Friday, April 03, 2009

ತೇಜಸ್ವಿ ನೆನಪು : ಮರೆತಿದ್ದರೆ ತಾನೆ!



"ತೇಜಸ್ವಿ ಧ್ಯಾನದಲ್ಲಿ - ನಿರುತ್ತರದ ಕೆರೆಯಲ್ಲಿ"

ನನ್ನನ್ನು ಅತಿಯಾಗಿ ಕಾಡಿದ ಹಾಗೂ ನನ್ನ ಪ್ರೀತಿಯ ತೇಜಸ್ವಿಯವರ ಬಗ್ಗೆ ಬರೆಯಲು ಕುಳಿತಿದ್ದೇನೆ. ನಾನು ತೇಜಸ್ವಿಯವರ ಸಾಹಿತ್ಯ ಸಂಪರ್ಕಕ್ಕೆ ಬಂದು ಸುಮಾರು ಇಪ್ಪತ್ತು ವರ್ಷಗಳೇ ಕಳೆದಿವೆ. ತೇಜಸ್ವಿ ಕುವೆಂಪು ಅವರ ಮಗ ಎಂದು ತಿಳಿದಿದ್ದು, ಕುವೆಂಪು ನಿಧನರಾದ ದಿನ! ತೇಜಸ್ವಿಯವರನ್ನು ಮೊದಲಬಾರಿಗೆ ಬೇಟಿಯಾಗಿ ಕೇವಲ ಐದು ವರ್ಷ ಕಳೆಯುವುದರೊಳಗಾಗಿ, ಅವರನ್ನು ಕಳೆದುಕೊಂಡು ಎರಡು ವರ್ಷವಾಗುತ್ತಾ ಬರುತ್ತಿದೆ. ಅವರು ನಿಧನರಾದ ದಿನ, ನಾನು ಅನುಭವಿಸಿದ ಒಂದು ಭಾವಶೂನ್ಯತೆ ಅಥವಾ ಚೈತನ್ಯಶೂನ್ಯತೆ ಅಥವಾ ನಮ್ಮ ಕಣ್ಣೆದುರೇ ನಮ್ಮ ದೇಹದ ಒಂದು ಭಾಗ ಬೇರೆಯಾಗಿ ಹೋಗುತ್ತಿರುವುದನ್ನು ನೋಡಿಯೂ ಏನನ್ನೂ ಮಾಡಲಾಗದ ಕ್ರಿಯಾಶೂನ್ಯತೆ ಅಥವಾ ನನ್ನ ಪದಸಂಪತ್ತಿಗೆ ನಿಲುಕದ ಯಾವುದೋ ಒಂದು ಭಾವ, ತೇಜಸ್ವಿ ನಮ್ಮೊಂದಿಗಿಲ್ಲ ಎಂಬ ನೆನಪಿನೊಡನೆ ಮತ್ತೆ ಮತ್ತೆ ಆವರಿಸುತ್ತದೆ. ಆದರೆ ಮರುಕ್ಷಣದಲ್ಲಿಯೇ, ತೇಜಸ್ವಿಯವರ ಕಾರಣದಿಂದಲೇ ಮನಸ್ಸು ಕ್ರಿಯಾಶೀಲವಾಗುತ್ತದೆ.


ನಿರುತ್ತರಾ!
ಉದ್ಯೋಗನಿಮಿತ್ತವಾಗಿ ಬೆಂಗಳೂರಿಗೆ ಬಂದಾಗಲೂ ಇದೇ ರೀತಿಯ ಗೊಂದಲ ಉಂಟಾಗಿತ್ತು. ಸಿಕ್ಕಿರುವ ಕೆಲಸವನ್ನು ಬಿಟ್ಟು ಊರಿಗೆ ಹೋಗಿಬಿಡಬೇಕು ಎನ್ನುವಷ್ಟರ ಮಟ್ಟಿಗೆ ಭಾವಶೂನ್ಯತೆ ಕಾಡಿತ್ತು. ಆಗಲೂ ಮನಸ್ಸಿಗೆ ನೆಮ್ಮದಿ, ಸಮಸ್ಯಗೆ ಪರಿಹಾರ ಕೊಟ್ಟಿದ್ದು ತೇಜಸ್ವಿಯೇ. ನಾವು ನಿಂತ ನೆಲದಲ್ಲಿಯೇ ನಮ್ಮ ಸ್ವಂತಿಕೆಯನ್ನೂ ಉಳಿಸಿಕೊಂಡು ಕ್ರಿಯಾಶೀಲರಾಗಿರಬಹುದು ಎಂಬುದನ್ನು ತೇಜಸ್ವಿ ಸಾಹಿತ್ಯ ನಮಗೆ ತೋರಿಸಿ ಕೊಟ್ಟಿದೆ. ಇಂತಹ ಸಂತೃಪ್ತಿಗೆ ತೇಜಸ್ವಿಯವರ ಬದುಕು ಮತ್ತು ಬರಹ ಕಾರಣ ಅಂದಾಗ, ಅದು ನನ್ನ ಮೇಲೆ ಬೀರಿರುವ ಪ್ರಭಾವ ಎಷ್ಟೆಂಬುದನ್ನು ಗಮನಿಸಬಹುದು.


ತೇಜಸ್ವಿ ಮನೆಯ ಮುಂದಿನ ಪುಟಾಣಿ ಕೊಳ (ಈ ಫೋಟೋ ಕ್ಲಿಕ್ಕಿಸಿದ್ದು ನನ್ನ ಮಗಳು!)
ಯೌವ್ವನ ಸಹಜವಾದ ಹಸಿಹಸಿ ಕನಸು, ಆದರ್ಶಗಳ ಹುಚ್ಚು ಹೊಳೆಯಲ್ಲಿ ಕೊಚ್ಚಿಹೋಗಬಹುದಾದ ನನಗೆ, ಹಾಗೇ ಅನೇಕರಿಗೆ ಯೋಚಿಸುವುದನ್ನು ಕಲಿಸಿದ, ಸ್ವಂತಿಕೆ ಎಂದರೇನೆಂದು ತೋರಿಸಿದ, ನಮ್ಮ ಚಿಂತನಾ ದಿಗಂತದ ಮೇರೆಗಳನ್ನು ವಿಸ್ತರಿಸಿದ ಬರಹಗಾರ ತೇಜಸ್ವಿ. ಒಂದು ರೀತಿಯಲ್ಲಿ ಇಂದಿನ ನನ್ನ ಅರಿವಿನ ಗುರು. ಒಂದರಗಳಿಗೆಯೂ ಭಾವಶೂನ್ಯತೆಯಿಂದ ತೊಳಲಾಡಿಸದೆ, ನಮ್ಮನ್ನು ಕ್ರಿಯಾಶೀಲರಾಗಿ ಇರಿಸುವ ಶಕ್ತಿ ತೇಜಸ್ವಿಯವರಿಗಿತ್ತು; ಅವರ ಸಾಹಿತ್ಯಕ್ಕಿತ್ತು. ಈಗಲೂ ಅವರ ಸಾಹಿತ್ಯಕ್ಕೆ, ಚಿಂತನೆಗಳಿಗೆ ಆ ಶಕ್ತಿ ಇದೆ. ತಮ್ಮ ವ್ಯಾಪ್ತಿಗೆ ಬರುವ ಪ್ರತಿಯೊಬ್ಬರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುವ ಅವರು, ‘ನಡುವೆ ಅಂತರವಿಲ್ಲದಷ್ಟು ಹತ್ತಿರವಾಗುತ್ತಾರೆ.’ ಅವರ ಪೂರ್ಣ ಹೆಸರು ಹೇಳಿದರೆ ಅವರೆಲ್ಲಿ ದೂರವಾಗಿಬಿಡುತ್ತಾರೋ ಎಂಬ ಅಭದ್ರತೆಯ ಭಾವ ಹುಟ್ಟಿಸುವಷ್ಟು ಹತ್ತಿರವಾಗಿಬಿಡುತ್ತಾರೆ.

ಮನೆಯ ಹಿಂಬದಿಯಲ್ಲಿ ಕಾಫಿ ಬೀಜ ಒಣಗಿಸುವ ಕಣ
ಇಂತಹ ತೇಜಸ್ವಿಯವರನ್ನು ಎಂದಾದರೂ ಮರೆಯಲು ಸಾಧ್ಯವೇ?
ತೇಜಸ್ವಿ ದೈಹಿಕವಾಗಿ ನಮ್ಮನ್ನಗಲಿ ನಾಳೆ ಭಾನುವಾರಕ್ಕೆ (೦೫-೦೪-೦೯) ಎರಡು ವರ್ಷಗಳು ಗತಿಸಲಿವೆ. ‘ತೇಜಸ್ವಿ’ ಎನ್ನುವ ಹೆಸರೇ ನಮಗೆ ತೇಜಸ್ಸು ನೀಡುವಂತದ್ದು. ಅವರ ನೆನಪು ನಮ್ಮಲ್ಲಿ ಸದಾ ಅಚ್ಚಹಸುರಾಗಿರುತ್ತದೆ. ‘ಕಳೆದ ಎರಡು ವರ್ಷಗಳಿಂದ ತೇಜಸ್ವಿಯವರನ್ನು ನೆನಪು ಮಾಡಿಕೊಳ್ಳದ ದಿನ ಯಾವುದಾದರೂ ಇದೆಯೇ?’ ಎಂಬ ಪ್ರಶ್ನೆಗೆ ನಾನು ಖಂಡಿತವಾಗಿ ಹೇಳಬಹುದಾದ ಉತ್ತರ ‘ಇಲ್ಲ’ ಎಂದೇ!



ಒಂದು ನಿಮಿಷ ನೋಡಿಬಿಡಿ!
ಕಳೆದ ವರ್ಷಾರಂಭದಲ್ಲಿ ಮದರಾಸು ವಿಶ್ವವಿದ್ಯಾಲಯದಲ್ಲಿ ತೇಜಸ್ವಿ ಸಾಹಿತ್ಯ ಕುರಿತಂತೆ ಒಂದು ವಿಚಾರ ಸಂಕಿರಣ ಏರ್ಪಟ್ಟಿತ್ತು. ಅದರಲ್ಲಿ ನಾನೂ ಒಂದು ವಿಷಯದ ಮೇಲೆ ಪ್ರಬಂಧ ಮಂಡಿಸಿದ್ದೆ. ಆಗ ಯಾವ ಪೂರ್ವಯೋಜಿತ ನಿರ್ಧಾರವೂ ಇಲ್ಲದೆ, ನನ್ನ ಬಾಯಿಯಿಂದ ಬಂದ ಮಾತು ‘ಅರಿವಿನ ಗುರು ತೇಜಸ್ವಿ’ ಎಂಬುದಾಗಿತ್ತು. ನಂತರ ಯೋಚಿಸಿದಂತೆಲ್ಲಾ ‘ಅರಿವಿನ ಗುರು’ ಎಂಬ ಮಾತು ಎಷ್ಟೊಂದು ಸತ್ಯ ಎಂಬುದನ್ನು ನಾನು ಮನಗಂಡಿದ್ದೇನೆ. ಯಾವುದೋ ಹಳ್ಳಿಯ ಕೊಂಪೆಯಲ್ಲಿ ಕಳೆದುಹೋಗಬಹುದಾಗಿದ್ದ ನಾನು, ಇಂದು ತೃಪ್ತಿಕರವಾದ ಜೀವನ ನಡೆಸುತ್ತಿದ್ದರೆ ಅದಕ್ಕೆ ತೇಜಸ್ವಿಯವರ ಸಾಹಿತ್ಯದ ಕೊಡುಗೆಯೂ ಇದೆ. ನನ್ನ ಸಾಹಿತ್ಯಕ ಬದುಕು ಮತ್ತು ಜಗತ್ತನ್ನು ನಾನು ಕಾಣುವ ದೃಷ್ಟಿಕೋನ ಆರೋಗ್ಯಕರವಾಗಿರುವುದಕ್ಕೆ ತೇಜಸ್ವಿಯವರ ಜೀವನ ಪ್ರೇರಕವೂ, ಉತ್ತೇಜಕವೂ ಆಗಿದೆ.



ತೇಜಸ್ವಿಯವರನ್ನು ಹಲವಾರು ವರ್ಷಗಳ ಕಾಲ ಹೊತ್ತು ಓಡಾಡಿಸಿದ್ದ ಸ್ಕೂಟರ್!
ಇಂದು ನನ್ನ ಮಗಳು ‘ಇದು ಕೋಗಿಲೆಯ ಧ್ವನಿ’ ‘ಇದು ಕಾಗೆಯ ಧ್ವನಿ’ ಎಂದು ಹೇಳುತ್ತಿರುವುದರ ಹಿಂದೆ ತೇಜಸ್ವಿ ನಮ್ಮಲ್ಲಿ ಮೂಡಿಸಿದ ‘ಅರಿವು’ ಕೆಲಸ ಮಾಡುತ್ತಿದೆ. ನಾನೀಗ ಯಾವ ಹೊಸ ಕಥೆ ಹೇಳಿದರೂ ‘ಇದನ್ನು ಬರೆದವರು ತೇಜಸ್ವಿ ತಾತನೇ?’ ಎಂದು ನನ್ನ ಮಗಳು ಪ್ರಶ್ನಿಸುತ್ತಾಳೆ. ಕಾರಣ, ‘ಮಾರ’ ಗಿಡವೊಂದರ ಕಡ್ಡಿಯಿಂದ ಹಲ್ಲು ಉಜ್ಜಿದ್ದರಿಂದಾಗಿ. ಒಂದೇ ಕಡೆಯ ಹಲ್ಲುಗಳನ್ನು ಕಳೆದುಕೊಂಡ ಪ್ರಸಂಗ ಮತ್ತು ಯಾವುದೋ ಎಲೆಯಲ್ಲಿ ಕಟ್ಟಿದ್ದ ಕಾಡುಕುರಿಯ ಮಾಂಸ ಮತ್ತೆ ಕುರಿಯಾಗಿ ಜೀವತಳೆದ ಪ್ರಸಂಗಗಳನ್ನು ನಾನು ಅವಳಿಗೆ ಕಥೆಯೆಂತೆ ಹೇಳಿದ್ದು. ಪರಂಗಿ ಅಥವಾ ಹರಳು ಗಿಡದ ರೆಕ್ಕೆಯ ಸ್ಟ್ರಾ, ತೆಂಗಿನ ಗರಿಯ ವಾಚ್ ಇತ್ಯಾದಿಗಳಿಂದ ನನ್ನ ಮಗಳಲ್ಲಿ ಕ್ರಿಯೇಟಿವಿಟಿಯನ್ನು ಬೆಳೆಸಲು ನನಗೆ ಸಾಧ್ಯವಾಗಿದ್ದರೆ ಅದಕ್ಕೆ ತೇಜಸ್ವಿಯವರೇ ಬದುಕೇ ಪ್ರೇರಕ!



ಛಾವಣಿ ಎತ್ತರಕ್ಕೆ ಬೆಳದ ಕ್ಯಾಕ್ಟಸ್
ಈ ವಿಷಯದಲ್ಲಿ ನನ್ನ ಗ್ರಂಥಪಾಲಕ ವೃತ್ತಿಯೂ ಹೆಚ್ಚಿನ ಅನುಕೂಲ ಮಾಡಿಕೊಟ್ಟಿದೆ. ಐದಾರು ವರ್ಷಗಳ ಹಿಂದೆ, ವರ್ಷಾಂತ್ಯದಲ್ಲಿ ನಡೆಯುವ ಸ್ಟಾಕ್ ವೆರಿಫಿಕೇಶನ್ ಸಮಯದಲ್ಲಿ ಕೆಲವು ಕನ್ನಡ ಪುಸ್ತಕಗಳು ಕಾಣೆಯಾಗಿರುವುದು ಗಮನಕ್ಕೆ ಬಂತು. ಆಶ್ಚರ್ಯವೆಂದರೆ ಅವೆಲ್ಲಾ ತೇಜಸ್ವಿಯವರ ಪುಸ್ತಕಗಳೇ ಆಗಿದ್ದವು! ‘ಓಹೋ, ಈ ಕಳ್ಳ ಯಾರೋ ತೇಜಸ್ವಿಯವರ ಭಕ್ತ!’ ಎಂದುಕೊಂಡು ಮೊದಲ ವರ್ಷ ಸುಮ್ಮನಾಗಿಬಿಟ್ಟೆವು. ಅದರ ಮುಂದಿನ ವರ್ಷವೂ ಇನ್ನೂ ಮೂರ್ನಾಲ್ಕು ತೇಜಸ್ವಿ ಪುಸ್ತಕಗಳು ಕಳುವಾದಾಗ ವಿಧಿಯಿಲ್ಲದೆ ಎಚ್ಚರವಹಿಸಲೇ ಬೇಕಾಯಿತು. ನಾನು ಮುಂಜಾಗ್ರತೆ ವಹಿಸಿ, ಅವರ ಎಲ್ಲಾ ಪುಸ್ತಕಗಳನ್ನು ನನ್ನ ರೂಮಿನ ಕಪಾಟಿಗೆ ವರ್ಗಾಯಿಸಿಕೊಂಡು ಬಿಟ್ಟೆ. ತೇಜಸ್ವಿ ಪುಸ್ತಕ ಬೇಕಾದವರು ನೇರವಾಗಿ ನನ್ನಿಂದಲೇ ಪಡೆಯುವಂತೆ ಏರ್ಪಾಟು ಮಾಡಿದೆ. ಇದರಿಂದ ನನಗಾದ ಲಾಭವೆಂದರೆ, ಯಾವಾಗ ಬೇಕೋ ಆಗ, ಬಿಡುವಾದಾಗ, ದಿನಕ್ಕೆ ಒಂದೆರಡು ಬಾರಿ ತೇಜಸ್ವಿಯವರ ಯಾವುದಾದರೂ ಪುಸ್ತಕ ನನ್ನ ಕೈ ಸೇರುತ್ತಿರುತ್ತದೆ. ಹಲವಾರು ಪುಟುಗಳು ತಲೆಗೂ ಏರುತ್ತವೆ. ಆದ್ದರಿಂದ ಯಾರಾದರೂ ನನ್ನನ್ನು ‘ತೇಜಸ್ವಿಯವರ ಯಾವ ಪುಸ್ತಕವನ್ನು ಎಷ್ಟೆಷ್ಟು ಬಾರಿ ಓದಿದ್ದೀಯಾ?’ ಎಂದು ಕೇಳಿದರೆ, ಉತ್ತರ ಹೇಳುವುದು ಕಷ್ಟ!
ಜೊತೆಗೆ, ನನಗೆ ಕನ್ನಡ ಪಿಎಚ್.ಡಿ. ಪದವಿ ದೊರೆತ ಮೇಲೆ, ಕಾಲೇಜಿನ ಆಡಳಿತ ಮಂಡಳಿಯವರು ಕೆಲವು ತರಗತಿಗಳಲ್ಲಿ ಕನ್ನಡ ಬೋಧಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲಿ ‘ಅಣ್ಣನ ನೆನಪು’ ಪುಸ್ತಕದ ಒಂದು ಭಾಗ ಮತ್ತು ‘ಕಾರ್ವಾಲೋ’ದ ‘ಮಂದಣ್ಣನ ಮೇರೇಜು’ ಪಠ್ಯಗಳಾಗಿವೆ. ಇವುಗಳಿಂದಾಗಿ ಹುಡುಗರ ಒಡನಾಟದಲ್ಲಿ ತೇಜಸ್ವಿ ಹಲವಾರು ಬಾರಿ ಬಂದುಹೋಗುತ್ತಿರುತ್ತಾರೆ. ಈಗಾಗಲೇ ಹಲವಾರು ಹುಡುಗರು ತೇಜಸ್ವಿ ಸಾಹಿತ್ಯದ ಗುಂಗು ತಲೆಗೇರಿಸಿಕೊಂಡಿದ್ದಾರೆ! ಹೊಸದಾಗಿ ಕನ್ನಡ ಕಲಿತಿರುವ ಹಾಗೂ ಸಾಹಿತ್ಯದಲ್ಲಿ ಆಸಕ್ತಿಯಿರುವ ಗುಜರಾತಿ ಮಹಿಳೆಗೆ ಓದಲು ಯಾವುದಾದರು ಕನ್ನಡ ಪುಸ್ತಕಗಳನ್ನು ಕೊಡುವಂತೆ ಕೇಳಿದಾಗ, ನಾನು ಹಿಂದೆಮುಂದೆ ಯೋಚಿಸದೆ ತೇಜಸ್ವಿಯವರ ‘ಪರಿಸರದ ಕಥೆಗಳು’ ಮತ್ತು ‘ಕರ್ವಾಲೊ’ ಕಾದಂಬರಿಯನ್ನು ಕೊಟ್ಟಿದ್ದೆ. ಕೇವಲ ಮೂರೇ ದಿನದಲ್ಲಿ ಆ ಗುಜರಾತಿ ಮಹಿಳೆ ಗ್ರಂಥಾಲಯಕ್ಕೇ ಬಂದು, ‘ಈ ಲೇಖಕರ ಎಲ್ಲಾ ಕೃತಿಗಳನ್ನು ನಾನು ಓದಬೇಕು. ಎಲ್ಲಿ ಸಿಗುತ್ತವೆ’ ಎಂದರು. ನಾನು ‘ನಮ್ಮ ಗ್ರಂಥಾಲಯದಲ್ಲೇ ಸಿಗುತ್ತವೆ’ ಅಂದಿದ್ದಕ್ಕೆ ‘ಇಲ್ಲ. ನಾನು ಅವೆಲ್ಲವನ್ನು ಕೊಂಡೇ ಓದುತ್ತೇನೆ. ಲಿಸ್ಟ್ ಕೊಟ್ಟು ಬಿಡಿ’ ಅಂದು ಲಿಸ್ಟ್ ತೆಗೆದುಕೊಂಡು ಹೋದರು.


ಇದೇ ನಾಯಿಮರಿಗಳಿಗಾಗಿ ನನ್ನ ಮಗಳ ಅತ್ತಿದ್ದು.

ಇಂದಿನ ಯಾವುದಾದರು ವಿಷಯವನ್ನು, ಘಟನೆಯನ್ನು ಪರಿಭಾವಿಸುವ ಮೊದಲೇ ‘ಇದನ್ನು ತೇಜಸ್ವಿ ಹೇಗೆ ಸ್ವೀಕರಿಸುತ್ತಿದ್ದರು ? ಹೇಗೆ ಪ್ರತಿಕ್ರಿಯಿಸುತ್ತಿದ್ದರು’ ಎಂದೆಲ್ಲಾ ಮನಸ್ಸು ಚಿಂತಿಸುತ್ತದೆ. ಹಿಮಾಲಯದ ಬೇಸ್ ಕ್ಯಾಂಪ್ ಅನುಭವಗಳನ್ನು ಬರೆಯುತ್ತಿರುವ ಶ್ರೀಮತಿ ಈಶಾನ್ಯೆ ಅವರ ಬರಹಗಳನ್ನು ಓದುವಾಗಲೂ ‘ಇದನ್ನೇ ತೇಜಸ್ವಿ ಹೇಗೆ ಬರೆಯುತ್ತಿದ್ದರು’ ಎಂದು ಕೆಲವು ಕಡೆ ಅನ್ನಿಸಿದ್ದಿದೆ. ಅದನ್ನೇ ಶ್ರೀಮತಿ ಈಶಾನ್ಯೆ ಅವರಿಗೂ ಮೇಲ್ ಮಾಡಿ ತಿಳಿಸಿದ್ದೆ. ಅದಕ್ಕೆ ಅವರೂ ಸಹಮತ ವ್ಯಕ್ತಪಡಿಸಿದ್ದರು. ಅರ್ಥಪೂರ್ಣ ಬದುಕಿನ ಅರಿವನ್ನು ಮೂಡಿಸುವ, ಹಲವಾರು ತಲೆಮಾರುಗಳ ಯೋಚನೆಯ ದಿಕ್ಕನ್ನೇ ಬದಲಿಸುವ ಶಕ್ತಿ ತೇಜಸ್ವಿಯವರ ಬದುಕು-ಬರಹಗಳಿಗಿದೆ. ಅದು ಈಗಲೇ ನಿರೂಪಿತವಾಗಿರುವ ಸತ್ಯ. ತೇಜಸ್ವಿಯವರ ಸಾಹಿತ್ಯದ ಬಗ್ಗೆ ನೂರಾರು ಪುಟಗಳನ್ನು ಬರೆದಿರುವ ಹಾಗೂ ಹತ್ತಾರು ಸೆಮಿನಾರುಗಳಲ್ಲಿ ಭಾಷಣ ಬಿಗಿದಿರುವ ಮಹಾಶಯರುಗಳಿಂದ, ತೇಜಸ್ವಿಯವರಿಂದ ಪ್ರೇರಣೆ ಪಡೆದ ಮನಸ್ಸುಗಳ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವೇ? ಅವರ ಒಂದೂ ಪುಸ್ತಕ ಓದದವನು ಕೂಡಾ ತೇಜಸ್ವಿಯವರಿಂದ ಪ್ರೇರಣೆ ಪಡೆದಿದ್ದಾನೆ ಎಂದರೆ ಅವರ ಬದುಕೇ ಒಂದು ಮಹತ್ವವಾದ ಕೃತಿ.


ನಾವು ಭೇಟಿಕೊಟ್ಟಾಗ ಕೊಟ್ಟಿಗೆಯಲ್ಲಿದ್ದ ಕಾಡುಕುರಿಯ ಮರಿ

ನಾಲ್ಕೈದು ವರ್ಷಗಳಿಂದ ಒಂದೂ ಕವಿತೆ ಬರೆಯದ ನಾನು, ತೇಜಸ್ವಿ ನಿಧನರಾದ ಮೇಲೆ ‘ಅವಸರವಿಲ್ಲ’ ಎನ್ನುವ ಕವಿತೆ ಬರೆದಿದ್ದೆ. (ಕೆಂಡಸಂಪಿಗೆಯಲ್ಲಿ ಪ್ರಕಟವಾಗಿತ್ತು) ಕಳೆದ ವರ್ಷಾಂತ್ಯದಲ್ಲಿ ‘ನಿರುತ್ತರಾ’ಕ್ಕೆ, ಕುಪ್ಪಳ್ಳಿಗೆ ಭೇಟಿಕೊಟ್ಟಿದ್ದೆ. ಹಲವಾರು ಫೋಟೋಗಳನ್ನು ತೆಗೆದಿದ್ದೆ. ಇವೆಲ್ಲವೂ ನನಗೆ ಅಮೂಲ್ಯವಾದವುಗಳು. ಕವಿತೆ ಮತ್ತು ಕೆಲವು ಫೋಟೋಗಳು ಇಲ್ಲಿವೆ, ನೋಡೋಣ. ಈ ಮೂಲಕ ತೇಜಸ್ವಿಯವರಿಗೊಂದು ‘ಸ್ಮೈಲ್’ ಕೋಡೋಣ. ಮತ್ತೆ ನಮ್ಮ ನಮ್ಮ ಕ್ರಿಯಾಶೀಲ ಹಾಗೂ ಪ್ರಾಮಾಣಿಕ ಬದುಕನ್ನು ಬಾಳುತ್ತಲೇ ಅವರಿಗೆ ಅರ್ಥಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸೋಣ.


ಅಳು ನಿಲ್ಲಿಸಿದ ಕಿತ್ತಲೆ ಹಣ್ಣಿನೊಂದಿಗೆ ನಿರುತ್ತರದ ಗೇಟಿನ ಮುಂಭಾಗದಲ್ಲಿ ನನ್ನ ಮಗಳು

ಕುಪ್ಪಳ್ಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ತೇಜಸ್ವಿ ಸ್ಮಾರಕ
(ಕವಿಮನೆಗೆ ಹೋಗುವ ರಸ್ತೆಯಲ್ಲಿ, ಬಲಕ್ಕೆ ಕವಿಶೈಲದ ರಸ್ತೆ ಕವಲೊಡೆಯುವ ಜಾಗದಲ್ಲಿ ಎಡಬದಿಗೆ ಇದೆ)

1

ಇಂದು ಅವಸರವಿಲ್ಲ ನನಗೆ

ಹೋಗಿಬನ್ನಿ, ಶುಭವಾಗಲಿ ನಿಮಗೆ

ಇಂದು ನೀವು; ನಾಳೆ ನಾವು

ಬಂದೆ ಬರುವೆವು ಅಲ್ಲಿಗೆ.

2

ನೀವೆ ಹಚ್ಚಿದ ಹಣತೆಗೆ

ಜೊತೆಗಿರಬೇಕು ಇನ್ನಷ್ಟು ದಿನ

ನಿಮ್ಮದೇ ಕನಸು ನನಸಾಗುವತನಕ

ನೀವಿತ್ತ ದೀಕ್ಷೆ; ನಿಮಗಿತ್ತ ಮಾತು

ನೀವು ತೋರಿಸಿದ ದಾರಿ

ನಾ ತೊಟ್ಟ ಗುರಿ

ತಲುಪಿದ ಮೇಲೆ

ನಾನಿಲ್ಲಿ ಇರುವೆನೇನು?

3

ಎನ್ನ ಜೊತೆಗೆ ನೀವೆ ಈಗಲೂ

ಎಂದಿನಂತೆ ಬೆಂಗಾವಲೂ!

ಅಂದು ಮೈನೇವರಿಸುತ್ತಿದ್ದರಿ

ಇಂದು ಮನ ತಡವುತ್ತಿರುವಿರಿ

ಅಂತ್ಯವೆಂಬುದೇ ಇಲ್ಲ;

ಗುರುವೇ ನಾನಿನ್ನ ಬೇಡುವುದಿಲ್ಲ.

4

ಸಾಕೆಂಬುದಿಲ್ಲ

ಹಾಗೆಂದು ಬೇಕಂಬುದೂ ಇಲ್ಲ

ಸಾಕು ಬೇಕುಗಳ ಪಟ್ಟಿಗೆ ಲೆಕ್ಕ ಇಟ್ಟವರಿಲ್ಲ.

ಇಂದು ನಾಳೆಗೂ ಇರಲಿ

ಭ್ರಮೆ ಹರಿಯುವತನಕ ನಾನಿಲ್ಲಿ. ನೀವಲ್ಲಿ

ನನಗೆ ಅವಸರವಿಲ್ಲ

ಗೊತ್ತೆನೆಗೆ, ಬೇಸರವೂ ಇಲ್ಲ ನಿಮಗೆ.

15 comments:

PARAANJAPE K.N. said...

ಸತ್ಯನಾರಾಯಣ ಅವರೇ,
ತೇಜಸ್ವಿ ಕುರಿತಾಗಿ ನೀವು ಬರೆದ ಚಿತ್ರ-ಲೇಖನ ಚೆನ್ನಾಗಿದೆ. ಅವರನ್ನು ಕುರಿತು ನೀವ೦ದ ಮಾತು " ಅರಿವಿನ ಗುರು" ಸರಿಯಾದುದು. ನಾನು ಅವರಲ್ಲಿ ಹೋಗಿ ಬ೦ದಾಗಿನ ನೆನಪು ನಿಮ್ಮ ಚಿತ್ರ-ಲೇಖನದ ಮೂಲಕ ಮತ್ತೆ ಸವಿಯುವ೦ತಾಯಿತು.

ಬಿಸಿಲ ಹನಿ said...

ಸತ್ಯ ನಾರಾಯಣ ಅವರೆ,
ತೇಜಸ್ವಿಯವರ ಬಗೆಗಿನ ನಿಮ್ಮ ಚಿತ್ರ ಲೇಖನ ಸೊಗಸಾಗಿದೆ. ಆದರೆ ನನಗೇಕೋ ಉತ್ಪ್ರೇಕ್ಷೆ ಎನಿಸಿತು. ಸಾಹಿತಿಗಳನ್ನು ಭೇಟಿ ಮಾಡಿ ಧನ್ಯತಾ ಭಾವ ಪಡುವದಕ್ಕಿಂತ ಅವರನ್ನು ಅವರ ಕೃತಿಗಳಲ್ಲಿ ಕಂಡು ತೃಪ್ತಿ ಪಡುವದು ಸೂಕ್ತ ಎಂದು ನಂಬಿದವನು ನಾನು. ಏಕೆಂದರೆ ನಾನು ಒಂದಿಬ್ಬರು ಸಾಹಿತಿಗಳನ್ನು ಆತ್ಮೀಯತೆಯಿಂದ ಭೇಟಿ ಮಾಡಿದಾಗ ಅವರು ಅಷ್ಟೇನೂ ಆತ್ಮೀಯತೆ ತೋರದಿದ್ದನ್ನು ಗಮನಿಸಿ ನಿರಾಶೆಗೊಂಡಿದ್ದೇನೆ. ಅವರಿಗೆ ಏನೋ ಒಂದು ಧಿಮಾಕು, ಇವನ ಜೊತೆ ನಾನ್ಯಾಕೆ ಮಾತನಾಡಬೇಕು ಎನ್ನುವ ಅಹಂ ಇರುತ್ತದೆ. ಬಹಳಷ್ಟು ಸಾಹಿತಿಗಳು ಬರೆದಂತೆ ಬದುಕುವದಿಲ್ಲವಾದ್ದರಿಂದ ನನಗೆ ಸಾಹಿತಿಗಳ ಬಗ್ಗೆ ಅಂಥ ಗೌರವವೇನೂ ಇಲ್ಲ. ಯಾರ್ಯಾರೋ ಯಾರ್ಯಾರೋ ಸಾಹಿತಿಗಳ ಜೊತೆ ಒಂದೆರಡು ಕ್ಷಣ ಕಳೆದು ಅದನ್ನು ಅದ್ಭುತ ಎನ್ನುವಂತೆ ಬರೆಯುವದನ್ನು ನಾನು ಖಂಡಿಸುತ್ತೇನೆ. ಒಂದೆರಡು ತಿಂಗಳು ಅವರ ಜೊತೆ ಇದ್ದು ಕಳೆದಾಗಲೆ ಅವರ ನಿಜವಾದ ಬಂಡವಾಳ ಗೊತ್ತಾಗುವದು. ಹೀಗಾಗಿ ನಿಮ್ಮಂತ ಬ್ಲಾಗ್ ಬರಹಗಾರನನ್ನು ಭೇಟಿ ಮಾಡಿದಾಗ ಸಿಗುವ ಖುಶಿ ಅವರನ್ನು ಭೇಟಿ ಮಾಡಿದಾಗ ಸಿಗುವದಿಲ್ಲ. ಇದು ನನ್ನ ವ್ಯಯಕ್ತಿಕ ಅಭಿಪ್ರಾಯ ಅಷ್ಟೆ. ಅನ್ಯಥಾ ಭಾವಿಸಬೇಡಿ.

ಶಿವಪ್ರಕಾಶ್ said...

ಸತ್ಯನಾರಾಯಣ ಅವರೇ,
ತೇಜಸ್ವಿ ಅವರ ಬಗ್ಗೆ ಬರೆದ ನಿಮ್ಮ ಲೇಖನ ತುಂಬಾ ಚನ್ನಾಗಿದೆ..
ನಿಮ್ಮ "ಅವಸರವಿಲ್ಲ" ಕವಿತೆ ಮನ ಕಲುಕುವಂತಿದೆ.

"ಇಂದು ನೀವು; ನಾಳೆ ನಾವು
ಬಂದೆ ಬರುವೆವು ಅಲ್ಲಿಗೆ. "
"ಗುರುವೇ ನಾನಿನ್ನ ಬೇಡುವುದಿಲ್ಲ. "
ಈ ಸಾಲುಗಳು ತುಂಬಾ ಇಸ್ಟವಾದವು ...

ಧನ್ಯವಾದಗಳು...

Unknown said...

ಉದಯ್ ಅವರೇ
ನಿಮ್ಮ ಮುಕ್ತ ಅಭಿಪ್ರಾಯಕ್ಕೆ ಧನ್ಯವಾದಗಳು. ನಿಮ್ಮ ಅಭಿಪ್ರಾಯ ಹಲವು ಲೇಖಕರ ವಿಚಾರದಲ್ಲಿ ಸರಿಯಿರಬಹುದು. ಆದರೆ ತೇಜಸ್ವಿ ಅದಕ್ಕೆ ಅಪವಾದ ಎಂಬುದು ನನ್ನ ಅನುಭವದ ಮಾತು! ತೇಜಸ್ವಿಯವರನ್ನು ನಾನು ಮೊದಲ ಸಲ ಭೇಟಿಯಾಗುವುದಕ್ಕೆ ಹದಿನೈದು ವರ್ಷಗಳ ಮುಂಚಿನಿಂದಲೂ ಅವರ ಸಾಹಿತ್ಯದಿಂದಲೇ ಪ್ರಭಾವಿತನಾಗಿದ್ದವನು. ಸಾಹಿತಿಗಳನ್ನು ದೂರದಿಂದಲೇ, ಒಂದು ರೀತಿಯ ಗುಮಾನಿಯಿಂದಲೇ ನೋಡುತ್ತಿದ್ದ ನಾನು, ಅವರ ಸಾಹಿತ್ಯದ ಪ್ರಭಾವದಿಂದಾಗಿ ಧೈರ್ಯ ಮಾಡಿ ಪರಿಚಯ ಮಾಡಿಕೊಂಡೆ. ಮೂರು ಬಾರಿಯಷ್ಟೇ ನಾನು ಅವರನ್ನು ಮಾತನಾಡಿಸಿರುವುದು! ಅಷ್ಟೂ ಬಾರಿಯೂ ನಾವು ಹೇಳುವುದನ್ನು ಕೇಳಿಸಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ್ದಾರೆ ಕೂಡಾ.
ನೀವು ಮಲ್ಲಿಕಾರ್ಜುನ ಅವರ ಬ್ಲಾಗಿನಲ್ಲಿ ಬಂದಿರುವ ಲೇಖನವನ್ನೂ ಓದಿ ನೋಡಿ. ಧನ್ಯವಾದಗಳು.
ಅನ್ಯಥಾ ಭಾವಿಸಬೇಡಿ ಎಂದಿದ್ದೀರಿ. ಖಂಡಿತಾ ಇಲ್ಲ. ಆ ರೀತಿ ನೀವು ಯೋಚಸಲೇಬೇಡಿ. ನಾವುಗಳು ಪರಸ್ಪರ ನೋಡದೆ ಮಾತನಾಡದೆ ಸ್ನೇಹಿತರಾಗಿರುವವರು. ಮುಕ್ತವಾಗಿ ನಮ್ಮ ಆಲೋಚನೆಗಳನ್ನು ಹಂಚಿಕೊಳ್ಳೋಣ. ನಮ್ಮ ಯೋಚನಾದಿಗಂತಗಳನ್ನು ವಿಸ್ತರಿಸಿಕೊಳ್ಳೋಣ. ಅನ್ಯಥಾ ಭಾವಿಸುವ ಪ್ರಶ್ನೆಯೇ ಇಲ್ಲ.

shivu.k said...

ಸತ್ಯನಾರಾಯಣ ಸರ್,

ತೇಜಸ್ವಿಯವರ ಬಗ್ಗೆ ಹೇಳಬೇಕೆಂದರೆ ನಾನು ಬರೆಯಬೇಕೆಂದುಕೊಂಡ ಲೇಖನವನ್ನು ನೀವು ಬರೆದಿದ್ದೀರಿ...ಅದಕ್ಕೆ ನಿಮ್ಮ ಮೇಲೆ ಹೊಟ್ಟೆ ಕಿಚ್ಚಿದೆ. ನಾನು ಬರೆದಿದ್ದರೆ ಸ್ಪಲ್ಪ ವಯಸ್ಸಿನ ಬದಲಾವಣೆ ಬಿಟ್ಟರೆ ಹೀಗೆ ಬರೆಯುತ್ತಿದ್ದೆನೇನೋ....

ತೇಜಸ್ವಿ ಅರಿವಿನ ಗುರು...ಸತ್ಯ...

ಅವರು ನಿಧನರಾದ ದಿನ, ನಾನು ಅನುಭವಿಸಿದ ಒಂದು ಭಾವಶೂನ್ಯತೆ ಅಥವಾ ಚೈತನ್ಯಶೂನ್ಯತೆ ಅಥವಾ ನಮ್ಮ ಕಣ್ಣೆದುರೇ ನಮ್ಮ ದೇಹದ ಒಂದು ಭಾಗ ಬೇರೆಯಾಗಿ ಹೋಗುತ್ತಿರುವುದನ್ನು ನೋಡಿಯೂ ಏನನ್ನೂ ಮಾಡಲಾಗದ ಕ್ರಿಯಾಶೂನ್ಯತೆ ಅಥವಾ ನನ್ನ ಪದಸಂಪತ್ತಿಗೆ ನಿಲುಕದ ಯಾವುದೋ ಒಂದು ಭಾವ, ತೇಜಸ್ವಿ ನಮ್ಮೊಂದಿಗಿಲ್ಲ ಎಂಬ ನೆನಪಿನೊಡನೆ ಮತ್ತೆ ಮತ್ತೆ ಆವರಿಸುತ್ತದೆ. ಆದರೆ ಮರುಕ್ಷಣದಲ್ಲಿಯೇ, ತೇಜಸ್ವಿಯವರ ಕಾರಣದಿಂದಲೇ ಮನಸ್ಸು ಕ್ರಿಯಾಶೀಲವಾಗುತ್ತದೆ.

ನನಗಾಗಿದ್ದು ಅವತ್ತು ಇದೇ...

‘ತೇಜಸ್ವಿ’ ಎನ್ನುವ ಹೆಸರೇ ನಮಗೆ ತೇಜಸ್ಸು ನೀಡುವಂತದ್ದು. ಅವರ ನೆನಪು ನಮ್ಮಲ್ಲಿ ಸದಾ ಅಚ್ಚಹಸುರಾಗಿರುತ್ತದೆ. ‘ಕಳೆದ ಎರಡು ವರ್ಷಗಳಿಂದ ತೇಜಸ್ವಿಯವರನ್ನು ನೆನಪು ಮಾಡಿಕೊಳ್ಳದ ದಿನ ಯಾವುದಾದರೂ ಇದೆಯೇ?’ ಎಂಬ ಪ್ರಶ್ನೆಗೆ ನಾನು ಖಂಡಿತವಾಗಿ ಹೇಳಬಹುದಾದ ಉತ್ತರ ‘ಇಲ್ಲ’ ಎಂದೇ!

ನಾನು ಪ್ರತಿ ಫೋಟೋ ತೆಗೆಯುವಾಗಲು ಮತ್ತು ನನ್ನ ನಿತ್ಯದ ಕೆಲಸ ಮಾಡುವಾಗಲು ಅವರು ನೆನಪಾಗುತ್ತಾರೆ..

ಮತ್ತೆ ಗ್ರಂಥಾಲಯದ ಕತೆಯಲ್ಲಿ... ನಾನು ಕಾಲೇಜಿನ ದಿನಗಳಲ್ಲಿ... ಹೀಗೆ ಗ್ರಂಥಾಲಯದಲ್ಲಿ ತಂದ ಪುಸ್ತಕ ವಾಪಸ್ಸು ಕೊಡದೇ ಇಟ್ಟುಕೊಂಡುಬಿಡುತ್ತಿದ್ದೆ..ನೀವಾಗಿದ್ದರೆ ನನ್ನನ್ನು[ಕಳ್ಳ]ಹಿಡಿದುಬಿಡುತ್ತಿದ್ದಿರಿ..
ಮುಂದೆ ದುಡಿಯುವ ಸಮಯದಲ್ಲಿ ಅದೇನನ್ನಿಸಿತೋ...ಗ್ರಂಥಾಲಯದಲ್ಲಿ ತಂದರೆ ವಾಪಸ್ಸು ಕೊಡಬೇಕು ಅದಕ್ಕೆ ಬೇಡವೇ ಬೇಡ ಅನ್ನಿಸಿ, ನೇರ ಸ್ವಪ್ನ ಬುಕ್ ಹೌಸಿಗೆ ಹೋಗಿ ತೇಜಸ್ವಿಯವರ ಎಲ್ಲಾ ಪುಸ್ತಕ ಕೊಂಡು ತಂದೆ...ರೈಲು ಪ್ರಯಾಣದಲ್ಲೂ ಅವರದೇ ಚಿದಂಬರ ರಹಸ್ಯ ಪುಸ್ತಕ, ಮದುವೆ ಫೋಟೋ ತೆಗೆಯುತ್ತಾ ಬಿಡುವಿನ ಸಮಯದಲ್ಲೂ ಅಂತಾ ಗದ್ದಲದ ನಡುವೆ ಕೈಯಲ್ಲಿ ಕರ್ವಾಲೋ.. ನಿದ್ರೆ ಬರದಿದ್ದಾಗ ಪಾಕಕ್ರಾಂತಿ..ನಿದ್ರೆ ಬಂದುಬಿಟ್ಟರೆ ಕನಸಿನಲ್ಲಿ ಪರಿಸರದ ಕತೆಗಳು... ಹೀಗೆ...ಎಲ್ಲಾ ಕಡೆ ಅವರಿಸಿರುವ ತೇಜಸ್ವಿ....

ನಿಮಗೆ ಕೋಪ ಬರಬಹುದು ಅಂತ ಮಾತು ನಿಲ್ಲಿಸಿದ್ದೇನೆ....

ಫೋಟೊಗಳು ತುಂಬಾ ಚೆನ್ನಾಗಿವೆ...ಅದಕ್ಕೆ ತಕ್ಕಂತೆ ನೆನಪುಗಳು...ನನ್ನದೇ ಬರವಣಿಗೆ ಅನ್ನಿಸುವಂತೆ ಬರೆದ ನಿಮ್ಮ ಮೇಲೆ ಮತ್ತೊಮ್ಮೆ ಹೊಟ್ಟೆಕಿಚ್ಚು ಪಡುತ್ತಾ...

ಧನ್ಯವಾದಗಳು...

Dr.Gurumurthy Hegde said...

ಸತ್ಯನಾರಾಯಣ ಅವರೇ,
ತೇಜಸ್ವಿ ಅವರ ಬಗ್ಗೆ ಬರೆದ ನಿಮ್ಮ ಲೇಖನ ತುಂಬಾ ಚನ್ನಾಗಿದೆ..
ಮನ ತಟ್ಟಿತು ,

Dr.Gurumurthy Hegde said...

ಸತ್ಯನಾರಾಯಣ ಅವರೇ,
ತೇಜಸ್ವಿ ಅವರ ಬಗ್ಗೆ ಬರೆದ ನಿಮ್ಮ ಲೇಖನ ತುಂಬಾ ಚನ್ನಾಗಿದೆ
ಮನ ತಟ್ಟಿತು ,

ದೀಪಸ್ಮಿತಾ said...

ಇದು ನಿಮ್ಮ ಬ್ಲಾಗಿಗೆ ನನ್ನ ಮೊದಲ ಭೇಟಿ. ನನಗೆ ಇಷ್ಟವಾಯಿತು. ತೇಜಸ್ವಿ ನಿಜಕ್ಕೂ ತಂದೆಗೆ ತಕ್ಕ ಮಗ. ತಂದೆ ಮಕ್ಕಳು ಒಂದೇ ಕ್ಷೇತ್ರದಲ್ಲಿ ಖ್ಯಾತರಾಗುವುದು ಅಪರೂಪ.

ನಿಮ್ಮ biodata, ಆಸಕ್ತಿಗಳನ್ನು ಓದಿದಾಗ ನಿಜಕ್ಕೂ ಸುಸ್ತಾಯಿತು ನನಗೆ :)
ಧನ್ಯವಾದಗಳು

ಕಂಡಕ್ಟರ್ ಕಟ್ಟಿಮನಿ 45E said...

ಬರಹ ತುಂಬಾ ಇಷ್ಟವಾಯಿತು...

Unknown said...

ಕಂಡಕ್ಟರ್ ಕಟ್ಟೀಮನಿಯವರೆ
ನಮ್ಮದು 45D ರೂಟ್. 45E ನಲ್ಲೂ ಪ್ರಯಾಣಿಸುತ್ತಿರುತ್ತೇನೆ. ಇನ್ನು ಮೇಲೆ ಆ ಬಸ್ಸಿನಲ್ಲಿ ಪ್ರಯಾಣಿಸಿದಾಗ ಕಂಡಕ್ಟರ್ ನೇಮ್ ಪ್ಲೇಟುಗಳನ್ನು ಗಮನಿಸುತ್ತೇನೆ.

vishwanatha said...

sattya narayna avre,
nanobba journalism student mysurin manasa gngotriylli study madtaedini nijakko nimma chitra lekhana adbhutavagi moodi bandide. tejswi avara bgge nimagiruv abhimankke nanna vandanegalu.nanna ondu workigige nimma barahagalanna tegedukolta edini dayavittu sahakarisi.

vishwanatha said...

sattya narayn avre,
nijkku nimma lekhana adbhutavagi mudi bndide. tejaswi avr bagge nimagiru abhimankke nanu chiraruni. thank you very much.

Unknown said...

ವಿಶ್ವನಾಥ್ ಏನು ವರ್ಕಿಗೆ ಲೇಖನ ಬಳಸಿಕೊಳ್ಳುತ್ತಿದ್ದೀರಾ ತಿಳಿಸಿ. ಹಾಗೆ ಬಳಸಿಕೊಂಡು ತಯಾರಾದ ನಿಮ್ಮ ವರ್ಕ್ ಅನ್ನು ನನಗೂ ಕಳುಹಿಸಿ ಕೊಡಿ.

ಪ್ರಸನ್ನ ರೇವನ್ said...

ನಿಮ್ಮ ಬರವಣಿಗೆ ಇಷ್ಟವಾಯಿತು.

ಕನ್ನಡತನ ಎನ್ನುವುದೇನಾದರೋ ಇದ್ದರೆ, ಪಂಪ ಹೇಳಿದಂತೆ "ದೇಸಿಯೊಳ್ ಪುಗುವುದು" ಎಂಬ ಮಾತಿನಲ್ಲಿದೆ. ತೇಜಸ್ವಿ ಅದನ್ನು ಬದುಕಿ, ಮಾಡಿ, ಆಡಿ ತೋರಿಸಿದರು. ಯಾರಾದರೂ ತೇಜಸ್ವಿಯನ್ನು ಇಷ್ಟಪಟ್ಟಿದ್ದರೆ, ಅದು ಅವರ ಈ ಗುಣಕ್ಕೆ.

ಸ್ವಾತಂತ್ರ ಪ್ರಿಯತೆ ಎಲ್ಲರಿಗೂ ಇರುತ್ತದೆ , ಆದರೆ ಅದನ್ನು ಸಾಧಿಸಿಕೊಳ್ಳುವುದು ಕೆಲವರಿಗೆ ಮಾತ್ರ ಸಾಧ್ಯ. ಇಂಗ್ಲಿಷಿನಲ್ಲಿ ಹೇಳುವಂತೆ ಅದಕ್ಕೆ "ಬಾಲ್ಸ್" ಬೇಕು. ತೇಜಸ್ವಿ ಮತ್ತು ರಾಜೇಶ್ವರಿಯವರ ಜೀವನ ಕೃಷಿ ಇಂತಹ ರಿಸ್ಕ್ ತೆಗೆದುಕೊಂಡು ಕಷ್ಟಗಳನ್ನು ಅಪ್ಪಿ, ಸುಲಭ ಎನ್ನಿಸುವಂತೆ ಮಾಡಿ ತೋರಿಸುತ್ತದೆ.

ಬೆಂಗಳೂರಿನಲ್ಲಿ, ಕಾಸಿಗೋ, ಮತ್ಯಾವುದಕ್ಕೋ ನೌಕರಿಮಾಡುತ್ತಾ, ಇನ್ನೊಬ್ಬರ ಮರ್ಜಿಯಲ್ಲಿ ಹೆಣಗುತ್ತಾ ಇರುವ ನಮ್ಮಂತವರಿಗೆ ತೇಜಸ್ವಿ ಬದುಕು ಅಪರೂಪದ ವಿಸ್ಮಯ ಎನ್ನಿಸುವುದು ಅದಕ್ಕಾಗಿಯೇ.

Unknown said...

Enter your comment...naan entha duradrushta tejaswi abhimaani sir..naan avrna nodil valla anno koragu saayovargu kaadade bidalla...nimma lekana odhi kalpanege jaaride..tumba chanda ide sir lekana