Thursday, April 16, 2009

ಮತ್ತೆ ಮತ್ತೆ ತೇಜಸ್ವಿ

ತೇಜಸ್ವಿ ನಿಧನರಾದಾಗ ‘ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ’ಯಲ್ಲಿ ‘ತೇಜಸ್ವಿ ಮಾತು ಮೂರು ಅರ್ಥ ನೂರಾರು’ ಎಂಬ ನನ್ನ ಲೇಖನ ಪ್ರಕಟವಾಗಿತ್ತು. ಕಳೆದ ವರ್ಷಾಂತ್ಯದಲ್ಲಿ ನಾನು ಬ್ಲಾಗ್ ಲೋಕಕ್ಕೆ ಕಾಲಿಟ್ಟಾಗ ಆ ಲೇಖನವನ್ನು ನನ್ನ ಬ್ಲಾಗಿನಲ್ಲಿ ಹಾಕಿದೆ. http://nandondmatu.blogspot.com/2008/12/blog-post_10.html
ಅದನ್ನು ಓದಿದ ಶ್ರೀಮತಿ ಈಶಾನ್ಯೆ ಅವರು ‘ಇದರಲ್ಲಿ, ಕೆಲವು ತೇಜಸ್ವಿಯವರು ಹೇಳಿದ ಮಾತುಗಳೇ ಅಲ್ಲ! (ಅವರ ಸ್ಟೈಲೇ ಬೇರೆ.. ಉದಾಹರಣೆಗೆ, ಅವರೆಂದೂ ರಾಜೇಶ್ವರಿಯವರನ್ನು ರಾಜೂ ಎಂದು ಕರೆಯುತ್ತಿರಲಿಲ್ಲ.. ‘ಬಂದವ್ನೆ’ ಎಂದು ಉಪಯೋಗಿಸುತ್ತಿರಲಿಲ್ಲ... ಇನ್ನೂ ಆನೇಕ). ಅಲ್ಲದೆ, ಇಲ್ಲಿರುವ ಕೆಲವು ತೇಜಸ್ವಿಯವರ ಅನಿಸಿಕೆಗಳು ಬೇರೆಯವರ ಅನಿಸಿಕೆಗಳಂತೆ ತೋರುತ್ತಿವೆ!’ ಎಂದು ಪ್ರತಿಕ್ರಿಯಿಸಿದ್ದರು. ಅದು ಸರಿಯೂ ಕೂಡಾ. ಆಗ ಕೇವಲ ಸರಿಯೆನ್ನಿಸಿದ್ದು ಈಗ ಇನ್ನಷ್ಟು ಸ್ಪಷ್ಟವಾಗಿದೆ, ಅನುಭವಗಮ್ಯವಾಗಿದೆ! ಈಶಾನ್ಯೆ ಅವರ ಮಾತುಗಳು ನೂರಕ್ಕೆ ನೂರರಷ್ಟು ಸತ್ಯವೆಂದು ಬೇರೊಂದು ಕಾರಣದಿಂದಲೂ ನನಗೆ ದೃಢಪಟ್ಟಿದೆ. ಬೇರೆಯವರು ‘ತೇಜಸ್ವಿ ಹಾಗೆ ಹೇಳಿದ್ದರು, ಹೀಗೆ ಹೇಳಿದ್ದರು’ ಎಂದು ಮಾದ್ಯಮಗಳಿಗೆ ಕೊಟ್ಟ ಮಾತುಗಳೆಲ್ಲವನ್ನೂ ನಾನು ಅವರದೇ ಎಂದು ಭಾವಿಸಿದ್ದು ನನ್ನ ಮೊದಲ ತಪ್ಪು. ತೇಜಸ್ವಿಯವರು ಬೇರೆ ಬೇರೆ ಸಂದರ್ಭಗಳಲ್ಲಿ ಆಡಿದ ಮಾತುಗಳನ್ನು ಕೇಳಿಸಿಕೊಂಡವರು, ಅವುಗಳನ್ನು ತಮ್ಮದೇ ಶೈಲಿಯಲ್ಲಿ ಅಭಿವ್ಯಕ್ತಿಸಿರುತ್ತಾರೆ ಎಂಬುದು ಈಗ ನನಗೆ ಗೊತ್ತಾಗಿದೆ. ಅವರ ನಿಧನಾನಂತರ ನಾನು ತೇಜಸ್ವಿ ಸಾಹಿತ್ಯ ಸಂಬಂಧಿತ ನಾಲ್ಕು ಸೆಮಿನಾರುಗಳಲ್ಲಿ ಭಾಗವಹಿಸಿದ್ದೇನೆ. ಅವುಗಳಲ್ಲಿ ಭಾಗವಹಿಸಿದ್ದ ಹೆಚ್ಚಿನ ವಿಮರ್ಶಕರು ‘ನಾನು ತೇಜಸ್ವಿಯವರೊಂದಿಗೆ ಮಾತನಾಡುವಾಗ ಹೀಗೆ ಹೇಳಿದ್ದರು, ಫೋನಿನಲ್ಲಿ ಹಾಗೆ ಹೇಳಿದ್ದರು’ ಎಂದು ಏನಾದರೂ ಹೇಳುತ್ತಲೇ ಇರುವುದನ್ನು ಗಮನಿಸಿದ್ದೇನೆ. ಒಬ್ಬರೇ ವಿಮರ್ಶಕರು, ಒಂದೇ ಸನ್ನಿವೇಶದ ಮಾತುಗಳನ್ನು ಬೇರೆ ಬೇರೆ ರೀತಿಯಲ್ಲಿ ಹೇಳಿರುವುದಲ್ಲದೆ, ಅವುಗಳನ್ನು ತಮ್ಮ ಮಾತುಗಳ ಸಮರ್ಥನೆಗೆ ಬಳಸಿಕೊಂಡಿರುವುದನ್ನು ಕೇಳಿದ್ದೇನೆ.

ಸೆಮಿನಾರುಗಳ ಬೂಟಾಟಿಕೆ
ಇಷ್ಟೆಲ್ಲಾ ನೆನಪಾದದ್ದು, ಮೊನ್ನೆ (೦೯.೦೪.೨೦೦೯) ಬೆಂಗಳೂರಿನ ಬಿ.ಇ.ಎಸ್.ಕಾಲೇಜಿನಲ್ಲಿ ನಡೆದ ‘ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಸಂಸ್ಕೃತಿ ಚಿಂತನೆ’ ಎಂಬ ಸೆಮಿನಾರಿನಲ್ಲಿ. ಆಹ್ವಾನ ಪತ್ರಿಕೆಯಲ್ಲಿದ್ದ ‘ಕಡಿದಾಳ ಶಾಮಣ್ಣ’ ಅವರ ಹೆಸರನ್ನು ನೋಡಿ, ಅವರು ಭಾಗವಹಿಸಲಿರುವ ಸಮಾರೋಪ ಸಮಾರಂಭಕ್ಕಷ್ಟೇ ಹೋಗಿಬರಬೇಕೆಂದುಕೊಂಡಿದ್ದೆ. ಏಕೆಂದರೆ ವಿಚಾರಸಂಕಿರಣದಲ್ಲಿ ಭಾಗವಹಿಸಲಿರುವ ವಿಮರ್ಶಕರಲ್ಲಿ ಅನೇಕರು ಈಗಾಗಲೇ ತೇಜಸ್ವಿ ಬಗ್ಗೆ ಮಾತನಾಡುವುದನ್ನು ಕೇಳಿದ್ದೆ. ‘ವಿಮರ್ಶೆಯ ಬಗ್ಗೆ ತೇಜಸ್ವಿಯವರ ಆಶಯಕ್ಕೆ ವಿರುದ್ಧವಾಗಿ ತಮ್ಮ ಪಾಂಡಿತ್ಯ ಪ್ರದರ್ಶನಕ್ಕೆ ಅವರು ತೇಜಸ್ವಿಯವರನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂಬ ಅಭಿಪ್ರಾಯ ನನ್ನದಾಗಿತ್ತು. ಆದರೆ ನಮ್ಮ ಪ್ರಾಂಶುಪಾಲರು, ‘ಹೋಗಿಬನ್ನಿ, ಬೇರೆ ಯಾರು ಹೋಗುವಂತೆ ಕಾಣುತ್ತಿಲ್ಲ. ಓ.ಓ.ಡಿ. ಕೊಡುತ್ತೇನೆ’ ಎಂದು ಹೇಳಿದ್ದರಿಂದ ಇಡೀ ದಿನ ಸೆಮಿನಾರಿನಲ್ಲಿ ಭಾಗವಹಿಸಬೇಕಾಗಿ ಬಂತು.ಪ್ರೊ.ಜಿ.ಹೆಚ್.ನಾಯಕರ ಉದ್ಘಾಟನಾ ಭಾಷಣ ಹೊಸ ಆಲೋಚನೆಗಳನ್ನು ಹುಟ್ಟುಹಾಕುವಂತೆ ಇತ್ತು. ನಾನು ನಿರೀಕ್ಷಿಸಿರದ ಶ್ರೀಮತಿ ರಾಜೇಶ್ವರಿಯವರು ಬಂದಿದ್ದು, ಎರಡೇ ಎರಡು ನಿಮಿಷ ಮಾತನಾಡಿದರು! ಇನ್ನು ಉಳಿದಂತೆ, ಶಿವಾರೆಡ್ಡಿಯವರೊಬ್ಬರನ್ನು ಬಿಟ್ಟರೆ ಉಳಿದವರೆಲ್ಲಾ ಮತ್ತದೇ ಪೋಸ್ಟ್ ಮಾರ್ಟಮ್ ರೀತಿಯ ವಿಮರ್ಶೆ ನಡೆಸಿದ್ದೇ ನಡೆಸಿದ್ದು! ಶಿವಾರೆಡ್ಡಿ ಮಾತ್ರ ‘ಮಿಲೆನಿಯಂ ಸೀರಿಸ್’ ಪುಸ್ತಕಗಳ ವಿಶೇಷಗಳನ್ನು ಹೇಳಿ, ಅದರ ಓದಿನ ಅಗತ್ಯವನ್ನು, ಅದರಿಂದಾಗುವ ಲಾಭವನ್ನು ಸರಳವಾಗಿ ಹದಿನೈದು ನಿಮಿಷದಲ್ಲಿ ಹೇಳಿ ಮುಗಿಸಿದ್ದರು. ಪುಟ್ಟಸ್ವಾಮಿಯವರ ಮಾತುಗಳು ಪುನರಾವರ್ತನೆಯಾದವು, ಅಷ್ಟೆ. ಆದರೆ ಉಳಿದವರ್‍ಯಾರೂ ಸಮಯ ಪ್ರಜ್ಞೆ ಮೆರೆಯಲಿಲ್ಲ. ಆದ್ದರಿಂದ ಯಾವುದೇ ಪ್ರಶ್ನೆ ಕೇಳುವ ಅವಕಾಶ ಯಾರಿಗೂ ಸಿಗಲಿಲ್ಲ.
ಇನ್ನೊಬ್ಬ ಮಹನೀಯರ ವಿಷಯವೇ (ಅವರೇ ಸೂಚಿಸಿದ್ದಂತೆ) ತೇಜಸ್ವಿಯರ ಸಾಹಿತ್ಯದಲ್ಲಿ ಮಾಯೆ ಮತ್ತು ಲೋಕದ ಸಂಬಂಧ. ವಿಷಯ ಕೇಳುವುದಕ್ಕಷ್ಟೇ ಚೆನ್ನಾಗಿದೆ. ಆದರೆ ಅವರು ತೇಜಸ್ವಿಯವರ ಸಾಹಿತ್ಯದಲ್ಲಿ ಬರುವ ಕೆಲವು ಸನ್ನಿವೇಶಗಳನ್ನಷ್ಟೇ ರಂಜಕವಾಗಿ ಹೇಳಿ, ಒಂದಷ್ಟು ನಗಿಸಿ ಭಾಷಣ ಮುಗಿಸಿದ್ದರು. ಹಿಂದಿನ ಎರಡು ಸೆಮಿನಾರುಗಳ ನನ್ನ ಅನಿಸಿಕೆಯನ್ನು ಪತ್ರಿಕೆಗಳಿಗೆ ಬರೆದಿದ್ದೆ. ಅದನ್ನೊಮ್ಮೆ ಓದಿ. (ಈಗಲೇ ಪತ್ರಿಕೆಗಳಲ್ಲಿ ಓದಿದ್ದವರು ಬೇಕಾದರೆ ಬೈಪಾಸ್ ಮಾಡಿ, ಕೊನೆಗೆ ಬಂದುಬಿಡಿ!)
ಜನವರಿ ೭, ೨೦೦೭
ಭಾನುವಾರ (೭-೧-೦೭) ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಇಡೀ ದಿನ ‘ತೇಜಸ್ವಿ ಕಥನ ಸಾಹಿತ್ಯ’ವನ್ನು ಕುರಿತು ವಿಚಾರಸಂಕಿರಣ ಏರ್ಪಟ್ಟಿತ್ತು. ರಂಗಕರ್ಮಿ ಪ್ರಸನ್ನ ಅವರಿಗೆ ಬೆಂಬಲ ಸೂಚಿಸುವುದಕ್ಕಾಗಿ ಅವರು ಉಪವಾಸ ನಡೆಸುತ್ತಿರುವ ಜಾಗದಲ್ಲೇ ಈ ವಿಚಾರ ಸಂಕಿರಣ ನಡೆಸಿದ್ದು ಅರ್ಥಪೂರ್ಣವಾಗಿತ್ತು. ಚಂದ್ರಶೇಖರ ನಂಗಲಿ, ಶಿವಾರೆಡ್ಡಿ, ಮತ್ತು ಅಬ್ದುಲ್ ರಷೀದ್ ಈ ಮೂವರನ್ನು ಬಿಟ್ಟರೆ, ಉಳಿದ ಭಾಷಣಕಾರರು ‘ತೇಜಸ್ವಿ ಇದನ್ನು ಏಕೆ ಬರೆದಿಲ್ಲ? ಅದನ್ನು ಹೀಗೆ ಬರೆಯಬಹುದಾಗಿತ್ತು. ಅಲ್ಲಿ ಸಂಯಮ ಬೇಕಿತ್ತು. ಅವರು ಸ್ತ್ರೀಯರ ಪರವಲ್ಲ. ಯಾವುದೋ ಚಳುವಳಿಯನ್ನು ಬೈಪಾಸ್ ಮಾಡಿದ್ದಾರೆ, ಗಂಭೀರವಾಗಿ ಪರಿಗಣಿಸಿಲ್ಲ...’ ಹೀಗೆ ಹಲವಾರು ಸಾಹಿತ್ಯ ವಿಮರ್ಶೇಯ ಚೌಕಟ್ಟುಗಳನ್ನು ಇಟ್ಟುಕೊಂಡೆ ಮಾತನಾಡಿದರು.ಎಲ್ಲಾ ಕಟ್ಟುಪಾಡುಗಳನ್ನು ಕಳಚಿಕೊಂಡು, ‘ತಾನು ಬರೆಯುತ್ತಿರುವುದು ಸಿದ್ಧಾಂತವಾಗಬಾರದು’ ಎಂಬ ಎಚ್ಚರದಲ್ಲಿ ಬರೆಯುತ್ತಿರುವ ಲೇಖಕ ತೇಜಸ್ವಿ ಎಂಬುದನ್ನು ಅವರು ಮರೆತಂತಿತ್ತು. ಶ್ರೋತೃಗಳು ಎತ್ತಿದ ಪ್ರಶ್ನೆಗಳಿಗೆ ನೀಡಿದ ಭಾಷಣಕಾರರ ಉತ್ತರದಲ್ಲಿ ಸ್ಪಷ್ಟತೆ ಇಲ್ಲದಿದ್ದರಿಂದ ಸಂಕಿರಣದ ಸಾರಥ್ಯ ವಹಿಸಿದ್ದ ಕಿ.ರಂ.ನಾಗರಾಜ ಅವರೇ ಬರಬೇಕಾಯಿತು. ಆದರೆ ಭಾಷಣಕಾರರನ್ನು ಸಮಥಿಸುವ ಆತುರದಲ್ಲಿ ಕಿ.ರಂ.ನಾ. ಅವರು ಸಾಹಿತ್ಯ ವಿಮರ್ಶೆಯ ತತ್ವಗಳನ್ನೇ ಹೇಳಿದ್ದು ಆಶ್ಚರ್ಯವಾಗಿತ್ತು! ಏಕೆಂದರೆ, ಕಿ.ರಂ.ನಾ. ಆಶಯ ಭಾಷಣ ಮಾಡುವಾಗ ‘ಸಾಹಿತ್ಯ ವಿಮರ್ಶೆಯ ಸಿದ್ಧಮಾದರಿಗಳನ್ನು ಇಟ್ಟುಕೊಂಡು ತೇಜಸ್ವಿಯನ್ನು ಓದಲು ತೊಡಗಬಾರದು’ ಎಂದು ಹೇಳಿದ್ದರು.ಶಿವಾರೆಡ್ಡಿ ಹೇಳುವಂತೆ, ‘ತೇಜಸ್ವಿ ಅವರ ಯಾವುದಾದರು ಒಂದು ಕೃತಿಯನ್ನು ಓದಿದರೆ ಸಾಕು. ಅದೇ ಅವರ ಬೇರೆ ಕೃತಿಗಳಿಗೆ ದಿಕ್ಸೂಷಿಯಾಗುತ್ತದೆ.’ ವಿಮರ್ಶೆಯ ತತ್ವಗಳನ್ನು ಹೇಳುತ್ತಾ ಓದುಗರಲ್ಲಿ ಗೊಂದಲ ಮೂಡಿಸುವ ವಿಚಾರಸಂಕಿರಣಗಳು ತೇಜಸ್ವಿಯವರ ಕೃತಿಗಳಿಗಂತೂ ಅನಿವಾರ್ಯವಲ್ಲ. ತೇಜಸ್ವಿ, ‘ಜೀವವೈವಿಧ್ಯತೆಗೆ ಮತ್ತು ಜೈವಿಕ ಪರಿಸರಕ್ಕೆ ಮನುಷ್ಯ ಮಾಡಬಯಸುತ್ತಿರುವ ಸಹಾಯವೇ ಅವಕ್ಕೆ ಮುಳುವಾಗುತ್ತಿದೆ’ ಎಂಬ ಗ್ರಹಿಕೆಯ ಹಿನ್ನೆಲೆಯಲ್ಲಿ, ಸರಳವಾಗಿ ಓದಿಸಿಕೊಂಡು ಹೋಗುವಂತೆ ಬರೆಯುತ್ತಿರುವ ಲೇಖಕ. ಅಂತಹ ಲೇಖಕ ಮತ್ತು ಓದುಗರ ನಡುವೆ ಸೇತುವಾಗಬೇಕಿದ್ದ ವಿಚಾರಸಂಕಿರಣಗಳು, ಅಡ್ಡಗೋಡೆಯಾಗುತ್ತಿರುವುದು ಮತ್ತು ನಾವು ಪರಿಸರಕ್ಕೆ ಮಾಡುತ್ತಿರುವ ಸಹಾಯದಂತೆಯೇ ಅಡ್ಡ ಪರಿಣಾಮವನ್ನುಂಟು ಮಾಡುತ್ತಿರುವುದು ವಿಪರ್ಯಾಸವೇ ಸರಿ. ಅದಕ್ಕೆ ಕಿ.ರಂ.ನಾ. ಅವರಂಥವರು ಸಾರಥ್ಯ ವಹಿಸಿದ್ದು ನಿಜಕ್ಕೂ ವಿಷಾದನೀಯ. ಇಂತಹ ಸಂಕಿರಣಗಳಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು.
ಸೆನೆಟ್ ಹಾಲಿನಲ್ಲಿ ನಡೆದ ಸೆಮಿನಾರಿನ ಅನುಭವ
ಇತ್ತೀಚಿನ ಸಾಹಿತ್ಯಕ ವಿಚಾರ ಸಂಕಿರಣಗಳಲ್ಲಿ, ಪ್ರಬಂಧ ಮಂಡನೆಯ ಕೊನೆಯಲ್ಲಿ ಚರ್ಚೆಗೆ ಅವಕಾಶವಿರುತ್ತದೆ ಎಂಬ ಘೋಷಣೆ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಆದರೆ ಭಾಷಣಕಾರರು ತಮ್ಮ ಪಾಂಡಿತ್ಯಪ್ರದರ್ಶನದ ಸಲುವಾಗಿ ನಿಗಧಿಪಡಿಸಿದ ಸಮಯದ ಜೊತೆಗೆ ಬೇರೆಯವರ ಸಮಯವನ್ನೂ ತಿಂದು ಹಾಕುತ್ತಿದ್ದಾರೆ. ಕೊನೆಯಲ್ಲಿ ಚರ್ಚೆಗೆ ಕೇವಲ ಎರಡು ನಿಮಿಷ, ಐದು ನಿಮಿಷ ಎಂಬ ಘೋಷಣೆ ಮಾಡುತ್ತಾರೆ. ಆ ಸಮಯದಲ್ಲಾದರೂ ಯಾರಾದರು ಉತ್ಸಾಹಿ ಸಹೃದಯರು ಕೇಳಿದ ಪ್ರಶ್ನೆಗಳಿಗೆ, ವ್ಯಕ್ತಪಡಿಸಿದ ಸಂದೇಹಗಳಿಗೆ ಭಾಷಣಕಾರರು ಉತ್ತರಿಸುವ ಗೋಜಿಗೆ ಹೋಗದೆ ನಿರಾಶೆಗೊಳಿಸುವುದು ಸಾಮಾನ್ಯವಾಗಿದೆ.ಕಳೆದ ವಾರಾಂತ್ಯದಲ್ಲಿ ನಡೆದ ‘ಕಾಡು ಹಕ್ಕಿಯ ನೆನಪು’ ವಿಚಾರ ಸಂಕಿರಣದಲ್ಲಿ ಆದದ್ದು ಅದೇ! ‘ತೇಜಸ್ವಿ ಸಾಮಾನ್ಯರಿಗೂ ಅರ್ಥವಾಗುವಂತೆ ಸರಳವಾಗಿ ಬರೆದಿದ್ದಾರೆ. ಆದರೆ ನೀವೇ ಅದನ್ನು ಹೆಚ್ಚು ಜಟಿಲಗೊಳಿಸುತ್ತಿದ್ದೀರಿ’ ಎಂಬ ಸಹೃದಯನೊಬ್ಬನ ಪ್ರಶ್ನೆಗೆ ಭಾಷಣಕಾರ್ತಿ ‘ತೇಜಸ್ವಿ ಸಾಹಿತ್ಯದ ವಿಚಾರ ಸಂಕಿರಣದಲ್ಲಿ ಇದೊಂದು ಬಹುನಿರೀಕ್ಷಿತ ಪ್ರಶ್ನೆ. ಹಾಗೆ ಜಟಿಲಗೊಳಿಸುವುದೇ ನಮ್ಮ ಕೆಲಸ!’ ಎಂದು ಅಸಂಬದ್ಧವಾಗಿ ಉತ್ತರಿಸಿ, ನಕ್ಕು ಸುಮ್ಮನಾಗಿಬಿಟ್ಟರು!
ಅನಂತಮೂರ್ತಿ, ಕಿರಂ, ಕುಂವೀ, ಮೊಗಳ್ಳಿ ಮೊದಲಾದವರು ತಮ್ಮ ಭಾಷಣದಲ್ಲಿ, ‘ವಿಮರ್ಶೆಯ ಸಿದ್ಧಮಾದರಿಗಳನ್ನು ಇಟ್ಟುಕೊಂಡು ಹೊರಟರೆ ತೇಜಸ್ವಿ ನಮಗೆ ದಕ್ಕುವುದಿಲ್ಲ’ ಎಂಬ ಅಭಿಪ್ರಾಯವನ್ನು ಹಿಂದಿನ ದಿನ ವ್ಯಕ್ತಪಡಿಸಿದ್ದರು. ‘ತೇಜಸ್ವಿಯನ್ನು ನೀವು ಜಟಿಲಗೊಳಿಸುತ್ತಿದ್ದೀರಿ’ ಎಂಬ ಅಭಿಪ್ರಾಯವೂ ಅದಕ್ಕೆ ಪೂರಕವಾಗಿ ಚರ್ಚೆ ವಿಸ್ತೃತವಾಗಿ ನಡೆಸುವ ಸಾಧ್ಯತೆಯನ್ನು ಹೆಚ್ಚಿಸಿತ್ತು. ಆದರೆ ಭಾಷಣಕಾರರ ಉಡಾಪೆಯಿಂದ ಅದು ಸಾಧ್ಯವಾಗಲಿಲ್ಲ. ಮುಂದ ಬೇರೆಯವರು ಪ್ರಶ್ನೆ ಕೇಳಲಿಲ್ಲ!
ಮೊದಲ ದಿನವೂ ಯಾರೂ ಪ್ರಶ್ನೆ ಕೇಳುವವರೇ ಇರಲಿಲ್ಲ! ಸ್ವತಃ ಅನಂತಮೂರ್ತಿಯವರೇ ಚರ್ಚೆಯನ್ನು ಪ್ರಾರಂಭಿಸಿದರೂ ಮುಂದುವರೆಯಿಲಿಲ್ಲ. ಆದರೆ ಸಹೃದಯರೊಬ್ಬರು, ಒಬ್ಬ ಭಾಷಣಕಾರರ ಮಾತಿಗೆ ಸಂಶಯ ವ್ಯಕ್ತಪಡಿಸಿ, ಹೆಚ್ಚಿನ ವಿವರಣೆ ಬಯಸಿದರೆ, ಆ ಭಾಷಣಕಾರರು ‘ಅದಕ್ಕೆ ನಾನೇನು ಹೇಳಬೇಕಾಗಿಲ್ಲ’ ಎಂಬ ಒಂದೇ ಮಾತಿನ ಉತ್ತರವನ್ನು ಕುಳಿತಲ್ಲಿಂದಲೇ ಹೇಳಿ ಮೌನವಾದರು!
ಹೀಗೇಕೆ? ಸಾಹಿತ್ಯಕ ಕಾರ್ಯಕ್ರಮಗಳಿಗೆ ಜನರು ಬರುವುದೇ ಅಪರೂಪವಾಗಿರುವಾಗ, ಬಂದ ಕೆಲವು ಉತ್ಸಾಹಿಗಳನ್ನು ಹೀಗೆ ನಿರುತ್ಸಾಹಗೊಳಿಸುವುದು ಸರಿಯೆ? ತಮ್ಮ ಪ್ರತಿ ಹೆಜ್ಜೆಯಲ್ಲೂ ಹೊಸತನಕ್ಕಾಗಿ ತುಡಿಯುತ್ತಿದ್ದ ತೇಜಸ್ವಿಯವರ ಬಗ್ಗೆ ನಡೆದ ವಿಚಾರಸಂಕರಣದಲ್ಲಿ ಹೀಗೆಲ್ಲಾ ಆಗಿದ್ದು ನೋಡಿದರೆ, ಈ ಬಗೆಯ ವಿಚಾರ ಸಂಕಿರಣಗಳು, ಅವರನ್ನು ಜಟಿಲಗೊಳಿಸಿ ಜನಸಾಮಾನ್ಯರಿಂದ ದೂರ ಮಾಡುವ ಹುನ್ನಾರದಂತೆ ಕಾಣುತ್ತವೆ. ಇನ್ನು ಮುಂದಾದರೂ ಭಾಷಣ ಕಡಿಮೆಯಿರಲಿ; ಚರ್ಚೆ ಹೆಚ್ಚಾಗಿರಲಿ ಎಂದು ಆಶಿಸೋಣ.
ಭಾನುವಾರದ ಪತ್ರಿಕೆಯೊಂದರಲ್ಲಿ, ‘ಕೆ.ಎಸ್. ಪುಟ್ಟಣ್ಣಯ್ಯ ಮತ್ತು ಇಂದೂಧರ ಹೊನ್ನಾಪುರ ವಿಚಾರಸಂಕಿರಣದಲ್ಲಿ ಭಾಷಣ ಮಾಡಿದರು’ ಎಂಬ ವರದಿ ಬಂದಿದೆ. ಆದರೆ ಆ ಇಬ್ಬರು ಮಹನೀಯರು ಬಂದೇ ಇರಲಿಲ್ಲ! ಕೇವಲ ಆಹ್ವಾನ ಪತ್ರಿಕೆ ನೋಡಿ ಸುದ್ದಿಯನ್ನು ತಯಾರಿಸುವ ಚಾಳಿಗೆ ಕನ್ನಡ ಪತ್ರಿಕೋದ್ಯಮ ಇಳಿದಿರುವುದು ದುರದೃಷ್ಟಕರ!
ಹೀಗೇಕೆ?
ತೇಜಸ್ವಿ ಸಾಹಿತ್ಯದ ಬಗ್ಗೆ ಸೆಮಿನಾರುಗಳನ್ನು ಆಯೋಜಿಸುವವರು, ಪ್ರಮುಖ ವಿಮರ್ಶಕರು ಆಡುವ ಮಾಮೂಲಿ ಮಾತುಗಳೆಂದರೆ, ‘ತೇಜಸ್ವಿಯವರ ಸಾಹಿತ್ಯವನ್ನು ದಕ್ಕಿಸಿಕೊಳ್ಳಬೇಕಾದರೆ ಸಿದ್ದಸೂತ್ರಗಳನ್ನು ಇಟ್ಟುಕೊಂಡು ನೋಡಲಾಗದು’ ಎಂಬವು. ಆದರೆ ಇಡೀ ಸೆಮಿನಾರು ನಡೆಯುವುದು ಅದೇ ಸಿದ್ದಸೂತ್ರಗಳ ಆಧಾರದ ಮೇಲೆಯೇ! ಅಲ್ಲಿ ಮಂಡಿಸುವ ಪ್ರಬಂಧಗಳಲ್ಲಿ ಹೆಚ್ಚಿನ ವಿಮರ್ಶಕರು ತಮಗೆ ಗೊತ್ತಿರುವ ಸಮಸ್ತ ಪಾರಿಭಾಷಿಕ ಪದಗಳನ್ನು ತೂರಿಸಿ, ತಮ್ಮ ವಿದ್ವತ್ತನ್ನು ಪ್ರದರ್ಶಿಸಿ, ಸರಳವಾಗಿರುವ ತೇಜಸ್ವಿಯವರನ್ನು ಮತ್ತು ಅವರ ಸಾಹಿತ್ಯವನ್ನು ಕ್ಲಿಷ್ಟಗೊಳಿಸಿಬಿಡುತ್ತಾರೆ. ಇಲ್ಲದ ಸಾಂಕೇತಿಕತೆಯನ್ನು ಆರೋಪಿಸುತ್ತಾರೆ. ಇಷ್ಟಕ್ಕೆ ಸುಮ್ಮನಾಗದೆ ‘ತೇಜಸ್ವಿ ಇದನ್ನು ಹೀಗೆ ಬರೆದಿದ್ದಾರೆ, ಹಾಗೆ ಬರೆದಿದ್ದಾರೆ, ಅದನ್ನು ಹೀಗೆ ಬರೆಯಬಹುದಿತ್ತು. ಬರೆದಿದ್ದರೆ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು’ ಇತ್ಯಾದಿ ಇತ್ಯಾದಿ ತೀರ್ಮಾನಗಳನ್ನೂ ನೀಡುತ್ತಾರೆ. ಅವರ ಪೋಸ್ಟ್ ಮಾರ್ಟಮ್ ರೀತಿಯ ವಿಮರ್ಶೆಯನ್ನು ಕೇಳಿದ ಯಾರಿಗಾದರೂ, ‘ತೇಜಸ್ವಿ ಕಷ್ಟ’ ಅನ್ನಿಸಿದರೆ ಆಶ್ಚರ್ಯವೇನಿಲ್ಲ! ಸ್ವತಃ ತೇಜಸ್ವಿಯವರೇ ವಿಮರ್ಶೆ ಹೇಗಿರಬೇಕು. ಈ ಸಂದರ್ಭದ ಕನ್ನಡ ಸಾಹಿತ್ಯದ ಅಗತ್ಯತೆ ಏನು ಎಂಬುದರ ಬಗ್ಗೆ ಹಲವಾರು ಸಂದರ್ಭಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ‘ಅಣ್ಣನ ನೆನಪು’ ಕೃತಿಯ ಮೊದಲ ಅಧ್ಯಾಯದಲ್ಲಿಯೇ, ವಿಶ್ಲೇಷಣಾತ್ಮಕ ದೃಷ್ಟಿಕೋನಕ್ಕಿಂತ ಸಂಶ್ಲೇಷಣಾತ್ಮಕ ದೃಷ್ಟಿಕೋನ ಹೇಗೆ ಭಿನ್ನ ಹಾಗೂ ಅನುಕೂಲ ಎಂಬುದನ್ನು ವಿವರಿಸಿದ್ದಾರೆ. ಶ್ರೀ ಚಂದ್ರಶೇಖರ ನಂಗಲಿಯವರಿಗೆ ಬರೆದಿರುವ ಪತ್ರದಲ್ಲೂ ಸ್ಪಷ್ಟವಾಗಿ, ವಿಶ್ಲೇಣಾತ್ಮಕ ವಿಮರ್ಶೆಗಿಂತ ಸಂಶ್ಲೇಷಣಾತ್ಮಕ ವಿಧಾನವನ್ನು ಅನುಮೋದಿಸಿದ್ದಾರೆ. ಅದಕ್ಕೆ ಉದಾಹರಣೆಯಾಗಿ ದ್ರೌಪದಿಯ ಶ್ರೀಮುಡಿ ಮತ್ತು ತಪೋನಂದನ ಕೃತಿಗಳನ್ನು ಹೆಸರಿಸಿದ್ದಾರೆ. ಸಂಶ್ಲೇಷಣಾತ್ಮಕ ಮಾದರಿ ವಿಮರ್ಶೆಯಿಂದ ಆಗುವ ಪ್ರಯೋಜನಗಳನ್ನು ಕುರಿತು ಬರೆದಿದ್ದಾರೆ. ಇಷ್ಟೆಲ್ಲಾ ಆದರೂ ನಮ್ಮ ನಡುವಿನ ವಿಮರ್ಶಕರು ಹೀಗೇಕೆ? ಇದೊಂದು ನನಗೆ ಬಿಡಿಸಲಾಗದ ಒಗಟಾಗಿದೆ.
ಮದರಾಸು ವಿಶ್ವವಿದ್ಯಾಲಯದ ಸೆಮಿನಾರಿನಲ್ಲಿ ಬಸವರಾಜ ಕಲ್ಗುಡಿಯವರು ಮಾಡಿದ ತೇಜಸ್ವಿಯವರನ್ನು ಕುರಿತ ಭಾಷಣ ಸಂಶ್ಲೇಷಣಾತ್ಮಕ ಮಾದರಿಗೆ ಒಂದು ಒಳ್ಳೆಯ ಉದಾಹರಣೆ. ಪ್ರೇಕಸ್ಷಕರ ಸಂಖ್ಯಯನ್ನು ಹೆಚ್ಚಿಸುವುದಕ್ಕಾಗಿ ಹಿರಿಯರ ಬಲವಂತಕ್ಕೆ ಬಂದು ಕುಳಿತಿದ್ದ ಸುಮಾರು ಮೂವತ್ತು ನಲವತ್ತು ಜನ ಶಾಲಾಮಕ್ಕಳು ಮಂತ್ರಮುಗ್ದರಾಗುವಂತೆ ಕಲ್ಗುಡಿ ಮಾತನಾಡಿದ್ದರು. ಕಾರ್ಯಕ್ರಮ ಮುಗಿದ ಮೇಲೂ ಮಕ್ಕಳು ತೇಜಸ್ವಿಯವರ ಬಗ್ಗೆ ಸಾಕಷ್ಟು ಪ್ರಶ್ನೆ ಕೇಳಿ, ಪರಸ್ಪರ ಚರ್ಚೆ ನಡೆಸಿದ್ದನ್ನು ನಾನು ಕಂಡಿದ್ದೇನೆ.
ಮೊನ್ನೆ ನಡೆದ ಸೆಮಿನಾರು ಆಯೋಜನೆಯ ದೃಷ್ಟಿಯಿಂದ ಬಹಳ ಚೆನ್ನಾಗಿತ್ತು. ಆದರೆ ಕೂದಲು ಸೀಳುವ ವಿಮರ್ಶಕರಿಂದಾಗಿ, ಕಡಿದಾಳು ಶಾಮಣ್ಣ ಅವರು ಸಮಾರೋಪ ಭಾಷಣವನ್ನು ಕೇವಲ ಎರಡೇ ನಿಮಿಷಗಳಲ್ಲಿ ಮುಗಿಸಿದ್ದು, ಸೆಮಿನಾರುಗಳಲ್ಲಿ ವಿಮರ್ಶಕರು ಆಡಿದ ಮಾತುಗಳು ಅವರನ್ನು ಘಾಸಿಗೊಳಿಸದ್ದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು. ಅತ್ಯಂತ ಸ್ಪಷ್ಟವಾಗಿ ‘ಸಾಕು. ಸಾಕು. ಇಲ್ಲಿಯವರೆಗೆ ಏನೋ ನಡೆದು ಹೋಯಿತು. ಇನ್ನು ಮುಂದಾದರು ಈ ರೀತಿ ಯೋಚಿಸುವುದನ್ನು ಬಿಡಿ. ತೇಜಸ್ವಿ ಬಗ್ಗೆ ಸೆಮಿನಾರನ್ನು ನಾವು ಶಿವಮೊಗ್ಗದಲ್ಲಿ ಮಾಡಿ ತೋರಿಸುತ್ತೇವೆ’ ಎಂದು ಮಾತು ಮುಗಿಸಿಯೇ ಬಿಟ್ಟರು! ಸಭಾಂಗಣ ಸ್ತಬ್ಧವಾಗಿಬಿಟ್ಟಿತ್ತು, ಆ ಕ್ಷಣ. ‘ಕೆಳಸ್ತರ ಮೇಲುಸ್ತರ’ ಮೊದಲಾದ ಪಾರಿಭಾಷಿಕ ಪದಗಳನ್ನು ಹಾಕಿ ತೇಜಸ್ವಿಯವರ ಸಾಹಿತ್ಯವನ್ನು ಅಳೆಯುತ್ತೇವೆ ಎಂದು ಹೊರಟಿದ್ದ ವಿಮರ್ಶಕರ ಸಮೇತ ಎಲ್ಲರೂ ಉಸಿರು ಬಿಗಿಹಿಡಿದು ಕುಳಿತಿದ್ದರು! ಜಿ.ಹೆಚ್.ನಾಯಕ ಮತ್ತು ಶಿವಾರೆಡ್ಡಿಯರ ಮಾತುಗಳನ್ನು ಕೇಳಿದ್ದು ಹಾಗೂ ಶ್ರೀಮತಿ ರಾಜೇಶ್ವರಿ ಮತ್ತು ಶಾಮಣ್ಣ ಅವರೊಂದಿಗೆ ಸಮಾರಂಭದ ನಡುವೆ ಮಾತನಾಡಿದ್ದಷ್ಟೆ ಆ ಸೆಮಿನಾರಿನಿಂದ ನನಗಾದ ಲಾಭ!

ಕೊನೆಯ ಮಾತು
ಕಳೆದ ವಾರ ಗೆಳಯ ಡಿ.ಜಿ.ಮಲ್ಲಿಕಾರ್ಜುನ ಅವರು ನನ್ನ ಕೋರಿಕೆಯ ಮೇರೆಗೆ, ತೇಜಸ್ವಿಯವರು ಚಿತ್ರಕಲಾ ಪರಿಷತ್ತಿನಲ್ಲಿ ಭಾಗವಹಿಸಿದ್ದ ಸಂವಾದ ಕಾರ್ಯಕ್ರದ ಡಿ.ವಿ.ಡಿ ಕಳುಹಿಸಿದ್ದರು. ಅದಾಗಿತ್ತು. ಅದನ್ನು ಶನಿವಾರ ಸಂಜೆ ನಾನು ಮತ್ತು ನನ್ನ ಹೆಂಡತಿ ನೋಡುತ್ತಾ ಕುಳಿತಿದ್ದೆವು. ಫೋನ್ ರಿಂಗಾಯಿತು. ನೋಡಿದರೆ ‘ನಿರುತ್ತರ’ದ ನಂಬರ್! ಆ ಕಡೆ ಶ್ರೀಮತಿ ರಾಜೇಶ್ವರಿಯವರು ಲೈನಿನಲ್ಲಿದ್ದರು. ಮೊನ್ನೆ ಸೆಮಿನಾರಿನಲ್ಲಿ ಅವರನ್ನು ಮಾತನಾಡಿಸಿದ್ದೆ. ನಂತರ ಅವರು ನನಗೆ ಏನೋ ಹೇಳಬೇಕೆಂದು ನೋಡಿದರಂತೆ. ನಾನು ಸಿಗಲಿಲ್ಲ. (ಹಾಗೆ ನೋಡಿದರೆ, ಅವರನ್ನು ಮತ್ತೊಮ್ಮೆ ಮಾತನಾಡಿಸಬೇಕೆಂದು ನಾನೂ ಅಂದುಕೊಂಡಿದ್ದೆ. ಆದರೆ ಅವರಿಗೆ ಸುತ್ತಿಕೊಳ್ಳುತ್ತಿದ್ದ ಮಹಿಳಾಮಣಿಗಳಿಂದಾಗಿ ನನಗೆ ಸಾಧ್ಯವಾಗಿರಲಿಲ್ಲ!) ಅದಕ್ಕಾಗಿ ಫೋನ್ ಮಾಡಿದ್ದರು. ಬೆಂಗಳೂರಿನಿಂದ ಹೊರಟು ಮನೆ ತಲುಪಿದ ಒಂದು ಘಂಟೆಯಲ್ಲಿ ನನಗೆ ಫೊನ್ ಮಾಡಿದರಂತೆ! ನನ್ನ ಪುಸ್ತಕ ತೆಗೆದಿಟ್ಟುಕೊಂಡು ಅದರಿಂದ ಫೋನ್ ನಂಬರ್ ಪತ್ತೆ ಹಚ್ಚಿದರಂತೆ! ನಾವು ಅವರ ತೋಟಕ್ಕೆ ಹೋಗಿದ್ದಾಗ, ನಾಯಿಮರಿಗಳಿಗಾಗಿ ನನ್ನ ಮಗಳು ಅತ್ತಿದ್ದು, ಶಿವು ಅನ್ನುವವರು ಕಿತ್ತಲೆ ಕೊಟ್ಟು ಸಮಾಧಾನ ಮಾಡಿದ್ದು, ಈ ವಿಷಯವನ್ನು ಅವರ ಮೆನಯ ದೇವಕಿ ಮತ್ತು ಶಿವು ಹೇಳಿದ್ದು, ನನ್ನ ‘ನನ್ನ ಹೈಸ್ಕೂಲ್ ದಿನಗಳು’ ಪುಸ್ತಕವನ್ನು ಓದಿದ್ದು ಎಲ್ಲವನ್ನೂ ಹೇಳಿದರು. ಮಗಳ ಬಗ್ಗೆ ವಿಚಾರಿಸಿದರು. ಮತ್ತೊಮ್ಮೆ ಬನ್ನಿ ಎಂದರು. ಸಂತೋಷದ ಭರದಲ್ಲಿ ಮಾತು ಕಳೆದುಕೊಂಡಿದ್ದ ನಾನು ಈ ಕಡೆಯಿಂದ, ‘ಮೇಡಂ ಈಗ ನಾವು ತೇಜಸ್ವಿ ಮತ್ತು ನೀವು ಭಾಗವಹಿಸಿದ್ದ ಚಿತ್ರಕಲಾ ಪರಿಷತ್ತಿನಲ್ಲಿ ನಡೆದ ಕಾರ್‍ಯಕ್ರಮದ ಡಿ.ವಿ.ಡಿ. ನೋಡುತ್ತಿದ್ದೆವು. ಆಗಲೇ ನಿಮ್ಮ ಫೋನ್ ಬಂತು’ ಎಂದು ತಿಳಿಸಿದೆ. ಅವರೂ ಒಂದು ಕ್ಷಣ ಆ ನೆನಪಿಗೆ ಜಾರಿ, ಮಾತು ಮುಗಿಸಿದರು. ಸ್ವತಃ ಶ್ರೀಮತಿ ರಾಜೇಶ್ವರಿಯವರೇ ಫೋನ್ ಮಾಡಿ ಮಾತನಾಡಿಸಿದ್ದರಿಂದ ನಾನೂ ಮತ್ತು ನನ್ನ ಹೆಂಡತಿ ರೋಮಾಂಚನಗೊಂಡಿದ್ದಂತೂ ಸತ್ಯ. ನನ್ನ ಹೆಂಡತಿಯ ಪ್ರಕಾರ, ತೇಜಸ್ವಿಯವರ ಕಾರ್ಯಕ್ರಮದ ಸಿ.ಡಿ.ಯನ್ನು ನೋಡುವಾಗ, ಅವರ ಮನೆಯಿಂದಲೇ ಫೋನ್ ಬಂದಿದ್ದು ಒಂದು ಅದ್ಭುತ!ಮಲ್ಲಿಕಾರ್ಜುನ್ ಥ್ಯಾಂಕ್ಸ್ ನಿಮಗೆ!

8 comments:

PARAANJAPE K.N. said...

ಸತ್ಯನಾರಾಯಣ,
ತೇಜಸ್ವಿಯವರ ಬಗ್ಗೆ ನಿಮಗಿರುವ ಪ್ರೀತಿ ಈ ಲೇಖನದಲ್ಲಿ ವ್ಯಕ್ತವಾಗುತ್ತದೆ. ಚೆನ್ನಾಗಿದೆ.

ಬಿಸಿಲ ಹನಿ said...

ಸತ್ಯನಾರಾಯಣವರೆ,
ವಿಚಾರ ಸಂಕಿರಣಗಳ ಮೇಲಿನ ನಿಮ್ಮ ಪೋಸ್ಟಮಾರ್ಟಂ ರಿಪೋರ್ಟ್ ತುಂಬಾ ಚನ್ನಾಗಿದೆ. ನಾನು ಮೊದಲು ವಿಚಾರ ಸಂಕಿರಣಗಳಿಗೆ ಹೋಗುತ್ತಿದ್ದೆನಾದರೂ ಆಮೇಲಾಮೇಲೆ ಅವುಗಳ ನಿಜವಾದ ತಿರುಳು ಗೊತ್ತಾಗಿ ಹೋಗುವದನ್ನು ನಿಲ್ಲಿಸಿದೆ. ಹೋದರೂ ಅಲ್ಲಿ ಮಂಥನವಾಗುವ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಳ್ಳುವದಿಲ್ಲ. ಏಕೆಂದರೆ ಅದರಲ್ಲಿ ಬಹಳಷ್ಟು ಸಾರಿ ಬರಿ ಸುಳ್ಳು, ವ್ಯಯಕ್ತಿಕ ಜಿದ್ದಾಜಿದ್ದಿ, ದ್ವೇಷ, ಉತ್ಪ್ರೇಕ್ಷೆಗಳೇ ಇರುತ್ತವೆ.
ಇನ್ನು ಪತ್ರಿಕೆಗಳ ವಿಷಯಕ್ಕೆ ಬಂದರೆ ಅವು ವಿಷಯವನ್ನು ತಿರುಚಿ ಬರೆಯುವದರಲ್ಲಿ ಒಂದೊನ್ನೊಂದು ಮೀರಿಸುತ್ತವೆ. ಕನಕಪುರ ಸಾಹಿತ್ಯ ಸಮ್ಮೇಳನದಲ್ಲಿ ಕೆಲವು ಪತ್ರಕರ್ತರು ಎಲ್ಲೆಲ್ಲೋ ಓಡಾಡಿಬಂದು ಆಮೇಲೆ "ಈ ಗೋಷ್ಠಿಯಲ್ಲಿ ಏನು ನಡೆಯಿತು? ಯಾರು ಏನು ಹೇಳಿದರು?" ಎಂದು ಅವರ ಮಿತ್ರರಿಂದ ಕೇಳಿ ತಿಳಿದು ಸ್ವತಃ ಏನನ್ನೂ ಯೋಚಿಸದೆ ಅವರು ಹೇಳಿದ್ದನ್ನೇ ಬರೆದದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಹೀಗಾಗಿ ನನಗೆ ಪತ್ರಿಕೆಗಳಂದರೂ ಅಷ್ಟಕ್ಕಷ್ಟೆ. "ಲಂಕೇಶ್ ಪತ್ರಿಕೆ" ಇದಕ್ಕೆ ಹೊರತಾಗಿತ್ತಾದರೂ ಅವರು ಸಹ ಕೊನೆ ಕೊನೆಗೆ ಯಾವುದೂ ವ್ಯಯಕ್ತಿಕ ದ್ವೇಷ, ಈರ್ಶೆಗಳನ್ನಿಟ್ಟುಕೊಂಡು ತೇಜೋವಧೆ ಮಾಡಲಾರಂಭಿಸಿದರು.
ಇದೆಲ್ಲವನ್ನು ನೋಡಿದಾಗ ನನಗೆ ಈ ಸಾಹಿತಿಗಳು, ಪತ್ರಕರ್ತರು ಬರೆದಂತೆ ಬದುಕಲಾರರು ಎನ್ನುವದು ಮನದಟ್ಟಾಗಿದೆ.

shivu.k said...

ಸತ್ಯನಾರಯಣ ಸರ್,

ವಿಚಾರ ಸಂಕೀರ್ಣಗಳ ಎಲ್ಲವೂ ಚೆನ್ನಾಗಿರುವುದಿಲ್ಲವೆಂದು ನೀವೇಳುವುದು ಸರಿಯಿದೆ...ನಾನು ಅನೇಕವುಗಳಲ್ಲಿ ಭಾಗವಹಿಸಿದ್ದೇನೆ....ಆದರೆ ಅಲ್ಲಿ ಮುಖ್ಯ ವಸ್ತುವಿಗಿಂತ ತಮ್ಮ ಬಗ್ಗೆ ಮಾತನಾಡುವುದು...ನಡೆದಿರುತ್ತದೆ...
ಇನ್ನೂ ತೇಜಸ್ವಿಯವರ ಅಭಿಮಾನದಿಂದಾಗಿ ಮತ್ತೊಮ್ಮೆ ಅವರ ಬಗ್ಗೆ ಬರೆದಿದ್ದೀರಿ...ಅವರ ಬಗ್ಗೆ ಎಷ್ಟು ಬರೆದರೂ ಓದಲು ಮನಸ್ಸಿಗೆ ಬೇಸರವಿಲ್ಲ...
ಮಲ್ಲಿಕಾರ್ಜುನ್ [ತೇಜಸ್ವಿಯವರ ಚಿತ್ರಕಲಾ ಪರಿಷತ್ ಸಂವಾದ]ಸಿ.ಡಿ. ನಾನು ನೋಡಿದ್ದೇನೆ...ಸದ್ಯಕ್ಕೆ ಅದೊಂದು ಅತ್ಯುತ್ತಮ ಸಂಗ್ರಹಯೋಗ್ಯವಾದುದು...
ಧನ್ಯವಾದಗಳು..

ಸಾಗರದಾಚೆಯ ಇಂಚರ said...

ನಿಮಗಿರುವ ತೇಜಸ್ವಿ ಪ್ರೀತಿ, ಮೂಕವಿಸ್ಮಿತನನ್ನಾಗಿಸಿತು. ಕವಿಯ ಬಗೆಗಿನ ಪ್ರೀತಿ ಎಂದೂ ಇರಲಿ

Ittigecement said...

ಸತ್ಯನಾರಾಯಣರವರೆ...

ತೇಜಸ್ವಿಯವರ ಬಗೆಗೆ ನಿಮಗೆ ಇರುವ ಪ್ರೀತಿ..
ಅಭಿಮಾನ ಕಂಡು ಸಂತೋಷ ಆಗುತ್ತದೆ...

ಅವರ ಸಾಹಿತ್ಯ (ಕೆಲವನ್ನು) ಓದಿ ಸ್ವಲ್ಪವೇ ಪರಿಚಯರುವ ನಾನು ಹೆಚ್ಚಿಗೆ ಹೇಳುವದು ತಪ್ಪಾಗುತ್ತದೆ..

ವಿಚಾರ ಸಂಕಿರಣಗಳ ಬೂಟಾಟಿಕೆಯನ್ನು..
ಬಿಚ್ಚಿಟ್ಟಿದ್ದೀರಿ...

ತೇಜಸ್ವಿಯವರ ಬಗೆಗೆ ನಿಮಗಿರುವ ಅಭಿಮಾನಕ್ಕೆ...
ನನ್ನದೊಂದು ಸಲಾಮ್...

ಅಂಥಹ ಮೇಧಾವಿಗೆ ಅಪಚಾರವಾಗಬಾರದೆಂಬ
ನಿಮ್ಮ ಆಶಯ ಖುಷಿತರುತ್ತದೆ...

ಮಲ್ಲಿಕಾರ್ಜುನ.ಡಿ.ಜಿ. said...

ಥ್ಯಾಂಕ್ಸ್ ಎಲ್ಲ ಯಾಕೆ ಸರ್. ಈ ಮುಂಚೆಯೇ ನಿಮಗದನ್ನು ಕಳಿಸಬೇಕಿತ್ತು. ನನ್ನ Writer ತೊಂದರೆಯಿಂದಾಗಿ ಬೇರೆಯವರ ಕೈಲಿ write ಮಾಡಿಸಲು ತಡವಾಯಿತಷ್ಟೆ. ನಿಜವಾಗಿಯೂ ತೇಜಸ್ವಿಯವರನ್ನು ಸೆಮಿ'ನಾರು' ಗಳಲ್ಲಿ ನೋಡುವುದಕ್ಕಿಂತ ಈ DVD ನೋಡುವುದು ಒಳ್ಳೆಯದು. ವಿಮರ್ಶಕರ ಭಾಷೆ ಅರ್ಥವಾಗುವುದಿಲ್ಲ. ಅಥವಾ ನನ್ನಂಥವರಿಗೆ ಅರ್ಥವಾಗುವುದಿಲ್ಲ ಅನ್ನಿಸುತ್ತೆ!

Naveen ಹಳ್ಳಿ ಹುಡುಗ said...

Sir.. Nimma profile thumba ishta aithu...

Naveen ಹಳ್ಳಿ ಹುಡುಗ said...

ಸತ್ಯನಾರಾಯಣ ಸರ್.. ನಿಮ್ಮ ಪ್ರೊಫೈಲ್ ತುಂಬ ಇಂಟರೆಸ್ಟಿಂಗ್ ಆಗಿದೆ...