Monday, November 23, 2009

ಮೀನು ಹಿಡಿಯುವುದು ಇಷ್ಟು ಸುಲಭವೇ? ಪಂಪ!

ಆಗಾಗ ಟೀವಿಯಲ್ಲಿ, ಕ್ರಿಕೆಟ್ ಆಟದ ನಡುವೆ ಬರುವ ಜಾಹಿರಾತುಗಳಲ್ಲಿ ಹೆಚ್ಚು ಗಮನ ಸೆಳೆದದ್ದು: ಆಧುನಿಕ ಉಪಕರಣಗಳನ್ನು ಹಿಡಿದು ಮೀನಿಗೆ ಗಾಳ ಹಾಕಿ ಒಬ್ಬ ವ್ಯಕ್ತಿ ಕುಳಿತಿರುತ್ತಾನೆ. ಆಗ ಹಳ್ಳಿಯ ಆಸಾಮಿಯೊಬ್ಬ ಹಾಡು ಗುನುಗುತ್ತಾ ಬರುತ್ತಾನೆ. ಗಾಳ ಹಾಕಿಕೊಂಡು ಕುಳಿತವ ‘ಸದ್ದು ಮಾಡಬೇಡ (ಮೀನು ಗಾಳಕ್ಕೆ ಬೀಳುವುದಿಲ್ಲ)’ ಎಂದು ಗದರುತ್ತಾನೆ. ಹಳ್ಳಿಯವ ಒಂದು ಕೋಲಿಗೆ ನಾಲ್ಕು ಹನಿ ಫೆವಿಕ್ವಿಕ್ ಹಾಕಿ ನೀರಿನಲ್ಲಿ ಮುಳುಗಿಸಿ ಮೇಲೆತ್ತುತ್ತಾನೆ. ನಾಲ್ಕು ಮೀನುಗಳು ಕೋಲಿಗೆ ಅಂಟಿಕೊಂಡಿರುತ್ತವೆ! ಹಳ್ಳಿಯವ ಮತ್ತೆ ಸಂತೋಷದಿಂದ ಹಾಡು ಗುನುಗಲಾರಂಭಿಸಿದರೆ ಇತ್ತ ಗಾಳ ಹಾಕಿ ಕುಳಿತವನ ಮುಖ ಇಂಗು ತಿಂದ ಮಂಗನಂತಾಗುತ್ತದೆ!!!
ಇದನ್ನು ಇಲ್ಲಿ ನೆನಪಿಸಿಕೊಳ್ಳಲು ಕಾರಣ ಪಂಪಭಾರತ! ನಮ್ಮ ವಾರಾಂತ್ಯ ಕಾರ್ಯಕ್ರಮ ಪಂಪಭಾರತ ಅಧ್ಯಯನ ನೆನ್ನೆ ನೆಡೆದಿತ್ತು. ಅದರಲ್ಲಿ ಯಮುನಾ ನದಿಯ ಮಡುವೊಂದರಲ್ಲಿ ಕೃಷ್ಣಾರ್ಜುನರು ತಮ್ಮ ಪರಿವಾರದೊಡನೆ ಜಲಕ್ರೀಡೆಯಾಡುವ ಸನ್ನಿವೇಶ ಬರುತ್ತದೆ. ಆಗ ಮೀನು ಹಿಡಿಯುವುದು ಇಷ್ಟೊಂದು ಸುಲಭವೇ? ಅನ್ನಿಸಿತು! ನಂತರ ನನ್ನ ಮನಸ್ಸನ್ನು ಆವರಿಸಿದ್ದು ನಾನು ಬಾಲ್ಯದಲ್ಲಿ ಕಂಡ, ದಕ್ಷಿಣದ ಒಳನಾಡಿನಲ್ಲಿ ಅಂದರೆ ಕರ್ನಾಟಕದ ಬಯಲುಸೀಮೆಯಲ್ಲಿ ಮೀನು ಹಿಡಿಯುವ ಹಲವಾರು ವಿಧಾನಗಳು. ಅವುಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸುತ್ತೇನೆ.
ಹಾಂ! ಯೋಚಿಸಬೇಡಿ. ಪಂಪಭಾರತದ ಆ ಸನ್ನಿವೇಶವನ್ನು ಕೊನೆಯಲ್ಲಿ ಹೇಳುತ್ತೇನೆ. ಅದರ ಸ್ವಾರಸ್ಯವನ್ನು ನೀವು ಸವಿಯಲೇಬೇಕು!
ಸಣ್ಣ 'ಕೂಳಿ'ಯಲ್ಲಿ ಮೀನು ಹಿಡಿಯುವುದು
ತೆಂಗಿನ ಗರಿಯಿಂದ ಬೇರ್ಪಡಿಸಿದ ಕಡ್ಡಿಯನ್ನು ಬಳಸಿ ನಿರ್ಮಿಸಿದ 'ಕೂಳಿ' ಅಥವಾ 'ಕೂಣಿ' ಮೀನು ಹಿಡಿಯುವ ಜನಪ್ರಿಯ ಸಾಧನ. ಅವುಗಳನ್ನು ಮಳೆಗಾಲದಲ್ಲಿ ಸಣ್ಣದಾಗಿ ನೀರು ಹರಿಯುವ ಕಾಲುವೆಗಳಿಗೆ ಒಡ್ಡಿ (ಜೋಡಿಸಿ), ನೀರು ಅದರ ಮುಖಾಂತರ ಮಾತ್ರ ಹರಿಯುವಂತೆ ಮಾಡುತ್ತಿದ್ದರು. ಕಾಲುವೆಯಲ್ಲಿ ಹರಿಯುವ ನೀರಿನ ಪ್ರಮಾಣವನ್ನು ಒಂದು ಕೂಳಿಯ ನೀರು, ಎರಡು ಕೂಳಿಯ ನೀರು ಎಂದು ನಿರ್ಧರಿಸುತ್ತಿದ್ದರು. ಹಾಗೆ ರಾತ್ರಿ ಜೋಡಿಸಿ ಬಂದ ಕೂಳಿಯಲ್ಲಿ ಬೆಳಿಗ್ಗೆ ಸೇರುಗಟ್ಟಲೆ ಸಣ್ಣ ಸಣ್ಣ ಮೀನುಗಳು ಸಂಗ್ರಹವಾಗಿರುತ್ತಿದ್ದವು (ಒಮ್ಮೊಮ್ಮೆ ಕೇರೆಹಾವು, ಕಪ್ಪೆ ಮೊದಲಾದವುಗಳೂ ಸೇರಿಕೊಳ್ಳುತ್ತಿದ್ದವು). ಕೆಲವೊಮ್ಮೆ ಕೆಲವು ಉತ್ಸಾಹಿಗಳು ಕೂಳಿ ಹಾಕಿದ ಜಾಗದಲ್ಲೇ ಗುಡಾರ ಹಾಕಿಕೊಂಡು ಕೂಳಿಯೊಳಗೆ ಹಾವು ಬಂದಿದೆಯೇ ಎಂದು ನೋಡಿ ಬಂದಿದ್ದರೆ ಅದನ್ನು ಹೊರಗೆ ಹಾಕಿ ಮತ್ತೆ ಕೂಳಿ ಜೋಡಿಸುತ್ತಿದ್ದರು. ಏಕೆಂದರೆ ಹಾವು ಕೂಳಿಯೊಳಗೆ ಬಂದ ಮೀನೆಲ್ಲವನ್ನೂ ಕಬಳಿಸುತ್ತದೆ ಎಂದು! ಹರಿಯುವ ನೀರಿಗೆ ವಿರುದ್ಧ ದಿಕ್ಕಿನಲ್ಲಿ ಮೀನು ಚಲಿಸುತ್ತವೆ ಎಂದು ಆಗ ನಮಗೆ ಗೊತ್ತಿರಲಿಲ್ಲ. ನೀರು ಹರಿಯುವ ದಿಕ್ಕಿಗೇ ತೆರೆದ ಬಾಯಿಯನ್ನು ಮಾಡಿ ಜೋಡಿಸುತ್ತಿದ್ದ ಕೂಳಿಯೊಳಗೆ ಮೀನು ಹೇಗೆ ಹೋಗುತ್ತವೆ? ಎಂದು ತುಂಬಾ ತಲೆ ಕೆಡಿಸಿಕೊಳ್ಳುತ್ತಿದ್ದೆವು.
ದೊಡ್ಡ ಕೂಳಿಯಲ್ಲಿ ಮೀನು ಹಿಡಿಯುವುದು
ಬಿದಿರು ಕಡ್ಡಿಗಳಲ್ಲಿ ಮಾಡಿರುವ ಇದನ್ನು ದೊಡ್ಡ ದೊಡ್ಡ ಮೀನುಗಳನ್ನು ಹಿಡಿಯಲು ಇದನ್ನು ಬಳಸುತ್ತಾರೆ. ಸಿಹಿನೀರಿನಲ್ಲಿ ಅಂದರೆ ಕೆರೆಗಳಲ್ಲಿ ಮೀನು ಸಾಕಿದ ಗ್ರಾಮದವರು ವರ್ಷಕ್ಕೊಮ್ಮೆ ಮೀನು ಹಿಡಿಯುವ ಕಾರ್ಯಕ್ರಮ (ಮೀನು ಪಾಚುವರಿ) ಇಟ್ಟುಕೊಂಡಿರುತ್ತಾರೆ. ನೀರು ಕೂಳಿಗೆ ಅನುಕೂಲಕರ ಹಂತಕ್ಕೆ ಬಂದಾಗ ಈ ಕಾರ್ಯಕ್ರಮವಿರುತ್ತದೆ. ಅಲ್ಲಿಯವರೆಗೆ ಯಾರಾದರೂ ಕದ್ದು ಮೀನು ಹಿಡಿಯುವುದನ್ನು ತಪ್ಪಿಸಲು ಕಾವಲು ಕಾಯುವ ಪದ್ಧತಿಯೂ ಇದೆ. ಈ ವಾರ್ಷಿಕ ಕಾರ್ಯಕ್ರಮದಲ್ಲಿ ಒಂದು ಕೂಳಿಗೆ ಇಷ್ಟು ಎಂದು ಪ್ರವೇಶ ಧನ ತೆಗೆದುಕೊಂಡು ಒಂದೇ ಬಾರಿ ಎಲ್ಲಾ ಮೀನುಗಾರರನ್ನು ಕೆರೆಯೊಳಗೆ ಬಿಡಲಾಗುತ್ತದೆ. ಐನೂರು ಆರನೂರು ಜನ ಒಟ್ಟಿಗೇ ಕೂಳಿಗಳನ್ನು ಮೇಲೆತ್ತಿ ಹಿಡಿದು ಕೂಗುತ್ತಾ ಕೆರೆಯೊಳಗೆ ನುಗ್ಗುವ ಆ ದೃಶ್ಯ ಒಂದು ರೀತಿಯ ರಣೋತ್ಸಾಹವನ್ನು ನೆನಪಿಸುತ್ತದೆ. ದೊಡ್ಡಕೂಳಿಯನ್ನು ಅಲ್ಲಲ್ಲಿ ಹಾಕುತ್ತಾ ಮೀನು ಅದರೊಳಗೆ ಬಂದರೆ ಅದನ್ನು ಕೈಯಲ್ಲಿ ಹಿಡಿದು, ಸೊಂಟದಲ್ಲಿ ದಬ್ಬಳ(ದೊಡ್ಡಸೂಜಿ)ದೊಂದಿಗೆ ನೇತಾಡುವ ದಾರಕ್ಕೆ ಪೋಣಿಸಿಕೊಂಡು ಮುಂದುವರೆಯುತ್ತಾರೆ. ಅಂದು ಕೆಲವು ಮೀನುಗಾರರು ನೂರಾರು ಮೀನುಗಳನ್ನು ಹಿಡಿಯುತ್ತಾರೆ. ದಾರದಲ್ಲಿ ಪೋಣಿಸಿದ ಮೀನನ್ನು ಕದಿಯುವವರೂ ಇರುತ್ತಾರೆ! ಅದಕ್ಕೆ ಕೆಲವರು ಸಹಾಯಕರನ್ನು ಕರೆತಂದು, ಆಗಾಗ ಆರೇಳು ಮೀನುಗಳಾದ ತಕ್ಷಣ ದಾರವನ್ನು ಬದಲಾಯಿಸಿಕೊಳ್ಳುತ್ತಿರುತ್ತಾರೆ. ಇಂತಹ ಸಂದರ್ಭದಲ್ಲಿ ಊರಿನ ಮಕ್ಕಳು ನೀರೊಳಗೆ ಇಳಿದು ಕೈಗೆ ಸಿಕ್ಕ ಸಣ್ಣ ಪುಟ್ಟ ಮೀನುಗಳನ್ನು ಬಾಚಿಕೊಳ್ಳುತ್ತಾರೆ. ಅವರಿಗೆ ಯಾವುದೇ ನಿರ್ಬಂಧವಿರುವುದಿಲ್ಲ. ನಾವು ಮಿಡ್ಲಿಸ್ಕೂಲಿನಲ್ಲಿದ್ದಾಗ ಅಲ್ಲಿನ ಮೇಷ್ಟರುಗಳು ನಮ್ಮನ್ನು ಕಳುಹಿಸಿ ಸಾಕಷ್ಟು ಮೀನನ್ನು ಹಿಡಿಸಿಕೊಂಡು ಸಂಜೆ ಮನೆಗೆ ಕೊಂಡೊಯ್ದಿದ್ದರು! (ಮಿಡ್ಲಿಸ್ಖೂಲಿನ ಮೇಷ್ಟರ ಮೀನು ಕೋಳಿ ಶಿಕಾರಿಯ ಬಗ್ಗೆ ಇನ್ನೊಮ್ಮೆ ವಿವರವಾಗಿ ಬರೆಯುತ್ತೇನೆ)
ತಟ್ಟೋಬಲೆಯಲ್ಲಿ ಮೀನು ಹಿಡಿಯುವುದು
ತ್ರಿಕೋನಾಕಾರದ ತೆರೆದ ಬಾಯಿಯುಳ್ಳ ಹಾಗೂ ಆ ಬಾಯಿಯಿಂದ ಹಿಂದಕ್ಕೆ ಬಾಲದಂತೆ ಕಾಣುವ ಬಲೆಯುಳ್ಳ ಒಂದು ಉಪಕರಣ ತಟ್ಟೋಬಲೆ. ಸುಮಾರು ಮಂಡಿಯುದ್ದದ ನೀರಿರುವ ಕಡೆ ಮೀನುಗಳಿದ್ದರೆ ಈ ಉಪಕರಣವನ್ನು ಬಳಸುತ್ತಾರೆ. ಮೀನು ಗುಂಡಿಗಳಲ್ಲಿ ಇವೆಯೇ ಇಲ್ಲವೇ ಎಂದು ಖಚಿತಪಡಿಸಿಕೊಳ್ಳಲು, ಕ್ಯಾಕರಿಸಿ ಅದರೊಳಗೆ ಉಗಿಯುವುದು, ಅಥವಾ ಮನೆಯಿಂದ ತಂದ ರೊಟ್ಟಿ ಚೂರು ಹಾಕುವುದು ಮಾಡುತ್ತಾರೆ. ಅದನ್ನು ತಿನ್ನಲು ಬರುವ ಮೀನುಗಳ ಸಂಖ್ಯೆಯನ್ನು ಆಧರಿಸಿ ಮೀನು ಹಿಡಿಯಲು ನಿರ್ಧರಿಸುತ್ತಾರೆ. ಈ ತಟ್ಟೋಬಲೆಯ ಜೊತೆಗೆ ಇರುವ ಇನ್ನೊಂದು ಉಪಕರಣವೆಂದರೆ ಮಾರುದ್ದದ ಒಂದು ಕೋಲು. ಕೆಲವೊಮ್ಮೆ ಅದಕ್ಕೆ ಸ್ವಲ್ಪ ಬಟ್ಟೆ ಕಟ್ಟಿರುತ್ತಾರೆ. ತಟ್ಟೋ ಬಲೆಯನ್ನು ಎಡಗೈಯಲ್ಲಿ ನೀರೊಳೊಗಿನ ನೆಲಕ್ಕೆ ಒತ್ತಿ ಹಿಡಿದು, ಬಲಗೈಯಲ್ಲಿ ಕೋಲಿನಿಂದ, ತನಗೆ ಎಟಕುವಷ್ಟು ಅಗಲದ ನೀರಿನೊಳಗೆ ಮುಳುಗಿಸಿ ಮೀನುಗಳನ್ನು ಬೆದರಿಸಿಕೊಂಡು ಬರುತ್ತಾರೆ. ಆಗ ಬೆದರಿದ ಮೀನುಗಳು ತಟ್ಟೋಬಲೆಯೊಳಗೆ ಗುಂಪುಗುಂಪಾಗಿ ಬರುತ್ತವೆ. ತಕ್ಷಣ ಎಡಗೈಯಿಂದ ತಟ್ಟೋಬಲೆಯನ್ನು ಮೇಲಕ್ಕೆ ಎತ್ತುತ್ತಾರೆ. ಅದರೊಳಗೆ ಸಿಕ್ಕಿಹಾಕಿಕೊಂಡ ಮೀನುಗಳು ಬಲೆಯ ಹಿಂಬದಿಗೆ ಸರಿದು ಸಂಗ್ರಹಗೊಳ್ಳುತ್ತವೆ! ಹತ್ತಾರು ಬಾರಿ ಈ ರೀತಿ ಮಾಡಿದ ಮೇಲೆ ಮೇಲೆ ಬಂದು ಮೀನುಗಳನ್ನು ಮತ್ತೊಂದು ಚೀಲಕ್ಕೋ ಪಾತ್ರೆಗೋ ಸುರಿದುಕೊಳ್ಳುತ್ತಾರೆ.
ಗಾಳ ಹಾಕಿ ಮೀನು ಹಿಡಿಯುವುದು
ಇದರ ಬಗ್ಗೆ ಹೆಚ್ಚನದೇನನನು ಹೇಳುವ ಅವಶ್ಯಕತೆಯಿಲ್ಲ. ಕೊಕ್ಕೆಯಂತಹ ಲೋಹದ ಮೊಳೆಗೆ ದಾರಕಟ್ಟಿ, ಅದನ್ನು ಒಂದು ಬಲವಾದ ಕೋಲಿಗೆ ಕಟ್ಟಿಕೊಂಡು, ಗಾಳಕ್ಕೆ ತಿಂಡಿಯನ್ನೋ, ಚಿಕ್ಕ ಮೀನನ್ನೋ, ಎರೆಹುಳುವನ್ನೋ ಸಿಕ್ಕಿಸಿ ಮೀನಿರುವ ಕೊಳ ಅಥವಾ ಗುಂಡಿಯಲ್ಲಿ ಹಾಕಿ ಕುಳಿತರೆ ಮೀನುಗಳು ತಿಂಡಿಯ ಆಸೆಗೆ ಬಂದು ಗಾಳವನ್ನು ಕಚ್ಚಿಕೊಳ್ಳುತ್ತವೆ. ಅದರೊಳಗೆ ಹಿಮ್ಮುಖವಾಗಿರುವ ಕೊಕ್ಕೆ ಮೀನಿನ ಅಂಗುಳಕ್ಕೆ ಚುಚ್ಚಿಕೊಳ್ಳುವುದರಿಂದ ಅದನ್ನು ಬಿಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದರ ಜಗ್ಗಾಟ, ದಾರದ ನಡುವೆ ಕಟ್ಟಿರುವ ಬೆಂಡು ಮುಳುಗಿ, ಮೀನು ಕಚ್ಚಿದೆ ಎಂದು ಗಾಳ ಹಿಡಿದು ಕುಳಿತವನಿಗೆ ತಿಳಿದು ಅದನ್ನು ಮೇಲಕ್ಕೆ ಎಳೆದುಕೊಂಡು ಬಿಡಿಸಿ ಮಡಕೆಯೊಳಗೆ ಸಂಗ್ರಹಿಸಿಕೊಳ್ಳುತ್ತಾನೆ. ತೇಜಸ್ವಿಯವರ ಸಾಹಿತ್ಯ ಓದಿದವರಿಗೆ ಈ ಬಗೆಯ ಮೀನು ಹಿಡಿಯುವ ತಂತ್ರಗಳ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ. ಅಂಡಮಾನಿಗೆ ಪ್ರವಾಸ ಹೋಗುವ ತೇಜಸ್ವಿ ರಾಮದಾಸ್ ಮೊದಲಾದವರು ಅಲ್ಲಿಗೆ ಕೊಂಡಯ್ಯವುದು ಈ ರೀತಿ ಮೀನು ಹಿಡಿಯುವ ಗಾಳ, ರಾಡು ರೀಲುಗಳನ್ನು!
ಬಲೆ ಹಾಕಿ ಮೀನು ಹಿಡಿಯುವುದು
ಇದರಲ್ಲಿ ಹಲವಾರು ವಿಧಾನಗಳಿವೆ. ಬೀಸೋ ಬಲೆ ಎಂಬುದರಲ್ಲಿ, ಬಲೆಯನ್ನು ಬೀಸಿ ನೀರಿನಲ್ಲಿ ಹಾಕುತ್ತಾರೆ. ನಿಧಾನವಾಗಿ ಬಲೆಯನ್ನು ನೆರಿಗೆ ನೆರಿಗೆ ಮಾಡಿಕೊಂಡು ಮೇಲಕ್ಕೆ ಎಳದೆಕೊಳ್ಳುತ್ತಾರೆ. ಬಲೆಯೊಳಗೆ ಸಿಕ್ಕಿ ಹಾಕಿಕೊಂಡು ಚಡಪಡಿಸುವ ಮೀನುಗಳನ್ನು ಆರಿಸಿ ಮಡಕೆಯಲ್ಲಿ ತುಂಬಿಕೊಳ್ಳುತ್ತಾರೆ.
ಇನ್ನೊಂದು ವಿಧಾನದಲ್ಲಿ ರಾತ್ರಿವೇಳೆ ಬಲೆಯನ್ನು ಕೆರೆಯೊಳಗೆ ಬೀಸಿ. ಅದರ ಎರಡು ತುದಿಗಳನ್ನು ಬಲವಾದ ಬಡಿಗೆಗಳಿಗೆ ಕಟ್ಟಿ ಬಂದಿರುತ್ತಾರೆ. ಬೆಳಿಗ್ಗೆ ಹೋಗಿ ಬಲೆ ಮೇಲೆತ್ತಿ ಸಂಗ್ರಹಗೊಂಡ ಮೀನುಗಳನ್ನು ಹಿಡಿದುಕೊಳ್ಳುತ್ತಾರೆ.
ಒಮ್ಮೆ ನಮ್ಮ ಮಿಡ್ಲಿಸ್ಕೂಲಿನ ಮೇಷ್ಟರೊಬ್ಬರಿಗೆ ಮೀನು ತಿನ್ನಬೇಕೆನ್ನಿಸಿ, ‘ಎಲ್ಲಿಯಾದ್ರು ಮೀನು ಹಿಡ್ಕೊಂಬರೋಕೆ ಆಗುತ್ತಾ’ ಎಂದರು. ನಾವು ನಾಲ್ಕು ಜನ 'ಅದಕ್ಕೇನಂತೆ ಸಾರ್ ನಾವು ಹಿಡ್ಕೊಂಡು ಬರುತ್ತೇವೆ' ಎಂದು ಹೊರಟೆವು. ಆಗ ಅದರಲ್ಲಿದ್ದ ಬುದ್ಧಿವಂತನೊಬ್ಬ ಅವರ ಮನೆಯಲ್ಲಿದ್ದ ಒಂದು ಹಳೆಯ ಪಂಚೆಯನ್ನು ತಂದ. ಸೊಂಟದಾಳದ ನೀರಿನಲ್ಲಿ ನಿಂತ ನಾವು ಅದರ ನಾಲ್ಕ ಮೂಲೆಗಳನ್ನು ಒಬ್ಬೊಬ್ಬರು ಹಿಡಿದು, ನೀರಿನಲ್ಲಿ ಮುಳುಗಿಸಿ ಮೇಲೆತ್ತುತ್ತಿದ್ದೆವು. ಮೀನು ನಮ್ಮ ಕಣ್ಣಿಗೆ ಕಾಣುತ್ತಿದ್ದರು, ಪಂಚೆ ಮೇಲೆ ಬರುವಷ್ಟರಲ್ಲಿ ನೀರಿನೊಂದಿಗೆ ಮೀನುಗಳೂ ಹೊರಟುಹೋಗುತ್ತಿದ್ದವು. ಪಂಚೆಯಲ್ಲಿ ನೀರು ಸರಾಗವಾಗಿ ಹರಿದುಹೋಗದಿರುವುದೇ ಆದಕ್ಕೆ ಕಾರಣ ಎಂಬುದು ನಮಗೆ ಹೇಗೆ ತಿಳಿಯಬೇಕು. ಖುಷಿಯಿಂದ ಮೂರ್ನಾಲ್ಕು ಬಾರಿ ಹಾಗೆ ಮಾಡಿದೆವು. ಐದನೆಯ ಬಾರಿ ಪಂಚೆ ಮಧ್ಯಕ್ಕೆ ಹರಿದುಹೋಯಿತು! ಹತ್ತಿರದಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳಾಮಂಡಲಿ ಹೋ ಎಂದು ನಕ್ಕು ನಮ್ಮನ್ನು ಗೇಲಿ ಮಾಡಿದ್ದರಿಂದ ನಾವು ಜಾಗ ಖಾಲಿ ಮಾಡಬೇಕಾಯಿತು.
ಗುಂಡಿ ಉಗ್ಗುವುದು ಅಥವಾ ಗುಂಡಿ ಕದಡುವುದು
ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಕೆರೆ ಕುಂಟೆಗಳ ನೀರು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆಗ ಕೆರೆಯಂಗಳದಲ್ಲಿ ಅಲ್ಲಲ್ಲಿ ಗುಂಡುಂಡಿಗಳು ಕಾಣಿಸಿಕೊಂಡು ಮುಖ್ಯ ಕೆರೆಯ ನೀರಿನಿಂದ ಪ್ರತ್ಯೇಕವಾಗಿ ಸಣ್ಣಪುಟ್ಟ ಕುಂಟೆಗಳಾಗುತ್ತವೆ. ಅವುಗಳ ನೀರನ್ನು ಖಾಲಿಮಾಡಿ ಮೀನು ಹಿಡಿಯುವ ಪದ್ಧತಿಗೆ ಗುಂಡಿ ಉಗ್ಗುವುದು ಎನ್ನುತ್ತಾರೆ. ಯಾವುದಾದರೂ ಪಾತ್ರೆ ಅಥವಾ ಮಂಕರಿ ಅಥವಾ ಬುಟ್ಟಿಗೆ ಎರಡೂ ಬದಿಗೆ ಎರಡು ಹಗ್ಗಗಳನ್ನು ಕಟ್ಟಿ, ಇಬ್ಬರು ನಿಂತುಕೊಂಡು, ಅದರಿಂದ ನೀರನ್ನು ಮೊಗೆದು ಮೊಗೆದು ಗುಂಡಿಯ ಆಚೆಗೆ ಸುರಿಯುತ್ತಾರೆ. ಸರದಿಯ ಮೇಲೆ ಇಬ್ಬಿಬ್ಬರು ಈ ರೀತಿ ಮಾಡುವುದರಿಂದ ಹೆಚ್ಚು ಸುಸ್ತು ಆಗುವುದಿಲ್ಲ. ನೀರು ಕಡಿಮೆಯಾಗಿ ಮೀನುಗಳು ಮೇಲೆ ಮೇಲೆ ನೆಗೆಯಲು ಪ್ರಾರಂಭಿಸುತ್ತವೆ. ಆಗ ನೀರು ಖಾಲಿಮಾಡುವುದನ್ನು ಬಿಟ್ಟು, ಗುಂಡಿಯಲ್ಲಿ ಕೆಸರೆಬ್ಬಿಸಲಾಗುತ್ತದೆ. (ನೀರು ತೀರಾ ಕಡಿಮೆಯಿರುವ ಗುಂಡಿಗಳಾದರೆ, ನೇರವಾಗಿಯೇ ಕೆಸರೆಬ್ಬಿಸಲಾಗುತ್ತದೆ. ಇದನ್ನು ಗುಂಡಿ ಕದಡುವುದು ಎನ್ನುತ್ತಾರೆ.) ಕೆಸರು ದಟ್ಟವಾಗುತ್ತಿದ್ದಂತೆ ಮೀನುಗಳು ಉಸಿರಾಡುವುದಕ್ಕಾಗಿ ಕೆಸರಿನ ಮೇಲಕ್ಕೆ ತಲೆಯೆತ್ತಿ ಬಾಯಿ ಬಿಡಲಾರಂಬಿಸುತ್ತವೆ. ಆಗ ಅವೆಲ್ಲವನ್ನೂ ಹಿಡಿದು ದಡದಲ್ಲಿರುವವರ ಕೈಗೆ ಕೊಡಲಾಗುತ್ತದೆ.
ಅಂದು ಪಂಚೆಯಲ್ಲಿ ಮೀನು ಹಿಡಿಯುವ ನಮ್ಮ ಸಾಹಸ ವಿಫಲವಾಗಿ, ಮಹಿಳಾ ಮಂಡಳಿಯಿಂದ ಅವಮಾನವಾದಾಗ ನಾವೂ ಹುಡುಕಿ ಹೊರಟಿದ್ದು ಇಂತಹ ಗುಂಡಿಗಳನ್ನೇ! ಒಂದೆರಡು ಗುಂಡಿಗಳನ್ನು ಹುಡುಕಿ, ಕೆಮ್ಮಿ ಕ್ಯಾಕರಿಸಿ ಉಗಿದು ಅವುಗಳಲ್ಲಿ ಮೀನುಗಳಿವೆಯೇ ಎಂದು ಪರೀಕ್ಷಿಸಿದ್ದಾಯಿತು. ಸಣ್ಣ ಸಣ್ಣ ಮೀನುಗಳು ಹಿಂಡುಹಿಂಡಾಗಿ ಬಂದು ಎಂಜಲಿಗೆ ಮುತ್ತಿಗೆ ಹಾಕಿದ್ದನ್ನು ಕಂಡು ದಬದಬ ನೀರೊಳಗೆ ಬಿದ್ದು ಕೆಸರೆಬ್ಬಿಸಿದ್ದೂ ಆಯಿತು. ಆದರೆ ಒಂದೂ ಮೀನು ಬಾಯಿ ಬಿಟ್ಟು ಮೇಲೆ ಬಂದು ನಮ್ಮನ್ನು ಹಿಡಿದುಕೊಳ್ಳಿ ಎನ್ನಲಿಲ್ಲ! ಆಗ ಆ ದಾರಿಯಾಗಿ ಬಂದ ಹಿರಿಯರೊಬ್ಬರು ‘ಅಯ್ಯೋ ದಡ್ಡಮುಂಡೇವೆ! ಹಾಗೆ ಹಿಂಡು ಹಿಂಡಾಗಿ ಬಂದುದ್ದು ಮೀನುಗಳಲ್ಲ; ಕಪ್ಪೆಗೊದ್ದಗಳು! ಅವು ಕೆಸರೆಬ್ಬಿಸಿದರೂ ಮೇಲೆ ಬರಲ್ಲ’ ಎಂದು ಉಗಿದು ಉಪ್ಪಿನಕಾಯಿ ಹಾಕಿದ್ದಲ್ಲದೆ, ‘ನಿಮ್ಮ ಮನೆಗಳಿಗೆ ಹೇಳಿ ಬಿಡಿಸುತ್ತೇನೆ, ಲಾತ. ಬನ್ನಿ’ ಎಂದು ಭಯೋತ್ಪಾದಕರಾಗಿದ್ದರು!
ಭರ್ಜಿಯಲ್ಲಿ ಹೊಡೆಯುವುದು
ನನ್ನ ಸ್ನೇಹಿತನೊಬ್ಬನಿದ್ದ. ಆತನ ಹೆಸರು ನಿಮ್ಮಲ್ಲಿ ಕೆಲವರಿಗಾದರೂ ಗೊತ್ತಿದೆ, ‘ಮೊಲದ ಮಂಜ’ ಎಂದು. ಈತನ ಮೀನು ಭೇಟೆಯ ಬಗ್ಗೆ ನಾನಾಗಲೇ ಬರೆದಿದ್ದೇನೆ. ಎದೆಮಟ್ಟದ ನೀರಿನಲ್ಲಿ, ರಾತ್ರಿವೇಳೆಯಲ್ಲಿ ಹಣೆಗೆ ಬ್ಯಾಟರೀ ಕೊಟ್ಟಿಕೊಂಡು, ಬಲಗೈಯಲ್ಲಿ ಭರ್ಜಿ ಹಿಡಿದು ನಿಂತುಕೊಂಡು, ಬ್ಯಾಟರಿಯ ಬೆಳಕಿಗೆ ಬರುವ ದೊಡ್ಡ ಮೀನುಗಳಿಗೆ ಗುರಿ ಹಿಡಿದು ಚುಚ್ಚಬೇಕು. ಈ ಕೆಲಸಕ್ಕೆ ರಾತ್ರಿ ಮತ್ತು ನೀರಿನ ಭಯವಂತೂ ಇರುವ ಹಾಗೇ ಇಲ್ಲ; ಜೊತೆಗೆ ಒಳ್ಳೆಯ ಗುರಿಕಾರರಾಗಿರಬೇಕು, ಸಹನೆಯೂ ಇರಬೇಕು.
ಕೆಲವರು ಭರ್ಜಿಯ ಬದಲು ಬಲವಾದ ದೊಣ್ಣೆಯಿಂದಲೇ ತೇಲುತ್ತಾ ಬಂದ ಮೀನಿಗೆ ಒಡೆಯುತ್ತಾರೆ ಎಂದು ಹಾಗೂ ಕೋವಿಯಿಂದಲೂ ಮೀನು ಒಡೆಯುತ್ತಾರೆ ಎಂದು ಕೇಳಿದ್ದೇನೆ. ಇವೆರಡನ್ನೂ ನಾನು ನೋಡಿಲ್ಲ.
ಭಂಗಿಸೊಪ್ಪು ಅಥವಾ ಹೊಗೆಸೊಪ್ಪು ಕದಡುವುದು
ಇದೊಂದು ಸುಲಭವಾದ ಆದರೆ ಸ್ವಲ್ಪ ದುಬಾರಿಯಾದ ವಿಧಾನ. ಸಣ್ಣಪುಟ್ಟ ಗುಂಡಿಗಳಲ್ಲಿ ಮೀನುಗಳಿರುವುದು ಖಚಿತವಾದರೆ ಸ್ವಲ್ಪ ಭಂಗಿ ಸೊಪ್ಪು ಅಥವಾ ಹೊಗೆಸೊಪ್ಪನ್ನು ಚೆನ್ನಾಗಿ ಕೈಯಿಂದ ತಿಕ್ಕಿ ನೀರಿನಲ್ಲಿ ಕದಡಿ ಬಿಡುವುದು. ಅದರ ಘಾಟಿಗೆ ಮೀನುಗಳು ಮತ್ತೇರಿ ತೇಲಲಾರಂಬಿಸುತ್ತವೆ. ಆದರೆ ಭಂಗಿಸೊಪ್ಪು ದುಬಾರಿ ಎಂಬ ಮಾತಿರಲಿ ಅದನ್ನು ಬಳಸಿದರೆ ಜೈಲು ಕಾಣಬೇಕಾಗುತ್ತದೆ ಎಂಬುದು ಆಗಿನ ತಿಳುವಳಿಕೆಯಾಗಿತ್ತು. ಹೊಗೆ ಸೊಪ್ಪು ಸಾಮಾನ್ಯವಾಗಿ ಹಳ್ಳಿಯ ಎಲ್ಲರ ಮೆನಯಲ್ಲೂ ಸಿಗುವ ವಸ್ತುವಾದರೂ ಅಂದಿನ ಕಾಲಕ್ಕೆ ಅತ್ಯಂತ ದುಬಾರಿಯಾದ ವಸ್ತುವಾಗಿತ್ತು.
ಕಾರೆಕಾಯಿ ಕದಡುವುದು
ಭಂಗಿಸೊಪ್ಪು ಅಥವಾ ಹೊಗೆಸೊಪ್ಪಿಗೆ ಪರ್ಯಾಯವಾಗಿ ಕಾರೆಕಾಯಿಯನ್ನು ಬಳಸುವ ಈ ವಿಧಾನ ಸುಲಭವಾದದ್ದು ಆದರೂ ಅಪಾಯಕಾರಿಯಾದದ್ದು. ಕಾರೇಕಾಯಿಗಳಲ್ಲಿ ಒಂದು ಜಾತಿಯ ಕಾಯಿಗಳಿಗೆ ಸ್ವಲ್ಪ ವಿಷ ಜಾಸ್ತಿ, ಕಾರೇ ಹಣ್ಣುಗಳನ್ನು ತಿನ್ನುತ್ತಾರಾದರೂ ಈ ಜಾತಿಯ ಹಣ್ಣುಗಳನ್ನು ಯಾರೂ ತಿನ್ನುವುದಿಲ್ಲ. ಇವನ್ನು ಸಣ್ಣಪುಟ್ಟ ದನಕರುಗಳು ತಿಂದರೆ ಸತ್ತೇ ಹೋಗುತ್ತವೆ. ಇಂತಹ ಕಾರೇಕಾಯಿಗಳನ್ನು ಜಜ್ಜಿ ನೀರಿನಲ್ಲಿ ಕದಡಿದರೆ ಕ್ಷಣಾರ್ಧದಲ್ಲಿ ಮೀನುಗಳು ಪ್ರಜ್ಞಾಶೂನ್ಯವಾಗಿ ತೇಲಲಾರಂಭಿಸುತ್ತವೆ. ನೀರು ಕಪ್ಪಾಗುತ್ತದೆ.ಇದು ತಾಕಿದ ಮೈಕೈಗಳಿಗೆ ತುರಿಕೆಯಾಗುತ್ತದೆ. ಮೀನು ಬಾಚಿಕೊಳ್ಳುವ ಅವಸರದಲ್ಲಿ ನೀರನ್ನು ಬಾಯಿಗೆ ಸೋಕಿಸುವಂತಿಲ್ಲ. ಮೈಯಲ್ಲಿ ತೆರೆದ ಗಾಯಗಳಿದ್ದರೂ ಅಪಾಯ. ಮೀನುಹಿಡಿದ ಮೇಲೆ ಗುಂಡಿಯ ನೀರನ್ನು ಕುಡಿದರೆ ದನಕರುಗಳು ಸತ್ತೇ ಹೋಗುತ್ತವೆ. ಗುಂಡಿಯಿಂದ ಸಹಿಸಲು ಅಸಾಧ್ಯವಾದ ವಾಸನೆ ಬರುತ್ತದೆ. ಆದರೂ ಅದನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಳಸಿ ಮೀನು ಹಿಡಿಯುತ್ತಾರೆ.
ಡೈನಾಮೆಂಟ್ ಸಿಡಿಸುವುದು
ಕುಂದೂರು ಮಠದಲ್ಲಿ ಕಲ್ಲು ಹೊಡೆಯುವವರು ಈ ವಿಧಾನ ಬಳಸುವುದನ್ನು ಕಂಡಿದ್ದೇನೆ. ಅವರು ಕಲ್ಲು ಸಿಡಿಸಲು ತಂದಿದ್ದ ಡೈನಾಮೆಂಟ್ಟನ್ನು ಕಡಿಮೆ ಪ್ರಮಾಣದಲ್ಲಿ ಮೀನುಗಳಿರುವ ಬಾವಿ ಅಥವಾ ಗುಂಡಿಯಲ್ಲಿ ನೀರೊಳಗೆ ಸಿಡಿಸುತ್ತಿದ್ದರು. ಮೀನುಗಳು ಸತ್ತು ತೇಲುತ್ತಿದ್ದವು. ಅವರು ಅವನ್ನು ಧಾರಾಳವಾಗಿ ಹಿಡಿದು ತಿನ್ನುತ್ತಿದ್ದರು. ಆದರೆ ಅವು ವಿಷಯುಕ್ತ ಎನ್ನುವ ಮಾತುಗಳೂ ಕೇಳಿಬರುತ್ತಿದ್ದವು.
ಸಧ್ಯಕ್ಕೆ ಇಷ್ಟೇ ನನಗೆ ನೆನಪಾಗುತ್ತಿರುವುದು.
ಈಗ ಪಂಪನ ಸರದಿ!
ಕೃಷ್ಣಾರ್ಜುನರು ತಮ್ಮ ಅಂತಃಪುರದ ಸ್ತ್ರೀಯರೊಡನೆ ಯಮುನಾ ನದಿಯಲ್ಲಿ ಜಲಕ್ರೀಡೆಯಾಡುವ ಸನ್ನಿವೇಶ ಬರುತ್ತದೆ. ಪಂಪ ಅದನ್ನು ಸ್ವಾರಸ್ಯಕರವಾಗಿಯೂ ಶೃಂಗಾರರಸಾತ್ಮಕವಾಗಿಯೂ ವರ್ಣಿಸಿದ್ದಾನೆ (ಅದೇ ಒಂದು ಪ್ರತ್ಯೇಖ ಲೇಖನವಾಗುತ್ತದೆ; ಬಿಡಿ).
ಅದರಲ್ಲಿ ಬರುವ ಒಂದು ಪದ್ಯ ಹೀಗಿದೆ.
ಆ ಸಕಳ ಸ್ತ್ರೀ ನಿವಹದ
ಪೂಸಿದ ಮೃಗಮದದ ಮುಡಿಯ ಪೂವಿನ ರಜದಿಂ|
ವಾಸಿಸಿದ ನೀರ ಕದಡಿಂ
ದಾಸವದೊಳ್ ಸೊರ್ಕಿ ಬೆಂಡುಮಗುೞ್ದುವು ಮೀಂಗಳ್||
ಆ ಎಲ್ಲಾ ಸ್ತ್ರೀ ಸಮೂಹವು ಮೈಯಿಗೆ ಬಳಿದುಕೊಂಡಿದ್ದ ಕಸ್ತೂರಿತೈಲದಿಂದಲೂ, ಮುಡಿದುಕೊಂಡಿದ್ದ ಹೂವುಗಳ ಪರಾಗದಿಂದಲೂ ಸಷ್ಟಿಯಾದ (ಸು)ವಾಸನೆ ಮಡುವಿನ ನೀರಿನಲ್ಲಿ ಸೇರಿಕೊಂಡು ಕದಡಲ್ಪಟ್ಟಿತ್ತು. ಆ ವಾಸನೆಯನ್ನು ಸೇವಿಸಿದ ಮೀನುಗಳು ಸೊಕ್ಕಿ ಅಂದರೆ ಪ್ರಜ್ಞೆ ಕಳೆದುಕೊಂಡು ನೀರಿನಲ್ಲಿ ಬೆಂಡು ತೇಲುವಂತೆ ತೇಲಿದವಂತೆ!
ಆಹಾ! ಮೀನು ಹಿಡಿಯುವುದು ಎಷ್ಟೊಂದು ಸುಲಭ! ಮೈಗೆಲ್ಲಾ ಸುಗಂಧದ್ರವ್ಯಗಳನ್ನು (ಆಧುನಿಕ ತರೇವರಿ ಸೆಂಟ್ ಆದರೂ ಪರಾವಾಗಿಲ್ಲ!!!) ಪೂಸಿಕೊಂಡು ನೀರಿಗಿಳಿದರೆ ಸಾಕು, ಅಲ್ಲವೆ!?
ವಿಶೇಷ ಎಚ್ಚರಿಕೆ: ಪಂಪನಲ್ಲಿ ಪ್ರಜ್ಞೆ ಮಾತ್ರ ಕಳೆದುಕೊಂಡು ತೇಲುತ್ತಿದ್ದ ಮಿನುಗಳು ಆಧುನಿಕ ಸೆಂಟ್ ಸೇವಿಸಿದರೆ ಸತ್ತೇ ಹೋಗುತ್ತವೆ!)

9 comments:

PARAANJAPE K.N. said...

ಆಧುನಿಕ ಟೀ.ವಿ.ಜಾಹೀರಾತು, ಪ೦ಪ ಭಾರತದ ಸನ್ನಿವೇಶ ಮತ್ತು ಮೀನು ಹಿಡಿಯುವ ತರಹೇವಾರಿ ವಿಧಾನಗಳ ಬಗ್ಗೆ ರಸವತ್ತಾಗಿ ಬರೆದಿದ್ದೀರಿ. ಗೊತ್ತಿರದ ಅನೇಕ ವಿಷಯ ತಿಳಿದ೦ತಾಯ್ತು. ಉತ್ತಮ ಬರಹ.

ಸಾಗರದಾಚೆಯ ಇಂಚರ said...

ಮೀನು ಹಿಡಿಯುವ ಕಲೆಯನ್ನು ಸೊಗಸಾಗಿ ವರ್ಣಿಸಿದ್ದೀರಿ
ಫೆವಿಕೊಲ್ ನ ಆ ಜಾಹೀರಾತು ನನ್ನ ಮೆಚ್ಚಿನ ಜಾಹೀರಾತುಗಳಲ್ಲಿ ಒಂದು
ಒಂದು ಕ್ರಿಯೇಟಿವಿಟಿ ಅದರಲ್ಲಿ ಇದೆ
ಒಳ್ಳೆಯ ಮಾಹಿತಿ ತಿಳಿಸಿದ್ದಿರಿ

Th Editor said...

we all these methods of fishing in coastal belt..

Th Editor said...

we knew all these methods of fishing in coastal belt..

ಬಿಸಿಲ ಹನಿ said...

ಸತ್ಯನಾರಾಯಣವರೆ,
ನಿಮ್ಮ ಲೇಖನದಿಂದ ವಿವಿಧ ರೀತಿಯ ಪ್ರಯೋಗಗಳಿಂದ ಮೀನುಗಳನ್ನು ಹಿಡಿಯುವ ರೀತಿಗಳು ನಿಜಕ್ಕೂ ಇಷ್ಟೊಂದಿವೆಯಾ ಎನಿಸಿತು. ನನಗೆ ಗೊತ್ತಿದ್ದು ಮೂರೇ ಮೂರು: ಬಲೆ ಹಾಕಿ ಹಿಡಿಯುವದು, ಬಟ್ಟೆಹಾಕಿ ಹಿಡಿಯುವದು, ಮತ್ತು ಗಾಳ ಹಾಕಿ ಹಿಡಿಯುವದು. ಅಲ್ಲದೇ ನಾನೂ ಚಿಕ್ಕವನಿರಬೇಕಾದಾಗ ಹೊಳೆಯಲ್ಲಿ ಬಟ್ಟೆ ಹಾಕಿ ಮೀನು ಹಿಡಿಯುವದು ನೆನಪಾಯಿತು. ಅಭಿನಂದನೆಗಳು ನಿಮ್ಮ ಮಾಹಿತಿಗಾಗಿ. ಪಂಪನ ಮೀನು ಹಿಡಿಯುವ ರೀತಿಯನ್ನು ಇನ್ನೂ ಸ್ವಲ್ಪ ವಿವರಣೆ ನೀಡಿದ್ದರೆ ಚನ್ನಾಗಿತ್ತು.

Dileep Hegde said...

ಸತ್ಯನಾರಾಯಣ ಸರ್..
ಮೀನು ಹಿಡಿಯುವ ಸಾಕಷ್ಟು ವಿಧಾನಗಳನ್ನ ತುಂಬಾ ರಸವತ್ತಾಗಿ ವಿವರಿಸಿದ್ದೀರಿ...
ಲೇಖನ ಓದುತ್ತಿದ್ದಂತೆ ನಾನು ನನ್ನ ಬಾಲ್ಯದ ದಿನಗಳಿಗೆ ಜಾರಿದೆ..
ನಮ್ಮದು ಶಿರಸಿಯ ಹತ್ತಿರದ ಒಂದು ಹಳ್ಳಿ.. ಶುದ್ದ ಮಲೆನಾಡು..
ಅಡಿಕೆ ತೋಟಗಳಲ್ಲಿ ಹರಿಯೋ ನೀರಿನ ಚಿಕ್ಕ ಕಾಲುವೆಗಳಲ್ಲಿ (ಮಂಡಗಾಲಿಗೆ ಅಂತ ಕರೀತಾರೆ) ಅಡಿಕೆ ಹಾಳೆಯನ್ನು ಮುಳುಗಿಸಿ ನಾವು ಮೀನು ಹಿಡಿಯುತ್ತಿದ್ದೆವು.. (ತಿನ್ನಲಿಕ್ಕಲ್ಲ ಮಾರಾಯ್ರೆ... ಸುಮ್ಮನೇ ಒಂದೆರಡು ದಿನ ಬಾಟಲಿಗಳಲ್ಲಿ ಅವನ್ನಿಟ್ಟು ನಮ್ಮದೇ ಅಕ್ವೇರಿಯಮ್ ಮಾಡಿಕೊಂಡು ಮನೆಯವರಿಂದ ಉಗಿಸಿಕೊಳ್ಳಳಿಕ್ಕೆ..)

Unknown said...

uttama ಲೇಖನ... ಮೀನು ಹಿಡಿಯುವ ಅನೇಕ ವಿಷಯಗಳು ತಿಳಿದವು..

shivu.k said...

ಸರ್,

ಮೀನು ಹಿಡಿಯುವ ಸಕಲವಿಧಾನಗಳನ್ನು ವಿವರವಾಗಿ ತಿಳಿಸಿದ್ದೀರಿ. ಇದೊಂದು ಮಾಹಿತಿಯುಕ್ತ ಆಡುಭಾಷೆಯ ಲೇಖನವಾಗಿರುವುದು ಖುಷಿಯ ವಿಚಾರ. ಜೊತೆಗೆ ನಿಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ಎಲ್ಲಾ ವಿವರಿಸಿದ್ದೀರಿ. ಮತ್ತೆ ಫೆವಿಕಾಲ್ ಜಾಹಿರಾತು ನನಗಂತೂ ತುಂಬಾ ಇಷ್ಟ. ಸಮಯಸ್ಫೂರ್ತಿಯ ವಿವರಣೆಯನ್ನು ಮಾತಿಲ್ಲದೇ ಹೇಳುವ ಅದರ ಸೃಜನಶೀಲತೆ ಚೆನ್ನಾಗಿದೆ.

ಜಲನಯನ said...

ಡಾ.ಬಿ.ಅರ್. ನಿಮ್ಮ ಬತ್ತಳಿಕೆಯಲ್ಲಿ ಇನ್ನೂ ಏನೇನಿವೆ ಸರ್...ಮೀನುಗಾರಿಕೆ ಓದಿರುವ ನಾನೇ ಇಷ್ಟೊಂದು ವಿವರವಾಗಿ ಬರೆಯುತ್ತಿದ್ದೆನೋ ಇಲ್ಲವೋ ತಿಳಿಯದು...ಬಹಳ ಸೂಕ್ಷ್ಮಗಳನ್ನು..ಅದೂ ಹಳ್ಳಿಗಾಡಿನ ಜನ ಹೇಗೆ ತಮ್ಮದೇ ಆದ ಪದ್ಧತಿಯನ್ನು ಉಪಯೋಗಿಸಿ ಮೀನುಹಿಡಿಯುತ್ತಿದ್ದರು ಎನ್ನುವುದು ಕಣ್ಣಿಗೆ ಕಟ್ಟುವಂತೆ ತಿಳಿಸಿದ್ದೀರಿ... ನಮಗೆ ಮೀನು ಹಿಡಿಯುವ-ವಿಶೇಷ ಶಾಖೆಯೇ ಇತ್ತು ಬ್ಯಾಚುಲರ್ಸ್ ಡಿಗ್ರಿಯಲ್ಲಿ, ಇದರಲ್ಲೇ ಸ್ನಾತಕ ಮತ್ತು ಪಿ.ಎಚ್.ಡಿ ಸಹಾ ಮಾಡಿದ್ದಾರೆ ಕೆಲವರು. Fishing Methods, Fishing Crafts and Gear (boats and nets), Gear designing, Craft Engineering, Fish Finding Equipements, Fishing nets and their maintenence ಹೀಗೆ ಹಲವಾರು ವಿಷಯಗಳು. ಸಮುದ್ರದಲ್ಲಿ ಬಳಸುವ ಬಲೆಗಳೇ ಹಲವಾರು ವಿಧದ್ದು......