Thursday, October 29, 2009

ಬಾಲ್ಯವೆಂಬುದು ಹೂವು ಕಣೋ... (ಮತ್ತೊಂದು ಹಳೆಯ ಕಥೆ) - 2

5
ಹೋಟೆಲಿನ ಮುಂದೆ ಆಟೋ ನಿಲ್ಲಿಸಿದ ಮಂಜಪ್ಪ ‘ಬಿಯರ್ ಕುಡಿಯುತ್ತ ಊಟ ಮಾಡುತ್ತಾ ಮಾತನಾಡುವ’ ಎಂದ. ನಾನು ‘ಊಟ ಮಾತ್ರ ಮಾಡುತ್ತೇನೆ’ ಎಂದೆ. ಖಾಲಿಯಿದ್ದ ಟೇಬಲ್ ಬಳಿ ಕುಳಿತು, ಇಬ್ಬರಿಗೂ ಮಟನ್ ಮೀಲ್ಸ್ ಮತ್ತು ಅವನಿಗೆ ಬಿಯರ್ ಆರ್ಡರ್ ಮಾಡಿದ.

‘ಊರಿನಲ್ಲಿ ನನ್ನನ್ನು ಗೇಲಿ ಮಾಡುವಾಗ ಟೆಲಿಪೋನ್ ಎಂದು ಹುಡುಗರು ಆಡಿಕೊಳ್ಳುತ್ತಿದ್ದರು. ನೆನಪಿದೆಯಾ?’ ಎಂದ. ನಾನು ಇಲ್ಲವೆಂದು ತಲೆಯಾಡಿಸಿದೆ.

‘ಹೌದಾ! ಹಾಗಾದರೆ, ಹಾಗೇಕೆ ಅನ್ನುತ್ತಿದ್ದರೆಂದು ನಿನಗೆ ಗೊತ್ತಿಲ್ಲ. ಹೇಳುತ್ತೇನೆ ಕೇಳು’ ಎಂದು ಬಿಯರ್ ಚಪ್ಪರಿಸುತ್ತ ಮುಂದುವರೆಸಿದ.

‘ಗಾಜೂರಿನ ನಮ್ಮ ಮನೆಯ ಜಗುಲಿಯಲ್ಲಿ ಒಂದು ರೂಮಿತ್ತು. ಅಲ್ಲಿ ಟೆಲಿಪೋನ್ ಲೈನ್‌ಮೆನ್ ಲಿಂಗಪ್ಪ ಬಹಳ ಕಾಲದಿಂದ ಬಾಡಿಗೆಗೆ ವಾಸವಾಗಿದ್ದ. ಅವನ ಸಂಸಾರ ಸಿಟಿಯಲ್ಲಿತ್ತು. ನಾನು ಅವನಿಗೆ ಹುಟ್ಟಿದೋನು ಎಂಬ ಕಾರಣಕ್ಕೆ ನನ್ನನ್ನು ಟೆಲಿಪೋನ್ ಎಂದು ರೇಗಿಸುತ್ತಿದ್ದರು! ನನ್ನಪ್ಪ ಇನ್ನೂ ಬದುಕಿದ್ದಾಗಲೆ ಲೈನ್‌ಮನ್ ಲಿಂಗಪ್ಪನಿಗೆ ನಾನು ಹುಟ್ಟುವುದೆಂದರೇನು? ಅಷ್ಟೇ ಕಾರಣಕ್ಕೆ ಹಾಗೆಂದವರೊಡನೆ ನಾನು ಜಗಳಕ್ಕೆ ನಿಲ್ಲುತ್ತಿದ್ದೆ.’ ಹಾಗೆಂದು ಸ್ವಲ್ಪ ಹೊತ್ತು ಸುಮ್ಮನೆ ಕುಡಿಯುತ್ತಾ ತಿನ್ನುತ್ತಾ ಇದ್ದು ನಂತರ ಮುಂದುವರೆಸಿದ. ‘ಆದರೆ ಅದು ನಿಜ! ಅದು ನಿಜವೆಂದು ಗೊತ್ತಾಗಿ ಕೇವಲ ಅರ್ಧ ದಿನದಲ್ಲೇ ನಾನು ಆ ಊರು, ಅಪ್ಪ್ವನೆನಿಸಿಕೊಂಡವನು, ಹೆತ್ತವ್ವ, ಅಣ್ಣ ತಮ್ಮ ಅಕ್ಕ ಎಲ್ಲರನ್ನೂ ಬಿಟ್ಟು ಬಂದುಬಿಟ್ಟೆ.’ ಎಂದ ನಿರುಮ್ಮಳನಾಗಿ!

ನನಗೆ ಗಾಬರಿ ಆಶ್ಚರ್ಯ ಎರಡೂ ಆಗಿತ್ತು. ಆತ ಮುಂದುವರೆಸಿದ.

‘ನಾನು ಊರು ಬಿಟ್ಟ ಹಿಂದಿನ ದಿನ ಗಣೇಶನ ಹಬ್ಬ ಅಲ್ಲವಾ? ಅವತ್ತು ನಮ್ಮೂರಿನಲ್ಲಿ ನಾಟಕ ಆಡಿದ್ದರು. ನೆನಪಿದೆಯೆ? ನನ್ನ ದೊಡ್ಡಣ್ಣನೂ ನಾಟಕದಲ್ಲಿ ಪಾತ್ರ ಮಾಡಿದ್ದ. ನಾಟಕ ನೋಡಲು ಮನೆಯವರೆಲ್ಲಾ ಹೋಗಿದ್ದೆವು. ಹಬ್ಬಕ್ಕೆ ಊರಿಗೆ ಬಂದಿದ್ದ ನಾನು ಅವ್ವನ ಜೊತೆಯಲ್ಲೇ ಕುಳಿತು ನಾಟಕ ನೋಡುತ್ತಿದ್ದೆ.

ಯಾವಾಗ ನಿದ್ರೆ ಹತ್ತಿತೋ! ಕಣ್ತೆರೆದಾಗ ಅವ್ವ ಇರಲಿಲ್ಲ.

ಬೇಸರದಿಂದ ಮನೆಯ ಕಡೆ ನಡೆದೆ. ಹೋಗಿ ನೋಡಿದರೆ ಒಳಗೆ ಲೈಟ್ ಉರಿಯುತ್ತಿತ್ತು! ಹೋಗುವಾಗ ಬೀಗ ಹಾಕಿಕೊಂಡು ಹೋಗಿದ್ದೆವು! ಈಗ ಬಾಗಿಲು ಮಾತ್ರ ಹಾಕಿದೆ!. ಬಾಗಿಲಿನ ಕಿಂಡಿಯಲ್ಲಿ ಇಣುಕಿದೆ.

ನಡುಮನೆಯಲ್ಲಿ, ಹಾಸಿದ್ದ ಚಾಪೆಯಲ್ಲಿ, ಲಿಂಗಪ್ಪ ಅವ್ವನ ಮೇಲೆ ಸವಾರಿ ಮಾಡುತ್ತಿದ್ದ. ಇಬ್ಬರೂ ಬೆತ್ತಲಾಗಿದ್ದರು.

ಅವ್ವನಿಗೆ ಮೊದಲ ಮಗಳ ಮದುವೆಯಾಗಿ ಮೊಮ್ಮಗಳು ಹುಟ್ಟಿದ್ದಳು. ಚಿಕ್ಕ ವಯಸ್ಸಿಗೆ ಮದುವೆಯಾಗಿದ್ದರಿಂದಲೋ ಏನೋ ವಯಸ್ಸಾದಂತೆ ಕಾಣುತ್ತಿರಲಿಲ್ಲ. ಲಿಂಗಪ್ಪನ ಬಲೆಗೆ ಬಿದ್ದಿದ್ದಳು. ಆದರೆ ನನಗೆ ಏನನ್ನಿಸಿತೋ ಏನೋ? ಮತ್ತೆ ನಾಟಕ ನಡೆಯುತ್ತಿದ್ದಲ್ಲಿಗೆ ಬಂದೆ. ದೂರದಲ್ಲಿ ನಿಂತುಕೊಂಡು ‘ಹೋ’ ಎಂದು ಅತ್ತುಬಿಟ್ಟೆ. ಬೆಳಿಗ್ಗೆ ಅಕ್ಕನ ಮನೆಗೆ ಕಾಯಿಕಣ ತೆಗೆದುಕೊಂಡು ಹೋಗಲು ಹೇಳಿದರು. ಹಿಂದೆ ಮುಂದೆ ಯೋಚಿಸದೆ ಲಾರಿ ಹತ್ತಿ ಬೊಂಬಾಯಿಗೆ ಬಂದುಬಿಟ್ಟೆ’ ಎಂದು ನಿಲ್ಲಿಸಿದ.

‘ಇದನ್ನು ನಾನು ನಂಬಬೇಕೆ?’ ಎಂದು ಪ್ರಶ್ನಿಸುತ್ತಿದ್ದ ನಾನ್ನನ್ನು ಮಧ್ಯದಲ್ಲಿಯೇ ತಡೆದು ‘ನಂಬದಿದ್ದರೆ ನನಗೇನು ನಷ್ಟವಿಲ್ಲ’ ಎಂದು ಅಸಹನೆಯಿಂದ ತಲೆಕೊಡವಿದ.

ನಾನು ‘ನಂಬುತ್ತೇನೆ.... ಈಗಲಾದರೂ ನೀನು ಊರಿಗೆ ಬರಬಹುದಲ್ಲ. ಈಗ ಲೈನ್‌ಮೆನ್ ಅಲ್ಲಿಲ್ಲ. ಆ ವಿಷಯವನ್ನು ಎಲ್ಲಾ ಮರೆತಿರುತ್ತಾರೆ. ನಿಮ್ಮ ಮನೆಯವರಿಗೂ ಸಮಾಧಾನವಾಗುತ್ತದೆ’ ಎಂದೆ. ‘ಬರಬಹುದಾಗಿತ್ತು. ಆದರೆ ಇಲ್ಲಿ ನಾನು ನನ್ನದೇ ಆದ ಬದುಕನ್ನು ಕಂಡುಕೊಂಡಿದ್ದೇನೆ. ನನ್ನದೇ ಆದ ತಾಪತ್ರಯಗಳಿವೆ.’ ಎಂದ.

‘ಹಾಗಾದರೆ ನೀನು ಊರಿಗೆ ಬರುವುದೇ ಇಲ್ಲವೇ’ ಎಂದೆ. ‘ಕಾಲ ಬಂದಾಗ ಬರುತ್ತೇನೆ. ಅಲ್ಲಿಯ ಆಸ್ತಿಯಲ್ಲಿ ನನಗೂ ಹಕ್ಕಿದೆ. ಅಪ್ಪನಲ್ಲದಿದ್ದರೂ ಅಪ್ಪನೆಂದು ನನ್ನ ಮೇಲೆ ಹಕ್ಕು ಚಲಾಯಿಸಿಲ್ಲವೆ ಅವರು?! ಅವರ ಆಸ್ತಿಗಾಗಿ ನಾನೂ ಹಕ್ಕು ಚಲಾಯಿಸುತ್ತೇನೆ! ಬಿಡುತ್ತೇನಾ?’ ಎಂದ.

ಆತನ ವ್ಯವಹಾರಿಕ ಮನಸ್ಥಿತಿ, ಒರಟುತನ ನನಗೆ ಅಶ್ಚರ್ಯವೆನಿಸಿತು. ಬೊಂಬಾಯಿಯು ಆತನಿಗೆ ಬದುಕು ಕೊಟ್ಟಿರುವಂತೆ ಅಲ್ಲಿನ ಕೊಳಕುತನವನ್ನು ಕೊಟ್ಟಿದೆ ಎಂದುಕೊಂಡೆ.

‘ನೀನು ನಿನ್ನ ವಿಳಾಸವನ್ನು ಕೊಡು. ನಾನು ನಿನಗೆ ಕಾಗದ ಬರೆಯುತ್ತಿರುತ್ತೇನೆ. ಅಲ್ಲಿಯ ವಿಷಯ ತಿಳಿಸುತ್ತಿರು. ಮನೆಯ ವಿಳಾಸ ಬೇಡ. ಈಗ ನೀನಿರುವ ವಿಳಾಸವನ್ನೇ ಕೊಡು’ ಎಂದ. ನಾನು ಪೆನ್ನು ಪೇಪರ್ ತೆಗೆದುಕೊಂಡು ವಿಳಾಸ ಬರೆಯತೊಡಿಗಿದೆ.

‘ನನ್ನ ತಾಯಿಯನ್ನು ನೋಡಿದರೆ ನನಗೆ ಪ್ರೀತಿ ಹುಟ್ಟುವುದಿಲ್ಲ. ನೀನು ನಿನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತೀಯ ಅಲ್ಲವಾ?’ ಎಂದ.

ನಾನು ಆತನ ಮುಖ ನೋಡಿದೆ. ನಿರ್ಭಾವುಕನಂತೆ ಕಂಡ.

ನಾನಿನ್ನೂ, ಮಧ್ಯಾಹ್ನದಿಂದ ನಡೆಯುತ್ತಿದ್ದ ಘಟನೆಗಳ ಹೊಡೆತದಿಂದ ಹೊರಬಂದಿರಲಿಲ್ಲ. ಆತನ ಮನಸ್ಥಿತಿಯನ್ನೂ ಅರಿಯಲಾಗಲಿಲ್ಲ.

‘ತುಂಬಾ ಪ್ರೀತಿಸುವ ನಿನ್ನ ತಾಯಿಯ ಮೇಲೆ ನೀನು ಆಣೆ ಮಾಡಬೇಕು! ನಾನು ಸಿಕ್ಕಿದ್ದನ್ನಾಗಲೀ, ಹೇಳಿದ್ದನ್ನಾಗಲೀ ಯಾರಿಗೂ ಹೇಳುವುದಿಲ್ಲವೆಂದು. ಮಾಡುತ್ತಿಯಾ?’ ಎಂದ. ನಾನು ಆಗಲೆಂದು ಸಮ್ಮತಿಸಿದೆ.

ವಿಳಾಸವನ್ನು ಬರೆದು ಅವನಿಗೆ ಕೊಡುತ್ತಾ, ‘ಇನ್ನೊಂದಾರು ತಿಂಗಳಷ್ಟೆ ನಾನು ಈ ವಿಳಾಸದಲ್ಲಿರೋದು. ನಂತರ ಕೆಲಸ ಸಿಕ್ಕಲ್ಲಿಗೆ ಹೋಗುತ್ತೇನೆ. ಆಗ ಹೊಸ ವಿಳಾಸ ತಿಳಿಸಿ ಕಾಗದ ಬರೆಯುತ್ತೇನೆ. ನಿನ್ನ ವಿಳಾಸವನ್ನೂ ಕೊಡು’ ಎಂದೆ. ಆತ ಹೇಳಿದಂತೆ ಡೈರಿಯಲ್ಲಿ ಬರೆದುಕೊಂಡೆ.

ಸಂಜೆ ಆರರವರೆಗೆ ಅದೂ ಇದೂ ಮಾತನಾಡಿ, ನನ್ನನ್ನು ಐಐಟಿ ಕ್ಯಾಂಪಸ್ ಬಳಿ ಬಿಟ್ಟು ಹೊರಡುವಾಗ, ನಾನು ‘ಹಣವೇನಾದರು ಬೇಕೆ?’ ಎಂದೆ.

‘ಸಧ್ಯಕ್ಕೆ ಅದರ ಅಗತ್ಯವಿಲ್ಲ’ ಎಂದು ಆಟೋ ಸ್ಟಾರ್ಟ್ ಮಾಡಿಕೊಂಡು ಹೊರಟೇಬಿಟ್ಟ.

6
ನನ್ನ ಎಂ.ಸ್ಸಿ, ಮುಗಿದು ಕೆಲಸಕ್ಕೆ ನಾನು ಬೆಂಗಳೂರಿನ ದಾರಿ ಹಿಡಿದೆ. ಈ ನಡುವೆ ಮಂಜಪ್ಪನಿಗೆ ಒಂದು ಕಾಗದ ಬರೆದಿದ್ದೆನಷ್ಟೆ. ಅವನಿಂದ ಉತ್ತರ ಬಂದಿರಲಿಲ್ಲ. ಬೆಂಗಳೂರಿಗೆ ಬಂದ ಮೇಲೆ ಹೊಸ ವಿಳಾಸ ತಿಳಿಸಿ ಕಾಗದ ಬರೆದೆ. ಹದಿನೈದು ದಿನಗಳಲ್ಲಿ ಕಾಗದ ವಾಪಸ್ ಬಂತು! ಆತನೂ ಮನೆ ಬದಲಾಯಿಸಿರಬಹುದೆಂದು, ಇನ್ನು ಮುಂದೆ ನಮ್ಮಿಬ್ಬರ ನಡುವೆ ಸಂಪರ್ಕ ಸಾಧ್ಯವೇ ಇಲ್ಲವೆಂದುಕೊಂಡು ಸುಮ್ಮನಾದೆ. ಆಶ್ಚರ್ಯವೆಂದರೆ ಆರು ತಿಂಗಳು ಕಳೆಯುವುದರೊಳಗಾಗಿ ಮಂಜಪ್ಪನಿಂದ ನನ್ನ ಹೊಸ ವಿಳಾಸಕ್ಕೇ ಕಾಗದ ಬಂತು! ನನ್ನ ಕಾಗದ ತಲುಪುವಷ್ಟರಲ್ಲಿ ಮಂಜಪ್ಪ ಆತನಿದ್ದ ಕೊಠಡಿಯನ್ನು ಖಾಲಿ ಮಾಡಿದ್ದನಂತೆ. ಆದರೆ ಕಾಗದ ಅಲ್ಲಿಗೆ ತಲುಪಿದಾಗ ಅಲ್ಲಿದ್ದವನು, ಆ ಕಾಗದದ ಹಿಂದಿದ್ದ ವಿಳಾಸವನ್ನು ಓದಿ ನೆನಪಿಟ್ಟುಕೊಂಡಿದ್ದನಂತೆ! ಯಾವಾಗಲೋ ಸಿಕ್ಕಿ ಕಾಗದ ಬಂದ ವಿಷಯ ಮಂಜಪ್ಪನಿಗೆ ತಿಳಿಸಿದ್ದರಿಂದ ಕಾಗದ ಬರೆದಿದ್ದ.
ಮತ್ತೆ ಎರಡು ವರ್ಷಗಳ ಕಾಲ ಅವನ ಕಡೆಯಿಂದ ಯಾವ ಕಾಗದವೂ ಬರಲಿಲ್ಲ. ಒಂದು ದಿನ ಇದ್ದಕ್ಕಿದ್ದಂತೆ ಬಂದ ಟೆಲಿಗ್ರಾಮ್‌ನಿಂದಾಗಿ, ಆ ದಿನವೇ ಆತ ವಾಪಸ್ ಗಾಜೂರಿಗೆ ಬರುತ್ತಿದ್ದಾನೆಂದು ತಿಳಿಯಿತು.

ಅದಾದ ಒಂದೆರಡು ವಾರಗಳ ನಂತರ, ಊರಿಗೆ ಹೋದಾಗ ನನಗೆ ಆಶ್ಚರ್ಯವೊಂದು ಕಾದಿತ್ತು. ಯಾರೋ ಅಂಜನ ಹಾಕುವವನು ‘ಮಂಜಪ್ಪನನ್ನು ಕೊಂದು ನೀರಿಗೆ ಎಸೆದಿದ್ದಾರೆ’ ಎಂದಿದ್ದನಂತೆ!

ಅದನ್ನು ನಂಬಿ, ಮಂಜಪ್ಪ ವಾಪಸ್ಸು ಬಂದ ದಿನವೇ ಆತನಿಗೆ ಹಾಲು-ತುಪ್ಪ ಬಿಡಲು, ಆತನ ಮನೆಯವರು ತಯಾರಿ ನಡೆಸಿದ್ದರಂತೆ!

ಅಂದೇ ಸಂಜೆ ಅವನನ್ನು ಹುಡುಕಿಕೊಂಡು ನಾನು ಊರೊಳಗೆ ಹೊರಟೆ. ನನ್ನನ್ನು ನೋಡಿದೊಡನೆ ‘ಬಾ ಹೊರಗೆ ಹೋಗಿ ಮಾತನಾಡುವ’ ಎಂದು ಹೊರಟ. ದಾರಿಯಲ್ಲಿ ‘ನೋಡಿದೆಯಾ. ಇಲ್ಲಿ ಇವರು ನನ್ನ ತಿಥಿ ಮಾಡಲು ತಯಾರಿ ನಡೆಸಿದ್ದರು’ ಎಂದ.

ನಾನು ‘ಊರು ಬಿಟ್ಟದ್ದಕ್ಕೆ ಮನೆಯವರಿಗೆ ಊರವರಿಗೆ ಏನು ಹೇಳಿದೆ?’ ಎಂದು ಪ್ರಶ್ನಿಸಿದೆ.

‘ಕಾಯಿಕಣ ತೆಗೆದುಕೊಂಡು ಲಾರಿ ಹತ್ತಿ ಕುಳಿತುಕೊಂಡವನಿಗೆ, ನಿದ್ದೆ ಬಂತು. ಎಚ್ಚರವಾದಾಗ ನಾನು ಬೊಂಬಾಯಿಯಲ್ಲಿದ್ದೆ. ನಂತರ ಲಾರಿಯವನೇ ನನ್ನನ್ನು ಸಾಕಿಕೊಂಡ. ಲಾರಿ ಓಡಿಸಿಕೊಂಡು ಜೀವನ ನಡೆಸುತ್ತಿದ್ದೆ ಎಂದು ಹೇಳಿದೆ. ಮತ್ತೆ ಮತ್ತೆ ಅಲ್ಲಿನ ವಿಷಯವನ್ನು ಪ್ರಶ್ನಿಸಬಾರದೆಂದು, ಪ್ರಶ್ನಿಸಿದರೆ ಮತ್ತೆ ವಾಪಸ್ಸು ಹೋಗುತ್ತೇನೆ ಎಂದು ಹೇಳಿದೆ. ನಾನು ಹೋದ ಹಿಂದಿನ ರಾತ್ರಿ ನಾಟಕ ನೋಡಿ ನಿದ್ದೆಗೆಟ್ಟುದ್ದರಿಂದ, ನಿಜವೆಂದು ಎಲ್ಲಾ ನಂಬಿದ್ದಾರೆ. ಹೆಚ್ಚಿಗೆ ಏನನ್ನೂ ಪ್ರಶ್ನಿಸುತ್ತಲೂ ಇಲ್ಲ’ ಎಂದ.

ಮಂಜಪ್ಪ ಸ್ವಲ್ಪ ಮೆತ್ತಾಗದಂತೆ ಕಂಡುಬಂದ. ಬೊಂಬಾಯಿಯಲ್ಲಿ ಕಂಡಿದ್ದ ಒರಟುತನ ಇಲ್ಲಿ ಕಾಣಲಿಲ್ಲ.

ಮತ್ತೆ ಆತನೇ ಮಾತನಾಡಿದ. ‘ಇಲ್ಲಿ ನನ್ನ ತಿಥಿಗೆ ತಯಾರಿ ನಡೆದಿತ್ತು ಅಂದಿದ್ದಕ್ಕೆ ನೀನು ಏನೂ ಹೇಳಲಿಲ್ಲ?’ ಅಂದ. ನಾನು ‘ಅದರಲ್ಲೇನು ಆಶ್ಚರ್ಯ. ಓಡಿ ಹೋದವನು ಹನ್ನೆರಡು ವರ್ಷವಾದರೂ ಬರದಿದ್ದರೆ ಅವರೇನು ಮಾಡುತ್ತಾರೆ’ ಎಂದೆ. ‘ಅದರಲ್ಲಿ ನನಗೇನೂ ಆಶ್ಚರ್ಯವಿಲ್ಲ. ಆದರೆ, ನಾನು ಬೊಂಬಾಯಿಯನ್ನು ಬಿಡುವುದು ಒಂದು ದಿನ ತಡವಾಗಿದ್ದರೂ ನನ್ನ ಕೊಲೆಯಾಗುತ್ತಿತ್ತು ಗೊತ್ತಾ!?’ ಎಂದ.

ನನಗೆ ಗಾಬರಿಯಾಯಿತು. ಅದನ್ನು ಅರ್ಥ ಮಾಡಿಕೊಂಡವನಂತೆ, ‘ಇನ್ನೇನು ಭಯವಿಲ್ಲ ಬಿಡು. ಮತ್ತೆ ನಾನು ಬೊಂಬಾಯಿಗೆ ಹೋಗುವುದಿಲ್ಲ. ಅಲ್ಲಿ ಏನು ಮಾಡುತ್ತಿದ್ದೆ? ಹೇಗಿದ್ದೆ? ಎಂಬುದೆಲ್ಲಾ ಒಂದು ಕನಸು ಅಷ್ಟೆ. ಅಷ್ಟೂ ದಿನಗಳು ನನ್ನ ಪಾಲಿಗೆ ನನ್ನವಲ್ಲ. ಅದರ ಬಗ್ಗೆ ನೀನೂ ಮರೆತುಬಿಡಬೇಕು. ಬಾಯಿ ತಪ್ಪಿಯೂ ಯಾರಿಗು ಹೇಳಕೂಡದು. ನನ್ನನ್ನು ಏನೂ ಕೇಳಕೂಡದು. ಅಗತ್ಯ ಬಿದ್ದಲ್ಲಿ ನನ್ನ ಬೊಂಬಾಯಿಯ ಜೀವನವನ್ನು ನಾನೇ ನಿನಗೆ ಹೇಳುತ್ತೇನೆ’ ಎಂದು ನನ್ನ ಕೈಗಳನ್ನು ಹಿಡಿದುಕೊಂಡ!

ನಾನು ಆಯ್ತೆಂದು ಸಮ್ಮತಿಸಿದೆ.

ಆಗಲೇ ನಾನು ಆತನ ಕಥೆ ಬರೆದು ಪ್ರಕಟಿಸಲು ಒಪ್ಪಿಗೆ ಕೇಳಿದ್ದು. ಆತ ‘ಸತ್ತ ನಂತರ’ ಎಂದಿದ್ದು.

7
ಮಂಜಪ್ಪ ಆಗಲೇ ನನ್ನ ಕೋರಿಕೆಯನ್ನು ಒಪ್ಪಿಬಿಟ್ಟಿದ್ದರೆ ಕಥೆಯನ್ನು ಇಲ್ಲಿಗೆ ಮುಗಿಸಿಬಿಡಬೇಕಾಗಿತ್ತು.

ಹಾಗೆ ನೋಡಿದರೆ ಕಥೆ ಇಲ್ಲಿಗೇ ಮುಗಿಯುತ್ತದೆ; ಬದುಕು ಮುಗಿಯುವುದಿಲ್ಲ.

ಊರಿಗೆ ವಾಪಸ್ ಬಂದ ವರ್ಷವೊಂದು ಕಳೆಯುವದರೊಳಗಾಗಿ ಆತನ ಅಕ್ಕನ ಮಗಳೊಂದಿಗೇ ಮದುವೆಯಾಗಿದ್ದು, ಎರಡು ಮಕ್ಕಳಾಗಿದ್ದು ಇಲ್ಲಿ ಮುಖ್ಯವಾಗುವುದಿಲ್ಲ.

ಆದರೆ ತನ್ನ ನಲವತ್ತನೇ ವಯಸ್ಸಿನಲ್ಲಿಯೇ ಆತ ಸತ್ತ ರೀತಿ ಮಾತ್ರ ಕಥೆಗೆ ಪೂರಕವೇನೋ ಅನ್ನಿಸುತ್ತಿದೆ.
ಸಾಯುವ ಮೊದಲು ಆತನಿಗೆ ಎರಡು ಬಾರಿ ಆಕ್ಸಿಡೆಂಟ್ ಆಗಿತ್ತು.

ಒಮ್ಮೆ ಬೈಕ್ ಬಿದ್ದು ಪಕ್ಕೆಲಬು ಮುರಿದುಕೊಂಡಿತ್ತು.

ಇನ್ನೊಮ್ಮೆ ಬಸ್ಸು-ಲಾರಿ ಗುದ್ದಿ, ಮುಂದೆಯೇ ಕುಳಿತಿದ್ದ ಆತನ ಕೈ ಮುರಿದಿತ್ತು.

ಎರಡೂ ಬಾರಿಯೂ ಸಾವಿನಿಂದ ಗೆದ್ದು ಬಂದಿದ್ದ. ಹಿಂದೆ ಬೊಂಬಾಯಿಯನ್ನು ಬಿಡುವುದು ಒಂದು ದಿನ ತಡವಾಗಿದ್ದರೂ ತನ್ನ ಕೊಲೆಯಾಗುತ್ತಿತ್ತೆಂದು ಆತ ಹೇಳಿದ್ದರಿಂದ, ‘ಮೂರು ಗಂಡಾಂತರಗಳನ್ನು ದಾಟಿದ್ದೀಯ. ಇನ್ನು ನಿನಗೆ ಸಾವೇ ಇಲ್ಲ’ ಎಂದು ಒಮ್ಮೆ ತಮಾಷೆ ಮಾಡಿದ್ದೆ. ಆದರೆ ಮೊನ್ನೆ ಊರಿಗೆ ಹೋದಾಗ ‘ಮಂಜಪ್ಪ ಆಕ್ಸಿಡೆಂಟ್‌ನಲ್ಲಿ ಸತ್ತ’ ಎಂದು ತಿಳಿಯಿತು.

ರಸ್ತೆ ಅಗಲೀಕರಣಕ್ಕಾಗಿ ಉರುಳಿಸಿದ್ದ ಹೆಮ್ಮರಕ್ಕೆ, ರಾತ್ರಿ ಹೊತ್ತು ಬೈಕಿನಲ್ಲಿ ಹೋಗುತ್ತಿದ್ದ ಮಂಜಪ್ಪ ಗುದ್ದಿ, ತಲೆಯೊಡೆದು ಸತ್ತುಹೋಗಿದ್ದ!

ಮಂಜಪ್ಪನ ಸಾವಿನೊಂದಿಗೆ ಆತನ ಬೊಂಬಾಯಿಯ ಬದುಕೂ ಸತ್ತು ಹೋಯಿತು.

‘ಅದು ಈ ಕಥೆಯನ್ನು ಅಪೂರ್ಣವಾಗಿಸಿಲ್ಲ’ ಎಂದುಕೊಳ್ಳುತ್ತೇನೆ.

ಬಾಲ್ಯವೆಂಬುದು ಹೂವು ಕಣೋ... ಎನ್ನುತ್ತಾ, ಆತನ ಆತ್ಮಕ್ಕೆ ಶಾಂತಿ ಕೋರುತ್ತೇನೆ.

Friday, October 23, 2009

ಬಾಲ್ಯವೆಂಬುದು ಹೂವು ಕಣೋ... (ಮತ್ತೊಂದು ಹಳೆಯ ಕಥೆ) - 1

1

ಮಂಜಪ್ಪನ ಕಥೆಯನ್ನು ಬರೆದು ಪ್ರಕಟಿಸುವುದಕ್ಕೆ ಸ್ವತಃ ಕಥಾನಾಯಕನಾದ ಮಂಜಪ್ಪನಿಂದಿಲೇ ನಾನು ಅನುಮತಿ ಪಡೆದಿದ್ದೇನೆ; ಅದೂ ಹದಿನೈದು ವರ್ಷಗಳ ಹಿಂದೆ! ತಾನು ಹೇಳಿದ ಕೆಲವೊಂದು ಘಟನೆಗಳನ್ನು ಯಾರಿಗೂ ಹೇಳಬಾರದೆಂದು ಮಂಜಪ್ಪ ಕೇಳಿಕೊಂಡಾಗ, ‘ನಿನ್ನ ಘಟನೆಯನ್ನು ಯಾರದೋ ಕಥೆಯೆಂಬಂತೆ ಬರೆಯುತ್ತೇನೆ’ ಎಂದಿದ್ದೆ. ಅದಕ್ಕೆ ಆತ ‘ಕಥೆ ಬರೆಯಲು ನನ್ನ ಅಭ್ಯಂತರವಿಲ್ಲ. ಆದರೆ ನಾನು ಹೇಳುವವರೆಗೂ ಅದನ್ನು ಪ್ರಕಟಿಸಬಾರದು. ಅಕಸ್ಮಾತ್ ನಡುವೆ ನಾನೇನಾದರೂ ಸತ್ತರೆ ಅದನ್ನೇ ನನ್ನ ಅನುಮತಿಯೆಂದು ತಿಳಿದು ಕಥೆಯನ್ನು ಪ್ರಕಟಿಸಬಹುದು’ ಎಂದು ಕಡಕ್ಕಾಗಿ ಉತ್ತರಿಸಿದ್ದ.

ಈಗ ಮಂಜಪ್ಪ ಸತ್ತು ಹೋಗಿದ್ದಾನೆ. ಅವನ ಆಸೆಯಂತೆ ಕಥೆಯನ್ನು ಪ್ರಕಟಿಸುತ್ತಿದ್ದೇನೆ.

2

ಮಂಜಪ್ಪ ನನಗೆ ಪರಿಚಯವಾಗಿದ್ದು ಸುಮಾರು ೨೫ ವರ್ಷಗಳ ಹಿಂದೆ. ಆಗ ನಾನು ಕಾಜೂರು ಸರ್ಕಾರಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದೆ. ಆರನೇ ತರಗತಿಗೆ ಮಂಜಪ್ಪ ಅಡ್ಮಿಷನ್ ಆಗಿದ್ದ. ಐದನೇ ತರಗತಿಯವರೆಗೆ ಮಾವನ ಮನೆಯಲ್ಲಿದ್ದು, ಅಲ್ಲಿನ ಶಾಲೆಯಲ್ಲಿ ಓದುತ್ತಿದ್ದನಂತೆ. ಸರ್ಕಾರಿ ಶಾಲೆಯಾಗಿದ್ದರಿಂದಲೂ ಎಲ್ಲಾ ತರಗತಿಗಳು ಒಂದೇ ಕೊಠಡಿಯಲ್ಲಿ ನಡೆಯುತ್ತಿದ್ದರಿಂದಲೂ ಆತನನ್ನು ಮೊದಲ ದಿನವೇ ನೋಡಿದ್ದೆ. ಅಂದೇ ಸಂಜೆ ವಾಪಸ್ ಮನೆಗೆ ಬರುವಾಗ ದಾರಿಯಲ್ಲಿ ಅವನೂ ಗಾಜೂರಿನವನೆಂದು ತಿಳಿಯಿತು. ಗಾಜೂರಿನ ಹುಡುಗರಿಗೆ ಆತನ ಪರಿಚಯವಿತ್ತು. ನಾನು ಗಾಜೂರಿನಿಂದ ಆಚೆಗಿದ್ದ ತೋಟದ ಮನೆಯವನು. ಅಲ್ಲಿಗೆ ನಾವು ಬಂದು ಐದಾರು ವರ್ಷಗಳು ಕಳೆದಿದ್ದವು ಅಷ್ಟೆ.

ದಾರಿಯಲ್ಲಿದ್ದ ಬೃಹತ್ ಗಾತ್ರದ ಹುಣಿಸೆ ಮರದಲ್ಲಿ, ಅವತ್ತು ಗಾಜೂರಿನ ಕೆಲವರು ಇದ್ದುದ್ದು ನಮ್ಮ ಗಮನಕ್ಕೆ ಬಂತು. ನಾವೆಲ್ಲರೂ ಆಶ್ಚರ್ಯದಿಂದ ನೋಡುತ್ತಾ, ಮರದಲ್ಲಿದ್ದ ದೋರೆ ಹಣ್ಣನ್ನು ಕಿತ್ತುಕೊಡುವಂತೆ ಕೂಗತೊಡಗಿದ್ದವು. ಆಗ ಮರದ ಮೇಲಿದ್ದವನೊಬ್ಬನು ‘ಎಲ್ಲರಿಗೂ ಕಿತ್ತು ಕೊಡುತ್ತೇನೆ. ಕಿರುಚಬೇಡಿ. ಯಾರಾದರೂ ಕೇಳಿದರೆ ನಾವು ಇಲ್ಲಿರುವುದನ್ನು ಹೇಳಬೇಡಿ’ ಎಂದು ಗೊಂಚಲು ಗೊಂಚಲು ಹುಣಿಸೆಕಾಯಿ ಕಿತ್ತು ಹಾಕಿದ. ಹಾಗೆ ಹಾಕಿದ ಒಂದು ಗೊಂಚಲಿಗೆ ನಾನೂ ಮಂಜಪ್ಪ ಒಟ್ಟಿಗೆ ಕೈಹಾಕಿ ಕಿತ್ತಾಡಿ, ಅದಕ್ಕಾಗಿ ಜಗಳವನ್ನೂ ಆಡಿದೆವು. ನಂತರ ಬೇರೆ ಹುಡುಗರು, ಮೊದಲ ದಿನವೇ ಜಗಳಕ್ಕಿಳಿದ ಆತನನ್ನು ಬೈದು, ಇಬ್ಬರಿಗೂ ರಾಜಿ ಮಾಡಿಸಿ ‘ಪ್ರೆಂಡ್ಸ್’ ಮಾಡಿಸಿದ್ದರು.

ಗಾಜೂರಿನ ಎರಡು ಪಾರ್ಟಿಗಳಿಗೆ ಗಲಾಟೆಯಾಗಿದ್ದರಿಂದ, ಪೊಲೀಸಿನವರು ಬಂದು ಎಳೆದೊಯ್ಯುತ್ತಾರೆಂದು ಊರಿನ ಗಂಡಸರೆಲ್ಲಾ ಕಾಡು ಸೇರಿದ್ದರು. ಹುಣಿಸೆ ಮರದಲ್ಲಿ ಕೆಲವರು ಬಚ್ಚಿಟ್ಟುಕೊಂಡಿದ್ದಕ್ಕೆ ಅದೇ ಕಾರಣ.

ದಿನಾ ನಾವು ಬಂದು ಹೋಗುತ್ತಿದ್ದ ದಾರಿಯಲ್ಲಿ ಕಾಜೂರಿನ ಹೊಲಗೇರಿಯಿತ್ತು. ಅಲ್ಲಿಯ ರೇವಯ್ಯ ಮೇಸ್ಟರ ಹಿತ್ತಲಿನಲ್ಲಿದ ಸೀಬೆಹಣ್ಣಿನ ಮರದಿಂದ ಹಣ್ಣನ್ನು ಕದಿಯುವುದೆಂದು ನಾನೂ ಮಂಜಪ್ಪ ಹೇಳಿದಾಗ ಬೇರೆಯವರು ಆಸಕ್ತಿ ತೋರಿಸಲಿಲ್ಲ. ರೇವಯ್ಯನವರು ನಮಗೆ ಮೇಸ್ಟರಲ್ಲವಾದರೂ, ನಮ್ಮ ಮೇಸ್ಟರುಗಳಿಗೆ ಹೇಳಿ ಬೆತ್ತದ ರುಚಿ ತೋರಿಸುತ್ತಾರೆಂಬ ಭಯ. ಹಿಂದೊಮ್ಮೆ ಹಾಗೆ ಮಾಡಿದ್ದರಂತೆ.

ಆದರೆ ನಾವು ಮಾತ್ರ ಸೀಬೆಕಾಯಿ ಕೀಳಲು ನಿರ್ಧರಿಸಿದ್ದೆವು.

ನಾನು ಮರ ಹತ್ತಿ ಕಾಯಿ ಕೀಳುವುದೆಂದು, ಮಂಜಪ್ಪ ಕೆಳಗೆ ನಿಂತು ಯಾರಾದರೂ ಬಂದರೆ ತಿಳಿಸುವುದೆಂದು ತೀರ್ಮಾನವಾಗಿತ್ತು. ಅದರಂತೆ ನಾನು ಮರ ಹತ್ತಿದ್ದಾಗ, ಏನೋ ಸದ್ದಾಯಿತೆಂದು ನನಗೆ ಹೇಳದೆ ಮಂಜಪ್ಪ ಓಡಿ ಹೋಗಿದ್ದ. ಕೆಳಗಿಳಿದ ನನಗೆ ಮಂಜಪ್ಪ ಹೀಗೆ ಮಾಡಿದ್ದು ಸಿಟ್ಟು ಭರಿಸಿತ್ತು. ಓಡಿ ಹೋಗಿ, ಹೆಗಲಲ್ಲಿದ್ದ ಚೀಲವನ್ನು ಕೈಯಿಗೆ ತಗೆದುಕೊಂಡು ಬೀಸಿ ಮಂಜಪ್ಪನಿಗೆ ಹೊಡೆದಿದ್ದೆ. ಆತ ತಲೆಯನ್ನು ಸ್ವಲ್ಪ ಬಲಕ್ಕೆ ವಾಲಿಸಿದ್ದರಿಂದ ಏಟು ಎಡಗಿವಿಯ ಕಡೆಗೆ ಬಿತ್ತು. ಆತನ ಕಿವಿ ತಲೆಬುರುಡೆಗೆ ಅಂಟಿಕೊಂಡಿದ್ದಲ್ಲಿ ಬಿರುಕು ಬಿಟ್ಟು ರಕ್ತ ಒಸರಿತ್ತು. ಆತ ಇಡೀ ಬೀದಿಗೆ ಕೇಳುವಂತೆ ಅಳತೊಡಗಿದ್ದ. ಬೇರೆ ಹುಡುಗರು ‘ಹೆಚ್ಚೇನು ಏಟು ಆಗಿಲ್ಲ’ ಎಂದು ಸಮಾಧಾನ ಮಾಡಿದರೂ, ಮನೆಯಲ್ಲಿಯೂ ಸ್ಕೂಲಿನಲ್ಲಿಯೂ ದೂರು ಹೇಳುವುದಾಗಿ ಅಳುತ್ತಲೇ ಹೇಳುತ್ತಿದ್ದ.

ಭಯದಿಂದಾಗಿ ನಾನೂ ಅಳುತ್ತಿದ್ದೆ.

‘ಹುಡುಗರಲ್ಲಿ ಒಗ್ಗಟ್ಟಿರಬೇಕೆಂದು, ಇಂತಹ ಸಣ್ಣಪುಟ್ಟ ವಿಷಯವನ್ನೆಲ್ಲ ಮನೆಯಲ್ಲಿ ಮೇಷ್ಟರಲ್ಲಿ ಹೇಳಬಾರದೆಂದು’ ಬೇರೆ ಹುಡುಗರು ತೀರ್ಮಾನಿಸಿದರು. ಮಂಜಪ್ಪನ ಸಮಾಧಾನಕ್ಕಾಗಿ, ಆತನಿಗೆ ನಾನು ನನ್ನಲ್ಲಿದ್ದ ದುಡ್ಡನ್ನು ಔಷಧಿಗಾಗಿ ಕೊಡುವಂತೆ ಹೇಳಿದರು. ‘ಏನೆ ಬರಲಿ ಒಗ್ಗಟ್ಟರಲಿ’ ಎಂದು ಮೆರವಣಿಗೆಯಲ್ಲಿ ಕೂಗಿ ಕೂಗಿ ಸ್ಫೂರ್ತಿಗೊಂಡಿದ್ದ ಹುಡುಗರೆಲ್ಲ ಅದಕ್ಕೆ ಒಪ್ಪಿದರು. ನನ್ನ ಅನುಮತಿಯನ್ನು ಯಾರೂ ಕೇಳಲಿಲ್ಲ. ನನ್ನ ತರಗತಿಗೆ ನಾನೇ ಲೀಡರ್ ಆಗಿದ್ದರಿಂದ ಬಾವುಟ ಮಾರಲು ನನಗೆ ಕೊಟ್ಟಿದ್ದರು. ಹದಿನೈದು ಬಾವುಟ ಮಾರಿ ಒಂದೂವರೆ ರೂಪಾಯಿ ಸಂಗ್ರಹಿಸಿದ್ದೆ. ಹಣ ತೆಗೆದುಕೊಳ್ಳಬೇಕಾಗಿದ್ದ ಮೇಷ್ಟರು ಅಂದು ಬಂದಿರಲ್ಲವಾದ್ದರಿಂದ ಹಣ ನನ್ನೊಂದಿಗೆ ಇತ್ತು. ವಿಧಿಯಿಲ್ಲದೆ ಅಷ್ಟೂ ಹಣವನ್ನು ಮಂಜಪ್ಪನಿಗೆ ಕೊಟ್ಟೆ.

ನಾಳೆ ಮೇಷ್ಟರಿಗೆ ಕೊಡಲು ಒಂದೂವರೆ ರೂಪಾಯಿಯನನ್ನು ಅಜ್ಜಿಯ ಚೀಲದಲ್ಲಿ ಕದಿಯಲು ತೀರ್ಮಾನಿಸಿದ್ದೆ.

ದೇವರು ದಯಾಮಯನಾಗಿದ್ದ. ಅಜ್ಜಿಯ ಚೀಲದಿಂದ ದುಡ್ಡು ಕದಿಯುವ ಪ್ರಸಂಗವೇ ಬರಲಿಲ್ಲ. ರಾತ್ರಿ ಎಲೆ ಅಡಿಕೆ ಹಾಕುತ್ತಿದ್ದ ಅಜ್ಜಿಯ ಚೀಲದಿಂದ ಆಕಸ್ಮಿಕವಾಗಿ ಚಿಲ್ಲರೆ ಬಿದ್ದಹೋದವು. ಅದನ್ನ್ತು ಅಜ್ಜಿಗೆ ಎತ್ತಿಕೊಡುತ್ತ ‘ನಾಳೆ ಸ್ಕೂಲಿನಲ್ಲಿ ಮ್ಯಾಜಿಕ್ ತೋರಿಸಲು ಬರುತ್ತಾರೆ. ಮೇಷ್ಟರು ಒಂದೂವರೆ ರೂಪಾಯಿ ತರಲು ಹೇಳಿದ್ದಾರೆ’ ಎಂದು ಸುಳ್ಳು ಹೇಳಿದೆ. ಕೈತುಂಬ ಚಿಲ್ಲರೆ ಇದ್ದುದರಿಂದಲೋ ಏನೋ, ಅಜ್ಜಿ ಸುಮ್ಮನೆ ಕೊಟ್ಟುಬಿಟ್ಟಳು.

ಆದರೆ ಸ್ಕೂಲಿನಲ್ಲಿ ಅದೃಷ್ಟ ನನ್ನ ಕಡೆಗಿರಲಿಲ್ಲ.

ಮಂಜಪ್ಪ ತಲೆಗೆ ಒಂದು ದಪ್ಪ ಟವೆಲ್ಲನ್ನು ಸುತ್ತಿಕೊಂಡು, ಜೊತೆಯಲ್ಲಿ ಅವನ ದೊಡ್ಡಣ್ಣನನ್ನು ಕರೆದುಕೊಂಡು ಬಂದಿದ್ದ. ಮೇಷ್ಟರ ಕೋಲು ಮುರಿಯುವವರೆಗೂ ನನಗೆ ಏಟು ಬಿತ್ತು. ದುಡ್ಡೂ ಹೋಯಿತು.

ಈ ಘಟನೆಯ ನಂತರ ಮಂಜಪ್ಪನಿಗೆ ನಾನು ‘ಠೂ’ ಬಿಟ್ಟುಬಿಟ್ಟೆ.

ಏಳನೇ ತರಗತಿ ಮುಗಿದ ನಂತರ ನಾನು ಅವನನ್ನು ಬೇಟಿಯಾಗಿದ್ದು ಬೊಂಬಾಯಿಯ ಹ್ಯಾಂಗಿಗ್ ಗಾರ್ಡನ್ ಬಳಿ; ಅದೂ ಸುಮಾರು ಹತ್ತು ವರ್ಷಗಳ ನಂತರ!

3

ನಾನು ಹೈಸ್ಕೂಲಿಗೆ ಕಾಜೂರುಮಠದಲ್ಲಿದ್ದ ಹಾಸ್ಟೆಲ್ಲಿಗೆ ಸೇರಿದ್ದೆ. ಮಂಜಪ್ಪ ಹೈಸ್ಕೂಲಿಗೆ ಬೇರೆ ಊರಿಗೆ ಹೋಗಿದ್ದರಿಂದ ಆತನ ಬೇಟಿಯಾಗಲಿಲ್ಲ. ಹೀಗೇ ಒಂದು ದಿನ ಇದ್ದಕ್ಕಿದ್ದಂತೆ ‘ಮಂಜಪ್ಪ ಓಡಿಹೋಗಿದ್ದಾನೆ’ ಎಂಬ ಸುದ್ದಿ ಹರಡಿತು. ಗಣೇಶ ಹಬ್ಬದ ಮಾರನೇ ದಿನ, ಅಕ್ಕಂದಿರ ಊರಿಗೆ ಕಾಯಿಕಣ ಕೊಡಲು ಹೋಗಿದ್ದ ಮಂಜಪ್ಪ ಕಾಣೆಯಾಗಿಬಿಟ್ಟಿದ್ದ. ಇಬ್ಬರು ಅಣ್ಣಂದಿರು, ಒಬ್ಬ ತಮ್ಮ, ಇಬ್ಬರು ಅಕ್ಕಂದಿರು ಅಪ್ಪ ಅವ್ವ ಇವರನ್ನೆಲ್ಲಾ ಬಿಟ್ಟು ಓಡಿ ಹೋಗಿದ್ದ.

ಎಲ್ಲಿಗೆ ಹೋಗಿದ್ದ ಎಂಬುದು ಮಾತ್ರ ಗೊತ್ತಾಗಲಿಲ್ಲ.

ಕೆಲವರು ಅವನು ಸತ್ತು ಹೋಗಿರಬಹುದೆಂದರು. ಇನ್ನು ಕೆಲವರು ಯಾವುದೋ ಡ್ಯಾಮು ಕಟ್ಟಲು ಬಲಿ ಕೊಟ್ಟಿದ್ದಾರೆ ಎಂದರು. ಅವನ ಮನೆಯವರು ಕೇಳದ ಶಾಸ್ತ್ರಗಳಿಲ್ಲ. ಮಾಡದ ದೇವರುಗಳಿಲ್ಲ. ಯಾರು ಯಾರೋ ಹೇಳಿದ್ದನ್ನೆಲ್ಲಾ ಮಾಡಿದರು. ಮಾಟ ಮಂತ್ರ ಮಾಡಿಸಿದರು.

ಏನೂ ಪ್ರಯೋಜನವಾಗದೆ, ಅವನೊಬ್ಬನಿದ್ದ ಎಂಬುದನ್ನು ಮರೆತೂಬಿಟ್ಟರು!

4

ಮುಂದೆ ನಾನು ಮಾನಸಗಂಗೋತ್ರಿ ಸೇರಿದ್ದೆ.

ಎಂ.ಎಸ್ಸಿ. ಎರಡನೇ ವರ್ಷ ಹುಡುಗರೆಲ್ಲಾ ಉತ್ತರಭಾರತದ ಟೂರ್ ಹೋಗಿದ್ದೆವು. ವಾಪಸ್ ಬರುವಾಗ ಬೊಂಬಾಯಿ ಕಡೆಯ ನೋಡುತಾಣವಾಗಿತ್ತು. ಹ್ಯಾಂಗಿಗ್ ಗಾರ್ಡನ್ ಬಳಿ ಬಂದಾಗ, ಅಂದು ನನಗೆ ಸ್ವಲ್ಪ ತಲೆನೋವಿದ್ದರಿಂದ ನಾನು ಬಸ್ಸಿನಲ್ಲೆ ಕುಳಿತೆ. ಆಗಲೇ ಮಧ್ಯಾಹ್ನ ಎರಡು ಗಂಟೆಯಾಗಿತ್ತು. ಹಸಿವಿನಿಂದ ನನಗೆ ಹಾಗೇ ಜೂಗರಿಕೆ ಹತ್ತಿತ್ತು.

ಯಾರೋ ನನ್ನ ಹೆಸರನ್ನು ಕರೆಯುತ್ತಿರುವಂತೆ ಕೇಳಿ ಎಚ್ಚರವಾಯಿತು. ಮತ್ತೆ ಮತ್ತೆ ನನ್ನ ಹೆಸರನ್ನು ಕರೆದಂತಾಗಿ, ಕೇಳಿದ್ದು ಕನಸಲ್ಲವೆಂದುಕೊಂಡೆ.

ಕಿಟಕಿಯಿಂದ ಹೊರಗೆ ಇಣುಕಿ ದೃಷ್ಟಿ ಹಾಯಿಸಿದೆ.

ಅಲ್ಲಿದ್ದ ಆಟೋದಲ್ಲಿ ಕುಳಿತಿದ್ದ ವ್ಯಕ್ತಿ ನನ್ನನ್ನು ನೋಡಿ ಹಲ್ಲು ಕಿರಿಯಿತು.

ನನಗೆ ಪೆಚ್ಚಾಯಿತು. ಬೊಂಬಾಯಿಯಲ್ಲಿ ನನಗಾರೂ ಪರಿಚಯದವರಿರಲಿಲ್ಲ. ಅಲ್ಲಿ ಪರಿಚಯದ ನೆಪ ಹೇಳಿ ಮೋಸ ಮಾಡುತ್ತಾರೆಂದು, ಕೆಲವರು ನಾವು ಟೂರ್ ಹೊರಟಾಗ ಹೇಳಿದ್ದರಿಂದ ಹೆದರಿಕೊಂಡು, ಅವನ ಹಲ್ಕಿರಿತಕ್ಕೆ ನಾನು ಪ್ರತಿಕ್ರಿಯಿಸಲಿಲ್ಲ.

ಮತ್ತೆ ನನ್ನ ಹೆಸರನ್ನು ಆತ ಕೂಗಿದಾಗ, ಅನೈಚ್ಛಿಕವಾಗಿ ‘ಏನು?’ ಎಂಬಂತೆ ತಲೆಯಾಡಿಸಿದೆ.

‘ನೀನು ಗಾಜೂರಿನ ತೋಟದ ಮನೆಯವನಲ್ಲವಾ?’ ಎಂದು ಕನ್ನಡದಲ್ಲಿಯೇ ಕೇಳಿದಾಗ ನನಗೆ ಮೂರ್ಛೆ ಬೀಳುವುದೊಂದು ಬಾಕಿ. ಹೌದೆಂದೆ.

ತಕ್ಷಣ ಆಟೋ ಇಳಿದು ಬಂದ ಆತ ‘ನಾನು ಕಣೋ ಮಂಜಪ್ಪ. ಗೊತ್ತಾಗಲಿಲ್ಲವಾ?’ ಎಂದ.

ಒಂದು ನಿಮಿಷ ನಾನು ನಾನಾಗಿ ಉಳಿದಿರಲಿಲ್ಲ. ಆಶ್ಚರ್ಯದಿಂದ ಅವನನ್ನು ನೋಡುತ್ತಿದ್ದೆ.

ಸಾವಿರ ಪ್ರಶ್ನೆಗಳು ಮನಸ್ಸಿಗೆ ಬಂದವು. ಬಾಯಿಗೆ ಬರಲಿಲ್ಲ.

‘ಗೊತ್ತಾಗಲಿಲ್ಲವಾ?’ ಎಂದು ಮತ್ತೊಮ್ಮೆ ಕೇಳಿದಾಗ ‘ಗೊತ್ತಾಯಿತು’ ಎಂದುಸುರಿದೆ. ‘ಆಗ ‘ಠೂ’ ಬಿಟ್ಟಿದ್ದನ್ನು ಇನ್ನೂ ಮರೆತಿಲ್ಲವೆನೋ’ ಎಂದು ನಕ್ಕ. ನನಗೆ ನಗು ಬರಲಿಲ್ಲ.

ಸೀರಿಯಸ್ಸಾಗಿ ಕೇಳಿದೆ. ‘ಏನು ನಿನ್ನ ಕಥೆ. ನಿಮ್ಮ ಮನೆಯವರು ನಿನಗಾಗಿ ತುಂಬಾ ಹುಡುಕಿದರು ಗೊತ್ತಾ?’ ಎಂದೆ.

ಅಷ್ಟರಲ್ಲಿ ಅಲ್ಲೇ ಹತ್ತಿರದಲ್ಲಿ ಜೋರಾಗಿ ಜಗಳ ಶುರುವಾಯಿತು. ದೊಡ್ಡ ಗುಂಪೇ ಸೇರಿತು. ಐದೇ ನಿಮಿಷದಲ್ಲಿ ಪೊಲೀಸರು ಬಂದರು.

ಮಂಜಪ್ಪ ನನ್ನನ್ನು ಆಟೋ ಕಡೆಗೆ ತಳ್ಳುತ್ತ ‘ಅದೊಂದು ದೊಡ್ಡ ಕಥೆ. ಎಲ್ಲವನ್ನೂ ಹೇಳುತ್ತೇನೆ. ಈಗ ಹೇಳು ನೀನೆಲ್ಲಿ ಉಳಿದುಕೊಂಡಿದ್ದೀಯಾ?’ ಎಂದ. ನಾನು ‘ಐಐಟಿ ಕ್ಯಾಂಪಸ್ಸಿನಲ್ಲಿ’ ಎಂದೆ. ‘ಹೌದೇ?! ಅದು ನಾನಿರುವಲ್ಲಿಗೆ ಬಹಳ ಹತ್ತಿರ. ನಾನೇ ನಿನ್ನನ್ನು ಸಂಜೆ ಅಲ್ಲಿ ಬಿಡುತ್ತೇನೆ. ಈಗ ಬಾ ಹೋಗೋಣ. ಜಗಳ ಜಾಸ್ತಿಯಾಗಿ ಗೋಲಿಬಾರ್ ಆದರೂ ಆಶ್ಚರ್ಯವಿಲ್ಲ’ ಎಂದ. ಗಲಾಟೆಯ ಗುಂಪು ನಮ್ಮ ಹತ್ತಿರಕ್ಕೆ ಬಂತು.

ನಾನು ನಮ್ಮ ಹುಡುಗರು ಹೋಗಿದ್ದ ಕಡೆ ನೋಡಿದೆ. ದೂರದಲ್ಲಿ ಕಂಡ ಒಬ್ಬನಿಗೆ ‘ನಾನು ಸಂಜೆ ಹಾಸ್ಟೆಲ್ಲಿಗೆ ಬರುತ್ತೇನೆ’ ಎಂದು ಕೂಗಿ ಹೇಳಿ ಆಟೋ ಹತ್ತಿದೆ.

ಸ್ಟಾರ್ಟ್ ಮಾಡಿ, ಒಂದೇ ಬಾರಿಗೆ ಸ್ಪೀಡ್ ಪಿಕ್‌ಅಪ್ ಮಾಡಿಕೊಂಡು ಆಟೋ ಓಡಿಸುತ್ತಿದ್ದ ಮಂಜಪ್ಪನಿಗೆ ‘ಏನದು ಗಲಾಟೆ’ ಎಂದೆ. ‘ಏನು ಗಲಾಟೆಯೋ ಯಾರಿಗೆ ಗೊತ್ತು. ಈ ಊರಿನಲ್ಲಿ ಹಾಗೆಯೇ. ಗಲಾಟೆ ಶುರುವಾಗುವುದು ಯಾರಿಗೂ ಗೊತ್ತಾಗುವುದಿಲ್ಲ. ಆದರೆ ಬೇಗ ಹಬ್ಬಿ ಬೇಗ ಮುಗಿದು ಹೋಗುತ್ತದೆ. ಅಷ್ಟರಲ್ಲಿ ಒಂದೆರಡು ಹೆಣ ಬೀಳುತ್ತವೆ’ ಎಂದ.

ಇದ್ದಕ್ಕಿದ್ದಂತೆ ಮಂಜಪ್ಪ ಸಿಕ್ಕು ಅವನ ಆಟೋದಲ್ಲಿ ನಾನು ಹೋಗುತ್ತಿರುವ ವಿಚಿತ್ರದ ಬಗ್ಗೆ ನಾನು ಯೋಚಿಸುತ್ತಿದ್ದೆ.

ಮುಂದುವರೆಯುವುದು.........

Wednesday, October 21, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ -27

ಮಂಜಣ್ಣನ ಹೀರೋ ಮೆಜೆಸ್ಟಿಕ್
ಮಂಜಣ್ಣ ಯಾರ ಕೈಯಲ್ಲೂ ಮುಟ್ಟಿಸದ ಒಂದು ವಸ್ತುವೆಂದರೆ ‘ಹೀರೋಮೆಜೆಸ್ಟಿಕ್’ ಎಂಬ ಮೋಟಾರ್ ಸೈಕಲ್. ಅದು ರಸ್ತೆಯಲ್ಲಿ ಓಡಾಡಿದ್ದಕ್ಕಿಂತ ಮೂಲೆಯಲ್ಲಿ ನಿಂತದ್ದೇ ಹೆಚ್ಚು. ಅದನ್ನು ನಾವೂ ಆಸೆ ಕಂಗಳಿಂದ ನೋಡುತ್ತಾ, ಅದನ್ನು ಸವಾರಿ ಮಾಡಿದಂತೆ ಕನಸು ಕಾಣುತ್ತಾ ಇದ್ದೆವು. ಕೊನೆಯ ಪಕ್ಷ ಅದನ್ನು ಸುಮ್ಮನೆ ತಳ್ಳಿಕೊಂಡು ಓಡಾಡಿಸಲು ಕೊಟ್ಟಿದ್ದರೂ ನಮಗೆ ಆಗ ಸಂತೋಷವಾಗುತ್ತಿತ್ತೇನೋ!


ನಮ್ಮ ಈ ಆಸೆ ಈಡೇರುವ ದಿನವೂ ಒಮ್ಮೆ ಬಂತು. ಮಂಜಣ್ಣನಿಗೆ ಊರಿನಲ್ಲಿ ಸ್ವಲ್ಪ ಜಮೀನಿತ್ತು. ಅದರಲ್ಲಿ ಆತನ ಹಿರೇಹೆಂಡತಿ ಬಾಳೆ ಹಾಕಿಕೊಂಡಿದ್ದಳು. ಅದಕ್ಕೆ ಆತ ನೀರು ಬಿಡಲು ಆಗಾಗ ಊರಿಗೆ ಹೋಗುತ್ತಿದ್ದ. ಆಗಾಗ ಕೈಕೊಡುತ್ತಿದ್ದ ತನ್ನ ಮೊಟಾರ್ ಸೈಕಲ್ಲನ್ನು ಆತ ನೆಚ್ಚಿಕೊಳ್ಳುತ್ತಿರಲಿಲ್ಲ. ಊರಿಗೆ ಹೋಗುವುದು ಹೆಚ್ಚಾದಾಗ ಅದನ್ನು ಒಂದು ಬಾರಿ ಚೆನ್ನಾಗಿ ರಿಪೇರಿ ಮಾಡಿಸಿಬಿಡಬೇಕೆಂದು ತೀರ್ಮಾನ ಮಾಡಿದ. ಆದರೆ ಅದನ್ನು ಚನ್ನರಾಯಪಟ್ಟಣದವರೆಗೆ ತೆಗೆದುಕೊಂಡು ಹೋಗುವ ಬಗೆ ಹೇಗೆ? ಅದಕ್ಕಾಗಿ ಆತ ನನ್ನನ್ನು ಮತ್ತು ವೆಂಕಟೇಶ ಎಂಬ ಇನ್ನೊಬ್ಬ ಹುಡುಗನನ್ನು ಕೇಳಿಕೊಂಡ. ‘ಚನ್ನರಾಯಪಟ್ಣದವರೆಗೆ ಅದನ್ನು ತಂದುಕೊಟ್ಟರೆ, ಅದನ್ನು ರಿಪೇರಿ ಮಾಡಿಸಿಕೊಂಡು ಬರುವಾಗ ಮೂರೂ ಮಂದಿ ವಾಪಸು ಬರೋಣ. ಅಲ್ಲಿ ನಿಮಗೆ ನಾನು ಮಿಲಿಟರಿ ಹೋಟೆಲ್ಲಿನಲ್ಲಿ ಊಟ ಕೊಡಿಸುತ್ತೇನೆ’ ಎಂದು ಹೇಳಿದ. ‘ಬೇಕಾದರೆ ನೀವು ಇಳಿಜಾರಿನಲ್ಲಿ ಅದರ ಮೇಲೆ ಕುಳಿತುಕೊಂಡು ಬರಬಹುದು’ ಎಂದೂ ಸೇರಿಸಿದ. ಆತನ ಎರಡನೇ ಮಾತು ಮಾತ್ರ ನಮಗೆ ಕೇಳಿಸಿದ್ದು! ಕೇವಲ ಕನಸಾಗಿದ್ದ ಹೀರೋಮೆಜೆಸ್ಟಿಕ್ ಮೋಟಾರ್ ಸೈಕಲ್ಲನ್ನು ಹತ್ತಿ ಅದರಲ್ಲಿ ಡಬಲ್ ರೈಡ್ ಹೋಗುವ ಅವಕಾಶವನ್ನು ಕಳೆದುಕೊಳ್ಳಲು ನಾವಂತೂ ಸಿದ್ಧರಿರಲಿಲ್ಲ. ಒಪ್ಪಿಯೇ ಬಿಟ್ಟೆವು. ಮಂಜಣ್ಣ, ‘ನಾನು ಮೊದಲು ಹೋಗಿ ಬರಗೂರಿನಲ್ಲಿ ತೋಟಕ್ಕೆ ನೀರು ಬಿಡುತ್ತಿರುತ್ತೇನೆ. ನೀವು ಅಲ್ಲಿಯವರೆಗೆ ತಳ್ಳಿಕೊಂಡು ಬನ್ನಿ. ಅಲ್ಲಿಂದ ಮುಂದಕ್ಕೆ ನಾನೂ ಬರುತ್ತೇನೆ’ ಎಂದು ಹೇಳಿದ.
ಒಂದು ಭಾನುವಾರ ಮಂಜಣ್ಣ ಅದನ್ನು ಹೇಗೆ ತಳ್ಳಿಕೊಂಡು ಬರಬೇಕೆಂದು, ಇಳಿಜಾರಿನಲ್ಲಿ ಹೇಗೆ ಕ್ಲಚ್ ಹಿಡಿದು ಓಡಿಸಿಕೊಂಡು ಬರಬೇಕೆಂದು ನಾಲ್ಕೈದು ಬಾರಿ ಹೇಳಿ, ರಿಟರ್ನ್ ಬಸ್ ಹತ್ತಿದ. ಹಿಂದೆಯೇ ನಾವು ಮೋಟಾರ್ ಸೈಕಲ್‌ನ್ನು ಹತ್ತಿದೆವು. ಕುಂದೂರುಮಠದಿಂದ ಕುಂದೂರು ಕಡೆಗೆ ಪ್ರಾರಂಭದಲ್ಲಿಯೇ ದೊಡ್ಡ ಇಳಿಜಾರು ಇದ್ದುದರಿಂದ ನಮಗೆ ಅನುಕೂಲವೇ ಆಗಿತ್ತು. ಗಾಡಿ ಓಡಿಸುತ್ತಿದ್ದ ನಾನು, ಕ್ಲಚ್ ಹಿಡಿದು, ಯಾವುದಕ್ಕೂ ಇರಲಿ ಎಂದು ಬಲಗೈಯಲ್ಲಿ ಬ್ರೇಕನ್ನು ಸ್ವಲ್ಪ ಹಿಡಿದುಕೊಂಡು ಓಡಿಸುತ್ತಿದ್ದೆ. ಸೈಕಲ್‌ನ್ನು ಕೈಬಿಟ್ಟುಕೊಂಡೆಲ್ಲಾ ಓಡಿಸುತ್ತಾ, ಅದರ ಮೇಲೆ ನಾನಾ ವರಸೆಗಳನ್ನು ಮಾಡುತ್ತಿದ್ದ ನನಗೆ ನಿರ್ಜೀವವಾಗಿ ಓಡುತ್ತಿದ್ದ ಮೋಟಾರ್ ಸೈಕಲ್ ಹೊಸದೆಂದು ಅನ್ನಿಸಲೇ ಇಲ್ಲ.
ಇನ್ನೇನು ಇಳಿಜಾರು ಮುಗಿಯಬೇಕು ಎನ್ನುವಷ್ಟರಲ್ಲಿ ಯಾವುದೋ ಜ್ಞಾನದಲ್ಲಿ ಎಡಗೈಯಲ್ಲಿ ಹಿಡಿದಿದ್ದ ಕ್ಲಚ್‌ನ್ನು ಬಿಟ್ಟುಬಿಟ್ಟೆ. ಆ ಕ್ಷಣ ಮೋಟಾರ್ ಸೈಕಲ್ ವಿಚಿತ್ರ ಶಬ್ದ ಮಾಡುತ್ತಾ, ಮುಗ್ಗರಿಸುತ್ತಾ ಸ್ಟಾರ್ಟ್ ಆಗೇಬಿಟ್ಟಿತು! ನನಗೆ ಗಾಬರಿ, ಸಂತೋಷ ಎಲ್ಲವೂ ಆಯಿತು. ಕಷ್ಟಪಟ್ಟು ಬೀಳದಂತೆ ಬ್ಯಾಲೆನ್ಸ್ ಮಾಡುತ್ತಾ ಗಾಡಿ ಓಡಿಸತೊಡಗಿದೆ. ಬಹುಶಃ ಅದರ ಪ್ಲಗ್‌ನಲ್ಲೋ ಫಿಲ್ಟರ್‌ನಲ್ಲೋ ಏನೋ ತೊಂದರೆ ಇದ್ದಿರಬೇಕು. ಅದಕ್ಕೆ ಅದು ಮಂಜಣ್ಣ ಸ್ಟಾರ್ಟ್ ಮಾಡಿದಾಗ ಸ್ಟಾರ್ಟ್ ಆಗದೆ, ತುಂಬಾ ವೇಗವಾಗಿ ಬರುತ್ತಾ ಒಂದೇ ಬಾರಿ ಕ್ಲಚ್ ಬಿಟ್ಟಿದ್ದರಿಂದ ಹೇಗೋ ಸ್ಟಾರ್ಟ್ ಆಗಿರಬೇಕು. ಕುಂದೂರನ್ನು ದಾಟಿ ಮುಂದೆ ಬರುವವರೆಗೆ ನಾವಿಬ್ಬರೂ ಮಾತೇ ಆಡಿರಲಿಲ್ಲ. ಅಲ್ಲಿಯವರೆಗೆ ನಾನು ಗಾಡಿ ಓಡಿಸುವುದನ್ನು ಭಯದಿಂದ ನೋಡುತ್ತಾ ಭದ್ರವಾಗಿ ನನ್ನನ್ನು ಹಿಡಿದು ಕುಳಿತಿದ್ದ ವೆಂಕಟೇಶ ನಿಧಾನವಾಗಿ, ‘ನಾನೂ ಓಡಿಸುತ್ತೇನೆ’ ಎಂದು ರಾಗ ತೆಗೆದ.
ಅವನಿಗೆ ಮೋಟಾರ್ ಸೈಕಲ್ ಓಡಿಸುವುದು ಇಷ್ಟೊಂದು ಸುಲಭವೇ ಅನ್ನಿಸಿರಬೇಕು! ಆದರೆ ಅಷ್ಟು ಬೇಗ ನಾನು ಅವನಿಗೆ ಮೋಟರ್ ಸೈಕಲ್ಲನ್ನು ಕೊಡಲು ಸಿದ್ಧನಿರಲಿಲ್ಲ. ನಾನು ‘ಪೆಟ್ರೊಲ್ ಇದೆಯೋ ಇಲ್ಲವೋ. ಈಗ ನಿಲ್ಲಿಸಿದರೆ ಮತ್ತೆ ಸ್ಟಾರ್ಟ್ ಆಗದಿದ್ದರೆ ಮತ್ತೆ ನೀನೆ ತಳ್ಳಬೇಕಾಗುತ್ತೆ’ ಎಂದಿದ್ದರಿಂದ ತೆಪ್ಪಗೆ ಕುಳಿತುಕೊಂಡ. ನಾನು ರಾಜಠೀವಿಯಿಂದ ಗಾಡಿ ಓಡಿಸುತ್ತಾ ಮುಖ್ಯರಸ್ತೆಗೆ ಬಂದೆ. ಪೆಟ್ರೊಲ್ ಟ್ಯಾಂಕ್ ರಸ್ಟ್ ಹಿಡಿಯುತ್ತದೆ ಎಂದು ಪೆಟ್ರೊಲ್ ಪೂರಾ ಡ್ರೈ ಆಗಲು ಮಂಜಣ್ಣ ಬಿಟ್ಟಿರಲಿಲ್ಲ. ಅರ್ಧ ಲೀಟರಿನಷ್ಟು ಪೆಟ್ರೊಲ್ ಇತ್ತೆಂದು ಕಾಣುತ್ತದೆ. ಪೆಟ್ರೊಲ್ ಖಾಲಿಯಾಗಿ ಗಾಡಿ ನಿಲ್ಲುವ ಯಾವ ಸೂಚನೆಯೂ ಬಾರದಿದ್ದಾಗ ವೆಂಕಟೇಶ ಮತ್ತೆ ಮತ್ತೆ ರಾಗ ತೆಗೆಯುತ್ತಿದ್ದ. ನಾನು ‘ಸ್ಟಾರ್ಟ್ ಆಗದಿದ್ದರೆ, ನೀನೇ ತಳ್ಳುವುದಾದರೆ ಹೇಳು. ನಿಲ್ಲಿಸುತ್ತೇನೆ’ ಎಂದು ಹೆದರಿಸುತ್ತಲೇ ಇದ್ದೆ.
ಅಂತೂ ಇಂತು ಬರಗೂರಿನವರೆಗೆ ಬಂದಾಗ, ಗಾಡಿ ಕೆಟ್ಟ ಶಬ್ದ ಮಾಡುತ್ತಾ, ಮುಗ್ಗುರಿಸುತ್ತಾ ನಿಂತು ಹೋಯಿತು. ನಾವು ಗಾಡಿಯನ್ನು ಓಡಿಸಿಕೊಂಡು ಬಂದಿದ್ದನ್ನು ಕೇಳಿ ಮಂಜಣ್ಣನಿಗೆ ತುಂಬಾನೆ ಖುಷಿಯಾಯಿತು. ಅದೇ ಖುಷಿಯಲ್ಲಿ, ಊರಿನಲ್ಲಿ ಬೈಕಿದ್ದ ಇನ್ನಾರನ್ನೋ ಹುಡುಕಿ ಒಂದಷ್ಟು ಪೆಟ್ರೊಲನ್ನು ಸಂಪಾದಿಸಿಬಿಟ್ಟ. ಗಾಡಿಗೆ ಪೆಟ್ರೊಲ್ ತುಂಬಿಸಿ, ಸ್ಟಾರ್ಟ್ ಮಾಡಿದರೆ ಅದು ಮುಷ್ಕರ ಕುಳಿತವರಂತೆ ಮೌನವಾಗಿಬಿಟ್ಟಿತ್ತು. ಏನೆಲ್ಲಾ ಸರ್ಕಸ್ ಮಾಡಿದರೂ ಅದು ಸ್ಟಾರ್ಟ್ ಆಗಲಿಲ್ಲ. ಮಂಜಣ್ಣನನ್ನು ಗಾಡಿಯಲ್ಲಿ ಕುಳ್ಳಿರಿಸಿ ನಾವಿಬ್ಬರು ದೂಡಿದರೂ ಸ್ಟಾರ್ಟ್ ಆಗಲಿಲ್ಲ. ಕೊನೆಗೆ ಮಂಜಣ್ಣ ‘ಮಗಾ ನಿನ್ನ ಕೈಗುಣ ಚೆನ್ನಾಗಿರಂಗೆ ಕಾಣುತ್ತೆ. ನೀನೆ ಕುಳಿತು ಓಡ್ಸು, ನಾವೇ ತಳ್ತೀವಿ’ ಎಂದು ನನಗೆ ಗಾಡಿ ಓಡಿಸಲು ಕೊಟ್ಟ. ಆದರೆ ನನ್ನ ಕೈಗುಣವೂ ಚೆನ್ನಾಗಿರಲಿಲ್ಲ! ಅದು ಸ್ಟಾರ್ಟ್ ಆಗಲಿಲ್ಲ.
ಕೊನೆಗೆ ಅದನ್ನು ತಳ್ಳಿಕೊಂಡು ಅಲ್ಲಿಂದ ಒಂದು ಕಿಲೋಮೀಟರ್ ದೂರವಿರುವ ಬರಗೂರ್ ಹ್ಯಾಂಡ್‌ಪೋಸ್ಟ್ ಬಳಿಗೆ ಬಂದೆವು. ಅಲ್ಲಿ ಸೈಕಲ್ ಶಾಪ್ ಇಟ್ಟುಕೊಂಡಿದ್ದ ಸಾಬರು ‘ನಾನೇ ರಿಪೇರಿ ಮಾಡುತ್ತೇನೆ’ ಎಂದು, ಅದರ ಫ್ಲಗ್ ಎಲ್ಲಾ ಬಿಚ್ಚಿ ಕ್ಲೀನ್ ಮಾಡಿದ. ನಂತರ ಸರಾಗವಾಗಿ ಅದು ಸ್ಟಾರ್ಟ್ ಆಯಿತು. ಆ ಸಾಬರು ‘ಇನ್ನೇನು ಭಯವಿಲ್ಲ. ಬೇರೆ ರಿಪೇರಿಯು ಬೇಕಿಲ್ಲ. ಆಗಾಗ ಬಂದು ಫ್ಲಗ್ ಕ್ಲೀನ್ ಮಾಡಿಸಿಕೊಳ್ಳಿ’ ಎಂದು ಉಚಿತವಾಗಿ ಸಲಹೆ ಕೊಟ್ಟ. ಮಂಜಣ್ಣ ನಮಗೆ ಮಾತು ಕೊಟಿದ್ದಂತೆ, ಚನ್ನರಾಯಪಟ್ಟಣದವರೆಗೂ ನಮ್ಮನ್ನು ತ್ರಿಬಲ್ ರೈಡ್ ಮಾಡುತ್ತಾ ಕರೆದುಕೊಂಡು ಬಂದು ಮಿಲಿಟರಿ ಹೋಟೆಲ್ಲಿನಲ್ಲಿ ಊಟ ಕೊಡಿಸಿದ. ವಾಪಸ್ ಬರುವಾಗ ತ್ರಿಬಲ್ ರೈಡ್ ಮಾಡುತ್ತಾ ಬಂದೆವು. ಇಳಿಜಾರಿನಲ್ಲಿ, ಹಾಗೂ ಮಟ್ಟವಾದ ರಸ್ತೆಯಲ್ಲಿ ಹೇಗೋ ಹೋಗುತ್ತಿದ್ದ ನಾವು ಏರು ರಸ್ತೆ ಬಂದಾಗ ಮಾತ್ರ, ಇಳಿದು ಮಂಜಣ್ಣನ ಹಿಂದೆ ಓಡಬೇಕಾಗಿತ್ತು. ಅಂತೂ ಕೊನೆಗೆ ನಾವು ಕುಂದೂರುಮಠ ತಲುಪಿದಾಗ ಸಂಜೆಯ ಸೂರ್ಯ ಮೇಲಿನ ಸುಬ್ಬಪ್ಪನ ಗುಡಿಯ ಹಿಂದೆ ಮುಳುಗುವುದರಲ್ಲಿದ್ದ!

{ಈ ಕಂತಿನೊಂದಿಗೆ 'ನನ್ನ ಹೈಸ್ಕೂಲು ದಿನಗಳು' ಪುಸ್ತಕದ ಇ-ರೂಪ ಮುಗಿಯಲಿದೆ. ಮುಂದೆ ಈ ಪುಸ್ತಕವನ್ನು ಕುರಿತು ಮೂವರು ಲೇಖಕರು ಬರೆದ ಬರಹಗಳನ್ನು ಮೂರು ಕಂತಿನಲ್ಲಿ ಪ್ರಕಟಿಸುತ್ತೇನೆ. ಥಟ್ ಅಂತ ಹೇಳಿ ಕಾರ್ಯಕ್ರಮದ ಡಾ.ನಾ. ಸೋಮೇಶ್ವರ ಅವರು ತಮ್ಮ ಯಕ್ಷಪ್ರಶ್ನೆಯಲ್ಲಿ ಹೈಸ್ಕೂಲು ದಿನಗಳ ಸವಿ ಸವಿ ನೆನಪು…  ಎಂದು ಬರೆದಿದ್ದಾರೆ. ಒಮ್ಮೆ ಭೇಟಿಕೊಡಿ. ನಿಮ್ಮ ಸಹಕಾರಕ್ಕಾಗಿ ಧನ್ಯವಾದಗಳು}

ಚಿತ್ರಕೃಪೆ : ಅಂತರಜಾಲ