Saturday, June 02, 2018

ಟಿಪ್ಪಣಿ - 6: ಕಾವ್ಯದೊಳಗಿನ ನಾಟಕ


ಕವಿ-ಕಾವ್ಯಕರ್ಮಗಳನ್ನೇ ಬಳಸಿ ಅಲಂಕಾರ ಸೃಜಿಸುವುದಕ್ಕೆ ಇನ್ನೊಂದು ಉಪಮಾಲಂಕಾರ ಸಾಕ್ಷಿಯದಗಿಸುತ್ತಿದೆ ಇಲ್ಲಿ: “ನಾಗರಿಕ ನಗರಂ ಮಹಾಕವಿಯನೋಲೈಸಿ ಮನ್ನಣೆಯನೀವಂತೆವೋಲ್”
ನಾಟಕಗಳಲ್ಲಿ ಕಾವ್ಯ ನಾಟಕಗಳದ್ದೇ ಒಂದು ಪ್ರಕಾರವುಂಟು. ಆದರೆ ಮಹಾಕಾವ್ಯದಳೊಗೆ ಅದರಲ್ಲೂ ವರ್ಣಕದೊಳಗೆ ನಾಟಕಗಳಿರುವುದು, ಕಾವ್ಯವನ್ನೇ ನಾಟಕೀಯಗೊಳಿಸುವುದು, ಹೆಚ್ಚು ಹೆಚ್ಚು ಸಂಭಾಷಣೆಯನ್ನಡಕಗೊಳಿಸುವುದು ಸ್ವಲ್ಪ ಕಷ್ಟ ಸಾಧ್ಯ. ಮೊದಲಿಗೆ ಛಂದಸ್ಸು, ಪಾದಗಳ ಮಿತಿ, ಕ್ರಿಯಾಪದ ನಾಮಪದಗಳ ಬಳಕೆಯಲ್ಲಿ ಆಗುವ ಗೊಂದಲ ಇವೆಲ್ಲವೂ ಅದಕ್ಕೆ ಕಾರಣ. ಪೂರ್ವದ ಕನ್ನಡ ಕವಿಗಳಲ್ಲಿ ರನ್ನ ಇಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತಾನೆ. ನಂತರ ರಾಘವಾಂಕ, ಕುಮಾರವ್ಯಾಸರು ಬರುತ್ತಾರೆ. ರನ್ನನ ಸಾಹಸಭೀಮವಿಜಯಂ ಎಂಬ ಪುಟ್ಟ ಕಾವ್ಯದೊಳಗಿನಿಂದಲೇ ಬಿ.ಎಂ.ಶ್ರೀ.ಯವರಂತಹ ಸಹೃದಯ ಪ್ರತಿಭೆ ‘ಅಶ್ವತ್ಥಾಮನ್’ ಮತ್ತು ‘ಗದಾಯುದ್ದ’ ಎಂಬ ಎರಡು ನಾಟಕಗಳನ್ನು ಸೃಜಿಸಿದೆ. ಹೊಸಗನ್ನಡದಲ್ಲಿ ಈ ಪರಂಪರೆಯನ್ನು ಅತಿ ಎತ್ತರಕ್ಕೆ ಕೊಂಡೊಯ್ದ ಹಿರಿಮೆ ಕುವೆಂಪು ಅವರಿಗೆ ಸಲ್ಲುತ್ತದೆ. ರಾಮಾಯಣದರ್ಶನಂದಂತಹ ವರ್ಣಕದೊಳಗೆ ಹಲವಾರು ನಾಟಕದ ದೃಶ್ಯಗಳನ್ನು, ಒಂದೆರಡು ಸಣ್ಣ ನಾಟಕಗಳನ್ನೇ ಅವರು ಅಡಕಗೊಳಿಸಿದ್ದಾರೆ ಎನ್ನಬಹುದು.
ರಾಮ-ಲಕ್ಷ್ಮಣ-ವಿಶ್ವಾಮಿತ್ರರ ನಡುವಿನ ಸಂಭಾಷಣೆ, ಶಿವಧನಸ್ಸು ಬೇದಿಸುವ ಪೂರ್ವದಲ್ಲಿಯೇ ಸೀತೆ ರಾಮನನ್ನು ಕಾಣುವುದು, ಸಹೋದರಿಯರೊಡನೆ ಮಾತನಾಡುವುದು, ರಾಮನ ಯಶಸ್ಸಿಗೆ ಪ್ರಾರ್ಥಿಸುವುದು. ಚಂದ್ರನಖಿ-ರಾಮ-ಲಕ್ಷ್ಮಣರ ನಡುವಿನ ಸಂಭಾಷಣೆ, ರಾವಣ-ಮಾರೀಚರ ನಡುವಿನ ಸಂಭಾಷಣೆ ಇಂತಹ ನೂರಾರು ಸನ್ನಿವೇಶಗಳು ನಾಟಕದ ದೃಶ್ಯಗಳಂತೆ ಚಿತ್ರಿತವಾಗಿವೆ. ಓ ಲಕ್ಷ್ಮಣಾ ಸಂಚಿಕೆ, ರಾಮ ಸುಗ್ರೀವ ಅಂಜನೇಯರ ನಡುವಿನ ಮಾತುಕತೆ, ವಾಲವಧೆ*, ರಾವಣನ ರಾಕ್ಷಸ ಸಭೆ, ಅನಲೆ-ರಾವಣ-ವಿಭೀಷಣರ ನಡುವಿನ ಮಾತುಕತೆಗಳು ಪುಟ್ಟ ಪುಟ್ಟ ನಾಟಕಗಳಂತೆಯೇ ಚಿತ್ರಿತವಾಗಿವೆ. ಅದರಲ್ಲೂ ಓ ಲಕ್ಷ್ಮಣಾ ಸಂಚಿಕೆಯಲ್ಲಿ; ಮಾಯಾಮೃಗದ ಪ್ರವೇಶ, ಸೀತೆಯ ಬೇಡಿಕೆ, ರಾಮನ ನಿರ್ಗಮನ, ಮಾರೀಚನ ಬಾಯಿಂದ ರಾಮನ ಧ್ವನಿಯಲ್ಲಿ “ಓ ಲಕ್ಷ್ಮಣಾ! ಓ ಸೀತಾ!” ಎಂದು ಖೇಳಿದ ಮೇಲೆ ಸೀತೆ ಲಕ್ಷ್ಮಣರ ನಡುವಿನ ಮಾತುಕತೆ, ಲಕ್ಷ್ಮಣನ ನಿರ್ಗಮನ, ರಾವಣನ ಪ್ರವೇಶ, ರಾವಣ-ಸೀತೆಯರ ನಡುವಿನ ಚರ್ಚೆ, ಸೀತಾಪಹರಣ, ಜಟಾಯು-ರಾವಣರ ಯುದ್ಧ, ಜಟಾಯು ಬೀಳುವುದು, ರಾಮಲಕ್ಷ್ಮಣರ ಮಾತುಕತೆ, ರಾಮನ ಮಾನವ ಸಹಜ ನಡುವಳಿಕೆ, ಜಟಾಯುವಿನ ಮೇಲೆ ಕೋಪ, ನಿಜವರಿತ ರಾಮನ ಗೋಳಾಟ, ಜಟಾಯುವಿನ ಅಂತ್ಯಸಂಸ್ಕಾರ, ಸೀತೆಗಾಗಿ ರಾಮನ ಪ್ರಲಾಪ, ಲಕ್ಷ್ಮಣನ ಸಂತೈಕೆ ಈ ಸನ್ನಿವೇಶಗಳಲ್ಲಿ ಬರುವ ಸಂಭಾಷಣೆ ಸಹಿತವಾದ ಚಿತ್ರಣ ಒಂದು ದುರಂತ ನಾಟಕವನ್ನೇ ಹೋಲುತ್ತದೆ. ದುರಂತ ನಾಟಕಕ್ಕೆ ಬೇಕಾದ ಕರಣ ಕಾರಣ ಸನ್ನಿವೇಶ ಸಂಘರ್ಷ ಪರಿಣಾಮ ಎಲ್ಲವೂ ಇಲ್ಲಿದೆ. ವೀರ ಮತ್ತು ಕರುಣ ರಸಗಳ ಕೋಡಿವೆರೆದಿದೆ.
ನೆನಪಿರಲಿ: ‘ಓ ಲಕ್ಷ್ಮಣಾ! ಓ ಲಕ್ಷ್ಮಣಾ!’ ಎಂದು ಕವಿಯ, ಮಾರೀಚನ, ಸೀತೆಯ, ರಾಮನ ಪ್ರಲಾಪನದೊಂದಿಗೆ ಆರಂಭವಾಗುವ ಈ ಸಂಚಿಕೆ ಪರ್ಯಾವಸನಗೊಳ್ಳುವುದು ರಾಮನ ಓ ಸೀತಾ! ಓ ಸೀತಾ! ಎಂಬ ಪ್ರಲಾಪದೊಂದಿಗೆ!
ಒಂದೆರಡು ಉದಾಹರಣೆಗಳು: ರಾಮನ ಧ್ವನಿಯಲ್ಲಿ ಓ ಲಕ್ಷ್ಮಣಾ! ಆ ಸೀತಾ! ಎಂಬ ಕೂಗನ್ನು ಕೇಳಿದಾಗ
ಸೀತೆ: (ದುಃಖಾತಂಕದಿಂದ) ಅಯ್ಯಯ್ಯೊ ಕೆಟ್ಟೆನಯ್, ಲಕ್ಷ್ಮಣಾ!
ಕೇಡಾಯ್ತು ಆರ್ಯಂಗೆ! ಓಡು, ನಡೆ! ನಡೆ ಬೇಗ! ನೆರವಾಗು, ನಡೆ, ಹೋಗು!
ರಾಘವಂಗೇನಾಯ್ತೊ ಕಾಣೆನಾನಯ್ಯಯ್ಯೊ!
ಲಕ್ಷ್ಮಣ: (ತುಸು ಕಿನಿಸಿನಿಂದ) ತಾಳ್ಮೆ, ತಾಯೀ, ತಾಳ್ಮೆ.
ರಕ್ಕಸನಸುರ ಮಾಯೆ ಕೂಗುತಿದೆ; ಅಗ್ರಜಧ್ವನಿ ಅದಲ್ತು.
ಭ್ರಾಂತಿಯಿಂ ನಡೆಯದಿರಿತರೆಯಂತೆ.
ಸೀತೆ: ಅಯ್ಯಯ್ಯೊ, ಆಲಿಸದೊ; ನಿನ್ನಣ್ಣನುಲಿಹವೆ ದಿಟಂ.
ನಿನ್ನನೆ ಪೆಸರ್ವಿಡಿದೆ ಕೂಗುತಿಹುದಾಲಿಸಾ!
ಕಿವಿಗೆಟ್ಟುದೇಂ; ನಿನಗೆ ಮತಿಗೆಟ್ಟುದೇಂ?
ಓಡು, ನೆರವಾಗು, ನಡೆ, ಹೋಗು; ದಮ್ಮಯ್ಯ, ಹೋಗು!
ಲಕ್ಷ್ಮಣ: ಅಣ್ಣನ ಆಜ್ಞೆ, ನಿಮ್ಮಡಿಯ ರಕ್ಷಣೆಗೆ ನನ್ನನಿಲ್ಲಿಟ್ಟು ಹೋಗಿಹನ್
ಅದಂ ಮೀರಿ ನಡೆಯಲ್ಕೆನಗೆ ಬಾರದು ಮನಂ.
ಸೀತೆ: ಕರುಳೆನಗೆ ಬೇಯುತಿಹುದು ಎನ್ನನ್ನಾತ್ಮ ಸೀಯುತಿಹುದು
ಅಯ್ಯಯ್ಯೊ ದಮ್ಮಯ್ಯ, ಲಕ್ಷ್ಮಣಾ, ಕಾಲ್ವಿಡಿವೆನ್ ಓಡು ನಡೆ;
ರಕ್ಷಿಸೆನ್ನಿನಿಯನಂ, ಪ್ರಾಣಸರ್ವಸ್ವನಂ,
ಕೌಸಲೆಯ ಕಂದನಂ, ಕೋಸಲಾನಂದನಂ, ನಿನ್ನಣ್ಣನಂ!
ಲಕ್ಷ್ಮಣ: (ಕೋಪದಿಂದ; ಸ್ವಗತ) ಹೆಣ್ಣಿನ ಹಣೆಯ ಬರಹಮಿಂತುಟೆ ವಲಂ!
(ಸಂತೈಸುವ ಧ್ವನಿಯಲ್ಲಿ) ದೇವಿ ರಾಮನಪ್ರಾಕೃತಂ! ರಾಮನಕ್ಷಯ ಮಹಿಮನ್
ಆತಂಗೆ ಪೇಳೆಣೆಯೆ ದೇವರ್ಕಳುಂ? ದನುಜರಾವ ಹೊಯಿಕೈ?
ತಮ್ಮ ನಿಧಿಯ ಬೆಲೆ ತಮಗರಿಯದವರವೋಲಾಡುವಿರಿ!
ಸಾಲ್ಗುಮೀ ಕಳವಳಂ; ಮಾಣ್ಬುದಾಶಂಕೆಯಂ; ಬಿಡಿಮನ್ನೆಯದ ಭೀತಿಯಂ.
(ಮತ್ತೆ ಮತ್ತೆ “ಓ ಲಕ್ಷ್ಮಣಾ! ಓ ಲಕ್ಷ್ಮಣಾ! ಓ ಲಕ್ಷ್ಮಣಾ ಓ!” ಎಂಬ ಧ್ವನಿ ಹಿನ್ನೆಲಯೆಲ್ಲಿ ಕೇಳಿ ಬರುತ್ತದೆ. ಇಬ್ಬರೂ ದಿಗಿಲುಗೊಳ್ಳುತ್ತಾರೆ)
ಸೀತೆ: (ಕೋಪದಿಂದ) ಭ್ರಾತೃಘಾತಕ ಪಾಪಿ, ಸಾಯಿ, ನಡೆ, ತೊಲಗು ಕಣ್ಬೊಲದಿಂ!
ಸುಮಿತ್ರಾತ್ಮಜಾತ ಪಾತಕವೊ ನೀಂ!
ಗೋಮುಖವ್ಯಾಘ್ರನೊಲ್ ಬಂದೆಯೆಮ್ಮೊಡಗೂಡಿ,
ಪೂರ್ವಜನ್ಮದ ಪಾಪದಾ ಕರ್ಮಪಾಕಂ ಬರ್ಪವೋಲ್!....
ಲಕ್ಷ್ಮಣ: (ಮುಂದೆ ಮಾತನಾಡಲು ಬಿಡದೆ, ನಿರ್ಧಾರದ ಧ್ವನಿಯಲ್ಲಿ)
ಸಾಲ್ಗುಮೀ ನಿಂದೆ, ರಾಜರ್ಷಿ ಜನಕಸುತೆ!
(ನಿಟ್ಟುಸುರಿಗರೆಯುತ್ತಾ ಕೋಪದಿಂದ)
ನೀಮಣ್ಣನಂ ಪ್ರೀತಿಸುವ ಮೊದಲೆ ಪ್ರೀತಿಸಿದೆ ನಾನಾತನಂ!
ಪೊಲ್ಲನುಡಿಗೆಡೆಗೊಟ್ಟರೀಗಳಾ ಬಳಿಕ್ಕೆ ನೀಂ ನೋವನುಣ್ಬಿರಿ...”
ಸೀತೆ: ಎಲವೊ ಲಕ್ಷ್ಮಣಾ, ಎಳೆಯ ಮುಳ್ ಚುಚ್ಚಲ್ಕೆ ನೋವಲ್ತದುವೆ ಮೆಚ್ಚು;
ಬೆಳೆದರಾ ಮುಳ್, ಅದರ ಕಚ್ಚು ಮುತ್ತಹುದೆ ಪೇಳ್?
ಎಳೆಯ ಕರು ಬೆಳೆದ ಮೇಲದರ ತಾಯನೆ ಬೆದೆಗೆ ಬಯಸಿದಪುದಯ್ಯೊ!...
ಮನದನ್ನ, ನಿನ್ನಂ ನಾನೆ ಕೊಲಿಸಿದೆನೆ?
ತನ್ನೈದೆದಾಳಿಯಂ ತನ್ನ ಕಯ್ ಕಿತ್ತೆಸೆದುದಯ್ಯಯ್ಯೊ!
(ಬಾಯಿ ಬಡಿದುಕೊಂಡು ಗೋಳಾಡುತ್ತಾಳೆ)
ಲಕ್ಷ್ಮಣ: (ದಿಗ್ಭ್ರಾಂತಿಯಿಂದ) “ಪೆಣ್ತನದ ಕಲ್ತನಕ್ಕೆಲ್ಲೆ ಮೇಣೆಣೆಯುಂಟೆ?-
ಹೇ ದೇವಿ, ಹೇ, ಮಾತೆ, ಮನ್ನಿಸೆನ್ನಂ.
ರಾಮನಾಣೆಯಂ ಮೀರಲಾರದೆ ಪೇಳ್ದೆನನ್
ಆದೊಡಂ, ನಿಮ್ಮಾಣೆ! ಹೋಗಿ ಬರುವೆನು ಬೇಗದಿಂ; ನಡೆಯಿಮೆಲೆವನೆಗೆ!
(ಲಕ್ಷ್ಮಣನ ನಿರ್ಗಮನ)
[ಲಕ್ಷ್ಮಣ ರಾಮನನ್ನು ಸಮೀಪಿಸಿದ ನಂತರ ಅವರಿಬ್ಬರ ನಡುವೆ ಆರಂಭವಾಗಿ, ಜಟಾಯುವಿನ ಅಂತ್ಯ ಸಂಸ್ಕಾರದವರೆಗಿನ ಸುಮಾರು ನೂರೈವತ್ತು ಸಾಲುಗಳು (ನಡುವೆ ಸುಮಾರು ಅರವತ್ತು ಸಾಲುಗಳ ಮಹೋಪಮೆ ಬರುತ್ತದೆ; ಅದನ್ನು ಬಿಟ್ಟು) ಕರುಣ ರಸವೇ ಪ್ರಧಾನವಾದ ಅತ್ಯತ ನಾಟಕೀಯ ಸನ್ನಿವೇಶವಿದೆ]
[*ಎಂ ಗಣೇಶ್ ಅವರು ಶ್ರೀರಾಮಾಯಣ ದರ್ಶನಂ ಕಾವ್ಯವನ್ನು ಆಧರಿಸಿ ವಾಲಿವಧೆ ಎಂಬ ರಚಿಸಿ ನಿರ್ದೇಶಿಸಿರುವುದು, ಅದರ ಯಶಸ್ಸು, ಅದಕ್ಕೆ ಸಿಕ್ಕಿರುವ ಮನ್ನಣೆ ಇವುಗಳನ್ನು ಗಮನಿಸಬಹುದು)

No comments: