Saturday, June 02, 2018

ಕಾವ್ಯದೊಗಿನ ನಾಟಕ - ರಾಮನ ದುಃಖ; ಜಟಾಯು ಮರಣ; ಲಕ್ಷ್ಮಣನ ಅಸಹಾಯಕತೆ

(ತನ್ನನ್ನು ಹುಡುಕಿ ಬಂದ ಲಕ್ಷ್ಮಣ ಕಣ್ಣಿಗೆ ಬಿದ್ದ ತಕ್ಷಣ)
ರಾಮ: ಓ ಲಕ್ಷ್ಮಣಾ. ಕೇಡಾಯ್ತಲಾ! ದೇವಿಯೊರ್ವಳಂ ಬಿಟ್ಟೇಕೆ ಬಂದೆ?
ಕೊರಳಂ ಕೊಯ್ದೆ! ಹಾ ಕೊಂದೆ ನೀ ಕೊಂದೆ!
ಪಿಂತಿರುಗು; ನಡೆ ಬೇಗಮೆಲೆವನೆಗೆ!
ಶಿವ ಶಿವಾ ಸೂರೆವೋದೆವೊ ನಾಂ ನಿಶಾಚರರ ಕೈತವಕೆ!
(ಲಕ್ಷ್ಮಣನೊಂದಿಗೆ ಪರ್ಣಕುಟಿಯಿದ್ದೆಡೆಗೆ ನಡೆಯುತ್ತಲೇ)

ಲಕ್ಷ್ಮಣ: ಕೂಗಿದುದು ನೀನಲ್ತೆ?

ರಾಮ: ಸತ್ತನ್ ಆ ರಾಕ್ಷಸಂ!

ಲಕ್ಷ್ಮಣ: ಅದು ನಿಶಾಚರ ಮಾಯೆ ಎಂದು ನಾನೆಂತೆಂತು ಪೇಳ್ದೊಡಂ....

ರಾಮ: ಅಂತಾಡಿ ನಿನ್ನನೆಳ್ಬಿದಳೆ?

ಲಕ್ಷ್ಮಣ: ಅಲ್ಲದಾನಿಂತು ಬಂದಪೆನೆ?

ರಾಮ: ಎಂತಾದೊಡಂ ತಪ್ಪಿ ನಡೆದೆ. ಪೆಣ್ಣೆಂದುದಕೆ ಮುನಿದೆ; ನನ್ನಾಣೆಯಂ ಮೀರ್ದೆ.

ಲಕ್ಷ್ಮಣ: ಅಹುದಣ್ಣಯ್ಯ. ತಪ್ಪಾಯ್ತು. ಬಗೆಯಂ ಕದಡಿತತ್ತಿಗೆಯ ನುಡಿಯ ಕೂರ್ಪು.

ರಾಮ: ಕೌಸಲ್ಯೆಯಾಶೀರ್ವಾದಮಿರ್ಕೆಮಗೆ! ಸತಿಗೆ ಕೇಡಾಗದಿರ್ಕೆ!”

ಲಕ್ಷ್ಮಣ: ಅಣ್ಣಾ, ಜಟಾಯುವಿರೆ ರಕ್ಷೆಗೆಮಗೇವುದಯ್ ಭೀತಿ?”

ರಾಮ: ಆದೊಡಮೇಕೊ, ಸೌಮಿತ್ರಿ, ನಾನೆಂದುಮನುಭವಿಸದ ಒಂದಳ್ಕು ಕರುಳ ಕಿಮುಳ್ಚುತಿದೆ!

ಲಕ್ಷ್ಮಣ: ನನಗುಮಂತೆಯೆ ಭಯಂ!

ರಾಮ: ಸದ್ದದೇನದು, ತಮ್ಮ?

ಲಕ್ಷ್ಮಣ: ಭೋರ್ಗರೆಯುತಿದೆ ದೂರ ಬಿರುಗಾಳಿ!

ರಾಮ: ಚೀತ್ಕಾರಮಾಯ್ತಲ್ತೆ?

ಲಕ್ಷ್ಮಣ: ಅಲ್ತಲ್ತು, ಕೊಂಬೆಗುಜ್ಜಿತು ಕೊಂಬೆ!

ರಾಮ: ಆರೊ ಕರೆದಂತಾಯ್ತು!

ಲಕ್ಷ್ಮಣ: ಮಂಗಟ್ಟೆವಕ್ಕಿ ಕೂಗಿತು; ಬೇರೆಯೇನಲ್ಲಯ್!

ರಾಮ: ಆಗಳಿರದಾತಪಂ ಈಗಳೆಂತಳುರುತಿದೆ! ಏಂ ಸೇದೆ!”

ಲಕ್ಷ್ಮಣ: ಪಾಳ್ದಿನಂ!

ರಾಮ: ಊರ್ಗೆ ಮರಳುವ ದಿನಮೆ ಏಂ ಕಷ್ಟಮೊದಗಿತಯ್!...

ಲಕ್ಷ್ಮಣ: ಬಳಿಸಾರ್ದುದಾಶ್ರಮಂ!

ರಾಮ: ಪೆರ್ಚುತಿಹುದೆನ್ನೆರ್ದೆಯ ಕಳವಳಂ!...

ಲಕ್ಷ್ಮಣ: ಅದೊ ಅಲ್ಲಿ! ಶಾಂತಿಯಿಂದಿಹುದೆಂತು ಪರ್ಣಕುಟಿ!
ಸಾಲ್ಗುಮಾ ದುಃಸ್ವಪ್ನಮ್; ಇನ್ನೆಂದುಮುಲ್ಲಂಘಿಸೆನ್ ನಿನ್ನ ಕಟ್ಟಾಣೆಯಂ!
ಇದುವೆ ಮೊದಲ್; ಇದುವೆ ಕೊನೆ!

ರಾಮ: ದೇವಿ ಕಾಣಿಸಳೆ!

ಲಕ್ಷ್ಮಣ: ಒಳಗಿರಲ್ ಪೇಳ್ದು ಬಂದೆನ್.

ರಾಮ: ಅದೇಕೆ......

ಲಕ್ಷ್ಮಣ: ಏನು?

ರಾಮ: ನೋಡಲ್ಲಿ ಆ ಬಳ್ಳಿ!
(ಕಿತ್ತುಬಿದ್ದಿದ್ದ ಬಳ್ಳಿಯನ್ನು ಕಂಡು ರಾಮ ‘ಹಾ ಸೀತೆ! ಹಾ ಸೀತೆ! ಹಾ ಸೀತೆ!’ ಎಂದೆಂದು ನಿಟ್ಟುಸಿರುಗರೆಯುತ್ತಾನೆ. ಮತಿವಿಕಲನಂತಾದ ರಾಮ ಸಿಕ್ಕ ಸಿಕ್ಕಲ್ಲಿ ಸೀತೆಯನ್ನು ಹುಡಕಲು ಆರಂಭಿಸುತ್ತಾನೆ)

ಲಕ್ಷ್ಮಣ: ತಾಳ್ಮೆ ತಾಳ್ಮೆ, ಹೇ ಆರ್ಯ! ದೇವಿ ಗೋದಾವರಿಗೆ...

ರಾಮ: (ಮಾತನ್ನು ಅರ್ಧಕ್ಕೆ ತಡೆದು) ಗೋದಾವರಿಗೆ ದಿಟಂ! ಗೋದಾವರಿಗೆ ದಿಟಂ!
(ನದಿಯೆಡೆಗೆ ಓಡುತ್ತಾ) ಓ ಸೀತೆ! ಓ ಸೀತೆ! ಓ ಸೀತೆ! ಓ ಓ ಸೀತೆ!
(ಧ್ವ ದಶದಿಕ್ಕುಗಳಿಂದ ಪ್ರತಿಧ್ವನಿಗಯ್ಯುತ್ತದೆ)
ಓ ಸೀತೆ! ಓ ಸೀತೆ! ಓ ಸೀತೆ! ಓ ಸೀತೆ! ಓ!
(ಲಕ್ಷ್ಮಣನನ್ನು ಉದ್ಧೇಶೀಸಿ)
ಕಂಡೆಯಾ ಸೌಮಿತ್ರಿ, ಮೈಥಿಲಿಯ ಮಾಯೆಯಂ?
ಪುಸಿಯಲ್ತು ದಿಟಮಾಕೆ ಭೂಮಿಜಾತೆಯೆ ವಲಂ!
ತಾಯ್ಮರೆಗೆ ಮಗು ನಿಂತು ಕಣ್ಣುಮುಚ್ಚಾಲೆಯಾಡುವವೋಲೆ ನಮ್ಮೊಡನಣಕವಾಡುತಿಹಳಲ್ತೆ?
ಶೈಲಗತೆ ತಾನೊರ್ಮೆ, ಕಾಂತಾರಗತೆಯೊರ್ಮೆ, ತರುಗತೆಯೊರ್ಮೆ;
ಒರ್ಮೆ ಖಗಗತೆ, ಒರ್ಮೆ ಮೃಗಗತೆ, ತರಂಗಗತೆ ಇನ್ನೊರ್ಮೆ!
ಒರ್ಮೆ ಖಂಜನ ಪಕ್ಷಿಕೂಜಿತಳ್; ಒರ್ಮೆ ಕೋಕಿಲ ಕಂಠ ಭಾಷಿತಳ್.
ಅದೊ ಅಲ್ಲಿ ಸುಸಮೀರ ಲೋಲ ಕುಸುಮಿತ ಲತಾ ರಾಜಿತಳ್;
ಇದೊ ಇಲ್ಲಿ......
(ರಾಮನ ಸ್ಥಿತಿಯನ್ನು ಕಂಡು ಲಕ್ಷ್ಮಣ ಕಣ್ಣೀರಾಗುತ್ತಾನೆ. ಆಗ)
ಕಣ್ಬನಿಗರೆವೆಯೇಕೆ, ಲಕ್ಷ್ಮಣಾ?

ಲಕ್ಷ್ಮಣ: (ದುಃಖದಿಂದ) ಇದೇನಣ್ಣಯ್ಯ, ಮತಿವಿಕಲರಂತಾಡುತಿಹೆ?
ವಿಷಮ ಸಮಯದೊಳ್ ಸಮತೆಗೆಟ್ಟುದೆ ನಿನ್ನ ಮೇರುಸಮ ಸುಸ್ಥಿರತೆ?
ದೇವಿ ತಾನೆಲ್ಲಿರ್ದಳೇನಾದಳೆಂದರಿವುದಂ ಮಾಣ್ದೆ, ಇಂತು ಕಾಲಹರಣಂ ಗೆಯ್ವುದನುಚಿತಂ
ಭಾವಜಭ್ರಾಂತಿಗೆ ಮಾರುವೋಗಿ.

ರಾಮ: ಅಯ್ಯೊ ಓ ಲಕ್ಷ್ಮಣಾ! ಏನು ಮಾಡಿದೆಯಯ್ಯ?
ನನ್ನ ಸೀತೆಯನಯ್ಯೊ ಏನು ಮಾಡಿದೆಯಯ್ಯ?
ಎಲ್ಲಿ ಬೈತಿಟ್ಟೆಯಯ್? ಹೇಳಯ್ಯ, ದಮ್ಮಯ್ಯ, ಓ ನನ್ನ ಲಕ್ಷ್ಮಣಾ!
ನಿನಗೆ ಕೈಯೆಡೆ ಮಾಡಿ, ನಿನ್ನ ರಕ್ಷೆಯೊಳಿಟ್ಟು ಹೋದೆನ್, ಎಲ್ಲಿಹಳೊರೆಯೊ ನನ್ನ ಮನದನ್ನೆ?
ಕೊಂದರೊ ಕೋಮಲಾಂಗಿಯಂ? ತಿಂದರೊ ನಿಶಾಚರರ್?
ಹಾ ಸೀತೆ! ಹಾ ಸೀತೆ! ಹೋದೆಯೆಲ್ಲಿಗೆ ತೊರೆಯುತೆನ್ನಂ?
(ಬೀಳಲಿದ್ದ ರಾಮನನ್ನು ಮಗುವಿನಂತೆ ಲಕ್ಷ್ಮಣ ತಬ್ಬಿ ಹಿಡಿದುಕೊಳ್ಳುತ್ತಾನೆ)

ಲಕ್ಷ್ಮಣ: (ಶುಶ್ರೂಷೆಯಿಂದ ರಾಮ ಎಚ್ಚರಗೊಂಡಾಗ)
ಶಾಂತಿ, ಹೇ ಧೀರಮತಿ! ಕಾತರಿಸದಿರೊ, ದಾಶರಥಿ!
ವಿಹಂಗೇಂದ್ರನಿಂ ದೇವಿ ಎಲ್ಲಿಹಳ್ ಎತ್ತಲೈದಿದಳ್ ಎನಿಪ್ಪುದಂತಿಳಿವಂ
ಅಲ್ಲಿಂ ಬಳಿಕಮೇಂ ಕಜ್ಜಮೆಂಬುದಂ ನಿಚ್ಚಯಿಸುವಂ.
ಬರಿದೆ ಪಲವಂ ಪಲುಂಬಿದೊಡೆ. ಫಲವೇನ್?

ರಾಮ: (ದಿಗ್ಗನೆದ್ದು ಓಡುತ್ತಾ) ಜಟಾಯೂ! ಜಟಾಯೂ! ಓ ಜಟಾಯೂ!
(ಪ್ರತ್ಯುತ್ತರ ಬರದಿದ್ದಾಗ ಕೋಪಗೊಂಡು)
ಲಕ್ಷ್ಮಣ, ತಿಳಿಯಿತೀಗಳಾ ಖಳಖಗಮೆ ಕಾರಣಂ ಸತಿಯಿಲ್ಲಮೆಗೆ.

ಲಕ್ಷ್ಮಣ: ಅಯ್ಯೊ, ಅಣ್ಣಯ್ಯ, ಏನ್ಮಾತನಾಡುತಿಹೆ?

ರಾಮ: (ಭೀಷಣನಾಗಿ) ಸಾಕು ಬಿಡು, ಸೌಮಿತ್ರಿ, ಜಗಮನಿತುಮಾ ಕೈಕೆ! ಕೈತವಮದರ ಹೃದಯಂ!
ಪಸುಮೊಗದ ಬಗ್ಗನಾ ಖೂಳನಾತನ ಕುಲಕೆ ತಕ್ಕುದನೆ ನೆಗಳ್ದುದಾ ರಣಹದ್ದು!
ಅಯ್ಯೊ ಹಾ ದುರುಳ ಪರ್ದ್ದಿಗೆ ಮರುಳುವೋದಳೆ ದಿಲೀಪಕುಲ ಸಂಭವನ ಸತಿ?
ಕೊಲ್ವೆನಾತನಂ; ನೀಚನಂ, ಮಾರೀಚಗಿಂ ಮಿಗಿಲ್ ಪಾಪಿಯಂ,
ಜವನೆಡೆಗೆ ಜವದಿಂದೆ ಕಳುಹದಿರೆ ಸುಡಲಿ ನನ್ನೀ ಬಾಳ್ಕೆ.
ಓ ಬಾರ ಲಕ್ಷ್ಮಣಾ; ಈ ಮಹದ್ವಿಪಿನಮಂ ಸೋದಿಸುವಮೆಲ್ಲೆಲ್ಲಿಯುಂ.
ಕಂಡೊಡನೆ ಪರ್ದ್ದು ಗಂಟಲಂ ಮುರಿದು, ಕಾಲಂ ತಿರುಪಿ ತಿಪ್ಪುಳಂ ಪರಿದು,
ಬರಿಯಂ ಬಗಿದು, ಮೂಳೆಯಂ ನುರಿಗೆಯ್ದು, ಕ್ರಿಮಿಕೀಟಕಂಗಳಿಗೆ ಬಿರ್ದ್ದಿಕ್ಕುವೆನ್,
ಬಸಿದು ಕೆನ್ನತ್ತರಂ!
[ಜಟಾಯುವನ್ನು ಹುಡುಕುತ್ತಾ ಮುಂದುವರೆಯುತ್ತಾರೆ. ಒಂದೆಡೆ ಒಂದು ಎರಡು ಮೂರು ನಾಲ್ಕು ಐದು ಗರಿಗಳು ಬಿದ್ದಿರುತ್ತವೆ. ಮುಂದೆ ಜಟಾಯು ಇನ್ನೇನು ಸಾಯುವ ಸ್ಥಿತಿಯಲ್ಲಿ ಬಿದ್ದಿರುತ್ತಾನೆ]

ರಾಮ: ಏನಿದಯ್, ಸೌಮಿತ್ರಿ?
ಸಾಹಸಿ ಜಟಾಯುವಂ ಬಯ್ದುದನ್ನೆಯವೆಂದು ತೋರುತಿದೆ!

ಲಕ್ಷ್ಮಣ: ಅಯ್ಯೊ ಅಣ್ಣಯ್ಯ!
(ಚೀರುತ್ತಾನೆ. ಇಬ್ಬರೂ ಹೋಗಿ ಜಟಾಯುವನ್ನು ನೋಡುತ್ತಾರೆ)

ರಾಮ: (ಕೊರಳು ಜೋಲುತ್ತಿದ್ದ ಜಟಾಯುವನ್ನು ಹಿಡಿದು)
ಏನಿದಯ್, ವಿಹಗೇಂದ್ರ, ಏನಿದೀ ಸ್ಥಿತಿ ನಿನಗೆ?
ಪೂಜ್ಯನೆ, ಪರಾಭವಂ ನಿನಗೆಂತೊ?
ಪೇಳಾವನಿಂದಾದುದೀ ಘೋರಕೃತಿ? ಏಕೆ?
ನಿನ್ನ ಮಗಳೆಲ್ಲಿ? ಪೇಳಯ್ಯ, ದಶರಥ ಮಿತ್ರ, ರಘುಕುಲದರಸಿಯೆಲ್ಲಿ?
ರಾಮನ ಮಡದಿಯೆಲ್ಲಿ? ಪೇಳೆತ್ತವೋದಳೊ ನನ್ನ ಮನದನ್ನೆ?
ರಾಜರ್ಷಿ ಜನಕದೇವನ ಧರಾಕನ್ಯೆ?

ಜಟಾಯು: (ನೋವಿನಿಂದ ತೊದಲುತ್ತಾ) ದೇವಿಯಂ....
ನೈ... ಋ... ತ್ಯ... ವಿತ್ತೇಶನವರಜಂ...
(ಎನ್ನುತ್ತಲೇ ಪ್ರಾಣ ಬಿಡುತ್ತಾನೆ)

ರಾಮ: ಮುಂದೆ ಹೇಳಯ್ಯ; ನಿಲ್ಲಯ್ಯ. ಖಗವರ್ಯ!.....................
(ಮುಂದೆ ಮಾತಿಲ್ಲ; ಜಟಾಯುವಿಗೆ ರಾಮ ಅಂತ್ಯಸಂಸ್ಕಾರ ನಡೆಸುತ್ತಾನೆ; ಲಕ್ಷ್ಮಣ ಸಹಕರಿಸುತ್ತಾನೆ)
(ತೆರೆ ಬೀಳುವುದು)

No comments: