ಹುಡುಗರೆಲ್ಲ ‘ಹೋ’ ಎಂದು ಹೊರಗೆ ಹೋಗಿಯಾಗಿತ್ತು. ಬಸವ ಎದ್ದು ನಿಲ್ಲಲು ಹೋದರೆ ಕಾಲುಗಳು ಮುಷ್ಕರ ಹೂಡುತ್ತಿದ್ದವು. ‘ಗತಿಯಿಲ್ಲದಿದ್ದ ಮೇಲೆ ಯಾವ್ದಾದ್ರು ಗೌರ್ನಮೆಂಟ್ ಸ್ಕೂಲಿಗೆ ಹೋಗ್ಬೇಕಾಗಿತ್ತು’ ಎಂದಿದ್ದ ಹೆಡ್ಮಿಸ್ಸಿನ ಮಾತು ನೆನಪಿಗೆ ಬಂದು, ‘ಯಾಕೆ? ಬಡವರೇನು ಒಳ್ಳೆ ಸ್ಕೂಲಲ್ಲಿ ಓದಬಾರದಾ?’ ಎನ್ನುವ ತನ್ನ ಪ್ರಶ್ನೆಯನ್ನು ಶಬ್ದ ರೂಪಕ್ಕೆ ಇಳಿಸಲಾಗದ್ದಕ್ಕೆ ಈಗ ಬೇಜಾರು ಮಾಡಿಕೊಂಡ. ಹೇಗೋ ಧೈರ್ಯವಹಿಸಿ ಎದ್ದು ಹೆಗಲಿಗೆ ಬ್ಯಾಗನ್ನು ತೂಗಿಸಿಕೊಂಡು ಹೊರಬಿದ್ದವನ ಕಣ್ಣಿಗೆ ಬಿದ್ದವರು ಕನ್ನಡ ಮಿಸ್ಸು ಅನಿತ. ಈತನ ತೂಗಡಿಕೆಯ ನಡಿಗೆಯನ್ನು ಗಮನಿಸಿದ ಅನಿತ ‘ಏಕೊ ಬಸವ ಹುಷಾರಿಲ್ಲವಾ? ನಿದ್ದೆ ಮಾಡಿದಂತೆ ಕಾಣುತ್ತೀಯಾ’ ಎಂದಾಗ ಬಸವನಿಗೆ ಸಕತ್ ಆಶ್ಚರ್ಯವಾಯಿತು. ನಾನು ನಿದ್ದೆ ಮಾಡುತ್ತಿದ್ದುದ್ದು ಕೇಡಿ ಮಾಸ್ಟರಿಗೇ ಗೊತ್ತಾಗಲಿಲ್ಲ! ಆದರೆ ಈ ಅನಿತ ಮಿಸ್ಸಿಗೆ ಗೊತಾದುದ್ದು ಹೇಗೆ? ಎಂದು ತಲೆಕೆಡಿಸಿಕೊಂಡ ಬಸವ ‘ಇಲ್ಲ ಮಿಸ್. ಹೊಟ್ಟೆ ಹಸಿವು’ ಎಂದು ಅಪ್ರಯತ್ನಪೂರ್ವಕವಾಗಿ ಹೇಳಿ ‘ಇಲ್ಲ ಮಿಸ್. ನನ್ಗೇನು ಆಗಿಲ್ಲ’ ಎಂದುಬಿಟ್ಟ ಅದೇ ಉಸಿರಿನಲ್ಲಿ. ಕ್ಷಣಮಾತ್ರವೂ ಯೋಚಿಸದೆ ‘ಒಂದ್ನಿಮಿಷ ಇರು ಬಂದೆ’ ಎಂದು ಮತ್ತೆ ಸ್ಟಾಫ್ ರೂಮಿನ ಕಡೆಗೆ ಹೋದರು. ಅದೇ ರೂಮಿನಿಂದ ತಮ್ಮ ಸೀಮೇಸುಣ್ಣದ ಕೈಯನ್ನು ತೊಳೆಯಲು ಬಂದ ಕೇಡಿ ಮಾಸ್ಟರ್ ‘ಏಕೊ ಬಡವಾ. ನನ್ನ ಕ್ಲಾಸಿಗೆ ಬಂದಿರ್ಲಿಲ್ಲ?’ ಎಂದು ಗುಡುಗಿದರು. ತೊಡೆಯಲ್ಲುಂಟಾದ ನಡುಕವನ್ನು ತಡೆಯುತ್ತ ‘ಇಲ್ಲ ಸಾರ್. ಬಂದಿದ್ದೆ ಸಾರ್. ನಿಮ್ಮ ಗುಡುಗು ಮಿಂಚು ಕೇಳಿದೆ ಸಾರ್’ ಎಂದು ತಡಬಡಿಸಿದ. ತಾವು ಕೇಳಿದ್ದ ಪ್ರಶ್ನೆಯನ್ನು ಆಗಲೇ ಮರೆತಿದ್ದ ಕೇಡಿ ಮಾಸ್ಟರ್, ಬಸವನನ್ನು ಒಂದು ಪ್ರಾಣಿಯೋ ಎಂಬಂತೆ ನೋಡಿ ಒಳಗೆ ಹೋದರು. ಆಗ ಹೊರಗೆ ಬಂದ ಅನಿತ ಮಿಸ್, ‘ತಗಳೊ. ಇಲ್ಲಿ ಒಂದ್ನಾಲ್ಕು ಬಿಸ್ಕೆಟ್ ಇದೆ ತಿಂದ್ಕೊ. ಹಾಗೆ ಅಲ್ಲಿ ಎಲ್ಲಾದ್ರು ಕಾಫಿನೊ ಟೀನೊ ಕುಡ್ಕೊ’ ಎಂದು, ಒಂದು ಅರ್ಧ ಖಾಲಿಯಾಗಿದ್ದ ಬಿಸ್ಕೆಟ್ ಪ್ಯಾಕನ್ನು, ಐದು ರೂಪಾಯಿ ನೋಟನ್ನು ಕೊಟ್ಟರು. ಅದನ್ನು ತಗೆದುಕೊಳ್ಳುತ್ತಲೇ, ನಮಸ್ಕರಿಸುವವನಂತೆ ತಮ್ಮ ಮುಖವನ್ನೇ ನೋಡಿದ ಬಸವನ ತಲೆಯನ್ನು ಸವರಿ ಮುಗುಳ್ನಕ್ಕು ಹೊರಟರು. ಅನಿತ ಮೇಡಂ ಬಸವನಿಗೆ ತಿಂಡಿ ಕೊಡುವುದು ಇದೇ ಮೊದಲೇನಾಗಿರಲಿಲ್ಲ. ವಾರಕ್ಕೆ ಒಂದೆರಡು ದಿನವಾದರೂ ಆತನಿಗೆ ಕರೆದು ತಿಂಡಿ ಕೊಡುತ್ತಿದ್ದರಲ್ಲದೆ ಮನೆಗೆ ಕರೆದುಕೊಂಡು ಹೋಗಿ, ಅಲ್ಲಿಯೂ ತಿಂಡಿ ಮುಂತಾದವನ್ನು ಕೊಡುತ್ತಿದ್ದರು. ಕೆಲವು ಬಾರಿ ನೋಟ್ ಪುಸ್ತಕಗಳನ್ನು, ಓದಲು ಕಾಮಿಕ್ಸ್ ಪುಸ್ತಕಗಳನ್ನು ಕೊಟ್ಟಿದ್ದರು. ಆದರೆ ಎಂದೂ ತನ್ನನ್ನು ಕೇಡಿ ಮಾಸ್ಟರಂತೆ ‘ಬಡವಾ’ ಎಂದಾಗಲಿ, ಹೆಡ್ಮಿಸ್ಸಿನಂತೆ ‘ಗತಿಯಿಲ್ಲದವನು’ ಎಂದಾಗಲಿ ಕರೆದಿರಲಿಲ್ಲ. ಅನಿತ ಮೇಡಂ ಮರೆಯಾಗುವವರೆಗೂ ನೋಡುತ್ತಿದ್ದ ಬಸವನಿಗೆ ‘ಅನಿತ ಮಿಸ್ ದೇವರೇ ಇರ್ಬೇಕು. ನಾನು ನಿದ್ದೆ ಮಾಡಿದ್ದು ಅವರಿಗೆ ಗೊತ್ತಾಗುತ್ತೆ. ನಾನು ಪಾಠ ಓದುವಾಗ ತಪ್ಪಾದ್ರೆ ತಕ್ಷಣ ಅವ್ರಿಗೆ ಗೊತ್ತಾಗುತ್ತೆ. ನಾನು ಹಸ್ಗೊಂಡಿದ್ರೆ ಗೊತಾಗುತ್ತೆ. ದೇವ್ರಿಗೆ ಎಲ್ಲಾ ಗೊತ್ತಾಗುತ್ತೆ ಅಂತೆ ಅವ್ವ ಹೇಳ್ತಿರ್ತಾಳೆ’ ಅಂದುಕೊಂಡ ಬಸವನಿಗೆ ತನ್ನ ಅವ್ವ, ತಂಗಿ ಪುಟ್ಟಿಯ ನೆನಪು ಬಂದು ಮನೆಯ ಕಡೆಗೆ ಹೊರಟ. ಕೈಯಲ್ಲಿದ್ದ ಬಿಸ್ಕೆಟ್ಟನ್ನು ತಿನ್ನಬೇಕನಿಸಲಿಲ್ಲ. ಮನೆಗೆ ಹೋಗಿ ತಂಗಿಗೂ ಒಂದೆರಡು ಕೊಟ್ಟು ತಿನ್ನ ಬೇಕು. ಅವಳೂ ಬೆಳಿಗ್ಗೆಯಿಂದ ಹಸಿದುಕೊಂಡಿರಬಹುದು. ಬೆಳಿಗ್ಗೆ ಬರುವಾಗ ಮನೇಲಿ ಏನೂ ಇಲ್ಲದೆ ಅವ್ವ ‘ನೀನು ಸ್ಕೂಲಿಂದ ಬರೊವೊತ್ಗೆ ಏನಾದ್ರು ಮಾಡಿರ್ತಿನಿ’ ಎಂದು ಹೇಳಿದ್ದು ಜ್ಞಾಪಕಕ್ಕೆ ಬಂದು, ನಡೆಯುತ್ತಿದ್ದವನು ಓಡತೊಡಗಿದ.
* * * * * * * * * * * * *
ಮನೆ ತಲಪಿದಾಗ ಬಸವನ ಕಣ್ಣಿಗೆ ಬಿದ್ದುದ್ದು ನಿತ್ಯ ಚಿತ್ರವೆ. ತಾಯಿ ಬಾಗಿಲ ಬಳಿಯಲ್ಲಿ ಕುಳಿತುಕೊಂಡು, ಎರಡೂ ಕಾಲನ್ನು ನೀಡಿಕೊಂಡು, ಪಕ್ಕದಲ್ಲಿ ಮೊರವನ್ನು, ಅದರಲ್ಲಿ ಹೊಗೆಸೊಪ್ಪು ಮತ್ತು ಕತ್ತರಿಸಿದ ತೂಪ್ರದ ಎಲೆಯನ್ನು ಇಟ್ಟುಕೊಂಡು ಬೀಡಿ ಕಟ್ಟುತ್ತಿದ್ದಳು. ತಂಗಿ ಪುಟ್ಟಿ ಅವ್ವನ ತೊಡೆಯ ಮೇಲೆ ಮಲಗಿಕೊಂಡು ಕೈಯಲ್ಲಿ ಒಂದು ತೂಪ್ರದ ಎಲೆಯನ್ನು ಹಿಡಿದುಕೊಂಡು ಆಡತ್ತಿದ್ದಳು. ‘ಪುಟ್ಟಿ. ಅಣ್ಣ ಬಂದ. ಏಳು ಅವನಿಗೊಂದಿಷ್ಟು ಹೊಟ್ಟೆಗೇನಾದ್ರು ಮಾಡುವ’ ಎಂದು ಮೇಲೇಳುತ್ತಿದ್ದ ಅವ್ವನನ್ನು ತಡೆದ ಬಸವ, ‘ಅವ್ವ ನಮ್ಮ ಅನಿತ ಮಿಸ್ ಬಿಸ್ಕೆಟ್ ಕೊಟ್ಟವರೆ. ಈಗ ಅದನ್ನೆ ತಿಂತಿನಿ. ಅಮೇಲೆ ಊಟ ಮಾಡ್ತಿನಿ’ ಎಂದ. ‘ಅಣ್ಣ ನಂಗೆ ಕೊಡಲ್ವ?’ ಎಂದು ತನ್ನೆಡೆಗೆ ಬಂದ ಪುಟ್ಟಿಯನ್ನು ಎತ್ತಿಕೊಂಡ ಬಸವ, ‘ನಿನಗೆ ಕೊಡೊದಿಕ್ಕೆ ಅಂತಲೆ ನಾನು ಅಲ್ಲಿಂದ ಇಲ್ಲಿವರೆಗೂ ತಿಂದಲೆ ಬಂದಿರೋದು’ ಎಂದು ಬಿಸ್ಕೆಟ್ ಪ್ಯಾಕ್ ಕಳಚಿ ಅವಳಿಗೆ ಎರಡು ಕೊಟ್ಟು ತಾನು ಎರಡು ತಿಂದು ಮುಗಿಸಿದ. ಬಿಸ್ಕೆಟ್ ಮುಗಿಯುವ ಹೊತ್ತಿಗೆ ಹೆಡ್ಮಿಸ್ ಹೇಳಿದ್ದ ಮಾತುಗಳು ನೆನಪಿಗೆ ಬಂದು, ‘ಅವ್ವ ನಾಳೆ ಫೀಸು ಕಟ್ಟದಿದ್ದರೆ ಸ್ಕೂಲಿಗೆ ಬರ್ಬೇಡ ಅಂದವರೆ ಹೆಡ್ಮಿಸ್ಸು’ ಎಂದು ತನ್ನ ಅವ್ವ ಏನು ಹೇಳುತ್ತಾಳೆ ಎಂದು ಅವಳ ಮುಖವನ್ನೇ ನೋಡಿದ. ಅವಳು ಒಮ್ಮೆ ಅವನ ಮುಖವನ್ನಷ್ಟೆ ನೋಡಿ ಮತ್ತೆ ಬೀಡಿ ಕಟ್ಟುವ ತನ್ನ ಕಾಯಕದಲ್ಲಿ ತೊಡಗಿದ್ದನ್ನು ಕಂಡು, ‘ಅವ್ವ ಎರಡು ತಿಂಗಳಿಂದು ಫೈನ್ ಸೇರಿ ನೂರೈದು ರೂಪಾಯಿ ಕೊಡ್ಬೇಕಂತೆ’ ಎಂದನು. ಈಗ ಮಾತನಾಡಿದ ಅವ್ವ, ‘ಬಸವ ನಾನೇನ್ಮಾಡ್ಲಪ್ಪ. ಮನೇಲಿ ಮೂರು ಅಕ್ಕಿ ಕಾಳಿಲ್ಲ. ನಿಮ್ಮಪ್ಪ ನೋಡಿದ್ರೆ ಕುಡ್ದು ಕುಡ್ದು ಒಂದ್ರುಪಾಯಿನೂ ಕೊಡಲ್ಲ. ಇವಂತ್ತೊಂದಿನ ಆದ್ರು ಅವನು ಕುಡಿದು ಬರ್ಲಿಲ್ಲ ಅಂದ್ರೆ ನಾಳೆ ಏನಾರ ಮಾಡಿ ಪೀಸು ಕಟ್ಟಬಹುದು’ ಎಂದು ಬೀಡಿ ಕಟ್ಟುವದನ್ನು ನಿಲ್ಲಿಸಿ ಮೇಲೆದ್ದು ‘ತಡಿ ನೋಡುವಾ’ ಎಂದು ಬೀಡಿ ಕಟ್ಟುಗಳನ್ನು ತುಂಬಿಟ್ಟಿದ್ದ ಕುಕ್ಕೆಯನ್ನು ತಂದು ನೆಲಕ್ಕೆ ಸುರಿದಳು. ‘ಬಸವ ಇದನ್ನ ಲೆಕ್ಕ ಮಾಡು. ನೋಡಾನ ಅದಾದ್ರು ವಸಿ ಆದ್ರೆ ಹೆಂಗಾದ್ರು ಮಾಡಿ ಫೀಸು ಕಟ್ಟಬಹುದು’ ಎಂದಳು. ಬಸವನ ಲೆಕ್ಕ ಸಾಗಿ ಮುನ್ನೂರರ ಗಡಿ ದಾಟುವಷ್ಟರಲ್ಲಿ ಬೀಡಿಕಟ್ಟಿನ ರಾಶಿ ಕರಗಿತ್ತು. ‘ಅವ್ವ ಮುನ್ನೂರು ಕಟ್ಟೈತೆ’ ಎಂದ ಬಸವನಿಗೆ, ‘ಹೆಂಗೊ ಎಪ್ಪೈತ್ತೈದು ರುಪಾಯಿ ಆಗುತ್ತೆ. ಇನ್ನು ಮೂವತ್ರುಪಾಯಿಗೇನು ಮಾಡದು? ಇವೊತ್ತೊಂದಿನ ಆದ್ರು ಕುಡಿದಲೆ ಬಂದ್ರೆ ಏನಾರ ಮಾಡ್ಬೌದು’ ಎನ್ನುತ್ತ ಎದ್ದು ಬೀಡಿಕಟ್ಟುಗಳನ್ನು ಚೀಲಕ್ಕೆ ತುಂಬತೊಡಗಿದಳು. ಅವ್ವನ ಕಾರ್ಯವನ್ನೇ ಗಮನಿಸುತ್ತಿದ್ದ ಬಸವನಿಗೆ ತನ್ನ ಜೇಬಿನಲ್ಲಿದ್ದ ಐದು ರುಪಾಯಿಗಳು ನೆನಪಿಗೆ ಬಂದು, ‘ಅವ್ವ ಅನಿತ ಮಿಸ್ ಕಾಫಿ ಕುಡಿ ಅಂತ ಐದು ರುಪಾಯಿ ಕೊಟ್ಟಿದ್ರು. ಅದನ್ನು ಸೇರಿಸಿದ್ರೆ ಎಂಬತ್ತು ರುಪಾಯಿ ಆಗುತ್ತೆ. ಇನ್ನು ಇಪ್ಪತ್ತೈದು ರುಪಾಯಿ ಬೇಕು’ ಎಂದ. ‘ಇರ್ಲಿ ನೋಡಾನ. ಈಗ ನೀನು ಕತ್ಲಾಗದ್ರಲ್ಲಿ ವಸಿ ಓದ್ಕೊ ಹೊಗು’ ಎಂದು ಮತ್ತೆ ಬೀಡಿ ಕಟ್ಟುವ ಕಡೆಗೆ ಗಮನ ನೀಡಿದಳು.
ಬಸವ ವಿಜ್ಞಾನದ ಕೇಡಿ ಮಾಸ್ಟರು ಮಾಡಿದ್ದ ಮಿಂಚು-ಗುಡುಗು ಪಾಠ ತಗೆದು ಓದಲು ಆರಂಭಿಸಿದ. ಸ್ವಲ್ಪ ಹೊತ್ತು ಓದುವಷ್ಟರಲ್ಲಿ ಮತ್ತೆ ಅನಿತ ಮೇಡಂ ನೆನಪಿಗೆ ಬಂದರು. ಪುಸ್ತಕ ಮಡಚಿಟ್ಟು ಕನ್ನಡದ ಪುಸ್ತಕ ಎತ್ತಿಕೊಂಡು, ‘ನಡೆ ಮುಂದೆ ನಡೆಮುಂದೆ ಹಿಗ್ಗದಯೆ ಕುಗ್ಗದಯೆ ನಡೆಮುಂದೆ’ ಎಂದು ಪದ್ಯವನ್ನು ರಾಗವಾಗಿ ಓದತೊಡಗಿದ. ಅನಿತ ಮೇಡಂ ಹೆಸರು ಎಷ್ಟು ಚನ್ನಾಗಿದೆ ಎನ್ನಿಸಿ ಪದ್ಯ ಓದುವುದನ್ನು ನಿಲ್ಲಿಸಿ ಯೋಚಿಸಿದ. ಅನಿತ ಅಂದರೆ ಏನು? ತಿಳಿಯದೆ ತಲೆ ಕೊಡವಿದಂತೆ ಮಾಡಿದ. ಯಾವುದೋ ದೇವರ ಹೆಸರೇ ಇರಬೇಕು ಅನ್ನಿಸಿತು. ನನ್ನ ಹೆಸರು ಬಸವ. ಬಸವ ಅಂದ್ರೆ ಎತ್ತು. ನನಗೆ ಯಾರು ಈ ಎತ್ತು ಅನ್ನೊ ಹೆಸರಿಟ್ಟರು ಎಂದುಕೊಂಡು ಅವ್ವನ ಕಡೆಗೆ ತಿರುಗಿ, ‘ಅವ್ವ ನನಗೆ ಯಾರು ಬಸವ ಅಂತ ಹೆಸರಿಟ್ಟಿದ್ದು?’ ಎಂದ. ಮಗ ಓದುವದನ್ನು ನಿಲ್ಲಿಸಿ ತಲೆ ಕೊಡವಿದ್ದನ್ನು ನೋಡುತ್ತಲೇ ಇದ್ದ ಅವ್ವ ಒಂದು ಕ್ಷಣ ತಡೆದು, ‘ಇನ್ನಾರು? ನಿಮ್ಮ ಚಿಕ್ಕಪ್ಪನೆ ಹೆಸರಿಟ್ಟಿದ್ದು. ಅದಾರೊ ಬಸವಣ್ಣನಂತೆ. ದೇವರ ಸಮಾನವಂತೆ. ಪ್ರತಿಯೊಬ್ಬರಲ್ಲಿನೂ ದೇವರನ್ನೆ ಕಾಣುತ್ತಿದ್ದನಂತೆ. ಅದಕ್ಕೆ ನೀನು ಅವನಾಗೆ ಆಗ್ಬೇಕು ಅಂತ ಬಸವ ಅಂತೆ ಹೆಸರಿಟ್ಟು ನಿನ್ನ ಸ್ಕೂಲಿಗೆ ಸೇರಿಸ್ದ’ ಎಂದಳು. ಬಸವನಿಗೆ ತನಗೊಬ್ಬ ಚಿಕ್ಕಪ್ಪ ಇದ್ದುದ್ದು, ಆತ ಸತ್ತಿದ್ದು ಗೊತ್ತಿತ್ತು. ಆದ್ರು ಕೇಳಿದ ‘ಅವ್ವ ಚಿಕ್ಕಪ್ಪನೆ ನನ್ನ ಸ್ಕೂಲಿಗೆ ಸೇರ್ಸಿದ್ದಾ?’ ಎಂದು. ‘ಹೂಂನಪ್ಪ. ಅವನಿಗೊ ನಿನ್ನನ್ನ ಬಾರಿ ಒದುಸ್ಬೇಕು ಅಂತ ಆಸೆ. ಆದ್ರೆ ದೇವ್ರು ಅವನನ್ನ ಬೇಗ ಕರಿಸ್ಕಂಡ. ಸಾಯೋವಾಗ ನನ್ಕೈಲಿ ಮಾತ ತಗೊಂಡ, ಏನಾದ್ರು ಮಾಡಿ ಬಸವನ್ನ ಚನ್ನಾಗಿ ಓದ್ಸಿ, ಸ್ಕೂಲ್ ಬಿಡಿಸ್ಬೇಡಿ. ಅಂತ. ಅದಕ್ಕೆ ನಾನು ಹೊಟ್ಟೆ ಬಟ್ಟೆ ಕಟ್ಟಿ ನಿನ್ನನ್ನ ಒದಸ್ತೈದಿನಿ’ ಎಂದು ಕಣ್ಣು ಮೂಗು ಒರೆಸಿಕೊಂಡಳು. ತುಂಬಾ ಹೊತ್ತು ಏನೂ ಮಾತನಾಡದೆ ಚಿಕ್ಕಂದಿನಲ್ಲಿ ತಾನು ಕಂಡಿದ್ದ ತನ್ನ ಚಿಕ್ಕಪ್ಪನನ್ನೇ ಕಾಣತೊಡಗಿದ. ತನಗೆ ಹೆಸರಿಟ್ಟ ಚಿಕ್ಕಪ್ಪ ಪುಟ್ಟಿಗೆ ಏಕೆ ಹೆಸರಿಡಲಿಲ್ಲ? ಎಂದುಕೊಂಡ. ಪುಟ್ಟಿ ಹುಟ್ಟೊ ಹೊತ್ಗೆ ಚಿಕ್ಕಪ್ಪ ಸತ್ತು ಹೋಗಿದ್ದು ಅವನಿಗೆ ಮರತೇ ಹೋಗಿತ್ತು. ‘ಅವ್ವ ಪುಟ್ಟಿಗೆ ಏಕೆ ಇನ್ನು ಹೆಸರಿಟ್ಟಿಲ್ಲ?’ ಎಂದ. ‘ಅವ್ಳಿಗೇನ ಈಗ ಅವಸ್ರ. ಏನೊ ಒಂದು ಇಟ್ಟಿದ್ರಾಯ್ತು. ಈಗ ನೀನು ಓದ್ಕೊ’ ಎಂದಳು. ‘ಆಗಲ್ಲ ಕಣವ್ವ. ಪುಟ್ಟಿಗೆ ಏನೊ ಒಂದು ಹೆಸ್ರಿಡದ್ ಬ್ಯಾಡ. ನನ್ನ ತಂಗಿಗೆ ನಾನೆ ಒಂದು ಒಳ್ಳೆ ಹೆಸ್ರು ಇಡ್ತಿನಿ’ ಎಂದು ಮತ್ತೆ ಪುಸ್ತಕ ಎತ್ತಿಕೊಂಡ.
ಕತ್ತಲಾಗಿ ಅಕ್ಷರಗಳು ಕಾಣಿಸದಂತಾದಾಗ ಅಪ್ಪ ಮನೆಗೆ ಕಾಲಿಟ್ಟ. ಅವನು ಒಳಗೆ ಬರುವ ಮೊದಲೇ ಸೆರಾಪಿನ ವಾಸನೆ ಬಂತು. ಬಂದವನೇ ಗೋಡೆಗೆ ವೊರಗಿ ಗುಟುರು ಹಾಕತೊಡಗಿದ. ಎದರಿದ ಪುಟ್ಟಿ ಅಣ್ಣನ ಕೈಹಿಡಿದು ಕುಳಿತುಕೊಂಡಳು. ಅದವಾದನ್ನೂ ಗಮನಿಸಿಯೇ ಇಲ್ಲವೆನ್ನುವಂತೆ ಬೀಡಿ ಚೀಲ ತಗೆದುಕೊಂಡು ಹೊರಟ ತಾಯಿಯನ್ನು ಬಸವ ಪುಟ್ಟಿಯ ಕೈಹಿಡಿದು ಹಿಂಬಾಲಿಸಿದ.
* * * * * * * * * * * * *
ಬೆಳಿಗ್ಗೆ ಸ್ಕೂಲಿಗೆ ಹೊರಟಾಗ ಬಸವನ ಬಳಿಯಿದ್ದ ಐದು ರುಪಾಯಿಯನ್ನು ಸೇರಿಸಿ, ಎಂಬತ್ತು ರುಪಾಯಿಗಳನ್ನು ಬಸವನ ಕೈಗೆ ಕೊಡುತ್ತ, ‘ನಿಮ್ಮ ಹೆಡ್ಮಿಸ್ಸಿಗೆ ಹೇಳಪ್ಪ. ಇರೋದೆ ಇಷ್ಟು. ಇನ್ನು ಹೇಗಾದ್ರು ಮಾಡಿ ಉಳ್ದಿದ್ದು ಇಪ್ಪತ್ತೈದ್ರುಪಾಯಿನ ಮುಂದಿನ ವಾರ ಕೊಡ್ತಿವಿ ಅಂತ’ ಎಂದ ಅವ್ವನಿಗೆ ಏನು ಹೇಳಬೇಕೆಂದು ಬಸವನಿಗೆ ತೋಚಲಿಲ್ಲ. ಪುಟ್ಟಿಗೆ ‘ಇವತ್ತು ಶನಿವಾರ. ಬೇಗ ಬರ್ತಿನಿ. ಆಟ ಆಡುವ’ ಎಂದು ಬ್ಯಾಗನ್ನು ಹೆಗಲಿಗೇರಿಸಿ ಹೊರಟೇಬಿಟ್ಟ. ‘ಹುಷಾರು’ ಎಂದ ಅವ್ವನ ದ್ವನಿ ಅಸ್ಪಷ್ಟವಾಗಿ ಬಸವನ ಕಿವಿಗೆ ಬಿತ್ತು.
ಸ್ಕೂಲಿಗೆ ಬಂದವನೆ, ಪ್ರೆಯರಿಗಿಂತ ಮುಂಚೆಯೇ ಫೀಸು ಕಟ್ಟಿಬಿಟ್ಟರೆ ಒಳ್ಳೆದು ಅಂದುಕೊಂಡು ಹೆಡ್ಮಿಸ್ಸಿನ ರೂಮಿಗೆ ನುಗ್ಗಿದ. ತನ್ನನ್ನು ಒಂದು ಪ್ರಾಣಿಯೆಂಬಂತೆ ನೋಡುತ್ತಿದ್ದ ಹೆಡ್ಮಿಸ್ಸಿನ ಮುಂದೆ ಕೈಕಟ್ಟಿ ನಿಂತು, ‘ಮಿಸ್ ನಮ್ಮವ್ವ ಹೇಳಿದ್ರು, ಈಗ ಇರೋದೆ ಎಂಬತ್ರುಪಾಯಿಯಂತೆ. ಉಳ್ದಿದ್ದನ್ನ ಮುಂದಿನ ವಾರ ಕೊಡ್ತರಂತೆ’ ಎಂದು ಒಂದೇ ಉಸಿರಿಗೆ ಹೇಳಿ, ಜೇಬಿನಿಂದ ನೋಟುಗಳನ್ನು ತಗೆದು ಕೈ ನೀಡಿದ. ಆತ ನೀಡಿದ ಕೈ ಕಡೆಗೆ ನೋಡದೆ ಹೆಡ್ಮಿಸ್ ಗುಡುಗಿದರು. ‘ಇದೇನ್ ತರ್ಕಾರಿ ವ್ಯಪಾರ ಅಂದ್ಕೊಡಿದಿಯಾ ನೀನು ಇವತ್ತತ್ತು ನಾಳೆ ಹತ್ತು ಕೊಡದಿಕ್ಕೆ. ಹೋಗು. ನಾಲ್ಕು ದಿನ ಸ್ಕೂಲಿಗೆ ಸೇರಸ್ದಿದ್ರೆ ಆಗ ಗೊತ್ತಾಗುತ್ತೆ ನಿಮ್ಮವ್ವನಿಗೆ. ಗತಿಯಿಲ್ಲದ ಮೆಲೆ ಯಾವ್ದಾದ್ರು ಗೌರ್ನಮೆಂಟ್ ಸ್ಕೂಲಲ್ಲಿ ಹೋಗಿ ಸಾಯದ್ ಬಿಟ್ಟು ಇಲ್ಲಿ ಬಂದು ನನ್ನ ತಲೆ ತಿಂತವೆ. ಇಲ್ಲಿ ಇವರ ಕಾಟ, ಅಲ್ಲಿ ಮೇನೆಜ್ಮೆಂಟಿನವರ ಕಾಟ, ಮನೇಲಿ ಗಂಡ ಮಕ್ಕಳ ಕಾಟ’ ಎಂದು ಸ್ಕೂಲಿನ ಹೆಂಚು ತುಸು ಅಳ್ಳಾಡುವಂತೆಯೇ ಕೂಗು ಹಾಕಿದರು. ನಡಗುವ ತೊಡೆಯನ್ನು ಮರೆತು ನಿಂತಿದ್ದ ಬಸವನಿಗೆ ‘ನಾನು ಎಂಬತ್ತು ರುಪಾಯಿ ತಂದಿದ್ದೀನಿ. ಹತ್ತು ರುಪಾಯಿ ಅಲ್ಲ’ ಎಂದು ಕೂಗಿ ಹೇಳಬೇಕೆನಿಸಿದರೂ ನಾಲಗೆ ಹೊರಳಲೇ ಇಲ್ಲ. ಆಗ ಬಾಗಿಲಲ್ಲಿ ಪ್ರತ್ಯಕ್ಷರಾದ ಅನಿತ ಮಿಸ್ಸು, ‘ಏನಿದು?’ ಎಂದು ನೋಡುತ್ತಿದ್ದರೆ, ಬಸವನಿಗೆ ಸ್ವಲ್ಪ ಧೈರ್ಯ ಬಂದು, ‘ಮಿಸ್, ನೂರೈದ್ರುಪಾಯಿ ಫೀಸು ಕಟ್ಟಬೇಕು. ಅವ್ವ ಎಂಬತ್ರುಪಾಯಿ ಅಷ್ಟೆ ಕೊಟ್ಟಿದ್ದು. ಉಳ್ದಿದ್ದನ್ನ ಮುಂದಿನ ವಾರ ಕೊಡುತ್ತಂತೆ’ ಎಂದು ಒಂದೇ ಉಸಿರಿಗೆ ಹೇಳಿದ. ಆತನನ್ನೆ ತಿನ್ನುವಂತೆ ನೊಡಿದ ಹೆಡ್ಮಿಸ್ ‘ನೋಡಿ ಅನಿತ. ಎರಡು ತಿಂಗಳಿನಿಂದ ಫೀಸ್ ಕಟ್ಟಿಲ್ಲ. ಕೇಳಿದ್ರೆ ಇವತ್ತಿಷ್ಟು ನಾಳೆಯಿಷ್ಟು ಅಂತಾನೆ. ಫೀಸ್ ಕಟ್ಟಾಕಾಗದ್ಮೇಲೆ ಏಕೆ ಪ್ರವೈಟ್ ಸ್ಕೊಲಿಗೆ ಬಂದು ಒದ್ದಾಡಬೇಕು’ ಅಂದರು. ಹೆಡ್ಮಿಸ್ಸಿನ ಮಾತಿಗೆ ಏನನ್ನೂ ಹೇಳದ ಅನಿತ ಬಸವನ ಕಡೆಗೆ ತಿರುಗಿ ‘ಎಲ್ಲೊ ಆ ದುಡ್ಡು ಎಷ್ಟಿದೆ ಕೊಡು’ ಎಂದರು. ಬಸವ ಕೊಟ್ಟ ನೋಟುಗಳನ್ನು ಎಣಿಸಿ ನೋಡುವಾಗ ನೆನ್ನೆ ತಾವು ಕೊಟ್ಟ ಐದು ರುಪಾಯಿ ನೋಟು ಅಲ್ಲಿದ್ದುದನ್ನು ಗಮನಿಸಿದ ಅನಿತ ಮಿಸ್ ಹೆಡ್ಮಿಸ್ಸಿನ ಕಡೆ ತಿರುಗಿ ‘ನೋಡಿ ಮೇಡಂ, ನೆನ್ನೆ ಇವ್ನು ಹೊಟ್ಟೆಗೇನು ತಿನ್ನದೆ ಹಾಗೇ ಸ್ಕೂಲಿಗೆ ಬಂದಿದ್ದ. ನಾನೆ ಐದು ರುಪಾಯಿ ಕೊಟ್ಟು ಏನಾದ್ರು ತಿನ್ನು ಅಂದಿದ್ದೆ. ನೋಡಿ ಇಲ್ಲಿ. ಇದೇ ನೋಟು. ಅದನ್ನು ಖರ್ಚು ಮಾಡದೆ ಹೇಗಾದ್ರು ಮಾಡಿ ಫೀಸು ಕಟ್ಟಬೇಕು ಅಂತ ಹೇಗೊ ಇದ್ದುದ್ರಲ್ಲಿ ಅಡ್ಜಸ್ಟ್ ಮಾಡಿ ಎಂಬತ್ತು ರುಪಾಯಿ ಕೊಟ್ಟು ಕಳ್ಸಿದಾರೆ ಅವರ ತಾಯಿ. ಏನೊ ಬಡತನ. ಅದ್ರಲ್ಲೂ ಮಗನ್ನ ಓದಸ್ಬೇಕು ಅನ್ನೊ ಆಸೆಯಿಂದ ಬಸ್ಸ್ಟ್ಯಾಂಡಲ್ಲಿ ಮೂಟೆ ಹತ್ತು, ಬೀಡಿ ಕಟ್ಟಿ ಇವನ ತಂದೆ ತಾಯಿ ಸ್ಕೊಲಿಗೆ ಕಳ್ಸಿದಾರೆ. ನಿಮ್ಮಂತವರೆ ಹೀಗೆ ಮಕ್ಳನ್ನ ಡಿಸಪಾಯಿಂಟ್ಮೆಂಟ್ ಮಾಡಿದ್ರೆ ಹೇಗೆ’ ಎಂದವರೆ ಬರಬರನೆ ಹೊರಗೆ ಹೋದರು. ಅನಿತ ಮೇಡಂ ಹೇಳೊ ಮಾತುಗಳನ್ನೇ ಕೇಳುತ್ತಿದ್ದ ಬಸವನಿಗೆ ಅವರು ಹೋದ ನಂತರ ಏನು ಮಾಡಬೇಕೆಂದು ತಿಳಿಯಲಿಲ್ಲ. ಹಾಗೆ ಹೆಡ್ಮಿಸ್ಸಿನ ಕಡೆಗೆ ನೋಡುವುದಕ್ಕೂ ಭಯವಾಯಿತು. ಇಲ್ಲೇ ನಿಲ್ಲಲೋ ಹೊರಗೆ ಓಡಲೋ ಎಂದು ಒಂದು ಕ್ಷಣ ಗೊಂದಲಕ್ಕೀಡಾದ. ಅಷ್ಟರಲ್ಲಿ ಮತ್ತೆ ಅಲ್ಲಿಗೆ ಬಂದ ಅನಿತ ಮಿಸ್ಸು ಹೆಡ್ಮಿಸ್ಸಿಗೆ ‘ತಗೊಳ್ಳಿ ಮೇಡಂ. ನೂರೈದು ರುಪಾಯಿಯಿದೆ. ಬಸವನ ಫೀಸು’ ಎಂದು ಹೇಳಿ, ಬಸವನ ಕೈಹಿಡಿದು ಹೊರಬಂದರು.
* * * * * * * * * * * * * * * * *
ಮದ್ಯಾಹ್ನ ಕಡೇ ಬೆಲ್ಲಾಗುವುದನ್ನೇ ಕಾಯುತ್ತಿದ್ದ ಬಸವ ಬಿಟ್ಟ ಬಾಣದಂತೆ ರೊಯ್ಯನೆ ಮನೆಯ ಕಡೆಗೆ ಓಡಿದ. ಮನೆಯಲ್ಲಿ ಅವ್ವ ಬೀಡಿ ಕಟ್ಟುತ್ತಿದ್ದರೆ, ಪುಟ್ಟಿ ಅವ್ವನ ಹೆಗಲಿಗೆ ಹೊರಗಿ ದೂರಿ ತೂಗಿಕೊಳ್ಳುತ್ತಿದ್ದಳು. ಬಂದವನೆ ಬ್ಯಾಗನ್ನು ಮೂಲೆಗೆಸೆದು, ‘ಅವ್ವ ಅವ್ವ ಎಲ್ಲಾ ಫೀಸುನ್ನು ಅನಿತ ಮಿಸ್ಸೆ ಕಟ್ಟಿದ್ರು. ಇಪ್ಪತ್ತೈದ್ರುಪಾಯಿನ ಕೊಡೋದು ಬ್ಯಾಡವಂತೆ. ಇನ್ಮೇಲೆ ನನ್ನ ಎಲ್ಲ ಫೀಸು ಅವರೆ ಕಟ್ಟಿ ಅವರೆ ಓದುಸ್ತಾರಂತೆ. ಅನಿತ ಮಿಸ್ಸಿನ ಗಂಡನೂ ಸ್ಕೂಲಿನ ಹತ್ರ ಬಂದಿದ್ರು. ಅವ್ರು ನಾವೇ ಒದುಸ್ತೀವಿ ಚೆನ್ನಾಗಿ ಓದ್ಬೇಕು ಅಂದ್ರು’ ಎಂದು ಒಂದೇ ಉಸಿರಿನಲ್ಲಿ ಹೇಳಿಬಿಟ್ಟ. ಕಟ್ಟುತ್ತಿದ್ದ ಬೀಡಿಯನ್ನು ಪಕ್ಕಕ್ಕಿರಿಸಿ ಬಸವನನ್ನು ಬರಸೆಳೆದು ಅಪ್ಪಿಕೊಂಡ ಅವ್ವ ‘ಆ ನನ್ನ ತಾಯಿ ಹೊಟ್ಟೆ ತಣ್ಣಗಿರ್ಲಪ್ಪ. ನನ್ಕೈಲಿ ಎಷ್ಟಾಗುತ್ತೋ ಅಷ್ಟುನ್ನ ನಾನು ಮಾಡ್ತಿನಿ. ನೀನು ಮಾತ್ರ ಚನ್ನಾಗಿ ಓದಪ್ಪ’ ಎಂದು ಕಣ್ಣೀರನ್ನೊರೆಸಿಕೊಂಡಳು. ಬಳಿಗೆ ಬಂದ ಪುಟ್ಟಿಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಳ್ಳುತ್ತ ಬಸವ ತನ್ನ ಅವ್ವನಿಗೆ ‘ ಅವ್ವ. ಪುಟ್ಟಿಗೆ ಅನಿತ ಅಂತಲೆ ಹೆಸರಿಡುವ. ಇವ್ಳು ಅವ್ರ ಹಾಗೆ ಚನ್ನಾಗಿ ಓದಿ ಟೀಚರ್ ಆಗ್ಬೇಕು. ಅವ್ರ ತರ ದೇವ್ರಾಗ್ಬೇಕು. ಮಕ್ಕಳ ಮನಸ್ಸಿನಲ್ಲಿರೊ ದೇವ್ರನ್ನು ಕಾಣತರ ಆಗ್ಬೇಕು. ಅಲ್ವೇನವ್ವ’ ಎಂದು ತಂಗಿಯನ್ನು ಮುದ್ದಿಸಿದ. ‘ಹಾಗೆ ಆಗ್ಲಪ್ಪ. ಪುಟ್ಟಿ ಇವೊತ್ತಿಂದ ಅನಿತ’ ಎಂದು ಆಕೆಯೂ ಮಗಳನ್ನು ಮುದ್ದುಸಿದಳು. ಮದ್ಯಾಹ್ನದ ಊಟದ ವಿಷಯ ಅವರಾರ ಗಮನಕ್ಕೂ ಬರಲೇ ಇಲ್ಲ.
* * * * * * * * * * * *
15 comments:
ಸರ್,
ಶಿಕ್ಷರ ಮಹತ್ವನ್ನು ಸೊಗಸಾಗಿ ತಿಳಿಸಿದೆ.
ಉತ್ತಮ ಬರಹ ಮನತಟ್ಟುವ೦ತೆ ಇದೆ .
ಎಲ್ಲ ಮಿಸ್ ಗಳು ಅನಿತ ಮಿಸ್ ತರ ಇದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ? ಓದುತ್ತಾ ಇದ್ದಂತೆ ನನ್ನ ಕಣ್ಣಲ್ಲಿ ನೀರು ಬಂತು. ಇದು ನಿಜದ ಕಥೆಯೋ ಇಲ್ಲ ಕಾಲ್ಪನಿಕವೋ??
ನಮ್ಮ ನಿಮ್ಮ ಬದುಕಿನ ಅವಿಭಾಜ್ಯ ಅಂಗವಾದ ಗುರುಗಳಿಗೆಲ್ಲ ನಮನ!!
ಸಾರ್, ಅದ್ಭುತವಾದ ಕಥಾಶೈಲಿ. ಒ೦ದೇ ಉಸಿರಿಗೆ ಓದುತ್ತಾ ಹೋಗುವ ಹಾಗಿದೆ. ಅನಿತಾರ ಪಾತ್ರ ಚೆನ್ನಾಗಿ ಮುಡಿದೆ. ಶಿಕ್ಷಕರ ದಿನಾಚರಣೆಗೊ೦ದು ಅರ್ಥಪೂರ್ಣ ಕಥೆ. ಓದುಗರಲ್ಲಿ ಮಾನವೀಯ ಕಾಳಜಿ ಹುಟ್ಟು ಹಾಕುವಲ್ಲಿ ಕತೆ ಮಹತ್ತರ ಯಶಸ್ಸು ಹೊ೦ದುತ್ತದೆ ಎ೦ದು ನನ್ನ ಅನಿಸಿಕೆ ಹಾಗು ಪ್ರಬಲ ನ೦ಬಿಕೆ.ಧನ್ಯವಾದಗಳು.
ನನ್ನ ನೆಚ್ಚಿನ ಬ್ಲಾಗ್ ಬರಹಗಾರ ಸತ್ಯನಾರಾಯಣರವರಿಗೆ ನಮಸ್ಕಾರ. ನಿಮ್ಮ ಕಥೆಯಲ್ಲಿ ಬರುವ ಬಸವನಂತಹವರು ನಮ್ಮಲ್ಲಿ ಅನೇಕರಿದ್ದಾರೆ, ಅವರಿಗೆ ನಾವೇನಾದರೂ ಸಹಾಯ ಮಾಡಿದಲ್ಲಿ ಇದನ್ನು ಬರೆದಿದ್ದೂ,ಓದಿದ್ದೂ ಸಾರ್ಥಕ. ಬಸವನಿಗೆ ಹೆಸರಿಟ್ಟ ಅವನ ಚಿಕ್ಕಪ್ಪ ನಿಜವಾಗಿ ಮಹಾವ್ಯಕ್ತಿ, ಅಂತಿಮವಾಗಿ, ಅನಿತ ಮೇಡಮ್, ವ್ಹಾ!, ಅಂತಹ ಶಿಕ್ಷಕಿ(ಕ)ಯರು ವಿರಳ, ಕಣ್ಮುಂದೆ ಘಟನೆ ನಡೆದ ಅನುಭವ, ಕಣ್ತೆರೆಸುವ ಬರಹ, ಒಂದೆಡೆ ಮರುಕ, ಇನ್ನೊಂದೆಡೆ ನಮ್ಮ ಸಾಮಾಜಿಕ, ಶೈಕ್ಷಣಿಕ ವ್ಯವಸ್ಥೆಯ ಅಣಕ, ಮನಮುಟ್ಟುವಂತಿದೆ ನಿಮ್ಮ ಕಥೆ.
ಡಾ ಸತ್ಯ,
ಓದುತ್ತಾ ಇದ್ರೆ ಕಣ್ಣು ತೇವ ಆಯಿತು...ಈಗ ಬಸವ ಹೇಗಿದ್ದಾರೆ ಅಂತ ಹೇಳಿದಿದ್ರೆ ಚೆನ್ನಾಗಿರುತಿತ್ತು...
ಅನಿತಾ ಮಿಸ್ ಅಂತವರಿಗೆ hats off...
ಸರ್, ಶಿಕ್ಷಕರ ದಿನಕ್ಕೆ ಸೂಕ್ತ ಬರಹ, ಅಭಿನಂದನೆಗಳು
ಡಾ. ಸತ್ಯ ಲೇಖನ ಸಕಾಲಿಕ ಮತ್ತು ಮನಮುಟ್ಟುವಂತಹ ಶೈಲಿಯಲ್ಲಿದೆ ಎನ್ನುವುದು ಗಮನಾರ್ಹ. ಮಾನವೀಯತೆ ಮತ್ತು ಆಪ್ಯಾಯತೆ ಮಕ್ಕಳ ಆ ಎಳೆ ವಯಸ್ಸಿನ ಮೇಲೆ ಬಹಲ ಪರಿಣಾಮವನ್ನು ಬೀರುತ್ತವೆ. ಶಿಕ್ಷಕ/ಶಿಕ್ಷಕಿಯರೆಲ್ಲರಿಗೆ ನಮ್ಮೆಲ್ಲರ ಶುಭಕಾಮನೆಗಳು.
ಶಿಕ್ಷಕರು ಅಂದರೆ ಹೇಗಿರಬೇಕು ಎನ್ನುವದನ್ನು ಸೊಗಸಾಗಿ ತಿಳಿಸಿದ್ದೀರಿ. ಶಿಕ್ಷಕರ ದಿನಾಚರಣೆಯಂದು ಇದು ಶಿಕ್ಷಕರಿಗೇ ಒಂದು ಪಾಠದಂತಿದೆ.
Hello sir,
Nimma baraha tumba chennagide..nija jeevanada chitrana kanna munde bandu hodange aythu..
ಶಿಕ್ಷಕರ ದಿನಾಚರಣೆ ಸ೦ದರ್ಭಕ್ಕೆ ತಕ್ಕ ಲೇಖನ, ಚೆನ್ನಾಗಿದೆ.
ಕಥೆ ಸೊಗಸಾಗಿದೆ. ಚೆ೦ದದ ಬರಹಕ್ಕೆ ಅಭಿನಂದನೆ ಗಳು
ಸೂಪರ್..
ಸರ್, ನಿಮ್ಮ ಕಥೆ ತುಂಬಾ ಚೆನ್ನಾಗಿದೆ. ಅನಿತಾ ಮಿಸ್ ತುಂಬಾ ಒಳ್ಳೆಯವರು.... ನಿಮ್ಮ ಜ್ಞಾನ ಭಂಡಾರ ತುಂಬಾ ಅಘಾದವಾಗಿದೆ ಸರ್....ನೀವು ಬರಿತ ಇರಿ .....ನಾವು ಓದುತ್ತಾ ಇರುತ್ತೇವೆ....
ಲೇಖನ ಮನತಟ್ಟಿತು!! ಅನಿತಾ ಮಿಸ್ ತರಹದವ್ರು ಈಗ ನಿಜವಾಗ್ಲೂ ಸಿಗ್ತಾರಾ?
ನಿಮ್ಮ ಶಿಕ್ಷಕರ ಕುರಿತು ಕತೆ ತುಂಬ ಚೆನ್ನಾಗಿದೆ. ಇದನ್ನು ಪ್ರಾಥಮಿಕ ಶಾಲೆಯ ಪಠ್ಯ ಕ್ರಮದಲ್ಲಿ ಸೇರಿಸಿ.
Post a Comment