Friday, June 01, 2018

ಟಿಪ್ಪಣಿ 1: ಅಳುವುದಕ್ಕಾಗಿ ಕಾವ್ಯ ಓದಬೇಕಿಲ್ಲ; ಓದಿ ಅಳುಬಂದರೆ....

ನಾನು ಮೊದಲು ಶ್ರೀರಾಮಾಯಣ ದರ್ಶನಂ ಕಾವ್ಯವನ್ನು ವಚನಚಂದ್ರಿಕೆಯ ಮೂಲಕ ಪ್ರವೇಶಿಸಿದ್ದೆ. ನಂತರ ನನಗೆ ನಾನೇ ಮೂಲಕಾವ್ಯವನ್ನು ಓದಿಕೊಂಡೆ. ಆನಂತರ, ಸುಮಾರು ಮೂರುವರೆ ವರ್ಷಗಳ ಕಾಲ ವಾರಕ್ಕೊಂದು ದಿವಸ ಒಂದೆರಡು ಗಂಟೆಗಳ ಕಾಲ ಗುರುಗಳ ಮಾರ್ಗದರ್ಶನದಲ್ಲಿ ಸಮಾನ ಮನಸ್ಕರೊಡನೆ ಕೂಡಿ ಅಧ್ಯಯನ ನಡೆಸಿದ್ದೆ. ಆಮೇಲೆ ಅದೆಷ್ಟೋ ಬಾರಿ ಪೂರ್ಣವಾಗಿ, ಭಾಗಭಾಗವಾಗಿ ಓದಿಕೊಂಡಿದ್ದೇನೆ. ಓದುತ್ತಿದ್ದೇನೆ. (ರಾಮಾಯಣಂ ಅದು ವಿರಾಮಾಯಣಂ ಕಾಣಾ!)
ಓದಿನ ಜೊತೆಗೆ, ಅದರ ಗಮಕ ವಾಚನ ವ್ಯಾಖ್ಯಾನವನ್ನೂ ಕೇಳಿದ್ದೇನೆ. ಕುಪ್ಪಳಿ ಟ್ರಸ್ಟ್ ಐದು ಡಿವಿಡಿಗಳಲ್ಲಿ ಸುಮಾರು 80 ಗಂಟೆಗಳ ಗಮಕ-ವ್ಯಾಖ್ಯಾನವನ್ನು ಸುಮಾರು ನಲವತ್ತು ಜನ ಗಾಯಕ-ವ್ಯಾಖ್ಯಾನಕಾರರ ಸಹಕಾರದಿಂದ ಸಿದ್ಧಪಡಿಸಿದೆ. ಕಳೆದ ತಿಂಗಳು ಶ್ರೀಮತಿ ತಾರಿಣಿ ಮತ್ತು ಶ್ರೀ ಚಿದಾನಂದಗೌಡರನ್ನು ಭೇಟಿಯಾದಾಗ ಅವರು, ಗೋಕಲೆ ಸಾರ್ವಜನಿಕ ಕೇಂದ್ರದವರು ಸಿದ್ಧಪಡಿಸಿರುವ ಐದು ಸೀಡಿಗಳ ಬಗ್ಗೆ ತಿಳಿಸಿ, ಅವುಗಳನ್ನು ಕೇಳಿದರೆ ಶ್ರೀರಾಮಾಯಣ ದರ್ಶನಂ ಬಗ್ಗೆ ಒಂದು ತೌಲನಿಕ ಅಧ್ಯಯನವನ್ನು ಮಾಡಿದಂತಾಗುತ್ತದೆ. ಚಂದ್ರಶೇಖರ ಕೆದಿಲಾಯರ ಗಮಕ ಮತ್ತು ಆರ್. ಗಣೇಶರ ವ್ಯಾಖ್ಯಾನವಿದೆ ಎಂದಿದ್ದರು. ಈಗ ಅವುಗಳನ್ನು ಕೊಂಡು ಅದರಲ್ಲಿ ಮೊದಲನೆಯ ಸೀಡಿಯನ್ನು ಕೇಳುತ್ತಿದ್ದೇನೆ. ಕಥಾಂಶಕ್ಕೆ ಹೆಚ್ಚು ಒತ್ತು ಕೊಡದೆ, ಕಾವ್ಯ ವಿಶೇಷಗಳು, ದಟ್ಟ ಕಾವ್ಯವಿವರಗಳು, ವರ್ಣನೆಗಳು, ಮಹೋಪಮೆಗಳು, ಕುವೆಂಪು ಅವರಿಗೇ ವಿಶೇಷವಾದ ವರ್ಣನೆಗಳಿರುವ ಭಾಗಕ್ಕೆ ಹೆಚ್ಚು ಒತ್ತು ಕೊಟ್ಟು ಕಾವ್ಯಭಾಗಗಳನ್ನು ಆಯ್ಕೆ ಮಾಡಲಾಗಿದೆ. ಗಮಕ ಮತ್ತು ಕೊಳಲು ವಾದನವಂತೂ ಅದ್ಭುತವಾಗಿದೆ. ಶ್ರೀ ಆರ್. ಗಣೇಶ ಅವರ ವ್ಯಾಖ್ಯಾನ ಸುಮಾರು ಹತ್ತಕ್ಕೂ ಹೆಚ್ಚು ಬೇರೆ ಬೇರೆ ಭಾಷೆಗಳ ನೂರಾರು ಮಹಾಕಾವ್ಯಗಳ ಹಿನ್ನೆಲೆಯಲ್ಲಿ ಶ್ರೀ ರಾಮಾಯಣ ದರ್ಶನಂನ ಹೆಚ್ಚುಗಾರಿಕೆ, ಕುವೆಂಪು ಅವರ ಪ್ರತಿಭೆ, ಕಲಾಸೃಷ್ಟಿ, ಭಾಷಾಶ್ರೀಮಂತಿಕೆ, ರೂಪಕಗಳ ಮಹಾಪೂರ ಇವುಗಳ ಬಗ್ಗೆ ತೌಲನಾತ್ಮಿಕವಾಗಿ ಗಮನಸೆಳೆಯುತ್ತದೆ.
ನೆನ್ನೆ ನಾನು ಕೇಳುತ್ತಿದ್ದ ಒಂದು ಭಾಗ ನನ್ನನ್ನು ನನಗರಿವಿಲ್ಲದೆ ಅಳಿಸಿಬಿಟ್ಟಿತು. ಅಳುವುದಕ್ಕೆ ಕಾವ್ಯ ಓದಬೇಕೆ? ಕೇಳಬೇಕೆ? ಎಂದರೆ ಹೌದು. ಅಳುವುದಕ್ಕೆ ಕಾವ್ಯವನ್ನು ಓದಬೇಕಾಗಿಲ್ಲ; ಆದರೆ ಕಾವ್ಯವನ್ನು ಓದಿ ರಸಾವಿಷ್ಟರಾಗಿ ಕಣ್ಣೀರು ಕರೆದರೆ ಅದು ಕಾವ್ಯದ, ಕಲಾಭಿವ್ಯಕ್ತಿಯ ಶ್ರೇಷ್ಟತೆಗೆ ಹಿಡಿದ ಕನ್ನಡಿಯಾಗುತ್ತದೆ.
ಕಾವ್ಯವನ್ನು ಆಲಿಸುತ್ತಿದ್ದ ಸಂದರ್ಭವೂ ಮುಖ್ಯ! ನೆನ್ನೆ ನಾನು ಊರಿನಿಂದ ಒಬ್ಬನೇ ಕಾರಿನಲ್ಲಿ ಬರುತ್ತಿದ್ದೆ. ಹೊರಗಡೆ ಸಣ್ಣದಾಗಿ ಮಳೆ. ಎಂಬಂತ್ತನ್ನು ದಾಟದ ನಿರುದ್ವಿಜ್ಞ ಚಾಲನೆ. ತುಸು ಹೆಚ್ಚೇ ಎನ್ನಿಸುವಂತೆ ಕೊಟ್ಟಿದ್ದ ವಾಲ್ಯೂಂ. ಅದ್ಭುತವಾದ ಕೊಳಲ ಧ್ವನಿಯ ಹಿನ್ನೆಲೆ. ಪಾದುಕಾಕಿರೀಟಿ ಭಾಗ ನನ್ನನ್ನು ಬೇರೊಂದು ಲೋಕಕ್ಕೆ ಕರೆದೊಯ್ದಿತ್ತು. ಅಟ್ಲಾಂಟಿಕ್-ಫೆಸಿಪಿಕ್ ಮಹಾಸಾಗರಗಳ ತಾಡಿತದಿಂದ ಉದ್ಭವಗೊಂಡ ಹೊಸ ಭೂಶಿರವೊಂದರ ಮಹೋಪಮೆಯ ಮೂಲಕ ಶ್ರೀರಾಮ-ಭರತರ ಸಮಾಗಮವನ್ನೂ, ದಶರಥನ ಮರಣವಾರ್ತೆಯಿಂದ ಜರ್ಜಿತರಾದ ಅವರ ಮನಸ್ಥಿತಿಯನ್ನು ಕವಿ ಚಿತ್ರಿಸಿದ್ದಾರೆ. ನಂತರ ನಿತ್ಯ ತಾನು ಉಣುತ್ತಿದ್ದ ವಸ್ತುಗಳಿಂದಲೇ ತಂದೆಗೆ ತರ್ಪಣವನ್ನು ಕೊಡುತ್ತಾನೆ. ಆಮೇಲೆ ತನ್ನ ತಾಯಿ ಕೌಸಲ್ಯೆ, ಸುಮಿತ್ರೆಯರ ಜೊತೆಮಾತನಾಡುತ್ತಾನೆ. ಹಾಗೆ ಮಾತನಾಡುತ್ತಲೇ ಆತನ ಕಣ್ಣುಗಳು ಕೈಕೆಯನ್ನು ಹುಡುಕುತ್ತವೆ. ದೂರದಲ್ಲಿ ಪಶ್ಚಾತ್ತಾಪ ಶೋಕ ಭಾರಾಕ್ರಾಂತ ಗಾತ್ರೆಯಾಗಿ ತಲೆತಗ್ಗಿಸಿ ನಿಂತಿದ್ದ ಆಕೆಯ ಬಳಿ ಧಾವಿಸಿ ಪಾಪಿಯನ್ನು ಬೆಂಬಿಡದೆ ಹಿಂಬಾಲಿಸಿ ಹಿಡಿಯುವ ಕೃಪಾಕೇತುವಿನಂತೆ ಅವಳ ಕಾಲಿಗೆ ನಮಸ್ಕರಿಸುತ್ತಾನೆ. ಅಷ್ಟರಲ್ಲಿ ಕೈಕೆಯೂ ರಾಮನ ಪಾದಗಳ ಮೇಲೆ ಕುಸಿದು ಬೀಳುತ್ತಾಳೆ. ಭಗವಂತನ ಪ್ರೀತಿ ಭಕ್ತನ ಆತ್ಮವನ್ನು ಎತ್ತುವಂತೆ ರಾಮ ಆಕೆಯನ್ನು ಎತ್ತುತ್ತಾನೆ. ಮಾತಿಲ್ಲದವಳಾಗಿದ್ದ ಕೈಕೆಯನ್ನು ರಾಮ ಸಂತೈಸುವ ಚಿತ್ರಣ ಬರುತ್ತದೆ. ಈ ಭಾಗವನ್ನು ಕೇಳುತ್ತಿದ್ದ ನಾನು ನನಗರಿವಿಲ್ಲದೆ ಕಣ್ಣೀರು ಸುರಿಸಿದ್ದೆ. ಬಹುಶಃ ಆ ಗಾಯನ ನಡೆಯುವಾಗ, ಗೋಕಲೆ ಸಾರ್ವಜನಿಕ ಕೇಂದ್ರದ ಸಭಾಂಗಣದಲ್ಲಿದ್ದವರೂ ಅತ್ತಿರಬಹುದು. ಏಕೆಂದರೆ ನಂತರ ವ್ಯಾಖ್ಯಾನ ಮಾಡಿದ ಆರ್. ಗಣೇಶ್ ಅವರು ಕಾವ್ಯದ ಓದಿನಿಂದ ಉದ್ಭವಿಸುವ ಕಣ್ಣೀರಿನ ಬಗ್ಗೆಯೇ ಹೆಚ್ಚಿಗೆ ಮಾತನಾಡಿದರು. ಸತ್ಕಾವ್ಯದ ಕೆಲಸವೇ ಇದು; ಸಹೃದಯನನ್ನು ಭಾವಾವಿಷ್ಟಗೊಳಿಸುವುದು. ಅದು ಒಳ್ಳೆಯ ಸಂಗೀತದೊಂದಿಗೆ ಸೇರಿದಾಗ ಇನ್ನೂ ಮಹತ್ತರವಾದ ಪರಿಣಾಮವನ್ನು ಉಂಟುಮಾಡುತ್ತದೆ.

2 comments:

Sachin BG said...

ತುಂಬಾ ಧನ್ಯವಾದಗಳು ಸರ್...ನಿಮ್ಮ ಬ್ಲಾಗ್ ಲೇಖನಕ್ಕೆ ತುಂಬಾ ದಿನದಿಂದ ಕಾದಿದ್ದೆ

Sachin BG said...

ಹಾಗೆ ಈ ಸಿಡಿಗಳು ಎಲ್ಲಿ ಸಿಗುತ್ತವೆ ತಿಳಿಸುವಿರಾ?