Monday, November 09, 2009

ಹೀಗೊಂದು ಬೆನ್ನುಡಿ -ಸುಗ್ಗನಹಳ್ಳಿ ಷಡಕ್ಷರಿ


{ಹೆಸರಾಂತ ಸಾಹಿತಿ ಶ್ರೀ ಎಸ್. ರುದ್ರಮೂರ್ತಿಶಾಸ್ತ್ರಿಗಳ ತಮ್ಮಂದಿರಾದ ಶ್ರೀ ಸುಗ್ಗನಹಳ್ಳಿ ಷಡಕ್ಷರಿ ಅವರು ನನ್ನ ಸಹೋದ್ಯೋಗಿ. ನಮ್ಮ ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಬಂದು, ನಂತರ ಕನ್ನಡ ಎಂ.ಎ. ಮಾಡಿ ಕನ್ನಡ ಉಪನ್ಯಾಸಕರಾದವರು. ಹಲವಾರು ಒಳ್ಳೆಯ ಭಾವಗೀತೆಗಳನ್ನು ಬರೆದಿರುವ ಇವರ ಹಲವು ಭಾವಗೀತೆಗಳ ಸಿ.ಡಿ.ಗಳು ಪ್ರಕಟವಾಗಿವೆ. ಉಡುಪಿ ಜಯರಾಂ ಅವರ ಬಗ್ಗೆ ಪುಸ್ತಕವೊಂದನ್ನೂ ಬರೆದಿದ್ದಾರೆ. ಹಲವಾರು ಸಣ್ಣಕಥೆ, ಕವಿತೆ, ಏಕಾಂಕಗಳನ್ನು ಬರೆದಿದ್ದಾರೆ. ಹವ್ಯಾಸಿ ಪತ್ರಕರ್ತರೂ ಹೌದು. ಜೊತೆಗೆ ಭರತನಾಟ್ಯ ಕಲಾವಿದರಾಗಿ, ವಿಮರ್ಶಕರಾಗಿ ಚಿರಪರಿಚತರು. ಇವರ ಹಾಡೊಂದು ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರಪತಿಭವನದಲ್ಲಿ ಹಾಡಲ್ಪಟ್ಟಿತ್ತು! ಎಲ್ಲಕ್ಕಿಂತ ಹೆಚ್ಚಾಗಿ ಸೊಗಸಾದ ಕಾರ್ಯಕ್ರಮ ನಿರೂಪಕರಾಗಿಯೂ ಜನಪ್ರಿಯರಾಗಿದ್ದಾರೆ. ಅಬ್ದುಲ್ ಕಲಾಂ ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಇವರ ಕನ್ನಡ ಭಾಷೆಯ ನಿರೂಪಣೆಯನ್ನು ಕೇಳಿ, ಕಾರ್ಯಕ್ರಮ ಮುಗಿದನಂತರ ಸ್ವತಃ ಕಲಾಂ ಅವರೇ, 'ನನಗೆ ಕನ್ನಡ ಸರಿಯಾಗಿ ಅರ್ಥವಾಗದಿದ್ದರೂ, ನಿಮ್ಮ ನಿರೂಪಣೆಯನ್ನು ಎಂಜಾಯ್ ಮಾಡಿದೆ. ಅಷ್ಟು ಚೆನ್ನಾಗಿತ್ತು. ಸುಂದರವಾದ ಭಾಷೆ' ಎಂದು ಬೆನ್ನು ತಟ್ಟಿ ಹೇಳಿದರಂತೆ!
ನನ್ನ ಪುಸ್ತಕಕ್ಕೆ ಬೆನ್ನುಡಿ ಬರೆದುಕೊಡಿ ಎಂದಾಗ ಪ್ರೀತಿಯಿಂದ ಒಪ್ಪಿಕೊಂಡು ಬರೆದುಕೊಟ್ಟರು. ಅದೇ ಒಂದು ಪ್ರತ್ಯೇಕ ಲೇಖನದಂತಿತ್ತು. 'ಪುಸ್ತಕದ ಬಗ್ಗೆ ನನಗೆ ಹೇಳಬೇಕನಿಸಿದ್ದನ್ನು ಹೇಳಿದ್ದೇನೆ. ಬೆನ್ನುಡಿಗೆ ಎಷ್ಟು ಬೇಕೋ ಅಷ್ಟನ್ನು ಬಳಸಿಕೊಳ್ಳಿ' ಎಂದಿದ್ದರು. ಅದು ಇಲ್ಲಿದೆ}


ಹೈಸ್ಕೂಲು ದಿನಗಳು ಎಲ್ಲರ ಬದುಕಿನಲ್ಲಿ ಯಾವತ್ತೂ ಮಧುರ ನೆನಪನ್ನು ನೀಡುವ ದಿನಗಳು. ಏಕೆಂದರೆ ಎಲ್ಲವನ್ನೂ ಮರೆತುಬಿಡುವ ಬಾಲ್ಯವನ್ನು ಆಗಷ್ಟೇ ಹಾದುಬಂದಿರುತ್ತೇವೆ. ಹಾಗೆಯೇ ಅನುಭವಗಳನ್ನು ತರ್ಕಕ್ಕೆ ಒಡ್ಡಿಕೊಳ್ಳುವ ಯೌವನದ ನಿರೀಕ್ಷೆಯಲ್ಲಿರುತ್ತೇವೆ. ಈ ನಡುವಿನ ಅವಧಿಯ ಹೈಸ್ಕೂಲು ದಿನಗಳ ಅನುಭವ ನಿಜಕ್ಕೂ ರೋಮಾಂಚಕ ಅನುಭವವನ್ನು ನೀಡುತ್ತವೆ. ಅಂತಹ ಅನುಭವಗಳನ್ನು ಬರಹದ ರೂಪದಲ್ಲಿ ದಾಖಲಿಸುತ್ತಿದ್ದೇನೆ ಎಂದು ನನ್ನ ಗೆಳೆಯ ಸತ್ಯ ಹೇಳಿದಾಗ, ನನಗೆ ‘ಹೌದಲ್ಲಾ, ಇಂತದ್ದೊಂದು ಪ್ರಯತ್ನ ಮಾಡಬಹುದಲ್ಲಾ!’ ಅನ್ನಿಸಿತ್ತು. ಅದರಲ್ಲೂ ಸತ್ಯ ನನ್ನ ದೃಷ್ಟಿಯಲ್ಲಿ ಓರ್ವ ನೇರ ಬರಹಗಾರ. ಅದು ಅವನ ವ್ಯಕ್ತಿತ್ವ ಕೂಡ. ಎಷ್ಟೋ ಸಂದರ್ಭದಲ್ಲಿ ನನ್ನ ಸ್ನೇಹಕ್ಕೆ ಕಟ್ಟುಬಿದ್ದು ನನಗಿಷ್ಟವಾಗದ ತನ್ನ ಅನಿಸಿಕೆಗಳನ್ನು ಅದುಮಿಡಲು ಅವನು ಪಡುತ್ತಿದ್ದ ‘ಹರಸಾಹಸ’ ಕಂಡು ನನಗೆ ಅವನ ಬಗ್ಗೆ ‘ಪಾಪ’ ಅನ್ನಿಸಿದ್ದುಂಟು. ಅಂತವನು ತನ್ನ ಹೈಸ್ಕೂಲು ದಿನಗಳ ಬಗ್ಗೆ ಬರೆಯುತ್ತಾನೆ ಅಂದಾಗ ಅವನಿಗಿಂತಲೂ ಆ ಬಗ್ಗೆ ಹೆಚ್ಚಿನ ನಿರೀಕ್ಷೆ ನನಗಿತ್ತು. ಅದಕ್ಕೆ ಸರಿಯಾಗಿ ಮೊನ್ನೆ ತನ್ನ ಬರಹದ ಪ್ರತಿಯೊಂದನ್ನು ನೀಡಿ ‘ನೀನೇ ಹಿಂಬರಹ ಬರೆದುಕೊಡು’ ಅಂದಾಗ, ಪ್ರಕಟಣೆಗೆ ಮೊದಲೇ ಓದುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂದು ಒಪ್ಪಿಕೊಂಡೆ.


ಓದಲು ಆರಂಭಿಸಿದೆ. ಮುಗಿಯುವ ತನಕ ನಿಲ್ಲಿಸಲು ಮನಸ್ಸಾಗಲಿಲ್ಲ. ಎಲ್ಲರಂತೆ ವಯೋಸಹಜವಾದ ತುಂಟತನದಲ್ಲೇ ತನ್ನ ಹೈಸ್ಕೂಲು ವಿಧ್ಯಾಭ್ಯಾಸವನ್ನು ನಡೆಸಿದ ಸತ್ಯ, ಆಗಿನ ಎಲ್ಲಾ ಘಟನೆಗಳನ್ನು ಎಳೆಎಳೆಯಾಗಿ ಬಿಡಿಸಿದ್ದಾನೆ. ಪುಸ್ತಕವಾಗುತ್ತಿದೆ ಅನ್ನುವ ಡಂಬಾಚಾರಕ್ಕೆ ಕಟ್ಟುಬಿದ್ದು ಯಾವುದನ್ನೂ ಮುಚ್ಚಿಡುವ ಪ್ರಯತ್ನ ಮಾಡಿಲ್ಲ. ಅವನ ಗ್ರಾಮಾಂತರ ಪ್ರದೇಶದ ಹೈಸ್ಕೂಲು ದಿನಗಳ ಬಗ್ಗೆ ಓದುವಾಗ, ಅಂತದೊಂದು ಅವಕಾಶದಿಂದ ವಂಚಿತನಾದ ಬಗ್ಗೆ ನನಗೇ ಬೇಸರವಾಗಿದೆ. ಶಾಲೆಯಲ್ಲಿ ನಡೆಯುವ ಅವಾಂತರಗಳು, ಮನುಷ್ಯತ್ವವನ್ನು ಮರೆತ ಮತ್ತು ಮನುಷ್ಯತ್ವದ ಪ್ರತಿರೂಪವೇ ಆದ ಮೇಷ್ಟ್ರುಗಳು, ಅನುಭವ-ಅರ್ಹತೆಗಳಿಲ್ಲದ ಟೀಚರ್‌ಗಳ ಪಾಠ, ಒಂದೋ-ಎರಡೋ ವಿದ್ಯಾರ್ಥಿಗಳು ಉತ್ತೀರ್ಣವಾಗುವ ಪರಿಸ್ಥಿತಿ (ಅಂದಹಾಗೆ ಹತ್ತನೇ ತರಗತಿಯ ತನ್ನ ಬ್ಯಾಚಿನಲ್ಲಿ ಉತ್ತೀರ್ಣನಾದದ್ದು ಸತ್ಯ ಒಬ್ಬನೇ), ಗೆಳೆಯರ ಗುಂಪು-ಗುಂಪುಗಾರಿಕೆ, ತೋಟ-ತುಡಿಕೆಗಳಲ್ಲಿ ಕಳ್ಳತನ, ಸಿಕ್ಕಿಹಾಕಿಕೊಂಡಾಗ ಒಬ್ಬರ ಮೇಲೊಬ್ಬರು ಚಾಡಿ ಹೇಳಿ ತಪ್ಪಿಸಿಕೊಳ್ಳುವ ಹವಣಿಕೆ, ಸಂದರ್ಭ ಬಂದಾಗ ಹಿಂದುಮುಂದು ನೋಡದೆ ಪೋಷಕರ ಸಹಿಯನ್ನು ಫೋರ್ಜರಿ ಮಾಡುವ ಎದೆಗಾರಿಕೆ, ಹಾಸ್ಟೆಲ್ ವಾಸ, ಅಲ್ಲಿನ ಅವ್ಯವಸ್ಥೆ, ವಿದ್ಯಾರ್ಥಿಗಳನ್ನು ಯಾವ ಎಗ್ಗೂ ಇಲ್ಲದೆ ಕೆಲಸಕ್ಕೆ ಬಳಸಿಕೊಳ್ಳುವ ರೀತಿ ಎಲ್ಲವನ್ನೂ ಸತ್ಯ ಕಣ್ಣಿಗೆ ಕಟ್ಟುವಹಾಗೆ ತೆರೆದಿರಿಸಿದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ ಗ್ರಾಮಾಂತರ ಪ್ರದೇಶದ ಹೈಸ್ಕೂಲಿನ ಸ್ಥಿತಿಗತಿಗಳ ಬಗ್ಗೆ ಓದುವಾಗ, ಅಲ್ಲಿನ ವಿದ್ಯಾರ್ಥಿಗಳ ಬಗ್ಗೆ ನನಗಂತೂ ಮರುಕು ಉಂಟಾಗುತ್ತದೆ. ಅದರಲ್ಲೂ ಇಂಗ್ಲಿಷ್ ಪಾಠಮಾಡುವ ಮೇಷ್ಟ್ರು ‘ಕಾರ್ಪೋರೇಷನ್’ ಪದವನ್ನು ಉಚ್ಛರಿಸಲು ಬರದೆ ಅದನ್ನು, ಸಿ.ಒ.ಆರ್.ಪಿ.ಒ.ರೇಷನ್ ಎಂದು ಉಚ್ಛರಿಸುತ್ತಿದ್ದರು ಎಂದು ಸ್ವಲ್ಪ ತಮಾಷೆಯ ದನಿಯಲ್ಲಿ ಬರೆಯಲಾಗಿದ್ದರೂ, ಅದರ ಹಿಂದಿನ ವಿಷಾದ ನಮಗೆ ತಟ್ಟುತ್ತದೆ. ಅಂತಹ ಪರಿಸರದಲ್ಲಿ ಓದಿದರೂ ಒಂದು ಬ್ಯಾಚುಲರ್ ಪದವಿ, ಎರಡು ಸ್ನಾತಕೋತ್ತರ ಪದವಿ, ಒಂದು ಪಿ.ಹೆಚ್.ಡಿ ಪದವಿ ಪಡೆದ ಸತ್ಯನ ಬಗ್ಗೆ ನನಗಂತೂ ಮನಸ್ಸು ತುಂಬಿದ ಅಭಿಮಾನ. ಜೊತೆಗೆ ಅಂತಹ ಪರಿಸರದಲ್ಲಿ ಓದಿದ ಎಷ್ಟು ವಿದ್ಯಾರ್ಥಿಗಳು ಈ ಹಂತ ತಲುಪಲು ಸಾಧ್ಯ? ಅನ್ನುವ ಪ್ರಶ್ನೆ.

ಇದು ಒಬ್ಬ ವಿದ್ಯಾರ್ಥಿಯ ಅನುಭವ ಎಂದುಕೊಂಡರೂ, ಈ ಪುಸ್ತಕ ಗ್ರಾಮಾಂತರ ಪ್ರದೇಶದ ಶಾಲಾ ಅವ್ಯವಸ್ಥೆಗಳ ಬಗ್ಗೆ ಆಗಲೇಬೇಕಾದ ಬದಲಾವಣೆಗಳನ್ನು ಕುರಿತು ಸಮಾಜಕ್ಕೆ ಮಾಹಿತಿ ನೀಡುತ್ತದೆ. ಜೊತೆಗೆ ಅನುಭವ ಯಾವತ್ತೂ ತಮ್ಮೊಬ್ಬರ ಸ್ವತ್ತಾಗಬಾರದು, ಅದು ಸಮಾಜಕ್ಕೆ ರವಾನೆಯಾಗುವುದರ ಮೂಲಕ ಜನರನ್ನು ಚಿಂತನೆಗೆ ಒಳಪಡಿಸಿಬೇಕು ಎನ್ನುವ ಸಂದೇಶವನ್ನೂ ಈ ಪುಸ್ತಕ ನೀಡುತ್ತದೆ. ಇದೊಂದು ಸ್ವೀಕರಿಸಲೇಬಹುದಾದ ಪ್ರಯತ್ನ ಎನ್ನುವುದು ನನ್ನ ಪ್ರಾಮಾಣಿಕ ಅನಿಸಿಕೆ. ನಮಸ್ಕಾರ.


-ಸುಗ್ಗನಹಳ್ಳಿ ಷಡಕ್ಷರಿ

6 comments:

ಬಿಸಿಲ ಹನಿ said...

“ನನ್ನ ಹೈಸ್ಕೂಲ್ ದಿನಗಳು” ಪುಸ್ತಕದ ತಿರುಳನ್ನು ಸುಗ್ಗನಹಳ್ಳಿ ಷಡಕ್ಷರಿಯವರು ಇಲ್ಲಿ ತುಂಬಾ ಚನ್ನಾಗಿ ಬಸಿದುಕೊಟ್ಟಿದ್ದಾರೆ. ಮಾತ್ರವಲ್ಲ ಅವರ ಬೆನ್ನುಡಿ ಪುಸ್ತಕವನ್ನು ಓದುವಂತೆ ಪ್ರಚೋದಿಸುತ್ತದೆ. ಕೆಲವು ಸಾರಿ ಈ ಮುನ್ನುಡಿ, ಬೆನ್ನುಡಿಗಳಿಂದಲೇ ಪುಸ್ತಕವನ್ನು ಓದಲು ಹುಮ್ಮಸ್ಸಾಗುತ್ತದೆ. ಇದಕ್ಕೆ ನೀವೇನಂತೀರಿ?

Dr. B.R. Satynarayana said...

ಖಂಡಿತಾ ನನ್ನ ಸಹಮತವಿದೆ. ಆದರೆ ಬರಹಗಾರನೇ ಹಿನ್ನುಡಿ ಮುನ್ನುಡಿ ಬರೆಯುವುದಕ್ಕೆ ನನ್ನ ವಿರೋಧವಿದೆ. ಆತ ೇನು ಹೇಳುವುದಿದ್ದರೂ ಅದನ್ನು ಕೃತಿಯೊಳಗೇ ಹೇಳಬೇಕು ಅಲ್ಲವೆ? ಅದಕ್ಕೊಂಟು ಪೀಠೀಕೆ ಮುನ್ನುಡಿ ಖಂಡಿತಾ ಅಗತ್ಯವಿಲ್ಲ. ಕೃತಜ್ಞತಾಪೂರ್ವಕವಾಗಿ ನಾಲ್ಕು ಮಾತು ಬರೆಯುವುದು ಬೇರೆ. ಆದರೆ ಸುದೀರ್ಘ ವಿಮರ್ಶಾತ್ಮಕ ಮುನ್ನುಡಿ ಹಿನ್ನುಡಿಗಳನ್ನು ಬರೆಯುವುದಕ್ಕೆ ನನ್ನ ವಿರೋಧವಿದೆ.

Dr. B.R. Satynarayana said...

ಕೊನೆಯ ವಾಕ್ಯವನ್ನು
''ಆದರೆ ಕೃತಿಯ ಕರ್ತೃವೇ ಸುದೀರ್ಘ ವಿಮರ್ಶಾತ್ಮಕ ಮುನ್ನುಡಿ ಹಿನ್ನುಡಿಗಳನ್ನು ಬರೆಯುವುದಕ್ಕೆ ನನ್ನ ವಿರೋಧವಿದೆ.''
ಎಂದು ಓದಿಕೊಳ್ಳುವುದು

PARAANJAPE K.N. said...

ಮೊನ್ನೆ ನಾನು ನಿಮ್ಮಲ್ಲಿಗೆ ಬಂದಾಗ ಭೇಟಿಯಾಗಿದ್ದು ಇವರನ್ನೇ ಅಲ್ಲವೇ? ಗೊತ್ತಾಗಲಿಲ್ಲ ಇವರು ಸು.ರುದ್ರಮೂರ್ತಿ ಶಾಸ್ತ್ರಿಯವರ ಸೋದರ ಎಂದು. ತುಂಬಾ ಚೆನ್ನಾಗಿದೆ. ಹೌದು ಹೈಸ್ಕೂಲು ದಿನಗಳು ಒಬ್ಬ ವ್ಯಕ್ತಿಯ ನೆನಪಿನ ಚಿತ್ರ ಶಾಲೆ ಯಲ್ಲಿ ಉಳಿಯುವ ಅಳಿಸಲಾಗದ ಚಿತ್ರಣ. ಅವರ ಪರಿಚಯ ಮಾಡಿದ್ದು, ಪರಿಚಯವಾಗಿದ್ದು, ಖುಷಿಯಾಯ್ತು

AntharangadaMaathugalu said...

ಸಾರ್... ಬೆನ್ನುಡಿ ಓದಿ ಪುಸ್ತಕ ಓದುವ ಕುತೂಹಲ ಹೆಚ್ಚಾಗಿದೆ. ಒಟ್ಟಿಗೆ ಪುಸ್ತಕ ರೂಪದಲ್ಲಿ ಓದುವುದರ ಖುಷಿಯೇ ಬೇರೆ...

ಶ್ಯಾಮಲ

Dr. B.R. Satynarayana said...

ಸ್ವತಃ ಷಡಕ್ಷರಿಯವರು ಒಂದು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಹಾಗೇ ಒಂದು ತಿದ್ದು ಪಡಿಯನ್ನೂ ಸಹ. ಅದು ಹೀಗಿದೆ

ಪ್ರೀತಿಯ ಸತ್ಯ,

ನನ್ನ ಬೆನ್ನುಡಿಗಿಂತ ನೀನು ನನ್ನ ಬಗ್ಗೆ ಬರೆದಿರುವ ಪರಿಚಯವೇ ಆತ್ಮೀಯವಾಗಿದೆ.ಇಷ್ಟೆಲ್ಲಾ ನೆನಪಿಟ್ಟುಕೊಂಡಿರುತ್ತಿ ಅಂದುಕೊಂಡಿರಲಿಲ್ಲ. ಸಾಕಷ್ಟು ಓದುಗರು ಈ ಬಗ್ಗೆ ಪ್ರತಿಕ್ರಿಯಿಸಿರುವುದು ನನಗಂತೂ ಸಂತೋಷವಾಯಿತು.ರಾಷ್ಟ್ರಪತಿ ಭವನದಲ್ಲಿ ನನ್ನ ಹಾಡು ಹಾಡಲ್ಪಟ್ಟಿದ್ದು ಗಣರಾಜ್ಯೋತ್ಸವ ಸಂದರ್ಭದಲ್ಲಿ-ಮಕ್ಕಳ ದಿನಾಚರಣೆ ಸಂದರ್ಭ ಅಲ್ಲ. ಆ ಗೀತೆಯ ಸಾಹಿತ್ಯ ಹೀಗೆ ಆರಂಭವಾಗುತ್ತದೆ - ‘ಒಬ್ಬಳೆ ತಾಯಿ ಭಾರತಿ, ಹಡೆದಳು ನೂರು ಸಂಸ್ಕೃತಿ’. ಮತ್ತೊಮ್ಮೆ ನನ್ನ ಕೃತಜ್ಞತೆಗಳನ್ನು ಸ್ವೀಕರಿಸು.

ನಿನ್ನ

ಷಡಕ್ಷರಿ