ಇಂದಿನ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೋಕಿನ ಉಡುತಡಿಗೆ ಕನಿಷ್ಠ ಸುಮಾರು ಎಂಟನೂರ ಐವತ್ತು ವರ್ಷಗಳ ಪ್ರಾಚೀನತೆಯಿದೆ. ಆಗ್ಗೆ ಅಲ್ಲಿ ನಿರ್ಮಲಶೆಟ್ಟಿ ಮತ್ತು ಸುಮತಿ ಎಂಬ ಶಿವಭಕ್ತ ದಂಪತಿಗಳಿದ್ದರು. ಅವರಿಗೆ ಮಹಾದೇವಿ ಎಂಬ ಮಗಳಿದ್ದಳು. ಶಿವಭಕ್ತಿಯು ತುಂಬಿ ತುಳುಕುತ್ತಿರುವ ಮನೆಯಲ್ಲಿ ತಂದೆ-ತಾಯಿಗಳ ಅಕ್ಕರೆಯ ಮಗಳಾಗಿ, ಸ್ವತಃ ಶಿವಭಕ್ತಳಾಗಿ ಮಹಾದೇವಿ ಬೆಳೆದು ಪ್ರಾಯಕ್ಕೆ ಬರುತ್ತಾಳೆ. ಶಿವಾಲಯಕ್ಕೆ ನಿತ್ಯವೂ ಹೋಗುವುದು, ಶಿವನನ್ನು ಆರಾಧಿಸುವುದು, ಶಿವಾಲಯದಲ್ಲಿ ನಡೆಯುವ ಪ್ರವಚನಗಳನ್ನು ಕೇಳುವುದು, ತಂದೆ ತಾಯಿಗಳಿಂದ ಶಿವಮಹಾತ್ಮೆಯನ್ನು ಕೇಳುವುದು... ಹೀಗೆ ದಿನಕಳೆಯುತ್ತಿದ್ದಳು. ಹೀಗೆ ವಾತಾವರಣವೇ ಶಿವಮಯವಾಗಿರಲು ಮಹಾದೇವಿಯ ಮನಸ್ಸಿನಲ್ಲಿ ಶಿವನ ರೂಪ ನೆಲೆನಿಂತುಬಿಟ್ಟಿತು. ಶಿವನೇ ಸರ್ವಸ್ವ ಎಂದು ತಿಳಿದು ಭಕ್ತಿಸಾಧನೆ ಮಾಡತೊಡಗಿದಳು. ಸಹಜವಾಗಿ ಮೂಡಿದ ಯೌವ್ವನ, ಸಾಧನೆಯಿಂದ ಕೂಡಿದ ಭಕ್ತಿಯ ತೇಜಸ್ಸು ಮಹಾದೇವಿಯನ್ನು ಮಹಾಸುಂದರಿಯನ್ನಾಗಿ ಮಾಡಿಬಿಟ್ಟಿತ್ತು. ಹೆತ್ತವರಿಗೆ ಮಗಳಿಗೆ ಮದುವೆ ಮಾಡುವ ಆಸೆಯಾಯಿತು. ಆ ನಿಟ್ಟಿನಲ್ಲಿ ಪ್ರಯತ್ನವನ್ನೂ ಮಾಡಿದರು. ಆದರೆ ಅದನ್ನು ತಿಳಿದ ಮಹಾದೇವಿಯು, ‘ನನಗೆ ಭವದ ಗಂಡ ಬೇಡ. ಚೆನ್ನ ಮಲ್ಲಿಕಾರ್ಜುನನೇ ನನ್ನ ನಿಜದ ಗಂಡ’ ಎಂದು ಉತ್ತರಿಸಿದಳು. ತಂದೆ ತಾಯಿಯರು ಏನು ಮಾಡಬೇಕೆಂದು ತೋಚದೆ ಸಂದಿಗ್ಧದಲ್ಲಿ ಬಿದ್ದರು.
ಹೀಗಿರುವಾಗ ಒಂದು ದಿನ ಆ ಪ್ರಾಂತ್ಯದ ಆಡಳಿತಗಾರ ಕೌಶಿಕ ಎಂಬುವವನು ತನ್ನ ಪರಿವಾರ ಸಮೇತನಾಗಿ ಊರಿನ ಬೀದಿಯಲ್ಲಿ ಮೆರವಣಿಗೆ ಹೊರಟಿದ್ದ. ಮೆರವಣಿಗೆಯನ್ನು ನೋಡಲು ಊರಿಗೇ ಊರೇ ಅಲ್ಲಿ ನೆರೆದಿತ್ತು. ಸಹಜವಾಗಿ ಮಹಾದೇವಿಯೂ ತನ್ನ ಮನೆ ಮುಂದೆ ನಿಂತು ಮೆರವಣಿಗೆಯನ್ನು ನೋಡುತ್ತಿದ್ದಳು. ಶಿವಭಕ್ತೆಯಾದ ಅವಳಿಗೆ ಅದೊಂದೂ ಹಿತವೆನಿಸಲಿಲ್ಲ. ಅದನ್ನೇ ಶಿವ-ಪಾರ್ವತಿಯರು ಗಣಸಮೂಹದೊಂದಿಗೆ ನಡೆಸುತ್ತಿರುವ ಮೆರವಣಿಗೆ ಎಂದು ಕಲ್ಪಿಸಿಕೊಂಡು ನೋಡುತ್ತಿದ್ದಳು. ಮೆರವಣಿಗೆಯಲ್ಲಿ ಬರುತ್ತಿದ್ದ ಕೌಶಿಕನ ಕಣ್ಣುಗಳು ಗುಂಪಿನಲ್ಲಿ ಎದ್ದು ಕಾಣುವಂತಹ ಸೌಂದರ್ಯವತಿಯಾದ ಮಹಾದೇವಿಯ ಮೇಲೆ ಬಿದ್ದವು. ‘ಎಲಾ! ನಮ್ಮ ಊರಿನಲ್ಲೇ ಇಂಥಹ ಚೆಲುವೆ ಇರುವಳಲ್ಲಾ! ಮದುವೆಯಾದರೆ ಅವಳನ್ನು ಮದುವೆಯಾಗಬೇಕು’ ಎಂದುಕೊಂಡನು. ಮೆರವಣಿಗೆ ಮುಗಿಸಿ ಅರಮನೆಗೆ ಹಿಂತಿರುಗಿದರೂ ಕಣ್ಣಿನಿಂದ ಮಹಾದೇವಿಯ ರೂಪ ಅಳಿಯಲಿಲ್ಲ. ಅವಳನ್ನು ಮದುವೆಯಾಗಲು ನಿಶ್ಚಯಿಸಿ ತನ್ನ ಆಪ್ತರೊಡನೆ ಅವಳ ಬಗ್ಗೆ ವಿಚಾರಿಸಲು ತಿಳಿಸಿದ. ರಾಜನ ಬಯಕೆಯನ್ನು ಅವನ ಕಡೆಯವರಿಂದ ತಿಳಿದ ಮಹಾದೇವಿಯ ತಾಯ್ತಂದೆಯರು ಗಾಬರಿಯಾದರು. ಸ್ವತಃ ರಾಜನೇ ಮಗಳನ್ನು ಮದುವೆಯಾಗುತ್ತೇನೆ ಎಂದು ಹೇಳಿಕಳುಹಿಸಿದ್ದ. ಆದರೆ ಮಹಾದೇವಿ ‘ನಾನು ಮದುವೆಯೇ ಆಗುವುದಿಲ್ಲ, ಚೆನ್ನಮಲ್ಲಿಕಾರ್ಜುನನೇ ನನ್ನ ಪತಿ’ ಎಂದು ಹಿಂದೆಯೇ ಹೇಳಿದ್ದಳು. ಈಗಲೂ ಅವಳದು ಅದೇ ಉತ್ತರವಾಯಿತು.
ಅವಳ ನಿರಾಕರಣೆಯನ್ನು ಕೇಳಿದ ಕೌಶಿಕನಿಗೆ ಕೋಪ ಬಂತು. ಆದರೂ ತೋರಿಸದೆ ಸ್ವತಃ ತಾನೇ ಮಹಾದೇವಿಯ ಮನೆಗೆ ಬಂದು ‘ನನ್ನನ್ನು ಮದುವೆಯಾಗು’ ಎಂದು ಕೇಳಿಕೊಂಡ. ಅದಕ್ಕೂ ಒಪ್ಪದಿದ್ದಾಗ ‘ರಾಜನಾದ ನನ್ನ ಮಾತನ್ನು ಧಿಕ್ಕರಿಸಿದರೆ ಬಲವಂತವಾಗಿಯಾದರೂ ಸರಿಯೆ ನಾನು ಮಹಾದೇವಿಯನ್ನು ಪಡೆದೇ ತೀರುತ್ತೇನೆ’ ಎಂದು ಹೆದರಿಸಿ ಹೋದ. ಮನೆಯವರು ಗಾಭರಿಯಾದರು. ಆದರೆ ಮಹಾದೇವಿ ದೃತಿಗೆಡಲಿಲ್ಲ. ‘ಚೆನ್ನಮಲ್ಲಿಕಾರ್ಜುನನ ಸಂಕಲ್ಪವೇ ಇದಾಗಿರುವಾಗ ನಾನಾದರು ಏಕೆ ತಡೆಯಲಿ’ ಎಂದು ಕೌಶಿಕನ ಅರಮೆನಗೆ ತಾನೇ ಹೋದಳು. ಮದುವೆಯಾಗುವುದಾಗಿ ಹೇಳಿ ಮೂರು ಶರತ್ತುಗಳನ್ನು ವಿಧಿಸಿದಳು. ‘ನನ್ನ ಪೂಜೆಯ ಸಮಯದಲ್ಲಿ ಅಡ್ಡಿ ಮಾಡಬಾರದು. ಜಂಗಮರ ಸೇವೆಗೆ ತಡೆಯೊಡ್ಡಬಾರದು. ನನ್ನ ವ್ರತ ಮುಗಿಯುವವರೆಗೂ ನನ್ನನ್ನು ಮುಟ್ಟಬಾರದು’ ಎಂದು ನಿಬಂಧನೆಗಳು ಹೇಳಿದಳು. ಕಾಮಾತುರನಾದ ಕೌಶಿಕ ಎಲ್ಲಕ್ಕೂ ‘ಒಪ್ಪಿಗೆ’ ಎಂದುಬಿಟ್ಟ.
ಮುಂದೊಂದು ದಿನ ವೈಭವಯುತವಾಗಿ ಮದುವೆ ನಡೆಯಿತು. ಆದರೆ ವೈಭವ ಎಂಬುದು ಕೌಶಿಕನದು ಮಾತ್ರವಾಗಿತ್ತು. ಮಹಾದೇವಿ ಯಾಂತ್ರಿಕವಾಗಿ ಅದರಲ್ಲಿ ಭಾಗವಹಿಸಿದ್ದಳು. ತನ್ನ ಪಕ್ಕದಲ್ಲಿದ್ದ ಕೌಶಿಕ ಅವಳ ಮನಸ್ಸಿನಿಂದಲೂ, ದೃಷ್ಟಿಯಿಂದಲೂ ಮರೆಯಾಗಿಬಿಟ್ಟಿದ್ದ. ಅಲ್ಲಿ ಇದ್ದುದ್ದು ತನ್ನ ನಿಜಪತಿಯಾದ ಚೆನ್ನಮಲ್ಲಕಾರ್ಜುನ ಮಾತ್ರ. ಮದುವೆಯಾಗಿ ಅರಮನೆಗೆ ಬಂದ ಅಕ್ಕಮಹಾದೇವಿ ಪೂಜಾಗೃಹ ಸೇರಿಕೊಂಡು ವ್ರತವನ್ನು ಕೈಗೊಂಡಳು. ದಿನಕಳೆದಂತೆ ಕೌಶಿಕನ ಮನಸ್ಸು ಅವಳನ್ನು ಬಯಸತೊಡಗಿತು. ಮನಗೆ ಯಾವಾಗ ಬೇಕೆಂದರೆ ಆಗ ಜಂಗಮರು ಬಂದುಹೋಗತೊಡಗಿದರು. ಅವರ ಸೇವೆಯಲ್ಲಿ ಮಹಾದೇವಿ ನಿರತಳಾಗಿಬಿಟ್ಟಳು. ಉಳಿದಂತೆ ಶಿವಪೂಜೆ ಮಾಡುತ್ತಿದ್ದಳು. ಇವುಗಳಿಂದ ರೋಸಿಹೋದ ಕೌಶಿಕ ತನ್ನನ್ನು ಕೂಡುವಂತೆ ಒತ್ತಾಯಿಸತೊಡಗಿದ. ಅಕ್ಕಮಹಾದೇವಿ ತನ್ನ ನಿಬಂಧನೆಗಳನ್ನು ನೆನಪಿಸುತ್ತಿದ್ದಳು.
ಚಿತ್ರಕೃಪೆ : ಅಂತರಜಾಲ
ಆದರೆ ಒಂದು ದಿನ ಕಾಮಂದನಾದ ಕೌಶಿಕ ತಡೆಯದೆ ಅವಳನ್ನು ಮೈಮುಟ್ಟಿ ಬಲವಂತಕ್ಕಿಳಿದುಬಿಟ್ಟ. ತಕ್ಷಣ ಮಹಾದೇವಿ
ಎಮ್ಮೆಗೊಂದು ಚಿಂತೆ, ಸಮ್ಮಗಾರಗೊಂದು ಚಿಂತೆ,
ಧರ್ಮಿಗೊಂದು ಚಿಂತೆ, ಕರ್ಮಿಗೊಂದು ಚಿಂತೆ,
ಎನಗೆ ಎನ್ನ ಚಿಂತೆ, ನಿನಗೆ ನಿನ್ನ ಕಾಯದ ಚಿಂತೆ,
ಒಲ್ಲೆ ಹೋಗು, ಸೆರಗ ಬಿಡು,
ಎನಗೆ ಎನ್ನ ಚೆನ್ನಮಲ್ಲಿಕಾರ್ಜುನನೊಲಿವನೋ ಒಲಿಯನೋ ಎಂಬ ಚಿಂತೆ
ಎಂದು ನುಡಿದು, ‘ಇಂದಿಗೆ ನಾನಿನ್ನ ಹೆಂಡತಿಯಲ್ಲ, ನೀನನ್ನ ಪತಿಯಲ್ಲ’ ಎಂದು ಹೊರನಡೆದುಬಿಟ್ಟಳು. ಕೌಶಿಕನು ಕೊಟ್ಟಿದ್ದ ಎಲ್ಲಾ ಆಭರಣ ಬಟ್ಟೆ ಬರೆಗಳನ್ನು ಕಿತ್ತೆಸೆದು ಕಂಬಳಿಯನ್ನು (ಕೇಶಾಂಬರ) ಹೊದ್ದು ನಿಜದ ಗಂಡನ ಆರಿಸುತ್ತಾ ಹೊರಟಳು. ಒಲ್ಲದ ಗಂಡನನ್ನು ಮಾತ್ರವಲ್ಲ, ಸರ್ವವನ್ನು ತೊರೆದು ವಿರಾಗಿಣಿಯಾಗಿ ಹೊರಟು ನಿಂತ ಮಗಳನ್ನು ಕಂಡು ತಂದೆ ತಾಯಿ, ಬಂಧುಬಳಗದವರು ದುಃಖಪಟ್ಟರು. ಎಲ್ಲರನ್ನೂ ಮಹಾದೇವಿಯೇ ‘ನನ್ನ ಗಂಡನ ಮನೆ ಸೇರಿ ಹೂವ ತಾರತೆನಲ್ಲದೆ, ಹುಲ್ಲು ತಾರೆನು’ ಎಂದು ಸಮಾಧಾನ ಮಾಡಿದಳು.
‘ಒಬ್ಬಳೇ ಹೋಗುತ್ತೀಯ, ಊಟ ವಸತಿಗೇನು ಮಾಡುತ್ತೀಯ’ ಎಂದು ತಂದೆ ತಾಯಿ ಗೋಳಾಡಿದರು. ಆಗ ಮಹಾದೇವಿ ಹಸಿವಾದರೆ ಭಿಕ್ಷಾನ್ನಗಳುಂಟು,
ತೃಷೆಯಾದರೆ ಕೆರೆ ಹಳ್ಳ ಬಾವಿಗಳುಂಟು,
ದೇಹದ ಚಳಿಗೆ ಬಿಸುಟ ಅರಿವೆಗಳುಂಟು,
ಶಯನಕ್ಕೆ ಹಾಳು ದೇಗುಲವುಂಟು,
ಆತ್ಮಸಂಗಾತಕ್ಕೆ ಚೆನ್ನಮಲ್ಲಿಕಾರ್ಜುನನುಂಟು
ಎಂದು ಸಮಾಧಾನಪಡಿಸಿ ಹೊರಟುಬಿಟ್ಟಳು.
ಮುಂದೆ ಏನು ಎತ್ತ ಎಂದು ತಿಳಿಯದ ಅವಳಿಗೆ ಕಲ್ಯಾಣದಲ್ಲಿ ಬಸವಣ್ಣ-ಅಲ್ಲಮಾದಿಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಶರಣರ ಚಟುವಟಿಕೆಗಳು ತಿಳಿದು ಬಂದವು.
ಸಂಸಾರಸಂಗದಲ್ಲಿದ್ದೆ ನಾನು,
ಸಂಸಾರ ನಿಸ್ಸಾರವೆಂದು ತೋರಿದ ಶ್ರೀ ಗುರು,
ಅಂಗವಿಕಾರದ ಸಂಗವ ನಿಲಿಸಿ,
ಲಿಂಗವನಂಗದ ಮೇಲೆ ಸಥಾಪ್ಯವ ಮಾಡಿದನು ಎನ್ನ ಗುರು,
ಹಿಂದಣ ಜನ್ಮವ ತೊಡೆದು ಮುಂದಣ ಪಥವ ತೋರಿದನು
ಎನ್ನ ಗುರು ಚೆನ್ನಮಲ್ಲಿಕಾರ್ಜುನ
ಎಂದು ಹಾಡುತ್ತಾ ಕಲ್ಯಾಣದ ದಾರಿ ಹಿಡಿದು ನಡೆದಳು. ದಾರಿಯಲ್ಲಿ ಸಿಕ್ಕ ಸಿಕ್ಕ ಊರುಗಳಲ್ಲಿ ಶಿವಭಕ್ತಿಯನ್ನು ಪದವ ಮಾಡಿ ಹಾಡುತ್ತಾ, ಜನರು ಕೊಟ್ಟಿದ್ದನ್ನು ತಿನ್ನುತ್ತಾ ಕಲ್ಯಾಣಕ್ಕೆ ಬಂದಳು.
ಮುಂದುವರೆಯುವುದು...........
9 comments:
ಶರಣೆ ಅಕ್ಕ ಮಹಾದೇವಿಯ ಆಧ್ಯಾತ್ಮಿಕ ಜೀವನಗಾಥೆಯನ್ನು ತಿಳಿಸ ಬಯಸುತ್ತಿದ್ದಿರಿ. ಲೇಖನ ಚೆನ್ನಾಗಿ ಮುಡಿ ಬರುತ್ತಿದೆ. ಮುಂದಿನ ಕಂತಿಗೆ ಕಾಯುತ್ತಿರುತ್ತೇವೆ.
ಹಿಂದೆ ನಾನು ತಿಪ್ಪೆರುದ್ರಸ್ವಾಮಿಯವರ "ಕದಳಿಯ ಕರ್ಪೂರ" ಓದಿದ್ದೆ. ಈಗ ಅದು ಮತ್ತೊಮ್ಮೆ ನೆನಪಾಯಿತು. ಸಂಕ್ಷಿಪ್ತವಾಗಿ ಆದರೆ ಅರ್ಥಪೂರ್ಣವಾಗಿ ಬರುತ್ತಿದೆ. ಮುಂದುವರಿಸಿ.
ತುಂಬಾ ಉಪಯುಕ್ತ ಮಾಹಿತಿ
ಧನ್ಯವಾದಗಳು
ಮಾಹಿತಿ ತುಂಬಾ ಉಪಯುಕ್ತವಾಗಿದೆ, ಅಕ್ಕ ಮಹಾದೇವಿಯ ಬಗ್ಗೆ ಅಲ್ಪ ಸ್ವಲ್ಪ ತಿಳ್ದಿದ್ದೆ, ಮುಂದಿನ ಬರವಣಿಗೆಗಾಗಿ ಕಾಯುತ್ತಿರುವೆ, ವಂದನೆಗಳು
Uttama , maahitiyukta lekkhana
ಸರ್,
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದೇನೆ ನಿಮ್ಮ ಬ್ಲಾಗ್ ಓದಲಾಗುತ್ತಿಲ್ಲ. ಆದ್ರೂ ಬಿಡುವು ಮಾಡಿಕೊಂಡು ಓದಿದೆ. ಅಕ್ಕಮಹದೇವಿಯವರ ಜೀವನ ಕತೆಯನ್ನು ವಿವರಿಸುತ್ತಿದ್ದೀರಿ. ಒಂದಷ್ಟು ವಿಚಾರಗಳು ತಿಳಿದಂತಾಯಿತು. ಮುಂದಿನದಕ್ಕೆ ಕಾಯುತ್ತಿದ್ದೇನೆ.
ಸತ್ಯ ಸಾರ್...
ಅಕ್ಕ ಮಹಾದೇವಿಯ ಜೀವನ ಗಾಥೆ ಚೆನ್ನಾಗಿ ಆರಂಭವಾಗಿದೆ ಸಾರ್... ಮುಂದಿನ ಭಾಗ ಯಾವಾಗ ಹಾಕುತ್ತೀರಿ? ಒಳ್ಳೊಳ್ಳೆಯ ಮಾಹಿತಿಯುಕ್ತ ಲೇಖನಗಳನ್ನು ನೀಡುವ ನಿಮಗೆ ನನ್ನ ಧನ್ಯವಾದಗಳು....
ಶಾಲೆಯಲ್ಲಿ ಓದಿದ್ದು ಮತ್ತೆ
ಎಲ್ಲ ಕಣ್ಣು ಮುಂದೆ ಬಂದಂತಿದೆ ತುಂಬ ಚೆನ್ನಾಗಿದೆ ನಾನು ಮುಂದಿನ ಸಚಿಕೆಗಾಗಿ ಕಾಯುತ್ತಿರುತ್ತೇನೆ.
ನಿಮ್ಮ ಲೇಖನ ಎದುರಿಗೇ ತಾವು ಹೇಳುತ್ತಿರುವಂತೆ ಇದೆ, ಓದುತ್ತ ಮೈಮರೆತು ಆನಂದಿಸಿದೆ, ಅಕ್ಕನ ವಚನಗಳು ಇಂದಿಗೂ ಪ್ರಸ್ತುತ. ನಿಮ್ಮ ಬರಹ ಓದುತ್ತಾ ನನ್ನ ಮನ ಚಾಮರಾಜನಗರದ ಜೆ .ಎಸ್. ಎಸ್. ಕಾಲೇಜಿಗೆ ಹೋಯಿತು, ಅಲ್ಲಿ ಪದವಿ ವಿದ್ಯಾರ್ಥಿ ಯಾಗಿದ್ದಾಗ ಮೊದಲೇ ಕನ್ನಡಪ್ರಿಯಳೂ ಭಾವಜೀವಿಯೂ ಆದ ನಾನು ಸಾಮಾನ್ಯವಾಗಿ ಎಲ್ಲರು ಮೂಗು ಮುರಿದು ಗೈರು ಹಾಜರಾಗುತ್ತಿದ್ದ ಕನ್ನಡ ತರಗತಿಗೆ ತಪ್ಪದೇ ಹಾಜರಾಗಿ ತನ್ಮಯಳಾಗುತ್ತಿದ್ದೆ , ಅಕ್ಕನ ವಚನಗಳನ್ನು ವಿವರಿಸುವಾಗಂತೂ ನಾನೂ ಅಕ್ಕನಂತಾದರೆ ಎಂದೊಮ್ಮೊಮ್ಮೆ ಅನಿಸದಿರಲಿಲ್ಲ. ಅಕ್ಕನ "ರೂಹಿಲ್ಲದ ಕೇಡಿಲ್ಲದ ಚೆಲುವಂಗಾನೊಲಿದೆನವ್ವ, ಸಾವಿಲ್ಲದ ಕೇಡಿಲ್ಲದ ಚೆಲುವಂಗಾನೊಲಿದೆನವ್ವ, ಈ ಸಾವ, ಕೆಡುವ ಗಂಡರನೊಯ್ದೊಲೆಯೊಳಗಿಕ್ಕು ತಾಯೆ" ಎಂಬ ವಚನದ ಸಾಲುಗಳಂತು ಅದೆಷ್ತ್ಟು ಧೈರ್ಯದ ಮಾತುಗಳು! ಇಂದಿನ ಭೋಗಪ್ರಪಂಚದ ನಿಶೆಯಲ್ಲೇ ತೇಲಾಡುವ ಯುವತಿಯರಿಗೆ, ಮಹಿಳೆಯರಿಗೆ, ಬಾಯ್ ಫ್ರೆಂಡ್ ಗಳೊಡನೆ ಸುತ್ತುವ ಬಾಲೆಯರಿಗೆ ಆ ಧೈರ್ಯವಿದ್ದೀತೇ? ಜನಮನವನ್ನು ಸುಲಭವಾಗಿ ತಲುಪುವ ಎಫ್ ಎಮ್ ಗಳಲ್ಲಿ ನಡುನಡುವೆ ಈ ಬಗೆಯ ಸಾಹಿತ್ಯದ ಚರ್ಚೆ ಇದ್ದರೆ, ನಿಮ್ಮಂತಹವರು ಅದರಲ್ಲಿ ಭಾಗವಹಿಸಿದರೆ ಎಲ್ಲರಿಗೂ ವಿಷಯಗಳು ತಿಳಿದು ಲೋಕದ ಒಳಿತಿಗೆ ಸಹಾಯಕವಾಗುವುದೇನೋ?
Post a Comment