Tuesday, January 07, 2014

ಪೂವಮ್ಮ - ಕುವೆಂಪು ಮತ್ತು ರಾಜರತ್ನಂ ಅವರ ಮನಸ್ಸು ಕದ್ದ ಮುದ್ದುಬಾಲೆ!

ಮಡಿಕೇರಿಯ 1932ರ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಬರೆದಿರುವ ಹಿಂದಿನ ಬರಹದಲ್ಲಿ ಹೀಗೆ ದಾಖಲಾಗಿತ್ತು.
ತಿರುಗಾಟದಲ್ಲಿ 'ಪೂವಮ್ಮ' ಎಂಬ ಬಾಲೆಯನ್ನು ಸಂಧಿಸುತ್ತಾರೆ, ಆ ಬೇಟಿಯ ನಂತರ ಕುವೆಂಪು ಮತ್ತು ರಾಜರತ್ನಂ ಅದೇ ಹೆಸರಿನಲ್ಲಿ ಒಂದೊಂದು ಕವಿತೆ ಬರೆದಿರುತ್ತಾರೆ. ಆ ಕವಿತೆಗಳನ್ನು ಕುರಿತು ಕುವೆಂಪು 'ಪ್ರತ್ಯೇಕವಾಗಿ, ಸ್ವತಂತ್ರವಾಗಿ: ಅವರು ಬರೆಯುತ್ತಾರೆ ಎಂಬುದು ನನಗಾಗಲಿ, ನಾನು ಬರೆಯುತ್ತೇನೆ ಎಂಬುದು ಅವರಿಗಾಗಲಿ ತಿಳಿದಿರಲಿಲ್ಲ. ನಮ್ಮ ಕವನಗಳು ಅಚ್ಚಾದ ಮೇಲೆ ಅದು ಗೊತ್ತಾದದ್ದು. ಅವರದ್ದು ಎಂಡ್ಕುಡ್ಕ ರತ್ನನ ಶೈಲಿಯಲ್ಲಿದೆ. ನನ್ನದು ಸಾಹಿತ್ಯ ಭಾಷೆಯಲ್ಲಿದೆ. ಆದರೂ ಸಾಮ್ಯ ಎಷ್ಟು ಅದ್ಭುತವಾಗಿದೆ? ಕೆಲವು ಉಪಮೆಗಳಂತೂ ಒಂದು ಮತ್ತೊಂದರ ಭಾಷಾಂತರ ಎಂಬಂತಿವೆ' ಎಂದು ಅಭಿಪ್ರಾಯ ದಾಖಲಿಸಿದ್ದಾರೆ.
ಅಂದು ಕುವೆಂಪು ಅವರಿಂದ ರಚಿತವಾದ ಪೂವಮ್ಮ ಕವಿತೆಯ ಪಾಠವನ್ನು ಸಹೃದಯರಿಗಾಗಿ ಕೆಳಗೆ ನೀಡುತ್ತಿದ್ದೇನೆ. ಆದರೆ, ನನ್ನ ಇದುವರೆಗಿನ ವ್ಯರ್ಥ ಪ್ರಯತ್ನವೆಂದರೆ ರಾಜರತ್ನಂ ಅವರ ಕವಿತೆಯ ಪಾಠ ಸಿಗದಿರುವುದು. ಪುಸ್ತಕಗಳಲ್ಲಿ ಹುಡುಕಿದ್ದೂ ಆಯಿತು, ಕೊನೆಗೆ ಬಲ್ಲವರು ತಿಳಿಸುವಂತೆ ಫೇಸ್ ಬುಕ್ಕಿನಲ್ಲಿ ಕೇಳಿದ್ದೂ ಆಯಿತು. ಸಿಗಲಿಲ್ಲ. ಆದರೆ ರಾಜರತ್ನಂ ಅವರ ಪ್ರಸಿದ್ಧ ಪದ್ಯ 'ಮಡಿಕೇರಿಲಿ ಮಂಜು'ವಿನಲ್ಲಿ 'ಪೂವಮ್ಮ - ನನ್ ತಂಗೀದ್ದಂಗೆ' ಎಂಬ ಸಾಲು ಬಂದಿರುವುದನ್ನು ಸಹೃದಯರು ಗಮನಿಸಬಹುದಾಗಿದೆ.
ಷೋಡಶಿ ಸಂಕಲನದಲ್ಲಿ ಸೇರಿರುವ ಕುವೆಂಪು ಅವರ 'ಪೂವಮ್ಮ'

ಮಡಿಕೇರಿಯ ಸಿರಿಮಲೆಗಳ ಮೇಲೆ
ಬಾಲ ದಿನೇಶನ ಕೋಮಲ ಲೀಲೆ
ಹಸುರಿನ ಕೆನ್ನೆಗೆ ಹೊನ್ನಿನ ಮುತ್ತು
ಕೊಡುತ್ತಿತ್ತು.
ಜನವಿಲ್ಲದ ಕಿರುದಾರಿಯೊಳಾನು
ಮೆಲ್ಲನೆ ನಡೆದಿರೆ, ಪವ‍್ತಸಾನು
ಅಲೆಯಲೆಯಲೆ ಮುಗಿಲಿಗೆ ಏರಿತ್ತು;
ಮೀರಿತ್ತು!

ಸುತ್ತಲು ಕಾಡಿನ ಹೂಗಳು ಕಣ್ನಿಗೆ
ನಲಿನಲಿದುವು ಹೊಂಬಿಸಲಲಿ ನುಣ್ಣಗೆ;
ಖಗಗಾನವು ಮೌನವ ಕಡೆದಿತ್ತು;
ಮಿಡಿದಿತ್ತು.
ತಪ್ಪಲ ಮೇಯುವ ಮಂಜಿನ ಮಂದೆ
ತೇಲುತಲಿದ್ದುದು ಹಿಂದೆ ಮುಂದೆ.
ನಡೆದನು ಕೊಡಗಿಗೆ ನಾ ಮನಸೋತು;
ಮೇಣೋತು.

ನಡೆದಿರೆ ದಾರಿಯ ತಿರುಗಣೆಯಲ್ಲಿ
ಪರ್ವತ ಕಾನನ ಕಂದರದಲ್ಲಿ
ಫಕ್ಕನೆ ಕಂಡಿತು ನನ್ನಯ ಕಣ್ಣು:
ಮುದ್ದಿನ ಮಲೆಹೆಣ್ಣು!
ಹೆಣ್ಣಂಎಬೆನೆ? ಅಲ್ಲಾ, ಕಿರುಹುಡುಗಿ!
ಕೊಡಗಿಗೆ ಕನ್ನಡಿಯೋ ಎನೆ ಬೆಡಗಿ!
ಐದು ವಸಂತಗಳಂದದ ಕೊಡಗಿ,
ಹೊಸ ಹೂ ಆ ಹುಡುಗಿ!

ಬೆಡಗಿನ ಕೊಡಗಿನ ಮಲೆಯಿಂದೊಯ್ಯನೆ
ಕಿರುದೊರೆಯುರುಳುವ ತೆರೆದಲಿ ರಯ್ಯನೆ
ಕಲ್ಲು ಹಾದಿಯಲಿ ಬಂದಳು ಚಿಮ್ಮ
ಮಿಗವರಿಯೊಲು ಹೊಮ್ಮಿ!
ನಿಂತಳು ಬೆರಗಾಗೆನ್ನನು ಕಂಡು:
ಅಂತು ನಿಲ್ಲುವುದು ದುಂಬಿಗೆ ಬಂಡು!
ಕಣ್ಣೊಳೆ ನಾನಾ ಚೆಲುವನು ಹೀರಿ
ನಿಂತೆನು ಎದೆಹಾರಿ!

ತುಂಬಿದ ಮೊಗ, ಮೈ; ತುಳುಕುವ ಕಣ್ಣು;
ಕೆನ್ನೆಗಳೆರಡೂ ಕಿತ್ತಿಳೆ ಹಣ್ಣು!
ಕೊಡಗಿಗೆ ಕನ್ನಡಿ ನಿನ್ನಯ ಕೆನ್ನೆ
ದಿಟವೈಸಲೆ ಚೆನ್ನೆ!
ಒಲ್ಮೆಯು ನಲ್ಮೆಯು ಚೆಲುವೂ ಬೆಡಗೂ
ನಿನ್ನಲಿವೆ; ಇದೆ ಎಲ್ಲಾ ಕೊಡಗೂ!
ಗಿರಿ ತಲಕಾವೇರಿಗಳಿನ್ನೇಕೆ?
ನೀನಿರೆ ಅವು ಬೇಕೆ?

ಮಲೆಗಳ ಕತ್ತಲೆ ಕವಲೊಡೆದಂದದಿ
ಜಡೆ ಕಂಗೊಳಿಸಿತ್ತೆರಡಾಗಂದದಿ.
ಕೇಳಿದೆನಾಕೆಯ "ಹೆಸರೇನಮ್ಮಾ?"
ನುಡಿದಳು "ಪೂವಮ್ಮ!"
ನುಡಿಸುವ ಹುಚ್ಚಿಗೆ ಹೆಸರನು ಕೇಳಿದೆ;
ಆಲಿಸಿ ಪರಮಾಹ್ಲಾದವ ತಾಳಿದೆ.
ದನಿಯೂ ಹೆಸರೂ ಎರಡೂ ಹೂವೆ!
ಅವಳಂತೂ ಹೂವೆ!

ಕೊಡಗದು ಹಿರಿಮಲೆಗಳ ಸಿರಿನಾಡು:
ಮೇಲಾಕಾಶವು, ಕೆಳಗಡೆ ಕಾಡು!
ಅಂತೆಯೆ ಇರುವುದು ನನ್ನಾ ಬೀಡು,
ನಚ್ಚಿನ ಮಲೆನಾಡು!
ಮಲೆನಾಡೆನಗಿದೆ ಹತ್ತಿರದಲ್ಲೆ,
ಅದರಿಂ ಕೊಡಗನು ಮರೆಯಲು ಬಲ್ಲೆ!
ಆದರೆ ಮರೆಯೆನು ನಿನಗಾಗಮ್ಮ
ಮುದ್ದಿನ ಪೂವಮ್ಮಾ!

2 comments:

ಕನಸು.. said...

ಹೀಗೇ ನಿಮ್ಮ ಈ ಬರಹ ಕಣ್ಣಿಗೆ ಬಿತ್ತು.. ಓದಿ ತುಂಬ ಆಶ್ಚರ್ಯವೂ. ಕುತೂಹಲವೂ ಆಯ್ತು.
ಹಿರಿಯ ಕವಿಗಳ ಕವಿತೆಗಳನ್ನೆಲ್ಲ ಓದುವ, ಒಂದೆಡೆ ಕಲೆಹಾಕುವ ಹವ್ಯಾಸ ನನಗಿದೆ (www.kannadakavyakanaja.blogspot.com). ನೀವು ಹುಡುಕಾಡಿದ ಕವಿತೆ ನನ್ನ ಸಂಗ್ರಹದಲ್ಲಿತ್ತು. ಎರಡೂ ಕವಿತೆಗಳನ್ನು ಓದಿ ಸೋಜಿಗವಾಯ್ತು, ಎಷ್ಟೊಂದು ಸಾಮ್ಯತೆ!
ಸಾಕಷ್ಟು ವಿಚಾರಗಳಿಂದ ನಿಮ್ಮ ಬ್ಲಾಗ್ ಶ್ರೀಮಂತವಾಗಿದೆ. ತಿಳಿಯದ ವಿಚಾರಗಳನ್ನು ಸಾಹಿತ್ಯಪ್ರೇಮಿಗಳಿಗೆ ತಿಳಿಸುವ ನಿಮ್ಮ ಕಾರ್ಯ ಹೀಗೇ ಮುಂದುವರೆಯಲಿ.. :-) ಧನ್ಯವಾದಗಳು - 'ಕನಸು'


ಮಡಕೇರೀಲಿ ರತ್ನ



ಮಡಕೇರೀಲಿ ರತ್ನ

ಕಂಡ ಒಸಾ ಮತ್ನ.



'ಮಡಕೇರೀಲಿ ಮಡಕೆ ಯೆಂಡ

ಈರ್ದಿದ್ರ್ ಅಲ್ಲೀಗ್ ಓದ್ದೂ ದಂಡ'

ಅಂದಿ ರತ್ನ ಪಡಕಾನೇಗೆ

ಒಂಟ, ಬೆಟ್ಟದ ನೆತ್ತಿ ಮೇಗೆ

        ಓಯ್ತಿದ್ದಂಗೆ ನಿಂತ!

        ಕಲ್ಲಾದಂಗೆ ಕುಂತ!



ಸುತ್ತ ಸಾಯೋ ಬಿಸಿಲಿನ್ ಚಾಪೆ!

ಅಲ್ಲಲ್ಲೆ ಒಸಿ ನೆರಳಿನ್ ತೇಪೆ!

ಅಲೆಯಲೆಯಾಗಿ ಬಿಸಿಲಿನ್ ಜೊತ್ಗೆ

ಸುತ್ತಿನ್ ಗುಡ್ಡಗೊಳ್ ಕುಣದರ್ ಮೆತ್ಗೆ

       ಮನಸೀಗ್ ಅರ್ಸ ತರ್‍ತ-

       ರತ್ನ ಯೆಂಡ ಮರ್‍ತ!



'ಮುದುಕರ್ ಸಾವೇ ನೋಡಾಕ್ ಚಂದ!'

ಅಂದ್ರೆ ಸೂರ್‍ಯ ಸಾಯಾಲ್ಲೇಂದ;

'ಸಾಯೋ ಮುದುಕ ಸಂಜೆ ಸೂರ್‍ಯ

ನೆಗತ ನಿಲ್ಲೋಕ್ ಇವ್ಗೇನ್ ಕಾರ್‍ಯ?'

        ಅಂತ ಇಂದಕ್ ತಿರ್ಗಿ

        ನೋಡ್ದೆ - ಬತ್ತು ಗಿರ್ಕಿ!



ದೇವರದೊಂದು ಚೆಂದದ್ ಸೋತ್ರ

ಕೊಡಗಿನ್ ಮೇಗಿನ್ ಒಂದ್ ನಕ್ಸತ್ರ

ಕೊಡಗಿನ್ ಒಂದ್ ಊ ಗಾಳೀಲ್ ತೇಲ್ತ

ಬಂದಂಗಿದ್ಲು ಅತ್ರ ಕಾಲ್ತಾವ್

          ಒಂದು ಕೊಡಗೀನುಡಗಿ!

          ಐದಾರೊರಸದ್ ವುಡಗಿ!



ಕೊಡಗಿನ್ ತೋಟದ್ ಕಾಪೀ ಅಣ್ಣು

ತುಟಿಗೊಳ್! ಇಳ್ಳಿನ್ ಬೆಳಕೆ ಕಣ್ಣು!

ಕೆನ್ನೆ ಅನಕ ಕೊಡಗಿನ್ ಕಿತ್ಲೆ!

ಔಳೇಳಿದ್ಲು ನಾ ಕೇಳೂತ್ಲೆ:

         'ನಿಂಗೆ ಯೆಸರೇನಮ್ಮ?'

         'ನನ್ನೆಸರು ಪೂವಮ್ಮ!'



'ಪೂವಮ್ಮ!' ಹಾ! ಎಂತಾ ಯೆಸರು!

ಕಣ್ಣಿಗ್ ಚಿತ್ರ ಕಟ್ಟೋ ಯೆಸರು!

ರೂಪು ರಾಗಕ್ ತಕ್ಕಂತ್ ಯೆಸರು!

ಎಂಗ್ ನೋಡಿದ್ರು ಒಪ್ಪೋ ಯೆಸರು!

'ಪೂವಮ್ಮಾ! ಪೂವಮ್ಮಾ!'

'ಪೂವಮ್ಮಾ! ಪೂವಮ್ಮಾ!'



ಔಳ್ ನೋಡೂತ್ಲೆ ನಂಗ್ ಮತ್ತಾಯ್ತು!

ಔಳ್ ಮಾತ್ಕೇಳಿ ಒಂದ್ ಅತ್ತಾಯ್ತು!

ಔಳ್ ಮಾತ್ ಇನ್ನಾ ಕೇಳ್ಬೇಕೂಂತ

'ನಾನ್ಯಾರ್ ಗೊತ್ತೆ?' ಅಂದ್ರೆ 'ಹ್ಞೂ'oತ

          'ನೀ ಯೆಂಡಕುಡಕ' ಅಂದ್ಲು

           ನೆಗ್ತ ಅತ್ರ ಬಂದ್ಲು.



'ನೀ ನಾ ಕುಡಿಯೋದ್ನ್ ಎಲ್ ನೋಡ್ದೇಮ್ಮ?'

ಅಂದ್ರೆ, 'ಯಾವೋನ್ಗೈತೆ ಜಮ್ಮ

ಔನ್ಗೆ ಯೇಳ್ತೀವ್ ಕೊಡವಾಂತಂದಿ!

ಕುಡದಂಗ್ ಆಡೋನ್ ಕುಡಕಾಂ'ತ್ ಅಂದಿ

          ತೊಡೇನ್ ಅತ್ತಿದ್ಲು ಮೆಲ್ಗೆ!

          ಕುಡದೋನ್ ಅಂದ್ರೆ ಸಲ್ಗೆ!



ಕತ್ತಿನ್ ಸುತ್ತ ಕೈ ಆಕ್ಕೊಂಡಿ

'ಅಣ್ಣ ರತ್ನ' ಅಂತ್ ನೆಕ್ಕೊಂಡಿ

'ಯೆಂಡದ ಪದಗೊಳ್ ಏಳ್ ನೋಡಾನೆ!

ನಾನೂ ನಿನ್ನಂಗ್ ಕಲ್ತ್ ಆಡಾನೆ!'

          ಅಂದ್ಲು ಮೊಕಾನ್ ನೋಡಿ!

          ಕಣ್ಣ ದೊಡ್ದುಮಾಡಿ!



ಇಲ್ದಿದ್ ತಂಗಿ ಆಗ್ ವುಟ್ಟಿದ್ಲು

ಪೂವಮ್ಮಾನೆ ನಂಗೆ ಮೊದಲು!

ತಂಗಿ ವುಟ್ಟಿದ್ ದಿವಸಾಂತೇಳಿ

ಆಡ್ದೆ ಯೆಂಗೀಸ್ ಇಡದಂಗ್ ತಾಲಿ-

      ಸೂರ್‍ಯ ಮುಳಗಿದ್ ಕಾಣ್ದೆ!

      ಯೆಂಡ ಬೇಕಂತ್ ಅನ್ದೆ!



-ಜಿ. ಪಿ. ರಾಜರತ್ನಂ

     (ರುಸ್ತುಂ ರತ್ನ)

Unknown said...

'ಕನಸು' ಅವರಿಗೆ ಧನ್ಯವಾದಗಳು. ನನ್ನ ಇವತ್ತಿನ ಪೋಸ್ಟಿನಲ್ಲಿ ಈ ಕವನವನ್ನು ಅಪ್ಡೇಟ್ ಮಾಡಿದ್ದೇನೆ. ಧನ್ಯವಾದಗಳು