Thursday, April 23, 2009

ಅನಾಮಿಕನ ನೆನವರಿಕೆಯಲ್ಲಿ.....

[ಮೊದಲ ಮಾತು: ನೆನ್ನೆ ಕಂಪ್ಯೂಟರಿನಿಲ್ಲಿದ್ದ ಅನುಪಯುಕ್ತ ಫೈಲುಗಳನ್ನು ಹುಡುಕಿ ಡಿಲೀಟ್ ಮಾಡುತ್ತಿದ್ದೆ. ಆಗ ಈ ಕಥೆ ಕಣ್ಣಿಗೆ ಬಿತ್ತು! ಆಶ್ಚರ್ಯವೆಂದರೆ ಅದನ್ನು ಯಾವಾಗ ಬರೆದಿದ್ದೆ ಎಂಬುದೇ ನನಗೆ ಮರೆತು ಹೋಗಿತ್ತು! ಈ ಕಥೆ ನನ್ನದೇ ಅಥವಾ ಬೇರೆ ಯಾರದ್ದೋ ಎಂಬ ಅನುಮಾನವೂ ಬಂತು. ಆದರೆ ಕಥೆಯ ಕೊನೆಯಲ್ಲಿ (ನನ್ನ ಅಭ್ಯಾಸದಂತೆ) ಟೈಪ್ ಮಾಡಿದ್ದ ನನ್ನ ಹೆಸರು, ಫೋನ್ ನಂಬರ್ ಮತ್ತು ಈ-ಮೇಲ್ ವಿಳಾಸ ಎಲ್ಲವೂ ಇತ್ತು! ಕೊನೆಗೆ ಆ ಫೈಲ್ ಕ್ರಿಯೇಟ್ ಆದ ದಿನಾಂಕವನ್ನು ಪರಿಶೀಲಿಸಿದೆ. ನನ್ನದೇ ಕಂಪ್ಯೂಟರಿನಲ್ಲಿ ಸುಮಾರು ಒಂಬತ್ತು ತಿಂಗಳ ಹಿಂದೆ 28.06.2008ರಲ್ಲಿ ಕ್ರಿಯೇಟ್ ಆಗಿತ್ತು. ಆಗ ನನಗೆ ನೆನಪಿಗೆ ಬಂತು. ಜುಲೈ ಹನ್ನೊಂದಕ್ಕೆ ನನ್ನ ಪಿಹೆಚ್.ಡಿ. ವೈವ ನಡೆದಿತ್ತು. ಕೇವಲ ಒಂದೆರಡು ವಾರದ ಮುಂಚೆ ವೈವಾದ ದಿನಾಂಕ ನನಗೆ ಗೊತ್ತಾಗಿತ್ತು. ಆ ಗಡಿಬಿಡಿಯಲ್ಲಿ ನಾನೇ ಸ್ವತಃ ಟೈಪಿಸಿದ ಕಥೆಯನ್ನು ನಾನು ಮರೆತೇಬಿಟ್ಟಿದ್ದೆ! ಎಂದು. ಅದನ್ನು ಟೈಪಿಸಿದ ಮೇಲೆ ಓದಿಯೇ ಇಲ್ಲ ಎಂದು ಅದರಲ್ಲಿದ್ದ ಸಾಕಷ್ಟು ಕಾಗುಣಿತದ ತಪ್ಪುಗಳು ಎತ್ತಿ ತೋರಿಸುತ್ತಿದ್ದವು. ಆ ಅಕ್ಷರದ ತಪ್ಪುಗಳನ್ನಷ್ಟೇ ತಿದ್ದಿ, ಅದು ಹೇಗಿತ್ತೋ ಹಾಗೇ ನಿಮ್ಮ ಮುಂದೆ ಇಡುತ್ತಿದ್ದೇನೆ. ಓದಿ. ಇಷ್ಟವಾದರೆ ಸಂತೋಷ. ಇಲ್ಲದಿದ್ದರೆ ಮರೆತುಬಿಡಿ]

ಮುಂಬಾಗಿಲಿಗೆ ರಂಗೋಲಿಯಿಕ್ಕುತ್ತಿದ್ದ ರಜನಿಯ ಮೇಲೆ ಬಾಲರವಿಯ ಕಿರಣಗಳು ಲಾಸ್ಯವಾಡುತ್ತಿದ್ದವು. ಇಂದು ಅವಳ ಮನಸ್ಸು ಪ್ರಪುಲ್ಲವಾಗಿತ್ತು. ಎಂದೂ ನೆನಪಿಗೆ ಬರದ ಆ ‘ಅನಾಮಿಕ’ ಇಂದು ಬೆಳಿಗ್ಗೆ ಹಾಸಿಗೆಯಿಂದೇಳುವಾಗಲೇ ನೆನಪಾಗಿದ್ದ. ಅದರ ಬಗ್ಗೆಯೇ ಯೋಚಿಸುತ್ತಾ ದೈನಂದಿನ ಕೆಲಸದಲ್ಲಿ ತೊಡಗಿದಳು. ಆದರೆ ರಂಗೋಲಿಯಿಡಲು ಬರುವಷ್ಟರಲ್ಲಿ ‘ಇಂದೇಕೆ ಆತ ಇಷ್ಟೊಂದು ನೆನಪಾಗುತ್ತಿದ್ದಾನೆ?’ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿತ್ತು. ಆತ ಯಾರೋ, ಏನೋ. ಸುಮಾರು ಆರು ತಿಂಗಳಿನಿಂದ ನಾನು ಅವನನ್ನು ಗಮನಿಸುತ್ತಿರಬಹುದು. ವಾರದಲ್ಲಿ ಐದು ದಿನ, ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ ಒಂಬತ್ತೂಕಾಲರ ಸುಮಾರಿಗೆ ನಾನು ನಡೆಯುವ ದಾರಿಯಲ್ಲಿ ಆತ ಬೈಕಿನಲ್ಲಿ ಸಾಗಿ ಹೋಗುತ್ತಾನೆ ಅಷ್ಟೆ. ಅದೇ ವೇಳೆಗೆ, ಒಂದೆರಡು ನಿಮಿಷಗಳ ವ್ಯತ್ಯಾಸದಲ್ಲಿ ನಾನೂ ಕತ್ರಿಗುಪ್ಪೆಯಿಂದ ಹೊರಟು ವಾಟರ್ ಟ್ಯಾಂಕ್ ಸರ್ಕಲ್ ಬಳಿಯಿರುವ ಆಫೀಸಿಗೆ ಹೋಗುತ್ತಿರುತ್ತೇನೆ. ಸುಮಾರು ಅರ್ಧ ಕಿಲೋಮೀಟರ್ ನೇರವಾಗಿ ಇರುವ ರಸ್ತೆಯ ಯಾವುದಾದರೊಂದು ಜಾಗದಲ್ಲಿ ಆತ ಎದುರಿನಿಂದ ಬೈಕಿನಲ್ಲಿ ಬರುತ್ತಾನೆ. ಕಂಡಷ್ಟೇ ವೇಗವಾಗಿ ಮಾಯವಾಗುತ್ತಾನೆ. ಅಷ್ಟೆ, ಒಂದು ನಗುವಿಲ್ಲ. ನೋಟಗಳ ವಿನಿಮಯ ಇದ್ದಿರಬಹುದೇನೋ ನೆನಪಿಗೆ ಬರುತ್ತಿಲ್ಲ. ಅದೇಕೆ ಇಂದು ನೆನಪಾದ? ಎಂದುಕೊಂಡಳು. ಬಹುಶಃ ಆತನಿಗೂ ನನ್ನಂತೆಯೇ ಆಗಿರಬಹುದು ಅನ್ನಿಸಿತು. ತಕ್ಷಣ ಆ ಬಾವನೆಯೇ ಅವಳಿಗೆ ಮತ್ತೆ ಮತ್ತೆ ಇಷ್ಟವಾಗತೊಡಗಿತು. ಅದು ಅವಳ ಗಮನಕ್ಕೂ ಬಂತು.
ಒಳಗೆ ಬರುವಷ್ಟರಲ್ಲಿ ಅತ್ತಿಗೆ ಮಕ್ಕಳಿಗೆ ಹಲ್ಲುಜ್ಜಿಸುತ್ತಿದ್ದರು. ಮೂವತ್ತನ್ನು ದಾಟದ ಅತ್ತಿಗೆಗೆ ಎರಡು ಮಕ್ಕಳ ತಾಯಿ. ಮೂವತ್ತು ದಾಟುತ್ತಿರುವ ನಾನಿನ್ನೂ ಕನ್ಯೆ! ಆದರೆ ಅತ್ತಿಗೆ ವಿಧವೆ. ನಮ್ಮಿಬ್ಬರಲ್ಲಿ ಯಾರು ಹೆಚ್ಚು ಸುಖಿ? ಎಂಬ ಪ್ರಶ್ನೆ ಮನಸ್ಸಿಗೆ ಬಂತು. ದಿನನಿತ್ಯದ ಕೆಲಸಗಳು ಯಾಂತ್ರಿಕವಾಗಿ ಸಾಗುತ್ತಿದ್ದವು. ಅತ್ತಿಗೆ ಏನೇನೋ ಮಾತನಾಡುತ್ತಿದ್ದರು. ‘ನೆನ್ನೆ ಬಂದ ಬಂಡಲ್ಲಿನಲ್ಲಿ ಹೆಚ್ಚು ಹರಿದು ಹೋಗಿದ್ದ ಪೇಪರ್‌ಗಳು, ತೂಕ ಹೆಚ್ಚು ಕಮ್ಮಿ ಮಾಡುವ ಅಂಗಡಿಯ ಶೆಟ್ಟಿ, ಮಕ್ಕಳು ರಬ್ಬರ್ ಹರಿದು ಎರಡು ಭಾಗ ಮಾಡಿರುವುದು’ ಹೀಗೇ ಏನೇನೋ. ಆದರೆ ರಜನಿ ಅನಾಮಿಕನ ನೆನಪಲ್ಲಿ ಮುಳುಗಿ ಹೋದಳು. ಆ ದಾರಿಯಲ್ಲಿ ತಾನು ನಡೆದುಕೊಂಡು ಹೋಗುವಷ್ಟರಲ್ಲಿ ಕನಿಷ್ಟ ನೂರಾದರೂ ಬೈಕ್‌ಗಳು ಸಾಗಿ ಹೋಗುತ್ತವೆ. ಅವರಂತೆಯೇ ಈತನೂ ಒಬ್ಬ. ಆದರೂ ಆತನ ನೆನಪೇಕೆ? ಗೆರೆಯೆಳೆದಂತೆ ಬೈತಲೆ ತೆಗೆದು ಬಾಚಿದ ತಲೆ, ದುಂಡಾದ ಮುಖ, ಷರ್ಟ್ ಇನ್ ಮಾಡಿದ ಅರ್ಧತೋಳಿನ ಅಂಗಿ, ಬೆನ್ನಿಗೇರಿದ್ದ ಬ್ಯಾಗ್, ಕನ್ನಡಿಗೆ ನೇತುಹಾಕಿದ ಹೆಲ್ಮೆಟ್ ಎಲ್ಲವೂ ಕಣ್ಣಿಗೆ ಕಟ್ಟುವಂತೆ ನೆನಪಾಗುತ್ತಿವೆ.
* * *
ದಿನಗಳು ಕಳೆಯುತ್ತಿದ್ದವು. ಅಣ್ಣ ಬದುಕಿದ್ದರೆ ನನಗೂ ಇಷ್ಟೊತ್ತಿಗೆ ಮದುವೆಯಾಗುತ್ತಿತ್ತು. ಬಹುಶಃ ಒಂದೆರಡು ಮಕ್ಕಳೂ ಆಗಿರುತ್ತಿದ್ದವು. ಆದರೆ ದುರದೃಷ್ಟ ಬೆಂಬಿಡದಂತೆ ಕಾಡುತ್ತಿದೆ. ಹದಿನೈದು ವರ್ಷದ ಹಿಂದೆ, ಜಾತಿಯ ಜಗಳಕ್ಕೆ ಸುಟ್ಟು ಹೋಗಿದ್ದ ಮನೆ, ಸತ್ತು ಹೋಗಿದ್ದ ಅಪ್ಪ, ದೊಡ್ಡಪ್ಪ, ಅವ್ವಂದಿರು ತಮ್ಮಂದಿರು ಎಲ್ಲಾ ನೆನಪಾದರು. ಬರೀ ಎಡಗೈಗಷ್ಟೇ ಸುಟ್ಟಗಾಯ ಮಾಡಿಕೊಂಡು ಬದುಕುಳಿದ ನಾನು ಎಲ್ಲರ ಆಶ್ಚರ್ಯಕ್ಕೆ ಕಾರಣಳಾಗಿದ್ದೆ. ಆದರೆ ಊರಿನಿಂದ ಕದ್ದು ಓಡಿಹೋಗಿದ್ದ ದೊಡ್ಡಪ್ಪನ ಮಗ, ಈ ಅಣ್ಣ ಪತ್ರಿಕೆಯಲ್ಲಿ ವಿಷಯ ತಿಳಿದು ಊರಿಗೆ ಬಂದಿದ್ದ. ಮಾಡಬೇಕಾದ ಕಾರ್ಯ ಮಾಡಿ, ಬದುಕುಳಿದಿದ್ದ ನನ್ನನ್ನು ಕರೆದುಕೊಂಡು ಬೆಂಗಳೂರಿಗೆ ಬಂದಿದ್ದ. ಆಶ್ಚರ್ಯವೆಂದರೆ ಅಣ್ಣ ನಮಗಾರಿಗೂ ತಿಳಿಯದಂತೆ, ಇನ್ನೂ ಹದಿನೆಂಟು ತುಂಬಿರದ ಸರೋಜಳನ್ನು ಮದುವೆಯಾಗಿದ್ದ. ನಾನು ಮನೆಯೊಳಗೆ ಕಾಲಿಡುತ್ತಲೇ ಆಕೆ ಪ್ರೀತಿಯಿಂದ ಸ್ವಾಗತಿಸಿದಳು. ಒಳ್ಳೆಯ ಗೆಳತಿಯೂ ಆದಳು.
ಆಟೋ ಓಡಿಸುತ್ತಿದ್ದ ಅಣ್ಣ ನನ್ನ ವಿದ್ಯಾಭ್ಯಾಸಕ್ಕೂ ನೆರವಾದ. ನಾನು ಡಿಗ್ರಿ ಮುಗಿಸುವಷ್ಟರಲ್ಲಿ ಅವರಿಗೆ ಎರಡು ಮಕ್ಕಳಾದವು. ದುರದೃಷ್ಟವೆಂದರೆ, ನನ್ನ ಮದುವೆಯ ಮಾತನಾಡುತ್ತಿದ್ದ ಅಣ್ಣ ಅಪಘಾತವೊಂದರಲ್ಲಿ ದುರ್ಮರಣವನ್ನಪ್ಪಿದ. ನನಗೆ ಪ್ರಕಾಶನ ಸಂಸ್ಥೆಯೊಂದರಲ್ಲಿ ಕೆಲಸ ಸಿಕ್ಕಿ ಆರು ತಿಂಗಳೂ ಆಗಿರಲಿಲ್ಲ. ನಾನೂ, ಅತ್ತಿಗೆ ಮಕ್ಕಳು ಬೀದಿಗೆ ಬೀಳಬೇಕಾದ ಸಂದರ್ಭ. ಆದರೆ ಅಣ್ಣ ಸತ್ತೂ ನಮ್ಮನ್ನು ಕಾಪಾಡಿದ್ದ. ಆತನ ಇನ್ಷ್ಯೂರೆನ್ಸ್ ಮತ್ತು ಆತನ ಆಟೋಗೆ ಡಿಕ್ಕಿ ಹೊಡೆದಿದ್ದ ಲಾರಿಯವರ ಕಡೆಯಿಂದ ಬಂದ ಪರಿಹಾರ ಎಲ್ಲಾ ಸೇರಿ ಮನೆಯೊಂದನ್ನು ಭೋಗ್ಯಕ್ಕೆ ಹಾಕಿಸಿಕೊಳ್ಳುವಷ್ಟರ ಮಟ್ಟಿಗೆ ಸಹಾಯವಾಯಿತು. ನಂತರ ಅತ್ತಿಗೆ ನಾನೂ ಕುಳಿತು ಮುಂದಿನ ಜೀವನದ ಬಗ್ಗೆ, ಮಕ್ಕಳ ಬಗ್ಗೆ ಮಾತನಾಡಿದೆವು. ಅತ್ತಿಗೆಯೂ ಪೇಪರ್‌ನಲ್ಲಿ ಕವರ್ ಮಾಡುವುದನ್ನು ಕಲಿತು, ಮನೆಯಲ್ಲಿಯೇ ಒಂದಿಷ್ಟು ಸಂಪಾದನೆಗೆ ದಾರಿ ಮಾಡಿಕೊಂಡರು. ನನಗೆ ಬರುವ ಸಂಬಳದಲ್ಲಿ ಮನೆ ನಡೆಯುತ್ತಿತ್ತು. ಆಗಾಗ ಅತ್ತಿಗೆ ನನ್ನ ಮದುವೆಯ ಬಗ್ಗೆ ಮಾತು ತೆಗೆದರೂ ನಾನು ಬಾಯಿ ಮುಚ್ಚಿಸಿಬಿಡುತ್ತಿದ್ದೆ.
ಆ ಬೈಕ್ ಹುಡುಗನ ನೆವದಿಂದಾಗಿ ಇಂದು ಹಿಂದಿನದೆಲ್ಲಾ ನೆನಪಿಗೆ ಬಂತು. ಯಾವುದಾದರೂ ಒಂದುದಿನ ಆತನನ್ನು ಮಾತನಾಡಿಸಬೇಕು ಎನ್ನಿಸಿತು. ಅವನಿಗೂ ಹಾಗೇ ಅನ್ನಿಸಿರಬಹುದೆ? ಎಂಬ ಪ್ರಶ್ನೆಯೂ ಎದುರಾಯಿತು. ಹೆಣ್ಣಾದ ನಾನೇ ಮೇಲೆ ಬಿದ್ದು ಮಾತನಾಡಿಸುವುದು ಸರಿಯೇ? ಎಂಬ ಗೊಂದಲವೂ ಎದುರಾಯಿತು. ಕೇವಲ ನಗುವಿನ ವಿನಿಮಯವಾದರೂ ನಡೆಯಬಾರದೇ ಎನ್ನಿಸಿತು.
* * *
ಆತ ಯಾರೋ? ಏನೋ? ಹೀಗೆ ಪ್ರತಿನಿತ್ಯ ಠಾಕುಠೀಕಾಗಿ ಹೋಗುವದನ್ನು ನೋಡಿದರೆ, ಯಾವುದೋ ಒಳ್ಳೆಯ ಕೆಲಸದಲ್ಲಿಯೇ ಇರಬೇಕು. ಶನಿವಾರ ಭಾನುವಾರ ಬರದೇ ಇರುವುದನ್ನು ನೋಡಿದರೆ, ಸೆಂಟ್ರಲ್ ಗೌವರ್‍ನಮೆಂಟೋ, ಎಂ.ನ್.ಸಿ.ಯಲ್ಲೋ ಕೆಲಸಕ್ಕಿರಬೇಕು. ಮದುವೆಯಾಗಿರಬೇಕು. ಅವನ ಸಂಸಾರ ಸುಖವಾಗಿ ಇರಬೇಕು. ಇನ್ನೂ ಏನೇನೋ ಯೋಚನೆಗಳು ತಲೆ ತುಂಬಿಕೊಳ್ಳತೊಡಗಿದವು. ಬಹುಶಃ ಮದುವೆಯಾಗಿರಲಾರದು. ನೋಡಿದರೆ ಇಪ್ಪತ್ತೇಳು ಇಪ್ಪತ್ತೆಂಟರ ಹಾಗೆ ಕಾಣುತ್ತಾನೆ. ಆತನಿಗಿನ್ನೂ ಮದುವೆಯಾಗಿರಲಾರದು ಎಂಬ ಯೋಚನೆ ಮನಸ್ಸಿಗೆ ಇಷ್ಟವಾಗತೊಡಗಿ, ಆಶ್ಚರ್ಯವೂ ಆಯಿತು. ಅಯ್ಯೋ ಮದುವೆಯಾಗದಿದ್ದರೆ ತಾನೆ ಏನು ಪ್ರಯೋಜನ? ಅವನೇನು ನನ್ನನ್ನು ಮದುವೆಯಾಗುತ್ತಾನೆಯೇ? ಎಡಗೈಯಲ್ಲಿ ಸುಟ್ಟಗಾಯದ ದೊಡ್ಡ ಗುರುತು. ನಾನೋ ನೋಡಲು ಸ್ವಲ್ಪ ಕಪ್ಪು ಬೇರೆ. ಅದಕ್ಕೆ ಒಪ್ಪವಿಟ್ಟಂತೆ ಹೆಸರು ರಜನಿ. ಅಪ್ಪ ರಜನಿಕಾಂತನ ಅಭಿಮಾನಿ. ಗಂಡು ಮಗುವಾದರೆ ರಜನಿಕಾಂತನ ಹೆಸರನ್ನೇ ಇಡುತ್ತೇನೆ ಅಂದಿದ್ದನಂತೆ. ಆದರೆ ಹುಟ್ಟಿದ್ದು ನಾನು, ಹೆಣ್ಣು. ರಜನಿಯೆಂದೇ ಹೆಸರಿಟ್ಟ. ಕಾಲೇಜಿನ ಕೊನೆಯ ವರ್ಷದಲ್ಲಿ ಎಕಾನಾಮಿಕ್ಸ್ ಲೆಕ್ಚರರ್, ನಿನಗೆ ರಜನಿ ಎನ್ನುವ ಹೆಸರು ಚೆನ್ನಾಗಿ ಒಪ್ಪುತ್ತದೆ ಎಂದಿದ್ದರು. ಏಕೆ? ಎಂದಿದ್ದಕ್ಕೆ, ಕಪ್ಪಗಿರುವವರಿಗೆ ಆ ಹೆಸರು ಚೆನ್ನಾಗಿರುತ್ತದೆ ಎಂದು ಬೆಳ್ಳಗಿನ ಕೈಗಳನ್ನು ತಿರುಗಿಸುತ್ತಾ ಹೇಳಿದ್ದರು.
* * *
ಈ ಬೈಕ್ ಸುಂದರಾಂಗನಿಂದ ನನಗೆ ಬಿಡುಗಡೆಯೇ ಇಲ್ಲ. ಹಗಲು ರಾತ್ರಿ ಎನ್ನದೆ ನೆನಪಾಗುತ್ತಾನೆ. ಮಾತನಾಡಿಸಿಯೇ ಬಿಡುತ್ತೇನೆ ಎಂದು, ಪ್ರತಿನಿತ್ಯ ಎಡಬದಿಯಲ್ಲಿ ನಡೆಯುತ್ತಿದ್ದವಳು ಮೊನ್ನೆ ಬಲಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ನನ್ನ ಅವನ ನಡುವಿನ ಅಂತರ ಆರೇಳು ಮೀಟರಿನಿಂದ ಒಂದೆರಡು ಮೀಟರ್‌ಗೆ ಇಳಿದಿತ್ತು. ಆದರೆ ಆತನ ಕಣ್ಣುಗಳನ್ನು ನಾನು ನೋಡುವುದರಲ್ಲಿ ಮುಂದೆ ಸಾಗಿಬಿಟ್ಟ. ಆತನಿಗೆ ಒಮ್ಮೆಯಾದರೂ, ಈ ಹುಡುಗಿಯನ್ನು ದಿನವೂ ನೋಡುತ್ತಿದ್ದೇನಲ್ಲ ಅನ್ನಿಸಿರುವುದಿಲ್ಲವೆ? ಅನ್ನಿಸಿರದೆ ಏನು? ಈಗಿನ ಹುಡುಗರು ಸ್ವಲ್ಪ ಹಮ್ಮು ಬಿಮ್ಮು ಅಷ್ಟೆ. ಇನ್ನು ಪ್ರತಿ ದಿನ ಬಲಬದಿಯಲ್ಲೇ ನಡೆದುಕೊಂಡು ಹೋಗಿ ನೋಡುತ್ತೇನೆ. ಒಮ್ಮೆ ನಕ್ಕು, ಪರಿಚಯಕ್ಕೆ ಇಳಿದು ಬಿಟ್ಟರೆ ಸಾಕು. ನೀನು ನನ್ನನ್ನು ರಾತ್ರಿಯಿಡೀ ಕಾಡುತ್ತೀಯ ಏಕೆ? ಎಂದು ಕೇಳುತ್ತೇನೆ. ಈ ಅನಿಸಿಕೆಗೆ ಅವಳಿಗೇ ನಗುಬಂತು. ನಾನಾಗೇ ಮೇಲೆಬಿದ್ದು ಮದುವೆ ಆಗು ಎಂದರೂ ಈ ಕರಿಮೂತಿಯನ್ನು, ಆತ ಒಪ್ಪುತ್ತಾನೆಯೇ? ಸುಟ್ಟಗಾಯದ ಕೈ ನೋಡಿಯೇ ಓಡಿಹೋಗುತ್ತಾನೇನೋ? ಆದರೂ ಪ್ರೀತಿಗೆ ಕಣ್ಣಿಲ್ಲ ಎನ್ನುತ್ತಾರಲ್ಲ, ಅದು ನನ್ನ ವಿಷಯದಲ್ಲಿ ಏಕೆ ನಿಜವಾಗಬಾರದು?
* * *
ಇಂದು ಆತನನ್ನು ಮಾತನಾಡಿಸಿಯೇ ತೀರುತ್ತೇನೆ ಎಂದು ರಸ್ತೆಯುದ್ದಕ್ಕೂ ಕಣ್ಣು ಹಾಯಿಸಿ ನಡೆಯುತ್ತಿದ್ದ ರಜನಿಗೆ, ಒಂದು ಕ್ಷಣ ಆತ ಬರದಿದ್ದರೆ ಎನ್ನಿಸಿ ಭಯವಾಯಿತು. ನಾನು ಆತನನ್ನು ಮಾತನಾಡಿಸದಿದ್ದರೆ ಅಷ್ಟೆ ಹೋಯಿತು. ಆತ ಬಂದರೆ ಸಾಕು. ನಾನೂ ನಿನ್ನನ್ನು ನೋಡುತ್ತಿದ್ದೆ ಎನ್ನುವಂತೆ ಒಂದು ನಗು ನಕ್ಕರೆ ಸಾಕು. ದಾರಿಯಲ್ಲಿ ಬೈಕ್ ಏನೋ ಬಂತು. ಆದರೆ ಒಂದೇ ಕೈಯಲ್ಲಿ ಬೈಕ್ ಓಡಿಸುತ್ತಾ, ಇನ್ನೊಂದು ಕೈಯನ್ನು ಕಿವಿಯ ಬಳಿ ಹಿಡಿದುಕೊಂಡು ಬರುತ್ತಿದ್ದ. ವೇಗ ತುಂಬಾ ಕಡಿಮೆಯಾಗಿತ್ತು. ಬಹುಶಃ ಮೊಬೈಲ್‌ನಲ್ಲಿ ಮಾತನಾಡುತ್ತಾ ಬರುತ್ತಿರಬೇಕು. ನನ್ನ ಬಳಿಗೆ ಬರುವಷ್ಟರಲ್ಲಿ ಅದು ಕೊನೆಗೊಂಡರೆ ಖಂಡಿತ ಇಂದು ನಮ್ಮಿಬ್ಬರ ಪರಿಚಯ ನಿಶ್ಚಿತ ಎಂದುಕೊಂಡು ಕಣ್ಣು ಕೀಲಿಸಿ, ನಡಿಗೆ ನಿಧಾನವಾಗಿಸಿದಳು. ಬೈಕ್ ಕೂಡಾ ನಿಧಾನವಾಗಿಯೇ ಬಂತು. ಇನ್ನೇನು ನನ್ನ ಮುಂದೆ ನಿಲ್ಲುತ್ತದೆ ಎಂದುಕೊಳ್ಳುವಷ್ಟರಲ್ಲಿ ಬೈಕ್ ಮುಂದೆ ಹೊರಟೇ ಹೋಯಿತು. ಆದರೆ ಆತ ಪೋನಿನಲ್ಲಿ ಹೇಳುತ್ತಿದ್ದ ‘ಸ್ಸಾರಿ, ನನಗೆ ಒಪ್ಪಿಗೆಯಾಗಲಿಲ್ಲ’ ಎನ್ನುವ ಮಾತು ಕೇಳಿಸಿತು. ದ್ವನಿಯೇನೋ ಮಧುರವಾಗಿತ್ತು. ಆದರೆ ಆತನಿಗೆ ಯಾವುದು ಒಪ್ಪಿಗೆಯಾಗಲಿಲ್ಲ. ಅದಕ್ಕೆ ಸ್ಸಾರಿ ಏಕೆ? ಎನ್ನುವ ಪ್ರಶ್ನೆಗಳೆದ್ದವು. ಇಂದು ಅವನ ದ್ವನಿಯನ್ನಾದರೂ ಕೇಳಿದೆ ಎಂದು ಸಂಭ್ರಮಿಸುವ ಮುನ್ನವೇ ಈ ಪ್ರಶ್ನೆಗಳೆದ್ದುದ್ದು ಕಸಿವಿಸಿಯಾಯಿತು.
ಈ ಸಂದರ್ಭದಲ್ಲಿ ಅಣ್ಣನಿದ್ದಿದ್ದರೆ ಅವನ ಬಳಿ ತನ್ನ ಆಸೆ, ಆತಂಕ ಎಲ್ಲವನ್ನು ಹೇಳಿಕೊಳ್ಳಬಹುದಾಗಿತ್ತು ಅನ್ನಿಸಿತು. ಅತ್ತಿಗೆಗೆ ಹೇಳಿದರೆ ಏನೆಂದುಕೊಳ್ಳುತ್ತಾರೋ? ಬೈಕ್ ಚೆಲುವನಿಗೆ ಒಪ್ಪಿಗೆಯಾಗದ್ದು ಏನು? ಮನೆಯಲ್ಲಿ ಆತನಿಗೆ ಹುಡುಗಿ ನೋಡುತ್ತಿರಬೇಕು. ಅದು ತನಗೆ ಇಷ್ಟವಾಗಲಿಲ್ಲ ಅಂದನೇನೋ. ಅಯ್ಯೋ, ಆತನಿಗೆ ಮದುವೆಯಾದರೆ ಈ ದಾರಿಯಲ್ಲಿ ಇನ್ನು ಬರುವುದಿಲ್ಲ. ಅವನಿಗೆ ಮದುವೆಯಾಗದಿರಲಿ, ಮದುವೆ ಗೊತ್ತಾಗದಿರಲಿ, ನಾನು ಅವನನ್ನು ಮಾತನಾಡಿಸಿ, ಪ್ರೀತಿಸಿ ಮದುವೆಯಾಗುವವರೆಗೂ... ಎಂದು ಏನೇನೋ ಹಲುಬಿಕೊಂಡಳು. ಛೇ, ನನ್ನ ಮನಸ್ಸು ಇಷ್ಟೊಂದು ದುರ್ಬಲವೇ? ನಾಳೆಯಿಂದ ಅವನ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿಯೇ ತೀರುತ್ತೇನೆ ಎಂದು ಶಪಥ ಮಾಡಿಕೊಂಡಳು. ತನ್ನ ಅಣ್ಣ, ಅಪ್ಪ ಅಮ್ಮ ಎಲ್ಲರ ಮೇಲೂ ಆಣೆ ಇಟ್ಟುಕೊಂಡಳು. ಸ್ಕೂಲಿನಲ್ಲಿ ಯಾವಾಗಲೋ ಕಲಿತಿದ್ದ, ‘ಮಸುಕಿದ ಮಬ್ಬಿನಲಿ ಕೈಹಿಡಿದು ನಡೆಸನ್ನೆನು’ ಹಾಡನ್ನು ಹೇಳಿಕೊಳ್ಳತೊಡಗಿದಳು.
ಮಾರನೇ ದಿನ ಹಠ ಹಿಡಿದವಳಂತೆ ಹಾಡನ್ನು ಹೇಳಿಕೊಳ್ಳುತ್ತಲೇ, ದಾರಿಯಲ್ಲಿ ಬರುತ್ತಿದ್ದಳು. ಎಷ್ಟೊತ್ತಾದರೂ ಬೈಕ್ ಬರಲೇ ಇಲ್ಲ. ವಾಚ್ ನೋಡಿಕೊಂಡಳು. ದಿನ ಬಿಡುವ ಹೊತ್ತಿಗೆ ಮನೆಯನ್ನು ಬಿಟ್ಟಿದ್ದಳು. ಆದರೂ ಆತ ಬರಲಿಲ್ಲ. ಹೇಳಿಕೊಳ್ಳುತ್ತಿದ್ದ ಹಾಡು ನಿಂತು ಹೋಗಿತ್ತು. ಇಂದು ಆತನೇಕೆ ಬರಲಿಲ್ಲ? ಪ್ರಶ್ನೆ ಪಿಶಾಚಿಯಂತೆ ಪ್ರಥ್ಯಕ್ಷವಾಗಿತ್ತು. ತನ್ನನ್ನು ಯಾರೂ ಗಮನಿಸುತ್ತಿಲ್ಲವೆಂದು ಅರಿತು, ಸ್ವಲ್ಪ ದೂರ ಹಿಂದೆ ಬಂದು ಮತ್ತೆ ನಿಧಾನವಾಗಿ ನಡೆದಳು. ಆದರೂ ಬೈಕ್ ಬರಲಿಲ್ಲ. ನಿರಾಶಳಾಗಿ ಅಫಿಸಿಗೆ ಹೋದಳು.
* * *
ಮೊದಲ ಬಾರಿಗೆ- ಆತನ ನೆನಪಿನಲ್ಲಿ ನಿಂತ ದಿನದಿಂದ ಇದೇ ಮೊದಲ ಬಾರಿಗೆ ಆತ ಬಂದಿರಲಿಲ್ಲ. ಆತನ ಬಗ್ಗೆಯೇ ಯೋಚಿಸುತ್ತಿದ್ದರೂ ಮನೆಯಲ್ಲಿ, ಆಫೀಸಿನಲ್ಲಿ ಅದನ್ನು ಅವಳು ತೋರಿಸಿಕೊಂಡಿರಲಿಲ್ಲ. ಆದರೆ ಇಂದು ಮಾತ್ರ ಅವಳಿಗೆ ತಡೆಯಲಾಗಲಿಲ್ಲ. ಕೆಲಸ ಮಾಡಲಾಗಲಿಲ್ಲ. ಹೇಗೋ ಮಧ್ಯಾಹ್ನದವರೆಗೂ ಆಪೀಸಿನಲ್ಲಿದ್ದು, ನಂತರ ಪರ್ಮಿಷನ್ ತೆಗೆದುಕೊಂಡು ಮನೆಗೆ ಬಂದಳು. ಇದೇ ಮೊದಲ ಬಾರಿಗೆ ಮಧ್ಯಾಹ್ನಕ್ಕೆ ಮನೆಗೆ ಬಂದ ರಜನಿಯನ್ನು ಕಂಡು ಸರೋಜಳಿಗೆ ಭಯ, ಆಶ್ಚರ್ಯ ಎಲ್ಲವೂ! ಏಕೋ ತಲೆ ನೋಯುತ್ತಿದೆ ಎಂಬ ಉತ್ತರಕ್ಕೆ ತೃಪ್ತಳಾಗದಿದ್ದರೂ, ರೆಸ್ಟ್ ತಗೋ ಎಂದು ಸಮಾಧಾನ ಹೇಳಿದಳು.
ಸಂಜೆ, ಏಳಾದರೂ ಎದ್ದು ಬಾರದ ರಜನಿಯನ್ನು ನೋಡಿ ಸರೋಜಳಿಗೆ ಗಾಬರಿಯಾಯಿತು. ಏಕೆ? ಏಕೆ? ಮೇಲಿಂದ ಮೇಲೆ ಪ್ರಶ್ನೆಗಳನ್ನು ಕೇಳಿದಳು. ಅದುವರೆಗೂ ಕಟ್ಟಿಕೊಂಡಿದ್ದ ಆತಂಕವೆಲ್ಲಾ ಮಾತಾಗಿ ಹೊರಗೆ ಬಂತು. ರಜನಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಮಕ್ಕಳು ಟೀವಿ ನೋಡುತ್ತಿದ್ದುದರಿಂದ ಇಬ್ಬರೂ ವಿವರವಾಗಿ ಮಾತನಾಡಿದರು. ರಜನಿ ಆತನನ್ನೇ ಮದುವೆಯಾಗಬೇಕೆಂದು ಹಂಬಲಿಸುತ್ತಿರುವ ತನ್ನ ಮನದಾಳವನ್ನು ಹೇಳಿರಲಿಲ್ಲ. ಕೇವಲ ಆತ ಬರುದಿದ್ದುದಕ್ಕೆ ಆಗಿರುವ ಆತಂಕ, ಮತ್ತೆ ನೋಡುತ್ತೇನೋ ಇಲ್ಲವೋ ಎನ್ನುವ ಭಯ ಎನ್ನುವಂತೆ ಮಾತನಾಡಿದ್ದಳು. ರಜನಿ ಇನ್ನೊಂದೆರಡು ದಿನ ನೋಡು, ಆಗಲೂ ಬರದೇ ಇದ್ದರೆ, ಅವನ ಮನೆಯನ್ನು ಪತ್ತೆ ಹಚ್ಚಿ ಹೋಗಿ ನೋಡಿಕೊಂಡು ಬಾ. ಆದರೆ ಈ ರೀತಿ ಕೊರಗಿದರೆ ನನಗೆ ಭಯವಾಗುತ್ತದೆ ಎಂದಳು. ಮನೆ ಪತ್ತೆ ಹಚ್ಚುವುದು ಹೇಗೆ? ಎಂಬ ಪ್ರಶ್ನೆ ಭೂತಾಕಾರವಾಗಿ ಕಾಡಿತು. ಅವನ ಬಗ್ಗೆ ನಿನಗೆ ಏನು ಗೊತ್ತು, ಎಂದಾಗ, ಅವನ ಬೈಕ್‌ನ ನಂಬರ್ ಅಷ್ಟೇ ಗೊತ್ತು ಎಂದಳು. ತಕ್ಷಣ ಸರೋಜ, ಹಾಗದರೆ ಅವನ ಮನೆಯನ್ನು ಪತ್ತೆ ಹಚ್ಚುವುದು ಕಷ್ಟವೇನಲ್ಲ ಬಿಡು. ಇನ್ನೊಂದೆರಡು ದಿನ ನೋಡು, ಎಂದು ಸಮಾಧಾನ ಮಾಡಿದಳು.

* * *

ಒಂದು. ಎರಡು.. ಮೂರು... ದಿನಗಳು ಕಳೆದು ಹೋದವು. ಆತ ಬರಲೇ ಇಲ್ಲ. ಇತ್ತ ರಜನಿ ಮನೋರೋಗಿಯಂತಾಗಿದ್ದಳು. ಸಿಟಿಯಲ್ಲೇ ಹುಟ್ಟಿ ಬೆಳೆದಿದ್ದ ಸರೋಜಾ ಮಾತ್ರ ಎದೆಗುಂದಲಿಲ್ಲ. ಒಂದು ಬಾರಿ ಆತ ಯಾರು? ಏನಾದ ಎಂಬ ವಿಷಯಗಳು ತಿಳಿದರೆ ಇವಳ ಖಾಯಿಲೆ ಹುಷಾರಾದಂತೆಯೇ ಎಂದುಕೊಂಡಳು. ತನ್ನ ಗಂಡನ ಜೊತೆಯಲ್ಲಿಯೇ ಆಟೋ ಓಡಿಸಿಕೊಂಡಿದ್ದ ತನ್ನ ಚಿಕ್ಕಪ್ಪನನ್ನು ಕರೆದು, ಬೈಕ್ ನಂಬರ್ ಕೊಟ್ಟು ಅದರ ವಿಳಾಸವನ್ನು ಪತ್ತೆ ಮಾಡಿಕೊಡುವಂತೆ ಕೇಳಿಕೊಂಡಳು. ಇದರಿಂದಾಗಿ ರಜನಿಯೂ ಸ್ವಲ್ಪ ಉತ್ಸಾಹದಿಂದಲೇ ಇದ್ದಳು. ಚಿಕ್ಕಪ್ಪನಿಗೆ ಹಲವಾರೂ ಅನುಮಾನಗಳೂ ಹುಟ್ಟಿಕೊಂಡವು. ಆದರೆ ಸರೋಜ, ಆ ಬೈಕಿನಿಂದ ಬಿದ್ದ ಕೆಲವು ಕಾಗದ ಪತ್ರಗಳು ನನ್ನ ಸ್ನೇಹಿತೆಗೆ ಸಿಕ್ಕಿವೆ, ಅವುಗಳನ್ನು ಹಿಂತಿರುಗಿಸುವುದಕ್ಕೆ ಎಂದು ಸುಳ್ಳು ಹೇಳಿಬಿಟ್ಟಳು.
ಎರಡು ದಿನ ಕಳೆದು, ಸಂಜೆ ಅವಳ ಚಿಕ್ಕಪ್ಪ ಅಡ್ರೆಸ್ ಹಿಡಿದು ಬಂದಾಗ ಇಬ್ಬರಿಗೂ ಖುಷಿಯಾಯಿತು. ರಜನಿಯೇ ಟೀ ಮಾಡಿಕೊಟ್ಟಳು. ಆಕಡೆಗೆ ಚಿಕ್ಕಪ್ಪ ಹೊರಟ ತಕ್ಷಣ, ಅಡ್ರೆಸ್ ನೋಡಿದಳು. ಹೆಸರು ರಮೇಶ್ ಎಂದಿತ್ತು. ಆ ವಿಳಾಸ ತೀರಾ ದೂರವೇನಿರಲಿಲ್ಲ. ನಡೆದೇ ಹೋದರೆ ಅರ್ಧ ಗಂಟೆಯ ದಾರಿ. ಈಗಲೇ ಹೋಗೋಣವೇ? ಎಂದಳು. ಸರೋಜಳಿಗೆ ಅವಳ ಆತುರ ಕಂಡು ನಗು ಬಂತು. ಅವನು ಯಾರು? ಮದುವೆಯಾಗಿದೆಯಾ? ಆಗಿಲ್ಲವೆಂದರೆ ನಿನ್ನನ್ನು ಇಷ್ಟಪಡುತ್ತಾನಾ? ಎಂಬ ಹಲವಾರು ಅನುಮಾನಗಳನ್ನು ಸರೋಜ ವ್ಯಕ್ತಪಡಿಸಿದಳು. ಆದರೆ ರಜನಿಯದು ಒಂದೇ ಒತ್ತಡ. ಆತನನ್ನು ಮದುವೆಯಾಗುವುದು ಬಿಡುವುದು ನನಗೆ ಮುಖ್ಯವಲ್ಲ. ಆತ ಬರುವುದು ಏಕೆ ನಿಂತು ಹೋಯಿತು ಎಂದು ತಿಳಿದುಕೊಂಡರೆ ಸಾಕು ಎಂದು ಸರೋಜಳ ಬಾಯನ್ನು ಮುಚ್ಚಿಸಿದಳು. ಬೆಳಿಗ್ಗೆಯೇ ಎದ್ದು ಹೋಗುವುದೆಂದು ತೀರ್ಮಾನಿಸಿದರು.

* * *

ಬೆಳಿಗ್ಗೆ ಅಲ್ಲಿಗೆ ತಲುಪಿದಾಗ ಏಳೂವರೆಯಾಗಿತ್ತು. ದಾರಿಯುದ್ದಕ್ಕೂ ರಜನಿ ಆತನನ್ನು ಯಾವ ರೀತಿಯಲ್ಲಿ ಎದುರುಗೊಳ್ಳುತ್ತೇನೆ ಎಂದು ಯೋಚಿಸಿ ಯೋಚಿಸಿ ಸುಸ್ತಾಗಿದ್ದಳು. ವಿಳಾಸದಲ್ಲಿದ್ದ ಎಲ್ಲವೂ ಅವರು ನಿಂತಿದ್ದ ಮನೆಯದ್ದೇ ಆಗಿತ್ತು. ಇನ್ನು ಒಳಗೆ ಹೋಗುವುದೊಂದೇ ಬಾಕಿ. ಆದರೆ ಹೇಗೆ? ಏನೆಂದು ಹೇಳುವುದು? ಇದುವರೆಗೂ ಅವರಿಬ್ಬರು ಯೋಚಿಸದ ನೂರಾರು ಪ್ರಶ್ನೆಗಳು ಆವರಿಸಿಕೊಳ್ಳತೊಡಗಿದವು. 'ದಿನವೂ ದಾರಿಯಲ್ಲಿ ಹೋಗುತ್ತಿದ್ದ ಒಬ್ಬನನ್ನು, ಈಗೇಕೆ ಆ ದಾರಿಯಲ್ಲಿ ಬರುತ್ತಿಲ್ಲ ಎಂದು ಹುಡುಕಿಕೊಂಡು ಬಂದಿದ್ದೇವೆ' ಎಂದರೆ ಎಂತಹ ನಗೆಪಾಟಲಿಗೆ ಈಡಾಗುತ್ತೇವೆ ಎಂದು ಇಬ್ಬರಿಗೂ ಭಯ, ಅವಮಾನ, ಅನಿಶ್ಚತತೆ ಎಲ್ಲವೂ ಉಂಟಾಯಿತು. 'ಬೇಡವೇ ಬೇಡ ವಾಪಸ್ಸು ಹೋಗೇ ಬಿಡುವ' ಎಂದು ರಜನಿ ಹೇಳಿ, ಇಬ್ಬರೂ ತಿರುಗುವಷ್ಟರಲ್ಲಿ, ಗೇಟು ಶಬ್ದ ಮಾಡಿಬಿಟ್ಟಿತು. ಇಬ್ಬರೂ ಕರೆಂಟ್ ಹೊಡೆದವರಂತೆ ಬೆಚ್ಚಿ ಬಿದ್ದರು. ಹೊರಗೆ ಬಂದವಳು ಹಾಲಿನವಳಾದ್ದರಿಂದ ಸ್ವಲ್ಪ ಸಮಾಧಾನವಾಯಿತು. ಇವರನ್ನು ನೋಡಿಕೊಂಡೇ ಮುಂದೇ ಹೋಗುತ್ತಿದ್ದ ಹಾಲಿನವಳನ್ನು, ಇನ್ನು ಬಿಟ್ಟರೆ ಸಾಧ್ಯವೇ ಇಲ್ಲವೆನ್ನುವಂತೆ ಸರೋಜ ಧಾವಿಸಿ ಮಾತನಾಡಿಸತೊಡಗಿದಳು. ‘ರಮೇಶ್ ಅನ್ನುವವರ ಮನೆ ಇದೆಯೇ?’ ಎಂದು ಕೇಳಿದಳು. ‘ಅಲ್ಲ, ಇದು ದನಿನ ಡಾಕ್ಟ್ರು ಮನೆ’ ಅಂದಳು. ಏನೋ ಹೊಳೆದವಳಂತೆ, ‘ಅದೆ, ಅವ್ರ ಮಗ ರಮೇಶ್’ ಅಂದಳು ಸರೋಜ. ‘ಏ.. ಅವ್ರಿಗೆ ಗಂಡುಮಕ್ಳಿಲ್ಲಕಣೇಳಿ’ ಎಂದ ಹಾಲಿನವಳು ‘ನಿಮಗೆ ಬೇಕಾಗಿರೋರು ಬೇರೆ ಯಾರೋ ಇರಬೇಕು’ ಎಂದು ಹೊರಟಳು. ರಜನಿ ಸರೋಜ ಇಬ್ಬರಿಗೂ ಮನಸ್ಸಿಗೆ ಪಿಚ್ಚೆನಿಸಿತು. ಐದಾರು ಹೆಜ್ಜೆ ಮುಂದೆ ಹೋಗಿದ್ದ ಹಾಲಿನವಳು ಮತ್ತೆ ಬಂದು, ‘ಮುಂಚೆ ಈ ಮನೇಲಿದ್ದವರಿಗೆ ರಮೇಶ ಅನ್ನೋ ಮಗ ಇದ್ದಂಗೆ ನೆನಪು. ಅವರು ಮನೆ ಖಾಲಿ ಮಾಡಿ, ಪುಷ್ಪಗಿರಿನಗರದಲ್ಲಿ ಸ್ವಂತ ಮನೆ ಮಾಡಿಕೊಂಡು ಹೋಗಿ ಬಾಳ ದಿನ್ವಾತು’ ಅಂದಳು. ‘ಅದ್ರ ಅಡ್ರೆಸ್ ಗೊತ್ತಾ’ ಇಬ್ಬರೂ ಒಟ್ಟಿಗೆ ಕೇಳಿದ್ದನ್ನು ಅಚ್ಚರಿಯಿಂದ ನೋಡುತ್ತಾ ಹಾಲಿನವಳು ‘ಏ.. ಅದ್ಹೆಂಗೆ ಗೊತ್ತಾದತು ನಂಗೆ. ಬೇಕಾರೆ ಡಾಕ್ಟ್ರನ್ನ ಕೇಳಿ ನೋಡಿ’ ಅಂದು ಹೊರಟೇ ಹೋದಳು.
ಇಬ್ಬರೂ ಸ್ವಲ್ಪ ಹೊತ್ತು ಯೋಚಿಸಿ ಮನೆಯ ಗೇಟ್ ತೆಗೆದು ಒಳ ನುಗ್ಗಿಯೇ ಬಿಟ್ಟರು. ಕಾಲಿಂಗ್ ಬೆಲ್ ಒತ್ತಿ ಕಾದರು. ಸುಮಾರು ಅಯ್ವತ್ತರ ಪ್ರಾಯದ ವ್ಯಕ್ತಿ ಬಾಗಿಲು ತೆಗೆದು ಪ್ರಶ್ನಾರ್ಥಕವಾಗಿ ನೋಡಿದರು. ರಜನಿ ತಟ್ಟನೆ, ‘ಸಾರ್, ನಾನು ಜ್ಯೋತಿ ಅಂತ. ರಮೇಶ್ ಅವರ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದೆ. ಈಗ ಬೇರೆಡೆ ಇದ್ದೇನೆ. ಸ್ವಲ್ಪ ರಮೇಶ್ ಅವ್ರನ್ನ ನೋಡಬೇಕು.’ ಏನೇನೋ ಹಲುಬತೊಡಗಿದಳು. ಆತ ಒಂದು ಕ್ಷಣ ಚಿಂತಾಕ್ರಾಂತವಾದವನಂತೆ ಕಂಡ. ಒಳಗೆ ಬನ್ನಿ ಎಂದು ಅವರಿಗೆ ಹೇಳಿ, ‘ಪಾಪ, ಈಗ ಒಂದ್ವಾರದಿಂದ ಅವನನ್ನ ಕೇಳಿಕೊಂಡು ಇನ್ನೂ ಮೂರ್‍ನಾಲ್ಕು ಜನ ಬಂದಿದ್ರು’ ಎನ್ನುತ್ತಾ ತಾನೂ ನಡೆದು ವರಾಂಡದಲ್ಲಿದ್ದ ಕುರ್ಚಿಯಲ್ಲಿ ಕುಳಿತ. ಅವರನ್ನೂ ಕುಳಿತುಕೊಳ್ಳಲು ಹೇಳಿದ. ನಂತರ, ನಿಧಾನವಾಗಿ ‘ನಿಮಗೆ ವಿಷಯ ಗೊತ್ತಾಗಿಲ್ಲ ಅನ್ಸುತ್ತೆ. ಈಗ್ಗೆ ಆರು ದಿನದ ಹಿಂದೆ ಆತ ತೀರಿಕೊಂಡ. ಅವನಿಗೆ ಬ್ರೈನ್ ಟ್ಯೂಮರ್ ಇತ್ತು...’ ಎಂದು ಏನೇನೋ ಹೇಳುತ್ತ, ಟೇಬಲ್ ಮೇಲೆ ಹರಡಿದ್ದ ವಿಸಿಟಿಂಗ್ ಕಾರ್ಡ್‌ಗಳಲ್ಲಿ ಹುಡುಕಿ ಒಂದನ್ನು ಎತ್ತಿಕೊಡುತ್ತ, ‘ಅವರ ತಂದೆ ತಾಯಿಯನ್ನು ನೋಡುವುದಾದರೆ ಈ ಅಡ್ರೆಸ್‌ಗೆ ಹೋಗಿ’ ಎಂದ.

* * *

ಸರೋಜ ರಜನಿ ಇಬ್ಬರೂ ಮುಖ ಮುಖ ನೋಡಿಕೊಂಡರು. ಮತ್ತಿನ್ನೇನ್ನೂ ಕೇಳಬೇಕೆನಿಸಲಿಲ್ಲ. ಕಾರ್ಡ್ ತೆಗೆದುಕೊಂಡು ಹೊರಟರು. ಮನೆಗೆ ಬರುವವರೆಗೂ ಯಾರೂ ಮಾತನಾಡಲಿಲ್ಲ. ಮನೆ ತಲುಪಿದ ತಕ್ಷಣ ‘ಈಗ ಆಪೀಸಿಗೆ ಹೋಗಿ ಬಾ, ಸಂಜೆ ಹೋಗಿ ನೋಡಿಕೊಂಡು ಬರೋಣ’ ಎಂದ ಸರೋಜಳಿಗೆ ಬೇಡ ಎನ್ನುವಂತೆ ತಲೆಯಾಡಿಸಿದಳು ರಜನಿ. ಕೈಲ್ಲಿದ್ದ ಕಾರ್ಡನ್ನು ಬಿಗಿಯಾಗಿ ಹಿಡಿದು ಬಿಕ್ಕಿ ಬಿಕ್ಕಿ ಅಳತೊಡಗಿದಳು, ಸರೋಜಳ ಭುಜಕ್ಕೆ ಮುಖವಾನಿಸಿ.

6 comments:

Anonymous said...

ಪ್ರಿಯ ಸತ್ಯನಾರಾಯಣ, ತಮ್ಮ ಕತೆ ಚೆನ್ನಾಗಿದೆ. ಓದಿ ಬಹಳ ಖುಷಿ ಆಯಿತು, ಒಳ್ಳೆಯ ಓದು ಸಿಕ್ಕಿತ್ತಲ್ಲ ಅಂತ. -- ಆಸಕ್ತ ಓದುಗ

PARAANJAPE K.N. said...

ಕಥೆ ಚೆನ್ನಾಗಿದೆ. ಹರೆಯದ ಹುಡುಗಿಯ ಮನೋಸಹಜ ವಾ೦ಛಲ್ಯಗಳ ಚಿತ್ರಣ ಚೆನ್ನಾಗಿ ಮೂಡಿ ಬ೦ದಿದೆ

ಮನಸು said...

sir,
kathe tumba chennagide... tumba ista aytu..heege bareyuttaliri.

ಬಿಸಿಲ ಹನಿ said...

ಸತ್ಯನಾರಾಯಣ ಸರ್,
ನಿಮ್ಮ ಕತೆಯು ನವಿರು ನವಿರಾದ ಭಾವನೆಗಳನ್ನು ಎಬ್ಬಿಸುತ್ತಾ ಅಂತ್ಯದವರೆಗೆ ಉಸಿರು ಬಿಗಿಹಿಡಿಸಿಕೊಂಡು ಓದಿಸಿಕೊಳ್ಳುತ್ತಾ ಸಾಗುತ್ತದೆ. ಆದರೆ ಕೊನೆಯಲ್ಲಿ ಒಮ್ಮೆಲೆ ವಿಷಾದದ ಅಲೆಗಳನ್ನು ತಂದು ಬಿಡುತ್ತದೆ. ಕತೆ ಇಷ್ಟವಾಯಿತು.

Anonymous said...

ಪ್ರಿಯ ಸತ್ಯನಾರಾಯಣ, ಅತ್ಯುತ್ತಮ ಕತೆ! ಅನೇಕ ಓದುಗಳನ್ನು ಬೇಡುವ ಸುಂದರ ಸಾತ್ವಿಕ ಕತೆ. ನಿಮ್ಮೊಳಗಿನ ಪ್ರತಿಭಾವಂತ ಕತೆಗಾರ ಹೀಗೆ ವಿಕಾಸಗೊಳ್ಳುತ್ತಾ ಇನ್ನೂ ಅನೇಕ ಉತ್ತಮ ಕತೆಗಳನ್ನು ಕೊಡಲಿ ಎಂದು ಹಾರೈಸುತ್ತೇನೆ. -- ಆಸಕ್ತ ಓದುಗ

PaLa said...

ತುಂಬಾ ಚೆನ್ನಾಗಿ ಬರ್ದಿದೀರ ಕಥೇನಾ, ಅದರಲ್ಲೂ ಅವಿವಾಹಿತ ಹುಡುಗಿಯ ಮನದ ಚಿತ್ರಣ ತುಂಬಾ ಸುಂದರವಾಗಿದೆ.