Monday, October 03, 2011

ಕಾಜಾಣ = ಇದೊಂದು ಜಾತಿಯ ಕ್ರಿಮಿ!

’ಮುಂಗಾರು’ ಕವಿತೆ ರಚಿತವಾದ ಕಾಲದಲ್ಲೇ, ಕುಪ್ಪಳಿಯ ಉಪ್ಪರಿಗೆಯಲ್ಲೇ ಲಾಂದ್ರದ ಬೆಳಕಿನಲ್ಲಿ ರಚಿತವಾದ ಕವಿತೆ ’ಕಾಜಾಣ’. ಕವಿತೆಗಿರುವ ಅಡಿಟಿಪ್ಪಣಿಯಲ್ಲಿ ’ಕುಪ್ಪಳಿಯ ಉಪ್ಪರಿಗೆಯಲ್ಲಿ ರಾತ್ರಿಯ ಕಗ್ಗತ್ತಲೆ ಕವಿದು ಮುಂಗಾರುಮಳೆ ಭೋರ್ಗರೆಯುತ್ತಿತ್ತು ಈ ಕವನ ರಚಿಸುತ್ತಿದ್ದಾಗ. ೧೮ನೆಯ ಪಂಕ್ತಿ ಮುಗಿಯುತ್ತಿದ್ದಾಗ ಒಂದು ಕೋಗಿಲೆ ದನಿ ಏರುಲಿಯಾಗಿ ಕೇಳಿಸಿತು. ಆ ಹೊತ್ತಲ್ಲದ ಹೊತ್ತಿನಲ್ಲಿ, ಅದರಲ್ಲಿಯೂ ಮುಂಗಾರು ಮಳೆ ಮುಸಲಧಾರೆಯಾಗಿ ಸುರಿಯುತ್ತಿದ್ದ ಅತ್ಯಂತ ಅವೇಳೆಯಲ್ಲಿ, ಕಾಗೆಗಳ ವಿರಳತೆಯಿಂದಾಗಿ ಕೋಗಿಲೆಗಳೆ ಅಪೂರ್ವವಾಗಿದ್ದ ಅಲ್ಲಿ, ಈ ಕೋಗಿಲೆಯ ದನಿ ಎಲ್ಲಿಂದ ಬಂದಿತೋ ಅಚ್ಚರಿ! ಮುಂದೆ ಕಂಸದೊಳಗಿರುವ ೨೮ ಪಂಕ್ತಿಗಳು ಆ ಕೋಗಿಲೆಯನ್ನು ಸಂಬೋಧಿಸಿ ಬರೆದ ಪಂಕ್ತಿಗಳಾಗಿವೆ.’ ಎಂದು ಬರೆದಿದ್ದಾರೆ.
ಇಂದು ಕಾಜಾಣ ಅಪರಿಚಿತ ಹಕ್ಕಿಯೇನಲ್ಲ. ಕುವೆಂಪು ಸಾಹಿತ್ಯ ಓದಿದವರಿಗೂ, ಉದಯರವಿ ಪ್ರಕಾಶನದ ಪುಸ್ತಕಗಳನ್ನು ನೋಡಿದವರಿಗೂ ಈ ಪಕ್ಷಿ ಚಿರಪರಿಚಿತ. ಕಾಜಾಣ ಪಕ್ಷಿಯ ಬಗ್ಗೆ ಕವಿ ಕುವೆಂಪು ಅವರ ಗ್ರಹಿಕೆಯನ್ನು ಮೊದಲು ತಿಳಿಯೋಣ.
ಆಗ ಅದೊಂದು ಅಜ್ಞಾತ ಪಕ್ಷಿ. ಹಳ್ಳಿಗರು ಅದನ್ನು ಏಕೆ ’ಕಾಜಾಣ’ ಎಂದು ಕರೆಯುತ್ತಾರೋ ಗೊತ್ತಿಲ್ಲ. ಕಿಟ್ಟೆಲ್ ನಿಘಂಟಿನಲ್ಲಿ ಆ ಹೆಸರಿಲ್ಲ. ನಾನೊಮ್ಮೆ ಭಾಸನ ಒಂದು ನಾಟಕ (ಸ್ವಪ್ನವಾಸವದತ್ತ ಇರಬಹುದೊ ಏನೊ) ಓದುತ್ತಿರುವಾಗ ’ಖಂಜನ ಪಕ್ಷ್ಮ ಕವಾಟ’ ಎಂಬ ಸಮಾಸ ಪದವನ್ನು ಎದುರುಗೊಂಡೆ. ನಿಘಂಟಿನಲ್ಲಿ ’ಖಂಜನ’ಕ್ಕೆ ’ಕಾಡಿಗೆ ಬಣ್ಣದ ಹಕ್ಕಿ’ ಎಂದು ಅರ್ಥವಿತ್ತು. ಅಂದರೆ ಕಾಡಿಗೆ ಹಚ್ಚಿದ ಹೆಣ್ಣಿನ ಕಣ್ಣಿನ ರೆಪ್ಪೆಗಳ ಕಣ್ಣಿಗೆ ಬಾಗಿಲುಗಳಾಗಿ ಅವು ಮುಚ್ಚಿ ತೆರೆಯುತ್ತವೆ ಎಂಬ ಭಾವ. ಆಗ ನನಗೆ ಬಹುಶಃ ಖಂಜನವೆ ಕಾಜಾಣವಾಗಿರಬಹುದೆ ಎಂದೆನ್ನಿಸಿತು. ಏಕೆಂದರೆ ಕಾಜಾಣದ ಬಣ್ಣ ಅಚ್ಚ ಮಿರುಗುಗಪ್ಪು. ಮತ್ತೊಮ್ಮೆ, ವಾಲ್ಮೀಕಿ ರಾಮಾಯಣದಲ್ಲಿಯೂ ಈ ಖಂಜನಪಕ್ಷಿಯನ್ನು ಎದುರುಗೊಂಡೆ. ಆದ್ದರಿಂದ ಬಹುಶಃ ಖಂಜನದಿಂದಲೆ ಕಾಜಾಣ ಬಂದಿರಬಹುದೆಂದು ಊಹಿಸಿದೆ. ಮತ್ತೆ ನನ್ನ ಕನ್ನಡ ಹೆಮ್ಮೆ ಎಚ್ಚತ್ತು ಕಾಜಾಣದಿಂದಲೆ ಏಕೆ ಬಂದಿರಬಾರದು ’ಖಂಜನ’ ಎಂದು ತರ್ಕ್ಕಿಸಿದ್ದುಂಟು. ಇರಲಿ, ಹೆಸರು ಎಲ್ಲಿಂದಲೆ ಬರಲಿ, ಈಗಂತೂ ಕನ್ನಡ ಸಾಹಿತ್ಯದಲ್ಲಿ ಕಾಜಾಣಕ್ಕೆ ಭದ್ರಸ್ಥಾನ ದೊರಕಿದೆ! ಕಾಜಾಣಕ್ಕೆ ಕಾಕಳಿಚಿಟ್ಟೆ ಎಂಬ ಹೆಸರೂ ಇದೆ. ಕವಿತೆ ಹೀಗೆ ಪ್ರಾರಂಭವಾಗುತ್ತದೆ.
ಕೋಗಿಲೆಯಂತೆಯೆ ಬಣ್ಣವು ನಿನಗಿದೆ.
ಕೋಗಿಲೆಯಿಂಚರಕಿಮ್ಮಡಿಯಿಂಚರ!
ಕೋಗಿಲೆಗೆಲ್ಲಿದೆ ನಿನಗಿರುವಂತಹ
ಪುಕ್ಕದ ನೇಲುವ ಗರಿಯೆರಡು?
ಕೋಗಿಲೆಯಿನಿದನಿಯೊಂದೇ ಆಗಿದೆ
ನಿನ್ನದು ಬಹುವಿಧವಾಗಿಹುದು!
(ಕೋಗಿಲೆ ಸಾಮಾನ್ಯವಾಗಿ ಕುಹೂ ಕುಹೂ ಎಂದು ಕೂಗುತ್ತದೆ. ಕಾಜಾಣದ ಆಲಾಪನೆ ತರತರವಾಗಿರುತ್ತದೆ. ’ಉದಯಗಗನದಲಿ ಅರುಣನ ಛಾಯೆ’ ಎಂದು ಪ್ರಾರಂಭವಾಗುವ ನನ್ನ ಇನ್ನೊಂದು ಗೀತೆಯಲ್ಲಿ ಅದರ ದಿವ್ಯತೆ ವರ್ಣಿತವಾಗಿದೆ. ಅಲ್ಲದೆ ಇತ್ತೀಚಿಗೆ ’ಚದುರಂಗ’ರಿಂದ ಚಿತ್ರಿತವಾಗಿರುವ ’ರಾಷ್ಟ್ರಕವಿ ಕುವೆಂಪು’ ಸಾಕ್ಷ್ಯಚಿತ್ರದಲ್ಲಿ ಕಾಜಾಣದ ಉಲಿಹವನ್ನು ಹಿಡಿದಿಡುವ ಪ್ರಯತ್ನ ತಕ್ಕಮಟ್ಟಿಗೆ ಸಫಲವಾಗಿದೆ)
ಕೋಗಿಲೆಯಂದದಿ ಹೆರವರ ಮನೆಯಲಿ
ಹುಟ್ಟಿದ ತಬ್ಬಲಿ ನೀನಲ್ಲ!
ಕೋಗಿಲೆಯಂದದಿ ಹೊಲಸನು ತಿನ್ನುವ
ಕಾಗೆಗೆ ನೀ ಋಣಿಯಾಗಿಲ್ಲ!
(ಅದಂತೂ ಎಲ್ಲರಿಗೂ ಗೊತ್ತಿರುವ ವಿಷಯ. ಕಾಗೆಯ ಗೂಡಿನಲ್ಲಿರುವ ಅದರ ಮೊಟ್ಟೆಯನ್ನು ತಿಂದುಹಾಕಿಯೋ ಹೊರಗೆ ಎಸೆದೋ ಕೋಗಿಲೆ ತನ್ನ ಮೊಟ್ಟೆಯನ್ನು ಅಲ್ಲಿ ಇಡುತ್ತದೆ. ಬೆಪ್ಪುಕಾಗೆ ಕಾವು ಕೂತು ಮರಿ ಮಾಡಿ ತುತ್ತುಕೊಟ್ಟು ಸಾಕುತ್ತದೆ. ಆ ತುತ್ತಿನಲ್ಲಿ ಇಲಿ ಹೆಗ್ಗಣ ಹಲ್ಲಿ ಹಾವು ಮಾಂಸ ಏನುಬೇಕಾದರೂ ಇರಬಹುದು. ಸ್ವಲ್ಪವೂ ಬ್ರಾಹ್ಮಣಿಕೆ ಇಲ್ಲ!)
ಶೂದ್ರನೆ ಹುಟ್ಟಿಸಿ, ಶೂದ್ರನೆ ಬೆಳೆಯಿಸಿ,
ಶೂದ್ರನು ಕೊಟ್ಟಾಹಾರವ ತಿಂದಿಹ
ಕೋಗಿಲೆಗೆಲ್ಲಿಯ ದ್ವಿಜತನವು?
(ಇಲ್ಲಿ ’ದ್ವಿಜ’ ಪದದ ಎರಡು ಅರ್ಥಗಳಲ್ಲಿಯೂ ಹೊಮ್ಮುತ್ತದೆ ಧ್ವನಿ!
ಕಾಗೆಯ ಮರಿಗಳ ಸಂಗದಿ ಬಳೆದಿಹ
ಆ ಪರಪುಟ್ಟನು ನಿನಗೆಣೆಯೆ?
ಬನದೆಲೆವನೆಯಲಿ ರಿಸಿಕುವರರವೊಲು
ಜನಿಸಿದ ಪರಿಶುದ್ಧಾತ್ಮನು ನೀನಹೆ;
ಸಾಟಿಯೆ ನಿನಗಾ ದೇಸಿಗನು?
[ಈ ಪಂಕ್ತಿ ಮುಗಿದಾಗ ರಾತ್ರಿ ೮ ಗಂಟೆಯಾಗಿತ್ತು. ನನ್ನ ಹಸ್ತಪ್ರತಿಯ ಅಂಚಿನಲ್ಲಿ ’ರಾತ್ರಿ ೮ ಗಂಟೆ. ಕೋಗಿಲೆ ಕೂಗಿತು!’ ಎಂದು ಬರೆದಿದೆ. ರಾತ್ರಿ, ಘನಘೋರ ಮುಂಗಾರಿನ ಕತ್ತಲೆ. ಮಳೆ ಭೋರೆಂದು ಸುರಿಯುತ್ತಿದೆ. ಆ ಸದ್ದನ್ನೆಲ್ಲ ಮೀರಿ ಮುಳುಗಿಸುವಂತೆ ಒಂದು ಕೋಗಿಲೆ, ಎಲ್ಲಿಂದ ಬಂತೋ ಎಲ್ಲಿತೋ ದೇವರೇ ಬಲ್ಲ, ಸುಮ್ಮನೆ ಕೂಗತೊಡಗಿತು! ’ನಾನು ದಿಗಿಲುಗೊಂಡಂತೆ ಎಚ್ಚತ್ತೆ, ನನ್ನ ಕಾವ್ಯ ಸಮಾಧಿಯಿಂದ! ಕೂಗು ನಿಂತಿತು. ನಾನು ನಿಜವಾಗಿಯೂ ಕೋಗಿಲೆ ಕೂಗಿತೋ ಅಥವಾ ನನ್ನ ಕಲ್ಪನಾರಾಜ್ಯದಲ್ಲಿ ಹಾಗೆ ಕೂಗಿದಂತಾಯಿತೋ ಎಂದು ಆಲೋಚಿಸುತ್ತಿದ್ದಂತೆ ಮತ್ತೆ ಸ್ಪಷ್ಟವಾಗಿ ಆಶ್ಚರ‍್ಯಕರವಾಗಿ ನೀಳಿಂಚರದಿಂದ ಕೂಗಿ ಕೂಗಿ ನಿಲ್ಲಿಸಿಬಿಟ್ಟಿತು!]
ಮುಂದಿನ ೨೮ ಸಾಲುಗಳು, ಕವಿ ಕೋಗಿಲೆಯ ಕ್ಷಮೆ ಕೇಳುತ್ತಿರುವಂತೆಯೂ, ಪರರ ಹೊಗಳಿಕೆಯನ್ನು ಸಹಿದ ಅದರ ಮಾತ್ಸರ‍್ಯ ಅದಕ್ಕೆ ತಕ್ಕುದಲ್ಲವೆಂಬಂತೆಯೂ ರಚಿತವಾದುಗಳಾಗಿವೆ.
[ಮನ್ನಿಸು ಕೋಗಿಲೆ! ಕೂಗುವೆ ಏತಕೆ?
ಹೆರರನು ಹೊಗಳಲು ನಿನ್ನನು ಬೈದೆನೆ?
ಮನ್ನಿಸು ಕವಿಯಪರಾಧವನು!
ನಿಶೆಯಲ್ಲೇತಕೆ ಕೂಗುತಿಹೆ?
ಬೆಳಗುವ ತಿಂಗಳ ಬೆಳಕಿಲ್ಲ!
ತಿರೆಯನು ಸಿಂಗರಿಸೈತಹ ಪೆಂಪಿನ
ಸುಗ್ಗಿಯು ಬಂದಿಹ ಕನಸಾಯ್ತೆ?
ಹಿಂದಿನ ಹರುಷದ ನೆನಸಾಯ್ತೆ?
ಹೆಮ್ಮೆಯ ಮಧುನೃಪ ಬಂದಿಹನೆಂದು?
ಚೈತ್ರನು ಶಿಶಿರನ ಕೊಂದಿಹನೆಂದು?
ಸಂತಸವೇ ಸೆರೆ ತೊಲಗಿತು ಎಂದು?
ಸೊಕ್ಕೇ ಬಿಡುಗಡೆ ದೊರಕಿತು ಎಂದು?
ಇತರರ ಸೊಬಗನು ಬಣ್ಣಿಸಲಿನಿಯನು
ಕರುಬುವ ಹೆಣ್ಣಿನ ತೆರದಿಂದೆ,
ಕಾಜಾಣವ ನಾ ಬಣ್ಣಿಸುತ್ತಿದ್ದರೆ
ಮಚ್ಚರವೇತಕೆ ನಿನಗೆಲೆ ಹಕ್ಕಿ?
ಗುಣವಿರುವೆಡೆ ಮತ್ಸರವೇಕೆ?
ಹಿಂದೆಯೆ ನಿನ್ನನು ಹೊಗಳಿಹೆನಲ್ಲಾ;
ಸಾಲದೆ ಮಾಡಿಹ ಹೊಗಳಿಕೆಯೆಲ್ಲಾ?
ರಾತ್ರಿಯ ಕಾಲದೊಳೂಳುವುದೇತೆಕೆ?
ಗೂಬೆಯ ಜಾತಿಯೆ ನೀನೇನು?
ಕಬ್ಬಿಗರೆಲ್ಲರು ಹೊಗಳಿಹರೆಂದು
ಹೆಮ್ಮೆಯು ತಲೆಗೇರಿರುವುದೆ ಇಂದು?
ಮುದ್ದಿನ ಕೋಗಿಲೆ, ನೆಚ್ಚಿನ ಕೋಗಿಲೆ,
ಕಬ್ಬಿಗರೊಲ್ಮೆಯ ಕೋಗಿಲೆಯೆ!
ಹೊಗಳಿದೆನಲ್ಲವೆ? ಸುಮ್ಮನಿರು!
ಕಾಜಾಣವ ನಾ ಬಣ್ಣಿಪೆ ಕೇಳು!
ಪರರೊಳ್ಜಸದಲಿ ಸಂತಸ ತಾಳು!]
ಇಲ್ಲಿಂದ ಮುಂದಕ್ಕೆ ಮತ್ತೆ ಕಾಜಾಣ ಕವಿತೆ ಮುಂದುವರೆದಿದೆ.
ಕಾಜಾಣವೆ, ಕೋಗಿಲೆಗಿರುವಂದದಿ
ಮಾಗಿಯ ಬಂಧನ ನಿನಗಿಲ್ಲ!
ಸೆರೆಬಿಡಿಸಲು ಮಧು ಬರುವನು ಎಂಬಾ
ಬಯಕೆಯ ದಾಸ್ಯವು ನಿನಗಿಲ್ಲ!
ನಿತ್ಯ ವಿಮುಕ್ತನೆ ನಿಜ ನೀನು!
ನೀನಿಂತಿರುತಿರೆ, ಕಬ್ಬಿಗರಂದು,
ಕಬ್ಬಿಗರೆನ್ನಿಸಿಕೊಳ್ಳುವರಿಂದು,
ಕೋಗಿಲೆ! ಕೋಗಿಲೆ! ಕೋಗಿಲೆ ಎಂದು
ಕೂಗುವರೇಕೋ ನಾನರಿಯೆ!
ನಾನೂ ಕೂಗಿದೆ ನಿನ್ನನು ಮರೆತು;
ಮರೆಯೆನು ನಾನಿನ್ನೆಂದೆಂದೂ!
ಬನಗಳಲೊರ‍್ವನೆ ಕುಳಿತಿರುವಾಗ,
ಕವಿತೆಯ ಬರೆದುಲಿಯುತಲಿರುವಾಗ,
ಮರಗಳ ನೆತ್ತಿಯನೇರುತ ನಾನು
ಸುತ್ತಣ ಸೊಬಗನು ಬಣ್ಣಿಸುವಾಗ,
ನಿನ್ನಿಂಚರವನು ಕೇಳಿಹೆನು,
ಹಿಗ್ಗುತ ಮುದವನು ತಾಳಿಹೆನು.
ಪಿಕ ಪಾಡಿದರೇನಾಗುವುದಂತೆಯೆ
ನಿನ್ನಿಂಚರದಿಂದಾಗುವುದು!
ನೀ ಮಲೆನಮಾಡಿನ ಕೋಗಿಲೆಯು!
ಹೆಮ್ಮೆಯನರಿಯದ ಕೋಗಿಲೆ ನೀನು!
ಕೋಗಿಲೆ ಎನೆ ವೈಯಾರದ, ಬೆಡಗಿನ,
ಬಿಂಕದ ಕಾಜಾಣವು ತಾನು!
ಅಂದು ರಾತ್ರಿ ಮುಂಗಾರು ಸಾಕ್ಷಿಯಾಗಿ ಕವಿತೆಯಲ್ಲಿ ಕಾಜಾಣಕ್ಕೆ ಕೊಟ್ಟ ಮಾತು ’ಮರೆಯೆನು ನಾನಿನ್ನೆಂದೆಂದೂ!’ ಎಂಬುದನ್ನು ಕವಿ ಮರೆಯಲಿಲ್ಲ. ಮುಂದೆ ’ಉದಯರವಿ’ ಪ್ರಕಾಶನ ಸಂಸ್ಥೆ ಹುಟ್ಟಿಕೊಂಡಾಗ ಅದರ ಮುದ್ರಿಕೆಯಲ್ಲಿ ಜೋಡಿ ಕಾಜಾಣಗಳ ಚಿತ್ರಗಳನ್ನು ಬಳಸಿಕೊಳ್ಳಲಾಯಿತು. ಇಂದಿಗೂ ಜೋಡಿ ಕಾಜಾಣದ ಮುದ್ರೆಯೇ ಉದಯರವಿ ಪ್ರಕಾಶನಕ್ಕೆ ಇದೆ!
ಕವಿತೆಯ ಸ್ವಾರಸ್ಯವನ್ನಂತೂ ನೋಡಿಯಾಯಿತು. ಇನ್ನು ಆ ಕವನದ ಚರಿತ್ರೆಯ ಸ್ವಾರಸ್ಯವನ್ನು ನೋಡದೆ ಇರಲಾದೀತೆ? ಈ ಕವಿತೆ ಮೊದಲು ’ಪ್ರಬುದ್ಧ ಕರ್ನಾಟಕ’ದಲ್ಲಿ ಪ್ರಕಟವಾಯಿತು. ಸ್ವತಃ ಕವಿಯೇ ಅಲ್ಲಲ್ಲಿ ವಾಚನ ಮಾಡಿಯೂ ಪ್ರಸಿದ್ಧವಾಯಿತು. ಮುಂದೆ ಅದು ಹೈಸ್ಕೂಲಿನ ಪಠ್ಯಪುಸ್ತಕಕ್ಕೆ ಸೇರಿಬಿಟ್ಟಿತು. ಆಗ ಶುರುವಾಯಿತು ಅದಕ್ಕೆ ಜಾತಿಭ್ರಾಂತರ ಕೀಟಲೆ. ಅದನ್ನು ಕವಿ ’ಶ್ರಾದ್ಧ’ ಎಂದು ಕರೆದಿದ್ದಾರೆ. ಆಗ ಪಾಠ ಮಾಡುತ್ತಿದ್ದವರಲ್ಲಿ ಹೆಚ್ಚಿನವರು ಮಡಿವಂತರಾದ ಪಂಡಿತರು. ಅವರಿಗೆ ಹೊಸ ಛಂದಸ್ಸಿನ ಹೊಸ ಶೈಲಿಯ ಆಧುನಿಕ ಕವಿತೆಗಳೆಂದರೆ ಅಲರ್ಜಿ. ಅವುಗಳನ್ನು ಪಾಠ ಮಾಡುವಾಗಲೇ ಬರೆದವನನ್ನು ಹೀಯಾಳಿಸಿ ತೆಗಳುವ ಕಾರ್ಯ ನಡೆಯುತ್ತಿತ್ತು. ಇನ್ನು ಬರೆದಿದ್ದವನು ಶೂದ್ರನೆಂದು ಗೊತ್ತಾದರಂತೂ ಕೇಳುವಂತೆಯೇ ಇಲ್ಲ. ಹೊರಗಡೆ ಆ ಕವಿತೆಯಲ್ಲಿ ಬ್ರಾಹ್ಮಣರನ್ನು ಕುರಿತು ಮೂದಲಿಸಿ ವಿಡಂಬನೆ ಮಾಡಿದ್ದಾರೆ ಎಂಬ ಹುಯಿಲೆದ್ದಿತು. ಆ ಸಂದರ್ಭವನ್ನು ಕುರಿತು ಕವಿ ಹೇಳುವುದು ಹೀಗೆ. ’ಆ ವಿಚಾರವಾಗಿ ನಾನು ಸಂಪೂರ್ಣ ಮುಗ್ಧನಾಗಿದ್ದೆ. ನನಗೆ ಆಗಿನ್ನೂ ಈ ಬ್ರಾಹ್ಮಣ ಬ್ರಾಹ್ಮಣೇತರ ಪಿಡುಗು ಇದೆ ಎಂಬುದೇ ತಿಳಿದಿರಲಿಲ್ಲ. ನಾನು ಆಶ್ರಮದಲ್ಲಿದ್ದು ನನಗೆ ಜಾತೀಯತೆಯ ಅಸ್ತಿತ್ವವೆ ಪ್ರಜ್ಞಾಗೋಚರವಾಗುವಂತಿರಲಿಲ್ಲ. ಏನಿದ್ದರೂ ನನ್ನ ಆಲೋಚನೆಗಳೂ ಭಾವನೆಗಳೂ ಆಧ್ಯಾತ್ಮಿಕದತ್ತ ಹರಿಯುತ್ತಿದ್ದುವೆ ಹೊರತು ಈ ಲೌಕಿಕದ ಕಚ್ಚಾಟದ ಅರ್ಥವೂ ಆಗುತ್ತಿರಲಿಲ್ಲ.
ಅದು ಕವಿಯ ಗಮನಕ್ಕೆ ಬಂದಿದ್ದು ಸಹ ಹಿರಿಯರಾದ ಮಾಸ್ತಿಯವರಿಂದ! ಅದರ ಬಗ್ಗೆ ಕವಿ ಹೇಳುವುದು ಹೀಗೆ. "ಒಂದು ದಿನ ಆಶ್ರಮಕ್ಕೆ ಬಂದಿದ್ದ ಮಾಸ್ತಿ ವೆಂಕಟೇಶ ಐಯ್ಯಂಗಾರರು ನನ್ನನ್ನು ಕೇಳಿದರು ಹೌದೇನ್ರೀ, ನಿಮ್ಮ ಆ ಕವನ ’ಕಾಜಾಣ’ದಲ್ಲಿ ಬ್ರಾಹ್ಮಣರನ್ನು ಕುರಿತು ಮೂದಲಿಸಿ ವಿಡಂಬನೆ ಮಾಡಿರುವಿರಂತೆ? ಎಂದು! ನಾನು ಕಕ್ಕಾವಿಕ್ಕಿಯಾದೆ. ಅದು ನನ್ನ ತಲೆಗೇ ಹೊಳೆದಿರಲಿಲ್ಲ. ಆದ್ದರಿಂದ ನಕ್ಕುಬಿಟ್ಟು ’ಯಾರು ಹೇಳಿದರು ನಿಮಗೆ? ನನಗೆ ಆ ಭಾವನೆ ತಲೆಯಲ್ಲಿಯೇ ಸುಳಿದಿರಲಿಲ್ಲ.’ ಎಂದೆ. ಅವರು ಹೊರಟು ಹೋದ ಮೇಲೆ, ನೋಡೋಣ ಎಂದುಕೊಂಡು ’ಕಾಜಾಣ’ ಕವನವನ್ನು ತೆಗೆದುಕೊಂಡು ಮತ್ತೆ ಮತ್ತೆ ಓದಿದೆ, ಹೊಸದೃಷ್ಟಿಯಿಂದ, ಅಂದರೆ ಬ್ರಾಹ್ಮಣ ಶೂದ್ರ ಭೇದ ಭಾವನೆಯ ದೃಷ್ಟಿಯಿಂದ. ನನಗೇನಾಯಿತು ಗೊತ್ತೇ? ಆ ದೃಷ್ಟಿಯನ್ನಿಟ್ಟುಕೊಂಡು ಓದಿದರೆ ಅದು ಹಾಗೆಯೆ ತೋರತೊಡಗಿತು: ನಾನು ಅದನ್ನು ರಚಿಸಿದಾಗ ನನಗೆ ಒಂದಿನಿತೂ ಇರದಿದ್ದ ದೃಷ್ಟಿ!"
ಒಟ್ಟಾರೆ, ತಮ್ಮ ಕೆಲವು ಕವಿತೆ ನಾಟಕಗಳಿಗೆ ಕುಹಕಿಗಳಿಂದ ಹತ್ತಿದ ಈ ಜಾತಿಭೇದ ಭಾವನೆಯನ್ನು ಕುರಿತು ನನ್ನ ಅನೇಕ ಕವನಗಳಿಗೂ ನಾಟಕಗಳಿಗೂ ಕೆಲವರು ’ಬ್ರಾಹ್ಮಣ-ಶೂದ್ರ’ ಭೇದ ದೃಷ್ಟಿಯಿಂದಲೇ ವ್ಯಾಖ್ಯಾನ ಮಾಡಿ ಅವುಗಳ ಸಾಹಿತ್ಯ ಮೌಲ್ಯವನ್ನೆ ಕಲುಷಿತಗೊಳಿಸಿರುವುದು ವಿಷಾದದ ವಿಷಯವಾಗಿದೆ: ಜಲಗಾರ, ಶುದ್ರತಪಸ್ವಿಗಳು ಪ್ರಕಟವಾದಗಲೂ ಪ್ರಕಟವಾದದ್ದು ಇಂತಹ ಪ್ರತಿಕ್ರಿಯೆಯೆ! ಎಂದಿದ್ದಾರೆ.
’ಕಾಜಾಣ’ ಕವಿತೆಯ ಬಗ್ಗೆ ಅವರೇ ದಾಖಲಿಸಿರುವ ಒಂದು ಘಟನೆ ಇನ್ನೂ ಸ್ವಾರಸ್ಯಕರವಾಗಿದೆ! ಕಾಜಾಣ ಕವನವನ್ನು ಓದುವ ಎಂತಹ ಶುಂಠನಿಗಾದರೂ ಅದೊಂದು ಪಕ್ಷಿ ಇರಬೇಕು ಎಂಬಷ್ಟಾದರೂ ಅರ್ಥವಾಗುತ್ತದೆ. ಒಮ್ಮೆ ನನ್ನ ಮಿತ್ರರೊಬ್ಬರು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಒಬ್ಬ ಹೈಸ್ಕೂಲು ವಿದ್ಯಾರ್ಥಿ ಎದುರಿಗೆ ಕೂತು ಒಂದು ಪುಸ್ತಕ ಓದುತ್ತಿದ್ದನಂತೆ. ’ಏನಯ್ಯಾ ಓದುತ್ತಿದ್ದೀಯಾ?’ ಎಂದಾಗ ’ಕನ್ನಡ ನೋಟ್ಸ್’ ಎಂದನಂತೆ. ಇವರು ಕುತೂಹಲಕ್ಕೆ ಅದನ್ನು ಈಸಿಕೊಂಡು ಸುಮ್ಮನೆ ಕಣ್ಣುಹಾಯಿಸಿದರಂತೆ. ’ಕಾಜಾಣ’ ಕವನದ ಮೇಲೆಯೂ ನೋಟ್ಸ್ ಇದ್ದದ್ದನ್ನು ನೋಡಿದರಂತೆ. ’ಕಾಜಾಣ = ಇದೊಂದು ಜಾತಿಯ ಕ್ರಿಮಿ!’ ಎಂದು ಪ್ರಾರಂಭಿಸಿದ್ದನಂತೆ ಆ ಬೃಹಸ್ಪತಿ ಪಂಡಿತ!
ಕಾಜಾಣದ ತರತರವಾದ ಆಲಾಪನೆಯ ಕುರಿತು ಹೇಳುವಾಗ ಕವಿ ’ಉದಯಗಗನದಲಿ ಅರುಣನ ಛಾಯೆ’ ಎಂದು ಪ್ರಾರಂಭವಾಗುವ ನನ್ನ ಇನ್ನೊಂದು ಗೀತೆಯಲ್ಲಿ ಅದರ ದಿವ್ಯತೆ ವರ್ಣಿತವಾಗಿದೆ ಎಂದಿದ್ದಾರೆ. ೫-೫-೧೯೩೧ರ ರಚನೆಯಾಗಿರುವ ಆ ಕವಿತೆ ಇಲ್ಲಿದೆ ನೋಡಿ. ಕವಿತೆಯ ಶೀರ್ಷಿಕೆ ’ವನಗಾಯಕ’.
ಉದಯ ಗಗನದಲಿ ಅರುಣನ ಛಾಯೆ
ಜಗದ ಜೀವನಕೆ ಚೇತನವೀಯೆ
ನಿನ್ನಯ ಗಾನದ ಸುಮಧುರ ಮಾಯೆ
ಬನದಿಂದಂಬರಕೇರುವುದು:
ಕೋರಿಕೆಗಳ ಬಾಯಾರುವುದು:
ಪ್ರಭಾತಮೌನವನೆಚ್ಚರ ಮಾಡಿ
ಕಾಡು ನಾಡುಗಳ ತುಂಬಿ ತುಳುಕಾಡಿ
ಜಗನ್ನಿದ್ರೆಗೆ ಜೋಗುಳ ಹಾಡಿ
ಬ್ರಹ್ಮವನೇ ತೂಗಾಡುವುದು;
ಕ್ರಾಂತಿಯ ಶಾಂತಿಯನೂಡುವುದು.
ಓ ವನಗಾಯಕ ವರವಾಗೀಶ,
ನಿನ್ನಾ ಕಾನನ ಕೂಜನ ಪಾಶ
ಕಬ್ಬಿಗನಿಗೆ ಮುಕ್ತಿಯ ಆವೇಶ:
ಸ್ಮರ ಚಾಪಕೆ ನೀ ಸ್ವರಬಾಣ!
ಕೇಳಿದರಲ್ಲದೆ ತಿಳಿಯದು ನಿನ್ನ
ಕಂಠದ ವೈಖರಿ. ತುದಿಯಲಿ ನನ್ನ
ಸಾವಿನ ಬಯಕೆಯು ನಿನ್ನಾ ಗಾನ:
ನಿನಗೆ ನಮೋ ಓ ಕಾಜಾಣ!

3 comments:

ಗೌರಾತೋ said...

Very informative and nice write ups on kuvempu poems... loving them.

Anitha Naresh Manchi said...

sundara baraha

shivaprasad said...

ಮಾಹಿತಿಗೆ ಧನ್ಯವಾದಗಳು ಸರ್