Friday, November 20, 2009

ಅಕ್ಕಮಹಾದೇವಿಯ ಹಾಡು - ಪಾಡು : ಭಾಗ - 2

ಕಲ್ಯಾಣದಿಂದ ಶ್ರೀಶೈಲದತ್ತ...
ಮಹಾದೇವಿ ಕಲ್ಯಾಣಕ್ಕೆ ಬರುವ ಮೊದಲೇ ಅವಳ ಕೀರ್ತಿ ಕಲ್ಯಾನಕ್ಕೆ ಬಂದುಬಿಟ್ಟಿತ್ತು. ಅನುಭವಮಂಟಪದ ಅಧ್ಯಕ್ಷನಾದ ಅಲ್ಲಮನಿಗೆ ಮಹಾದೇವಿ ಮಹಾನ್ ಶರಣೆ ಎಂಬುದು ಅವಳ ನಿರ್ಭಿಡೆಯ ನಡೆಯಿಂದಲೇ ಮನದಟ್ಟಾಗಿತ್ತು. ಆದರೂ ಬೇರೆ ಶರಣರಿಗೆ ಅವಳ ಶಿವಭಕ್ತಿಯ ಮಹಿಮೆಯನ್ನು ತೋರುವುದಕ್ಕೋಸ್‌ಕರ ಅವಳನ್ನು ಪರೀಕ್ಷಿಸುವ ನಿರ್ಧಾರಕ್ಕೆ ಬರುತ್ತಾನೆ. ಕಿನ್ನರಿ ಬೊಮ್ಮಯ್ಯನನ್ನು ಕರೆದು, ಬಾಗಿಲಿನಲ್ಲಿಯೇ ಮಹಾದೇವಿಯನ್ನು ಪರೀಕ್ಷಿಸಿ ನೋಡಲು ಹೇಳುತ್ತಾನೆ. ಆಗ ಕಿನ್ನರಿ ಬೊಮ್ಮಯ್ಯ ಬಾಗಿಲಿನಲ್ಲಿಯೇ ಅವಳನ್ನು ತಡೆದು ಪರೀಕ್ಷಿಸುತ್ತಾನೆ. ತಾನು ಮಹಾದೇವಿಯನ್ನು ಪರೀಕ್ಷಿಸಿದ ಪರಿಯನ್ನು ಅವನೇ ತನ್ನೊಂದು ವಚನದಲ್ಲಿ ಹೇಳಿದ್ದಾನೆ.


ಮಸ್ತಕವ ಮುಟ್ಟಿ ನೋಡಿದಡೆ


ಮನೋಹರದಳಿವು ಕಾಣ ಬಂದಿತ್ತು!


ಮುಖಮಂಡಲವ ಮುಟ್ಟಿ ನೋಡಿದಡೆ,


ಮೂರ್ತಿಯ ಅಳಿವು ಕಾಣ ಬಂದಿತ್ತು!


ಕೊರಳ ಮುಟ್ಟಿ ನೋಡಿದಡೆ,


ಗರಳಧರನ ಇರವು ಕಾಣಬಂದಿತ್ತು!


ತೋಳುಗಳ ಮುಟ್ಟಿ ನೋಡಿದಡೆ,


ಶವನಪ್ಪುಗೆ ಕಾಣಬಂದಿತ್ತು!


ಉರಸ್ಥಲವ ಮುಟ್ಟಿ ನೋಡಿದಡೆ,


ಪರಸ್ಥಲದಂಗಲೇಪ ಕಾನ ಬಂದಿತ್ತು!


ಬಸಿರ ಮುಟ್ಟಿನೋಡಿದಡೆ,


ಬ್ರಹ್ಮಾಂಡವ ಕಾಣಬಂದಿತ್ತು!


ಗುಹ್ಯವ ಮುಟ್ಟಿನೋಡಿದಡೆ,


ಕಾಮದಹನ ಕಾಣಬಂದಿತ್ತು!


ಮಹಾಲಿಂಗ ತ್ರಿಪುರಾಂತಕದೇವಾ,


ಮಹಾದೇವಿಯಕ್ಕನ ನಿಲುವನರಿಯದೆ ಅಳುಪಿ ಕೆಟ್ಟೆನು.

ಹೀಗೆ ಮಹಾದೇವಿಯನ್ನು ಪರೀಕ್ಷಿಸಿದ ಬೊಮ್ಮಯ್ಯ ಪಶ್ಚತ್ತಾಪ ಪಡುತ್ತಾನೆ. ಆಗ ಮಹಾದೇವಿಯ ಆತನನ್ನು ಸಮಾಧಾನಪಡಿಸಿ ಸಹೋದರ ಎಂದು ಕರೆದು ಮಾತನಾಡಿಸುತ್ತಾಳೆ. ಕಿನ್ನರಯ್ಯ

‘ಶರಣಾರ್ಥಿ ಶರಣಾರ್ಥಿ ಎಲೆ ನಮ್ಮವ್ವ,


ಶರಣಾರ್ಥಿ ಶರಣಾರ್ಥಿ ಕರುಣಸಾಗರ ನಿಧಿಯೆ,


ದಯಾಮೂರ್ತಿ ತಾಯೆ, ಶರಣಾರ್ಥಿ!


ಮಹಾಲಿಂಗ ತ್ರಿಪುರಾಂತಕನೊಡ್ಡಿದ ತೊಡಕು,


ನೀವು ಬಿಡಿಸಿದವರಾಗಿ ನಿಮ್ಮ ದಯದಿಂದ


ನಾನು ಹುಲಿನೆಕ್ಕಿ ಬದುಕಿದೆನು


ಶರಣಾರ್ಥಿ ಶರಣಾರ್ಥಿ ತಾಯೆ.’
ಎಂದು ಹಾಡುತ್ತಾನೆ.

Get this widget | Track details | eSnips Social DNA

ಮಹಾದೇವಿಯ ಪರೀಕ್ಷೆ ಅಷ್ಟಕ್ಕೆ ಮುಗಿಯುವುದಿಲ್ಲ. ಅನುಭವಮಂಟಪದ ಅಧ್ಯಕ್ಷಪೀಠದ ಮೇಲೆ ಕುಳಿತು ಅಲ್ಲಮನೂ ಅವಳನ್ನು ಪರೀಕ್ಷಿಸುತ್ತಾನೆ. ಅದನ್ನು ಹೀಗೆ ಸಂಗ್ರಹಿಸಬಹುದು.

ಅಲ್ಲಮ: ನನ್ನ ಪ್ರಶ್ನೆಗೆ ಉತ್ತರಿಸಿದರಷ್ಟೇ ನಿನಗೆ ಶರಣ ಸಭೆಗೆ ಸ್ವಾಗತ.

ಮಹಾದೇವಿ: ತಿಳಿದಂತೆ ಹೇಳುತ್ತೇನೆ.

ಅಲ್ಲಮ: ತಾರುಣ್ಯವತಿಯಾದ ನಿನ್ನ ಪತಿ ಯಾರು?

ಮಹಾದೇವಿ: ಇಹಕ್ಕೊಬ್ಬ ಗಂಡನೆ? ಪರಕ್ಕೊಬ್ಬ ಗಂಡನೆ? ಲೌಕಿಕೊಬ್ಬ ಗಂಡನೆ? ಪಾರಮಾರ್ಥಕ್ಕೊಬ್ಬ ಗಂಡನೆ? ಎನ್ನ ಗಂಡ ಚೆನ್ನಮಲ್ಲಿಕಾರ್ಜುನ ದೇವರಲ್ಲದೆ ಇನ್ನಾರು? ಮಿಕ್ಕಿನ ಗಂಡರೆಲ್ಲ ಮುಗಿಲ ಮರೆಯ ಬೊಂಬೆಯಂತೆ!

ಅಲ್ಲಮ: ಯಾವ ವ್ಯಾಮೋಹವೂ ಬೇಡದ, ಕೇವಲ ಮಲ್ಲಿಕಾರ್ಜುನನನ್ನೇ ಆಶಿಸುವ ನಿನಗೆ ನಿನ್ನ ಕಾಯದ ಮೇಲಿನ ಆಸೆ ಇನ್ನು ಕುಂದಿಲ್ಲವೆ? ಈ ಕಂಬಳಿಯ ವೇಷವೇಕೆ?

ಮಹಾದೇವಿ: ಕಾಯ ಕರ್ರನೆ ಕಂದಿದರೇನು, ಮಿರ್ರನೆ ಮಿಂಚಿದರೇನು, ಅಂತರಂಗ ಶುದ್ಧವಾದ ಬಳಿಕ, ಚೆನ್ನಮಲ್ಲಿಕಾರ್ಜುನನು ಒಲಿದ ಕಾಯ ಹೇಗಿದ್ದರೇನು?

ಅಲ್ಲಮ: ಅಂತರಂಗದಲಿ ನಾಚಿಕೆಯಿರುವುದಕ್ಕೇ ಈ ಕಂಬಳಿಯ ಹೊದಿಕೆಯೇ?

ಮಹಾದೇವಿ: ಹಣ್ಣು ಪಕ್ವವಾಗಿದ್ದರೆ ಅದರ ಸಿಪ್ಪೆ ಕೆಡುವುದಿಲ್ಲ. ಸಿಪ್ಪೆ ಕೆಡದಿದ್ದರೂ ಹಣ್ಣು ಕೆಡುವುದುಂಟು. ನಾನು ಪಕ್ವವಾದ ಹಣ್ಣು. ಕಾಮನ ಮುದ್ರೆಯ ಕಂಡು ನಿಮ್ಮ ಶರಣರ ನೊಂದುಕೊಳ್ಳಬಾರದು ಎಂದು ಈ ವೇಷ.

ಅಲ್ಲಮ ನಿರುತ್ತರನಾಗುತ್ತಾನೆ. ಆಗ ಮಹಾದೇವಿಯು,

‘ಸಾವಿಲ್ಲದ ಕೇಡಿಲ್ಲದ ರೂಪಿಲ್ಲದ


ಭವವಿಲ್ಲದ ಭಯವಿಲ್ಲದ


ಚೆನ್ನಮಲ್ಲಿಕಾರ್ಜುನನಿಗೆ ಒಲಿದ ನನ್ನನ್ನು ಕಾಡಬೇಡಿ’

ಎಂದು ಪ್ರಾರ್ಥಿಸುತ್ತಾಳೆ. ಅಲ್ಲಮ ಅವಳನ್ನು ಶರಣ ಸಭೆಗೆ ಸ್ವಾಗತಿಸುತ್ತಾನೆ. ಬಸವಣ್ಣ ಅಕ್ಕ ಎಂದು ಪ್ರೀತಿಯಿಂದ ಸಂಬೋಧಿಸುತ್ತಾನೆ. ಆಗ ಶರಣರೆಲ್ಲಾ ಅವಳನ್ನು ಅಕ್ಕ ಎಂದೇ ಕರೆಯುತ್ತಾರೆ. ಮಹಾದೇವಿ ಅಕ್ಕಮಹಾದೇವಿಯಾಗುತ್ತಾಳೆ.

ಅಕ್ಕಮಹಾದೇವಿ ಗುಹೆ - ಶ್ರೀಶೈಲ
(ಚಿತ್ರಕೃಪೆ: ಅಂತರಜಾಲ)
ಹಲವಾರು ದಿನಗಳ ಕಾಲ ಕಲ್ಯಾಣದಲ್ಲಿಯೇ ನೆಲೆಸುತ್ತಾಲೆ. ಮಹಾಮನೆಯ ಕಾರ್ಯಕಲಾಪಗಳಲ್ಲಿ ಭಾಗವಹಿಸುತ್ತಾಳೆ. ಅನುಭವ ಮಂಟಪದಲ್ಲಿ ನಡೆಯುವ ಚರ್ಚೆಗಳಲ್ಲಿ ಅಕ್ಕಮಹಾದೇವಿಯ ಮಾತಿಗೆ ಗೌರವವಿರುತ್ತಿತ್ತು. ಹೀಗೆ ದಿನಗಳನ್ನು ಕಳೆಯುತ್ತಿದ್ದ ಅಕ್ಕಮಹಾದೇವಿ ಕೊನೆಗೆ ಬಸವಾದಿ ಶರಣರ ಅನುಮತಿ ಪಡೆದು ಶ್ರೀಶೈಲಕ್ಕೆ ಹೊರಡುತ್ತಾಳೆ. ಶ್ರೀಶೈಲದ ದಾರಿಯಲ್ಲಿ ಕೌಶಿಕ ಅವಳನ್ನು ಬೇಟಿಯಾಗುತ್ತಾನೆ. ತಾನು ಮಾಡಿದ ತಪ್ಪಿಗಾಗಿ ಪಶ್ಚತ್ತಾಪ ಪಟ್ಟು ಅಕ್ಕಮಹಾದೇವಿಯ ಕ್ಷಮೆ ಕೇಳುತ್ತಾನೆ. ಶ್ರೀಶೈಲಕ್ಕೆ ಹೋಗಿ ಮಲ್ಲಿಕಾರ್ಜುನನ ದರ್ಶನ ಮಾಡಿದ ಅಕ್ಕಮಹಾದೇವಿ ಕದಳಿ ಎಂಬ ಜಾಗದಲ್ಲಿ ನೆಲೆಸುತ್ತಾಳೆ. ಅಲ್ಲಿಯೇ ತನ್ನ ಜೀವಿತವನ್ನು ಕೊನೆಗೊಳಿಸುತ್ತಾಳೆ.

ಅಕ್ಕಮಹಾದೇವಿ ಶ್ರೇಷ್ಟ ವಚನಾಕಾರ್ತಿಯಾಗಿರುವಂತೆ ಶ್ರೇಷ್ಟ ಕವಯಿತ್ರಿಯೂ ಹೌದು. ವಚನಗಳಲ್ಲದೆ ‘ಯೋಗಾಂಗ ತ್ರಿವಿಧಿ’ ಸ್ವರವಚನ, ಸೃಷ್ಟಿಯವಚನ ಮತ್ತು ಮಂತ್ರಗೋಪ್ಯ ಎಂಬ ಇತರ ಕೃತಿಗಳನ್ನೂ ರಚಿಸಿದ್ದಾಳೆ. ಅಕ್ಕನ ವಚನಗಳು ಭಾವತೀವ್ರತೆಯಿಂದ ಕೂಡಿದವುಗಳಾಗಿವೆ ಹಾಗೂ ಶ್ರೇಷ್ಟ ತರಗಿತಿಯ ಭಾವಗೀತೆಗಳಾಗಿವೆ ಎಂಬ ಅಭಿಪ್ರಾಯವಿದೆ. ಸತಿಪತಿ ಭಾವ, ವಿರಹ, ಆಧ್ಯಾತ್ಮ ಎಲ್ಲವೂ ಅವಳ ವಚನಗಳಲ್ಲಿ ಸ್ಥಾನ ಪಡೆದು ಕಲಾತ್ಮಕವಾಗಿ ಅಭಿವ್ಯಕ್ತವಾಗಿವೆ. ಅವಳ ವಚನಗಳ ಶ್ರೇಷ್ಟತೆಯನ್ನು ಸಮಕಾಲಿನನಾದ ಚೆನ್ನಬಸವಣ್ಣ ಒಂದು ವಚನದಲ್ಲಿ ಗುರುತಿಸಿದ್ದಾನೆ. ಅದು ಹೀಗಿದೆ.

ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ


ದಣ್ಣಾಯಕರ ಇಪ್ಪತ್ತು ವಚನಕ್ಕೆ ಪ್ರಭುದೇವರ ಹತ್ತು ವಚನ


ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ


ಅಜಗಣ್ಣನ ಐದು ವಚನಕ್ಕೆ ಕೂಡಚೆನ್ನಸಂಗಮದೇವಾ


ಮಹದೇವಿಯಕ್ಕನ ಒಂದು ವಚನ ನಿರ್ವಚನ

ಭಾವತೀವ್ರತೆಯನ್ನು ಸೂಸುವ ಹಾಗೇ ಸೂಮದರ ಭಾವಗೀತೆಯಂತಿರುವ ಅಕ್ಕಮಹಾದೇವಿಯ ಒಂದು ವಚನವನ್ನು ಕೆಳಗೆ ನೀಡಲಾಗಿದೆ.

ತನು ಕರಗದವರಲ್ಲಿ


ಮಜ್ಜನವನೊಲ್ಲೆಯಯ್ಯಾ ನೀನು


ಮನ ಕರಗದವರಲ್ಲಿ


ಪುಷ್ಪವನೊಲ್ಲಯಯ್ಯಾ ನೀನು


ಹದುಳಿಗರಲ್ಲದವರಲ್ಲಿ


ಗಂಧಾಕ್ಷತೆಯನೊಲ್ಲೆಯಯ್ಯಾ ನೀನು


ಅರಿವು ಕಣ್ದೆರೆಯದವರಲ್ಲಿ


ಆರತಿಯನೊಲ್ಲೆಯಯ್ಯಾ ನೀನು


ಭಾವಶುದ್ಧವಿಲ್ಲದವರಲ್ಲಿ


ಧೂಪವನೊಲ್ಲೆಯಯ್ಯಾ ನೀನು


ಪರಿಣಾಮಿಗಳಲ್ಲದವರಲ್ಲಿ


ನೈವೇದ್ಯವನೊಲ್ಲೆಯಯ್ಯಾ ನೀನು


ತ್ರಿಕರಣ ಶುದ್ಧವಿಲ್ಲದವರಲ್ಲಿ


ತಾಂಬೂಲವನೊಲ್ಲೆಯಯ್ಯಾ ನೀನು


ಹೃದಯಕಮಲ ಅರಳದವರಲ್ಲಿ


ಇರಲೊಲ್ಲೆಯಯ್ಯಾ ನೀನು


ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ


ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ?

6 comments:

ಸುಮ said...

ಅನೇಕ ಶತಮಾನಗಳಷ್ಟು ಹಿಂದೆಯೆ ತಾನು ನಂಬಿದ ಭಾವಕ್ಕಾಗಿ ಸಮಾಜವನ್ನು ದಿಟ್ಟತನದಿಂದ ಎದುರಿಸಿದ , ಸ್ರ್ತೀ ಸ್ವಾತಂತ್ರ್ಯದ ಕಲ್ಪನೆಯೆ ಇಲ್ಲದಿದ್ದ ಕಾಲದಲ್ಲಿ ಅದನ್ನು ನಿರ್ಭೀತಿಯಿಂದ ಅನುಸರಿಸಿದ ಅಕ್ಕಮಹಾದೇವಿಯ ಬಗ್ಗೆ ಅನೇಕ ವಿಚಾರಗಳನ್ನು ತಿಳಿಸಿದ್ದೀರಿ ಸರ್. ಧನ್ಯವಾದಗಳು.

PARAANJAPE K.N. said...

ಅಕ್ಕಮಹಾದೇವಿ ಬಗ್ಗೆ ನನಗೆ ಅರಿವಿಲ್ಲದ ಅನೇಕ ವಿಚಾರಗಳನ್ನು ನಿಮ್ಮಿಂದ ತಿಳಿದುಕೊ೦ಡ ಹಾಗಾಯ್ತು, ಉತ್ತಮ ಬರಹ.

R. K. DIVAKARA said...

ಮಹದೇವಿಯಕ್ಕನ ಮರೆತಿದ್ದ 'ಮುಕ್ತ' ವ್ಯಕ್ತಿತ್ವವನ್ನು ಮತ್ತೆ ಅರಿವಿಗೆ ತಂದ ಲೇಖನ! ಮರೆತ 'ಮಾನವ'ನನ್ನು ಅರಿತ'ಶರಣ'ನ್ನ ಮಾಡುವ ಇಂತಹ ಅಂಕುಶಗಳು ಆಗಿಂದಾಗ್ಗೆ ಚುಚ್ಚುತ್ತಿರಬೇಕು. ಅಕ್ಕಯ್ಯನನ್ನು ಮುಟ್ಟಿನೋಡಿ ಬೊಮ್ಮಯ್ಯ ಕಂಡುಹಿಡಿದ 'ಇರವು'ಗಳಿಗಿಂತಾ 'ಅಳಿವು'ಗಳು ಸಾಧಕರಿಗೆ ಹೆಚ್ಚಿನ ಮಾರ್ಗದರ್ಶಿಯಾಗಬೇಕು!
ಅಕ್ಕನಾಗಲೀ, ಅಣ್ಣನಾಗಲೀ, ಚೆನ್ನಬಸವಣ್ಣನಾಗಲೀ, ಆಧ್ಯಾತ್ಮದಲ್ಲಷ್ಟೇ ಅಲ್ಲ ಬುದ್ಧಿವಲಯದಲ್ಲೂ ಸಮಾಜಜೀವನದ ವ್ಯಾವಹಾರಿಕತೆಯಲ್ಲೂ ಕ್ರಿಯಾಶೀಲರು,ಮಹಾನ್ ಸಾಹಸಿಗಳು 'ಪರಿಣಾಮಿ'ಗಳು. ಅವರನ್ನು ಹಾಗೆ ಚಿತ್ರಿಸಿ ಪ್ರಚುರಪಡಿಸಿದಲ್ಲಿ, ಜನ ಅದನ್ನು ಅರಿತು ಹೃದಯ ತೆರೆದಲ್ಲಿ ಶರಣರ ಕ್ರಾಂತಿ ಸಜೀವವಾದೀತು!
ತನುಭಾವ, ಮನಭಾವ, ಭಾವಗಳನ್ನು ಕಳೆದ ಭವಗೆಟ್ಟು 'ಪರಿಣಾಮಕಾರಿ'ಯಾದ ಸಾಧಕ, 'ಶಿವತ್ವ'ಕ್ಕೆ-ಮಂಗಳಮಯತೆಗೆ ತನ್ನನ್ನೇ 'ನೈವೇದ್ಯ' ಅರ್ಪಿಸಿಕೊಳ್ಳುವ ಚಿತ್ರ, ಭಾವುಕರಲ್ಲಿ ಬಂಧುರವಾದ ಅನುಭಾವ ಹುಟ್ಟಿಸಬೇಕಲ್ಲವೇ?... ತೆರೆದು ತೊರಿಸಿದ್ದಕ್ಕೆ ಶರಣು-ಶರಣಾರ್ಥಿ!

shivu.k said...

ಅಕ್ಕ ಮಹದೇವಿಯ ಬಗ್ಗೆ ನಾನು ಹೆಚ್ಚು ಓದಿರಲಿಲ್ಲ. ನಿಮ್ಮ ಸರಣಿಲೇಖನದಿಂದಾಗಿ ತಿಳಿದುಕೊಳ್ಳುತ್ತಿದ್ದೇನೆ. ಅವರ ಕಾಲಘಟ್ಟದಲ್ಲಿ ಅವರು ಎದುರಿಸಿದ ಪರಿಸ್ಥಿತಿ, ಸ್ತ್ರೀ ಸ್ವಾತಂತ್ರದ ಬಗ್ಗೆ ಅವರ ಕಲ್ಪನೆ ಇತ್ಯಾದಿಗಳನ್ನು ಚೆನ್ನಾಗಿ ವಿವರಿಸಿದ್ದೀರಿ.

ಮುಂದೆ ಇನ್ನಷ್ಟಕ್ಕೆ ಕಾಯುತ್ತಿದ್ದೇನೆ.

R. K. DIVAKARA said...

tಅಭಿಮಾನಿಗಳೊಬ್ಬರು ಇನ್ನಷಟಕ್ಕೆ ಕಾಯುತ್ತಿದ್ದಾರಂತೆ. ಅದನ್ನು 'ಅನುಭಾವಪೂರ್ವಕ'ವಾಗಿ ತಿಳಿಸುವ ಪ್ರಯತ್ನ ತಮ್ಮಿಮದ ಶೀಘ್ರ ಾಗಲಿ!

Shy said...

abinandaneegallu innu uthamawagi arallali nimma mathugalu