Monday, February 08, 2010

T20 = ತೇಜಸ್ವಿ ಟ್ವೆಂಟಿ : ಸ್ವರೂಪ ಪಂಚಿಂಗ್ ಲೈನ್ಸ್

T20 = ತೇಜಸ್ವಿ ಟ್ವೆಂಟಿ! ಮಾಲಿಕೆಯಲ್ಲಿ ಈ ಬಾರಿ ಅವರ ‘ಸ್ವರೂಪ’ ಕಿರುಕಾದಂಬರಿಯ ಪಂಚಿಂಗ್ ಲೈನ್‌ಗಳನ್ನು ಆರಿಸಿದ್ದೇನೆ.
ಈಗಾಗಲೇ ‘ಸ್ವರೂಪ’ವನ್ನು ಓದದವರಿಗೆ ಈ ಸಾಲುಗಳನ್ನು ಓದಿ ಮೂಲಕೃತಿಯನ್ನು ಓದಬೇಕು ಎನ್ನಿಸಿದರೆ ನಾನು ಧನ್ಯ. ಈಗಾಗಲೇ ‘ಸ್ವರೂಪ’ವನ್ನು ಓದಿದವರೂ ಮತ್ತೊಮ್ಮೆ ಓದುವಂತಾದರೆ ಡಬಲ್ ಖುಷಿ ನನ್ನದು.
ಪುನರಾವರ್ತನೆಯಾದರೂ ಓದುಗರಲ್ಲಿ ಈ ವಿನಂತಿಯನ್ನು ನಾನು ಮಾಡಿಕೊಳ್ಳಲೇ ಬೇಕಾಗಿದೆ. ಇಲ್ಲಿನ ಎಲ್ಲಾ ವಾಕ್ಯಗಳನ್ನು ಮೂಲಕೃತಿಯಿಂದ ಬೇರ್ಪಡಿಸಿ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬಾರದು. ಕೆಲವೊಂದು ವಾಕ್ಯಗಳನ್ನು ಪ್ರತ್ಯೇಕವಾಗಿ ಅರ್ಥೈಸಿಕೊಂಡಾಗ ‘ಇದೇನು ಹೀಗೆ?’ ಎಂಬ ಪ್ರಶ್ನೆಗಳು ಎದುರಾಗುತ್ತವೆ. ಆಗ ನಮಗೆ ತೋಚಿದ ಸಮಾಧಾನವನ್ನು ನಾವು ಆರೋಪಿಸಿಕೊಂಡು ಇನ್ನಷ್ಟು ಅನರ್ಥ ಮಾಡಿಕೊಳ್ಳುತ್ತೇವೆ. ಆದ್ದರಿಂದ, ಅಂತಹ ಸಂದಿಗ್ಧತೆ ತಲೆದೋರಿದಲ್ಲಿ, ಮೂಲಕೃತಿಯನ್ನು ಓದಿ ಅದರ ಹಿನ್ನೆಲೆಯಲ್ಲಿಯೇ ಅರ್ಥೈಸಿಕೊಳ್ಳಬೇಕು.

1. ಈ ಕೋರ್ಟುಕಚೇರಿಗಳಿಗೆ ತಿರುಗಾಡಿ ನೂರೆಂಟು ಕೇಸುಗಳನ್ನು ಮಾಡಿಕೊಳ್ಳುವ ಹೇಸಿಗೆ ಲೆಕ್ಕಾಚಾರ ಯಾರಿಗೆ ಬೇಕು?
2. ಆರ್ಥಿಕದಾಸ್ಯದಲ್ಲಿ ಆತ್ಮಸ್ವಾತಂತ್ರ್ಯದ ಸಿದ್ದಿ ಸಾಧ್ಯವೇ ಇಲ್ಲ. ದುಡ್ಡು, ದುಡ್ಡಿನಿಂದ ಬರುವ ಅಧಿಕಾರ, ಅದು ಬೇಕೆನಿಸಿದಾಗ ಕೊಡುವ ಸುಖ ಸಂತೋಷ ಇವನ್ನೆಲ್ಲಾ ತ್ಯಾಜ್ಯ ಎಂದು ನೀನು ಹೇಳಿದರೆ ನಿನ್ನನ್ನ ಪಂಚೇಂದ್ರಿಯಗಳಲ್ಲೇ ಏನೋ ಒಂದು ಊನವಿರಬೇಕು.
3. ಸೋಷಲಿಸಂ, ಶೋಷಣೆ ಎನ್ನುವ ಮೂರಕ್ಷರದ ಪದ ಹಣ ಕಂಡೊಡನೆ ದಿಗಿಲು ಬೀಳುವಂತೆ ಮಾಡುತ್ತದೆ. ಪ್ರತಿ ನೂರು ರೂಪಾಯಿ ನೋಟಿನ ಹಿಂದೂ ಒಂದು ಅಮಾನುಷ ಹೇಯತೆಯನ್ನು ಗುಮಾನಿಸುತ್ತದೆ.
4. ಸೋಷಲಿಸಂಮ್ಮಿಗೆ ಸಿಕ್ಕುವುದು ದುಡಿಸಿ ಉತ್ಪಾದನೆ ಮಾಡಿದವನ ಶೋಷಣೆ. ಇನ್ನೊಂದು ಅನ್ಯತರದ್ದು ಅದರ ಹಿಡಿತಕ್ಕೆ ಸಿಗುವುದಿಲ್ಲ.
5. ಶೋಷಣೆ ಒಂದಲ್ಲ ಒಂದು ರೀತಿಯಲ್ಲಿ ಅನಿವಾರ‍್ಯ. ಇಲ್ಲ ಉತ್ಪಾದಿಸಲು ಶೋಷಿಸಬೇಕು. ಇಲ್ಲ ಹಾಳುಮಾಡಲು ಶೋಷಿಸಬೇಕು.
6. ದುಷ್ಟದೇವತೆ ಆಗಿದ್ದರೆ ಅದು ಸದಾ ರಕ್ತಮಾಂಸಾದಿ ಹೊಲಸಿಗೆ ಹಂಬಲಿಸುವಂಥದಾದರೆ ನಿನ್ನ ಉಗುಳಿನಿಂದ ಮೈಲಿಗೆ ಆಗುತ್ತದೆ ಎನ್ನುವುದು ಸುಳ್ಳು. ಅದು ಒಳ್ಳೆಯ ದೇವತೆ ಆಗಿದ್ದರೆ ಕೇವಲ ಉಗಿದ ಮಾತ್ರಕ್ಕೆ ಕೋಪಿಸಿಕೊಳ್ಳಬೇಕೇಕೆ?
7. ಅವರ ನಂಬಿಕೆ ಬಟ್ಟೆಯ ಒಳಗೆ ಅಂತರಾಳದಲ್ಲಿ, ಕುಳಿತಾಗ ಎದ್ದಾಗ ಕೊರೆಯುವ ದಾರದ ನೋವನ್ನು ಸಹಿಸುವ ನಿಷ್ಠೆಯಾದಾಗ ಅದನ್ನು ಹೇಗೆ ಲೇವಡಿ ಮಾಡಲಿ?
8. ಇಬ್ಬರಲ್ಲೊಬ್ಬರು ಎಲ್ಲಾದರೂ ಒಂದು ಕಡೆ ಒಬ್ಬರ ಪ್ರಾಮಾಣಿಕತೆಯನ್ನು ನಂಬಬೇಕು.
9. ನನ್ನ ತಪೋಭಂಗಕ್ಕೆ ಮೇನಕೆಯೇ ಬೇಕೆಂದಿಲ್ಲ. ಅತಿ ಕುದ್ರವಾದುದೊಂದು ಹಲ್ಲಿ ಬಾಲವಲ್ಲಾಡಿಸಿದರೆ ಸಾಕು. ಹಲ್ಲಿ ಬಾಲ ಅಲ್ಲಾಡಿಸಿದ್ದೂ ಮೇನಕೆ ಮೊಲೆ ಅಲ್ಲಾಡಿಸಿ ಕುಣಿದದ್ದು ಬಿ.ಎ., ಎಂ.ಎ.ಗಳಂಥ ಒಂದಕ್ಕಿಂತ ಇನ್ನೊಂದು ಹೆಚ್ಚಿನ ಯೋಗ್ಯತೆ ಪಡೆದ ಪರೀಕ್ಷೆಗಳೆಂದು ಹೇಗೆ ಹೇಳೋಣ.
10. ನನ್ನಂಥವರು ಇನ್ನೊಂದಿಷ್ಟು ಜನ ಇದ್ದರೆ ಈ ಕರ್ನಾಟಕದಲ್ಲಿ ಮರ‍್ಯಾದಸ್ತರೇ ಉಳಿಯುವುದಿಲ್ಲ.
11. ಕನ್ನಡದ ಸಾಹಿತಿಯಾಗಬೇಕಾದವನು ಮೊದಲು ಬ್ರಾಹ್ಮಣದ್ವೇಷಿಯಾಗಬೇಕಾಗುವುದು ಅನಿವಾರ‍್ಯ ಹಾಗೂ ಅದು ನ್ಯಾಯ.
12. ಬುದ್ಧಿ ಎಂದರೆ ತಿಳುವಳಿಕೆ ಎಂದರೆ ಇನ್ನೇನು! ಹಳೆಯ ಘಟನೆಗಳ ಹಿನ್ನೆಲೆಯಲ್ಲಿ ವರ್ತಮಾನವನ್ನು ಕುರಿತು ಆಲೋಚಿಸುವುದು ತಾನೆ!
13. ಬದುಕು ಎಂದರೆ ನನಗೆ ಅನಂತವೂ ಬುದ್ಧಿಯುತವೂ ಆದ ತಂತ್ರ, ರಾಜತಂತ್ರ.
14. ಸ್ತಬ್ಧ ಮೌನದಲ್ಲಿ ದೂರದ ಸಾವಿನಲ್ಲಿ ಹೆಜ್ಜೆ ಸಪ್ಪಳ ಕೇಳುತ್ತದೆ - ಯೌವ್ವನ ಅಲೆ ಎದ್ದ ಕೊಳದಂತೆ.
15. ಕೇವಲ ಅಭಿವ್ಯಕ್ತಿ ಮಾಧ್ಯಮದ ದೆಸೆಯಿಂದ ನನ್ನ ಮಹತ್ವದ ಅರ್ಥವೆಲ್ಲಾ ನನ್ನೊಳಗೇ ಉಳಿದುಕೊಂಡಿದೆ ಎಂದು ನನ್ನ ನಂಬಿಕೆ.
16. ಶಿಕಾರಿ ಎಂದರೆ ಉವಿನ ಅಳಿವಿನ ಹೋರಾಟ.
17. ಶಿಕಾರಿ ಒಂದು ಅನಂತವಾದ ಜೂಜು.
18. ಶಿಕಾರಿ ಒಂದು ವ್ಯಸನ. ಅದೊಂದು ಆಲೋಚನೆಗೆ ಹತ್ತುವ ಚಟ. ಆದರೆ ಶಿಕಾರಿಯನ್ನು ಕಂಡರೆ ನನಗೆ ಇಷ್ಟ. ಏಕೆಂದು ನನಗೆ ಸರಿಯಾಗಿ ಗೊತ್ತಿಲ್ಲ. ಮಾಂಸದಾಸೆಗಂತೂ ಅಲ್ಲ.
19. ಅವಿವಾಹಿತರಾಗಿ ಒಟ್ಟಿಗೆ ಮಲಗುವುದು ಅಧಾರ್ಮಿಕ ಎಂದಲ್ಲ. ಎಲ್ಲಿ ಗರ್ಭಿಣಿಯಾಗಿಬಿಡುತ್ತಾಳೋ ಎಂಬ ಭಯದಿಂದ.
20. ಸೃಷ್ಟಿಯ ಬಗ್ಗೆ, ಜೀವನದ ಬಗ್ಗೆ, ಆಲೋಚಿಸಿದಂತೆಲ್ಲಾ ನನ್ನ ಬಗ್ಗೆಯೇ ನನಗೆ ಒಂದು ತಿಳಿವು ಮೂಡತೊಡಗಿತು.

Tuesday, February 02, 2010

‘ಕೇಸರಿ’ಗೇ ಒದ್ದ ‘ನಾಟಿದನ’ದಿಂದ ಮನೆಯ ಹೆಸರೇ ಬದಲಾಯಿತು!

“ಕರು ಹಾಕಿದ ದನಗಳ ಹಾಲು ಹಿಂಡದೇ ಇದ್ದರೆ ಅವು ‘ಗೊಡ್ಡು’ ದನ ಆಗುತ್ತವೆ! ಹಾಗಾಗಿ ದಿನಾ ಬೆಳಗ್ಗೆ ಮತ್ತು ಸಾಯಂಕಾಲ ಅವನ್ನು ಕರೆಯಲೇ ಬೇಕು, ಸಾರ್!” ಎಂದು ದನ ಮೇಯಿಸುವ ಹುಡುಗ ನನಗೆ ತಾಕೀತು ಮಾಡಿದ. ನಾನಾದರೋ ಬಹು ಜಂಬದಿಂದಲೇ “ಬಾಲೂ, ಅದೇನು ದೊಡ್ಡ ವಿಷಯ? ನಾನೇ ಸ್ವತಃ ಬೆಳಗ್ಗೆ ಮತ್ತು ಸಾಯಂಕಾಲ ಸ್ವಲ್ಪ ಹಾಲು ಕರೆದು, ಉಳಿಕೆಯ ಹಾಲನ್ನು ಕರುವಿಗೆ ಉಣ್ಣಲು ಬಿಡುತ್ತೇನೆ” ಎಂದೆ.

ಮರು ದಿನ ಬೆಳಗಾಗುತ್ತಲೇ ಎಳೇ ಕರುವಿನ ದನ ಕೆಂಪಿ ‘ಅಂಬಾ, ಅಂಬಾ!’ ಎಂದು ಅರಚುತ್ತಾ ಇತ್ತು. ನಾನು ನನ್ನ ನಿತ್ಯದ ಯೂನಿಫಾರ್ಮ್ ಆದ ಅರ್ಧ ಪ್ಯಾಂಟ್(ಶಾರ್ಟ್ಸ್), ಟೀ ಶರ್ಟ್, ಮಣಿಗಂಟಿನ ವರೆಗೆ ಕವರ್ ಮಾಡುತ್ತಾ ಇದ್ದ ಬಾಟಾ ಕಂಪನಿಯ ‘ಹಂಟರ್ ಬೂಟ್” ಹಾಗೂ ಬೆಂಗಳೂರಿನಲ್ಲಿ ನಾನು ಕೊಂಡಿದ್ದ ಅಗಲ ಬ್ರಿಮ್‌ನ ಹ್ಯಾಟು ಧರಿಸಿ ಹಟ್ಟಿಗೆ ಹೋದೆ.

ಹಿಂದಿನ ದಿನ ಸಾಯಂಕಾಲವೇ ಕೆಂಪಿ ದನವನ್ನು ಪ್ರತ್ಯೇಕವಾಗಿ ಕರುಗಳ ಕೋಣೆಯಲ್ಲೇ ಬಾಲು ಕಟ್ಟಿ ಹೋಗಿದ್ದ. ನಾನು ನನ್ನ ಬಿಡಾರದಿಂದ ಹಾಲು ಕರೆಯಲು ಒಂದು ಪಾತ್ರೆ. ಅದರಲ್ಲಿ ಅರ್ಧವಾಸಿ ತಣ್ಣೀರು ತೆಗೆದುಕೊಂಡು ಹಟ್ಟಿಯ ಕಡೆ ಹೊರಟೆ. ನನ್ನ ತಾಯಿಯವರು ದನಗಳನ್ನು ಕರೆಯುವ ಮೊದಲು ಅವಕ್ಕೆ ಆಹಾರ ಕೊಟ್ಟು ಅವುಗಳ ಕೆಚ್ಚಿಲನ್ನು ತೊಳೆದು ಹಾಲು ಹಿಂಡುತ್ತಾ ಇದ್ದುದು ನೆನಪಿನಲ್ಲಿ ಇತ್ತು. ನಾನು ಕೂಡಾ ಹಾಗೆಯೇ ಮಾಡಲು ಹೊರಟಿದ್ದೆ.

ನನಗೆ ಆ ದಿನಗಳಲ್ಲಿ ಹುಲಿಯ ಹಾಲನ್ನು ಕರೆಯುವ ಸ್ಥೈರ್ಯ ಹಾಗೂ ಹುಮ್ಮಸ್ಸು ಇತ್ತು. ’ಯಕಶ್ಚಿತ್ ಒಂದು ನಾಟಿದನದ ಹಾಲು ಕರೆಯುವದೇನು ಮಹಾ!’ ಎಂದು ಕೊಳ್ಳುತ್ತಾ ನಮ್ಮ ಕೆಂಪಿ ದನ ಮತ್ತು ಕರು ಇದ್ದ ಹಟ್ಟಿಯನ್ನು ಪ್ರವೇಶಿಸಿದೆ.

ಧೈರ್ಯವಾಗಿ ‘ಕೆಂಪಿ, ಕೆಂಪಿ!’ ಎನ್ನುತ್ತಾ ಅದರ ಬಳಿ ಹೋದೆ. ಎರಡು ಸಲ ದನದ ಹೆಸರು ಹಿಡಿದು ಕರೆದಾಗಲೇ ‘ಹಾಲುಕರೆಯುವ ಕೆಲಸ ಅರ್ಧ ಮುಗಿಸಿದೆ’ ಎಂಬ ಭಾವನೆ ನನ್ನಲ್ಲಿ ಮೂಡಿತ್ತು.

ಕೆಂಪಿ ದನ ತನ್ನ ಕರುವಿನ ಮೈ ನೆಕ್ಕುತ್ತಾ ನಿಂತಿತ್ತು. ಅದು ನನ್ನ ಕಡೆಗೆ ಗಮನ ಕೊಡಲೇ ಇಲ್ಲ. ಅಟ್ಟದ ಏಣಿ ಹತ್ತಿ ಅದರ ಎದುರಿಗೆ ಒಂದು ಕಟ್ಟು ಒಣ ಹುಲ್ಲು ತಂದು ಹಾಕಿದೆ. ಅದು ಖುಷಿಯಿಂದ ಆ ಹುಲ್ಲನ್ನು ತಿನ್ನ ತೊಡಗಿತು.

ಅದರ ಪುಟ್ಟ ಕರು ಆಗಲೇ ಹೊಟ್ಟೆತುಂಬಾ ಆಗಲೇ ಹಾಲು ಕುಡಿದಿದ್ದರಿಂದ ಸಂತೋಷವಾಗಿ ನನ್ನ ಕಡೆ ಪಿಳಿ ಪಿಳಿ ನೋಡುತ್ತಾ ಇತ್ತು.

ನಾನು ದನದ ಎಡ ಬದಿಯಲ್ಲಿ ಕುಕ್ಕರುಗಾಲಿನಲ್ಲಿ ಕುಳಿತು ತಂಬಿಗೆಯಲ್ಲಿ ಇದ್ದ ತಣೀರನ್ನು ಅದರ ಕೆಚ್ಚಲಿಗೆ ಎರಚಿ ಕೆಚ್ಚಲನ್ನು ತೊಳೆಯಲು ಕೈ ಹಾಕುವ ಮೊದಲೇ ಮಿಂಚಿನ ವೇಗದಲ್ಲಿ ಏನೇನೋ ನಡೆದು ಬಿಟ್ಟಿತು.

ನನ್ನ ಕಣ್ಣಿನ ಇದುರು ಏನೋ ಕಪ್ಪಗಿನ ವಸ್ತು ಸುಳಿದಂತೆ ಆಯಿತು.

ಅದು ನನ್ನ ಮುಖದ ಮೇಲೆಯೇ ಬಂದು ಇಳಿಯಿತು.

ಲಟ್! ಎಂಬ ಶಬ್ದ ಕೂಡಾ ಆಯಿತು.

ನಾನು ಆ ಕ್ಷಣದಲ್ಲೇ ಆಯತಪ್ಪಿ ಹಟ್ಟಿಯ ಶಿಲೆ ಹಾಸಿದ ನೆಲದ ಮೇಲೆ ಬಿದ್ದುಬಿಟ್ಟಿದ್ದೆ.

ನೆಲದಲ್ಲಿ ಬಿದ್ದಿದ್ದ ಸೆಗಣಿ ನನ್ನ ಮೈಗೆ ಮೆತ್ತಿಕೊಳ್ಳುತ್ತಾ ಇತ್ತು.

ನನ್ನ ಕೈಯ್ಯಲ್ಲಿ ಇದ್ದ ಪಾತ್ರೆ ಎಲ್ಲೋ ಹಾರಿ ಹೋಗಿತ್ತು.

ನನ್ನ ತಲೆಯಲ್ಲಿ ಅಗಲ ಬ್ರಿಮ್ ಉಳ್ಳ ಹ್ಯಾಟು ಇದ್ದಿದ್ದರಿಂದ ತಲೆ ನೆಲಕ್ಕೆ ಹೊಡೆದ ವೇಗಕ್ಕೆ ನನ್ನ ತಲೆ ಒಡೆದು ಹೋಗಲಿಲ್ಲ. ಬಿದ್ದ ರಭಸಕ್ಕೆ ನನ್ನ ಹ್ಯಾಟ್ ತಲೆಯಿಂದ ಕಳಚಿ ಸೆಗಣಿಯ ಮೇಲೆ ಅಂಗಾತ ಬಿದ್ದಿತು.

‘ನಾನಗೆ ಏನಾಯಿತು?’ ಎಂದು ಊಹಿಸುವ ಮೊದಲೇ ನನ್ನ ಮುಖದಲ್ಲಿ ಅಸಾಧ್ಯ ನೋವು ಕಾಣಿಸಿಕೊಂಡಿತು. ಹೇಗೋ ಸುಧಾರಿಸಿಕೊಂಡು ಎದ್ದೆ. ನನ್ನ ತಲೆ ‘ಧಿಂ!’ ಎನ್ನುತ್ತಿತ್ತು. ಬಲ ಕಣ್ಣಿನ ಕೆಳಗೆ ಕೆಳದವಡೆಯ ತನಕ ತಡೆಯಲಾರದ ನೋವು ಪಸರಿಸಿತು. ಮುಖ ಮುಟ್ಟಿ ನೋಡಿಕೊಂಡಾಗ ಮುಖದ ಬಲಭಾಗ ಊದಿಕೊಳ್ಳುತ್ತಾಇರುವುದು ಸ್ಪಷ್ಟವಾಯಿತು.

ಮೆಲ್ಲನೆ ಕೆಳಗೆ ಬಿದ್ದಿದ್ದ ಹ್ಯಾಟ್ ಎತ್ತಿಕೊಂಡೆ. ಎಲ್ಲಿಗೋ ಹಾರಿ ಹೋಗಿದ್ದ ಪಾತ್ರೆಯನ್ನು ಹುಡುಕದೇ ‘ಅದು ಹಾಳಾಗಿ ಹೋಗಲಿ!’ ಎಂದು ಶಪಿಸುತ್ತಾ ಮೇಲೆ ಎದ್ದೆ. ಮೈ ಮೇಲೆ ಪಸರಿಸಿದ್ದ ಹಸೀ ಸೆಗಣಿಯ ವಾಸನೆ ತಡೆಯಲು ಅಸಾಧ್ಯ ಎನಿಸಿತು.

ನಾನು ದನದ ಕಡೆ ನೋಡಿದೆ. ಅದು ಏನೂ ನಡೆದಿಲ್ಲವೇನೋ ಎಂಬಂತೆ ತನ್ನ ಕರುವನ್ನು ನೆಕ್ಕುತ್ತಾ ಇತ್ತು. ನನಗೆ ದನದ ಮೇಲೆ ಸಿಟ್ಟು ಉಕ್ಕಿಬಂದಿತ್ತು.

ಪೆಟ್ಟು ತಿಂದ ನೋವಿನಿಂದಾಗಿ ನನ್ನಲ್ಲಿ ನಿಧಾನವಾಗಿ ವಿವೇಕವೂ ಮೂಡಿ ಬರುತ್ತಿತ್ತು. ‘ಆ ಪುಟ್ಟ ಕರುವಿಗೆ ಸೇರಿದ ಹಾಲನ್ನು ಹಿಂಡಿ ತೆಗೆಯುವ ಅಧಿಕಾರ ನಿನಗೆಲ್ಲಿ?’ ಎಂದು ನನ್ನ ಒಳಮನಸ್ಸು ನನ್ನನ್ನು ಕೇಳುತ್ತಾ ಇತ್ತು.

ಮುಖವನ್ನು ಇನ್ನೊಮ್ಮೆ ಸವರಿಕೊಂಡು ನೋಡಿದೆ. ‘ಯಾವ ಹಲ್ಲೂ ಕಿತ್ತು ಹೋಗಿಲ್ಲ. ದವಡೆಯ ಎಲುಬು ಮುರಿದಿಲ್ಲ’ ಎಂದು ಖಾತ್ರಿ ಮಾಡಿಕೊಂಡೆ. ದಪ್ಪವಾಗಿ ಪೊದೆಯಂತೆ ಬೆಳೆದಿದ್ದ ಗಡ್ದದ ಕೂದಲುಗಳು ನನ್ನ ದವಡೆಯ ಎಲುಬು ಮತ್ತು ಹಲ್ಲುಗಳನ್ನು ಕಾಪಾಡಿದ್ದುವು.

‘ಕನ್ನಡಿ ನೋಡಿಕೊಳ್ಳೋಣ!’ ಎಂದರೆ, ಗಡ್ದ ಧಾರಿಯಾದ ನನ್ನ ಮನೆಯಲ್ಲಿ ಕನ್ನಡಿಯೇ ಇರಲಿಲ್ಲ. ಶೇವಿಂಗ್ ಅಗತ್ಯವೇ ಇಲ್ಲದ ಮುಖ! ತಲೆಯಲ್ಲಿ ಬಾಚಣಿಗೆ ಬೇಡದ "ಕ್ರೂ"ಕಟ್! ಗುಡಿಸಲಿಗೆ ಹೋಗಿ ಸ್ಟೈನ್‌ಲೆಸ್ ಸ್ಟೀಲಿನ ಊಟದ ತಟ್ಟೆಯಲ್ಲಿ ಮುಖ ನೋಡಿಕೊಂಡೆ. ಯಾರದೋ ಮುಖ ಬಲ ಬದಿ ಊದಿಕೊಂಡಂತೆ ಕಂಡಿತು. ಬಲಕಣ್ಣು ಊದಿಕೊಂಡು ಅರ್ಧ ಮುಚ್ಚಿತ್ತು.

ನಾನು ಮಾಮೂಲಿಯಾಗಿ ಸ್ನಾನಕ್ಕೆ ಉಪಯೋಗಿಸುತ್ತಾ ಇದ್ದ ಮಾರ್ಗೋ ಸೋಪ್ ಹಿಡಿದು ನೇರವಾಗಿ ನದಿಯ ಬದಿಗೆ ನಡೆದೆ, ಶೂ ಮತ್ತು ಹ್ಯಾಟ್ ಸಮೇತ ನೀರಿಗಿಳಿದು ಮೈಗೆ ಮೆತ್ತಿದ ಸೆಗಣಿ ತೊಳೆದುಕೊಂಡೆ. ಹರಿಯುವ ನೀರಿನಲ್ಲಿ ಹ್ಯಾಟ್ ಮತ್ತು ಬೂಟ್ ತೊಳೆದು ಬದಿಗೆ ಇರಿಸಿದೆ. ಒದ್ದೆ ಬಟ್ಟೆಯಲ್ಲೇ ಮನೆಗೆ ಬಂದು ಬಟ್ಟೆ ಬದಲಾಯಿಸಿದೆ.

ಬೆಳಗ್ಗಿಗೆ ಇಟ್ಟುಕೊಂಡ ಹಿಂದಿನ ದಿನದ ಹಾಲು ಆಗಲೇ ಮುಂಜಾನೆಯ ಟೀ ಮಾಡಿದಾಗ ಖರ್ಚಾಗಿತ್ತು. ಬಿಸಿ ಬಿಸಿಯಾಗಿ ಒಂದು ಮಗ್ ಕಪ್ಪು ಚಹಾ ಮಾಡಿ ಕುಡಿದೆ.

ಹೊಳೆಯ ನೀರಿನ ಅಭಿಷೇಕದಿಂದ ಮುಖದ ಊತ ಕಡಿಮೆ ಆಗುತ್ತಾ ಇತ್ತು.

ಕೆಲಸದ ಆಳುಗಳು ಇನ್ನೂ ಬಂದಿರಲಿಲ್ಲ. ಗಂಟೆ ನೋಡಿದರೆ ಏಳೂವರೆ! ಅರೆ! ನನ್ನ ಕೈಯ್ಯಲ್ಲಿ ಇದ್ದ ಸ್ವಿಸ್ “ಎನಿಕಾರ್” ವಾಚ್ ಇನ್ನೂ ನಡೆಯುತ್ತಾ ಇತ್ತು! ಅದು ನೀರು ಕುಡಿದಿರಲೂ ಇಲ್ಲ!

ಪೆಟ್ಟು ತಿಂದ (ಒದೆಸಿಕೊಂಡ) ಮುನಿಸು ಇನ್ನೂ ಕಡಿಮೆ ಆಗಿರಲಿಲ್ಲ. ಆ ಕೆಂಪಿ ಎಂಬ ದನಕ್ಕೆ ಚೆನ್ನಾಗಿ ಹೊಡೆದು ಬಿಡೋಣಾಂತ ಒಮ್ಮೆ ಅನ್ನಿಸಿತು. ‘ಎಲೋ ಬುದ್ಧಿಯುಳ್ಳ ಮನುಷ್ಯ ಪ್ರಾಣಿಯೇ! ದನದ ಮೇಲೆ ಯಾಕೆ ಸಿಟ್ಟು ಮಾಡುತ್ತೀಯಾ? ತಪ್ಪು ನಿನ್ನದೇ ಅಲ್ಲವೇ? ನಿನಗೂ ಅದು ಹಾಲು ಹಿಂಡಲು ಬಿಡುತ್ತಿತ್ತೋ ಏನೋ? ನಿನ್ನ ವಿಚಿತ್ರ ವೇಷ! ಮುಖ ತುಂಬ ಗಡ್ಡ! ತಲೆಯ ಮೇಲೆ ಒಂದು ಅಗಲ ಹ್ಯಾಟು! ಅದರ ಮೇಲೆ, ಚಳಿಗಾಲದ ಈ ಹವಾಮಾನದಲ್ಲಿ ಅದರ ಕೆಚ್ಚಲಿಗೆ ಮಹಾ ಬುದ್ಧಿವಂತನಂತೆ ತಣ್ಣೀರು ಎರೆಚಿದೆ! ನೀನು ಮಾಡಿದ್ದು ತಪ್ಪಲ್ಲವೇ?’ ಎಂದಿತು ಸುಪ್ತ ಮನಸ್ಸು.

‘ಹೌದು! ನಾನು ಉಗುರು ಬೆಚ್ಚನೆಯ ನೀರು ಕೊಂಡೊಯ್ಯ ಬೇಕಿತ್ತು! ಹೊಳೆಯಲ್ಲೇ ದಿನಾ ತಣ್ಣೀರಲ್ಲಿ ಮುಳುಗಿ ಸ್ನಾನ ಮಾಡುವ ಈ ನರ ಪ್ರಾಣಿಗೆ, ಒಂದೆರಡು ದಿನಗಳ ಹಿಂದಷ್ಟೇ ಕರು ಹಾಕಿದ ಆ ದನಕ್ಕೆ ಚಳಿ ಆಗಬಹುದೆಂಬ ಪರಿಜ್ಞಾನವೇ ಇರಲಿಲ್ಲ! ಸರಿ! ನಾನು ತಪ್ಪೇ ಮಾಡಿರಬಹುದು. ಆದರೆ, ಆ ದನ ನನಗೆ ಅಷ್ಟು ಜೋರಾಗಿ ಒದೆಯಬೇಕಿರಲಿಲ್ಲ! ನಿಧಾನವಾಗಿ ಕಾಲು ಝಾಡಿಸಿ ಅದು ಹೆದರಿಸಿದ್ದರೆ ಸಾಕಿತ್ತು!’ ಅಂತ ನನ್ನೊಳಗೇ ಸ್ವಲ್ಪ ಸಮಾಧಾನ ಮಾಡಿಕೊಂಡೆ.

ನನ್ನ ಮನೆಯೊಳಗೆ ಒಂದು ಚಿಕ್ಕ ನೀಲಿ ಪೈಂಟ್‌ನ ಡಬ್ಬಿ ಮತ್ತು ಬ್ರಶ್ ಇತ್ತು. ಅದನ್ನು ಒಪಯೋಗಿಸಿ ನನ್ನ ಮನೆಗೆ K ಸ रि ಎಂಬ ಹೆಸರನ್ನು ಬರೆದಿದ್ದೆ. ಕೂಡಲೇ ಆ ಡಬ್ಬವನ್ನು ಹುಡುಕಿ ನಮ್ಮ ಹಟ್ಟಿಗೆ zoo ಎಂಬ ಹೆಸರನ್ನು ಬರೆದು ಅಂದು ತಿಂದ ಒದೆಗೆ ಸೇಡು ತೀರಿಸಿಕೊಂಡೆ.
 
ಆನಂತರ ನಾನು ಅಂದಿನ ಒದೆ ತಿಂದ ಪ್ರಸಂಗವನ್ನು ಬಲವಂತವಾಗಿ ಮರೆತೇ ಬಿಟ್ಟೆ!
 
{ಶ್ರೀ ಮಧುಸೂದನ ಪೆಜತ್ತಾಯ ಅವರು ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಈ ಕಡೆ ಬಾಳೆಹೊಳೆ ಎಂಬ ಊರಿದ್ದರೆ ಆ ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭವ ದೊಡ್ಡದು. ಎದುರಿಗೆ ಕುಳಿತಿರುವವರಿಗೆ ಒಂದರೆಕ್ಷಣವೂ ಬೋರು ಹೊಡೆಸದಂತೆ, ವಾತಾವರಣದಲ್ಲಿ ನಗುವಿನ ಸದ್ದು ಸೃಷ್ಟಿಸಬಲ್ಲ ವಾಕ್ಚಾತುರ್ಯ ಇವರಿಗಿದೆ. ತಮ್ಮ ಬಲ್ಲವರಿಂದ ‘ಕೇಸರಿ’ ಎಂದೇ ಕರೆಸಿಕೊಳ್ಳುತ್ತಿರುವ ಶ್ರೀಯುತರು ಈಗ ರೈತಬದುಕಿನಿಂದ ಆಂಶಿಕ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮಕ್ಕಳು ತೋಟದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ವೃತ್ತಿಯಿಂದ ರೈತರಾದರೂ, ಪ್ರವೃತ್ತಿಯಿಂದ ಒಬ್ಬ ಒಳ್ಳೆಯ ವಾಗ್ಮಿ, ಫೋಟೋಗ್ರಾಫರ್, ಕೃಷಿಸಂಶೋಧಕ ಹಾಗೂ ಬರಹಗಾರರು ಕೂಡಾ. ಶ್ರೀಯುತರು ‘ಕಾಗದದ ದೋಣಿ’ ಎಂಬ ಆತ್ಮವೃತ್ತಾಂತವೆನಿಸಬಹುದಾದ ಲೇಖನಸಂಕಲನವನ್ನು ಬರೆದಿದ್ದಾರೆ. ಆ ಲೇಖನಗಳನ್ನು ಓದುವುದೆಂದರೆ ಭೂತಕಾಲದೊಂದಿಗಿನ ಪಿಸುಮಾತು ಕೇಳಿಸಿಕೊಂಡಂತೆ! ಈ ಪುಸ್ತಕದ ಲೇಖನಗಳು ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿವೆ. ಇದಲ್ಲದೆ ಅವರು ಸಾಕಿದ್ದ ರಕ್ಷಾ ಎಂಬ ನಾಯಿಯನ್ನು ಕುರಿತು ‘ನಮ್ಮ ರಕ್ಷಕ ರಕ್ಷಾ’ ಎಂದು ರಕ್ಷಾನ ಜೀವನಚರಿತ್ರೆಯನ್ನೂ ಬರೆದಿದ್ದಾರೆ. ಶ್ರೀಯುತರ ಇಂಗ್ಲಿಷ್ ಪ್ರೌಢಿಮೆ ಉನ್ನತಸ್ತರದ್ದಾಗಿದ್ದು ಸದ್ಯದಲ್ಲೇ ಅವರ ಒಂದು ಇಂಗ್ಲಿಷ್ ಕೃತಿಯೂ ಪ್ರಕಟವಾಗಲಿದೆ. ಅವರ ಅನುಮತಿಯ ಮೇರೆಗೆ ಅವರು ನನಗೆ ಕಳುಹಿಸಿದ್ದ ಹಲವಾರು ಬರಹಗಳನ್ನು ಲೇಖನಗಳಾಗಿ ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೇನೆ.} - ಸತ್ಯನಾರಾಯಣ


(ಚಿತ್ರಗಳು: ಲೇಖಕರವು)

Friday, January 29, 2010

ಬರ್ತ್ ಡೇ ತಾತ ಬೇಂದ್ರೆ ನೆನಪಲ್ಲಿ

ನಾನಾಗ ಚಿಕ್ಕವನು. ಐದೋ ಆರೋ ತರಗತಿಯಲ್ಲಿದ್ದೆ ಅನ್ನಿಸುತ್ತೆ. ಯಾರದೋ ಮನೆಯಲ್ಲಿ ಪೆನ್ಸಿಲ್ಲಿನಲ್ಲಿ ಬರೆದಿದ್ದ ಇಬ್ಬರು ವ್ಯಕ್ತಿಗಳ ಚಿತ್ರಗಳನ್ನು ಗೋಡೆಯಲ್ಲಿ ನೇತು ಹಾಕಿದ್ದರು. ಹತ್ತಿರದಲ್ಲೇ ಇದ್ದ ಒಂದು ಚಿತ್ರ ಕುವೆಂಪು ಅವರದ್ದು ಎಂದು ಅದರ ಮೇಲೆ ಬರೆದಿದ್ದರಿಂದ ಗೊತ್ತಾಯಿತು. ಸ್ವಲ್ಪ ದೂರದಲ್ಲಿದ್ದ ಚಿತ್ರ ಯಾವ ಕೋನದಿಂದ ನೋಡಿದರೂ ನಮ್ಮ ತಾತನದೇ ಚಿತ್ರದಂತೆ ಕಾಣುತ್ತಿತ್ತು. ಒಂದೇ ವ್ಯತ್ಯಾಸವೆಂದರೆ ನಮ್ಮ ತಾತ ತಲೆಗೆ ರುಮಾಲು ಸುತ್ತುತ್ತಿದ್ದರು. ಚಿತ್ರದಲ್ಲಿದ್ದ ತಾತ ಟೋಪಿ ಹಾಕಿಕೊಂಡಿದ್ದರು. ಕೊನೆಗೆ ತಡೆಯಲಾರದೇ ಎದ್ದು ಹೋಗಿ ನೋಡಿದಾಗ ಅದರ ಮೇಲೆ ದ.ರಾ.ಬೇಂದ್ರೆ ಎಂದು ಬರೆದಿತ್ತು. ನಮ್ಮ ತಾತನಿಗೂ ಅದೇ ವಯಸ್ಸು, ಸುರುಳಿಗೂದಲು, ಮೀಸೆ ಮತ್ತು ಮುಗ್ದಮುಖವಿದ್ದುದರಿಂದ ಬೇಂದ್ರೆ ಚಿತ್ರ ನನಗೆ ನನ್ನ ತಾತನ ಚಿತ್ರದಂತೆಯೇ ಕಾಣುತ್ತಿತ್ತು. ಹೀಗೆ ಬೇಂದ್ರೆ ಚಿತ್ರ ಅಂದು ನನ್ನ ಮನಸ್ಸಿನಲ್ಲಿ ದಾಖಲಾಯಿತು. ಅಂದಿನಿಂದ ಇಂದಿನವರೆಗೂ ಬೇಂದ್ರೆ ಎಂದರೆ ನನಗೆ ಮೊದಲು ನೆನಪಾಗುವುದು ಅದೇ ಚಿತ್ರದ ತಾತ! ಜನವರಿ 31 ಅವರು ಹುಟ್ಟಿದ ದಿನ.

ನಂತರ ಪಠ್ಯಪುಸ್ತಕಗಳಲ್ಲಿದ್ದ ಕವನಗಳ ಮೂಲಕ ಬೇಂದ್ರೆ ಹತ್ತಿರವಾದರು. ಸಾಹಿತ್ಯದಲ್ಲಿ ಆಸಕ್ತಿ ಮೂಡುತ್ತಾ ಹೋದಂತೆ ಬೇಂದ್ರೆ ಪ್ರೀತಿಯ ಕವಿಯಾದರು. ೧೯೯೮-೨೦೦೦ನೇ ಇಸವಿಯಲ್ಲಿ ಕನ್ನಡ ಎಂ.ಎ. ಮಾಡುವಾಗ ನನ್ನ ಸುಯೋಗವೋ ಏನೋ? ಬೇಂದ್ರೆಯವರನ್ನು ವಿಶೇಷಕವಿಯಾಗಿ ಅಧ್ಯಯನ ಮಾಡಬೇಕಾಗಿತ್ತು. ಆಗಿನ್ನು ಅವರ ಸಮಗ್ರಸಾಹಿತ್ಯ ಪ್ರಕಟವಾಗಿರಲಿಲ್ಲ. ಆದರೂ ಆಗ ಸಿಕ್ಕ ಅವರ ಎಲ್ಲಾ ಸಾಹಿತ್ಯ ಕೃತಿಗಳನ್ನು ಅಧ್ಯಯನ ಮಾಡಿದೆ. ಅದರಿಂದಾದ ಸಂತೋಷ ಪದಗಳಿಗೆ ನಿಲಕದ್ದು.

ಅವರ ಯಾವುದೋ ಬರಹವೊಂದರಲ್ಲಿ ‘ಸಣ್ಣ ಸೋಮವಾರ’ ಎಂಬ ಪ್ರಯೋಗ ಬಂದಿತ್ತು. ನಾನು ಆ ಪದದ ಬಗ್ಗೆ ತಲೆಕೆಡಿಸಿಕೊಂಡು ಸಿಕ್ಕ ಸಿಕ್ಕ ನಿಘಂಟುಗಳನ್ನೆಲ್ಲಾ ಜಾಲಾಡಿದ್ದೆ. ಕೊನೆಗೆ ವರ್ಷದ ಕೊನೆಯಲ್ಲಿ ಪ್ರೊ.ಶಿವಕುಮಾರ್ ಎಂಬುವವರಲ್ಲಿ ಈ ಪದದ ಬಗ್ಗೆ ಕೇಳಿದೆ. ಅವರು ‘ಈ ಸಮಸ್ಯೆ ನಿನಗೂ ಕಾಡಿದೆ ಎಂದರೆ ನೀನು ಬೇಂದ್ರೆಯವರನ್ನು ಸೀರಿಯಸ್ಸಾಗಿ ಓದುತ್ತಿದ್ದೀಯಾ ಎಂದರ್ಥ. ಈ ಪದ ಹಲವಾರು ವಿದ್ವಾಂಸರನ್ನು ಓದುಗರನ್ನು ಕಾಡಿದೆ. ಅದಕ್ಕೆ ಒಬ್ಬ ಬಸ್ ಕಂಡಕ್ಟರ್ ಉತ್ತರ ಹುಡುಕಿದ್ದರು. ಧಾರವಾಡ ಕಡೆ ಸಣ್ಣ ಸೋಮವಾರ ಮಾಡುವುದು ಎಂಬ ಆಚರಣೆಯೇ ಇದೆ. ಸಣ್ಣ ಅಂದರೆ ಶ್ರಾವಣ ಅಂತ ಅಷ್ಟೆ! ಅಂದರೆ ಶ್ರಾವಣ ಸೋಮವಾರ’ ಎಂದು ಅದರ ಇತಿಹಾಸವನ್ನೇ ಬಿಚ್ಚಿಟ್ಟಿದ್ದರು. ಬೇಂದ್ರೆಯವರು ಈ ನೆಲದ ಸೊಗಡನ್ನು ತಮ್ಮದಾಗಿಸಿಕೊಂಡಿದ್ದಕ್ಕೆ ಇದೊಂದು ಚಿಕ್ಕ ಉದಾಹರಣೆ.

ಆಗ ಉಪನ್ಯಾಸ ನೀಡಿದ್ದ ಇನ್ನೊಬ್ಬ ವಿದ್ವಾಂಸರು ಸಾಂಸ್ಕೃತಿಕ ವೈರುದ್ಧ್ಯಗಳಂತಿದ್ದ ವ್ಯಕ್ತಿತ್ವಗಳು ಅರ್ಥಪೂರ್ಣ ಮುಖಾಮುಖಿಯಾಗುವುದು ಇತಿಹಾಸದುದ್ದಕ್ಕೂ ನಡೆದುಕೊಂಡು ಬಂದಿದೆ ಎಂದು ಹೇಳಿ ಮೂರು ಉದಾಹರಣೆ ಕೊಟ್ಟಿದ್ದರು. ‘ಕನಕದಾಸ-ಪುರಂದರದಾಸ, ಗಾಂಧಿ - ಅಂಬೇಡ್ಕರ್, ಕುವೆಂಪು-ಬೇಂದ್ರೆ’ ಎಂದು.

ಗಾಂಧಿ ಸೂಟುಬೂಟು ತ್ಯಜಿಸಿದ್ದು ಹಾಗೂ ಅಂಬೇಡ್ಕರ್ ಸೂಟುಬೂಟು ಒಪ್ಪಿಕೊಂಡಿದ್ದು, ಕುವೆಂಪು ಭಾಷೆ ಸಂಸ್ಕೃತಭೂಯಿಷ್ಟವಾದುದ್ದು ಹಾಗೂ ಬೇಂದ್ರೆ ಭಾಷೆ ಜಾನಪದೀಯವಾದದ್ದು, ಪುರಂದರದಾಸರು ಕೇವಲ ದಾಸರಾಗಿದ್ದು ಹಾಗೂ ಕನಕದಾಸರು ದಾಸರಾಗುವುದರ ಜೊತೆಗೆ ಕವಿಯೂ ಆದದ್ದು. . . . ಹೀಗೇ ಅವರ ಹೋಲಿಕೆ ನಡೆದಿತ್ತು. ಆದರೆ ಅವರ ವಿಮರ್ಶೆ ಕುಚೋದ್ಯದಿಂದ ಕೂಡಿದೆ ಎಂದೇ ಅನ್ನಿಸಿತ್ತು. ಈಗಲೂ ಅದನ್ನು ನನಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪ್ರಸ್ತುತ ಕುವೆಂಪು-ಬೇಂದ್ರೆ ಭಾಷಾವಿಚಾರದಲ್ಲಿ ಅದೊಂದು ತೀರಾ ಸಾಮಾನ್ಯ ವಿವರಣೆ ಅನ್ನಿಸದಿರದು. ಸಹಜಕವಿಯಾದವನಿಗೆ ಭಾಷೆಯೇ ಒಂದು ತೊಡಕು ಎಂದು ಎಲ್ಲೋ ಓದಿದ ನೆನಪು. ಕವಿಯ ಮನಸ್ಸಿನಲ್ಲಿ ಕವಿತೆಯಾದುದೆಲ್ಲಾ ಭಾಷೆಯಲ್ಲಿ ಅಭಿವ್ಯಕ್ತಿಯಾಗುವುದು ಕಷ್ಟ! ಬೇಂದ್ರೆ-ಕುವೆಂಪು ಇಬ್ಬರೂ ಭಾಷೆಯನ್ನು ಯಾವ ಗರಿಷ್ಠಮಟ್ಟಕ್ಕಾದರೂ ಕೊಂಡಯ್ದು ಬಳಸಬಲ್ಲ ಕವಿಗಳಾಗಿದ್ದರು. ಹಾಗೇ ಜಾನಪದೀಯವಾಗಿಯೂ ಬಳಸಬಲ್ಲವರಾಗಿದ್ದವರು. ಇಷ್ಟನ್ನೇ ಆಧಾರವಾಗಿರಿಸಿಕೊಂಡು ಸಾಂಸ್ಕೃತಿಕ ವೈರುದ್ಧ್ಯವುಳ್ಳ ವ್ಯಕ್ತಿತ್ವಗಳು ಹಾಗೂ ಅವುಗಳ ಮುಖಾಮುಖಿ ಎಂದು ಭಾವಿಸುವುದು ಅಷ್ಟು ಸಮಂಜಸವೇನಲ್ಲ ಎಂಬುದು ನನ್ನ ಅನಿಸಿಕೆ.

ನಾನು ಬೇಂದ್ರೆಯವರನ್ನು ಅಧ್ಯಯನ ಮಾಡುವಾಗ ನನ್ನನ್ನು ಸೂಜಿಗಲ್ಲಿನಂತೆ ಸೆಳೆದದ್ದು ಅವರ ‘ಕನ್ನಡ ಮೇಘದೂತ’ ಖಂಡಕಾವ್ಯ. ಅದು ಕಾಳಿದಾಸನ ಮೇಘದೂತದ ಕನ್ನಡ ಅವತರಣಿಕೆ. ಒಂದೊಂದು ಪದ್ಯವೂ ಬಿಡಿಮುತ್ತಿನಂತೆ ಸರಳ ಛಂದಸ್ಸ್ಸಿನಲ್ಲಿ ಮೂಡಿಬಂದಿವೆ. ಅದರ ನಾಲ್ಕು ಪದ್ಯಗಳನ್ನು ಇಲ್ಲಿ ಕೊಡುತ್ತೇನೆ, ರಸಗ್ರಹಣಕ್ಕಾಗಿ!

ಅಗಲಿ ಇದ್ದರೂ ಆಸೆಗೊಂಡಿರಲು ಗಿರಿಯೊಳಂತು ಇಂತು
ಕೆಲವೆ ತಿಂಗಳಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು
ಕಾರಹುಣ್ಣಿಮೆಯ ಮಾರನೆಯ ದಿನವೆ ಮೋಡ ಕೋಡನಪ್ಪಿ
ಕಂಡಿತೊಡ್ಡಿನೊಡ ಡಿಕ್ಕಿಯಾಡುವಾ ಆನೆ ಬೆಡಗನೊಪ್ಪಿ

ಉತ್ತರಕ್ಕೆ ಹೊರಟವಗೆ ಉಜ್ಜಯಿನಿ ಅಡ್ಡವಾದರೇನು?
ಅಲ್ಲಿ ಮೇಲುಮಾಳಿಗೆಯ ಭೋಗ ಕಳಕೊಳ್ಳಬೇಡ ನೀನು
ಆ ಊರ ಹೆಂಗಸರ ಕಣ್ಣಬಳಿ ಮಿಂಚೆ ಮಿಣುಕು ಎನ್ನು
ಅವರ ಕಣ್ಣಕುಡಿಲಲ್ಲೆಯೊಲ್ಲೆಯಾ? ವ್ಯರ್ಥ ಇದ್ದು ಕಣ್ಣು

ತೊಳೆದ ತುರುಬು ಕಪ್ಪಾದ ನೀನು ಗಿರಿಶಿಖರದಲ್ಲಿ ತೇಲೆ
ಆಷಾಡ ಮಾವು ಸುರಿದಾವು ಗೊಂಚಲಲ್ಲಿ ಬೆಟ್ಟದೆದೆಯ ಮೇಲೆ
ಅಮರ ಮಿಥುನಗಳ ಪ್ರಣಯ ದೃಷ್ಟಿ ಅರಳರಳುವಂತೆ ಆಗೆ
ಮಲೆಯ ತುದಿಯು ಕಪ್ಪಾಗೆ ತೋರುವದು ನೆಲದ ಮೊಲೆಯ ಹಾಗೆ

ಮರದ ನಡುವೆ ಬಿಳಿ ಹಾಸಗಲ್ಲು ಬಂಗಾರ ಕೋಲು ನಡುಕೆ
ಎಳೆಬಿದಿರ ಬಣ್ಣ ಬೆಲೆ ಹರಳಿನಿಂದ ನೆಲೆಗಟ್ಟು ಅದರ ಬುಡಕೆ
ಆ ಕೋಲಿನಲ್ಲಿ ಕುಣಿಸುವಳು ನವಿಲ ನನ್ನಾಕೆ ಸಂಜೆಯಲ್ಲಿ
ಕೈ ತಟ್ಟಿ ಮಾಟ ಬಳೆ ತಕಲಾಟ ಥಕಥೈಯ ಥಾಟಿನಲ್ಲಿ

ಈ ಮೇಘದೂತದ ಗುಂಗಿನಲ್ಲೇ ನಾನು ಮೇಘದೂತನ ಕಾವ್ಯಸಿರಿ ಎಬ ಕವಿತೆಯೊಂದನ್ನು ಬರೆದಿದ್ದೆ. ಅದನ್ನಿಲ್ಲಿ ಕೊಟ್ಟು ಈ ಲೇಖನವನ್ನು ಮುಗಿಸುತ್ತೇನೆ. ಹಾಗೆ ನೋಡಿದರೆ ಮೊನ್ನೆ ಹೆಚ್.ಎಸ್.ವೆಂಕಟೇಶಮೂರ್ತಿಯವರು ಹೇಳಿದಂತೆ ಸ್ಮರಣೆಯೊಂದೇ ಮರಣದ ದುಃಖವನ್ನು ಮರೆಯಾಗಿಸುವ ಸಾಧನ!

ಮೇಘದೂತನ ಕಾವ್ಯಸಿರಿ

ಕೆರೆಯ ಅಂಚಿಗೆ ಚಾಚಿದ್ದ ಬಿಳಿಯ ಕಲ್ಲು
ತೊಳೆದು ಹೊಳೆವ ಬಿಂದಿಗೆ ನಡುವಿಗೆ
ಎಳೆಯ ರಶ್ಮಿಯ ಹೊಳಪಿನಿಂದ
ಬೆಳಕ ಚಿತ್ತಾರ ನೀರಕನ್ನಡಿಗೆ.

ಬಿಂದಿಗೆಯ ಮುಳುಗಿಸಿ ನೀರ
ತುಂಬುವಳು ಚೆಲುವೆ ಬಿಂಕದಿಂದ
ಅದ ನಡುವಿಗಿಟ್ಟು ನೆರಿಗೆ ಎತ್ತಿ ಕಟ್ಟಿ
ನಡೆವಳು ಚೆಲುವೆ ವೈಯಾರದಿಂದ.

ತಾವರೆಯ ವರಿಸಿದ ದುಂಬಿ, ಮರೆತು
ಬಂದಿತೋ ಅವಳಿಂದೆ; ಅವಳೊಂದು ಪುಷ್ಪ.
ಮುಂಜಾನೆಯ ಮಂದ ಮಾರುತಕೆ
ಚೆಲ್ಲಿದಳೋ ಮಕರಂದ, ಅವಳೊಂದು ಪುಷ್ಪ

ವಾಯುವಿಹಾರಿ ವಾಯಿಸಂಚಾರಿ
ಮನುಜ ಗಂಧರ್ವರೆಲ್ಲ ಬೆರಗಾದರೋ,
ಕನಕಪುತ್ಥಳಿ ಮಕರಂದಪುಷ್ಪ
ನಿಜ ಚೆಲುವಕಂಡು ಧನ್ಯರಾದರೋ.

ದತ್ತೂ ಮಾಸ್ತರರ ಕನ್ನಡ ಕಸ್ತೂರಿಯ
ಸೊಗಸನು ಮೇಘದೂತದಿ ಕಂಡು
ಮೈಮನ ನಿಮಿರಿ ರೋಮಾಂಚನದಲಿ
ಪುಲಕಗೊಂಡವು ಆ ಸೊಗಸನುಂಡು.