Showing posts with label ಕುಂದೂರುಮಠ. Show all posts
Showing posts with label ಕುಂದೂರುಮಠ. Show all posts

Wednesday, October 21, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ -27

ಮಂಜಣ್ಣನ ಹೀರೋ ಮೆಜೆಸ್ಟಿಕ್
ಮಂಜಣ್ಣ ಯಾರ ಕೈಯಲ್ಲೂ ಮುಟ್ಟಿಸದ ಒಂದು ವಸ್ತುವೆಂದರೆ ‘ಹೀರೋಮೆಜೆಸ್ಟಿಕ್’ ಎಂಬ ಮೋಟಾರ್ ಸೈಕಲ್. ಅದು ರಸ್ತೆಯಲ್ಲಿ ಓಡಾಡಿದ್ದಕ್ಕಿಂತ ಮೂಲೆಯಲ್ಲಿ ನಿಂತದ್ದೇ ಹೆಚ್ಚು. ಅದನ್ನು ನಾವೂ ಆಸೆ ಕಂಗಳಿಂದ ನೋಡುತ್ತಾ, ಅದನ್ನು ಸವಾರಿ ಮಾಡಿದಂತೆ ಕನಸು ಕಾಣುತ್ತಾ ಇದ್ದೆವು. ಕೊನೆಯ ಪಕ್ಷ ಅದನ್ನು ಸುಮ್ಮನೆ ತಳ್ಳಿಕೊಂಡು ಓಡಾಡಿಸಲು ಕೊಟ್ಟಿದ್ದರೂ ನಮಗೆ ಆಗ ಸಂತೋಷವಾಗುತ್ತಿತ್ತೇನೋ!


ನಮ್ಮ ಈ ಆಸೆ ಈಡೇರುವ ದಿನವೂ ಒಮ್ಮೆ ಬಂತು. ಮಂಜಣ್ಣನಿಗೆ ಊರಿನಲ್ಲಿ ಸ್ವಲ್ಪ ಜಮೀನಿತ್ತು. ಅದರಲ್ಲಿ ಆತನ ಹಿರೇಹೆಂಡತಿ ಬಾಳೆ ಹಾಕಿಕೊಂಡಿದ್ದಳು. ಅದಕ್ಕೆ ಆತ ನೀರು ಬಿಡಲು ಆಗಾಗ ಊರಿಗೆ ಹೋಗುತ್ತಿದ್ದ. ಆಗಾಗ ಕೈಕೊಡುತ್ತಿದ್ದ ತನ್ನ ಮೊಟಾರ್ ಸೈಕಲ್ಲನ್ನು ಆತ ನೆಚ್ಚಿಕೊಳ್ಳುತ್ತಿರಲಿಲ್ಲ. ಊರಿಗೆ ಹೋಗುವುದು ಹೆಚ್ಚಾದಾಗ ಅದನ್ನು ಒಂದು ಬಾರಿ ಚೆನ್ನಾಗಿ ರಿಪೇರಿ ಮಾಡಿಸಿಬಿಡಬೇಕೆಂದು ತೀರ್ಮಾನ ಮಾಡಿದ. ಆದರೆ ಅದನ್ನು ಚನ್ನರಾಯಪಟ್ಟಣದವರೆಗೆ ತೆಗೆದುಕೊಂಡು ಹೋಗುವ ಬಗೆ ಹೇಗೆ? ಅದಕ್ಕಾಗಿ ಆತ ನನ್ನನ್ನು ಮತ್ತು ವೆಂಕಟೇಶ ಎಂಬ ಇನ್ನೊಬ್ಬ ಹುಡುಗನನ್ನು ಕೇಳಿಕೊಂಡ. ‘ಚನ್ನರಾಯಪಟ್ಣದವರೆಗೆ ಅದನ್ನು ತಂದುಕೊಟ್ಟರೆ, ಅದನ್ನು ರಿಪೇರಿ ಮಾಡಿಸಿಕೊಂಡು ಬರುವಾಗ ಮೂರೂ ಮಂದಿ ವಾಪಸು ಬರೋಣ. ಅಲ್ಲಿ ನಿಮಗೆ ನಾನು ಮಿಲಿಟರಿ ಹೋಟೆಲ್ಲಿನಲ್ಲಿ ಊಟ ಕೊಡಿಸುತ್ತೇನೆ’ ಎಂದು ಹೇಳಿದ. ‘ಬೇಕಾದರೆ ನೀವು ಇಳಿಜಾರಿನಲ್ಲಿ ಅದರ ಮೇಲೆ ಕುಳಿತುಕೊಂಡು ಬರಬಹುದು’ ಎಂದೂ ಸೇರಿಸಿದ. ಆತನ ಎರಡನೇ ಮಾತು ಮಾತ್ರ ನಮಗೆ ಕೇಳಿಸಿದ್ದು! ಕೇವಲ ಕನಸಾಗಿದ್ದ ಹೀರೋಮೆಜೆಸ್ಟಿಕ್ ಮೋಟಾರ್ ಸೈಕಲ್ಲನ್ನು ಹತ್ತಿ ಅದರಲ್ಲಿ ಡಬಲ್ ರೈಡ್ ಹೋಗುವ ಅವಕಾಶವನ್ನು ಕಳೆದುಕೊಳ್ಳಲು ನಾವಂತೂ ಸಿದ್ಧರಿರಲಿಲ್ಲ. ಒಪ್ಪಿಯೇ ಬಿಟ್ಟೆವು. ಮಂಜಣ್ಣ, ‘ನಾನು ಮೊದಲು ಹೋಗಿ ಬರಗೂರಿನಲ್ಲಿ ತೋಟಕ್ಕೆ ನೀರು ಬಿಡುತ್ತಿರುತ್ತೇನೆ. ನೀವು ಅಲ್ಲಿಯವರೆಗೆ ತಳ್ಳಿಕೊಂಡು ಬನ್ನಿ. ಅಲ್ಲಿಂದ ಮುಂದಕ್ಕೆ ನಾನೂ ಬರುತ್ತೇನೆ’ ಎಂದು ಹೇಳಿದ.
ಒಂದು ಭಾನುವಾರ ಮಂಜಣ್ಣ ಅದನ್ನು ಹೇಗೆ ತಳ್ಳಿಕೊಂಡು ಬರಬೇಕೆಂದು, ಇಳಿಜಾರಿನಲ್ಲಿ ಹೇಗೆ ಕ್ಲಚ್ ಹಿಡಿದು ಓಡಿಸಿಕೊಂಡು ಬರಬೇಕೆಂದು ನಾಲ್ಕೈದು ಬಾರಿ ಹೇಳಿ, ರಿಟರ್ನ್ ಬಸ್ ಹತ್ತಿದ. ಹಿಂದೆಯೇ ನಾವು ಮೋಟಾರ್ ಸೈಕಲ್‌ನ್ನು ಹತ್ತಿದೆವು. ಕುಂದೂರುಮಠದಿಂದ ಕುಂದೂರು ಕಡೆಗೆ ಪ್ರಾರಂಭದಲ್ಲಿಯೇ ದೊಡ್ಡ ಇಳಿಜಾರು ಇದ್ದುದರಿಂದ ನಮಗೆ ಅನುಕೂಲವೇ ಆಗಿತ್ತು. ಗಾಡಿ ಓಡಿಸುತ್ತಿದ್ದ ನಾನು, ಕ್ಲಚ್ ಹಿಡಿದು, ಯಾವುದಕ್ಕೂ ಇರಲಿ ಎಂದು ಬಲಗೈಯಲ್ಲಿ ಬ್ರೇಕನ್ನು ಸ್ವಲ್ಪ ಹಿಡಿದುಕೊಂಡು ಓಡಿಸುತ್ತಿದ್ದೆ. ಸೈಕಲ್‌ನ್ನು ಕೈಬಿಟ್ಟುಕೊಂಡೆಲ್ಲಾ ಓಡಿಸುತ್ತಾ, ಅದರ ಮೇಲೆ ನಾನಾ ವರಸೆಗಳನ್ನು ಮಾಡುತ್ತಿದ್ದ ನನಗೆ ನಿರ್ಜೀವವಾಗಿ ಓಡುತ್ತಿದ್ದ ಮೋಟಾರ್ ಸೈಕಲ್ ಹೊಸದೆಂದು ಅನ್ನಿಸಲೇ ಇಲ್ಲ.
ಇನ್ನೇನು ಇಳಿಜಾರು ಮುಗಿಯಬೇಕು ಎನ್ನುವಷ್ಟರಲ್ಲಿ ಯಾವುದೋ ಜ್ಞಾನದಲ್ಲಿ ಎಡಗೈಯಲ್ಲಿ ಹಿಡಿದಿದ್ದ ಕ್ಲಚ್‌ನ್ನು ಬಿಟ್ಟುಬಿಟ್ಟೆ. ಆ ಕ್ಷಣ ಮೋಟಾರ್ ಸೈಕಲ್ ವಿಚಿತ್ರ ಶಬ್ದ ಮಾಡುತ್ತಾ, ಮುಗ್ಗರಿಸುತ್ತಾ ಸ್ಟಾರ್ಟ್ ಆಗೇಬಿಟ್ಟಿತು! ನನಗೆ ಗಾಬರಿ, ಸಂತೋಷ ಎಲ್ಲವೂ ಆಯಿತು. ಕಷ್ಟಪಟ್ಟು ಬೀಳದಂತೆ ಬ್ಯಾಲೆನ್ಸ್ ಮಾಡುತ್ತಾ ಗಾಡಿ ಓಡಿಸತೊಡಗಿದೆ. ಬಹುಶಃ ಅದರ ಪ್ಲಗ್‌ನಲ್ಲೋ ಫಿಲ್ಟರ್‌ನಲ್ಲೋ ಏನೋ ತೊಂದರೆ ಇದ್ದಿರಬೇಕು. ಅದಕ್ಕೆ ಅದು ಮಂಜಣ್ಣ ಸ್ಟಾರ್ಟ್ ಮಾಡಿದಾಗ ಸ್ಟಾರ್ಟ್ ಆಗದೆ, ತುಂಬಾ ವೇಗವಾಗಿ ಬರುತ್ತಾ ಒಂದೇ ಬಾರಿ ಕ್ಲಚ್ ಬಿಟ್ಟಿದ್ದರಿಂದ ಹೇಗೋ ಸ್ಟಾರ್ಟ್ ಆಗಿರಬೇಕು. ಕುಂದೂರನ್ನು ದಾಟಿ ಮುಂದೆ ಬರುವವರೆಗೆ ನಾವಿಬ್ಬರೂ ಮಾತೇ ಆಡಿರಲಿಲ್ಲ. ಅಲ್ಲಿಯವರೆಗೆ ನಾನು ಗಾಡಿ ಓಡಿಸುವುದನ್ನು ಭಯದಿಂದ ನೋಡುತ್ತಾ ಭದ್ರವಾಗಿ ನನ್ನನ್ನು ಹಿಡಿದು ಕುಳಿತಿದ್ದ ವೆಂಕಟೇಶ ನಿಧಾನವಾಗಿ, ‘ನಾನೂ ಓಡಿಸುತ್ತೇನೆ’ ಎಂದು ರಾಗ ತೆಗೆದ.
ಅವನಿಗೆ ಮೋಟಾರ್ ಸೈಕಲ್ ಓಡಿಸುವುದು ಇಷ್ಟೊಂದು ಸುಲಭವೇ ಅನ್ನಿಸಿರಬೇಕು! ಆದರೆ ಅಷ್ಟು ಬೇಗ ನಾನು ಅವನಿಗೆ ಮೋಟರ್ ಸೈಕಲ್ಲನ್ನು ಕೊಡಲು ಸಿದ್ಧನಿರಲಿಲ್ಲ. ನಾನು ‘ಪೆಟ್ರೊಲ್ ಇದೆಯೋ ಇಲ್ಲವೋ. ಈಗ ನಿಲ್ಲಿಸಿದರೆ ಮತ್ತೆ ಸ್ಟಾರ್ಟ್ ಆಗದಿದ್ದರೆ ಮತ್ತೆ ನೀನೆ ತಳ್ಳಬೇಕಾಗುತ್ತೆ’ ಎಂದಿದ್ದರಿಂದ ತೆಪ್ಪಗೆ ಕುಳಿತುಕೊಂಡ. ನಾನು ರಾಜಠೀವಿಯಿಂದ ಗಾಡಿ ಓಡಿಸುತ್ತಾ ಮುಖ್ಯರಸ್ತೆಗೆ ಬಂದೆ. ಪೆಟ್ರೊಲ್ ಟ್ಯಾಂಕ್ ರಸ್ಟ್ ಹಿಡಿಯುತ್ತದೆ ಎಂದು ಪೆಟ್ರೊಲ್ ಪೂರಾ ಡ್ರೈ ಆಗಲು ಮಂಜಣ್ಣ ಬಿಟ್ಟಿರಲಿಲ್ಲ. ಅರ್ಧ ಲೀಟರಿನಷ್ಟು ಪೆಟ್ರೊಲ್ ಇತ್ತೆಂದು ಕಾಣುತ್ತದೆ. ಪೆಟ್ರೊಲ್ ಖಾಲಿಯಾಗಿ ಗಾಡಿ ನಿಲ್ಲುವ ಯಾವ ಸೂಚನೆಯೂ ಬಾರದಿದ್ದಾಗ ವೆಂಕಟೇಶ ಮತ್ತೆ ಮತ್ತೆ ರಾಗ ತೆಗೆಯುತ್ತಿದ್ದ. ನಾನು ‘ಸ್ಟಾರ್ಟ್ ಆಗದಿದ್ದರೆ, ನೀನೇ ತಳ್ಳುವುದಾದರೆ ಹೇಳು. ನಿಲ್ಲಿಸುತ್ತೇನೆ’ ಎಂದು ಹೆದರಿಸುತ್ತಲೇ ಇದ್ದೆ.
ಅಂತೂ ಇಂತು ಬರಗೂರಿನವರೆಗೆ ಬಂದಾಗ, ಗಾಡಿ ಕೆಟ್ಟ ಶಬ್ದ ಮಾಡುತ್ತಾ, ಮುಗ್ಗುರಿಸುತ್ತಾ ನಿಂತು ಹೋಯಿತು. ನಾವು ಗಾಡಿಯನ್ನು ಓಡಿಸಿಕೊಂಡು ಬಂದಿದ್ದನ್ನು ಕೇಳಿ ಮಂಜಣ್ಣನಿಗೆ ತುಂಬಾನೆ ಖುಷಿಯಾಯಿತು. ಅದೇ ಖುಷಿಯಲ್ಲಿ, ಊರಿನಲ್ಲಿ ಬೈಕಿದ್ದ ಇನ್ನಾರನ್ನೋ ಹುಡುಕಿ ಒಂದಷ್ಟು ಪೆಟ್ರೊಲನ್ನು ಸಂಪಾದಿಸಿಬಿಟ್ಟ. ಗಾಡಿಗೆ ಪೆಟ್ರೊಲ್ ತುಂಬಿಸಿ, ಸ್ಟಾರ್ಟ್ ಮಾಡಿದರೆ ಅದು ಮುಷ್ಕರ ಕುಳಿತವರಂತೆ ಮೌನವಾಗಿಬಿಟ್ಟಿತ್ತು. ಏನೆಲ್ಲಾ ಸರ್ಕಸ್ ಮಾಡಿದರೂ ಅದು ಸ್ಟಾರ್ಟ್ ಆಗಲಿಲ್ಲ. ಮಂಜಣ್ಣನನ್ನು ಗಾಡಿಯಲ್ಲಿ ಕುಳ್ಳಿರಿಸಿ ನಾವಿಬ್ಬರು ದೂಡಿದರೂ ಸ್ಟಾರ್ಟ್ ಆಗಲಿಲ್ಲ. ಕೊನೆಗೆ ಮಂಜಣ್ಣ ‘ಮಗಾ ನಿನ್ನ ಕೈಗುಣ ಚೆನ್ನಾಗಿರಂಗೆ ಕಾಣುತ್ತೆ. ನೀನೆ ಕುಳಿತು ಓಡ್ಸು, ನಾವೇ ತಳ್ತೀವಿ’ ಎಂದು ನನಗೆ ಗಾಡಿ ಓಡಿಸಲು ಕೊಟ್ಟ. ಆದರೆ ನನ್ನ ಕೈಗುಣವೂ ಚೆನ್ನಾಗಿರಲಿಲ್ಲ! ಅದು ಸ್ಟಾರ್ಟ್ ಆಗಲಿಲ್ಲ.
ಕೊನೆಗೆ ಅದನ್ನು ತಳ್ಳಿಕೊಂಡು ಅಲ್ಲಿಂದ ಒಂದು ಕಿಲೋಮೀಟರ್ ದೂರವಿರುವ ಬರಗೂರ್ ಹ್ಯಾಂಡ್‌ಪೋಸ್ಟ್ ಬಳಿಗೆ ಬಂದೆವು. ಅಲ್ಲಿ ಸೈಕಲ್ ಶಾಪ್ ಇಟ್ಟುಕೊಂಡಿದ್ದ ಸಾಬರು ‘ನಾನೇ ರಿಪೇರಿ ಮಾಡುತ್ತೇನೆ’ ಎಂದು, ಅದರ ಫ್ಲಗ್ ಎಲ್ಲಾ ಬಿಚ್ಚಿ ಕ್ಲೀನ್ ಮಾಡಿದ. ನಂತರ ಸರಾಗವಾಗಿ ಅದು ಸ್ಟಾರ್ಟ್ ಆಯಿತು. ಆ ಸಾಬರು ‘ಇನ್ನೇನು ಭಯವಿಲ್ಲ. ಬೇರೆ ರಿಪೇರಿಯು ಬೇಕಿಲ್ಲ. ಆಗಾಗ ಬಂದು ಫ್ಲಗ್ ಕ್ಲೀನ್ ಮಾಡಿಸಿಕೊಳ್ಳಿ’ ಎಂದು ಉಚಿತವಾಗಿ ಸಲಹೆ ಕೊಟ್ಟ. ಮಂಜಣ್ಣ ನಮಗೆ ಮಾತು ಕೊಟಿದ್ದಂತೆ, ಚನ್ನರಾಯಪಟ್ಟಣದವರೆಗೂ ನಮ್ಮನ್ನು ತ್ರಿಬಲ್ ರೈಡ್ ಮಾಡುತ್ತಾ ಕರೆದುಕೊಂಡು ಬಂದು ಮಿಲಿಟರಿ ಹೋಟೆಲ್ಲಿನಲ್ಲಿ ಊಟ ಕೊಡಿಸಿದ. ವಾಪಸ್ ಬರುವಾಗ ತ್ರಿಬಲ್ ರೈಡ್ ಮಾಡುತ್ತಾ ಬಂದೆವು. ಇಳಿಜಾರಿನಲ್ಲಿ, ಹಾಗೂ ಮಟ್ಟವಾದ ರಸ್ತೆಯಲ್ಲಿ ಹೇಗೋ ಹೋಗುತ್ತಿದ್ದ ನಾವು ಏರು ರಸ್ತೆ ಬಂದಾಗ ಮಾತ್ರ, ಇಳಿದು ಮಂಜಣ್ಣನ ಹಿಂದೆ ಓಡಬೇಕಾಗಿತ್ತು. ಅಂತೂ ಕೊನೆಗೆ ನಾವು ಕುಂದೂರುಮಠ ತಲುಪಿದಾಗ ಸಂಜೆಯ ಸೂರ್ಯ ಮೇಲಿನ ಸುಬ್ಬಪ್ಪನ ಗುಡಿಯ ಹಿಂದೆ ಮುಳುಗುವುದರಲ್ಲಿದ್ದ!

{ಈ ಕಂತಿನೊಂದಿಗೆ 'ನನ್ನ ಹೈಸ್ಕೂಲು ದಿನಗಳು' ಪುಸ್ತಕದ ಇ-ರೂಪ ಮುಗಿಯಲಿದೆ. ಮುಂದೆ ಈ ಪುಸ್ತಕವನ್ನು ಕುರಿತು ಮೂವರು ಲೇಖಕರು ಬರೆದ ಬರಹಗಳನ್ನು ಮೂರು ಕಂತಿನಲ್ಲಿ ಪ್ರಕಟಿಸುತ್ತೇನೆ. ಥಟ್ ಅಂತ ಹೇಳಿ ಕಾರ್ಯಕ್ರಮದ ಡಾ.ನಾ. ಸೋಮೇಶ್ವರ ಅವರು ತಮ್ಮ ಯಕ್ಷಪ್ರಶ್ನೆಯಲ್ಲಿ ಹೈಸ್ಕೂಲು ದಿನಗಳ ಸವಿ ಸವಿ ನೆನಪು…  ಎಂದು ಬರೆದಿದ್ದಾರೆ. ಒಮ್ಮೆ ಭೇಟಿಕೊಡಿ. ನಿಮ್ಮ ಸಹಕಾರಕ್ಕಾಗಿ ಧನ್ಯವಾದಗಳು}

ಚಿತ್ರಕೃಪೆ : ಅಂತರಜಾಲ

Friday, October 09, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ -26

ಮಂಜಣ್ಣನ ಹೋಟೆಲ್
ಕುಂದೂರುಮಠದಲ್ಲಿ ಮಂಜಣ್ಣನ ಹೋಟೆಲ್ ಒಂದು ಆಡುಂಬೊಲವಿದ್ದಂತೆ! ಮಂಜಣ್ಣ ತನ್ನ ಮೊದಲನೆ ಹೆಂಡತಿಯನ್ನು ಊರಿನಲ್ಲಿಯೇ ಬಿಟ್ಟು ಬಂದಿದ್ದು ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದವನು. ನಂತರ ಅಲ್ಲಿ ಕೆಲಸಕ್ಕೆ ಬರುತ್ತಿದ್ದ ಇನ್ನೊಂದು ಹುಡುಗಿಯನ್ನೂ ಮದುವೆಯಾಗಿ ಇಬ್ಬರ ಹೆಂಡಿರ ಮುದ್ದಿನ ಗಂಡನಾಗಿದ್ದವನು. ಎರಡನೇ ಮದುವೆಯಾದ ಮೇಲೆ ಮೇಸ್ತ್ರಿ ಕೆಲಸಕ್ಕೆ ಗುಡ್‌ಬೈ ಹೇಳಿ, ಹೋಟೆಲ್ ಶುರುಮಾಡಿದ್ದ. ಮೊದಲ ಹೆಂಡತಿ ಊರಿನಲ್ಲಿದ್ದರೆ, ಎರಡನೆಯ ಹೆಂಡತಿಯ ಜೊತೆಯಲ್ಲಿ ಈತ ಹೋಟೆಲ್ ನಡೆಸುತ್ತಿದ್ದ. ಆತನ ಹೋಟೆಲ್ ಎಂದರೆ ಒಂದು ಗುಡಿಸಲು, ಒಂದೆರಡು ಕುರ್ಚಿಗಳು, ನಾಲ್ಕೈದು ಪಾತ್ರೆಗಳು, ಒಂದು ಸ್ಟವ್ ಮಾತ್ರ. ಅಷ್ಟರಲ್ಲೇ ವ್ಯಾಪಾರ ಶುರುಮಾಡಿ, ಒಂದೆರಡು ವರ್ಷದಲ್ಲಿ ತಕ್ಕಮಟ್ಟಿಗೆ ಅಭಿವೃದ್ಧಿಯನ್ನೂ ಹೊಂದಿದ್ದ.
ಕುಂದೂರುಮಠಕ್ಕೆ ಬರುತ್ತಿದ್ದವರಲ್ಲಿ ಹೆಚ್ಚಿನವರು ಮೆಳೆಯಮ್ಮನ ಭಕ್ತರಾಗಿದ್ದರಿಂದಲೂ ಹಾಗೆ ಬರುವವರು ಕುರಿ, ಕೋಳಿ ಬಲಿ ಕೊಟ್ಟು ಅಡುಗೆ ಮಾಡಿ, ಊಟ ಮಾಡಿ ಹೋಗುವುದಕ್ಕೆಂದೇ ಬರುವವರಾಗಿದ್ದರಿಂದಲೂ ಆತನ ಹೋಟೆಲ್ಲಿಗೆ ಊಟ ತಿಂಡಿಗೆ ಬರುತ್ತಿದ್ದವರು ತುಂಬಾ ಕಡಿಮೆ. ಬೆಳಿಗ್ಗೆ ವೇಳೆ ಬರುತ್ತಿದ್ದ ರಿಟರ್ನ್ ಬಸ್ಸಿನ ಕಂಡಕ್ಟರ್ ಮತ್ತು ಡ್ರೈವರ್ ಮಾತ್ರ ಆತನ ಪರ್ಮನೆಂಟ್ ಗಿರಾಕಿಗಳು. ಬೆಳಿಗ್ಗೆ ಹೊತ್ತು ಮಾತ್ರ ಸ್ವಲ್ಪ ಇಡ್ಲಿ, ಉಪ್ಪಿಟ್ಟು ಮಾಡುತ್ತಿದ್ದ. ಮಧ್ಯಾಹ್ನ ಚಿತ್ರಾನ್ನ ಮಾತ್ರ ಆತನ ಹೋಟೆಲ್ಲಿನಲ್ಲಿರುತ್ತಿದ್ದ ತಿಂಡಿಯಾಗಿರುತ್ತಿತ್ತು. ಇನ್ನುಳಿದಂತೆ ಟೀ ಮತ್ತು ಬೋಂಡಾಕ್ಕೆ ಮಾತ್ರ ಹೆಚ್ಚಿನ ಬೇಡಿಕೆ ಇತ್ತು. ಆತನ ಹೋಟೆಲ್ಲಿನ ಹಿಂದೆ ಕೂಗಳತೆಯ ದೂರದಲ್ಲಿದ್ದ ಸೇಂದಿ ಮತ್ತು ಸಾರಾಯಿ ಅಂಗಡಿಗೆ ಹೋಗುವವರೆಲ್ಲಾ ಮಂಜಣ್ಣನ ಹೋಟೆಲ್ಲಿನ ಮುಂದೆಯೇ ಹೋಗಬೇಕಾಗಿತ್ತು. ಹಾಗೆ ಹೋಗುವವರೆಲ್ಲಾ ಸಾಕಷ್ಟು ಬೋಂಡಾಗಳನ್ನು ಕಟ್ಟಿಸಿಕೊಂಡೇ ಹೋಗುತ್ತಿದ್ದರು. ಸ್ವತಃ ಮಂಜಣ್ಣನೇ ಸ್ವಲ್ಪ ದಿನ ಬ್ಲಾಕ್‌ನಲ್ಲಿ ಬೀರು, ಬ್ರ್ಯಾಂಡಿಯನ್ನು ಮಾರುತ್ತಿದ್ದ. ಒಂದು ಮಂಕರಿಯಲ್ಲಿ ಹೂವು ಹಣ್ಣು ಇಟ್ಟುಕೊಂಡು ಮಾರಲು ಬರುತ್ತಿದ್ದ, ಪಕ್ಕದ ಹಳ್ಳಿಯ ಹೆಂಗಸೊಬ್ಬಳು, ಮಂಕರಿಯ ಒಳಗೆ ಬೀರು ಬ್ರ್ಯಾ೦ಡಿಯನ್ನು ತಂದು ಮಾರುತ್ತಿದ್ದಳು! ಅವಳು ಮಂಜಣ್ಣನ ಕಳ್ಳವ್ಯಾಪಾರವನ್ನು ಬಂದ್ ಮಾಡಿಸುವಲ್ಲಿ ಅದ್ಹೇಗೋ ಯಶಸ್ವಿಯಾಗಿದ್ದಳು. ಆ ಕಾರಣಕ್ಕೆ ಅವಳನ್ನು ನೋಡಿದರೆ ಮಂಜಣ್ಣ ಬಾಯಿಗೆ ಬಂದಂತೆ ಬಯ್ಯುತ್ತಿದ್ದ!
ಕೆಲಸವಿಲ್ಲದೆ ಅಲೆಯುವವರಿಗೆ, ಹರಟೆ ಹೊಡೆಯುತ್ತಾ ಕಾಲಕಳೆಯಲಿಚ್ಚಿಸುವವರಿಗೆ, ಬಸ್ ಕಾಯುವವರಿಗೆ ಮಂಜಣ್ಣನ ಹೊಟೆಲ್ ಅನುಕೂಲವಾದ ಜಾಗದಲ್ಲಿತ್ತು. ಜಾತ್ರೆಯ ದಿನಗಳಲ್ಲಿ ಒಂದು ತಿಂಗಳ ಕಾಲ ಆತನ ಹೋಟೆಲ್ಲಿಗೆ ಮಾತ್ರ ತುಂಬಾ ಡಿಮ್ಯಾಂಡ್ ಇತ್ತು. ಆಗ ಕೆಲಸ ಮಾಡುವುದಕ್ಕೆಂದೇ ಒಂದಿಬ್ಬರನ್ನು ಬೇರೆಡೆಯಿಂದ ಕರೆದು ತರುತ್ತಿದ್ದ. ಬೇರೆ ಬೇರೆ ತಿಂಡಿಯನ್ನೂ ಮಾಡುತ್ತಿದ್ದ. ಕೆಲವೊಮ್ಮೆ ಕೆಲವು ಹಾಸ್ಟೆಲ್ ಹುಡುಗರೂ ಸಪ್ಲೇಯರ್ ಕೆಲಸ ಮಾಡಿದ್ದುಂಟು. ಅದು ಚಿಕ್ಕಯ್ಯನೋರ ತನಕ ಹೋಗಿ, ಅವರು ಮಂಜಣ್ಣಗೆ ಬಯ್ದು ‘ಹಾಸ್ಟೆಲ್ ಹುಡುಗರ ಕೈಯಲ್ಲಿ ಕೆಲಸ ಮಾಡಿಸಬೇಡ’ ಎಂದು ಹೇಳಿದ್ದರು.
ಮಂಜಣ್ಣನ ಹೊಟೆಲ್ ಹಾಸ್ಟೆಲ್ಲಿನ ಎಲ್ಲಾ ಹುಡುಗರಿಗೆ ಅತ್ಯಂತ ಆಪ್ತವಾದ ಸ್ಥಳ. ಕೈಯಲ್ಲಿ ದುಡ್ಡಿದ್ದಾಗ, ಇಡ್ಲಿ-ವಡೆ ತಿನ್ನುತ್ತಿದ್ದುದ್ದರಿಂದ ಅವನಿಗೇನೂ ಅವರಿಂದ ತೊಂದರೆಯಾಗುತ್ತಿರಲಿಲ್ಲ. ಹೊತ್ತು ಕಳೆಯಲು ಅಲ್ಲಿ ರೆಡಿಯೋ ಇತ್ತು. ಆಟ ಆಡಿಸಲು ಮಂಜಣ್ಣನ ಎರಡು ವರ್ಷದ ಮಗುವಿತ್ತು. ಬಂದು ಹೋಗುವವರನ್ನು ನೋಡುತ್ತಾ ರೇಡಿಯೋ ಕೇಳುತ್ತಾ ಕಾಲ ಕಳೆಯುವ ಆಸೆ ಹಾಸ್ಟೆಲ್ ಹುಡುಗರಿಗೆ ತುಸು ಹೆಚ್ಚಾಗಿಯೇ ಇತ್ತು. ಅದಕ್ಕಾಗಿ ಹೊತ್ತು ಗೊತ್ತಿಲ್ಲದೆ ಆತನ ಹೋಟೆಲ್ಲಿನಲ್ಲಿ ಜಮಾಯಿಸಿಬಿಡುತ್ತಿದ್ದರು.
ಒಮ್ಮೆ ಸಂಜೆಯ ವೇಳೆ ಹಾಸ್ಟೆಲ್ಲಿಗೆ ಇನ್‌ಸ್ಪೆಕ್ಷನ್‌ಗಾಗಿ ಬಿ.ಇ.ಒ. ಬಂದು ಹುಡುಗರೆಲ್ಲಿ ಎಂದು ಕೇಳಿದಾಗ ಮೊದಲಿದ್ದ ಒಬ್ಬ ವಾರ್ಡನ್‌ಗೆ ಏನು ಹೇಳಬೇಕೆಂದು ಗೊತ್ತಾಗದೇ ತಬ್ಬಿಬ್ಬಾಗಿದ್ದಾರೆ. ಆಗ ಧರ್ಮಣ್ಣನೇ, ‘ಇಂದು ದೇವಾಸ್ಥಾನದಲ್ಲಿ ವಿಶೇಷ ಪೂಜೆಯೇನೋ ಇತ್ತು ಅದಕ್ಕೆ ಹೋಗಿದ್ದಾರೆ. ಇನ್ನೇನು ಬಂದುಬಿಡುತ್ತಾರೆ’ ಎಂದು ಹೇಳಿ, ಅಲ್ಲಿದ್ದ ಒಬ್ಬ ಹುಡುಗನನ್ನು ಗುಟ್ಟಾಗಿ ಮಂಜಣ್ಣನ ಹೋಟೆಲ್ಲಿನ ಹತ್ತಿರ ಇದ್ದವರನ್ನೆಲ್ಲಾ ಕರೆದುಕೊಂಡು ಬರಲು ಕಳುಹಿಸಿದ್ದ. ವಾರ್ಡನ್ ಮಂಜಣ್ಣನ ಮೇಲೆ ರೇಗಿ ‘ಅಲ್ಲಿ ಹುಡುಗರನ್ನು ಸೇರಿಸಬೇಡಿ’ ಎಂದು ಹೇಳಿದ್ದಕ್ಕೆ ರೇಗಿದ್ದ ಮಂಜಣ್ಣ ‘ಅಯ್ಯೋ ಹೋಗಯ್ಯ, ಮೊದಲು ಹುಡುಗರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊ. ಅವರನ್ನು ಕಾಯುತ್ತಾ ಕುಳಿತುಕೊಳ್ಳುವುದಕ್ಕೆ ನನಗೇನು ಬೇರೆ ಕೆಲಸವಿಲ್ಲವೆ’ ಎಂದಿದ್ದ. ಆದರೆ ಮಂಜಣ್ಣ ಬೇರೆಯವರ ಬಳಿ ಹೇಳಿದಂತೆ, ‘ಹುಡುಗರು ಹೋಟೆಲ್ಲಿನಲ್ಲಿ ಇದ್ದರೆ, ಯಾವಾಗಲೂ ಬಿಜಿಯಾಗಿರುವ ಹೋಟೆಲ್ ಎಂದು ಜನ ಭಾವಿಸುತ್ತಾರೆ; ಬ್ಯುಸಿನೆಸ್ ಚೆನ್ನಾಗಿ ಆಗುತ್ತದೆ’ ಎಂಬುದು ಆತನ ಲೆಕ್ಕಾಚಾರ.
ಈ ಮಂಜಣ್ಣನ ಹೋಟೆಲ್ ಕೇವಲ ಕಾಲ ಕಳೆಯುವ ತಾಣವಾಗಿದ್ದರೂ, ಒಂದು ರೀತಿಯಲ್ಲಿ ಮನರಂಜನಾ ಸ್ಥಳವಾಗಿತ್ತು! ನೋಡಿ. ಒಮ್ಮೆ ಮಾತು ಮಾತಿಗೆ ಬೆಳೆದು, ಅದು ಎಲ್ಲಿಗೋ ತಿರುಗಿ, ‘ಎಣ್ಣೆಯಲ್ಲಿ ಬೇಯುತ್ತಿರುವ ಬೋಂಡವನ್ನು ಬರಿಗೈಯಿಂದ ತೆಗೆದುಕೊಂಡರೆ ಆ ಬೋಂಡ ತೆಗೆದುಕೊಂಡವನಿಗೆ ಫ್ರೀ’ ಎಂದು ಮಂಜಣ್ಣ ಸವಾಲು ಹಾಕಿದ. ಆಗ ನಮ್ಮ ಎಂ.ಕೆ.ಸ್ವಾಮಿ ಲೀಲಾಜಾಲವಾಗಿ, ಕುದಿಯುತ್ತಿರುವ ಎಣ್ಣೆಯ ಬಾಂಡಲೆಯಲ್ಲಿ ಸ್ವಲ್ಪ ದಡಕ್ಕೆ ಬಂದಿದ್ದ ಬೋಂಡಾವನ್ನು ಬರಿಗೈಯಿಂದ ಎತ್ತಿ ತನ್ನದಾಗಿಸಿಕೊಂಡ. ಅದನ್ನು ಅನುಸರಿಸಿ ಇನ್ನೊಂದಿಬ್ಬರೂ ಪ್ರಯತ್ನ ಪಟ್ಟು, ಅಲ್ಪ ಸ್ವಲ್ಪ ಕೈಸುಟ್ಟುಕೊಂಡರೂ ಬೋಂಡಾ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಸ್ವಾಮಿಯಂತೂ ಮೂರ‍್ನಾಲ್ಕು ಬೋಂಡಾಗಳನ್ನು ಕಬಳಿಸಿದ್ದ. ಇಷ್ಟಕ್ಕೆ ಹೆದರಿದ ಮಂಜಣ್ಣ ಆ ಸವಾಲನ್ನು ಹಿಂತೆಗೆದುಕೊಳ್ಳಬೇಕಾಯಿತು.
ಈ ಮಂಜಣ್ಣನದು ಒಂದು ಲಡಕಾಸು ಸೈಕಲ್ ಇತ್ತು. ಅದನ್ನು ಹತ್ತಿ ಓಡಾಡಿಸುವುದೆಂದರೆ ನಮಗೆಲ್ಲಾ ಭಾರಿ ಮಜ. ಅದರಿಂದ ನಮಗೆ ಇನ್ನೊಂದು ಉಪಯೋಗವೂ ಇತ್ತು. ಬೇಸಿಗೆಯಲ್ಲಿ ಹಾಸ್ಟೆಲ್ಲಿಗೆ ಬೇಕಿದ್ದ ನೀರನ್ನು ಮೆಳೆಯಮ್ಮನ ಗುಡಿಯ ಬಳಿಯಿದ್ದ ಬೋರ್‌ವೆಲ್‌ನಿಂದ ತರಬೇಕಾಗಿತ್ತು. ಆಗೆಲ್ಲಾ, ದಿನಾ ಹತ್ತು ಜನ ಹುಡುಗರು ನೀರು ತಂದು ತುಂಬಿಸಬೇಕಾಗಿತ್ತು. ಅದಕ್ಕೆ ಮಂಜಣ್ಣ ತನ್ನ ಸೈಕಲ್ಲನ್ನು ಫ್ರೀಯಾಗಿ ಒದಗಿಸುತ್ತಿದ್ದ. ‘ಪಾಪ. ಎಳೆಯ ಹುಡುಗರು. ಅವರ ಕೈಯಲ್ಲಿ ನೀರು ಹೊರಿಸುತ್ತಾರೆ. ಸೈಕಲ್ ಮೇಲೆ ತಂದುಕೊಳ್ಳಲಿ ಬಿಡಿ’ ಎಂದು ಕೇಳಿದವರ ಹತ್ತಿರ ಹೇಳುತ್ತಿದ್ದ. ಅದರಲ್ಲಿ ಆತನ ಸ್ವಾರ್ಥವೂ ಇತ್ತು. ಹಾಗೆ ನೀರುತರುತ್ತಿದ್ದ ಹುಡುಗರ ಕಡೆಯಿಂದ ತನ್ನ ಹೋಟೆಲ್ಲಿಗೆ ಬೇಕಾದಷ್ಟು ನೀರನ್ನು ತರಿಸಿಕೊಳ್ಳುತ್ತಿದ್ದ! ಸ್ವತಃ ತಾನೇ ತನ್ನ ಸೈಕಲ್‌ನ್ನು ಬಿಡಿಬಿಡಿಯಾಗಿ ಬಿಚ್ಚಿ ರಿಪೇರಿ ಮಾಡಿಕೊಳ್ಳುತ್ತಿದ್ದ ಆತನಿಗೆ ಅದನ್ನು ರಿಪೇರಿ ಮಾಡಿಸುವ, ಅದಕ್ಕೆ ಖರ್ಚು ಮಾಡುವ ಭಯವಿರಲಿಲ್ಲ.

ಮುಂದಿನವಾರ ಮಂಜಣ್ಣನ ಹಿರೋಮೆಜೆಸ್ಟಿಕ್ ಸವಾರಿ! (ನನ್ನ ಹೈಸ್ಕೂಲು ದಿನಗಳು ಪುಸ್ತಕದ ಕೊನೆಯ ಕಂತು)

ಚಂದನ ವಾಹಿನಿ 'ಥಟ್ ಅಂತ ಹೇಳಿ' ಕಾರ್ಯಕ್ರಮದ ಡಾ.ನಾ.ಸೋಮೇಶ್ವರ ಅವರು 'ನನ್ನ ಹೈಸ್ಕೂಲು ದಿನಗಳು' ಪುಸ್ತಕದ ಅವಲೋಕನವನ್ನು ತಮ್ಮ ಯಕ್ಷಪ್ರಶ್ನೆಯಲ್ಲಿ ಮಾಡಿರುತ್ತಾರೆ. ಅದನ್ನು ಓದಲು   ಹೈಸ್ಕೂಲು ದಿನಗಳ ಸವಿ ಸವಿ ನೆನಪು… ಕ್ಲಿಕ್ಕಿಸಿ.