Tuesday, March 30, 2010

ಶಬ್ದಗಾರುಡಿಗ ಬೇಂದ್ರೆಯವರ ಮೂರು-ಮೂರೇ ಸಾಲುಗಳು

ಬದುಕಿನಲ್ಲಿ ಬೆಂದರೆ ಬೇಂದ್ರೆಯಾಗುತ್ತಾನಂತೆ! ಹಾಗೆ ಬದುಕಿನುದ್ದಕ್ಕೂ ಬೇಯುತ್ತಲೇ ಇದ್ದ ಬೇಂದ್ರೆಯವರನ್ನು ವಿಶೇಷ ಕವಿಯಾಗಿ ಕನ್ನಡ ಎಂ.ಎ. ಮಾಡುವಾಗ ಓದಬೇಕಾಯಿತು. ಆಗಿನ ನನ್ನ ದರದೃಷ್ಟವೆಂದರೆ ಬೇಂದ್ರೆಯವರ ಯಾವುದೇ ಸಾಹಿತ್ಯಕೃತಿ ಮರುಮುದ್ರಣವಾಗಿರಲಿಲ್ಲ. ಹಳೆಯ ಪ್ರತಿಗಳು ಸಿಗುತ್ತಿರಲಿಲ್ಲ. ಆದ್ದರಿಂದ ವಿಧಿಯಿಲ್ಲದೆ, ವಿ.ವಿ.ಯವರು ಪೂರೈಕೆ ಮಾಡಿದ್ದ ಪಾಠಗಳಲ್ಲಷ್ಟೇ ಬೇಂದ್ರೆಯವರನ್ನು ಓದಬೇಕಾಯಿತು. ಹಾಗಾಗಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತೇನೋ! ಏಕೆಂದರೆ ಬೇಂದ್ರೆಯವರ ಸಾಹಿತ್ಯವನ್ನು ಮೂಲದಲ್ಲೇ ಓದಬೇಕು ಎಂಬ ‘ಹೆಬ್ಬಯಕೆ’ ನನ್ನಲ್ಲಿ ಆಗಿನಿಂದಲೂ ಮೂಡಿಬಿಟ್ಟಿತು. ಅವರ ಸಮಗ್ರ ಕಾವ್ಯವನ್ನು ಸೇರಿಸಿ ‘ಔದುಂಬರ ಗಾಥೆ’ ಎಂಬ ಹೆಸರಿನಲ್ಲಿ ಆರು ಸಂಪುಟಗಳು ಪ್ರಕಟವಾದಾಗ ನನ್ನ ಆಸೆ ಈಡೇರುವ ಕಾಲ ಬಂದಿತೆಂದು ಸಂತೋಷವಾಯಿತು. ಹೀಗೆ ನಮ್ಮ ಗ್ರಂಥಾಲಯಕ್ಕೆ ಬಂದ ಆರು ಸಂಪುಟಗಳನ್ನು ನನ್ನ ಸುಪರ್ದಿನಲ್ಲಿಯೇ ಇಟ್ಟುಕೊಂಡು ಸಮಯ ಸಿಕ್ಕಾಗಲೆಲ್ಲಾ ಓದುತ್ತಿದ್ದೆ. ಮೊನ್ನೆ ಬಿ.ಎ. ಹುಡುಗರಿಗೆ ಬೇಂದ್ರೆಯವರ ಬಗ್ಗೆ ಅಸೈನ್‌ಮೆಂಟ್ ಕೊಟ್ಟಿದ್ದರೆಂದು ಕಾಣುತ್ತದೆ. ಇದ್ದಕ್ಕಿದ್ದಂತೆ ಆ ಪುಸ್ತಕಗಳಿಗೆ ಬೇಡಿಕೆ ಹೆಚ್ಚಾಯಿತು. ಅವರೆಲ್ಲಾ ಬರೆದುಕೊಂವೋ ಕ್ಸೆರಾಕ್ಸ್ ಮಾಡಿಸಿಕೊಂಡೋ ಹೋದ ನಂತರ ಆರು ಸಂಪುಟಗಳೂ ನನ್ನ ಟೇಬಲ್ಲಿನ ಮೇಲೆ ಬಿದ್ದಿದ್ದವು. ನಾನು ಅವುಗಳ ಮೇಲೆ ನೆನ್ನೆಯಿಂದ ಕಣ್ಣಾಡಿಸುತ್ತಲೇ ಇದ್ದೆ. ಆಗ ಈ ಮೂರು ಮೂರು ಸಾಲಿನ ಪುಟ್ಟ ಪುಟ್ಟ ಪದ್ಯಗಳು ನನ್ನ ಗಮನ ಸೆಳೆದವು. ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಎನ್ನಿಸಿ ಇಲ್ಲಿ ಬ್ಲಾಗಿಗೇರಿಸಿದ್ದೇನೆ. ಓದಿ ಬೇಂದ್ರೆಯವರ ಕಾವ್ಯಾಮೃತದ ಕೆಲವು ಹನಿಗಳನ್ನು. ಇದು ಅವರ ಹೆಚ್ಚಿನ ಸಾಹಿತ್ಯವನ್ನು ಓದುವಂತೆ ನಿಮ್ಮಲ್ಲಿ ಪ್ರೇರೇಪಿಸಿದರೆ ನಾನು ಧನ್ಯ.
1
ರಸವೆ ಜನನ
ವಿರಸ ಮರಣ
ಸಮರಸವೇ ಜೀವನ
2
ಒಂದೇ ಒಂದು ರಾಡಿ
ಬರಿದು ಓರಂದ ಇರದು ಮಕರಂದ
ರಸವು ಹುಡಿಯ ಜೋಡಿ
3
ಆತನು!
ನೂಲು ನೂತನು
ಯಾವಾತನು
4
ಆ ಮೈ ಕತ್ತಲು ನಾಮ
ಈ ಮೈ ಬೆಳಕು ರೂಪ
ದೇಹರೂಪ
5
ಬೆಣ್ಣೆಯೊಳಗ ಬಟ್ಟು ಅದ್ದಿ ಮೂಗಿಗೆ
ಹಚ್ಚಿಗೊಂಬಾವ್ರು ಬಹದ್ದೂರ ಜನಾ!
ಇದು ಮಾತಿನ ಪವಾಡಲ್ಲ, ಮುಖವಾಡ
6
ದಶಕಂಠಗಿಲ್ಲ ಆರಾಮ.
ಸಂಹಾರ ವಿಶ್ರಾಮ,
ಜಯದ ವಿಜಯದ್ವಾರ- ಜಯ ವಿಜಯ ಆಕಾರ
7
ಸಾಗು ಮಾಗು ಗುರುಪಾದ
ಸೇವಕ ನಾಗು ಹಾಗೂ ಹೀಗೂ
ಮಂಗಾಟ ನಿಲ್ಲಿಸು ಹನುಮಂತನಾಗು
8
ಕತ್ತಿಗೆ ಹಾಕೋದಿಲ್ಲ ನತ್ತು
ಮೂಗಿಗೆ ಇರೋದಿಲ್ಲ ಮುತ್ತು
ಹರಕು ಮುರುಕ ಕಳ್ಳಗತ್ತು
9
ಆರು ಏಳು ಎಂಟು
ಹೊರಗೊಂದು ಒಳಗೊಂದು
೨೮ ಉಂಟು ಹಾಂಗೂ ಹೀಂಗೂ
10
ನಾನೆಲ್ಲಿ ಹೋಗಿದ್ದೆ?
ನಿಮ್ಮ ಹೃದಯದೊಳಗಿದ್ದೆ
ವಿವೇಕ ಅಂತ ಹೊರಗ ಬಂದೆ
11
ಯಾವುದರ ಬೋಧ ಇಲ್ಲವೋ
ಅದರ ಶೋಧವು
ಸಫಲವೆನಿಸಲಾರದು
12
ಕಿಲಿಕಿಲಿ ಹಕ್ಕಿಯ
ಕಲಕಲರವದಲಿ
ಧ್ವನಿಸುವ ಬಗೆಯಾಕೆ
13
ಅಂಚೆ ಏರಿ ನೀರಿನಾಕೆ
ಗಾಳಿಯಲ್ಲಿ ಸುಳಿದಳೋ
ಬೆಳಕಿನಲ್ಲಿ ಬೆಳೆದಳು
14
ಕಾಮದೊಳಗೆ ಹೊತ್ತಿದೆ ಪ್ರೇಮಾ
ಅದಕ್ಕಾವ ನೇಮಾ ಗೀಮಾ
ಅದು ಬಾಳೋ ಸೀಮಾ ನಿತ್ಯಾನಂದ ಧಾಮಾ
15
ಬೀರ ನೆತ್ತರ ಸವಿದು
ಸುರುಚಿ ಸುಮಧುರವೆಂದೆ
ನಿನ್ನ ಹನಿಯೇ ಬೇರೆ ತಣಿವಿನರಸ
16
ಉಂಡು ನೈವೇದ್ಯದ ಮುದ್ದೀ
ಬ್ರಹ್ಮಚೈತನ್ಯರ ಶುದ್ಧಿ
ಹಂಚ್ಯಾಡು ಶ್ರೀರಾಮ ಋದ್ಧೀ
17
ಇದು ಬುದ್ಧನ ಅವತಾರ
ಜೀವನದುದ್ಧಾರ
ಶೂನ್ಯದ ಹೊಲದಲಿ ಬೆಳೆಯುವ ಆತ್ಮದಶೃಂಗಾರ

Monday, March 22, 2010

ಲೋಹಿಯಾ - 100

ತೇಜಸ್ವಿಯವರ ‘ಅಬಚೂರಿನ ಪೋಸ್ಟಾಫೀಸು’ ಪುಸ್ತಕದ ಮುನ್ನುಡಿಯ ಮೊದಲ ಮೂರು ಸಾಲುಗಳಿವು: ‘ಲೋಹಿಯಾರವರ ತತ್ವಚಿಂತನೆ, ಕುವೆಂಪು ಅವರರವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ, ಈ ಮೂರೇ ನನ್ನ ಈಚಿನ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮವನ್ನುಂಟು ಮಾಡಿರುವುವು.’
ಈ ಸಾಲುಗಳನ್ನು ಮೊದಲ ಬಾರಿ ಓದಿದ ಮೇಲೆ ನನ್ನಲ್ಲಿ ಮೊದಲಿಗೇ ಎದ್ದ ಪ್ರಶ್ನೆ ‘ಈ ಲೋಹಿಯಾ ಯಾರು?’ ಎಂಬುದು. ಹೀಗೆ ಲೋಹಿಯಾರನ್ನು ಹುಡುಕುತ್ತಾ ಅವರ ಬಗ್ಗೆ ಕನ್ನಡದಲ್ಲಿ ದೊರೆಯುತ್ತಿದ್ದ ಸಣ್ಣಪುಟ್ಟ ಮಾಹಿತಿಗಳನ್ನು ಓದುತ್ತಾ ದಕ್ಕಿಸಿಕೊಳ್ಳುತ್ತಾ ಹೋದ ನನಗೆ, ಬಹುಶಃ ಭಾರತಮಟ್ಟದ ನಾಯಕರೊಬ್ಬರು ಕರ್ನಾಟಕದ ಮೇಲೆ ಇಷ್ಟೊಂದು ರಾಜಕೀಯ, ಸಾಮಾಜಿಕ, ಸಾಹಿತ್ಯಕ ಪ್ರಭಾವ ಬೀರಿದ್ದು ಲೋಹಿಯಾ ಒಬ್ಬರೆ ಅನಿಸಿತ್ತು. ಆಗ ತೇಜಸ್ವಿ ಮತ್ತು ಎಂ.ಡಿ.ಎನ್. ಅನುವಾದಿಸಿರುವ ಲೋಹಿಯಾ ಎನ್ನುವ ಪುಸ್ತಕ ನನಗೆ ಲೋಹಿಯಾ ಅವರ ಚಿಂತನ ಜಗತ್ತನ್ನು ತೆರೆದಿಟ್ಟಿತ್ತು. ಮುಂದೆ ಕನ್ನಡ ಸಂಸ್ಕೃತಿ ನಿರ್ದೇಶನಾಲಯ ಪ್ರಕಟಿಸಿದ ಐದು ಸಂಪುಟಗಳು ಲೋಹಿಯಾ ಅವರ ಸಮಗ್ರ ಬರಹಗಳನ್ನು ಕನ್ನಡದಲ್ಲಿ ಓದುವಂತೆ ಮಾಡಿ ಲೋಹಿಯಾ ಅವರನ್ನು ಇನ್ನಷ್ಟು ಹತ್ತಿರ ಮಾಡಿಬಿಟ್ಟವು.

 ೧೯೧೦ ಮಾರ್ಚ್ ೨೩ ರಂದು ಉತ್ತರಪ್ರದೇಶದ ಫೈಜಾಬಾದ್ ಜಿಲ್ಲೆಯ ಅಕ್ಬರ್‌ಪುರದಲ್ಲಿ ಜನಿಸಿದ ಲೋಹಿಯಾ ಅಕ್ಬರ್‌ಪುರ, ಮುಂಬಯಿ, ಕಲ್ಕತ್ತಾ ಮತ್ತು ಜರ್ಮನ್ ದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ. ವಿದ್ಯಾರ್ಥಿಜೀವನದಿಂದಲೂ ಹೋರಾಟದ ಕೆಚ್ಚು ರೂಢಿಸಿಕೊಂಡಿದ್ದ ಲೋಹಿಯಾ ಅವರು ಜಿನೀವಾದಲ್ಲಿ ನಡೆದ ‘ಲೀಗ್ ಆಫ್ ನೇಷನ್ಸ್’ ಸಭೆಯಲ್ಲಿ ಬಿಕನೇರಿನ ಮಹಾರಾಜ ಬಾರತದ ಪ್ರತಿನಿಧಿಯಾಗಿ ಮಾತನಾಡಲು ಎದ್ದು ನಿಂತಾಗ ಸಿಳ್ಳೆ ಹೊಡೆದಿದ್ದರು. ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿದ್ದರೂ, ಗಾಂಧೀಜಿಯವರೂ ಸೇರಿದಂತೆ ನೆಹರೂ, ಸುಭಾಷ್, ಸರ್ದಾರ್ ಮೊದಲಾದವರೊಂದಿಗೆ ತಾತ್ವಿಕ ಬಿನ್ನಾಭಿಪ್ರಾಯಗಳನ್ನು ಹೊಂದಿದ್ದರು. ಎಲ್ಲರೊಂದಿಗೂ ನಿರ್ಭಯರಾಗಿ ಮಾತನಾಡಿ ತಮಗನ್ನಿಸಿದ್ದನ್ನು ಹೇಳುತ್ತಿದ್ದರು.

ಸ್ವಾತಂತ್ರೋತ್ತರ ಭಾರತದ ಆಡಳಿತವರ್ಗಕ್ಕೆ ಎಚ್ಚರಿಕೆಯ ಗಂಟೆಯಂತೆ ಲೋಹಿಯಾ ಇದ್ದರು. ಹತ್ತಕ್ಕೂ ಹೆಚ್ಚು ಸಲ ಅವರನ್ನು ಜೈಲಿಗಟ್ಟಲಾಗಿತ್ತು ಎಂಬುದನ್ನು ಮನಗಂಡರೆ ಅವರ ಹೋರಾಟದ ತೀವ್ರತೆಯನ್ನು ಅರ್ಥಮಾಡಿಕೊಳ್ಳಬಹುದು. ದೂರದ ಅಮೆರಿಕೆಯ ಮಿಸಿಸಿಪ್ಪಿಯಲ್ಲಿ ಹೋಟೆಲ್ ಪ್ರವೇಶದಲ್ಲಿದ್ದ ತಾರತಮ್ಯವನ್ನು ವಿರೋಧಿಸಿ (ಅಂದು ನೆಹರು ನಿಧನರಾದ ದಿನ) ಪ್ರತಿಭಟನೆ ನೆಡೆಸಿದಂತೆ ಕರ್ನಾಟಕದ ಕಾಗೋಡು ಎಂಬ ಕುಗ್ರಾಮದ ರೈತರ ಪರವಾಗಿಯೂ ಧ್ವನಿಯೆತ್ತಿ ಹೋರಾಟಕ್ಕೆ ಧುಮುಕಿದ್ದರು. ಮೈನ್ ಕೈಂಡ್ ಪತ್ರಿಕೆಯ ಸಂಪಾದಕರಾಗಿದ್ದರು. ನೆಹರೂ ವಿರುದ್ದ ಫೂಲ್‌ಪುರದಿಂದ ಚುನಾವಣೆಗೆ ನಿಲ್ಲುವ ಮೂಲಕ ವ್ಯಕ್ತಿಪೂಜೆಯನ್ನು ವಿರೋಧಿಸಿದರು. ೧೯೬೩ ರಲ್ಲಿ ಫರೂಕಬಾದ್ ಕ್ಷೇತ್ರದಿಂದ ೧೯೬೭ರಲ್ಲಿ ಕನೂಜ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಲೋಕಸಭೆಗೆ ಪ್ರವೇಶ ಪಡೆದು ಕಾಂಗ್ರೆಸ್ ವಿರೋಧಿ ರಾಜಕಾರಣದಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ.
ಅವರು ನಾಯಕರುಗಳ ನಾಯಕ. ತಾವು ಹೋದಲ್ಲೆಲ್ಲಾ ನಾಯಕರುಗಳನ್ನು ರೂಪಿಸುತ್ತಾರೆ. ಜಾರ್ಜ್ ಫರ್ನಾಂಡೀಸ್, ಶಾಂತವೇರಿ ಗೋಪಾಲಗೌಡ, ಜೆ.ಹೆಚ್.ಪಟೇಲ, ಗಣಪತಿಯಪ್ಪ, ಕಾಗೋಡು ತಿಮ್ಮಪ್ಪ, ಕೋಣಂದೂರು ಲಿಂಗಪ್ಪ ಮೊದಲಾದವರು ಕರ್ನಾಟಕದಿಂದ ಮೂಡಿಬಂದ ಲೋಹಿಯಾ ಅನುಯಾಯಿಗಳು. ಲಂಕೇಶ್, ಅನಂತಮೂರ್ತಿ, ತೇಜಸ್ವಿ, ಕಡಿದಾಳ ಶಾಮಣ್ಣ, ಪ್ರೊ.ರಾಮದಾಸ್, ಎಂ.ಡಿ.ನಂಜುಂಡಸ್ವಾಮಿ, ದೇವನೂರು ಮಹಾದೇವ, ರವಿವರ್ಮಕುಮಾರ್, ಅಗ್ರಹಾರ ಕೃಷ್ಣಮೂರ್ತಿ, ರೈತಸಂಘದ ಸುಂದರೇಶ್, ನಟರಾಜ್ ಹುಳಿಯಾರ್ ಮೊದಲಾದವರು ಲೋಹಿಯಾ ಅವರ ಪ್ರಭಾವ ಪ್ರೇರಣಗಳಿಗೆ ಒಳಗಾಗಿದ್ದಾರೆ. ಕುವೆಂಪು ಅವರ ರಾಮಾಯಣ ದರ್ಶನಂ ಮತ್ತು ವಿಶ್ವಮಾನವ ಸಂದೇಶ ಇವುಗಳ ಬಗ್ಗೆ ಕೇಳಿ, ಅವರನ್ನು ಬೇಟಿಯಾಗಿ ನಿಮ್ಮಂತವರು ರಾಜಕೀಯಕ್ಕೆ ಬರಬೇಕು, ಬನ್ನಿ ಎಂದು ಆಹ್ವಾನ ನೀಡಿ ಸಂಚಲನವನ್ನೇ ಸೃಷ್ಟಿಸುವ ಲೋಹಿಯಾ ಒಂದು ರೀತಿಯಲ್ಲಿ ದರ್ಶನವಾದಿ. ಕರ್ನಾಟಕದ ಮಟ್ಟಿಗೆ ಲೋಹಿಯಾವಾದ ರೈತಸಂಘದ ಚಳುವಳಿಗೆ ಹುರುಪು ಹುಮ್ಮಸ್ಸು ನೀಡಿದ್ದು ಈಗ ಇತಿಹಾಸ.

 ‘ನನ್ನ ಬಳಿ ನನ್ನದೇಂಬುದೇನೂ ಇಲ್ಲ. ಭಾರತದ ಬಡವರು ಹಾಗೂ ಶ್ರೀಸಾಮನ್ಯರು ನನ್ನನ್ನು ತಮ್ಮವನು ಅಂದುಕೊಂಡಿರುವ ಒಂದು ಭಾವನೆಯನ್ನು ಬಿಟ್ಟರೆ ನನ್ನ ಬಳಿ ಇನ್ನೇನೂ ಉಳಿದಿಲ್ಲ’ ಎಂಬುದು ಅವರ ಸರಳತೆಯನ್ನು ಎತ್ತಿ ತೋರಿಸುತ್ತದೆ. ಅವರು ತೀರಿಕೊಂಡಾಗ (೧೨.೦೨೧೯೬೭) ಯಾವ ಆಸ್ತಿಪಾಸ್ತಿಯೂ ಇರಲಿಲ್ಲ; ಕುಟುಂಬವೂ ಇರಲಿಲ್ಲ. ಅವರು ಬಿಟ್ಟು ಹೋದದ್ದು ಕೇವಲ ತಮ್ಮ ಆದರ್ಶಗಳನ್ನು ಮಾತ್ರ!
ಇಂತಹ ಲೋಹಿಯಾ ಬದುಕಿದ್ದು ಕೇವಲ ೫೭ ವರ್ಷಗಳು ಮಾತ್ರ. ಅವರು ಇದ್ದಿದ್ದರೆ ಇಂದಿಗೆ (೨೩.೦೩.೨೦೧೦) ನೂರು ವರ್ಷ ತುಂಬುತ್ತಿತ್ತು. ಅವರ ನೆನಪಲ್ಲಿ ಅವರದೇ ಕೆಲವು ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
  • ಚರಿತ್ರೆ ಈವರೆಗೆ ನ್ಯಾಯದ ಒಂದೇ ಒರೆಗಲ್ಲನ್ನು ತಿಳಿದಿದೆ. ಒಬ್ಬ ವ್ಯಕ್ತಿ ಅಥವಾ ಒಂದು ಸಮಾಜ ದಬ್ಬಾಳಿಕೆಯ ಎದುರು ಮಂಡಿಯೂರಿ ಕುಳಿತು ಬಿಡಬೇಕೇ ಅಥವಾ ಅದನ್ನು ಪ್ರತಿಭಟಿಸಬೇಕೆ? (೧೯೪೨ ಆಗಸ್ಟ್ ೧೯೪೪ ಮೇ ವರೆಗೆ ಭೂಗತರಾಗಿದ್ದ ಲೋಹಿಯಾ ಅವರು ಅಂದಿನ ಭಾರತದ ವೈಸರಾಯ್ ಲಾರ್ಡ್ ಲಿನ್‌ಲಿಥ್‌ಗೊ ಅವರಿಗೆ ೧೯೪೨ರಲ್ಲಿ ಬರೆದ ಪತ್ರ. ಸ್ವಾತಂತ್ರ್ಯದ ಅಂತರ್ಜಲ ಹೆಸರಿನಲ್ಲಿ ಪ್ರಕಟವಾಗಿದೆ.)
  • ನಾನು ಯಾವಾಗಲೂ ಸರಿಯಾಗಿ ತಿಳಿದುಕೊಂಡೇ ನನ್ನ ಕರ್ತವ್ಯ ಮಾಡುತ್ತಿರುತ್ತೇನೆ. ಗಂಆಧೀಜಿಯವರ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿಂತ ಹೆಚ್ಚಿನದೆಂಬುದು ನಿಶ್ಚಿತ. ಆದರೆ ಪಕ್ಷದ ಮೂಲಕ ಸ್ವೀಕೃತವಾದ ಗೊತ್ತುವಳಿಗಿಂತ (ಗಾಂಧೀಜಿಯವರು ಮಂಡಿಸಿದ್ದ ಗುತ್ತುವಳಿಯಲ್ಲಿದ್ದ ‘ಆಫ್ರಿಕಾದಲ್ಲಿದ್ದ ಬ್ರಿಟೀಷ್ ಭಾರತೀಯರು’ ಎಂಬ ಉಲ್ಲೇಖದಿಂದ ಬ್ರಿಟಿಷ್ ಪದವನ್ನು ಕೈಬಿಡುವಂತೆ ಲೋಹಿಯಾ ಸೂಚಿಸಿದ್ದ ತಿದ್ದುಪಡಿ) ಗಾಂಧೀಜಿಯವರ ಸಂಕಲ್ಪ ಶಕ್ತಿ ಇನ್ನೂ ಹೆಚ್ಚು ದೊಡ್ಡದಾಗಿತ್ತು. (ಸಭೆಯ ನಂತರ ಸುಭಾಷ್ಚಂದ್ರಬೋಸ್ ಅವರು ‘ನೀವೇನು ತಿಳಿದಿರಿ, ಮಹಾತ್ಮಾ ಗಾಂಧಿಯವರು ಶಕ್ತಿವಂತರೋ? ಅಥವಾ ಕಾಂಗ್ರೆಸ್ ಪಕ್ಷವೋ?’ ಎಂಬ ಪ್ರಶ್ನೆಗೆ ಉತ್ತರವಾಗಿ ಲೋಹಿಯಾ ಹೇಳಿದ ಮಾತುಗಳಿವು.)
  • ಆ ದಿನ ನಾನು ನಿಜವಾದ ಅರ್ಥದಲ್ಲಿ ಅನಾಥನಾದೆನೆಂದು ಮೊದಲ ಸಲ ನನಗೆ ಅನ್ನಿಸಿತು. ದೇಶದ ರಕ್ಷಕ ಕಣ್ಣೆದುರೇ ಸತ್ತು ಬಿದ್ದಿದ್ದ, ಹಾಗೂ ದೇಶದ ದೊರೆಗಳೆನಿಸಿಕೊಂಡವರು ಕಣ್ಣೀರು ಹರಿಸುತ್ತಿದ್ದರು. ಗಂಆಧೀಜಿಯವರ ನೆಚ್ಚಿನ ಶಿಷ್ಯರಾದ ನೆಹರೂ, ಪಟೇಲರು ಅಧಿಕಾರದ ಗದ್ದುಗೆಯಲ್ಲಿರುವಾಗಲೇ ಗಾಂಧೀಜಿಯವರ ಹತ್ಯೆಯಾಗಿತ್ತು. ‘ನೀವು ನಡು ನೀರಿನಲ್ಲಿ ನಾಡಿನ ಜನತೆಯನ್ನು ಕೈಬಿಟ್ಟು ಹೋದದ್ದೇಕೆ? ಹೀಗೇಕೆ ಮೋಸ ಮಾಡಿದಿರಿ. ಬಾಪೂ’ ಎಂದು ಬಾಪೂ ಅವರನ್ನು ಕೇಳಬೇಕೆನ್ನಿಸಿತು. ಗಾಂಧೀಜಿ ಸದಾಕಾಲ ಜೀವಿಸಿರುತ್ತಾರೆ ಎಂದು ನಾನು ಮೂರ್ಖನಂತೆ ಭಾವಿಸಿಕೊಂಡಿದ್ದೆ. (ಗಾಂಧಿ ಸತ್ತ ದಿನ)
  • ಹೆಂಗಸಿಗೂ ನಾಲ್ವರು ಗಂಡಂದಿರನ್ನು ಹೊಂದುವ ಅಧಿಕಾರವನ್ನು ಕೊಡದಿರುವ ಧರ್ಮ, ಅದು ಯಾವ ಧರ್ಮವೇ ಆಗಿರಲಿ, ಗಂಡಿಗೆ ನಾಲ್ವರು ಹೆಂಗಸರನ್ನು ಹೊಂದುವ ಅಧಿಕಾರ ನೀಡುವುದನ್ನು ನಾಣು ಒಪ್ಪುವುದಿಲ್ಲ. (ದ್ರೌಪದಿಯೋ? ಸಾವಿತ್ರಿಯೋ? ಎಂಬ ಲೇಖನದಲ್ಲಿ)
  • ರಾಮ, ಕೃಷ್ಣ, ಶಿವ - ಈ ಮೂವರು ಇಂಡಿಆಯದ ಪೂರ್ಣತ್ವದ ಮೂರು ಮಹತ್ ಸ್ವಪ್ನಗಳು. ಮೂವರೂ ತಂತಮ್ಮದೇ ಹಾದಿಯುಳ್ಳವರು. ರಾಮನದ್ದು ಸೀಮಿತ ವ್ಯಕ್ತಿತ್ವದಲ್ಲಿ ಪೂರ್ಣತೆ. ಕೃಷ್ಣನದ್ದು ಸಮೃದ್ಧ ವ್ಯಕ್ತಿತ್ವದಲ್ಲಿ ಪೂರ್ಣತೆ. ಶಿವನದಾದರೋ ಪ್ರಮಾಣಾತೀತ ವ್ಯಕ್ತಿತ್ವದಲ್ಲಿ ಪೂಣ್ತೆ. ಇವುಗಳಲ್ಲಿ ಒಂದು ಇನ್ನೊಂದಕ್ಕಿಂತ ಹೆಚ್ಚು ಅಥವಾ ಕಡಿಮೆ ಎಂಬ ಮಾತೇ ಇಲ್ಲ. ಪೂರ್ಣತೆಗೆ ಹೆಚ್ಚು ಕಮ್ಮಿಯ ಮಾತೆಲ್ಲಿ? (ರಾಮ ಕೃಷ್ಣ ಶಿವ ಎಂಬ ಲೇಖನದಿಂದ)
  • ಸೀಮಿತ ವ್ಯಕ್ತಿತ್ವ ನಿಯಮಗಳ ವೃತ್ತದಲ್ಲೇ ತಿರುಗುತ್ತದೆ. ಸಮೃದ್ಧ ವ್ಯಕ್ತಿತ್ವ ಮಾತ್ರ ತನಗೆ ಇಚ್ಛೆಯಿರುವ ಪರ‍್ಯಂತ ನಿಯಮಗಳನ್ನೂ ಘಟನೆಗಳನ್ನೂ ಮನ್ನಿಸುತ್ತದೆ. ಅದು ತನಗೆ ಕಂಟಕವಾಯಿತೆಂದರೆ ತಕ್ಷಣದಲ್ಲೇ ಅದನ್ನು ಧಿಕ್ಕರಿಸಿಬಿಡುತ್ತದೆ. (ರಾಮ ಕೃಷ್ಣ ಶಿವ ಎಂಬ ಲೇಖನದಿಂದ)
  • ರಾಮ ಸೀಮಿತನೂ ಆಗಿ ಅಲ್ಪನೂ ಆಗಿ, ಕೃಷ್ಣ ಸಮೃದ್ಧನೂ ಆಗಿ ಕಾಮುಕನೂ ಆಗಿ, ಶಿವ ಗಾತ್ರಾತೀತನೂ ಆಗಿ ಕಾಲ್ಪನಿಕನೂ ಆಗಿ ಇಬ್ಬಂದಿ ಬದುಕು ಬಾಳುತ್ತಾರೆ. ಇದಕ್ಕೆ ಒಂದು ಪರಿಹಾರ ಸೂಚಿಸುವ ಮೂರ್ಖತನಕ್ಕೆ ಹೋಗದೆ ಇಷ್ಟೇ ಪ್ರಾರ್ಥಿಸುತ್ತೇನೆ. ‘ಓ ತಾಯಿ ಭಾರತಿ, ನಮಗೆ ಶಿವನ ಮನಸ್ಸನ್ನು ಕೃಷ್ಣನ ಹೃದಯವನ್ನು ರಾಮನ ಕಾರ‍್ಯಪ್ರಪಂಚವನ್ನು ಕೊಡು; ಪ್ರಮಾಣಾತೀತವಾದ ಮನಸ್ಸು, ಸಮೃದ್ಧ ಹೃದ, ಆದರೆ ಸೀಮಿತವಾದ ಬದುಕು ಇವುಗಳಿಂದ ನಮ್ಮನ್ನು ನಿರ್ಮಿಸು. (ರಾಮ ಕೃಷ್ಣ ಶಿವ ಎಂಬ ಲೇಖನದಿಂದ)
  • ಸಾರ್ವಜನಿಕವಾಗಿ ಒಬ್ಬ ಇನ್ನೊಬ್ಬನ ಕಾಲು ತೊಳೆಯುವುದು ಅಸಹ್ಯಕರವಾದದ್ದು. (ಕಾಶಿಯಲ್ಲಿ ಭಾರತದ ರಾಷ್ಟ್ರಪತಿಗಳು ಇನ್ನೂರು ಜನ ಬ್ರಾಹ್ಮಣರ ಕಾಲು ತೊಳೆದಿದ್ದರ ಬಗ್ಗೆ)
  • ಆ ಅನಾಗರಿಕ ರಾಕ್ಷಸ ಪಂಧ್ಯದಲ್ಲಿ ಮನುಷ್ಯನಂತೆ ವರ್ತಿಸಿದ ಏಕೈಕ ವ್ಯಕ್ತಿ ಈತ (ರಾಷ್ಟ್ರಪತಿಗಳಿಂದ ಕಾಲು ತೊಳೆಸಿಕೊಳ್ಳಲು ನಿಯಮಿತರಾಗಿದ್ದ ಇನ್ನೂರು ಜನರಲ್ಲಿ, ಆ ಕ್ರಿಯೆಯಿಂದ ಹಿಂದೆ ಸರಿದ ಏಕೈಕ ಬ್ರಾಹ್ಮಣನ ಬಗ್ಗೆ)
  • ಇಂಗ್ಲಿಷ್ ಭಾಷೆಯು ಭಾರತಕ್ಕೆ ಅಪಾಯ ಮಾಡುತ್ತಿರುವುದಕ್ಕೆ ಅದು ವಿದೇಶಿ ಭಾಷೆ ಎನ್ನುವುದಕ್ಕಿಂತ ಹೆಚ್ಚಾಗಿ ಭಾರತದ ಸಂದರ್ಭದಲ್ಲಿ ಅದು ಯಜಮಾನಿಕೆಯ ಭಾಷೆಯಾಗಿರುವುದೇ ಪ್ರಮುಖ ಕಾರಣ.
  • ಬೇರೆ ಬೇರೆ ಕ್ಷೇಥ್ರಗಳಲ್ಲಿದ್ದಂತೆ ಆರ್ಧಯಾತ್ಮಿಕ ಸಮಾನತೆಯಲ್ಲಿ ಮುಂಚೂಣಿಯಲ್ಲಿರುವ ಮಹಾನ್ ಮಹಿಳೆಯೊಬ್ಬಳಿದ್ದಾಳೆ. ಈಕೆ ಕಥೆಗಳಲ್ಲಿ ಬರುವ ಹೆಂಗಸಲ್ಲ. ಎಂಟನೂರು ವರ್ಷಗಳ ಹಿಂದೆ ಕರ್ನಾಟಕದಲ್ಲಿದ್ದಳು. ಅವಳೇ ಅಕ್ಕಮಹಾದೇವಿ. ವೈರಾಗ್ಯ ಸಾಧು ಸ್ವಭಾವ ಮತ್ತು ದರ್ಶನ ಇತ್ಯಾದಿಗಳಲ್ಲಿ ಗಂಡಸು ಕೊನೆಯ ಎತ್ತರದ ತನಕ ತಲಪಿ ವಿರಕ್ತನಾಗುವಂತೆ, ಹೆಣ್ಣಾದ ತಾನೂ ಆ ಎತ್ತರಕ್ಕೆ ಯಾಕೆ ಏರಲು ಸಾಧ್ಯವಾಗುವುದಿಲ್ಲ ಎಂದು ಅವಳು ಪ್ರಶ್ನಿಸಿದ್ದಳು. (ದ್ರೌಪದಿಯೋ? ಸಾವಿತ್ರಿಯೋ? ಲೇಕನದಿಂದ)
  • ಹಿಂದೂ ಮುಸಲ್ಮಾನಿರಿಬ್ಬರೂ ಬದಲಾಗಬೇಕಿದೆ. ಅದೆಷ್ಟು ಜನ ಹಿಂದೂಗಳು ಶೇರಶಹನನ್ನು ತಮ್ಮ ಪೂರ್ವಜ ಎಂದು ಪರಿಗಣಿಸುತ್ತಾರೆ. ಅದೆಷ್ಟು ಜನ ಮುಸಲ್ಮಾನರು ಗಜನಿ ಗೋರಿ ಸುಲಿಗೆಕೋರರಾಗಿದ್ದರು ಎಂದು ಹೇಳಬಲ್ಲರು? (ಹಿಂದೂ ಮುಸ್ಲಿಂ ಎಂಬ ಲೇಖನದಿಂದ)
  • ಮಹಾತ್ಮನೊಬ್ಬ ಅರ್ಧಶತಮಾನಕ್ಕಿಂತ ಹೆಚ್ಚಾಗಿ ಸಾರ್ವಜನಿಕ ಜೀವನಕ್ಕೆ ಸಂಬಂಧಪಟ್ಟಿದ್ದರೆ ಪರಸ್ಪರ ವಿರೋಧವಾಗಿ ಕಣಬಲ್ಲ ಹೇಳಿಕೆಗಳನ್ನು ಕೊಟ್ಟಿರುತ್ತಾನೆ. ಮಹಾತ್ಮಗಾಂಧಿ ತಮ್ಮ ಅಪೂರ್ವವಾದ ಅಂತರ್‌ದೃಷ್ಟಿಯನ್ನೂ ಮೀರಿ, ಪರಸ್ಪರ ವಿರೋಧವೆಂಬತೆ ಕಾಣುವ ಹಲವು ಹೇಳಿಕೆಗಳನ್ನು ಬ್ರಿಟಿಷ್ ಸಾಮ್ರಜ್ಯದ ಮೇಲೂ, ಜಾತಿಪದ್ಧತಿಯ ಮೇಲೂ, ಬಂಡವಾಳ ಹಾಗೂ ಕೆಲಸಗಾರನ ಸಂಬಂಧದ ಮೇಲೂ ನೀಡಿದ್ದಾರೆ. (ಗಾಂಧಿವಾದ ಮತ್ತು ಸಮಾಜವಾದ ಲೇಖನದಿಂದ)

Thursday, March 18, 2010

‘ಜೂರ’ ಪ್ರಶಸ್ತಿ ಶಾಸನದ ಹೆಗ್ಗಳಿಕೆ

ದೂರದ ಮಧ್ಯಪ್ರದೇಶದ ಮೈಹಾರ್ ರೈಲ್ವೆ ನಿಲ್ದಾಣದಿಂದ ೧೨ ಕಿಲೋಮೀಟರ್ ದೂರದಲ್ಲಿರುವ ಜೂರ ಎಂಬ ಹಳ್ಳಿಗೂ, ಕನ್ನಡ ನಾಡಿಗೂ, ಕನ್ನಡ ನಾಡನ್ನು ಆಳಿದ ಹತ್ತನೇ ಶತಮಾನದ ರಾಷ್ಟ್ರಕೂಟ ದೊರೆ ಮೂರನೇ ಕೃಷ್ಣನಿಗೂ ಎಲ್ಲಿಗೆಲ್ಲಿಯ ಸಂಬಂಧ! ಹೌದು ಅಂತಹ ಒಂದು ಪ್ರತ್ಯಕ್ಷ ಸಾಕ್ಷಿ ನಮ್ಮ ಕಣ್ಣ ಮುಂದಿದೆ. ೧೯೨೧ರಲ್ಲೇ ಶ್ರೀ ಆರ್.ಡಿ.ಬ್ಯಾನರ್ಜಿ ಎನ್ನುವವರು ಆ ಸಾಕ್ಷಿಯನ್ನು ನಮಗೆ ಒದಗಿಸಿ ಕೊಟ್ಟಿದ್ದಾರೆ.

ಮೂರನೇ ಕೃಷ್ಣ (ಎಲ್ಲೋರದ ಕೈಲಾಸನಾಥ ದೇವಾಲಯದ ನಿರ್ಮಾಣಕ್ಕೆ ಈತನ ಕೊಡುಗೆ ಅಪಾರ) ಉತ್ತರ ಭಾರತಾದ್ಯಂತ ತನ್ನ ರಾಜ್ಯವನ್ನು ವಿಸ್ತರಿಸಿದ್ದ ಕಥೆ ಇತಿಹಾಸದಲ್ಲಿ ದಾಖಲಾಗಿದೆ. ಆತನ ಯುದ್ಧಾಳುಗಳು ಹಾಗೂ ಕುದುರೆಗಳು ಗಂಗಾ-ಯಮುನ ನದಿಗಳ ನೀರನ್ನು ಕುಡಿದವು ಎಂಬ ವರ್ಣನೆಯೇ ಆತ ಅಲ್ಲಿಯವರೆಗೆ ರಾಜ್ಯವನ್ನು ವಿಸ್ತರಿಸಿದ್ದ ಎಂಬುದನ್ನು ಸೂಚಿಸುತ್ತದೆ. ಆದರೆ ಅಲ್ಲಿಗೆಲ್ಲಾ ಹೋಗಿದ್ದ ಒಬ್ಬ ಕನ್ನಡಿಗ ದೊರೆ ಆತನ ಪ್ರಭಾವ ಎಂಥಹದ್ದು ಎಂದು ತಿಳಿಯುವುದು ಹೇಗೆ? ಜೂರ ಗ್ರಾಮದ ಮನೆಯೊಂದರಲ್ಲಿ ಕಿಟಕಿಗೆ ಚೆಜ್ಜವಾಗಿ ಹಾಕಲಾಗಿದ್ದ ಕಲ್ಲಿನ ಮೇಲೆ ಕೆತ್ತಿದ್ದ ಕನ್ನಡ ಶಾಸನವೊಂದು ಇದಕ್ಕೆ ಸಾಕ್ಷಿಯಾಗಿ ಇನ್ನೂ ಅಲ್ಲೇ ನಿಂತಿದೆ ಸುಮಾರು ೧೦೫೦ ವರ್ಷಗಳಿಂದ!

ಹೌದು. ಆ ಶಾಸನದಲ್ಲಿ ಏನಿದೆ? ಮೂರನೇ ಕೃಷ್ಣನ ಹಲವಾರು ಬಿರುದುಗಳು. ಆತನ ದಿಗ್ವಿಜಯ. ಆತನ ಸಾಧನೆ. ಇಷ್ಟೇ ಆಗಿದ್ದರೆ ಸಾವಿರಾರು ಶಾಸನಗಳಂತೆ ಅದೂ ಒಂದು ಶಾನವಾಗಿ ಮಾತ್ರ ದಾಖಲಾಗಿರುತ್ತಿತ್ತು. ಆದರೆ ಅದು ಆತನ ಶೌಚಗುಣವನ್ನು ಪರನಾರೀ ಗೌರವವನ್ನು ವಿಶೇಷವಾಗಿ ಪ್ರಸ್ತಾಪಿಸುತ್ತದೆ. ಭಾರತ ಅಷ್ಟೇ ಏಕೆ? ಪ್ರಪಂಚ ಯಾವುದೇ ರಾಜನ ಬಗ್ಗೆ ಇಂತಹುದೊಂದು ಶಾಸನ ಸಿಕ್ಕಿದ್ದರೆ ಅದು ಇದೊಂದೆ!

ಪರಾಂಗನಾ ಪುತ್ರ ಎಂಬುದು ಆತನಿಗಿದ್ದ ವಿಶೇಷವಾದ ಬಿರುದು. ಅವನು ಅನ್ಯವನಿತೆಯರನ್ನು ನೋಡುತ್ತಿರಲಿಲ್ಲ. ಮಾತನಾಡಿಸುತ್ತಿರಲಿಲ್ಲ. ಮನಸ್ಸಿನಲ್ಲೂ ಕಾಮಿಸುತ್ತಿರಲಿಲ್ಲ. ಈ ಆಶಯದ ಒಂದು ಪದ್ಯ ಹೇಗಿದೆ ನೋಡಿ.

ಸೋಲದೆ ಪರವನಿತೆಗೆ ಕಣ್
ಸೋಲದು ಮೊಲೆವಾಲನೂಡಿ ನಡಪಿದ ತಾಯಿಂ
ಮೇಲೆನೆ ಬಗೆಗುಂ ನೋಡಿರೆ
ಸೋಲದು ಚಿತ್ತಂ ಪರಾಂಗನಾಪುತ್ರಕನಾ

ಅವನು ಪರಸ್ತ್ರೀಗೆ ಸೋಲುವವನಲ್ಲ. ಅವರನ್ನು ನೋಡಿದರೆ ಮೊಲೆಹಾಲನ್ನು ಕುಡಿಸಿ ಬದುಕು ನೀಡಿದ ತಾಯಿಗಿಂತ ಹೆಚ್ಚಾಗಿ ಗೌರವಿಸುತ್ತಿದ್ದ. ಎಂತಹ ಪರಿಸ್ಥಿತಿಯಲ್ಲೂ ಪರಸ್ತ್ರೀಗೆ ಆತನ ಚಿತ್ತ ಸೋತುದ್ದಿಲ್ಲವಂತೆ!

ಇನ್ನೊಂದು ಪದ್ಯದಲ್ಲಿ -

ನೋಡಿರೆ ಪರವಧುಗೆ ಮನಂ
ಕೂಡದು ಸೂೞ್ಸೂೞೊಳೆತ್ತಿ ನಡಪಿದ ತೋಳು
ಣ್ಡಾಡಿದ ಮೊಲೆ ಬಸಿಱೊಳಗಿ
ೞ್ದಾಡಿದ ಚಿತ್ತಂ ಪರಾಂಗನಾಪುತ್ರಕನಾ

ರಾಜನಾದ ಅವನಿಗೆ ಪರಸ್ತ್ರೀಯನ್ನು ನೋಡಿದರೆ ಏನನ್ನಿಸುತ್ತಿತ್ತು? ತಾನು ಮಗುವಾಗಿದ್ದಾಗ ಮೊಲೆಹಾಲನ್ನೂಡಿಸಿದ ತಾಯಿ, ಸರದಿಯಲ್ಲಿ ತನ್ನನ್ನು ಎತ್ತಿ ಆಡಿಸಿದ ತಾಯಿಯ ತೋಳುಗಳು, ಆ ತಾಯಿಯ ಬಸಿರಲ್ಲಿ ತಾನು ಮಗುವಾಗಿರುವಂತಹ ಭಾವ ಆತನಲ್ಲಿ ಸ್ಫುರಿಸುತ್ತಿತ್ತಂತೆ!

ಇದು ನಿಜಕ್ಕೂ ಕೃಷ್ಣರಾಜನಿಗೆ ಪ್ರಶಸ್ತಿಯಲ್ಲವೆ? ಕೃಷ್ಣರಾಜ ಎಲ್ಲ ಕಾಲಕ್ಕೂ ಅನುಕರಣೀಯ ದೊರೆ ಹಾಗೂ ವ್ಯಕ್ತಿಯಲ್ಲವೆ? ನಾವೂ ಅವನಿಗೊಂದು ಬಹುಫರಾಕ್ ಹೇಳೋಣವೆ?

‘ಸ್ವಸ್ತಿ ಪರಮಭಟ್ಟಾರಕ ಪರಮೇಶ್ವರ ಶ್ರೀ ಪ್ರಿಥ್ವೀವಲ್ಲಭ ಮಹಾರಾಜಾಧಿರಾಜಂ

ನಲ್ಲರಮರುಳನ್

ಆನೆವೆಡಂಗಂ

ಚಲಕೆನಲ್ಲಾತಂ

ವೈರಿವಿಳಾಸಂ

ಮದಗಜಮಲ್ಲಂ

ಪರಾಂಗನಾಪುತ್ರಂ

ಗಣ್ಡಮಾರ್ತ್ತಂಡಂ

ಅಕಾಳವರಿಷಂ

ನೃಪತುಂಗಂ

ಕಚ್ಚೆಗಂ

ಶ್ರೀಮತ್ ಕನ್ನರದೇವಂ (ಕೃಷ್ಣ)

ಗೆಲ್ಗೆ ಬಾಳ್ಗೆ ಗೆಲ್ಗೆ’

ಇತಿಹಾಸದಲ್ಲಿ ದಾಖಲಾಗಿರುವ ಇಂತಹ ಹಲವಾರು ವಿಷಯಗಳನ್ನು ತಿಳಿಯಬಯಸುವವರಿಗೆ ಈ ಕೆಳಗಿನ ಪುಸ್ತಕ ಒಂದು ಕೈದೀವಿಗೆ.

ಪುಸ್ತಕ: ಶಾಸನ ಸರಸ್ವತಿ

ಲೇಖಕರು: ಡಾ.ಕೈದಾಳ ರಾಮಸ್ವಾಮಿ ಗಣೇಶ, ನಿವೃತ್ತ ಕನ್ನಡ ಪ್ರಾಧ್ಯಾಪಕರು, ಆಚಾರ್ಯ ಪಾಠಶಾಲಾ ಕಲೆ ಮತ್ತು ವಿಜ್ಞಾನ ಕಾಲೇಜು, ಬೆಂಗಳೂರು

ಪ್ರಕಾಶಕರು: ಕರ್ನಾಟಕ ಇತಿಹಾಸ ಸಂಶೋಧನ ಮಂಡಲ, ಧಾರವಾಡ, ೨೦೦೭-೨೦೦೮

ಪುಟಗಳು: ೧೯೦

ಬೆಲೆ: ರೂಪಾಯಿ ಎಪ್ಪತ್ತೈದು ಮಾತ್ರ