Tuesday, April 28, 2009

‘ನನ್ನ ಹೈಸ್ಕೂಲು ದಿನಗಳು’ ಪುಸ್ತಕದ ಇ-ರೂಪ : ಭಾಗ - 12

ಐ ಲವ್ ಯೂ!
ಇಂಗ್ಲೀಷ್ ಗ್ರಾಮರ್ ಮತ್ತು ನಾನ್‌ಡೀಟೈಲ್ ಪಾಠ ಮಾಡುತ್ತಿದ್ದ ಎಸ್.ಮಂಚಯ್ಯ ಎಂಬ ಮೇಷ್ಟ್ರೊಬ್ಬರಿದ್ದರು. ನಾವು ಹತ್ತನೇ ತರಗತಿಗೆ ಬರುವಷ್ಟರಲ್ಲಿ ಅವರೂ ಬೇರೆಡೆಗೆ ವರ್ಗವಾಗಿ ಹೋದರು. ಒಂಬತ್ತನೇ ತರಗತಿಯಲ್ಲಿದ್ದಾಗ ನಮಗೆ ಇಂಗ್ಲೀಷ್ ಗ್ರಾಮರ್ ಪಾಠ ಮಾಡುತ್ತಿದ್ದರು. ಒಂದು ದಿನ ವಾಕ್ಯ ರಚನೆಯ ಬಗ್ಗೆ ಪಾಠ ಮಾಡುತ್ತಿದ್ದು, ನಮಗೆ ಅರ್ಥವಾಗಲೆಂದು ಹಲವಾರು ಸರಳವಾದ ಉದಾಹರಣೆಗಳನ್ನು ಕೊಡುತ್ತಿದ್ದರು. ಹೀಗೆ ಉದಾಹರಣೆ ಕೊಡುತ್ತಾ ‘ಐ ಲವ್ ಯೂ ರಾಧಾ’ ಎಂದು ಒಂದು ವಾಕ್ಯವನ್ನು ಹೇಳಿದರು. ಒಂದು ಕ್ಷಣ ಇಡೀ ಕ್ಲಾಸಿಗೇ ಶಾಕ್ ಹೊಡೆದಂತೆ ಸ್ತಬ್ಧವಾಯಿತು. ನಂತರ ಗುಜುಗುಜು ಮಾತು, ಮುಸಿಮುಸಿ ನಗೆ ಶುರುವಾಯಿತು. ನಮ್ಮ ಮುಂದಿನ ಡೆಸ್ಕಿನಲ್ಲಿಯೇ ಕುಳಿತಿದ್ದ ರಾಧಾ ಎಂಬ ಹುಡುಗಿ, ಡೆಸ್ಕಿನ ಮೇಲೆ ತಲೆ ಇಟ್ಟುಕೊಂಡು ಬಿಕ್ಕುತ್ತಿದ್ದಳು! ನಮಗೆಲ್ಲಾ ‘ಲವ್’ ಎಂಬ ಪದವೇ ಭಯಂಕರವಾಗಿ ಕೇಳಿಸಿತ್ತು. ಏಕೆಂದರೆ ಆಗ ನಾವು ‘ಲವ್’ ಎನ್ನುವ ಪದವನ್ನು ತುಂಬಾ ಅಪಾರ್ಥದಲ್ಲಿ ಅರ್ಥೈಸಿಕೊಂಡಿದ್ದೆವು! ‘ಇವರಿಗೇನು ಬಂತು ಕೇಡು? ಆ ಹುಡುಗಿಯನ್ನು ‘ಲವ್’ ಮಾಡುತ್ತೇನೆ ಎಂದು ಓಪನ್ನಾಗಿ ಹೇಳಿಕೊಳ್ಳುತ್ತಿದ್ದಾರಲ್ಲಾ!’ ಎಂದು ಗಾಬರಿಯೂ, ಅವರು ಪೋಲಿಯಾಗಿ ಮಾತನಾಡುತ್ತಿದ್ದಾರೆಂದು ಒಂದು ಬಗೆಯ ಖುಷಿಯೂ ಆಯಿತು! ಹಿಂದೊಮ್ಮೆ, ಕೇವಲ ಹುಡುಗರಿಗೇ ಹೇಳಬಹುದಾದ ಒಂದು ಜೋಕನ್ನು ತರಗತಿಯಲ್ಲಿ ಹೇಳಲು, ಹುಡುಗಿಯರನ್ನು ಹೊರಗೆ ಕಳುಹಿಸಿದ್ದ ಮಂಚಯ್ಯ ಮೇಸ್ಟರನ್ನು, ಇಂದಿನ ಘಟನೆಯಿಂದ ‘ಪೋಲಿ’ ಎಂದು ಇಡೀ ತರಗತಿ ಭಾವಿಸಿದಂತಿತ್ತು. ತಕ್ಷಣ ತಮ್ಮ ತಪ್ಪಿನ ಅರಿವಾದ ಮೇಸ್ಟರು ಅದರ ರಿಪೇರಿಗೆ ತೊಡಗಿದರು. ‘ಐ ಲವ್ ಯೂ ರಾಧಾ, ಐ ಲವ್ ಇಂಡಿಯಾ, ಐ ಲವ್ ಮೈ ಡ್ಯಾಡಿ, ಐ ಲವ್ ಮೈ ಸಿಸ್ಟರ್, ಐ ಲವ್ ಮೈ ಮದರ್, ಐ ಲವ್ ಮೈ ಬ್ರದರ್’ ಹೀಗೇ ಮತ್ತೆ ಮತ್ತೆ ‘ಲವ್’ ಎಂಬ ಪದ ಬಳಕೆಯಾಗುವ ಹಲವಾರು ವಾಕ್ಯಗಳನ್ನು ಹೇಳಿ ಅವುಗಳ ಕನ್ನಡ ಅನುವಾದವನ್ನು ಹೇಳಿದರು. ಅಷ್ಟರಲ್ಲಿ ನಮಗೆ ಈ ‘ಲವ್’ ಎಂಬ ಪದ ನಾವು ಅಂದುಕೊಡ ಅರ್ಥದ್ದಲ್ಲ ಎಂಬ ಅರಿವೂ ಆಯಿತು. ಆದರೆ ಆ ಹುಡುಗಿ ಮಾತ್ರ ಅವರ ಕ್ಲಾಸು ಮುಗಿಯುವವರೆಗೂ ತಲೆಯೆತ್ತಲಿಲ್ಲ.
ಸಂಜೆ ಮಂಚಯ್ಯನವರೊಂದಿಗೆ ನಡೆದುಕೊಂಡು ಹೋಗುವಾಗ ‘ಏನ್ರೊ, ನಾನು ವಾಕ್ಯ ರಚನೆ ಮಾಡಿದಾಗ ಅಷ್ಟೊಂದು ನಕ್ಕಿದ್ದೇಕೆ?’ ಎಂದರು.
ನಾವು ಮತ್ತೊಮ್ಮೆ ನಗುತ್ತಾ ‘ಸಾರ್, ನೀವು ಆ ಹುಡುಗಿಯನ್ನು ಲವ್ ಮಾಡಿದ್ದನ್ನು ಅಷ್ಟು ಓಪನ್ನಾಗಿ ಹೇಳಿದಿರಲ್ಲಾ, ಅದಕ್ಕೆ ಅಷ್ಟೊಂದು ನಗು ಬಂತು’ ಎಂದು ಹೇಳಿದೆವು.
‘ಅಯ್ಯೋ ದಡ್ಡ ಬಡ್ಡೆತ್ತವಾ! ಅವಳೊಬ್ಬಳನ್ನೇ ಅಲ್ಲ, ನಿಮ್ಮನ್ನೆಲ್ಲಾ ನಾನು ಲವ್ ಮಾಡುತ್ತೇನೆ! ಲವ್ ಅಂದರೆ ಏನು ತಿಳಿದುಕೊಂಡಿದ್ದೀರಿ! ಲವ್ ಅಂದರೆ ಪ್ರೀತಿ ಅಂತ, ಇಷ್ಟ ಪಡೋದು ಅಂತ’ ಎಂದು ಮತ್ತೆ ಮತ್ತೆ ‘ಲವ್’ ಪದದ ಅರ್ಥವನ್ನು ನಮಗೆ ಮನದಟ್ಟು ಮಾಡಿಕೊಡಲು ಪ್ರಯತ್ನಪಟ್ಟರು!
ಕನ್ನಡ ಮೇಸ್ಟ್ರು ಮದುವೆಯಾದರು
ನಮ್ಮ ಹೈಸ್ಕೂಲಿನಲ್ಲಿ ಎಂ.ರಾಜಶೇಖರಯ್ಯ ಎಂಬ ಕನ್ನಡ ಮೇಸ್ಟರಿದ್ದರು. ಹುಡುಗರೆಲ್ಲಾ ಅವರನ್ನು ಎಂ.ಆರ್.ಎಸ್. ಅನ್ನುತ್ತಿದ್ದರು. ಚೆನ್ನಾಗಿ ಪಾಠ ಮಾಡುತ್ತಿದ್ದರು. ದಿನಾ ಪಾಠ ಮಾಡಿದ್ದಷ್ಟಕ್ಕೆ ಎಷ್ಟು ಪ್ರಶ್ನೆಗಳು ಬರುತ್ತವೆಯೋ ಅಷ್ಟಕ್ಕೆ ಹುಡುಗರೇ ಮಾರನೇ ದಿನ ಉತ್ತರ ಬರೆದುಕೊಂಡು ಹೋಗಬೇಕಾಗಿತ್ತು. ಉತ್ತರಗಳು ಸರಿಯಾಗಿದ್ದರೆ ಭೇಷ್ ಎಂದು ಜೋರಾಗಿಯೇ ಬೆನ್ನು ತಟ್ಟುತ್ತ್ತಿದ್ದರು. ತಪ್ಪಾಗಿದ್ದರೆ, ‘ಲೌಡಿಗಂಡ, ಮುಂಡೆಗಂಡ, ರಂಡೇಗಂಡ, ಸರಿಯಾಗಿ ಓದಲ್ಲ, ಸರಿಯಾಗಿ ಓದಬೇಕು, ಪ್ರಶ್ನೆಗೆ ತಕ್ಕ ಉತ್ತರ ಬರೀಬೇಕು’ ಎಂದು ಒಂದೊಂದೇ ಪದ ಹೇಳುತ್ತಾ ತಮ್ಮ ಕೈಯಿಂದ ಬೆನ್ನಿನ ಮೇಲೆ ಗುದ್ದುತ್ತಿದ್ದರು.
ತುಂಬಾ ವರ್ಷಗಳಿಂದ ಒಂದು ರೂಮು ಮಾಡಿಕೊಂಡು ಕುಂದೂರಿನಲ್ಲಿ ನೆಲೆಸಿದ್ದರು. ಊರಿನವರಿಗೆಲ್ಲಾ ಚಿರಪರಚಿತರಾಗಿದ್ದರು. ದಿನಾ ಬೆಳಿಗ್ಗೆ ವ್ಯಾಯಮ ಮಾಡಿ, ಕೆರಯಲ್ಲಿ ತಣ್ಣೀರು ಸ್ನಾನ ಮಾಡುತ್ತಿದ್ದರು. ‘ಒಂದು ರೋಣಗಲ್ಲನ್ನು ಅವರು ಎತ್ತುತ್ತಾರೆ’ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು. ಅವರು ರೋಣಗಲ್ಲನ್ನು ಎತ್ತಿದ್ದನ್ನು ನಾನಂತೂ ನೋಡಿರಲಿಲ್ಲ. ರಾಜಶೇಖರಯ್ಯನವರ ವಯಸ್ಸು ಆಗ ಸುಮಾರು ಮೂವತ್ತೈದು ನಲವತ್ತಾಗಿದ್ದಿರಬಹುದು. ಆದರೆ ಇನ್ನೂ ಮದುವೆಯಾಗಿರಲಿಲ್ಲ.
ಆಗ ಅವರೇಕೆ ಮದುವೆಯಾಗಿಲ್ಲ ಎಂಬುದಕ್ಕೆ ಕುಂದೂರಿನಲ್ಲಿ ಸ್ವಾರಸ್ಯಕರವಾದ ಒಂದು ಕಥೆ ಹೇಳುತ್ತಿದ್ದರು. ಅವರು, ಅವರ ಅಣ್ಣಂದಿರ ಜೊತೆಯಲ್ಲಿ ಚೌಕಾಬಾರ ಆಡುವಾಗ ಬೆಟ್ ಕಟ್ಟಲು ಏನೂ ಇಲ್ಲದೆ, ‘ನಾನು ಈ ಆಟದಲ್ಲಿ ಸೋತರೆ ಮದುವೆಯೇ ಆಗುವುದಿಲ್ಲ’ ಎಂದು ಶಪಥ ಮಾಡಿದ್ದರಂತೆ. ಸೋತು ಹೋದುದ್ದರಿಂದ ಮದುವೆಯಾಗದೆ ಹಾಗೇ ಉಳಿದಿದ್ದರಂತೆ! ಆದರೆ ನಾವು ಹತ್ತನೇ ತರಗತಿಗೆ ಬರುವಷ್ಟರಲ್ಲಿ ಅವರಿಗೆ ಮದುವೆ ಗೊತ್ತಾಯಿತು! ಆಗ ಈ ಕಥೆಯೆಲ್ಲಾ ಸುಳ್ಳು ಎಂಬ ತೀರ್ಮಾನಕ್ಕೆ ನಾವು ಬಂದೆವು.
ಮದುವೆಗೆ ಅವರ ಪ್ರಿಯ ಶಿಷ್ಯರಾಗಿದ್ದ ಎಂ.ಕೆ.ಸ್ವಾಮಿ, ಚಿಕ್ಕಯ್ಯ ಮತ್ತು ನಮ್ಮ ಅಣ್ಣ ಮೂವರೂ ಹೋಗಿ ಬಂದರು. ಆಗ ಅವರು ಹೇಳಿದ ಸಂಗತಿಯಿಂದ ಆ ಕಥೆ ನಿಜವಾಗಿದ್ದುದ್ದು ತಿಳಿಯಿತು! ಹುಡುಗಾಟಕ್ಕೆ ಆಟವಾಡಿದ್ದನ್ನು ಅವರು ಶಿರಸಾವಹಿಸಿ ಪಾಲಿಸಲು ನಿರ್ಧರಿಸಿದ್ದರಂತೆ. ಆದ ಕಾರಣಕ್ಕೆ ಅಣ್ಣಂದಿರೆ ಬಲವಂತ ಮಾಡಿದ್ದರೂ ಮದುವೆಯಾಗದೆ ಹಾಗೇ ಇದ್ದರಂತೆ. ಆದರೆ ತಂದೆ ತಾಯಿಗಳ ಒತ್ತಡ, ಅವರ ಆತ್ಮಹತ್ಯೆಯ ಬೆದರಿಕೆ ಮತ್ತು ಊರವರೆಲ್ಲರೂ ಸೇರಿ ಪಂಚಾಯಿತಿ ಮಾಡಿ, ಮಕ್ಕಳಾಟಕ್ಕೆ ಮಾಡಿಕೊಂಡ ಒಪ್ಪಂದವನ್ನು ಮುರಿದರೆ ತಪ್ಪೇನಿಲ್ಲ ಎಂದು ವಾದಿಸಿ ಒಪ್ಪಿಸಿದ್ದರಿಂದ ಅವರಿಗೆ ಮದುವೆಯಾಯಿತಂತೆ!
ಜಿ.ಎಸ್.ಎಸ್. ಅಂಗನವಾಡಿ ಮೇಡಮ್‌ಗೆ ಕಣ್ಣು ಹೊಡೆದಿದ್ದು
ನಮ್ಮ ರಾಷ್ಟ್ರಕವಿ ಜಿ.ಎಸ್.ಎಸ್. ಅದ್ಯಾವ ಅಂಗನವಾಡಿ ಮೇಡಮ್‌ಗೆ ಕಣ್ಣು ಹೊಡೆದಿದ್ದರು ಎಂದು, ತಲೆಬರಹ ನೋಡಿ ಗಾಬರಿಯಾಗಬೇಡಿ. ನಾನೀಗ ಹೇಳಹೊರಟಿರುವುದು ನಮ್ಮ ಗಣಿತದ ಮೇಷ್ಟ್ರಾಗಿದ್ದ ಜಿ.ಎಸ್.ಎಸ್. ಬಗ್ಗೆ. ಅವರ ಪೂರ್ಣ ಹೆಸರು, ಜಿ.ಎಸ್.ಶ್ರೀನಿವಾಸಮೂರ್ತಿ ಎಂದು. ಅವರು ನಿತ್ಯವೂ ಅರಸೀಕೆರೆಯಿಂದ ಬಂದು ಹೋಗುತ್ತಿದ್ದರು. ನಾವು ಒಂಬತ್ತನೇ ತರಗತಿಯಲ್ಲಿದ್ದಾಗ ಹೊಸದಾಗಿ ಕೆಲಸಕ್ಕೆ ಸೇರಿದ್ದ ‘ಯುವಮೇಷ್ಟ್ರು’ ಅವರಾಗಿದ್ದರು. ಸಹಜವಾಗಿಯೇ ಅವರು ನಮ್ಮ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ದಿನಕ್ಕೊಂದು ಹೊಸ ಬಟ್ಟೆ ತೊಟ್ಟು ಬರುತ್ತಿದ್ದರೋ ಎಂಬಂತೆ ಗರಿಗರಿಯಾಗಿ ಐರನ್ ಮಾಡಿದ ಫ್ಯಾಂಟ್-ಷರ್ಟ್ ತೊಟ್ಟು, ಷರ್ಟ್-ಇನ್ ಮಾಡಿಕೊಂಡು, ದಪ್ಪದಾದ ಷೂ ತೊಟ್ಟುಕೊಂಡು ಫ್ರೆಷ್ಷಾಗಿ ಬರುತ್ತಿದ್ದರು. ಗಣಿತ ಮತ್ತು ವಿಜ್ಞಾನ ಪಾಠ ಮಾಡುತ್ತಿದ್ದರು. ಆದರೆ ಅಲ್ಲಿನ ಹದಗೆಟ್ಟ ವ್ಯವಸ್ಥೆಯಿಂದಾಗಿ ತಮ್ಮ ಪ್ರತ್ಯೇಕ ಐಡೆಂಟಿಟಿಯನ್ನು ನಾವಿದ್ದ ಕಾಲದಲ್ಲಂತೂ ಅವರು ತೋರಿಸಲಾಗಲಿಲ್ಲ! ಆದರೆ ವಯೋಸಹಜವಾಗಿ ಹುಡುಗಿಯರೆಂದರೆ ಕರಗಿ ಹೋಗುವಷ್ಟರ ಮಟ್ಟಿಗೆ ತುಂಬಾ ಮೃದುವಾಗಿ ವರ್ತಿಸುತ್ತಿದ್ದರು!
ನಾನು ಮೊದಲೇ ಹೇಳಿದಂತೆ ಕುಂದೂರು ಮಠದಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮಂಡಲ ಪಂಚಾಯಿತಿ ಆಫೀಸುಗಳಿದ್ದವು. ಅವುಗಳ ಆಶ್ರಯದಲ್ಲೋ ಏನೋ, ಒಂದು ಬಾರಿ ಜಿಲ್ಲಾ ಅಥವಾ ತಾಲ್ಲೂಕು ಮಟ್ಟದ ಅಂಗನವಾಡಿ ಕಾರ್ಯಕರ್ತೆಯರ ಸಮ್ಮೇಳನ ನಡೆದಿತ್ತು. ನೂರಾರು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು. ಅಂಗನವಾಡಿ ವ್ಯವಸ್ಥೆ ಆಗಿನ್ನೂ ಹೊಸದಾಗಿ ಬಂದದ್ದಾಗಿತ್ತು. ಸಹಜವಾಗಿಯೇ ಅದರಲ್ಲಿ ಕೆಲಸ ಮಾಡುವವರಲ್ಲಿ ಬಹುತೇಕ ಎಲ್ಲರೂ ಎಳೆಯ ವಯಸ್ಸಿನವರೇ ಆಗಿದ್ದರು. ಅಲ್ಲೊಬ್ಬರು ಇಲ್ಲೊಬ್ಬರು ಮದುವೆಯಾಗಿದ್ದವರು ಇದ್ದಿರಬಹುದು ಅಷ್ಟೆ. ಎಲ್ಲರಿಗೂ ಹಾಸ್ಟೆಲ್ ಮತ್ತು ಶಾಲಾ ಆವರಣದಲ್ಲಿದ್ದ ಮಠಕ್ಕೆ ಸೇರಿದ್ದ ಮನೆಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಮೂರು ದಿನಗಳ ಕಾಲ ನಡೆದ ಆ ಸಮ್ಮೇಳನದ ಕಾಲದಲ್ಲಿ ನಮ್ಮ ಈ ಗಣಿತದ ಮೇಷ್ಟ್ರ ಲೆಕ್ಕಾಚಾರ ಏನಾಗಿತ್ತೋ ನನಗೆ ಗೊತ್ತಿರಲಿಲ್ಲ. ಮೊದಲೆಲ್ಲಾ ಹತ್ತು ಗಂಟೆಗೆ ಬರುತ್ತಿದ್ದ ಅವರು ಆ ದಿನಗಳಲ್ಲಿ ಒಂಬತ್ತಕ್ಕೇ ಹಾಜರ್!
ಸಮ್ಮೇಳನದ ಕೊನೆಯ ದಿನ ಹಾಗೆ ಬಂದವರೇ ಹಾಸ್ಟೆಲ್ ಕಡೆಗೆ ಬಂದರು. ಹೊರಗಡೆ ನಿಂತಿದ್ದ ನಾವೆಲ್ಲಾ ಹಾಸ್ಟೆಲ್ ಹುಡುಗರು ‘ಇವರ್‍ಯಾಕಪ್ಪಾ ಬರುತ್ತಾರೆ’ ಎಂದು ಒಳಗೆ ಹೋಗಲು ಹವಣಿಸುತ್ತಿದ್ದೆವು. ಆಗ ಅವರು ನನ್ನನ್ನು ಕರೆದು ಏನೇನೋ ಅಸಂಬದ್ಧವಾಗಿ ಮಾತನಾಡತೊಡಗಿದರು. ಅವರು ಏನು ಮಾತನಾಡಿದರೆಂದು ನನಗೀಗ ಒಂದು ಪದವೂ ನೆನಪಿಗೆ ಬರುತ್ತಿಲ್ಲ. ಆಗ ಅಲ್ಲಿಯೇ ಗುಂಪುಗುಂಪಾಗಿ ಓಡಾಡುತ್ತಿದ್ದ, ಅಂಗನವಾಡಿಯ ಕಾರ್ಯಕರ್ತೆಯರ ಒಂದು ಗುಂಪು ನಮ್ಮ ಹತ್ತಿರಕ್ಕೆ ಬಂದಿತ್ತು. ನಾನು ಅವರ ಮುಖವನ್ನೇ ನೋಡುತ್ತಿದ್ದೆ. ಜಿ.ಎಸ್.ಎಸ್. ತಮ್ಮ ಎಡಗಣ್ಣನ್ನು ಪಟಾರನೆ ಆ ಗುಂಪಿನ ಕಡೆಗೆ ಹೊಡೆದರು. ನಂತರ ಇನ್ನೇನೋ ಹೇಳಿ ಸ್ಕೂಲಿನ ಕಡೆ ಹೊರಟರು. ನಾನು ನೋಡುವಷ್ಟರಲ್ಲಿ ಆ ಹೆಂಗಳೆಯರ ಗುಂಪಿಲ್ಲಿದ್ದ ಒಂದು ಹುಡುಗಿ, ‘ಥೂ’ ಎಂದು ನಮ್ಮ ಕಡೆಗೆ ಉಗಿಯುತ್ತಿದ್ದಳು! ಆಗಲೇ ನನಗೇ ಅರ್ಥವಾಗಿದ್ದು, ಜಿ.ಎಸ್.ಎಸ್. ಆ ಹುಡುಗಿಯರಿಗೆ ಕಣ್ಣು ಹೊಡೆಯಲೆಂದೇ ನನ್ನನ್ನು ಹುಡುಕಿಕೊಂಡು ಮಾತನಾಡಿಸಲು ಬಂದಿದ್ದರೆಂದು!
ಹೈಸ್ಕೂಲ್ ಕ್ಲರ್ಕ್ ಮತ್ತು ಮೆಳೆಯಮ್ಮನ ಪ್ರಸಾದ
ನನ್ನ ಹೈಸ್ಕೂಲಿಗೆ ಒಬ್ಬ ಕ್ಲರ್ಕ್ ಕೂಡಾ ಇದ್ದ. ಆತನ ಹೆಸರೇನು ಎಂಬುದೇ ನನಗೆ ಈಗ ಮರೆತು ಹೋಗಿದೆ! ಏಕೆಂದರೆ ಆತ ಕ್ಲರ್ಕ್ ಮಾತ್ರ ಆಗಿದ್ದ! ಆತ ನಮ್ಮ ಮೇಲೆ ಯಾವುದೇ ಪ್ರಭಾವ ಬೀರುವಷ್ಟು ದೊಡ್ಡ ವ್ಯಕ್ತಿಯಾಗಿರಲಿಲ್ಲ. ಆದರೂ ಆತನ ಒಂದು ವಿಚಿತ್ರ ಹವ್ಯಾಸವನ್ನು ಇಲ್ಲಿ ಹೇಳಬಯಸುತ್ತೇನೆ.
ಆತ ಹಾಸನದಿಂದಲೋ ಶಾಂತಿಗ್ರಾಮದಿಂದಲೋ ನಿತ್ಯವೂ ಬಂದು ಹೋಗುತ್ತಿದ್ದ. ಸೋಮವಾರ ಬಿಟ್ಟರೆ ಇನ್ಯಾವತ್ತೂ ಆತ ಮಧ್ಯಾಹ್ನದ ಊಟ ತರುತ್ತಿರಲಿಲ್ಲ! ಉಳಿದ ದಿನಗಳೆಲ್ಲಾ ಆತನ ಮಧ್ಯಾಹ್ನದ ಊಟಕ್ಕೆ ಮೆಳೆಯಮ್ಮನ ಪ್ರಸಾದವೇ ಗತಿ. ಆತ ಮಾಡುತ್ತಿದ್ದುದು ಇಷ್ಟೆ. ಮಧ್ಯಾಹ್ನ ಲಂಚ್ ಅವರ್ ಆದ ಮೇಲೆ, ಮತ್ತೆ ತರಗತಿಗಳು ಸೇರಲು ಬೆಲ್ ಆಗುತ್ತಿದ್ದಂತಯೇ ಆತ ಒಂದೆರಡು ಫೈಲ್ ಹಿಡಿದುಕೊಂಡು ಹೊರಡುತ್ತಿದ್ದ. ನಾನು ಮೊದಲೇ ಹೇಳಿದಂತೆ ಅಲ್ಲಿದ್ದ ಮೆಳೆಯಮ್ಮ ಎಂಬ ರಕ್ತದೇವತೆಗೆ ಪ್ರತಿ ದಿನವೂ ಪ್ರಾಣಿಬಲಿ ಇರುತ್ತಿತ್ತು. ದಿನವೂ ನೂರಾರು ಜನ ಕುರಿ ಕೋಳಿ ಬಲಿ ಕೊಡುತ್ತಿದ್ದರು. ಹಾಗೆ ಕೊಟ್ಟ ಬಲಿಯನ್ನು ಅಲ್ಲಿಯೇ ಅಡುಗೆ ಮಾಡಿ, ಮೇಳೆಯಮ್ಮನ ಭೂತಗಳಿಗೆ ಎಡೆ ಹಾಕಿ, ತಾವೂ ಊಟ ಮಾಡಿಕೊಂಡು ಹೊರಡುತ್ತಿದ್ದರು. ದೂರದ ಊರುಗಳಿಂದಲೂ ಗಾಡಿ, ಟ್ರಾಕ್ಟರ್, ಲಾರಿಗಳಲ್ಲಿ ಜನ ಈ ರೀತಿ ಹರಕೆ ತೀರಿಸಲು ಬರುತ್ತಿದ್ದರು. ಇತ್ತ ಫೈಲ್ ಹಿಡಿದುಕೊಂಡು ಹೊರಡುತ್ತಿದ್ದ ನಮ್ಮ ಕ್ಲರ್ಕ್ ಮಹಾಶಯ ಗಾಡಿಗಳ ದಟ್ಟಣೆಯಿರುವಲ್ಲಿಗೆ ಹೋಗಿ, ಎರಡು ಮೂರು ಗಾಡಿಯವರಿಗೆ ಕಾಣುವಂತೆ ಫೈಲ್ ನೋಡುತ್ತಾ ಕುಳಿತುಬಿಡುತ್ತಿದ್ದ. ಗ್ರಾಮೀಣ ಜನರಿಗೆ ಸಹಜವಾಗಿಯೇ ಬಂದಿರುವ ಗುಣದಂತೆ, ಯಾರಾದರೂ ಒಬ್ಬರು ಮಾತನಾಡಿಸುತ್ತಿದ್ದರು. ಹೀಗೇ ಮಾತನಾಡುತ್ತಾ, ಊಟದ ಸಮಯವಾದಾಗ ಊಟಕ್ಕೇಳಿಸುತ್ತಿದ್ದರು. ಚೆನ್ನಾಗಿ ಊಟ ಮಾಡಿ ಮತ್ತೆ ಸ್ಕೂಲಿಗೆ ಹಿಂತಿರುಗುತ್ತಿದ್ದ. ಸುಮಾರು ನಲವತ್ತು ನಲವತ್ತೈದರ ಪ್ರಾಯದ ಆ ಕ್ಲರ್ಕ್‌ನ ಗುಡಾಣದಂತಹ ಹೊಟ್ಟೆಗೆ ಆತನ ಈ ರೀತಿಯ ದಿನಚರಿಯೇ ಕಾರಣವಾಗಿತ್ತು!

6 comments:

PARAANJAPE K.N. said...

ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದೀರಿ. ಚೆನ್ನಾಗಿದೆ. ಹಳೆಯ ನೆನಪುಗಳು ಯಾವಾಗಲು ಮಧುರವಾಗಿರುತ್ತವೆ. ಖುಷಿ ಕೊಡುತ್ತವೆ. ಚೆನ್ನಾಗಿದೆ. ಇನ್ನಷ್ಟು ಇಂತಹ ಅನುಭವಗಳನ್ನು ಹ೦ಚಿಕೊಳ್ಳಿ.

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ...
ನಿಮ್ಮ ಹೈಸ್ಕೂಲ್ ದಿನಗಳು ತುಂಬಾ ಚನ್ನಾಗಿದವೇ.

sunaath said...

ಶಿಕ್ಷಕರ ವಿಚಿತ್ರ ವರ್ತನೆಗಳನ್ನು ಓದಿ ವಿನೋದವೆನಿಸಿತು!

Anonymous said...

ಸಾರ್, ಒಂದು ಭರ್ಜಿ ಸುದ್ದಿ! ಸತ್ಯವೋ ಸುಳ್ಳೋ ಗೊತ್ತಿಲ್ಲ.

ಉಡುಪಿಯ ಮಿತ್ರರಿಂದ ಬಂದ ಸುದ್ದಿ. ಪೇಜಾವರರ ಆತ್ಮಚರಿತ್ರೆ ಕೇಂದ್ರದಲ್ಲಿ ಸರಕಾರ ರಚನೆಯ ಪ್ರಕ್ರಿಯೆ ಮುಗಿದ ತಕ್ಷಣವೇ ಬಿಡುಗಡೆಯಾಗುತ್ತದೆಯಂತೆ! ಚುನಾವಣೆಗಿಂತ ಮೊದಲೇ ಪ್ರಕಟಣೆಗೆ ಸಿದ್ಧವಾಗಿದ್ದರೂ ಸಹ ಪುಸ್ತಕದಲ್ಲಿ ಪ್ರಸ್ತಾಪವಾಗಿರುವ ವಿಚಾರಗಳಿಂದ ಬಿ. ಜೆ. ಪಿ. ಗೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ಸರಕಾರ ರಚನೆಯಾಗುವವರೆಗೂ ಪ್ರಕಟಣೆ ಬೇಡ ಎಂದು ನಿರ್ಧರಿಸಲಾಗಿದೆಯಂತೆ. ಆತ್ಮಚರಿತ್ರೆಗೆ ಬೆನ್ನುಡಿಯನ್ನು ಬಿ. ಜೆ. ಪಿ. ನಾಯಕ ಅಡ್ವಾನಿ ಬರೆದಿದ್ದಾರಂತೆ. ಪ್ರಸ್ತಾವನೆಯನ್ನು ಪೇಜಾವರರನ್ನು ಹತ್ತಿರದಿಂದ ಬಲ್ಲ ಅನಂತಮೂರ್ತಿಯವರಿಂದ ಬರೆಸುವ ಇಚ್ಛೆ ಪೇಜಾವರರಿಗೆ ಇದ್ದರೂ ಅವರ ಸಹವರ್ತಿಗಳು ಮಾಧ್ವರೇ ಪ್ರಸ್ತಾವನೆಯನ್ನು ಬರೆದರೆ ಮಿಕ್ಕವರು ಪುಸ್ತಕವನ್ನು ಅಲಕ್ಷೆ ಮಾಡಬಹುದು ಎಂದು ಆಭಿಪ್ರಾಯಪಟ್ಟರಂತೆ. ಕೊನೆಗೆ ಪೇಜಾವರರ ದಲಿತ ಪರ ಕಾರ್ಯಕ್ರಮಗಳಿಗೆ ಸಹಾನುಭೂತಿ ಹೊಂದಿರುವ ದಲಿತ ಕವಿಯೊಬ್ಬರಿಂದ ಬರೆಸಿದರಂತೆ. ಪುಸ್ತಕದಲ್ಲಿ ರಾಮಜನ್ಮಭೂಮಿ ಚಳವಳಿಯ ಕಾಲದ ವಿವರಗಳೂ ಸಹಿತ ಅನೇಕ ವಿವಾದಾತ್ಮಕ (ಹಾಗೂ ರೋಚಕ?) ಸಂಗತಿಗಳಿವೆಯಂತೆ. ಕನ್ನಡ ಸಾಹಿತ್ಯದ ದಿಗ್ಗಜರ ಬಗ್ಗೂ ಸಾಕಷ್ಟು ನಿಷ್ಠುರವಾಗಿ ಬರೆದಿದ್ದಾರಂತೆ! ಭರ್ಜರಿ ಸಾರ್ವಜನಿಕ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಯಾದ ಬಳಿಕ ಪ್ರತಿ ವಾರವೂ ಮರುಮುದ್ರಣ ಆಗಿ ದಾಖಲೆಗಳನ್ನು ಮುರಿಯುವ ಬಗ್ಗೆ ಉಡುಪಿ ಮಠದ ವಟುಗಳಿಂದ ಹಿಡಿದು ಅಡಿಗೆಯ ಮಾಣಿಗಳೂ ಕನಸು ಕಾಣುತ್ತದ್ದಾರಂತೆ. ಅಂತೂ ಉಡುಪಿ ಮಠದ ಸ್ವಾಮಿಗಳೊಬ್ಬರು ಆತ್ಮಚರಿತ್ರೆ ಬರೆಯುವುದರ ಮೂಲಕ ನಾಡಿನ ವಿದ್ಯಮಾನಗಳಲ್ಲಿ ಹೊಸ ಸಂಚಲನವೇ ಉಂಟಾಗಲಿದೆ ಎಂದು ಸುದ್ದಿ ಕೊಟ್ಟ ಮಿತ್ರರ ಅಂಬೋಣ.

shivu.k said...

ಸರ್,

ಹಳೆಯ ನೆನಪುಗಳು ತುಂಬಾಚೆನ್ನಾಗಿವೆ....ಅದರ ವಿವರಣೆಯೂ ಕೂಡ...
ಓದುತ್ತಾ ಎಲ್ಲಾ ಚಿತ್ರಗಳು ಕಣ್ಣಮುಂದೆ ಹರಿದಾಡುತ್ತವೆ...

paapu paapa said...

hello sir,
photogalu kushi kottavu.