುಬಿಡುತ್ತಾನೆ. ಇನ್ನೇನು ಕೊಲ್ಲಬೇಕು ಅನ್ನುವಷ್ಟರಲ್ಲಿ ನಾರದ ’ಅಯ್ಯಾ
ಕೊಲ್ಲುವುದು ಹೇಗಿದ್ದರೂ ಕೊಂದುಬಿಡುತ್ತೀಯಾ. ಅದಕ್ಕೂ ಮೊದಲು ನನ್ನದೊಂದು ಪ್ರಶ್ನೆಗೆ
ಉತ್ತರ ಕೊಟ್ಟುಬಿಡು. ಹೀಗೆ ಸಿಕ್ಕಸಿಕ್ಕವರನ್ನೆಲ್ಲಾ ಕೊಲ್ಲುವುದು ಪಾಪವಲ್ಲವೆ? ಈ
ನಿನ್ನ ಪಾಪಕ್ಕೆ ಪಾಲುದಾರರು ಯರ್‍ಯಾರು?’ ಎಂದು ಪ್ರಶ್ನಿಸಿದ. ಆಗ ಆ ದರೋಡೆಕಾರ ’ನಾನು,
ನನ್ನ ಹೆಂಡತಿ, ನನ್ನ ಮಕ್ಕಳು ಚೆನ್ನಾಗಿರಬೇಕೆಂದು ಇದನ್ನೆಲ್ಲಾ ಮಾಡುತ್ತಿದ್ದೇನೆ.
ನಾನು ಹೆಂಡತಿ ಮಕ್ಕಳೆಲ್ಲಾ ಇದರಲ್ಲಿ ಪಾಲುದಾರರು. ಆದ್ದರಿಂದ ಅದರಲ್ಲಿ ಪಾಪ ಪುಣ್ಯದ
ಮಾತು ಬಂದರೆ ಅದರಲ್ಲೂ ಎಲ್ಲರೂ ಪಾಲುದಾರರು’ ಎನ್ನುತ್ತಾನೆ. ಆಗ ನಾರದ ’ಅದೆಲ್ಲಾ
ಸುಳ್ಳು, ನೀನು ನಿನ್ನ ಹೆಂಡತಿ ಮಕ್ಕಳನ್ನು ಕೇಳಿನೋಡು. ಅವರು ಈ ಪಾಪಕಾರ್ಯದಲ್ಲಿ
ಪಾಲುದಾರರು ಎಂದು ಒಪ್ಪಿಕೊಂಡರೆ ನೀನು ನನ್ನನ್ನು ಕೊಲ್ಲಬಹುದು. ಇಲ್ಲವಾದರೆ
ಬಿಟ್ಟುಬಿಡಬೇಕು’ ಎನ್ನುತ್ತಾನೆ. ಆತ ಮನೆಗೆ ಓಡುತ್ತಾನೆ. ತನ್ನ ಹೆಂಡತಿ ಮಕ್ಕಳನ್ನು
ಕರೆದು ಕೇಳುತ್ತಾನೆ. ’ನನ್ನ ಪಾಪದಲ್ಲಿ ನೀವೂ ಪಾಲುದಾರರಲ್ಲವೆ?’ ಎಂದು. ಅವರು, ’ನಿನ್ನ
ಹೆಂಡತಿ ಮಕ್ಕಳನ್ನು ಸಾಕಬೇಕಾದ್ದು ನಿನ್ನ ಕರ್ತವ್ಯ. ಸಾಕುತ್ತಿದ್ದೀಯ. ಆದ್ದರಿಂದ ಅದು
ನಿನ್ನ ಕರ್ತವ್ಯವೆಂದ ಮೇಲೆ ಅದರ ಪಾಪದ ಪೂರ್ಣಪಾಲು ನಿನ್ನದೇ! ನಮಗೆ ಇಲ್ಲ’ ಎಂದು
ಬಿಡುತ್ತಾರೆ. ಆತನಿಗೆ ಜೀವನದಲ್ಲಿ ವೈರಾಗ್ಯ ಬಂದುಬಿಡುತ್ತದೆ. ಈ ಪ್ರಶ್ನೆಯನ್ನು
ಹುಟ್ಟುಹಾಕಿದ್ದ ನಾರದನಿದ್ದ ಕಡೆಗೆ ಓಡುತ್ತಾನೆ. ಆತನ ಕಾಲಿಗೆ ಬಿದ್ದು ’ತಪ್ಪಾಯ್ತು’
ಎಂದು ಬೇಡುತ್ತಾನೆ. ಮುಕ್ತಿಮಾರ್ಗಕ್ಕಾಗಿ ಹಂಬಲಿಸುತ್ತಾನೆ. ಆಗ ನಾರದ ಆತನಿಗೆ
ರಾಮಮಂತ್ರವನ್ನು ಬೋಧಿಸುತ್ತಾನೆ. ಆದರೆ ಆತನ ಬಾಯಲ್ಲಿ ’ರಾಮ’ ಎಂದು ಹೇಳಲು ಬರುವುದೇ
ಇಲ್ಲ. ಕೊನೆಗೆ ನಾರದ ಅಲ್ಲಿದ್ದ ’ಮರ’ವನ್ನು ತೋರಿಸಿ ’ಅದೇನು?’ ಎನ್ನುತ್ತಾನೆ. ಆತ
’ಮರ’ ಎನ್ನುತ್ತಾನೆ. ಅದನ್ನೇ ಮತ್ತೆ ಮತ್ತೆ ಹೇಳುವಂತೆ ಹೇಳಿ ಹೊರಟುಹೋಗುತ್ತಾನೆ.
’ಮರಮರಮರ’ ಎಂದು ಹೇಳುತ್ತಿದ್ದುದೇ ’ರಾಮರಾಮರಾಮ’ ಎಂದಾಗುತ್ತದೆ. ಅಷ್ಟು ಆಗುವ
ಹೊತ್ತಿಗೆ ನೂರಾರು ವರ್ಷಗಳೇ ಕಳೆದುಹೋದುದ್ದರಿಂದ ಅವನ ಮೈಮೇಲೆ ಹುತ್ತ
ಬೆಳೆದುಕೊಂಡಿತ್ತು. ಮತ್ತೆ ನಾರದ ಬಂದು ಆತನಿಗೆ ಆಶಿರ್ವದಿಸಿ, ವಾಲ್ಮೀಕಿ ಎಂದು ಕರೆದು
ರಾಮಾಯಣದ ಕಥೆಯನ್ನು ಹೇಳುತ್ತಾನೆ. ಆತನಿಗೆ ರಾಮನ ಸಾಕ್ಷಾತ್ಕಾರವಾಗುತ್ತದೆ. ಮುಂದೆ
ಆತನೇ ರಾಮಾಯಣವನ್ನು ಬರೆಯುತ್ತಾನೆ.
ಇದು ನಾನು ಬಾಲ್ಯದಲ್ಲಿ ಕೇಳಿದ್ದ ಕಥೆ. ಬಹುಶಃ ಈ ಕಥೆಯ ಮೂಲಕವೇ ರಾಮಾಯಣದ ಕತೆಗಳು
ನನ್ನ ಮನಃಪಟಲಕ್ಕೆ ಧಾಳಿಯಿಟ್ಟಿರಬೇಕು. ಮಂಥರೆ ಅಳುತ್ತಿದ್ದ ರಾಮನನ್ನು ಸಮಾಧಾನ ಪಡಿಸಲು
ಕನ್ನಡಿ ನೀಡುವ ಕತೆಯನ್ನೂ ನಾನು ಆಗಲೇ ಕೇಳಿದ್ದೆ. ಆದ್ದರಿಂದ ರಾಮಾಯಣದ ನನ್ನ ಮೊದಲ
ತಿಳುವಳಿಕೆಗೆ ಜಾನಪದ ಕತೆಗಳೇ ಕಾರಣವೆನ್ನಬಹುದು.
ಕತೆ ಕೇಳುವ ವಯಸ್ಸು ಕಳೆದ ಮೇಲೆ ನಾನೇ ಓದಿಕೊಳ್ಳುವ ವಯಸ್ಸಿನಲ್ಲಿ ರಾಮಾಯಣವನ್ನು
ಓದಿಕೊಂಡಾಗ ನನಗೆ ಸಿಕ್ಕ ಕತೆಯಿದು: ಒಂದು ದಿನ ಋಷಿ ವಾಲ್ಮೀಕಿಗೆ ನಾರದನ
ಭೇಟಿಯಾಗುತ್ತದೆ. ಆಗ ವಾಲ್ಮೀಕಿ ನಾರದನನ್ನು ’ತ್ರಿಲೋಕ ಸಂಚಾರಿಯಾದ ನೀವು ಯಾವುದಾದರೂ
ಒಂದು ಕತೆಯನ್ನು ಹೇಳಿ. ಅದನ್ನು ಕೇಳಿ ಕೃತಾರ್ಥರಾಗುತ್ತೇವೆ’ ಎಂದು ಕೇಳುತ್ತಾರೆ. ಆಗ
ನಾರದನು ರಾಮಾಯಣದ ಕಥೆಯನ್ನು ಹೇಳುತ್ತಾನೆ. ಅದಾದ ಮೇಲೆ, ಒಂದು ದಿನ ವಾಲ್ಮೀಕಿ ನದೀ
ತೀರವೊಂದರಲ್ಲಿ ಸ್ನಾನಕ್ಕೆಂದು ಹೋಗುತ್ತಿದ್ದಾಗ, ಬೇಡನೊಬ್ಬ ಮರದ ಮೇಲೆ ಕುಳಿತಿದ್ದ
ಕ್ರೌಂಚ ಪಕ್ಷಗಳಲ್ಲಿ ಗಂಡು ಹಕ್ಕಿಗೆ ಗುರಿಯಿಟ್ಟು ಹೊಡೆಯುವುದನ್ನು ನೋಡುತ್ತಾರೆ. ಬಾಣದ
ಏಟು ತಿಂದ ಆ ಹಕ್ಕಿ ದೊಪ್ಪನೆ ಬಿದ್ದು ಸತ್ತು ಹೋಗುತ್ತದೆ. ಹೆಣ್ಣುಹಕ್ಕಿ ದುಃಖದಿಂದ
ಕೂಗುತ್ತಾ ಹಾರಾಡತೊಡಗುತ್ತದೆ. ವಾಲ್ಮೀಕಿಗೆ ಬಹಳ ದುಃಖವಾಗುತ್ತದೆ. ಆಗ,
ಮಾ ನಿಷಾದ ಪ್ರತಿಷ್ಟಾಂ ತ್ವಮಗಮಃ ಶಾಶ್ವತೀಃ ಸಮಾಃ|
ಯತ್ ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್||
ಎಂದು ಹೇಳುತ್ತಾರೆ. ನಂತರ ಆಶ್ರಮಕ್ಕೆ ಬರುವಾಗ, ತಾವು ಹೇಳಿದ ಮಾತು ಶ್ಲೋಕದ
ರೂಪದಲ್ಲಿರುವುದು ಗಮನಕ್ಕೆ ಬರುತ್ತದೆ. ಅದೇ ಮಾದರಿಯನ್ನು ಅನುಸರಿಸಿ, ನಾರದರು ಹೇಳಿದ
ಇಡೀ ರಾಮಾಯಣದ ಕಥೆಯನ್ನು ವಾಲ್ಮೀಕಿ ಬರೆಯುತ್ತಾರೆ.
ಕಾಲ ಕಳೆದಂತೆ ಸಿಕ್ಕ ಸಿಕ್ಕ ಪುಸ್ತಕವನ್ನೆಲ್ಲಾ ಓದುವ, ದಿನಕ್ಕೊಂದು ಪುಸ್ತಕವನ್ನು
ಓದಿಮುಗಿಸುವ ಹುಚ್ಚಿಗೆ ಬಿದ್ದ ಮೇಲೆ ಒಂದು ದಿನ ದೇಜಗೌ ಅವರ ’ಶ್ರೀರಾಮಾಯಣ ದರ್ಶನಂ
ವಚನಚಂದ್ರಿಕೆ’ ಎಂಬ ಪುಸ್ತಕ ಸಿಕ್ಕಿತು. ಓದಿದೆ. ಅದು ಕುವೆಂಪು ಅವರ ಮಹಾಕಾವ್ಯದ
ಗದ್ಯಾನುವಾದ. ಅದನ್ನು ಓದಿದ ಮೇಲೆ, ಮೂಲ ಮಹಾಕಾವ್ಯವನ್ನೇ ಓದುವ ಮನಸ್ಸಾಗಿ ಕೇವಲ
ಹದಿನೈದು ರೂಪಾಯಿಗೆ ದೊರೆಯುತ್ತಿದ್ದ ಅದನ್ನು ಕೊಂಡು ಓದಿದೆ. ಆಗ ಎಷ್ಟು ಅರ್ಥವಾಯಿತೊ
ಇಲ್ಲವೊ ತಿಳಿಯದು. ಆದರೆ ೨೦೦೪ರಿಂದ ೨೦೦೭ರವರೆಗೆ ವಾರಕ್ಕೊಂದು ದಿನ ಸಮಾನ ಆಸಕ್ತರು
ಸೇರಿ, ಇಡೀ ರಾಮಾಯಣದರ್ಶನಂ ಕಾವ್ಯವನ್ನು ಓದಿ, ಅನ್ವಯಿಸಿ, ಕನ್ನಡ ಸಾಹಿತ್ಯ ಚರಿತ್ರೆ
ಮತ್ತು ಪರಂಪರೆಯ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿದ್ದು ನನ್ನ ಜೀವನದ ಒಂದು ಮಹತ್ವದ ಘಟನೆ.
ಆ ಅಧ್ಯಯನಕ್ಕೆ ಮಾರ್ಗದರ್ಶಕರಾಗಿದ್ದವರು, ಶಾಸನ ಮತ್ತು ಹಳಗನ್ನಡದ ವಿದ್ವಾಂಸರಾದ ಡಾ.
ಕೈದಾಳ ರಾಮಸ್ವಾಮಿ ಗಣೇಶ ಅವರು. ಕನ್ನಡ ಸಾಹಿತ್ಯ ಚರಿತ್ರೆಯನ್ನು ಅವರಂತೆ ಬಲ್ಲವರು,
ವಿವರಿಸುವವರು ನನಗಂತೂ ಇದುವರೆಗೆ ಕಂಡಿಲ್ಲ. ಅವರ ಮಾರ್ಗದರ್ಶನದಲ್ಲಿ ಮೇಲಿನ ಕಥೆಯನ್ನೇ
ಕುವೆಂಪು ಅವರ ದರ್ಶನದಲ್ಲಿ ನೋಡಿದಾಗ ಒಂದು ಸುಂದರ ಚಿತ್ರಣ ನಮ್ಮ ಮುಂದೆ ಮೂಡುತ್ತದೆ.
ನಾರದನಿಂದ ರಾಮಕಥೆಯನ್ನು ಕೇಳಿ ’ಕಣ್ದಾವರೆಯೊಳಶ್ರುರಸಮುಗುವನ್ನೆಗಂ
ರೋಮಹರ್ಷಂದಾಳ್ದು’ ನವಚೈತನ್ಯವನ್ನು ಧರಿಸಿದ ವಾಲ್ಮೀಕಿ ಒಂದು ದಿನ ತಮಸಾ ನದಿ
ದಡದಲ್ಲಿದ್ದಾಗ ಸ್ನಾನಕ್ಕೆಂದು ಸಿದ್ಧನಾಗುತ್ತಿರುತ್ತಾನೆ. ಆಗ ’ರತಿಸುಖ ಚಾರು
ನಿಸ್ವನ’ವೊಂದು ’ಗಗನವೀಣಾ ತಂತ್ರಿಯಿಂ ಮಿಡಿದ ತೆರ’ನಾಗಿ ಕೇಳಿಸಲು ಹರ್ಷಗೊಂಡು
ನೋಡುತ್ತಾನೆ, ದಂಪತಿ ಕ್ರೌಂಚಪಕ್ಷಿಗಳನ್ನು. ವಿಶಾಲ ಆಕಾಶದಲ್ಲಿ ಹಾರಾಡುತ್ತಿದ್ದ ಆ
ವಿಹಂಗಮ ದೃಶ್ಯವನ್ನು ನೋಡುತ್ತಿರುವಾಗಲೇ ’ಗಂಡುಕೊಂಚೆ ಒರಲ್ದು ದೊಪ್ಪನೆ
ನೆಲಕ್ಕುರುಳ್ದು ಪೊರಳ್ದುದು’. ಬಾಣವೊಂದು ಅದರ ಎದೆಗೆ ಚುಚ್ಚಿಕೊಂಡಿರುತ್ತದೆ. ನೆತ್ತರು
ಜೀರ್ಕೋವಿಯಂತೆ ಕಾರುತ್ತಿರುತ್ತದೆ. ಅದನ್ನು ಹೊಡೆದ ಬೇಡ ಮಾಂಸದ ಆಸೆಯಿಂದ ಅದು ಬಿದ್ದ
ಜಾಗವನ್ನು ಹುಡುಕಿಕೊಂಡು ಬರುತ್ತಾನೆ. ಅತ್ತ ಆಕಾಶದಲ್ಲಿ ಹೆಣ್ಣು ಕೊಂಚೆ ’ಚಕ್ರಗತಿಯಿಂ
ಪಾರ್ದು ಗಿರಿವನಚಿಚ್ಚೇತನಮೆ ಚೀತ್ಕರಿಸುವಂತೆ’ ಕೂಗುತ್ತಿರುತ್ತದೆ. ಆಗ,
ಕರಗಿತಂತೆಯೆ ಕರುಳ್ ಮುನಿಗೆ.
ಕಣ್ಬನಿಯುಣ್ಮುವೋಲ್ ವೇದನೆಯ ಕರ್ಮುಗಿಲ್
ತೀವಿಬರೆ ಹೃದಯೊದೊಳ್.
ಮರುಗಿದನಿಂತು ಋಷಿ,
ಮನಕೆ ಮಿಂಚಲಾ ತನ್ನ ಪೂರ್ವಂ.
ವಾಲ್ಮೀಕಿಗೆ ತನ್ನ ಪೂರ್ವಾಶ್ರಮದ ನೆನಪು ಬರುತ್ತದೆ. ಕ್ರೌಂಚಪಕ್ಷಿಗಳಲ್ಲಿ ಹೆಣ್ಣು
ಮೊಟ್ಟೆಯಿಟ್ಟು ಮರಿಯಾಗುವವರೆಗೂ ಗಂಡು ತಂದು ಕೊಡುವ ಆಹಾರದ ಮೇಲೆಯೇ ಬದುಕಿರುತ್ತದೆ.
ಗೂಡಿನ ಸುತ್ತಲೂ ಗಟ್ಟಿಯಾದ ಬಲೆ ನೆಯ್ದಿರುತ್ತದೆ. ಕೊಕ್ಕು ಮಾತ್ರ ಹೊರಬರುವಷ್ಟು
ಜಾಗವಿರುತ್ತದೆ. ಗಂಡು ಆಹಾರ ತಂದುಕೊಡದಿದ್ದರೆ, ಹೆಣ್ಣು ಅಲ್ಲಿಯೇ
ಅಸುನೀಗಬೇಕಾಗುತ್ತದೆ. ಪೂರ್ವಾಶ್ರಮದಲ್ಲಿ ಬೇಡನಾಗಿದ್ದ ವಾಲ್ಮೀಕಿಗೆ ಇದೆಲ್ಲವೂ
ತಿಳಿಯದದ್ದೇನಲ್ಲ. ಆದ್ದರಿಂದಲೇ ಆತನ ಮನಸ್ಸು ಕರುಣೆಯ ಕಡಲಾಗುತ್ತದೆ.
ಬಾಳ್ಗಬ್ಬದೊಳ್ ಕರುಣೆ ತಾಂ ಬೇನೆಗುದಿದೊಡಮಲ್ತೆ
ಮೆರೆದಪುದು ಪೊರಪೊಣ್ಮುತಾ ಮಹಾಕಾವ್ಯ ಶಿಶು ತಾಂ
ಚಾರು ವಾಗ್‌ವೈಖರಿಯ ಛಂದಶ್ಯರೀರದಿಂ?
ಶೋಕ ಶ್ಲೋಕವಾಗಿ ಹೊರಬರುತ್ತದೆ.
ಮಾಣ್, ನಿಷಾದನೆ, ಮಾಣ್!
ಕೊಲೆ ಸಾಲ್ಗುಮಯ್ಯೊ ಮಾಣ್!
ನಲಿಯುತಿರೆ ಬಾನ್ ಬನದ ತೊರೆ ಮಲೆಯ ಭುವನಕವನಂ
ಸುಖದ ಸಂಗೀತಕೆ ವಿಷಾದಮಂ ಶ್ರುತಿಯೊಡ್ಡಿ ಕೆಡಿಸುವಯ್?
ನಾನುಮೊರ್ ಕಾಲದೊಳ್
ನಿನ್ನವೊಲೆ ಕೊಲೆಯ ಕಲೆಯಲ್ಲಿ ಕೋವಿದನಾಗಿ
ಮಲೆತಿರ್ದೆನಯ್.
ನಾರದ ಮಹಾಋಷಿಯ ದಯೆ ಕಣಾ
ಕರುಣೆಯಂ ಕಲಿತೆನ್
ಎಂದು ಆತ್ಮಕಥೆಯ ಮೂಲಕ ಆತ್ಮತತ್ತ್ವವನ್ನು ಕಬ್ಬಿಲನಿಗೆ ಮನಸ್ಸು ಕರಗುವಂತೆ ಬೋಧಿಸುತ್ತಾನೆ.
ಕೃಪೆದೋರುತ ಆತಂಗೆ ಅಹಿಂಸಾ ರುಚಿಯನ್ನಿತ್ತು,
ಕೊಂಚೆವಕ್ಕಿಯ ಮೆಯ್ಯಿನಾ ಬಾಣಮಂ ಬಿಡಿಸಿ,
ಪ್ರಾಣಮಂ ಬರಿಸಿ ಸಂಜೀವಜೀವನದಿಂದೆ,
ತವಿಸಿ ಪೆಣ್ವಕ್ಕಿಯೊಡಲುರಿಯನ್
ಆ ವಾಲ್ಮೀಕಿ ತಮಸೆಯಿಂ ತನ್ನೆಲೆವನೆಗೆ ಮರಳ್ದು,
ಧ್ಯಾನದೊಳ್ ಮುಳುಗಿರಲ್,
ಮಿಮಚಿತಯ್ ಕಾವ್ಯ ದಿವ್ಯ ಪ್ರಜ್ಞೆ,
ನವನವೋನ್ಮೇಷಶಾಲಿನಿ, ನಿತ್ಯತಾ ಪ್ರತಿಭೆ.
ಹಕ್ಕಿಗೆ ಶುಶ್ರೂಷೆ ಮಾಡಿ, ಜೀವ ಉಳಿಸಿ, ಹೆಣ್ಣು ಹಕ್ಕಿಯ ಗೋಳನಳಿಸಿದ ವಾಲ್ಮೀಕಿಯ ಮನದಲ್ಲಿ, ಆತನ ಪ್ರತಿಭೆ ದರ್ಶನವೊಂದನ್ನು ಮೂಡಿಸುತ್ತದೆ.
ಹೊಮ್ಮಿತಾ ದರ್ಶನಂ ಬಗೆಗಣ್ಗೆ;
ಚಿಮ್ಮಿದತ್ತೀ ವರ್ಣನಂ ನಾಲಗಗೆ:
ಪಿಡಿವೊಲ್ ಅಲ್ತಾದುದಕೆ ಕನ್ನಡಿಯನಪ್ಪುದಕೆ
ಮುನ್ನುಡಿಯನುಲಿವಂತೆಯುಂ,
ಕಂಡ ರಾಮಾಯಣವನೆಲ್ಲಮಂ ಕಂಡಂತೆ ಹಾಡಿದನೊ,
ಕೇಳ್ದ ಲೋಕಂಗಳೆಲ್ಲಂ ತಣಿವವೋಲ್.
ನಾರದನೊರೆದ ರಾಮಾಯಣದ ಕಥೆಯ ಹಿನ್ನೆಲೆಯಲ್ಲಿ, ತನ್ನ ಪ್ರತಿಭೆ ಕಂಡುಕೊಂಡ ದರ್ಶನವನ್ನು ವಾಲ್ಮೀಕಿ ರಾಮಾಯಣದಲ್ಲಿ ಹಾಡುತ್ತಾನೆ.
ಇದು ರಾಮಾಯಣದರ್ಶನಂ ಕಾವ್ಯದಲ್ಲಿ ಬರುವ ಕಥೆ. ಅದನ್ನು ಅಧ್ಯಯನ ದೃಷ್ಟಿಯಿಂದ
ಓದುತ್ತಿದ್ದ ನನಗೆ ಒಂದು ಸುಂದರ ಚಿತ್ರಣ ಮನದಲ್ಲಿ ಮೂಡಿತ್ತು. ಗ್ರಹಿಕೆಯಲ್ಲಿ
’ಶಬ್ದಗ್ರಹಣ’ ಮತ್ತು ’ಬಿಂಬಗ್ರಹಣ’ ಎಂಬ ಎರಡು ಬಗೆಗಳುಂಟೆಂದು ಡಾ. ಚಂದ್ರಶೇಖರ
ನಂಗಲಿಯವರು ಪ್ರತಿಪಾದಿಸುತ್ತಾರೆ. ’ಶಬ್ದಗ್ರಹಣ’ದಲ್ಲಿ ಕಿವಿಗಷ್ಟೇ ತಂಪಾಗಿಬಿಡುವ
ಮಿತಿಯಿರುತ್ತದೆ. ಆದರೆ ’ಬಿಂಬಗ್ರಹಣ’ ನಮ್ಮ ಸರ್ವೇಂದ್ರಿಯಕ್ಕೂ ಮುದ ನೀಡಬಲ್ಲುದು ಹಾಗೂ
ಎಲ್ಲ ಕಾಲಕ್ಕೂ ಮನದಲ್ಲಿ ಅಚ್ಚೊತ್ತಿನಿಲ್ಲಬಲ್ಲುದು. ಈ ಹಿನ್ನೆಲೆಯೆಲ್ಲಿ
’ಶ್ರೀರಾಮಾಯಣ ದರ್ಶನಂ’ ಕಾವ್ಯವನ್ನು ಗಮನಿಸಿದಾಗ ಇಂತಹ ನೂರಾರು ಚಿತ್ರಗಳು ಅದರಲ್ಲಿ
ಅಂತರ್ಗತವಾಗಿರುವುದು ಕಂಡುಬರುತ್ತದೆ. ಅಂತಹ ಒಂದೊಂದೇ ಚಿತ್ರಗಳನ್ನು ಪ್ರತ್ಯೇಖವಾಗಿ
ಗ್ರಹಿಸುತ್ತಾ ಹೋದ ಹಾಗೆ ಮಹಾಕಾವ್ಯದ ಅಖಂಡ ದರ್ಶನ ಹಾಗೂ ಭವ್ಯತೆ ನಮ್ಮ ಮುಂದೆ
ತೆರೆದುಕೊಳ್ಳುತ್ತದೆ. ಖಂಡ ಖಂಡವಾಗಿ ಅಖಂಡವನ್ನು ಗ್ರಹಿಸುವ ಆ ಮೂಲಕ ಇಡೀ ಕಾವ್ಯದಲ್ಲಿ
ನನ್ನ ವ್ಯಾಪ್ತಿಗೆ ಪ್ರಾಪ್ತಿಯಾಗುವ ಚಿತ್ರಗಳನ್ನು ಕಂಡರಿಸುವ ಪ್ರಯತ್ನವನ್ನು
ಮಾಡಲಾಗಿದೆ. ನಾವು ಶಿಲ್ಪಿಗಳಿದ್ದ ಹಾಗೆ. ನಮ್ಮ ನಮ್ಮ ಸಾಮರ್ಥ್ಯಕ್ಕೆ, ಕಲಾಭಿರುಚಿಗೆ,
ಸಾಧನೆಗೆ ತಕ್ಕ ಹಾಗೆ ವಿಗ್ರಹಗಳನ್ನು ಕೆತ್ತಿಕೊಳ್ಳಬಹುದು. ಆದರೆ ಮೂಲಸೃಷ್ಟಿಯಾದ
ಕಲ್ಲನ್ನು ನಾವು ಸೃಷ್ಟಿಸಲು ಸಾಧ್ಯವಿಲ್ಲ! ಆದರೆ ಆ ಸಹಜ ಸೃಷ್ಟಿಯಾದ ಕಲ್ಲಿಗೂ ಒಂದು
ಸೌಂದರ್ಯವಿದೆ. ಸೌಂದರ್ಯ ಆಕೃತಿಗೆ ಸಂಬಂಧಿಸಿದ್ದು ಮಾತ್ರವಲ್ಲ; ನಮ್ಮ ಭಾವಾನುಭಾವಗಳಿಗೂ
ಅದು ಸಂಬಂಧಿಸಿರುತ್ತದೆ. ಇದು ಕುವೆಂಪು ಅವರದೇ ಮಾತು: ’ಕಲೆಯನಲ್ಲದೆ ಶಿಲ್ಪಿ
ಶಿಲೆಯನೇನ್ ಸೃಷ್ಟಿಪನೆ?’
ಶ್ರೀರಾಮಾಯಣ ದರ್ಶನಂ ಕಾವ್ಯದ ರಚನೆ ಪ್ರಾರಂಭವಾಗಿ ಈಗ್ಗೆ ೭೭ ವರ್ಷಗಳೇ
ಕಳೆದುಹೋಗಿವೆ. ಪುಸ್ತಕ ರೂಪದಲ್ಲಿ ೧೯೪೯ರಲ್ಲಿ ಮೊದಲ ಸಂಪುಟ, ೧೯೫೧ರಲ್ಲಿ ಎರಡನೇ ಸಂಪುಟ
ಸಹೃದಯರ ಕೈಸೇರಿದವು. ೨೦೧೬ ಫೆಬ್ರವರಿಯ ಹೊತ್ತಿಗೆ ಕಾವ್ಯ ಪೂರ್ಣವಾಗಿ ಪ್ರಕಟೆಣೆಯಾಗಿ
೬೫ ವರ್ಷಗಳನ್ನು ಪೂರೈಸಲಿದೆ. ಒಂದು ರೀತಿಯಲ್ಲಿ ಅಂದಿನಿಂದ ಇಂದಿನವರೆಗೂ ಆ ಮಹಾಕೃತಿ
ಮತ್ತೆ ಮತ್ತೆ ಸಹೃದಯನ ಹೃದಯಲ್ಲಿ ನವನವೋನ್ಮೇಷಶಾಲಿನಿಯಾಗಿ ಪುನರ್ರಚನೆಗೊಳ್ಳುತ್ತಲೇ
ಇದೆ. ಅದು ಮುಂದೆಯೂ ನಡೆಯುತ್ತಲೇ ಇರುತ್ತದೆ.
2 comments:
ನಿಮ್ಮ ಬರಹವೂ ಬಹಳ ಸುಂದರವಾಗಿ ಮೂಡಿಬಂದಿದೆ.
ನಿಮ್ಮ ಬರಹವೂ ಬಹಳ ಸುಂದರವಾಗಿ ಮೂಡಿಬಂದಿದೆ.
Post a Comment