Wednesday, November 04, 2009

‘ಆ ಕಾಲವೊಂದಿತ್ತು’ - ಡಾ.ರಮೇಶ್‌ಚಂದ್ರ ದತ್ತ


{ಡಾ. ರಮೇಶ್‌ಚಂದ್ರ ದತ್ತ ಅವರು ಹೆಸರಾಂತ ರಂಗನಿರ್ದೇಶಕರು. ಮದರಾಸು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಮತ್ತು ಪಿಹೆಚ್.ಡಿ. ಪದವಿಗಳನ್ನು ಪಡೆದಿದ್ದಾರೆ. ವಿಜಯನಗರದಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ಇವರ ರಂಗಪ್ರತಿಭೆಯನ್ನು ಗುರುತಿಸಿ ‘ಭಾರತ ಯಾತ್ರಾಕೇಂದ್ರ’ 2004-2005 ನೇ ಸಾಲಿನ ‘ಸಂಸ’ ರಂಗಪ್ರಶಸ್ತಿಯನ್ನು ನೀಡಿ ಗೌರವಿಸಿದೆ.}


‘ನನ್ನ ಹೈಸ್ಕೂಲ್ ದಿನಗಳು’ ಪುಸ್ತಕದ ಮುನ್ನುಡಿ

ಸತ್ಯ ಘಟನೆಗಳನ್ನು ಅನಾವರಣಗೊಳಿಸುವ ಸಂಕಥನವನ್ನು ರಚಿಸುವುದು ಸ್ವಲ್ಪ ಮುಜುಗರದ ಸಂಗತಿಯೇ. ಒಂದು ತೆರನ ಬೆತ್ತಲಾಗುವ ಪ್ರಕ್ರಿಯೆ. ಹಾಗಾಗಿ ಸತ್ಯಗಳನ್ನೆಲ್ಲಾ ಮರೆಮಾಚುತ್ತಾ ಬರೆಯುವ ರೀತಿಗೆ ಒಗ್ಗಿಹೋಗಿದ್ದೇವೆ. ಮಾತ್ರವಲ್ಲದೆ ಇದು ಕಲಾತ್ಮಕತೆ, ಶೈಲಿ ಎಂದು ಏನೆಲ್ಲಾ ಕರೆದುಕೊಂಡಿದ್ದೇವೆ. ಸತ್ಯನಾರಾಯಣ ತಮ್ಮ ಸ್ಮೃತಿಯಲ್ಲಿರುವ ಭೂತದ ನೆನಪುಗಳನ್ನು ಹಾಗೆಯೇ ಕಾಗದದ ಮೇಲೆ ಇಳಿಸಹೊರಟಿದ್ದಾರೆ. ಇದು ನಿಷ್ಠುರಕ್ಕೊಳಗಾಗುವ ಕೆಲಸ ಎಂಬ ಅರಿವು ಅವರಿಗಿದೆ. ಜೀವನದ ಅನೇಕ ಎಡರು-ತೊಡರುಗಳನ್ನು ದಾಟಿ ಗ್ರಂಥಪಾಲಕರ ಹುದ್ದೆಗೆ ಏರಿದ ಸತ್ಯನಾರಾಯಣರ ಬಾಲ್ಯದ ಅನುಭವ ಅನಂತವಾದುದು. ಬಾಲ್ಯ ಕಟ್ಟಿಕೊಡುವ ಇಂತಹ ಅನುಭವದ ಬುತ್ತಿಯ ಎದುರು ಬೇರೇನಿದೆ. ಹಾಗಾಗಿಯೇ ಕುವೆಂಪುರವರು ‘ಆ ಕಾಲವೊಂದಿತ್ತು’ ಎಂದಿರುವುದು. ನಾಲ್ಕು ಗೋಡೆಗಳ ಒಳಗೆ ಬಾಗಿಲು ಹಾಕಿದ ಮನೆಯಲ್ಲಿ ತೆರೆದುಕೊಳ್ಳದೇ ಬೆಳೆಯುವ ಪಟ್ಟಣದ ಮಕ್ಕಳಿಗೆ ಎಲ್ಲಿದೆ ಇಂತಹ ಅನುಭವದ ಬುತ್ತಿ. ಬಾಲ್ಯದ ಬಡತನದ ನೆನಪಲ್ಲದೆ ಹಣದ ಹುಚ್ಚುಹೊಳೆಯಲ್ಲಿ ತೇಲಿಹೋಗುತ್ತಿರುವ ನವಸಮಾಜದ ನಾಗರಿಕನಿಗೆ ಇದು ಏನೂ ಅಲ್ಲ ಎನಿಸಬಹುದು. ಆದರೆ ಸಾಹಿತ್ಯದ ಅಭಿರುಚಿ ಇರುವ ಪ್ರತಿಯೊಬ್ಬ ಓದುಗನಿಗೆ ಓದುಗನಿಗೆ ಹೊಸ ಅನುಭವ ನೀಡುವ ಬರಹ ಇದಾಗಿದೆ.

ತನ್ನ ಬದುಕಿನ ಸಂದರ್ಭದಲ್ಲೇ ಒಳ್ಳೆಯ ಬದುಕನ್ನು ಕಟ್ಟಿಕೊಳ್ಳಲು ಸಮರ್ಥರಾಗದ ಅಧ್ಯಾಪಕ ಸಮೂಹ ವಿದ್ಯಾರ್ಥಿಗಳ ಬದುಕನ್ನು ಕಟ್ಟಲು ಸಾಧ್ಯವೇ ಎನ್ನುವ ಗುಮಾನಿಯಿಂದಲೇ ಆರಂಭವಾಗುವ ಸತ್ಯನಾರಾಯಣರ ಜೀವಾನಾನುಭದ ಕಥನ ಬಹುಶಃ ಎಲ್ಲಾ ಗ್ರಾಮೀಣ ವಿದ್ಯಾರ್ಥಿಗಳ ಜೀವನ ಕಥನವೇ ಆಘಿದೆ. ಹೆಂಡ, ಜೂಜು ಮೊದಲಾದವುಗಳಲ್ಲಿ ಮುಳುಗಿರುವ ಅಧ್ಯಾಪಕ ಯಾವ ಜೀವನ ಮೂಲ್ಯಗಳನ್ನು ವಿದೈಆರ್ಥಿಗಳಲ್ಲಿ ಹುಟ್ಟುಹಾಕಲು ಸಾಧ್ಯ. ಒಳ್ಳೆಯ ಸಮಾಜವನ್ನು ಕಟ್ಟುವಲ್ಲಿ ತನ್ನ ಪಾತ್ರವಿದೆ ಎನ್ನುವುದನ್ನು ಮರೆತಿರುವ ಬಹುತೇಕ ಅಧ್ಯಾಪಕರು ಬೆಲ್ಲು-ಬಿಲ್ಲಿನ ಅಧ್ಯಾಪಕರೇ ಆಗಿದ್ದಾರೆ ಎಂಬ ಸತ್ಯವನ್ನು ಬಿಚ್ಚಿಟ್ಟಿದ್ದಾರೆ ಸತ್ಯನಾರಾಯಣ. ಆದರೆಶ್ರದ್ಧಾಭಕ್ತಿಗಳಿಂದ ತನ್ನ ಕಾಯಕವನ್ನು ನಡೆಸುತ್ತಿದ್ದ ಪ್ರಮಾಣಿಕ ಅಧ್ಯಾಪಕ ವೆಂಕಟಪ್ಪನಂಥವರೂ ಅಲ್ಲೊಮ್ಮೆ ಇಲ್ಲೊಮ್ಮೆ ಕಾಣಿಸುತ್ತಾರೆ ಎನ್ನುವುದನ್ನು ಮರೆಯುವಂತಿಲ್ಲ.

ಕುಂದೂರುಮಠದ ಹಿನ್ನೆಲೆ ಐತಿಹ್ಯ ಹಾಗೂ ಜಾನಪದ ಆಚರಣೆಗಳ ವಿವರಣೆಗಳು ಅವುಗಳ ಹಿಂದಿನ ರಾಜಕಾರಣ ಬಲಿಷ್ಠ ಜಾತಿಗಳ ಪ್ರಾಬಲ್ಯ ಮೊದಲಾದವುಗಳ ಬಗಗೆ ವಿವರಣೇ ನೀಡುತ್ತಾ ಹೋಗುವ ಸತ್ಯನಾರಾಯಣ ಮತ್ತೆ ತಮ್ಮ ಹೈಸ್ಕೂಲಿನ ಅನುಭವಗಳ ಕಡೆಗೆ ಹೊರಳುತ್ತಾರೆ. ಏಳನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿ ಶಹಬ್ಬಾಸ್ಗಿರಿ ಪಡೆವ ಅವರು ಟೀ.ಸಿ.ಯ ಹಿಂದೆ ಬರೆದ ಅಂಕಗಳನ್ನು ತಿದ್ದಲು ಹೋಗಿ ಸಿಕ್ಕಿಹಾಕಿಕೊಂಡು ಅನುಭವಿಸಿದ ಅವಾಂತರದ ಚಿತ್ರಣ, ಎಂಟನೇ ತರಗತಿಗೆ ಮಾನಿಟರ್ ಆದದ್ದು, ತರಗತಿ ಮಾನಿಟರ್ ಮಾಡುವುದರ ಜೊತೆಗೆ ವೆಂಕಟಪ್ಪನವರ ಬಹಿರ್ದೆಸೆಗೆ ನೀರನ್ನು ತೆಗೆದುಕೊಂಡು ಹೋಗಿ ಕೊಡಬೇಕಾದ ಪ್ರಸಂಗ, ವೆಂಕಟಪ್ಪನವರ ಪ್ಯಾಂಟಿನಲ್ಲಿ ಇರುವೆ ಸೇರಿದಾಗ ಅವುಗಳನ್ನು ಸಂಹರಿಸಿದ್ದು, ವೆಂಕಟಪ್ಪನವರ ಬಂಧುಗಳು ತೀರಿಕೊಂಡಾಗ ಅವರಿಗೆ ಸೈಕಲ್ಲಿನಲ್ಲಿ ಲಿಫ್ಟ್ ಕೊಟ್ಟಿದ್ದು ಈ ಎಲ್ಲಾ ಸಂದರ್ಭಗಳಲ್ಲಿ ವೆಂಕಟಪ್ಪನವರು ತಮ್ಮನ್ನು ಪ್ರೀತಿಯಿಂದ ನಡೆಸಿಕೊಂಡ ಬಗೆ ಇವುಗಳನ್ನು ವಿವರಿಸುತ್ತಾ ಅವರ ಮಾನವೀಯತೆಯ ಬಗೆಗೆ ಒಳ್ಳೆಯ ಮಾತುಗಳನ್ನು ಆಡುತ್ತಾರೆ. ಜೊತೆಗೆ ಅಂತಹ ಮಾನ್ಯರೂ ಶಿಕ್ಷಣ ಕ್ಷೇತ್ರದಲ್ಲಿದ್ದಾರೆ ಎಂಬ ಸತ್ಯದ ಅರಿವಾದ ಪ್ರಸಂಗವನ್ನೂ ವಿವರಿಸುತ್ತಾರೆ.

ಹೈಸ್ಕೂಲ್ ವಿದ್ಯಾಭ್ಯಾಸದ ದಿನಗಳಲ್ಲಿ ಸತ್ಯನಾರಾಯಣರಿಗೆ ಮೇಷ್ಟ್ರುಗಳು ಬಹಳ ಕಾಡಿದ್ದಾರೆ. ಹುಣ್ಣಿಮೆ ಅಮಾವಾಸ್ಯೆ ದಿನಗಳಲ್ಲಿ ಮನಸ್ಸಿನ ಸ್ವಾಸ್ಥ್ಯ ಕಳೆದುಕೊಂಡು ವಿದ್ಯಾರ್ಥಿಗಳಿಗೆ ಹೊಡೆಯುತ್ತಿದ್ದ ಹಾಗೂ ಇಂಗ್ಲಿಷ್ ಓದಲು ಬರದಿದ್ದರೂ ಪಾಠ ಮಾಡುತ್ತಿದ್ದ ಸಿ.ಓ.ಆರ್.ಪಿ.ರೇಷನ್ ಮೇಷ್ಟ್ರು ಡಿ.ಎಸ್.ನಿಂಗೇಗೌಡ, ವಿದ್ಯಾರ್ಥಿಗಳನ್ನು ಹೊಡೆಯುವುದರಲ್ಲಿ ಹೆಸರುವಾಸಿಯಾಗಿದ್ದ ಮಿಡ್ಲಿಸ್ಕೂಲಿನ ರಾಮೇಗೌಡ, ಮುಂದೆ ಹತ್ತನೇ ತರಗತಿಯಲ್ಲಿದ್ದಾಗ ವಾರ್ಡನ್ ಆಗಿ ಭಂದ ಭೀಮಪ್ಪ ಕರಿಯಪ್ಪ ಮೊದಲಾದವರ ಗುಣಸ್ವಭಾವದ ಚಿತ್ರಣ ಕುತೂಹಲಕಾರಿಯಾದವು. ತನ್ನ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ತನ್ನದೇನೂ ಪಾತ್ರವಿಲ್ಲ ಎಂಬಂತೆ ಸ್ವಂತಪುರಾಣವಾಚನಗೋಷ್ಠಿ ನಡೆಸುತ್ತಾ, ಹುಡುಗಿಯರ ಕೈಹಿಡಿದು ಹಸ್ತರೇಖೆ ನೋಡಿ ಭವಿಷ್ಯ ಹೇಳುತ್ತಾ ವಿದ್ಯಾರ್ಥಿನಿಯರ ಎದುರು ಲಘುವಾಗಿ ಮಾತನಾಡುತ್ತಾ ತಮ್ಮ ಅವಿವೇಕವನ್ನು ಪ್ರದರ್ಶಿಸುತ್ತಿದ್ದ ಹಾಗೂ ಗೈಡ್ ನೋಡಿ ಪಾಠ ಮಾಡುವ ಮೇಷ್ಟರಿಂದ ಏನನ್ನು ತಾನೆ ನಿರೀಕ್ಷಿಸಲಾದೀತು? ವಿದ್ಯಾರ್ಥಿಗಳು ಮುಂದೊಂದು ದಿನ ತನ್ನ ಅಧ್ಯಾಪಕರನ್ನು ಃಏಗೆ ನೋಡಬಹುದು ಎನ್ನುವುದಕ್ಕೆ ಈ ಚಿತ್ರಣ ಉತ್ತಮ ನಿದರ್ಶನವಾಗಿದೆ. ಅಧ್ಯಾಪಕನ ಬದುಕಿನ ರೀತಿ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಬಲ್ಲದು ಎನ್ನುವ ಅರಿವಿಲ್ಲದ ಅಧ್ಯಾಪಕರ ಸಮೂಹವನ್ನು ಇಲ್ಲಿ ನೋಡಬಹುದು. ಸಾಮಾನ್ಯ ಬರಹಗಳಲ್ಲಿ ಅಧ್ಯಾಪಕರಲ್ಲಿಲ್ಲದ ಗುಣಗಳನ್ನು ಆರೋಪಿಸಿ ಹೊಗಳಿ ಬರೆಯುವ ರೂಢಿಯಿದೆ. ಆದರೆ ಸತ್ಯನಾರಾಯಣರು ಇನ್ನೊಂದು ಮುಖದ ದರ್ಶನ ಮಾಡಿಸಹೊರಟಿದ್ದಾರೆ.

ಮೇಷ್ಟ್ರು ಪುರಾಣದ ಜೊತೆಗೆ ಬಾಲ್ಯದ ಇತರ ಅನುಭಗಳನ್ನು ಸತ್ಯನಾರಾಯಣ ಇಲ್ಲಿ ಹಂಚಿಕೊಂಡಿದ್ದಾರೆ. ಹಾಸ್ಟೆಲ್ ಬದುಕಿನ ಚಿತ್ರಣ ಸಿನಿಮಾ ಹುಚ್ಚು, ಬೆಂಕಿದೆವ್ವ, ಕಡ್ಲೆಕಾಯಿ ಕಲ್ಲಂಗಡಿ ಕದ್ದದ್ದು, ಬಾಂಬ್ ಮಾಡಿದ್ದು, ಜಾತ್ರೆಯಲ್ಲಿ ಚಂದಾ ವಸೂಲಿ ಮಾಡಿದ್ದು, ಕದ್ದು ಸಿಗರೇಟು ಸೇದಿದ್ದು, ರಾಜಕೀಯ ಪಕ್ಷದ ರ‍್ಯಾಲಿಗೆ ಲಾರಿ ಪ್ರವಾಸ ಮಾಡಿದ್ದು ಹೊಟೇಲ್ ಮಂಜಣ್ಣನ ಒಡನಾಟ ಹೀಗೆ ಬಾಲ್ಯವನ್ನು ಇವೆಲ್ಲವುದರ ನಡುವೆ ನೆನಪಿಸಿಕೊಳ್ಳುತ್ತಾರೆ. ಹುಡುಗಾಟದ ದಿನಗಳಲ್ಲಿ ತಾನೂ ಭ್ರಷ್ಟನಾದ ಸಾಧ್ಯತೆಗಳನ್ನು ವಿವರಿಸಲು ಹಿಂಜರಿಯುವುದಿಲ್ಲ. ಅಗಾಧವಾದ ಜೀವನಾನುಭವ ಹೇಗೆ ಗಟ್ಟಿಯಾದ ಬದುಕನ್ನು ಕಟ್ಟಿಕೊಡುತ್ತದೆ ಎನ್ನುವುದಕ್ಕೆ ಈ ಸಂಕಥನ ಸಾಕ್ಷಿಯಾಗಿದೆ. ಹೇಳಬೇಕೆನ್ನಿಸಿದ್ದನ್ನು ನೇರವಾಗಿ ಹೇಳಿಯೇ ಬಿಡುವ ಸತ್ಯನಾರಾಯಣರ ಮನೋದಾರ್ಷ್ಟ್ಯ ಅಪರೂಪದ್ದು. ಬರಹಗಾರನ ತುಡಿತವೇ ಅಂತಹದ್ದು. ಕುವೆಂಪು ಹೇಳುವಂತೆ ‘ಹೇಳಿದರೆ ಹಾಳಾಗುವುದೋ ಈ ಅನುಭವದ ಸವಿಯು ಹೇಳದಿದ್ದರೆ ತಾಳಲಾರನೋ ಕವಿಯು’

ಈ ಸಂಕಥನ ಇಲ್ಲಿಗೇ ನಿಲ್ಲದೇ ಮುಂದಿನ ದಿನಗಳಲ್ಲಿ ಜೀವನಾನುಭವದ ಚಿತ್ರಣಗಳು ಸತ್ಯನಾರಾಯಣರ ಲೇಖನಿಯಿಂದ ಮೂಡಿಬರಲಿ ಎಂದು ಆಶಿಸುತ್ತೇನೆ.

5 comments:

ಚುಕ್ಕಿಚಿತ್ತಾರ said...

ಮುನ್ನುಡಿ ಚೆನ್ನಾಗಿ ಬರೆದಿದ್ದಾರೆ. ಬಹುಷ; ನಮ್ಮ ನೆನಪಿನಲ್ಲಿ ಉಳಿಯುವ ಬಾಲ್ಯದ ದಿನಗಳೆ೦ದರೆ ಹೈಸ್ಕೂಲ್ ದಿನಗಳೇ ..... ಇಲ್ಲಿ ಗುರುಗಳ ಉತ್ತಮ ಮಾರ್ಗದರ್ಶನ ಸಿಕ್ಕಲ್ಲಿವಿಧ್ಯಾರ್ಥಿಯ ಜೀವನಕ್ಕೊ೦ದು ಒಳ್ಳೆಯ ತಿರುವು ಸಿಗುವುದು ಸತ್ಯ..... ಧನ್ಯವಾದಗಳು.

ಸಾಗರದಾಚೆಯ ಇಂಚರ said...

ಸುಂದರ ಮುನ್ನುಡಿ,
ಶುಭಾ ಹಾರೈಕೆಗಳು

shivu.k said...

ಡಾ.ರಮೇಶ್ ಚಂದ್ರ ದತ್ತ ಮುನ್ನುಡಿಯನ್ನು ತುಂಬಾ ಚೆನ್ನಾಗಿ ಬರೆದಿದ್ದಾರೆ.

ಅವರ ಬಗ್ಗೆ ಒಂದಷ್ಟು ವಿಚಾರಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.

AntharangadaMaathugalu said...

ಮುನ್ನುಡಿ ತುಂಬಾ ಚೆನ್ನಾಗಿದೆ ಸಾರ್......

ಶ್ಯಾಮಲ

PARAANJAPE K.N. said...

ರಮೇಶಚಂದ್ರ ದತ್ತರ ಮುನ್ನುಡಿ ಚೆನ್ನಾಗಿದೆ. ನಾನು ಅವರನ್ನು ಬಹಳ ವರುಷಗಳಿಂದ ಬಲ್ಲೆ. ಬಾಲ್ಯದ ದಿನಗಳ ನಿಮ್ಮ ಬರಹ ರಸವತ್ತಾಗಿದೆ, ಅದನ್ನು ಪುಸ್ತಕ ರೂಪದಲ್ಲಿ ಓದಿದ್ದೇನೆ. ಇ೦ತಹ ಇನ್ನಷ್ಟು ಮೌಲಿಕ ಬರಹಗಳು ನಿಮ್ಮಿಂದ ಮೂಡಿಬರಲಿ ಎ೦ದು ಹಾರೈಸುವೆ